-
ಯೆಹೋವನು ದಾನಿಯೇಲನಿಗೆ ಒಂದು ಅದ್ಭುತಕರವಾದ ಬಹುಮಾನವನ್ನು ವಾಗ್ದಾನಿಸುತ್ತಾನೆದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
-
-
ಅಧ್ಯಾಯ ಹದಿನೆಂಟು
ಯೆಹೋವನು ದಾನಿಯೇಲನಿಗೆ ಒಂದು ಅದ್ಭುತಕರವಾದ ಬಹುಮಾನವನ್ನು ವಾಗ್ದಾನಿಸುತ್ತಾನೆ
1, 2. (ಎ) ಒಬ್ಬ ಓಟಗಾರನು ಯಶಸ್ಸನ್ನು ಪಡೆಯಬೇಕಾದರೆ ಯಾವ ಪ್ರಮುಖ ಗುಣವು ಅವನಲ್ಲಿರಬೇಕು? (ಬಿ) ಅಪೊಸ್ತಲ ಪೌಲನು ಯೆಹೋವನ ಸೇವೆಯಲ್ಲಿ ನಂಬಿಗಸ್ತಿಕೆಯಿಂದ ಜೀವಿಸುವುದನ್ನು ಒಂದು ಓಟಕ್ಕೆ ಹೇಗೆ ಹೋಲಿಸಿದನು?
ಒಬ್ಬ ಓಟಗಾರನು ಓಟದ ಅಂತ್ಯ ರೇಖೆಯನ್ನು ಮುಟ್ಟಲು ಕೊನೆಯ ಪ್ರಯತ್ನವನ್ನು ಮಾಡುತ್ತಾನೆ. ಈಗಾಗಲೇ ಅವನು ತುಂಬ ಬಳಲಿಹೋಗಿದ್ದಾನೆ, ಆದರೂ ತನ್ನ ಗುರಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ತನ್ನೆಲ್ಲಾ ಶಕ್ತಿಯನ್ನು ಒಟ್ಟುಗೂಡಿಸಿ ವೇಗವನ್ನು ಹೆಚ್ಚಿಸುತ್ತಾನೆ. ಸರ್ವ ಪ್ರಯತ್ನಮಾಡಿ, ಅತ್ಯಂತ ಪ್ರಯಾಸದಿಂದ ಅವನು ಕಟ್ಟಕಡೆಗೂ ಆ ರೇಖೆಯನ್ನು ದಾಟುತ್ತಾನೆ! ಅವನ ಮುಖದಲ್ಲಿ ಉಪಶಮನ ಹಾಗೂ ವಿಜಯೋತ್ಸವದ ಕಳೆಮೂಡುತ್ತದೆ. ಕಡೇ ವರೆಗೆ ತಾಳಿಕೊಂಡಿದ್ದರಿಂದ ಅವನಿಗೆ ಯಶಸ್ಸು ದೊರಕಿದೆ.
2 ದಾನಿಯೇಲ 12ನೆಯ ಅಧ್ಯಾಯದ ಅಂತ್ಯಭಾಗದಲ್ಲಿ, ಪ್ರೀತಿಪಾತ್ರನಾದ ಪ್ರವಾದಿಯು ತನ್ನ ಸ್ವಂತ “ಓಟ”ದ, ಅಂದರೆ ಯೆಹೋವನ ಸೇವೆಗಾಗಿ ವಿನಿಯೋಗಿಸಿದ ತನ್ನ ಜೀವಿತದ ಅಂತಿಮ ರೇಖೆಯನ್ನು ತಲಪುತ್ತಿರುವುದನ್ನು ನಾವು ಕಂಡುಕೊಳ್ಳುತ್ತೇವೆ. ಕ್ರೈಸ್ತಪೂರ್ವ ಸಮಯಗಳಲ್ಲಿನ ಯೆಹೋವನ ಸೇವಕರ ಮಧ್ಯೆ ಇದ್ದ ಬೇರೆ ಬೇರೆ ನಂಬಿಗಸ್ತ ಮಾದರಿಗಳನ್ನು ಉದಾಹರಿಸಿದ ಬಳಿಕ, ಅಪೊಸ್ತಲ ಪೌಲನು ಬರೆದುದು: “ಆದಕಾರಣ ಇಷ್ಟುಮಂದಿ ಸಾಕ್ಷಿಯವರು ಮೇಘದೋಪಾದಿಯಲ್ಲಿ ನಮ್ಮ ಸುತ್ತಲು ಇರುವದರಿಂದ ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಪಾಪವನ್ನೂ ನಾವು ಸಹ ತೆಗೆದಿಟ್ಟು ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ [“ತಾಳ್ಮೆಯಿಂದ,” NW] ಓಡೋಣ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ [“ಯಾತನೆಯ ಕಂಬದ,” NW] ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ.”—ಇಬ್ರಿಯ 12:1, 2.
3. (ಎ) “ತಾಳ್ಮೆಯಿಂದ ಓಡು”ವಂತೆ ದಾನಿಯೇಲನನ್ನು ಯಾವುದು ಪ್ರಚೋದಿಸಿತು? (ಬಿ) ಯೆಹೋವನ ದೂತನು ದಾನಿಯೇಲನಿಗೆ ಯಾವ ಮೂರು ವಿಶೇಷ ಸಂಗತಿಗಳನ್ನು ತಿಳಿಯಪಡಿಸಿದನು?
3 ‘ಮೇಘದೋಪಾದಿಯಿರುವ ಸಾಕ್ಷಿಗಳಲ್ಲಿ’ ದಾನಿಯೇಲನೂ ಒಬ್ಬನಾಗಿದ್ದನು. ಖಂಡಿತವಾಗಿಯೂ ಅವನು “ತಾಳ್ಮೆಯಿಂದ ಓಡಿ”ದಂತಹ ಒಬ್ಬ ವ್ಯಕ್ತಿಯಾಗಿದ್ದನು, ಮತ್ತು ದೇವರ ಕಡೆಗೆ ಅವನಿಗಿದ್ದ ಗಾಢವಾದ ಪ್ರೀತಿಯು ಅವನನ್ನು ಹೀಗೆ ಮಾಡುವಂತೆ ಪ್ರಚೋದಿಸಿತ್ತು. ಲೋಕ ಸರಕಾರಗಳ ಭವಿಷ್ಯತ್ತಿನ ಕುರಿತು ಯೆಹೋವನು ದಾನಿಯೇಲನಿಗೆ ಅನೇಕ ವಿಚಾರಗಳನ್ನು ಪ್ರಕಟಪಡಿಸಿದ್ದನು. ಆದರೂ ಈಗ ಆತನು ದಾನಿಯೇಲನಿಗೆ ಈ ವೈಯಕ್ತಿಕ ಉತ್ತೇಜನವನ್ನು ಕಳುಹಿಸಿದನು: “ನೀನು ಹೋಗಿ ಅಂತ್ಯದ ವರೆಗೆ ಇರು [“ಅಂತ್ಯದ ಕಡೆಗೆ ಸಾಗು,” NW]; ನೀನು ದೀರ್ಘನಿದ್ರೆಯನ್ನು ಹೊಂದಿ [“ವಿಶ್ರಾಂತಿ ಪಡೆದು,” NW] ಯುಗಸಮಾಪ್ತಿಯಲ್ಲಿ ಎದ್ದು ನಿನಗಾಗುವ ಸ್ವಾಸ್ತ್ಯದೊಳಗೆ ನಿಲ್ಲುವಿ.” (ದಾನಿಯೇಲ 12:13) ಯೆಹೋವನ ದೂತನು ದಾನಿಯೇಲನಿಗೆ ಮೂರು ವಿಶಿಷ್ಟ ವಿಚಾರಗಳನ್ನು ತಿಳಿಯಪಡಿಸುತ್ತಿದ್ದನು: (1) ದಾನಿಯೇಲನು “ಅಂತ್ಯದ ಕಡೆಗೆ ಸಾಗ”ಬೇಕು, (2) ಅವನು ‘ವಿಶ್ರಾಂತಿ ಪಡೆಯು’ವನು, ಮತ್ತು (3) ಅವನು ಭವಿಷ್ಯತ್ತಿನಲ್ಲಿ ಪುನಃ ಒಮ್ಮೆ “ನಿಲ್ಲು”ವನು. ಇಂದು ಜೀವನದ ಓಟದಲ್ಲಿ ಅಂತಿಮ ರೇಖೆಯನ್ನು ಮುಟ್ಟಲಿಕ್ಕಾಗಿ ತಾಳ್ಮೆಯಿಂದ ಮುಂದುವರಿಯುವಂತೆ ಈ ಮಾತುಗಳು ಕ್ರೈಸ್ತರಿಗೆ ಹೇಗೆ ಉತ್ತೇಜನ ನೀಡಬಲ್ಲವು?
“ಅಂತ್ಯದ ಕಡೆಗೆ ಸಾಗು”
4. “ಅಂತ್ಯದ ಕಡೆಗೆ ಸಾಗು” ಎಂದು ಹೇಳುವ ಮೂಲಕ ಯೆಹೋವನ ದೂತನು ಏನನ್ನು ಅರ್ಥೈಸಿದನು, ಮತ್ತು ಅದು ದಾನಿಯೇಲನಿಗೆ ಏಕೆ ಒಂದು ಪಂಥಾಹ್ವಾನವನ್ನು ತಂದೊಡ್ಡಿರಬಹುದು?
4 “ನೀನು ಅಂತ್ಯದ ಕಡೆಗೆ ಸಾಗು” ಎಂದು ದೇವದೂತನು ದಾನಿಯೇಲನಿಗೆ ಹೇಳಿದಾಗ, ಅವನು ಏನನ್ನು ಅರ್ಥೈಸಿದನು? ಯಾವುದರ ಅಂತ್ಯ? ದಾನಿಯೇಲನು ಹೆಚ್ಚುಕಡಿಮೆ 100 ವರ್ಷ ಪ್ರಾಯದವನಾಗಿದ್ದು, ಅವನ ಜೀವಿತವು ಇನ್ನೇನು ಕೊನೆಗೊಳ್ಳಲಿಕ್ಕಿದ್ದುದರಿಂದ, ಇದು ಅವನ ಸ್ವಂತ ಜೀವಿತದ ಅಂತ್ಯವನ್ನು ಸೂಚಿಸಿತು ಎಂಬುದು ಸುವ್ಯಕ್ತ.a ಮರಣದ ತನಕ ನಂಬಿಗಸ್ತಿಕೆಯಿಂದ ಮುಂದುವರಿಯುವಂತೆ ದೇವದೂತನು ದಾನಿಯೇಲನನ್ನು ಪ್ರಚೋದಿಸುತ್ತಿದ್ದನು. ಆದರೆ ಹಾಗೆ ಮಾಡುವುದು ಖಂಡಿತವಾಗಿಯೂ ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ಬಾಬೆಲು ಪತನಗೊಂಡು, ಯೆಹೂದಿ ದೇಶಭ್ರಷ್ಟರಲ್ಲಿ ಉಳಿಕೆಯವರು ಯೆಹೂದ ಹಾಗೂ ಯೆರೂಸಲೇಮಿಗೆ ಹಿಂದಿರುಗುವುದನ್ನು ನೋಡುವಷ್ಟು ಸಮಯ ದಾನಿಯೇಲನು ಬದುಕಿದ್ದನು. ಇದು ಈ ವೃದ್ಧ ಪ್ರವಾದಿಗೆ ಅತ್ಯಧಿಕ ಆನಂದವನ್ನು ಉಂಟುಮಾಡಿದ್ದಿರಬೇಕು. ಆದರೂ, ಅವರೊಂದಿಗೆ ಅವನು ಸಹ ಯೆರೂಸಲೇಮಿಗೆ ಹೋದನೆಂಬುದಕ್ಕೆ ಯಾವುದೇ ದಾಖಲೆಯಿಲ್ಲ. ಆ ಸಮಯದಷ್ಟಕ್ಕೆ ಅವನು ತುಂಬ ಮುದುಕನೂ ಬಲಹೀನನೂ ಆಗಿದ್ದಿರಬಹುದು. ಅಥವಾ ಅವನು ಬಾಬೆಲಿನಲ್ಲೇ ಉಳಿಯುವುದು ಯೆಹೋವನ ಚಿತ್ತವಾಗಿದ್ದಿರಬಹುದು. ಏನೇ ಆಗಲಿ, ತನ್ನ ಸ್ವದೇಶಿಯರು ಯೆಹೂದಕ್ಕೆ ಹೊರಟಾಗ ದಾನಿಯೇಲನು ಕೂಡ ಹೋಗಲು ಆಸೆಪಟ್ಟನೋ ಏನೋ ಎಂದು ಒಬ್ಬನು ಕುತೂಹಲಪಡುವುದು ಸಹಜ.
5. ದಾನಿಯೇಲನು ಅಂತ್ಯದ ವರೆಗೆ ತಾಳಿಕೊಂಡನು ಎಂಬುದನ್ನು ಯಾವುದು ಸೂಚಿಸುತ್ತದೆ?
