ಒಂದೇ ಮನಸ್ಸಿನಿಂದ ಸೇವೆಸಲ್ಲಿಸುತ್ತಾ ಇರ್ರಿ
“ಆಗ ಎಲ್ಲರು ಒಂದೇ ಮನಸ್ಸಿನಿಂದ ಯೆಹೋವನನ್ನು ಸೇವಿಸಿ ಆತನ ಹೆಸರನ್ನೆತ್ತಿ ಪ್ರಾರ್ಥಿಸುವಂತೆ ಜನಾಂಗಗಳವರ ತುಟಿಗಳನ್ನು ಮಾರ್ಪಡಿಸಿ ಶುದ್ಧಿಮಾಡುವೆನು [“ಶುದ್ಧ ಭಾಷೆಯನ್ನು ಕೊಡುವೆನು,” NW].”—ಚೆಫನ್ಯ 3:9.
1. ಚೆಫನ್ಯ 3:9ರ ನೆರವೇರಿಕೆಯಲ್ಲಿ ಏನು ಸಂಭವಿಸುತ್ತಾ ಇದೆ?
ಇಂದು ಲೋಕದಾದ್ಯಂತ ಸುಮಾರು 6,000 ಭಾಷೆಗಳು ನುಡಿಯಲ್ಪಡುತ್ತಿವೆ. ಇವುಗಳಲ್ಲದೆ, ವಿಭಿನ್ನ ಪ್ರಾಂತಭಾಷೆಗಳು ಇಲ್ಲವೆ ಭಾಷೆಗಳ ಸ್ಥಳೀಯ ರೂಪಗಳೂ ಇವೆ. ಅರಬ್ಬೀ ಭಾಷೆಯಿಂದ ಹಿಡಿದು ಹಿಂದಿಯಷ್ಟು ಭಿನ್ನ ಭಿನ್ನ ಭಾಷೆಗಳನ್ನು ಜನರು ಮಾತಾಡುತ್ತಾರಾದರೂ, ದೇವರು ನಿಜವಾಗಿಯೂ ಅದ್ಭುತಕರವಾದದ್ದೇನನ್ನೊ ಮಾಡಿದ್ದಾನೆ. ಎಲ್ಲ ಕಡೆಗಳಲ್ಲಿರುವ ಜನರು ಒಂದೇ ಒಂದು ಶುದ್ಧ ಭಾಷೆಯನ್ನು ಕಲಿತು ಮಾತಾಡುವುದನ್ನು ಆತನು ಸಾಧ್ಯಗೊಳಿಸಿದ್ದಾನೆ. ಇದು, ಪ್ರವಾದಿಯಾದ ಚೆಫನ್ಯನ ಮೂಲಕ ಕೊಡಲ್ಪಟ್ಟ ಈ ವಾಗ್ದಾನದ ನೆರವೇರಿಕೆಯಾಗಿದೆ: “ಆಗ ಎಲ್ಲರು ಒಂದೇ ಮನಸ್ಸಿನಿಂದ ಯೆಹೋವನನ್ನು ಸೇವಿಸಿ ಆತನ ಹೆಸರನ್ನೆತ್ತಿ ಪ್ರಾರ್ಥಿಸುವಂತೆ ಜನಾಂಗಗಳವರ ತುಟಿಗಳನ್ನು ಮಾರ್ಪಡಿಸಿ ಶುದ್ಧಿಮಾಡುವೆನು [“ಶುದ್ಧ ಭಾಷೆಯನ್ನು ಕೊಡುವೆನು,” NW].”—ಚೆಫನ್ಯ 3:9.
2. “ಶುದ್ಧ ಭಾಷೆ” ಏನಾಗಿದೆ, ಮತ್ತು ಅದರಿಂದ ಏನು ಸಾಧ್ಯವಾಗಿದೆ?
2 “ಶುದ್ಧ ಭಾಷೆ”ಯು ದೇವರ ವಾಕ್ಯವಾದ ಬೈಬಲಿನಲ್ಲಿ ಕಂಡುಬರುವ ಸತ್ಯವಾಗಿದೆ. ಅದು ವಿಶೇಷವಾಗಿ, ಯೆಹೋವನ ನಾಮವನ್ನು ಪವಿತ್ರೀಕರಿಸುವ, ಆತನ ಪರಮಾಧಿಕಾರವನ್ನು ನಿರ್ದೋಷೀಕರಿಸುವ ಮತ್ತು ಮಾನವಜಾತಿಗೆ ಆಶೀರ್ವಾದಗಳನ್ನು ತರುವ ದೇವರ ರಾಜ್ಯದ ಕುರಿತಾದ ಸತ್ಯವಾಗಿದೆ. (ಮತ್ತಾಯ 6:9, 10) ಭೂಮಿಯ ಮೇಲೆ ಆತ್ಮಿಕವಾಗಿ ಶುದ್ಧವಾಗಿರುವ ಒಂದೇ ಒಂದು ಭಾಷೆಯೋಪಾದಿ, ಈ ಶುದ್ಧ ಭಾಷೆಯು ಎಲ್ಲಾ ಜನಾಂಗ ಹಾಗೂ ಜಾತಿಗಳಿಂದ ಬಂದಿರುವ ಜನರಿಂದ ಆಡಲ್ಪಡುತ್ತದೆ. ಅದು ಅವರು ಯೆಹೋವನನ್ನು “ಒಂದೇ ಮನಸ್ಸಿನಿಂದ” ಸೇವೆಸಲ್ಲಿಸುವಂತೆ ಇಲ್ಲವೆ ಸತ್ಯವೇದವು ಕನ್ನಡ ಬೈಬಲಿನ ಪಾದಟಿಪ್ಪಣಿಯು ತಿಳಿಸುವಂತೆ, “ಒಂದೇ ಹೆಗಲಿನಿಂದ” ಸೇವಿಸುವಂತೆ ಶಕ್ತಗೊಳಿಸುತ್ತದೆ. ಹೀಗೆ ಅವರು ಆತನನ್ನು ಐಕ್ಯವಾಗಿ ಇಲ್ಲವೆ ‘ಒಟ್ಟಾಗಿ ಸೇರಿ’ ಸೇವಿಸುತ್ತಾರೆ.—ಪರಿಶುದ್ಧ ಬೈಬಲ್.
ಪಕ್ಷಪಾತಕ್ಕೆ ಯಾವುದೇ ಆಸ್ಪದವಿಲ್ಲ
3. ನಾವು ಯೆಹೋವನನ್ನು ಐಕ್ಯವಾಗಿ ಸೇವಿಸಲು ಶಕ್ತರನ್ನಾಗಿ ಮಾಡುವಂಥದ್ದು ಯಾವುದು?
3 ಕ್ರೈಸ್ತರೋಪಾದಿ, ನಮ್ಮ ನಡುವೆ ಇರುವ ಬಹುಭಾಷೀಯ ಸಹಕಾರಕ್ಕಾಗಿ ನಾವು ಆಭಾರಿಗಳಾಗಿದ್ದೇವೆ. ರಾಜ್ಯದ ಸುವಾರ್ತೆಯನ್ನು ನಾವು ಅನೇಕ ಭಾಷೆಗಳಲ್ಲಿ ಸಾರುತ್ತೇವಾದರೂ, ನಾವು ದೇವರನ್ನು ಐಕ್ಯದಿಂದ ಸೇವಿಸುತ್ತಿದ್ದೇವೆ. (ಕೀರ್ತನೆ 133:1) ನಾವು ಲೋಕದಲ್ಲಿ ಎಲ್ಲಿಯೇ ಜೀವಿಸುತ್ತಿರಲಿ, ಯೆಹೋವನಿಗೆ ಸ್ತುತಿಯನ್ನು ತರುವ ಒಂದೇ ಶುದ್ಧ ಭಾಷೆಯನ್ನಾಡುತ್ತಿರುವುದೇ ಈ ಐಕ್ಯವನ್ನು ಸಾಧ್ಯಗೊಳಿಸಿದೆ.
4. ದೇವಜನರ ನಡುವೆ ಏಕೆ ಪಕ್ಷಪಾತವಿರಬಾರದು?
