ಅವರ ನಂಬಿಕೆಯನ್ನು ಅನುಕರಿಸಿರಿ
ಕರುಣೆಯ ಪಾಠ ಕಲಿತ ಯೋನ
ಯೋನನಿಗೆ ನಿನೆವೆ ಪಟ್ಟಣವನ್ನು ಮುಟ್ಟಲು ಈಗ 800 ಕಿ.ಮೀ.ಕ್ಕಿಂತಲೂ ಹೆಚ್ಚು ದೂರ ಪ್ರಯಾಣಿಸಲಿಕ್ಕಿತ್ತು. ಮುಂದಿರುವ ಪ್ರಯಾಸಗಳ ಬಗ್ಗೆ ಯೋಚಿಸಲು ಈಗ ಅವನಿಗೆ ಸಾಕಷ್ಟು ಸಮಯವಿದೆ. ಆ ಪ್ರಯಾಣ ಕಾಲ್ನಡಿಗೆಯಲ್ಲಾದರೆ ಸುಮಾರು ಒಂದು ತಿಂಗಳೋ ಅಥವಾ ಅದಕ್ಕಿಂತ ಹೆಚ್ಚು ಸಮಯವೋ ತಗಲುತ್ತಿತ್ತು. ಮೊದಲು ಅವನು ಹತ್ತಿರದ ಸುರಕ್ಷಿತ ಮಾರ್ಗ ಯಾವುದೆಂದು ನೋಡಿ ಆಯ್ಕೆಮಾಡಬೇಕಿತ್ತು. ಮಾರ್ಗದುದ್ದಕ್ಕೂ ಅನೇಕಾನೇಕ ತೊರೆಗಳನ್ನು, ಬೆಟ್ಟಗುಡ್ಡಗಳ ಸಾಲುಗಳನ್ನು ದಾಟಬೇಕಿತ್ತು. ಸಿರಿಯಾದ ವಿಶಾಲ ಮರುಭೂಮಿಯನ್ನು ಸುತ್ತಿಕೊಂಡು ಯೂಫ್ರೇಟೀಸ್ನಂತಹ ಮಹಾ ನದಿಗಳನ್ನು ದಾಟಿ ಹೋಗಬೇಕಿತ್ತು. ರಾತ್ರಿಯಲ್ಲಿ ತಂಗಲು ಸಿರಿಯಾ, ಮೆಸಪೊಟೇಮಿಯ ಮತ್ತು ಅಶ್ಶೂರದ ಊರು, ಹಳ್ಳಿಗಾಡುಗಳಲ್ಲಿ ವಿದೇಶಿಯರ ಬಳಿ ಆಶ್ರಯ ಕೇಳಬೇಕಿತ್ತು. ದಿನಗಳು ಸಂದಂತೆ ತಾನು ಅಷ್ಟು ಭಯಭೀತಿಯಿಂದ ಹಿಂಜರಿದಿದ್ದ ಆ ಗಮ್ಯಸ್ಥಾನದ ಕುರಿತು ಅಂದರೆ ನಿನೆವೆಯ ಕುರಿತು ಅವನು ಯೋಚಿಸಿದನು. ಆ ಪಟ್ಟಣಕ್ಕೆ ಸಮೀಪಿಸಿದಂತೆ ಅವನ ಅಂಜಿಕೆಯು ಹೆಚ್ಚಾಗುತ್ತಾ ಬರುತ್ತದೆ.
ಒಂದು ವಿಷಯವಂತೂ ಯೋನನಿಗೆ ಚೆನ್ನಾಗಿ ತಿಳಿದಿತ್ತು ಏನೆಂದರೆ ಅವನು ಹಿಂದಕ್ಕೆ ಸರಿಯುವಂತಿರಲಿಲ್ಲ, ಇಲ್ಲವೆ ಆ ನೇಮಕವನ್ನು ಬಿಟ್ಟು ಓಡಿಹೋಗುವಂತಿರಲಿಲ್ಲ. ಹಿಂದೊಮ್ಮೆ ಅವನದನ್ನು ಪ್ರಯತ್ನಿಸಿದ್ದನಲ್ಲಾ. ಆ ಬಲಾಢ್ಯ ಅಶ್ಶೂರ ದೇಶಕ್ಕೆ ಹೋಗಿ ತೀರ್ಪಿನ ಸಂದೇಶವನ್ನು ಸಾರಲು ಯೆಹೋವನು ಮೊದಲು ಆದೇಶವನ್ನು ಕೊಟ್ಟಾಗ, ಯೋನನು ವಿರುದ್ಧ ದಿಕ್ಕಿಗೆ ಹೋಗುವ ಹಡಗನ್ನು ತ್ವರೆಯಾಗಿ ಹತ್ತಿಬಿಟ್ಟನು. ಆಗ ಯೆಹೋವ ದೇವರು ಒಂದು ದೊಡ್ಡ ಬಿರುಗಾಳಿ ಬೀಸುವಂತೆ ಮಾಡಿದನು. ಸ್ವಲ್ಪದರಲ್ಲೇ, ತನ್ನ ಅವಿಧೇಯತೆಯಿಂದಾಗಿ ಹಡಗಿನಲ್ಲಿದ್ದವರೆಲ್ಲರ ಜೀವ ಅಪಾಯದಲ್ಲಿರುವುದನ್ನು ಯೋನನು ಕಂಡನು. ಆ ಧೀರ ನಾವಿಕರನ್ನು ಬಚಾವು ಮಾಡಲಿಕ್ಕಾಗಿ ತನ್ನನ್ನೇ ಎತ್ತಿ ಸಮುದ್ರದಲ್ಲಿ ಹಾಕುವಂತೆ ಅವರನ್ನು ಕೇಳಿಕೊಂಡನು. ಆ ನಾವಿಕರಿಗೆ ಮನಸ್ಸಿರದಿದ್ದರೂ ಬೇರೆ ದಾರಿ ಕಾಣದೆ ಅವನು ಹೇಳಿದಂತೆಯೇ ಮಾಡಿದರು. ತನಗೆ ಸಾವು ಖಂಡಿತ ಎಂದು ಯೋನನು ನೆನಸಿದನು. ಆದರೂ ಯೆಹೋವನು ಒಂದು ದೊಡ್ಡ ಮೀನನ್ನು ಕಳುಹಿಸಿ ಅವನನ್ನು ನುಂಗುವಂತೆ ಮತ್ತು ಮೂರು ದಿನಗಳ ನಂತರ ದಡದಲ್ಲಿ ಸುರಕ್ಷಿತವಾಗಿ ಕಾರಿಬಿಡುವಂತೆ ಮಾಡಿದನು. ಯೋನನೀಗ ಭಯವಿಸ್ಮಿತನೂ ಹೆಚ್ಚು ವಿಧೇಯನೂ ಆಗಿ ಹೊರಬಂದನು.a—ಯೋನ ಅಧ್ಯಾಯಗಳು 1, 2.
