ಅಧ್ಯಾಯ ಹನ್ನೊಂದು
ಮೆಸ್ಸೀಯನ ಬರೋಣದ ಸಮಯವು ಮುಂತಿಳಿಸಲ್ಪಡುತ್ತದೆ
1. ಯೆಹೋವನು ಮಹಾ ಸಮಯಪಾಲಕನಾಗಿರುವುದರಿಂದ, ನಮಗೆ ಯಾವ ಖಾತ್ರಿಯಿರಸಾಧ್ಯವಿದೆ?
ಯೆಹೋವನು ಮಹಾ ಸಮಯಪಾಲಕನು. ಆತನ ಕೆಲಸಕ್ಕೆ ಸಂಬಂಧಪಟ್ಟ ಎಲ್ಲ ಕಾಲಗಳೂ ಋತುಗಳೂ ಆತನ ನಿಯಂತ್ರಣದ ಕೆಳಗಿವೆ. (ಅ. ಕೃತ್ಯಗಳು 1:7) ಈ ಎಲ್ಲ ಕಾಲಗಳು ಹಾಗೂ ಋತುಗಳಲ್ಲಿ ಸಂಭವಿಸುವಂತೆ ನೇಮಿಸಲ್ಪಟ್ಟಿರುವ ಎಲ್ಲ ಘಟನೆಗಳು ಖಂಡಿತವಾಗಿಯೂ ಸಂಭವಿಸುವವು. ಅವು ವಿಫಲವಾಗಲಾರವು.
2, 3. ದಾನಿಯೇಲನು ಯಾವ ಪ್ರವಾದನೆಯ ಕಡೆಗೆ ಗಮನ ಹರಿಸಿದನು, ಮತ್ತು ಆ ಸಮಯದಲ್ಲಿ ಯಾವ ಸಾಮ್ರಾಜ್ಯವು ಬಾಬೆಲನ್ನು ಆಳುತ್ತಿತ್ತು?
2 ಶಾಸ್ತ್ರವಚನಗಳ ಶ್ರದ್ಧಾಪೂರ್ವಕ ವಿದ್ಯಾರ್ಥಿಯಾಗಿದ್ದ ಪ್ರವಾದಿ ದಾನಿಯೇಲನು, ಘಟನೆಗಳ ಕಾಲವನ್ನು ಮುಂದಾಗಿಯೇ ಗೊತ್ತುಪಡಿಸಿ, ಅವುಗಳನ್ನು ನೆರವೇರಿಸುವ ಯೆಹೋವನ ಸಾಮರ್ಥ್ಯದಲ್ಲಿ ನಂಬಿಕೆಯಿಟ್ಟಿದ್ದನು. ಯೆರೂಸಲೇಮಿನ ನಾಶನದ ಕುರಿತಾದ ಪ್ರವಾದನೆಗಳಲ್ಲಿ ದಾನಿಯೇಲನಿಗೆ ವಿಶೇಷವಾದ ಆಸಕ್ತಿಯಿತ್ತು. ಪವಿತ್ರ ಪಟ್ಟಣವು ಎಷ್ಟರ ತನಕ ನಿರ್ಜನವಾಗಿ ಉಳಿಯುವುದು ಎಂಬುದರ ಕುರಿತಾದ ದೇವರ ಪ್ರಕಟನೆಯನ್ನು ಯೆರೆಮೀಯನು ದಾಖಲಿಸಿದ್ದನು, ಮತ್ತು ದಾನಿಯೇಲನು ಈ ಪ್ರವಾದನೆಯನ್ನು ಬಹಳ ಜಾಗರೂಕತೆಯಿಂದ ಪರಿಗಣಿಸಿದ್ದನು. ಅವನು ಬರೆದುದು: “ಅಹಷ್ವೇರೋಷನ ಮಗನೂ ಮೇದ್ಯಯ ವಂಶದವನೂ ಕಸ್ದೀಯ ರಾಜ್ಯದ ದೊರೆತನವನ್ನು ಹೊಂದಿದವನೂ ಆದ ದಾರ್ಯಾವೆಷನ ಆಳಿಕೆಯ ಮೊದಲನೆಯ ವರುಷದಲ್ಲಿ ದಾನಿಯೇಲನಾದ ನಾನು ಶಾಸ್ತ್ರಗಳನ್ನು ಪರೀಕ್ಷಿಸಿ ಯೆಹೋವನು ಪ್ರವಾದಿಯಾದ ಯೆರೆಮೀಯನಿಗೆ ದಯಪಾಲಿಸಿದ ವಾಕ್ಯಾನುಸಾರ ಯೆರೂಸಲೇಮು ಹಾಳುಬಿದ್ದಿರಬೇಕಾದ ಪೂರ್ಣಕಾಲದ ವರುಷಗಳ ಸಂಖ್ಯೆ ಎಪ್ಪತ್ತೆಂದು ತಿಳಿದು[ಕೊಂಡೆನು].”—ದಾನಿಯೇಲ 9:1, 2; ಯೆರೆಮೀಯ 25:11.
3 ಆ ಸಮಯದಲ್ಲಿ ಮೇದ್ಯಯನಾದ ದಾರ್ಯಾವೆಷನು “ಕಸ್ದೀಯ ರಾಜ್ಯದ ದೊರೆತನ” ಮಾಡುತ್ತಿದ್ದನು. ಈ ಮುಂಚೆ ಗೋಡೆಯ ಮೇಲಿನ ಕೈಬರಹದ ಅರ್ಥವನ್ನು ತಿಳಿಸುವಾಗ ದಾನಿಯೇಲನು ಮುಂತಿಳಿಸಿದ್ದ ಸಂಗತಿಯು ಬಹಳ ಬೇಗನೆ ನೆರವೇರಿತ್ತು. ಬಾಬೆಲ್ ಸಾಮ್ರಾಜ್ಯವು ಈಗ ಅಸ್ತಿತ್ವದಲ್ಲಿರಲಿಲ್ಲ. ಸಾ.ಶ.ಪೂ. 539ರಲ್ಲಿ ಅದು “ಮೇದ್ಯಯರಿಗೂ ಪಾರಸಿಯರಿಗೂ ಕೊಡಲ್ಪಟ್ಟಿ”ತ್ತು.—ದಾನಿಯೇಲ 5:24-28, 30, 31.
ದಾನಿಯೇಲನು ದೀನಭಾವದಿಂದ ಯೆಹೋವನ ಬಳಿ ವಿನಂತಿಸುತ್ತಾನೆ
4. (ಎ) ದೇವರ ವಿಮೋಚನೆಯನ್ನು ಅನುಭವಿಸಲು ಯಾವುದು ಅತ್ಯಾವಶ್ಯಕವಾಗಿತ್ತು? (ಬಿ) ದಾನಿಯೇಲನು ಯಾವ ರೀತಿಯಲ್ಲಿ ದೇವರ ಬಳಿ ವಿಜ್ಞಾಪನೆ ಮಾಡಲು ಆರಂಭಿಸಿದನು?
4 ಯೆರೂಸಲೇಮಿನ 70 ವರ್ಷಗಳ ನಿರ್ಜನ ಸ್ಥಿತಿಯು ಇನ್ನೇನು ಕೊನೆಗೊಳ್ಳಲಿತ್ತು ಎಂಬುದನ್ನು ದಾನಿಯೇಲನು ಗ್ರಹಿಸಿದನು. ತದನಂತರ ಅವನೇನು ಮಾಡಲಿದ್ದನು? ಅವನೇ ನಮಗೆ ಹೇಳುತ್ತಾನೆ: “ಉಪವಾಸವಿದ್ದು ಗೋಣಿತಟ್ಟು ಸುತ್ತಿಕೊಂಡು ಬೂದಿಬಳಿದುಕೊಂಡು ಕರ್ತನಾದ ದೇವರ [“ಸತ್ಯ ದೇವರಾದ ಯೆಹೋವನ,” NW] ಕಡೆಗೆ ಮುಖವೆತ್ತಿ ಪ್ರಾರ್ಥನೆವಿಜ್ಞಾಪನೆಗಳಲ್ಲಿ ನಿರತನಾದೆನು. ನನ್ನ ದೇವರಾದ ಯೆಹೋವನಿಗೆ ಹೀಗೆ ಪಾಪವನ್ನರಿಕೆ ಮಾಡಿ ಬಿನ್ನವಿಸಿದೆನು.” (ದಾನಿಯೇಲ 9:3, 4) ದೇವರ ಕರುಣಾಭರಿತ ವಿಮೋಚನೆಯನ್ನು ಅನುಭವಿಸಲಿಕ್ಕಾಗಿ ಯೋಗ್ಯವಾದ ಮನಃಸ್ಥಿತಿಯು ಅತ್ಯಾವಶ್ಯಕವಾಗಿತ್ತು. (ಯಾಜಕಕಾಂಡ 26:31-46; 1 ಅರಸು 8:46-53) ನಂಬಿಕೆ, ದೀನಭಾವ, ಹಾಗೂ ದೇಶಭ್ರಷ್ಟತೆ ಮತ್ತು ದಾಸತ್ವಕ್ಕೆ ಕಾರಣವಾಗಿದ್ದ ಪಾಪಗಳಿಗಾಗಿ ಸಂಪೂರ್ಣ ಪಶ್ಚಾತ್ತಾಪವನ್ನು ತೋರಿಸುವ ಅಗತ್ಯವಿತ್ತು. ಆದುದರಿಂದ, ದಾನಿಯೇಲನು ತನ್ನ ಪಾಪಪೂರ್ಣ ಜನರ ಪರವಾಗಿ ದೇವರ ಬಳಿ ವಿಜ್ಞಾಪನೆ ಮಾಡಲು ಆರಂಭಿಸಿದನು. ಹೇಗೆ? ಉಪವಾಸ, ಶೋಕಪ್ರದರ್ಶನ, ಹಾಗೂ ಪಶ್ಚಾತ್ತಾಪ ಮತ್ತು ನಿಷ್ಕಪಟ ಹೃದಯದ ಸಂಕೇತವಾಗಿರುವ ಗೋಣಿತಟ್ಟನ್ನು ಸುತ್ತಿಕೊಳ್ಳುವ ಮೂಲಕವೇ.
5. ಯೆಹೂದ್ಯರು ತಮ್ಮ ಸ್ವದೇಶಕ್ಕೆ ಹಿಂದಿರುಗುವರು ಎಂಬ ವಿಷಯದಲ್ಲಿ ದಾನಿಯೇಲನು ಏಕೆ ದೃಢವಿಶ್ವಾಸವನ್ನು ಇರಿಸಸಾಧ್ಯವಿತ್ತು?
5 ಯೆರೆಮೀಯನ ಪ್ರವಾದನೆಯು ದಾನಿಯೇಲನಿಗೆ ನಿರೀಕ್ಷೆಯನ್ನು ಕೊಟ್ಟಿತ್ತು. ಏಕೆಂದರೆ ಸ್ವಲ್ಪದರಲ್ಲೇ ಯೆಹೂದ್ಯರು ತಮ್ಮ ಸ್ವದೇಶವಾಗಿದ್ದ ಯೆಹೂದಕ್ಕೆ ಹಿಂದಿರುಗುವರು ಎಂಬುದನ್ನು ಅದು ಸೂಚಿಸಿತು. (ಯೆರೆಮೀಯ 25:12; 29:10) ಕೋರೆಷ ಎಂಬ ಹೆಸರಿನ ವ್ಯಕ್ತಿಯು ಈಗಾಗಲೇ ಪಾರಸಿಯವನ್ನು ಆಳುತ್ತಿದ್ದುದರಿಂದ, ದಾಸತ್ವಕ್ಕೆ ಒಳಗಾಗಿದ್ದ ಯೆಹೂದ್ಯರಿಗೆ ನಿಸ್ಸಂದೇಹವಾಗಿಯೂ ಬೇಗನೆ ಬಿಡುಗಡೆಯು ದೊರಕುವುದು ಎಂಬ ದೃಢವಿಶ್ವಾಸ ದಾನಿಯೇಲನಿಗಿತ್ತು. ಯೆರೂಸಲೇಮನ್ನು ಹಾಗೂ ದೇವಾಲಯವನ್ನು ಪುನಃ ಕಟ್ಟಲಿಕ್ಕಾಗಿ ಯೆಹೂದ್ಯರನ್ನು ಬಿಡುಗಡೆಗೊಳಿಸುವಂತೆ ಕೋರೆಷನನ್ನು ಉಪಯೋಗಿಸಲಾಗುವುದೆಂದು ಯೆಶಾಯನು ಪ್ರವಾದಿಸಿರಲಿಲ್ಲವೊ? (ಯೆಶಾಯ 44:28–45:3) ಆದರೆ ಇದು ಹೇಗೆ ನೆರವೇರುವುದು ಎಂಬುದರ ಬಗ್ಗೆ ದಾನಿಯೇಲನಿಗೆ ಯಾವುದೇ ಕಲ್ಪನೆಯಿರಲಿಲ್ಲ. ಆದುದರಿಂದ ಅವನು ದೇವರಿಗೆ ಪ್ರಾರ್ಥನೆವಿಜ್ಞಾಪನೆಗಳನ್ನು ಮಾಡಲು ಆರಂಭಿಸಿದನು.
6. ತನ್ನ ಪ್ರಾರ್ಥನೆಯಲ್ಲಿ ದಾನಿಯೇಲನು ಏನೆಂದು ಒಪ್ಪಿಕೊಂಡನು?
