ಯೆಹೋವನ ಆಲಯದ ಹೆಚ್ಚು ಶ್ರೇಷ್ಠವಾದ ಮಹಿಮೆ
“ಈ ಆಲಯವನ್ನು ಮಹಿಮೆಯಿಂದ ತುಂಬಿಸುವೆನು; ಇದು ಸೇನಾಧೀಶ್ವರ ಯೆಹೋವನ ನುಡಿ.”—ಹಗ್ಗಾಯ 2:7, NW.
1. ಪವಿತ್ರಾತ್ಮವು ನಂಬಿಕೆ ಮತ್ತು ಕಾರ್ಯಕ್ಕೆ ಹೇಗೆ ಸಂಬಂಧಿಸಿದೆ?
ಮನೆಯಿಂದ ಮನೆಗೆ ಸಾರುತ್ತಿದ್ದಾಗ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಾಕೆ, ಪೆಂಟೆಕಾಸ್ಟ್ ಪಂಥಕ್ಕೆ ಸೇರಿದ ಒಬ್ಬ ಸ್ತ್ರೀಯನ್ನು ಭೇಟಿಯಾದಳು. ಆಕೆ, ‘ನಮ್ಮಲ್ಲಿ ಪವಿತ್ರಾತ್ಮವಿದೆ, ಆದರೆ ಕೆಲಸಮಾಡುತ್ತಿರುವವರು ನೀವು,’ ಎಂಬುದಾಗಿ ಹೇಳಿದಳು. ಪವಿತ್ರಾತ್ಮವಿರುವ ಒಬ್ಬ ವ್ಯಕ್ತಿಯು, ದೇವರ ಕೆಲಸವನ್ನು ಮಾಡಲು ಸ್ವಾಭಾವಿಕವಾಗಿಯೇ ಪ್ರಚೋದಿಸಲ್ಪಡುವನೆಂದು ಬಹಳ ಜಾಣ್ಮೆಯಿಂದ ಆಕೆಗೆ ವಿವರಿಸಲಾಯಿತು. ಯಾಕೋಬ 2:17 ತಿಳಿಸುವುದು: “ಕ್ರಿಯೆಗಳಿಲ್ಲದಿದ್ದರೆ ನಂಬಿಕೆಯು ತನ್ನಲ್ಲಿ ಜೀವವಿಲ್ಲದ್ದು.” ಯೆಹೋವನ ಆತ್ಮದ ಸಹಾಯದಿಂದ ಆತನ ಸಾಕ್ಷಿಗಳು ಬಲವಾದ ನಂಬಿಕೆಯನ್ನು ಬೆಳೆಸಿಕೊಂಡಿದ್ದಾರೆ, ಮತ್ತು ನೀತಿಯ ಕೆಲಸಗಳನ್ನು—ಪ್ರಧಾನವಾಗಿ ‘ಪರಲೋಕ ರಾಜ್ಯದ ಈ ಸುವಾರ್ತೆಯನ್ನು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರುವ’ ಕೆಲಸವನ್ನು—ಮಾಡುವಂತೆ ಅವರನ್ನು ನೇಮಿಸುವ ಮೂಲಕ, ಆತನು ‘ತನ್ನ ಆಲಯವನ್ನು ಮಹಿಮೆಯಿಂದ ತುಂಬಿ’ಸಿದ್ದಾನೆ. ಯೆಹೋವನಿಗೆ ತೃಪ್ತಿಯಾಗುವ ರೀತಿಯಲ್ಲಿ ಈ ಕೆಲಸವು ಪೂರ್ಣಗೊಳಿಸಲ್ಪಟ್ಟಾಗ, “ಆಗ ಅಂತ್ಯವು ಬರುವದು.”—ಮತ್ತಾಯ 24:14.
2. (ಎ) ಯೆಹೋವನ ಕೆಲಸದಲ್ಲಿ ನಮ್ಮನ್ನು ತಲ್ಲೀನರಾಗಿಸಿಕೊಳ್ಳುವುದು ಯಾವ ಆಶೀರ್ವಾದವನ್ನು ತರುವುದು? (ಬಿ) ತೋರಿಕೆಯ ಯಾವುದೇ “ತಡ”ದ ಕುರಿತು ನಾವೇಕೆ ಸಂತೋಷಿತರಾಗಿರಬೇಕು?
2 ಇಂದು ನಮ್ಮ ಕೆಲಸವು, ನಮ್ಮನ್ನು ನಂಬಿ ಒಪ್ಪಿಸಲ್ಪಟ್ಟ “ಭಾಗ್ಯವಂತ [“ಸಂತೋಷವುಳ್ಳ,” NW]ನಾದ ದೇವರ ಮಹಿಮೆಯನ್ನು ಪ್ರದರ್ಶಿಸುವ ಸುವಾರ್ತೆ”ಯನ್ನು ಇತರರಿಗೆ ಸಾರುವುದರ ಮೇಲೆ ಕೇಂದ್ರೀಕರಿಸಬೇಕೆಂದು, ಯೇಸುವಿನ ಈ ಮಾತುಗಳಿಂದ ನಾವು ತೀರ್ಮಾನಿಸುತ್ತೇವೆ. (1 ತಿಮೊಥೆಯ 1:11) ಯೆಹೋವನ ಸೇವೆಯಲ್ಲಿ ನಮ್ಮನ್ನು ನಾವು ಸಂತೋಷಕರವಾಗಿ ತಲ್ಲೀನರಾಗಿರಿಸಿಕೊಂಡಷ್ಟು, ಅಂತ್ಯವು ಹೆಚ್ಚು ವೇಗವಾಗಿ ಬರುತ್ತಿರುವಂತೆ ತೋರುವುದು. ಹಬಕ್ಕೂಕ 2:2, 3ರಲ್ಲಿ ನಾವು ಯೆಹೋವನ ಮಾತುಗಳನ್ನು ಓದುತ್ತೇವೆ: “ನಿನಗಾದ ದರ್ಶನವನ್ನು ಬರೆ; ಓದುವವರು ಶೀಘ್ರವಾಗಿ ಓದುವಂತೆ ಹಲಿಗೆಗಳ ಮೇಲೆ ಅದನ್ನು ಕೆತ್ತು. ಅದು ಕ್ಲುಪ್ತಕಾಲದಲ್ಲಿ ನೆರವೇರತಕ್ಕದ್ದು, ಆದರೆ ಪರಿಣಾಮಕ್ಕೆ ತ್ವರೆಪಡುತ್ತದೆ, ಮೋಸಮಾಡದು; ತಡವಾದರೂ ಅದಕ್ಕೆ ಕಾದಿರು; ಅದು ಬಂದೇ ಬರುವದು [“ನೆರವೇರುವುದು,” NW], ತಾಮಸವಾಗದು.” ಹೌದು, “ದರ್ಶನ”ವು “ತಡವಾದರೂ” ನೆರವೇರುವುದು. ನಾವು ಯೇಸುವಿನ ರಾಜ್ಯಾಳಿಕೆಯ 83ನೆಯ ವರ್ಷದಲ್ಲಿರುವುದರಿಂದ, ನಾವು ಈಗಲೇ ತಡವಾಗಿರುವ ಅವಧಿಯಲ್ಲಿದ್ದೇವೆಂದು ಕೆಲವರಿಗೆ ಅನಿಸಬಹುದು. ಆದರೂ, ಅಂತ್ಯವು ಇನ್ನೂ ಬಂದಿಲ್ಲದ ಕಾರಣ ನಾವು ಸಂತೋಷಪಡಬಾರದೊ? 1990ಗಳ ಈ ದಶಕದಲ್ಲಿ, ಸುವಾರ್ತೆಯನ್ನು ಸಾರುವ ಕೆಲಸದ ಮೇಲಿನ ನಿರ್ಬಂಧಗಳು, ಅದ್ಭುತಕರವೊ ಎಂಬಂತೆ, ಪೂರ್ವ ಯೂರೋಪ್, ಆಫ್ರಿಕದ ಭಾಗಗಳು, ಮತ್ತು ಇತರ ದೇಶಗಳಲ್ಲಿ ಎತ್ತಲ್ಪಟ್ಟಿವೆ. ತೋರಿಕೆಯ “ತಡ”ವು, ಕೆಲಸವು ಇತ್ತೀಚೆಗೆ ತೆರೆದುಕೊಂಡಿರುವ ಈ ಟೆರಿಟೊರಿಗಳಿಂದ ಅನೇಕ ಹೆಚ್ಚಿನ “ಕುರಿಗಳು” ಒಟ್ಟುಗೂಡಿಸಲ್ಪಡುವುದಕ್ಕೆ ಸಮಯವನ್ನು ನೀಡುತ್ತಿದೆ.—ಯೋಹಾನ 10:16.
3. “ಈ ಸಂತತಿ”ಯ ಕುರಿತಾದ ನಮ್ಮ ಸದ್ಯೋಚಿತ ತಿಳಿವಳಿಕೆಯು, ದೇವರ ಕೆಲಸವನ್ನು ತುರ್ತಿನಿಂದ ಮಾಡುವಂತೆ ನಮ್ಮನ್ನು ಏಕೆ ಪ್ರಚೋದಿಸಬೇಕು?
