‘ನಾನು ನಿಮ್ಮೊಂದಿಗೆ ಇದ್ದೇನೆ’
‘ಯೆಹೋವನ ದೂತನು ಹೇಳಿದ್ದು: ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಯೆಹೋವನು ನುಡಿಯುತ್ತಾನೆ.’—ಹಗ್ಗಾಯ 1:13.
ಇತಿಹಾಸದ ಒಂದು ಅತಿ ಮಹತ್ವಪೂರ್ಣ ಸಮಯಾವಧಿಯಲ್ಲಿ ನಾವು ಜೀವಿಸುತ್ತಿದ್ದೇವೆ. ಬೈಬಲ್ ಪ್ರವಾದನೆಯ ನೆರವೇರಿಕೆಯಿಂದ ರುಜುಪಡಿಸಲ್ಪಟ್ಟಿರುವಂತೆ, 1914ರಿಂದ ನಾವು “ಕರ್ತನ ದಿನದಲ್ಲಿ” ಜೀವಿಸುತ್ತಿದ್ದೇವೆ. (ಪ್ರಕಟನೆ 1:10) ಕರ್ತನ ದಿನದ ಕುರಿತಾದ ಪ್ರವಾದನೆಗಳ ಜ್ಞಾನ ನಿಮಗಿರಬಹುದು, ಆದುದರಿಂದ ರಾಜ್ಯಾಧಿಕಾರದಲ್ಲಿ ಬರುವ ‘ಮನುಷ್ಯಕುಮಾರನ ದಿವಸಗಳನ್ನು’ ಯೇಸು ‘ನೋಹನ ದಿವಸಗಳಿಗೆ’ ಮತ್ತು ‘ಲೋಟನ ದಿವಸಗಳಿಗೆ’ ಹೋಲಿಸಿದನು ಎಂಬುದು ನಿಮಗೆ ತಿಳಿದಿದೆ. (ಲೂಕ 17:26, 28) ಹೀಗೆ, ಇದೊಂದು ಪ್ರವಾದನಾ ಹೋಲಿಕೆಯಾಗಿದೆ ಎಂಬುದನ್ನು ಬೈಬಲ್ ಸೂಚಿಸುತ್ತದೆ. ಆದರೂ, ನಮ್ಮ ಗಂಭೀರ ಪರಿಗಣನೆಗೆ ಅರ್ಹವಾಗಿರುವ ಇನ್ನೊಂದು ಹೋಲಿಕೆಯಿದೆ.
2 ಹೀಬ್ರು ಪ್ರವಾದಿಗಳಾದ ಹಗ್ಗಾಯ ಮತ್ತು ಜೆಕರ್ಯರ ದಿವಸಗಳಲ್ಲಿದ್ದ ಒಂದು ಸನ್ನಿವೇಶವನ್ನು ನಾವೀಗ ಪರಿಗಣಿಸೋಣ. ನಮ್ಮ ಸಮಯದಲ್ಲಿ ಯೆಹೋವನ ಜನರಿಗೆ ಸ್ಪಷ್ಟವಾಗಿ ಅನ್ವಯವಾಗುವಂಥ ಯಾವ ಸಂದೇಶವನ್ನು ಆ ಇಬ್ಬರು ನಂಬಿಗಸ್ತ ಪ್ರವಾದಿಗಳು ತಿಳಿಯಪಡಿಸಿದರು? ಯೆಹೂದ್ಯರು ಬಾಬೆಲಿನ ಬಂಧಿವಾಸದಿಂದ ಹಿಂದಿರುಗಿದ ಬಳಿಕ, ಹಗ್ಗಾಯ ಮತ್ತು ಜೆಕರ್ಯರು ಅವರಿಗೆ ‘ಯೆಹೋವನ ದೂತರು’ ಇಲ್ಲವೆ ಸಂದೇಶವಾಹಕರು ಆಗಿದ್ದರು. ಆಲಯವನ್ನು ಪುನಃ ಕಟ್ಟುವುದರಲ್ಲಿ ಇಸ್ರಾಯೇಲ್ಯರಿಗೆ ದೇವರ ಬೆಂಬಲವಿದೆ ಎಂಬ ಆಶ್ವಾಸನೆ ನೀಡುವ ನೇಮಕವು ಆ ಪ್ರವಾದಿಗಳಿಗೆ ಕೊಡಲ್ಪಟ್ಟಿತ್ತು. (ಹಗ್ಗಾಯ 1:13; ಜೆಕರ್ಯ 4:8, 9) ಹಗ್ಗಾಯ ಮತ್ತು ಜೆಕರ್ಯರು ಬರೆದ ಪುಸ್ತಕಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಅವು ‘ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿರುವ ದೈವಪ್ರೇರಿತ’ ಶಾಸ್ತ್ರದ ಭಾಗವಾಗಿವೆ.—2 ತಿಮೊಥೆಯ 3:16.