6 ದಾನಿಯೇಲನು ದೇವರ ಕರುಣೆ ಹಾಗೂ ಪ್ರೀತಿದಯೆಯ ಕಡೆಗೆ ಗಮನ ಸೆಳೆಯುತ್ತಾನೆ. ಯೆಹೂದ್ಯರು ಯೆಹೋವನ ಆಜ್ಞೆಗಳಿಗೆ ವಿರುದ್ಧವಾಗಿ ನಡೆದು, ಆತನ ಪ್ರವಾದನೆಗಳನ್ನು ಅಲಕ್ಷಿಸಿ, ದಂಗೆಯೇಳುವ ಮೂಲಕ ಪಾಪಮಾಡಿದ್ದರು ಎಂಬುದನ್ನು ಅವನು ದೀನಭಾವದಿಂದ ಒಪ್ಪಿಕೊಂಡನು. ದೇವರು ಅವರ ‘ದ್ರೋಹದ ನಿಮಿತ್ತ ಅವರನ್ನು ದೇಶದೇಶಗಳಿಗೆ . . . ಚದರಿಸಿ’ದ್ದು ನ್ಯಾಯೋಚಿತವಾಗಿತ್ತು. ದಾನಿಯೇಲನು ಪ್ರಾರ್ಥಿಸಿದ್ದು: “ಸ್ವಾಮೀ [ಯೆಹೋವನೇ], ನಿನಗೆ ವಿರುದ್ಧವಾಗಿ ಪಾಪಮಾಡಿದ್ದರಿಂದ ನಾವೂ ನಮ್ಮ ಅರಸರೂ ಪ್ರಧಾನರೂ ಹಿರಿಯರೂ ನಾಚಿಕೆಗೆ ಗುರಿಯಾಗಿದ್ದೇವೆ. ಕರ್ತನಾದ ನಮ್ಮ ದೇವರು [“ಯೆಹೋವನು,” NW] ಕರುಣಿಸುವವನೂ ಕ್ಷಮಿಸುವವನೂ ಆಗಿದ್ದಾನೆ; ನಾವು ಆತನಿಗೆ ತಿರುಗಿಬಿದ್ದೆವಲ್ಲಾ; ಕರ್ತನಾದ ನಮ್ಮ ದೇವರ [“ಯೆಹೋವನ,” NW] ಮಾತನ್ನು ಕೇಳಲಿಲ್ಲ, ತನ್ನ ಸೇವಕರಾದ ಪ್ರವಾದಿಗಳ ಮೂಲಕ ನಮಗೆ ಗೊತ್ತುಮಾಡಿದ ಧರ್ಮಮಾರ್ಗದಲ್ಲಿ ನಡೆಯಲಿಲ್ಲ. ಇಸ್ರಾಯೇಲ್ಯರೆಲ್ಲರೂ ನಿನ್ನ ಧರ್ಮಪ್ರಮಾಣವನ್ನು ಮೀರಿ ನಿನ್ನ ಮಾತನ್ನು ಕೇಳಲೊಲ್ಲದೆ ಓರೆಯಾಗಿ ಹೋದರು; ಆದಕಾರಣ ನಿನ್ನ ಶಾಪದ ಕೇಡುಗಳೂ ದೇವಸೇವಕನಾದ ಮೋಶೆಯ ಧರ್ಮಶಾಸ್ತ್ರದಲ್ಲಿ ನೀನು ಆಣೆಯಿಟ್ಟು ಪ್ರಕಟಿಸಿದ ವಿಪತ್ತುಗಳೂ ನಮ್ಮ ಮೇಲೆ ಸುರಿಯಲ್ಪಟ್ಟಿವೆ; ನಾವು ದೇವದ್ರೋಹಿಗಳೇ ಸರಿ.”—ದಾನಿಯೇಲ 9:5-11; ವಿಮೋಚನಕಾಂಡ 19:5-8; 24:3, 7, 8.
7. ಯೆಹೂದ್ಯರು ಬಂದಿವಾಸವನ್ನು ಅನುಭವಿಸುವಂತೆ ಅನುಮತಿಸುವ ಮೂಲಕ ಯೆಹೋವನು ಯೋಗ್ಯವಾಗಿ ಕಾರ್ಯನಡಿಸಿದನೆಂದು ಏಕೆ ಹೇಳಸಾಧ್ಯವಿದೆ?
7 ತನಗೆ ಅವಿಧೇಯತೆ ತೋರಿಸಿ, ತಾನು ಅವರೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ತಿರಸ್ಕರಿಸುವುದಾದರೆ ಯಾವ ಪರಿಣಾಮ ಉಂಟಾಗುತ್ತದೆ ಎಂಬುದರ ಕುರಿತು ದೇವರು ಇಸ್ರಾಯೇಲ್ಯರಿಗೆ ಈ ಮೊದಲೇ ಎಚ್ಚರಿಕೆ ನೀಡಿದ್ದನು. (ಯಾಜಕಕಾಂಡ 26:31-33; ಧರ್ಮೋಪದೇಶಕಾಂಡ 28:15; 31:17) ದೇವರ ಕೃತ್ಯಗಳು ಯೋಗ್ಯವಾಗಿದ್ದವು ಎಂಬುದನ್ನು ಹೀಗೆ ಹೇಳುವ ಮೂಲಕ ದಾನಿಯೇಲನು ಅಂಗೀಕರಿಸುತ್ತಾನೆ: “[ಆಹಾ, ನಮ್ಮ ದೇವರು] ನಮ್ಮ ಮೇಲೆ ದೊಡ್ಡ ಕೇಡನ್ನು ಬರಮಾಡಿ ನಮ್ಮನ್ನೂ ನಮ್ಮನ್ನಾಳುವ ಅಧಿಪತಿಗಳನ್ನೂ ಕುರಿತು ಗದರಿಸಿ ಹೇಳಿದ ಮಾತುಗಳನ್ನು ನೆರವೇರಿಸಿದ್ದಾನೆ; ಯೆರೂಸಲೇಮಿಗೆ ಆದಂಥ ಕೇಡು ಭೂಮಂಡಲದಲ್ಲಿ ಎಲ್ಲಿಯೂ ಎಂದೂ ಆಗಲಿಲ್ಲವಲ್ಲಾ. ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಂತೆಯೇ ಈ ವಿಪತ್ತೆಲ್ಲಾ ನಮ್ಮ ಮೇಲೆ ಬಂದಿದೆ; ಆದರೂ ನಾವು ನಮ್ಮ ದುರ್ಮಾರ್ಗಗಳನ್ನು ತೊರೆದುಬಿಟ್ಟು ನಿನ್ನ ಸತ್ಯೋಪದೇಶವನ್ನು ಗ್ರಹಿಸಿ ನಡೆಯುವಂತೆ ನಮ್ಮ ದೇವರಾದ ಯೆಹೋವನೆಂಬ ನಿನ್ನ ದಯೆಯನ್ನು ಬೇಡಿಕೊಳ್ಳಲಿಲ್ಲ. ಆದಕಾರಣ ಯೆಹೋವನು ಆ ಕೇಡನ್ನು ನೋಡಿಕೊಂಡಿದ್ದು ನಮ್ಮ ಮೇಲೆ ಬರಮಾಡಿದ್ದಾನೆ; ನಮ್ಮ ದೇವರಾದ ಯೆಹೋವನು ತಾನು ಮಾಡುವ ಸಕಲಕಾರ್ಯಗಳಲ್ಲಿ ಧರ್ಮಸ್ವರೂಪನೇ; ನಾವೋ ಆತನ ಮಾತನ್ನು ಕೇಳಲಿಲ್ಲ.”—ದಾನಿಯೇಲ 9:12-14.
8. ದಾನಿಯೇಲನು ಯೆಹೋವನಿಗೆ ಮಾಡಿದ ಪ್ರಾರ್ಥನೆಯ ಪ್ರಧಾನಾಂಶವು ಏನಾಗಿತ್ತು?
8 ದಾನಿಯೇಲನು ತನ್ನ ಜನರ ಕೃತ್ಯಗಳನ್ನು ಸಮರ್ಥಿಸಲು ಪ್ರಯತ್ನಿಸಲಿಲ್ಲ. ದೇಶಭ್ರಷ್ಟತೆಯನ್ನು ಅನುಭವಿಸಲು ಅವರು ಅರ್ಹರಾಗಿದ್ದರು, ಏಕೆಂದರೆ ದಾನಿಯೇಲನೇ ಹೀಗೆ ನಿವೇದಿಸಿದನು: “ನಾವು ಪಾಪಮಾಡಿ ಕೆಟ್ಟವರಾಗಿ ನಡೆದಿದ್ದೇವೆ.” (ದಾನಿಯೇಲ 9:15) ಅಥವಾ ಕಷ್ಟಾನುಭವದಿಂದ ಬಿಡುಗಡೆಯನ್ನು ಪಡೆಯುವುದರ ಬಗ್ಗೆ ಅವನು ಚಿಂತಿತನಾಗಿರಲಿಲ್ಲ. ಬದಲಾಗಿ, ಅವನ ಪ್ರಾರ್ಥನೆಯ ಪ್ರಧಾನಾಂಶವು ಯೆಹೋವನ ಸ್ವಂತ ಮಹಿಮೆ ಹಾಗೂ ಘನತೆಯಾಗಿತ್ತು. ಯೆಹೂದ್ಯರನ್ನು ಕ್ಷಮಿಸಿ, ಅವರನ್ನು ಸ್ವದೇಶಕ್ಕೆ ಹಿಂದಿರುಗುವಂತೆ ಮಾಡುವ ಮೂಲಕ, ದೇವರು ಯೆರೆಮೀಯನ ಮುಖಾಂತರ ಮಾಡಿದ ತನ್ನ ವಾಗ್ದಾನವನ್ನು ನೆರವೇರಿಸುವನು ಹಾಗೂ ತನ್ನ ಪವಿತ್ರ ನಾಮವನ್ನು ಪವಿತ್ರೀಕರಿಸುವನು. ದಾನಿಯೇಲನು ಶ್ರದ್ಧಾಪೂರ್ವಕವಾಗಿ ಬೇಡಿಕೊಂಡದ್ದು: “ಕರ್ತನೇ [“ಯೆಹೋವನೇ,” NW], ನಿನ್ನ ಸಮಸ್ತ ಧರ್ಮಕಾರ್ಯಗಳಿಗೆ ಅನುಸಾರವಾಗಿ ನಿನ್ನ ಪಟ್ಟಣವೂ ನಿನ್ನ ಪವಿತ್ರಪರ್ವತವೂ ಆದ ಯೆರೂಸಲೇಮಿನ ಮೇಲಣ ನಿನ್ನ ಕೋಪವನ್ನು, ನಿನ್ನ ರೋಷಾಗ್ನಿಯನ್ನು ದಯಮಾಡಿ ತೊಲಗಿಸಿಬಿಡು; ನಮ್ಮ ಮತ್ತು ನಮ್ಮ ಪಿತೃಗಳ ಪಾಪಾಪರಾಧಗಳ ನಿಮಿತ್ತ ಯೆರೂಸಲೇಮೂ ನಿನ್ನ ಜನವೂ ನೆರೆಹೊರೆಯವರೆಲ್ಲರ ನಿಂದೆಗೆ ಗುರಿಯಾಗಿವೆಯಲ್ಲಾ.”—ದಾನಿಯೇಲ 9:16.
9. (ಎ) ಯಾವ ಬೇಡಿಕೆಯೊಂದಿಗೆ ದಾನಿಯೇಲನು ತನ್ನ ಪ್ರಾರ್ಥನೆಯನ್ನು ಮುಕ್ತಾಯಗೊಳಿಸಿದನು? (ಬಿ) ದಾನಿಯೇಲನಿಗೆ ಯಾವುದು ಅತೀವ ವೇದನೆಯನ್ನು ಉಂಟುಮಾಡುತ್ತದೆ, ಆದರೆ ಅವನು ದೇವರ ಹೆಸರಿಗೆ ಹೇಗೆ ಗೌರವ ತೋರಿಸಿದನು?
9 ಅತಿಯಾದ ಹುರುಪಿನಿಂದ ದಾನಿಯೇಲನು ಮುಂದುವರಿಸುವುದು: “ನಮ್ಮ ದೇವರೇ, ನಿನ್ನ ಸೇವಕನ ಪ್ರಾರ್ಥನೆವಿಜ್ಞಾಪನೆಗಳನ್ನು ಈಗ ಲಾಲಿಸು; ಹಾಳಾಗಿರುವ ನಿನ್ನ ಪವಿತ್ರಾಲಯವನ್ನು ಕರ್ತನಾದ [“ಯೆಹೋವನಾದ,” NW] ನಿನ್ನ ಹೆಸರಿನ ನಿಮಿತ್ತವೇ ಪ್ರಸನ್ನಮುಖದಿಂದ ನೋಡು. ನನ್ನ ದೇವರೇ, ಕಿವಿಗೊಟ್ಟು ಕೇಳು, ಕಣ್ಣುತೆರೆದು ನಮ್ಮ ಹಾಳುಪ್ರದೇಶಗಳನ್ನೂ ನಿನ್ನ ಹೆಸರುಗೊಂಡಿರುವ ಪಟ್ಟಣವನ್ನೂ ನೋಡು; ನಾವು ಸದ್ಧರ್ಮಿಗಳೆಂತಲ್ಲ, ನಿನ್ನ ಮಹಾ ಕೃಪೆಯನ್ನೇ ನಂಬಿಕೊಂಡು ಈ ಬಿನ್ನಹಗಳನ್ನು ನಿನ್ನ ಮುಂದೆ ಅರಿಕೆಮಾಡುತ್ತಿದ್ದೇವೆ. ಸ್ವಾಮೀ [“ಯೆಹೋವನೇ,” NW], ಕೇಳು! ಸ್ವಾಮೀ, [“ಯೆಹೋವನೇ,” NW] ಕ್ಷಮಿಸು! ಸ್ವಾಮೀ, [“ಯೆಹೋವನೇ,” NW] ಲಾಲಿಸು, ಕಾರ್ಯವನ್ನು ಸಾಧಿಸು! ತಡಮಾಡಬೇಡ! ನನ್ನ ದೇವರೇ, ನಿನ್ನ ಜನವೂ ಪಟ್ಟಣವೂ ನಿನ್ನ ಹೆಸರಿನವುಗಳಾದ ಕಾರಣ ನಿನ್ನ ಹೆಸರನ್ನು ಕಾಪಾಡಿಕೋ!” (ದಾನಿಯೇಲ 9:17-19) ಒಂದು ವೇಳೆ ದೇವರು ತನ್ನ ಜನರನ್ನು ಕ್ಷಮಿಸದೆ, ಅವರನ್ನು ದೇಶಭ್ರಷ್ಟರಾಗಿರುವಂತೆಯೇ ಬಿಟ್ಟುಬಿಟ್ಟು, ತನ್ನ ಪವಿತ್ರ ಪಟ್ಟಣವಾದ ಯೆರೂಸಲೇಮು ಅನಿಶ್ಚಿತ ಸಮಯದ ವರೆಗೆ ನಿರ್ಜನವಾಗಿ ಉಳಿಯುವಂತೆ ಅನುಮತಿಸುತ್ತಿದ್ದಲ್ಲಿ, ಜನಾಂಗಗಳು ಆತನನ್ನು ವಿಶ್ವದ ಪರಮಾಧಿಕಾರಿಯಾಗಿ ಪರಿಗಣಿಸುತ್ತಿದ್ದವೊ? ಬಾಬೆಲಿನ ಬಲಿಷ್ಠ ದೇವದೇವತೆಗಳ ಮುಂದೆ ಯೆಹೋವನು ಶಕ್ತಿಹೀನನಾಗಿದ್ದಾನೆ ಎಂಬ ನಿರ್ಣಯಕ್ಕೆ ಅವರು ಬರುತ್ತಿರಲಿಲ್ಲವೊ? ಹೌದು, ಯೆಹೋವನ ಹೆಸರಿಗೆ ಕಳಂಕ ಬರುತ್ತಿತ್ತು, ಮತ್ತು ಇದು ದಾನಿಯೇಲನಿಗೆ ಅತೀವ ವೇದನೆಯನ್ನು ಉಂಟುಮಾಡುತ್ತಿತ್ತು. ದಾನಿಯೇಲ ಪುಸ್ತಕದ ಮೂಲ ಗ್ರಂಥಪಾಠದಲ್ಲಿ ಯೆಹೋವ ಎಂಬ ದೈವಿಕ ನಾಮವು ಸುಮಾರು 19 ಬಾರಿ ಕಂಡುಬರುತ್ತದಾದರೂ, ಈ ಪ್ರಾರ್ಥನೆಯಲ್ಲಿಯೇ ಅದು 18 ಬಾರಿ ಉಪಯೋಗಿಸಲ್ಪಟ್ಟಿದೆ!