5 “ನೀನು ಅಂತ್ಯದ ಕಡೆಗೆ ಸಾಗು” ಎಂಬ ದೇವದೂತನ ದಯಾಭರಿತ ಮಾತುಗಳಿಂದ ದಾನಿಯೇಲನು ಬಹಳಷ್ಟು ಬಲವನ್ನು ಪಡೆದುಕೊಂಡನು ಎಂಬುದರಲ್ಲಿ ಸಂದೇಹವೇ ಇಲ್ಲ. ಸುಮಾರು ಆರು ಶತಮಾನಗಳ ಬಳಿಕ ಯೇಸು ಕ್ರಿಸ್ತನು ನುಡಿದ ಮಾತುಗಳನ್ನು ಇದು ನಮ್ಮ ಜ್ಞಾಪಕಕ್ಕೆ ತರಬಹುದು: “ಆದರೆ ಕಡೇ ವರೆಗೂ ತಾಳುವವನು ರಕ್ಷಣೆ ಹೊಂದುವನು.” (ಮತ್ತಾಯ 24:13) ಖಂಡಿತವಾಗಿಯೂ ದಾನಿಯೇಲನು ಅದನ್ನೇ ಮಾಡಿದನು. ಜೀವಿತದ ಓಟವನ್ನು ಅದರ ಮುಕ್ತಾಯದ ತನಕ ನಂಬಿಗಸ್ತಿಕೆಯಿಂದ ಓಡುತ್ತಾ, ಅವನು ಅಂತ್ಯದ ವರೆಗೆ ತಾಳಿಕೊಂಡನು. ತದನಂತರ ದೇವರ ವಾಕ್ಯದಲ್ಲಿ ಅವನು ಮೆಚ್ಚಿಕೆಗೆ ಪಾತ್ರನಾಗಿ ಸೂಚಿಸಲ್ಪಟ್ಟಿರುವುದಕ್ಕೆ ಇದೂ ಒಂದು ಕಾರಣವಾಗಿದ್ದಿರಸಾಧ್ಯವಿದೆ. (ಇಬ್ರಿಯ 11:32, 33) ಅಂತ್ಯದ ವರೆಗೆ ತಾಳಿಕೊಳ್ಳುವಂತೆ ದಾನಿಯೇಲನನ್ನು ಯಾವುದು ಸಮರ್ಥನನ್ನಾಗಿ ಮಾಡಿತು? ಅವನ ಜೀವನ ವೃತ್ತಾಂತವು, ಇದಕ್ಕೆ ಉತ್ತರವನ್ನು ಕಂಡುಕೊಳ್ಳುವಂತೆ ಸಹಾಯ ಮಾಡುತ್ತದೆ.
ದೇವರ ವಾಕ್ಯದ ವಿದ್ಯಾರ್ಥಿಯಾಗಿ ಬಾಳುವುದು
6. ದಾನಿಯೇಲನು ದೇವರ ವಾಕ್ಯದ ಶ್ರದ್ಧಾಪೂರ್ವಕ ವಿದ್ಯಾರ್ಥಿಯಾಗಿದ್ದನು ಎಂಬುದು ನಮಗೆ ಹೇಗೆ ಗೊತ್ತು?
6 ದಾನಿಯೇಲನಿಗಾದರೋ, ಅಂತ್ಯದ ವರೆಗೆ ತಾಳಿಕೊಳ್ಳುವುದರಲ್ಲಿ, ದೇವರ ರೋಮಾಂಚಕ ವಾಗ್ದಾನಗಳನ್ನು ಅಭ್ಯಾಸಿಸುತ್ತಾ ಮುಂದುವರಿದು, ಅವುಗಳ ಬಗ್ಗೆ ಗಹನವಾಗಿ ಮನನಮಾಡುವುದು ಒಳಗೂಡಿತ್ತು. ದಾನಿಯೇಲನು ದೇವರ ವಾಕ್ಯದ ಶ್ರದ್ಧಾಪೂರ್ವಕ ವಿದ್ಯಾರ್ಥಿಯಾಗಿದ್ದನು ಎಂಬುದು ನಮಗೆ ಗೊತ್ತು. ಇಲ್ಲದಿದ್ದರೆ, ದೇಶಭ್ರಷ್ಟ ಸ್ಥಿತಿಯು 70 ವರ್ಷಗಳಷ್ಟು ದೀರ್ಘವಾಗಿರುತ್ತದೆ ಎಂದು ಯೆಹೋವನು ಯೆರೆಮೀಯನಿಗೆ ತಿಳಿಸಿದ್ದ ವಾಗ್ದಾನದ ಬಗ್ಗೆ ಅವನಿಗೆ ಹೇಗೆ ಗೊತ್ತಿರುತ್ತಿತ್ತು? ಸ್ವತಃ ದಾನಿಯೇಲನೇ ಬರೆದುದು: ‘ನಾನು ಶಾಸ್ತ್ರಗಳನ್ನು ಪರೀಕ್ಷಿಸಿ . . . ಪೂರ್ಣಕಾಲದ ವರುಷಗಳ ಸಂಖ್ಯೆಯನ್ನು ತಿಳಿದುಕೊಂಡೆನು.’ (ದಾನಿಯೇಲ 9:2; ಯೆರೆಮೀಯ 25:11, 12) ನಿಸ್ಸಂದೇಹವಾಗಿಯೂ, ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ದೇವರ ವಾಕ್ಯದ ಪುಸ್ತಕಗಳನ್ನು ದಾನಿಯೇಲನು ಹುಡುಕಲು ಪ್ರಯತ್ನಿಸಿದನು. ಮೋಶೆ, ದಾವೀದ, ಸೊಲೊಮೋನ, ಯೆಶಾಯ, ಯೆರೆಮೀಯ, ಮತ್ತು ಯೆಹೆಜ್ಕೇಲರ ಬರಹಗಳು—ಆ ಸಮಯದಲ್ಲಿ ಅವನಿಗೆ ಲಭ್ಯವಾದ ಬರಹಗಳು—ದಾನಿಯೇಲನಿಗೆ ಅನೇಕ ತಾಸುಗಳ ವರೆಗೆ ಓದುವ ಹಾಗೂ ಮನನಮಾಡುವ ಸದವಕಾಶವನ್ನು ಒದಗಿಸಿರಬೇಕು ಎಂಬುದಂತೂ ಖಂಡಿತ.
7. ನಾವು ನಮ್ಮ ಕಾಲವನ್ನು ದಾನಿಯೇಲನ ದಿನದೊಂದಿಗೆ ಹೋಲಿಸುವಾಗ, ದೇವರ ವಾಕ್ಯವನ್ನು ಅಭ್ಯಾಸಿಸುವುದರಲ್ಲಿ ನಮಗೆ ಯಾವ ಅನುಕೂಲಗಳಿವೆ?
7 ಇಂದು ನಾವು ತಾಳ್ಮೆಯನ್ನು ಬೆಳೆಸಿಕೊಳ್ಳಬೇಕಾದರೆ, ದೇವರ ವಾಕ್ಯವನ್ನು ಅಭ್ಯಾಸಿಸುವುದು ಹಾಗೂ ಅದರಲ್ಲಿ ತಲ್ಲೀನರಾಗಿರುವುದು ಅತ್ಯಾವಶ್ಯಕವಾಗಿದೆ. (ರೋಮಾಪುರ 15:4-6; 1 ತಿಮೊಥೆಯ 4:15) ಮತ್ತು ನಮ್ಮ ಬಳಿ ಇಡೀ ಬೈಬಲು ಇದೆ; ದಾನಿಯೇಲನ ಪ್ರವಾದನೆಗಳಲ್ಲಿ ಕೆಲವು, ಶತಮಾನಗಳ ಬಳಿಕ ಹೇಗೆ ನೆರವೇರಿದ್ದವು ಎಂಬ ಲಿಖಿತ ದಾಖಲೆಯೂ ಇದರಲ್ಲಿ ಸೇರಿದೆ. ಅಷ್ಟುಮಾತ್ರವಲ್ಲ, ದಾನಿಯೇಲ 12:4ರಲ್ಲಿ ಮುಂತಿಳಿಸಲ್ಪಟ್ಟಿರುವ “ಅಂತ್ಯಕಾಲದಲ್ಲಿ” ಜೀವಿಸುವ ಅವಕಾಶ ನಮಗೆ ಸಿಕ್ಕಿದೆ. ನಮ್ಮ ದಿನಗಳಲ್ಲಿಯೇ ಅಭಿಷಿಕ್ತರು ಆತ್ಮಿಕ ಒಳನೋಟದಿಂದ ಆಶೀರ್ವದಿಸಲ್ಪಟ್ಟಿದ್ದಾರೆ, ಮತ್ತು ಈ ಅಂಧಕಾರದ ಲೋಕದಲ್ಲಿ ಸತ್ಯದ ಸಂಕೇತ ದೀಪವಾಗಿ ಹೊಳೆಯುತ್ತಿದ್ದಾರೆ. ಇದರ ಫಲಿತಾಂಶವಾಗಿ, ದಾನಿಯೇಲ ಪುಸ್ತಕದಲ್ಲಿರುವ ಗಹನವಾದ ಪ್ರವಾದನೆಗಳಲ್ಲಿ ಅನೇಕ ಪ್ರವಾದನೆಗಳು, ಅಂದರೆ ದಾನಿಯೇಲನಿಗೂ ರಹಸ್ಯವಾಗಿದ್ದ ಕೆಲವು ಪ್ರವಾದನೆಗಳು, ಇಂದು ನಮಗೆ ಅತಿ ಅರ್ಥಭರಿತವಾಗಿ ಕಂಡುಬರುತ್ತವೆ. ಆದುದರಿಂದ, ನಾವು ಪ್ರತಿದಿನವೂ ದೇವರ ವಾಕ್ಯವನ್ನು ಅಭ್ಯಾಸಿಸುತ್ತಾ ಇದ್ದು, ಈ ವಿಷಯಗಳನ್ನು ಎಂದೂ ಅಲ್ಪವಾಗಿ ಪರಿಗಣಿಸದಿರೋಣ. ಹೀಗೆ ಮಾಡುವುದು, ನಮಗೆ ತಾಳಿಕೊಳ್ಳುವಂತೆ ಸಹಾಯ ಮಾಡುವುದು.
ದಾನಿಯೇಲನು ನಿರಂತರವಾಗಿ ಪ್ರಾರ್ಥಿಸಿದನು
8. ಪ್ರಾರ್ಥನೆಯ ವಿಷಯದಲ್ಲಿ ದಾನಿಯೇಲನು ಯಾವ ಮಾದರಿಯನ್ನಿಟ್ಟನು?
8 ಅಂತ್ಯದ ವರೆಗೆ ತಾಳಿಕೊಳ್ಳುವಂತೆ ಪ್ರಾರ್ಥನೆಯು ಸಹ ದಾನಿಯೇಲನಿಗೆ ಸಹಾಯ ಮಾಡಿತು. ಪ್ರತಿದಿನವೂ ಅವನು ಯೆಹೋವ ದೇವರಿಗೆ ಪ್ರಾರ್ಥಿಸಿದನು ಮತ್ತು ನಂಬಿಕೆ ಹಾಗೂ ದೃಢವಿಶ್ವಾಸಗಳಿಂದ ಆತನೊಂದಿಗೆ ಮನಬಿಚ್ಚಿ ಮಾತಾಡಿದನು. ಯೆಹೋವನು “ಪ್ರಾರ್ಥನೆಯನ್ನು ಕೇಳುವವ”ನಾಗಿದ್ದಾನೆ ಎಂಬುದು ಅವನಿಗೆ ಗೊತ್ತಿತ್ತು. (ಕೀರ್ತನೆ 65:2; ಹೋಲಿಸಿರಿ ಇಬ್ರಿಯ 11:6.) ಇಸ್ರಾಯೇಲಿನ ದಂಗೆಕೋರ ಜೀವನಮಾರ್ಗದ ಬಗ್ಗೆ ದಾನಿಯೇಲನ ಹೃದಯವು ದುಃಖದಿಂದ ತುಂಬಿದ್ದಾಗ, ಅವನು ಯೆಹೋವನ ಬಳಿ ತನ್ನ ಅಂತರಂಗವನ್ನು ತೋಡಿಕೊಂಡನು. (ದಾನಿಯೇಲ 9:4-19) 30 ದಿನಗಳ ತನಕ ಅರಸನಿಗೆ ಮಾತ್ರವೇ ವಿಜ್ಞಾಪನೆ ಮಾಡಬೇಕು ಎಂಬಂತಹ ಆಜ್ಞೆಯನ್ನು ದಾರ್ಯಾವೆಷನು ಹೊರಡಿಸಿದಾಗಲೂ, ಯೆಹೋವ ದೇವರಿಗೆ ಪ್ರಾರ್ಥಿಸುವುದರಿಂದ ಈ ಆಜ್ಞೆಯು ತನ್ನನ್ನು ತಡೆಯುವಂತೆ ದಾನಿಯೇಲನು ಬಿಡಲಿಲ್ಲ. (ದಾನಿಯೇಲ 6:10) ಪ್ರಾರ್ಥನೆಯ ಅಮೂಲ್ಯ ಸುಯೋಗವನ್ನು ತೊರೆಯುವುದಕ್ಕೆ ಬದಲಾಗಿ, ಈ ನಂಬಿಗಸ್ತ ವೃದ್ಧನು ಸಿಂಹಗಳು ತುಂಬಿರುವ ಗವಿಯೊಳಕ್ಕೆ ಹೋಗಲು ಧೈರ್ಯಮಾಡುವುದನ್ನು ಕಣ್ಣಮುಂದೆ ಚಿತ್ರಿಸಿಕೊಳ್ಳುವುದು ನಮ್ಮ ಮನಸ್ಸುಗಳ ಮೇಲೆ ಪ್ರಭಾವ ಬೀರುವುದಿಲ್ಲವೊ? ಪ್ರತಿದಿನ ಯೆಹೋವನಿಗೆ ಕಟ್ಟಾಸಕ್ತಿಯಿಂದ ಪ್ರಾರ್ಥಿಸುತ್ತಾ, ದಾನಿಯೇಲನು ನಂಬಿಗಸ್ತಿಕೆಯಿಂದ ಮರಣವನ್ನು ಎದುರಿಸಿದನು ಎಂಬುದರಲ್ಲಿ ಸಂದೇಹವೇ ಇಲ್ಲ.
