“ನಿನ್ನ ಕೈಗಳು ಜೋಲುಬೀಳದಿರಲಿ”
“ನಿನ್ನ ಕೈಗಳು ಜೋಲುಬೀಳದಿರಲಿ; ನಿನ್ನ ದೇವರಾದ ಯೆಹೋವನು ನಿನ್ನ ಮಧ್ಯದಲ್ಲಿ ಶೂರನಾಗಿದ್ದಾನೆ, ನಿನ್ನನ್ನು ರಕ್ಷಿಸುವನು.”—ಚೆಫನ್ಯ 3:16, 17.
1. ಚೆಫನ್ಯನ ಪ್ರವಾದನೆಯ ಕುರಿತು ಒಬ್ಬ ಬೈಬಲ್ ಪಂಡಿತನು ಏನು ಹೇಳಿದನು?
ಚೆಫನ್ಯನ ಪ್ರವಾದನೆಯು ಸಾ.ಶ.ಪೂ. ಏಳನೆಯ ಮತ್ತು ಆರನೆಯ ಶತಮಾನಗಳಲ್ಲಿ ತನ್ನ ಪ್ರಥಮ ನೆರವೇರಿಕೆಯನ್ನು ಮೀರಿ ವಿಸ್ತರಿಸಿತು. ಚೆಫನ್ಯನ ಕುರಿತಾದ ತನ್ನ ವ್ಯಾಖ್ಯಾನದಲ್ಲಿ ಪ್ರೊಫೆಸರ್ ಸಿ. ಎಫ್. ಕೈಲ್ ಬರೆದುದು: “ಚೆಫನ್ಯನ ಪ್ರವಾದನೆಯು . . . ಇಡೀ ಜಗತ್ತಿನ ಮೇಲೆ ಬರಲಿರುವ ಒಂದು ವಿಶ್ವ ನ್ಯಾಯತೀರ್ಪಿನ ಪ್ರಕಟನೆ—ಯಾವುದರಿಂದ ಅದರ ಪಾಪಗಳ ಕಾರಣ ಯೆಹೂದದ ಮೇಲೆ ಮತ್ತು ಯೆಹೋವನ ಜನರ ಕಡೆಗೆ ಅದರ ಹಗೆತನದ ಕಾರಣ ರಾಷ್ಟ್ರಗಳ ಜಗತ್ತಿನ ಮೇಲೆ ಎರಗಲಿರುವ ನ್ಯಾಯತೀರ್ಪು ಏಳುತ್ತದೊ—ಅದರೊಂದಿಗೆ ಆರಂಭಿಸುತ್ತದೆ ಮಾತ್ರವಲ್ಲ, ಆದ್ಯಂತವಾಗಿ ಯೆಹೋವನ ಮಹಾ ಹಾಗೂ ಭಯಂಕರವಾದ ದಿನದ ಕುರಿತು ಪ್ರತಿಪಾದಿಸುತ್ತದೆ.”
2. ಚೆಫನ್ಯನ ದಿನದಲ್ಲಿನ ಪರಿಸ್ಥಿತಿಗಳು ಮತ್ತು ಇಂದು ಕ್ರೈಸ್ತಪ್ರಪಂಚದೊಳಗಿನ ಸನ್ನಿವೇಶದ ನಡುವೆ ಯಾವ ಹೋಲಿಕೆಗಳು ಅಸ್ತಿತ್ವದಲ್ಲಿವೆ?
2 ಇಂದು, ಯೆಹೋವನ ನ್ಯಾಯ ನಿರ್ಣಯವು, ಚೆಫನ್ಯನ ದಿನಕ್ಕಿಂತ ಹೆಚ್ಚು ವ್ಯಾಪಕವಾದ ಪ್ರಮಾಣದಲ್ಲಿ ರಾಷ್ಟ್ರಗಳನ್ನು ನಾಶನಕ್ಕಾಗಿ ಒಟ್ಟುಗೂಡಿಸುವುದಾಗಿದೆ. (ಚೆಫನ್ಯ 3:8) ಕ್ರೈಸ್ತರೆಂದು ಹೇಳಿಕೊಳ್ಳುವ ಆ ರಾಷ್ಟ್ರಗಳವರು ವಿಶೇಷವಾಗಿ ದೇವರ ದೃಷ್ಟಿಯಲ್ಲಿ ದೂಷಣಾರ್ಹರಾಗಿದ್ದಾರೆ. ಯೆಹೋವನಿಗೆ ತೋರಿಸಿದ ಅದರ ಅಪನಂಬಿಗಸ್ತಿಕೆಗಾಗಿ ಯೆರೂಸಲೇಮ್ ತೀಕ್ಷ್ಣವಾಗಿ ದಂಡಿಸಲ್ಪಟ್ಟಂತೆಯೇ, ಕ್ರೈಸ್ತಪ್ರಪಂಚವು ತನ್ನ ನೀತಿಗೆಟ್ಟ ಮಾರ್ಗಗಳಿಗಾಗಿ ದೇವರಿಗೆ ಉತ್ತರವನ್ನು ನೀಡಬೇಕು. ಚೆಫನ್ಯನ ದಿನದಲ್ಲಿ ಯೆಹೂದ ಮತ್ತು ಯೆರೂಸಲೇಮಿನ ವಿರುದ್ಧ ಪ್ರಕಟಿಸಲ್ಪಟ್ಟ ದೈವಿಕ ನ್ಯಾಯತೀರ್ಪುಗಳು, ಚರ್ಚುಗಳಿಗೆ ಮತ್ತು ಕ್ರೈಸ್ತಪ್ರಪಂಚದ ಪಂಗಡಗಳಿಗೆ ಇನ್ನೂ ಮಹತ್ತರವಾದ ಪ್ರಭಾವದಿಂದ ಅನ್ವಯಿಸುತ್ತವೆ. ದೇವರನ್ನು ಅಗೌರವಿಸುವ ತಮ್ಮ ತತ್ವಗಳ—ಹೆಚ್ಚಿನವು ವಿಧರ್ಮಿ ಮೂಲಗಳವು—ಮೂಲಕ ಅವರು ಶುದ್ಧಾರಾಧನೆಯನ್ನೂ ಕಳಂಕಿತಗೊಳಿಸಿದ್ದಾರೆ. ತಮ್ಮ ಆರೋಗ್ಯವಂತ ಪುತ್ರರಲ್ಲಿ ಲಕ್ಷಾಂತರ ಪುತ್ರರನ್ನು ಅವರು ಯುದ್ಧದ ಆಧುನಿಕ ಪೀಠದ ಮೇಲೆ ಬಲಿಯರ್ಪಿಸಿದ್ದಾರೆ. ಇನ್ನೂ ಹೆಚ್ಚಾಗಿ, ಪ್ರತಿನಿಧಿರೂಪದ ಯೆರೂಸಲೇಮಿನ ನಿವಾಸಿಗಳು, ಕ್ರೈಸ್ತತ್ವವೆಂದು ಹೇಳಲ್ಪಡುವ ವಿಷಯವನ್ನು—ಬಾಳ್ ಆರಾಧನೆಯನ್ನು ಜ್ಞಾಪಕಕ್ಕೆ ತರುವ—ಜ್ಯೋತಿಶ್ಶಾಸ್ತ್ರ, ಪ್ರೇತವ್ಯವಹಾರದ ಆಚರಣೆಗಳು, ಮತ್ತು ಕೆಳದರ್ಜೆಯ ಲೈಂಗಿಕ ಅನೈತಿಕತೆಯೊಂದಿಗೆ ಬೆರಸಿದ್ದಾರೆ.—ಚೆಫನ್ಯ 1:4, 5.