ಅವರ ಪ್ರವಾದನೆಗಳಿಗೆ ನಾವು ಗಮನಕೊಡಬೇಕು
3 ಹಗ್ಗಾಯ ಮತ್ತು ಜೆಕರ್ಯರ ಸಂದೇಶಗಳು ಅವರ ದಿವಸಗಳಲ್ಲಿದ್ದ ಯೆಹೂದ್ಯರಿಗೆ ಉಪಯುಕ್ತವಾಗಿದ್ದವು ಎಂಬುದು ನಿಶ್ಚಯ ಹಾಗೂ ಅವರ ಪ್ರವಾದನೆಗಳು ಆಗ ಒಮ್ಮೆ ನೆರವೇರಿದ್ದವು. ಆದರೂ, ಈ ಎರಡು ಪುಸ್ತಕಗಳಿಗೆ ಇಂದು ನಾವು ಗಮನಕೊಡಬೇಕು ಎಂದು ಏಕೆ ಖಚಿತವಾಗಿ ಹೇಳಸಾಧ್ಯವಿದೆ? ಇಬ್ರಿಯ 12:26-29ರಲ್ಲಿ ನಾವಿದಕ್ಕೆ ಉತ್ತರವನ್ನು ಕಂಡುಕೊಳ್ಳುತ್ತೇವೆ. ಅಲ್ಲಿ ಅಪೊಸ್ತಲ ಪೌಲನು, ಹಗ್ಗಾಯ 2:6ರಲ್ಲಿ ಹೇಳಲ್ಪಟ್ಟಿರುವಂತೆ ಯೆಹೋವನು ‘ಆಕಾಶವನ್ನೂ ಭೂಮಿಯನ್ನೂ ಅದುರಿಸುವನು’ ಎಂಬ ಮಾತುಗಳನ್ನು ಉಲ್ಲೇಖಿಸುತ್ತಾನೆ. ಆ ಅದುರಿಸುವಿಕೆಯು ಅಂತಿಮವಾಗಿ, “ರಾಜ್ಯಗಳ ಸಿಂಹಾಸನವನ್ನು ಕೆಡವಿ ಜನಾಂಗಗಳ ಸಂಸ್ಥಾನಬಲವನ್ನು ಧ್ವಂಸಮಾಡಿ”ಬಿಡಲಿಕ್ಕಿತ್ತು.—ಹಗ್ಗಾಯ 2:22.
4 ಹಗ್ಗಾಯನ ಮಾತುಗಳನ್ನು ಉಲ್ಲೇಖಿಸಿದ ಬಳಿಕ, ಪೌಲನು ‘ಜನಾಂಗಗಳ ಸಂಸ್ಥಾನಬಲಕ್ಕೆ’ ಏನಾಗುತ್ತದೆಂದು ತಿಳಿಸಿ, ಅಭಿಷಿಕ್ತ ಕ್ರೈಸ್ತರು ಪಡೆಯಲಿಕ್ಕಿರುವ ಕದಲಿಸಲಾರದ ರಾಜ್ಯದ ಶ್ರೇಷ್ಠತೆಯನ್ನು ಎತ್ತಿಹೇಳುತ್ತಾನೆ. (ಇಬ್ರಿಯ 12:28) ಇದರಿಂದ, ನಮ್ಮ ಸಾಮಾನ್ಯ ಶಕದ ಪ್ರಥಮ ಶತಮಾನದಲ್ಲಿ ಇಬ್ರಿಯ ಪುಸ್ತಕವು ಬರೆಯಲ್ಪಟ್ಟಾಗ ಹಗ್ಗಾಯನ ಮತ್ತು ಜೆಕರ್ಯನ ಪ್ರವಾದನೆಗಳು ಇನ್ನೂ ಭವಿಷ್ಯದಲ್ಲಿ ನೆರವೇರಲಿಕ್ಕಿದ್ದ ಒಂದು ಕಾಲಾವಧಿಗೆ ಕೈತೋರಿಸುತ್ತಿದ್ದವು ಎಂಬುದನ್ನು ನೀವು ಅರ್ಥಮಾಡಿಕೊಳ್ಳಸಾಧ್ಯವಿದೆ. ಯೇಸುವಿನೊಂದಿಗೆ ಮೆಸ್ಸೀಯನ ರಾಜ್ಯದಲ್ಲಿ ಜೊತೆಬಾಧ್ಯಸ್ಥರಾಗಲಿರುವ ಅಭಿಷಿಕ್ತ ಕ್ರೈಸ್ತರ ಉಳಿಕೆಯವರು ಇಂದು ಇನ್ನೂ ಭೂಮಿಯಲ್ಲಿದ್ದಾರೆ. ಆದುದರಿಂದ, ಹಗ್ಗಾಯನ ಮತ್ತು ಜೆಕರ್ಯರ ಪ್ರವಾದನೆಗಳು ನಮ್ಮ ಕಾಲಕ್ಕೆ ವಿಶೇಷಾರ್ಥ ಉಳ್ಳವುಗಳಾಗಿರಬೇಕು.
5 ಎಜ್ರನ ಪುಸ್ತಕವು ಸ್ವಲ್ಪ ಚಾರಿತ್ರಿಕ ಹಿನ್ನೆಲೆಯನ್ನು ಒದಗಿಸುತ್ತದೆ. ಸಾ.ಶ.ಪೂ. 537ರಲ್ಲಿ ಯೆಹೂದ್ಯರು ಬಾಬೆಲಿನ ಬಂಧಿವಾಸದಿಂದ ಹಿಂದಿರುಗಿದ ಬಳಿಕ, ದೇಶಾಧಿಪತಿಯಾದ ಜೆರುಬ್ಬಾಬೆಲನು ಮತ್ತು ಮಹಾಯಾಜಕನಾದ ಯೆಹೋಶುವನು (ಅಥವಾ ಯೇಷೂವನು) ಸಾ.ಶ.ಪೂ. 536ರಲ್ಲಿ ಹೊಸ ಆಲಯದ ಅಸ್ತಿವಾರವನ್ನು ಹಾಕುವ ಕೆಲಸದ ಮೇಲ್ವಿಚಾರಣೆ ಮಾಡಿದರು. (ಎಜ್ರ 3:8-13; 5:1) ಇದು ಮಹಾ ಸಂಭ್ರಮಕ್ಕೆ ಕಾರಣವಾಗಿತ್ತಾದರೂ, ಸ್ವಲ್ಪದರಲ್ಲೇ ಯೆಹೂದ್ಯರು ಬಹಳವಾಗಿ ಹೆದರತೊಡಗಿದರು. ಎಜ್ರ 4:4 ತಿಳಿಸುವಂತೆ, ವಿರೋಧಿಗಳು ಅಂದರೆ ‘ದೇಶನಿವಾಸಿಗಳು ಯೆಹೂದ್ಯರನ್ನು ಕೈಗುಂದಿಸಿ ಕಟ್ಟದ ಹಾಗೆ ಬೆದರಿಸಿದರು.’ ಈ ಶತ್ರುಗಳು, ಅದರಲ್ಲೂ ವಿಶೇಷವಾಗಿ ಸಮಾರ್ಯದವರು ಯೆಹೂದ್ಯರ ವಿರುದ್ಧ ಸುಳ್ಳಾರೋಪಗಳನ್ನು ಹೊರಿಸಿದರು. ಈ ವಿರೋಧಿಗಳು, ಪಾರಸಿಯ ರಾಜನು ಆಲಯದ ನಿರ್ಮಾಣಕಾರ್ಯದ ಮೇಲೆ ನಿಷೇಧಾಜ್ಞೆಯನ್ನು ಹೊರಡಿಸುವಂತೆ ಅವನ ಮನವೊಪ್ಪಿಸಶಕ್ತರಾದರು.—ಎಜ್ರ 4:10-21.
