ಯೆಹೋವನ ವಾಕ್ಯವು ಸಜೀವವಾದದ್ದು
ಓಬದ್ಯ, ಯೋನ ಮತ್ತು ಮೀಕ ಪುಸ್ತಕಗಳ ಮುಖ್ಯಾಂಶಗಳು
“ಓಬದ್ಯನಿಗಾದ ದೈವದರ್ಶನ.” (ಓಬದ್ಯ 1) ಇವು ಬೈಬಲಿನ ಓಬದ್ಯ ಪುಸ್ತಕದ ಆರಂಭದ ಮಾತುಗಳು. ಸಾ.ಶ.ಪೂ. 607ರಲ್ಲಿ ಬರೆದ ಈ ಪುಸ್ತಕದಲ್ಲಿ ಪ್ರವಾದಿ ಓಬದ್ಯನು ತನ್ನ ಹೆಸರನ್ನು ಬಿಟ್ಟು ತನ್ನ ಕುರಿತಾದ ಬೇರಾವುದೇ ಮಾಹಿತಿಯನ್ನು ಕೊಡುವುದಿಲ್ಲ. ಪ್ರವಾದಿ ಯೋನನು ಇದಕ್ಕಿಂತ ಎರಡು ಶತಮಾನಗಳ ಹಿಂದೆ ಬರೆದು ಮುಗಿಸಿದ ತನ್ನ ಪುಸ್ತಕದಲ್ಲಿ ತನ್ನ ಮಿಷನೆರಿ ನೇಮಕದಲ್ಲಾದ ವೈಯಕ್ತಿಕ ಅನುಭವಗಳನ್ನು ಮುಕ್ತವಾಗಿ ತಿಳಿಸುತ್ತಾನೆ. ಮೀಕನ 60 ವರ್ಷಗಳ ಪ್ರವಾದನಾತ್ಮಕ ಕೆಲಸವು ಓಬದ್ಯ ಮತ್ತು ಯೋನರು ಪ್ರವಾದನೆ ಮಾಡಿದ ಸಮಯಾವಧಿಯ ಮಧ್ಯಭಾಗದಲ್ಲಿ ಅಂದರೆ, ಸಾ.ಶ.ಪೂ. 777ರಿಂದ ಸಾ.ಶ.ಪೂ. 717ರ ವರೆಗೆ ನಡೆಯಿತು. ಮೀಕನು ತನ್ನ ಕುರಿತು ಹೇಳಿರುವ ವಿಷಯವು ಇಷ್ಟೇ: ತಾನು ‘ಮೋರೆಷೆತ್ ಊರಿನವನು’ ಮತ್ತು “ಯೆಹೂದದ ಅರಸರಾದ ಯೋಥಾಮ, ಅಹಾಜ, ಹಿಜ್ಕೀಯ, ಇವರ ಕಾಲದಲ್ಲಿ” ದೇವರು ಆತನ ವಾಕ್ಯವನ್ನು ತನಗೆ ದಯಪಾಲಿಸಿದನು ಎಂದೇ. (ಮೀಕ 1:1) ಪ್ರವಾದಿಯು ತನ್ನ ಸಂದೇಶದ ಮುಖ್ಯಾಂಶಗಳನ್ನು ಒತ್ತಿಹೇಳಲು ಬಳಸಿದ ದೃಷ್ಟಾಂತಗಳಿಂದ ಅವನಿಗೆ ಗ್ರಾಮೀಣ ಜೀವನವು ಸುಪರಿಚಿತವಾಗಿತ್ತೆಂಬುದು ವ್ಯಕ್ತವಾಗುತ್ತದೆ.
ಎದೋಮ್ ‘ನಿತ್ಯನಾಶನಕ್ಕೆ ಈಡಾಗುವುದು’
ಎದೋಮಿನ ಕುರಿತು ಓಬದ್ಯನು ನುಡಿಯುವುದು: “ನೀನು ನಿನ್ನ ತಮ್ಮನಾದ ಯಾಕೋಬನಿಗೆ ಮಾಡಿದ ಹಿಂಸೆಯ ನಿಮಿತ್ತ ಅವಮಾನವು ನಿನ್ನನ್ನು ಕವಿಯುವದು; ನಿತ್ಯನಾಶನಕ್ಕೆ ಈಡಾಗುವಿ.” ಯಾಕೋಬನ ಮಕ್ಕಳ ಅಂದರೆ ಇಸ್ರಾಯೇಲ್ಯರ ಮೇಲೆ ಎದೋಮ್ಯರು ನಡೆಸಿದ ಹಿಂಸಾಕೃತ್ಯಗಳು ಪ್ರವಾದಿಯ ಮನಸ್ಸಿನಲ್ಲಿ ಹಚ್ಚಹಸುರಾಗಿವೆ. ಸಾ.ಶ.ಪೂ. 607ರಲ್ಲಿ ಯೆರೂಸಲೇಮನ್ನು ಬಾಬೆಲಿನವರು ನಾಶಮಾಡಿದಾಗ, ಆಕ್ರಮಣಮಾಡಿದ ಆ ‘ಮ್ಲೇಚ್ಛರೊಂದಿಗೆ’ ಎದೋಮ್ಯರು ಮೈತ್ರಿಮಾಡಿ ‘ಸುಮ್ಮನೆ ನಿಂತು’ ನೋಡಿದರು.—ಓಬದ್ಯ 10, 11.
ಅದಕ್ಕೆ ವ್ಯತಿರಿಕ್ತವಾಗಿ ಯಾಕೋಬನ ವಂಶದವರಿಗೊ ಪುನಃಸ್ಥಾಪನೆಯು ಕಾದಿದೆ. ಓಬದ್ಯನ ಪ್ರವಾದನೆ ಹೇಳುವುದು: “ಚೀಯೋನ್ ಪರ್ವತದಲ್ಲಿ ಅನೇಕರು ಉಳಿದಿರುವರು; ಆ ಪರ್ವತವು ಮೀಸಲಾಗಿರುವದು.”—ಓಬದ್ಯ 17.
ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:
5-8—ಎದೋಮಿನ ನಾಶನವನ್ನು ರಾತ್ರಿವೇಳೆಯಲ್ಲಿ ಬರುವ ಪಂಜುಗಳ್ಳರಿಗೆ ಮತ್ತು ದ್ರಾಕ್ಷೆಯ ಹಣ್ಣನ್ನು ಕೀಳುವವರಿಗೆ ಹೋಲಿಸಿದ್ದರ ಅರ್ಥವೇನು? ಎದೋಮಿಗೆ ಕಳ್ಳರು ನುಗ್ಗಿದ್ದರೆ ಅವರು ತಮಗೆ ಬೇಕಾದದ್ದನ್ನು ಮಾತ್ರ ತೆಗೆದುಕೊಂಡು ಹೋಗುತ್ತಿದ್ದರು. ಒಂದುವೇಳೆ ಕೊಯ್ಯುವವರು ಬಂದಿದ್ದರೆ ಹಕ್ಕಲಾಯಲು ಸ್ವಲ್ಪ ಬೆಳೆಯನ್ನು ಬಿಟ್ಟು ಹೋಗುತ್ತಿದ್ದರು. ಆದರೆ ಎದೋಮ್ ಪತನಗೊಳ್ಳುವಾಗ ಅದರೊಂದಿಗೆ ಮೈತ್ರಿ ಸಂಬಂಧದಲ್ಲಿರುವ ಬಾಬೆಲಿನವರೇ ಇಲ್ಲವೇ ‘ಮಿತ್ರಮಂಡಲಿಯವರೇ’ ಅದರ ಸ್ವತ್ತುಗಳನ್ನೆಲ್ಲಾ ಹುಡುಕಿತೆಗೆದು ಅದನ್ನು ಸಂಪೂರ್ಣವಾಗಿ ಲೂಟಿಮಾಡುವರು.—ಯೆರೆಮೀಯ 49:9, 10.
10—ಎದೋಮ್ ‘ನಿತ್ಯನಾಶನಕ್ಕೆ ಈಡಾದದ್ದು’ ಹೇಗೆ? ಒಂದು ಸರಕಾರ ಮತ್ತು ಪ್ರಜೆಗಳಿದ್ದು ನಿರ್ದಿಷ್ಟ ಭೂಪ್ರದೇಶವೊಂದರಲ್ಲಿ ನಿಜಕ್ಕೂ ನೆಲೆಸಿದ್ದ ಎದೋಮ್ ಜನಾಂಗವು ಮುಂತಿಳಿಸಿದ್ದಂತೆಯೇ ಅಳಿದು ಹೋಯಿತು. ಸಾ.ಶ.ಪೂ. 6ನೇ ಶತಮಾನದ ಸುಮಾರು ಮಧ್ಯ ಭಾಗದಲ್ಲಿ ಬಾಬೆಲಿನ ರಾಜ ನೆಬೊನೈಡಸನು ಎದೋಮನ್ನು ಸೋಲಿಸಿದನು. ಸಾ.ಶ.ಪೂ. 4ನೇ ಶತಮಾನದಲ್ಲಿ ಎದೋಮಿಗೆ ಸೇರಿದ ಪ್ರದೇಶದಲ್ಲಿ ನಾಬಾತ್ಯರು ವಾಸಿಸಲಾರಂಭಿಸಿದರು ಮತ್ತು ಇದರ ದೆಸೆಯಿಂದ ಎದೋಮ್ಯರಿಗೆ ಇದೂಮಾಯ ಎಂದು ತದನಂತರ ಹೆಸರು ಪಡೆದ ಯೂದಾಯದ ದಕ್ಷಿಣಸೀಮೆಯಲ್ಲಿ ಬಿಡಾರ ಹೂಡಬೇಕಾಯಿತು. ಸಾ.ಶ. 70ರಲ್ಲಿ ಯೆರೂಸಲೇಮನ್ನು ರೋಮನರು ನಾಶಮಾಡಿದ ನಂತರ ಎದೋಮ್ಯರು ಅಳಿದೇ ಹೋದರು.
ನಮಗಾಗಿರುವ ಪಾಠಗಳು:
3, 4. ಎದೋಮ್ ಸೀಮೆಯಲ್ಲಿದ್ದ ಕಗ್ಗಾಡಿನ ಎತ್ತರವಾದ ಪರ್ವತಗಳೂ ಆಳವಾದ ಕಂದಕಗಳೂ ಕಾದಾಡುವ ಸಮಯದಲ್ಲಿ ವೈರಿಗಳಿಗೆ ತಡೆಗಟ್ಟಾಗಿದ್ದವು. ಇದರಿಂದ ಎದೋಮ್ಯರಲ್ಲಿ ತಾವು ಸುರಕ್ಷಿತರಾಗಿದ್ದೇವೆಂಬ ಅತಿಯಾದ ಆತ್ಮವಿಶ್ವಾಸ ಮೂಡಿದ್ದಿರಬೇಕು. ಆದರೆ ಯೆಹೋವನ ತೀರ್ಪುಗಳನ್ನು ತಪ್ಪಿಸಿಕೊಳ್ಳಲಸಾಧ್ಯ.
8, 9, 15. “ಯೆಹೋವನ ದಿನ” ಬರುವಾಗ ಮಾನವ ವಿವೇಕವಾಗಲಿ ಪರಾಕ್ರಮವಾಗಲಿ ಸಂರಕ್ಷಣೆಯನ್ನು ಕೊಡಲಾರದು.—ಯೆರೆಮೀಯ 49:7, 22.