4 ದೇವಜನರ ನಡುವೆ ಯಾವುದೇ ರೀತಿಯ ಪಕ್ಷಪಾತವಿರಬಾರದು. ಇದನ್ನು ಅಪೊಸ್ತಲ ಪೇತ್ರನು ಸಾ.ಶ. 36ರಲ್ಲಿ ಅನ್ಯಜನಾಂಗದವನಾಗಿದ್ದ ಸೇನಾಧಿಕಾರಿ ಕೊರ್ನೇಲ್ಯನ ಮನೆಯಲ್ಲಿ ಸಾರುತ್ತಿದ್ದಾಗ ಸ್ಪಷ್ಟವಾಗಿ ತಿಳಿಸಿದನು. ಅವನು ಹೀಗನ್ನುವಂತೆ ಪ್ರಚೋದಿಸಲ್ಪಟ್ಟನು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ.” (ಅ. ಕೃತ್ಯಗಳು 10:34, 35) ಈ ಮಾತು ಸತ್ಯವಾಗಿರುವುದರಿಂದ, ಕ್ರೈಸ್ತ ಸಭೆಯಲ್ಲಿ ಪಕ್ಷಪಾತ, ಸಣ್ಣ ಗುಂಪುಗಳು ಇಲ್ಲವೆ ಭೇದಭಾವಕ್ಕೆ ಯಾವುದೇ ಆಸ್ಪದವಿಲ್ಲ.
5. ಸಭೆಯೊಳಗೆಯೇ ಸಣ್ಣ ಗುಂಪುಗಳ ರಚನೆಗೆ ನೆರವು ನೀಡುವುದು ತಪ್ಪೇಕೆ?
5 ಒಮ್ಮೆ ಒಬ್ಬ ಕಾಲೇಜ್ ವಿದ್ಯಾರ್ಥಿನಿಯು ರಾಜ್ಯ ಸಭಾಗೃಹವೊಂದಕ್ಕೆ ಭೇಟಿಯಿತ್ತಳು. ಆ ಭೇಟಿಯ ಬಗ್ಗೆ ಅವಳು ಹೇಳಿದ್ದು: “ಸಾಮಾನ್ಯವಾಗಿ ಚರ್ಚುಗಳು ಒಂದು ನಿರ್ದಿಷ್ಟ ಜಾತಿ ಅಥವಾ ಕುಲದ ಸದಸ್ಯರನ್ನು ಮಾತ್ರ ತಮ್ಮ ಕಡೆಗೆ ಸೆಳೆದುಕೊಳ್ಳುತ್ತವೆ. . . . ಆದರೆ, ಯೆಹೋವನ ಸಾಕ್ಷಿಗಳಲ್ಲಿ ಎಲ್ಲರೂ ಒಟ್ಟಿಗೆ ಕುಳಿತುಕೊಂಡಿದ್ದರು—ಪ್ರತ್ಯೇಕ ಬಳಗಗಳಾಗಿ ಅಲ್ಲ.” ಆದರೆ ಪ್ರಾಚೀನಕಾಲದ ಕೊರಿಂಥ ಸಭೆಯಲ್ಲಿದ್ದ ಕೆಲವು ಸಹೋದರರು ಪಂಗಡಗಳನ್ನು ರಚಿಸುತ್ತಾ ಇದ್ದರು. ಈ ರೀತಿಯಲ್ಲಿ ಒಡಕನ್ನುಂಟುಮಾಡುವ ಮೂಲಕ ಅವರು, ಐಕ್ಯ ಮತ್ತು ಶಾಂತಿಯನ್ನು ಪ್ರವರ್ಧಿಸುವ ದೇವರ ಪವಿತ್ರಾತ್ಮದ ಕಾರ್ಯಾಚರಣೆಯನ್ನು ವಿರೋಧಿಸುತ್ತಿದ್ದರು. (ಗಲಾತ್ಯ 5:22) ನಾವು ಸಭೆಯಲ್ಲಿ ನಮ್ಮದೇ ಆದ ಸಣ್ಣ ಗುಂಪುಗಳನ್ನು ಹುಟ್ಟಿಸಿ ಪೋಷಿಸುತ್ತಿರುವುದಾದರೆ, ನಾವು ಪವಿತ್ರಾತ್ಮದ ಮಾರ್ಗದರ್ಶನದ ವಿರುದ್ಧ ನಡೆಯುತ್ತಿರುವೆವು. ಹೀಗಿರುವುದರಿಂದ, ಕೊರಿಂಥದವರಿಗೆ ಅಪೊಸ್ತಲ ಪೌಲನು ಬರೆದ ಮಾತುಗಳನ್ನು ನಾವು ಮನಸ್ಸಿನಲ್ಲಿಡೋಣ: “ಸಹೋದರರೇ, ನಿಮ್ಮೆಲ್ಲರ ಮಾತು ಒಂದೇ ಆಗಿರಬೇಕು; ನಿಮ್ಮಲ್ಲಿ ಭೇದಗಳಿರಬಾರದು, ನೀವು ಒಂದೇ ಮನಸ್ಸೂ ಒಂದೇ ಅಭಿಪ್ರಾಯವೂ ಉಳ್ಳವರಾಗಿದ್ದು ಹೊಂದಿಕೆಯಿಂದಿರಬೇಕು ಎಂಬದಾಗಿ ನಾನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮ್ಮನ್ನು ಬೇಡಿಕೊಳ್ಳುತ್ತೇನೆ.” (1 ಕೊರಿಂಥ 1:10) ಎಫೆಸದವರಿಗೆ ಬರೆದ ಪತ್ರದಲ್ಲೂ ಪೌಲನು ಐಕ್ಯವಾಗಿರುವುದನ್ನು ಒತ್ತಿಹೇಳಿದನು.—ಎಫೆಸ 4:1-6, 16.
6, 7. ಭೇದಭಾವವನ್ನು ಮಾಡುವುದರ ಬಗ್ಗೆ ಯಾಕೋಬನು ಯಾವ ಬುದ್ಧಿವಾದವನ್ನು ಕೊಟ್ಟನು, ಮತ್ತು ಅವನ ಮಾತುಗಳು ಹೇಗೆ ಅನ್ವಯವಾಗುತ್ತವೆ?
6 ಕ್ರೈಸ್ತರು ಯಾವಾಗಲೂ ನಿಷ್ಪಕ್ಷಪಾತಿಗಳಾಗಿರುವಂತೆ ಅಪೇಕ್ಷಿಸಲಾಗಿದೆ. (ರೋಮಾಪುರ 2:11) ಪ್ರಥಮ ಶತಮಾನದಲ್ಲಿದ್ದ ಕೆಲವರು ಧನಿಕ ವ್ಯಕ್ತಿಗಳ ಕಡೆಗೆ ಭೇದಭಾವವನ್ನು ತೋರಿಸುತ್ತಿದ್ದುದರಿಂದ, ಶಿಷ್ಯನಾದ ಯಾಕೋಬನು ಹೀಗೆ ಬರೆದನು: “ನನ್ನ ಸಹೋದರರೇ, ಪ್ರಭಾವವುಳ್ಳ ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟವರಾದ ನೀವು ಪಕ್ಷಪಾತಿಗಳಾಗಿರಬಾರದು. ಹೇಗಂದರೆ ಒಬ್ಬ ಮನುಷ್ಯನು ಚಿನ್ನದ ಉಂಗುರವನ್ನೂ ಶೋಭಾಯಮಾನವಾದ ವಸ್ತ್ರಗಳನ್ನೂ ಹಾಕಿಕೊಂಡು ನಿಮ್ಮ ಸಭಾಮಂದಿರದೊಳಗೆ ಬರಲು ಮತ್ತು ಒಬ್ಬ ಬಡಮನುಷ್ಯನು ಹೀನವಾದ ಬಟ್ಟೆ ಹಾಕಿಕೊಂಡು ಬರಲು ನೀವು ಶೋಭಾಯಮಾನವಾದ ವಸ್ತ್ರಗಳನ್ನು ಧರಿಸಿಕೊಂಡಿರುವವನನ್ನು ಮರ್ಯಾದೆಯಿಂದ ನೋಡಿ ಅವನಿಗೆ—ನೀವು ಇಲ್ಲಿ ಈ ಸುಖಾಸನದ ಮೇಲೆ ಕೂತುಕೊಳ್ಳಿರಿ ಎಂತಲೂ ಆ ಬಡಮನುಷ್ಯನಿಗೆ—ನೀನು ಅಲ್ಲಿ ನಿಂತುಕೋ, ಇಲ್ಲವೆ ನನ್ನ ಕಾಲ್ಮಣೆಯ ಹತ್ತಿರ ನೆಲದ ಮೇಲೆ ಕೂತುಕೋ ಎಂತಲೂ ಹೇಳಿದರೆ ನೀವು ನಿಮ್ಮಲ್ಲಿ ಭೇದಮಾಡುವವರಾಗಿ ಅನ್ಯಾಯವಾದ ತೀರ್ಪನ್ನು ಮಾಡುವವರಾದಿರಲ್ಲಾ.”—ಯಾಕೋಬ 2:1-4.
