“ಓದುವವನು ವಿವೇಚನೆಯನ್ನು ಉಪಯೋಗಿಸಲಿ”
“ಹಾಳುಮಾಡುವ ಅಸಹ್ಯವಸ್ತುವು ಪವಿತ್ರಸ್ಥಾನದಲ್ಲಿ ನಿಂತಿರುವದನ್ನು ನೀವು ಕಾಣುವಾಗ . . . ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ.”—ಮತ್ತಾಯ 24:15, 16.
1. ಲೂಕ 19:43, 44ರಲ್ಲಿ ದಾಖಲಿಸಲ್ಪಟ್ಟ ಯೇಸು ನೀಡಿದ ಎಚ್ಚರಿಕೆಯ ಪರಿಣಾಮವು ಏನಾಗಿತ್ತು?
ಆಸನ್ನವಾಗಿರುವ ಕೇಡಿನ ಬಗ್ಗೆ ನಾವು ಎಚ್ಚರಿಸಲ್ಪಟ್ಟಾಗ, ಅದರಿಂದ ತಪ್ಪಿಸಿಕೊಳ್ಳಲು ನಾವು ಶಕ್ತರಾಗಬಹುದು. (ಜ್ಞಾನೋಕ್ತಿ 22:3) ಹಾಗಾದರೆ, ಸಾ.ಶ. 66ರಲ್ಲಿ ರೋಮನ್ ದಾಳಿಯ ನಂತರ ಯೆರೂಸಲೇಮಿನಲ್ಲಿದ್ದ ಕ್ರೈಸ್ತರ ಸನ್ನಿವೇಶವನ್ನು ಊಹಿಸಿಕೊಳ್ಳಿರಿ. ಸೇನೆಯು ಆ ನಗರಕ್ಕೆ ಮುತ್ತಿಗೆ ಹಾಕಿ ಅದನ್ನು ನಾಶಮಾಡುವುದೆಂದು ಯೇಸು ಎಚ್ಚರಿಸಿದ್ದನು. (ಲೂಕ 19:43, 44) ಹೆಚ್ಚಿನ ಯೆಹೂದ್ಯರು ಅವನ ಮಾತನ್ನು ಕಡೆಗಣಿಸಿದರು. ಆದರೆ ಅವನ ಶಿಷ್ಯರು ಆ ಎಚ್ಚರಿಕೆಗೆ ಕಿವಿಗೊಟ್ಟರು. ಈ ಕಾರಣ, ಅವರು ಸಾ.ಶ. 70ರ ಕೇಡಿನಿಂದ ರಕ್ಷಿಸಲ್ಪಟ್ಟರು.
2, 3. ಮತ್ತಾಯ 24:15-21ರಲ್ಲಿ ದಾಖಲಾಗಿರುವ ಯೇಸುವಿನ ಪ್ರವಾದನೆಯಲ್ಲಿ ನಾವು ಏಕೆ ಆಸಕ್ತರಾಗಿರಬೇಕು?
2 ಇಂದು ನಮ್ಮ ಮೇಲೆ ಪ್ರಭಾವಬೀರುವ ಒಂದು ಪ್ರವಾದನೆಯಲ್ಲಿ, ಯುದ್ಧಗಳು, ಆಹಾರದ ಅಭಾವಗಳು, ಭೂಕಂಪಗಳು, ಅಂಟುರೋಗಗಳು, ಮತ್ತು ದೇವರ ರಾಜ್ಯದ ಕುರಿತು ಸಾರುವ ಕ್ರೈಸ್ತರಿಗೆ ಸಂಭವಿಸುವ ಹಿಂಸೆಯನ್ನೊಳಗೊಂಡ ಒಂದು ಸಂಘಟಿತ ಸೂಚನೆಯನ್ನು ಯೇಸು ರೇಖಿಸಿದನು. (ಮತ್ತಾಯ 24:4-14; ಲೂಕ 21:10-19) ಅಂತ್ಯವು ಸಮೀಪವಾಗಿದೆ ಎಂಬುದನ್ನು ತನ್ನ ಶಿಷ್ಯರು ತಿಳಿದುಕೊಳ್ಳುವಂತೆ ಸಹಾಯಮಾಡುವ ಒಂದು ಸುಳಿವನ್ನು ಸಹ ಯೇಸು ನೀಡಿದನು. ಅದೇನೆಂದರೆ, ‘ಹಾಳುಮಾಡುವ ಅಸಹ್ಯವಸ್ತುವು ಪವಿತ್ರಸ್ಥಾನದಲ್ಲಿ ನಿಂತಿರುವುದು.’ (ಓರೆಅಕ್ಷರಗಳು ನಮ್ಮವು.) (ಮತ್ತಾಯ 24:15) ಈ ಅರ್ಥಭರಿತ ಪದಗಳು ನಮ್ಮ ಜೀವಿತವನ್ನು ಈಗ ಮತ್ತು ಭವಿಷ್ಯತ್ತಿನಲ್ಲಿ ಹೇಗೆ ಬಾಧಿಸಬಲ್ಲವೆಂದು ನೋಡಲು, ನಾವು ಅವುಗಳನ್ನು ಪುನಃ ಪರಿಶೀಲಿಸೋಣ.
3 ಸೂಚನೆಯನ್ನು ನೀಡಿದ ಮೇಲೆ ಯೇಸು ಹೇಳಿದ್ದು: “ಪ್ರವಾದಿಯಾದ ದಾನಿಯೇಲನು ಹೇಳಿದಂಥ ಹಾಳುಮಾಡುವ ಅಸಹ್ಯವಸ್ತುವು ಪವಿತ್ರಸ್ಥಾನದಲ್ಲಿ ನಿಂತಿರುವದನ್ನು ನೀವು ಕಾಣುವಾಗ (ಇದನ್ನು ಓದುವವನು ತಿಳುಕೊಳ್ಳಲಿ, “ಓದುವವನು ವಿವೇಚನೆಯನ್ನು ಉಪಯೋಗಿಸಲಿ,” NW) ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ; ಮಾಳಿಗೆಯ ಮೇಲೆ ಇರುವವನು ತನ್ನ ಮನೆಯೊಳಗಿರುವದನ್ನು ತೆಗೆದುಕೊಳ್ಳುವದಕ್ಕೆ ಇಳಿಯದೆ, ಹೊಲದಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳುವದಕ್ಕೆ ಹಿಂತಿರುಗಿಬಾರದೆ ಓಡಿಹೋಗಲಿ. ಆದರೆ ಆ ದಿನಗಳಲ್ಲಿ ಬಸುರಿಯರಿಗೂ ಮೊಲೆಕೂಸಿರುವ ಹೆಂಗಸರಿಗೂ ಆಗುವ ಕಷ್ಟವನ್ನು ಏನು ಹೇಳಲಿ. ಆಗ ಮಹಾ ಸಂಕಟ ಉಂಟಾಗುವದರಿಂದ ನಿಮ್ಮ ಪಲಾಯನವು ಚಳಿಗಾಲದಲ್ಲಿಯಾಗಲಿ ಸಬ್ಬತ್ದಿನದಲ್ಲಿಯಾಗಲಿ ಆಗಬಾರದೆಂದು ಪ್ರಾರ್ಥನೆಮಾಡಿರಿ. ಅಂಥ ಸಂಕಟವು ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನವರೆಗೂ ಆಗಲಿಲ್ಲ, ಇನ್ನು ಮೇಲೆಯೂ ಆಗುವದಿಲ್ಲ.”—ಮತ್ತಾಯ 24:15-21.
4. ಮತ್ತಾಯ 24:15ಕ್ಕೆ ಪ್ರಥಮ ಶತಮಾನದಲ್ಲಿ ಒಂದು ನೆರವೇರಿಕೆಯಿತ್ತೆಂಬುದನ್ನು ಯಾವುದು ಸೂಚಿಸುತ್ತದೆ?
4 ಮಾರ್ಕ ಮತ್ತು ಲೂಕರ ವೃತ್ತಾಂತಗಳು ಹೆಚ್ಚಿನ ವಿವರಗಳನ್ನು ಒದಗಿಸುತ್ತವೆ. ಮತ್ತಾಯನು “ಪವಿತ್ರಸ್ಥಾನದಲ್ಲಿ ನಿಂತಿರುವದನ್ನು” ಎಂದು ಹೇಳುವಾಗ, “ನಿಲ್ಲಬಾರದ ಸ್ಥಳದಲ್ಲಿ ನಿಂತಿರುವದನ್ನು” ಎಂಬುದಾಗಿ ಮಾರ್ಕ 13:14 ಹೇಳುತ್ತದೆ. ಲೂಕ 21:20 ಯೇಸುವಿನ ಈ ಮಾತುಗಳನ್ನು ಕೂಡಿಸುತ್ತದೆ: “ಆದರೆ ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲ ಸಮೀಪವಾಯಿತೆಂದು ತಿಳುಕೊಳ್ಳಿರಿ.” ಸಾ.ಶ. 66ರಲ್ಲಿ ಆರಂಭಿಸಿದ ಪ್ರಥಮ ನೆರವೇರಿಕೆಯಲ್ಲಿ, ಯೆಹೋವನಿಗೆ ಪವಿತ್ರವಾಗಿರದ ಆದರೆ ಯೆಹೂದ್ಯರು ಪವಿತ್ರವೆಂದು ಭಾವಿಸಿದ ಯೆರೂಸಲೇಮ್ ಮತ್ತು ಅದರ ದೇವಾಲಯದ ಮೇಲೆ ರೋಮನ್ ದಾಳಿಯನ್ನು ಒಳಗೂಡಿತೆಂದು ನೋಡಲು ನಮಗೆ ಸಹಾಯ ಮಾಡುತ್ತದೆ. ರೋಮನರು ಸಾ.ಶ. 70ರಲ್ಲಿ ನಗರ ಹಾಗೂ ದೇವಾಲಯಗಳೆರಡನ್ನೂ ನಾಶಪಡಿಸಿದಾಗ, ಸಂಪೂರ್ಣ ನಾಶನವು ಸಂಭವಿಸಿತು. ಆಗಿನ “ಅಸಹ್ಯವಸ್ತು” ಏನಾಗಿತ್ತು? ಮತ್ತು ಅದು ‘ಪವಿತ್ರಸ್ಥಾನದಲ್ಲಿ ನಿಂತುಕೊಂಡದ್ದು’ ಹೇಗೆ? ಈ ಪ್ರಶ್ನೆಗಳಿಗೆ ಉತ್ತರಗಳು, ಆಧುನಿಕ ದಿನದ ನೆರವೇರಿಕೆಯನ್ನು ನಾವು ತಿಳಿದುಕೊಳ್ಳುವಂತೆ ಸಹಾಯ ಮಾಡುವುದು.