9. ಪ್ರಾರ್ಥಿಸುವ ಸುಯೋಗವನ್ನು ನಾವೆಂದಿಗೂ ಅಲ್ಪವಾಗಿ ಪರಿಗಣಿಸಬಾರದೇಕೆ?
9 ಪ್ರಾರ್ಥನೆಯು ತುಂಬ ಸರಳವಾದ ಒಂದು ಕ್ರಿಯೆಯಾಗಿದೆ. ನಾವು ಯಾವುದೇ ಸಮಯದಲ್ಲಿ ಅಥವಾ ಯಾವುದೇ ಸ್ಥಳದಲ್ಲಿ, ಗಟ್ಟಿಯಾಗಿ ಇಲ್ಲವೆ ಮೌನವಾಗಿ ಪ್ರಾರ್ಥಿಸಸಾಧ್ಯವಿದೆ. ಆದರೂ, ನಾವೆಂದೂ ಈ ಅಮೂಲ್ಯ ಸುಯೋಗವನ್ನು ಹಗುರವಾಗಿ ಪರಿಗಣಿಸಬಾರದು. ಬೈಬಲು ಪ್ರಾರ್ಥನೆಯನ್ನು ತಾಳ್ಮೆ, ಪಟ್ಟುಹಿಡಿಯುವಿಕೆ, ಹಾಗೂ ಆತ್ಮಿಕವಾಗಿ ಎಚ್ಚರವಾಗಿರುವುದರೊಂದಿಗೆ ಸಂಬಂಧಿಸುತ್ತದೆ. (ಲೂಕ 18:1; ರೋಮಾಪುರ 12:12; ಎಫೆಸ 6:18; ಕೊಲೊಸ್ಸೆ 4:2) ವಿಶ್ವದಲ್ಲೇ ಅತಿ ಮಹಾನ್ ವ್ಯಕ್ತಿಯಾಗಿರುವ ದೇವರ ಬಳಿ, ಯಾವುದೇ ನಿರ್ಬಂಧವಿಲ್ಲದೆ ನೇರವಾಗಿ ಸಂಸರ್ಗಮಾಡುವ ಸುಯೋಗವು ನಮಗಿರುವುದು ಒಂದು ವಿಶೇಷ ಸಂಗತಿಯಲ್ಲವೆ? ಮತ್ತು ಆತನು ಕಿವಿಗೊಡುತ್ತಾನೆ! ದಾನಿಯೇಲನು ಪ್ರಾರ್ಥಿಸಿದ್ದನ್ನು, ಹಾಗೂ ಅದಕ್ಕೆ ಉತ್ತರವಾಗಿ ಯೆಹೋವನು ಒಬ್ಬ ದೇವದೂತನನ್ನು ಕಳುಹಿಸಿದ್ದನ್ನು ಜ್ಞಾಪಿಸಿಕೊಳ್ಳಿರಿ. ದಾನಿಯೇಲನು ಇನ್ನೂ ಪ್ರಾರ್ಥಿಸುತ್ತಿದ್ದಾಗಲೇ ಆ ದೇವದೂತನು ಅವನ ಬಳಿಗೆ ಬಂದನು! (ದಾನಿಯೇಲ 9:20-21) ನಮ್ಮ ಕಾಲದಲ್ಲಿ ದೇವದೂತರ ಅಂತಹ ಸಂದರ್ಶನಗಳು ಸಂಭವಿಸದಿರಬಹುದು, ಆದರೂ ಯೆಹೋವನು ಬದಲಾಗಿಲ್ಲ. (ಮಲಾಕಿಯ 3:6) ಆತನು ದಾನಿಯೇಲನ ಪ್ರಾರ್ಥನೆಗೆ ಕಿವಿಗೊಟ್ಟಂತೆಯೇ ನಮ್ಮ ಪ್ರಾರ್ಥನೆಗಳಿಗೂ ಕಿವಿಗೊಡುತ್ತಾನೆ. ಮತ್ತು ಪ್ರಾರ್ಥಿಸುವಾಗ, ದಾನಿಯೇಲನು ಮಾಡಿದಂತೆ ನಾವು ಸಹ ಅಂತ್ಯದ ವರೆಗೆ ತಾಳಿಕೊಳ್ಳುವಂತೆ ನಮಗೆ ಸಹಾಯ ಮಾಡುವ ಒಂದು ಬಂಧವನ್ನು ರಚಿಸುತ್ತಾ, ನಾವು ಯೆಹೋವನೊಂದಿಗೆ ಹೆಚ್ಚೆಚ್ಚು ಆತ್ಮೀಯರಾಗುತ್ತೇವೆ.
ದೇವರ ವಾಕ್ಯದ ಬೋಧಕನೋಪಾದಿ ತಾಳಿಕೊಳ್ಳುವುದು
10. ದೇವರ ವಾಕ್ಯದ ಸತ್ಯವನ್ನು ಬೋಧಿಸುವುದು ದಾನಿಯೇಲನಿಗೆ ಏಕೆ ಪ್ರಾಮುಖ್ಯವಾದ ಸಂಗತಿಯಾಗಿತ್ತು?
10 ಇನ್ನೊಂದು ಅರ್ಥದಲ್ಲೂ ದಾನಿಯೇಲನು “ಅಂತ್ಯದ ಕಡೆಗೆ ಸಾಗ”ಬೇಕಿತ್ತು. ಅವನು ಸತ್ಯದ ಬೋಧಕನೋಪಾದಿ ಬದುಕಬೇಕಿತ್ತು. “ನೀವು ನನ್ನ ಸಾಕ್ಷಿ, ನಾನು ಆರಿಸಿಕೊಂಡಿರುವ ಸೇವಕನು” ಎಂದು ಯಾರ ಕುರಿತಾಗಿ ಶಾಸ್ತ್ರವಚನಗಳು ಹೇಳಿದ್ದವೋ ಆ ದೇವರಾದುಕೊಂಡ ಜನಾಂಗದವರಲ್ಲಿ ತಾನೂ ಒಬ್ಬನಾಗಿದ್ದೇನೆ ಎಂಬುದನ್ನು ಅವನು ಎಂದೂ ಮರೆಯಲಿಲ್ಲ. (ಯೆಶಾಯ 43:10) ಈ ಆಜ್ಞೆಗನುಸಾರವಾಗಿ ಜೀವಿಸಲಿಕ್ಕಾಗಿ ದಾನಿಯೇಲನು ತನ್ನ ಕೈಲಾದುದೆಲ್ಲವನ್ನೂ ಮಾಡಿದನು. ಅವನ ನೇಮಕದಲ್ಲಿ, ಬಾಬೆಲಿನಲ್ಲಿ ದೇಶಭ್ರಷ್ಟರಾಗಿದ್ದ ಅವನ ಸ್ವಂತ ಜನರಿಗೆ ಬೋಧಿಸುವ ಕೆಲಸವೂ ಒಳಗೂಡಿದ್ದಿರಬಹುದು. “ಅವನ ಸ್ನೇಹಿತರು” ಎಂದು ಸಂಬೋಧಿಸಲ್ಪಟ್ಟಿರುವ ಹನನ್ಯ, ಮೀಶಾಯೇಲ, ಮತ್ತು ಅಜರ್ಯರೊಂದಿಗಿನ ವ್ಯವಹಾರವನ್ನು ಬಿಟ್ಟು, ತನ್ನ ಜೊತೆ ಯೆಹೂದ್ಯರೊಂದಿಗೆ ಅವನು ಹೇಗೆ ವ್ಯವಹರಿಸಿದನು ಎಂಬುದರ ಕುರಿತು ನಮಗೆ ಹೆಚ್ಚೇನೂ ತಿಳಿದಿಲ್ಲ. (ದಾನಿಯೇಲ 1:7; 2:13, 17, 18) ದಾನಿಯೇಲ ಹಾಗೂ ಅವನ ಮೂವರು ಸಂಗಾತಿಗಳ ಮಧ್ಯೆ ಇದ್ದ ಆಪ್ತ ಸ್ನೇಹವು, ಖಂಡಿತವಾಗಿಯೂ ಅವರಲ್ಲಿ ಪ್ರತಿಯೊಬ್ಬರೂ ಪರೀಕ್ಷೆಯನ್ನು ತಾಳಿಕೊಳ್ಳುವಂತೆ ಸಹಾಯ ಮಾಡಿತು. (ಜ್ಞಾನೋಕ್ತಿ 17:17) ಯೆಹೋವನು ದಾನಿಯೇಲನಿಗೆ ವಿಶೇಷ ಜ್ಞಾನವನ್ನು ಕೊಟ್ಟು ಆಶೀರ್ವದಿಸಿದ ಕಾರಣ ಅವನಲ್ಲಿ ತನ್ನ ಸ್ನೇಹಿತರಿಗೆ ಕಲಿಸಲು ಅನೇಕ ವಿಷಯಗಳಿದ್ದವು. (ದಾನಿಯೇಲ 1:17) ಆದರೆ ಅವನಿಗೆ ಬೇರೆ ರೀತಿಯ ಕಲಿಸುವಿಕೆಯನ್ನೂ ಮಾಡಲಿಕ್ಕಿತ್ತು.
11. (ಎ) ದಾನಿಯೇಲನ ಕೆಲಸದಲ್ಲಿ ಯಾವ ವಿಶೇಷತೆಯಿತ್ತು? (ಬಿ) ತನ್ನ ಅಸಾಮಾನ್ಯ ನೇಮಕವನ್ನು ಪೂರೈಸುವುದರಲ್ಲಿ ದಾನಿಯೇಲನು ಎಷ್ಟು ಪರಿಣಾಮಕಾರಿಯಾಗಿದ್ದನು?
11 ಬೇರೆ ಯಾವುದೇ ಪ್ರವಾದಿಗಿಂತಲೂ ಹೆಚ್ಚಾಗಿ ದಾನಿಯೇಲನಿಗೆ, ಅನ್ಯ ಅಧಿಕಾರಿಗಳಿಗೆ ಸಾಕ್ಷಿ ನೀಡುವ ಕೆಲಸವಿತ್ತು. ಅವನು ಕೆಲವೊಮ್ಮೆ ಜನಪ್ರಿಯವಲ್ಲದ ಸಂದೇಶಗಳನ್ನು ತಿಳಿಯಪಡಿಸಬೇಕಿತ್ತಾದರೂ, ಈ ಅಧಿಕಾರಿಗಳು ಜಿಗುಪ್ಸೆ ಹುಟ್ಟಿಸುವವರು ಅಥವಾ ತನಗಿಂತ ಕೀಳ್ಮಟ್ಟದವರು ಎಂಬಂತೆ ಅವನು ಅವರೊಂದಿಗೆ ವರ್ತಿಸಲಿಲ್ಲ. ಅವನು ಅವರೊಂದಿಗೆ ಗೌರವಭಾವದಿಂದ ಹಾಗೂ ಚಾತುರ್ಯದಿಂದ ಮಾತಾಡಿದನು. ಈರ್ಷ್ಯೆಯುಳ್ಳ ಹಾಗೂ ಒಳಸಂಚುಗಳನ್ನು ಮಾಡುತ್ತಿದ್ದ ದೇಶಾಧಿಪತಿಗಳಂತಹ ಕೆಲವರು ದಾನಿಯೇಲನನ್ನು ಕೊಲ್ಲಲು ಬಯಸಿದರು. ಆದರೂ, ಇನ್ನಿತರ ಅಧಿಕಾರಿಗಳು ಅವನನ್ನು ಗೌರವದಿಂದ ಕಂಡರು. ರಾಜರಿಗೆ ಹಾಗೂ ವಿದ್ವಾಂಸರಿಗೆ ಗುಪ್ತವಾಗಿದ್ದ ರಹಸ್ಯಗಳನ್ನು ವಿವರಿಸುವಂತೆ ಯೆಹೋವನು ದಾನಿಯೇಲನನ್ನು ಶಕ್ತನನ್ನಾಗಿ ಮಾಡಿದ್ದರಿಂದ, ಈ ಪ್ರವಾದಿಯು ಮಹಾ ಪ್ರಸಿದ್ಧಿಯನ್ನು ಪಡೆದನು. (ದಾನಿಯೇಲ 2:47, 48; 5:29) ಅವನು ವೃದ್ಧನಾಗುತ್ತಾ ಹೋದಂತೆ, ತನ್ನ ಯೌವನಪ್ರಾಯದಲ್ಲಿ ಅವನು ಎಷ್ಟು ಕ್ರಿಯಾಶೀಲನಾಗಿದ್ದನೋ ಅಷ್ಟೇ ಕ್ರಿಯಾಶೀಲನಾಗಿರಲು ಸಾಧ್ಯವಿರಲಿಲ್ಲ ನಿಜ. ಆದರೆ, ತನ್ನ ಪ್ರೀತಿಯ ದೇವರ ಸಾಕ್ಷಿಯೋಪಾದಿ ಆತನ ಸೇವೆಮಾಡಲು ಸಾಧ್ಯವಿರುವ ಅವಕಾಶಕ್ಕಾಗಿ ಹುಡುಕುತ್ತಾ ಅವನು ನಂಬಿಗಸ್ತಿಕೆಯಿಂದ ಮರಣವನ್ನು ಎದುರಿಸಿದನು ಎಂಬುದಂತೂ ಖಂಡಿತ.