12-14. ದೇವರ ಸೇವಕರು ಎದುರಿಸಬಹುದಾದ ತೊಂದರೆಗಳನ್ನು ನೋಡಿ ಖುಷಿಪಡುವವರೆಲ್ಲರಿಗೆ ಎದೋಮ್ಯರ ಉದಾಹರಣೆಯು ಎಚ್ಚರಿಕೆಯಾಗಿದೆ. ತನ್ನ ಜನರಿಗಾಗುವ ದುರುಪಚಾರವನ್ನು ಯೆಹೋವನು ತುಂಬ ಗಂಭೀರವಾಗಿ ತೆಗೆದುಕೊಳ್ಳುತ್ತಾನೆ.
17-20. ಯಾಕೋಬನ ಸಂತತಿಯ ಕುರಿತ ಈ ಪುನಃಸ್ಥಾಪನೆಯ ಪ್ರವಾದನೆಯು, ಸಾ.ಶ.ಪೂ. 537ರಲ್ಲಿ ಒಂದು ಜನಶೇಷವು ಬಾಬೆಲಿನಿಂದ ಯೆರೂಸಲೇಮಿಗೆ ಹಿಂತೆರಳಿದಾಗ ನೆರವೇರಿತು. ಯೆಹೋವನ ಮಾತು ಎಂದೂ ಸುಳ್ಳಾಗುವುದಿಲ್ಲ. ಆತನ ವಾಗ್ದಾನಗಳಲ್ಲಿ ನಾವು ಪೂರ್ಣ ಭರವಸೆಯನ್ನಿಡಬಲ್ಲೆವು.
“ನಿನೆವೆಯು ಕೆಡವಲ್ಪಡುವದು”
‘ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ಗಟ್ಟಿಯಾಗಿ ಕೂಗುತ್ತಾ ಅದನ್ನು ಖಂಡಿಸುವ’ ತೀರ್ಪಿನ ಸಂದೇಶವನ್ನು ಪ್ರಕಟಪಡಿಸಬೇಕೆಂಬ ದೇವರ ಆದೇಶಕ್ಕೆ ವಿಧೇಯನಾಗುವ ಬದಲು ಯೋನನು ವಿರುದ್ಧ ದಿಕ್ಕಿನಲ್ಲಿ ಓಡಿಹೋಗುತ್ತಾನೆ. ‘ಬಿರುಗಾಳಿಯನ್ನು ಸಮುದ್ರದ ಮೇಲೆ ಬಲವಾಗಿ ಬೀಸುವಂತೆ’ ಮಾಡಿ ‘ಒಂದು ದೊಡ್ಡ ಮೀನನ್ನು’ ಬಳಸುವ ಮೂಲಕ ಯೆಹೋವನು ಯೋನನಿಗೆ ಅಶ್ಶೂರ್ಯದ ರಾಜಧಾನಿಗೆ ಹೋಗುವಂತೆ ಪುನಃ ಮಾರ್ಗದರ್ಶಿಸಿ ಹೀಗೆ ಆ ನೇಮಕವನ್ನು ಎರಡನೇ ಸಲ ಕೊಡುತ್ತಾನೆ.—ಯೋನ 1:2, 4, 17; 3:1, 2.
ನಿನೆವೆಗೆ ಹೋಗಿ ಯೋನನು, “ನಾಲ್ವತ್ತು ದಿನಗಳಾದ ಮೇಲೆ ನಿನೆವೆಯು ಕೆಡವಲ್ಪಡುವದು” ಎಂಬ ಖಡಾಖಂಡಿತವಾದ ಸಂದೇಶವನ್ನು ಸಾರತೊಡಗುತ್ತಾನೆ. (ಯೋನ 3:4) ತನ್ನ ಸಾರುವ ಕೆಲಸಕ್ಕೆ ಅನಿರೀಕ್ಷಿತ ಪರಿಣಾಮವು ದೊರೆತಾಗ ಯೋನನ “ಸಿಟ್ಟು” ನೆತ್ತಿಗೇರುತ್ತದೆ. ಯೆಹೋವನು ‘ಸೋರೆಗಿಡವನ್ನು’ ಬಳಸಿ ಯೋನನಿಗೆ ಕರುಣೆಯ ಪಾಠವನ್ನು ಕಲಿಸುತ್ತಾನೆ.—ಯೋನ 4:1, 2, 6.
ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:
3:3—ನಿನೆವೆಯ ವಿಸ್ತಾರವು ಕಾಲ್ನಡಿಗೆಯಲ್ಲಿ “ಮೂರು ದಿನದ ಪ್ರಯಾಣದಷ್ಟು” ಅಂದರೆ ಸುಮಾರು 42 ಕಿ.ಮೀ.ನಷ್ಟು ದೊಡ್ಡದಾಗಿತ್ತೇ? ಹೌದು. ನಿನೆವೆಯಲ್ಲಿ, ಉತ್ತರದ ಖೋರ್ಸಾಬಾದ್ದಿಂದ ದಕ್ಷಿಣದಲ್ಲಿರುವ ನಿಮ್ರುದ್ಧದ ವರೆಗಿನ ನೆಲಸುನಾಡುಗಳೂ ಸೇರಿದ್ದವೆಂಬುದು ಪ್ರಾಚೀನ ಕಾಲಗಳಲ್ಲಿ ಎಲ್ಲರೂ ತಿಳಿದುಕೊಂಡಿದ್ದ ವಿಷಯವಾಗಿದ್ದಿರಬಹುದು. ನಿನೆವೆಗೆ ಸೇರಿದ ಎಲ್ಲ ನೆಲಸುನಾಡುಗಳು ಒಂದು ಚತುರ್ಭುಜಾಕೃತಿಯಲ್ಲಿದ್ದು ಅವುಗಳ ಒಟ್ಟು ಸುತ್ತಳತೆಯು 100 ಕಿ.ಮೀ. ಆಗಿದೆ.