5, 6. (ಎ) ದಾನಿಯೇಲ 9ನೆಯ ಅಧ್ಯಾಯದ ಓದುಗರಿಗೆ ವಿವೇಚನೆಯ ಅಗತ್ಯವಿತ್ತು ಏಕೆ? (ಬಿ) “ಅಸಹ್ಯವಸ್ತು”ವಿನ ಕುರಿತಾದ ಯೇಸುವಿನ ಪ್ರವಾದನೆಯು ಹೇಗೆ ನೆರವೇರಿತು?
5 ಓದುಗರು ವಿವೇಚನೆಯನ್ನು ಉಪಯೋಗಿಸುವಂತೆ ಯೇಸು ಪ್ರೇರಿಸಿದನು. ಯಾವುದರ ಓದುಗರು? ಬಹುಶಃ ದಾನಿಯೇಲ 9ನೆಯ ಅಧ್ಯಾಯದ ಓದುಗರು. ಅಲ್ಲಿ, ಮೆಸ್ಸೀಯನು ಯಾವಾಗ ಕಾಣಿಸಿಕೊಳ್ಳುವನೆಂದು ಸೂಚಿಸುವ ಮತ್ತು ಮೂರುವರೆ ವರ್ಷಗಳ ನಂತರ ಅವನು “ಛೇದಿಸಲ್ಪಡುವನು” ಎಂದು ಮುಂತಿಳಿಸುವ ಪ್ರವಾದನೆಯನ್ನು ನಾವು ಕಂಡುಕೊಳ್ಳುತ್ತೇವೆ. ಆ ಪ್ರವಾದನೆಯು ಹೇಳುವುದು: “ಅಸಹ್ಯಗಳನ್ನು ವಾಹನಮಾಡಿಕೊಂಡು ಒಬ್ಬ ಘಾತಕನು ಹಾರಿಬಂದು ನಿಶ್ಚಿತ ಪ್ರಲಯವು ಅವನನ್ನು ಮುಣುಗಿಸುವ ತನಕ ಹಾಳುಮಾಡುವನು.” (ಓರೆಅಕ್ಷರಗಳು ನಮ್ಮವು.)—ದಾನಿಯೇಲ 9:26, 27; ದಾನಿಯೇಲ 11:31ನ್ನು ಸಹ ನೋಡಿರಿ; ದಾನಿಯೇಲ 12:11.
6 ಈ ವಿಷಯವು ಸುಮಾರು 200 ವರ್ಷಗಳ ಹಿಂದೆ, IVನೆಯ ಆ್ಯಂಟಿಯಾಕಸ್ ದೇವಾಲಯವನ್ನು ಅಪವಿತ್ರಗೊಳಿಸಿದ ಸಂಗತಿಗೆ ಅನ್ವಯಿಸಿತೆಂದು ಯೆಹೂದ್ಯರು ನೆನಸಿದರು. ಆದರೆ ವಿಷಯವು ಅದಲ್ಲವೆಂದು ಯೇಸು ತೋರಿಸಿಕೊಟ್ಟನು. ವಿವೇಚನೆಯನ್ನು ಉಪಯೋಗಿಸುವಂತೆ ಅವನು ಪ್ರೇರಿಸಿದನು, ಏಕೆಂದರೆ “ಅಸಹ್ಯವಸ್ತು” ಭವಿಷ್ಯತ್ತಿನಲ್ಲಿ ಕಾಣಿಸಿಕೊಂಡು “ಪವಿತ್ರಸ್ಥಾನದಲ್ಲಿ” ನಿಲ್ಲಬೇಕಾಗಿತ್ತು. ಸಾ.ಶ. 66ರಲ್ಲಿ ವಿಶಿಷ್ಟ ಲಾಂಛನ (ಬಾವುಟ)ಗಳೊಂದಿಗೆ ಬರಲಿದ್ದ ರೋಮನ್ ಸೇನೆಯ ಕುರಿತು ಯೇಸು ಮಾತಾಡುತ್ತಿದ್ದನೆಂಬುದು ತೀರ ಸ್ಪಷ್ಟ. ದೀರ್ಘಸಮಯದಿಂದ ಬಳಕೆಯಲ್ಲಿದ್ದ ಇಂತಹ ಲಾಂಛನಗಳು, ಕಾರ್ಯತಃ ಮೂರ್ತಿಗಳಾಗಿದ್ದು ಯೆಹೂದ್ಯರಿಗೆ ಅಸಹ್ಯವಸ್ತುಗಳಾಗಿದ್ದವು.a ಆದರೆ, ಈ ರೋಮನ್ ಸೈನಿಕರು ‘ಪವಿತ್ರಸ್ಥಾನದಲ್ಲಿ’ ಯಾವಾಗ ‘ನಿಂತುಕೊಳ್ಳುವರು’? ಯೆಹೂದ್ಯರಿಗೆ ಪವಿತ್ರವಾಗಿದ್ದ ಯೆರೂಸಲೇಮ್ ಮತ್ತು ಅದರ ದೇವಾಲಯವನ್ನು ರೋಮನ್ ಸೇನೆಯು ಅದರ ಲಾಂಛನಗಳೊಂದಿಗೆ ಆಕ್ರಮಿಸಿದಾಗ ಇದು ಸಂಭವಿಸಿತು. ರೋಮನರು ದೇವಾಲಯದ ಕ್ಷೇತ್ರದಲ್ಲಿದ್ದ ಗೋಡೆಯ ಕೆಳಗಿನಿಂದ ಸುರಂಗವನ್ನೂ ತೋಡಲು ಆರಂಭಿಸಿದರು. ನಿಜವಾಗಿಯೂ, ದೀರ್ಘಕಾಲದಿಂದ ಅಸಹ್ಯವಾಗಿದ್ದ ವಸ್ತುವು ಈಗ ಪವಿತ್ರಸ್ಥಾನದಲ್ಲಿ ನಿಂತಿತ್ತು!—ಯೆಶಾಯ 52:1; ಮತ್ತಾಯ 4:5; 27:53; ಅ. ಕೃತ್ಯಗಳು 6:13.
ಆಧುನಿಕ ದಿನದ “ಅಸಹ್ಯವಸ್ತು”
7. ಯೇಸುವಿನ ಯಾವ ಪ್ರವಾದನೆಯು ನಮ್ಮ ಸಮಯದಲ್ಲಿ ನೆರವೇರುತ್ತಾ ಇದೆ?
7 ಒಂದನೆಯ ಜಾಗತಿಕ ಯುದ್ಧದ ಸಮಯದಂದಿನಿಂದ, ಮತ್ತಾಯ 24ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟ ಯೇಸುವಿನ ಸೂಚನೆಯ ವ್ಯಾಪಕವಾದ ನೆರವೇರಿಕೆಯನ್ನು ನಾವು ನೋಡಿದ್ದೇವೆ. ಆದರೂ, ಅವನ ಮಾತುಗಳನ್ನು ಜ್ಞಾಪಿಸಿಕೊಳ್ಳಿರಿ: “ಹಾಳುಮಾಡುವ ಅಸಹ್ಯವಸ್ತುವು ಪವಿತ್ರಸ್ಥಾನದಲ್ಲಿ ನಿಂತಿರುವದನ್ನು ನೀವು ಕಾಣುವಾಗ . . . ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ.” (ಮತ್ತಾಯ 24:15, 16) ಪ್ರವಾದನೆಯ ಈ ಅಂಶವೂ ನಮ್ಮ ಸಮಯದಲ್ಲಿ ನೆರವೇರಲೇಬೇಕು.
8. ಆಧುನಿಕ ದಿನಗಳ “ಅಸಹ್ಯವಸ್ತು”ವನ್ನು ಯೆಹೋವನ ಸಾಕ್ಷಿಗಳು ಅನೇಕ ವರ್ಷಗಳಿಂದ ಹೇಗೆ ಗುರುತಿಸಿದ್ದಾರೆ?