6 ಆಲಯದ ಕೆಲಸಕ್ಕಾಗಿ ಆರಂಭದಲ್ಲಿದ್ದ ಉತ್ಸಾಹವು ಕುಂದಿಹೋಯಿತು. ಯೆಹೂದ್ಯರು ವೈಯಕ್ತಿಕ ಅಭಿರುಚಿಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದರು. ಆದರೆ, ಆಲಯದ ಅಸ್ತಿವಾರವು ಹಾಕಲ್ಪಟ್ಟು 16 ವರುಷಗಳು ಕಳೆದ ಬಳಿಕ, ಅಂದರೆ ಸಾ.ಶ.ಪೂ. 520ರಲ್ಲಿ, ಆಲಯದ ಕೆಲಸದಲ್ಲಿ ಪುನಃ ತೊಡಗುವಂತೆ ಜನರನ್ನು ಪ್ರೇರಿಸಲಿಕ್ಕಾಗಿ ಯೆಹೋವನು ಹಗ್ಗಾಯ ಮತ್ತು ಜೆಕರ್ಯರನ್ನು ನೇಮಿಸಿದನು. (ಹಗ್ಗಾಯ 1:1; ಜೆಕರ್ಯ 1:1) ದೇವರ ಈ ಸಂದೇಶವಾಹಕರಿಂದ ಉತ್ತೇಜಿತರಾದ ಹಾಗೂ ಯೆಹೋವನ ಬೆಂಬಲದ ಸ್ಪಷ್ಟ ಪುರಾವೆಯನ್ನು ಪಡೆದ ಯೆಹೂದ್ಯರು ಆಲಯದ ಕೆಲಸವನ್ನು ಪುನಃ ಆರಂಭಿಸಿದರು ಮತ್ತು ಸಾ.ಶ.ಪೂ. 515ರಲ್ಲಿ ಅದನ್ನು ಪೂರ್ಣಗೊಳಿಸಿದರು.—ಎಜ್ರ 6:14, 15.
7 ಇವೆಲ್ಲವು ನಮಗೆ ಯಾವ ಮಹತ್ವವನ್ನು ಹೊಂದಿವೆ ಎಂಬುದು ನಿಮಗೆ ತಿಳಿದಿದೆಯೆ? ‘ರಾಜ್ಯದ ಸುವಾರ್ತೆಯನ್ನು’ ಸಾರುವ ಸಂಬಂಧದಲ್ಲಿ ನಮಗೆ ಕೆಲಸವನ್ನು ಮಾಡಲಿಕ್ಕಿದೆ. (ಮತ್ತಾಯ 24:14) Iನೆಯ ಲೋಕ ಯುದ್ಧದ ಬಳಿಕ ಈ ಕೆಲಸಕ್ಕೆ ವಿಶೇಷವಾದ ಒತ್ತನ್ನು ನೀಡಲಾಯಿತು. ಪುರಾತನ ಯೆಹೂದ್ಯರು ಬಾಬೆಲಿನಲ್ಲಿನ ಅಕ್ಷರಾರ್ಥ ಬಂಧಿವಾಸದಿಂದ ಬಿಡುಗಡೆಹೊಂದಿದಂತೆಯೇ, ಯೆಹೋವನ ಆಧುನಿಕ ದಿನದ ಜನರು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿರುವ ಮಹಾ ಬಾಬೆಲಿನ ಬಂಧಿವಾಸದಿಂದ ಬಿಡಿಸಲ್ಪಟ್ಟರು. ದೇವರ ಅಭಿಷಿಕ್ತರು ಸಾರುವ, ಬೋಧಿಸುವ ಮತ್ತು ಜನರನ್ನು ಸತ್ಯಾರಾಧನೆಯ ಕಡೆಗೆ ಮಾರ್ಗದರ್ಶಿಸುವ ಕೆಲಸದಲ್ಲಿ ತಮ್ಮನ್ನು ಶ್ರದ್ಧಾಪೂರ್ವಕವಾಗಿ ತೊಡಗಿಸಿಕೊಂಡರು. ಆ ಸಾರುವ ಕೆಲಸವು ಇಂದು ಇನ್ನೂ ಹೆಚ್ಚು ವಿಸ್ತಾರವಾದ ರೀತಿಯಲ್ಲಿ ಮುಂದುವರಿಯುತ್ತಿದೆ ಮತ್ತು ನೀವು ಸಹ ಈ ಕೆಲಸದಲ್ಲಿ ಭಾಗವಹಿಸುತ್ತಿರಬಹುದು. ಈ ದುಷ್ಟ ವ್ಯವಸ್ಥೆಯ ಅಂತ್ಯವು ಸನ್ನಿಹಿತವಾಗಿರುವುದರಿಂದ, ಸಾರುವ ಕೆಲಸವನ್ನು ಮಾಡುವ ಸಮಯವು ಇದೇ ಆಗಿದೆ! ದೇವರು ನಮಗೆ ನೇಮಿಸಿರುವ ಈ ಕೆಲಸವು, ‘ಮಹಾ ಸಂಕಟದಲ್ಲಿ’ ಯೆಹೋವನು ಮಾನವ ವ್ಯವಹಾರಗಳಲ್ಲಿ ಮಧ್ಯೆಪ್ರವೇಶಿಸುವ ತನಕ ಮುಂದುವರಿಯಬೇಕು. (ಮತ್ತಾಯ 24:21) ಇದು ದುಷ್ಟತನವನ್ನು ಸಂಪೂರ್ಣವಾಗಿ ತೆಗೆದುಹಾಕುವುದಕ್ಕೂ ಸತ್ಯಾರಾಧನೆಯು ಭೂಮಿಯಲ್ಲಿ ಎಲ್ಲ ಕಡೆಗಳಲ್ಲಿಯೂ ಸ್ಥಾಪಿಸಲ್ಪಡುವುದಕ್ಕೂ ದಾರಿಮಾಡಿಕೊಡುವುದು.
