ಯೆಹೋವನ ಆನಂದವು ನಮ್ಮ ಆಶ್ರಯದುರ್ಗವಾಗಿದೆ
“ಈ ದಿನವು ನಮ್ಮ ಕರ್ತನಿಗೆ ಪ್ರತಿಷ್ಠಿತ ದಿನವಾಗಿರುವದರಿಂದ ವ್ಯಸನಪಡಬೇಡಿರಿ; ಯೆಹೋವನ ಆನಂದವೇ ನಿಮ್ಮ ಆಶ್ರಯ (“ಆಶ್ರಯದುರ್ಗ,” NW) ವಾಗಿದೆ.”—ನೆಹೆಮೀಯ 8:10.
1, 2. (ಎ) ಒಂದು ಆಶ್ರಯದುರ್ಗವು ಏನಾಗಿದೆ? (ಬಿ) ತಾನು ಯೆಹೋವನಲ್ಲಿ ಶರಣು ತೆಗೆದುಕೊಂಡನೆಂದು ದಾವೀದನು ಹೇಗೆ ತೋರಿಸಿದನು?
ಯೆಹೋವನು ಅಸದೃಶವಾದ ಒಂದು ಆಶ್ರಯದುರ್ಗವಾಗಿದ್ದಾನೆ. ಮತ್ತು ಒಂದು ಆಶ್ರಯದುರ್ಗವು ಏನಾಗಿದೆ? ಅದೊಂದು ಬಲಪಡಿಸಲ್ಪಟ್ಟ, ಭದ್ರತೆಯ ಅಥವಾ ಬದುಕುಳಿಯುವ ಸ್ಥಳವಾಗಿದೆ. ಪ್ರಾಚೀನ ಇಸ್ರಾಯೇಲಿನ ದಾವೀದನು, ದೇವರನ್ನು ತನ್ನ ಆಶ್ರಯದುರ್ಗವಾಗಿ ಪರಿಗಣಿಸಿದನು. ದೃಷ್ಟಾಂತಕ್ಕೆ, ಯೆಹೋವನು ಅವನನ್ನು ಇಸ್ರಾಯೇಲಿನ ಅರಸನಾದ “ಸೌಲನ ಕೈಯಿಂದಲೂ ಎಲ್ಲಾ ಶತ್ರುಗಳ ಕೈಯಿಂದಲೂ ತಪ್ಪಿ” ಸಿದಾಗ, ಮಹೋನ್ನತನಿಗೆ ದಾವೀದನು ನಿರ್ದೇಶಿಸಿದ ಗೀತೆಯನ್ನು ಪರಿಗಣಿಸಿರಿ.—ಕೀರ್ತನೆ 18, ಶಿರೋನಾಮೆ.
2 ಪ್ರೇರಿಸುವಂತಹ ಆ ಗೀತೆಯನ್ನು ದಾವೀದನು ಈ ಮಾತುಗಳಿಂದ ಆರಂಭಿಸಿದನು: “ನನ್ನ ಬಲವಾಗಿರುವ ಯೆಹೋವನೇ, ನಿನ್ನಲ್ಲಿಯೇ ಮಮತೆಯಿಡುತ್ತೇನೆ. ಯೆಹೋವನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನ ವಿಮೋಚಕನೂ ನನ್ನ ದೇವರೂ ನನ್ನ ಆಶ್ರಯಗಿರಿಯೂ ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ ನನ್ನ ದುರ್ಗವೂ ಆಗಿದ್ದಾನೆ.” (ಕೀರ್ತನೆ 18:1, 2) ಅನ್ಯಾಯವಾಗಿ ಗಡೀಪಾರು ಮಾಡಲ್ಪಟ್ಟ ಮತ್ತು ಅರಸನಾದ ಸೌಲನ ಮೂಲಕ ಬೆನ್ನಟ್ಟಲ್ಪಟ್ಟ ಪ್ರಾಮಾಣಿಕನಾದ ದಾವೀದನು, ಹೇಗೆ ಒಬ್ಬ ವ್ಯಕ್ತಿ ಯಾವುದೊ ಕೇಡಿನಿಂದ ಪಾರಾಗಲು ಬಲಪಡಿಸಲ್ಪಟ್ಟ ಸ್ಥಳವೊಂದರೊಳಗೆ ಓಡಿಹೋಗಬಹುದೊ ಹಾಗೆಯೇ ಯೆಹೋವನಲ್ಲಿ ಆಶ್ರಯ ಪಡೆದನು.
3. ಎಜ್ರನ ದಿನದ ಯೆಹೂದ್ಯರು ‘ಮಹಾ ಹರ್ಷಿಸುವಿಕೆಯನ್ನು’ ಯಾಕೆ ಅನುಭವಿಸಿದರು?
3 ಯೆಹೋವನು ಕೊಡುವಂತಹ ಆನಂದವು, ಸಮಗ್ರತೆಯನ್ನು ಕಾಪಾಡಿಕೊಳ್ಳುವವರೋಪಾದಿ ಆತನ ಮಾರ್ಗದಲ್ಲಿ ನಡೆಯುವವರಿಗೆ ವಿಫಲವಾಗದ ಆಶ್ರಯದುರ್ಗವಾಗಿದೆ. (ಜ್ಞಾನೋಕ್ತಿ 2:6-8; 10:29) ದೇವದತ್ತ ಆನಂದವನ್ನು ಪಡೆಯಲು, ನಿಶ್ಚಯವಾಗಿಯೂ, ಜನರು ದೈವಿಕ ಚಿತ್ತವನ್ನು ಮಾಡಬೇಕು. ಈ ಸಂಬಂಧದಲ್ಲಿ, ಸಾ.ಶ.ಪೂ. 468 ರಲ್ಲಿ ಯೆರೂಸಲೇಮಿನಲ್ಲಿ ಏನು ಸಂಭವಿಸಿತೆಂಬುದನ್ನು ಪರಿಗಣಿಸಿರಿ. ನಕಲುಗಾರನಾದ ಎಜ್ರನು ಮತ್ತು ಇತರರು ನಿಯಮದ ಅರ್ಥಪೂರ್ಣ ವಾಚನದ ಮುಖಾಂತರ ತಿಳಿವಳಿಕೆಯನ್ನು ನೀಡಿದರು. ತದನಂತರ ಜನರು ಪ್ರೇರೇಪಿಸಲ್ಪಟ್ಟದ್ದು: “ಹೋಗಿ ಮೃಷ್ಟಾನ್ನವನ್ನೂ ಮಧುರಪಾನವನ್ನೂ ತೆಗೆದುಕೊಳ್ಳಿರಿ; ತಮಗೋಸ್ಕರ ಏನೂ ಸಿದ್ಧಮಾಡದವರಿಗೆ ಭಾಗಗಳನ್ನು ಕಳುಹಿಸಿರಿ. ಈ ದಿನವು ನಮ್ಮ ಕರ್ತನಿಗೆ ಪ್ರತಿಷ್ಠಿತ ದಿನವಾಗಿರುವದರಿಂದ ವ್ಯಸನಪಡಬೇಡಿರಿ; ಯೆಹೋವನ ಆನಂದವೇ ನಿಮ್ಮ ಆಶ್ರಯದುರ್ಗವಾಗಿದೆ.” ತಾವು ಪಡೆದಿದ್ದ ಜ್ಞಾನವನ್ನು ಯೆಹೂದ್ಯರು ಅನ್ವಯಿಸಿದಂತೆ ಮತ್ತು ಪರ್ಣಶಾಲೆಯ ಆನಂದಕರ ಹಬ್ಬವನ್ನು ನಡೆಸಿದಂತೆ ‘ಮಹಾ ಹರ್ಷವು’ ಫಲಿಸಿತು. (ನೆಹೆಮೀಯ 8:1-12, NW) ‘ಯೆಹೋವನ ಆನಂದವನ್ನು ತಮ್ಮ ಆಶ್ರಯದುರ್ಗವನ್ನಾಗಿ’ ಪಡೆದಿದ್ದವರು, ಆತನ ಆರಾಧನೆ ಮತ್ತು ಸೇವೆಗಾಗಿ ಬಲವನ್ನು ಒಟ್ಟುಗೂಡಿಸಿದರು. ಯೆಹೋವನ ಆನಂದವು ಅವರ ಆಶ್ರಯದುರ್ಗವಾಗಿದುದ್ದರಿಂದ, ಇಂದು ದೇವರ ಜನರು ಸಹ ಆನಂದಿತರಾಗಿರಬೇಕೆಂದು ನಾವು ಅಪೇಕ್ಷಿಸತಕ್ಕದ್ದು. ಹಾಗಾದರೆ, ಆನಂದಕ್ಕಾಗಿ ಅವರ ಪ್ರಸ್ತುತ ದಿನದ ಕಾರಣಗಳಲ್ಲಿ ಕೆಲವು ಯಾವುವು?