ಗಬ್ರಿಯೇಲನು ಆತುರದಿಂದ ಧಾವಿಸಿ ಬರುತ್ತಾನೆ
10. (ಎ) ದಾನಿಯೇಲನ ಬಳಿಗೆ ಯಾರು ಕಳುಹಿಸಲ್ಪಟ್ಟನು, ಮತ್ತು ಏಕೆ? (ಬಿ) ದಾನಿಯೇಲನು ಗಬ್ರಿಯೇಲನನ್ನು “ಪುರುಷನು” ಎಂದು ಏಕೆ ಸೂಚಿಸಿ ಮಾತಾಡುತ್ತಾನೆ?
10 ದಾನಿಯೇಲನು ಇನ್ನೂ ಪ್ರಾರ್ಥಿಸುತ್ತಿರುವಾಗಲೇ, ಗಬ್ರಿಯೇಲ ದೇವದೂತನು ಕಾಣಿಸಿಕೊಳ್ಳುತ್ತಾನೆ. ಅವನು ಹೇಳುವುದು: “ದಾನಿಯೇಲನೇ, ನಿನಗೆ ಜ್ಞಾನಬೋಧೆ ಮಾಡುವದಕ್ಕೆ ಈಗ ಬಂದೆನು; ನಿನ್ನ ವಿಜ್ಞಾಪನೆಯ ಆರಂಭದಲ್ಲಿಯೇ ದೇವರ ಅಪ್ಪಣೆಯಾಯಿತು; ಅದನ್ನು ನಿನಗೆ ತಿಳಿಸಲು ಇಲ್ಲಿಗೆ ಬಂದಿದ್ದೇನೆ; ನೀನು [ದೇವರಿಗೆ] ಅತಿಪ್ರಿಯ; ಈ ದೈವೋಕ್ತಿಯನ್ನು ಯೋಚಿಸು, ಈ ದರ್ಶನವನ್ನು ಗ್ರಹಿಸಿಕೋ.” ಆದರೆ ದಾನಿಯೇಲನು ಅವನ ಕುರಿತು “ಗಬ್ರಿಯೇಲನೆಂಬ ಪುರುಷ”ನೆಂದು ಏಕೆ ಸೂಚಿಸಿ ಮಾತಾಡುತ್ತಾನೆ? (ದಾನಿಯೇಲ 9:20-23) ದಾನಿಯೇಲನು ಈ ಮುಂಚೆ ಕಂಡಿದ್ದಂತಹ ಹೋತ ಹಾಗೂ ಟಗರಿನ ದರ್ಶನದ ಅರ್ಥವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದಾಗ, “ಮನುಷ್ಯಸದೃಶನೊಬ್ಬನು” ಅವನ ಮುಂದೆ ಕಾಣಿಸಿಕೊಂಡಿದ್ದನು. ದಾನಿಯೇಲನಿಗೆ ಒಳನೋಟವನ್ನು ಒದಗಿಸಲಿಕ್ಕಾಗಿ ಕಳುಹಿಸಲ್ಪಟ್ಟಿದ್ದ ಗಬ್ರಿಯೇಲ ದೇವದೂತನೇ ಅವನಾಗಿದ್ದನು. (ದಾನಿಯೇಲ 8:15-17) ತದ್ರೀತಿಯಲ್ಲಿ, ದಾನಿಯೇಲನು ಪ್ರಾರ್ಥಿಸಿದ ಬಳಿಕ, ಇದೇ ದೇವದೂತನು ಅವನ ಬಳಿಗೆ ಮನುಷ್ಯ ರೂಪದಲ್ಲಿ ಬಂದು, ಒಬ್ಬ ವ್ಯಕ್ತಿಯು ಇನ್ನೊಬ್ಬನೊಂದಿಗೆ ಮಾತಾಡುವಂತಹ ರೀತಿಯಲ್ಲೇ ಮಾತಾಡಿದನು.
11, 12. (ಎ) ಬಾಬೆಲಿನಲ್ಲಿ ಯೆಹೋವನ ದೇವಾಲಯ ಅಥವಾ ಯಜ್ಞವೇದಿಯು ಇರಲಿಲ್ಲವಾದರೂ, ಬಾಬೆಲಿನಲ್ಲಿದ್ದ ಯೆಹೂದಿ ಭಕ್ತರು ಧರ್ಮಶಾಸ್ತ್ರದಿಂದ ಅಗತ್ಯಪಡಿಸಲ್ಪಟ್ಟಿದ್ದ ನೈವೇದ್ಯಗಳಿಗೆ ಹೇಗೆ ಗೌರವವನ್ನು ತೋರಿಸುತ್ತಿದ್ದರು? (ಬಿ) ದಾನಿಯೇಲನನ್ನು “ಅತಿಪ್ರಿಯ”ನು ಎಂದು ಏಕೆ ಕರೆಯಲಾಗಿತ್ತು?
11 “ಸಂಧ್ಯಾನೈವೇದ್ಯಸಮಯದಲ್ಲಿ” ಗಬ್ರಿಯೇಲ ದೇವದೂತನು ಅಲ್ಲಿಗೆ ಆಗಮಿಸುತ್ತಾನೆ. ಯೆರೂಸಲೇಮಿನಲ್ಲಿದ್ದ ದೇವಾಲಯದೊಂದಿಗೆ ಯೆಹೋವನ ಯಜ್ಞವೇದಿಯು ಸಹ ಸಂಪೂರ್ಣವಾಗಿ ನಾಶಮಾಡಲ್ಪಟ್ಟಿತ್ತು, ಮತ್ತು ಯೆಹೂದ್ಯರು ವಿಧರ್ಮಿ ಬಾಬೆಲಿನಲ್ಲಿ ಬಂದಿವಾಸಿಗಳಾಗಿದ್ದರು. ಆದುದರಿಂದ, ಬಾಬೆಲಿನಲ್ಲಿದ್ದ ಯೆಹೂದ್ಯರಿಂದ ದೇವರಿಗೆ ಯಜ್ಞಗಳು ಅರ್ಪಿಸಲ್ಪಡುತ್ತಿರಲಿಲ್ಲ. ಆದರೂ, ಮೋಶೆಯ ನಿಯಮಶಾಸ್ತ್ರದ ಕೆಳಗೆ ನೈವೇದ್ಯಗಳನ್ನು ಸಮರ್ಪಿಸಲಿಕ್ಕಾಗಿ ನಿಗದಿಪಡಿಸಲ್ಪಟ್ಟಿದ್ದ ಸಮಯದಲ್ಲಿಯೇ, ಬಾಬೆಲಿನಲ್ಲಿದ್ದ ಯೆಹೂದಿ ಭಕ್ತರು ಯೆಹೋವನನ್ನು ಸ್ತುತಿಸಿ, ಆತನಿಗೆ ಪ್ರಾರ್ಥಿಸಬೇಕಾಗಿತ್ತು. ದಾನಿಯೇಲನು ದೇವರ ಪರಮ ಭಕ್ತನಾಗಿದ್ದರಿಂದ, ಅವನನ್ನು “ಅತಿಪ್ರಿಯ”ನು ಎಂದು ಕರೆಯಲಾಗಿತ್ತು. “ಪ್ರಾರ್ಥನೆಯನ್ನು ಕೇಳುವವ”ನಾಗಿದ್ದ ಯೆಹೋವನು ದಾನಿಯೇಲನನ್ನು ತುಂಬ ಇಷ್ಟಪಟ್ಟನು, ಹಾಗೂ ದಾನಿಯೇಲನ ನಂಬಿಗಸ್ತ ಪ್ರಾರ್ಥನೆಗೆ ಉತ್ತರ ನೀಡಲಿಕ್ಕಾಗಿ ಆ ಕೂಡಲೆ ಗಬ್ರಿಯೇಲನನ್ನು ಕಳುಹಿಸಲಾಗಿತ್ತು.—ಕೀರ್ತನೆ 65:2.
12 ಯೆಹೋವನಿಗೆ ಪ್ರಾರ್ಥಿಸುವುದು ದಾನಿಯೇಲನ ಜೀವಿತಕ್ಕೇ ಅಪಾಯವನ್ನು ತಂದೊಡ್ಡಿತ್ತಾದರೂ, ದಿನವೊಂದಕ್ಕೆ ಮೂರು ಸಾರಿ ದೇವರಿಗೆ ಪ್ರಾರ್ಥಿಸುವುದನ್ನು ದಾನಿಯೇಲನು ಮುಂದುವರಿಸಿದ್ದನು. (ದಾನಿಯೇಲ 6:10, 11) ಯೆಹೋವನು ಅವನನ್ನು ಅಷ್ಟು ಪ್ರಿಯನಾಗಿ ಪರಿಗಣಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ! ದಾನಿಯೇಲನ ಪ್ರಾರ್ಥನೆಯು ಮಾತ್ರವಲ್ಲ, ದೇವರ ವಾಕ್ಯದ ಕುರಿತಾದ ಅವನ ಧ್ಯಾನವು, ಯೆಹೋವನ ಚಿತ್ತವೇನೆಂಬುದನ್ನು ಕಂಡುಕೊಳ್ಳಲು ಅವನನ್ನು ಶಕ್ತನನ್ನಾಗಿ ಮಾಡಿತು. ದಾನಿಯೇಲನು ಎಡೆಬಿಡದೆ ಪ್ರಾರ್ಥಿಸಿದನು ಹಾಗೂ ತನ್ನ ಪ್ರಾರ್ಥನೆಗಳಿಗೆ ಉತ್ತರ ಸಿಗಬೇಕಾದರೆ ತಾನು ಯೆಹೋವನ ಬಳಿ ಹೇಗೆ ಬೇಡಿಕೊಳ್ಳಬೇಕು ಎಂಬುದು ಸಹ ಅವನಿಗೆ ಗೊತ್ತಿತ್ತು. ಅವನು ಯೆಹೋವನ ಧಾರ್ಮಿಕತೆಯನ್ನು ಎತ್ತಿತೋರಿಸಿದನು. (ದಾನಿಯೇಲ 9:7, 14, 16) ತನ್ನ ವೈರಿಗಳು ತನ್ನಲ್ಲಿ ಯಾವುದೇ ತಪ್ಪನ್ನು ಕಂಡುಕೊಳ್ಳಲು ಅಸಮರ್ಥರಾಗಿದ್ದರೂ, ತಾನು ದೇವರ ದೃಷ್ಟಿಯಲ್ಲಿ ಪಾಪಿಯಾಗಿದ್ದೇನೆ ಎಂಬುದು ದಾನಿಯೇಲನಿಗೆ ಚೆನ್ನಾಗಿ ತಿಳಿದಿತ್ತು ಮತ್ತು ಅವನು ತನ್ನ ಪಾಪಗಳನ್ನು ಮನಃಪೂರ್ವಕವಾಗಿ ನಿವೇದಿಸುತ್ತಿದ್ದನು.—ದಾನಿಯೇಲ 6:4; ರೋಮಾಪುರ 3:23.
ಅಧರ್ಮವನ್ನು ಕೊನೆಗಾಣಿಸಲು “ಎಪ್ಪತ್ತು ವಾರಗಳು”
13, 14. (ಎ) ಯಾವ ಪ್ರಮುಖ ಮಾಹಿತಿಯನ್ನು ಗಬ್ರಿಯೇಲನು ದಾನಿಯೇಲನಿಗೆ ತಿಳಿಯಪಡಿಸಿದನು? (ಬಿ) “ಎಪ್ಪತ್ತು ವಾರಗಳು” ಎಷ್ಟು ದೀರ್ಘವಾಗಿದ್ದವು, ಮತ್ತು ಇದು ನಮಗೆ ಹೇಗೆ ಗೊತ್ತು?
13 ಪ್ರಾರ್ಥನಾಪರನಾದ ದಾನಿಯೇಲನಿಗೆ ಎಂತಹ ಒಂದು ಉತ್ತರ ದೊರಕುತ್ತದೆ! ಯೆಹೂದ್ಯರು ತಮ್ಮ ಸ್ವದೇಶಕ್ಕೆ ಹಿಂದಿರುಗುವರು ಎಂಬ ಆಶ್ವಾಸನೆಯನ್ನು ಯೆಹೋವನು ಅವನಿಗೆ ಕೊಡುತ್ತಾನೆ, ಹಾಗೂ ಇನ್ನೂ ಹೆಚ್ಚಿನ ಮಹತ್ವದ ಒಂದು ಸಂಗತಿಯ ಬಗ್ಗೆ, ಅಂದರೆ ಮುಂತಿಳಿಸಲ್ಪಟ್ಟ ಮೆಸ್ಸೀಯನ ಬರುವಿಕೆಯ ಬಗ್ಗೆಯೂ ಒಳನೋಟವನ್ನು ಒದಗಿಸುತ್ತಾನೆ. (ಆದಿಕಾಂಡ 22:17, 18; ಯೆಶಾಯ 9:6, 7) ಗಬ್ರಿಯೇಲನು ದಾನಿಯೇಲನಿಗೆ ಹೇಳುವುದು: “ಅಧರ್ಮವನ್ನು ಕೊನೆಗಾಣಿಸುವದು, ಪಾಪಗಳನ್ನು ತೀರಿಸುವದು, ಅಪರಾಧವನ್ನು ನಿವಾರಿಸುವದು, ಸನಾತನಧರ್ಮವನ್ನು ಸ್ಥಾಪಿಸುವದು, ಕನಸನ್ನೂ ಪ್ರವಾದಿಯ ನುಡಿಯನ್ನೂ ಮುದ್ರೆಹಾಕಿ ಯಥಾರ್ಥಮಾಡುವದು, ಅತಿಪರಿಶುದ್ಧವಾದದ್ದನ್ನು ಅಭಿಷೇಕಿಸುವದು, ಇವೆಲ್ಲಾ ನೆರವೇರುವದಕ್ಕೆ ಮೊದಲು ನಿನ್ನ ಜನಕ್ಕೂ ನಿನ್ನ ಪರಿಶುದ್ಧಪುರಕ್ಕೂ ಎಪ್ಪತ್ತು ವಾರಗಳು ಕಳೆಯಬೇಕು ಎಂದು ನಿಷ್ಕರ್ಷೆಯಾಗಿದೆ. ಇದನ್ನು ತಿಳಿದು ಮಂದಟ್ಟುಮಾಡಿಕೋ; ಯೆರೂಸಲೇಮು ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ ಎಂಬ ದೈವೋಕ್ತಿಯು ಹೊರಡುವಂದಿನಿಂದ ಅಭಿಷಿಕ್ತನಾದ ಪ್ರಭುವು [“ನಾಯಕನಾದ ಮೆಸ್ಸೀಯನು,” NW] ಬರುವದರೊಳಗೆ ಏಳು ವಾರಗಳೂ ಅರುವತ್ತೆರಡು ವಾರಗಳೂ ಕಳೆಯಬೇಕು; ಅದು ಪುನಃ ಕಟ್ಟಲ್ಪಡುವದು. ಅದಕ್ಕೆ ಚೌಕವೂ ಕಂದಕವೂ ಇರುವವು; ಆ ಕಾಲವು ಬಹು ಕಷ್ಟಕಾಲ.”—ದಾನಿಯೇಲ 9:24, 25, BSI ಬೈಬಲಿನ ಪಾದಟಿಪ್ಪಣಿ.