8 ಹಗ್ಗಾಯ ಮತ್ತು ಜೆಕರ್ಯರ ಪ್ರವಾದನೆಗಳು ತೋರಿಸುವಂತೆ, ನಾವು ಈ ಕೆಲಸದಲ್ಲಿ ಮನಃಪೂರ್ವಕವಾಗಿ ಭಾಗವಹಿಸುವಾಗ ಯೆಹೋವನ ಬೆಂಬಲ ಮತ್ತು ಆಶೀರ್ವಾದಗಳ ಖಾತ್ರಿ ನಮಗಿರಸಾಧ್ಯವಿದೆ. ದೇವರ ಸೇವಕರನ್ನು ನಿಗ್ರಹಿಸಲು ಅಥವಾ ಅವರ ನೇಮಿತ ಕೆಲಸದ ಮೇಲೆ ನಿಷೇಧ ಒಡ್ಡಲು ಕೆಲವರು ಪ್ರಯತ್ನಗಳನ್ನು ಮಾಡಿರುವುದಾದರೂ, ಯಾವುದೇ ಸರಕಾರವು ಸಾರುವ ಕೆಲಸದ ಪ್ರಗತಿಯನ್ನು ನಿಲ್ಲಿಸಲು ಶಕ್ತವಾಗಿಲ್ಲ. ಪ್ರಥಮ ಲೋಕ ಯುದ್ಧವನ್ನು ಹಿಂಬಾಲಿಸಿ ಬಂದ ದಶಕಗಳಿಂದ ಹಿಡಿದು ನಮ್ಮ ದಿನಗಳ ತನಕ ಯೆಹೋವನು ರಾಜ್ಯ ಸಾಕ್ಷಿಕಾರ್ಯದಲ್ಲಿ ಅಭಿವೃದ್ಧಿಯನ್ನು ಕೊಟ್ಟು ಹೇಗೆ ಆಶೀರ್ವದಿಸಿದ್ದಾನೆ ಎಂಬುದರ ಕುರಿತು ಯೋಚಿಸಿರಿ. ಆದರೆ ಮಾಡಿಮುಗಿಸಲು ಇನ್ನೂ ಅತ್ಯಧಿಕ ಕೆಲಸವಿದೆ.
9 ನಾವು ಹಗ್ಗಾಯ ಮತ್ತು ಜೆಕರ್ಯರಿಂದ, ಸಾರುವ ಹಾಗೂ ಕಲಿಸುವ ದೈವಿಕ ಆಜ್ಞೆಗೆ ವಿಧೇಯರಾಗುವಂತೆ ನಮ್ಮನ್ನು ಇನ್ನೂ ಹೆಚ್ಚು ಪ್ರೇರಿಸುವಂಥ ಯಾವ ವಿಷಯವನ್ನು ಕಲಿಯಬಲ್ಲೆವು? ಬೈಬಲಿನ ಈ ಎರಡು ಪುಸ್ತಕಗಳಿಂದ ಸಂಗ್ರಹಿಸಬಹುದಾದ ಕೆಲವು ಪಾಠಗಳನ್ನು ನಾವೀಗ ಗಮನಿಸೋಣ. ಉದಾಹರಣೆಗೆ, ಪುನಸ್ಸ್ಥಾಪಿತ ಯೆಹೂದ್ಯರು ಮಾಡಬೇಕಾಗಿದ್ದ ಆಲಯವನ್ನು ಕಟ್ಟುವ ಕೆಲಸಕ್ಕೆ ಸಂಬಂಧಪಟ್ಟ ಕೆಲವೊಂದು ವಿವರಗಳನ್ನು ಪರಿಗಣಿಸಿರಿ. ಈಗಾಗಲೇ ಗಮನಿಸಿದಂತೆ, ಬಾಬೆಲಿನಿಂದ ಯೆರೂಸಲೇಮಿಗೆ ಹಿಂದಿರುಗಿದ್ದ ಯೆಹೂದ್ಯರು ಆಲಯಕ್ಕೆ ಸಂಬಂಧಿಸಿದ ತಮ್ಮ ಕೆಲಸದಲ್ಲಿ ಪಟ್ಟುಹಿಡಿದು ಮುಂದುವರಿಯಲಿಲ್ಲ. ಆಲಯದ ಅಸ್ತಿವಾರವನ್ನು ಹಾಕಿದ ಬಳಿಕ ಅವರು ಆ ಕೆಲಸವನ್ನು ಅಲ್ಲಿಗೇ ನಿಲ್ಲಿಸಿಬಿಟ್ಟರು. ಅವರ ಮಧ್ಯೆ ಯಾವ ತಪ್ಪಾದ ದೃಷ್ಟಿಕೋನವು ಬೆಳೆದಿತ್ತು? ಮತ್ತು ನಾವು ಇದರಿಂದ ಯಾವ ಪಾಠವನ್ನು ಕಲಿಯಸಾಧ್ಯವಿದೆ?