3. ಇಂದು ಅನೇಕ ಐಹಿಕ ಮುಖಂಡರ ಮತ್ತು ರಾಜಕೀಯ ಸರಕಾರಗಳ ಕುರಿತು ಏನು ಹೇಳಸಾಧ್ಯವಿದೆ, ಮತ್ತು ಚೆಫನ್ಯನು ಏನನ್ನು ಪ್ರವಾದಿಸಿದನು?
3 ಕ್ರೈಸ್ತಪ್ರಪಂಚದ ರಾಜಕೀಯ ಮುಖಂಡರಲ್ಲಿ ಅನೇಕರು, ಚರ್ಚಿನಲ್ಲಿ ಪ್ರಖ್ಯಾತರಾಗಿರುವುದರಲ್ಲಿ ಆನಂದಿಸುತ್ತಾರೆ. ಆದರೆ ಯೆಹೂದದ ‘ದೇಶಾಧಿಪತಿ’ಗಳಂತೆ ಅವರಲ್ಲಿ ಅನೇಕರು, “ಗರ್ಜಿಸುವ ಸಿಂಹ”ಗಳಂತೆ ಮತ್ತು ಅತ್ಯಾಶೆಯ “ತೋಳ”ಗಳಂತೆ ಜನರನ್ನು ಶೋಷಣೆಗೆ ಒಳಪಡಿಸುತ್ತಾರೆ. (ಚೆಫನ್ಯ 3:1-3) ಇಂತಹವರ ರಾಜಕೀಯ ಕಾಲಾಳುಗಳು “ಮೋಸಹಿಂಸೆಗಳಿಂದ ದೋಚಿದ್ದನ್ನು ತಮ್ಮ ಒಡೆಯನ ಮನೆಯೊಳಗೆ ತುಂಬಿಸು”ತ್ತಿದ್ದಾರೆ. (ಚೆಫನ್ಯ 1:9) ಲಂಚಗಾರಿಕೆ ಮತ್ತು ಭ್ರಷ್ಟತೆಯು ಸರ್ವಸಾಧಾರಣವಾಗಿವೆ. ಕ್ರೈಸ್ತಪ್ರಪಂಚದ ಒಳಗೂ ಹೊರಗೂ ಇರುವ ರಾಜಕೀಯ ಸರಕಾರಗಳ ವಿಷಯವಾಗಿಯಾದರೊ, ಅವರಲ್ಲಿ ಹೆಚ್ಚುತ್ತಿರುವ ಸಂಖ್ಯೆಯು, ಸೇನಾಧೀಶ್ವರನಾದ ಯೆಹೋವನ ಜನರ, ಆತನ ಸಾಕ್ಷಿಗಳ ವಿರುದ್ಧ, ಅವರನ್ನು ಒಂದು ಕಡೆಗಣಿಸಲ್ಪಟ್ಟ “ಮತ”ದಂತೆ ಉಪಚರಿಸುತ್ತಾ ‘ಉಬ್ಬಿಕೊಂಡಿದೆ.’ (ಚೆಫನ್ಯ 2:8; ಅ. ಕೃತ್ಯಗಳು 24:5, 14) ಇಂತಹ ಎಲ್ಲ ರಾಜಕೀಯ ಮುಖಂಡರು ಮತ್ತು ಅವರ ಹಿಂಬಾಲಕರ ಕುರಿತು ಚೆಫನ್ಯನು ಪ್ರವಾದಿಸಿದ್ದು: “ಯೆಹೋವನ ರೌದ್ರದ ದಿನದಲ್ಲಿ ಅವರ ಬೆಳ್ಳಿಬಂಗಾರಗಳು ಕೂಡಾ ಅವರನ್ನು ರಕ್ಷಿಸಲಾರವು; ಆತನ ರೋಷಾಗ್ನಿಯು ದೇಶವನ್ನೆಲ್ಲಾ ನುಂಗಿಬಿಡುವದು; ಆತನು ದೇಶನಿವಾಸಿಗಳೆಲ್ಲರನ್ನೂ ಕೊನೆಗಾಣಿಸುವನು, ಹೌದು, ಘೋರವಾಗಿ ನಿರ್ಮೂಲಮಾಡುವನು.”—ಚೆಫನ್ಯ 1:18.
“ಯೆಹೋವನ ಸಿಟ್ಟಿನ ದಿನದಲ್ಲಿ . . . ಮರೆಯಾಗುವಿರಿ”
4. ಯೆಹೋವನ ಮಹಾದಿನದಲ್ಲಿ ಪಾರಾಗುವವರು ಇರುವರೆಂದು ಯಾವುದು ತೋರಿಸುತ್ತದೆ, ಆದರೆ ಅವರು ಏನು ಮಾಡಬೇಕು?
4 ಸಾ.ಶ.ಪೂ. ಏಳನೆಯ ಶತಮಾನದಲ್ಲಿ ಯೆಹೂದದ ನಿವಾಸಿಗಳಲ್ಲಿ ಎಲ್ಲರೂ ನಿರ್ನಾಮಮಾಡಲ್ಪಡಲಿಲ್ಲ. ತದ್ರೀತಿಯಲ್ಲಿ ಯೆಹೋವನ ಮಹಾದಿನದಲ್ಲಿ ಪಾರಾಗುವವರು ಇರುವರು. ಅಂತಹವರಿಗೆ ಯೆಹೋವನು ತನ್ನ ಪ್ರವಾದಿಯಾದ ಚೆಫನ್ಯನ ಮೂಲಕ ಹೇಳಿದ್ದು: “ಯೆಹೋವನ ಉಗ್ರಕೋಪವು ನಿಮ್ಮ ಮೇಲೆ ಬರುವದಕ್ಕೆ ಮುಂಚೆ, ಯೆಹೋವನ ಸಿಟ್ಟಿನ ದಿನವು ನಿಮ್ಮನ್ನು ಮುಟ್ಟುವದಕ್ಕೆ ಮೊದಲು ಸೇರಿಬನ್ನಿರಿ, ಕೂಡಿಕೊಳ್ಳಿರಿ; ಕಾಲವು ಹೊಟ್ಟಿನಂತೆ ಹಾರಿಹೋಗುತ್ತದಲ್ಲಾ. ಯೆಹೋವನ ನಿಯಮವನ್ನು ಕೈಕೊಂಡ ಲೋಕದ ದೀನರೇ, ನೀವೆಲ್ಲರೂ ಯೆಹೋವನನ್ನು ಆಶ್ರಯಿಸಿರಿ, ಸದ್ಧರ್ಮವನ್ನು ಅಭ್ಯಾಸಿಸಿರಿ, ದೈನ್ಯವನ್ನು ಹೊಂದಿಕೊಳ್ಳಿರಿ; ಯೆಹೋವನ ಸಿಟ್ಟಿನ ದಿನದಲ್ಲಿ ಒಂದುವೇಳೆ ಮರೆಯಾಗುವಿರಿ.”—ಚೆಫನ್ಯ 2:1-3.
5. ಅಂತ್ಯದ ಈ ಸಮಯದಲ್ಲಿ, ಚೆಫನ್ಯನ ಎಚ್ಚರಿಕೆಗೆ ಕಿವಿಗೊಟ್ಟವರಲ್ಲಿ ಮೊದಲಿಗರು ಯಾರಾಗಿದ್ದರು, ಮತ್ತು ಯೆಹೋವನು ಅವರನ್ನು ಹೇಗೆ ಉಪಯೋಗಿಸಿದ್ದಾನೆ?