14 ನಿಜವಾಗಿಯೂ ಇದು ಶುಭ ವಾರ್ತೆಯಾಗಿತ್ತು! ಯೆರೂಸಲೇಮ್ ಪುನಃ ಕಟ್ಟಲ್ಪಟ್ಟು, ಒಂದು ಹೊಸ ದೇವಾಲಯದಲ್ಲಿ ಆರಾಧನೆಯು ಮತ್ತೆ ಆರಂಭಿಸಲ್ಪಡಲಿಕ್ಕಿತ್ತು ಮಾತ್ರವಲ್ಲ, ನಿರ್ದಿಷ್ಟ ಸಮಯದಲ್ಲಿ “ನಾಯಕನಾದ ಮೆಸ್ಸೀಯನು” ಸಹ ಕಂಡುಬರಲಿದ್ದನು. ಇದು “ಎಪ್ಪತ್ತು ವಾರಗಳ” ಒಳಗೆ ಸಂಭವಿಸಲಿಕ್ಕಿತ್ತು. ಗಬ್ರಿಯೇಲನು ದಿನಗಳ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲವಾದುದರಿಂದ, ಇವು ಪ್ರತಿಯೊಂದರಲ್ಲಿ ಏಳು ದಿನಗಳಿರುವ ವಾರಗಳಾಗಿರಲಿಲ್ಲ, ಅಂದರೆ 490 ದಿನಗಳಿಂದ ಕೂಡಿದ್ದ ಒಂದು ವರ್ಷ ನಾಲ್ಕು ತಿಂಗಳಿಗೆ ಸಮಾನವಾಗಿರಲಿಲ್ಲ. ಮುಂತಿಳಿಸಲ್ಪಟ್ಟಿದ್ದಂತೆ “ಚೌಕವೂ ಕಂದಕವೂ” ಇದ್ದ ಯೆರೂಸಲೇಮನ್ನು ಪುನಃ ಕಟ್ಟಲು, ಇದಕ್ಕಿಂತಲೂ ದೀರ್ಘ ಕಾಲವು ಹಿಡಿಯಲಿತ್ತು. ಈ ವಾರಗಳು ವರ್ಷಗಳಿರುವ ವಾರಗಳಾಗಿದ್ದವು. ಅಂದರೆ ಪ್ರತಿಯೊಂದು ವಾರವು ಏಳು ವರ್ಷಗಳಷ್ಟು ಉದ್ದವಾಗಿತ್ತು ಎಂದು ಅನೇಕ ಆಧುನಿಕ ಬೈಬಲ್ ಭಾಷಾಂತರಗಳು ಸೂಚಿಸುತ್ತವೆ. ಉದಾಹರಣೆಗಾಗಿ, ಯೆಹೂದಿ ಪ್ರಕಾಶನ ಸಂಸ್ಥೆಯಿಂದ ಪ್ರಕಾಶಿಸಲ್ಪಟ್ಟ, ತನಕ್—ದ ಹೋಲಿ ಸ್ಕ್ರಿಪ್ಚರ್ಸ್ನಲ್ಲಿರುವ ದಾನಿಯೇಲ 9:24ರ ಪಾದಟಿಪ್ಪಣಿಯು, “ವರ್ಷಗಳಿರುವ ಎಪ್ಪತ್ತು ವಾರಗಳು” ಎಂಬ ತರ್ಜುಮೆಯನ್ನು ಸೂಚಿಸುತ್ತದೆ. ಆ್ಯನ್ ಅಮೆರಿಕನ್ ಟ್ರಾನ್ಸ್ಲೇಷನ್ ಹೀಗೆ ಹೇಳುತ್ತದೆ: “ನಿನ್ನ ಜನರಿಗೂ ನಿನ್ನ ಪವಿತ್ರ ಪಟ್ಟಣಕ್ಕೂ, ವರ್ಷಗಳಿರುವ ಎಪ್ಪತ್ತು ವಾರಗಳು ನಿಗದಿಪಡಿಸಲ್ಪಟ್ಟಿವೆ.” ಮಾಫಟ್ ಹಾಗೂ ರಾಥರ್ಹ್ಯಾಮ್ರ ಭಾಷಾಂತರಗಳಲ್ಲಿಯೂ ತದ್ರೀತಿಯ ತರ್ಜುಮೆಗಳು ಕಂಡುಬರುತ್ತವೆ.
15. “ಎಪ್ಪತ್ತು ವಾರಗಳ”ನ್ನು ಯಾವ ಮೂರು ಕಾಲಾವಧಿಗಳನ್ನಾಗಿ ವಿಭಾಗಿಸಲಾಗಿದೆ, ಮತ್ತು ಅವು ಯಾವಾಗ ಆರಂಭಗೊಂಡವು?
15 ದೇವದೂತನ ಮಾತುಗಳಿಗನುಸಾರ, “ಎಪ್ಪತ್ತು ವಾರಗಳ”ನ್ನು ಮೂರು ಕಾಲಾವಧಿಗಳನ್ನಾಗಿ ವಿಭಾಗಿಸಬಹುದು: (1) “ಏಳು ವಾರಗಳು,” (2) “ಅರುವತ್ತೆರಡು ವಾರಗಳು,” ಮತ್ತು (3) ಒಂದು ವಾರ. ಅದು 49 ವರ್ಷಗಳು, 434 ವರ್ಷಗಳು, ಹಾಗೂ 7 ವರ್ಷಗಳು, ಅಂದರೆ ಒಟ್ಟಿಗೆ 490 ವರ್ಷಗಳಾಗುತ್ತವೆ. ಆಸಕ್ತಿಕರವಾಗಿಯೇ, ದ ಹೋಲಿ ಬೈಬಲ್—ನ್ಯೂ ಸೆಂಚುರಿ ವರ್ಷನ್ ಹೀಗೆ ಹೇಳುತ್ತದೆ: “ನಿನ್ನ ಜನರಿಗೂ ನಿನ್ನ ಪವಿತ್ರ ಪಟ್ಟಣಕ್ಕೂ ದೇವರು ನಾನೂರ ತೊಂಬತ್ತು ವರ್ಷಗಳನ್ನು ವಿಧಿಸಿದ್ದಾನೆ.” ಅವರ ದೇಶಭ್ರಷ್ಟತೆ ಹಾಗೂ ಬಾಬೆಲಿನಲ್ಲಿ 70 ವರ್ಷಗಳ ವರೆಗೆ ಅವರು ಕಷ್ಟಾನುಭವಿಸಿದ ಬಳಿಕ, ಯೆಹೂದ್ಯರು 490 ವರ್ಷಗಳ ವರೆಗೆ—ಅಥವಾ 70×7 ವರ್ಷಗಳು—ದೇವರಿಂದ ವಿಶೇಷ ಅನುಗ್ರಹವನ್ನು ಪಡೆದುಕೊಳ್ಳಲಿದ್ದರು. “ಯೆರೂಸಲೇಮು ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ ಎಂಬ ದೈವೋಕ್ತಿಯು ಹೊರಡುವಂದಿನಿಂದ” ಈ ಕಾಲಾವಧಿಯು ಆರಂಭವಾಗುವುದು. ಇದು ಯಾವಾಗ ಸಂಭವಿಸುವುದು?
“ಎಪ್ಪತ್ತು ವಾರಗಳು” ಆರಂಭಗೊಳ್ಳುತ್ತವೆ
16. ಕೋರೆಷನ ಆಜ್ಞೆಯಿಂದ ತೋರಿಸಲ್ಪಟ್ಟಂತೆ, ಯಾವ ಉದ್ದೇಶಕ್ಕಾಗಿ ಅವನು ಯೆಹೂದ್ಯರನ್ನು ಅವರ ಸ್ವದೇಶಕ್ಕೆ ಕಳುಹಿಸಿದನು?
16 “ಎಪ್ಪತ್ತು ವಾರಗಳ” ಆರಂಭದ ಸಂಬಂಧದಲ್ಲಿ ಮೂರು ಗಮನಾರ್ಹ ಘಟನೆಗಳನ್ನು ಪರಿಗಣಿಸುವುದು ಯೋಗ್ಯವಾಗಿದೆ. ಸಾ.ಶ.ಪೂ. 537ರಲ್ಲಿ, ಯೆಹೂದ್ಯರನ್ನು ಅವರ ಸ್ವದೇಶಕ್ಕೆ ಪುನಃ ಕಳುಹಿಸುವ ಆಜ್ಞೆಯನ್ನು ಕೋರೆಷನು ಹೊರಡಿಸಿದಾಗ, ಮೊದಲನೆಯ ಘಟನೆಯು ಸಂಭವಿಸಿತು. “ಪಾರಸಿಯ ರಾಜನಾದ ಕೋರೆಷನೆಂಬ ನನ್ನ ಮಾತನ್ನು ಕೇಳಿರಿ—ಪರಲೋಕದೇವರಾದ ಯೆಹೋವನು ನನಗೆ ಭೂಲೋಕದ ಎಲ್ಲಾ ರಾಜ್ಯಗಳನ್ನೂ ಕೊಟ್ಟು ತನಗೋಸ್ಕರ ಯೆಹೂದದೇಶದ ಯೆರೂಸಲೇಮಿನಲ್ಲಿ ಆಲಯವನ್ನು ಕಟ್ಟಿಸಬೇಕು ಎಂದು ಆಜ್ಞಾಪಿಸಿದ್ದಾನೆ. ನಿಮ್ಮಲ್ಲಿ ಯಾರು ಆತನ ಪ್ರಜೆಗಳಾಗಿರುತ್ತಾರೋ ಅವರು ಯೆಹೂದದೇಶದ ಯೆರೂಸಲೇಮಿಗೆ ಹೋಗಿ ಅಲ್ಲಿ ವಾಸಿಸುತ್ತಿರುವ ಇಸ್ರಾಯೇಲ್ದೇವರಾದ ಯೆಹೋವನಿಗೋಸ್ಕರ ಆಲಯವನ್ನು ಕಟ್ಟಲಿ; ಅವರ ದೇವರು ಅವರ ಸಂಗಡ ಇರಲಿ. ಸೆರೆಯವರಲ್ಲಿ ಉಳಿದವರು ಯಾವ ಊರುಗಳಲ್ಲಿ ಪ್ರವಾಸಿಗಳಾಗಿರುತ್ತಾರೋ ಆ ಊರುಗಳವರು ಯೆರೂಸಲೇಮಿನ ದೇವಾಲಯಕ್ಕೋಸ್ಕರ ಕಾಣಿಕೆಗಳನ್ನಲ್ಲದೆ ಬೆಳ್ಳಿಬಂಗಾರ, ಸರಕು, ಪಶು ಇವುಗಳನ್ನೂ ಕೊಟ್ಟು ಅವರಿಗೆ ಸಹಾಯ ಮಾಡಲಿ ಎಂದು ಪ್ರಕಟಿಸಿದನು.” (ಎಜ್ರ 1:2-4) ಸ್ಪಷ್ಟವಾಗಿಯೇ, ‘ಯೆಹೋವನ ಆಲಯ’ವನ್ನು ಅದರ ಹಳೆಯ ಸ್ಥಳದಲ್ಲಿ ಪುನಃ ಕಟ್ಟುವುದೇ ಈ ಆಜ್ಞೆಯ ನಿರ್ದಿಷ್ಟ ಉದ್ದೇಶವಾಗಿತ್ತು.
17. ಎಜ್ರನಿಗೆ ಕೊಡಲ್ಪಟ್ಟಿದ್ದ ಪತ್ರವು, ಅವನು ಯೆರೂಸಲೇಮಿಗೆ ಪ್ರಯಾಣಿಸಲು ಯಾವ ಕಾರಣವನ್ನು ಕೊಟ್ಟಿತು?
17 ಪಾರಸಿಯ ಅರಸನಾದ ಅರ್ತಷಸ್ತನ (Iನೆಯ ಸರ್ಕ್ಸೀಸ್ನ ಮಗನಾದ ಆರ್ಟ್ಸರ್ಕ್ಸೀಸ್ ಲಾಂಜಾಯ್ಮೆನಸ್) ಆಳಿಕೆಯ ಏಳನೆಯ ವರುಷದಲ್ಲಿ ಎರಡನೆಯ ಘಟನೆಯು ಸಂಭವಿಸಿತು. ಆ ಸಮಯದಲ್ಲಿ, ನಕಲುಗಾರನಾದ ಎಜ್ರನು ಯೆರೂಸಲೇಮಿನಿಂದ ಬಾಬೆಲಿಗೆ ನಾಲ್ಕು ತಿಂಗಳ ಪ್ರಯಾಣವನ್ನು ಮಾಡಿದನು. ಅವನು ಅರಸನಿಂದ ಕೊಡಲ್ಪಟ್ಟಿದ್ದ ಒಂದು ವಿಶೇಷ ಪತ್ರವನ್ನು ತನ್ನೊಂದಿಗೆ ಕೊಂಡೊಯ್ದನು, ಆದರೆ ಆ ಪತ್ರವು ಯೆರೂಸಲೇಮನ್ನು ಪುನಃ ಕಟ್ಟುವ ಅಧಿಕಾರವನ್ನು ಕೊಟ್ಟಿರಲಿಲ್ಲ. ಅದಕ್ಕೆ ಬದಲಾಗಿ, ಎಜ್ರನಿಗೆ ಕೊಡಲ್ಪಟ್ಟಿದ್ದ ನೇಮಕವು, ಕೇವಲ ‘ಯೆಹೋವನ ಆಲಯವನ್ನು ಶೋಭಿಸುವ ಸ್ಥಿತಿಗೆ ತರುವುದಕ್ಕೆ’ ಮಾತ್ರ ಸೀಮಿತವಾಗಿತ್ತು. ಆದುದರಿಂದಲೇ, ಬೆಳ್ಳಿ ಬಂಗಾರ, ಪವಿತ್ರ ಪಾತ್ರೆಗಳು, ಮತ್ತು ದೇವಾಲಯದ ಆರಾಧನೆಯಲ್ಲಿ ಉಪಯೋಗಿಸಲಿಕ್ಕಾಗಿದ್ದ ಗೋಧಿ, ದ್ರಾಕ್ಷಾರಸ, ಎಣ್ಣೆ, ಹಾಗೂ ಉಪ್ಪಿನ ಬಗ್ಗೆ, ಹಾಗೂ ದೇವಾಲಯದಲ್ಲಿ ಸೇವೆಮಾಡುತ್ತಿರುವವರನ್ನು ತೆರಿಗೆಯಿಂದ ಬಿಡುಗಡೆಮಾಡುವುದರ ಬಗ್ಗೆ ಮಾತ್ರ ಆ ಪತ್ರದಲ್ಲಿ ತಿಳಿಸಲಾಗಿತ್ತು.—ಎಜ್ರ 7:6-27.