3:4—ನಿನೆವೆಯ ಜನರಿಗೆ ಸಾರಲು ಯೋನನಿಗೆ ಅಶ್ಶೂರ್ಯರ ಭಾಷೆಯನ್ನು ಕಲಿಯುವ ಅಗತ್ಯವಿತ್ತೇ? ಯೋನನಿಗೆ ಅಶ್ಶೂರ್ಯರ ಭಾಷೆ ಮೊದಲೇ ಗೊತ್ತಿದ್ದಿರಬಹುದು ಅಥವಾ ಆ ಭಾಷೆಯನ್ನಾಡುವ ಸಾಮರ್ಥ್ಯವನ್ನು ಅವನು ಅದ್ಭುತವಾದ ರೀತಿಯಲ್ಲಿ ಪಡೆದಿದ್ದಿರಬಹುದು. ಇನ್ನೊಂದು ಸಂಭಾವ್ಯತೆ, ಅವನು ತನ್ನ ಸಂದೇಶವನ್ನು ಹೀಬ್ರು ಭಾಷೆಯಲ್ಲಿ ಸಂಕ್ಷೇಪವಾಗಿ ನೀಡಿದ್ದಿರಬಹುದು ಮತ್ತು ಅದನ್ನು ಇನ್ನೊಬ್ಬ ವ್ಯಕ್ತಿ ಭಾಷಾಂತರ ಮಾಡಿದ್ದಿರಬಹುದು. ಭಾಷಾಂತರ ಮಾಡಿದ್ದಲ್ಲಿ ಅವನ ಮಾತುಗಳು ಸಂದೇಶದ ಕುರಿತ ಇನ್ನೂ ಹೆಚ್ಚಿನ ಕುತೂಹಲವನ್ನು ಕೆರಳಿಸಿದ್ದಿರಬಹುದು.
ನಮಗಾಗಿರುವ ಪಾಠಗಳು:
1:1-3. ರಾಜ್ಯ-ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವುದರಲ್ಲಿ ಪೂರ್ಣ ಪಾಲನ್ನು ತೆಗೆದುಕೊಳ್ಳದಂತೆ ಬೇಕುಬೇಕೆಂದು ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ನಮ್ಮಲ್ಲಿ ತಪ್ಪು ಹೇತುಗಳಿವೆ ಎಂಬುದಕ್ಕೆ ಸೂಚನೆಯಾಗಿದೆ. ಹೀಗೆ ಮಾಡುವ ವ್ಯಕ್ತಿಯು ದೇವರಿಂದ ಪಡೆದ ನೇಮಕವನ್ನು ಬಿಟ್ಟು ಓಡಿಹೋಗುವಂತಿದೆ.
1:1, 2; 3:10. ಯೆಹೋವನ ಕರುಣೆಯು ಒಂದು ನಿರ್ದಿಷ್ಟ ಜನಾಂಗ, ಕುಲ ಅಥವಾ ಒಂದು ವಿಶೇಷ ಗುಂಪಿನ ಜನರಿಗೆ ಸೀಮಿತವಾದದ್ದಲ್ಲ. “ಯೆಹೋವನು ಸರ್ವೋಪಕಾರಿಯೂ ತಾನು ನಿರ್ಮಿಸಿದವುಗಳನ್ನೆಲ್ಲಾ ಕರುಣಿಸುವಾತನೂ ಆಗಿದ್ದಾನೆ.”—ಕೀರ್ತನೆ 145:9.
1:17; 2:10. ದೊಡ್ಡ ಮೀನಿನ ಹೊಟ್ಟೆಯಲ್ಲಿ ಯೋನನು ಮೂರು ದಿನ ಮೂರು ರಾತ್ರಿ ಇರುವುದು ಪ್ರವಾದನಾತ್ಮಕವಾಗಿ ಯೇಸುವಿನ ಮರಣ ಮತ್ತು ಪುನರುತ್ಥಾನವನ್ನು ಸೂಚಿಸುತ್ತದೆ.—ಮತ್ತಾಯ 12:39, 40; 16:21.
1:17; 2:10; 4:6. ಯೆಹೋವನು ಯೋನನನ್ನು ಭೋರ್ಗರೆಯುವ ಸಮುದ್ರದಿಂದ ಸಂರಕ್ಷಿಸಿದನು. ಅಲ್ಲದೆ, “ಯೆಹೋವನು ಯೋನನ ಮೇಲ್ಗಡೆ ಒಂದು ಸೋರೆಗಿಡವು ಹಬ್ಬಿ ಅವನ ತಲೆಗೆ ನೆರಳಾಗಿ ಅವನ ಕರಕರೆಯನ್ನು ತಪ್ಪಿಸುವಂತೆ ಏರ್ಪಡಿಸಿದನು.” ಯೆಹೋವನ ಆಧುನಿಕ ದಿನದ ಆರಾಧಕರು ಸಂರಕ್ಷಣೆಗಾಗಿ ಮತ್ತು ಬಿಡುಗಡೆಗಾಗಿ ತಮ್ಮ ದೇವರಲ್ಲಿ ಮತ್ತು ಆತನ ಕೃಪೆಯಲ್ಲಿ ಭರವಸೆಯನ್ನಿಡಬಲ್ಲರು.—ಕೀರ್ತನೆ 13:5; 40:11.
2:1, 2, 9, 10. ಯೆಹೋವನು ತನ್ನ ಸೇವಕರ ಪ್ರಾರ್ಥನೆಗಳಿಗೆ ಕಿವಿಗೊಡುತ್ತಾನೆ ಮತ್ತು ಅವರ ವಿಜ್ಞಾಪನೆಗಳಿಗೆ ಲಕ್ಷ್ಯಕೊಡುತ್ತಾನೆ.—ಕೀರ್ತನೆ 120:1; 130:1, 2.