5 ಈ ಜಗತ್ತಿನ ಅಂತ್ಯದ ಸಮಯದಲ್ಲಿ, ಈ ಪ್ರವಾದನಾತ್ಮಕ ಆಮಂತ್ರಣವನ್ನು ಆಲಿಸಿದವರಲ್ಲಿ ಪ್ರಥಮರು ಆತ್ಮಿಕ ಇಸ್ರಾಯೇಲ್ಯರ ಉಳಿಕೆಯವರು, ಅಭಿಷಿಕ್ತ ಕ್ರೈಸ್ತರಾಗಿದ್ದರು. (ರೋಮಾಪುರ 2:28, 29; 9:6; ಗಲಾತ್ಯ 6:16) ಸದ್ಧರ್ಮವನ್ನು ಮತ್ತು ದೈನ್ಯವನ್ನು ಅಭ್ಯಾಸಿಸಿ, ಯೆಹೋವನ ನಿಯಮಗಳಿಗೆ ಗೌರವವನ್ನು ತೋರಿಸಿರುವ ಕಾರಣ, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನಿಂದ ಅವರು ಬಿಡಿಸಲ್ಪಟ್ಟರು ಮತ್ತು 1919ರಲ್ಲಿ ದೈವಿಕ ಅನುಗ್ರಹಕ್ಕೆ ಪುನಸ್ಸ್ಥಾಪಿಸಲ್ಪಟ್ಟರು. ಅಂದಿನಿಂದ ಮತ್ತು ವಿಶೇಷವಾಗಿ 1922ರಿಂದ, ಈ ನಂಬಿಗಸ್ತ ಉಳಿಕೆಯವರು ಭಯರಹಿತರಾಗಿ ಯೆಹೋವನ ನ್ಯಾಯತೀರ್ಪುಗಳನ್ನು ಚರ್ಚುಗಳ ಮತ್ತು ಕ್ರೈಸ್ತಪ್ರಪಂಚದ ಮತಗಳ ಹಾಗೂ ರಾಜಕೀಯ ರಾಷ್ಟ್ರಗಳ ವಿರುದ್ಧ ಘೋಷಿಸುತ್ತಾ ಇದ್ದಾರೆ.
6. (ಎ) ನಂಬಿಗಸ್ತ ಉಳಿಕೆಯವರ ಕುರಿತು ಚೆಫನ್ಯನು ಏನನ್ನು ಪ್ರವಾದಿಸಿದನು? (ಬಿ) ಈ ಪ್ರವಾದನೆಯು ಹೇಗೆ ನೆರವೇರಿದೆ?
6 ಈ ನಂಬಿಗಸ್ತ ಉಳಿಕೆಯವರ ಕುರಿತು, ಚೆಫನ್ಯನು ಪ್ರವಾದಿಸಿದ್ದು: “ದೀನದರಿದ್ರಜನವನ್ನು ನಿನ್ನಲ್ಲಿ ಉಳಿಸುವೆನು; ಅವರು ಯೆಹೋವನ ನಾಮವನ್ನು ಆಶ್ರಯಿಸಿಕೊಳ್ಳುವರು. ಇಸ್ರಾಯೇಲಿನಲ್ಲಿ ಉಳಿದವರು ಅನ್ಯಾಯವನ್ನು ಮಾಡರು, ಸುಳ್ಳಾಡರು; ಅವರ ಬಾಯಲ್ಲಿ ಮೋಸದ ನಾಲಿಗೆಯು ಇರದು; [ಮಂದೆಯಂತೆ] ಮೇದು ಮಲಗಿಕೊಳ್ಳುವರು, ಅವರನ್ನು ಯಾರೂ ಹೆದರಿಸರು.” (ಚೆಫನ್ಯ 3:12, 13) ಈ ಅಭಿಷಿಕ್ತ ಕ್ರೈಸ್ತರು ಯಾವಾಗಲೂ ಯೆಹೋವನ ನಾಮವನ್ನು ಶ್ರೇಷ್ಠವಾಗಿಟ್ಟಿದ್ದಾರೆ, ಆದರೆ ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ಅವರು ಸ್ವೀಕರಿಸಿದ 1931ರಂದಿನಿಂದ ಅವರು ವಿಶೇಷವಾಗಿ ಹಾಗೆ ಮಾಡಿದ್ದಾರೆ. (ಯೆಶಾಯ 43:10-12) ಯೆಹೋವನ ಪರಮಾಧಿಕಾರದ ವಿವಾದಾಂಶವನ್ನು ಅತ್ಯುಜ್ವಲಪಡಿಸುವ ಮೂಲಕ, ಅವರು ಆ ದೈವಿಕ ನಾಮವನ್ನು ಗೌರವಿಸಿದ್ದಾರೆ ಮತ್ತು ಇದು ಅವರಿಗೆ ಒಂದು ಆಶ್ರಯದಂತೆ ಪರಿಣಮಿಸಿದೆ. (ಜ್ಞಾನೋಕ್ತಿ 18:10) ಯೆಹೋವನು ಆತ್ಮಿಕ ರೀತಿಯಲ್ಲಿ ಸಮೃದ್ಧವಾಗಿ ಅವರಿಗೆ ಉಣಿಸಿದ್ದಾನೆ ಮತ್ತು ಭಯವಿಲ್ಲದೆ ಅವರೊಂದು ಆತ್ಮಿಕ ಪ್ರಮೋದವನದಲ್ಲಿ ವಾಸಿಸುತ್ತಾರೆ.—ಚೆಫನ್ಯ 3:16, 17.
“ಸಕಲ ಜನಾಂಗಗಳಲ್ಲಿ ಕೀರ್ತಿಸ್ತೋತ್ರ”ಗಳು
7, 8. (ಎ) ಆತ್ಮಿಕ ಇಸ್ರಾಯೇಲ್ಯರ ಉಳಿಕೆಯವರ ಮೇಲೆ ಇನ್ನಾವ ಪ್ರವಾದನೆಯು ನೆರವೇರಿದೆ? (ಬಿ) ಲಕ್ಷಾಂತರ ಜನರು ಏನನ್ನು ಮನಗಂಡಿದ್ದಾರೆ, ಮತ್ತು ಈ ಸಂಬಂಧದಲ್ಲಿ ನಿಮ್ಮ ಸ್ವಂತ ಅನಿಸಿಕೆಗಳೇನು?