7 ಒಂದು ಕ್ರೈಸ್ತ ಕೂಟಕ್ಕೆ, ಚಿನ್ನದ ಉಂಗುರಗಳನ್ನೂ ಶೋಭಾಯಮಾನವಾದ ಬಟ್ಟೆಗಳನ್ನೂ ಧರಿಸಿಕೊಂಡು ಸಿರಿವಂತ ಅವಿಶ್ವಾಸಿಗಳು ಹಾಗೂ ಹೀನವಾದ ಬಟ್ಟೆಗಳನ್ನು ಧರಿಸಿಕೊಂಡಿರುವ ಬಡ ಅವಿಶ್ವಾಸಿಗಳು ಬಂದರೆ, ಧನಿಕರಿಗೆ ವಿಶೇಷ ರಾಜೋಪಚಾರವನ್ನು ಮಾಡಲಾಗುತ್ತಿತ್ತು. ಅವರಿಗೆ ‘ಸುಖಾಸನಗಳನ್ನು’ ಕೊಡಲಾಗುತ್ತಿತ್ತು, ಆದರೆ ಬಡವರಿಗೆ ನಿಂತುಕೊಳ್ಳುವಂತೆ ಇಲ್ಲವೆ ಯಾರಾದರೊಬ್ಬರ ಪಾದಗಳ ಬಳಿ ನೆಲದ ಮೇಲೆ ಕುಳಿತುಕೊಳ್ಳುವಂತೆ ಹೇಳಲಾಗುತ್ತಿತ್ತು. ಆದರೆ ದೇವರು ನಿಷ್ಪಕ್ಷಪಾತದಿಂದ ಯೇಸುವಿನ ಪ್ರಾಯಶ್ಚಿತ್ತ ಯಜ್ಞವನ್ನು ಬಡವಬಲ್ಲಿದರಿಗೆ ಸಮಾನವಾಗಿ ಒದಗಿಸಿದ್ದನು. (ಯೋಬ 34:19; 2 ಕೊರಿಂಥ 5:14) ಆದುದರಿಂದ ನಾವು ಯೆಹೋವನನ್ನು ಸಂತೋಷಪಡಿಸಬೇಕಾದರೆ ಮತ್ತು ಒಂದೇ ಮನಸ್ಸಿನಿಂದ ಆತನನ್ನು ಸೇವಿಸಲಿರುವುದಾದರೆ, ಭೇದಭಾವವನ್ನು ಮಾಡಬಾರದು ಇಲ್ಲವೆ ‘ಮುಖಸ್ತುತಿ ಮಾಡುವವರಾಗಿರಬಾರದು.’—ಯೂದ 4, 16.
ಗುಣುಗುಟ್ಟದಿರಿ
8. ಇಸ್ರಾಯೇಲ್ಯರು ಗುಣುಗುಟ್ಟಿದ್ದರಿಂದ ಏನಾಯಿತು?
8 ನಮ್ಮ ಐಕ್ಯವನ್ನು ಕಾಪಾಡಲು ಮತ್ತು ದೇವರ ಅನುಗ್ರಹವನ್ನು ಪಡೆಯುತ್ತಾ ಇರಲು, ನಾವು ಪೌಲನ ಬುದ್ಧಿವಾದವನ್ನು ಪಾಲಿಸಬೇಕು: ‘ಗುಣುಗುಟ್ಟದೆ ಎಲ್ಲವನ್ನೂ ಮಾಡಿರಿ.’ (ಫಿಲಿಪ್ಪಿ 2:14, 15) ಐಗುಪ್ತದ ದಾಸತ್ವದಿಂದ ಬಿಡಿಸಲ್ಪಟ್ಟ ನಂಬಿಕೆಹೀನ ಇಸ್ರಾಯೇಲ್ಯರು, ಮೋಶೆಆರೋನರು ಮತ್ತು ಯೆಹೋವ ದೇವರ ವಿರುದ್ಧವೂ ಗುಣುಗುಟ್ಟಿದರು. ಈ ಕಾರಣದಿಂದ 20 ವರ್ಷಕ್ಕೆ ಮೇಲ್ಪಟ್ಟ ಎಲ್ಲಾ ಪುರುಷರು, ನಂಬಿಗಸ್ತನಾದ ಯೆಹೋಶುವ ಮತ್ತು ಕಾಲೇಬ ಹಾಗೂ ಲೇವ್ಯರನ್ನು ಬಿಟ್ಟು ಬೇರೆ ಯಾರೂ ವಾಗ್ದತ್ತ ದೇಶವನ್ನು ಪ್ರವೇಶಿಸಲಿಲ್ಲ. ಬದಲಾಗಿ ಅವರು ಅರಣ್ಯದಲ್ಲಿ ಇಸ್ರಾಯೇಲಿನ 40 ವರ್ಷಗಳ ಪ್ರಯಾಣದ ಸಮಯದಲ್ಲಿ ಸತ್ತು ನಾಶವಾದರು. (ಅರಣ್ಯಕಾಂಡ 14:2, 3, 26-30; 1 ಕೊರಿಂಥ 10:10) ಗುಣುಗುಟ್ಟಿದ್ದಕ್ಕಾಗಿ ಅವರು ಎಂಥ ಬೆಲೆಯನ್ನು ತೆರಬೇಕಾಯಿತು!
9. ತನ್ನ ಗುಣುಗುಟ್ಟುವಿಕೆಯಿಂದಾಗಿ ಮಿರ್ಯಾಮಳು ಏನನ್ನು ಅನುಭವಿಸಿದಳು?
9 ಗುಣುಗುಟ್ಟುತ್ತಿರುವ ಒಂದು ಇಡೀ ಜನಾಂಗಕ್ಕೆ ಏನು ಸಂಭವಿಸಬಲ್ಲದೆಂಬುದನ್ನು ಇದು ತೋರಿಸುತ್ತದೆ. ಆದರೆ ವ್ಯಕ್ತಿಗತ ಗುಣುಗುಟ್ಟುವವರ ಕುರಿತಾಗಿ ಏನು? ಮೋಶೆಯ ಅಕ್ಕ ಮಿರ್ಯಾಮಳು ಮತ್ತು ಅವಳ ಸಹೋದರನಾದ ಆರೋನನು ಸಹ ಹೀಗೆ ಗುಣುಗುಟ್ಟಿದರು: “ಯೆಹೋವನು ಮೋಶೆಯ ಮೂಲಕವಾಗಿ ಮಾತ್ರವೇ ಮಾತಾಡಿದ್ದಾನೋ; ನಮ್ಮ ಮೂಲಕವೂ ಆತನು ಮಾತಾಡಲಿಲ್ಲವೇ”? ಆ ವೃತ್ತಾಂತವು ಕೂಡಿಸಿ ಹೇಳುವುದು: ‘ಅವರು ಆಡಿದ ಮಾತನ್ನು ಯೆಹೋವನು ಕೇಳಿದನು.’ (ಅರಣ್ಯಕಾಂಡ 12:1, 2) ಫಲಿತಾಂಶವೇನಾಗಿತ್ತು? ಈ ದೂರುವಿಕೆಯ ಕೃತ್ಯದಲ್ಲಿ ಬಹುಶಃ ನೇತೃತ್ವವನ್ನು ವಹಿಸಿದ ಮಿರ್ಯಾಮಳನ್ನು ದೇವರು ಅವಮಾನಕ್ಕೊಳಪಡಿಸಿದನು. ಹೇಗೆ? ಅವಳು ಕುಷ್ಠರೋಗ ಪೀಡಿತಳಾದಳು ಮತ್ತು ಅವಳು ಶುದ್ಧಳಾಗುವ ತನಕ ಪಾಳೆಯದ ಹೊರಗೆ ಏಳು ದಿನಗಳ ವರೆಗೆ ಉಳಿಯುವಂತೆ ನಿರ್ಬಂಧಿಸಲ್ಪಟ್ಟಳು.—ಅರಣ್ಯಕಾಂಡ 12:9-15.