ಯೋಗ್ಯವಾದ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು
10 ಆ ಪುನಸ್ಸ್ಥಾಪಿತ ಯೆಹೂದ್ಯರು “ಸಮಯವು ಇನ್ನೂ ಬಂದಿಲ್ಲ” ಎಂದು ಹೇಳುತ್ತಿದ್ದರು. (ಹಗ್ಗಾಯ 1:2) ಅವರು ಸಾ.ಶ.ಪೂ. 536ರಲ್ಲಿ ಆಲಯವನ್ನು ಕಟ್ಟುವ ಕೆಲಸವನ್ನು ಅಂದರೆ ಅಸ್ತಿವಾರ ಹಾಕುವುದನ್ನು ಆರಂಭಿಸಿದಾಗ “ಸಮಯವು ಇನ್ನೂ ಬಂದಿಲ್ಲ” ಎಂದು ಹೇಳಲಿಲ್ಲ. ಆದರೆ ಸ್ವಲ್ಪ ಸಮಯದೊಳಗೇ, ನೆರೆಹೊರೆಯ ಜನಾಂಗಗಳವರ ವಿರೋಧ ಮತ್ತು ಸರಕಾರದ ಹಸ್ತಕ್ಷೇಪವು ತಮ್ಮನ್ನು ಪ್ರಭಾವಿಸುವಂತೆ ಅವರು ಬಿಟ್ಟರು. ಯೆಹೂದ್ಯರು ತಮ್ಮ ಸ್ವಂತ ಮನೆಗಳಿಗೆ ಮತ್ತು ಸ್ವಂತ ಜೀವನ ಸೌಕರ್ಯಗಳಿಗೆ ಪ್ರಮುಖತೆ ನೀಡತೊಡಗಿದರು. ಅತ್ಯುತ್ತಮ ಗುಣಮಟ್ಟದ ಹಲಿಗೆಗಳು ಹೊದಿಸಲ್ಪಟ್ಟಿರುವ ಅವರ ಖಾಸಗಿ ಮನೆಗಳು ಹಾಗೂ ಅಪೂರ್ಣ ಅವಸ್ಥೆಯಲ್ಲಿ ಬಿದ್ದಿದ್ದ ಆಲಯದ ನಡುವಣ ವ್ಯತ್ಯಾಸವನ್ನು ಗಮನಕ್ಕೆ ತರುತ್ತಾ ಯೆಹೋವನು ಕೇಳಿದ್ದು: “ಈ ಆಲಯವು ಹಾಳುಬಿದ್ದಿದೆಯಲ್ಲಾ; ನೀವು ಒಳಗೋಡೆಗೆಲ್ಲಾ ಹಲಿಗೆಹೊದಿಸಿಕೊಂಡ ಸ್ವಂತ ಮನೆಗಳಲ್ಲಿ ವಾಸಿಸುವದಕ್ಕೆ ಈ ಸಮಯವು ತಕ್ಕದ್ದೋ?”—ಹಗ್ಗಾಯ 1:4.
11 ಹೌದು, ಯೆಹೂದ್ಯರ ಆದ್ಯತೆಗಳು ಬದಲಾಗಿದ್ದವು. ಆಲಯವನ್ನು ಕಟ್ಟುವ ಯೆಹೋವನ ಉದ್ದೇಶವನ್ನು ಪ್ರಥಮ ಸ್ಥಾನದಲ್ಲಿಡುವ ಬದಲಿಗೆ, ದೇವಜನರು ಸ್ವತಃ ತಮ್ಮ ಮೇಲೆ ಮತ್ತು ತಮ್ಮ ಮನೆಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದರು. ದೇವರ ಆರಾಧನಾಲಯದ ಕೆಲಸವು ನಿರ್ಲಕ್ಷಿಸಲ್ಪಟ್ಟಿತು. ಹಗ್ಗಾಯ 1:5ರಲ್ಲಿ ದಾಖಲಿಸಲ್ಪಟ್ಟಿರುವ ಯೆಹೋವನ ಮಾತುಗಳು, ಯೆಹೂದ್ಯರು ‘ತಮ್ಮ ಗತಿ ಏನಾಗಿದೆಯೆಂಬುದನ್ನು ಮನಸ್ಸಿಗೆ ತಂದುಕೊಳ್ಳುವಂತೆ’ ಪ್ರೋತ್ಸಾಹಿಸಿದವು. ಅವರು ಏನು ಮಾಡುತ್ತಿದ್ದರೋ ಅದರ ಕುರಿತು ಧ್ಯಾನಿಸಿ, ಆಲಯವನ್ನು ಕಟ್ಟುವ ಕೆಲಸವನ್ನು ಅವರ ಜೀವಿತದಲ್ಲಿ ಪ್ರಥಮ ಸ್ಥಾನದಲ್ಲಿ ಇಡದ ಕಾರಣ ಅದು ಅವರನ್ನು ಹೇಗೆ ಬಾಧಿಸಿದೆಯೆಂಬುದರ ಕುರಿತು ಯೋಚಿಸುವಂತೆ ಯೆಹೋವನು ಹೇಳುತ್ತಿದ್ದನು.