7 ಯೆಹೋವನ ನಾಮಕ್ಕೆ ಮತ್ತು ಆತನ ವಾಕ್ಯದ ನೀತಿಯ ತತ್ವಗಳಿಗೆ ಉಳಿಕೆಯವರ ಆಳವಾದ ಒಲವು ಗಮನಕ್ಕೆ ಬಾರದೆ ಹೋಗಿಲ್ಲ. ಯಥಾರ್ಥ ಜನರು ಉಳಿಕೆಯವರ ನಡತೆ ಮತ್ತು ಈ ಜಗತ್ತಿನ ರಾಜಕೀಯ ಹಾಗೂ ಧಾರ್ಮಿಕ ನಾಯಕತ್ವದ ಭ್ರಷ್ಟತೆ ಮತ್ತು ಕಪಟತನದ ನಡುವೆ ಇರುವ ವ್ಯತ್ಯಾಸವನ್ನು ಕಂಡಿದ್ದಾರೆ. ಯೆಹೋವನು “[ಆತ್ಮಿಕ] ಇಸ್ರಾಯೇಲಿನಲ್ಲಿನ ಉಳಿಕೆಯವ”ರನ್ನು ಆಶೀರ್ವದಿಸಿದ್ದಾನೆ. ಆತನ ನಾಮವನ್ನು ಧರಿಸಿಕೊಂಡಿರುವ ಸುಯೋಗದಿಂದ ಆತನು ಅವರನ್ನು ಗೌರವಿಸಿದ್ದಾನೆ ಮತ್ತು ಲೋಕದ ಸಕಲ ಜನಾಂಗಗಳೊಳಗೆ ಒಂದು ಉತ್ತಮ ಹೆಸರನ್ನು ಪಡೆದಿರುವಂತೆ ಮಾಡಿದ್ದಾನೆ. ಇದು ಚೆಫನ್ಯನ ಮೂಲಕ ಪ್ರವಾದಿಸಿದಂತಿದೆ: “ಆ ಕಾಲದಲ್ಲಿ ನಿಮ್ಮನ್ನು ಕರತರುವೆನು, ಹೌದು, ಆ ಕಾಲದಲ್ಲಿ ನಿಮ್ಮನ್ನು ಒಟ್ಟುಗೂಡಿಸುವೆನು; ನಾನು ನಿಮ್ಮ ದುರವಸ್ಥೆಯನ್ನು ನಿಮ್ಮ ಕಣ್ಣೆದುರಿಗೆ ತಪ್ಪಿಸುವಾಗ ನಿಮ್ಮನ್ನು ಲೋಕದ ಸಕಲ ಜನಾಂಗಗಳಲ್ಲಿ ಕೀರ್ತಿಸ್ತೋತ್ರಗಳಿಗೆ ಗುರಿಮಾಡುವೆನು. ಇದು ಯೆಹೋವನ ನುಡಿ.”—ಚೆಫನ್ಯ 3:20.
8 1935ರಿಂದ, ಉಳಿಕೆಯವರ ಮೇಲೆ ಯೆಹೋವನ ಆಶೀರ್ವಾದವು ಇದೆಯೆಂಬುದನ್ನು ಅಕ್ಷರಾರ್ಥಕವಾಗಿ ಲಕ್ಷಾಂತರ ಜನರು ಮನಗಂಡಿದ್ದಾರೆ. ಅವರು ಸಂತೋಷದಿಂದ ಈ ಆತ್ಮಿಕ ಯೆಹೂದ್ಯರನ್ನು ಅಥವಾ ಇಸ್ರಾಯೇಲ್ಯರನ್ನು ಹೀಗೆ ಹೇಳುತ್ತಾ ಹಿಂಬಾಲಿಸುತ್ತಾರೆ: “ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ.” (ಜೆಕರ್ಯ 8:23) ಈ “ಬೇರೆ ಕುರಿಗಳು” ಅಭಿಷಿಕ್ತ ಉಳಿಕೆಯವರನ್ನು, ಕ್ರಿಸ್ತನ ಮೂಲಕ “ತನ್ನ ಎಲ್ಲಾ [ಐಹಿಕ] ಆಸ್ತಿಯ ಮೇಲೆ” ನೇಮಿಸಿದ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಎಂಬುದಾಗಿ ಗುರುತಿಸುತ್ತಾರೆ. “ಹೊತ್ತುಹೊತ್ತಿಗೆ” ಆಳು ವರ್ಗದ ಮೂಲಕ ಸಿದ್ಧಪಡಿಸಲಾದ ಆತ್ಮಿಕ ಆಹಾರದಲ್ಲಿ ಅವರು ಕೃತಜ್ಞತಾಪೂರ್ವಕವಾಗಿ ಪಾಲ್ಗೊಳ್ಳುತ್ತಾರೆ.—ಯೋಹಾನ 10:16; ಮತ್ತಾಯ 24:45-47.
9. ಯಾವ “ಭಾಷೆ”ಯನ್ನು ಲಕ್ಷಾಂತರ ಜನರು ಮಾತಾಡಲು ಕಲಿತಿದ್ದಾರೆ, ಮತ್ತು ಯಾವ ಮಹಾ ಕೆಲಸದಲ್ಲಿ ಬೇರೆ ಕುರಿಗಳು ಅಭಿಷಿಕ್ತ ಉಳಿಕೆಯವರೊಂದಿಗೆ “ಒಂದೇ ಮನಸ್ಸಿನಿಂದ” ಸೇವಿಸುತ್ತಿದ್ದಾರೆ?
9 ಉಳಿಕೆಯವರ ಜೊತೆಗೆ, ಈ ಲಕ್ಷಾಂತರ ಬೇರೆ ಕುರಿಗಳು “ಶುದ್ಧ ಭಾಷೆ”ಗೆ ಹೊಂದಿಕೆಯಲ್ಲಿ ಜೀವಿಸಲು ಮತ್ತು ಮಾತಾಡಲು ಕಲಿಯುತ್ತಿದ್ದಾರೆ.a ಯೆಹೋವನು ಚೆಫನ್ಯನ ಮುಖಾಂತರ ಪ್ರವಾದಿಸಿದ್ದು: “ಆಗ ಎಲ್ಲರು ಒಂದೇ ಮನಸ್ಸಿನಿಂದ ಯೆಹೋವನನ್ನು ಸೇವಿಸಿ ಆತನ ಹೆಸರನ್ನೆತ್ತಿ ಪ್ರಾರ್ಥಿಸುವಂತೆ ಜನಾಂಗಗಳವರ ತುಟಿಗಳನ್ನು ಮಾರ್ಪಡಿಸಿ [“ಶುದ್ಧ ಭಾಷೆ,” NW] ಶುದ್ಧಿಮಾಡುವೆನು.” (ಚೆಫನ್ಯ 3:9) ಹೌದು, ಬೇರೆ ಕುರಿಗಳು ಐಕ್ಯದಿಂದ ಯೆಹೋವನನ್ನು ‘ಚಿಕ್ಕ ಹಿಂಡಿನ’ ಅಭಿಷಿಕ್ತ ಸದಸ್ಯರೊಂದಿಗೆ “ಒಂದೇ ಮನಸ್ಸಿನಿಂದ” “ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ” ಸಾರಲ್ಪಡುವ ತುರ್ತಿನ ಕೆಲಸದಲ್ಲಿ ಸೇವಿಸುತ್ತಾರೆ.—ಲೂಕ 12:32; ಮತ್ತಾಯ 24:14.
“ಯೆಹೋವನ ದಿನವು . . . ಬರುವುದು”
10. ಯಾವ ವಿಷಯದ ಬಗ್ಗೆ ಅಭಿಷಿಕ್ತ ಉಳಿಕೆಯವರು ಯಾವಾಗಲೂ ಮನಗಂಡವರಾಗಿದ್ದಾರೆ, ಮತ್ತು ಒಂದು ವರ್ಗದೋಪಾದಿ ಅವರು ಏನನ್ನು ನೋಡಲು ಜೀವಿಸುವರು?