10, 11. ಕಡಿವಾಣವಿಲ್ಲದ ಗುಣುಗುಟ್ಟುವಿಕೆಯು ಯಾವುದರಲ್ಲಿ ಫಲಿಸುವುದು? ದೃಷ್ಟಾಂತಿಸಿರಿ.
10 ಗುಣುಗುಟ್ಟುವಿಕೆಯು, ಯಾವುದೊ ತಪ್ಪು ಕೃತ್ಯದ ಬಗ್ಗೆ ಕೇವಲ ಒಂದು ಬಾರಿ ದೂರುವುದಾಗಿರುವುದಿಲ್ಲ. ನಿರಂತರವಾಗಿ ಗುಣುಗುಟ್ಟುವವರು, ತಮ್ಮ ಸ್ವಂತ ಭಾವನೆಗಳು ಇಲ್ಲವೆ ಪ್ರತಿಷ್ಠೆಗೆ ತೀರ ಹೆಚ್ಚು ಮಹತ್ವವನ್ನು ಕೊಡುತ್ತಾ, ದೇವರ ಬದಲು ತಮ್ಮ ಕಡೆಗೇ ಹೆಚ್ಚು ಗಮನವನ್ನು ಸೆಳೆಯುವವರಾಗಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ, ಅದು ಆತ್ಮಿಕ ಸಹೋದರರ ನಡುವೆ ಬಿರುಕನ್ನುಂಟುಮಾಡುತ್ತದೆ ಮತ್ತು ಅವರು ಯೆಹೋವನನ್ನು ಒಂದೇ ಮನಸ್ಸಿನಿಂದ ಸೇವಿಸಲು ಮಾಡುವ ಪ್ರಯತ್ನಗಳಿಗೆ ತಡೆಯನ್ನು ತರುತ್ತದೆ. ಏಕೆಂದರೆ ಗುಣುಗುಟ್ಟುವವರು, ಬೇರೆಯವರು ತಾವು ಹೇಳುವ ವಿಷಯಕ್ಕೆ ಸಹಾನುಭೂತಿ ತೋರಿಸುವರು ಎಂದು ನಿಸ್ಸಂದೇಹವಾಗಿ ನಿರೀಕ್ಷಿಸುತ್ತಾ, ಸದಾ ತಮ್ಮ ದೂರುಗಳನ್ನೇ ಹೇಳುತ್ತಾ ಇರುತ್ತಾರೆ.
11 ಉದಾಹರಣೆಗೆ, ಯಾರಾದರೊಬ್ಬರು ಒಬ್ಬ ನಿರ್ದಿಷ್ಟ ಹಿರಿಯನು ಸಭೆಯಲ್ಲಿನ ತನ್ನ ಭಾಗಗಳನ್ನು ನಿರ್ವಹಿಸುವ ರೀತಿ ಇಲ್ಲವೆ ತನ್ನ ಕರ್ತವ್ಯಗಳನ್ನು ಪೂರೈಸುವ ರೀತಿಯ ಬಗ್ಗೆ ಟೀಕಿಸಬಹುದು. ಆ ವ್ಯಕ್ತಿಗೆ ನಾವು ಕಿವಿಗೊಟ್ಟರೆ, ನಾವು ಕೂಡ ಅವನಂತೆಯೇ ಯೋಚಿಸಲಾರಂಭಿಸಬಹುದು. ಅತೃಪ್ತಿಯ ಆ ಬೀಜವು ನಮ್ಮ ಮನಸ್ಸಿನಲ್ಲಿ ಬಿತ್ತಲ್ಪಡುವ ಮುಂಚೆ ನಮಗೆ ಆ ಹಿರಿಯನ ಚಟುವಟಿಕೆಗಳು ಕಿರಿಕಿರಿಯನ್ನುಂಟುಮಾಡುತ್ತಿರಲಿಲ್ಲ. ಆದರೆ ಈಗ ನಮಗೆ ಹಾಗಾಗುತ್ತದೆ. ಕೊನೆಗೆ ಆ ಹಿರಿಯನು ಏನೇ ಮಾಡಿದರೂ ಅದು ನಮ್ಮ ದೃಷ್ಟಿಯಲ್ಲಿ ಸರಿಯಾಗಿರುವುದಿಲ್ಲ, ಮತ್ತು ನಾವು ಕೂಡ ಅವನ ಬಗ್ಗೆ ದೂರಲಾರಂಭಿಸಬಹುದು. ಆದರೆ ಈ ರೀತಿಯ ನಡತೆಯು ಯೆಹೋವನ ಜನರ ಸಭೆಗೆ ತಕ್ಕದ್ದಾಗಿರುವುದಿಲ್ಲ.
12. ಗುಣುಗುಟ್ಟುವಿಕೆಯು ದೇವರೊಂದಿಗಿನ ನಮ್ಮ ಸಂಬಂಧದ ಮೇಲೆ ಯಾವ ಪ್ರಭಾವವನ್ನು ಬೀರಬಲ್ಲದು?
12 ದೇವರ ಮಂದೆಯನ್ನು ಪರಿಪಾಲಿಸುವ ಕರ್ತವ್ಯವುಳ್ಳ ಪುರುಷರ ಕುರಿತಾಗಿ ಗುಣುಗುಟ್ಟುವುದು, ದೂಷಣೆಗೆ ನಡೆಸಬಲ್ಲದು. ಅಂಥ ಗುಣುಗುಟ್ಟುವಿಕೆ ಇಲ್ಲವೆ ಅವರನ್ನು ನಿಂದಾತ್ಮಕವಾಗಿ ದೂಷಿಸುವುದು, ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಹಾನಿಕರವಾದ ರೀತಿಯಲ್ಲಿ ಬಾಧಿಸಬಲ್ಲದು. (ವಿಮೋಚನಕಾಂಡ 22:28) ಪಶ್ಚಾತ್ತಾಪರಹಿತ ದೂಷಕರು ದೇವರ ರಾಜ್ಯಕ್ಕೆ ಬಾಧ್ಯರಾಗರು. (1 ಕೊರಿಂಥ 5:11; 6:10) ‘ಪ್ರಭುತ್ವವನ್ನು ಅಸಡ್ಡೆಮಾಡುವ’ ಮತ್ತು ‘ಮಹಾ ಪದವಿಯವರನ್ನು’ ಇಲ್ಲವೆ ಸಭೆಯಲ್ಲಿರುವ ಜವಾಬ್ದಾರಿಯುತ ಪುರುಷರನ್ನು ‘ದೂಷಿಸುತ್ತಿದ್ದ’ ಗುಣುಗುಟ್ಟುವವರ ಬಗ್ಗೆ ಶಿಷ್ಯನಾದ ಯೂದನು ಬರೆದನು. (ಯೂದ 8) ಗುಣುಗುಟ್ಟುವಂಥ ಆ ವ್ಯಕ್ತಿಗಳಿಗೆ ದೇವರ ಅನುಗ್ರಹವಿರಲಿಲ್ಲ, ಮತ್ತು ನಾವು ಅವರ ದುಷ್ಟ ಮಾರ್ಗಕ್ರಮವನ್ನು ಹಿಂಬಾಲಿಸದಿರುವುದು ವಿವೇಕದ ಕಾರ್ಯವೇ ಸರಿ.
13. ಎಲ್ಲಾ ದೂರುಗಳು ಏಕೆ ತಪ್ಪಲ್ಲ?