‘ಆನಂದಿತರಲ್ಲದೆ ಮತ್ತೇನೂ ಅಲ್ಲ’
4. ಯೆಹೋವನ ಜನರಿಗೆ ಆನಂದದ ಒಂದು ಪ್ರಮುಖ ಮೂಲವು ಏನಾಗಿದೆ?
4 ಆನಂದಕ್ಕಾಗಿರುವ ಒಂದು ಪ್ರಮುಖವಾದ ಕಾರಣವು, ಒಟ್ಟಾಗಿ ಸೇರಿಬರಲು ಯೆಹೋವನು ಮಾಡುವ ಒದಗಿಸುವಿಕೆಯಾಗಿದೆ. ಇಸ್ರಾಯೇಲ್ಯರ ಮೂಲಕ ನಡೆಸಲಾದ ವಾರ್ಷಿಕ ಹಬ್ಬಗಳು ಅವರ ಹೃದಯಗಳಿಗೆ ಆನಂದವನ್ನು ತಂದಂತೆಯೇ, ಇಂದು ಯೆಹೋವನ ಸಾಕ್ಷಿಗಳ ಸಮ್ಮೇಳನಗಳು ಮತ್ತು ಅಧಿವೇಶನಗಳು ಅವರಿಗೆ ಆನಂದವನ್ನು ತರುತ್ತವೆ. ಇಸ್ರಾಯೇಲಿನ ಜನರಿಗೆ ಹೀಗೆ ಹೇಳಲಾಯಿತು: “ನೀವು ನಿಮ್ಮ ದೇವರಾದ ಯೆಹೋವನಿಗೆ, ಯೆಹೋವನೇ ಆರಿಸುವ ಸ್ಥಳದಲ್ಲಿ ಏಳು ದಿನಗಳಲ್ಲಿ ಜಾತ್ರೆ [ಪರ್ಣಶಾಲೆಗಳದ್ದು] ಯನ್ನು ಆಚರಿಸುವಿರಿ, ಏಕೆಂದರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲ ವ್ಯವಸಾಯದಲ್ಲಿ ಮತ್ತು ನಿಮ್ಮ ಪ್ರತಿಯೊಂದು ಕೈಕೆಲಸದಲ್ಲಿ ನಿಮ್ಮನ್ನು ಆಶೀರ್ವದಿಸುವನು, ಮತ್ತು ನೀವು ಆನಂದಿತರಲ್ಲದೆ ಮತ್ತೇನೂ ಆಗಿರಬಾರದು.” (ಧರ್ಮೋಪದೇಶಕಾಂಡ 16:13-15, NW) ಹೌದು, ಅವರು “ಆನಂದಿತರಲ್ಲದೆ ಮತ್ತೇನೂ ಆಗಿರಬಾರದು” ಎಂದು ದೇವರು ಬಯಸಿದನು. ಕ್ರೈಸ್ತರ ಕುರಿತೂ ಇದು ಸತ್ಯವಾಗಿದೆ, ಯಾಕೆಂದರೆ ಅಪೊಸ್ತಲ ಪೌಲನು ಜೊತೆ ವಿಶ್ವಾಸಿಗಳನ್ನು ಪ್ರೇರೇಪಿಸಿದ್ದು: “ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿರಿ ಎಂದು ತಿರಿಗಿ ಹೇಳುತ್ತೇನೆ.”—ಫಿಲಿಪ್ಪಿ 4:4.
5. (ಎ) ಆನಂದವು ಏನಾಗಿದೆ, ಮತ್ತು ಕ್ರೈಸ್ತರು ಅದನ್ನು ಹೇಗೆ ಸಂಪಾದಿಸುತ್ತಾರೆ? (ಬಿ) ಪರೀಕ್ಷೆಗಳ ಹೊರತೂ ನಾವು ಆನಂದವನ್ನು ಪಡೆಯುವುದು ಹೇಗೆ ಸಾಧ್ಯ?
5 ನಾವು ಆನಂದಿತರಾಗಿರಬೇಕೆಂದು ಯೆಹೋವನು ಬಯಸುವುದರಿಂದ, ಆತನ ಪವಿತ್ರಾತ್ಮದ ಫಲಗಳಲ್ಲಿ ಒಂದಾಗಿ, ಆತನು ನಮಗೆ ಆನಂದವನ್ನು ಕೊಡುತ್ತಾನೆ. (ಗಲಾತ್ಯ 5:22, 23) ಮತ್ತು ಆನಂದವು ಏನಾಗಿದೆ? ಅದು ಒಳ್ಳೆಯದರ ನಿರೀಕ್ಷಣೆಯಿಂದ ಅಥವಾ ಸಂಪಾದನೆಯಿಂದ ಉಂಟಾದ ಹರ್ಷಭರಿತ ಭಾವವಾಗಿದೆ. ಆನಂದವು ನಿಜವಾದ ಸಂತೋಷದ, ಅತ್ಯಾನಂದದ ಸ್ಥಿತಿಯೂ ಆಗಿದೆ. ದೇವರ ಪವಿತ್ರಾತ್ಮದ ಈ ಫಲವು ಪರೀಕ್ಷೆಯಲ್ಲಿ ನಮ್ಮನ್ನು ಎತ್ತಿಹಿಡಿಯುತ್ತದೆ. “ಆತನು [ಯೇಸು] ತನ್ನ ಮುಂದೆ ಇಟ್ಟಿದ್ದ ಸಂತೋಷ [“ಆನಂದ”, NW] ಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ.” (ಇಬ್ರಿಯ 12:2) ಶಿಷ್ಯನಾದ ಯಾಕೋಬನು ಬರೆದದ್ದು: “ನನ್ನ ಸಹೋದರರೇ, ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟುಮಾಡುತ್ತದೆಂದು ತಿಳಿದು ನೀವು ನಾನಾವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ಎಣಿಸಿರಿ.” ಆದರೆ ನಿರ್ದಿಷ್ಟವಾದೊಂದು ಪರೀಕ್ಷೆಯ ಕುರಿತು ಏನು ಮಾಡಬೇಕೆಂದು ನಮಗೆ ತಿಳಿಯದಿದ್ದಾಗ ಆಗೇನು? ಆಗ ಅದನ್ನು ನಿರ್ವಹಿಸಲು ವಿವೇಕಕ್ಕಾಗಿ ನಾವು ಭರವಸೆಯಿಂದ ಪ್ರಾರ್ಥಿಸಬಲ್ಲೆವು. ಸ್ವರ್ಗೀಯ ವಿವೇಕದೊಂದಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯುವುದು, ಸಮಸ್ಯೆಗಳನ್ನು ಬಗೆಹರಿಸುವಂತೆ ಅಥವಾ ಯೆಹೋವನ ಆನಂದವನ್ನು ಕಳೆದುಕೊಳ್ಳದೆ ನಿತ್ಯವಾಗಿರುವ ಪರೀಕ್ಷೆಗಳನ್ನು ನಿಭಾಯಿಸುವಂತೆ ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ.—ಯಾಕೋಬ 1:2-8.