3:8, 10. ಸತ್ಯ ದೇವರು “ಮನಮರುಗಿ” ಯಾ ಮನಬದಲಾಯಿಸಿ, ಅವರಿಗೆ ಮಾಡುವನೆಂದು ಪ್ರಕಟಿಸಿದ್ದ ಕೇಡನ್ನು “ಮಾಡದೆ ಬಿಟ್ಟನು.” ಏಕೆ? ನಿನೆವೆಯ ಜನರು “ತಮ್ಮ ದುರ್ಮಾರ್ಗದಿಂದ ತಿರುಗಿಕೊಂಡ” ಕಾರಣಕ್ಕಾಗಿಯೇ. ತದ್ರೀತಿಯಲ್ಲಿ ಇಂದು ಒಬ್ಬ ಪಾಪಿಯು ನಿಜವಾದ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿದರೆ ಅವನು ದೇವರ ಪ್ರತಿಕೂಲ ತೀರ್ಪಿನಿಂದ ತಪ್ಪಿಸಿಕೊಳ್ಳಬಹುದು.
4:1-4. ದೇವರ ಕರುಣೆಗೆ ಮಿತಿಯಿಡಲು ಯಾವ ಮಾನವನಿಗೂ ಸಾಧ್ಯವಿಲ್ಲ. ಯೆಹೋವನ ಕರುಣಾ ಮಾರ್ಗಗಳನ್ನು ಟೀಕೆಮಾಡದಂತೆ ನಾವು ಜಾಗ್ರತೆವಹಿಸಬೇಕು.
4:11. ಯೆಹೋವನು ತಾಳ್ಮೆಯಿಂದ ರಾಜ್ಯ ಸಂದೇಶವು ಭೂಮಿಯಾದ್ಯಂತ ಸಾರಲ್ಪಡುವಂತೆ ನೋಡುತ್ತಿದ್ದಾನೆ. ಏಕೆಂದರೆ, ನಿನೆವೆಯಲ್ಲಿದ್ದ 1,20,000 ಜನರ ಮೇಲೆ ಕನಿಕರಪಟ್ಟಂತೆಯೇ, “ಎಡಗೈ ಬಲಗೈ” ನಡುವಣ ವ್ಯತ್ಯಾಸವನ್ನು ತಿಳಿಯದಿದ್ದ ಜನರನ್ನು ಆತನು ಕನಿಕರಿಸುತ್ತಾನೆ. ನಮ್ಮ ಟೆರಿಟೊರಿಯಲ್ಲಿರುವ ಜನರಿಗಾಗಿ ಕನಿಕರಪಟ್ಟು ರಾಜ್ಯದ ಸಾರುವಿಕೆಯಲ್ಲಿ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಾವು ಹುರುಪಿನಿಂದ ಭಾಗವಹಿಸಬೇಕಲ್ಲವೇ?—2 ಪೇತ್ರ 3:9.
‘ಅವರ ಬೋಳುತನವು ವಿಸ್ತರಿಸುವುದು’
ಮೀಕನು ಇಸ್ರಾಯೇಲಿನ ಮತ್ತು ಯೆಹೂದದ ಪಾಪಗಳನ್ನು ಬಯಲುಪಡಿಸುತ್ತಾನೆ, ಅವುಗಳ ರಾಜಧಾನಿಗಳಿಗಾಗುವ ನಿರ್ಜನಾವಸ್ಥೆಯನ್ನು ಮುಂತಿಳಿಸುತ್ತಾನೆ ಮತ್ತು ಪುನಃಸ್ಥಾಪನೆಯ ವಚನವೀಯುತ್ತಾನೆ. ಸಮಾರ್ಯವು “ಹೊಲದಲ್ಲಿನ ಹಾಳು ದಿಬ್ಬ”ವಾಗಲಿರುವುದು. ಇಸ್ರಾಯೇಲ್ ಮತ್ತು ಯೆಹೂದದ ಜನರು ವಿಗ್ರಹಾರಾಧನೆಯನ್ನು ನಡೆಸಿದ್ದಕ್ಕಾಗಿ ಅವರು ‘ತಲೆಬೋಳಿಗೆ’ ಇಲ್ಲವೇ ಅವಮಾನಕ್ಕೆ ಯೋಗ್ಯರಾಗಿದ್ದಾರೆ. ತಲೆಯ ಮೇಲೆ ಕೇವಲ ಕೆಲವೇ ಪುಕ್ಕೆಗಳಿರುವ “ರಣಹದ್ದಿನ ಹಾಗೆ” ಸೆರೆಗೆ ಹೋಗುವುದರಿಂದ ಅವರ ಬೋಳುತನವು ಇನ್ನಷ್ಟು ವಿಸ್ತರಿಸಲಿರುವುದು. ಯೆಹೋವನು ಮಾತುಕೊಡುವುದು: “ಯಾಕೋಬೇ, ನಿನ್ನವರನ್ನೆಲ್ಲಾ ಕೂಡಿಸೇ ಕೂಡಿಸುವೆನು.” (ಮೀಕ 1:6, 16; 2:12) ಭ್ರಷ್ಟ ಮುಖಂಡರ ಮತ್ತು ಕರ್ತವ್ಯಚ್ಯುತ ಪ್ರವಾದಿಗಳ ನಿಮಿತ್ತ ಯೆರೂಸಲೇಮ್ ಸಹ “ಹಾಳುದಿಬ್ಬ” ಆಗುವುದು. ಆದರೆ ತನ್ನ ಜನರನ್ನು ಯೆಹೋವನು ‘ಕೂಡಿಸುವನು.’ “ಇಸ್ರಾಯೇಲನ್ನು ಆಳತಕ್ಕವನು” ‘ಎಫ್ರಾತದ ಬೇತ್ಲೆಹೇಮಿನಿಂದ’ ಹೊರಡುವನು.—ಮೀಕ 3:12; 4:12; 5:2.
