ಆ “ಸಂಕಟದ ಸಮಯವನ್ನು” ಯಾರು ಪಾರಾಗುವರು?
“ಯೆಹೋವನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದು.”—ಯೋವೇಲ 2:32.
1. ದಾನಿಯೇಲ ಮತ್ತು ಮಲಾಕಿಯರಿಗೆ ಅನುಸಾರವಾಗಿ, ಬರಲಿರುವ “ಸಂಕಟದ ಸಮಯದಲ್ಲಿ” ರಕ್ಷಣೆಯ ಸಾಲಿನಲ್ಲಿರುವವರು ವಿಶಿಷ್ಟವಾಗಿ ಏನನ್ನು ಮಾಡುವವರಾಗಿ ತಿಳಿಸಲ್ಪಟ್ಟಿದ್ದಾರೆ?
ನಮ್ಮ ದಿನಗಳ ಕಡೆಗೆ ಮುನ್ನೋಡುತ್ತಾ ಪ್ರವಾದಿಯಾದ ದಾನಿಯೇಲನು ಬರೆದದ್ದು: “ಜನಾಂಗವು ಉಂಟಾದಂದಿನಿಂದ ಅಂದಿನ ವರೆಗೆ ಸಂಭವಿಸದಂಥ ಸಂಕಟವು ಸಂಭವಿಸುವದು. ಆಗ ನಿನ್ನ ಜನರೊಳಗೆ ಯಾರ ಹೆಸರುಗಳು ಪಟ್ಟಿಯಲ್ಲಿ ಸಿಕ್ಕುವವೋ ಅವರೆಲ್ಲರು ರಕ್ಷಿಸಲ್ಪಡುವರು.” (ದಾನಿಯೇಲ 12:1) ಸಾಂತ್ವನಕಾರಿ ಮಾತುಗಳು ನಿಶ್ಚಯ! ಮಲಾಕಿಯ 3:16 ಸಹ ಹೇಳುವಂತೆ, ಯೆಹೋವನ ಅನುಗ್ರಹ ಪಾತ್ರರಾದ ಜನರು ಆತನಿಂದ ನೆನಪಿಸಲ್ಪಡುವರು: “ಇಂಥ ಮಾತುಗಳನ್ನು ಕೇಳಿ ಯೆಹೋವನ ಭಕ್ತರು ಒಬ್ಬರಿಗೊಬ್ಬರು ಮಾತಾಡಿಕೊಳ್ಳಲು ಯೆಹೋವನು ಕಿವಿಗೊಟ್ಟು ಆಲಿಸಿ ಭಯಭಕ್ತಿಯಿಂದ ತನ್ನ ನಾಮಸ್ಮರಣೆ ಮಾಡುವವರ ಹೆಸರುಗಳನ್ನು ತನ್ನ ಮುಂದೆ ಜ್ಞಾಪಕದ ಪುಸ್ತಕದಲ್ಲಿ ಬರೆಯಿಸಿದನು.”
2. ಯೆಹೋವನ ನಾಮಸ್ಮರಣೆ ಮಾಡುವುದರಿಂದ ಯಾವುದು ಫಲಿತಾಂಶವಾಗಿ ಸಿಗುತ್ತದೆ?
2 ಯೆಹೋವನ ನಾಮವನ್ನು ಕುರಿತು ಯೋಚಿಸುವುದು ಆತನ, ಆತನ ಕ್ರಿಸ್ತನ, ಮತ್ತು ಆತನ ಮಹಾ ರಾಜ್ಯೋದ್ದೇಶಗಳೆಲ್ಲವುಗಳ ಕುರಿತಾದ ನಿಷ್ಕೃಷ್ಟ ಜ್ಞಾನಕ್ಕೆ ನಡಿಸುತ್ತದೆ. ಹೀಗೆ, ಆತನ ಜನರು ಆತನ ಕಡೆಗೆ ಭಯಭಕ್ತಿಯಲ್ಲಿರಲು, ಆತನೊಂದಿಗೆ ಒಂದು ಆಪ್ತವಾದ, ಸಮರ್ಪಿತ ಸಂಬಂಧದೊಳಗೆ ಬರಲು, ಮತ್ತು ಆತನನ್ನು ‘ಪೂರ್ಣ ಹೃದಯದಿಂದಲೂ ಪೂರ್ಣ ಬುದ್ಧಿಯಿಂದಲೂ ಪೂರ್ಣ ಶಕಿಯ್ತಿಂದಲೂ’ ಪ್ರೀತಿಸಲು ಕಲಿಯುವರು. (ಮಾರ್ಕ 12:33; ಪ್ರಕಟನೆ 4:11) ಭೂಮಿಯ ದೀನರಾದ ಜನರು ನಿತ್ಯಜೀವವನ್ನು ಕಂಡುಕೊಳ್ಳುವಂತೆ ಯೇಸು ಕ್ರಿಸ್ತನ ಯಜ್ಞದ ಮೂಲಕವಾಗಿ ಯೆಹೋವನು ಕೃಪೆಯುಳ್ಳ ಒದಗಿಸುವಿಕೆಯನ್ನು ಮಾಡಿದ್ದಾನೆ. ಆದಕಾರಣ ಇವರು, ಯೇಸುವಿನ ಜನನದ ಸಮಯದಲ್ಲಿ ದೇವರನ್ನು ಸ್ತುತಿಸಿದ ಆ ಸ್ವರ್ಗೀಯ ಸೇನೆಯ ಮಾತುಗಳನ್ನು ಆತ್ಮವಿಶ್ವಾಸದಿಂದ ಪ್ರತಿದ್ವನಿಸುತ್ತಾ, ಹೀಗನ್ನಬಹುದು: “ಮೇಲಣ ಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ [ಸುಚಿತ್ತವುಳ್ಳ, NW] ಮನುಷ್ಯರೊಳಗೆ ಸಮಾಧಾನ [ಶಾಂತಿ, NW].”—ಲೂಕ 2:14.
3. ಈ ಭೂಮಿಗೆ ಶಾಂತಿಯು ಬರುವ ಮೊದಲು, ಯೆಹೋವನ ಯಾವ ಕ್ರಿಯೆಯು ಕೈಕೊಳ್ಳಲ್ಪಡಬೇಕು?
3 ಆ ಶಾಂತಿಯು ಹೆಚ್ಚಿನ ಜನರು ನೆನಸುವುದಕ್ಕಿಂತ ಹೆಚ್ಚು ಹತ್ತಿರವಿದೆ. ಆದರೆ ಮೊದಲು ಒಂದು ಭ್ರಷ್ಟ ಲೋಕದ ಮೇಲೆ ಯೆಹೋವನ ತೀರ್ಪಿನ ನಿರ್ವಹಣೆಯು ಬರಬೇಕು. ಆತನ ಪ್ರವಾದಿ ಚೆಫನ್ಯನು ಪ್ರಕಟಿಸುವುದು: “ಯೆಹೋವನ ಮಹಾ ದಿನವು ಹತ್ತಿರವಾಯಿತು, ಸಮೀಪಿಸಿತು, ಬಹು ತರ್ವೆಯಾಗಿ ಬರುತ್ತಿದೆ.” ಅದು ಯಾವ ರೀತಿಯ ದಿನವಾಗಿರಲಿದೆ? ಪ್ರವಾದನೆಯು ಮುಂದುವರಿಸುವುದು: “ಆಹಾ, ಕಿವಿಗೊಡಿರಿ, ಯೆಹೋವನ ದಿನವೇ ಬಂದಿತು; ಇಗೋ, ಅಲ್ಲಿ ಒಬ್ಬ ಶೂರನು ಘೋರವಾಗಿ ಗೋಳಾಡುತ್ತಿದ್ದಾನೆ! ಆ ದಿನವು ರೌದ್ರದ ದಿನ, ಶ್ರಮಸಂಕಟಗಳ ದಿನ, ಹಾಳುಪಾಳುಮಾಡುವ ದಿನ, ಕತ್ತಲಿನ ಮೊಬ್ಬಿನ ದಿನ. ಕೋಟೆಗಳನ್ನೂ ಕೊತ್ತಲಗಳನ್ನೂ ಹಿಡಿಯಲು ಆರ್ಬಟಿಸಿ ಕೊಂಬೂದುವ ದಿನ. ಯೆಹೋವನಾದ ನನಗೆ ಜನರು ಪಾಪಮಾಡಿದ ಕಾರಣ ಕುರುಡರಂತೆ ನಡೆಯುವ ಹಾಗೆ ಅವರನ್ನು ಸಂಕಟಪಡಿಸುವೆನು.”—ಚೆಫನ್ಯ 1:14-17; ಹಬಕ್ಕೂಕ 2:3; 3:1-6, 16-19 ನ್ನೂ ನೋಡಿರಿ.