13 ಆದರೆ ಎಲ್ಲಾ ರೀತಿಯ ದೂರುಗಳನ್ನು ದೇವರು ಹೇಸುತ್ತಾನೆ ಎಂಬುದು ಇದರರ್ಥವಲ್ಲ. ಸೊದೋಮ್ ಗೊಮೋರಗಳ ವಿಷಯವಾದ ‘ದೂರಿನ ಕೂಗನ್ನು’ ಅವನು ಅಲಕ್ಷಿಸದೆ, ಆ ದುಷ್ಟ ನಗರಗಳನ್ನು ನಾಶಮಾಡಿಬಿಟ್ಟನು. (ಆದಿಕಾಂಡ 18:20, 21, NW; ಆದಿಕಾಂಡ 19:24, 25) ಸಾ.ಶ. 33ನೆಯ ಪಂಚಾಶತ್ತಮದ ಸ್ವಲ್ಪ ಸಮಯದ ನಂತರ ಯೆರೂಸಲೇಮಿನಲ್ಲಿ, “ಗ್ರೀಕ್ಭಾಷೆಯವರು ಇಬ್ರಿಯ ಭಾಷೆಯವರ ಮೇಲೆ—ದಿನದಿನದ ಉಪಚಾರದಲ್ಲಿ ನಮ್ಮ ವಿಧವೆಯರನ್ನು ಸರಿಯಾಗಿ ಪರಾಂಬರಿಸುವದಿಲ್ಲವೆಂದು ಗುಣುಗುಟ್ಟಿದರು.” ಇದರ ಫಲಿತಾಂಶವಾಗಿ, “ಹನ್ನೆರಡು ಮಂದಿ ಅಪೊಸ್ತಲರು” ಆಹಾರದ ವಿತರಣೆಯ ಆವಶ್ಯಕ “ಕೆಲಸದ” ಮೇಲೆ “ಏಳು ಮಂದಿಯನ್ನು” ನೇಮಿಸುವ ಮೂಲಕ ಆ ಸಮಸ್ಯೆಯನ್ನು ಬಗೆಹರಿಸಿದರು. (ಅ. ಕೃತ್ಯಗಳು 6:1-6) ಸದ್ಯದ ದಿನದ ಹಿರಿಯರು ಸಹ ನ್ಯಾಯಸಮ್ಮತವಾದ ದೂರುಗಳಿಗೆ ‘ತಮ್ಮ ಕಿವಿಮುಚ್ಚಿಕೊಳ್ಳ’ಬಾರದು. (ಜ್ಞಾನೋಕ್ತಿ 21:13) ಮತ್ತು ಜೊತೆ ಆರಾಧಕರನ್ನು ಟೀಕಿಸುವ ಬದಲು, ಹಿರಿಯರು ಪ್ರೋತ್ಸಾಹವನ್ನೀಯುವ ಮತ್ತು ಭಕ್ತಿವೃದ್ಧಿಮಾಡುವ ಮಾತುಗಳನ್ನು ಆಡುವವರಾಗಿರಬೇಕು.—1 ಕೊರಿಂಥ 8:1.
14. ಗುಣುಗುಟ್ಟುವಿಕೆಯಿಂದ ದೂರವಿರಲು ವಿಶೇಷವಾಗಿ ಯಾವ ಗುಣವು ಅಗತ್ಯ?
14 ನಾವೆಲ್ಲರೂ ಗುಣುಗುಟ್ಟುವಿಕೆಯಿಂದ ದೂರವಿರಬೇಕು. ಯಾಕೆಂದರೆ ದೂರುವಿಕೆಯ ಮನೋವೃತ್ತಿಯು ಆತ್ಮಿಕವಾಗಿ ಹಾನಿಯನ್ನು ತರುತ್ತದೆ. ಅಂಥ ಮನೋವೃತ್ತಿಯು ನಮ್ಮ ಐಕ್ಯವನ್ನು ಭಂಗಗೊಳಿಸಬಲ್ಲದು. ಅದರ ಬದಲು, ಪವಿತ್ರಾತ್ಮವು ಯಾವಾಗಲೂ ನಮ್ಮಲ್ಲಿ ಪ್ರೀತಿಯನ್ನು ಉತ್ಪಾದಿಸುವಂತೆ ಅನುಮತಿಸೋಣ. (ಗಲಾತ್ಯ 5:22) ‘ಪ್ರೀತಿಸಬೇಕೆಂಬ ರಾಜಾಜ್ಞೆಯನ್ನು’ ಪಾಲಿಸುವುದು, ನಾವು ಒಂದೇ ಮನಸ್ಸಿನಿಂದ ಯೆಹೋವನನ್ನು ಸೇವಿಸುತ್ತಾ ಇರುವಂತೆ ಸಹಾಯಮಾಡುವುದು.—ಯಾಕೋಬ 2:8; 1 ಕೊರಿಂಥ 13:4-8; 1 ಪೇತ್ರ 4:8.
ಮಾನಹಾನಿಮಾಡುವ ಮಾತಿನ ವಿರುದ್ಧ ಎಚ್ಚರವಾಗಿರ್ರಿ
15. ಹರಟೆಮಾತು ಮತ್ತು ಮಾನಹಾನಿಮಾಡುವ ಮಾತಿನ ನಡುವಣ ವ್ಯತ್ಯಾಸವೇನು?
15 ಗುಣುಗುಟ್ಟುವಿಕೆಯು, ಹಾನಿಕರವಾದ ಹರಟೆಮಾತಿಗೆ ನಡೆಸಬಲ್ಲದು. ಆದುದರಿಂದ ನಾವೇನು ಹೇಳುತ್ತೇವೊ ಅದರ ಬಗ್ಗೆ ಜಾಗ್ರತೆ ವಹಿಸಬೇಕು. ಹರಟೆಮಾತು, ಜನರ ಕುರಿತಾಗಿಯೂ ಅವರ ಕಾರ್ಯಕಲಾಪಗಳ ಕುರಿತಾಗಿಯೂ ನಿಷ್ಪ್ರಯೋಜಕವಾದ ಮಾತುಕತೆಯಾಗಿದೆ. ಆದರೆ ಮಾನಹಾನಿಕರವಾದ ಮಾತು, ಇನ್ನೊಬ್ಬ ವ್ಯಕ್ತಿಯ ಹೆಸರಿಗೆ ಮಸಿಯನ್ನು ಬಳಿಯುವ ಉದ್ದೇಶವುಳ್ಳ ಸುಳ್ಳು ವದಂತಿಯಾಗಿದೆ. ಅಂಥ ಮಾತು ದ್ವೇಷಭರಿತವೂ, ದೈವಿಕವಲ್ಲದ್ದೂ ಆಗಿದೆ. ಹೀಗಿರುವುದರಿಂದಲೇ ದೇವರು ಇಸ್ರಾಯೇಲ್ಯರಿಗೆ ಹೇಳಿದ್ದು: “ಪರಿಚಯವುಳ್ಳವರಲ್ಲಿ ಒಬ್ಬರ ಮೇಲೊಬ್ಬರು ಚಾಡಿಹೇಳಬಾರದು.”—ಯಾಜಕಕಾಂಡ 19:16.
16. ನಿರ್ದಿಷ್ಟ ಹರಟೆಗಾರರ ಕುರಿತಾಗಿ ಪೌಲನು ಏನು ಹೇಳಿದನು, ಮತ್ತು ಅವನ ಸಲಹೆಯಿಂದ ನಾವು ಹೇಗೆ ಪ್ರಭಾವಿಸಲ್ಪಡಬೇಕು?