8 ಈ ಪ್ರವಾದನೆಯು ಖಂಡಿತವಾಗಿಯೂ ನೆರವೇರುವುದೆಂಬ ಯೆಹೋವನ ಸಾಕ್ಷಿಗಳ ಭರವಸೆಯನ್ನು ಜನವರಿ 1, 1921ರ ವಾಚ್ಟವರ್ ಪತ್ರಿಕೆಯು ಪ್ರದರ್ಶಿಸುತ್ತಾ, ಮಧ್ಯಪೂರ್ವದಲ್ಲಿ ನಡೆಯುತ್ತಿದ್ದ ಘಟನೆಗಳೊಂದಿಗೆ ಈ ಪ್ರವಾದನೆಯನ್ನು ಸಂಬಂಧಿಸಿತು. ತರುವಾಯ, ಡಿಸೆಂಬರ್ 15, 1929ರ ಸಂಚಿಕೆಯ ಪುಟ 374ರಲ್ಲಿ, ವಾಚ್ಟವರ್ ಪತ್ರಿಕೆಯು ನಿಶ್ಚಿತವಾಗಿ ಹೇಳಿದ್ದು: “ಜನಾಂಗ ಸಂಘದ ಮುಖ್ಯ ಗುರಿಯು, ಜನರನ್ನು ದೇವರಿಂದ ಮತ್ತು ಕ್ರಿಸ್ತನಿಂದ ವಿಮುಖಗೊಳಿಸುವುದೇ ಆಗಿದೆ. ಈ ಕಾರಣ ಅದೊಂದು ಹಾಳುಮಾಡುವ ವಸ್ತುವು, ಸೈತಾನನ ಉತ್ಪಾದನೆಯು, ಮತ್ತು ದೇವರ ದೃಷ್ಟಿಯಲ್ಲಿ ಹೇಸಿಕೆ ಹುಟ್ಟಿಸುವಂತಹದ್ದೂ ಆಗಿದೆ.” ಹೀಗೆ, 1919ರಲ್ಲಿ “ಅಸಹ್ಯವಸ್ತುವು” ಕಾಣಿಸಿಕೊಂಡಿತು. ಸಕಾಲದಲ್ಲಿ, ಜನಾಂಗ ಸಂಘವು ವಿಶ್ವ ಸಂಸ್ಥೆಗೆ ತನ್ನ ಸ್ಥಾನವನ್ನೀಡಿತು. ಇಂತಹ ಮಾನವ ಶಾಂತಿ ಸಂಘಟನೆಗಳು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿವೆ ಎಂದು ಯೆಹೋವನ ಸಾಕ್ಷಿಗಳು ಬಹಳ ಸಮಯದ ಹಿಂದಿನಿಂದಲೂ ಸ್ಪಷ್ಟವಾಗಿ ತೋರಿಸಿದ್ದಾರೆ.
9, 10. ಮಹಾ ಸಂಕಟದ ಕುರಿತಾದ ನಮ್ಮ ಹಿಂದಿನ ತಿಳುವಳಿಕೆಯು, ಪವಿತ್ರಸ್ಥಾನದಲ್ಲಿ ನಿಲ್ಲಲಿರುವ “ಅಸಹ್ಯವಸ್ತು”ವಿನ ಸಮಯದ ಕುರಿತ ನಮ್ಮ ದೃಷ್ಟಿಕೋನವನ್ನು ಹೇಗೆ ಪ್ರಭಾವಿಸಿತು?
9 ಹಿಂದಿನ ಲೇಖನವು, ಮತ್ತಾಯ 24 ಮತ್ತು 25ನೆಯ ಅಧ್ಯಾಯಗಳಲ್ಲಿರುವ ಹೆಚ್ಚಿನ ವಿಷಯವನ್ನು ಸ್ಪಷ್ಟೀಕರಿಸಿದೆ. ‘ಪವಿತ್ರಸ್ಥಾನದಲ್ಲಿ ನಿಂತಿರುವ ಅಸಹ್ಯವಸ್ತುವಿನ’ ಸಂಬಂಧದಲ್ಲಿ ಇನ್ನಷ್ಟು ಸ್ಪಷ್ಟೀಕರಣವು ಅಗತ್ಯವಾಗಿದೆಯೊ? ಹೌದೆಂಬುದು ವಿದಿತ. ಯೇಸುವಿನ ಪ್ರವಾದನೆಯು, “ಪವಿತ್ರಸ್ಥಾನದಲ್ಲಿ ನಿಂತಿರುವದನ್ನು,” ಮುಂತಿಳಿಸಲ್ಪಟ್ಟ “ಸಂಕಟ”ದ ಆರಂಭದೊಂದಿಗೆ ನಿಕಟವಾಗಿ ಜೋಡಿಸುತ್ತದೆ. ಆದಕಾರಣ, “ಅಸಹ್ಯವಸ್ತುವು” ತುಂಬ ಸಮಯದಿಂದ ಅಸ್ತಿತ್ವದಲ್ಲಿದ್ದರೂ, ಅದು “ಪವಿತ್ರಸ್ಥಾನದಲ್ಲಿ ನಿಂತಿರುವದ”ಕ್ಕೂ ಮಹಾ ಸಂಕಟಕ್ಕೂ ಇರುವ ಸಂಬಂಧವು ನಮ್ಮ ಆಲೋಚನೆಯನ್ನು ಬಾಧಿಸಬೇಕು. ಅದು ಹೇಗೆ?
10 ಮಹಾ ಸಂಕಟದ ಪ್ರಥಮ ಹಂತವು 1914ರಲ್ಲಿ ಆರಂಭಿಸಿ, ಅದರ ಅಂತಿಮ ಹಂತವು ಅರ್ಮಗೆದೋನ್ ಯುದ್ಧದ ಸಮಯದಲ್ಲಿ ಜರುಗುವುದೆಂದು ದೇವಜನರು ಹಿಂದೆ ನೆನಸಿದ್ದರು. (ಪ್ರಕಟನೆ 16:14, 16; ಏಪ್ರಿಲ್ 1, 1939ರ ವಾಚ್ಟವರ್, ಪುಟ 110ನ್ನು ಹೋಲಿಸಿರಿ.) ಹೀಗೆ, ಎರಡನೆಯ “ಅಸಹ್ಯವಸ್ತು” Iನೆಯ ಜಾಗತಿಕ ಯುದ್ಧವಾದ ಕೂಡಲೇ ಪವಿತ್ರಸ್ಥಾನದಲ್ಲಿ ನಿಂತುಕೊಂಡಿದ್ದಿರಬೇಕೆಂದು, ಈ ಮೊದಲು ಅರ್ಥಮಾಡಿಕೊಳ್ಳಲ್ಪಟ್ಟ ಕಾರಣವನ್ನು ನಾವು ತಿಳಿದುಕೊಳ್ಳಬಹುದು.
11, 12. ಮಹಾ ಸಂಕಟದ ಕುರಿತಾದ ಯಾವ ಸರಿಪಡಿಸಲಾದ ನೋಟವು 1969ರಲ್ಲಿ ನೀಡಲಾಯಿತು?
11 ಆದರೆ, ಇತ್ತೀಚಿನ ವರ್ಷಗಳಲ್ಲಿ ನಾವು ವಿಷಯಗಳನ್ನು ಭಿನ್ನವಾಗಿ ಅರ್ಥಮಾಡಿಕೊಂಡಿದ್ದೇವೆ. ಗುರುವಾರ, ಜುಲೈ 10, 1969ರಂದು, ನ್ಯೂ ಯಾರ್ಕ್ ನಗರದಲ್ಲಿ ನಡೆದ “ಭೂಮಿಯ ಮೇಲೆ ಶಾಂತಿ” ಎಂಬ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಆಗಿನ ಉಪಾಧ್ಯಕ್ಷರಾಗಿದ್ದ ಎಫ್. ಡಬ್ಲ್ಯೂ. ಫ್ರಾನ್ಸ್, ಒಂದು ಉತ್ತೇಜನಭರಿತ ಭಾಷಣವನ್ನು ನೀಡಿದರು. ಯೇಸುವಿನ ಪ್ರವಾದನೆಯನ್ನು ಈ ಮೊದಲು ಅರ್ಥಮಾಡಿಕೊಂಡಿದ್ದ ರೀತಿಯನ್ನು ಪುನರ್ವಿಮರ್ಶಿಸುತ್ತಾ, ಸಹೋದರ ಫ್ರಾನ್ಸ್ ಹೇಳಿದ್ದು: “‘ಮಹಾ ಸಂಕಟವು’ ಸಾ.ಶ. 1914ರಲ್ಲಿ ಆರಂಭಿಸಿತಾದರೂ, ದೇವರು Iನೆಯ ಜಾಗತಿಕ ಯುದ್ಧವನ್ನು 1918ರ ನವೆಂಬರ್ ತಿಂಗಳಿನಲ್ಲಿ ನಿಲ್ಲಿಸಿಬಿಟ್ಟ ಕಾರಣ ಅದು ತನ್ನ ಪೂರ್ಣ ಅವಧಿಯನ್ನು ಮುಗಿಸಲಿಲ್ಲ. ಆ ಸಮಯದಂದಿನಿಂದ, ‘ಮಹಾ ಸಂಕಟದ’ ಅಂತಿಮ ಭಾಗವು ಅರ್ಮಗೆದೋನ್ ಯುದ್ಧದಲ್ಲಿ ಮತ್ತೆ ಆರಂಭಗೊಳ್ಳುವ ಮುಂಚೆ, ಆದುಕೊಳ್ಳಲ್ಪಟ್ಟ ಅಭಿಷಿಕ್ತ ಉಳಿಕೆಯವರ ಚಟುವಟಿಕೆಗಾಗಿ ದೇವರು ಬಿಡುಸಮಯವನ್ನು ಒದಗಿಸಿದ್ದಾನೆ, ಎಂಬ ವಿವರಣೆಯನ್ನು ಈ ಮೊದಲು ಕೊಡಲಾಗಿತ್ತು.”