3 “ತಾಮಸವಾಗದು” ಎಂಬುದಾಗಿ ಪ್ರವಾದಿಯು ಹೇಳುತ್ತಾನೆ. “ಇದೆಲ್ಲಾ ಆಗುವ ತನಕ” ಸದ್ಯದ ದುಷ್ಟ ಸಂತತಿಯು ಗತಿಸಿಹೋಗುವುದಿಲ್ಲವೆಂದು ಯೇಸು ಹೇಳಿದನು. (ಮತ್ತಾಯ 24:34) ‘ಈ ಸಂತತಿಯ’ ಕುರಿತಾದ ನಮ್ಮ ಸದ್ಯೋಚಿತ ತಿಳಿವಳಿಕೆಯು, ನಮ್ಮ ಸಾರುವ ಚಟುವಟಿಕೆಯು ಅಷ್ಟೊಂದು ತುರ್ತಿನದ್ದಾಗಿಲ್ಲ ಎಂಬುದನ್ನು ಅರ್ಥೈಸುತ್ತದೊ?a ನಮ್ಮ ಸಾರುವ ಚಟುವಟಿಕೆಯು ಬಹಳಷ್ಟು ತುರ್ತಿನದ್ದಾಗಿದೆ ಎಂದು ವಾಸ್ತವಾಂಶಗಳು ತೋರಿಸುತ್ತವೆ! ನಮ್ಮ ಸಮಕಾಲೀನ ಸಂತತಿಯು ಹಿಂದಿನ ಇತಿಹಾಸದಲ್ಲೆಲ್ಲಾ ನಡೆದಿರುವುದಕ್ಕೆ ಸಾಟಿಯಿಲ್ಲದ ದುಷ್ಟತನ ಮತ್ತು ಭ್ರಷ್ಟಾಚಾರದ ಒಂದು ಅವಸ್ಥೆಯೊಳಗೆ ಮುಳುಗುತ್ತಿದೆ. (ಅ. ಕೃತ್ಯಗಳು 2:40ನ್ನು ಹೋಲಿಸಿರಿ.) ನಮ್ಮ ಕೆಲಸವನ್ನು ನಾವು ಅವಸರದಿಂದ ಮಾಡಬೇಕು. (2 ತಿಮೊಥೆಯ 4:2) ಮಹಾ ಸಂಕಟದ ಸಮಯದ ಕುರಿತಾದ ಎಲ್ಲ ಪ್ರವಾದನೆಗಳು, ಅದು ಕಳ್ಳನಂತೆ ಅನಿರೀಕ್ಷಿತವಾಗಿ, ಕೂಡಲೇ, ತಿಳಿಯದ ಹಾಗೆ ಬರುವುದೆಂದು ತೋರಿಸುತ್ತವೆ. (1 ಥೆಸಲೊನೀಕ 5:1-4; ಪ್ರಕಟನೆ 3:3; 16:15) “ಆದಕಾರಣ ನೀವು ಸಹ ಸಿದ್ಧವಾಗಿರ್ರಿ; ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.” (ಮತ್ತಾಯ 24:44) ಮಾನವಕುಲದ ಈ ಅಧಾರ್ಮಿಕ ಸಂತತಿಯು ನಿರ್ಮೂಲನದ ಅಂಚಿನಲ್ಲಿರುವಾಗ, ಲೌಕಿಕ ಅಪಕರ್ಷಣೆಗಳ “ಕೆಸರಿನಲ್ಲಿ ಹೊರಳುವದಕ್ಕೆ” ಹಿಂದಿರುಗುವ ಮೂಲಕ, ನಾವು ಖಂಡಿತವಾಗಿಯೂ ಅನಂತ ಜೀವನದ ನಮ್ಮ ಅಮೂಲ್ಯ ನಿರೀಕ್ಷೆಯನ್ನು ಕಳೆದುಕೊಳ್ಳಲು ಬಯಸಬಾರದು!—2 ಪೇತ್ರ 2:22; 3:10; ಲೂಕ 21:32-36.
4. ಯಾವ ಸನ್ನಿವೇಶವು “ಸರಿಯಾದ ಸಮಯಕ್ಕೆ ಆಹಾರದ” ಹೆಚ್ಚಿನ ಸರಬರಾಯಿಗಳನ್ನು ಅವಶ್ಯಗೊಳಿಸಿದೆ, ಮತ್ತು ಈ ಅಗತ್ಯವು ಹೇಗೆ ಪೂರೈಸಲ್ಪಟ್ಟಿದೆ?
4 ಯೇಸುವಿನ ಪ್ರವಾದನೆಗೆ ಸರಿಯಾಗಿ, 1914ರಲ್ಲಿ ಮಾನವಕುಲವು “ವಿಷಯಗಳ ವ್ಯವಸ್ಥೆಯ ಸಮಾಪ್ತಿಯನ್ನು” (NW) ಪ್ರವೇಶಿಸಿದಾಗ, “ಪ್ರಸವವೇದನೆಯ ಪ್ರಾರಂಭ”ವಾಯಿತು. ಸಂಕಟಗಳು, ದುರಂತಕರ ಘಟನೆಗಳು, ಮತ್ತು ನಿಯಮರಾಹಿತ್ಯವು ಈ ದಿನದ ವರೆಗೆ ವೃದ್ಧಿಯಾಗಿವೆ. (ಮತ್ತಾಯ 24:3-8, 12) ಅದೇ ಸಮಯದಲ್ಲಿ ತಮ್ಮ ಯಜಮಾನನಾದ ಕ್ರಿಸ್ತನ ಮನೆವಾರ್ತೆಗೆ “ಸರಿಯಾದ ಸಮಯದಲ್ಲಿ” ಆತ್ಮಿಕ “ಆಹಾರವನ್ನು” ಒದಗಿಸಲು, ಯೆಹೋವನು ಅಭಿಷಿಕ್ತ ನಂಬಿಗಸ್ತನೂ ವಿವೇಕಿಯೂ ಆದ ಆಳು ವರ್ಗವನ್ನು ನೇಮಿಸಿದ್ದಾನೆ. (ಮತ್ತಾಯ 24:45-47) ಪರಲೋಕದಲ್ಲಿರುವ ತನ್ನ ಸಿಂಹಾಸನದಿಂದ ಈ ಮೆಸ್ಸೀಯ ರಾಜನು, ಭೂಮಿಯ ಆದ್ಯಂತ ಒಂದು ಅದ್ಭುತಕರವಾದ ಆತ್ಮಿಕ ಆಹಾರವನ್ನು ಉಣಿಸುವ ಕಾರ್ಯಕ್ರಮವೊಂದನ್ನು ಈಗ ನಿರ್ದೇಶಿಸುತ್ತಿದ್ದಾನೆ.
ಹೇರಳವಾದ “ಆಹಾರ ಸರಬರಾಯಿಗಳು”
5. “ಆಹಾರ”ದ ಮೂಲ ವಿಷಯವು, ಯಾವ ಗಮನವನ್ನು ಪಡೆಯುತ್ತಿದೆ?
5 “ಆಹಾರ ಸರಬರಾಯಿಗಳ” ತಯಾರಿಯನ್ನು ಪರಿಗಣಿಸಿರಿ. (ಲೂಕ 12:42, NW) ಕ್ರೈಸ್ತ ಭಕ್ಷ್ಯಗಳ ಪಟ್ಟಿ (ಮೆನ್ಯೂ)ಯಲ್ಲಿರುವ ಮೂಲ ವಿಷಯವು, ದೇವರ ವಾಕ್ಯವಾದ ಬೈಬಲ್ ಆಗಿದೆ. ಬೈಬಲನ್ನು ಪರಿಣಾಮಕಾರಿಯಾಗಿ ಕಲಿಸಲಿಕ್ಕಾಗಿ, ಓದಲು ಒಂದು ಸ್ಫುಟವಾದ, ನಿಷ್ಕೃಷ್ಟ ಭಾಷಾಂತರವು ಪ್ರಧಾನ ಆವಶ್ಯಕತೆಯಾಗಿದೆ. ಗತವರ್ಷಗಳಲ್ಲಿ, ವಿಶೇಷವಾಗಿ 1950ರಲ್ಲಿ ಆರಂಭಿಸುತ್ತಾ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಕ್ರಿಸ್ಟಿಯನ್ ಗ್ರೀಕ್ ಸ್ಕ್ರಿಪ್ಚರ್ಸ್ ಇಂಗ್ಲಿಷ್ ಭಾಷೆಯಲ್ಲಿ ಬಿಡುಗಡೆಗೊಳಿಸಲ್ಪಟ್ಟಾಗ, ಈ ಆವಶ್ಯಕತೆಯು ಪ್ರಗತಿಪರವಾಗಿ ಪೂರೈಸಲ್ಪಟ್ಟಿದೆ. 1961ರೊಳಗಾಗಿ, ಇಡೀ ಬೈಬಲಿನ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಲಭ್ಯವಾಗಿತ್ತು, ಮತ್ತು ಇತರ ಪ್ರಧಾನ ಭಾಷೆಗಳಲ್ಲಿ ಮುದ್ರಣಗಳು ಬೇಗನೆ ಹೊರಬಂದವು. 1996ರ ಸೇವಾ ವರ್ಷದಲ್ಲಿ ಬಿಡುಗಡೆಗೊಳಿಸಲ್ಪಟ್ಟ 3 ಸಂಪುಟಗಳು, ಮೊತ್ತವನ್ನು 27ರ ಸಂಖ್ಯೆಗೆ ತರುತ್ತವೆ, ಅವುಗಳಲ್ಲಿ 14 ಸಂಪೂರ್ಣ ಬೈಬಲ್ಗಳಾಗಿವೆ. ಬೈಬಲ್ ಅಷ್ಟೇ ಅಲ್ಲದೆ ಬೈಬಲ್ ಸಹಾಯಕಗಳಿಗೆ ಸಂಬಂಧಿಸಿದ ಈ ಕೆಲಸವನ್ನು ನಿರ್ವಹಿಸಲು, ಸುಮಾರು 1,174 ಸಮರ್ಪಿತ ಕ್ರೈಸ್ತರು ಈಗ 77 ದೇಶಗಳಲ್ಲಿ ಪೂರ್ಣ ಸಮಯ ಭಾಷಾಂತರದ ಕೆಲಸಮಾಡುತ್ತಿದ್ದಾರೆ.
6. ಬೈಬಲ್ ಪ್ರಕಾಶನಗಳಿಗಾಗಿರುವ ಬೇಡಿಕೆಯನ್ನು ಸೊಸೈಟಿಯು ಹೇಗೆ ಪೂರೈಸಿದೆ?