16 ಅಪ್ರಯೋಜಕ ಮಾತುಕತೆಯು ಮಾನಹಾನಿಮಾಡುವಂಥ ಮಾತಿಗೆ ನಡೆಸಬಲ್ಲದಾದುದರಿಂದ, ಪೌಲನು ಕೆಲವು ಮಂದಿ ಹರಟೆಗಾರರ ವಿರುದ್ಧ ಧೈರ್ಯದಿಂದ ಮಾತಾಡಿದನು. ಸಭೆಯಿಂದ ನೆರವನ್ನು ಪಡೆಯಲು ಅರ್ಹರಾಗಿರುವ ವಿಧವೆಯರ ಬಗ್ಗೆ ತಿಳಿಸಿದ ನಂತರ ಅವನು ಇನ್ನೂ ಕೆಲವೊಂದು ರೀತಿಯ ವಿಧವೆಯರಿಗೆ ಸೂಚಿಸಿ ಮಾತಾಡಿದನು. ಇವರು “ಮನೆಮನೆಗೆ ತಿರುಗಾಡುತ್ತಾ ಮೈಗಳ್ಳತನವನ್ನು ಕಲಿಯುತ್ತಾರೆ; ಮೈಗಳ್ಳರಾಗುವದಲ್ಲದೆ ಹರಟೆಮಾತಾಡುವವರೂ ಇತರರ ಕೆಲಸದಲ್ಲಿ ಕೈಹಾಕುವವರೂ ಆಗಿ ಆಡಬಾರದ ಮಾತುಗಳನ್ನಾಡುತ್ತಾರೆ.” (1 ತಿಮೊಥೆಯ 5:11-15) ಮಾನಹಾನಿಮಾಡುವಂಥ ಮಾತಿಗೆ ನಡೆಸಬಲ್ಲ ರೀತಿಯ ಮಾತುಕತೆಯ ವಿಷಯದಲ್ಲಿ ತನಗೆ ಬಲಹೀನತೆಯಿದೆ ಎಂದು ಒಬ್ಬ ಕ್ರೈಸ್ತ ಸ್ತ್ರೀಗೆ ಗೊತ್ತಾಗುವಾಗ, ಅವಳು ‘ಗೌರವವುಳ್ಳವಳಾಗಿರಲು ಮತ್ತು ಚಾಡಿಹೇಳದವಳಾಗಿರಲು’ ಪೌಲನು ಕೊಟ್ಟ ಬುದ್ಧಿವಾದಕ್ಕೆ ಕಿವಿಗೊಡಬೇಕು. (1 ತಿಮೊಥೆಯ 3:11) ಆದರೆ ಕ್ರೈಸ್ತ ಪುರುಷರು ಸಹ ಹಾನಿಕರವಾದ ಹರಟೆಮಾತಿನ ವಿರುದ್ಧ ಎಚ್ಚರಿಕೆ ವಹಿಸಬೇಕು ಎಂಬುದು ನಿಜ.—ಜ್ಞಾನೋಕ್ತಿ 10:19.
ತೀರ್ಪುಮಾಡುವುದನ್ನು ನಿಲ್ಲಿಸಿರಿ!
17, 18. (ಎ) ನಮ್ಮ ಸಹೋದರನ ತೀರ್ಪುಮಾಡುವುದರ ಬಗ್ಗೆ ಯೇಸು ಏನು ಹೇಳಿದನು? (ಬಿ) ತೀರ್ಪುಮಾಡುವುದರ ಕುರಿತಾದ ಯೇಸುವಿನ ಮಾತುಗಳನ್ನು ನಾವು ಹೇಗೆ ಅನ್ವಯಿಸಿಕೊಳ್ಳಬಹುದು?
17 ನಾವು ಯಾರ ಕುರಿತಾಗಿಯೂ ಮಾನಹಾನಿಮಾಡುವ ಮಾತುಗಳನ್ನಾಡದೇ ಇರಬಹುದು. ಆದರೆ ಅದೇ ಸಮಯದಲ್ಲಿ ಒಬ್ಬ ವ್ಯಕ್ತಿಯ ಬಗ್ಗೆ ತೀರ್ಪುಮಾಡುವುದರಿಂದ ದೂರವಿರಲಿಕ್ಕಾಗಿಯೂ ನಾವು ತುಂಬ ಪ್ರಯತ್ನ ಮಾಡಬೇಕಾಗಬಹುದು. ಈ ರೀತಿಯ ಮನೋವೃತ್ತಿಯನ್ನು ಯೇಸು ಖಂಡಿಸುತ್ತಾ ಹೇಳಿದ್ದು: “ತೀರ್ಪುಮಾಡ ಬೇಡಿರಿ; ಹಾಗೆ ನಿಮಗೂ ತೀರ್ಪಾಗುವದಿಲ್ಲ. ನೀವು ಮಾಡುವ ತೀರ್ಪಿಗೆ ಸರಿಯಾಗಿ ನಿಮಗೂ ತೀರ್ಪಾಗುವದು; ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು. ನೀನು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯೋಚಿಸುವದೇಕೆ? ನೀನು ನಿನ್ನ ಸಹೋದರನಿಗೆ—ನಿನ್ನ ಕಣ್ಣಿನೊಳಗಿಂದ ರವೆಯನ್ನು ತೆಗೆಯುತ್ತೇನೆ ಬಾ ಎಂದು ಹೇಳುವದು ಹೇಗೆ? ನಿನ್ನ ಕಣ್ಣಿನಲ್ಲಿ ತೊಲೆಯದೆಯಲ್ಲಾ. ಕಪಟಿಯೇ, ಮೊದಲು ನಿನ್ನ ಕಣ್ಣಿನೊಳಗಿಂದ ತೊಲೆಯನ್ನು ತೆಗೆದುಹಾಕಿಕೋ; ಆ ಮೇಲೆ ನಿನ್ನ ಸಹೋದರನ ಕಣ್ಣಿನೊಳಗಿಂದ ರವೆಯನ್ನು ತೆಗೆಯುವದಕ್ಕೆ ಚೆನ್ನಾಗಿ ಕಾಣಿಸುವದು.”—ಮತ್ತಾಯ 7:1-5.
18 ಸರಿಯಾದ ತೀರ್ಪುಮಾಡುವ ನಮ್ಮ ಸ್ವಂತ ಸಾಮರ್ಥ್ಯವು ಒಂದು ಸಾಂಕೇತಿಕ “ತೊಲೆ”ಯಿಂದ ನಷ್ಟಗೊಂಡಿರುವಾಗ, ನಾವು ನಮ್ಮ ಸಹೋದರನ ಕಣ್ಣಿನೊಳಗಿರುವ “ರವೆಯನ್ನು” ತೆಗೆಯಲಿಕ್ಕಾಗಿ ಹೋಗುವ ಸಾಹಸವನ್ನು ಮಾಡಬಾರದು. ದೇವರು ಎಷ್ಟು ಕರುಣಾಮಯಿ ಆಗಿದ್ದಾನೆಂಬುದನ್ನು ನಾವು ನಿಜವಾಗಿಯೂ ಗ್ರಹಿಸಿದ್ದೇವಾದರೆ, ನಾವು ನಮ್ಮ ಆತ್ಮಿಕ ಸಹೋದರ ಸಹೋದರಿಯರ ತೀರ್ಪುಮಾಡುವ ಸ್ವಭಾವದವರಾಗಿರುವುದಿಲ್ಲ. ನಮ್ಮ ಸ್ವರ್ಗೀಯ ತಂದೆಯು ಅವರನ್ನು ಅರ್ಥಮಾಡಿಕೊಳ್ಳುವಷ್ಟು ಚೆನ್ನಾಗಿ ನಾವು ಅವರನ್ನು ಹೇಗೆ ಅರ್ಥಮಾಡಿಕೊಳ್ಳಸಾಧ್ಯವಿದೆ? ಆದುದರಿಂದ, “ತೀರ್ಪುಮಾಡ ಬೇಡಿರಿ; ಹಾಗೆ ನಿಮಗೂ ತೀರ್ಪಾಗುವದಿಲ್ಲ” ಎಂದು ಯೇಸು ನಮ್ಮನ್ನು ಎಚ್ಚರಿಸಿದ್ದರಲ್ಲಿ ಏನೂ ಆಶ್ಚರ್ಯವಿಲ್ಲ! ನಮ್ಮ ಸ್ವಂತ ಅಪರಿಪೂರ್ಣತೆಗಳ ಕುರಿತಾದ ಪ್ರಾಮಾಣಿಕ ವಿಮರ್ಶೆಯು, ದೇವರು ಅನ್ಯಾಯವೆಂದು ಪರಿಗಣಿಸುವಂಥ ತೀರ್ಪುಗಳನ್ನು ಮಾಡುವುದರಿಂದ ನಮ್ಮನ್ನು ತಡೆಗಟ್ಟುವುದು.
ದುರ್ಬಲರಾದರೂ ಸನ್ಮಾನಯೋಗ್ಯರು
19. ನಾವು ಜೊತೆ ವಿಶ್ವಾಸಿಗಳನ್ನು ಹೇಗೆ ದೃಷ್ಟಿಸಬೇಕು?