12 ತರುವಾಯ, ಸರಿಪಡಿಸಲಾದ ಒಂದು ಮಹತ್ತರವಾದ ವಿವರಣೆಯನ್ನು ನೀಡಲಾಯಿತು: “ಪ್ರಥಮ ಶತಮಾನದ ಘಟನೆಗಳೊಂದಿಗೆ ಅನುಗುಣವಾಗಿರಲು, . . . ಪ್ರತಿರೂಪದ ‘ಮಹಾ ಸಂಕಟವು’ ಸಾ.ಶ. 1914ರಲ್ಲಿ ಆರಂಭಿಸಲಿಲ್ಲ. ಬದಲಿಗೆ, 1914-1918ರ ಅವಧಿಯಲ್ಲಿ, ಯೆರೂಸಲೇಮಿನ ಆಧುನಿಕ ಪ್ರತಿರೂಪದ ಮೇಲೆ ಏನು ಸಂಭವಿಸಿತೊ ಅದು ಕೇವಲ ‘ಪ್ರಸವವೇದನೆಯ ಆರಂಭವಾಗಿತ್ತು.’ . . . ಮುಂದೆಂದೂ ಸಂಭವಿಸಲಾರದಂತಹ ‘ಮಹಾ ಸಂಕಟವು’ ಭವಿಷ್ಯತ್ತಿನಲ್ಲಿ ಸಂಭವಿಸುವುದು, ಏಕೆಂದರೆ ಅದು ಸುಳ್ಳು ಧರ್ಮದ (ಕ್ರೈಸ್ತಪ್ರಪಂಚವನ್ನು ಸೇರಿಸಿ) ಲೋಕ ಸಾಮ್ರಾಜ್ಯದ ನಾಶನವನ್ನು ಅರ್ಥೈಸುವುದು. ಅದಾದ ಮೇಲೆ ಅರ್ಮಗೆದೋನ್, ಅಂದರೆ ‘ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧವು’ ಜರುಗುವುದು. ಸಂಪೂರ್ಣ ಮಹಾ ಸಂಕಟವು ಭವಿಷ್ಯತ್ತಿನಲ್ಲಿ ಸಂಭವಿಸುವುದು ಎಂಬುದನ್ನು ಇದು ಅರ್ಥೈಸಿತು.
13. “ಅಸಹ್ಯವಸ್ತು” ಭವಿಷ್ಯತ್ತಿನಲ್ಲಿ ‘ಪವಿತ್ರಸ್ಥಾನದಲ್ಲಿ ನಿಲ್ಲುವುದು’ ಎಂದು ಹೇಳುವುದು ಏಕೆ ತರ್ಕಸಮ್ಮತವಾಗಿದೆ?
13 ಈ “ಅಸಹ್ಯವಸ್ತು” ಪವಿತ್ರಸ್ಥಾನದಲ್ಲಿ ಯಾವಾಗ ನಿಲ್ಲುವುದು ಎಂಬುದನ್ನು ತಿಳಿದುಕೊಳ್ಳಲು ಇದು ಸಹಾಯ ಮಾಡುವುದು. ಪ್ರಥಮ ಶತಮಾನದಲ್ಲಿ ಏನು ಸಂಭವಿಸಿತು ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ರೋಮನರು ಸಾ.ಶ. 66ರಲ್ಲಿ ಯೆರೂಸಲೇಮಿನ ಮೇಲೆ ಮುತ್ತಿಗೆ ಹಾಕಿದರೂ, ಯಾವ ಕಾರಣವೂ ಇಲ್ಲದೆ ಹಿಮ್ಮೆಟ್ಟಿದರು. ಆಗ ಕ್ರೈಸ್ತ “ನರಜೀವ”ವು ರಕ್ಷಿಸಲ್ಪಡುವುದಕ್ಕೆ ಅವಕಾಶವು ಸಿಕ್ಕಿತು. (ಮತ್ತಾಯ 24:22) ತದ್ರೀತಿಯಲ್ಲಿ, ಮಹಾ ಸಂಕಟವು ಬೇಗನೆ ಆರಂಭಗೊಳ್ಳುವುದೆಂದು ನಾವು ನಿರೀಕ್ಷಿಸುತ್ತೇವೆ. ಆದರೆ ದೇವರ ಆದುಕೊಳ್ಳಲ್ಪಟ್ಟವರಿಗಾಗಿ ಅದು ಕಡಿಮೆಮಾಡಲ್ಪಡುವುದು. ಈ ಮುಖ್ಯ ವಿಷಯವನ್ನು ಗಮನಿಸಿರಿ: ಗತಕಾಲದ ಉದಾಹರಣೆಯಲ್ಲಿ, ‘ಪವಿತ್ರಸ್ಥಾನದಲ್ಲಿ ನಿಂತಿರುವ ಅಸಹ್ಯವಸ್ತು’ ಸಾ.ಶ. 66ರಲ್ಲಿ ಜನರಲ್ ಗ್ಯಾಲಸನು ಮಾಡಿದ ರೋಮನ್ ದಾಳಿಗೆ ಸಂಬಂಧಿಸಿತ್ತು. ಆ ದಾಳಿಯ ಆಧುನಿಕ ದಿನದ ಸಮಾಂತರವು, ಅಂದರೆ ಮಹಾ ಸಂಕಟದ ಆರಂಭವು ಭವಿಷ್ಯತ್ತಿನಲ್ಲಿ ಜರುಗಲಿದೆ. ಆದುದರಿಂದ 1919ರಂದಿನಿಂದ ಅಸ್ತಿತ್ವದಲ್ಲಿದ್ದ “ಹಾಳುಮಾಡುವ ಅಸಹ್ಯವಸ್ತುವು,” ಪವಿತ್ರಸ್ಥಾನದಲ್ಲಿ ಇನ್ನೂ ನಿಲ್ಲಬೇಕಾಗಿದೆ.b ಇದು ಹೇಗೆ ಸಂಭವಿಸುವುದು? ಮತ್ತು ನಾವು ಹೇಗೆ ಬಾಧಿಸಲ್ಪಡಸಾಧ್ಯವಿದೆ?
ಒಂದು ಭಾವೀ ಆಕ್ರಮಣ
14, 15. ಅರ್ಮಗೆದೋನಿಗೆ ನಡೆಸುವ ಘಟನೆಗಳನ್ನು ನಾವು ತಿಳಿದುಕೊಳ್ಳುವಂತೆ ಪ್ರಕಟನೆ 17ನೆಯ ಅಧ್ಯಾಯವು ಹೇಗೆ ಸಹಾಯ ಮಾಡುತ್ತದೆ?
14 ಸುಳ್ಳು ಧರ್ಮದ ಮೇಲೆ ಒಂದು ಭಾವೀ ವಿನಾಶಕಾರಿ ಆಕ್ರಮಣವನ್ನು ಪ್ರಕಟನೆಯ ಪುಸ್ತಕವು ವರ್ಣಿಸುತ್ತದೆ. 17ನೆಯ ಅಧ್ಯಾಯವು, “ಬಾಬೆಲೆಂಬ ಮಹಾ ನಗರಿ, ಭೂಮಿಯಲ್ಲಿರುವ ಜಾರಸ್ತ್ರೀಯರಿಗೂ . . . ತಾಯಿ” ಅಂದರೆ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯದ ಮೇಲೆ ದೇವರ ನ್ಯಾಯತೀರ್ಪನ್ನು ರೇಖಿಸುತ್ತದೆ. ಕ್ರೈಸ್ತಪ್ರಪಂಚವು ಮುಖ್ಯ ಪಾತ್ರವನ್ನು ವಹಿಸುತ್ತದೆ ಮತ್ತು ದೇವರೊಂದಿಗೆ ಒಂದು ಒಡಂಬಡಿಕೆಯನ್ನು ಹೊಂದಿರುವ ಪ್ರತಿಪಾದನೆಯನ್ನು ಮಾಡುತ್ತದೆ. (ಹೋಲಿಸಿ ಯೆರೆಮೀಯ 7:4.) ಕ್ರೈಸ್ತಪ್ರಪಂಚವನ್ನು ಸೇರಿಸಿ, ಸುಳ್ಳು ಧರ್ಮಗಳು ದೀರ್ಘ ಸಮಯದಿಂದ ‘ಭೂರಾಜರೊಂದಿಗೆ ಜಾರತ್ವ ಮಾಡಿವೆ,’ ಆದರೆ ಇದು ಆ ಧರ್ಮಗಳ ನಾಶನದಲ್ಲಿ ಕೊನೆಗೊಳ್ಳುವುದು. (ಪ್ರಕಟನೆ 17:2, 5) ಯಾರ ಹಸ್ತಗಳಿಂದ?