10 ಅಭಿಷಿಕ್ತ ಉಳಿಕೆಯವರು, ಅಪೊಸ್ತಲ ಪೇತ್ರನ ಪ್ರೇರಿತ ಹೇಳಿಕೆಯನ್ನು ಸತತವಾಗಿ ಮನಸ್ಸಿನಲ್ಲಿಟ್ಟಿದ್ದಾರೆ: “ಯೆಹೋವನು ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ತಡಮಾಡುತ್ತಾನೆಂಬದಾಗಿ ಕೆಲವರು ಅರ್ಥಮಾಡಿಕೊಳ್ಳುವ ಪ್ರಕಾರ ಆತನು ತಡಮಾಡುವವನಲ್ಲ. ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ. ಆದರೂ ಯೆಹೋವನ ದಿನವು ಕಳ್ಳನು ಬರುವಂತೆ ಬರುವುದು.” (2 ಪೇತ್ರ 3:9, 10, NW) ನಂಬಿಗಸ್ತ ಆಳು ವರ್ಗದ ಸದಸ್ಯರು, ನಮ್ಮ ಸಮಯದಲ್ಲಿ ಯೆಹೋವನ ದಿನದ ಬರುವಿಕೆಯ ಕುರಿತು ಯಾವುದೇ ಸಂದೇಹಗಳಿಗೆ ಎಂದೂ ಆಸ್ಪದ ಕೊಟ್ಟಿಲ್ಲ. ಆ ಮಹಾದಿನವು ಕ್ರೈಸ್ತಪ್ರಪಂಚ, ಪ್ರತಿನಿಧಿರೂಪದ ಯೆರೂಸಲೇಮ್, ಮತ್ತು ಮಹಾ ಬಾಬೆಲಿನ ಉಳಿದ ವಿಷಯಗಳ ವಿರುದ್ಧ ದೇವರ ನ್ಯಾಯತೀರ್ಪುಗಳ ನಿರ್ವಹಣೆಯೊಂದಿಗೆ ಆರಂಭವಾಗುವುದು.—ಚೆಫನ್ಯ 1:2-4; ಪ್ರಕಟನೆ 17:1, 5; 19:1, 2.
11, 12. (ಎ) ಚೆಫನ್ಯನ ಪ್ರವಾದನೆಯ ಬೇರೆ ಯಾವ ಭಾಗವು ಉಳಿಕೆಯವರ ಮೇಲೆ ನೆರವೇರಿದೆ? (ಬಿ) “ನಿನ್ನ ಕೈಗಳು ಜೋಲುಬೀಳದಿರಲಿ” ಎಂಬ ಕರೆಗೆ ಅಭಿಷಿಕ್ತ ಉಳಿಕೆಯವರು ಹೇಗೆ ಕಿವಿಗೊಟ್ಟಿದ್ದಾರೆ?
11 ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ಆತ್ಮಿಕ ಸೆರೆಯಿಂದ 1919ರಲ್ಲಿ ಬಿಡುಗಡೆ ಮಾಡಲ್ಪಟ್ಟದ್ದಕ್ಕೆ ನಂಬಿಗಸ್ತ ಉಳಿಕೆಯವರು ಹರ್ಷಿಸುತ್ತಾರೆ. ಅವರು ಚೆಫನ್ಯನ ಪ್ರವಾದನೆಯ ನೆರವೇರಿಕೆಯನ್ನು ಅನುಭವಿಸಿದ್ದಾರೆ: “ಚೀಯೋನ್ ನಗರಿಯೇ, ಹರ್ಷಧ್ವನಿಗೈ! ಇಸ್ರಾಯೇಲೇ, ಆರ್ಬಟಿಸು! ಯೆರೂಸಲೇಮ್ ಪುರಿಯೇ, ಹೃದಯಪೂರ್ವಕವಾಗಿ ಆನಂದಿಸು, ಉಲ್ಲಾಸಿಸು! ನಿನಗೆ ವಿಧಿಸಿದ ದಂಡನೆಗಳನ್ನು ಯೆಹೋವನು ತಪ್ಪಿಸಿದ್ದಾನೆ, ನಿನ್ನ ಶತ್ರುವನ್ನು ತಳ್ಳಿಬಿಟ್ಟಿದ್ದಾನೆ; ಇಸ್ರಾಯೇಲಿನ ಅರಸನಾದ ಯೆಹೋವನು ನಿನ್ನ ಮಧ್ಯದಲ್ಲಿದ್ದಾನೆ; ಇನ್ನು ಕೇಡಿಗೆ ಅಂಜದಿರುವಿ. ಆ ದಿನದಲ್ಲಿ ಯೆರೂಸಲೇಮಿಗೆ—ಚೀಯೋನೇ, ಭಯಪಡಬೇಡ, ನಿನ್ನ ಕೈಗಳು ಜೋಲುಬೀಳದಿರಲಿ; ನಿನ್ನ ದೇವರಾದ ಯೆಹೋವನು ನಿನ್ನ ಮಧ್ಯದಲ್ಲಿ ಶೂರನಾಗಿದ್ದಾನೆ, ನಿನ್ನನ್ನು ರಕ್ಷಿಸುವನು.”—ಚೆಫನ್ಯ 3:14-17.
12 ಯೆಹೋವನು ತಮ್ಮ ಮಧ್ಯದಲ್ಲಿ ಇದ್ದಾನೆಂಬ ನಿಶ್ಚಿತಾಭಿಪ್ರಾಯ ಮತ್ತು ಹೇರಳವಾದ ಪ್ರಮಾಣದಿಂದ, ಅಭಿಷಿಕ್ತ ಉಳಿಕೆಯವರು ತಮ್ಮ ದೈವಿಕ ನಿಯೋಗವನ್ನು ನೆರವೇರಿಸುವುದರಲ್ಲಿ ಭಯರಹಿತರಾಗಿ ಮುಂದೆ ಸಾಗಿದ್ದಾರೆ. ಅವರು ರಾಜ್ಯದ ಸುವಾರ್ತೆಯನ್ನು ಸಾರಿದ್ದಾರೆ ಮತ್ತು ಕ್ರೈಸ್ತಪ್ರಪಂಚ, ಮಹಾ ಬಾಬೆಲಿನ ಉಳಿದ ಸಂಗತಿಗಳು ಮತ್ತು ಸೈತಾನನ ಇಡೀ ದುಷ್ಟ ವಿಷಯಗಳ ವ್ಯವಸ್ಥೆಯ ವಿರುದ್ಧ ಯೆಹೋವನ ನ್ಯಾಯತೀರ್ಪುಗಳನ್ನು ತಿಳಿಯಪಡಿಸಿದ್ದಾರೆ. ಎಲ್ಲ ಕಷ್ಟಗಳ ಹೊರತೂ, 1919ರಿಂದ ದಶಕಗಳ ವರೆಗೆ ಅವರು ಈ ದೈವಿಕ ಆಜ್ಞೆಗೆ ವಿಧೇಯರಾಗಿದ್ದಾರೆ: “ಚೀಯೋನೇ, ಭಯಪಡಬೇಡ, ನಿನ್ನ ಕೈಗಳು ಜೋಲುಬೀಳದಿರಲಿ.” ಯೆಹೋವನ ರಾಜ್ಯವನ್ನು ಪ್ರಕಟಿಸುತ್ತಾ ಅವರು ಕೋಟಿಗಟ್ಟಲೆ ಕಿರುಹೊತ್ತಗೆಗಳನ್ನು, ಪತ್ರಿಕೆಗಳನ್ನು, ಪುಸ್ತಕಗಳನ್ನು, ಮತ್ತು ಪುಸ್ತಿಕೆಗಳನ್ನು ಹಂಚುವುದರಲ್ಲಿ ಉದ್ಯೋಗಶೀಲರಾಗಿ ಪರಿಣಮಿಸಿದ್ದಾರೆ. ಅವರು, 1935ರಿಂದ ತಮ್ಮ ಪಕ್ಕಕ್ಕೆ ಕೂಡಿಬಂದಿರುವ ಬೇರೆ ಕುರಿಗಳಿಗೆ ನಂಬಿಕೆಯನ್ನು ಪ್ರೇರಿಸುವ ಮಾದರಿಯಾಗಿದ್ದಾರೆ.