ಯೆಹೋವನು ಎರಡನೇ ಬಾರಿ ಯೋನನಿಗೆ ನಿನೆವೆಗೆ ಹೋಗಲು ಆಜ್ಞಾಪಿಸಿದಾಗ ಆ ಪ್ರವಾದಿಯು ವಿಧೇಯನಾಗಿ ಪೂರ್ವಾಭಿಮುಖವಾಗಿ ದೀರ್ಘ ಪ್ರಯಾಣವನ್ನು ಕೈಗೊಂಡನು. (ಯೋನ 3:1-3) ಆದರೂ ಯೆಹೋವನು ಕೊಟ್ಟ ಶಿಸ್ತಿನಿಂದಾಗಿ ಅವನು ತನ್ನನ್ನು ಪೂರ್ಣವಾಗಿ ತಿದ್ದಿಕೊಂಡಿದ್ದನೋ? ಉದಾಹರಣೆಗೆ, ಯೆಹೋವನು ಅವನಿಗೆ ಕರುಣೆ ತೋರಿಸಿದ್ದನು. ಹೇಗೆ? ಸಮುದ್ರ ಪಾಲಾಗದಂತೆ ಕಾಪಾಡಿದ್ದನು, ಅವನ ಅವಿಧೇಯತೆಗೆ ತಕ್ಕಂತೆ ಶಿಕ್ಷಿಸಲಿಲ್ಲ, ಅವನು ತನ್ನ ನೇಮಕವನ್ನು ಪೂರೈಸಲು ಇನ್ನೊಂದು ಅವಕಾಶವನ್ನು ಕೊಟ್ಟನು. ಯೆಹೋವನು ಇಷ್ಟೆಲ್ಲಾ ಕರುಣೆ ತೋರಿಸಿದ ಮೇಲೂ ಯೋನನು ಮಾಡಿದ್ದೇನು? ಅವನು ಬೇರೆಯವರಿಗೆ ಕರುಣೆ ತೋರಿಸಲು ಕಲಿತನೋ? ಅಪರಿಪೂರ್ಣ ಮಾನವರಿಗೆ ಕರುಣೆಯ ಪಾಠ ಕಲಿಯುವುದು ಕೆಲವು ಸಲ ಸುಲಭವಲ್ಲ. ಈ ವಿಷಯದಲ್ಲಿ ಯೋನನ ಹೆಣಗಾಟದಿಂದ ನಾವೇನು ಕಲಿಯಬಹುದೆಂದು ನೋಡೋಣ.
ಶಿಕ್ಷಾ ತೀರ್ಪಿಗೆ ಅನಿರೀಕ್ಷಿತ ಪ್ರತಿಕ್ರಿಯೆ
ನಿನೆವೆಯ ಬಗ್ಗೆ ಯೆಹೋವನಿಗಿದ್ದ ದೃಷ್ಟಿಕೋನ ಯೋನನಿಗಿರಲಿಲ್ಲ. ಯೆಹೋವನ ದೃಷ್ಟಿಯಲ್ಲಿ “ನಿನೆವೆಯು . . . ಮಹಾ ಪಟ್ಟಣವಾಗಿತ್ತು” ಎಂದು ನಾವು ಓದುತ್ತೇವೆ. (ಯೋನ 3:3) ಯೋನನ ದಾಖಲೆಯು ಉಲ್ಲೇಖಿಸುವ ಪ್ರಕಾರ ಯೆಹೋವನು ನಿನೆವೆಯನ್ನು ಮೂರು ಸಲ “ದೊಡ್ಡ ಪಟ್ಟಣ” ಎಂದು ಕರೆದನು. (ಯೋನ 1:2; 3:2; 4:11) ಯೆಹೋವನಿಗೆ ಇದು ದೊಡ್ಡ ಪಟ್ಟಣ ಅಥವಾ ಮಹತ್ತಾದ ಪಟ್ಟಣ ಆಗಿತ್ತು ಏಕೆ?
ನಿನೆವೆಯು ಪುರಾತನ ಪಟ್ಟಣವಾಗಿತ್ತು. ಜಲಪ್ರಳಯದ ನಂತರ ನಿಮ್ರೋದನು ಮೊತ್ತಮೊದಲು ಸ್ಥಾಪಿಸಿದ ಪಟ್ಟಣಗಳಲ್ಲಿ ಅದೊಂದು. ಇದು ಇತರ ಅನೇಕ ಚಿಕ್ಕ-ದೊಡ್ಡ ಊರುಗಳು ಸೇರಿದ್ದ ಒಂದು ವಿಸ್ತಾರವಾದ ಪ್ರಮುಖ ಪಟ್ಟಣವಾಗಿದ್ದು, ಕಾಲ್ನಡಿಗೆಯಲ್ಲಿ ಅದರ ಒಂದು ಮೇರೆಯಿಂದ ಇನ್ನೊಂದು ಮೇರೆಗೆ ಹೋಗಲು ಮೂರು ದಿವಸ ಹಿಡಿಯುತ್ತಿತ್ತು. (ಆದಿಕಾಂಡ 10:11; ಯೋನ 3:3) ನಿನೆವೆಯು ಭವ್ಯ ದೇವಾಲಯಗಳು, ಬಲವಾದ ಕೋಟೆಗಳು, ದೊಡ್ಡ ದೊಡ್ಡ ಕಟ್ಟಡಗಳಿದ್ದ ಪ್ರಭಾವಿತ ಪಟ್ಟಣವಾಗಿತ್ತೆಂಬುದು ವ್ಯಕ್ತ. ಆದರೆ ಅವು ಯಾವುವೂ ಯೆಹೋವನಿಗೆ ಅದನ್ನು ಮಹತ್ತಾದ ದೊಡ್ಡ ಪಟ್ಟಣವಾಗಿ ಮಾಡಿರಲಿಲ್ಲ. ಆತನಿಗೆ ಪ್ರಾಮುಖ್ಯವಾಗಿದ್ದದ್ದು ಅಲ್ಲಿನ ಜನ ಸಮೂಹವೇ. ಆ ಸಮಯದಲ್ಲಿ ನಿನೆವೆಯಲ್ಲಿದ್ದ ಜನಸಂಖ್ಯೆ ಬಹಳವೇ ಅನ್ನಬೇಕು. ಅವರೆಷ್ಟೇ ದುಷ್ಟರಾಗಿದ್ದರೂ ಯೆಹೋವನಿಗೆ ಅವರ ಬಗ್ಗೆ ಚಿಂತೆ, ಕಳಕಳಿ ಇತ್ತು. ಯಾಕೆಂದರೆ ಮಾನವ ಜೀವ ಆತನಿಗೆ ಅಮೂಲ್ಯ. ಪ್ರತಿಯೊಬ್ಬ ವ್ಯಕ್ತಿ ಪಶ್ಚಾತ್ತಾಪಪಡಬಲ್ಲನು ಮತ್ತು ಯೋಗ್ಯವಾದದ್ದನ್ನು ಮಾಡಶಕ್ತನು ಎಂದು ದೇವರಿಗೆ ತಿಳಿದಿದೆ.