12 ನೀವು ಊಹಿಸಸಾಧ್ಯವಿರುವಂತೆ, ಯೆಹೂದ್ಯರ ತಪ್ಪು ಆದ್ಯತೆಗಳು ಅವರನ್ನು ವ್ಯಕ್ತಿಪರವಾಗಿ ಬಾಧಿಸಿದವು. ಹಗ್ಗಾಯ 1:6ರಲ್ಲಿ ವ್ಯಕ್ತಪಡಿಸಲ್ಪಟ್ಟಿರುವ ದೇವರ ನೋಟವನ್ನು ಗಮನಿಸಿ: “ನೀವು ಬಿತ್ತಿದ ಬೀಜವು ಬಹಳ, ತಂದ ಫಲವು ಸ್ವಲ್ಪ; ತಿನ್ನುತ್ತೀರಿ, ತೃಪ್ತಿಯಾಗದು, ಕುಡಿಯುತ್ತೀರಿ, ಆನಂದವಾಗದು [“ಆದರೆ ಮತ್ತೇರಿಸುವ ಹಂತದ ವರೆಗೆ ಅಲ್ಲ,” NW]; ಹೊದಿಯುತ್ತೀರಿ, ಬೆಚ್ಚಗಾಗದು; ಸಂಬಳಗಾರನು ಸಂಬಳಹಾಕುವ ಚೀಲವು ತೂತಿನದು.”
13 ಯೆಹೂದ್ಯರು ದೇವರು ಅವರಿಗೆ ಕೊಟ್ಟಿದ್ದ ದೇಶದಲ್ಲಿದ್ದರಾದರೂ, ಅದು ಅವರ ಇಷ್ಟದಂತೆ ಬೆಳೆಯನ್ನು ಉತ್ಪಾದಿಸುತ್ತಿರಲಿಲ್ಲ. ಈ ಮುಂಚೆಯೇ ಯೆಹೋವನು ಎಚ್ಚರಿಕೆ ನೀಡಿದ್ದಂತೆ ಆತನು ತನ್ನ ಆಶೀರ್ವಾದವನ್ನು ತಡೆಹಿಡಿದಿದ್ದನು. (ಧರ್ಮೋಪದೇಶಕಾಂಡ 28:38-48) ಆತನ ಬೆಂಬಲವಿಲ್ಲದೆ ಯೆಹೂದ್ಯರು ಬೀಜ ಬಿತ್ತಿದರೂ ಕೊಯ್ಲು ಅತ್ಯಲ್ಪವಾಗಿತ್ತು; ಅವರನ್ನು ತೃಪ್ತಿಪಡಿಸುವಷ್ಟು ಆಹಾರವಿರಲಿಲ್ಲ. ಆತನ ಆಶೀರ್ವಾದ ಇಲ್ಲದವರಾಗಿದ್ದರಿಂದ ಅವರಿಗೆ ಧರಿಸಲು ಬೆಚ್ಚಗಿನ ಬಟ್ಟೆಗಳೂ ಇರಲಿಲ್ಲ. ಅವರು ಕೆಲಸಮಾಡಿ ಪಡೆದ ಹಣವು ಸಹ ತೂತುಗಳಿಂದ ತುಂಬಿದ್ದ ಚೀಲದಲ್ಲಿ ಹಾಕಲ್ಪಟ್ಟಿತ್ತೊ ಎಂಬಂತಿತ್ತು; ದುಡಿದವರಿಗೆ ಯಾವ ಪ್ರಯೋಜನವೂ ದೊರೆಯಲಿಲ್ಲ. “ಕುಡಿಯುತ್ತೀರಿ, ಆದರೆ ಮತ್ತೇರಿಸುವ ಹಂತದ ವರೆಗೆ ಅಲ್ಲ” ಎಂಬ ಅಭಿವ್ಯಕ್ತಿಯ ಅರ್ಥವೇನು? ಕುಡಿದು ಮತ್ತರಾಗುವುದು ದೇವರ ಆಶೀರ್ವಾದವನ್ನು ತೋರಿಸಸಾಧ್ಯವಿತ್ತು ಎಂಬುದು ಇದರ ಅರ್ಥವಾಗಿರಸಾಧ್ಯವಿಲ್ಲ; ಏಕೆಂದರೆ ದೇವರು ಕುಡಿಕತನವನ್ನು ಖಂಡಿಸುತ್ತಾನೆ. (1 ಸಮುವೇಲ 25:36; ಜ್ಞಾನೋಕ್ತಿ 23:29-35) ಅದಕ್ಕೆ ಬದಲಾಗಿ, ಈ ಅಭಿವ್ಯಕ್ತಿಯು ಯೆಹೂದ್ಯರ ಮೇಲೆ ದೇವರ ಆಶೀರ್ವಾದ ಇರಲಿಲ್ಲ ಎಂಬುದಕ್ಕೆ ಇನ್ನೊಂದು ಸೂಚನೆಯಾಗಿತ್ತು ಅಷ್ಟೆ. ಅವರು ತಯಾರಿಸುವ ಯಾವುದೇ ದ್ರಾಕ್ಷಾಮದ್ಯವು ಮಿತಪ್ರಮಾಣದ್ದಾಗಿದ್ದು, ಅವರಿಗೆ ಮತ್ತೇರಿಸುವಷ್ಟು ಪ್ರಮಾಣದಲ್ಲಿರಲಿಲ್ಲ. ಇನ್ನೊಂದು ಬೈಬಲ್ ಭಾಷಾಂತರವು ಹಗ್ಗಾಯ 1:6ನ್ನು ಹೀಗೆ ತರ್ಜುಮೆಮಾಡುತ್ತದೆ: ‘ಕುಡಿಯುತ್ತೀರಿ, ಆದರೆ ತೃಪ್ತಿ ಆಗುವುದಿಲ್ಲ.’