6 ಬಹುದೊಡ್ಡ ಸಂಖ್ಯೆಯ ಭಾಷಾಂತರಕಾರರ ಕೆಲಸವನ್ನು ಸಮರ್ಥಿಸುತ್ತಾ, ವಾಚ್ ಟವರ್ ಸೊಸೈಟಿಯ 24 ಮುದ್ರಣ ಬ್ರಾಂಚ್ಗಳು, ಹಿಂದೆಂದಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ಪ್ರಕಾಶನಗಳನ್ನು ಉತ್ಪಾದಿಸುತ್ತಿವೆ. ಈ ಉದ್ದೇಶಕ್ಕಾಗಿ, ಪ್ರಧಾನ ಬ್ರಾಂಚ್ಗಳಲ್ಲಿ ಹೆಚ್ಚುವರಿಯ ಅತಿವೇಗದ ರೋಟರಿ ಮುದ್ರಣ ಯಂತ್ರಗಳು ಸ್ಥಾಪಿಸಲ್ಪಡುತ್ತಾ ಇವೆ. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಉತ್ಪಾದನೆಯು, 94,38,92,500 ಪ್ರತಿಗಳ ಒಟ್ಟು ಮೊತ್ತವನ್ನು ತಲಪುತ್ತಾ, ತಿಂಗಳು ತಿಂಗಳು ಹೆಚ್ಚಿದೆ; ಈ ವರ್ಷಕ್ಕೆ ಅದು 13.4 ಪ್ರತಿಶತ ಅಭಿವೃದ್ಧಿಯಾಗಿದೆ. ಅಮೆರಿಕ, ಬ್ರಸಿಲ್, ಫಿನ್ಲೆಂಡ್, ಜರ್ಮನಿ, ಇಟಲಿ, ಜಪಾನ್, ಕೊರಿಯ ಮತ್ತು ಮೆಕ್ಸಿಕೊ ದೇಶಗಳಲ್ಲಿಯೇ, ಬೈಬಲ್ ಮತ್ತು ಹಾರ್ಡ್ಬೌಂಡ್ ಪುಸ್ತಕಗಳ ಒಟ್ಟು ಉತ್ಪಾದನೆಯು, 1995ರಲ್ಲಿ 40 ಪ್ರತಿಶತದಿಂದ 1996ರಲ್ಲಿ 7,67,60,098 ಪ್ರತಿಗಳಿಗೆ ಅಭಿವೃದ್ಧಿ ಪಡೆದಿದೆ. ಇತರ ಬ್ರಾಂಚ್ಗಳೂ ಸಾಹಿತ್ಯ ಉತ್ಪಾದನೆಯಲ್ಲಿನ ಒಟ್ಟು ಅಭಿವೃದ್ಧಿಗೆ, ಗಣನೀಯ ನೆರವನ್ನು ನೀಡಿವೆ.
7. ಯೆಶಾಯ 54:2, ಈಗ ಹೆಚ್ಚು ಜರೂರಿಯ ವಿಷಯವಾಗಿರುವುದು ಹೇಗೆ?
7 ಪೂರ್ವ ಯೂರೋಪ್ ಮತ್ತು ಆಫ್ರಿಕದಲ್ಲಿರುವ ಯೆಹೋವನ ಸಾಕ್ಷಿಗಳ ಮೇಲಿನ ನಿರ್ಬಂಧಗಳ ತೆಗೆದುಹಾಕುವಿಕೆಯ ಮೂಲಕ, 1990ಗಳಲ್ಲಿ ಹೆಚ್ಚಿನ ಅಭಿವೃದ್ಧಿಯ ಅಗತ್ಯ ಉಂಟಾಯಿತು. ಈ ಸ್ಥಳಗಳಲ್ಲಿ ಆತ್ಮಿಕ ಆಹಾರಕ್ಕಾಗಿರುವ ಹಸಿವು ಮಹತ್ತರವಾಗಿದೆ. ಆದುದರಿಂದ ಯೆಶಾಯನ ಮಾತುಗಳು ಹಿಂದೆಂದಿಗಿಂತಲೂ ಹೆಚ್ಚು ಜರೂರಿಯದ್ದಾಗಿವೆ: “ನಿನ್ನ ಗುಡಾರದ ಸ್ಥಳವನ್ನು ವಿಸ್ತರಿಸು, ನಿನ್ನ ನಿವಾಸದ ಪರದೆಗಳು ಹರಡಲಿ, ಸಂಕೋಚಪಡಬೇಡ; ನಿನ್ನ ಹಗ್ಗಗಳನ್ನು ಉದ್ದಮಾಡಿ ಗೂಟಗಳನ್ನು ಬಲಪಡಿಸು.”—ಯೆಶಾಯ 54:2.
8. ಹಣಕಾಸಿನ ಬೆಂಬಲವನ್ನು ಒದಗಿಸಲು ಯಾವ ಉದಾರ ಪ್ರತಿಕ್ರಿಯೆಯು ಸಹಾಯಮಾಡುತ್ತಿದೆ?
8 ಹೀಗೆ, ಸೊಸೈಟಿಯ 104 ಬ್ರಾಂಚ್ಗಳಲ್ಲಿ, ಹೆಚ್ಚಿನ ಬ್ರಾಂಚ್ಗಳ ಸೌಕರ್ಯಗಳನ್ನು ವಿಸ್ತರಿಸುವ ಅಗತ್ಯವಿದ್ದಿರುತ್ತದೆ. ಹೊಸದಾಗಿ ತೆರೆಯಲ್ಪಟ್ಟ ಹೆಚ್ಚಿನ ಟೆರಿಟೊರಿಗಳಲ್ಲಿನ ಕಠಿನವಾದ ಆರ್ಥಿಕ ಪರಿಸ್ಥಿತಿಗಳಿಂದಾಗಿ, ಈ ವಿಸ್ತರಣೆಗಾಗಿರುವ ವೆಚ್ಚದ ದೊಡ್ಡ ಮೊತ್ತವು, ಲೋಕವ್ಯಾಪಕವಾದ ಕೆಲಸಕ್ಕೆ ಹೆಚ್ಚು ಸಮೃದ್ಧವಾದ ದೇಶಗಳಿಂದ ಬರುವ ದಾನಗಳಿಂದ ನೋಡಿಕೊಳ್ಳಲಾಗುತ್ತದೆ. ಸಂತೋಷಕರವಾಗಿ, ಸಭೆಗಳು ಮತ್ತು ವ್ಯಕ್ತಿಗಳು ವಿಮೋಚನಕಾಂಡ 35:21ರ ಮನೋಭಾವದಲ್ಲಿ ಹೃತ್ಪೂರ್ವಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ: “ಯಾರಾರನ್ನು ಹೃದಯವು ಪ್ರೇರಿಸಿತೋ ಯಾರಾರ ಮನಸ್ಸು ಸಿದ್ಧವಾಗಿತ್ತೋ ಅವರೆಲ್ಲರೂ ಬಂದು ದೇವದರ್ಶನದ ಗುಡಾರದ ಕೆಲಸಕ್ಕೋಸ್ಕರವೂ ಅದರ ಸಮಸ್ತಸೇವೆಗೋಸ್ಕರವೂ ದೀಕ್ಷಾವಸ್ತ್ರಗಳಿಗೋಸ್ಕರವೂ ಯೆಹೋವನಿಗೆ ಕಾಣಿಕೆಗಳನ್ನು ತಂದರು.” ಈ ಉದಾರ ಕೊಡುವಿಕೆಯಲ್ಲಿ ಪಾಲ್ಗೊಳ್ಳುತ್ತಿರುವವರೆಲ್ಲರಿಗೆ ಉಪಕಾರ ಸಲ್ಲಿಸಲು ನಾವು ಈ ಅವಕಾಶದ ಸದುಪಯೋಗ ಮಾಡಿಕೊಳ್ಳುತ್ತೇವೆ.—2 ಕೊರಿಂಥ 9:11.
9. ರೋಮಾಪುರ 10:13, 18 ಇಂದು ಹೇಗೆ ನೆರವೇರುತ್ತಾ ಇದೆ?
9 1996ರಲ್ಲಿ ವಾಚ್ ಟವರ್ ಸೊಸೈಟಿಯ ಪ್ರಕಾಶನಗಳು, ನಿಜವಾಗಿಯೂ ಭೂಮಿಯ ಕಟ್ಟಕಡೆಯ ವರೆಗೆ ಯೆಹೋವನ ಹೆಸರು ಮತ್ತು ಉದ್ದೇಶಗಳನ್ನು ಮಹಿಮೆಪಡಿಸಿವೆ. ಅದು ಅಪೊಸ್ತಲ ಪೌಲನು ಮುಂತಿಳಿಸಿದಂತೆಯೇ ಇದೆ. ಯೋವೇಲನ ಪ್ರವಾದನೆ ಮತ್ತು 19ನೆಯ ಕೀರ್ತನೆಯನ್ನು ಉದ್ಧರಿಸುತ್ತಾ, ಅವನು ಬರೆದುದು: “ಕರ್ತನ [“ಯೆಹೋವನ,” NW] ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದೆಂದು ಬರೆದದೆ. ಆದರೂ ಅವರ ಕಿವಿಗೆ ಬೀಳಲಿಲ್ಲವೇನು ಎಂದು ಕೇಳುತ್ತೇನೆ. ಬಿದ್ದದ್ದು ನಿಶ್ಚಯ. ಸಾರುವವರ ಧ್ವನಿಯು ಭೂಮಿಯಲ್ಲೆಲ್ಲಾ ಪ್ರಸರಿಸಿತು, ಅವರ ನುಡಿಗಳು ಲೋಕದ ಕಟ್ಟಕಡೆಯ ವರೆಗೂ ವ್ಯಾಪಿಸಿದವು.” (ರೋಮಾಪುರ 10:13, 18) ಯೆಹೋವ ಎಂಬ ಅಮೂಲ್ಯವಾದ ಹೆಸರನ್ನು ಹೀಗೆ ಬಹಳವಾಗಿ ಶ್ಲಾಘಿಸುವ ಮೂಲಕ, ಆತನ ಜನರು ಆತನ ಆರಾಧನಾಲಯವನ್ನು ಮಹಿಮೆಯಿಂದ ತುಂಬಿಸುವುದರಲ್ಲಿ ಒಂದು ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಈ ಘೋಷಣೆಯು ವಿಶೇಷವಾಗಿ 1996ರಲ್ಲಿ ಹೇಗೆ ಏಳಿಗೆ ಪಡೆದಿದೆ? ಪುಟಗಳು 18ರಿಂದ 21ರ ವರೆಗಿರುವ ರೇಖಾಪಟವನ್ನು ದಯವಿಟ್ಟು ಪರಿಶೀಲಿಸಿರಿ.