ಅಂತೂ ಯೋನನು ನಿನೆವೆಗೆ ಬಂದು ಮುಟ್ಟಿದನು. 1,20,000ಕ್ಕಿಂತಲೂ ಹೆಚ್ಚಿನ ಜನರಿಂದ ತುಂಬಿದ್ದ ಆ ಸ್ಥಳವನ್ನು ಕಂಡಾಗ ಅವನ ಎದೆ ಇನ್ನಷ್ಟು ಹೆಚ್ಚು ಡವಗುಟ್ಟಿದ್ದಿರಬಹುದು.b ಅವನು ದಿನವಿಡೀ ಸುತ್ತಾಡಿದನು. ಆ ಜನನಿಬಿಡ ಪಟ್ಟಣವಿಡೀ ಆದಷ್ಟು ದೂರ ತೂರಿನೋಡಿದನು. ಪ್ರಾಯಶಃ ತನ್ನ ಸಂದೇಶವನ್ನು ಸಾರಲಾರಂಭಿಸಲು ಒಂದು ಕೇಂದ್ರಸ್ಥಾನವನ್ನು ಅವನು ಹುಡುಕಿದ್ದಿರಬಹುದು. ಈ ಎಲ್ಲಾ ಜನರಿಗೆ ಯೆಹೋವನ ಶಿಕ್ಷಾ ತೀರ್ಪನ್ನು ಅವನು ತಲಪಿಸುವ ಬಗೆ ಹೇಗೆ? ಅಶ್ಶೂರ್ಯರ ಭಾಷೆಯನ್ನು ಮಾತಾಡಲು ಅವನು ಕಲಿತಿದ್ದನೋ? ಅಥವಾ ಆ ಭಾಷೆಯನ್ನು ಮಾತಾಡುವ ಸಾಮರ್ಥ್ಯವನ್ನು ಯೆಹೋವನು ಅವನಿಗೆ ಅದ್ಭುತವಾಗಿ ನೀಡಿದ್ದನೋ? ನಮಗದು ತಿಳಿದಿಲ್ಲ. ತನ್ನ ಸ್ವಂತ ಹೀಬ್ರು ಭಾಷೆಯಲ್ಲಿಯೇ ಯೋನನು ಆ ತೀರ್ಪಿನ ಘೋಷಣೆಯನ್ನು ಮಾಡಿದ್ದಿರಬಹುದು. ನಿನೆವೆಯ ಜನರಿಗೆ ಅದನ್ನು ತಿಳಿಸಲು ಒಬ್ಬ ಭಾಷಾಂತರಕಾರನನ್ನು ಬಳಸಿದ್ದಿರಲೂಬಹುದು. ಹೇಗಿದ್ದರೂ, “ನಾಲ್ವತ್ತು ದಿನಗಳಾದ ಮೇಲೆ ನಿನೆವೆಯು ಕೆಡವಲ್ಪಡುವದು” ಎಂದು ಅವನು ಸಾರಿದ ಸಂದೇಶ ಸರಳ. (ಯೋನ 3:4) ಅದು ಯಾವುದೇ ಕೀರ್ತಿಯನ್ನು ತರುವಂಥದ್ದೂ ಆಗಿರಲಿಲ್ಲ. ಅವನು ಧೈರ್ಯದಿಂದ ಮತ್ತು ಪದೇಪದೇ ಸಾರಿ ಹೇಳಿದನು. ಹಾಗೆ ಮಾಡುವುದರಲ್ಲಿ ಅವನು ಗಮನಾರ್ಹ ಧೈರ್ಯ ಮತ್ತು ನಂಬಿಕೆಯನ್ನು ತೋರಿಸಿದನು. ಇಂದು ಕ್ರೈಸ್ತರಿಗೂ ಇಂಥ ಗುಣಗಳು ವಿಶೇಷವಾಗಿ ಬೇಕು.
ಯೋನನ ಸಂದೇಶ ನಿನೆವೆಯ ಜನರ ಗಮನ ಸೆಳೆಯಿತು. ಅದನ್ನು ಕೇಳಿ ಆ ಜನರು ತನ್ನ ಮೇಲೆ ತಿರುಗಿಬಿದ್ದು ತನಗೆ ಕೇಡುಮಾಡಾರೆಂದು ಅವನು ನೆನಸಿದ್ದನು. ಆದರೆ ನಡೆದದ್ದು ಅನಿರೀಕ್ಷಿತ ಸಂಗತಿ. ಜನರು ಕಿವಿಗೊಟ್ಟು ಕೇಳಿದರು! ಅವನ ಮಾತುಗಳು ಕಾಡ್ಗಿಚ್ಚಿನಂತೆ ಹರಡಿದವು. ಸ್ವಲ್ಪದರಲ್ಲಿ ಇಡೀ ಪಟ್ಟಣವೇ ಯೋನನು ನುಡಿದ ವಿನಾಶನದ ಪ್ರವಾದನೆಯಿಂದ ಗುಜುಗುಜಿಸತೊಡಗಿತು. ಯೋನನ ವೃತ್ತಾಂತ ನಮಗೆ ತಿಳಿಸುವುದು: “ನಿನೆವೆಯವರು ದೇವರಲ್ಲಿ ನಂಬಿಕೆಯಿಟ್ಟು ಉಪವಾಸವನ್ನು ಗೊತ್ತುಮಾಡಿ ಸಾರಿದರು; ದೊಡ್ಡವರು ಮೊದಲುಗೊಂಡು ಚಿಕ್ಕವರ ತನಕ ಎಲ್ಲರೂ ಗೋಣಿತಟ್ಟನ್ನು ಸುತ್ತಿಕೊಂಡರು.” (ಯೋನ 3:5) ಧನಿಕ-ಬಡವ, ಪ್ರಬಲ-ದುರ್ಬಲ, ಹಿರಿಯ-ಕಿರಿಯರೆನ್ನದೆ ಎಲ್ಲರೂ ಪಶ್ಚಾತ್ತಾಪಪಟ್ಟರು. ಈ ಜನಜನಿತ ಸುದ್ದಿ ಬೇಗನೆ ಅಲ್ಲಿನ ಅರಸನ ಕಿವಿಗೂ ಬಿತ್ತು.