12. (ಎ) ಕ್ರೈಸ್ತರೋಪಾದಿ ಇಂದು ನಾವು ಯಾವ ಕಲಿಸುವಿಕೆಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತೇವೆ? (ಬಿ) “ಹೊರಗಿನವರ ಮುಂದೆ ವಿವೇಕವುಳ್ಳವರಾಗಿ ನಡೆದುಕೊಳ್ಳಿರಿ” ಎಂಬ ಪೌಲನ ಸಲಹೆಯನ್ನು ನಾವು ಹೇಗೆ ಅನುಸರಿಸಸಾಧ್ಯವಿದೆ?
12 ದಾನಿಯೇಲನು ಮತ್ತು ಅವನ ಮೂವರು ಸಂಗಡಿಗರು ಪರಸ್ಪರ ಸಹಾಯ ಮಾಡಿದಂತೆಯೇ, ನಾವು ಸಹ ಇಂದು ಕ್ರೈಸ್ತ ಸಭೆಯಲ್ಲಿ, ಅಂತ್ಯದ ವರೆಗೆ ತಾಳಿಕೊಳ್ಳಲಿಕ್ಕಾಗಿ ನಮಗೆ ಸಹಾಯ ಮಾಡುವ ನಂಬಿಗಸ್ತ ಸಂಗಡಿಗರನ್ನು ಕಂಡುಕೊಳ್ಳಬಹುದು. “ಉತ್ತೇಜನವನ್ನು ಪರಸ್ಪರ ವಿನಿಮಯ”ಮಾಡಿಕೊಳ್ಳುತ್ತಾ, ನಾವು ಸಹ ಒಬ್ಬರು ಇನ್ನೊಬ್ಬರಿಗೆ ಕಲಿಸಸಾಧ್ಯವಿದೆ. (ರೋಮಾಪುರ 1:11, 12, NW) ದಾನಿಯೇಲನಂತೆ ನಮಗೂ ಅವಿಶ್ವಾಸಿಗಳಿಗೆ ಸಾಕ್ಷಿ ನೀಡುವ ನೇಮಕವು ಕೊಡಲ್ಪಟ್ಟಿದೆ. (ಮತ್ತಾಯ 24:14; 28:19, 20) ಆದುದರಿಂದ, ಯೆಹೋವನ ಕುರಿತು ಜನರೊಂದಿಗೆ ಮಾತಾಡುವಾಗ ‘ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸ’ಲಿಕ್ಕಾಗಿ, ನಾವು ನಮ್ಮ ನೈಪುಣ್ಯಗಳನ್ನು ಹರಿತಗೊಳಿಸಬೇಕು. (2 ತಿಮೊಥೆಯ 2:15) ಮತ್ತು “ಹೊರಗಿನವರ ಮುಂದೆ ಜ್ಞಾನ [“ವಿವೇಕ,” NW]ವುಳ್ಳವರಾಗಿ ನಡೆದುಕೊಳ್ಳಿರಿ” ಎಂಬ ಅಪೊಸ್ತಲ ಪೌಲನ ಸಲಹೆಗೆ ನಾವು ವಿಧೇಯರಾಗುವಲ್ಲಿ ಅದು ನಮಗೆ ಸಹಾಯ ಮಾಡುವುದು. (ಕೊಲೊಸ್ಸೆ 4:5) ಇಂತಹ ವಿವೇಕದಲ್ಲಿ, ನಮ್ಮ ನಂಬಿಕೆಯಲ್ಲಿ ಪಾಲುದಾರರಾಗದ ಜನರ ಕಡೆಗೆ ಒಂದು ಸಮತೂಕದ ನೋಟವನ್ನು ಇಟ್ಟುಕೊಳ್ಳುವುದು ಸಹ ಒಳಗೂಡಿದೆ. ನಮ್ಮನ್ನು ನಾವು ಶ್ರೇಷ್ಠರೆಂದು ಪರಿಗಣಿಸಿಕೊಳ್ಳುತ್ತಾ, ಅಂತಹ ಜನರನ್ನು ಕೀಳಾಗಿ ಕಾಣಬೇಕೆಂದಿಲ್ಲ. (1 ಪೇತ್ರ 3:15) ಅದಕ್ಕೆ ಬದಲಾಗಿ, ಅವರ ಹೃದಯಗಳನ್ನು ತಲಪಲಿಕ್ಕಾಗಿ ದೇವರ ವಾಕ್ಯವನ್ನು ಜಾಣತನದಿಂದ ಹಾಗೂ ಚಾತುರ್ಯದಿಂದ ಉಪಯೋಗಿಸುತ್ತಾ, ನಾವು ಅವರನ್ನು ಸತ್ಯದ ಕಡೆಗೆ ಸೆಳೆಯಲು ಪ್ರಯತ್ನಿಸುತ್ತೇವೆ. ಒಬ್ಬ ವ್ಯಕ್ತಿಯ ಹೃದಯವನ್ನು ಪ್ರಭಾವಿಸುವುದರಲ್ಲಿ ನಾವು ಸಫಲರಾಗುವಲ್ಲಿ, ಇದು ನಮಗೆ ಎಷ್ಟು ಆನಂದವನ್ನು ಉಂಟುಮಾಡುತ್ತದೆ! ಖಂಡಿತವಾಗಿಯೂ ಇಂತಹ ಆನಂದವು, ದಾನಿಯೇಲನ ಹಾಗೆ ಅಂತ್ಯಕಾಲದ ವರೆಗೆ ತಾಳಿಕೊಳ್ಳುವಂತೆ ನಮಗೆ ಸಹಾಯ ಮಾಡುವುದು.
‘ವಿಶ್ರಾಂತಿ ಪಡೆಯುವಿ’
13, 14. ಸಾಯುವ ಆಲೋಚನೆಯೇ ಬಾಬೆಲಿನ ಅನೇಕ ಜನರಿಗೆ ಏಕೆ ಭೀತಿದಾಯಕವಾಗಿತ್ತು, ಮತ್ತು ದಾನಿಯೇಲನ ದೃಷ್ಟಿಕೋನವು ಹೇಗೆ ಭಿನ್ನವಾಗಿತ್ತು?
13 ತದನಂತರ ದೇವದೂತನು ದಾನಿಯೇಲನಿಗೆ ಆಶ್ವಾಸನೆ ನೀಡಿದ್ದು: ‘ನೀನು ವಿಶ್ರಾಂತಿ ಪಡೆಯುವಿ.’ (ದಾನಿಯೇಲ 12:13) ಈ ಮಾತುಗಳ ಅರ್ಥವೇನಾಗಿತ್ತು? ತನ್ನ ಮುಂದೆ ಮರಣವು ಇದೆ ಎಂಬುದು ದಾನಿಯೇಲನಿಗೆ ಗೊತ್ತಿತ್ತು. ಆದಾಮನ ದಿನದಿಂದ ಹಿಡಿದು ನಮ್ಮ ದಿನಗಳ ತನಕ, ಮರಣವು ಯಾವ ಮನುಷ್ಯನೂ ತಪ್ಪಿಸಿಕೊಳ್ಳಲು ಅಸಾಧ್ಯವಾದ ಒಂದು ಅಂತ್ಯಾವಸ್ಥೆಯಾಗಿದೆ. ಯೋಗ್ಯವಾಗಿಯೇ ಬೈಬಲು ಮರಣವನ್ನು “ಶತ್ರು” ಎಂದು ಕರೆಯುತ್ತದೆ. (1 ಕೊರಿಂಥ 15:26) ಆದರೂ, ಸಾಯುವುದರ ಕುರಿತಾದ ದಾನಿಯೇಲನ ದೃಷ್ಟಿಕೋನವು, ಅವನ ಸುತ್ತಲೂ ಇದ್ದ ಬಾಬೆಲಿನ ಜನರ ದೃಷ್ಟಿಕೋನಕ್ಕಿಂತ ತೀರ ಭಿನ್ನವಾಗಿತ್ತು. ಸುಮಾರು 4,000 ಸುಳ್ಳು ದೇವದೇವತೆಗಳ ಸಂಕೀರ್ಣ ಆರಾಧನೆಯಲ್ಲಿ ಮುಳುಗಿಹೋಗಿದ್ದ ಅವರಿಗಾದರೋ, ಮರಣದ ಆಲೋಚನೆಯೇ ಎಲ್ಲ ರೀತಿಯ ಭೀತಿಗಳನ್ನು ಉಂಟುಮಾಡುತ್ತಿತ್ತು. ಯಾರು ಅಸಂತೋಷದಿಂದ ಬದುಕಿದ್ದರೋ ಅಥವಾ ಹಿಂಸಾತ್ಮಕ ರೀತಿಯಲ್ಲಿ ಮೃತಪಟ್ಟಿದ್ದರೋ ಅವರು, ಸತ್ತ ಬಳಿಕ ಸೇಡುತೀರಿಸಿಕೊಳ್ಳುವ ದೆವ್ವಗಳೋಪಾದಿ ಬಂದು ಬದುಕಿರುವವರನ್ನು ಕಾಡುತ್ತಾರೆ ಎಂದು ಅವರು ನಂಬುತ್ತಿದ್ದರು. ಭೀತಿದಾಯಕವಾದ ಒಂದು ಅಧೋಲೋಕವಿದೆ ಮತ್ತು ಅದರಲ್ಲಿ ಮಾನವರೂಪದ ಹಾಗೂ ಪ್ರಾಣಿರೂಪದ ಅತಿವಿಕಾರ ಪಿಶಾಚಿಗಳು ಇವೆಯೆಂದು ಸಹ ಬಾಬೆಲಿನವರು ನಂಬಿದ್ದರು.
14 ದಾನಿಯೇಲನಿಗಾದರೋ ಮರಣದ ವಿಷಯದಲ್ಲಿ ಇಂತಹ ಯಾವುದೇ ಅನಿಸಿಕೆಗಳಿರಲಿಲ್ಲ. ದಾನಿಯೇಲನ ದಿನಕ್ಕಿಂತಲೂ ನೂರಾರು ವರ್ಷಗಳಿಗೆ ಮೊದಲೇ, ರಾಜನಾದ ಸೊಲೊಮೋನನು ಹೀಗೆ ಹೇಳುವಂತೆ ದೈವಿಕವಾಗಿ ಪ್ರೇರಿಸಲ್ಪಟ್ಟನು: “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; . . . ಅವರ ಜ್ಞಾಪಕವೇ ಹೋಯಿತಲ್ಲವೆ.” (ಪ್ರಸಂಗಿ 9:5) ಮತ್ತು ಸಾಯುವ ಒಬ್ಬ ವ್ಯಕ್ತಿಯ ಕುರಿತು ಕೀರ್ತನೆಗಾರನು ಹೀಗೆ ಹಾಡಿದ್ದನು: “ಅವನ ಉಸಿರು ಹೋಗಲು ಮಣ್ಣಿಗೆ ಸೇರುತ್ತಾನೆ; ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು.” (ಕೀರ್ತನೆ 146:4) ಆದುದರಿಂದ, ದೇವದೂತನು ತನಗೆ ನುಡಿದ ಮಾತುಗಳು ಖಂಡಿತವಾಗಿಯೂ ನಿಜವಾಗಿ ಪರಿಣಮಿಸುವವು ಎಂಬುದು ದಾನಿಯೇಲನಿಗೆ ಗೊತ್ತಿತ್ತು. ಮರಣದ ಅರ್ಥ ವಿಶ್ರಾಂತಿಯಾಗಿತ್ತು. ಯಾವುದೇ ರೀತಿಯ ಆಲೋಚನೆಗಳಿಲ್ಲ, ಯಾವುದೇ ಕಹಿ ವಿಷಾದಗಳಿಲ್ಲ, ಯಾವುದೇ ರೀತಿಯ ಚಿತ್ರಹಿಂಸೆಯಿಲ್ಲ ಮತ್ತು ಯಾವ ಪಿಶಾಚಿಗಳೂ ಇಲ್ಲ. ಲಾಜರನು ಸತ್ತಾಗಲೂ ಯೇಸು ಕ್ರಿಸ್ತನು ಇದನ್ನೇ ತಿಳಿಸಿದ್ದನು. ಅವನು ಹೇಳಿದ್ದು: “ನಮ್ಮ ಮಿತ್ರನಾದ ಲಾಜರನು ನಿದ್ರೆಮಾಡುತ್ತಾನೆ.”—ಯೋಹಾನ 11:11.