4. ದೇವರನ್ನು ತಿಳಿಯಲು ಮತ್ತು ಸೇವಿಸಲು ಇಂದು ಯಾರು ಆಮಂತ್ರಣವನ್ನು ಸ್ವೀಕರಿಸುತ್ತಿದ್ದಾರೆ?
4 ಸಂತೋಷಕರವಾಗಿ, ಇಂದು ಲಕ್ಷಾಂತರ ಜನರು ದೇವರನ್ನು ತಿಳಿಯಲು ಮತ್ತು ಸೇವಿಸಲು ಆಮಂತ್ರಣವನ್ನು ಸ್ವೀಕರಿಸುತ್ತಿದ್ದಾರೆ. ಹೊಸ ಒಡಂಬಡಿಕೆಯೊಳಗೆ ತರಲ್ಪಟ್ಟ ಅಭಿಷಿಕ್ತ ಉಳಿಕೆಯವರ ಕುರಿತು ಪ್ರವಾದಿಸಲ್ಪಟ್ಟದ್ದು: “ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ನನ್ನ ಜ್ಞಾನವನ್ನು ಪಡೆದಿರುವರು. . . . ಇದು ಯೆಹೋವನ ನುಡಿ.” (ಯೆರೆಮೀಯ 31:34) ಇವರು ಆಧುನಿಕ ಕಾಲದ ಸಾಕ್ಷಿಯ ಕಾರ್ಯವನ್ನು ಮುನ್ನುಗ್ಗಿಸಿದ್ದಾರೆ. ಮತ್ತು ಈಗ ಅಧಿಕಾಧಿಕ ಅಭಿಷಿಕ್ತ ಉಳಿಕೆಯವರು ತಮ್ಮ ಐಹಿಕ ಜೀವಿತವನ್ನು ಮುಗಿಸುತ್ತಾ ಇರುವಾಗ, “ಬೇರೆ ಕುರಿ” ಗಳ “ಮಹಾ ಸಮೂಹವು” ಮುಂದೆ ಬಂದು ಆತನ ಆಲಯದಂಥ ಏರ್ಪಾಡಿನಲ್ಲಿ ‘ಹಗಲಿರುಳು ಆತನ ಸೇವೆ ಮಾಡುತ್ತಾ ಇದ್ದಾರೆ.’ (ಪ್ರಕಟನೆ 7:9, 15; ಯೋಹಾನ 10:16) ಈ ಅಮೂಲ್ಯವಾದ ಸುಯೋಗವನ್ನು ಆನಂದಿಸುವವರಲ್ಲಿ ನೀವೂ ಒಬ್ಬರೋ?
“ಇಷ್ಟವಸ್ತುಗಳು” ಒಳಬರುವ ವಿಧ
5, 6. ಸಕಲ ಜನಾಂಗಗಳು ನಾಶಕ್ಕಾಗಿ ನಡುಗಿಸಲ್ಪಡುವ ಮುಂಚೆ, ಯಾವ ರಕ್ಷಣಾ ಕಾರ್ಯವು ನಡಿಸಲ್ಪಡುತ್ತದೆ?
5 ತನ್ನ ಆತ್ಮಿಕ ಆರಾಧನಾಲಯದ ಕುರಿತು ಎಲ್ಲಿ ಯೆಹೋವನು ಪ್ರವಾದಿಸುತ್ತಾನೋ ಆ ಹಗ್ಗಾಯ 2:7 ರ ಕಡೆಗೆ ನಾವೀಗ ತಿರುಗೋಣ. ಆತನನ್ನುವುದು: “ಸಕಲ ಜನಾಂಗಗಳನ್ನು ನಡುಗಿಸುವೆನು; ಆಗ ಸಮಸ್ತ ಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು ಈ ಆಲಯವನ್ನು ವೈಭವದಿಂದ ತುಂಬಿಸುವೆನು.” ‘ಜನಾಂಗಗಳ ನಡುಗಿಸುವಿಕೆಯು’ ಜನಾಂಗಗಳ ಮೇಲೆ ಯೆಹೋವನ ತೀರ್ಪಿನ ನಿರ್ವಹಣೆಗೆ ಸೂಚಿಸುತ್ತದೆ ಎಂದು ಬೈಬಲ್ ಪ್ರವಾದನೆಗಳು ತೋರಿಸುತ್ತವೆ. (ನಹೂಮ 1:5, 6; ಪ್ರಕಟನೆ 6:12-17) ಆದಕಾರಣ, ಹಗ್ಗಾಯ 2:7 ರಲ್ಲಿ ಪ್ರವಾದಿಸಲ್ಪಟ್ಟ ಯೆಹೋವನ ಕ್ರಿಯೆಯು, ಜನಾಂಗಗಳನ್ನು ಅಸ್ತಿತ್ವದೊಳಗಿಂದ ನಡುಗಿಸುವುದರಲ್ಲಿ—ನಿರ್ಮೂಲಗೊಳಿಸುವುದರಲ್ಲಿ ತನ್ನ ಪರಮಾವಧಿಯನ್ನು ತಲಪುವುದು. ಆದರೆ “ಸಮಸ್ತ ಜನಾಂಗಗಳ ಇಷ್ಟವಸ್ತುಗಳ” ಕುರಿತೇನು? ಅವನ್ನು ಒಳತರಲು ಆ ಕೊನೆಯ ನಾಶಕಾರಕ ನಡುಗಿಸುವಿಕೆಗಾಗಿ ಅವರು ಕಾಯಬೇಕೋ? ಇಲ್ಲ.