18. ಯಾವ ಸುದ್ದಿಯು ನೆಹೆಮೀಯನಿಗೆ ಕ್ಷೋಭೆಯನ್ನು ಉಂಟುಮಾಡಿತು, ಮತ್ತು ಅರಸನಾದ ಅರ್ತಷಸ್ತನಿಗೆ ಅದು ಹೇಗೆ ಗೊತ್ತಾಯಿತು?
18 ಮೂರನೆಯ ಘಟನೆಯು, ಪಾರಸಿಯ ಅರಸನಾದ ಅರ್ತಷಸ್ತನ ಆಳಿಕೆಯ 20ನೆಯ ವರ್ಷದಲ್ಲಿ, ಅಂದರೆ 13 ವರ್ಷಗಳ ಬಳಿಕ ಸಂಭವಿಸಿತು. ಆಗ ನೆಹೆಮೀಯನು “ಶೂಷನ್ ಪಟ್ಟಣ”ದಲ್ಲಿ ಅವನ ಪಾನಸೇವಕನಾಗಿ ಸೇವೆಮಾಡುತ್ತಿದ್ದನು. ಬಾಬೆಲಿನಿಂದ ಹಿಂದಿರುಗಿದ್ದ ಉಳಿಕೆಯವರಿಂದ, ಯೆರೂಸಲೇಮ್ ಸ್ವಲ್ಪ ಮಟ್ಟಿಗೆ ಪುನಃ ಕಟ್ಟಲ್ಪಟ್ಟಿತ್ತು. ಆದರೆ ಯೆರೂಸಲೇಮಿನ ಸನ್ನಿವೇಶವು ಅಷ್ಟೇನೂ ಸಂತೃಪ್ತಿದಾಯಕವಾಗಿರಲಿಲ್ಲ. ‘ಯೆರೂಸಲೇಮಿನ ಪೌಳಿಗೋಡೆಯು ಕೆಡವಲ್ಪಟ್ಟಿದೆ ಮತ್ತು ಅದರ ಬಾಗಲುಗಳು ಬೆಂಕಿಯಿಂದ ಸುಡಲ್ಪಟ್ಟಿವೆ’ ಎಂಬುದು ನೆಹೆಮೀಯನಿಗೆ ಗೊತ್ತಾಗಿತ್ತು. ಇದರಿಂದ ಅವನಿಗೆ ತುಂಬ ನೋವಾಯಿತು, ಮತ್ತು ಅವನು ಮನಗುಂದಿದವನಾದನು. ಅವನು ಏಕೆ ದುಃಖಿತನಾಗಿದ್ದಾನೆಂದು ಪ್ರಶ್ನಿಸಿದಾಗ, ನೆಹೆಮೀಯನು ಉತ್ತರಿಸಿದ್ದು: “ಅರಸನು ಚಿರಂಜೀವಿಯಾಗಿರಲಿ. ನನ್ನ ಪೂರ್ವಿಕರ ಸಮಾಧಿಗಳಿರುವ ಪಟ್ಟಣವು ಹಾಳಾಗಿ ಅದರ ಬಾಗಲುಗಳು ಬೆಂಕಿಯಿಂದ ಸುಟ್ಟು ಹೋಗಿವೆ; ಹೀಗಿರುವಲ್ಲಿ ನನ್ನ ಮುಖವು ಕಳೆಗುಂದದೆ ಇರುವದು ಹೇಗೆ”?—ನೆಹೆಮೀಯ 1:1-3; 2:1-3.
19. (ಎ) ಅರಸನಾದ ಅರ್ತಷಸ್ತನು ನೆಹೆಮೀಯನನ್ನು ಪ್ರಶ್ನಿಸಿದಾಗ, ಮೊದಲಾಗಿ ಅವನು ಏನು ಮಾಡಿದನು? (ಬಿ) ನೆಹೆಮೀಯನು ಏನೆಂದು ಬಿನ್ನವಿಸಿಕೊಂಡನು, ಮತ್ತು ಈ ವಿಷಯದಲ್ಲಿ ದೇವರ ಪಾತ್ರವನ್ನು ಅವನು ಹೇಗೆ ಒಪ್ಪಿಕೊಂಡನು?
19 ನೆಹೆಮೀಯನನ್ನು ಒಳಗೊಂಡಿರುವ ವೃತ್ತಾಂತವು ಹೀಗೆ ಮುಂದುವರಿಯುತ್ತದೆ: “ಆಗ ಅರಸನು ನನ್ನನ್ನು—ನಿನ್ನ ಅಪೇಕ್ಷೆಯೇನು ಎಂದು ಕೇಳಿದನು. ನಾನು ಪರಲೋಕದ ದೇವರನ್ನು ಪ್ರಾರ್ಥಿಸಿ ಅರಸನಿಗೆ—ರಾಜರ ಚಿತ್ತವಿರುವುದಾದರೆ ಮತ್ತು ತಮ್ಮ ಸೇವಕನು ತಮ್ಮ ದೃಷ್ಟಿಯಲ್ಲಿ ದಯೆಗೆ ಪಾತ್ರನಾಗಿದ್ದರೆ ನನ್ನ ಪಿತೃಗಳ ಸಮಾಧಿಗಳಿರುವ ಪಟ್ಟಣವನ್ನು ತಿರಿಗಿ ಕಟ್ಟುವದಕ್ಕೋಸ್ಕರ ಯೆಹೂದದೇಶಕ್ಕೆ ಹೋಗಲು ಅಪ್ಪಣೆಯಾಗಬೇಕು ಎಂದು ಹೇಳಿದೆನು.” ಈ ಪ್ರಸ್ತಾಪವು ಅರ್ತಷಸ್ತನಿಗೆ ಹಿಡಿಸಿತು, ಮತ್ತು ನೆಹೆಮೀಯನ ಮುಂದಿನ ಬೇಡಿಕೆಯನ್ನು ಸಹ ಅವನು ಪೂರೈಸಿದನು: “ತರುವಾಯ ನಾನು ಅರಸನಿಗೆ—[ಯೂಫ್ರೇಟೀಸ್] ಹೊಳೆಯಾಚೆಯ ದೇಶಾಧಿಪತಿಗಳು ತಮ್ಮ ಪ್ರಾಂತಗಳಲ್ಲಿ ಹಾದು ಯೆಹೂದ ಸೀಮೆಗೆ ಹೋಗುವದಕ್ಕೆ ನನಗೆ ಅಪ್ಪಣೆಕೊಡುವ ಹಾಗೂ ರಾಜವನಪಾಲಕನಾದ ಆಸಾಫನು ದೇವಾಲಯದ ಕೋಟೆಯ ಬಾಗಲುಗಳು, ಪಟ್ಟಣದ ಪೌಳಿಗೋಡೆ, ನಾನು ಸೇರುವ ಮನೆ ಇವುಗಳಿಗೆ ಬೇಕಾಗುವ ತೊಲೆಗಳಿಗಾಗಿ ಮರಗಳನ್ನು ಕೊಡುವ ಹಾಗೂ ರಾಜರು ನನ್ನ ಕೈಯಲ್ಲಿ ಪತ್ರಗಳನ್ನು ದಯಮಾಡಬೇಕು ಎಂದು” ಬಿನ್ನವಿಸಿಕೊಂಡೆನು. “ನನ್ನ ದೇವರ ಕೃಪಾಹಸ್ತಪಾಲನೆ ನನಗಿದ್ದದ್ದರಿಂದ ಅರಸನು ಅವುಗಳನ್ನು [ಪತ್ರಗಳನ್ನು] ನನಗೆ ಕೊಟ್ಟ”ನು ಎಂದು ಹೇಳುವ ಮೂಲಕ ನೆಹೆಮೀಯನು, ಈ ಎಲ್ಲ ಕಾರ್ಯಗಳಲ್ಲಿ ಯೆಹೋವನ ಕೈವಾಡವಿದೆ ಎಂಬುದನ್ನು ಒಪ್ಪಿಕೊಂಡನು.—ನೆಹೆಮೀಯ 2:4-8.
20. (ಎ) “ಯೆರೂಸಲೇಮು ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ ಎಂಬ ದೈವೋಕ್ತಿಯು” ಯಾವಾಗ ಕಾರ್ಯರೂಪಕ್ಕೆ ತರಲ್ಪಟ್ಟಿತು? (ಬಿ) “ಎಪ್ಪತ್ತು ವಾರಗಳು” ಯಾವಾಗ ಆರಂಭಗೊಂಡವು, ಮತ್ತು ಅವು ಯಾವಾಗ ಕೊನೆಗೊಂಡವು? (ಸಿ) “ಎಪ್ಪತ್ತು ವಾರಗಳ” ಆರಂಭ ಹಾಗೂ ಅಂತ್ಯಕ್ಕೆ ಸೂಚಿಸಲ್ಪಟ್ಟಿರುವ ತಾರೀಖುಗಳ ನಿಷ್ಕೃಷ್ಟತೆಗೆ, ಯಾವ ಪುರಾವೆಯು ಆಧಾರವನ್ನು ಕೊಡುತ್ತದೆ?
20 ಅರ್ತಷಸ್ತನ ಆಳಿಕೆಯ 20ನೆಯ ವರ್ಷದ ನೈಸಾನ್ ತಿಂಗಳಿನಲ್ಲಿ ಅನುಮತಿಯು ಕೊಡಲ್ಪಟ್ಟಿತ್ತಾದರೂ, ವಾಸ್ತವದಲ್ಲಿ “ಯೆರೂಸಲೇಮು ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ ಎಂಬ ದೈವೋಕ್ತಿಯು ಹೊರಡುವಂದಿನಿಂದ” ಅನೇಕ ತಿಂಗಳುಗಳು ಕಳೆದ ಬಳಿಕ ಇದು ಕಾರ್ಯರೂಪಕ್ಕೆ ತರಲ್ಪಟ್ಟಿತು. ನೆಹೆಮೀಯನು ಯೆರೂಸಲೇಮಿಗೆ ಆಗಮಿಸಿ, ತನ್ನ ಪುನಸ್ಸ್ಥಾಪನಾ ಕೆಲಸವನ್ನು ಆರಂಭಿಸಿದಾಗ ಇದು ಸಂಭವಿಸಿತು. ಎಜ್ರನು ಬಾಬೆಲಿನಿಂದ ಯೆರೂಸಲೇಮಿಗೆ ಪ್ರಯಾಣಿಸಲು ಸುಮಾರು ನಾಲ್ಕು ತಿಂಗಳುಗಳು ಹಿಡಿದಿದ್ದವು, ಆದರೆ ಶೂಷನ್ ಪಟ್ಟಣವು ಬಾಬೆಲಿನ ಪೂರ್ವ ದಿಕ್ಕಿನಲ್ಲಿ ಸುಮಾರು 322ಕ್ಕಿಂತಲೂ ಹೆಚ್ಚು ಕಿಲೊಮೀಟರುಗಳಷ್ಟು ದೂರದಲ್ಲಿತ್ತು, ಅಂದರೆ ಯೆರೂಸಲೇಮಿನಿಂದ ತುಂಬ ದೂರದಲ್ಲಿತ್ತು. ಹೀಗಿರುವುದರಿಂದ, ಅರ್ತಷಸ್ತನ ಆಳಿಕೆಯ 20ನೆಯ ವರ್ಷದ ಅಂತ್ಯಭಾಗದಲ್ಲಿ ಅಥವಾ ಸಾ.ಶ.ಪೂ. 455ರಲ್ಲಿ ನೆಹೆಮೀಯನು ಯೆರೂಸಲೇಮಿಗೆ ಆಗಮಿಸಿದ್ದಿರಬಹುದು. ಆಗಲೇ ಮುಂತಿಳಿಸಲ್ಪಟ್ಟ “ಎಪ್ಪತ್ತು ವಾರಗಳು” ಅಥವಾ 490 ವರ್ಷಗಳು ಆರಂಭಗೊಂಡವು. ಅವು ಸಾ.ಶ. 36ರ ಅಂತ್ಯಭಾಗದಲ್ಲಿ ಕೊನೆಗೊಳ್ಳಲಿದ್ದವು.—197ನೆಯ ಪುಟದಲ್ಲಿರುವ “ಅರ್ತಷಸ್ತನ ಆಳ್ವಿಕೆಯು ಯಾವಾಗ ಆರಂಭಗೊಂಡಿತು?” ಎಂಬ ರೇಖಾಚೌಕವನ್ನು ನೋಡಿರಿ.
“ನಾಯಕನಾದ ಮೆಸ್ಸೀಯನು” ಕಾಣಿಸಿಕೊಳ್ಳುತ್ತಾನೆ
21. (ಎ) ಮೊದಲ “ಏಳು ವಾರಗಳ” ಕಾಲಾವಧಿಯಲ್ಲಿ ಯಾವ ಕೆಲಸವು ಪೂರೈಸಲ್ಪಡಲಿಕ್ಕಿತ್ತು, ಮತ್ತು ಯಾವ ಪರಿಸ್ಥಿತಿಗಳಲ್ಲಿ ಅದು ಪೂರೈಸಲ್ಪಡಬೇಕಿತ್ತು? (ಬಿ) ಮೆಸ್ಸೀಯನು ಯಾವ ವರ್ಷದಲ್ಲಿ ಬರಲಿಕ್ಕಿದ್ದನು, ಮತ್ತು ಆ ಸಮಯದಲ್ಲಿ ಏನು ಸಂಭವಿಸಿತೆಂದು ಲೂಕನ ಸುವಾರ್ತೆಯು ಹೇಳುತ್ತದೆ?