ಯೆಹೋವನು ಇಸ್ರಾಯೇಲಿಗೆ ಅನ್ಯಾಯಮಾಡಿದ್ದನೇ? ಆತನ ಆವಶ್ಯಕತೆಗಳನ್ನು ಪೂರೈಸುವುದು ತೀರಾ ಕಷ್ಟಕರವಾಗಿದೆಯೇ? ಇಲ್ಲ. ‘ನ್ಯಾಯವನ್ನು ಆಚರಿಸುವುದು, ಕರುಣೆಯಲ್ಲಿ ಆಸಕ್ತರಾಗಿರುವುದು, ದೇವರಿಗೆ ನಮ್ರವಾಗಿ ನಡೆದುಕೊಳ್ಳುವುದು’ ಇಷ್ಟನ್ನು ಬಿಟ್ಟರೆ ಯೆಹೋವನು ತನ್ನ ಆರಾಧಕರಿಂದ ಇನ್ನೇನನ್ನೂ ಕೇಳುವುದಿಲ್ಲ. (ಮೀಕ 6:8) ಆದರೆ ಮೀಕನ ಸಮಕಾಲೀನರಾದರೊ ಎಷ್ಟು ಭ್ರಷ್ಟರಾಗಿದ್ದರೆಂದರೆ, “ಅವರಲ್ಲಿ ಉತ್ತಮನೂ ಮುಳ್ಳುಕಂಪೆ, ಸತ್ಯವಂತನೂ ಕೂಡ ಮುಳ್ಳುಬೇಲಿಗಿಂತ ಕಡೆ” ಆಗಿದ್ದು ತಮ್ಮ ಬಳಿಬರುವವರೆಲ್ಲರಿಗೆ ನೋವು ಮತ್ತು ಹಾನಿಯನ್ನು ಉಂಟುಮಾಡುತ್ತಾರೆ. ಆದರೆ ಪ್ರವಾದಿ ಮೀಕನು ಕೇಳುವುದು: ಯೆಹೋವನಿಗೆ “ಯಾವ ದೇವರು ಸಮಾನ?” ಹೌದು ಯೆಹೋವನು ತನ್ನ ಜನರನ್ನು ಮತ್ತೊಮ್ಮೆ ಕರುಣಿಸಿ ಅವರ ಪಾಪಗಳನ್ನೆಲ್ಲ ‘ಸಮುದ್ರದ ತಳಕ್ಕೆ ಬಿಸಾಟುಬಿಡುವನು.’—ಮೀಕ 7:4, 18, 19.
ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:
2:12—‘ಇಸ್ರಾಯೇಲಿನ ಜನಶೇಷವನ್ನು ಸೇರಿಸುವ’ ಪ್ರವಾದನೆಯು ಯಾವಾಗ ನೆರವೇರಿತು? ಇದರ ಪ್ರಥಮ ನೆರವೇರಿಕೆಯು ಯೆಹೂದಿ ಜನಶೇಷವು ಸಾ.ಶ.ಪೂ. 537ರಲ್ಲಿ ಬಾಬೆಲಿನ ಸೆರೆಯಿಂದ ತಮ್ಮ ತಾಯ್ನಾಡಿಗೆ ಹಿಂತೆರಳಿದಾಗ ಸಂಭವಿಸಿತು. ಆಧುನಿಕ ದಿನಗಳಲ್ಲಿ ಈ ಪ್ರವಾದನೆಯು ‘ದೇವರ ಇಸ್ರಾಯೇಲ್ಯರಲ್ಲಿ’ ನೆರವೇರುತ್ತಿದೆ. (ಗಲಾತ್ಯ 6:16) 1919ರಿಂದ ಅಭಿಷಿಕ್ತ ಕ್ರೈಸ್ತರನ್ನು ‘ಹಟ್ಟಿಯಲ್ಲಿನ ಮಂದೆಯಂತೆ’ ಒಟ್ಟಾಗಿ ಕೂಡಿಸಲಾಗಿದೆ. ಇವರೊಂದಿಗೆ ವಿಶೇಷವಾಗಿ 1935ರಿಂದ ‘ಬೇರೆ ಕುರಿಗಳ’ ‘ಮಹಾ ಸಮೂಹದವರು’ ಸೇರಿರುವ ಕಾರಣ ಇವರು ‘ಗಿಜಿಗುಟ್ಟುತ್ತಾರೆ.’ (ಪ್ರಕಟನೆ 7:9; ಯೋಹಾನ 10:16) ಒಟ್ಟಾಗಿ ಅವರು ಸತ್ಯಾರಾಧನೆಯನ್ನು ಹುರುಪಿನಿಂದ ಪ್ರವರ್ಧಿಸುತ್ತಾರೆ.