6 “ಯೆಹೋವನ ನಾಮವನ್ನು ಹೇಳಿಕೊಳ್ಳುವವರಿಗೆ ರಕ್ಷಣೆಯಾಗುವದು; ಯೆಹೋವನು ತಿಳಿಸಿದಂತೆ ಚೀಯೋನ್ ಪರ್ವತದಲ್ಲಿಯೂ ಯೆರೂಸಲೇಮಿನಲ್ಲಿಯೂ ಅನೇಕರು ಉಳಿದಿರುವರು. ಯೆಹೋವನು ಕರೆಯುವ ಜನಶೇಷದಲ್ಲಿ ಅವರು ಸೇರಿದವರಾಗಿರುವರು” ಎಂದು ಯೋವೇಲ 2:32 ತಿಳಿಸುತ್ತದೆ. ಯೆಹೋವನು ಅವರನ್ನು ಹೊರಗೆ ಸೆಳೆಯುತ್ತಾನೆ, ಮತ್ತು ಮಹಾ ಸಂಕಟದ ಪರಮಾವಧಿಯ ನಡುಗಿಸುವಿಕೆಗೆ ಮುಂಚೆ ಯೇಸುವಿನ ಯಜ್ಞದಲ್ಲಿ ನಂಬಿಕೆಯೊಂದಿಗೆ ಅವರು ಆತನ ನಾಮವನ್ನು ಹೇಳಿಕೊಳ್ಳುತ್ತಾರೆ. (ಯೋಹಾನ 6:44 ಕ್ಕೆ ಹೋಲಿಸಿರಿ; ಅ.ಕೃತ್ಯಗಳು 2:38, 39.) ಸಂತೋಷಕರವಾಗಿ, ಈಗ ನಾಲ್ವತ್ತು ಲಕ್ಷಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿರುವ ಆ ಅಮೂಲ್ಯ ಮಹಾ ಸಮೂಹದವರು ಹರ್ಮಗೆದ್ದೋನಿನಲ್ಲಿ ‘ಸಮಸ್ತ ಜನಾಂಗಗಳ ನಡುಗಿಸುವಿಕೆಯ’ ಮುನ್ನೋಟದಲ್ಲಿ, ಯೆಹೋವನ ಆರಾಧನಾಲಯದೊಳಗೆ ‘ಬರುತ್ತಿದ್ದಾರೆ.’—ಪ್ರಕಟಣೆ 7:9, 10, 14.
7. ‘ಯೆಹೋವನ ನಾಮವನ್ನು ಹೇಳಿಕೊಳ್ಳುವದರಲ್ಲಿ’ ಯಾವುದು ಒಳಗೂಡಿಯದೆ?
7 ಪಾರಾಗುವ ಈ ಜನರು ಯೆಹೋವನ ಹೆಸರನ್ನು ಹೇಳಿಕೊಳ್ಳುವುದು ಹೇಗೆ? ಯಾಕೋಬ 4:8 ನಮಗೆ ಅದನ್ನು ಸೂಚಿಸುತ್ತಾ ಅನ್ನುವುದು: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು. ಪಾಪಿಗಳೇ, ನಿಮ್ಮ ಕೈಗಳನ್ನು ಶುಚಿಮಾಡಿಕೊಳ್ಳಿರಿ. ಎರಡು ಮನಸ್ಸುಳ್ಳವರೇ, ನಿಮ್ಮ ಹೃದಯಗಳನ್ನು ನಿರ್ಮಲಮಾಡಿಕೊಳ್ಳಿರಿ.” ನಾಯಕತ್ವವನ್ನು ಕೊಟ್ಟ ಅಭಿಷಿಕ್ತ ಉಳಿಕೆಯವರಂತೆ, ಹರ್ಮಗೆದ್ದೋನನ್ನು ಪಾರಾಗುವ ಮಹಾ ಸಮೂಹದಲ್ಲಿರಲು ನಿರೀಕ್ಷಿಸುವವರೂ ನಿರ್ಧಾರದಿಂದ ಕ್ರಿಯೆಗೈಯಬೇಕು. ಪಾರಾಗಲು ನೀವು ನಿರೀಕ್ಷಿಸುವುದಾದ, ಯೆಹೋವನ ಶುದ್ಧೀಕರಿಸುವ ವಾಕ್ಯದಿಂದ ಆಳವಾಗಿ ಕುಡಿಯಬೇಕು ಮತ್ತು ಆತನ ನೀತಿಯುಳ್ಳ ಮಟ್ಟಗಳನ್ನು ನಿಮ್ಮ ಜೀವಿತದಲ್ಲಿ ಅನ್ವಯಿಸಿಕೊಳ್ಳಬೇಕು. ನಿಮ್ಮ ಜೀವವನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳಲು ನಿರ್ಧಾರವುಳ್ಳವರಾಗಿ, ಅದನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸೂಚಿಸಬೇಕು. ನಂಬಿಕೆಯಲ್ಲಿ ಯೆಹೋವನ ನಾಮವನ್ನು ಹೇಳಿಕೊಳ್ಳುವದರಲ್ಲಿ ಆತನಿಗಾಗಿ ಸಾಕ್ಷಿಕೊಡುವುದೂ ಸೇರಿದೆ. ಹೀಗೆ, ರೋಮಾಪುರ 10 ನೆಯ ಅಧ್ಯಾಯ, 9 ಮತ್ತು 10 ನೆಯ ವಚನಗಳಲ್ಲಿ ಪೌಲನು ಬರೆಯುವುದು: “ನೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆ ಮಾಡಿಕೊಂಡು ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬಿದರೆ ನಿನಗೆ ರಕ್ಷಣೆಯಾಗುವದು ಎಂಬದೇ. ಹೃದಯದಿಂದ ನಂಬುವದರ ಮೂಲಕ ನೀತಿಯು ದೊರಕುತ್ತದೆ. ಬಾಯಿಂದ [ಬಹಿರಂಗ, NW] ಅರಿಕೆ ಮಾಡುವದರ ಮೂಲಕ ರಕ್ಷಣೆಯಾಗುತ್ತದೆ.” ಅನಂತರ 13 ನೆಯ ವಚನದಲ್ಲಿ, ಅಪೊಸ್ತಲನು ಯೋವೇಲನ ಪ್ರವಾದನೆಯನ್ನು ಉಲ್ಲೇಖಿಸುತ್ತಾ, “ಕರ್ತನ [ಯೆಹೋವನ, NW] ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದು” ಎಂದು ಒತ್ತಿಹೇಳಿದ್ದಾನೆ.
‘ಹುಡುಕಿರಿ, ಹುಡುಕಿರಿ, ಹುಡುಕಿರಿ’
8. (ಎ) ಪ್ರವಾದಿ ಚೆಫನ್ಯನಿಗೆ ಅನುಸಾರವಾಗಿ, ಯೆಹೋವನು ರಕ್ಷಣೆಗಾಗಿ ಏನನ್ನು ಕೇಳಿಕೊಳ್ಳುತ್ತಾನೆ? (ಬಿ) ಚೆಫನ್ಯ 2:3 ರ “ಒಂದುವೇಳೆ” ಎಂಬ ಶಬ್ದವು ಯಾವ ಎಚ್ಚರಿಕೆಯನ್ನು ನಮಗೆ ಸೂಚಿಸುತ್ತದೆ?