15 ಪ್ರಕಟನೆಯ ಪುಸ್ತಕವು ಒಂದಿಷ್ಟು ಸಮಯ ಅಸ್ತಿತ್ವದಲ್ಲಿರುವ, ಮತ್ತೆ ಕಣ್ಮರೆಯಾಗುವ, ಪುನಃ ಹಿಂದಿರುಗುವ “ರಕ್ತವರ್ಣದ ಮೃಗ”ವನ್ನು ಚಿತ್ರಿಸುತ್ತದೆ. (ಪ್ರಕಟನೆ 17:3, 8) ಈ ಮೃಗವು ಲೋಕದ ಪ್ರಭುಗಳಿಂದ ಬೆಂಬಲಿಸಲ್ಪಟ್ಟಿದೆ. ಪ್ರವಾದನೆಯಲ್ಲಿ ನೀಡಲ್ಪಟ್ಟ ವಿವರಗಳಿಂದ, ಈ ಸಾಂಕೇತಿಕ ಮೃಗವು ಒಂದು ಶಾಂತಿಯ ಸಂಸ್ಥೆಯಾಗಿದೆ ಎಂಬುದನ್ನು ನಾವು ಗುರುತಿಸಬಹುದು. ಇದು 1919ರಲ್ಲಿ ಜನಾಂಗ ಸಂಘ (ಒಂದು “ಅಸಹ್ಯವಸ್ತು”)ವಾಗಿ ಅಸ್ತಿತ್ವಕ್ಕೆ ಬಂದಿತು. ಈಗ ಅದು ವಿಶ್ವ ಸಂಸ್ಥೆಯಾಗಿದೆ. ಪ್ರಕಟನೆ 17:16, 17 ತೋರಿಸುವುದೇನೆಂದರೆ, ಸುಳ್ಳು ಧರ್ಮದ ಈ ಲೋಕ ಸಾಮ್ರಾಜ್ಯವನ್ನು ಹಾಳುಮಾಡುವ ವಿಚಾರವನ್ನು ದೇವರು, ಈ “ಮೃಗ”ದಲ್ಲಿ ಪ್ರಧಾನರಾಗಿರುವ ಕೆಲವು ಮಾನವ ಪ್ರಭುಗಳ ಮನಸ್ಸಿನಲ್ಲಿ ಹಾಕುವನು. ಆ ಆಕ್ರಮಣವು ಮಹಾ ಸಂಕಟದ ಆರಂಭವನ್ನು ಗುರುತಿಸುತ್ತದೆ.
16. ಧರ್ಮದ ಸಂಬಂಧದಲ್ಲಿ ಯಾವ ಗಮನಾರ್ಹ ವಿಷಯಗಳು ಸಂಭವಿಸುತ್ತಿವೆ?
16 ಮಹಾ ಸಂಕಟದ ಆರಂಭವು ಭವಿಷ್ಯತ್ತಿನಲ್ಲಿ ಸಂಭವಿಸುವುದರಿಂದ, ‘ಪವಿತ್ರಸ್ಥಾನದಲ್ಲಿ ನಿಂತಿರುವುದು’ ಮುಂದಕ್ಕೆ ಸಂಭವಿಸಲಿರುವುದೊ? ಹೌದು. ಈ ಶತಮಾನದ ಆದಿ ಭಾಗದಲ್ಲಿ “ಅಸಹ್ಯವಸ್ತುವು” ಕಾಣಿಸಿಕೊಂಡು, ಕೆಲವು ದಶಕಗಳ ವರೆಗೆ ಅಸ್ತಿತ್ವದಲ್ಲಿದ್ದರೂ, ಹತ್ತಿರದ ಭವಿಷ್ಯತ್ತಿನಲ್ಲಿ ಅದು ಅಪೂರ್ವವಾದ ವಿಧದಲ್ಲಿ “ಪವಿತ್ರಸ್ಥಾನದಲ್ಲಿ” ನಿಂತುಕೊಳ್ಳುವುದು. ‘ಪವಿತ್ರಸ್ಥಾನದಲ್ಲಿ ನಿಲ್ಲುವ’ ಘಟನೆಯು ಹೇಗೆ ಸಂಭವಿಸುವುದು ಎಂಬುದನ್ನು ಪ್ರಥಮ ಶತಮಾನದ ಕ್ರೈಸ್ತ ಹಿಂಬಾಲಕರು ತೀಕ್ಷ್ಣವಾಗಿ ಗಮನಿಸಿದಂತೆಯೇ, ಪ್ರಚಲಿತ ದಿನದ ಕ್ರೈಸ್ತರೂ ಮಾಡುತ್ತಾರೆ. ವಿವರಗಳನ್ನು ತಿಳಿದುಕೊಳ್ಳಲು ನಾವು ನಿಜವಾದ ನೆರವೇರಿಕೆಗಾಗಿ ಕಾಯಬೇಕೆಂಬುದು ಒಪ್ಪತಕ್ಕ ವಿಷಯ. ಹಾಗಿದ್ದರೂ, ಕೆಲವು ದೇಶಗಳಲ್ಲಿ ಈಗಾಗಲೇ ಧರ್ಮದ ಕಡೆಗೆ ದ್ವೇಷವು ಹೆಚ್ಚುತ್ತಿದೆ ಎಂಬುದು ಗಮನಾರ್ಹವು. ನಿಜ ನಂಬಿಕೆಯಿಂದ ವಿಮುಖಗೊಂಡಿರುವ ಮಾಜಿ ಕ್ರೈಸ್ತರೊಂದಿಗೆ ಸೇರಿಕೊಂಡ ಕೆಲವು ರಾಜಕೀಯ ಗುಂಪುಗಳು, ಸಾಮಾನ್ಯವಾಗಿ ಧರ್ಮದ ವಿರುದ್ಧ ಮತ್ತು ವಿಶೇಷವಾಗಿ ಸತ್ಯ ಕ್ರೈಸ್ತರ ವಿರುದ್ಧ ದ್ವೇಷವನ್ನು ಪ್ರವರ್ಧಿಸುತ್ತಿದ್ದಾರೆ. (ಕೀರ್ತನೆ 94:20, 21; 1 ತಿಮೊಥೆಯ 6:20, 21) ಈ ಕಾರಣ, ರಾಜಕೀಯ ಶಕ್ತಿಗಳು ಈಗಲೂ ‘ಕುರಿಯಾದಾತನೊಂದಿಗೆ ಯುದ್ಧಮಾಡುತ್ತಾರೆ,’ ಮತ್ತು ಪ್ರಕಟನೆ 17:14 ಸೂಚಿಸುವಂತೆ ಆ ಹೋರಾಟವು ಉಗ್ರಗೊಳ್ಳುವುದು. ಉನ್ನತ ಹಾಗೂ ಮಹಿಮಾಭರಿತ ಸ್ಥಿತಿಯಲ್ಲಿರುವ ದೇವರ ಕುರಿಮರಿಯಾದ ಯೇಸು ಕ್ರಿಸ್ತನ ಮೇಲೆ ಅವರು ಅಕ್ಷರಾರ್ಥವಾಗಿ ದಾಳಿಯನ್ನು ಮಾಡಲು ಸಾಧ್ಯವಿರದ ಕಾರಣ, ದೇವರ ನಿಜ ಆರಾಧಕರನ್ನು, ವಿಶೇಷವಾಗಿ ಆತನ “ಭಕ್ತರ’ನ್ನು ಅವರು ಹಿಂಸಿಸುವರು. (ದಾನಿಯೇಲ 7:25; ಹೋಲಿಸಿ ರೋಮಾಪುರ 8:27; ಕೊಲೊಸ್ಸೆ 1:2; ಪ್ರಕಟನೆ 12:17.) ಕುರಿಮರಿಯೂ ಅವನೊಂದಿಗಿರುವವರೂ ವಿಜಯಿಗಳಾಗುವರೆಂಬ ದೈವಿಕ ಆಶ್ವಾಸನೆ ನಮಗಿದೆ.—ಪ್ರಕಟನೆ 19:11-21.
17. ಅಹಂಭಾವದವರಾಗಿರದೆ, “ಅಸಹ್ಯವಸ್ತು” ಪವಿತ್ರಸ್ಥಾನದಲ್ಲಿ ಹೇಗೆ ನಿಲ್ಲುವುದು ಎಂಬ ವಿಷಯದಲ್ಲಿ ನಾವು ಏನು ಹೇಳಸಾಧ್ಯವಿದೆ?
17 ಸುಳ್ಳು ಧರ್ಮವು ಧ್ವಂಸಗೊಳ್ಳಲಿದೆ ಎಂದು ನಮಗೆ ತಿಳಿದಿದೆ. ಮಹಾ ಬಾಬೆಲ್ “ದೇವಜನರ ರಕ್ತವನ್ನೂ . . . ಕುಡಿದು ಮತ್ತಳಾಗಿ,” ರಾಣಿಯಂತೆ ಮೆರೆದಿದ್ದಾಳೆ. ಆದರೆ ಅವಳ ನಾಶನವು ನಿಶ್ಚಿತವೇ ಸರಿ. ‘ಹತ್ತು ಕೊಂಬುಗಳೂ ಮೃಗವೂ’ ಅವಳ ಮೇಲೆ ಹಿಂಸಾತ್ಮಕ ದ್ವೇಷವನ್ನು ತೋರಿಸುವಾಗ, ಈ ತನಕ ಅವಳು ಭೂರಾಜರ ಮೇಲೆ ಬೀರಿದ ಅಶುದ್ಧ ಪ್ರಭಾವವು ನಾಟಕೀಯವಾಗಿ ಬದಲಾಗುವುದು. (ಪ್ರಕಟನೆ 17:6, 16; 18:7, 8) “ರಕ್ತವರ್ಣದ ಮೃಗ”ವು ಧಾರ್ಮಿಕ ಜಾರಸ್ತ್ರೀಯ ಮೇಲೆ ದಾಳಿಮಾಡುವಾಗ, “ಅಸಹ್ಯವಸ್ತು” ಕ್ರೈಸ್ತಪ್ರಪಂಚದ ನಾಮಮಾತ್ರದ ಪವಿತ್ರಸ್ಥಾನದಲ್ಲಿ ಬೆದರಿಸುವಂತಹ ರೀತಿಯಲ್ಲಿ ಆಗ ನಿಂತಿರುವುದು.c ಆದುದರಿಂದ ತನ್ನನ್ನು ಪವಿತ್ರವೆಂದು ಚಿತ್ರಿಸಿಕೊಳ್ಳುವ ಅಪನಂಬಿಗಸ್ತ ಕ್ರೈಸ್ತಪ್ರಪಂಚದಿಂದ ನಾಶನವು ಆರಂಭಿಸುವುದು.