21 ಯೆರೂಸಲೇಮು ಪುನಃ ಕಟ್ಟಲ್ಪಡುವುದಕ್ಕೆ ಮೊದಲು ಎಷ್ಟು ವರ್ಷಗಳು ಗತಿಸಿಹೋದವು? ಆ ಪಟ್ಟಣದ ಪುನಸ್ಸ್ಥಾಪನೆಯು “ಬಹು ಕಷ್ಟ ಕಾಲ”ದಲ್ಲಿ ಪೂರೈಸಲ್ಪಡಲಿಕ್ಕಿತ್ತು, ಏಕೆಂದರೆ ಸ್ವತಃ ಯೆಹೂದ್ಯರ ನಡುವೆ ಒಡಕುಗಳಿದ್ದವು ಮತ್ತು ಸಮಾರ್ಯದವರಿಂದ ಹಾಗೂ ಇನ್ನಿತರ ಜನಾಂಗಗಳವರಿಂದ ವಿರೋಧವು ಸಹ ಇತ್ತು. ಬಹುಶಃ ಸಾ.ಶ.ಪೂ. 406ರ ಸುಮಾರಿಗೆ, ಅಂದರೆ “ಏಳು ವಾರ”ಗಳೊಳಗೆ ಅಥವಾ 49 ವರ್ಷಗಳಲ್ಲಿ, ಅಗತ್ಯವಿದ್ದಷ್ಟು ಕೆಲಸವು ಮಾತ್ರ ಪೂರ್ಣಗೊಳಿಸಲ್ಪಟ್ಟಿತ್ತು ಎಂಬುದು ಸುವ್ಯಕ್ತ. (ದಾನಿಯೇಲ 9:25) ಇದರ ನಂತರ 62 ವಾರಗಳು ಅಥವಾ 434 ವರ್ಷಗಳ ಕಾಲಾವಧಿಯು ಬರಲಿತ್ತು. ಆ ಕಾಲಾವಧಿಯ ಬಳಿಕ, ಬಹಳ ಸಮಯದ ಮುಂಚೆಯೇ ವಾಗ್ದಾನಿಸಲ್ಪಟ್ಟಿದ್ದಂತೆ ಮೆಸ್ಸೀಯನು ಬರಲಿದ್ದನು. ಸಾ.ಶ.ಪೂ. 455ರಿಂದ 483 ವರ್ಷಗಳನ್ನು (49+434) ಲೆಕ್ಕಿಸುವಲ್ಲಿ, ಇದು ನಮ್ಮನ್ನು ಸಾ.ಶ. 29ಕ್ಕೆ ತಂದು ಮುಟ್ಟಿಸುತ್ತದೆ. ಆ ಸಮಯದಲ್ಲಿ ಏನು ಸಂಭವಿಸಿತು? ಸುವಾರ್ತಾ ಲೇಖಕನಾದ ಲೂಕನು ನಮಗೆ ಹೀಗೆ ಹೇಳುತ್ತಾನೆ: “ಚಕ್ರವರ್ತಿಯಾದ ತಿಬೇರಿಯನು ಪಟ್ಟಕ್ಕೆ ಬಂದ ಹದಿನೈದನೆಯ ವರುಷದಲ್ಲಿ, ಪೊಂತ್ಯಪಿಲಾತನು ಯೂದಾಯಕ್ಕೆ ಅಧಿಪತಿಯೂ ಹೆರೋದನು ಗಲಿಲಾಯಕ್ಕೆ ಉಪರಾಜನೂ . . . ಆಗಿದ್ದ ಕಾಲದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ಅಡವಿಯಲ್ಲಿ ದೇವರ ವಾಕ್ಯವುಂಟಾಯಿತು. ಅವನು ಯೊರ್ದನ್ ಹೊಳೆಯ ಸುತ್ತಲಿರುವ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಜನರಿಗೆ—ನೀವು ಪಾಪಪರಿಹಾರಕ್ಕಾಗಿ ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಸಾರಿ ಹೇಳುವವನಾದನು.” ಆ ಸಮಯದಲ್ಲಿ ಜನರು “ಬರಬೇಕಾದ ಕ್ರಿಸ್ತನನ್ನು [“ಮೆಸ್ಸೀಯನನ್ನು,” NW] ಎದುರುನೋಡು”ತ್ತಿದ್ದರು.—ಲೂಕ 3:1-3, 15.
22. ಯಾವಾಗ ಮತ್ತು ಯಾವುದರ ಮೂಲಕ ಯೇಸುವು ಮುಂತಿಳಿಸಲ್ಪಟ್ಟ ಮೆಸ್ಸೀಯನಾಗಿ ಪರಿಣಮಿಸಿದನು?
22 ಯೋಹಾನನು ವಾಗ್ದತ್ತ ಮೆಸ್ಸೀಯನಾಗಿರಲಿಲ್ಲ. ಆದರೆ ಸಾ.ಶ. 29ರ ಅಂತ್ಯಭಾಗದಲ್ಲಿ, ಅಂದರೆ ನಜರೇತಿನ ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ ತಾನು ಏನನ್ನು ಕಣ್ಣಾರೆ ಕಂಡನೋ ಅದರ ಕುರಿತು ಯೋಹಾನನು ಹೇಳಿದ್ದು: “ದೇವರಾತ್ಮವು ಪಾರಿವಾಳದಂತೆ ಆಕಾಶದಿಂದ ಇಳಿಯುವದನ್ನು ನೋಡಿದೆನು. ಅದು ಆತನ ಮೇಲೆ ನೆಲೆಗೊಂಡಿತು. ನನಗೂ ಆತನ ಗುರುತಿರಲಿಲ್ಲ; ಆದರೆ ನೀರಿನ ಸ್ನಾನವನ್ನು ಮಾಡಿಸುವದಕ್ಕೆ ನನ್ನನ್ನು ಕಳುಹಿಸಿದಾತನು—ಯಾವನ ಮೇಲೆ ಆತ್ಮವು ಇಳಿದುಬಂದು ಇರುವದನ್ನು ನೀನು ನೋಡುವಿಯೋ ಆತನೇ ಪವಿತ್ರಾತ್ಮದ ಸ್ನಾನವನ್ನು ಕೊಡುವವನು ಎಂದು ತಾನೇ ನನಗೆ ಹೇಳಿದನು. ನಾನು ಅದನ್ನು ನೋಡಿ ಈತನೇ ದೇವಕುಮಾರನೆಂದು ಸಾಕ್ಷಿ ಕೊಟ್ಟಿದ್ದೇನೆ.” (ಯೋಹಾನ 1:32-34) ಯೇಸು ತನ್ನ ದೀಕ್ಷಾಸ್ನಾನದ ಸಮಯದಲ್ಲಿ ಅಭಿಷಿಕ್ತನಾದ ಮೆಸ್ಸೀಯನಾದನು ಅಥವಾ ಕ್ರಿಸ್ತನಾದನು. ತದನಂತರ ಸ್ವಲ್ಪದರಲ್ಲಿಯೇ ಯೋಹಾನನ ಶಿಷ್ಯನಾದ ಅಂದ್ರೆಯನು ಅಭಿಷಿಕ್ತ ಯೇಸುವನ್ನು ಸಂಧಿಸಿದನು, ಮತ್ತು ಅವನು ಸೀಮೋನ್ ಪೇತ್ರನಿಗೆ ಹೀಗೆ ಹೇಳಿದನು: “ಮೆಸ್ಸೀಯನು ನಮಗೆ ಸಿಕ್ಕಿದನು.” (ಯೋಹಾನ 1:41) ಹೀಗೆ, ನಿಗದಿತ ಸಮಯಕ್ಕೆ ಸರಿಯಾಗಿ, ಅಂದರೆ 69 ವಾರಗಳ ಅಂತ್ಯದಲ್ಲಿ “ನಾಯಕನಾದ ಮೆಸ್ಸೀಯನು” ಬಂದನು!
ಕೊನೆಯ ವಾರದ ಘಟನೆಗಳು
23. “ನಾಯಕನಾದ ಮೆಸ್ಸೀಯನು” ಏಕೆ ಮರಣಪಡಬೇಕಾಗಿತ್ತು, ಮತ್ತು ಇದು ಯಾವಾಗ ಸಂಭವಿಸಲಿತ್ತು?
23 ಎಪ್ಪತ್ತನೆಯ ವಾರದಲ್ಲಿ ಯಾವ ಕೆಲಸವನ್ನು ಪೂರೈಸಲಿಕ್ಕಿತ್ತು? “ಅಧರ್ಮವನ್ನು ಕೊನೆಗಾಣಿಸುವದು, ಪಾಪಗಳನ್ನು ತೀರಿಸುವದು, ಅಪರಾಧವನ್ನು ನಿವಾರಿಸುವದು, ಸನಾತನಧರ್ಮವನ್ನು ಸ್ಥಾಪಿಸುವದು, ಕನಸನ್ನೂ ಪ್ರವಾದಿಯ ನುಡಿಯನ್ನೂ ಮುದ್ರೆಹಾಕಿ ಯಥಾರ್ಥಮಾಡುವದು, ಅತಿಪರಿಶುದ್ಧವಾದದ್ದನ್ನು ಅಭಿಷೇಕಿಸ”ಲಿಕ್ಕಾಗಿ “ಎಪ್ಪತ್ತು ವಾರಗಳ” ಕಾಲಾವಧಿಯು ನಿಷ್ಕರ್ಷಿಸಲ್ಪಟ್ಟಿತ್ತು ಎಂದು ಗಬ್ರಿಯೇಲನು ಹೇಳಿದನು. ಇದನ್ನು ಪೂರೈಸಬೇಕಾದರೆ “ನಾಯಕನಾದ ಮೆಸ್ಸೀಯನು” ಸಾಯಬೇಕಿತ್ತು. ಯಾವಾಗ? ಗಬ್ರಿಯೇಲನು ಹೇಳಿದ್ದು: “ಅರುವತ್ತೆರಡು ವಾರಗಳಾದ ಮೇಲೆ ಅಭಿಷಿಕ್ತನೊಬ್ಬನು ಛೇದಿಸಲ್ಪಡುವನು; ಅವನಿಗೆ ಏನೂ ಇರದು; . . . ಆ ಪ್ರಭುವು ಒಂದು ವಾರದ ಮಟ್ಟಿಗೆ ಬಹು ಜನರೊಂದಿಗೆ ದೃಢವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವನು. ಅರ್ಧ ವಾರ ಯಜ್ಞನೈವೇದ್ಯಗಳನ್ನು ನಿಲ್ಲಿಸುವನು.” (ದಾನಿಯೇಲ 9:26ಎ, 27ಎ) ಸಂದಿಗ್ಧ ಕಾಲವು, “ಅರ್ಧ ವಾರ” ಅಂದರೆ ವರ್ಷಗಳಿರುವ ಕೊನೆಯ ವಾರದ ಮಧ್ಯಭಾಗದಲ್ಲಿ ಒದಗಿಬರಲಿತ್ತು.
24, 25. (ಎ) ಪ್ರವಾದಿಸಲ್ಪಟ್ಟಂತೆ, ಕ್ರಿಸ್ತನು ಯಾವಾಗ ಮರಣಪಟ್ಟನು, ಮತ್ತು ಅವನ ಮರಣ ಹಾಗೂ ಪುನರುತ್ಥಾನವು ಯಾವುದನ್ನು ಕೊನೆಗೊಳಿಸಿತು? (ಬಿ) ಯೇಸುವಿನ ಮರಣವು ಏನನ್ನು ಸಾಧ್ಯಗೊಳಿಸಿತು?
24 ಸಾ.ಶ. 29ರ ಕೊನೆಯ ಭಾಗದಲ್ಲಿ ಯೇಸುವಿನ ಸಾರ್ವಜನಿಕ ಶುಶ್ರೂಷೆಯು ಆರಂಭಗೊಂಡು, ಮೂರೂವರೆ ವರ್ಷಗಳ ವರೆಗೆ ಮಾತ್ರ ಮುಂದುವರಿಯಿತು. ಈ ಮುಂಚೆಯೇ ಪ್ರವಾದಿಸಲ್ಪಟ್ಟಿದ್ದಂತೆ, ಸಾ.ಶ. 33ರ ಆರಂಭದಲ್ಲಿ ಕ್ರಿಸ್ತನು ಯಾತನಾ ಕಂಭದ ಮೇಲೆ ಮರಣಪಟ್ಟಾಗ, ಅವನು “ಛೇದಿಸ”ಲ್ಪಟ್ಟನು. ಮತ್ತು ಮಾನವಕುಲಕ್ಕೋಸ್ಕರ ತನ್ನ ಮಾನವ ಜೀವವನ್ನು ಪ್ರಾಯಶ್ಚಿತ್ತವಾಗಿ ಕೊಟ್ಟನು. (ಯೆಶಾಯ 53:8; ಮತ್ತಾಯ 20:28) ಪುನರುತ್ಥಾನಗೊಂಡ ಯೇಸುವು ತನ್ನ ಯಜ್ಞಾರ್ಪಿತ ಮಾನವ ಜೀವದ ಮೌಲ್ಯವನ್ನು ಸ್ವರ್ಗದಲ್ಲಿರುವ ದೇವರಿಗೆ ಅರ್ಪಿಸಿದಾಗ, ಧರ್ಮಶಾಸ್ತ್ರದಿಂದ ವಿಧಿಸಲ್ಪಟ್ಟಿದ್ದ ಪ್ರಾಣಿ ಯಜ್ಞಗಳು ಹಾಗೂ ನೈವೇದ್ಯಗಳ ಆವಶ್ಯಕತೆಯು ಇಲ್ಲವಾಯಿತು. ಸಾ.ಶ. 70ರಲ್ಲಿ ಯೆರೂಸಲೇಮಿನಲ್ಲಿರುವ ದೇವಾಲಯವು ನಾಶಗೊಳಿಸಲ್ಪಡುವ ಸಮಯದ ವರೆಗೆ, ಯೆಹೂದಿ ಯಾಜಕರು ಯಜ್ಞಗಳನ್ನು ಅರ್ಪಿಸುವುದನ್ನು ಮುಂದುವರಿಸಿದರು. ಆದರೆ ಅಂತಹ ಯಜ್ಞಾರ್ಪಣೆಗಳು ಇನ್ನೆಂದಿಗೂ ದೇವರಿಗೆ ಸ್ವೀಕಾರಾರ್ಹವಾಗಿರಲಿಲ್ಲ. ಅವುಗಳಿಗೆ ಬದಲಾಗಿ ಇನ್ನೂ ಅತ್ಯುತ್ತಮವಾದ ಒಂದು ಯಜ್ಞವು ಅರ್ಪಿಸಲ್ಪಟ್ಟಿತ್ತು, ಮತ್ತು ಅದನ್ನು ಪುನಃ ಎಂದೂ ಅರ್ಪಿಸುವ ಅಗತ್ಯವಿರಲಿಲ್ಲ. ಅಪೊಸ್ತಲ ಪೌಲನು ಬರೆದುದು: “[ಕ್ರಿಸ್ತನು] ಪಾಪನಿವಾರಣೆಗೋಸ್ಕರ ನಿರಂತರವಾಗಿ ನಿಲ್ಲುವ ಒಂದೇ ಯಜ್ಞವನ್ನು ಸಮರ್ಪಿಸಿ . . . ಪವಿತ್ರರಾಗುತ್ತಿರುವವರನ್ನು ಒಂದೇ ಸಮರ್ಪಣೆಯಿಂದ ನಿರಂತರವಾಗಿ ಸಿದ್ಧಿಗೆ ತಂದಿದ್ದಾನಷ್ಟೆ.”—ಇಬ್ರಿಯ 10:12, 14.