8 ಚೆಫನ್ಯ 2 ನೆಯ ಅಧ್ಯಾಯ, 2 ಮತ್ತು 3 ನೆಯ ವಚನಗಳಿಗೆ ತಿರುಗುವಾಗ, ರಕ್ಷಣೆಗಾಗಿ ಯೆಹೋವನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆಂದು ನಾವು ಓದುತ್ತೇವೆ: “ಯೆಹೋವನ ನಿಯಮವನ್ನು ಕೈಕೊಂಡ ಲೋಕದ ದೀನರೇ, ನೀವೆಲ್ಲರೂ ಯೆಹೋವನನ್ನು ಆಶ್ರಯಿಸಿರಿ [ಹುಡುಕಿರಿ, NW] ಸದ್ಧರ್ಮವನ್ನು ಅಭ್ಯಾಸಿಸಿರಿ [ಹುಡುಕಿರಿ, NW] ದೈನ್ಯವನ್ನು ಹೊಂದಿಕೊಳ್ಳಿರಿ [ಹುಡುಕಿರಿ, NW]; ಯೆಹೋವನ ಸಿಟ್ಟಿನ ದಿನದಲ್ಲಿ ಒಂದುವೇಳೆ ಮರೆಯಾಗುವಿರಿ.” “ಒಂದುವೇಳೆ” ಎಂಬ ಶಬ್ದವನ್ನು ಗಮನಿಸಿರಿ. ಒಮ್ಮೆ ರಕ್ಷಣೆಯು ಯಾವಾಗಲೂ ರಕ್ಷಣೆ ಎಂಬ ಸಂಗತಿಯು ಅದಲ್ಲ. ಆ ದಿನದಲ್ಲಿ ನಮ್ಮ ಮರೆಯಾಗುವಿಕೆಯು ಆ ಮೂರು ವಿಷಯಗಳನ್ನು ಮಾಡುತ್ತಾ ಮುಂದುವರಿಯುವ ಮೇಲೆ ಹೊಂದಿಕೊಂಡಿದೆ. ನಾವು ಯೆಹೋವನನ್ನು ಹುಡುಕಬೇಕು, ನೀತಿಯನ್ನು ಹುಡುಕಬೇಕು, ಮತ್ತು ಧೈನ್ಯವನ್ನು ಹುಡುಕಬೇಕು.
9. ಯಾರು ದೈನ್ಯವನ್ನು ಹುಡುಕುತ್ತಾರೋ ಅವರಿಗೆ ಹೇಗೆ ಪ್ರತಿಫಲ ಸಿಗುತ್ತದೆ?
9 ದೈನ್ಯವನ್ನು ಹುಡುಕುವುದಕ್ಕಾಗಿ ಇರುವ ಪ್ರತಿಫಲವಾದರೋ ನಿಶ್ಚಯವಾಗಿಯೂ ಆಶ್ಚರ್ಯಕರ! ಕೀರ್ತನೆ 37, 9 ರಿಂದ 11 ನೆಯ ವಚನಗಳಲ್ಲಿ ನಾವು ಓದುವುದು: “ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು. ಇನ್ನು ಸ್ವಲ್ಪ ಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; . . . ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾ ಸೌಖ್ಯದಿಂದ ಆನಂದಿಸುವರು.” ಮತ್ತು ನೀತಿಯನ್ನು ಹುಡುಕುವುದರ ವಿಷಯದಲ್ಲೇನು? 29 ನೆಯ ವಚನ ಹೇಳುವುದು: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” ಯೆಹೋವನನ್ನು ಹುಡುಕುವ ವಿಷಯದಲ್ಲಾದರೋ, 39 ಮತ್ತು 40 ನೆಯ ವಚನಗಳು ನಮಗೆ ಹೇಳುವುದು: “ನೀತಿವಂತರ ರಕ್ಷಣೆ ಯೆಹೋವನಿಂದಲೇ. ಇಕ್ಕಟ್ಟಿನಲ್ಲಿ ಆತನೇ ಅವರಿಗೆ ದುರ್ಗಸ್ಥಾನ. ಯೆಹೋವನು ಸಹಾಯಕನಾಗಿ ಅವರನ್ನು ತಪ್ಪಿಸಿಬಿಡುವನು; ಅವರು ಆತನ ಆಶ್ರಿತರಾದರ್ದಿಂದ ದುಷ್ಟರ ಕೈಯಿಂದ ತಪ್ಪಿಸಿ ರಕ್ಷಿಸುವನು.”
10. ಯೆಹೋವನನ್ನು ಹುಡುಕಲು ಮತ್ತು ದೈನ್ಯವನ್ನು ಹುಡುಕಲು ನಿರಾಕರಿಸುವುದರಲ್ಲಿ ಯಾರು ಗಮನಾರ್ಹರಾಗಿರುತ್ತಾರೆ?
10 ಕ್ರೈಸ್ತ ಪ್ರಪಂಚದ ಧರ್ಮ ಪಂಗಡಗಳು ಯೆಹೋವನನ್ನು ಹುಡುಕಲು ತಪ್ಪಿವೆ. ಅವುಗಳ ವೈದಿಕರು ಆತನ ಅಮೂಲ್ಯವಾದ ಹೆಸರನ್ನು ಸಹ ಪರಿತ್ಯಜಿಸಿದ್ದಾರೆ, ತಮ್ಮ ಬೈಬಲ್ ತರ್ಜುಮೆಗಳಿಂದಲೂ ದರ್ಪದಿಂದ ಅದನ್ನು ತೆಗೆದುಹಾಕಿದ್ದಾರೆ. ಒಂದು ಅನಾಮಧೇಯ ಕರ್ತನನ್ನು ಅಥವಾ ದೇವರನ್ನು ಆರಾಧಿಸಲು ಮತ್ತು ಒಂದು ವಿಧರ್ಮಿ ತ್ರಯೈಕ್ಯವನ್ನು ಪೂಜಿಸಲು ಅವರು ಇಷ್ಟೈಸುತ್ತಾರೆ. ಅದಲ್ಲದೆ, ಕ್ರೈಸ್ತಪ್ರಪಂಚವು ನೀತಿಯನ್ನು ಹುಡುಕುವುದಿಲ್ಲ. ಅದರ ಹೆಚ್ಚಿನ ಅವಲಂಬಿಗಳು ಸ್ವೇಚ್ಛಾಚಾರದ ಜೀವನ-ಶೈಲಿಗಳನ್ನು ಸ್ವೀಕರಿಸುತ್ತಾರೆ ಅಥವಾ ಪೋಷಿಸುತ್ತಾರೆ. ಯೇಸುವಿನಂತೆ ದೈನ್ಯವನ್ನು ಹುಡುಕುವ ಬದಲಿಗೆ, ಸುಖಭೋಗದ ಮತ್ತು ಹೆಚ್ಚಾಗಿ ಅನೈತಿಕ ಜೀವನಕ್ರಮವನ್ನು ಟೆಲಿವಿಷನ್ ಮೇಲೆ ಬೆಡಗಿನಿಂದ ಪ್ರದರ್ಶಿಸುತ್ತಾರೆ. ಪಾದ್ರಿಗಳು ತಮ್ಮ ಹಿಂಡಿನ ವೆಚ್ಚದಿಂದ ತಮ್ಮನ್ನು ಕೊಬ್ಬಿಸಿಕೊಳ್ಳುತ್ತಾರೆ. ಯಾಕೋಬ 5:5 ರ ಮಾತುಗಳಲ್ಲಿ, ಅವರು “ಭೂಲೋಕದಲ್ಲಿ ಅತಿ ಭೋಗಿಗಳಾಗಿ ಬದುಕಿ ಮನಸ್ಸು ಬಂದಂತೆ ನಡಕೊಂಡಿ” ದ್ದಾರೆ. ಯೆಹೋವನ ದಿನವು ಸಮೀಪವಾದಂತೆ, ಈ ಪ್ರೇರಿತ ಮಾತುಗಳು ತಮಗೆ ಅನ್ವಯಿಸುವುದನ್ನು ಅವರ ಖಂಡಿತವಾಗಿಯೂ ಕಾಣುವರು: “ಧನವು ಕೋಪದ ದಿನದಲ್ಲಿ ವ್ಯರ್ಥ.”—ಜ್ಞಾನೋಕ್ತಿ 11:4.
11. ಅಧರ್ಮ ಪುರುಷನು ಯಾರು ಮತ್ತು ಅವನು ರಕ್ತಾಪರಾಧದ ದೊಡ್ಡ ಹೊರೆಯನ್ನು ಹೊತ್ತಿರುವುದು ಹೇಗೆ?