6. ಆನಂದ ಮತ್ತು ಸತ್ಯಾರಾಧನೆಯ ನಡುವೆ ಎಂತಹ ಸಂಬಂಧವು ಅಸ್ತಿತ್ವದಲ್ಲಿದೆ?
6 ಯೆಹೋವನು ಕೊಡುವಂತಹ ಆನಂದವು ಸತ್ಯಾರಾಧನೆಯನ್ನು ಪ್ರವರ್ಧಿಸುವಂತೆ ನಮ್ಮನ್ನು ಬಲಪಡಿಸುತ್ತದೆ. ನೆಹೆಮೀಯನ ಮತ್ತು ಎಜ್ರನ ದಿನಗಳಲ್ಲಿ ನಡೆದದ್ದು ಅದೇ ವಿಷಯವೇ. ಯೆಹೋವನ ಆನಂದವನ್ನು ತಮ್ಮ ಆಶ್ರಯವಾಗಿ ಪಡೆದಿದ್ದ ಆ ಕಾಲದ ಯೆಹೂದ್ಯರು, ಸತ್ಯಾರಾಧನೆಯ ಅಭಿರುಚಿಗಳನ್ನು ಮುಂದುವರಿಸುವಂತೆ ಬಲಗೊಳಿಸಲ್ಪಟ್ಟರು. ಮತ್ತು ಯೆಹೋವನ ಆರಾಧನೆಯನ್ನು ಅವರು ಪ್ರವರ್ಧಿಸಿದಂತೆ, ಅವರ ಆನಂದವು ಹೆಚ್ಚಿತು. ಇಂದು ಕೂಡ ವಿಷಯವು ಹಾಗೆಯೆ ಇದೆ. ಯೆಹೋವನ ಆರಾಧಕರೋಪಾದಿ, ಮಹಾ ಹರ್ಷಿಸುವಿಕೆಗಾಗಿ ನಮಗೆ ಆಧಾರವು ಇದೆ. ಆನಂದಕ್ಕಾಗಿರುವ ನಮ್ಮ ಅನೇಕ ಕಾರಣಗಳಲ್ಲಿ ಇನ್ನೂ ಹೆಚ್ಚಿನವುಗಳನ್ನು ನಾವು ಈಗ ಪರಿಗಣಿಸೋಣ.
ಕ್ರಿಸ್ತನ ಮುಖಾಂತರ ದೇವರೊಂದಿಗೆ ಸಂಬಂಧ
7. ಯೆಹೋವನ ಸಂಬಂಧದಲ್ಲಿ, ಆನಂದಕ್ಕಾಗಿ ಕ್ರೈಸ್ತರಿಗೆ ಯಾವ ಕಾರಣವಿದೆ?
7 ಯೆಹೋವನೊಂದಿಗಿನ ನಮ್ಮ ನಿಕಟ ಸಂಬಂಧವು, ನಮ್ಮನ್ನು ಭೂಮಿಯಲ್ಲಿರುವ ಅತ್ಯಂತ ಸಂತುಷ್ಟ ಜನರನ್ನಾಗಿ ಮಾಡುತ್ತದೆ. ಕ್ರೈಸ್ತರಾಗುವ ಮೊದಲು, ನಾವು ‘ಮಾನಸಿಕವಾಗಿ ಅಂಧಕಾರದಲ್ಲಿ ಮತ್ತು ದೇವರಿಂದಾಗುವ ಜೀವದಿಂದ ವಿಮುಖ’ ವಾಗಿರುವ ಅನೀತಿಯ ಮಾನವ ಸಮಾಜದ ಭಾಗವಾಗಿದ್ದೆವು. (ಎಫೆಸ 4:18) ಯೆಹೋವನಿಂದ ನಾವು ಇನ್ನೆಂದೂ ವಿಮುಖರಾಗಿರುವುದಿಲ್ಲವೆಂಬ ವಿಷಯಕ್ಕೆ ನಾವೆಷ್ಟು ಸಂತೋಷಿತರು! ಆತನ ಅನುಗ್ರಹದಲ್ಲಿ ಉಳಿಯಲು ಪ್ರಯತ್ನದ ಆವಶ್ಯಕತೆಯಿದೆ ಎಂಬುದು ನಿಶ್ಚಯ. ನಾವು “ಸುವಾರ್ತೆಯಿಂದ ಉಂಟಾದ ನಿರೀಕ್ಷೆಯನ್ನು ಬಿಟ್ಟು ತೊಲಗಿಹೋಗದೆ ಅಸ್ತಿವಾರದ ಮೇಲೆ ನಿಂತು ಸ್ಥಿರವಾಗಿದ್ದು ನಂಬಿಕೆಯಲ್ಲಿ ನೆಲೆಗೊಂಡಿರ” ಬೇಕು. (ಕೊಲೊಸ್ಸೆ 1:21-23) “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು,” ಎಂಬ ಯೇಸುವಿನ ಸ್ವಂತ ಮಾತುಗಳಿಗನುಸಾರ, ಯೆಹೋವನು ನಮ್ಮನ್ನು ತನ್ನ ಮಗನ ಕಡೆಗೆ ಎಳೆದನೆಂಬುದಕ್ಕೆ ನಾವು ಹರ್ಷಿಸಬಲ್ಲೆವು. (ಯೋಹಾನ 6:44) ಕ್ರಿಸ್ತನ ಮುಖಾಂತರ ದೇವರೊಂದಿಗಿನ ನಮ್ಮ ಅಮೂಲ್ಯವಾದ ಸಂಬಂಧವನ್ನು ನಾವು ನಿಜವಾಗಿಯೂ ಗಣ್ಯಮಾಡುವುದಾದರೆ, ಅದನ್ನು ನಾಶಮಾಡಬಹುದಾದ ಯಾವುದೇ ವಿಷಯದ ವಿರುದ್ಧ ನಾವು ಜಾಗರೂಕರಾಗಿರುವೆವು.
8. ನಮ್ಮ ಆನಂದಭರಿತ ಸ್ಥಿತಿಗೆ ಯೇಸು ಹೇಗೆ ನೆರವು ನೀಡಿದ್ದಾನೆ?
8 ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯ ಮುಖಾಂತರ ಪಾಪಗಳ ಕ್ಷಮಾಪಣೆಯು ಆನಂದದ ಒಂದು ಮಹಾ ಕಾರಣವಾಗಿದೆ ಯಾಕೆಂದರೆ, ದೇವರೊಂದಿಗೆ ನಮ್ಮ ಸಂಬಂಧವನ್ನು ಸಾಧ್ಯಮಾಡುವುದೇ ಈ ಸಂಗತಿಯಾಗಿದೆ. ತನ್ನ ಉದ್ದೇಶಪೂರ್ವಕ ಪಾಪದ ಮಾರ್ಗದಿಂದ, ನಮ್ಮ ಪೂರ್ವಜನಾದ ಆದಾಮನು ಇಡೀ ಮಾನವಜಾತಿಯ ಮೇಲೆ ಮರಣವನ್ನು ತಂದನು. ಹಾಗಿದ್ದರೂ, ಅಪೊಸ್ತಲ ಪೌಲನು ವಿವರಿಸಿದ್ದು: “ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ.” “ಹೀಗಿರಲಾಗಿ ಒಂದೇ ಅಪರಾಧದ ಮೂಲಕ ಎಲ್ಲಾ ಮನುಷ್ಯರಿಗೆ ಸಾಯಬೇಕೆಂಬ ನಿರ್ಣಯವು ಹೇಗೆ ಉಂಟಾಯಿತೋ ಹಾಗೆಯೇ ಒಂದೇ ಸತ್ಕಾರ್ಯದಿಂದ ಎಲ್ಲಾ ಮನುಷ್ಯರಿಗೆ ನೀತಿವಂತರೆಂಬ ನಿರ್ಣಯವು ಉಂಟಾಗಿ ಜೀವವನ್ನು ಫಲಿಸುತ್ತದೆ. ಒಬ್ಬನ ಅವಿಧೇಯತ್ವದಿಂದ ಎಲ್ಲರೂ ಹೇಗೆ ಪಾಪಿಗಳಾದರೋ ಹಾಗೆಯೇ ಒಬ್ಬನ ವಿಧೇಯತ್ವದಿಂದ ಎಲ್ಲರೂ ನೀತಿವಂತರಾಗುವರು,” ಎಂದು ಸಹ ಪೌಲನು ಬರೆದನು. (ರೋಮಾಪುರ 5:8, 18, 19) ಇಂತಹ ಪ್ರೀತಿಯ ಒದಗಿಸುವಿಕೆಯ ಲಾಭವನ್ನು ಪಡೆಯುವ ಆದಾಮನ ಸಂತತಿಯವರನ್ನು ಬಿಡಿಸಲು ಯೆಹೋವ ದೇವರು ಇಚ್ಛಿಸುತ್ತಾನೆ ಎಂಬುದರ ಬಗ್ಗೆ ನಾವು ಎಷ್ಟು ಆನಂದಿತರಾಗಿರಬಲ್ಲೆವು!