ಅರಸನು ಸಹ ತತ್ತರಗೊಂಡು ದೇವರಿಗೆ ಭಯಪಟ್ಟು ಪಶ್ಚಾತ್ತಾಪಪಡಲು ಮುಂದಾದನು. ಅವನು ತನ್ನ ಸಿಂಹಾಸನದಿಂದೆದ್ದು, ತನ್ನ ರಾಜವಸ್ತ್ರಗಳನ್ನು ಕಳಚಿಬಿಟ್ಟು ತನ್ನ ಪ್ರಜೆಗಳಂತೆ ಗೋಣಿತಟ್ಟನ್ನು ಹೊದ್ದುಕೊಂಡು “ಬೂದಿಯಲ್ಲಿ ಕೂತನು” ಸಹ. ತನ್ನ “ರಾಜ್ಯಾಧಿಕಾರಿಗಳ” ಸಹಿತ ಅವನು ರಾಜಾಜ್ಞೆಯನ್ನು ಹೊರಡಿಸಿ ಉಪವಾಸವನ್ನು ರಾಜ್ಯದಲ್ಲೆಲ್ಲಾ ಅಧಿಕೃತವಾಗಿ ಜಾರಿಗೆ ತಂದನು. ಜನರೆಲ್ಲರೂ, ಸಾಕುಪ್ರಾಣಿಗಳು ಸಹ ಗೋಣಿತಟ್ಟು ಹೊದ್ದುಕೊಳ್ಳಬೇಕೆಂದು ಆಜ್ಞಾಪಿಸಿದನು.c ತನ್ನ ಪ್ರಜೆಗಳು ಕೆಟ್ಟತನ ಮತ್ತು ಹಿಂಸಾಚಾರಕ್ಕೆ ನಿಜವಾಗಿ ದೋಷಿಗಳು ಎಂದವನು ದೀನತೆಯಿಂದ ಒಪ್ಪಿಕೊಂಡನು. ತಾವು ತೋರಿಸಿದ ಪಶ್ಚಾತ್ತಾಪವನ್ನು ಕಂಡು ಸತ್ಯದೇವರು ಮನಮರುಗಿಯಾನು ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸುತ್ತಾ “ದೇವರು . . . ತನ್ನ ಉಗ್ರಕೋಪವನ್ನು ತೊಲಗಿಸಾನು, ನಾವು ನಾಶವಾಗದೆ ಉಳಿದೇವು” ಎಂದೂ ಹೇಳಿದನು.—ಯೋನ 3:6-9.
ಅತಿ ದುಷ್ಟರಾದ ನಿನೆವೆಯ ಜನರು ಅಷ್ಟು ಬೇಗನೆ ಪಶ್ಚಾತ್ತಾಪಪಟ್ಟದ್ದರ ಕುರಿತು ಕೆಲವು ಟೀಕಾಕಾರರು ಸಂದೇಹಪಡುತ್ತಾರೆ. ಆದರೆ ಪ್ರಾಚೀನ ಕಾಲದಲ್ಲಿ ಅಂಥ ಸಂಸ್ಕೃತಿಗಳ ಜನರ ಮೂಢನಂಬಿಕೆ ಮತ್ತು ಚಂಚಲ ಸ್ವಭಾವಕ್ಕೆ ಹೊಂದಿಕೆಯಲ್ಲಿ ಆ ರೀತಿಯ ಪ್ರತಿಕ್ರಿಯೆಯೇನೂ ಹೊಸದಲ್ಲವೆಂದು ಬೈಬಲ್ ವಿದ್ವಾಂಸರು ಗಮನಿಸಿದ್ದಾರೆ. ಹೇಗಿದ್ದರೂ, ಯೇಸು ಕ್ರಿಸ್ತನು ತಾನೇ ತದನಂತರ ನಿನೆವೆಯ ಜನರ ಪಶ್ಚಾತ್ತಾಪಕ್ಕೆ ಸೂಚಿಸಿ ಮಾತಾಡಿದ್ದನು. (ಮತ್ತಾಯ 12:41) ತಾನು ಹೇಳಿದ ಸಂಗತಿ ನಿಜವೆಂದು ಯೇಸುವಿಗೆ ತಿಳಿದಿತ್ತು ಹೇಗಂದರೆ ನಿನೆವೆಯಲ್ಲಿ ಆ ಘಟನಾವಳಿಗಳು ಸಂಭವಿಸುವುದನ್ನು ಆತನು ಪರಲೋಕದಲ್ಲಿ ಜೀವಿಸಿದ್ದಾಗ ಗಮನಿಸಿದ್ದನು. (ಯೋಹಾನ 8:57, 58) ಆದರೂ ನಿನೆವೆಯವರ ಪಶ್ಚಾತ್ತಾಪಕ್ಕೆ ಯೆಹೋವನು ಹೇಗೆ ಪ್ರತಿಕ್ರಿಯಿಸಿದನು?
ದೇವರ ಕಾರುಣ್ಯ ಮಾನವ ಕಾಠಿಣ್ಯ
ಯೋನನು ತದನಂತರ ಬರೆದದ್ದು: “[ಸತ್ಯ] ದೇವರು ನಿನೆವೆಯವರ ಕಾರ್ಯಗಳನ್ನು ನೋಡಿ ಅವರು ತಮ್ಮ ದುರ್ಮಾರ್ಗದಿಂದ ತಿರುಗಿಕೊಂಡರೆಂದು ತಿಳಿದು ಮನಮರುಗಿ ತಾನು ಅವರಿಗೆ ಮಾಡುವೆನೆಂದು ಪ್ರಕಟಿಸಿದ್ದ ಕೇಡನ್ನು ಮಾಡದೆ ಬಿಟ್ಟನು.”—ಯೋನ 3:10.
ನಿನೆವೆಯವರಿಗೆ ಕೊಟ್ಟ ತನ್ನ ಶಿಕ್ಷಾ ತೀರ್ಪು ತಪ್ಪಾಗಿತ್ತು ಎಂದು ಯೆಹೋವನು ಮನಮರುಗಿದನೆಂದು ಇದರರ್ಥವೋ? ಖಂಡಿತ ಹಾಗಲ್ಲ. ಬೈಬಲ್ ಯೆಹೋವನ ಕುರಿತು ಹೇಳುವುದು: “ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು.” (ಧರ್ಮೋಪದೇಶಕಾಂಡ 32:4) ನಿನೆವೆಯರ ದುಷ್ಟತ್ವಕ್ಕಾಗಿ ಯೆಹೋವನ ಧರ್ಮಕ್ರೋಧವು ಕಡಿಮೆಯಾಯಿತೆಂದೇ ಅದರ ಅರ್ಥ ಅಷ್ಟೇ. ಅವರು ಬದಲಾವಣೆ ಮಾಡಿದ್ದನ್ನು ನೋಡಿದಾಗ, ತಾನು ವಿಧಿಸಿದ್ದ ದಂಡನೆಯನ್ನು ಅವರ ಮೇಲೆ ಇನ್ನು ಮುಂದೆ ತರುವುದು ಸೂಕ್ತವಲ್ಲ ಎಂದು ಆತನು ಕಂಡನು. ಈಗಲಾದರೋ ದೈವಿಕ ಕರುಣೆಯನ್ನು ತೋರಿಸುವ ಸಮಯವಾಗಿತ್ತು.