19 ಜೊತೆ ವಿಶ್ವಾಸಿಗಳೊಂದಿಗೆ ಒಂದೇ ಮನಸ್ಸಿನಿಂದ ದೇವರನ್ನು ಸೇವಿಸುವುದು ನಮ್ಮ ದೃಢನಿರ್ಧಾರವಾಗಿರುವಲ್ಲಿ, ನಾವು ತೀರ್ಪುಮಾಡುವವರು ಆಗಿರುವುದರಿಂದ ದೂರವಿರುವೆವು. ಅದರ ಬದಲು ಅವರಿಗೆ ಮಾನಮರ್ಯಾದೆಯನ್ನು ತೋರಿಸುವುದರಲ್ಲಿ ಮುಂದಿರುವೆವು. (ರೋಮಾಪುರ 12:10) ವಾಸ್ತವದಲ್ಲಿ ನಾವು ನಮ್ಮ ಪ್ರಯೋಜನದ ಕುರಿತು ಚಿಂತಿಸದೆ, ಅವರ ಪ್ರಯೋಜನಕ್ಕಾಗಿ ಕೆಲಸಮಾಡುತ್ತಾ, ಅವರ ಪರವಾಗಿ ದೀನವಾದ ಕೆಲಸಗಳನ್ನೂ ಆನಂದದಿಂದ ಮಾಡುವೆವು. (ಯೋಹಾನ 13:12-17; 1 ಕೊರಿಂಥ 10:24) ಅಂಥ ಒಳ್ಳೇ ಮನೋವೃತ್ತಿಯನ್ನು ನಾವು ಹೇಗೆ ಕಾಪಾಡಿಕೊಳ್ಳುವೆವು? ಪ್ರತಿಯೊಬ್ಬ ವಿಶ್ವಾಸಿಯು ಯೆಹೋವನಿಗೆ ಅಮೂಲ್ಯನಾಗಿದ್ದಾನೆ ಮತ್ತು ಮಾನವ ದೇಹದ ಪ್ರತಿಯೊಂದು ಅಂಗವು ಪರಾವಲಂಬಿತವಾಗಿರುವಂತೆಯೇ ನಮಗೂ ಪರಸ್ಪರರ ಅಗತ್ಯವಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಮೂಲಕವೇ.—1 ಕೊರಿಂಥ 12:14-27.
20, 21. ಎರಡನೆಯ ತಿಮೊಥೆಯ 2:20, 21ರ ಮಾತುಗಳು ನಮಗೆ ಏನನ್ನು ಅರ್ಥೈಸುತ್ತವೆ?
20 ಶುಶ್ರೂಷೆಯೆಂಬ ವೈಭವಯುತವಾದ ನಿಕ್ಷೇಪವನ್ನು ಪಡೆದುಕೊಂಡಿರುವ ಕ್ರೈಸ್ತರು ದುರ್ಬಲವಾದ ಮಣ್ಣಿನ ಪಾತ್ರೆಗಳಾಗಿದ್ದಾರೆಂಬುದು ಒಪ್ಪತಕ್ಕ ಮಾತು. (2 ಕೊರಿಂಥ 4:7) ಯೆಹೋವನಿಗೆ ಸ್ತುತಿಯನ್ನು ತರುವಂಥ ರೀತಿಯಲ್ಲಿ ಈ ಪವಿತ್ರ ಚಟುವಟಿಕೆಯನ್ನು ನಾವು ನಡೆಸಬೇಕಾದರೆ, ನಾವು ಆತನ ಮುಂದೆಯೂ ಆತನ ಮಗನ ಮುಂದೆಯೂ ಒಂದು ಸನ್ಮಾನಯೋಗ್ಯ ನಿಲುವನ್ನು ಕಾಪಾಡಿಕೊಳ್ಳಬೇಕು. ನೈತಿಕವಾಗಿಯೂ ಆತ್ಮಿಕವಾಗಿಯೂ ಶುದ್ಧರಾಗಿ ಉಳಿಯುವ ಮೂಲಕ ಮಾತ್ರ ನಾವು ದೇವರ ಬಳಕೆಗಾಗಿ ಸನ್ಮಾನಯೋಗ್ಯ ಪಾತ್ರೆಗಳಾಗಿ ಉಳಿಯಬಲ್ಲೆವು. ಈ ವಿಷಯದಲ್ಲಿ ಪೌಲನು ಬರೆದುದು: “ದೊಡ್ಡ ಮನೆಯಲ್ಲಿ ಬೆಳ್ಳಿಬಂಗಾರದ ಪಾತ್ರೆಗಳಲ್ಲದೆ ಮರದ ಪಾತ್ರೆಗಳೂ ಮಣ್ಣಿನ ಪಾತ್ರೆಗಳೂ ಇರುತ್ತವೆ; ಅವುಗಳಲ್ಲಿ ಕೆಲವು ಉತ್ತಮವಾದ [“ಸನ್ಮಾನಯೋಗ್ಯ,” NW] ಬಳಕೆಗೂ ಕೆಲವು ಹೀನವಾದ ಬಳಕೆಗೂ ಬರುತ್ತವೆ. ಹೀಗಿರಲಾಗಿ ಒಬ್ಬನು ಹೀನ ನಡತೆಯುಳ್ಳವರ ಸಹವಾಸವನ್ನು ಬಿಟ್ಟು ತನ್ನನ್ನು ಶುದ್ಧಮಾಡಿಕೊಂಡರೆ ಅವನು ಉತ್ತಮವಾದ [“ಸನ್ಮಾನಯೋಗ್ಯ,” NW] ಬಳಕೆಗೆ ಯೋಗ್ಯನಾಗಿರುವನು; ಅವನು ದೇವರ ಸೇವೆಗೆ ಪ್ರತಿಷ್ಠಿತನಾಗಿಯೂ ಯಜಮಾನನಿಗೆ ಉಪಯುಕ್ತವಾಗಿಯೂ ಸಕಲಸತ್ಕ್ರಿಯೆಗಳನ್ನು ಮಾಡುವದಕ್ಕೆ ಸಿದ್ಧನಾಗಿಯೂ ಇರುವನು.”—2 ತಿಮೊಥೆಯ 2:20, 21.
21 ದೇವರ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ ನಡೆದುಕೊಳ್ಳದಂಥ ವ್ಯಕ್ತಿಗಳು, ‘ಹೀನವಾದ ಬಳಕೆಯ ಪಾತ್ರೆಗಳಾಗಿದ್ದಾರೆ.’ ಆದರೆ ದೈವಭಕ್ತಿಯ ಮಾರ್ಗಕ್ರಮವನ್ನು ಬೆನ್ನಟ್ಟುವ ಮೂಲಕ, ನಾವು ‘ಯೆಹೋವನ ಸೇವೆಗಾಗಿ ಮತ್ತು ಸಕಲ ಸತ್ಕ್ರಿಯೆಗಾಗಿ ಸಿದ್ಧವಾಗಿರುವ, ಪವಿತ್ರೀಕರಿಸಲ್ಪಟ್ಟಿರುವ ಇಲ್ಲವೆ ಮೀಸಲಾಗಿರಿಸಲ್ಪಟ್ಟಿರುವ ಸನ್ಮಾನಯೋಗ್ಯ ಉದ್ದೇಶಕ್ಕಾಗಿರುವ ಪಾತ್ರೆಗಳಾಗಿರುವೆವು.’ ಆದುದರಿಂದ ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳುವುದು ಉತ್ತಮ: ‘ನಾನು ಒಂದು “ಸನ್ಮಾನಯೋಗ್ಯ ಬಳಕೆಯ ಪಾತ್ರೆ” ಆಗಿದ್ದೇನೊ? ನಾನು ಜೊತೆ ವಿಶ್ವಾಸಿಗಳ ಮೇಲೆ ಒಳ್ಳೇ ಪ್ರಭಾವವನ್ನು ಬೀರುತ್ತಿದ್ದೇನೊ? ಜೊತೆ ಆರಾಧಕರೊಂದಿಗೆ ಒಂದೇ ಮನಸ್ಸಿನಿಂದ ಕೆಲಸಮಾಡುವ ಒಬ್ಬ ಸಭಾ ಸದಸ್ಯನು ನಾನಾಗಿದ್ದೇನೊ?’
ಒಂದೇ ಮನಸ್ಸಿನಿಂದ ಸೇವಿಸುತ್ತಾ ಇರ್ರಿ
22. ಕ್ರೈಸ್ತ ಸಭೆಯನ್ನು ಯಾವುದಕ್ಕೆ ಹೋಲಿಸಬಹುದು?