11 ಸಾ.ಶ. ಮೊದಲನೆಯ ಶತಮಾನದಲ್ಲಿ, ಅಪೊಸ್ತಲ ಪೌಲನು ಥೆಸಲೊನೀಕದವರಿಗೆ ಬರೆದ ಎರಡನೆಯ ಪತ್ರದಲ್ಲಿ ತಿಳಿಸುವ ಮೇರೆಗೆ, ಕೆಲವು ಕ್ರೈಸ್ತರು ಭಾವೋದ್ರೇಕಗೊಂಡವರಾಗಿ, ಯೆಹೋವನ ದಿನವು ತಮ್ಮ ಮೇಲೆ ಆಗಲೇ ಬಂದಿದೆ ಎಂದು ನೆನಸಿದರು. ಆದರೆ ಮೊದಲು “ಮತಭ್ರಷ್ಟತೆಯು” ಉಂಟಾಗಿ “ಅಧರ್ಮಸ್ವರೂಪನು” ಬೈಲಿಗೆ ಬರಬೇಕೆಂದು ಪೌಲನು ಎಚ್ಚರಿಸಿದನು. (2 ಥೆಸಲೊನೀಕ 2:1-3) ಈಗ, ಈ 20 ನೆಯ ಶತಮಾನದಲ್ಲಿ, ಆ ಮತ ಭ್ರಷ್ಟತೆಯ ಮಹಾ ವಿಸ್ತಾರ್ಯವನ್ನು ಮತ್ತು ದೇವರ ದೃಷ್ಟಿಯಲ್ಲಿ ಕ್ರೈಸ್ತ ಪ್ರಪಂಚದ ವೈದಿಕರು ಎಷ್ಟು ನಿಯಮರಾಹಿತ್ಯರೆಂಬದನ್ನು ನಾವು ತಿಳುಕೊಳ್ಳ ಸಾಧ್ಯವಿದೆ. 1914 ರಿಂದ ಈ ಕಡೇ ದಿನಗಳಲ್ಲಿ, ‘ಗುಳಗಳನ್ನು ಕತ್ತಿಗಳಾಗಿ’ ಬಡೆದು ಯುದ್ಧವನ್ನು ಬೆಂಬಲಿಸಿದ ಮೂಲಕ ವೈದಿಕರು ಒಂದು ಪ್ರಚಂಡವಾದ ರಕ್ತಾಪರಾಧವನ್ನು ಹೊರಿಸಿಕೊಂಡಿದ್ದಾರೆ. (ಯೋವೇಲ 3:10) ಮಾನವಾತ್ಮದ ಅಂತರ್ಗತ ಅಮರತ್ವ, ಪರ್ಗೆಟರಿ, ನರಕಾಗ್ನಿ ಯಾತನೆ, ಶಿಶು ಸ್ನಾನ, ತ್ರಯೈಕ್ಯ ಮುಂತಾದ ಸುಳ್ಳು ಬೋಧನೆಗಳನ್ನು ಕಲಿಸುವುದನ್ನು ಸಹ ಅವರು ಮುಂದರಿಸಿದ್ದಾರೆ. ಯೆಹೋವನು ತನ್ನ ನ್ಯಾಯ ನಿರ್ಣಾಯಕ ತೀರ್ಪನ್ನು ನಿರ್ವಹಿಸುವಾಗ ಅವರು ಎಲ್ಲಿ ನಿಂತಾರು? ಜ್ಞಾನೋಕ್ತಿ 19:5 ಹೇಳುವುದು: “ಸುಳ್ಳಾಡುವವನು ತಪ್ಪಿಸಿಕೊಳ್ಳನು.”
12. (ಎ) ಬೇಗನೇ ನಾಶಮಾಡಲ್ಪಡಲಿರುವ ಮಾನವ “ಆಕಾಶಮಂಡಲ” ಮತ್ತು “ಭೂಮಂಡಲ” ಗಳು ಯಾವುವು? (ಬಿ) ಈ ದುಷ್ಟಲೋಕದ ಬರಲಿರುವ ನಾಶನದಿಂದ ನಾವೇನನ್ನು ಕಲಿಯುತ್ತೇವೆ?
12 2 ಪೇತ್ರ 3:10 ರಲ್ಲಿ ನಾವು ಓದುವುದು: “ಕರ್ತನ [ಯೆಹೋವನ, NW] ದಿನವು ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ ಆಕಾಶಮಂಡಲವು ಮಹಾ ಘೋಷದಿಂದ ಇಲ್ಲದೆ ಹೋಗುವದು, ಸೂರ್ಯ ಚಂದ್ರ ನಕ್ಷತ್ರಗಳು [ಘಟಕಾಂಶಗಳು, NW] ಉರಿದು ಲಯವಾಗಿ ಹೋಗುವವು, ಭೂಮಿಯೂ ಅದರಲ್ಲಿರುವ ಎಲ್ಲಾ ಕೆಲಸಗಳೂ ಸುಟ್ಟುಹೋಗುವವು [ಕಂಡುಬರುವವು, NW].” ಮಾನವರ ಮೇಲೆ ಆಕಾಶಮಂಡಲದಂತೆ ಪೂರ್ಣವಾಗಿ ಆವರಿಸಿರುವ ಭ್ರಷ್ಟ ಆಡಳಿತಗಳು, ಅವುಗಳೊಂದಿಗೆ ಇಂದಿನ ಅವನತಿಗಿಳಿದ ಮಾನವ ಸಮಾಜದಲ್ಲಿ ಕೂಡಿರುವ ಎಲ್ಲಾ ಘಟಕಾಂಶಗಳು, ದೇವರ ಭೂಮಿಯೊಳಗಿಂದ ಕಿತ್ತು ಹಾಕಲ್ಪಡುವವು. ವಿನಾಶಕಾಲದ ಶಸ್ತ್ರಗಳ ಉತ್ಪಾದಕರು ಮತ್ತು ವ್ಯಾಪಾರಿಗಳು, ಮೋಸಗಾರರು, ಡಾಂಭಿಕರಾದ ಧರ್ಮ ಸದಸ್ಯರು ಮತ್ತು ಅವರ ವೈದಿಕರು, ನೀತಿಭ್ರಷ್ಟತೆ, ಹಿಂಸಾಚಾರ ಮತ್ತು ಪಾತಕದ ಪ್ರವರ್ಧಕರು—ಇವರೆಲ್ಲರೂ ಕಾಣೆಯಾಗಿ ಹೋಗುವರು. ಅವರು ಯೆಹೋವನ ಕ್ರೋಧದಿಂದ ಕರಗಿ ಲಯವಾಗಿ ಹೋಗುವರು. ಆದರೆ 11 ಮತ್ತು 12 ನೆಯ ವಚನದಲ್ಲಿ ಪೇತ್ರನು ಕ್ರೈಸ್ತರಿಗೆ ಈ ಎಚ್ಚರಿಕೆಯನ್ನು ಕೂಡಿಸುತ್ತಾನೆ: “ಇವೆಲ್ಲವು ಹೀಗೆ ಲಯವಾಗಿ ಹೋಗುವದರಿಂದ ನೀವು ದೇವರ [ಯೆಹೋವನ, NW] ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಹಾರೈಸುತ್ತಾ [ಮನಸ್ಸಿನಲ್ಲಿ ನಿಕಟವಾಗಿ ಇಡುತ್ತಾ, NW] ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕಲ್ಲಾ.”
ಮೀಕಾಯೇಲನು ಕ್ರಿಯೆ ಕೈಕೊಳ್ಳುತ್ತಾನೆ!