ಧಾರ್ಮಿಕ ಮುಖಂಡರು ಅನೇಕವೇಳೆ ವಿವರಿಸುವ ಪ್ರಕಾರ ಯೆಹೋವನು ಒಬ್ಬ ನಿಷ್ಕರುಣಿಯೂ ಕ್ರೂರನೂ ಕಠಿಣನೂ ಆದ ದೇವರಲ್ಲ. ಬದಲಾಗಿ ಆತನು ವಿವೇಚನೆಯುಳ್ಳವನೂ ಹೊಂದಿಸಿಕೊಳ್ಳುವವನೂ ಕರುಣಾಮಯಿಯೂ ಆದ ದೇವರು. ದುಷ್ಟರಿಗೆ ದಂಡನೆಯನ್ನು ವಿಧಿಸಲು ನಿರ್ಣಯಿಸುವಾಗ ಆತನು ಮೊದಲಾಗಿ ತನ್ನ ಭೂಸೇವಕರ ಮೂಲಕ ಅವರಿಗೆ ಎಚ್ಚರಿಕೆಯನ್ನು ನೀಡುತ್ತಾನೆ. ಯಾಕೆಂದರೆ ನಿನೆವೆಯ ಜನರಂತೆ ದುಷ್ಟರು ಸಹ ಪಶ್ಚಾತ್ತಾಪಪಟ್ಟು ತಮ್ಮ ದುರ್ಮಾರ್ಗಗಳನ್ನು ಬಿಟ್ಟುಬಿಡಬೇಕೆಂಬದೇ ಆತನ ತೀವ್ರಾಪೇಕ್ಷೆ. (ಯೆಹೆಜ್ಕೇಲ 33:11) ಯೆಹೋವನು ತನ್ನ ಪ್ರವಾದಿ ಯೆರೆಮೀಯನಿಗೆ ಹೇಳಿದ್ದು: “ನಾನು ಒಂದು ವೇಳೆ ಒಂದು ಜನಾಂಗವನ್ನಾಗಲಿ ರಾಜ್ಯವನ್ನಾಗಲಿ ಕಿತ್ತುಕೆಡವಿ ನಾಶಪಡಿಸಬೇಕೆಂದು ಅಪ್ಪಣೆಕೊಟ್ಟಾಗ ನಾನು ದಂಡನೆನಿರ್ಣಯಿಸಿದ ಆ ಜನಾಂಗದವರು ತಮ್ಮ ಕೆಟ್ಟತನದಿಂದ ತಿರುಗಿಕೊಂಡರೆ ನಾನು ಮಾಡಬೇಕೆಂದಿದ್ದ ಕೇಡನ್ನು ಮನಮರುಗಿ ಮಾಡದಿರುವೆನು.”—ಯೆರೆಮೀಯ 18:7, 8.
ಹಾಗಾದರೆ ಯೋನನ ಪ್ರವಾದನೆ ಸುಳ್ಳಾಗಿತ್ತೋ? ಖಂಡಿತ ಇಲ್ಲ. ಯೆಹೋವನು ಉದ್ದೇಶಿಸಿದ ಪ್ರಕಾರ ಅದು ಜನರಿಗೆ ಎಚ್ಚರಿಕೆಯನ್ನು ನೀಡಿತು. ಆ ಎಚ್ಚರಿಕೆಯು ನಿನೆವೆಯ ಜನರು ತಮ್ಮ ದುಷ್ಟಮಾರ್ಗಗಳನ್ನು ತೊರೆದುಬಿಡುವಂತೆ ಕೊಡಲ್ಪಟ್ಟಿತು. ಆಗ ಅವರು ಪಶ್ಚಾತ್ತಾಪಪಟ್ಟು ಬದಲಾದರು. ನಿನೆವೆಯವರು ಪುನಃ ದುರ್ಮಾರ್ಗವನ್ನು ಅನುಸರಿಸಿದ್ದಲ್ಲಿ ದೇವರ ಶಿಕ್ಷಾ ತೀರ್ಪು ಅವರ ಮೇಲೆ ಬಂದೇ ತೀರಲಿತ್ತು. ಸಮಯಾನಂತರ ಸಂಭವಿಸಿದ್ದು ಅದೇ.—ಚೆಫನ್ಯ 2:13-15.
ತಾನು ನಿರೀಕ್ಷಿಸಿದ ಸಮಯದಲ್ಲಿ ನಿನೆವೆಯ ಮೇಲೆ ನಾಶನವು ಬಾರದಿದ್ದಾಗ ಯೋನನು ಹೇಗೆ ಪ್ರತಿಕ್ರಿಯಿಸಿದನು? ‘ಯೋನನಿಗೆ ಬಹು ಕರಕರೆಯಾಯಿತು; ಅವನು ಸಿಟ್ಟುಗೊಂಡನು’ ಎಂದು ನಾವು ಓದುತ್ತೇವೆ. (ಯೋನ 4:1, 2) ಸರ್ವಶಕ್ತ ದೇವರನ್ನೇ ಗದರಿಸುತ್ತಾನೋ ಎಂಬಂತೆ ಕಂಡುಬಂದ ಒಂದು ಪ್ರಾರ್ಥನೆಯನ್ನು ಸಹ ಅವನು ಮಾಡಿದನು! ತಾನು ತನ್ನ ಸ್ವದೇಶದಲ್ಲೇ ತನ್ನ ಜನರೊಂದಿಗೆ ಇರುತ್ತಿದ್ದರೆ ಎಷ್ಟು ಒಳ್ಳೇದಿರುತ್ತಿತ್ತು ಎಂದು ಸೂಚಿಸಿದನು ಸಹ. ನಿನೆವೆಯ ಮೇಲೆ ಯೆಹೋವನು ವಿಪತ್ತನ್ನು ಎಂದೂ ತರಲಾರನೆಂದು ತನಗೆ ಗೊತ್ತಿತ್ತು ಎಂದು ವಾದಿಸಿದನು. ತಾರ್ಷೀಷಿಗೆ ತಾನು ಓಡಿಹೋದದ್ದೂ ಅದೇ ಕಾರಣಕ್ಕಾಗಿ ಎಂಬ ನೆಪವನ್ನೂ ಕೊಟ್ಟನು. ತಾನು ಬದುಕಿರುವುದಕ್ಕಿಂತ ಸಾಯುವುದೇ ಲೇಸು ಎಂದು ಗೊಣಗುಟ್ಟುತ್ತಾ ತನ್ನ ಪ್ರಾಣವನ್ನು ತೆಗೆಯುವಂತೆ ಕೇಳಿಕೊಂಡನು.—ಯೋನ 4:2, 3.