‘ಓಡಿಹೋಗುವುದು’—ಹೇಗೆ?
18, 19. ‘ಬೆಟ್ಟಗಳಿಗೆ ಓಡಿಹೋಗುವುದು,’ ಧರ್ಮವನ್ನು ಬದಲಾಯಿಸುವುದನ್ನು ಅರ್ಥೈಸುವುದಿಲ್ಲ ಎಂಬುದಕ್ಕೆ ಯಾವ ಕಾರಣಗಳು ನೀಡಲ್ಪಟ್ಟಿವೆ?
18 ‘ಪವಿತ್ರಸ್ಥಾನದಲ್ಲಿ ಅಸಹ್ಯವಸ್ತು ನಿಂತಿರುವುದನ್ನು’ ಮುಂತಿಳಿಸಿದ ಮೇಲೆ, ವಿವೇಚನೆಯುಳ್ಳವರು ಕ್ರಿಯೆಗೈಯುವಂತೆ ಯೇಸು ಎಚ್ಚರಿಸಿದನು. ಆ ಕೊನೆಯ ಗಳಿಗೆಯಲ್ಲಿ, ಅಂದರೆ “ಅಸಹ್ಯವಸ್ತುವು ಪವಿತ್ರಸ್ಥಾನದಲ್ಲಿ ನಿಂತಿರು”ವಾಗ, ಅನೇಕ ಜನರು ಸುಳ್ಳು ಧರ್ಮದಿಂದ ಓಡಿ ಸತ್ಯಾರಾಧನೆಯನ್ನು ಸೇರಿಕೊಳ್ಳುವರೆಂಬುದನ್ನು ಅವನು ಅರ್ಥೈಸಿದನೊ? ಇಲ್ಲ. ಪ್ರಥಮ ನೆರವೇರಿಕೆಯನ್ನು ಪರಿಗಣಿಸಿರಿ. ಯೇಸು ಹೇಳಿದ್ದು: “ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ. ಮಾಳಿಗೆಯ ಮೇಲೆ ಇರುವವನು ತನ್ನ ಮನೆಯೊಳಗಿಂದ ಏನಾದರೂ ತೆಗೆದುಕೊಳ್ಳುವದಕ್ಕೆ ಇಳಿಯದೆ ಒಳಕ್ಕೆ ಹೋಗದೆ ಹೊಲದಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳುವದಕ್ಕೆ ಹಿಂತಿರಿಗಿ ಬಾರದೆ ಓಡಿಹೋಗಲಿ. ಆದರೆ ಆ ದಿನಗಳಲ್ಲಿ ಬಸುರಿಯರಿಗೂ ಮೊಲೆಕೂಸಿರುವ ಹೆಂಗಸರಿಗೂ ಆಗುವ ಕಷ್ಟವನ್ನು ಏನು ಹೇಳಲಿ! . . . ಇದೆಲ್ಲಾ ಚಳಿಗಾಲದಲ್ಲಿ ಆಗಬಾರದೆಂದು ಪ್ರಾರ್ಥನೆಮಾಡಿರಿ.”—ಮಾರ್ಕ 13:14-18.
19 ಯೆಹೂದಿ ಆರಾಧನಾ ರೀತಿಯ ಕೇಂದ್ರವಾಗಿದ್ದ ಯೆರೂಸಲೇಮಿನಲ್ಲಿ ಉಳಿದುಕೊಂಡಿರುವವರು ಮಾತ್ರ ಅಲ್ಲಿಂದ ಓಡಿಹೋಗಬೇಕೆಂದು ಯೇಸು ಹೇಳಲಿಲ್ಲ. ಇಲ್ಲವೆ ಅವನ ಎಚ್ಚರಿಕೆಯು ಧರ್ಮದ ಬದಲಾವಣೆಯನ್ನು, ಅಂದರೆ ಸುಳ್ಳು ಧರ್ಮವನ್ನು ಬಿಟ್ಟು ಸತ್ಯ ಧರ್ಮವನ್ನು ಸ್ವೀಕರಿಸಿಕೊಳ್ಳುವುದನ್ನು ಅರ್ಥೈಸಲಿಲ್ಲ. ಯೇಸುವಿನ ಶಿಷ್ಯರಿಗೆ ಒಂದು ಧರ್ಮವನ್ನು ಬಿಟ್ಟು ಮತ್ತೊಂದಕ್ಕೆ ಓಡಿಹೋಗುವ ಎಚ್ಚರಿಕೆಯ ಅಗತ್ಯ ಖಂಡಿತವಾಗಿಯೂ ಇರಲಿಲ್ಲ, ಏಕೆಂದರೆ ಅವರು ಈಗಾಗಲೇ ಸತ್ಯ ಕ್ರೈಸ್ತರಾಗಿದ್ದರು. ಮತ್ತು ಸಾ.ಶ. 66ರಲ್ಲಾದ ಆಕ್ರಮಣವು, ಯೆರೂಸಲೇಮ್ ಮತ್ತು ಯೂದಾಯದ ಆದ್ಯಂತವಿದ್ದ ಯೆಹೂದಿಮತದ ಅನುಯಾಯಿಗಳು ತಮ್ಮ ಧರ್ಮವನ್ನು ತ್ಯಜಿಸಿ, ಕ್ರೈಸ್ತತ್ವವನ್ನು ಸ್ವೀಕರಿಸಿಕೊಳ್ಳುವಂತೆ ಪ್ರಚೋದಿಸಲಿಲ್ಲ. ಪ್ರೊಫೆಸರ್ ಹಿನ್ರಿಕ್ ಗ್ರೆಟ್ಸ್ ಹೇಳುವುದೇನೆಂದರೆ, ಪಲಾಯನಗೈಯುತ್ತಿದ್ದ ರೋಮನರನ್ನು ಬೆನ್ನಟ್ಟಿದ ಜನರು ನಗರಕ್ಕೆ ಹಿಂದಿರುಗಿದರು: “ವಿಜಯೋತ್ಸವದ ಯುದ್ಧ ಗೀತೆಗಳನ್ನು ಹಾಡುತ್ತಾ, ಹಠೋತ್ಸಾಹಿಗಳು ಯೆರೂಸಲೇಮಿಗೆ ಹಿಂದಿರುಗಿದರು (ಅಕ್ಟೋಬರ್ 8ರಂದು), ಅವರ ಹೃದಯಗಳು ಬಿಡುಗಡೆ ಹಾಗೂ ಸ್ವಾತಂತ್ರ್ಯದ ಸಂತೋಷಕರ ನಿರೀಕ್ಷೆಯೊಂದಿಗೆ ತುಡಿಯುತ್ತಿದ್ದವು. . . . ದೇವರು ತಮ್ಮ ಪೂರ್ವಜರಿಗೆ ಸಹಾಯಮಾಡಿದಂತೆಯೇ ತಮಗೂ ಕರುಣೆಯನ್ನು ತೋರಿಸಿ ಸಹಾಯಮಾಡಿರಲಿಲ್ಲವೊ? ಹಠೋತ್ಸಾಹಿಗಳು ಭವಿಷ್ಯತ್ತಿನ ಕುರಿತು ಕಿಂಚಿತ್ತೂ ಭಯಪಡಲಿಲ್ಲ.”
20. ಬೆಟ್ಟಗಳಿಗೆ ಓಡಿಹೋಗಿರೆಂಬ ಯೇಸುವಿನ ಎಚ್ಚರಿಕೆಗೆ ಆದಿ ಶಿಷ್ಯರು ಹೇಗೆ ಪ್ರತಿಕ್ರಿಯಿಸಿದರು?
20 ಯೇಸುವಿನ ಬುದ್ಧಿವಾದಕ್ಕೆ ಹೊಂದಿಕೆಯಲ್ಲಿ ಆ ಸಮಯದ ಆದುಕೊಳ್ಳಲ್ಪಟ್ಟವರ ಚಿಕ್ಕ ಗುಂಪು ಹೇಗೆ ಕ್ರಿಯೆಗೈಯಿತು? ಯೂದಾಯವನ್ನು ಬಿಟ್ಟು ಯೊರ್ದಾನ್ ನದಿಯ ಆಚೆಗಿದ್ದ ಬೆಟ್ಟಗಳಿಗೆ ಓಡಿಹೋಗುವ ಮೂಲಕ, ತಾವು ರಾಜಕೀಯವಾಗಿ ಇಲ್ಲವೆ ಧಾರ್ಮಿಕವಾಗಿ ಯೆಹೂದಿ ವ್ಯವಸ್ಥೆಯ ಭಾಗವಾಗಿರಲಿಲ್ಲ ಎಂಬುದನ್ನು ತೋರಿಸಿಕೊಟ್ಟರು. ಅವರು ತಮ್ಮ ಮನೆಗಳಿಂದ ಬೆಲೆಬಾಳುವ ವಸ್ತುಗಳನ್ನೂ ತೆಗೆದುಕೊಳ್ಳದೆ, ಹೊಲಗಳನ್ನು ಮತ್ತು ಮನೆಗಳನ್ನು ಬಿಟ್ಟುಬಂದರು. ಯೆಹೋವನ ಸಂರಕ್ಷಣೆ ಹಾಗೂ ಬೆಂಬಲದಲ್ಲಿ ಪೂರ್ಣ ಭರವಸೆಯುಳ್ಳವರಾಗಿದ್ದ ಅವರು, ಪ್ರಾಮುಖ್ಯವೆಂದು ತೋರಬಹುದಾದ ಬೇರೆಲ್ಲ ವಿಷಯಗಳಿಗಿಂತಲೂ ಆತನ ಆರಾಧನೆಯನ್ನು ಪ್ರಥಮವಾಗಿಟ್ಟರು.—ಮಾರ್ಕ 10:29, 30; ಲೂಕ 9:57-62.