ಧಾರ್ಮಿಕ ವಿಮೋಚನೆ ಮತ್ತು ಜ್ಞಾನೋದಯ
9. ಧಾರ್ಮಿಕ ದೃಷ್ಟಿಕೋನದಿಂದ ನಾವು ಏಕೆ ಆನಂದಿತರಾಗಿದ್ದೇವೆ?
9 ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನಿಂದ ವಿಮೋಚನೆಯು, ಆನಂದಿತರಾಗಿರಲು ಮತ್ತೊಂದು ಕಾರಣವಾಗಿದೆ. ನಮ್ಮನ್ನು ಬಿಡುಗಡೆಗೊಳಿಸಿದ್ದು ದೈವಿಕ ಸತ್ಯವಾಗಿದೆ. (ಯೋಹಾನ 8:32) ಮತ್ತು ಈ ಧಾರ್ಮಿಕ ವೇಶ್ಯೆಯಿಂದ ವಿಮೋಚನೆ ಎಂದರೆ, ನಾವು ಆಕೆಯ ಪಾಪಗಳಲ್ಲಿ ಭಾಗವಹಿಸುವುದಿಲ್ಲ, ಆಕೆಯ ಬಾಧೆಗಳನ್ನು ಅನುಭವಿಸುವುದಿಲ್ಲ, ಮತ್ತು ಆಕೆಯೊಂದಿಗೆ ನಾಶನದಲ್ಲಿ ಕೊನೆಗಾಣುವುದಿಲ್ಲ. (ಪ್ರಕಟನೆ 18:1-8) ಅವೆಲ್ಲವನ್ನು ತಪ್ಪಿಸಿಕೊಳ್ಳುವುದರ ಬಗ್ಗೆ ವಿಷಾದಕರವಾದದ್ದೇನೂ ಇರುವುದಿಲ್ಲ!
10. ಯೆಹೋವನ ಜನರೋಪಾದಿ ಎಂತಹ ಜ್ಞಾನೋದಯವನ್ನು ನಾವು ಅನುಭವಿಸುತ್ತೇವೆ?
10 ಜೀವಿತದಲ್ಲಿ ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅನ್ವಯಿಸುವುದು ಮಹಾ ಹರ್ಷಿಸುವಿಕೆಯ ಕಾರಣಗಳಾಗಿವೆ. ಸುಳ್ಳು ಧರ್ಮದ ಪ್ರಭಾವದಿಂದ ಮುಕ್ತರಾಗಿದ್ದು, ನಾವು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗದ ಮುಖಾಂತರ ನಮ್ಮ ಸ್ವರ್ಗೀಯ ತಂದೆಯಿಂದ ಒದಗಿಸಲ್ಪಡುವ ಹಿಂದೆಂದಿಗಿಂತಲೂ ಸ್ಪಷ್ಟವಾಗಿದ ಆತ್ಮಿಕ ಒಳನೋಟವನ್ನು ಅನುಭವಿಸುತ್ತೇವೆ. (ಮತ್ತಾಯ 24:45-47) ಭೂಮಿಯ ಮೇಲೆ ಜೀವಿಸುತ್ತಿರುವ ಎಲ್ಲ ಜನರಲ್ಲಿ, ಯೆಹೋವನಿಗೆ ಸಂಪೂರ್ಣವಾಗಿ ಸಮರ್ಪಿತರಾಗಿರುವವರಿಗೆ ಮಾತ್ರ ಆತನ ಪವಿತ್ರಾತ್ಮ ಮತ್ತು ಆತನ ವಾಕ್ಯ ಹಾಗೂ ಚಿತ್ತದ ದಿವ್ಯ ಗ್ರಹಿಕೆ ಲಭ್ಯವಿದೆ. ಅದು ಪೌಲನು ಹೇಳಿದಂತಿದೆ: “ದೇವರು ತನ್ನ ಆತ್ಮದ ಮೂಲಕ ಅವುಗಳನ್ನು [ತನ್ನನ್ನು ಪ್ರೀತಿಸುವವರಿಗೆ ಆತನು ಸಿದ್ಧಪಡಿಸಿರುವ ವಿಷಯಗಳನ್ನು] ನಮಗೆ ತಿಳಿಯಪಡಿಸಿದ್ದಾನೆ, ಏಕೆಂದರೆ ಆತ್ಮವು ಸಕಲ ವಿಷಯಗಳೊಳಗೆ, ದೇವರ ಅಗಾಧವಾದ ವಿಷಯಗಳನ್ನು ಸಹ, ಪರೀಕ್ಷಿಸುತ್ತದೆ.” (1 ಕೊರಿಂಥ 2:9, 10, NW) “ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ,” ಎಂಬುದಾಗಿ ಜ್ಞಾನೋಕ್ತಿ 4:18ರ ಮಾತುಗಳಲ್ಲಿ ಸೂಚಿಸಲ್ಪಟ್ಟ ಪ್ರಗತಿಪರ ತಿಳಿವಳಿಕೆಯನ್ನು ನಾವು ಅನುಭವಿಸುತ್ತಿದ್ದೇವೆ ಎಂಬುದಕ್ಕಾಗಿ ನಾವು ಕೃತಜ್ಞತೆಯುಳ್ಳವರೂ ಆನಂದಭರಿತರೂ ಆಗಿರಬಲ್ಲೆವು.
ರಾಜ್ಯದ ನಿರೀಕ್ಷೆ ಮತ್ತು ಅನಂತ ಜೀವನ
11. ಆನಂದಭರಿತ ರಾಜ್ಯದ ನಿರೀಕ್ಷೆಯನ್ನು ಇತರರೊಂದಿಗೆ ಹೇಗೆ ಹಂಚಿಕೊಳ್ಳಲಾಗಿದೆ?