“ನಿನ್ನ ಕೈಗಳು ಜೋಲುಬೀಳದಿರಲಿ”
13, 14. (ಎ) ಯೆಹೋವನನ್ನು ಸೇವಿಸುವುದರಿಂದ ಕೆಲವು ಯೆಹೂದ್ಯರು ಏಕೆ ಹಿಮ್ಮೆಟ್ಟಿದರು, ಮತ್ತು ಇದು ಹೇಗೆ ವ್ಯಕ್ತವಾಯಿತು? (ಬಿ) ಏನನ್ನು ಮಾಡುವುದು ನಮಗೆ ಅವಿವೇಕವಾಗಿರುವುದು, ಮತ್ತು ಯಾವ ಕೆಲಸದಲ್ಲಿ ನಾವು ನಮ್ಮ ಕೈಗಳನ್ನು ಜೋಲುಬೀಳದಂತೆ ನೋಡಿಕೊಳ್ಳಬೇಕು?
13 ನಾವು ಯೆಹೋವನ ಮಹಾದಿನವನ್ನು ‘ಕಾದುಕೊಂಡು’ ಇರುವಾಗ, ಚೆಫನ್ಯನ ಪ್ರವಾದನೆಯಿಂದ ನಾವು ಪ್ರಾಯೋಗಿಕ ಸಹಾಯವನ್ನು ಹೇಗೆ ಪಡೆಯಬಲ್ಲೆವು? ಮೊದಲನೆಯದಾಗಿ, ನಾವು ಯೆಹೋವನ ದಿನದ ಸಾಮೀಪ್ಯದ ಕುರಿತು ಸಂದೇಹಗಳನ್ನು ವಿಕಸಿಸಿಕೊಂಡ ಕಾರಣ, ಯೆಹೋವನನ್ನು ಅನುಸರಿಸುವುದರಿಂದ ಹಿಮ್ಮೆಟ್ಟಿದ ಚೆಫನ್ಯನ ದಿನದಲ್ಲಿನ ಯೆಹೂದ್ಯರಂತಾಗುವ ವಿಷಯದಲ್ಲಿ ಎಚ್ಚರಿಕೆಯಿಂದಿರಬೇಕು. ಅಂತಹ ಯೆಹೂದ್ಯರು ಅನಿವಾರ್ಯವಾಗಿ ತಮ್ಮ ಸಂದೇಹಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲಿಲ್ಲ, ಆದರೆ ಯೆಹೋವನ ದಿನವು ಹತ್ತಿರವಿದೆ ಎಂಬುದನ್ನು ಅವರು ನಿಜವಾಗಿಯೂ ನಂಬಲಿಲ್ಲವೆಂದು ಅವರ ಕ್ರಿಯಾಗತಿಯು ಪ್ರಕಟಪಡಿಸಿತು. ಯೆಹೋವನನ್ನು ಕಾದುಕೊಂಡಿರುವ ಬದಲು ಅವರು ಸಂಪತ್ತನ್ನು ಶೇಖರಿಸುವುದರ ಮೇಲೆ ಕೇಂದ್ರೀಕರಿಸಿದರು.—ಚೆಫನ್ಯ 1:12, 13; 3:8.
14 ನಮ್ಮ ಹೃದಯಗಳಲ್ಲಿ ಸಂದೇಹಗಳು ಬೇರೂರುವಂತೆ ಬಿಡುವ ಸಮಯವು ಇದಾಗಿರುವುದಿಲ್ಲ. ನಮ್ಮ ಮನಸ್ಸುಗಳಲ್ಲಿ ಅಥವಾ ಹೃದಯಗಳಲ್ಲಿ ಯೆಹೋವನ ದಿನದ ಬರುವಿಕೆಯನ್ನು ತಳ್ಳಿಡುವುದು ತೀರ ಬುದ್ಧಿಹೀನವಾಗಿರುವುದು. (2 ಪೇತ್ರ 3:1-4, 10) ಯೆಹೋವನನ್ನು ಅನುಸರಿಸುವುದರಿಂದ ಹಿಮ್ಮೆಟ್ಟುವುದನ್ನು ಅಥವಾ ಆತನ ಸೇವೆಯಲ್ಲಿ ‘ನಮ್ಮ ಕೈಗಳನ್ನು ಜೋಲುಬೀಳಿಸು’ವುದನ್ನು ನಾವು ದೂರವಿರಿಸಬೇಕು. ಇದು “ಸುವಾರ್ತೆ”ಯನ್ನು ಸಾರುವುದರಲ್ಲಿ “ಜೋಲುಗೈ”ಯಿಂದ ಕೆಲಸ ಮಾಡದಿರುವುದನ್ನು ಒಳಗೊಳ್ಳುತ್ತದೆ.—ಜ್ಞಾನೋಕ್ತಿ 10:4; ಮಾರ್ಕ 13:10.
ಉದಾಸೀನತೆಯ ವಿರುದ್ಧ ಹೋರಾಡುವುದು
15. ಯೆಹೋವನ ಸೇವೆಯಲ್ಲಿ ನಮ್ಮ ಕೈ ಮಂದವಾಗುವಂತೆ ಯಾವುದು ಮಾಡಸಾಧ್ಯವಿದೆ, ಮತ್ತು ಈ ಸಮಸ್ಯೆಯು ಚೆಫನ್ಯನ ಪ್ರವಾದನೆಯಲ್ಲಿ ಹೇಗೆ ಮುಂತಿಳಿಸಲ್ಪಟ್ಟಿತು?
15 ಎರಡನೆಯದಾಗಿ, ನಾವು ಉದಾಸೀನತೆಯ ನಿತ್ರಾಣಗೊಳಿಸುವ ಪರಿಣಾಮಗಳ ವಿರುದ್ಧ ಎಚ್ಚರದಿಂದಿರಬೇಕು. ಅನೇಕ ಪಾಶ್ಚಾತ್ಯ ದೇಶಗಳಲ್ಲಿ, ಆತ್ಮಿಕ ವಿಷಯಗಳ ಕುರಿತಾದ ನಿರಾಸಕ್ತಿಯು, ಸುವಾರ್ತೆಯನ್ನು ಸಾರುವ ಕೆಲವರಲ್ಲಿ ನಿರುತ್ಸಾಹಕ್ಕೆ ಕಾರಣವಾಗಬಲ್ಲದು. ಅಂತಹ ಉದಾಸೀನತೆಯು ಚೆಫನ್ಯನ ದಿನದಲ್ಲಿ ಅಸ್ತಿತ್ವದಲ್ಲಿತ್ತು. ಯೆಹೋವನು ತನ್ನ ಪ್ರವಾದಿಯ ಮುಖಾಂತರ ಹೇಳಿದ್ದು: “ಯೆಹೋವನು ಮೇಲನ್ನಾಗಲಿ ಕೇಡನ್ನಾಗಲಿ ಮಾಡನು ಎಂದು ಮನಸ್ಸಿನೊಳಗೆ ಅಂದುಕೊಳ್ಳುವ . . . ಜನರನ್ನು ದಂಡಿಸುವೆನು.” (ಚೆಫನ್ಯ 1:12) ಈ ಉದ್ಧೃತ ಭಾಗದ ಕುರಿತು, ಶಾಲೆಗಳು ಮತ್ತು ಕಾಲೇಜುಗಳಿಗಾಗಿ ಕೇಂಬ್ರಿಡ್ಜ್ ಬೈಬಲ್ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಬರೆಯುತ್ತಾ, ಎ. ಬಿ. ಡೇವಿಡ್ಸನ್ ಹೇಳಿದ್ದೇನೆಂದರೆ, ಅದು “ಉದಾಸೀನತೆಯ ಜಡತೆಯೊಳಗೆ ಅಥವಾ ಮಾನವ ಜಾತಿಯ ಕಾರ್ಯಗಳಲ್ಲಿ ದೇವರ ಯಾವುದೇ ಅಡ್ಡಬರುವಿಕೆಯ ಸಂಬಂಧದಲ್ಲಿಯೂ ಸಂಶಯಾತ್ಮಕತೆಯೊಳಗೆ ಮುಳುಗಿರುವ” ಜನರಿಗೆ ಸೂಚಿಸುತ್ತದೆ.