4:1-4—“ಅಂತ್ಯಕಾಲದಲ್ಲಿ” ಯೆಹೋವನು ‘ಬಹು ರಾಷ್ಟ್ರದವರ ವ್ಯಾಜ್ಯಗಳನ್ನು ವಿಚಾರಿಸುವುದು ಮತ್ತು ಪ್ರಬಲ ಜನಾಂಗಗಳಿಗೆ ನ್ಯಾಯತೀರಿಸುವುದು’ ಹೇಗೆ? ‘ಬಹು ರಾಷ್ಟ್ರದವರು’ ಮತ್ತು ‘ಪ್ರಬಲ ಜನಾಂಗಗಳು’ ಎಂಬ ಅಭಿವ್ಯಕ್ತಿಗಳು ಜನಾಂಗೀಯ ಗುಂಪುಗಳಿಗೆ ಯಾ ರಾಜಕೀಯ ಪ್ರಭುತ್ವಗಳಿಗೆ ಸೂಚಿಸುವುದಿಲ್ಲ. ಬದಲಿಗೆ ಎಲ್ಲ ಜನಾಂಗಗಳಿಂದ ಹೊರಬಂದು ಯೆಹೋವನ ಆರಾಧಕರಾಗಿರುವವರಿಗೆ ಸೂಚಿಸುತ್ತದೆ. ಯೆಹೋವನು ಆಧ್ಯಾತ್ಮಿಕ ರೀತಿಯಲ್ಲಿ ಇವರ ವ್ಯಾಜ್ಯಗಳನ್ನು ವಿಚಾರಿಸಿ, ನ್ಯಾಯತೀರಿಸುವನು.
ನಮಗಾಗಿರುವ ಪಾಠಗಳು:
1:6, 9; 3:12; 5:2. ಮುಂತಿಳಿಸಿದ್ದಂತೆಯೇ ಮೀಕನ ಜೀವಮಾನಕಾಲದಲ್ಲೇ ಅಂದರೆ, ಸಾ.ಶ.ಪೂ. 740ರಲ್ಲಿ ಅಶ್ಶೂರವು ಸಮಾರ್ಯವನ್ನು ಧ್ವಂಸಮಾಡಿತು. (2 ಅರಸುಗಳು 17:5, 6) ಹಿಜ್ಕೀಯನ ಆಳಿಕೆಯ ಸಮಯದಲ್ಲಿ ಅಶ್ಶೂರ್ಯರು ಯೆರೂಸಲೇಮಿನ ವರೆಗೂ ಬಂದಿದ್ದರು. (2 ಅರಸುಗಳು 18:13) ಬಾಬೆಲಿನವರು ಸಾ.ಶ.ಪೂ. 607ರಲ್ಲಿ ಯೆರೂಸಲೇಮನ್ನು ಸುಟ್ಟುಬಿಟ್ಟರು. (2 ಪೂರ್ವಕಾಲವೃತ್ತಾಂತ 36:19) ಪ್ರವಾದಿಸಿದ್ದಂತೆಯೇ ಮೆಸ್ಸೀಯನು ‘ಎಫ್ರಾತದ ಬೇತ್ಲೆಹೇಮಿನಲ್ಲಿ’ ಜನಿಸಿದನು. (ಮತ್ತಾಯ 2:3-6) ಯೆಹೋವನ ಪ್ರವಾದನಾತ್ಮಕ ವಾಕ್ಯವು ಎಂದೂ ಸುಳ್ಳಾಗುವುದಿಲ್ಲ.
2:1, 2. ದೇವರನ್ನು ಹುಡುಕುತ್ತೇವೆಂದು ಹೇಳಿಕೊಂಡು ಆತನ “ರಾಜ್ಯಕ್ಕಾಗಿಯೂ ನೀತಿಗಾಗಿಯೂ” ತವಕಪಡದೆ, ಮೊದಲು ಐಶ್ವರ್ಯವನ್ನು ಹುಡುಕುವುದು ಎಷ್ಟು ಅಪಾಯಕರ!—ಮತ್ತಾಯ 6:33; 1 ತಿಮೊಥೆಯ 6:9, 10.
3:1-3, 5. ಯೆಹೋವನು, ತನ್ನ ಜನರ ಮಧ್ಯೆ ಮುಂದಾಳತ್ವವಹಿಸುತ್ತಿರುವ ಪುರುಷರು ನ್ಯಾಯದಿಂದ ವ್ಯವಹರಿಸಬೇಕೆಂದು ಅಪೇಕ್ಷಿಸುತ್ತಾನೆ.
3:4. ಯೆಹೋವನು ನಮ್ಮ ಪ್ರಾರ್ಥನೆಗಳನ್ನು ಉತ್ತರಿಸಬೇಕಾದರೆ ನಾವು ರೂಢಿಯಾಗಿ ಪಾಪಮಾಡುವದನ್ನು ಅಥವಾ ಇಬ್ಬಗೆಯ ಜೀವನ ನಡೆಸುವುದನ್ನು ಬಿಟ್ಟುಬಿಡಬೇಕು.
3:8. ತೀರ್ಪಿನ ಸಂದೇಶಗಳು ಸೇರಿರುವ ಸುವಾರ್ತೆ ಸಾರಲು ನಮಗೆ ಕೊಡಲಾಗಿರುವ ಆದೇಶವನ್ನು ನಾವು ಯೆಹೋವನ ಪವಿತ್ರಾತ್ಮದಿಂದ ಬಲಪಡಿಸಲ್ಪಟ್ಟರೆ ಮಾತ್ರವೇ ಪೂರೈಸಬಹುದು.
5:5. ಈ ಮೆಸ್ಸೀಯ ಸಂಬಂಧಿತ ಪ್ರವಾದನೆಯು ನಮಗೆ ಕೊಡುವ ಆಶ್ವಾಸನೆಯೇನೆಂದರೆ, ವೈರಿಗಳು ದೇವಜನರ ವಿರುದ್ಧವಾಗಿ ಬರುವಾಗ “ಏಳು [ಸಂಪೂರ್ಣತೆಯ ಸೂಚಕ] ಮಂದಿ ಪಾಲಕರನ್ನು” ಮತ್ತು “ಎಂಟು ಮಂದಿ ಪುರುಷಶ್ರೇಷ್ಠರನ್ನು” ಅಂದರೆ ಸಮರ್ಥ ಪುರುಷರ ದೊಡ್ಡ ಸಂಖ್ಯೆಯನ್ನು ಯೆಹೋವನ ಜನರ ಮಧ್ಯೆ ಮುಂದಾಳತ್ವ ವಹಿಸಲು ನೇಮಿಸಲಾಗುವುದು.