11 ನಮ್ಮ ರಾಜ್ಯದ ನಿರೀಕ್ಷೆಯೂ ನಮ್ಮನ್ನು ಆನಂದಿತರನ್ನಾಗಿ ಮಾಡುತ್ತದೆ. (ಮತ್ತಾಯ 6:9, 10) ಎಲ್ಲ ಮಾನವಜಾತಿಗೆ ದೇವರ ರಾಜ್ಯವು ಏಕೈಕ ನಿರೀಕ್ಷೆಯಾಗಿದೆ ಎಂದು, ಯೆಹೋವನ ಸಾಕ್ಷಿಗಳೋಪಾದಿ ನಾವು, ದೀರ್ಘ ಸಮಯದಿಂದ ಘೋಷಿಸಿದ್ದೇವೆ. ದೃಷ್ಟಾಂತಕ್ಕೆ, ವರ್ಷ 1931ನ್ನು ಪರಿಗಣಿಸಿರಿ. ಆಗ ನಾವು, ಲೋಕದ ಸುತ್ತಲೂ 51 ಅಧಿವೇಶನಗಳಲ್ಲಿ ಆನಂದಭರಿತವಾಗಿ ಉದ್ಘೋಷಿಸಲ್ಪಟ್ಟ ಒಂದು ಗೊತ್ತುವಳಿಯ ಮೂಲಕ ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ಆದರದಿಂದ ಸ್ವೀಕರಿಸಿದೆವು. (ಯೆಶಾಯ 43:10-12) ಆ ಗೊತ್ತುವಳಿಯು ಮತ್ತು ಜೆ. ಎಫ್. ರಥರ್ಫರ್ಡ್ (ವಾಚ್ ಟವರ್ ಸೊಸೈಟಿಯ ಆಗಿನ ಅಧ್ಯಕ್ಷರು) ಅವರಿಂದ ನೀಡಲ್ಪಟ್ಟ ಅಧಿವೇಶನದ ಒಂದು ಮಹತ್ವದ ಭಾಷಣವು ರಾಜ್ಯ, ಲೋಕದ ನಿರೀಕ್ಷೆ (ಇಂಗ್ಲಿಷ್ನಲ್ಲಿ) ಎಂಬ ಪುಸ್ತಿಕೆಯಲ್ಲಿ ಪ್ರಕಾಶಿಸಲ್ಪಟ್ಟವು. ಆ ಅಧಿವೇಶನದಲ್ಲಿ ಸ್ವೀಕರಿಸಲ್ಪಟ್ಟ ಇನ್ನೊಂದು ಗೊತ್ತುವಳಿಯನ್ನು ಸಹ ಅದರಲ್ಲಿ ಸೇರಿಸಲಾಗಿತ್ತು. ಅದು, ಆಕೆಯ ಧರ್ಮಭ್ರಷ್ಟತೆಗಾಗಿ ಮತ್ತು ಯೆಹೋವನ ಸಲಹೆಯನ್ನು ತಾತ್ಸಾರ ಮಾಡಿದ್ದಕ್ಕಾಗಿ ಕ್ರೈಸ್ತಪ್ರಪಂಚವನ್ನು ಆಪಾದಿಸುವ ಗೊತ್ತುವಳಿಯಾಗಿತ್ತು. “ಲೋಕದ ನಿರೀಕ್ಷೆಯು ದೇವರ ರಾಜ್ಯವಾಗಿದೆ, ಮತ್ತು ಬೇರೆ ಯಾವುದೇ ನಿರೀಕ್ಷೆಯಿರುವುದಿಲ್ಲ,” ಎಂದು ಸಹ ಅದು ಘೋಷಿಸಿತು. ಕೆಲವು ತಿಂಗಳುಗಳೊಳಗೆ, ಯೆಹೋವನ ಸಾಕ್ಷಿಗಳು ಭೂಮಿಯ ಎಲ್ಲ ಭಾಗಗಳಲ್ಲಿ ಈ ಪುಸ್ತಿಕೆಯ 50 ಲಕ್ಷಕ್ಕಿಂತಲೂ ಹೆಚ್ಚು ಪ್ರತಿಗಳನ್ನು ಹಂಚಿದರು. ಆಗಿನಿಂದ ಮಾನವಜಾತಿಯ ಏಕೈಕ ನಿರೀಕ್ಷೆಯು ರಾಜ್ಯವಾಗಿದೆ ಎಂದು ನಾವು ಅನೇಕ ವೇಳೆ ದೃಢೀಕರಿಸಿದ್ದೇವೆ.
12. ಯೆಹೋವನನ್ನು ಸೇವಿಸುತ್ತಿರುವವರ ಮುಂದೆ ಜೀವಿತದ ಯಾವ ಆನಂದಮಯ ಪ್ರತೀಕ್ಷೆಗಳು ಇಡಲ್ಪಟ್ಟಿವೆ?
12 ರಾಜ್ಯದ ಆಳಿಕೆಯ ಕೆಳಗೆ ಅನಂತ ಜೀವನದ ಪ್ರತೀಕ್ಷೆಯಲ್ಲಿಯೂ ನಾವು ಹರ್ಷಿಸುತ್ತೇವೆ. ಅಭಿಷಿಕ್ತ ಕ್ರೈಸ್ತರ “ಚಿಕ್ಕ ಹಿಂಡು” ಆನಂದಭರಿತ ಸ್ವರ್ಗೀಯ ನಿರೀಕ್ಷೆಯನ್ನು ಹೊಂದಿದೆ. “ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೂ ದೇವರೂ ಆಗಿರುವಾತನಿಗೆ ಸ್ತೋತ್ರವಾಗಲಿ,” ಎಂದು ಅಪೊಸ್ತಲ ಪೇತ್ರನು ಬರೆದನು. “ಆತನು ಯೇಸು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದರ್ದಲ್ಲಿ ತನ್ನ ಮಹಾ ಕರುಣಾನುಸಾರವಾಗಿ ನಮ್ಮನ್ನು ತಿರಿಗಿ ಜೀವಿಸುವಂತೆ ಮಾಡಿ ಜೀವಕರವಾದ ನಿರೀಕ್ಷೆಯನ್ನು ನಮ್ಮಲ್ಲಿ ಹುಟ್ಟಿಸಿ ನಮ್ಮನ್ನು ಲಯ ಕಳಂಕ ಕ್ಷಯಗಳಿಲ್ಲದ ಬಾಧ್ಯತೆಯನ್ನು ಎದುರು ನೋಡುವವರನ್ನಾಗಿ ಮಾಡಿದನು. ಆ ಬಾಧ್ಯತೆಯು ನಿಮಗೋಸ್ಕರ ಪರಲೋಕದಲ್ಲಿ ಇಟ್ಟಿರುವದು.” (ಲೂಕ 12:32; 1 ಪೇತ್ರ 1:3, 4) ಇಂದು, ಯೆಹೋವನ ಸಾಕ್ಷಿಗಳಲ್ಲಿ ಹೆಚ್ಚಿನವರು, ರಾಜ್ಯದ ಪ್ರಭಾವ ಕ್ಷೇತ್ರದೊಳಗೆ ಪ್ರಮೋದವನದಲ್ಲಿ ನಿತ್ಯ ಜೀವವನ್ನು ಎದುರುನೋಡುತ್ತಾರೆ. (ಲೂಕ 23:43; ಯೋಹಾನ 17:3) ನಮ್ಮ ಆನಂದಭರಿತ ಪ್ರತೀಕ್ಷೆಗಳೊಂದಿಗೆ ಹೋಲಿಸಲು, ಭೂಮಿಯಲ್ಲಿರುವ ಬೇರೆ ಯಾವುದೇ ಜನರಿಗೆ ಏನೂ ಇರುವುದಿಲ್ಲ. ನಾವು ಅವುಗಳನ್ನು ಎಷ್ಟು ಅತಿಶಯವಾಗಿ ಮನಸ್ಸಿನಲ್ಲಿಟ್ಟುಕೊಂಡಿರಬೇಕು!
ಒಂದು ಆಶೀರ್ವದಿತ ಸಹೋದರತ್ವ
13. ನಮ್ಮ ಅಂತಾರಾಷ್ಟ್ರೀಯ ಸಹೋದರತ್ವವನ್ನು ನಾವು ಹೇಗೆ ವೀಕ್ಷಿಸಬೇಕು?