16. ಕ್ರೈಸ್ತಪ್ರಪಂಚದ ಚರ್ಚುಗಳ ಅನೇಕ ಸದಸ್ಯರಲ್ಲಿ ಯಾವ ಮನಃಸ್ಥಿತಿಯು ಅಸ್ತಿತ್ವದಲ್ಲಿದೆ, ಆದರೆ ಯಾವ ಉತ್ತೇಜನವನ್ನು ಯೆಹೋವನು ನಮಗೆ ಕೊಡುತ್ತಾನೆ?
16 ಭೂಮಿಯ ಅನೇಕ ಭಾಗಗಳಲ್ಲಿ, ವಿಶೇಷವಾಗಿ ಹೆಚ್ಚು ಸಂಪದ್ಭರಿತ ದೇಶಗಳಲ್ಲಿ, ಉದಾಸೀನತೆಯು ಚಾಲ್ತಿಯಲ್ಲಿರುವ ಮನೋಭಾವವಾಗಿದೆ. ಕ್ರೈಸ್ತಪ್ರಪಂಚದ ಚರ್ಚುಗಳ ಸದಸ್ಯರು ಸಹ, ನಮ್ಮ ದಿನದಲ್ಲಿ ಯೆಹೋವ ದೇವರು ಮಾನವ ಕಾರ್ಯಗಳಲ್ಲಿ ಅಡ್ಡಬರುವನೆಂಬುದನ್ನು ನಂಬುವುದೇ ಇಲ್ಲ. ರಾಜ್ಯದ ಸುವಾರ್ತೆಯೊಂದಿಗೆ ಅವರನ್ನು ತಲಪುವ ನಮ್ಮ ಪ್ರಯತ್ನಗಳನ್ನು ಅವರು ಒಂದು ಸಂದೇಹಾತ್ಮಕ ಮುಗುಳುನಗೆಯಿಂದಾಗಲಿ ಅಥವಾ “ನನಗೆ ಅಭಿರುಚಿಯಿಲ್ಲ!” ಎಂಬ ಚುಟುಕಾದ ಉತ್ತರದಿಂದಾಗಲಿ ಹೊರದೂಡುತ್ತಾರೆ. ಈ ಪರಿಸ್ಥಿತಿಗಳ ಕೆಳಗೆ, ಸಾಕ್ಷಿ ಕಾರ್ಯದಲ್ಲಿ ಪಟ್ಟು ಹಿಡಿದಿರುವುದು ನಿಜವಾದೊಂದು ಪಂಥಾಹ್ವಾನವಾಗಿರಬಲ್ಲದು. ಅದು ನಮ್ಮ ಸೈರಣೆಯನ್ನು ಪರೀಕ್ಷಿಸುತ್ತದೆ. ಆದರೆ ಚೆಫನ್ಯನ ಪ್ರವಾದನೆಯ ಮೂಲಕ, ಹೀಗೆ ಹೇಳುತ್ತಾ, ಯೆಹೋವನು ತನ್ನ ನಂಬಿಗಸ್ತ ಜನರನ್ನು ಚೇತನಗೊಳಿಸುತ್ತಾನೆ: “ನಿನ್ನ ಕೈಗಳು ಜೋಲುಬೀಳದಿರಲಿ; ನಿನ್ನ ದೇವರಾದ ಯೆಹೋವನು ನಿನ್ನ ಮಧ್ಯದಲ್ಲಿ ಶೂರನಾಗಿದ್ದಾನೆ, ನಿನ್ನನ್ನು ರಕ್ಷಿಸುವನು; ನಿನ್ನಲ್ಲಿ ಉಲ್ಲಾಸಿಸೇ ಉಲ್ಲಾಸಿಸುವನು; ತನ್ನ ಪ್ರೀತಿಯಲ್ಲಿ ಮುಣುಗಿ ಮೌನವಾಗಿರುವನು; ನಿನ್ನಲ್ಲಿ ಆನಂದಿಸಿ ಹರ್ಷಧ್ವನಿಗೈಯುವನು ಎಂದು ಹೇಳೋಣವಾಗುವದು.”—ಚೆಫನ್ಯ 3:16, 17.
17. ಬೇರೆ ಕುರಿಗಳಲ್ಲಿನ ಹೊಸಬರು ಯಾವ ಉತ್ತಮ ಮಾದರಿಯನ್ನು ಅನುಸರಿಸಬೇಕು, ಮತ್ತು ಹೇಗೆ?
17 ಉಳಿಕೆಯವರು ಅಷ್ಟೇ ಅಲ್ಲದೆ ಬೇರೆ ಕುರಿಗಳಲ್ಲಿನ ವಯಸ್ಸಾದವರು ಈ ಕಡೇ ದಿವಸಗಳಲ್ಲಿ ಮಹತ್ತರವಾದ ಒಟ್ಟುಗೂಡಿಸುವ ಕೆಲಸವನ್ನು ಸಾಧಿಸಿದ್ದಾರೆ ಎಂಬುದು ಯೆಹೋವನ ಜನರ ಆಧುನಿಕ ದಿನದ ಇತಿಹಾಸದಲ್ಲಿ ಒಂದು ವಾಸ್ತವಾಂಶವಾಗಿದೆ. ಈ ಎಲ್ಲ ನಂಬಿಗಸ್ತ ಕ್ರೈಸ್ತರು ದಶಕಗಳ ಉದ್ದಕ್ಕೂ ಸೈರಣೆಯನ್ನು ತೋರಿಸಿದ್ದಾರೆ. ಕ್ರೈಸ್ತಪ್ರಪಂಚದಲ್ಲಿರುವ ಹೆಚ್ಚಿನವರ ವತಿಯಿಂದ ತೋರಿಸಲ್ಪಟ್ಟ ಉದಾಸೀನತೆಯು ತಮ್ಮನ್ನು ನಿರುತ್ಸಾಹಗೊಳಿಸುವಂತೆ ಅವರು ಅನುಮತಿಸಿಲ್ಲ. ಇಂದು ಅನೇಕ ದೇಶಗಳಲ್ಲಿ ಬಹಳಷ್ಟು ಚಾಲ್ತಿಯಲ್ಲಿರುವ, ಆತ್ಮಿಕ ವಿಷಯಗಳ ಕಡೆಗಿನ ಉದಾಸೀನತೆಯಿಂದ ಎದೆಗುಂದುವಂತೆ, ಬೇರೆ ಕುರಿಗಳ ಮಧ್ಯದಲ್ಲಿರುವ ಹೊಸಬರು ತಮ್ಮನ್ನು ಬಿಟ್ಟುಕೊಡದೆ ಇರಲಿ. ತಮ್ಮ ‘ಕೈಗಳು ಜೋಲುಬೀಳುವಂತೆ’ ಅಥವಾ ಮಂದವಾಗುವಂತೆ ಅವರು ಅನುಮತಿಸದಿರಲಿ. ಯೆಹೋವನ ದಿನದ ಮತ್ತು ಅನುಸರಿಸಲಿರುವ ಆಶೀರ್ವಾದಗಳ ಕುರಿತು ಕುರಿಸದೃಶ ಜನರು ಸತ್ಯವನ್ನು ಕಲಿಯುವಂತೆ, ವಿಶೇಷವಾಗಿ ರಚಿಸಲ್ಪಟ್ಟಿರುವ ಕಾವಲಿನಬುರುಜು, ಎಚ್ಚರ!, ಮತ್ತು ಇತರ ಉತ್ತಮ ಪ್ರಕಾಶನಗಳನ್ನು ಪ್ರಸ್ತುತಪಡಿಸಲು ಪ್ರತಿಯೊಂದು ಸಂದರ್ಭವನ್ನು ಅವರು ಉಪಯೋಗಿಸಲಿ.