13, 14. ಯೆಹೋವನ ಆಡಳಿತದ ಮಹಾ ನಿರ್ದೋಷೀಕರಣವನ್ನು ಮಾಡುವಾತನು ಯಾರು, ಮತ್ತು 1914 ರಿಂದ ಅವನು ಹೇಗೆ ಕ್ರಿಯಾಶೀಲನಾಗಿದ್ದಾನೆ?
13 ಯೆಹೋವನ “ಸಂಕಟದ ಸಮಯ” ದ ಅವಧಿಯಲ್ಲಿ ಯಾರಾದರೂ ಪಾರಾಗುವುದು ಹೇಗೆ? ರಕ್ಷಣೆಯನ್ನು ಒದಗಿಸುವುದಕ್ಕಾಗಿ ದೇವರ ಕಾರ್ಯಭಾರಿಯು, ಯಾರ ಹೆಸರಿಗೆ “ದೇವರಂತಿರುವವನು ಯಾರು?” ಎಂಬರ್ಥವಿದೆಯೇ ಆ ಪ್ರಧಾನದೂತ ಮೀಕಾಯೇಲನಾಗಿದ್ದಾನೆ. ಹೀಗಿರಲಾಗಿ, ಯುಕ್ತವಾಗಿಯೇ, ಯೆಹೋವನೊಬ್ಬನೇ ಸತ್ಯ ದೇವರೆಂದೂ ವಿಶ್ವವೆಲ್ಲಾದರ ನ್ಯಾಯಬದ್ಧ ಸಾರ್ವಭೌಮ ಕರ್ತನೆಂದೂ ಎತ್ತಿಹಿಡಿದು, ಯೆಹೋವನ ಆಡಳಿತವನ್ನು ನಿರ್ದೋಷೀಕರಿಸುವವನು ಆತನೇ ಆಗಿರುವನು.
14 1914 ರಿಂದ “ಕರ್ತನ ದಿನ” ದ ಕುರಿತಾದ ಎಂತಹ ಗಮನಾರ್ಹ ಘಟನೆಗಳನ್ನು ಪ್ರಕಟನೆ 12 ನೆಯ ಅಧ್ಯಾಯ, 7 ರಿಂದ 17 ನೆಯ ವಚನಗಳು ವರ್ಣಿಸುತ್ತವೆ! (ಪ್ರಕಟನೆ 1:10) ಪ್ರಧಾನದೂತ ಮೀಕಾಯೇಲನು ಸ್ವಪಕ್ಷದ್ರೋಹಿಯಾದ ಸೈತಾನನನ್ನು ಪರಲೋಕದಿಂದ ಭೂಮಿಗೆ ದೊಬ್ಬಿಬಿಡುತ್ತಾನೆ. ಅನಂತರ, ಪ್ರಕಟನೆ 19 ನೆಯ ಅಧ್ಯಾಯ, 11 ರಿಂದ 16 ನೆಯ ವಚನಗಳಲ್ಲಿ ವರ್ಣಿಸಲ್ಪಟ್ಟ ಪ್ರಕಾರ, “ನಂಬಿಗಸ್ತನೂ ಸತ್ಯವಂತನೂ” ಎಂದು ಕರೆಯಲ್ಪಟ್ಟವನು, ‘ಸರ್ವಶಕ್ತನಾದ ದೇವರ ರೌದ್ರವೆಂಬ ತೊಟ್ಟಿಯಲ್ಲಿ ತುಳಿಯುತ್ತಾನೆ.’ ಈ ಪರಾಕ್ರಮಿಯಾದ ಯೋಧನು “ರಾಜಾಧಿರಾಜನೂ ಕರ್ತರ ಕರ್ತನೂ” ಎಂಬ ಹೆಸರುಳ್ಳವನಾಗಿದ್ದಾನೆ. ಕೊನೆಗೆ, ಪ್ರಕಟನೆ 20 ನೆಯ ಅಧ್ಯಾಯ, 1 ಮತ್ತು 2 ನೆಯ ವಚನಗಳು, ಸೈತಾನನನ್ನು ಅಧೋಲೋಕಕ್ಕೆ ದೊಬ್ಬಿದ ಮತ್ತು ಅವನನ್ನು ಒಂದು ಸಾವಿರ ವರ್ಷ ಸೆರೆಯಲ್ಲಿಟ್ಟ ಒಬ್ಬ ಮಹಾ ದೇವದೂತನ ಕುರಿತು ತಿಳಿಸುತ್ತವೆ. ಈ ಎಲ್ಲಾ ಶಾಸ್ತ್ರವಚನಗಳು, ಯಾರನ್ನು ಯೆಹೋವನು 1914 ರಲ್ಲಿ ತನ್ನ ಮಹಿಮೆಯುಳ್ಳ ಸಿಂಹಾಸನದಲ್ಲಿ ಕೂಡ್ರಿಸಿದ್ದಾನೋ ಮತ್ತು ಯಾರು ಯೆಹೋವನ ಸಾರ್ವಭೌಮತೆಯ ಏಕೈಕ ಸಮರ್ಥಕನೋ ಆ ಕರ್ತನಾದ ಯೇಸು ಕ್ರಿಸ್ತನಿಗೆ ಕೈತೋರಿಸುತ್ತವೆ.
15. ಯಾವ ವಿಶೇಷ ರೀತಿಯಲ್ಲಿ ಮೀಕಾಯೇಲನು ಬೇಗನೇ “ನಿಲ್ಲುತ್ತಾನೆ”?
15 ದಾನಿಯೇಲ 12:1, [NW] ರಲ್ಲಿ ತಿಳಿಸಿದ ಪ್ರಕಾರ, ಮೀಕಾಯೇಲನು 1914 ರಲ್ಲಿ ಅವನು ರಾಜನಾಗಿ ಮಾಡಲ್ಪಟ್ಟಂದಿನಿಂದ, ಯೆಹೋವನ ಜನರ ಪರವಾಗಿ “ನಿಂತಿರುತ್ತಾನೆ.” ಆದರೆ ಬೇಗನೇ ಮೀಕಾಯೇಲನು ಒಂದು ವಿಶೇಷಾರ್ಥದಲ್ಲಿ—ಭೂಮಿಯಿಂದ ಎಲ್ಲಾ ದುಷ್ಟತನವನ್ನು ತೆಗೆದು ಹಾಕುವುದರಲ್ಲಿ ಮತ್ತು ದೇವ ಜನರ ವಿಶ್ವವ್ಯಾಪಕ ಸಮಾಜದ ವಿಮೋಚಕನೋಪಾದಿ “ಎದ್ದು ನಿಲ್ಲ” ಲಿದ್ದಾನೆ. ಆ “ಸಂಕಟದ ಸಮಯವು” ಎಷ್ಟು ದೊಡ್ಡದಿದೆ ಎಂಬದು ಮತ್ತಾಯ 24:21, 22ರ ಯೇಸುವಿನ ಮಾತುಗಳಲ್ಲಿ ಸೂಚಿಸಲ್ಪಟ್ಟಿದೆ: “ಅಂಥ ಸಂಕಟವು ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನ ವರೆಗೂ ಆಗಲಿಲ್ಲ, ಇನ್ನು ಮೇಲೆಯೂ ಆಗುವದಿಲ್ಲ. ಕರ್ತನು [ಯೆಹೋವನು, NW] ಆ ದಿನಗಳನ್ನು ಕಡಿಮೆಮಾಡದಿದ್ದರೆ ಒಂದು ನರಪ್ರಾಣಿಯಾದರೂ ಉಳಿಯದು. ಆದರೆ ತಾನು ಆದುಕೊಂಡವರಿಗೋಸ್ಕರ ಆ ದಿನಗಳನ್ನು ಕಡಿಮೆ ಮಾಡುವನು.”