13 ದೇವರ ಮಂಜೂರಾತಿಯಿರುವ ಏಕಮಾತ್ರ ಅಂತಾರಾಷ್ಟ್ರೀಯ ಸಹೋದರತ್ವದ ಭಾಗವಾಗಿರುವುದು ಕೂಡ ಮಹಾ ಆನಂದದ ಒಂದು ಮೂಲವಾಗಿದೆ. ಸಂತೋಷಕರವಾಗಿ, ನಮಗೆ ಭೂಮಿಯ ಮೇಲೆ ಅತ್ಯಂತ ಅಪೇಕ್ಷಣೀಯವಾದ ಸಹವಾಸಿಗಳಿದ್ದಾರೆ. ಯೆಹೋವ ದೇವರು ತಾನೇ ನಮ್ಮ ದಿನವನ್ನು ಸೂಚಿಸಿ ಹೇಳಿದ್ದು: “ಸಕಲಜನಾಂಗಗಳನ್ನು ನಡುಗಿಸುವೆನು; ಆಗ ಸಮಸ್ತಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು ಈ ಆಲಯವನ್ನು ವೈಭವದಿಂದ ತುಂಬಿಸುವೆನು.” (ಹಗ್ಗಾಯ 2:7) ಎಲ್ಲ ಕ್ರೈಸ್ತರು ಅಪರಿಪೂರ್ಣರು, ನಿಜ. ಹಾಗಿದ್ದರೂ, ಅಂತಹ ವ್ಯಕ್ತಿಗಳನ್ನು ಯೆಹೋವನು ತನ್ನ ಕಡೆಗೆ ಯೇಸು ಕ್ರಿಸ್ತನ ಮುಖಾಂತರ ಎಳೆದಿದ್ದಾನೆ. (ಯೋಹಾನ 14:16) ಅಪೇಕ್ಷಣೀಯವೆಂದು ತಾನು ಪರಿಗಣಿಸುವ ಜನರನ್ನು ಯೆಹೋವನು ತನ್ನ ಕಡೆಗೆ ಎಳೆದುಕೊಂಡಿರುವುದರಿಂದ, ನಾವು ಅವರಿಗೆ ಸಹೋದರ ಪ್ರೀತಿಯನ್ನು ತೋರಿಸುವುದಾದರೆ, ಅವರನ್ನು ಉನ್ನತರೆಂದು ಗೌರವಿಸುವುದಾದರೆ, ದೈವಿಕ ಚಟುವಟಿಕೆಗಳಲ್ಲಿ ಅವರೊಂದಿಗೆ ಸಹಕರಿಸುವುದಾದರೆ, ಅವರ ಪರೀಕ್ಷೆಗಳಲ್ಲಿ ಅವರನ್ನು ಎತ್ತಿಹಿಡಿಯುವುದಾದರೆ, ಮತ್ತು ಅವರ ಪರವಾಗಿ ಪ್ರಾರ್ಥಿಸುವುದಾದರೆ, ನಮ್ಮ ಆನಂದವು ತುಂಬಿತುಳುಕುವುದು.
14. 1 ಪೇತ್ರ 5:5-11 ರಿಂದ ನಾವು ಯಾವ ಉತ್ತೇಜನವನ್ನು ಪಡೆಯಬಲ್ಲೆವು?
14 ಇವೆಲ್ಲವೂ ನಮ್ಮ ಆನಂದಕ್ಕೆ ನೆರವು ನೀಡುವವು. ಭೂಮಿಯ ಉದ್ದಕ್ಕೂ ನಮ್ಮ ಆತ್ಮಿಕ ಸಹೋದರತ್ವದ ಆಶ್ರಯವು, ನಿಶ್ಚಯವಾಗಿಯೂ ಯೆಹೋವನ ಆನಂದವಾಗಿದೆ. ಹೌದು, ನಾವೆಲ್ಲರೂ ಹಿಂಸೆಯನ್ನು ಮತ್ತು ಇತರ ತೊಂದರೆಗಳನ್ನು ಅನುಭವಿಸುತ್ತೇವೆ. ಆದರೆ ಇದು ನಮ್ಮನ್ನು ಒಟ್ಟುಗೂಡಿಸಬೇಕು ಮತ್ತು ಭೂಮಿಯ ಮೇಲೆ ದೇವರ ಏಕೈಕ ಯಥಾರ್ಥವಾದ ಸಂಸ್ಥೆಯ ಭಾಗದೋಪಾದಿ, ನಮ್ಮಲ್ಲಿ ಐಕ್ಯದ ಪ್ರಜ್ಞೆಯನ್ನು ಮೂಡಿಸಬೇಕು. ಪೇತ್ರನು ಹೇಳಿದಂತೆ, ದೇವರು ನಮಗಾಗಿ ಚಿಂತಿಸುತ್ತಾನೆ ಎಂಬ ತಿಳಿವಳಿಕೆಯಲ್ಲಿ ನಮ್ಮ ಎಲ್ಲ ಚಿಂತೆಯನ್ನು ಆತನ ಮೇಲೆ ಹಾಕುತ್ತಾ, ದೇವರ ಬಲವಾದ ಹಸ್ತದ ಕೆಳಗೆ ನಮ್ಮನ್ನು ಅಧೀನ ಪಡಿಸಿಕೊಳ್ಳಬೇಕು. ನಾವು ಜಾಗರೂಕರಾಗಿರಬೇಕು ಯಾಕೆಂದರೆ ಪಿಶಾಚನು ನಮ್ಮನ್ನು ನುಂಗಲು ಹುಡುಕುತ್ತಾನೆ, ಆದರೆ ಇದರಲ್ಲಿ ನಾವು ಒಬ್ಬಂಟಿಗರಾಗಿಲ್ಲ, ಯಾಕೆಂದರೆ ಪೇತ್ರನು ಕೂಡಿಸುವುದು: “ನೀವು ನಂಬಿಕೆಯಲ್ಲಿ ದೃಢವಾಗಿದ್ದು ಅವನನ್ನು ಎದುರಿಸಿರಿ; ಲೋಕದಲ್ಲಿರುವ ನಿಮ್ಮ ಸಹೋದರರೂ ಅಂಥ ಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂದು ನಿಮಗೆ ತಿಳಿದದೆಯಲ್ಲಾ.” ಮತ್ತು ಈ ಆನಂದಭರಿತ ಅಂತಾರಾಷ್ಟ್ರೀಯ ಸಹೋದರತ್ವವು ಎಂದಿಗೂ ಬಿದ್ದುಹೋಗುವುದಿಲ್ಲ, ಯಾಕೆಂದರೆ ‘ನಾವು ಸ್ವಲ್ಪ ಸಮಯ ಕಷ್ಟಾನುಭವಿಸಿದ ಬಳಿಕ, ದೇವರು ನಮ್ಮ ತರಬೇತಿಯನ್ನು ಮುಗಿಸುವನು ಮತ್ತು ನಮ್ಮನ್ನು ದೃಢರನ್ನಾಗಿಯೂ ಬಲಿಷ್ಠರನ್ನಾಗಿಯೂ ಮಾಡುವನೆಂಬ’ ಆಶ್ವಾಸನೆ ನಮಗಿದೆ. (1 ಪೇತ್ರ 5:5-11) ಅದರ ಕುರಿತು ಯೋಚಿಸಿರಿ. ನಮ್ಮ ಆನಂದಭರಿತ ಸಹೋದರತ್ವವು ಕೊನೆಯತನಕ ಬಾಳುವುದು!
ಒಂದು ಉದ್ದೇಶವುಳ್ಳ ಜೀವಿತ
15. ಯೆಹೋವನ ಸಾಕ್ಷಿಗಳಿಗೆ ಒಂದು ಉದ್ದೇಶಭರಿತ ಜೀವಿತವಿದೆ ಎಂದು ಯಾಕೆ ಹೇಳಸಾಧ್ಯವಿದೆ?