25 ಪಾಪ ಹಾಗೂ ಮರಣಗಳು ಮಾನವಕುಲವನ್ನು ಇನ್ನೂ ಬಾಧಿಸುತ್ತಿದ್ದವಾದರೂ, ಯೇಸು ಮರಣಹೊಂದಿ, ಸ್ವರ್ಗೀಯ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಟ್ಟದ್ದು ಪ್ರವಾದನೆಯನ್ನು ನೆರವೇರಿಸಿತು. ಅದು ‘ಅಧರ್ಮವನ್ನು ಕೊನೆಗಾಣಿಸಿತು, ಪಾಪಗಳನ್ನು ತೀರಿಸಿತು, ಅಪರಾಧವನ್ನು ನಿವಾರಿಸಿತು, ಮತ್ತು ಸನಾತನಧರ್ಮವನ್ನು ಸ್ಥಾಪಿಸಿತು.’ ಯೆಹೂದ್ಯರನ್ನು ಪಾಪಿಗಳೆಂದು ನಿರೂಪಿಸಿ, ಅವರನ್ನು ಖಂಡಿಸಿದ ಧರ್ಮಶಾಸ್ತ್ರದೊಡಂಬಡಿಕೆಯನ್ನು ದೇವರು ತೆಗೆದುಹಾಕಿದ್ದನು. (ರೋಮಾಪುರ 5:12, 19, 20; ಗಲಾತ್ಯ 3:13, 19; ಎಫೆಸ 2:15; ಕೊಲೊಸ್ಸೆ 2:13, 14) ಈಗ ಪಶ್ಚಾತ್ತಾಪಪಡುವ ತಪ್ಪಿತಸ್ಥರ ಪಾಪಗಳು ರದ್ದುಗೊಳಿಸಲ್ಪಡಲಿದ್ದವು, ಮತ್ತು ಆ ಪಾಪಗಳ ದಂಡನೆಯು ಇಲ್ಲವಾಗಿಸಲ್ಪಡಸಾಧ್ಯವಿತ್ತು. ಯಾರು ನಂಬಿಕೆಯಿಡುತ್ತಾರೋ ಅವರು, ಮೆಸ್ಸೀಯನ ಪ್ರಾಯಶ್ಚಿತ್ತ ಯಜ್ಞದ ಮೂಲಕ ದೇವರೊಂದಿಗೆ ರಾಜಿಮಾಡಿಕೊಳ್ಳಸಾಧ್ಯವಿತ್ತು. ದೇವರು ಕೊಡುವ “ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ”ದ ಬಹುಮಾನವನ್ನು ಪಡೆದುಕೊಳ್ಳಲು ಅವರು ಎದುರುನೋಡಸಾಧ್ಯವಿತ್ತು.—ರೋಮಾಪುರ 3:21-26; 6:22, 23; 1 ಯೋಹಾನ 2:1, 2.
26. (ಎ) ಧರ್ಮಶಾಸ್ತ್ರದೊಡಂಬಡಿಕೆಯು ತೆಗೆದುಹಾಕಲ್ಪಟ್ಟಿತ್ತಾದರೂ, ‘ಒಂದು ವಾರದ ಮಟ್ಟಿಗೆ’ ಯಾವ ಒಡಂಬಡಿಕೆಯು ‘ಜಾರಿಯಲ್ಲಿತ್ತು?’ (ಬಿ) ಎಪ್ಪತ್ತನೆಯ ವಾರದ ಅಂತ್ಯದಲ್ಲಿ ಏನು ಸಂಭವಿಸಿತು?
26 ಆದುದರಿಂದ, ಸಾ.ಶ. 33ರಲ್ಲಿ ಕ್ರಿಸ್ತನ ಮರಣದ ಮೂಲಕ ಯೆಹೋವನು ಧರ್ಮಶಾಸ್ತ್ರದೊಡಂಬಡಿಕೆಯನ್ನು ತೆಗೆದುಹಾಕಿದನು. ಹಾಗಾದರೆ, ಮೆಸ್ಸೀಯನು “ಒಂದು ವಾರದ ಮಟ್ಟಿಗೆ ಬಹು ಜನರೊಂದಿಗೆ ದೃಢವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವನು” ಎಂದು ಹೇಗೆ ಹೇಳಸಾಧ್ಯವಿದೆ? ಏಕೆಂದರೆ ಅವನು ಅಬ್ರಹಾಮಸಂಬಂಧಿತ ಒಡಂಬಡಿಕೆಯನ್ನು ಕಾರ್ಯರೂಪಕ್ಕೆ ತಂದನು. 70 ವಾರಗಳು ಕೊನೆಗೊಳ್ಳುವ ತನಕ, ದೇವರು ಆ ಒಡಂಬಡಿಕೆಯ ಆಶೀರ್ವಾದಗಳನ್ನು ಅಬ್ರಹಾಮನ ಇಬ್ರಿಯ ಸಂತಾನಕ್ಕೆ ವಿಸ್ತರಿಸಿದನು. ಆದರೆ “ಎಪ್ಪತ್ತು ವಾರಗಳ” ಅಂತ್ಯದಷ್ಟಕ್ಕೆ, ಅಂದರೆ ಸಾ.ಶ. 36ರಲ್ಲಿ, ಇಟಲಿಯ ಒಬ್ಬ ಪರಮಭಕ್ತನಾಗಿದ್ದ ಕೊರ್ನೇಲ್ಯನಿಗೆ, ಅವನ ಮನೆವಾರ್ತೆಗೆ, ಹಾಗೂ ಯೆಹೂದ್ಯರಲ್ಲದ ಇತರರಿಗೆ ಅಪೊಸ್ತಲ ಪೇತ್ರನು ಸುವಾರ್ತೆಯನ್ನು ಸಾರಿದನು. ಮತ್ತು ಆ ದಿನದಿಂದ ಹಿಡಿದು, ಅನ್ಯಜನಾಂಗಗಳವರಿಗೆ ಸುವಾರ್ತೆ ಸಾರುವ ಕಾರ್ಯವು ಆರಂಭಗೊಂಡಿತು.—ಅ. ಕೃತ್ಯಗಳು 3:25, 26; 10:1-48; ಗಲಾತ್ಯ 3:8, 9, 14.
27. “ಅತಿಪರಿಶುದ್ಧವಾದ” ಯಾವುದನ್ನು ಅಭಿಷೇಕಿಸಲಾಯಿತು, ಮತ್ತು ಹೇಗೆ?
27 “ಅತಿಪರಿಶುದ್ಧವಾದದ್ದನ್ನು” ಅಭಿಷೇಕಿಸುವುದರ ಕುರಿತು ಸಹ ಪ್ರವಾದನೆಯು ಮುಂತಿಳಿಸಿತು. ಯೆರೂಸಲೇಮಿನಲ್ಲಿರುವ ದೇವಾಲಯದ ಮಹಾ ಪವಿತ್ರಸ್ಥಾನವನ್ನು ಅಥವಾ ಒಳಾಂಗಣವನ್ನು ಅಭಿಷೇಕಿಸುವುದನ್ನು ಇದು ಸೂಚಿಸುವುದಿಲ್ಲ. ಇಲ್ಲಿ ಉಪಯೋಗಿಸಲ್ಪಟ್ಟಿರುವ “ಅತಿಪರಿಶುದ್ಧ”ವಾದದ್ದು ಎಂಬ ಅಭಿವ್ಯಕ್ತಿಯು, ದೇವರ ಸ್ವರ್ಗೀಯ ಪವಿತ್ರಸ್ಥಾನವನ್ನು ಸೂಚಿಸುತ್ತದೆ. ಅಲ್ಲಿ, ಯೇಸು ತನ್ನ ತಂದೆಗೆ ತನ್ನ ಮಾನವ ಯಜ್ಞದ ಮೌಲ್ಯವನ್ನು ಒಪ್ಪಿಸಿದನು. ಆ ಯಜ್ಞವು, ಭೂಗುಡಾರದ ಮತ್ತು ಅನಂತರದ ದೇವಾಲಯದ ಅತಿ ಪರಿಶುದ್ಧ ಸ್ಥಾನದಿಂದ ಪ್ರತಿನಿಧಿಸಲ್ಪಟ್ಟ ಆತ್ಮಿಕ ವಾಸ್ತವಿಕತೆಯನ್ನು ಅಭಿಷೇಕಿಸಿತು ಇಲ್ಲವೆ ಮೀಸಲಾಗಿಟ್ಟಿತು.—ಇಬ್ರಿಯ 9:11, 12.
ದೇವರಿಂದ ದೃಢೀಕರಿಸಲ್ಪಟ್ಟ ಪ್ರವಾದನೆ
28. ‘ಕನಸನ್ನೂ ಪ್ರವಾದಿಯ ನುಡಿಯನ್ನೂ ಮುದ್ರೆಹಾಕುವುದು’ ಎಂಬುದರ ಅರ್ಥವೇನಾಗಿತ್ತು?
28 ಗಬ್ರಿಯೇಲ ದೇವದೂತನಿಂದ ಮುಂತಿಳಿಸಲ್ಪಟ್ಟ ಮೆಸ್ಸೀಯ ಸಂಬಂಧಿತ ಪ್ರವಾದನೆಯು, ‘ಕನಸನ್ನೂ ಪ್ರವಾದಿಯ ನುಡಿಯನ್ನೂ ಮುದ್ರೆಹಾಕುವುದರ’ ಕುರಿತಾಗಿಯೂ ಮಾತಾಡಿತು. ಮೆಸ್ಸೀಯನ ಕುರಿತಾಗಿ ಮುಂತಿಳಿಸಲ್ಪಟ್ಟ ಎಲ್ಲ ಸಂಗತಿಗಳಿಗೆ—ಅಂದರೆ ಅವನ ಯಜ್ಞಾರ್ಪಣೆ, ಪುನರುತ್ಥಾನ, ಹಾಗೂ ಸ್ವರ್ಗದಲ್ಲಿ ಕಾಣಿಸಿಕೊಳ್ಳುವ ಮೂಲಕ ಅವನು ನೆರವೇರಿಸಿದ ಪ್ರತಿಯೊಂದು ಸಂಗತಿ—ಹಾಗೂ 70 ವಾರಗಳ ಸಮಯದಲ್ಲಿ ಸಂಭವಿಸಲಿದ್ದ ಇನ್ನಿತರ ಸಂಗತಿಗಳಿಗೆ, ದೈವಿಕ ಒಪ್ಪಿಗೆಯ ಮುದ್ರೆಯು ಬೀಳಲಿತ್ತು. ಅವು ಸತ್ಯವಾಗಿ ಕಂಡುಬರಲಿದ್ದವು, ಮತ್ತು ಅವುಗಳನ್ನು ನಂಬಸಾಧ್ಯವಿತ್ತು ಎಂಬುದನ್ನು ಇದು ಅರ್ಥೈಸಿತು. ಈ ದರ್ಶನಕ್ಕೆ ಮುದ್ರೆಬೀಳಲಿತ್ತು, ಏಕೆಂದರೆ ಇದು ಮೆಸ್ಸೀಯನಿಗೆ ಮಾತ್ರ ಸಂಬಂಧಪಟ್ಟದ್ದಾಗಿತ್ತು. ಈ ದರ್ಶನವು ಅವನಲ್ಲಿ ಹಾಗೂ ಅವನ ಮೂಲಕ ನಡೆಯುವ ದೇವರ ಕೆಲಸದಲ್ಲಿ ಮಾತ್ರ ನೆರವೇರಲಿತ್ತು. ಈ ದರ್ಶನದ ನೆರವೇರಿಕೆಯನ್ನು, ಮೆಸ್ಸೀಯನಲ್ಲಿ ಹಾಗೂ ಅವನ ಮೂಲಕ ಪೂರೈಸಲ್ಪಡುವ ದೇವರ ಕೆಲಸದಲ್ಲಿ ಮಾತ್ರ ನಾವು ಕಂಡುಕೊಳ್ಳಸಾಧ್ಯವಿದೆ. ಇನ್ನಾವುದೂ ಅದರ ಅರ್ಥವನ್ನು ಬಿಡಿಸಸಾಧ್ಯವಿಲ್ಲ.
29. ಪುನಃ ಕಟ್ಟಲ್ಪಟ್ಟಿದ್ದ ಯೆರೂಸಲೇಮಿಗೆ ಏನು ಸಂಭವಿಸಲಿತ್ತು, ಮತ್ತು ಯಾವ ಕಾರಣಕ್ಕಾಗಿ?
29 ಯೆರೂಸಲೇಮು ಪುನಃ ಕಟ್ಟಲ್ಪಡುವುದು ಎಂದು ಗಬ್ರಿಯೇಲನು ಈ ಮುಂಚೆ ಪ್ರವಾದಿಸಿದ್ದನು. ಈಗ ಅವನು ಪುನಃ ಕಟ್ಟಲ್ಪಟ್ಟಿದ್ದ ಪಟ್ಟಣ ಹಾಗೂ ಅದರ ದೇವಾಲಯದ ನಾಶನವನ್ನು ಹೀಗೆ ಹೇಳುವ ಮೂಲಕ ಮುಂತಿಳಿಸುತ್ತಾನೆ: “ನುಗ್ಗುವ ಪ್ರಭುವಿನ ಜನರು ಪಟ್ಟಣವನ್ನೂ ಪವಿತ್ರಾಲಯವನ್ನೂ ಹಾಳುಮಾಡುವರು; ತುಂಬಿತುಳುಕುವ ಪ್ರಲಯವು ಪಟ್ಟಣವನ್ನು ಕೊನೆಗಾಣಿಸುವದು; ಅಂತ್ಯದ ವರೆಗೂ ಯುದ್ಧವಾಗುವದು, ನಿಶ್ಚಿತನಾಶನಗಳು ಸಂಭವಿಸುವವು. . . . ಅಸಹ್ಯಗಳನ್ನು ವಾಹನಮಾಡಿಕೊಂಡು [“ಅಸಹ್ಯವಸ್ತುಗಳ ಮೇಲೆ,” NW] ಒಬ್ಬ ಘಾತಕನು ಹಾರಿಬಂದು ನಿಶ್ಚಿತ ಪ್ರಲಯವು ಅವನನ್ನು ಮುಣುಗಿಸುವ ತನಕ ಹಾಳುಮಾಡುವನು.” (ದಾನಿಯೇಲ 9:26ಬಿ, 27ಬಿ) ಈ ನಿರ್ಜನ ಸ್ಥಿತಿಯು “ಎಪ್ಪತ್ತು ವಾರಗಳ” ಬಳಿಕ ಸಂಭವಿಸಲಿತ್ತಾದರೂ, ಅದು ಯೆಹೂದ್ಯರು ಯಾವಾಗ ಯೇಸುವನ್ನು ತಿರಸ್ಕರಿಸಿ, ಅವನನ್ನು ಮರಣದಂಡನೆಗೆ ಒಪ್ಪಿಸಿದರೋ ಆ ಕೊನೆಯ “ವಾರ”ದಲ್ಲಿ ನಡೆಯುವ ಘಟನೆಗಳ ನೇರವಾದ ಫಲಿತಾಂಶವಾಗಿರಲಿತ್ತು.—ಮತ್ತಾಯ 23:37, 38.
30. ಐತಿಹಾಸಿಕ ದಾಖಲೆಯಿಂದ ತೋರಿಸಲ್ಪಟ್ಟಂತೆ, ಮಹಾ ಸಮಯಪಾಲಕನ ಮಾತು ಹೇಗೆ ನೆರವೇರಿತು?