16. ಮಹಾ ಸಂಕಟದ ಸಮಯದಲ್ಲಿ ಯಾವ ನರಪ್ರಾಣಿ ಉಳಿಯುವದು?
16 ಆ ಸಮಯದಲ್ಲಿ ಕೆಲವರಾದರೂ ಪಾರಾಗಿ ಉಳಿಯುವರೆಂಬದಕ್ಕಾಗಿ ನಾವೆಷ್ಟು ಸಂತೋಷಪಡಸಾಧ್ಯವಿದೆ! ಅಲ್ಲ, ಸಾ.ಶ. 70 ರಲ್ಲಿ ಯೆರೂಸಲೇಮಿನಲ್ಲಿ ಪಾಶಕ್ಕೆ ಸಿಕ್ಕಿಬಿದ್ದ ಆ ದಂಗೆಖೋರ ಯೆಹೂದ್ಯರಲ್ಲಿ ಯಾರು ರೋಮಿಗೆ ಸೆರೆಯಾಳುಗಳಾಗಿ ಒಯ್ಯಲ್ಪಟ್ಟರೋ ಅವರಂತೆ ಅಲ್ಲ. ಬದಲಿಗೆ ಯಾರು “ಅಂತ್ಯಕಾಲವನ್ನು” ಪಾರಾಗುವರೋ ಅವರು ಯೆರೂಸಲೇಮಿನ ಕೊನೆಯ ಮುತ್ತಿಗೆ ಆರಂಭಿಸಿದಾಗ ಮೊದಲೇ ಯೆರೂಸಲೇಮನ್ನು ಬಿಟ್ಟು ಪಲಾಯನಮಾಡಿದ ಕ್ರೈಸ್ತ ಸಭೆಯವರಂತಿರುವರು. ಅವರು ದೇವರ ಸಕ್ವೀಯ ಜನರಾಗಿರುವರು, ಲಕ್ಷಾಂತರ ಮಂದಿ ಮಹಾ ಸಮೂಹದವರು ಹಾಗೂ ಅವರೊಂದಿಗೆ ಭೂಮಿಯಲ್ಲಿ ಇನ್ನೂ ಉಳಿದಿರಬಹುದಾದ ಯಾರೇ ಉಳಿಕೆಯವರು ಅವರಾಗಿರುವರು. (ದಾನಿಯೇಲ 12:4) ಮಹಾ ಸಮೂಹದವರು “ಮಹಾ ಸಂಕಟದೊಳಗಿಂದ ಪಾರಾಗಿ” ಬರುವರು. ಏಕೆ? ಏಕೆಂದರೆ “ಅವರು ತಮ್ಮ ನಿಲುವಂಗಿಗಳನ್ನು ಯಜ್ಞದ ಕುರಿಯಾದಾತನ ರಕ್ತದಲ್ಲಿ ತೊಳೆದು ಶುಭ್ರಮಾಡಿದ್ದಾರೆ.” ಯೇಸುವಿನ ಸುರಿದ ರಕ್ತದ ವಿಮೋಚನಾ ಶಕ್ತಿಯಲ್ಲಿ ಅವರು ನಂಬಿಕೆಯಿಡುತ್ತಾರೆ ಮತ್ತು ದೇವರನ್ನು ನಿಷ್ಠೆಯಿಂದ ಸೇವಿಸುವ ಮೂಲಕ ಆ ನಂಬಿಕೆಯನ್ನು ಪ್ರದರ್ಶಿಸುತ್ತಾರೆ. “ಸಿಂಹಾಸನದಲ್ಲಿ ಕೂತಿರುವಾತನಾದ” ಯೆಹೋವನು, ಈಗ ಸಹ, ತನ್ನ ರಕ್ಷಣೆಯ ಗುಡಾರವನ್ನು ಅವರ ಮೇಲೆ ಆವರಿಸುತ್ತಾನೆ ಮತ್ತು ಕುರಿಮರಿಯಾದ ಕ್ರಿಸ್ತ ಯೇಸುವು ಅವರಿಗೆ ಕುರುಬನಂತಿದ್ದು ಜೀವಜಲದ ಒರತೆಗಳ ಬಳಿಗೆ ನಡಿಸುತ್ತಾನೆ.—ಪ್ರಕಟನೆ 7:14, 15.
17. ಬರಲಿರುವ ಸಂಕಟದ ಸಮಯದಲ್ಲಿ ರಕ್ಷಿಸಲ್ಪಡುವಂತೆ ಕ್ರಿಯೆಗೈಯಲು ವಿಶೇಷವಾಗಿ ಮಹಾ ಸಮೂಹವು ಪ್ರೋತ್ಸಾಹಿಸಲ್ಪಡುವುದು ಹೇಗೆ?
17 ಯೆಹೋವನನ್ನು, ನೀತಿಯನ್ನು ಮತ್ತು ದೈನ್ಯವನ್ನು ಹುಡುಕುವುದರಲ್ಲಿ, ಮಹಾ ಸಮೂಹದವರು ಸತ್ಯಕ್ಕಾಗಿ ತಮಗಿದ್ದ ಮೊದಲ ಪ್ರೀತಿಯು ತಣ್ಣಗಾಗಿ ಹೋಗುವಂತೆ ಎಂದೂ ಬಿಡಬಾರದು! ಈ ಕುರಿಸದೃಶರಾದ ಜನರಲ್ಲಿ ನೀವೂ ಒಬ್ಬರಾಗಿದ್ದರೆ, ನೀವೇನು ಮಾಡಬೇಕು? ಕೊಲೊಸ್ಸೆ 3 ನೆಯ ಅಧ್ಯಾಯ, 5 ರಿಂದ 14 ರ ವಚನಗಳು ತಿಳಿಸುವ ಮೇರೆಗೆ, “ಪೂರ್ವ ಸ್ವಭಾವವನ್ನು ಅದರ ಕೃತ್ಯಗಳ ಕೂಡ ತೆಗೆದಿಡಬೇಕು. [ತೊಡೆದು ಹಾಕಬೇಕು, NW]” ದೈವಿಕ ಸಹಾಯವನ್ನು ಹುಡುಕುತ್ತಾ, ‘ನಿಷ್ಕೃಷ್ಟ ಜ್ಞಾನದಲ್ಲಿ ಆಧಾರಿಸಿದ ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಬೇಕು.’ ದೈನ್ಯದಲ್ಲಿ, ಯೆಹೋವನನ್ನು ಸ್ತುತಿಸುವುದರಲ್ಲಿ ಮತ್ತು ಆತನ ಮಹಾ ಉದ್ದೇಶಗಳನ್ನು ಇತರರಿಗೆ ತಿಳಿಯಪಡಿಸುವುದರಲ್ಲಿ ಹುರುಪನ್ನು ವೃದ್ಧಿಮಾಡಿರಿ ಮತ್ತು ಕಾಪಾಡಿಕೊಳ್ಳಿರಿ. ಹೀಗೆ, “ಯೆಹೋವನ ರೋಷಾಗ್ನಿಯ ದಿನ” ವಾದ ಆ “ಸಂಕಟದ ಸಮಯವನ್ನು” ಒಂದುವೇಳೆ ಪಾರಾಗಬಲ್ಲಿರಿ.
18, 19. ಯಾವ ರೀತಿಯಲ್ಲಿ ತಾಳ್ಮೆಯು ರಕ್ಷಣೆಗಾಗಿ ಅತ್ಯಾವಶ್ಯಕವಾಗಿ ಪರಿಣಮಿಸಿದೆ?