15 ಈ ತೊಂದರೆಯುಕ್ತ ಲೋಕದಲ್ಲಿ ಆನಂದವು ನಮ್ಮದಾಗಿದೆ ಯಾಕೆಂದರೆ ನಮಗೊಂದು ಉದ್ದೇಶಭರಿತ ಜೀವಿತವಿದೆ. ನಮ್ಮನ್ನು ಮತ್ತು ಇತರರನ್ನು ಸಂತೋಷಪಡಿಸುವ ಒಂದು ಶುಶ್ರೂಷೆಯನ್ನು ನಮಗೆ ವಹಿಸಲಾಗಿದೆ. (ರೋಮಾಪುರ 10:10) ದೇವರ ಜೊತೆ ಕೆಲಸಗಾರರಾಗಿರುವುದು ಖಂಡಿತವಾಗಿಯೂ ಒಂದು ಆನಂದಮಯ ಸುಯೋಗವಾಗಿದೆ. ಈ ಸಂಬಂಧದಲ್ಲಿ, ಪೌಲನು ಹೇಳಿದ್ದು: “ಹಾಗಾದರೆ ಅಪೊಲ್ಲೋಸನು ಏನು? ಪೌಲನು ಏನು? ಅವರು ಸೇವಕರು; ಅವರ ಮುಖಾಂತರ ನೀವು ಕ್ರಿಸ್ತನನ್ನು ನಂಬುವವರಾದಿರಿ; ಕರ್ತನು ಒಬ್ಬೊಬ್ಬನಿಗೆ ದಯಪಾಲಿಸಿದ ಪ್ರಕಾರ ಅವರು ಸೇವೆಮಾಡುವವರಾಗಿದ್ದಾರೆ. ನಾನು ಸಸಿಯನ್ನು ನೆಟ್ಟೆನು, ಅಪೊಲ್ಲೋಸನು ನೀರುಹೊಯಿದನು, ಆದರೆ ಬೆಳೆಸುತ್ತಾ ಬಂದವನು ದೇವರು. ಹೀಗಿರಲಾಗಿ ನೆಡುವವನಾಗಲಿ ನೀರುಹೊಯ್ಯುವವನಾಗಲಿ ವಿಶೇಷವಾದವನಲ್ಲ, ಬೆಳಸುವ ದೇವರೇ ವಿಶೇಷವಾದವನು. ನೆಡುವವನೂ ನೀರು ಹೊಯ್ಯುವವನೂ ಒಂದೇ ಆಗಿದ್ದಾರೆ. ಆದರೂ ಪ್ರತಿಯೊಬ್ಬನಿಗೆ ಅವನವನ ಕಷ್ಟಕ್ಕೆ ತಕ್ಕಹಾಗೆ ಕೂಲಿಯು ದೊರೆಯುವದು. ನಾವು ದೇವರ ಜೊತೆಕೆಲಸದವರು; ನೀವು ದೇವರ ಹೊಲವೂ ದೇವರ ಕಟ್ಟಡವೂ ಆಗಿದ್ದೀರಿ.”—1 ಕೊರಿಂಥ 3:5-9.
16, 17. ಯೆಹೋವನ ಜನರಿಗೆ ಉದ್ದೇಶವುಳ್ಳ ಆನಂದಮಯ ಜೀವಿತಗಳಿವೆ ಎಂಬುದನ್ನು ರುಜುಪಡಿಸಲು ಯಾವ ಉದಾಹರಣೆಗಳನ್ನು ನಮೂದಿಸಸಾಧ್ಯವಿದೆ?
16 ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುವುದು ನಮ್ಮನ್ನು ಆನಂದದಿಂದ ತುಂಬಿಸುವ ಒಂದು ಉದ್ದೇಶಭರಿತ ಜೀವಿತದಲ್ಲಿ ಫಲಿಸುತ್ತದೆ ಎಂಬುದನ್ನು ತೋರಿಸಲು ಅನೇಕ ಉದಾಹರಣೆಗಳನ್ನು ನಮೂದಿಸಬಹುದು. ಈ ಹೇಳಿಕೆಯು ಪ್ರತಿನಿಧಿರೂಪವಾಗಿದೆ: “[ಅದರ ಸಮರ್ಪಣಾ ಕಾರ್ಯಕ್ರಮವಿದ್ದ ದಿನದಂದು] ಜನರಿಂದ ತುಂಬಿದ್ದ ರಾಜ್ಯ ಸಭಾಗೃಹವನ್ನು ನಾನು ನೋಡಿದಾಗ, ನನ್ನನ್ನು ಮತ್ತು ನನ್ನ ಹೆಂಡತಿಯನ್ನು ಮತ್ತು ನಮ್ಮ ಮೂವರು ಮಕ್ಕಳು ಮತ್ತು ಅವರ ಸಂಗಾತಿಗಳನ್ನು ಸೇರಿಸಿ, ನನ್ನ ಕುಟುಂಬದ ಎಂಟು ಜನರು ಉಪಸ್ಥಿತರಿರುವುದನ್ನು ನಾನು ನೋಡಬಹುದಿತ್ತು. . . . ನನ್ನ ಹೆಂಡತಿ ಮತ್ತು ನಾನು ನಿಜವಾಗಿಯೂ ದೇವರ ಸೇವೆಯಲ್ಲಿ ಒಂದು ಸಂತೋಷಕರ, ಉದ್ದೇಶಭರಿತ ಜೀವಿತವನ್ನು ಜೀವಿಸಿದ್ದೇವೆ.”
17 ಯಾವುದೇ ವಯಸ್ಸಿನಲ್ಲಿ ಒಬ್ಬ ವ್ಯಕ್ತಿಯು ಯೆಹೋವನ ಸೇವೆಯಲ್ಲಿ ನಿಜವಾದ ಉದ್ದೇಶದ ಆನಂದಮಯ ಜೀವಿತವನ್ನು ಆರಂಭಿಸಬಲ್ಲನೆಂಬುದನ್ನು ಗ್ರಹಿಸುವುದು ಕೂಡ ಹುರಿದುಂಬಿಸುವಂಥದ್ದಾಗಿದೆ. ಉದಾಹರಣೆಗೆ, ರೋಗೋಪಚಾರ ಗೃಹವೊಂದರಲ್ಲಿ ಬೈಬಲ್ ಸತ್ಯವನ್ನು ಕಲಿತ ಒಬ್ಬ ಸ್ತ್ರೀ, 102 ನೆಯ ವಯಸ್ಸಿನಲ್ಲಿ ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿ ದೀಕ್ಷಾಸ್ನಾನ ಪಡೆದಳು. ಹೀಗೆ ಆಕೆ ‘ಸತ್ಯ ದೇವರಿಗೆ ಭಯಪಡುತ್ತಾ ಮತ್ತು ಆತನ ಆಜ್ಞೆಗಳನ್ನು ಕೈಗೊಳ್ಳುತ್ತಾ’ ತನ್ನ ಜೀವಿತವನ್ನು ಆನಂದಕರ ಉದ್ದೇಶದೊಂದಿಗೆ ಮುಗಿಸಿದಳು.—ಪ್ರಸಂಗಿ 12:13.
ವಿಫಲವಾಗದ ಒಂದು ಆಶ್ರಯದುರ್ಗ
18. ನಿರಾಶೆಯನ್ನು ಜಯಿಸಲು ಮತ್ತು ನಮ್ಮ ಆನಂದವನ್ನು ಹೆಚ್ಚಿಸಲು ಏನನ್ನು ಮಾಡಸಾಧ್ಯವಿದೆ?