21. “ಅಸಹ್ಯವಸ್ತು” ಆಕ್ರಮಿಸುವಾಗ ನಾವು ಯಾವ ಫಲಿತಾಂಶವನ್ನು ನಿರೀಕ್ಷಿಸಬಾರದು?
21 ಈಗ, ಇನ್ನೂ ವ್ಯಾಪಕವಾದ ನೆರವೇರಿಕೆಯನ್ನು ಪರಿಗಣಿಸಿರಿ. ಜನರು ಸುಳ್ಳು ಧರ್ಮದಿಂದ ಹೊರಬಂದು ಸತ್ಯಾರಾಧನೆಯನ್ನು ಸ್ವೀಕರಿಸುವಂತೆ ನಾವು ಹಲವಾರು ದಶಕಗಳಿಂದ ಉತ್ತೇಜಿಸುತ್ತಾ ಬಂದಿದ್ದೇವೆ. (ಪ್ರಕಟನೆ 18:4, 5) ಲಕ್ಷಾಂತರ ಜನರು ಅದನ್ನೇ ಮಾಡಿದ್ದಾರೆ. ಮಹಾ ಸಂಕಟವು ಆರಂಭಿಸಿದ ಕೂಡಲೇ, ಜನಸಮೂಹಗಳು ಶುದ್ಧ ಆರಾಧನೆಗೆ ಧಾವಿಸಿಬರುವವೆಂದು ಯೇಸುವಿನ ಪ್ರವಾದನೆಯು ಸೂಚಿಸುವುದಿಲ್ಲ. ಎಷ್ಟೆಂದರೂ, ಸಾ.ಶ. 66ರಲ್ಲಿ ಯೆಹೂದ್ಯರ ಭಾರಿ ಮತಾಂತರವು ನಡೆಯಲಿಲ್ಲ. ಆದರೂ, ಯೇಸುವಿನ ಎಚ್ಚರಿಕೆಗೆ ಕಿವಿಗೊಟ್ಟು, ಓಡಿಹೋಗಲು ಸತ್ಯ ಕ್ರೈಸ್ತರಿಗೆ ಅತ್ಯಧಿಕ ಪ್ರೋತ್ಸಾಹನೆಯು ಇರುವುದು.
22. ಬೆಟ್ಟಗಳಿಗೆ ಓಡಿಹೋಗಿರೆಂಬ ಯೇಸುವಿನ ಬುದ್ಧಿವಾದವನ್ನು ನಾವು ಅನ್ವಯಿಸಿಕೊಳ್ಳುವುದು ಏನನ್ನು ಒಳಗೊಳ್ಳಬಹುದು?
22 ಮಹಾ ಸಂಕಟದ ಸಂಪೂರ್ಣ ವಿವರಗಳನ್ನು ನಾವೀಗ ಪಡೆಯಲು ಸಾಧ್ಯವಿಲ್ಲವಾದರೂ, ಯೇಸು ತಿಳಿಸಿದಂತಹ ಓಟವು ನಮ್ಮ ವಿಷಯದಲ್ಲಿ ಒಂದು ಭೌಗೋಲಿಕ ಅರ್ಥವನ್ನು ನೀಡುವುದಿಲ್ಲವೆಂದು ನಾವು ಯೋಗ್ಯವಾಗಿಯೇ ತೀರ್ಮಾನಿಸಬಹುದು. ದೇವಜನರು ಭೂಗೋಲದ ಸುತ್ತಲೂ, ಪ್ರತಿಯೊಂದು ಮೂಲೆಯಲ್ಲಿದ್ದಾರೆ. ಆದರೆ, ಪಲಾಯನಗೈಯುವುದು ಅನಿವಾರ್ಯವಾದಾಗ, ಕ್ರೈಸ್ತರು ತಮ್ಮ ಹಾಗೂ ಸುಳ್ಳು ಧರ್ಮದ ಸಂಸ್ಥೆಗಳ ನಡುವೆ ಸ್ಪಷ್ಟವಾದ ವ್ಯತ್ಯಾಸವನ್ನು ಕಾಪಾಡಿಕೊಳ್ಳುತ್ತಾ ಮುಂದುವರಿಯಬೇಕೆಂಬುದು ಖಂಡಿತ. ಬಟ್ಟೆಗಳನ್ನು ಇಲ್ಲವೆ ಇತರ ವಸ್ತುಗಳನ್ನು ತೆಗೆದುಕೊಳ್ಳಲಿಕ್ಕಾಗಿ ಒಬ್ಬನು ತನ್ನ ಮನೆಯೊಳಗೆ ಹೋಗದಿರುವುದರ ಬಗ್ಗೆಯೂ ಯೇಸು ಎಚ್ಚರಿಸಿದ್ದು ಗಮನಾರ್ಹವು. (ಮತ್ತಾಯ 24:17, 18) ಹೀಗೆ, ನಾವು ಭೌತಿಕ ವಸ್ತುಗಳನ್ನು ಹೇಗೆ ವೀಕ್ಷಿಸುತ್ತೇವೆ ಎಂಬ ವಿಷಯವಾಗಿ ಭವಿಷ್ಯತ್ತಿನಲ್ಲಿ ಪರೀಕ್ಷೆಗಳೇಳಬಹುದು. ಭೌತಿಕ ವಸ್ತುಗಳು ಅತ್ಯಂತ ಪ್ರಾಮುಖ್ಯವಾದ ವಿಷಯಗಳಾಗಿವೆಯೊ ಇಲ್ಲವೆ ದೇವರ ಪಕ್ಷದಲ್ಲಿರುವವರೆಲ್ಲರಿಗೆ ಬರುವಂತಹ ರಕ್ಷಣೆಯು ಹೆಚ್ಚು ಪ್ರಾಮುಖ್ಯವಾಗಿದೆಯೊ? ಹೌದು, ನಮ್ಮ ಪಲಾಯನದಲ್ಲಿ ಕೆಲವೊಂದು ಕಷ್ಟತೊಂದರೆಗಳು ಮತ್ತು ನಷ್ಟಗಳು ಸೇರಿರಬಹುದು. ಯೂದಾಯದಿಂದ ಯೊರ್ದಾನಿನ ಆಚೆಗಿದ್ದ ಪೆರಿಯ ಕ್ಷೇತ್ರಕ್ಕೆ ಓಡಿಹೋದ ಪ್ರಥಮ ಶತಮಾನದ ಕ್ರೈಸ್ತರಂತೆಯೇ, ಅಗತ್ಯವಿರುವುದೆಲ್ಲವನ್ನು ಮಾಡಲು ನಾವು ಸಿದ್ಧರಾಗಿರಬೇಕು.
23, 24. (ಎ) ನಾವು ಎಲ್ಲಿ ಮಾತ್ರ ಸಂರಕ್ಷಣೆಯನ್ನು ಪಡೆದುಕೊಳ್ಳುವೆವು? (ಬಿ) ‘ಪವಿತ್ರಸ್ಥಾನದಲ್ಲಿ ನಿಂತಿರುವ ಅಸಹ್ಯವಸ್ತುವಿನ’ ಕುರಿತಾದ ಯೇಸುವಿನ ಎಚ್ಚರಿಕೆಯು ನಮ್ಮ ಮೇಲೆ ಯಾವ ಪ್ರಭಾವವನ್ನು ಬೀರಬೇಕು?