ಲೋಕವ್ಯಾಪಕವಾಗಿ ಕೊಯ್ಯುವುದು
10. ಪುಟಗಳು 18ರಿಂದ 21ರ ವರೆಗಿರುವ ರೇಖಾಪಟದಲ್ಲಿ ಸಾರಾಂಶಿಸಲ್ಪಟ್ಟಂತೆ, ಯೆಹೋವನ ಜನರ ಚಟುವಟಿಕೆಯಲ್ಲಿ ಯಾವ ಎದ್ದುಕಾಣುವ ವೈಶಿಷ್ಟ್ಯಗಳನ್ನು ನೀವು ಗಮನಿಸುತ್ತೀರಿ?
10 “ಬೆಳೆಯು ಬಹಳ, ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ ಯಜಮಾನನನ್ನು—ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ,” ಎಂಬುದಾಗಿ ಲೂಕ 10:2ರಲ್ಲಿ ಕಂಡುಕೊಳ್ಳಲ್ಪಡುವ ಯೇಸುವಿನ ಮಾತುಗಳಿಗೆ ಹಿಂದೆಂದಿಗಿಂತಲೂ ಈಗ ಹೆಚ್ಚಿನ ಪ್ರಾಬಲ್ಯವಿದೆ. ಆ ಕರೆಗೆ ನೀವು ಓಗೊಡುತ್ತಿದ್ದೀರೊ? ಭೂಮಿಯ ಸುತ್ತಲೂ ಲಕ್ಷಾಂತರ ಜನರು ಓಗೊಡುತ್ತಿದ್ದಾರೆ. ಇದು 1996ರಲ್ಲಿ ಕ್ಷೇತ್ರ ಸೇವೆಯ ವರದಿಮಾಡಿದ 54,13,769 ರಾಜ್ಯ ಪ್ರಚಾರಕರ ಹೊಸ ಉಚ್ಚಾಂಕದಿಂದ ವ್ಯಕ್ತವಾಗುತ್ತದೆ. ಅಲ್ಲದೆ, 3,66,579 ಹೊಸ ಸಹೋದರಸಹೋದರಿಯರು ದೀಕ್ಷಾಸ್ನಾನ ಪಡೆದುಕೊಂಡರು. ‘ಯೆಹೋವನ ಆರಾಧನಾಲಯವನ್ನು ಮಹಿಮೆಯಿಂದ ತುಂಬಿಸುವುದರಲ್ಲಿ’ ಈಗ ಭಾಗವಹಿಸುತ್ತಿರುವ “ಸಮಸ್ತಜನಾಂಗಗಳ ಇಷ್ಟವಸ್ತುಗಳ”ನ್ನು ನಾವು ಎಷ್ಟು ಅತ್ಯಮೂಲ್ಯವೆಂದೆಣಿಸುತ್ತೇವೆ!—ಹಗ್ಗಾಯ 2:7.
11. ಮಿತಿಮೀರಿ ಆನಂದಿಸಲು ನಮಗೆಲ್ಲರಿಗೆ ಕಾರಣವಿರುವುದೇಕೆ?
11 ಹೊಸದಾಗಿ ತೆರೆಯಲ್ಪಟ್ಟ ಕ್ಷೇತ್ರಗಳಲ್ಲಿನ ವಿಸ್ತರಣೆಯ ವರದಿಗಳು ಅತಿ ಗಮನಾರ್ಹವಾಗಿವೆ. ಇಂತಹ ಬೆಳವಣಿಗೆಯನ್ನು ಈಗ ಅನುಭವಿಸುತ್ತಿರುವವರನ್ನು ಕಂಡು ನಾವು ಅಸೂಯೆಪಡುತ್ತೇವೊ? ಇಲ್ಲ, ಅದಕ್ಕೆ ವಿರುದ್ಧವಾಗಿ, ನಾವು ಅವರೊಂದಿಗೆ ಹರ್ಷಿಸುತ್ತೇವೆ. ಎಲ್ಲ ದೇಶಗಳಿಗೆ ಚಿಕ್ಕ ಆರಂಭಗಳಿದ್ದವು. ಹಗ್ಗಾಯನ ಸಮಕಾಲೀನ ಪ್ರವಾದಿಯಾದ ಜೆಕರ್ಯನು ಬರೆದುದು: “ಅಲ್ಪಕಾರ್ಯಗಳ ದಿನವನ್ನು ಯಾರು ತಿರಸ್ಕರಿಸಾರು?” (ಜೆಕರ್ಯ 4:10) ಯಾವ ದೇಶಗಳಲ್ಲಿ ಸಾಕ್ಷಿಕಾರ್ಯವು ಚೆನ್ನಾಗಿ ಸ್ಥಾಪಿತವಾಗಿದೆಯೊ ಅಲ್ಲಿ ಈಗ ಲಕ್ಷಾಂತರ ರಾಜ್ಯ ಪ್ರಚಾರಕರಿದ್ದಾರೆಂಬುದಕ್ಕೆ ನಾವು ಬಹಳಷ್ಟು ಹರ್ಷಿಸುತ್ತೇವೆ, ಮತ್ತು ಟೆರಿಟೊರಿಯು ಪದೇ ಪದೇ ಆವರಿಸಲ್ಪಡುತ್ತದೆ; ಅನೇಕ ದೊಡ್ಡ ನಗರಗಳಲ್ಲಿ ಪ್ರತಿವಾರವೂ ಅದು ಆವರಿಸಲ್ಪಡುತ್ತದೆ. ಕೆಲಸವು ನಿರ್ಬಂಧಿಸಲ್ಪಟ್ಟಿದ್ದ ದೇಶಗಳಿಗೆ ಯೆಹೋವನು ಈಗ ರಕ್ಷಣೆಯ ಅವಕಾಶವನ್ನು ನೀಡುತ್ತಿರುವಾಗ, ಕೆಲಸವನ್ನು ನಿಧಾನಿಸಲು ನಮಗೆ ಕಾರಣವಿದೆಯೊ? ಖಂಡಿವಾಗಿಯೂ ಇಲ್ಲ! “ಹೊಲವಂದರೆ ಈ ಲೋಕ,” ಎಂದು ಯೇಸು ಹೇಳಿದನು. (ಮತ್ತಾಯ 13:38) ಯೆಹೂದಿ ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಸಮಯದಲ್ಲಿ ಆದಿ ಶಿಷ್ಯರು ಒಂದು ಸಂಪೂರ್ಣ ಸಾಕ್ಷಿಯನ್ನು ನೀಡಿದಂತೆಯೇ, ಈಗಲೂ ಒಂದು ಸಂಪೂರ್ಣ ಸಾಕ್ಷಿಯನ್ನು ನೀಡುತ್ತಿರಬೇಕು.—ಅ. ಕೃತ್ಯಗಳು 2:40; 10:42; 20:24; 28:23.
ಸರ್ವದಾ ಮುಂದೆ ಸಾಗುವುದು
12. “ನೇರವಾಗಿ ಮುಂದೆ” ಸಾಗಲು ನಮಗೆ ಯಾವ ಪ್ರೇರಕವಿದೆ? (“‘ಭೂಮಿಯ ಕಟ್ಟಕಡೆಯಿಂದ’ ಕೊಯ್ಯುವುದು” ಎಂಬ ರೇಖಾಪಟವನ್ನೂ ನೋಡಿರಿ.)
12 ಹೌದು, ನಾವು ಯೆಹೋವನ ದೇವದೂತ ಸಂಬಂಧಿತ ಸ್ವರ್ಗೀಯ ರಥದೊಂದಿಗೆ “ನೇರವಾಗಿ ಮುಂದೆ” (NW) ಹೆಜ್ಜೆಯಿಡುತ್ತಾ ಸಾಗಬೇಕು. (ಯೆಹೆಜ್ಕೇಲ 1:12) ನಾವು ಪೇತ್ರನ ಮಾತುಗಳನ್ನು ಜ್ಞಾಪಿಸಿಕೊಳ್ಳುತ್ತೇವೆ: “ಕರ್ತನು ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ತಡಮಾಡುತ್ತಾನೆಂಬದಾಗಿ ಕೆಲವರು ಅರ್ಥಮಾಡಿಕೊಳ್ಳುವ ಪ್ರಕಾರ ಆತನು ತಡಮಾಡುವವನಲ್ಲ. ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ.” (2 ಪೇತ್ರ 3:9) ಆರ್ಥಿಕವಾಗಿ ಬಡ ದೇಶಗಳಲ್ಲಿನ ನಮ್ಮ ಸಹೋದರರ ಆದರ್ಶಪ್ರಾಯ ಹುರುಪು ನಮ್ಮನ್ನು ಹುರಿದುಂಬಿಸಲಿ. ಅರ್ಮಗೆದೋನಿನ ತಲೆದೋರುವಿಕೆಯಲ್ಲಿ ಯಾವುದೇ ತೋರಿಕೆಯ ತಡವಾಗುವಿಕೆಯು, ಈ ದೇಶಗಳಲ್ಲಿ ಅಷ್ಟೇ ಅಲ್ಲದೆ ಚೆನ್ನಾಗಿ ಆವರಿಸಲ್ಪಟ್ಟ ಅನೇಕ ಟೆರಿಟೊರಿಗಳಲ್ಲಿ ನೂರಾರು ಸಾವಿರ ಜನರು ಒಟ್ಟುಗೂಡಿಸಲ್ಪಡುವಂತೆ ಅನುಮತಿಸುತ್ತಿದೆ. ಅದರ ಕುರಿತು ತಪ್ಪಾಗಿ ಗ್ರಹಿಸಬೇಡಿ: “ಯೆಹೋವನ ಮಹಾದಿನವು ಹತ್ತಿರವಾಯಿತು, ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ.” (ಚೆಫನ್ಯ 1:14) ಸಂಪೂರ್ಣವಾದ ಅಂತಿಮ ಸಾಕ್ಷಿಯನ್ನು ನೀಡುವುದರಲ್ಲಿ ನಾವೂ ತ್ವರೆಮಾಡಬೇಕು!