15. ಜನನ ದಿನಕ್ಕಿಂತಲೂ ಮರಣ ದಿನವು ಹೇಗೆ ಉತ್ತಮವಾಗಿರಬಲ್ಲದು?
15 ಸಾಯುವ ವಿಚಾರವು ದಾನಿಯೇಲನಿಗೆ ಏಕೆ ಭೀತಿದಾಯಕವಾಗಿರಲಿಲ್ಲ ಎಂಬುದಕ್ಕಿರುವ ಇನ್ನೊಂದು ಕಾರಣವನ್ನು ಪರಿಗಣಿಸಿರಿ. ದೇವರ ವಾಕ್ಯವು ಹೇಳುವುದು: “ಸುಗಂಧತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ; ಜನನದಿನಕ್ಕಿಂತ ಮರಣದಿನ ಮೇಲು.” (ಪ್ರಸಂಗಿ 7:1, 2) ಹಾಗಾದರೆ, ಹರ್ಷದಾಯಕವಾದ ಜನನ ದಿನಕ್ಕಿಂತಲೂ ಮರಣ ದಿನವು ಹೇಗೆ ಉತ್ತಮವಾಗಿರಸಾಧ್ಯವಿದೆ? ಇದರ ಕೀಲಿ ಕೈ “ಹೆಸರಿ”ನಲ್ಲಿ ಅಡಕವಾಗಿದೆ. “ಸುಗಂಧತೈಲ”ವು ಅತ್ಯಂತ ದುಬಾರಿಯಾಗಿರಸಾಧ್ಯವಿದೆ. ಒಂದು ಸಂದರ್ಭದಲ್ಲಿ ಲಾಜರನ ಸಹೋದರಿಯಾದ ಮರಿಯಳು ಯೇಸುವಿನ ಪಾದಕ್ಕೆ ಬಹು ಬೆಲೆಯುಳ್ಳ ಜಟಾಮಾಂಸಿ ತೈಲವನ್ನು ಹಚ್ಚಿದಳು. ಆ ತೈಲದ ಬೆಲೆಯು, ಒಂದು ವರ್ಷದ ಸಂಬಳಕ್ಕೆ ಸಮವಾಗಿತ್ತು! (ಯೋಹಾನ 12:1-7) ಒಂದು ಒಳ್ಳೆಯ ಹೆಸರು ಹೇಗೆ ಅಷ್ಟೊಂದು ಅಮೂಲ್ಯವಾಗಿರಸಾಧ್ಯವಿದೆ? ಕೇವಲ ಹೆಸರು ಮಾತ್ರ ಪ್ರಾಮುಖ್ಯವಲ್ಲ, ಬದಲಾಗಿ ಆ ಹೆಸರು ಏನನ್ನು ಪ್ರತಿನಿಧಿಸುತ್ತದೋ ಅದೇ ಹೆಚ್ಚು ಅಮೂಲ್ಯವಾದ ಸಂಗತಿಯಾಗಿದೆ. ಒಬ್ಬನು ಜನಿಸುವಾಗ, ಆ ಹೆಸರಿನ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಗುಣಗಳ ಕುರಿತಾದ ಸತ್ಕೀರ್ತಿಯಾಗಲಿ, ಒಳ್ಳೆಯ ಕೆಲಸಗಳ ದಾಖಲೆಯಾಗಲಿ, ಅಪೂರ್ವವಾದ ನೆನಪಾಗಲಿ ಇರುವುದಿಲ್ಲ. ಆದರೆ ಅವನ ಬದುಕು ಕೊನೆಗೊಳ್ಳುವಾಗ, ಅವನ ಹೆಸರು ಈ ಎಲ್ಲ ಲಕ್ಷಣಗಳನ್ನು ವ್ಯಕ್ತಪಡಿಸುತ್ತದೆ. ಮತ್ತು ದೇವರ ದೃಷ್ಟಿಯಲ್ಲಿ ಅದು ಒಂದು ಒಳ್ಳೆಯ ಹೆಸರಾಗಿರುವಲ್ಲಿ, ಯಾವುದೇ ಪ್ರಾಪಂಚಿಕ ಸಂಪತ್ತಿಗಿಂತಲೂ ಅದು ಅತ್ಯಮೂಲ್ಯವಾದದ್ದಾಗಿರುತ್ತದೆ.
16. (ಎ) ದೇವರೊಂದಿಗೆ ಒಂದು ಒಳ್ಳೆಯ ಹೆಸರನ್ನು ಮಾಡಿಕೊಳ್ಳಲಿಕ್ಕಾಗಿ ದಾನಿಯೇಲನು ಹೇಗೆ ಪ್ರಯತ್ನಿಸಿದನು? (ಬಿ) ಯೆಹೋವನೊಂದಿಗೆ ಒಂದು ಒಳ್ಳೆಯ ಹೆಸರನ್ನು ಮಾಡಿಕೊಳ್ಳುವುದರಲ್ಲಿ ತಾನು ಸಫಲನಾಗಿದ್ದೇನೆ ಎಂಬ ಪೂರ್ಣ ಭರವಸೆಯಿಂದ ದಾನಿಯೇಲನು ಹೇಗೆ ವಿಶ್ರಾಂತಿ ಪಡೆಯಸಾಧ್ಯವಿತ್ತು?
16 ತನ್ನ ಜೀವನದಾದ್ಯಂತ ದಾನಿಯೇಲನು, ದೇವರೊಂದಿಗೆ ಒಂದು ಒಳ್ಳೆಯ ಹೆಸರನ್ನು ಮಾಡಿಕೊಳ್ಳಲಿಕ್ಕಾಗಿ ತನ್ನಿಂದಾದುದೆಲ್ಲವನ್ನೂ ಮಾಡಿದನು, ಮತ್ತು ಈ ಎಲ್ಲ ಪ್ರಯತ್ನಗಳನ್ನು ಯೆಹೋವನು ಅಲಕ್ಷಿಸಲಿಲ್ಲ. ಆತನು ದಾನಿಯೇಲನನ್ನು ಜಾಗರೂಕತೆಯಿಂದ ಗಮನಿಸುತ್ತಿದ್ದನು ಮತ್ತು ಅವನ ಹೃದಯವನ್ನು ಪರೀಕ್ಷಿಸಿದನು. ದೇವರು ರಾಜ ದಾವೀದನಿಗೂ ಹೀಗೆಯೇ ಮಾಡಿದ್ದನು. ರಾಜ ದಾವೀದನು ಹಾಡಿದ್ದು: “ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ ತಿಳುಕೊಂಡಿದ್ದೀ; ನಾನು ಕೂತುಕೊಳ್ಳುವದೂ ಏಳುವದೂ ನಿನಗೆ ಗೊತ್ತದೆ; ದೂರದಿಂದಲೇ ನನ್ನ ಆಲೋಚನೆಗಳನ್ನು ಬಲ್ಲವನಾಗಿರುತ್ತೀ.” (ಕೀರ್ತನೆ 139:1, 2) ದಾನಿಯೇಲನು ಪರಿಪೂರ್ಣನಾಗಿರಲಿಲ್ಲ ಎಂಬುದು ಒಪ್ಪಿಕೊಳ್ಳತಕ್ಕ ವಿಷಯವೇ. ಅವನು ಪಾಪಿಯಾಗಿದ್ದ ಆದಾಮನ ಸಂತತಿಯವನಾಗಿದ್ದನು ಹಾಗೂ ಪಾಪಪೂರ್ಣ ಜನಾಂಗವೊಂದರ ಸದಸ್ಯನಾಗಿದ್ದನು. (ರೋಮಾಪುರ 3:23) ಆದರೆ ದಾನಿಯೇಲನು ತನ್ನ ಪಾಪದ ಬಗ್ಗೆ ಪಶ್ಚಾತ್ತಾಪಪಟ್ಟು, ಯಥಾರ್ಥ ರೀತಿಯಲ್ಲಿ ತನ್ನ ದೇವರೊಂದಿಗೆ ನಡೆಯಲು ಪ್ರಯತ್ನಿಸುತ್ತಾ ಇದ್ದನು. ಆದುದರಿಂದಲೇ, ಯೆಹೋವನು ತನ್ನ ಪಾಪವನ್ನು ಕ್ಷಮಿಸುವನು ಮತ್ತು ತನ್ನ ಕಡೆಗೆ ಎಂದೂ ಅಸಮಾಧಾನವನ್ನು ತೋರಿಸಲಾರನು ಎಂದು ಆ ನಂಬಿಗಸ್ತ ಪ್ರವಾದಿಯು ದೃಢಭರವಸೆಯಿಂದಿರಸಾಧ್ಯವಿತ್ತು. (ಕೀರ್ತನೆ 103:10-14; ಯೆಶಾಯ 1:18) ತನ್ನ ನಂಬಿಗಸ್ತ ಸೇವಕರ ಸತ್ಕಾರ್ಯಗಳನ್ನು ಯೆಹೋವನು ಜ್ಞಾಪಿಸಿಕೊಳ್ಳುತ್ತಾನೆ. (ಇಬ್ರಿಯ 6:10) ಹೀಗಿರುವುದರಿಂದಲೇ ಯೆಹೋವನ ದೂತನು ಎರಡು ಬಾರಿ ದಾನಿಯೇಲನನ್ನು “ಅತಿಪ್ರಿಯ”ನು ಎಂದು ಕರೆದನು. (ದಾನಿಯೇಲ 10:11, 19) ಇದರರ್ಥ, ದಾನಿಯೇಲನು ದೇವರ ಪ್ರೀತಿಪಾತ್ರನಾಗಿದ್ದನು. ಯೆಹೋವನೊಂದಿಗೆ ತಾನು ಒಂದು ಒಳ್ಳೆಯ ಹೆಸರನ್ನು ಮಾಡಿಕೊಂಡಿದ್ದೇನೆ ಎಂದು ತಿಳಿದವನಾಗಿದ್ದು, ದಾನಿಯೇಲನು ಸಂತೃಪ್ತಿಯಿಂದ ವಿಶ್ರಾಂತಿ ಪಡೆಯಸಾಧ್ಯವಿತ್ತು.
17. ಇಂದು ನಾವು ಯೆಹೋವನೊಂದಿಗೆ ಒಂದು ಒಳ್ಳೆಯ ಹೆಸರನ್ನು ಮಾಡಿಕೊಳ್ಳುವುದು ಏಕೆ ಜರೂರಿಯದ್ದಾಗಿದೆ?
17 ನಮ್ಮಲ್ಲಿ ಪ್ರತಿಯೊಬ್ಬರೂ ‘ನಾನು ಯೆಹೋವನೊಂದಿಗೆ ಒಂದು ಒಳ್ಳೆಯ ಹೆಸರನ್ನು ಮಾಡಿಕೊಂಡಿದ್ದೇನೊ?’ ಎಂದು ಕೇಳಿಕೊಳ್ಳುವುದು ಒಳ್ಳೇದು. ನಾವು ತೊಂದರೆಭರಿತ ಕಾಲಗಳಲ್ಲಿ ಜೀವಿಸುತ್ತಿದ್ದೇವೆ. ನಮ್ಮಲ್ಲಿ ಯಾವನಿಗೂ, ಯಾವುದೇ ಸಮಯದಲ್ಲಾಗಲಿ ಮರಣವು ಹಠಾತ್ತಾಗಿ ಬರಬಹುದು ಎಂಬುದನ್ನು ಒಪ್ಪಿಕೊಳ್ಳುವುದು ಅವಾಸ್ತವಿಕವಲ್ಲ, ಬದಲಾಗಿ ಸ್ವಾಭಾವಿಕವಾದದ್ದಾಗಿದೆ. (ಪ್ರಸಂಗಿ 9:11) ಹೀಗಿರುವುದರಿಂದ, ನಮ್ಮಲ್ಲಿ ಪ್ರತಿಯೊಬ್ಬರೂ ತಡಮಾಡದೆ ಈಗಲೇ ದೇವರೊಂದಿಗೆ ಒಂದು ಒಳ್ಳೆಯ ಹೆಸರನ್ನು ಮಾಡಿಕೊಳ್ಳಲು ನಿರ್ಧರಿಸುವುದು ಎಷ್ಟು ಅತ್ಯಾವಶ್ಯಕ! ಒಂದುವೇಳೆ ನಾವು ದೇವರೊಂದಿಗೆ ಒಳ್ಳೆಯ ಹೆಸರನ್ನು ಮಾಡಿಕೊಳ್ಳುವಲ್ಲಿ, ನಾವು ಮರಣಕ್ಕೆ ಹೆದರಬೇಕಾಗಿಲ್ಲ. ಅದು ನಿದ್ರೆಯಂತೆ ಕೇವಲ ವಿಶ್ರಾಂತಿಯಾಗಿದೆ. ಮತ್ತು ಒಬ್ಬನನ್ನು ನಿದ್ರೆಯಿಂದ ಎಬ್ಬಿಸಸಾಧ್ಯವಿರುವಂತೆಯೇ ಸತ್ತವನನ್ನೂ ದೇವರು ಎಬ್ಬಿಸಸಾಧ್ಯವಿದೆ!