23 ಯೆಹೋವ ಮತ್ತು ಆತನ ಪರ್ವತದಂತಹ ಸಂಸ್ಥೆಯಲ್ಲದೆ ಬೇರೆ ಯಾವುದೂ ನಮ್ಮ ಆಶ್ರಯವಲ್ಲವೆಂಬ ವಿಷಯದಲ್ಲಿ ನಾವು ನಿಶ್ಚಿತರಾಗಿರಬೇಕು. (2 ಸಮುವೇಲ 22:2, 3; ಕೀರ್ತನೆ 18:2; ದಾನಿಯೇಲ 2:35, 44) ನಾವು ಸಂರಕ್ಷಣೆಯನ್ನು ಕಂಡುಕೊಳ್ಳುವುದು ಇಲ್ಲಿಯೇ! ಮಹಾ ಬಾಬೆಲ್ ನಾಶವಾದ ಮೇಲೆ ಒಂದಿಷ್ಟು ಸಮಯಕ್ಕಾಗಿ ಉಳಿಯಬಹುದಾದ ಮಾನವ ಸಂಘ ಸಂಸ್ಥೆಗಳಂತಿರುವ “ಬೆಟ್ಟಗಳ ಗವಿ”ಗಳಿಗೆ ಓಡಿಹೋಗಿ, “ಬಂಡೆಗಳ ಸಂದು”ಗಳಲ್ಲಿ ಅಡಗಿಕೊಳ್ಳುವ ಜನಸಮೂಹಗಳನ್ನು ನಾವು ಅನುಕರಿಸದಿರುವೆವು. (ಪ್ರಕಟನೆ 6:15; 18:9-11) ಸಾ.ಶ. 66ರಲ್ಲಾದಂತೆ, ಯೂದಾಯದಿಂದ ಓಡಿಹೋದ ಗರ್ಭಿಣಿಯರಿಗೆ ಇಲ್ಲವೆ ತಣ್ಣನೆಯ ಮಳೆಯಲ್ಲಿ ಪ್ರಯಾಣಿಸಬೇಕಾದ ಯಾವನೇ ವ್ಯಕ್ತಿಗೆ ಹೇಗೆ ಪರಿಸ್ಥಿತಿಗಳು ಕಷ್ಟಕರವಾಗಿದ್ದವೊ, ಹಾಗೆಯೇ ಸನ್ನಿವೇಶಗಳು ಇನ್ನೂ ಕಷ್ಟಕರವಾಗಬಲ್ಲವು. ಆದರೆ, ಪಾರಾಗಿ ಉಳಿಯುವುದನ್ನು ಯೆಹೋವನು ಸಾಧ್ಯಗೊಳಿಸುವನೆಂಬ ವಿಷಯದಲ್ಲಿ ನಾವು ಖಚಿತರಾಗಿರಸಾಧ್ಯವಿದೆ. ಯೆಹೋವನ ಮೇಲೆ ಮತ್ತು ಆ ರಾಜ್ಯದ ರಾಜನಾಗಿ ಈಗ ಆಳುತ್ತಿರುವ ಆತನ ಮಗನ ಮೇಲಿನ ನಮ್ಮ ಅವಲಂಬನೆಯನ್ನು ನಾವು ಈಗಲೇ ಭದ್ರಪಡಿಸಬೇಕಾಗಿದೆ.
24 ಮುಂದೆ ಸಂಭವಿಸಲಿರುವ ವಿಷಯದಲ್ಲಿ ನಾವು ಭಯಪಡುತ್ತಾ ಜೀವಿಸಬೇಕಾಗಿಲ್ಲ. ಆಗಿನ ಕಾಲದ ತನ್ನ ಶಿಷ್ಯರು ಭಯಪಡಬೇಕೆಂದು ಯೇಸು ಬಯಸಲಿಲ್ಲ, ಮತ್ತು ನಮ್ಮ ಸಮಯದಲ್ಲಿ ಇಲ್ಲವೆ ಮುಂಬರುವ ದಿನಗಳ ವಿಷಯವಾಗಿ ನಾವೂ ಭಯಭೀತರಾಗಿರಬೇಕೆಂದು ಅವನು ಬಯಸುವುದಿಲ್ಲ. ನಾವು ನಮ್ಮ ಹೃದಮನಗಳನ್ನು ಸಿದ್ಧಗೊಳಿಸಸಾಧ್ಯವಾಗುವಂತೆ ಅವನು ಎಚ್ಚರಿಕೆ ನೀಡುತ್ತಿದ್ದನು. ಎಷ್ಟೆಂದರೂ, ಸುಳ್ಳು ಧರ್ಮ ಹಾಗೂ ಈ ದುಷ್ಟ ವ್ಯವಸ್ಥೆಯ ಉಳಿದ ವಿಷಯಗಳ ಮೇಲೆ ನಾಶನವು ಬರುವಾಗ ವಿಧೇಯ ಕ್ರೈಸ್ತರು ದಂಡಿಸಲ್ಪಡಲಾರರು. ಅವರು ವಿವೇಚಿಸುವವರಾಗಿದ್ದು ‘ಪವಿತ್ರಸ್ಥಾನದಲ್ಲಿ ನಿಂತಿರುವ ಅಸಹ್ಯವಸ್ತುವಿನ’ ಕುರಿತಾದ ಎಚ್ಚರಿಕೆಗೆ ಕಿವಿಗೊಡುವರು. ಮತ್ತು ತಮ್ಮ ಅಚಲ ನಂಬಿಕೆಯ ಆಧಾರದ ಮೇಲೆ ಅವರು ನಿರ್ಣಾಯಕವಾಗಿ ಕ್ರಿಯೆಗೈಯುವರು. ಯೇಸು ವಾಗ್ದಾನಿಸಿದ್ದನ್ನು ನಾವು ಎಂದಿಗೂ ಮರೆಯದಿರೋಣ: “ಆದರೆ ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು.”—ಮಾರ್ಕ 13:13.
[ಅಧ್ಯಯನ ಪ್ರಶ್ನೆಗಳು]
a “ಈ ರೋಮನ್ ಲಾಂಛನಗಳು ರೋಮಿನ ದೇವಾಲಯಗಳಲ್ಲಿ ಧಾರ್ಮಿಕ ಪೂಜ್ಯಭಾವನೆಯೊಂದಿಗೆ ಕಾಪಾಡಲ್ಪಟ್ಟವು. ಪ್ರತಿಯೊಂದು ಮಿಲಿಟರಿ ಸಫಲತೆಯೊಂದಿಗೆ, ಈ ಲಾಂಛನಗಳ ಕಡೆಗಿದ್ದ ರೋಮನರ ಭಯಭಕ್ತಿಯು ಹೆಚ್ಚಾಗುತ್ತಿತ್ತು . . . [ಸೈನಿಕರಿಗೆ] ಅದು ಭೂಮಿಯಲ್ಲಿದ್ದ ಅತ್ಯಂತ ಪವಿತ್ರ ವಸ್ತುವಾಗಿತ್ತು. ರೋಮನ್ ಸೈನಿಕನು ತನ್ನ ಲಾಂಛನದ ಮೇಲೆ ಆಣೆಯಿಡುತ್ತಿದ್ದನು.”—ದಿ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ, 11ನೆಯ ಮುದ್ರಣ.
b ಸಾ.ಶ. 66-70ರಲ್ಲಿ ನೆರವೇರಿದ ಯೇಸುವಿನ ಮಾತುಗಳು, ಅವು ಮಹಾ ಸಂಕಟದಲ್ಲಿ ಹೇಗೆ ನೆರವೇರುವವು ಎಂಬುದನ್ನು ನಾವು ತಿಳಿದುಕೊಳ್ಳುವಂತೆ ಸಹಾಯ ಮಾಡಬಲ್ಲವಾದರೂ, ಈ ನೆರವೇರಿಕೆಗಳು ವ್ಯತ್ಯಾಸವಾದ ಹಿನ್ನೆಲೆಗಳಲ್ಲಿ ಜರುಗುವುದರಿಂದ, ಈ ಎರಡೂ ನೆರವೇರಿಕೆಗಳು ಏಕರೀತಿಯದ್ದಾಗಿರಲು ಸಾಧ್ಯವಿಲ್ಲ ಎಂಬುದನ್ನು ನಾವು ಗಮನಿಸತಕ್ಕದ್ದು.
ನಿಮಗೆ ಜ್ಞಾಪಕವಿದೆಯೆ?
◻ “ಹಾಳುಮಾಡುವ ಅಸಹ್ಯವಸ್ತು” ತನ್ನನ್ನು ಪ್ರಥಮ ಶತಮಾನದಲ್ಲಿ ಹೇಗೆ ವ್ಯಕ್ತಪಡಿಸಿಕೊಂಡಿತು?
◻ ಆಧುನಿಕ ದಿನದ “ಅಸಹ್ಯವಸ್ತು” ಭವಿಷ್ಯತ್ತಿನಲ್ಲಿ ಒಂದು ಪವಿತ್ರಸ್ಥಾನದಲ್ಲಿ ನಿಲ್ಲುವುದೆಂದು ಯೋಚಿಸುವುದು ಏಕೆ ತರ್ಕಸಮ್ಮತವಾಗಿದೆ?
◻ “ಅಸಹ್ಯವಸ್ತು” ಎಸಗಲಿರುವ ಯಾವ ಆಕ್ರಮಣವು ಪ್ರಕಟನೆಯಲ್ಲಿ ಮುಂತಿಳಿಸಲಾಗಿದೆ?
◻ ಯಾವ ರೀತಿಯ ‘ಓಡಿಹೋಗುವಿಕೆಯು’ ನಮ್ಮ ಕಡೆಯಿಂದ ಇನ್ನೂ ಕೇಳಿಕೊಳ್ಳಲ್ಪಡಬಹುದು?
[ಪುಟ 16 ರಲ್ಲಿರುವ ಚಿತ್ರ]
ಮಹಾ ಬಾಬೆಲ್ ‘ಜಾರಸ್ತ್ರೀಯರಿಗೆಲ್ಲ ತಾಯಿ’ ಎಂದು ಕರೆಯಲ್ಪಟ್ಟಿದ್ದಾಳೆ
[ಪುಟ 17 ರಲ್ಲಿರುವ ಚಿತ್ರ]
ಪ್ರಕಟನೆ 17ನೆಯ ಅಧ್ಯಾಯದ ರಕ್ತವರ್ಣದ ಮೃಗವು, ಯೇಸು ಸೂಚಿಸಿದ “ಅಸಹ್ಯವಸ್ತು” ಆಗಿದೆ
[ಪುಟ 18 ರಲ್ಲಿರುವ ಚಿತ್ರ]
ಆ ರಕ್ತವರ್ಣದ ಮೃಗವು ಧರ್ಮದ ಮೇಲೆ ಒಂದು ಧ್ವಂಸಕರ ಆಕ್ರಮಣವನ್ನು ನಡೆಸುವುದು