14 ಯೆಹೂದ್ಯರ ಮನೆಗಳ ಕುರಿತಾದ ಮಾಹಿತಿಯಿಂದ ನಾವು ಕಲಿಯಬೇಕಾಗಿರುವ ಪಾಠವು, ನಮ್ಮ ಮನೆಗಳ ವಿನ್ಯಾಸ ಹೇಗಿರಬೇಕು ಅಥವಾ ಅವುಗಳನ್ನು ಹೇಗೆ ಅಲಂಕರಿಸಬೇಕು ಎಂಬುದಾಗಿರುವುದಿಲ್ಲ. ಬಾಬೆಲಿಗೆ ಬಂಧಿವಾಸಿಗಳಾಗಿ ಹೋಗುವ ದೀರ್ಘ ಸಮಯದ ಹಿಂದೆಯೇ, ಪ್ರವಾದಿಯಾದ ಆಮೋಸನು ಇಸ್ರಾಯೇಲಿನಲ್ಲಿದ್ದ ಐಶ್ವರ್ಯವಂತರಿಗೆ ಅವರ ‘ದಂತಮಂದಿರಗಳಿಗಾಗಿ’ ಮತ್ತು ಅವರು ‘ದಂತದ ಮಂಚಗಳ ಮೇಲೆ ಮಲಗುವುದರ’ ಕುರಿತು ಖಂಡಿಸಿ ಮಾತಾಡಿದ್ದನು. (ಆಮೋಸ 3:15; 6:4) ಅವರ ಭವ್ಯ ಸೌಧಗಳು ಮತ್ತು ಅಲಂಕೃತ ಪೀಠೋಪಕರಣಗಳು ಶಾಶ್ವತವಾಗಿ ಉಳಿಯಲಿಲ್ಲ. ಈ ವಸ್ತುಗಳು ದಾಳಿಮಾಡಿದಂಥ ಶತ್ರುಗಳಿಂದ ಕೊಳ್ಳೆಹೊಡೆಯಲ್ಪಟ್ಟವು. ಹೀಗಿದ್ದರೂ, ಅನೇಕ ವರ್ಷಗಳ ಬಳಿಕ, ಹೌದು 70 ವರ್ಷಗಳ ಬಂಧಿವಾಸದ ಬಳಿಕವೂ ದೇವಜನರಲ್ಲಿ ಅನೇಕರು ಈ ಘಟನೆಗಳಿಂದ ಪಾಠವನ್ನು ಕಲಿತಿರಲಿಲ್ಲ. ನಾವು ಪಾಠವನ್ನು ಕಲಿಯುವೆವೊ? ನಮ್ಮಲ್ಲಿ ಪ್ರತಿಯೊಬ್ಬರೂ ಹೀಗೆ ಕೇಳಿಕೊಳ್ಳುವುದು ಸೂಕ್ತವಾದದ್ದಾಗಿದೆ: ‘ನನ್ನ ಮನೆಗಾಗಿ ಮತ್ತು ಅದನ್ನು ಅಲಂಕರಿಸುವುದಕ್ಕಾಗಿ ನಾನೆಷ್ಟು ಮಹತ್ವವನ್ನು ನೀಡುತ್ತೇನೆ? ಒಂದು ಜೀವನವೃತ್ತಿಯನ್ನು ಬೆನ್ನಟ್ಟಲಿಕ್ಕಾಗಿ, ಅನೇಕ ವರ್ಷಗಳ ವರೆಗೆ ಬಹಳಷ್ಟು ಸಮಯವನ್ನು ಅಗತ್ಯಪಡಿಸುವ ಮತ್ತು ನನ್ನ ಆಧ್ಯಾತ್ಮಿಕ ಜೀವನದ ಪ್ರಮುಖ ಅಂಶಗಳನ್ನು ಬದಿಗೊತ್ತುವಂತೆ ಮಾಡಸಾಧ್ಯವಿರುವ ಹೆಚ್ಚಿನ ಶಿಕ್ಷಣಕ್ಕಾಗಿ ಏರ್ಪಾಡನ್ನು ಮಾಡುವುದರ ಕುರಿತಾಗಿ ಏನು?’—ಲೂಕ 12:20, 21; 1 ತಿಮೊಥೆಯ 6:17-19.
15 ಹಗ್ಗಾಯ 1:6ರಲ್ಲಿ ನಾವು ಏನು ಓದುತ್ತೇವೋ ಅದು, ನಮ್ಮ ಜೀವನಗಳಲ್ಲಿ ದೇವರ ಆಶೀರ್ವಾದವನ್ನು ಹೊಂದುವ ಆವಶ್ಯಕತೆಯ ಕುರಿತು ಆಲೋಚಿಸುವಂತೆ ಮಾಡಬೇಕು. ಪುರಾತನ ಕಾಲದ ಆ ಯೆಹೂದ್ಯರಿಗೆ ದೇವರ ಆಶೀರ್ವಾದದ ಕೊರತೆಯಿತ್ತು ಮತ್ತು ಇದರಿಂದಾಗಿ ಅವರು ಕೆಟ್ಟ ಪರಿಣಾಮಗಳನ್ನು ಅನುಭವಿಸಿದರು. ನಮ್ಮ ಬಳಿ ಹೇರಳವಾದ ಪ್ರಾಪಂಚಿಕ ವಸ್ತುಗಳು ಇರಲಿ ಅಥವಾ ಇಲ್ಲದಿರಲಿ, ನಾವು ಯೆಹೋವನ ಆಶೀರ್ವಾದವನ್ನು ಪಡೆದುಕೊಳ್ಳಲು ತಪ್ಪಿಬೀಳುವಲ್ಲಿ, ಖಂಡಿತವಾಗಿಯೂ ಇದು ದೇವರೊಂದಿಗಿನ ನಮ್ಮ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. (ಮತ್ತಾಯ 25:34-40; 2 ಕೊರಿಂಥ 9:8-12) ಆದರೆ, ಆ ಆಶೀರ್ವಾದವನ್ನು ನಾವು ಹೇಗೆ ಪಡೆದುಕೊಳ್ಳಸಾಧ್ಯವಿದೆ?