18 ಆ ದಿನವು ಹತ್ತಿರವಾಗಿದೆ! ಅದು ನಮ್ಮ ಕಡೆಗೆ ಧಾವಿಸುತ್ತಾ ಇದೆ. ಈಗ ಸುಮಾರು 57 ವರ್ಷಗಳಿಂದ ಮಹಾ ಸಮೂಹದ ಜನರ ಒಟ್ಟುಗೂಡಿಸುವಿಕೆಯು ಮುಂದುವರಿಯುತ್ತಾ ಇದೆ. ಇವರಲ್ಲಿ ಹಲವಾರು ಮಂದಿ ಸತ್ತಿರುತ್ತಾರೆ ಮತ್ತು ತಮ್ಮ ಪುನರುತ್ಥಾನವನ್ನು ಎದುರುನೋಡುತ್ತಿದ್ದಾರೆ. ಆದರೆ ಮಹಾ ಸಮೂಹವು “ಒಂದು ಹೊಸ ಲೋಕ” [NW] ಸಮಾಜದ ಮೂಲಭಾಗವಾಗಿ ಮಹಾ ಸಂಕಟವನ್ನು ಒಂದು ಗುಂಪಾಗಿ ಪಾರಾಗುವದೆಂದು ಪ್ರಕಟನೆಯ ಪ್ರವಾದನೆಯಿಂದ ನಮಗೆ ಆಶ್ವಾಸನೆ ಕೊಡಲ್ಪಟ್ಟಿದೆ. (ಪ್ರಕಟನೆ 21:1) ನೀವು ಅಲ್ಲಿ ಇರುವಿರೋ? ಅದು ಶಕ್ಯವು ಯಾಕಂದರೆ ಮತ್ತಾಯ 24:13 ರಲ್ಲಿ ಯೇಸುವಂದದ್ದು: “ಆದರೆ ಕಡೇ ವರೆಗೂ ತಾಳುವವನು ರಕ್ಷಣೆ ಹೊಂದುವನು.”
19 ಈ ಹಳೇ ವ್ಯವಸ್ಥೆಯಲ್ಲಿ ಯೆಹೋವನ ಜನರು ಅನುಭವಿಸುತ್ತಿರುವ ಒತ್ತಡಗಳು ಇನ್ನೂ ಹೆಚ್ಚಾಗುತ್ತಾ ಹೋಗಬಹುದು. ಮತ್ತು ಆ ಸಂಕಟಯುಕ್ತ ಮಹಾ ಸಂಕಟವು ಹೊಡೆಯುವಾಗ, ನೀವು ಕಷ್ಟಗಳನ್ನು ಅನುಭವಿಸಬಹುದು. ಆದರೆ ಯೆಹೋವನಿಗೆ ಮತ್ತು ಆತನ ಸಂಸ್ಥೆಗೆ ಹತ್ತಿರವಾಗಿ ಉಳಿಯಿರಿ. ಎಚ್ಚರವಾಗಿ ಉಳಿಯಿರಿ! “ಯೆಹೋವನು ಇಂತೆನ್ನುತ್ತಾನೆ—ಹೀಗಿರಲು ನನ್ನನ್ನು ಕಾದುಕೊಂಡಿರ್ರಿ, ನಾನು ಬೇಟೆಹಿಡಿಯಲು ಏಳುವ ದಿನವನ್ನು ಎದುರುನೋಡಿರಿ; ಜನಾಂಗಗಳ ಮೇಲೆ ರೌದ್ರವನ್ನು, ಹೌದು, ನನ್ನ ಉಗ್ರ ಕೋಪವನ್ನೆಲ್ಲಾ ಹೊಯ್ದುಬಿಡುವದಕ್ಕಾಗಿ ಆ ಜನಾಂಗಗಳನ್ನು ಸೇರಿಸಿ ಆ ರಾಜ್ಯಗಳನ್ನು ಕೂಡಿಸಬೇಕೆಂದು ತೀರ್ಮಾನಿಸಿಕೊಂಡಿದ್ದೇನೆ. ಲೋಕವೆಲ್ಲಾ ನನ್ನ ರೋಷಾಗ್ನಿಗೆ ತುತ್ತಾಗುವದಷ್ಟೆ.”—ಚೆಫನ್ಯ 3:8.
20. “ಸಂಕಟದ ಸಮಯ” ದ ಪರಮಾವಧಿಯು ಸದಾ ಸಮೀಪವಾಗುತ್ತಾ ಬರುವಾಗ, ನಾವೇನು ಮಾಡಬೇಕು?
20 ನಮ್ಮ ರಕ್ಷಣೆಗಾಗಿ ಮತ್ತು ಪ್ರೋತ್ಸಾಹನೆಗಾಗಿ ಯೆಹೋವನು ಕೃಪೆಯಿಂದ ತನ್ನ ಜನರಿಗೆ, “ಎಲ್ಲರು ಒಂದೇ ಹೆಗಲಿನಿಂದ ಯೆಹೋವನನ್ನು ಸೇವಿಸಿ ಆತನ ಹೆಸರನ್ನೆತ್ತಿ ಪ್ರಾರ್ಥಿಸುವಂತೆ,” ಬರಲಿರುವ ಆತನ ರಾಜ್ಯದ ಮಹಾ ಸಂದೇಶವನ್ನೊಳಗೊಂಡ “ಒಂದು ಶುದ್ಧ ಭಾಷೆಯನ್ನು” ಒದಗಿಸಿದ್ದಾನೆ. (ಚೆಫನ್ಯ 3:9) ಆ ಪರಮಾವಧಿಯ “ಸಂಕಟದ ಸಮಯವು” ತರ್ವೆಯಾಗಿ ಧಾವಿಸುತ್ತಾ ಬರುವಾಗ, ದೀನರಾದ ಇತರ ಜನರೂ ರಕ್ಷಣೆಗಾಗಿ “ಯೆಹೋವನ ನಾಮವನ್ನು ಹೇಳಿಕೊಳ್ಳು” ವಂತೆ ನಾವು ಸಹಾಯ ಮಾಡುತ್ತಾ, ಹುರುಪಿನಿಂದ ಸೇವೆ ಮಾಡುತ್ತಿರೋಣ. (w92 5⁄1)
ನಿಮಗೆ ನೆನಪಿದೆಯೇ?
▫ ಭೂಮಿಗೆ ಶಾಂತಿಯನ್ನು ತರುವ ಮುಂಚೆ ಯೆಹೋವನು ಯಾವ ಕ್ರಿಯೆಗೈಯುವನು?
▫ ಯೋವೇಲನಿಗನುಸಾರ, ರಕ್ಷಿಸಲ್ಪಡಲಿಕ್ಕಾಗಿ ಒಬ್ಬನು ಏನು ಮಾಡಬೇಕು?
▫ ಚೆಫನ್ಯನಿಗನುಸಾರ, ಯೆಹೋವನ ಉಗ್ರ ಕೋಪದಿಂದ ದೀನರು ರಕ್ಷಣೆಯನ್ನು ಹೇಗೆ ಕಂಡುಕೊಳ್ಳಬಹುದು?
▫ “ಅಧರ್ಮ ಪುರುಷನು” ಯಾರು ಮತ್ತು ಅವನು ರಕ್ತಾಪರಾಧವನ್ನು ಹೇರಿರುವುದು ಹೇಗೆ?
▫ ರಕ್ಷಣೆಯ ವಿಷಯದಲ್ಲಿ ತಾಳ್ಮೆಯು ಎಷ್ಟು ಮಹತ್ವದ್ದಾಗಿದೆ?