22 ಕ್ರೈಸ್ತ ಸಭೆಯು ಒಂದು ಕುಟುಂಬದಂಥ ಏರ್ಪಾಡಾಗಿದೆ. ಒಂದು ಕುಟುಂಬದಲ್ಲಿ, ಎಲ್ಲಾ ಸದಸ್ಯರು ಯೆಹೋವನನ್ನು ಆರಾಧಿಸುತ್ತಿರುವಾಗ ಪ್ರೀತಿಯ, ಸಹಾಯಭಾವದ ಮತ್ತು ಹಿತಕರವಾದ ವಾತಾವರಣವಿರುತ್ತದೆ. ಒಂದು ಕುಟುಂಬದಲ್ಲಿ ಭಿನ್ನ ಭಿನ್ನ ವ್ಯಕ್ತಿತ್ವವಿರುವ ಹಲವಾರು ವ್ಯಕ್ತಿಗಳಿರಬಹುದಾದರೂ, ಎಲ್ಲರಿಗೂ ತಮ್ಮದೇ ಆದ ಸನ್ಮಾನಯೋಗ್ಯ ಸ್ಥಾನವಿದೆ. ಸಭೆಯಲ್ಲೂ ಸನ್ನಿವೇಶವು ಇದೇ ರೀತಿಯದ್ದಾಗಿರುತ್ತದೆ. ನಾವೆಲ್ಲರೂ ಭಿನ್ನರಾಗಿದ್ದೇವಾದರೂ ಮತ್ತು ಅಪರಿಪೂರ್ಣರಾಗಿದ್ದೇವಾದರೂ, ದೇವರು ನಮ್ಮನ್ನು ಕ್ರಿಸ್ತನ ಮುಖಾಂತರ ತನ್ನೆಡೆಗೆ ಸೆಳೆದಿದ್ದಾನೆ. (ಯೋಹಾನ 6:44; 14:6) ಯೆಹೋವನೂ ಯೇಸುವೂ ನಮ್ಮನ್ನು ಪ್ರೀತಿಸುತ್ತಾರೆ ಮತ್ತು ಒಂದು ಐಕ್ಯ ಕುಟುಂಬದೋಪಾದಿ ನಾವು ಖಂಡಿತವಾಗಿಯೂ ಪರಸ್ಪರರಿಗೆ ಪ್ರೀತಿಯನ್ನು ತೋರಿಸಬೇಕು.—1 ಯೋಹಾನ 4:7-11.
23. ನಾವೇನನ್ನು ನೆನಪಿನಲ್ಲಿಡಬೇಕು ಮತ್ತು ಏನನ್ನು ಮಾಡಲು ದೃಢನಿರ್ಧಾರವುಳ್ಳವರಾಗಿರಬೇಕು?
23 ಕುಟುಂಬದಂಥ ಕ್ರೈಸ್ತ ಸಭೆಯು, ನಾವು ಯೋಗ್ಯವಾಗಿಯೇ ನಿಷ್ಠೆಯನ್ನು ನಿರೀಕ್ಷಿಸಬಹುದಾದ ಸ್ಥಳವೂ ಆಗಿದೆ. ಅಪೊಸ್ತಲ ಪೌಲನು ಬರೆದುದು: “ಹೀಗಿರಲಾಗಿ ಪುರುಷರು ಎಲ್ಲಾ ಸ್ಥಳಗಳಲ್ಲಿ ಕೋಪವೂ ವಾಗ್ವಾದವೂ ಇಲ್ಲದವರಾಗಿ ಭಕ್ತಿಪೂರ್ವಕವಾಗಿಯೇ [“ನಿಷ್ಠೆಯಿಂದಲೇ,” NW] ಕೈಗಳನ್ನೆತ್ತಿ ಪ್ರಾರ್ಥಿಸಬೇಕೆಂದು ಅಪೇಕ್ಷಿಸುತ್ತೇನೆ.” (1 ತಿಮೊಥೆಯ 2:8) ಈ ರೀತಿಯಲ್ಲಿ ಪೌಲನು ನಿಷ್ಠೆಯನ್ನು, ಕ್ರೈಸ್ತರು ಕೂಡಿಬರುವ ‘ಎಲ್ಲಾ ಸ್ಥಳಗಳಲ್ಲಿನ’ ಸಾರ್ವಜನಿಕ ಪ್ರಾರ್ಥನೆಯೊಂದಿಗೆ ಜೋಡಿಸಿದನು. ಕೇವಲ ನಿಷ್ಠಾವಂತ ಪುರುಷರು ಸಭೆಯನ್ನು ಸಾರ್ವಜನಿಕ ಪ್ರಾರ್ಥನೆಯಲ್ಲಿ ಪ್ರತಿನಿಧಿಸಬೇಕು. ಆದರೆ ನಾವೆಲ್ಲರು ಸಹ ಆತನಿಗೆ ಮತ್ತು ಪರಸ್ಪರರಿಗೆ ನಿಷ್ಠರಾಗಿರಬೇಕೆಂಬುದನ್ನು ದೇವರು ಅಪೇಕ್ಷಿಸುತ್ತಾನೆಂಬ ಮಾತು ನಿಜ. (ಪ್ರಸಂಗಿ 12:13, 14) ಆದುದರಿಂದ ಮಾನವ ದೇಹದ ಅಂಗಗಳಂತೆ ನಾವೆಲ್ಲರೂ ಸಾಮರಸ್ಯದಿಂದ ಜೊತೆಗೂಡಿ ಕೆಲಸಮಾಡುವ ದೃಢನಿರ್ಧಾರವುಳ್ಳವರಾಗಿರೋಣ. ಯೆಹೋವನ ಆರಾಧಕರ ಕುಟುಂಬದ ಭಾಗದೋಪಾದಿ ನಾವು ಐಕ್ಯವಾಗಿ ಸೇವೆಸಲ್ಲಿಸೋಣ. ಎಲ್ಲಕ್ಕಿಂತಲೂ ಮಿಗಿಲಾಗಿ, ನಮಗೆ ಪರಸ್ಪರರ ಅಗತ್ಯವಿದೆ ಮತ್ತು ನಾವು ಒಂದೇ ಮನಸ್ಸಿನಿಂದ ಯೆಹೋವನನ್ನು ಸೇವಿಸುತ್ತಾ ಇರುವಲ್ಲಿ, ದೈವಿಕ ಅನುಗ್ರಹ ಹಾಗೂ ಆಶೀರ್ವಾದಗಳನ್ನು ಅನುಭವಿಸುವೆವು ಎಂಬುದನ್ನು ನೆನಪಿನಲ್ಲಿಡೋಣ.
ನೀವು ಹೇಗೆ ಉತ್ತರಿಸುವಿರಿ?
• ಯೆಹೋವನ ಜನರು ಒಂದೇ ಮನಸ್ಸಿನಿಂದ ಆತನ ಸೇವೆಮಾಡಲು ಶಕ್ತರಾಗುವುದು ಹೇಗೆ?
• ಕ್ರೈಸ್ತರು ಪಕ್ಷಪಾತದಿಂದ ದೂರವಿರುತ್ತಾರೆ ಏಕೆ?
• ನಾವು ಜೊತೆ ವಿಶ್ವಾಸಿಗಳಿಗೆ ಏಕೆ ಮಾನಮರ್ಯಾದೆ ಸಲ್ಲಿಸಬೇಕು?
[ಪುಟ 15ರಲ್ಲಿರುವ ಚಿತ್ರ]
“ದೇವರು ಪಕ್ಷಪಾತಿಯಲ್ಲ” ಎಂಬುದು ಪೇತ್ರನಿಗೆ ತಿಳಿದುಬಂತು
[ಪುಟ 16ರಲ್ಲಿರುವ ಚಿತ್ರ]
ದೇವರು ಮಿರ್ಯಾಮಳನ್ನು ಅವಮಾನಕ್ಕೊಳಪಡಿಸಿದ್ದೇಕೆಂದು ನಿಮಗೆ ಗೊತ್ತೊ?
[ಪುಟ 18ರಲ್ಲಿರುವ ಚಿತ್ರ]
ನಿಷ್ಠಾವಂತ ಕ್ರೈಸ್ತರು ಆನಂದದಿಂದ ಒಂದೇ ಮನಸ್ಸಿನಿಂದ ಯೆಹೋವನ ಸೇವೆಮಾಡುತ್ತಾರೆ