ಮಹಾದಿನವನ್ನು ಕಾದುಕೊಂಡಿರುವಾಗ ಮುಂದುವರಿಕೆ!
18, 19. (ಎ) ತಾಳಿಕೊಳ್ಳಲು ಯಾವ ಉತ್ತೇಜನವನ್ನು ನಾವು ಮತ್ತಾಯ 24:13 ಮತ್ತು ಯೆಶಾಯ 35:3, 4ರಲ್ಲಿ ಕಂಡುಕೊಳ್ಳುತ್ತೇವೆ? (ಬಿ) ಯೆಹೋವನ ಸೇವೆಯಲ್ಲಿ ನಾವು ಐಕ್ಯದಿಂದ ಮುಂದುವರಿಯುವುದಾದರೆ, ನಾವು ಹೇಗೆ ಆಶೀರ್ವದಿಸಲ್ಪಡುವೆವು?
18 ಯೇಸು ಹೇಳಿದ್ದು: “ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು.” (ಮತ್ತಾಯ 24:13) ಆದುದರಿಂದ ಯೆಹೋವನ ಮಹಾದಿನವನ್ನು ನಾವು ಕಾದುಕೊಂಡಿರುವಂತೆ, ‘ಜೋಲುಬಿದ್ದ ಕೈಗಳು’ ಅಥವಾ ‘ನಡುಗುವ ಮೊಣಕಾಲುಗಳು’ ಇಲ್ಲ! (ಯೆಶಾಯ 35:3, 4) ಚೆಫನ್ಯನ ಪ್ರವಾದನೆಯು ಯೆಹೋವನ ಕುರಿತು ಪುನರಾಶ್ವಾಸನೆ ನೀಡುತ್ತಾ ಹೇಳುವುದು: “ಶೂರನಾಗಿ . . . ನಿನ್ನನ್ನು ರಕ್ಷಿಸುವನು.” (ಚೆಫನ್ಯ 3:17) ಹೌದು, ತನ್ನ ಜನರ ವಿರುದ್ಧ “ಉಬ್ಬಿಕೊಂಡಿರುವ” ರಾಜಕೀಯ ರಾಷ್ಟ್ರಗಳನ್ನು ನುಚ್ಚುನೂರು ಮಾಡಲು ತನ್ನ ಪುತ್ರನಿಗೆ ಆಜ್ಞೆಕೊಡುವಾಗ, ಯೆಹೋವನು “ಮಹಾ ಸಮೂಹ”ವನ್ನು “ಮಹಾ ಸಂಕಟ”ದ ಅಂತಿಮ ಹಂತದ ಮುಖಾಂತರ ರಕ್ಷಿಸುವನು.—ಪ್ರಕಟನೆ 7:9, 14; ಚೆಫನ್ಯ 2:10, 11; ಕೀರ್ತನೆ 2:7-9.
19 ಯೆಹೋವನ ಮಹಾದಿನವು ಸಮೀಪಿಸಿದಂತೆ, ನಾವು “ಒಂದೇ ಮನಸ್ಸಿನಿಂದ” ಆತನನ್ನು ಸೇವಿಸುತ್ತಾ ಮುಂದುವರಿಯೋಣ! (ಚೆಫನ್ಯ 3:9) ಹಾಗೆ ಮಾಡುತ್ತಾ, ನಾವು ಮತ್ತು ಇತರ ಅಸಂಖ್ಯಾತ ಜನರು “ಯೆಹೋವನ ಸಿಟ್ಟಿನ ದಿನದಲ್ಲಿ . . . ಮರೆಯಾಗು”ವ ಸ್ಥಾನದಲ್ಲಿ ಇಡಲ್ಪಡುವೆವು ಮತ್ತು ಆತನ ಪವಿತ್ರ ನಾಮದ ಪವಿತ್ರೀಕರಣವನ್ನು ಕಣ್ಣಾರೆ ಕಾಣುವೆವು.
[ಪಾದಟಿಪ್ಪಣಿ]
a “ಶುದ್ಧ ಭಾಷೆ”ಯ ಒಂದು ಸಂಪೂರ್ಣ ಚರ್ಚೆಗಾಗಿ, 1991ರ ದ ವಾಚ್ಟವರ್, ಎಪ್ರಿಲ್ 1, ಪುಟಗಳು 20-25 ಮತ್ತು 1991ರ ಮೇ 1, ಪುಟಗಳು 10-20ನ್ನು ನೋಡಿರಿ.
ಪುನರ್ವಿಮರ್ಶೆಯಲ್ಲಿ
◻ ಯಾವ ವಿಧಗಳಲ್ಲಿ ಕ್ರೈಸ್ತಪ್ರಪಂಚದೊಳಗಿರುವ ಧಾರ್ಮಿಕ ಸನ್ನಿವೇಶವು ಚೆಫನ್ಯನ ದಿನದ ಸನ್ನಿವೇಶಕ್ಕೆ ಅನುರೂಪವಾಗಿದೆ?
◻ ಇಂದಿನ ಅನೇಕ ರಾಜಕೀಯ ಮುಖಂಡರು, ಚೆಫನ್ಯನ ಸಮಯದ ಐಹಿಕ “ದೇಶಾಧಿಪತಿಗಳ”ನ್ನು ಹೋಲುತ್ತಾರೆ ಹೇಗೆ?
◻ ಅಭಿಷಿಕ್ತರ ಮೇಲೆ ಚೆಫನ್ಯನ ಪುಸ್ತಕದಲ್ಲಿರುವ ಯಾವ ವಾಗ್ದಾನಗಳು ನೆರವೇರಿವೆ?
◻ ಲಕ್ಷಾಂತರ ಜನರು ಏನನ್ನು ಮನಗಂಡಿದ್ದಾರೆ?
◻ ಯೆಹೋವನ ಸೇವೆಯಲ್ಲಿ ನಾವು ನಮ್ಮ ಕೈಗಳನ್ನು ಜೋಲುಬೀಳುವಂತೆ ಬಿಡಬಾರದೇಕೆ?
[ಪುಟ 15 ರಲ್ಲಿರುವ ಚಿತ್ರಗಳು]
ಚೆಫನ್ಯನಂತೆ, ಅಭಿಷಿಕ್ತ ಕ್ರೈಸ್ತರ ನಂಬಿಗಸ್ತ ಉಳಿಕೆಯವರು ಭಯರಹಿತರಾಗಿ ಯೆಹೋವನ ನ್ಯಾಯತೀರ್ಪುಗಳನ್ನು ಘೋಷಿಸುತ್ತಾ ಇದ್ದಾರೆ
[ಪುಟ 18 ರಲ್ಲಿರುವ ಚಿತ್ರಗಳು]
ಜನರ ಉದಾಸೀನತೆಯು ತಮ್ಮನ್ನು ನಿರುತ್ಸಾಹಗೊಳಿಸುವಂತೆ “ಬೇರೆ ಕುರಿಗಳು” ಬಿಟ್ಟುಕೊಟ್ಟಿಲ್ಲ