‘ನೀನು ನಿಲ್ಲುವಿ’
18, 19. (ಎ) ಭವಿಷ್ಯತ್ತಿನಲ್ಲಿ ದಾನಿಯೇಲನು “ನಿಲ್ಲು”ವನು ಎಂದು ದೇವದೂತನು ಮುಂತಿಳಿಸಿದಾಗ, ಅವನ ಮಾತಿನ ಅರ್ಥವೇನಾಗಿತ್ತು? (ಬಿ) ಪುನರುತ್ಥಾನದ ನಿರೀಕ್ಷೆಯು ದಾನಿಯೇಲನಿಗೆ ಅಷ್ಟೊಂದು ಚಿರಪರಿಚಿತವಾಗಿದ್ದದ್ದೇಕೆ?
18 ದಾನಿಯೇಲ ಪುಸ್ತಕವು, ದೇವರು ಮಾನವರಿಗೆ ವಾಗ್ದಾನಿಸಿರುವ ಅತ್ಯುತ್ತಮ ವಾಗ್ದಾನಗಳಲ್ಲಿ ಒಂದರೊಂದಿಗೆ ಮುಕ್ತಾಯಗೊಳ್ಳುತ್ತದೆ. ಯೆಹೋವನ ದೂತನು ದಾನಿಯೇಲನಿಗೆ ಹೇಳಿದ್ದು: “ಯುಗಸಮಾಪ್ತಿಯಲ್ಲಿ ಎದ್ದು ನಿನಗಾಗುವ ಸ್ವಾಸ್ತ್ಯದೊಳಗೆ ನಿಲ್ಲುವಿ.” ದೇವದೂತನ ಈ ಮಾತುಗಳ ಅರ್ಥವೇನಾಗಿತ್ತು? ಈ ಮುಂಚೆ ಅವನು ಹೇಳಿದ್ದ “ವಿಶ್ರಾಂತಿ”ಯು ಮರಣಕ್ಕೆ ಸೂಚಿತವಾಗಿದ್ದರಿಂದ, ಭವಿಷ್ಯತ್ತಿನಲ್ಲಿ ಯಾವಾಗಲೋ ದಾನಿಯೇಲನು “ನಿಲ್ಲು”ವನು ಎಂಬ ವಾಗ್ದಾನವು, ಒಂದೇ ಒಂದು ಸಂಗತಿಯನ್ನು ಅರ್ಥೈಸಸಾಧ್ಯವಿದೆ—ಪುನರುತ್ಥಾನವನ್ನೇ!b ವಾಸ್ತವದಲ್ಲಿ, ಹೀಬ್ರು ಶಾಸ್ತ್ರದಲ್ಲಿ ಕಂಡುಬರುವ ಪುನರುತ್ಥಾನದ ಕುರಿತಾದ ಪ್ರಪ್ರಥಮ ಸ್ಪಷ್ಟ ಉಲ್ಲೇಖವು, ದಾನಿಯೇಲ ಪುಸ್ತಕದ 12ನೆಯ ಅಧ್ಯಾಯದಲ್ಲಿದೆ ಎಂದು ಕೆಲವು ವಿದ್ವಾಂಸರು ಹೇಳಿದ್ದಾರೆ. (ದಾನಿಯೇಲ 12:2) ಆದರೆ, ಈ ವಿಷಯದಲ್ಲಿ ಅವರ ಹೇಳಿಕೆಯು ತಪ್ಪಾಗಿದೆ. ಪುನರುತ್ಥಾನದ ನಿರೀಕ್ಷೆಯ ಬಗ್ಗೆ ದಾನಿಯೇಲನು ಚಿರಪರಿಚಿತನಾಗಿದ್ದನು.
19 ಉದಾಹರಣೆಗಾಗಿ, ಸುಮಾರು ಎರಡು ಶತಮಾನಗಳಿಗೆ ಮುಂಚೆ ದಾಖಲಿಸಲ್ಪಟ್ಟಿದ್ದ ಯೆಶಾಯನ ಈ ಮಾತುಗಳು ದಾನಿಯೇಲನಿಗೆ ಗೊತ್ತಿದ್ದವು ಎಂಬುದರಲ್ಲಿ ಸಂದೇಹವಿಲ್ಲ: “ಮೃತರಾದ ನಿನ್ನ ಜನರು ಬದುಕುವರು, ನನ್ನವರ ಹೆಣಗಳು ಜೀವದಿಂದೇಳುವವು, ಮಣ್ಣಿನಲ್ಲಿ ಪವಳಿಸಿರುವವರೇ, ಎಚ್ಚತ್ತು ಹರ್ಷಧ್ವನಿ ಗೈಯಿರಿ! [ಯೆಹೋವನೇ,] ನೀನು ಸುರಿಯುವ ಇಬ್ಬನಿಯು ಜ್ಯೋತಿರ್ಮಯವಾದದ್ದು, ಭೂಮಿಯು ಸತ್ತವರನ್ನು ಹೊರಪಡಿಸುವದು.” (ಯೆಶಾಯ 26:19) ಅದಕ್ಕೂ ಬಹಳ ಸಮಯದ ಮುಂಚೆಯೇ, ನಿಜವಾದ ಪುನರುತ್ಥಾನಗಳನ್ನು ಮಾಡುವಂತೆ ಎಲೀಯ ಹಾಗೂ ಎಲೀಷರಿಗೆ ಯೆಹೋವನಿಂದ ಶಕ್ತಿಯು ಕೊಡಲ್ಪಟ್ಟಿತು. (1 ಅರಸು 17:17-24; 2 ಅರಸು 4:32-37) ಅದಕ್ಕಿಂತಲೂ ಮುಂಚೆ, ಪ್ರವಾದಿಯಾದ ಸಮುವೇಲನ ತಾಯಿ ಹನ್ನಳು, ಯೆಹೋವನು ಮಾನವರನ್ನು ಷಿಯೋಲ್ನಿಂದ, ಅಂದರೆ ಸಮಾಧಿಯಿಂದ ಎಬ್ಬಿಸಲು ಸಮರ್ಥನಾಗಿದ್ದಾನೆ ಎಂಬುದನ್ನು ಅಂಗೀಕರಿಸಿದ್ದಳು. (1 ಸಮುವೇಲ 2:6) ಅಷ್ಟುಮಾತ್ರವಲ್ಲ, ಅದಕ್ಕೂ ಮೊದಲು ನಂಬಿಗಸ್ತನಾದ ಯೋಬನು ತನ್ನ ಸ್ವಂತ ನಿರೀಕ್ಷೆಯನ್ನು ಈ ಕೆಳಗಿನ ಮಾತುಗಳಿಂದ ವ್ಯಕ್ತಪಡಿಸಿದನು: “ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ? ಹಾಗಾಗುವದಾದರೆ ನನಗೆ ಬಿಡುಗಡೆಯಾಗುವವರೆಗೆ ನನ್ನ ವಾಯಿದೆಯ ದಿನಗಳಲ್ಲೆಲ್ಲಾ ಕಾದುಕೊಂಡಿರುವೆನು; ನೀನು ಕರೆದರೆ ಉತ್ತರಕೊಡುವೆನು, ನೀನು ಸೃಷ್ಟಿಸಿದ ನನ್ನ ಮೇಲೆ ನಿನಗೆ ಹಂಬಲಿಕೆ ಹುಟ್ಟೀತು.”—ಯೋಬ 14:14, 15.
20, 21. (ಎ) ಖಂಡಿತವಾಗಿಯೂ ದಾನಿಯೇಲನು ಯಾವ ಪುನರುತ್ಥಾನದ ಭಾಗವಾಗಿರುವನು? (ಬಿ) ಪ್ರಮೋದವನದಲ್ಲಿ ಪುನರುತ್ಥಾನವು ಯಾವ ರೀತಿಯಲ್ಲಿ ಸಂಭವಿಸಲಿದೆ?
20 ಯೋಬನಂತೆ, ಭವಿಷ್ಯತ್ತಿನಲ್ಲಿ ಒಂದು ದಿನ ತನ್ನನ್ನು ಪುನರುತ್ಥಾನಗೊಳಿಸಲು ಯೆಹೋವನು ಖಂಡಿತವಾಗಿಯೂ ಹಂಬಲಿಸುವನು ಎಂಬ ದೃಢವಿಶ್ವಾಸದಿಂದಿರಲು ದಾನಿಯೇಲನಿಗೆ ಸಕಾರಣವಿತ್ತು. ಆದರೂ, ಬಲಿಷ್ಠನಾದ ಒಬ್ಬ ಆತ್ಮಿಕ ಜೀವಿಯು ಆ ನಿರೀಕ್ಷೆಯನ್ನು ದೃಢಪಡಿಸುತ್ತಿರುವುದನ್ನು ಕೇಳಿಸಿಕೊಳ್ಳುವುದು ದಾನಿಯೇಲನಿಗೆ ಬಹಳ ಸಾಂತ್ವನದಾಯಕವಾಗಿದ್ದಿರಬೇಕು. ಹೌದು, ಕ್ರಿಸ್ತನ ಸಹಸ್ರ ವರ್ಷದಾಳಿಕೆಯ ಸಮಯದಲ್ಲಿ ಸಂಭವಿಸುವ “ನೀತಿವಂತರ ಪುನರುತ್ಥಾನ”ದಲ್ಲಿ ದಾನಿಯೇಲನು ನಿಲ್ಲುವನು. (ಲೂಕ 14:14, NW) ಅದು ದಾನಿಯೇಲನಿಗೆ ಯಾವ ಅರ್ಥದಲ್ಲಿರುವುದು? ದೇವರ ವಾಕ್ಯವು ನಮಗೆ ಅದರ ಕುರಿತು ಹೆಚ್ಚಿನ ವಿಷಯಗಳನ್ನು ತಿಳಿಸುತ್ತದೆ.
21 ಯೆಹೋವ “ದೇವರು ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ.” (1 ಕೊರಿಂಥ 14:33) ಆದುದರಿಂದ, ಪ್ರಮೋದವನದಲ್ಲಿನ ಪುನರುತ್ಥಾನವು ಒಂದು ವ್ಯವಸ್ಥಿತ ರೀತಿಯಲ್ಲಿ ಸಂಭವಿಸುವುದು ಎಂಬುದು ಸುವ್ಯಕ್ತ. ಅಷ್ಟರೊಳಗೆ, ಬಹುಶಃ ಅರ್ಮಗೆದೋನ್ನ ಬಳಿಕ ಸ್ವಲ್ಪ ಸಮಯವು ಗತಿಸಿರುವುದು. (ಪ್ರಕಟನೆ 16:14, 16) ಹಳೆಯ ವಿಷಯಗಳ ವ್ಯವಸ್ಥೆಯ ಎಲ್ಲ ಗುರುತುಗಳೂ ಸಂಪೂರ್ಣವಾಗಿ ತೆಗೆದುಹಾಕಲ್ಪಟ್ಟಿರುವವು. ಮತ್ತು ಖಂಡಿತವಾಗಿಯೂ ಮೃತರನ್ನು ಸ್ವಾಗತಿಸಲಿಕ್ಕಾಗಿ ಸಿದ್ಧತೆಗಳು ಮಾಡಲ್ಪಟ್ಟಿರುವವು. ಮೃತರು ಜೀವಿತರಾಗುವ ಕ್ರಮದ ಕುರಿತು ಬೈಬಲು ನಮಗೆ ಈ ಪೂರ್ವನಿದರ್ಶನವನ್ನು ಕೊಡುತ್ತದೆ: “ಪ್ರತಿಯೊಬ್ಬನು ತನ್ನ ತನ್ನ ತರಗತಿಯಲ್ಲಿರುವನು.” (1 ಕೊರಿಂಥ 15:23) ‘ನೀತಿವಂತರಿಗೂ ಅನೀತಿವಂತರಿಗೂ ಆಗುವ ಪುನರುತ್ಥಾನದ’ ವಿಷಯದಲ್ಲಿ ಹೇಳುವುದಾದರೆ, ಬಹುಶಃ ಮೊದಲು ನೀತಿವಂತರು ಪುನರುತ್ಥಾನಗೊಳ್ಳುವರು ಎಂಬಂತೆ ತೋರುತ್ತದೆ. (ಅ. ಕೃತ್ಯಗಳು 24:15) ಆ ರೀತಿಯಲ್ಲಿ, ದಾನಿಯೇಲನಂತಹ ಪುರಾತನ ಸಮಯದ ನಂಬಿಗಸ್ತ ಪುರುಷರು, ಭೂವ್ಯವಹಾರಗಳ ಆಡಳಿತವನ್ನು ನೋಡಿಕೊಳ್ಳುವುದರಲ್ಲಿ ಸಹಾಯ ಮಾಡಲು ಶಕ್ತರಾಗಿರುವರು; ಅಷ್ಟುಮಾತ್ರವಲ್ಲ, ಪುನರುತ್ಥಾನಗೊಳ್ಳಲಿರುವ ಕೋಟಿಗಟ್ಟಲೆ ಮಂದಿ “ಅನೀತಿವಂತ”ರಿಗೆ ಬೋಧಿಸುವ ಕೆಲಸದಲ್ಲಿಯೂ ಅವರು ಒಳಗೂಡುವರು.—ಕೀರ್ತನೆ 45:16.