13, 14. (ಎ) 1996ರಲ್ಲಿ ಪ್ರಕಾಶನಗಳ ವಿತರಣೆಯ ಕುರಿತು ಏನು ಹೇಳಸಾಧ್ಯವಿದೆ? (ಬಿ) ಪ್ರತಿ ವರ್ಷ ಸಭೆಗಳು ಯಾವ ವಿಶೇಷ ಯೋಜನೆಗಳನ್ನು ಮಾಡಬಹುದು, ಮತ್ತು ಅದರಲ್ಲಿ ಪಾಲ್ಗೊಳ್ಳಲು ನೀವು ಹೇಗೆ ಯೋಜಿಸುತ್ತಿದ್ದೀರಿ?
13 ವಿವರಗಳು ಸೇವಾ ರೇಖಾಪಟದಲ್ಲಿ ಕಂಡುಬರದಿದ್ದರೂ, ಕಳೆದ ವರ್ಷ ಬೈಬಲ್ಗಳು, ಪುಸ್ತಕಗಳು, ಮತ್ತು ಪತ್ರಿಕೆಗಳ ವಿತರಣೆಯಲ್ಲಿ ಗಮನಾರ್ಹವಾದ ಅಭಿವೃದ್ಧಿ ಕಂಡುಬಂದಿದೆ. ಉದಾಹರಣೆಗೆ, ಒಟ್ಟು 54,36,67,923 ಪ್ರತಿಗಳು ನೀಡಲ್ಪಟ್ಟು, ಲೋಕವ್ಯಾಪಕ ಪತ್ರಿಕಾ ಕೊಡಿಕೆಗಳು 19 ಪ್ರತಿಶತ ಅಭಿವೃದ್ಧಿಯನ್ನು ತೋರಿಸಿದವು. ನಮ್ಮ ಪತ್ರಿಕೆಗಳು ವಿವಿಧ ರೂಪದ ಸಾರುವಿಕೆಗೆ—ರಸ್ತೆಗಳಲ್ಲಿ, ಉದ್ಯಾನವನಗಳಲ್ಲಿ, ಬಸ್ ಸ್ಟಾಪ್ಗಳಲ್ಲಿ, ವ್ಯಾಪಾರ ಕ್ಷೇತ್ರಗಳಲ್ಲಿ—ಅನುಕೂಲಕರವಾಗಿವೆ. ರಾಜ್ಯ ಸಾರುವಿಕೆಯಿಂದ ಪದೇ ಪದೇ ಆವರಿಸಲ್ಪಟ್ಟ ಕೆಲವು ಟೆರಿಟೊರಿಗಳಲ್ಲಿ, ವೃತ್ತಿಪರ ಜನರು ನಮ್ಮ ಪತ್ರಿಕೆಗಳ ಗುಣಮಟ್ಟದಿಂದ ಪ್ರಭಾವಿತರಾಗಿದ್ದಾರೆ, ಮತ್ತು ಬೈಬಲ್ ಅಧ್ಯಯನಗಳನ್ನು ಸ್ವೀಕರಿಸುತ್ತಿದ್ದಾರೆಂದು ವರದಿಗಳು ಸೂಚಿಸುತ್ತವೆ.
14 ಪ್ರತಿವರ್ಷ ಎಪ್ರಿಲ್ ತಿಂಗಳಿನಲ್ಲಿ, ಸಭೆಗಳು ಮನೆಯಿಂದ ಮನೆಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಒಂದು ಇಡೀ ದಿನದ ಕಾರ್ಯಾಚರಣೆಯನ್ನು ಏರ್ಪಡಿಸುತ್ತಾ, ಸಾಮಾನ್ಯವಾಗಿ ವಿಶೇಷ ಪತ್ರಿಕಾ ಚಟುವಟಿಕೆಯನ್ನು ಸಂಘಟಿಸುತ್ತವೆ. ಎಪ್ರಿಲ್ 1997ರಲ್ಲಿನ ಈ ಕಾರ್ಯಾಚರಣೆಯಲ್ಲಿ ನಿಮ್ಮ ಸಭೆಯು ಭಾಗವಹಿಸುವುದೊ? ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಎದ್ದುಕಾಣುವ ಎಪ್ರಿಲ್ ಸಂಚಿಕೆಗಳು ತಯಾರಿಸಲ್ಪಟ್ಟಿವೆ, ಮತ್ತು ಲೋಕವ್ಯಾಪಕವಾಗಿ ಅವುಗಳ ಏಕಕಾಲಿಕ ನಿರೂಪಣೆಯು ಖಂಡಿತವಾಗಿ ಪರಿಣಾಮಕಾರಕವಾಗಿರಬೇಕು! ಸೈಪ್ರಸ್ ದ್ವೀಪದಲ್ಲಿರುವ ಸಭೆಗಳು, “ಸಾಧ್ಯವಿರುವ ಪ್ರತಿಯೊಬ್ಬರಿಗೆ ರಾಜ್ಯ ಸಂದೇಶವನ್ನು ನೀಡಿರಿ” ಎಂಬ ವಿಷಯವನ್ನು ತಮ್ಮ ಗುರಿನುಡಿಯಾಗಿ ಉಪಯೋಗಿಸುತ್ತಾ, ಪ್ರತಿ ತಿಂಗಳು ನಿಗದಿಸಲ್ಪಟ್ಟ ಅಂತಹ ಪತ್ರಿಕಾ ಕೆಲಸದಲ್ಲಿ ಭಾಗವಹಿಸುತ್ತಾ, ಆ ವರ್ಷಕ್ಕಾಗಿ ನೀಡಲ್ಪಟ್ಟ 2,75,359 ಪತ್ರಿಕೆಗಳ ಒಂದು ಹೊಸ ಉಚ್ಚಾಂಕವನ್ನು ತಲಪಿದವು. ಅದು 54 ಪ್ರತಿಶತ ಅಭಿವೃದ್ಧಿಯಾಗಿದೆ.
ಹಗ್ಗಾಯನ ಅಂತಿಮ ಸಂದೇಶಗಳು
15. (ಎ) ಹಗ್ಗಾಯನ ಮುಖಾಂತರ ಇನ್ನೂ ಹೆಚ್ಚಿನ ಸಂದೇಶಗಳನ್ನು ಯೆಹೋವನು ಏಕೆ ಕಳುಹಿಸಿದನು? (ಬಿ) ಯಾವ ಪಾಠವನ್ನು ಹಗ್ಗಾಯನ ಮೂರನೆಯ ಸಂದೇಶವು ನಮಗೆ ತಿಳಿಯಪಡಿಸಬೇಕು?
15 ಯೆಹೋವನು ತನ್ನ ಎರಡನೆಯ ಸಂದೇಶವನ್ನು ತಿಳಿಯಪಡಿಸಿದ 63 ದಿನಗಳ ನಂತರ, ಮೂರನೆಯ ಘೋಷಣೆಯೊಂದಿಗೆ ಹಗ್ಗಾಯನನ್ನು ಕಳುಹಿಸಿದನು. ಆ ಘೋಷಣೆಯನ್ನು ಇಂದು ನಾವು ಹೃದಯಕ್ಕೆ ತಂದುಕೊಳ್ಳುವುದು ಒಳ್ಳೆಯದು. ಯೆಹೂದ್ಯರು ಆ ಸಮಯದಲ್ಲಿ ದೇವಾಲಯದ ಅಸ್ತಿವಾರವನ್ನು—ನಿಜವಾಗಿಯೂ ಅವರು ಅದನ್ನು 17 ವರ್ಷಗಳ ಮುಂಚೆಯೇ ಹಾಕಿದ್ದರು—ಹಾಕುತ್ತಿದ್ದರೊ ಎಂಬಂತೆ ಹಗ್ಗಾಯನು ಮಾತಾಡಿದನು. ಪುನಃ ಒಮ್ಮೆ ಒಂದು ಶುದ್ಧೀಕರಣವನ್ನು ಮಾಡುವುದು ಯೋಗ್ಯವೆಂದು ಯೆಹೋವನು ಮನಗಂಡನು. ಯಾಜಕರು ಮತ್ತು ಜನರು ಉದಾಸೀನರಾಗಿದ್ದರು; ಆದಕಾರಣ, ಅವರು ಯೆಹೋವನ ದೃಷ್ಟಿಯಲ್ಲಿ ಅಶುದ್ಧರಾಗಿದ್ದರು. ಇಂದು ಯೆಹೋವನ ಜನರಲ್ಲಿ ಕೆಲವರು, ತಮ್ಮನ್ನು ಲೋಕದ ಸ್ವಚ್ಛಂದ ಪ್ರವೃತ್ತಿ ಹಾಗೂ ಪ್ರಾಪಂಚಿಕ ಮಾರ್ಗಗಳಲ್ಲಿಯೂ ಒಳಪಡಿಸಿಕೊಳ್ಳುತ್ತಾ, ತಮ್ಮ ಕೆಲಸದಲ್ಲಿ ಉದಾಸೀನರಾಗಿದ್ದಾರೊ? “ಈ ದಿನ ಮೊದಲುಗೊಂಡು ನಿಮ್ಮನ್ನು ಆಶೀರ್ವದಿಸುವೆನು,” (NW) ಎಂಬ ಆತನ ವಾಗ್ದಾನದ ವಿಷಯವಾಗಿ ನಾವು ಭರವಸೆಯಿಂದಿದ್ದು, ನಾವೆಲ್ಲರೂ ಯೆಹೋವನ ಹೆಸರಿಗೆ ಮಹಿಮೆಯನ್ನು ತರುವುದರ ಮೇಲೆ “ಈ ದಿನದಿಂದ ಹಿಡಿದು, ಮುಂದೆ” (NW) ನಮ್ಮ ಹೃದಯಗಳನ್ನು ಕೇಂದ್ರೀಕರಿಸುವುದು ಜರೂರಿಯದ್ದು.—ಹಗ್ಗಾಯ 2:10-19; ಇಬ್ರಿಯ 6:11, 12.