ಯೋನನು ಅಷ್ಟು ಕರಕರೆಪಟ್ಟದ್ದೇಕೆ? ಅವನ ಮನಸ್ಸಿನಲ್ಲಿ ಏನೆಲ್ಲಾ ನಡೆಯುತ್ತಿತ್ತು ಎಂದು ನಾವು ಹೇಳಲಾರೆವು. ಆದರೆ ನಿನೆವೆಯ ಎಲ್ಲಾ ಜನರಿಗೆ ಯೋನನು ನಾಶನವನ್ನು ಸಾರಿ ಹೇಳಿದ್ದನೆಂದು ಮಾತ್ರ ನಮಗೆ ಗೊತ್ತು. ಅವರು ಅವನ ಮಾತನ್ನು ನಂಬಿದ್ದರು. ಆದರೆ ನಾಶನವು ಬರಲಿಲ್ಲ. ಜನರು ತನ್ನನ್ನು ಪರಿಹಾಸ್ಯಮಾಡಿ ಸುಳ್ಳು ಪ್ರವಾದಿಯೆಂಬ ಹಣೆಪಟ್ಟಿಯನ್ನು ಹಚ್ಚಾರು ಎಂಬ ಭಯ ಅವನಿಗಿತ್ತೋ? ಹೇಗೆಯೇ ಇರಲಿ, ಜನರು ಪಶ್ಚಾತ್ತಾಪಪಟ್ಟ ಬಗ್ಗೆ ಅಥವಾ ಯೆಹೋವನು ಅವರಿಗೆ ತೋರಿಸಿದ ಕರುಣೆಯ ಬಗ್ಗೆ ಅವನು ಸಂತೋಷಪಡಲಿಲ್ಲ. ಬದಲಾಗಿ ಅವನು ಸ್ವಾನುಕಂಪ ಹಾಗೂ ಕೀರ್ತಿಭಂಗ ಎಂಬ ಕಹಿಭಾವನೆಯ ಮಡುವಿನಲ್ಲಿ ಮುಳುಗಿಹೋದನು. ಆದರೂ ಯೋನನ ಕರುಣಾಮಯಿ ದೇವರು ಈ ಕಂಗಾಲಾದ ಮನುಷ್ಯನಲ್ಲಿ ಏನೋ ಒಳ್ಳೇದನ್ನು ಕಂಡನು. ಯೋನನು ತನಗೆ ತೋರಿಸಿದ ಅಗೌರವಕ್ಕಾಗಿ ಶಿಕ್ಷಿಸುವ ಬದಲು ಯೆಹೋವನು, “ನೀನು ಸಿಟ್ಟುಗೊಳ್ಳುವದು ಸರಿಯೋ” ಎಂದು ಮನಃಸ್ಪರ್ಶಿಸುವ ರೀತಿಯಲ್ಲಿ ಮೃದುವಾಗಿ ಕೇಳಿದನು. (ಯೋನ 4:4) ಯೋನನು ಉತ್ತರ ಕೊಟ್ಟನೋ? ಬೈಬಲ್ ಈ ವಿಷಯದಲ್ಲಿ ಏನೂ ಹೇಳುವುದಿಲ್ಲ.
ಯೆಹೋವನು ಕಲಿಸಿದ ಪಾಠ
ನಿರಾಶೆಗೊಂಡ ಈ ಪ್ರವಾದಿ ನಿನೆವೆಯನ್ನು ಬಿಟ್ಟು ಹೋಗುತ್ತಾನೆ. ಆದರೆ ತನ್ನ ಮನೆಗಲ್ಲ, ಗುಡ್ಡಬೆಟ್ಟಗಳಿಂದ ಆವೃತವಾಗಿದ್ದ ಪೂರ್ವ ದಿಕ್ಕಿಗೆ. ಅಲ್ಲಿ ಒಂದು ಸಣ್ಣ ಗುಡಿಸಲನ್ನು ಕಟ್ಟಿಕೊಂಡು ನಿನೆವೆಗೆ ಏನಾಗುವುದೋ ಎಂದು ಕಾಯುತ್ತಾ ಕುಳಿತನು. ನಿನೆವೆಯ ನಾಶನವನ್ನು ನೋಡುವ ನಿರೀಕ್ಷೆ ಅವನಿಗೆ ಇನ್ನೂ ಇತ್ತು ಎಂದೆನ್ನಬೇಕು. ಇಂಥ ಕಟು ಮನಸ್ಸಿನ ವ್ಯಕ್ತಿಗೆ ಕರುಣೆಯ ಪಾಠವನ್ನು ಯೆಹೋವನು ಕಲಿಸಿದ್ದು ಹೇಗೆ?
ದಿನಬೆಳಗಾಗುವುದರೊಳಗೆ ಯೆಹೋವನು ಒಂದು ಸೋರೆಗಿಡವನ್ನು ಬೆಳೆಯುವಂತೆ ಮಾಡುತ್ತಾನೆ. ಅಗಲವಾದ ಎಲೆಗಳಿಂದ ಕೂಡಿ ಸೊಂಪಾಗಿ ಬೆಳೆದು ಬಂದ ಈ ಗಿಡವನ್ನು ಯೋನನು ಕಂಡನು. ತನ್ನ ಚಿಕ್ಕ ಗುಡಿಸಲು ನೀಡುವ ತಂಪಿಗಿಂತ ಇದು ಎಷ್ಟೋ ಹಾಯೆನಿಸಿತು. ಆ ಗಿಡವನ್ನು ನೋಡಿ “ಯೋನನಿಗೆ ಬಹು ಸಂತೋಷವಾಯಿತು,” ಮನಸ್ಸು ಆನಂದದಿಂದ ಅರಳಿತು. ಇದು ಯೆಹೋವ ದೇವರ ಆಶೀರ್ವಾದ ಮತ್ತು ಮೆಚ್ಚುಗೆಯೇ ಸರಿ ಎಂದು ಪ್ರಾಯಶಃ ಅಂದುಕೊಂಡನು ಅವನು. ಆದರೆ ಯೆಹೋವನು ಆ ಗಿಡವನ್ನು ಬೆಳೆಸಿದ್ದು ಅವನನ್ನು ಆ ಬಿಸಿಲಬೇಗೆಯಿಂದ ತಪ್ಪಿಸಲಿಕ್ಕಾಗಿ ಅಲ್ಲ, ಅವನ ಮುಂಗೋಪವನ್ನು ತಣಿಸಲಿಕ್ಕಾಗಿಯೂ ಅಲ್ಲ. ಬದಲಾಗಿ ಒಂದು ಮನಮುಟ್ಟುವ ಪಾಠವನ್ನು ಯೋನನಿಗೆ ಕಲಿಸಬೇಕಿತ್ತು. ಆದುದರಿಂದ ಒಂದು ಹುಳಕ್ಕೆ ಆ ಸೋರೆಗಿಡವನ್ನು ಹೊಡೆದು ತಿಂದುಬಿಡುವಂತೆ ದೇವರು ಅಪ್ಪಣೆಕೊಟ್ಟನು. ಇದರಿಂದಾಗಿ ಯೋನನು ಬಲು ಸಿಟ್ಟುಗೊಂಡನು. “ಬಿಸಿಯಾದ ಮೂಡಣ ಗಾಳಿ” ಬೀಸುವಂತೆಯೂ ದೇವರು ಮಾಡಿದನು. ಆಗ ಯೋನನು ತಾಪದಿಂದ ಬಳಲಿ ‘ಮೂರ್ಛೆಹೋಗುವವನಾದನು.’ ಪುನಃ ಇನ್ನೊಮ್ಮೆ ಯೋನನ ಮನಸ್ಸು ಮುದುಡಿ, ಜೀವ ರೋಸಿಹೋಯಿತು. ನನಗೆ ಮರಣವನ್ನಾದರೂ ಕೊಡು ಎಂದು ದೇವರನ್ನು ಕೇಳಿಕೊಂಡನು.—ಯೋನ 4:6-8.