22. ನಿಸ್ಸಂದೇಹವಾಗಿಯೂ ದಾನಿಯೇಲನು ಯಾವ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದುಕೊಳ್ಳಲು ಅತ್ಯಾಸಕ್ತಿಯಿಂದ ಎದುರುನೋಡುವನು?
22 ದಾನಿಯೇಲನು ಅಂತಹ ಜವಾಬ್ದಾರಿಗಳನ್ನು ಸ್ವೀಕರಿಸಲು ಸಿದ್ಧನಾಗುವುದಕ್ಕೆ ಮೊದಲು, ಕೆಲವು ಪ್ರಶ್ನೆಗಳಿಗೆ ಅವನು ಉತ್ತರಗಳನ್ನು ಪಡೆದುಕೊಳ್ಳಲು ಬಯಸುವನು ಎಂಬುದಂತೂ ಖಂಡಿತ. ತನ್ನ ವಶಕ್ಕೆ ಒಪ್ಪಿಸಲ್ಪಟ್ಟಿದ್ದ ಕೆಲವೊಂದು ಅಗಾಧ ಪ್ರವಾದನೆಗಳ ಕುರಿತು ಅವನು ಹೇಳಿದ್ದು: “ನನಗೆ ಕೇಳಿಸಿದರೂ ಅರ್ಥವಾಗಲಿಲ್ಲ.” (ದಾನಿಯೇಲ 12:8) ಕಟ್ಟಕಡೆಗೆ ಆ ದೈವಿಕ ರಹಸ್ಯಗಳನ್ನು ಅರ್ಥಮಾಡಿಕೊಳ್ಳುವಾಗ ಅವನೆಷ್ಟು ರೋಮಾಂಚಿತನಾಗುವನು! ಅವನು ಮೆಸ್ಸೀಯನ ಕುರಿತಾದ ಎಲ್ಲ ಘಟನೆಗಳನ್ನು ಕೇಳಿಸಿಕೊಳ್ಳಲು ಬಯಸುವನು ಎಂಬುದರಲ್ಲಿ ಸಂದೇಹವೇ ಇಲ್ಲ. ತನ್ನ ದಿನದಿಂದ ಹಿಡಿದು ನಮ್ಮ ದಿನಗಳ ವರೆಗಿನ ಲೋಕ ಶಕ್ತಿಗಳ ಮುನ್ನಡೆಯ ಕುರಿತು, “ಅಂತ್ಯಕಾಲ”ದಲ್ಲಿ ಸಂಭವಿಸಿದ ಹಿಂಸೆಯ ಎದುರಿನಲ್ಲಿಯೂ ಪಟ್ಟುಹಿಡಿದು ನಂಬಿಗಸ್ತರಾಗಿ ಮುಂದುವರಿದ “ಪರಾತ್ಪರನ ಪವಿತ್ರ ಜನರ” ಗುರುತಿನ ಕುರಿತು, ಮತ್ತು ದೇವರ ಮೆಸ್ಸೀಯ ರಾಜ್ಯದ ಮೂಲಕ ಎಲ್ಲ ಮಾನವ ರಾಜ್ಯಗಳ ಅಂತಿಮ ನಾಶನದ ಕುರಿತು ದಾನಿಯೇಲನು ಅತ್ಯಾಸಕ್ತಿಯಿಂದ ತಿಳಿದುಕೊಳ್ಳುವನು.—ದಾನಿಯೇಲ 2:44; 7:22; 12:4.
ಪ್ರಮೋದವನದಲ್ಲಿ ದಾನಿಯೇಲನ ಹಾಗೂ ನಿಮ್ಮ ಸ್ವಾಸ್ತ್ಯ!
23, 24. (ಎ) ದಾನಿಯೇಲನು ಪುನರುತ್ಥಾನವಾದ ಬಳಿಕ ನೋಡುವ ಲೋಕಕ್ಕೂ ಅವನು ಈ ಮುಂಚೆ ನೋಡಿದ್ದ ಲೋಕಕ್ಕೂ ಯಾವ ವ್ಯತ್ಯಾಸವಿರುವುದು? (ಬಿ) ಪ್ರಮೋದವನದಲ್ಲಿ ದಾನಿಯೇಲನಿಗೆ ಒಂದು ಸ್ಥಳವು ಸಿಕ್ಕುವುದೊ, ಮತ್ತು ಇದು ನಮಗೆ ಹೇಗೆ ಗೊತ್ತು?
23 ಆ ಸಮಯದಲ್ಲಿ ದಾನಿಯೇಲನು ಎಲ್ಲಿರುವನೋ ಆ ಲೋಕದ ಕುರಿತು, ಅಂದರೆ ಅವನ ದಿನಗಳಲ್ಲಿದ್ದ ಲೋಕಕ್ಕಿಂತ ತೀರ ಭಿನ್ನವಾಗಿರುವ ಲೋಕದ ಕುರಿತು ಅವನು ತಿಳಿದುಕೊಳ್ಳಲು ಬಯಸುವನು. ಅವನು ನೋಡಿದ್ದ ಲೋಕವನ್ನು ಹಾಳುಮಾಡಿದಂತಹ ಯುದ್ಧ ಹಾಗೂ ದಬ್ಬಾಳಿಕೆಗಳ ಎಲ್ಲ ಕುರುಹುಗಳೂ ಇಲ್ಲವಾಗುವವು. ಅಲ್ಲಿ ದುಃಖವಿರುವುದಿಲ್ಲ, ಅಸ್ವಸ್ಥತೆಯಿರುವುದಿಲ್ಲ, ಮರಣವೂ ಇರುವುದಿಲ್ಲ. (ಯೆಶಾಯ 25:8; 33:24) ಆದರೆ ಆಹಾರವು ಯಥೇಷ್ಟವಾಗಿರುವುದು, ಬೇಕಾದಷ್ಟು ವಸತಿ ಸೌಕರ್ಯಗಳಿರುವವು, ಮತ್ತು ಎಲ್ಲರಿಗೂ ಸಂತೃಪ್ತಿಕರವಾದ ಕೆಲಸವಿರುವುದು. (ಕೀರ್ತನೆ 72:16; ಯೆಶಾಯ 65:21, 22) ಇಡೀ ಮಾನವಕುಲವು ಒಂದು ಐಕ್ಯವಾದ, ಸಂತೋಷಭರಿತ ಕುಟುಂಬವಾಗಿರುವುದು.
24 ಖಂಡಿತವಾಗಿಯೂ ಆ ಲೋಕದಲ್ಲಿ ದಾನಿಯೇಲನಿಗೆ ಒಂದು ಸ್ಥಳವು ಸಿಕ್ಕುವುದು. “ನೀನು . . . ಎದ್ದು ನಿನಗಾಗುವ ಸ್ವಾಸ್ತ್ಯದೊಳ ನಿಲ್ಲುವಿ” ಎಂದು ದೇವದೂತನು ಅವನಿಗೆ ಹೇಳಿದನು. (ಓರೆಅಕ್ಷರಗಳು ನಮ್ಮವು.) ಇಲ್ಲಿ “ಸ್ವಾಸ್ತ್ಯ” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಶಬ್ದವು, ಅಕ್ಷರಾರ್ಥಕವಾದ ಜಮೀನಿನ ತುಂಡು ನೆಲಗಳನ್ನು ಸೂಚಿಸಲು ಉಪಯೋಗಿಸುವಂತಹದ್ದೇ ಶಬ್ದವಾಗಿದೆ.c ಇಸ್ರಾಯೇಲ್ನ ಪುನಸ್ಸ್ಥಾಪಿತ ದೇಶದ ಪಾಲುಮಾಡುವಿಕೆಯ ಕುರಿತಾದ ಯೆಹೆಜ್ಕೇಲನ ಪ್ರವಾದನೆಯು ದಾನಿಯೇಲನಿಗೆ ಚಿರಪರಿಚಿತವಾಗಿದ್ದಿರಬಹುದು. (ಯೆಹೆಜ್ಕೇಲ 47:13–48:35) ಪ್ರಮೋದವನದಲ್ಲಾಗುವ ಅದರ ನೆರವೇರಿಕೆಯ ಕುರಿತು ಯೆಹೆಜ್ಕೇಲನ ಪ್ರವಾದನೆಯು ಏನನ್ನು ಸೂಚಿಸುತ್ತದೆ? ದೇವಜನರೆಲ್ಲರಿಗೆ ಪ್ರಮೋದವನದಲ್ಲಿ ಒಂದು ಸ್ಥಳವು ಸಿಕ್ಕುವುದು; ಭೂಪ್ರದೇಶವು ಸಹ ಒಂದು ವ್ಯವಸ್ಥಿತವಾದ ಹಾಗೂ ನ್ಯಾಯವಾದ ರೀತಿಯಲ್ಲಿ ಪಾಲುಮಾಡಲ್ಪಡುವುದು. ಪ್ರಮೋದವನದಲ್ಲಿ ದಾನಿಯೇಲನ ಸ್ವಾಸ್ತ್ಯವು ಕೇವಲ ಒಂದು ತುಂಡು ನೆಲಕ್ಕಿಂತಲೂ ಹೆಚ್ಚನ್ನು ಒಳಗೂಡುವುದು ಎಂಬುದಂತೂ ನಿಶ್ಚಯ. ಪ್ರಮೋದವನದಲ್ಲಿ ನೆರವೇರುವ ದೇವರ ಉದ್ದೇಶದಲ್ಲಿ ದಾನಿಯೇಲನ ಪಾತ್ರವನ್ನು ಸಹ ಅದು ಒಳಗೂಡುವುದು. ದಾನಿಯೇಲನಿಗೆ ವಾಗ್ದಾನಿಸಲ್ಪಟ್ಟ ಬಹುಮಾನವು ಅವನಿಗೆ ಖಂಡಿತವಾಗಿಯೂ ದೊರೆಯುವುದು.
25. (ಎ) ಪ್ರಮೋದವನದಲ್ಲಿನ ಜೀವಿತದ ಪ್ರತೀಕ್ಷೆಗಳಲ್ಲಿ ನಿಮಗೆ ಹಿಡಿಸುವಂತಹ ಕೆಲವು ಪ್ರತೀಕ್ಷೆಗಳು ಯಾವುವು? (ಬಿ) ಮಾನವರು ಪ್ರಮೋದವನಕ್ಕೆ ಸೇರಿದವರಾಗಿದ್ದಾರೆ ಎಂದು ಯುಕ್ತವಾಗಿಯೇ ಏಕೆ ಹೇಳಸಾಧ್ಯವಿದೆ?