16. ಯಾವ ‘ಅದುರಿಸುವಿಕೆಯು’ ಹತ್ತಿರದಲ್ಲಿದೆ, ಮತ್ತು ಅದರ ಪರಿಣಾಮವು ಏನಾಗಿರುವುದು?
16 ಅದೇ ದಿನದಂದು ಹಗ್ಗಾಯನಿಗೆ “ಸೇನಾಧೀಶ್ವರ ಯೆಹೋವನ” ಮಾತು, ನಾಲ್ಕನೆಯ ಹಾಗೂ ಅಂತಿಮ ಬಾರಿ ಬಂದಿತು. ‘ಭೂಮ್ಯಾಕಾಶಗಳನ್ನು ಅದುರಿಸು’ವುದರಲ್ಲಿ ಏನು ಒಳಗೊಂಡಿದೆ ಎಂಬುದನ್ನು ಹೀಗೆ ಹೇಳುತ್ತಾ ಆತನು ತಿಳಿಯಪಡಿಸಿದನು: “ರಾಜ್ಯಗಳ ಸಿಂಹಾಸನವನ್ನು ಕೆಡವಿ ಜನಾಂಗಗಳ ಸಂಸ್ಥಾನಬಲವನ್ನು ಧ್ವಂಸಮಾಡಿ ರಥಗಳನ್ನೂ ರಥಾರೂಢರನ್ನೂ ದೊಬ್ಬಿಬಿಡುವೆನು; ಕುದುರೆಗಳೂ ರಾಹುತರೂ ಬಿದ್ದುಹೋಗುವರು, ಪ್ರತಿಯೊಬ್ಬನು ತನ್ನ ಕಡೆಯವನ ಕತ್ತಿಯಿಂದ ಹತನಾಗುವನು.” (ಹಗ್ಗಾಯ 2:6, 21, 22) ಯೆಹೋವನು ಈ ಭೂಮಿಯನ್ನು ಅರ್ಮಗೆದೋನಿನಲ್ಲಿ ಸಂಪೂರ್ಣವಾಗಿ ಶುದ್ಧೀಕರಿಸುವಾಗ, ಆ ‘ಅದುರಿಸುವಿಕೆಯು’ ತನ್ನ ತುತ್ತತುದಿಯನ್ನು ತಲಪುವುದು. ನೂತನ ಲೋಕಕ್ಕೆ ಮಾನವ ಸಮಾಜದ ಒಂದು ಕೇಂದ್ರವನ್ನು ರಚಿಸಲು, “ಸಮಸ್ತಜನಾಂಗಗಳ ಇಷ್ಟವಸ್ತುಗಳು” ಆ ಸಮಯದೊಳಗಾಗಿ ಒಳಸೇರಿರುವವು. ಸಂತೋಷಿಸುವುದಕ್ಕೆ ಮತ್ತು ಯೆಹೋವನಿಗೆ ಸ್ತೋತ್ರಸಲ್ಲಿಸುವುದಕ್ಕೆ ಎಂತಹ ಕಾರಣಗಳು!—ಹಗ್ಗಾಯ 2:7; ಪ್ರಕಟನೆ 19:6, 7; 21:1-4.
17. ಯೇಸುವು “ಮುದ್ರೆಯುಂಗರ”ದಂತೆ ಹೇಗೆ ನೇಮಿಸಲ್ಪಟ್ಟಿದ್ದಾನೆ?
17 ತನ್ನ ಪ್ರವಾದನೆಯನ್ನು ಸಮಾಪ್ತಿಗೊಳಿಸುತ್ತಾ, ಹಗ್ಗಾಯನು ಬರೆಯುವುದು: “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ . . . ಜೆರುಬ್ಬಾಬೆಲನೇ, ಆ ದಿನದಲ್ಲಿ ನಾನು ನಿನ್ನನ್ನು ತೆಗೆದುಕೊಂಡು ಮುದ್ರೆಯುಂಗರವಾಗಿ ಮಾಡಿಕೊಳ್ಳುವೆನು, ಇದಕ್ಕೆ ನಿನ್ನನ್ನು ಆರಿಸಿಕೊಂಡಿದ್ದೇನೆ; ಇದು ಸೇನಾಧೀಶ್ವರ ಯೆಹೋವನ ನುಡಿ.” (ಹಗ್ಗಾಯ 2:23) ಭೌಮಿಕ ಯೆರೂಸಲೇಮಿನಲ್ಲಿ ಪ್ರತ್ಯೇಕವಾಗಿ ಕಾರ್ಯಮಾಡಿದ ದೇಶಾಧಿಪತಿಯಾದ ಜೆರುಬ್ಬಾಬೆಲನ ಹಾಗೂ ಮಹಾ ಯಾಜಕನಾದ ಯೆಹೋಶುವನ ಅಧಿಕಾರಸ್ಥಾನಗಳನ್ನು ಕ್ರಿಸ್ತ ಯೇಸುವು ಈಗ ಪರಲೋಕಗಳಲ್ಲಿ ಒಟ್ಟುಸೇರಿಸುತ್ತಾ, ಯೆಹೋವನ ಸೂಚಿತರೂಪದ ಮೆಸ್ಸೀಯ ಸಂಬಂಧಿತ ರಾಜನೂ ಮಹಾ ಯಾಜಕನೂ ಆಗಿದ್ದಾನೆ. ಯೆಹೋವನ ಬಲಗೈಯ ಮೇಲಿನ ಮುದ್ರೆಯುಂಗರದಂತೆ, “ದೇವರ ವಾಗ್ದಾನ”ಗಳಲ್ಲಿ ಹೆಚ್ಚಿನವುಗಳನ್ನು ವಾಸ್ತವರೂಪಕ್ಕೆ ತರುವುದರಲ್ಲಿ ಯೆಹೋವನ ಸಾಧನದೋಪಾದಿ “ಹೌದು” ಎಂಬ ವ್ಯಕ್ತಿಯಾಗಿ ಪರಿಣಮಿಸಿರುವವನು ಯೇಸುವೇ. (2 ಕೊರಿಂಥ 1:20; ಎಫೆಸ 3:10, 11; ಪ್ರಕಟನೆ 19:10) ಬೈಬಲಿನ ಸಂಪೂರ್ಣ ಪ್ರವಾದನಾತ್ಮಕ ಸಂದೇಶವು, ಯೆಹೋವನ, ರಾಜ ಮತ್ತು ಯಾಜಕೀಯ ವಿಮೋಚಕನೋಪಾದಿ ಕ್ರಿಸ್ತನ ಒದಗಿಸುವಿಕೆಯ ಮೇಲೆ ಕೇಂದ್ರೀಕರಿಸುತ್ತದೆ.—ಯೋಹಾನ 18:37; 1 ಪೇತ್ರ 1:18, 19.
18. “ಸೇನಾಧೀಶ್ವರ ಯೆಹೋವನ” ಸಮಾಪ್ತಿಯ “ನುಡಿ”ಯು, ಹೇಗೆ ಚೈತನ್ಯದಾಯಕ ನೆರವೇರಿಕೆಯನ್ನು ಅನುಭವಿಸುವುದು?
18 ನಿಜವಾಗಿಯೂ ಈ ನಮ್ಮ ದಿನದಲ್ಲಿ, ಅತ್ಯಂತ ಹೆಚ್ಚಿನ ಮಹಿಮೆಯು, ಯೆಹೋವನ ಅತ್ಯುಜ್ವಲವಾದ ಆತ್ಮಿಕ ಆಲಯದಲ್ಲಿ ಕಂಡುಕೊಳ್ಳಲ್ಪಡಲಿದೆ! ಮತ್ತು ಬೇಗನೆ, ಸೈತಾನನ ಎಲ್ಲ ವ್ಯವಸ್ಥೆಯನ್ನು ಯೆಹೋವನು ನಿರ್ಮೂಲಮಾಡಿದ ತರುವಾಯ, ಹಗ್ಗಾಯ 2:9ಕ್ಕೆ ಇನ್ನೂ ಹೆಚ್ಚಿನ ಹರ್ಷಕರ ನೆರವೇರಿಕೆಯು ಇರುವುದು: “ಈ ಸ್ಥಳದಲ್ಲಿ ಸಮಾಧಾನವನ್ನು ಅನುಗ್ರಹಿಸುವೆನು, ಇದು ಸೇನಾಧೀಶ್ವರ ಯೆಹೋವನ ನುಡಿ.” ಕಟ್ಟಕಡೆಗೆ ಶಾಂತಿ!—“ಶಾಂತಿಯ ಪ್ರಭು” (NW), ಯೆಹೋವನ “ಮುದ್ರೆಯುಂಗರ”ವಾಗಿರುವ ಕ್ರಿಸ್ತ ಯೇಸುವಿನಿಂದ ಭರವಸೆಕೊಡಲ್ಪಟ್ಟ ಬಾಳುವ, ವಿಶ್ವವ್ಯಾಪಿ ಶಾಂತಿ. ಅವನ ಕುರಿತು ಹೀಗೆ ಬರೆಯಲ್ಪಟ್ಟಿದೆ: “ರಾಜ್ಯದಲ್ಲಿ ನಿತ್ಯ ಸಮಾಧಾನವಿರುವದು, . . . ಸೇನಾಧೀಶ್ವರನಾದ ಯೆಹೋವನ ಆಗ್ರಹವು ಇದನ್ನು ನೆರವೇರಿಸುವದು.” (ಯೆಶಾಯ 9:6, 7) ಅನಂತಕಾಲದ ವರೆಗೂ ಯೆಹೋವನ ಆರಾಧನಾಲಯದ ಮಹಿಮೆಯು, ಆತನ ವಿಶ್ವ ಪರಮಾಧಿಕಾರದ ಶಾಂತಿಭರಿತ ರಾಜ್ಯದಾದ್ಯಂತ ಪ್ರತಿಬಿಂಬಿಸುವುದು. ನಾವು ಎಂದಿಗೂ ಆ ಆಲಯದಲ್ಲಿ ಉಳಿಯುವಂತಾಗಲಿ!—ಕೀರ್ತನೆ 27:4; 65:4; 84:10.