ಆ ಸೋರೆಗಿಡವು ಬಾಡಿಹೋದದ್ದನ್ನು ಕಂಡು ಸಿಟ್ಟುಗೊಳ್ಳುವುದು ಸರಿಯೋ ಎಂದು ಯೆಹೋವನು ಯೋನನನ್ನು ಕೇಳಿದನು. ಆಗ ಯೋನನು, “ಮರಣವಾಗುವಷ್ಟು ಸಿಟ್ಟುಗೊಳ್ಳುವದು ಸರಿಯೇ” ಎಂದು ಉತ್ತರಕೊಟ್ಟನು. ಪಶ್ಚಾತ್ತಾಪಪಡಲಿಲ್ಲ, ತನ್ನನ್ನೇ ಸಮರ್ಥಿಸಿಕೊಂಡನು. ಯೆಹೋವನು ಮನಸ್ಸಿಗೆ ನಾಟುವ ಪಾಠವನ್ನು ಅವನಿಗೆ ಕಲಿಸುವ ಸಮಯ ಆಗ ಬಂತು.—ಯೋನ 4:9.
ಒಂದೇ ರಾತ್ರಿಯೊಳಗೆ ಬೆಳೆದು ಅನಂತರ ಸತ್ತು ಹೋದ ಬರೇ ಒಂದು ಸೋರೆಗಿಡಕ್ಕಾಗಿ ಪ್ರವಾದಿಯು ದುಃಖಿಸುವುದನ್ನು ದೇವರು ಗಮನಿಸಿದನು. ಆ ಸಸಿಯನ್ನು ಯೋನನು ನೆಡಲೂ ಇಲ್ಲ ಬೆಳಸಲೂ ಇಲ್ಲ, ಆದರೂ ಅದಕ್ಕಾಗಿ ಕನಿಕರಪಟ್ಟ ಅವನೊಂದಿಗೆ ದೇವರು ತರ್ಕಸಮ್ಮತವಾಗಿ ಮಾತಾಡುತ್ತಾ, “ಎಡಗೈ ಬಲಗೈ ತಿಳಿಯದ ಒಂದು ಲಕ್ಷ ಇಪ್ಪತ್ತು ಸಾವಿರ ನರಪ್ರಾಣಿಗಳೂ ಬಹು ಪಶುಗಳೂ ಉಳ್ಳ ಆ ದೊಡ್ಡ ಪಟ್ಟಣವಾದ ನಿನೆವೆಗಾಗಿ ನಾನು ಕನಿಕರಪಡಬಾರದೋ” ಎಂದು ಕೇಳಿದನು.—ಯೋನ 4:10, 11.d
ಯೆಹೋವನು ಕಲಿಸಿದ ಈ ವಸ್ತುಪಾಠದ ಗಹನಾರ್ಥವು ನಿಮಗೆ ತಿಳಿಯಿತೋ? ಆ ಸಸಿಯನ್ನು ನೆಟ್ಟು ಬೆಳೆಸಲು ಯೋನನು ಸ್ವಲ್ಪವೂ ಕಷ್ಟಪಟ್ಟಿರಲಿಲ್ಲ. ಯೆಹೋವನಾದರೋ ಆ ನಿನೆವೆಯ ಜನರ ಜೀವದಾತನಾಗಿದ್ದನು ಮತ್ತು ಭೂಮಿಯ ಸಕಲ ಜೀವಿಗಳನ್ನು ಹೇಗೋ ಹಾಗೆ ಪೋಷಿಸಿ ಪಾಲಿಸಿದ್ದನು. ಯೋನನು ನಿನೆವೆಯ 1,20,000 ಜನರ ಹಾಗೂ ಪಶುಪ್ರಾಣಿಗಳ ಜೀವಕ್ಕಿಂತ ಬರೇ ಒಂದು ಚಿಕ್ಕ ಸಸಿಯು ಹೆಚ್ಚು ಅಮೂಲ್ಯವೆಂದು ಪರಿಗಣಿಸಿದ್ದೇಕೆ? ಸ್ವಾರ್ಥಪರನಾಗುವಂತೆ ತನ್ನನ್ನು ಬಿಟ್ಟುಕೊಟ್ಟದ್ದೇ ಅದಕ್ಕೆ ಕಾರಣವಾಗಿತ್ತಲ್ಲವೇ? ಎಷ್ಟೆಂದರೂ ಅವನು ಆ ಸಸಿಗಾಗಿ ಮರುಗಿದ್ದು ತನಗೆ ಅದು ಉಪಯುಕ್ತವಾಗಿದ್ದ ಕಾರಣದಿಂದ ಮಾತ್ರ. ಅಂತೆಯೇ ನಿನೆವೆಯ ಬಗ್ಗೆ ಅವನಿಗಿದ್ದ ಸಿಟ್ಟು ಹೊರಹೊಮ್ಮಿದ್ದೂ ಸ್ವಾರ್ಥತೆಯಿಂದಲೇ. ತನ್ನ ಹೆಸರು, ಮಾನ ಉಳಿಸಿಕೊಳ್ಳುವ ಪ್ರಯತ್ನವು ಹಾಗೂ ತಾನೇ ಸರಿಯೆಂದು ಸಮರ್ಥಿಸುವ ಹಟವು ಸ್ವಾರ್ಥವಲ್ಲದೆ ಬೇರೇನು?