25 ಹಾಗಾದರೆ, ನಿಮ್ಮ ಸ್ವಾಸ್ತ್ಯದ ಕುರಿತಾಗಿ ಏನು? ಆ ವಾಗ್ದಾನಗಳು ನಿಮಗೂ ಅನ್ವಯಿಸಬಲ್ಲವು. ವಿಧೇಯ ಮಾನವರು ತಮ್ಮ ಸ್ವಾಸ್ತ್ಯಕ್ಕಾಗಿ “ನಿಲ್ಲು”ವಂತೆ, ಅಂದರೆ ಪ್ರಮೋದವನದಲ್ಲಿ ಒಂದು ಸ್ಥಳವನ್ನು ಪಡೆದುಕೊಳ್ಳುವಂತೆ ಯೆಹೋವನು ಬಯಸುತ್ತಾನೆ. ಇದನ್ನು ಊಹಿಸಿಕೊಳ್ಳಿರಿ! ಖಂಡಿತವಾಗಿಯೂ, ಬೈಬಲ್ ಸಮಯಗಳ ಇನ್ನಿತರ ನಂಬಿಗಸ್ತ ಸ್ತ್ರೀಪುರುಷರೊಂದಿಗೆ, ವ್ಯಕ್ತಿಗತವಾಗಿ ದಾನಿಯೇಲನನ್ನು ಭೇಟಿಯಾಗುವುದು ಒಂದು ರೋಮಾಂಚನವಾಗಿರುವುದು. ತದನಂತರ ಇನ್ನೂ ಅಸಂಖ್ಯಾತ ಮಂದಿ ಪುನರುತ್ಥಾನಗೊಳ್ಳುವರು, ಮತ್ತು ಅವರಿಗೆ ಯೆಹೋವ ದೇವರ ಬಗ್ಗೆ ತಿಳಿಸಿ, ಆತನನ್ನು ಪ್ರೀತಿಸುವಂತೆ ಕಲಿಸುವ ಅಗತ್ಯವಿರುವುದು. ನಮ್ಮ ಭೂಗೃಹವನ್ನು ನೋಡಿಕೊಳ್ಳುತ್ತಾ, ಅದನ್ನು ಅಪರಿಮಿತವಾದ ವೈವಿಧ್ಯಗಳಿಂದಲೂ ಶಾಶ್ವತವಾದ ಸೌಂದರ್ಯದಿಂದಲೂ ಕೂಡಿದ ಒಂದು ಪ್ರಮೋದವನವನ್ನಾಗಿ ಮಾಡಲು ಸಹಾಯ ಮಾಡುತ್ತಾ ಇರುವುದನ್ನು ನಿಮ್ಮ ಕಣ್ಣುಗಳ ಮುಂದೆ ಚಿತ್ರಿಸಿಕೊಳ್ಳಿರಿ. ಮಾನವಕುಲವು ಯಾವ ರೀತಿಯಲ್ಲಿ ಜೀವಿಸಬೇಕು ಎಂದು ಯೆಹೋವನು ಬಯಸಿದ್ದನೋ ಆ ರೀತಿ ಜೀವಿಸಲು ಕಲಿಯುತ್ತಾ, ಆತನಿಂದ ಕಲಿಸಲ್ಪಡುವುದನ್ನು ಕಲ್ಪಿಸಿಕೊಳ್ಳಿರಿ. (ಯೆಶಾಯ 11:9; ಯೋಹಾನ 6:45) ಹೌದು, ಪ್ರಮೋದವನದಲ್ಲಿ ನಿಮಗೂ ಒಂದು ಸ್ಥಳವಿದೆ. ಇಂದು ಕೆಲವರಿಗೆ ಪ್ರಮೋದವನವು ವಿಚಿತ್ರವಾಗಿ ಕಂಡುಬರಬಹುದಾದರೂ, ಆರಂಭದಲ್ಲಿ ಯೆಹೋವನು ಮಾನವಕುಲವು ಅಂತಹ ಒಂದು ಸ್ಥಳದಲ್ಲಿಯೇ ಜೀವಿಸುವಂತೆ ಉದ್ದೇಶಿಸಿದ್ದನು ಎಂಬುದನ್ನು ನೆನಪಿನಲ್ಲಿಡಿರಿ. (ಆದಿಕಾಂಡ 2:7-9) ಆ ಅರ್ಥದಲ್ಲಿ, ಪ್ರಮೋದವನವು ಭೂಮಿಯಲ್ಲಿರುವ ನೂರಾರುಕೋಟಿ ಜನರ ಸ್ವಾಭಾವಿಕ ಇರುನೆಲೆಯಾಗಿದೆ. ಅವರು ಈ ಪ್ರಮೋದವನಕ್ಕೆ ಸೇರಿದವರಾಗಿದ್ದಾರೆ. ಅದನ್ನು ತಲಪುವುದು, ನಿಮ್ಮ ಮನೆಗೆ ಹಿಂದೆ ಹೋಗುವುದಕ್ಕೆ ಸಮಾನವಾಗಿದೆ.
26. ನಾವು ಈ ವ್ಯವಸ್ಥೆಯ ಅಂತ್ಯಕ್ಕಾಗಿ ಕಾಯುವುದು ಅಷ್ಟೊಂದು ಸುಲಭವಾದದ್ದಲ್ಲ ಎಂಬುದನ್ನು ಯೆಹೋವನು ಹೇಗೆ ಒಪ್ಪಿಕೊಳ್ಳುತ್ತಾನೆ?
26 ಈ ಎಲ್ಲ ವಾಗ್ದಾನಗಳ ಕುರಿತು ಆಲೋಚಿಸುವಾಗ ನಮ್ಮ ಹೃದಯಗಳು ಗಣ್ಯತೆಯಿಂದ ತುಂಬಿತುಳುಕುವುದಿಲ್ಲವೊ? ಅಲ್ಲಿ ಇರಲಿಕ್ಕಾಗಿ ಸ್ವತಃ ನೀವು ಹಂಬಲಿಸುವುದಿಲ್ಲವೊ? ಆದುದರಿಂದಲೇ, ಈ ವಿಷಯಗಳ ವ್ಯವಸ್ಥೆಯ ಅಂತ್ಯವು ಬರುವ ಸಮಯವನ್ನು ತಿಳಿದುಕೊಳ್ಳಲು ಯೆಹೋವನ ಸಾಕ್ಷಿಗಳು ಅತ್ಯಾಸಕ್ತಿಯುಳ್ಳವರಾಗಿದ್ದಾರೆ ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ! ಅದಕ್ಕೋಸ್ಕರ ಕಾಯುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಮತ್ತು ಹಾಗೆ ಕಾಯುವುದು ಸುಲಭವಾದದ್ದಲ್ಲ ಎಂಬುದನ್ನು ಯೆಹೋವನೂ ಒಪ್ಪಿಕೊಳ್ಳುತ್ತಾನೆ, ಏಕೆಂದರೆ ಅಂತ್ಯವು “ತಡವಾದರೂ” ಅದಕ್ಕೋಸ್ಕರ ‘ಕಾದಿರಿ’ ಎಂದು ಆತನು ನಮ್ಮನ್ನು ಪ್ರಚೋದಿಸುತ್ತಾನೆ. ನಮ್ಮ ದೃಷ್ಟಿಯಲ್ಲಿ ಅದು ತಡವಾಗಿ ಕಂಡುಬರಬಹುದು ಎಂಬುದೇ ಆತನು ಹೇಳಿದ್ದರ ಅರ್ಥವಾಗಿದೆ; ಏಕೆಂದರೆ ಅದೇ ಶಾಸ್ತ್ರವಚನದಲ್ಲಿ ನಮಗೆ “ತಾಮಸವಾಗದು” ಎಂಬ ಆಶ್ವಾಸನೆಯನ್ನು ನೀಡಲಾಗಿದೆ. (ಹಬಕ್ಕೂಕ 2:3; ಹೋಲಿಸಿರಿ ಜ್ಞಾನೋಕ್ತಿ 13:12.) ಹೌದು, ನೇಮಿತ ಸಮಯದಲ್ಲಿ ಅಂತ್ಯವು ಬರುವುದು.
27. ನಿತ್ಯಕ್ಕೂ ದೇವರ ಮುಂದೆ ನಿಲ್ಲಬೇಕಾದರೆ ನೀವು ಏನು ಮಾಡತಕ್ಕದ್ದು?
27 ಅಂತ್ಯವು ಸಮೀಪಿಸುತ್ತಿರುವಾಗ ನೀವು ಏನು ಮಾಡತಕ್ಕದ್ದು? ಯೆಹೋವನ ಪ್ರೀತಿಪಾತ್ರ ಪ್ರವಾದಿಯಾದ ದಾನಿಯೇಲನಂತೆ ನಂಬಿಗಸ್ತಿಕೆಯಿಂದ ತಾಳಿಕೊಳ್ಳಿರಿ. ದೇವರ ವಾಕ್ಯವನ್ನು ಶ್ರದ್ಧೆಯಿಂದ ಅಭ್ಯಾಸಿಸಿರಿ. ಅತ್ಯಂತ ಹುರುಪಿನಿಂದ ಪ್ರಾರ್ಥಿಸಿರಿ. ಜೊತೆ ವಿಶ್ವಾಸಿಗಳೊಂದಿಗೆ ಪ್ರೀತಿಯಿಂದ ಸಹವಾಸಮಾಡಿರಿ. ಅತ್ಯುತ್ಸಾಹದಿಂದ ಸತ್ಯವನ್ನು ಇತರರಿಗೆ ಕಲಿಸಿರಿ. ಈ ದುಷ್ಟ ವಿಷಯಗಳ ವ್ಯವಸ್ಥೆಯ ಅಂತ್ಯವು ದಿನೇ ದಿನೇ ಸಮೀಪಿಸುತ್ತಿರಲಾಗಿ, ಸರ್ವೋನ್ನತ ದೇವರ ನಿಷ್ಠಾವಂತ ಸೇವಕರಾಗಿಯೂ ಆತನ ವಾಕ್ಯದ ವಿಶ್ವಾಸಾರ್ಹ ಪ್ರಚಾರಕರಾಗಿಯೂ ಉಳಿಯಲು ದೃಢವಾದ ನಿರ್ಧಾರವನ್ನು ಮಾಡಿರಿ. ಸರ್ವಪ್ರಕಾರದಿಂದಲೂ, ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಮತ್ತು ಪರಮಾಧಿಕಾರಿಯಾದ ಯೆಹೋವನು, ನಿತ್ಯಕ್ಕೂ ಹರ್ಷಾನಂದದಿಂದ ಆತನ ಮುಂದೆ ನಿಲ್ಲುವ ಸುಯೋಗವನ್ನು ನಿಮಗೆ ದಯಪಾಲಿಸಲಿ!
[ಅಧ್ಯಯನ ಪ್ರಶ್ನೆಗಳು]
a ಸಾ.ಶ.ಪೂ. 617ರಲ್ಲಿ, ಬಹುಶಃ ಒಬ್ಬ ಹದಿವಯಸ್ಕನಾಗಿದ್ದಾಗ ದಾನಿಯೇಲನು ಬಾಬೆಲಿಗೆ ದೇಶಭ್ರಷ್ಟನಾಗಿ ಕೊಂಡೊಯ್ಯಲ್ಪಟ್ಟಿದ್ದನು. ಕೋರೆಷನ ಆಳಿಕೆಯ ಮೂರನೆಯ ವರ್ಷದಲ್ಲಿ, ಅಥವಾ ಸಾ.ಶ.ಪೂ. 536ರಲ್ಲಿ ಅವನು ಈ ದರ್ಶನವನ್ನು ಪಡೆದನು.—ದಾನಿಯೇಲ 10:1.
b ದ ಬ್ರೌನ್-ಡ್ರೈವರ್-ಬ್ರಿಗ್ಸ್ ಹೀಬ್ರು ಆ್ಯಂಡ್ ಇಂಗ್ಲಿಷ್ ಲೆಕ್ಸಿಕನ್ ಪುಸ್ತಕಕ್ಕನುಸಾರ, “ನಿಲ್ಲು” ಎಂಬುದಕ್ಕೆ ಇಲ್ಲಿ ಉಪಯೋಗಿಸಲ್ಪಟ್ಟಿರುವ ಹೀಬ್ರು ಶಬ್ದವು, “ಮರಣದ ಬಳಿಕ ಪುನರುಜ್ಜೀವಿಸು”ವುದನ್ನು ಸೂಚಿಸುತ್ತದೆ.
c ಆ ಹೀಬ್ರು ಶಬ್ದವು, “ಸಣ್ಣ ಉರುಟು ಕಲ್ಲು” ಎಂಬುದಕ್ಕಿರುವ ಹೀಬ್ರು ಶಬ್ದಕ್ಕೆ ಸಂಬಂಧಿಸಿದ್ದಾಗಿದೆ. ಏಕೆಂದರೆ ಚೀಟು ಹಾಕಲಿಕ್ಕಾಗಿ ಚಿಕ್ಕ ಚಿಕ್ಕ ಕಲ್ಲುಗಳನ್ನು ಉಪಯೋಗಿಸಲಾಗುತ್ತಿತ್ತು. ಕೆಲವೊಮ್ಮೆ ಸ್ವಾಸ್ತ್ಯವನ್ನು ಈ ರೀತಿಯಲ್ಲಿ ಪಾಲುಮಾಡಲಾಗುತ್ತಿತ್ತು. (ಅರಣ್ಯಕಾಂಡ 26:55, 56) ಇಲ್ಲಿ ಆ ಶಬ್ದದ ಅರ್ಥ “ಒಬ್ಬ ವ್ಯಕ್ತಿಗೋಸ್ಕರ (ದೇವರಿಂದ) ಪ್ರತ್ಯೇಕವಾಗಿರಿಸಲ್ಪಟ್ಟದ್ದು” ಎಂದು, ದಾನಿಯೇಲ ಪುಸ್ತಕದ ಕುರಿತಾದ ಒಂದು ಕೈಪಿಡಿ (ಇಂಗ್ಲಿಷ್) ಎಂಬ ಪುಸ್ತಕವು ಹೇಳುತ್ತದೆ.
-
-
ಯೆಹೋವನು ದಾನಿಯೇಲನಿಗೆ ಒಂದು ಅದ್ಭುತಕರವಾದ ಬಹುಮಾನವನ್ನು ವಾಗ್ದಾನಿಸುತ್ತಾನೆದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
-
-
[ಪುಟ 418 ರಲ್ಲಿ ಇಡೀ ಪುಟದ ಚಿತ್ರ]
[Picture on page 318]
ದಾನಿಯೇಲನಂತೆ, ನೀವು ಸಹ ದೇವರ ಪ್ರವಾದನ ವಾಕ್ಯಕ್ಕೆ ಗಮನಕೊಡುತ್ತೀರೊ?
-