[ಅಧ್ಯಯನ ಪ್ರಶ್ನೆಗಳು]
a ಕಾವಲಿನಬುರುಜುವಿನ ನವೆಂಬರ್ 1, 1995ರ ಸಂಚಿಕೆಯಲ್ಲಿ, “ಒಂದು ‘ಕೆಟ್ಟ ಸಂತತಿ’ಯಿಂದ ರಕ್ಷಿಸಲ್ಪಡುವುದು” ಮತ್ತು “ಎಚ್ಚರವಾಗಿರಲು ಒಂದು ಸಮಯ” ಎಂಬ ಲೇಖನಗಳನ್ನು ನೋಡಿರಿ.
ನೀವು ವಿವರಿಸಬಲ್ಲಿರೊ?
◻ ಇಂದು ಯೆಹೋವನ ಆಲಯವು ‘ಮಹಿಮೆಯಿಂದ ತುಂಬಿ’ಸಲ್ಪಡುತ್ತಿರುವುದು ಹೇಗೆ?
◻ ಸುವಾರ್ತೆಯನ್ನು ಸಾರುವುದು ಹಿಂದೆಂದೂ ಇಷ್ಟು ತುರ್ತಿನದ್ದಾಗಿರಲಿಲ್ಲ ಏಕೆ?
◻ ಜರೂರಿಯಾಗಿ ಸಾರಲು 1996ರ ಸೇವಾ ವರ್ಷದ ವರದಿಯು ಯಾವ ಪ್ರೇರಕವನ್ನು ನೀಡುತ್ತದೆ?
◻ ಕ್ರಿಸ್ತನು ಯೆಹೋವನ “ಮುದ್ರೆಯುಂಗರ”ದಂತೆ ಹೇಗೆ ಕಾರ್ಯಮಾಡುತ್ತಿದ್ದಾನೆ?
[ಪುಟ 04 ರಲ್ಲಿರುವ ಚೌಕ]
‘ಭೂಮಿಯ ಕಟ್ಟಕಡೆಯಿಂದ’ ಕೊಯ್ಯುವುದು
ಯೆಶಾಯ 43:6, 7ರಲ್ಲಿ ನಾವು, “ನಾನು ಒಪ್ಪಿಸಿಬಿಡು ಎಂದು ಬಡಗಲಿಗೂ ತಡೆಯಬೇಡ ಎಂದು ತೆಂಕಲಿಗೂ ಹೇಳಿ ದೂರದಲ್ಲಿರುವ ನನ್ನ ಕುಮಾರರನ್ನೂ ದಿಗಂತಗಳಲ್ಲಿರುವ [“ಭೂಮಿಯ ಕಟ್ಟಕಡೆಯಿಂದ,” NW] ನನ್ನ ಕುಮಾರಿಯರನ್ನೂ . . . ಬರಮಾಡಬೇಕೆಂದು ಅಪ್ಪಣೆಕೊಡುವೆನು,” ಎಂಬ ಯೆಹೋವನ ಆಜ್ಞೆಯನ್ನು ಓದುತ್ತೇವೆ. ಈ ಶಾಸ್ತ್ರವಚನವು ಇಂದು ಪೂರ್ವ ಯೂರೋಪಿನಲ್ಲಿ ಅಸಾಧಾರಣ ನೆರವೇರಿಕೆಯನ್ನು ಅನುಭವಿಸುತ್ತಿದೆ. ಉದಾಹರಣೆಗೆ, ಹಿಂದಿನ ಕಮ್ಯೂನಿಸ್ಟ್ ದೇಶವಾದ ಮಾಲ್ಡಾವವನ್ನು ತೆಗೆದುಕೊಳ್ಳಿರಿ. ಜನಸಂಖ್ಯೆಯಲ್ಲಿ ಈಗ ಸುಮಾರು ಅರ್ಧದಷ್ಟು ಜನರು ಸಾಕ್ಷಿಗಳಾಗಿರುವ ಹಳ್ಳಿಗಳು ಅಲ್ಲಿವೆ. ಅವರು ಸಾರಲಿಕ್ಕಾಗಿ ಟೆರಿಟೊರಿಗಳನ್ನು ಕಂಡುಹಿಡಿಯಲು ಬಹು ದೂರದ ವರೆಗೆ ಪ್ರಯಾಣಿಸಬೇಕಾದರೂ, ಅವರು ಪ್ರಯತ್ನವನ್ನು ಮಾಡುತ್ತಿದ್ದಾರೆ! ಈ ಸಭೆಗಳಲ್ಲಿರುವ ಅನೇಕ ಪ್ರಚಾರಕರು, 1950ಗಳ ಆದಿಭಾಗದಲ್ಲಿ ಸೈಬೀರಿಯಕ್ಕೆ ಗಡೀಪಾರುಗೊಳಿಸಲ್ಪಟ್ಟಿದ್ದ ಹೆತ್ತವರ ಮಕ್ಕಳಾಗಿದ್ದಾರೆ. ಈಗ ಅವರ ಕುಟುಂಬಗಳು, ಕೊಯ್ಲಿನ ಕೆಲಸವನ್ನು ಮುಂದುವರಿಸುವುದರಲ್ಲಿ ಮುಮ್ಮೊನೆಯಾಗುತ್ತಿವೆ. ಅಲ್ಲಿರುವ 12,565 ಪ್ರಚಾರಕರಲ್ಲಿ, 1,917 ಮಂದಿ ಕಳೆದ ವರ್ಷ ದೀಕ್ಷಾಸ್ನಾನ ಪಡೆದುಕೊಂಡರು. ನಲ್ವತ್ತಮೂರು ಸಭೆಗಳಲ್ಲಿ ಸುಮಾರು 150 ಪ್ರಚಾರಕರಿದ್ದಾರೆ, ಮತ್ತು ಹೊಸ ಸೇವಾ ವರ್ಷದಲ್ಲಿ ಸರ್ಕಿಟ್ಗಳು ನಾಲ್ಕರಿಂದ ಎಂಟಕ್ಕೆ ಅಭಿವೃದ್ಧಿಗೊಂಡಿವೆ.
ಆ್ಯಲ್ಬೇನಿಯದಲ್ಲಿನ ವಿಸ್ತರಣೆಯೂ ಗಮನಾರ್ಹವಾದದ್ದಾಗಿದೆ. ಸುಮಾರು 50 ವರ್ಷಗಳ ವರೆಗೆ ವಿಸ್ತರಿಸಿದ ಅತಿ ಕ್ರೂರವಾದ ನಿರಂಕುಶಾಧಿಕಾರವನ್ನು ಅಲ್ಲಿನ ಕೆಲವು ನಿಷ್ಠಾವಂತ ಸಾಕ್ಷಿಗಳು ತಾಳಿಕೊಂಡರು. ಅವರಲ್ಲಿ ಅನೇಕರು ಕೊಲ್ಲಲ್ಪಟ್ಟರು. ಇದು ಯೇಸುವಿನ ವಾಗ್ದಾನವನ್ನು ಮನಸ್ಸಿಗೆ ತರುತ್ತದೆ: “ನಿನಗೆ ಸಂಭವಿಸುವುದಕ್ಕಿರುವ ಬಾಧೆಗಳಿಗೆ ಹೆದರಬೇಡ. ನೋಡು! ನೀವು ಪೂರ್ಣವಾಗಿ ಪರಿಶೋಧಿಸಲ್ಪಡುವಂತೆ, ಪಿಶಾಚನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ತಳ್ಳುತ್ತಾ ಹೋಗುವನು, . . . ಮರಣದ ತನಕ ನಂಬಿಗಸ್ತನೆಂದು ರುಜುಪಡಿಸಿಕೊ, ಮತ್ತು ನಾನು ನಿಮಗೆ ಜೀವದ ಕಿರೀಟವನ್ನು ಕೊಡುವೆನು.” (ಪ್ರಕಟನೆ 2:10, NW; ಯೋಹಾನ 5:28, 29; 11:24, 25ನ್ನು ಸಹ ನೋಡಿರಿ.) ನಾವು ಈಗ ಆ್ಯಲ್ಬೇನಿಯದಲ್ಲಿ ಏನನ್ನು ನೋಡುತ್ತೇವೆ? ನಿಜವಾಗಿಯೂ, ಯೆಶಾಯ 60:22ರಲ್ಲಿ ಕಂಡುಕೊಳ್ಳಲ್ಪಡುವ ಯೆಹೋವನ ವಾಗ್ದಾನದ ಒಂದು ಗಮನಾರ್ಹ ನೆರವೇರಿಕೆ: “ಚಿಕ್ಕವನಿಂದ ಒಂದು ಕುಲವಾಗುವದು”! 1990ರಲ್ಲಿ ಒಬ್ಬನೇ ಒಬ್ಬ ಪ್ರಚಾರಕನು ಆ್ಯಲ್ಬೇನಿಯದಲ್ಲಿ ಸೇವೆಯನ್ನು ವರದಿಸಿದನು. ಹಾಗಿದ್ದರೂ, ಇಟಲಿ ಮತ್ತು ಇತರ ದೇಶಗಳಿಂದ ಬಂದ ಹೆಚ್ಚಿನ “ಕೆಲಸದವರು” ಯೇಸುವಿನ ಕರೆಗೆ ಓಗೊಟ್ಟರು: “ಆದ್ದರಿಂದ ನೀವು ಹೊರಟುಹೋಗಿ . . . ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ . . . ದೀಕ್ಷಾಸ್ನಾನಮಾಡಿಸಿ.” (ಮತ್ತಾಯ 28:19; ಲೂಕ 10:2) 1996ರಲ್ಲಿನ ಯೇಸುವಿನ ಮರಣದ ಜ್ಞಾಪಕದ ಸಮಯದೊಳಗಾಗಿ, 773 ಮಂದಿ ಪ್ರಚಾರಕರು ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು, ಮತ್ತು ಇವರು ತಮ್ಮ ಜ್ಞಾಪಕದ ಕೂಟಗಳಿಗೆ 6,523 ವ್ಯಕ್ತಿಗಳನ್ನು ಕೂಡಿಸಿದರು—ಪ್ರಚಾರಕರ ಸಂಖ್ಯೆಗಿಂತ ಎಂಟು ಬಾರಿ ಹೆಚ್ಚಾಗಿದ್ದ ಸಂಖ್ಯೆ! ಚದರಿರುವ ಕ್ಷೇತ್ರಗಳಿಂದ ವಿಸ್ಮಯಕರ ಹಾಜರಿಗಳು ವರದಿಸಲ್ಪಟ್ಟವು. ಸ್ಥಳಿಕ ಪ್ರಚಾರಕರು ಇಲ್ಲದಿದ್ದರೂ, ಕೂಕಸ್ ಮತ್ತು ಡೀವ್ಯೇಕೆ ನಗರಗಳಲ್ಲಿ ಅನುಕ್ರಮವಾಗಿ 192 ಮತ್ತು 230 ಜನರ ಹಾಜರಿಗಳಿದ್ದವು. ಒಬ್ಬನೇ ಒಬ್ಬ ಪ್ರಚಾರಕನಿರುವ ಕ್ರೂಯ ನಗರದಲ್ಲಿ 212 ಜನರು ಉಪಸ್ಥಿತರಿದ್ದರು. ಕಾರ್ಚ ನಗರದಲ್ಲಿರುವ 30 ಮಂದಿ ಪ್ರಚಾರಕರು, 300ಕ್ಕಿಂತಲೂ ಹೆಚ್ಚಿನ ಜನರಿಗಾಗಿ ಸೌಕರ್ಯಗಳನ್ನು ಬಾಡಿಗೆಗೆ ಪಡೆದುಕೊಂಡರು. ಸಭಾಂಗಣದೊಳಗೆ ಅಷ್ಟೊಂದು ಜನರು ತುಂಬಿಸಲ್ಪಟ್ಟ ನಂತರ, ಸ್ಥಳವೇ ಇರದಿದ್ದ ಕಾರಣ ಮತ್ತೂ 200 ಜನರನ್ನು ಹಿಂದಿರುಗಿ ಕಳುಹಿಸಬೇಕಾಗಿತ್ತು. ನಿಜವಾಗಿಯೂ ಕೊಯ್ಲಿಗಾಗಿ ಸಿದ್ಧವಾಗಿರುವ ಒಂದು ಕ್ಷೇತ್ರ!
ರೊಮೇನಿಯದಿಂದ ಈ ವರದಿಯು ಬರುತ್ತದೆ: “ನಾವು ಮನೆಯಿಂದ ಮನೆಯ ಸಾಕ್ಷಿಕಾರ್ಯವನ್ನು ಮಾಡುತ್ತಿದ್ದಾಗ, ತಾನೊಬ್ಬ ಯೆಹೋವನ ಸಾಕ್ಷಿಯೆಂದೂ ಒಂದು ಚಿಕ್ಕ ಪಟ್ಟಣದಲ್ಲಿ ಜೀವಿಸುತ್ತಿದ್ದೇನೆಂದೂ ಹೇಳಿದ ಒಬ್ಬ ವ್ಯಕ್ತಿಯನ್ನು ನಾವು ಭೇಟಿಯಾದೆವು; ನಮಗೆ ತಿಳಿದಿದ್ದ ಮಟ್ಟಿಗೆ ಆ ಪಟ್ಟಣದಲ್ಲಿ ಯಾವ ಸಾಕ್ಷಿಗಳೂ ಇರಲಿಲ್ಲ. ಅವನಲ್ಲದೆ ಇತರ 15 ವ್ಯಕ್ತಿಗಳು, ಅನೇಕ ವರ್ಷಗಳಿಂದ ಗುರುವಾರ ಹಾಗೂ ರವಿವಾರಗಳಂದು ಕೂಟಗಳನ್ನು ನಡೆಸುತ್ತಿದ್ದರೆಂದು ಮತ್ತು ಅವರು ಮನೆಯಿಂದ ಮನೆಗೆ ಸಾರುವುದನ್ನು ಆರಂಭಿಸಿದ್ದರೆಂದು ಅವನು ನಮಗೆ ಹೇಳಿದನು. ಮರುದಿನ ನಾವು ಆ ಪಟ್ಟಣಕ್ಕೆ ಹೋದೆವು. ನಮಗಾಗಿ ಎರಡು ಕೋಣೆಗಳಲ್ಲಿ ಕಾಯುತ್ತಿದ್ದ 15 ಮಂದಿ ಪುರುಷರು, ಸ್ತ್ರೀಯರು ಮತ್ತು ಮಕ್ಕಳು ಅಲ್ಲಿದ್ದರು. ಅವರು 20 ಪುಸ್ತಕಗಳನ್ನು ಮತ್ತು 20 ಇತ್ತೀಚಿನ ಪತ್ರಿಕೆಗಳನ್ನು ಪಡೆದುಕೊಂಡರು. ಬೈಬಲ್ ಅಧ್ಯಯನಗಳನ್ನು ಹೇಗೆ ನಡೆಸಬೇಕೆಂದು ನಾವು ಅವರಿಗೆ ತೋರಿಸಿಕೊಟ್ಟೆವು. ನಾವು ಒಟ್ಟಿಗೆ ಹಾಡಿದೆವು ಮತ್ತು ಅವರ ಅತಿ ಜರೂರಿಯ ಪ್ರಶ್ನೆಗಳನ್ನು ಉತ್ತರಿಸಿದೆವು. ಗುಂಪಿನಲ್ಲಿ ನಾಯಕತ್ವವನ್ನು ವಹಿಸುತ್ತಿದ್ದವನು ಒಪ್ಪಿಕೊಂಡದ್ದು: ‘ಕೆಲವು ದಿನಗಳ ಹಿಂದೆ, ನಾನು ಒಬ್ಬ ಕುರುಬನನ್ನು ನಮ್ಮ ಬಳಿಗೆ ಕಳುಹಿಸುವಂತೆ ಕಣ್ಣೀರಿನೊಂದಿಗೆ ಯೆಹೋವನಲ್ಲಿ ಪ್ರಾರ್ಥಿಸಿದೆ, ಮತ್ತು ನನ್ನ ಪ್ರಾರ್ಥನೆಯು ಉತ್ತರಿಸಲ್ಪಟ್ಟಿದೆ.’ ನಾವು ಬಹಳವಾಗಿ ಸಂತೋಷಿಸಿದೆವು, ಮತ್ತು ನಾವು ಅಲ್ಲಿಂದ ಹಿಂದಿರುಗುವಾಗ, ತಂದೆಯೊಬ್ಬನನ್ನು ಅಂತಿಮವಾಗಿ ಕಂಡುಕೊಂಡ ಅನಾಥನಂತೆ, ಅವನು ಹೇಳಿದ್ದು: ‘ದಯವಿಟ್ಟು ನಮ್ಮನ್ನು ಮರೆಯದಿರಿ. ಪುನಃ ಬಂದು ನಮ್ಮನ್ನು ಭೇಟಿಯಾಗಿ!’ ನಾವು ಹಾಗೆ ಮಾಡಿದೆವು, ಮತ್ತು ಈಗ ಆ ಪಟ್ಟಣದಲ್ಲಿ ಏಳು ಬೈಬಲಧ್ಯಯನಗಳು ನಡೆಸಲ್ಪಡುತ್ತಿವೆ. ಅನೇಕ ಹೊಸ ಟೆರಿಟೊರಿಗಳಲ್ಲಿ, ಬಹಳವಾಗಿ ಗಣ್ಯಮಾಡಲ್ಪಡುವ ಬೈಬಲ್ ಸಾಹಿತ್ಯದೊಂದಿಗೆ ಕೆಲಸವು ಒಂದು ಅದ್ಭುತಕರವಾದ ವಿಧದಲ್ಲಿ ಆರಂಭವಾಗುತ್ತದೆ, ಮತ್ತು ಈ ಕೆಲಸವು ದೈವಿಕ ಮೂಲದ್ದಾಗಿದೆ ಎಂಬುದನ್ನು ಇದು ತೋರಿಸುತ್ತದೆ.”
[ಪುಟ 18-21 ರಲ್ಲಿರುವಚಿತ್ರ]
ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ 1996ನೆಯ ಸೇವಾ ವರ್ಷದ ವರದಿ
(For fully formatted text, see publication.)
[ಪುಟ 16,17 ರಲ್ಲಿರುವಚಿತ್ರ]
“ಸಮಸ್ತಜನಾಂಗಗಳ ಇಷ್ಟವಸ್ತುಗಳ”ನ್ನು ಸಮುದ್ರದ ದ್ವೀಪಗಳಲ್ಲಿ (1), ದಕ್ಷಿಣ ಅಮೆರಿಕ (2), ಆಫ್ರಿಕ (3), ಏಷಿಯಾ (4), ಉತ್ತರ ಅಮೆರಿಕ (5), ಮತ್ತು ಯೂರೋಪ್ (6)ಗಳಲ್ಲಿ ಒಟ್ಟುಗೂಡಿಸಲಾಗುತ್ತಿದೆ