5:7, 8. ಇಂದು ಅನೇಕರಿಗೆ ಅಭಿಷಿಕ್ತ ಕ್ರೈಸ್ತರು “ಯೆಹೋವನ ವರವಾದ ಇಬ್ಬನಿ”ಯಂತಿದ್ದಾರೆ. ಏಕೆಂದರೆ ರಾಜ್ಯ ಸಂದೇಶವನ್ನು ಪ್ರಚುರಪಡಿಸಲು ಆತನು ಅಭಿಷಿಕ್ತರನ್ನು ಉಪಯೋಗಿಸುತ್ತಾನೆ. “ಬೇರೆ ಕುರಿಗಳು” ಇವರಿಗೆ ಸಾರುವ ಕೆಲಸದಲ್ಲಿ ಸಕ್ರಿಯ ಬೆಂಬಲ ನೀಡುವ ಮೂಲಕ ಇತರರು ಆಧ್ಯಾತ್ಮಿಕ ಚೈತನ್ಯವನ್ನು ಪಡೆಯಲು ಸಹಾಯಮಾಡುತ್ತಾರೆ. (ಯೋಹಾನ 10:16) ಇತರರಿಗೆ ನಿಜ ಚೈತನ್ಯವನ್ನು ತರುವ ಕೆಲಸದಲ್ಲಿ ಭಾಗವಹಿಸುವುದು ಎಂಥ ಸದವಕಾಶ!
6:3, 4. ನಾವು ಯೆಹೋವನನ್ನು ಅನುಕರಿಸುತ್ತಾ, ಜಗಳಗಂಟರಿಗೆ ಇಲ್ಲವೆ ಆಧ್ಯಾತ್ಮಿಕವಾಗಿ ಬಲಹೀನರಾಗಿರುವವರಿಗೂ ದಯೆ ಹಾಗೂ ಕರುಣೆಯನ್ನು ತೋರಿಸಬೇಕು.
7:7. ಈ ದುಷ್ಟ ವ್ಯವಸ್ಥೆಯ ಅಂತ್ಯ ಸಮೀಪಿಸುತ್ತಿರುವಂತೆ ಸಮಸ್ಯೆಗಳನ್ನು ನಿಭಾಯಿಸುವಾಗ ನಾವು ನಿರುತ್ಸಾಹಗೊಳ್ಳಬಾರದು. ಬದಲಿಗೆ ಮೀಕನಂತೆ ‘ದೇವರನ್ನು ಕಾದುಕೊಂಡಿರುವ’ ಮನೋಭಾವವನ್ನು ನಾವು ತೋರಿಸಬೇಕು.
7:18, 19. ಯೆಹೋವನು ನಮ್ಮ ದೋಷಗಳನ್ನು ಮನ್ನಿಸಲು ಸಿದ್ಧನಾಗಿರುವಂತೆಯೇ ನಮ್ಮ ವಿರುದ್ಧ ತಪ್ಪುಮಾಡಿದವರಿಗೆ ಕ್ಷಮಿಸಲು ನಾವು ಸಹ ಸಿದ್ಧರಾಗಿರಬೇಕು.
‘ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಿಗೆ ನಡೆಯುತ್ತಾ’ ಇರಿ
ದೇವರ ಹಾಗೂ ಆತನ ಜನರ ವಿರುದ್ಧ ಹೋರಾಡುವವರು ‘ನಿತ್ಯನಾಶನಕ್ಕೆ ಈಡಾಗುವರು.’ (ಓಬದ್ಯ 10) ಹಾಗಿದ್ದರೂ ನಾವು ದೈವಿಕ ಎಚ್ಚರಿಕೆಗಳಿಗೆ ಕಿವಿಗೊಟ್ಟರೆ ಮತ್ತು ‘ದುರ್ಮಾರ್ಗದಿಂದ ತಿರುಗಿಕೊಂಡರೆ’ ಯೆಹೋವನ ಸಿಟ್ಟನ್ನು ತಣಿಸಬಹುದು. (ಯೋನ 3:10) “ಅಂತ್ಯಕಾಲದಲ್ಲಿ” ಅಂದರೆ, ಈ “ಕಡೇ ದಿವಸಗಳಲ್ಲಿ” ಸತ್ಯಾರಾಧನೆಯು ಸುಳ್ಳಾರಾಧನೆಗಿಂತ ಉನ್ನತಕ್ಕೇರಿಸಲ್ಪಟ್ಟಿದೆ ಮತ್ತು ವಿಧೇಯ ಮಾನವರು ಅದರ ಕಡೆಗೆ ಪ್ರವಾಹದಂತೆ ಬರುತ್ತಿದ್ದಾರೆ. (ಮೀಕ 4:1; 2 ತಿಮೊಥೆಯ 3:1) ಹಾಗಾಗಿ, ‘ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯಲು’ ದೃಢಸಂಕಲ್ಪಮಾಡೋಣ.—ಮೀಕ 4:5.
ಓಬದ್ಯ, ಯೋನ ಮತ್ತು ಮೀಕ ಪುಸ್ತಕಗಳು ನಮಗೆಂಥ ಅಮೂಲ್ಯ ಪಾಠಗಳನ್ನು ಕಲಿಸುತ್ತವೆ! 2,500 ವರ್ಷಗಳಿಗಿಂತ ಮುಂಚೆ ಬರೆಯಲ್ಪಟ್ಟಿದ್ದರೂ ಅವುಗಳ ಸಂದೇಶವು ಇಂದು ಸಹ ‘ಸಜೀವವಾಗಿದ್ದು ಕಾರ್ಯಸಾಧಕವಾಗಿದೆ.’—ಇಬ್ರಿಯ 4:12. (w07 11/1)