30 ಸಾ.ಶ. 66ರಲ್ಲಿ, ಸಿರಿಯದ ಸೇನಾಧಿಪತಿಯಾದ ಸೆಸ್ಟಸ್ ಗ್ಯಾಲಸ್ನ ನೇತೃತ್ವದಲ್ಲಿ ರೋಮನ್ ಸೈನ್ಯಗಳು ಯೆರೂಸಲೇಮಿಗೆ ಮುತ್ತಿಗೆ ಹಾಕಿದವು ಎಂದು ಐತಿಹಾಸಿಕ ದಾಖಲೆಗಳು ತೋರಿಸುತ್ತವೆ. ಯೆಹೂದ್ಯರು ಎಷ್ಟೇ ಪ್ರತಿಭಟಿಸಿದರೂ, ವಿಗ್ರಹಾರಾಧಕ ಲಾಂಛನಗಳು ಅಥವಾ ಧ್ವಜಗಳನ್ನು ಹೊಂದಿದ್ದ ರೋಮನ್ ಸೈನ್ಯಗಳು, ಪಟ್ಟಣದ ಒಳಗೆ ನುಗ್ಗಿದವು ಮತ್ತು ದೇವಾಲಯದ ಉತ್ತರ ದಿಕ್ಕಿನ ಗೋಡೆಯ ಕೆಳಗಡೆ ಸುರಂಗ ತೋಡಲು ಆರಂಭಿಸಿದವು. ಅವು ಅಲ್ಲಿ ನಿಂತುಕೊಂಡಿದ್ದದ್ದು, ಸಂಪೂರ್ಣ ವಿನಾಶವನ್ನು ಉಂಟುಮಾಡಸಾಧ್ಯವಿದ್ದ “ಹಾಳುಮಾಡುವ ಅಸಹ್ಯವಸ್ತು”ವನ್ನಾಗಿ ಅವುಗಳನ್ನು ಮಾಡಿತು. (ಮತ್ತಾಯ 24:15, 16) ಸಾ.ಶ. 70ರಲ್ಲಿ, ಜನರಲ್ ಟೈಟಸ್ನ ನಾಯಕತ್ವದ ಕೆಳಗೆ ರೋಮನರು “ಪ್ರಲಯ”ದೋಪಾದಿ ಮುನ್ನುಗ್ಗಿ ಬಂದರು ಮತ್ತು ಯೆರೂಸಲೇಮ್ ಪಟ್ಟಣವನ್ನೂ ಅದರ ದೇವಾಲಯವನ್ನೂ ನಾಶಮಾಡಿಬಿಟ್ಟರು. ಯಾವುದೂ ಅವರನ್ನು ತಡೆಯಸಾಧ್ಯವಿರಲಿಲ್ಲ, ಏಕೆಂದರೆ ಇದು ದೇವರಿಂದಲೇ ಅನುಮತಿಸಲ್ಪಟ್ಟಿತ್ತು ಅಥವಾ “ನಿಶ್ಚಿತ”ವಾಗಿತ್ತು. ಮಹಾ ಸಮಯಪಾಲಕನಾಗಿರುವ ಯೆಹೋವನು ಇನ್ನೊಮ್ಮೆ ತನ್ನ ಮಾತನ್ನು ನೆರವೇರಿಸಿದ್ದನು!
ನೀವೇನನ್ನು ಗ್ರಹಿಸಿದಿರಿ?
• ಯೆರೂಸಲೇಮಿನ 70 ವರ್ಷಗಳ ನಿರ್ಜನ ಸ್ಥಿತಿಯು ಇನ್ನೇನು ಮುಕ್ತಾಯಗೊಳ್ಳಲಿದ್ದಾಗ, ದಾನಿಯೇಲನು ಯೆಹೋವನ ಬಳಿ ಏನೆಂದು ಬೇಡಿಕೊಂಡನು?
• “ಎಪ್ಪತ್ತು ವಾರಗಳು” ಎಷ್ಟು ದೀರ್ಘವಾಗಿದ್ದವು, ಮತ್ತು ಅವು ಯಾವಾಗ ಆರಂಭಗೊಂಡವು ಮತ್ತು ಕೊನೆಗೊಂಡವು?
• “ನಾಯಕನಾದ ಮೆಸ್ಸೀಯನು” ಯಾವಾಗ ಕಾಣಿಸಿಕೊಂಡನು, ಮತ್ತು ಯಾವ ಬಿಕ್ಕಟ್ಟಿನ ಸಮಯದಲ್ಲಿ ಅವನು “ಛೇದಿಸಲ್ಪಡ”ಲಿದ್ದನು?
• ‘ಒಂದು ವಾರದ ಮಟ್ಟಿಗೆ’ ಯಾವ ಒಡಂಬಡಿಕೆಯು ‘ಜಾರಿಯಲ್ಲಿತ್ತು?’
• “ಎಪ್ಪತ್ತು ವಾರಗಳ” ಬಳಿಕ ಏನು ಸಂಭವಿಸಿತು?
[ಪುಟ 208 ರಲ್ಲಿರುವ ಚೌಕ/ಚಿತ್ರಗಳು]
ಅರ್ತಷಸ್ತನ ಆಳ್ವಿಕೆಯು ಯಾವಾಗ ಆರಂಭಗೊಂಡಿತು?
ಪಾರಸಿಯ ಅರಸನಾದ ಅರ್ತಷಸ್ತನ ಆಳ್ವಿಕೆಯು ಯಾವ ವರ್ಷದಲ್ಲಿ ಆರಂಭಗೊಂಡಿತು ಎಂಬುದರ ಬಗ್ಗೆ ಇತಿಹಾಸಕಾರರ ನಡುವೆ ಭಿನ್ನಾಭಿಪ್ರಾಯಗಳಿವೆ. ಕೆಲವರು ಅವನು ಪಟ್ಟಕ್ಕೆ ಬಂದ ವರ್ಷ ಸಾ.ಶ.ಪೂ. 465 ಎಂದು ಹೇಳುತ್ತಾರೆ, ಏಕೆಂದರೆ ಅವನ ತಂದೆಯಾದ ಸರ್ಕ್ಸೀಸ್ ಸಾ.ಶ.ಪೂ. 486ರಲ್ಲಿ ಆಳ್ವಿಕೆಯನ್ನು ಆರಂಭಿಸಿ, ತನ್ನ ಆಳ್ವಿಕೆಯ 21ನೆಯ ವರ್ಷದಲ್ಲಿ ಮೃತಪಟ್ಟನು. ಆದರೂ, ಅರ್ತಷಸ್ತನ ಆಳ್ವಿಕೆಯ ಮೊದಲನೆಯ ವರ್ಷವು ಸಾ.ಶ.ಪೂ. 474ರಲ್ಲಿ ಆರಂಭಗೊಂಡಿತೆಂಬುದಕ್ಕೆ ಸಮಂಜಸವಾದ ಪುರಾವೆಯಿದೆ.
ಪುರಾತನ ಪಾರಸಿಯ ರಾಜಧಾನಿಯಾಗಿದ್ದ ಪರ್ಸಿಪೊಲಿಸ್ನಲ್ಲಿ ಅಗೆದುತೆಗೆದ ಶಿಲಾಶಾಸನಗಳು ಹಾಗೂ ಕೆತ್ತನೆಗಳು, ಸರ್ಕ್ಸೀಸ್ ಹಾಗೂ ಅವನ ತಂದೆಯಾದ Iನೆಯ ದಾರ್ಯಾವೆಷನ ನಡುವೆಯಿದ್ದ ಸಹಪ್ರಭುತ್ವಕ್ಕೆ ರುಜುವಾತು ನೀಡುತ್ತವೆ. ಒಂದುವೇಳೆ ಈ ಸಹಪ್ರಭುತ್ವವು 10 ವರ್ಷಗಳ ವರೆಗೆ ಇದ್ದು, ದಾರ್ಯಾವೆಷನು ಸಾ.ಶ.ಪೂ. 486ರಲ್ಲಿ ಮರಣಪಟ್ಟ ಬಳಿಕ ಸರ್ಕ್ಸೀಸನೊಬ್ಬನೇ 11 ವರ್ಷಗಳ ವರೆಗೆ ಆಳ್ವಿಕೆ ನಡೆಸಿರುತ್ತಿದ್ದಲ್ಲಿ, ಇದು ಸಾ.ಶ.ಪೂ. 474ನೆಯ ವರ್ಷವು ಅರ್ತಷಸ್ತನ ಆಳ್ವಿಕೆಯ ಮೊದಲನೆಯ ವರ್ಷವಾಗಿರುವಂತೆ ಅನುಮತಿಸುವುದು.
ಎರಡನೆಯ ಪುರಾವೆಯು, ಸಾ.ಶ.ಪೂ. 480ರಲ್ಲಿ ಸರ್ಕ್ಸೀಸ್ನ ಸೈನ್ಯಗಳನ್ನು ಸೋಲಿಸಿದ ಅಥೇನಿಯದ ಜನರಲ್ ಥಮಿಸ್ಟಕ್ಲೀಸ್ನನ್ನು ಒಳಗೂಡಿದೆ. ಸಮಯಾನಂತರ ಗ್ರೀಕ್ ಜನರು ಅವನನ್ನು ವಿರೋಧಿಸಲಾರಂಭಿಸಿದರು ಮತ್ತು ಅವನ ಮೇಲೆ ರಾಜದ್ರೋಹಿಯೆಂಬ ಅಪವಾದವನ್ನು ಹೊರಿಸಿದರು. ಥಮಿಸ್ಟಕ್ಲೀಸ್ ಅಲ್ಲಿಂದ ಪಲಾಯನಗೈದನು ಮತ್ತು ಪಾರಸಿಯ ಅರಸನ ಆಸ್ಥಾನದಲ್ಲಿ ರಕ್ಷಣೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಿದನು; ಅಲ್ಲಿ ಅವನನ್ನು ಒಳ್ಳೆಯ ರೀತಿಯಲ್ಲಿ ಬರಮಾಡಿಕೊಳ್ಳಲಾಯಿತು. ಗ್ರೀಕ್ ಇತಿಹಾಸಕಾರನಾದ ಥೂಸಿಡಡೀಸ್ಗನುಸಾರ, ಅರ್ತಷಸ್ತನು “ಇತ್ತೀಚೆಗಷ್ಟೇ ಸಿಂಹಾಸನವನ್ನು ಏರಿದ್ದಾಗ” ಇದು ಸಂಭವಿಸಿತು. ಥಮಿಸ್ಟಕ್ಲೀಸ್ನು ಸಾ.ಶ.ಪೂ. 471ರಲ್ಲಿ ಮರಣಪಟ್ಟನೆಂದು, ಗ್ರೀಕ್ ಇತಿಹಾಸಕಾರನಾದ ಡೈಅಡಾರಸ್ ಸಿಕಲಸ್ ದಾಖಲಿಸುತ್ತಾನೆ. ಅರಸನಾದ ಅರ್ತಷಸ್ತನೊಂದಿಗೆ ಮುಖಾಮುಖಿಯಾಗಿ ಮಾತಾಡುವ ಮುಂಚೆ, ಪಾರಸಿಯ ಭಾಷೆಯನ್ನು ಕಲಿತುಕೊಳ್ಳಲಿಕ್ಕಾಗಿ ಒಂದು ವರ್ಷದಷ್ಟು ಕಾಲಾವಧಿಯನ್ನು ಕೊಡುವಂತೆ ಥಮಿಸ್ಟಕ್ಲೀಸನು ವಿನಂತಿಸಿಕೊಂಡಿದ್ದನು. ಹಾಗಾದರೆ ಅವನು ಸಾ.ಶ.ಪೂ. 473ರಲ್ಲಿ ಏಷ್ಯಾ ಮೈನರಿಗೆ ಬಂದಿದ್ದಿರಬೇಕು. ಯೂಸೀಬಿಯಸ್ನ ಪೂರ್ವಕಾಲವೃತ್ತಾಂತ (ಇಂಗ್ಲಿಷ್) ಸಹ ಇದೇ ತಾರೀಖನ್ನು ಬೆಂಬಲಿಸುತ್ತದೆ. ಸಾ.ಶ.ಪೂ. 473ರಲ್ಲಿ ಥಮಿಸ್ಟಕ್ಲೀಸನು ಏಷ್ಯಾಕ್ಕೆ ಆಗಮಿಸಿದಾಗ, ಅರ್ತಷಸ್ತನು “ಇತ್ತೀಚೆಗಷ್ಟೇ ಸಿಂಹಾಸನವನ್ನು ಏರಿ”ದ್ದರಿಂದ, ಸಾ.ಶ.ಪೂ. 474ರಲ್ಲಿ ಅರ್ತಷಸ್ತನ ಆಳ್ವಿಕೆಯು ಆರಂಭವಾಯಿತು ಎಂದು, ಹಳೆಯ ಒಡಂಬಡಿಕೆಯ ಕ್ರಿಸ್ತಶಾಸ್ತ್ರ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ, ಜರ್ಮನ್ ವಿದ್ವಾಂಸರಾದ ಅರ್ನ್ಸ್ಟ್ ಹೆಂಗ್ಸ್ಟನ್ಬರ್ಗ್ ಅವರು ದಾಖಲಿಸಿದ್ದಾರೆ. ಇನ್ನಿತರ ಮೂಲಗಳು ಸಹ ಇದನ್ನೇ ರುಜುಪಡಿಸುತ್ತವೆ. ಆ ವಿದ್ವಾಂಸರು ಕೂಡಿಸಿ ಹೇಳಿದ್ದು: “ಅರ್ತಷಸ್ತನ ಆಳ್ವಿಕೆಯ ಇಪ್ಪತ್ತನೆಯ ವರ್ಷವು, ಕ್ರಿಸ್ತ ಪೂರ್ವ 455ನೆಯ ವರ್ಷವಾಗಿದೆ.”
[ಚಿತ್ರ]
ಥಮಿಸ್ಟಕ್ಲೀಸ್ನ ಎದೆವಿಗ್ರಹ
[Diagram/Pictures on page 188, 189]
(For fully formatted text, see publication)
“ಎಪ್ಪತ್ತು ವಾರಗಳು”
455 ಸಾ.ಶ.ಪೂ. 406 ಸಾ.ಶ.ಪೂ. 29 ಸಾ.ಶ. 33 ಸಾ.ಶ. 36 ಸಾ.ಶ.
“ಯೆರೂಸಲೇಮು ಮೆಸ್ಸೀಯನು ಮೆಸ್ಸೀಯನು “ಎಪ್ಪತ್ತು
. . . ಕಟ್ಟಲ್ಪಡಲಿ ಬರುತ್ತಾನೆ ಛೇದಿಸಲ್ಪಟ್ಟದ್ದು ವಾರಗಳ”
ಎಂಬ ದೈವೋಕ್ತಿ” ಅಂತ್ಯ
ಯೆರೂಸಲೇಮ್
ಪುನಃ ಕಟ್ಟಲ್ಪಟ್ಟದ್ದು
7 ವಾರಗಳು 62 ವಾರಗಳು 1 ವಾರ
49 ವರ್ಷಗಳು 434 ವರ್ಷಗಳು 7 ವರ್ಷಗಳು
[ಪುಟ 291 ರಲ್ಲಿ ಇಡೀ ಪುಟದ ಚಿತ್ರ]
[ಪುಟ 204 ರಲ್ಲಿ ಇಡೀ ಪುಟದ ಚಿತ್ರ]