18 ಯೆಹೋವನ ಆನಂದವು ನಂಬಿಗಸ್ತರಿಗೆ ವಿಫಲವಾಗದ ಆಶ್ರಯದುರ್ಗವಾಗಿದೆ. ಆದರೂ, ಈ ಆನಂದವನ್ನು ಹೊಂದಿರುವುದು, “ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ,” ಎಂದು ಗೆತ್ಸೇಮನೆಯಲ್ಲಿ ಹೇಳುವಂತೆ ಯೇಸುವನ್ನು ಪ್ರೇರೇಪಿಸಿದಂತಹ ದುಃಖದ ತಾಸುಗಳು ನಮಗೆ ಎಂದಿಗೂ ಇರವು ಎಂಬುದನ್ನು ಅರ್ಥೈಸುವುದಿಲ್ಲ. (ಮಾರ್ಕ 14:32-34) ಸ್ವಾರ್ಥದ ಬೆನ್ನಟ್ಟುವಿಕೆಗಳಿಗೆ ವಶವಾಗುವುದರಿಂದ ನಿರುತ್ಸಾಹವು ಫಲಿಸಿದೆ ಎಂದು ಭಾವಿಸಿಕೊಳ್ಳಿ. ಹಾಗಾದರೆ ನಮ್ಮ ಜೀವನ ಶೈಲಿಯನ್ನು ನಾವು ಬದಲಾಯಿಸೋಣ. ಶಾಸ್ತ್ರೀಯ ಜವಾಬ್ದಾರಿಗಳ ಒಂದು ಭಾರವಾದ ಹೊರೆಯನ್ನು ನಾವು ನಿಸ್ವಾರ್ಥವಾಗಿ ಹೊತ್ತುಕೊಂಡಿರುವುದರಿಂದ ನಮ್ಮ ಆನಂದವು ಕಡಮೆಯಾಗಿದ್ದರೆ, ಒತ್ತಡವನ್ನು ಉಪಶಮನ ಮಾಡುವ ಮತ್ತು ನಮ್ಮ ಆನಂದಮಯ ಆತ್ಮವನ್ನು ಪುನಃಸ್ಥಾಪಿಸುವ ಹೊಂದಾಣಿಕೆಗಳನ್ನು ಬಹುಶಃ ನಾವು ಮಾಡಬಲ್ಲೆವು. ಅಲ್ಲದೆ, ಪಾಪಪೂರ್ಣ ಶರೀರವನ್ನು, ದುಷ್ಟ ಲೋಕವನ್ನು, ಮತ್ತು ಪಿಶಾಚನನ್ನು ಕಠಿನವಾಗಿ ಪ್ರತಿರೋಧಿಸುವ ಮೂಲಕ ನಾವು ಯೆಹೋವನನ್ನು ಮೆಚ್ಚಿಸಲು ಪ್ರಯತ್ನಿಸುವುದಾದರೆ, ಯೆಹೋವನು ನಮ್ಮನ್ನು ಆನಂದದಿಂದ ಆಶೀರ್ವದಿಸುವನು.—ಗಲಾತ್ಯ 5:24; 6:14; ಯಾಕೋಬ 4:7.
19. ದೇವರ ಸಂಸ್ಥೆಯಲ್ಲಿ ನಮಗಿರುವ ಯಾವುದೇ ಸುಯೋಗಗಳನ್ನು ನಾವು ಹೇಗೆ ವೀಕ್ಷಿಸಬೇಕು?
19 ನಾವು ಚರ್ಚಿಸಿರುವ ಕಾರಣಗಳಿಗಾಗಿ, ಮತ್ತು ಅನೇಕ ಇತರ ಕಾರಣಗಳಿಗಾಗಿ ನಮಗೆ ಮಹಾ ಆನಂದವಿದೆ. ನಾವು ಸಭಾ ಪ್ರಚಾರಕರಾಗಿರಲಿ ಅಥವಾ ಪೂರ್ಣ ಸಮಯದ ಸೇವೆಯ ಯಾವುದಾದರೊಂದು ವಿಧದಲ್ಲಿ ಭಾಗವಹಿಸುತ್ತಿರಲಿ, ಕರ್ತನ ಕೆಲಸದಲ್ಲಿ ಮಾಡಲು ಹೆಚ್ಚಿನದನ್ನು ನಾವೆಲ್ಲರೂ ಹೊಂದಿರಬಲ್ಲೆವು, ಮತ್ತು ಇದು ಖಂಡಿತವಾಗಿಯೂ ನಮ್ಮ ಆನಂದಕ್ಕೆ ನೆರವು ನೀಡುವುದು. (1 ಕೊರಿಂಥ 15:58) ಯೆಹೋವನ ಸಂಸ್ಥೆಯಲ್ಲಿ ನಾವು ಯಾವುದೇ ಸುಯೋಗಗಳನ್ನು ಹೊಂದಿರಲಿ, ಅವುಗಳಿಗಾಗಿ ನಾವು ಕೃತಜ್ಞತೆಯುಳ್ಳವರಾಗಿರೋಣ ಮತ್ತು ನಮ್ಮ ಪ್ರೀತಿಯ, ಸಂತುಷ್ಟ ದೇವರಿಗೆ ಪವಿತ್ರ ಸೇವೆಯನ್ನು ಸಲ್ಲಿಸಲು ಆನಂದಪೂರ್ವಕವಾಗಿ ಮುಂದುವರಿಯೋಣ.—1 ತಿಮೊಥೆಯ 1:11.
20. ನಮ್ಮ ಅತ್ಯಂತ ಮಹತ್ತರವಾದ ಸುಯೋಗವು ಏನಾಗಿದೆ, ಮತ್ತು ಯಾವುದರ ಕುರಿತು ನಾವು ನಿಶ್ಚಿತರಾಗಿರಬಲ್ಲೆವು?
20 ಆತನ ಸಾಕ್ಷಿಗಳೋಪಾದಿ ಯೆಹೋವನ ಮಹತ್ತರವಾದ ಹೆಸರನ್ನು ಹೇಳಿಕೊಳ್ಳುವ ನಮ್ಮ ಸುಯೋಗದಲ್ಲಿ ಹರ್ಷಿಸಲಿಕ್ಕೆ ವಿಶೇಷವಾಗಿ ನಮಗೆ ಕಾರಣವಿದೆ. ಹೌದು, ನಾವು ಅಪರಿಪೂರ್ಣರಾಗಿದ್ದೇವೆ ಮತ್ತು ಅನೇಕ ಪರೀಕ್ಷೆಗಳನ್ನು ಎದುರಿಸುತ್ತೇವೆ, ಆದರೆ ಯೆಹೋವನ ಸಾಕ್ಷಿಗಳೋಪಾದಿ ನಮ್ಮ ಅದ್ಭುತಕರ ಆಶೀರ್ವಾದಗಳನ್ನು ನಾವು ಮನಸ್ಸಿನಲ್ಲಿಡೋಣ. ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯು ನಮ್ಮನ್ನೆಂದೂ ನಿರಾಶೆಗೊಳಿಸನೆಂಬುದನ್ನು ನೆನಪಿನಲ್ಲಿಡಿ. ಯೆಹೋವನ ಆನಂದವು ನಮ್ಮ ಆಶ್ರಯವಾಗಿದ್ದರೆ, ನಾವು ಯಾವಾಗಲೂ ಆಶೀರ್ವದಿತರಾಗಿರುವೆವು ಎಂಬುದರ ಕುರಿತು ನಾವು ನಿಶ್ಚಿತರಾಗಿರಬಲ್ಲೆವು.
ನೀವು ಹೇಗೆ ಉತ್ತರಿಸುವಿರಿ?
▫ “ಯೆಹೋವನ ಆನಂದವು” ಏನಾಗಿದೆ?
▫ ನಿಜವಾದ ಆನಂದವನ್ನು ಕ್ರೈಸ್ತರು ಹೇಗೆ ಸಂಪಾದಿಸುತ್ತಾರೆ?
▫ ಯೆಹೋವನ ಸಾಕ್ಷಿಗಳು ಆನಂದಭರಿತರಾಗಿರುವುದಕ್ಕೆ ಕೆಲವು ಕಾರಣಗಳಾವುವು?
▫ ಯೆಹೋವನ ಆನಂದವು ಏಕೆ ವಿಫಲವಾಗದ ಒಂದು ಆಶ್ರಯದುರ್ಗವಾಗಿದೆ?