ಖಂಡಿತವಾಗಿ ಇದೊಂದು ಗಂಭೀರ ಪಾಠ! ಆದರೆ ಪ್ರಶ್ನೆ ಏನೆಂದರೆ ಯೋನನು ಆ ಪಾಠವನ್ನು ಕಲಿತನೋ? ‘ಕನಿಕರ ತೋರಿಸಬಾರದೋ’ ಎಂದು ಯೆಹೋವನು ಯೋನನಿಗೆ ಕೇಳಿದ ಪ್ರಶ್ನೆಯೊಂದಿಗೆ ಯೋನನ ಪುಸ್ತಕವು ಕೊನೆಗೊಳ್ಳುತ್ತದೆ. ಅದಕ್ಕೆ ಯಾವ ಉತ್ತರವೂ ಇಲ್ಲ. ಯೋನನು ಎಂದೂ ಪ್ರತ್ಯುತ್ತರಗಳನ್ನೇ ಕೊಡದ ವ್ಯಕ್ತಿ ಎಂದು ಕೆಲವು ಟೀಕಾಕಾರರು ದೂರುತ್ತಾರೆ. ಆದರೆ ವಾಸ್ತವಿಕವಾಗಿ ಅವನು ಉತ್ತರ ಕೊಟ್ಟಿದ್ದಾನೆ. ಯೋನನ ಪುಸ್ತಕವೇ ಆ ಉತ್ತರ. ಹೇಗಂದರೆ ಯೋನನ ಪುಸ್ತಕವನ್ನು ಬರೆದವನು ಯೋನನು ತಾನೇ ಎಂದು ಪುರಾವೆ ತೋರಿಸುತ್ತದೆ. ತನ್ನ ಸ್ವದೇಶಕ್ಕೆ ಹಿಂದಿರುಗಿದ ಮೇಲೆ ಆ ಪ್ರವಾದಿಯು ತನ್ನ ಸ್ವಂತ ವೃತ್ತಾಂತವನ್ನು ಬರೆದಿಟ್ಟದ್ದನ್ನು ತುಸು ಯೋಚಿಸಿರಿ. ತನ್ನ ವೃತ್ತಾಂತವನ್ನು ಬರೆದಾಗ ವಯಸ್ಕನೂ ಹೆಚ್ಚು ವಿವೇಕಿಯೂ ದೀನನೂ ಆದ ಯೋನನು ತನ್ನ ಅವಿಧೇಯತೆ, ನಿಷ್ಕರುಣೆ ಹಾಗೂ ಸ್ವಂತ ತಪ್ಪುಗಳನ್ನು ವಿವರಿಸುತ್ತಾ ಅವನ್ನು ಒಪ್ಪಿಕೊಳ್ಳುವುದನ್ನು ನಾವು ಚಿತ್ರಿಸಿಕೊಳ್ಳಸಾಧ್ಯವಿದೆ. ಹೌದು, ಯೆಹೋವನ ವಿವೇಕಯುತ ಉಪದೇಶದಿಂದ ಯೋನನು ನಿಜವಾಗಿಯೂ ಪಾಠ ಕಲಿತನು. ಅವನು ಕರುಣೆ ತೋರಿಸಲು ಕಲಿತನು. ನಾವೂ ಇತರರಿಗೆ ಕರುಣೆ ತೋರಿಸಲು ಕಲಿಯುವೆವೋ? (w09 4/1)
[ಪಾದಟಿಪ್ಪಣಿಗಳು]
a 2009ರ ಕಾವಲಿನಬುರುಜು ಏಪ್ರಿಲ್-ಜೂನ್ ಸಂಚಿಕೆಯಲ್ಲಿರುವ “ಅವರ ನಂಬಿಕೆಯನ್ನು ಅನುಕರಿಸಿರಿ—ತನ್ನ ತಪ್ಪಿನಿಂದ ಪಾಠ ಕಲಿತನು” ಎಂಬ ಲೇಖನ ನೋಡಿ.
b ಯೋನನ ದಿನಗಳಲ್ಲಿದ್ದ ಇಸ್ರೇಲ್ನ ರಾಜಧಾನಿ ಸಮಾರ್ಯದ ಜನಸಂಖ್ಯೆಯು 20,000ದಿಂದ 30,000 ಆಗಿದ್ದಿರಬಹುದೆಂದು ಅಂದಾಜಿಸಲಾಗಿದೆ. ಇದು ನಿನೆವೆಯ ಜನಸಂಖ್ಯೆಯ ಕಾಲು ಭಾಗಕ್ಕಿಂತಲೂ ಕಡಿಮೆ. ನಿನೆವೆಯು ಸಮೃದ್ಧಿಯ ಸಮಯದಲ್ಲಿ ಇಡೀ ಲೋಕದಲ್ಲೇ ಅತೀ ದೊಡ್ಡ ಪಟ್ಟಣವಾಗಿದ್ದಿರಬಹುದು.
c ಈ ವಿವರಣೆಯು ವಿಚಿತ್ರವಾಗಿ ಕಾಣಬಹುದು ಆದರೆ ಪುರಾತನ ಕಾಲದಲ್ಲಿ ಇಂಥ ಸಂಗತಿ ನಡೆದಿತ್ತು. ಗ್ರೀಕ್ ಇತಿಹಾಸಕಾರ ಹೆರಡಟಸ್ ಗಮನಿಸಿದ್ದೇನಂದರೆ ಪ್ರಾಚೀನ ಪರ್ಷಿಯನ್ನರು ಜನಪ್ರಿಯ ಸೇನಾನಿಯೊಬ್ಬನ ಮರಣಕ್ಕಾಗಿ ಶೋಕಿಸುವಾಗ ಶೋಕಪದ್ಧತಿಗಳಲ್ಲಿ ತಮ್ಮ ಪ್ರಾಣಿಗಳನ್ನೂ ಒಳಗೂಡಿಸಿದ್ದರು.
d ನಿನೆವೆಯ ಜನರಿಗೆ ಎಡಗೈ ಬಲಗೈ ತಿಳಿಯದು ಎಂದು ದೇವರು ಹೇಳಿದ್ದು, ಅವರು ದೇವರ ನಿಯಮಗಳ ಬಗ್ಗೆ ಯಾವ ಅರಿವೂ ಇಲ್ಲದ ಮುಗ್ಧಜನರಾಗಿದ್ದರು ಎಂಬ ಅರ್ಥದಲ್ಲಿ.
[ಪುಟ 16ರಲ್ಲಿರುವ ಸಂಕ್ಷಿಪ್ತ ವಿವರಣೆ]
ನಿನೆವೆಯ ಜನರಂತೆ ಇಂದಿನ ದುಷ್ಟ ಜನರು ಸಹ ಪಶ್ಚಾತ್ತಾಪಪಟ್ಟು ದುರ್ಮಾರ್ಗಗಳನ್ನು ಬಿಟ್ಟುಬಿಡಬೇಕೆಂದು ದೇವರು ಬಯಸುತ್ತಾನೆ
[ಪುಟ 17ರಲ್ಲಿರುವ ಸಂಕ್ಷಿಪ್ತ ವಿವರಣೆ]
ಯೋನನಿಗೆ ಕರುಣೆಯ ಪಾಠ ಕಲಿಸಲು ದೇವರು ಸೋರೆಗಿಡವನ್ನು ಉಪಯೋಗಿಸಿದನು