ಯೆಹೋವನು ತನ್ನ ಆತ್ಮದ ಮೂಲಕ ಸಹಾಯಮಾಡುತ್ತಾನೆ
16 ಹಗ್ಗಾಯನ ಜೊತೆ ಪ್ರವಾದಿಯಾಗಿದ್ದ ಜೆಕರ್ಯನು, ಪುರಾತನ ಕಾಲದಲ್ಲಿ ಯೆಹೋವನು ತನ್ನ ಸೇವಕರನ್ನು ಯಾವುದರ ಮೂಲಕ ಪ್ರಚೋದಿಸಿದನು ಮತ್ತು ಆಶೀರ್ವದಿಸಿದನು ಎಂಬುದನ್ನು ಎತ್ತಿಹೇಳುವಂತೆ ಪ್ರೇರಿಸಲ್ಪಟ್ಟನು. ಮತ್ತು ಇದು ಆತನು ನಿಮ್ಮನ್ನು ಸಹ ಹೇಗೆ ಆಶೀರ್ವದಿಸುವನು ಎಂಬುದನ್ನು ತೋರಿಸುತ್ತದೆ. ನಾವು ಓದುವುದು: “ಪರಾಕ್ರಮದಿಂದಲ್ಲ [ಮಿಲಿಟರಿ ಸೈನ್ಯದಿಂದಲ್ಲ], ಬಲದಿಂದಲ್ಲ, ನನ್ನ ಆತ್ಮದಿಂದಲೇ ಎಂಬದು ಸೇನಾಧೀಶ್ವರ ಯೆಹೋವನ ನುಡಿ.” (ಜೆಕರ್ಯ 4:6) ಈ ವಚನವು ಉಲ್ಲೇಖಿಸಲ್ಪಡುವುದನ್ನು ನೀವು ಅನೇಕಬಾರಿ ಕೇಳಿಸಿಕೊಂಡಿರಬಹುದು, ಆದರೆ ಹಗ್ಗಾಯ ಮತ್ತು ಜೆಕರ್ಯರ ದಿವಸಗಳಲ್ಲಿದ್ದ ಯೆಹೂದ್ಯರಿಗೆ ಇದು ಯಾವ ಅರ್ಥದಲ್ಲಿತ್ತು, ಮತ್ತು ಅದು ನಿಮಗೆ ಯಾವ ಅರ್ಥದಲ್ಲಿದೆ?
17 ಆ ಕಾಲದಲ್ಲಿ ಹಗ್ಗಾಯ ಮತ್ತು ಜೆಕರ್ಯರ ಪ್ರೇರಿತ ಮಾತುಗಳ ಪರಿಣಾಮವು ಅದ್ಭುತಕರವಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ಆ ಇಬ್ಬರು ಪ್ರವಾದಿಗಳು ನುಡಿದ ಮಾತುಗಳು ನಂಬಿಗಸ್ತ ಯೆಹೂದ್ಯರನ್ನು ಪುನಃ ಚೈತನ್ಯಗೊಳಿಸಿದವು. ಹಗ್ಗಾಯನು ಸಾ.ಶ.ಪೂ. 520ರ ಆರನೆಯ ತಿಂಗಳಿನಲ್ಲಿ ಪ್ರವಾದಿಸಲಾರಂಭಿಸಿದನು. ಜೆಕರ್ಯನು ಅದೇ ವರ್ಷದ ಎಂಟನೆಯ ತಿಂಗಳಿನಲ್ಲಿ ಪ್ರವಾದಿಸಲಾರಂಭಿಸಿದನು. (ಜೆಕರ್ಯ 1:1) ಹಗ್ಗಾಯ 2:18ರಲ್ಲಿ ನೀವು ನೋಡಸಾಧ್ಯವಿರುವಂತೆ, ಆಲಯದ ಅಸ್ತಿವಾರದ ಕೆಲಸವು ಶ್ರದ್ಧಾಪೂರ್ವಕವಾಗಿ ಮತ್ತೆ ಆರಂಭವಾದುದು ಒಂಬತ್ತನೆಯ ತಿಂಗಳಿನಲ್ಲಿ. ಹೀಗೆ ಯೆಹೂದ್ಯರು ಕ್ರಿಯೆಗೈಯುವಂತೆ ಪ್ರಚೋದಿಸಲ್ಪಟ್ಟರು, ಮತ್ತು ಯೆಹೋವನ ಬೆಂಬಲದಲ್ಲಿ ಭರವಸೆಯುಳ್ಳವರಾಗಿ ಅವರು ಆತನಿಗೆ ವಿಧೇಯರಾದರು. ಜೆಕರ್ಯ 4:6ರ ಮಾತುಗಳು ಯೆಹೋವನ ಬೆಂಬಲಕ್ಕೆ ಸೂಚಿಸುತ್ತವೆ.
18 ಯೆಹೂದ್ಯರು ಸಾ.ಶ.ಪೂ. 537ರಲ್ಲಿ ತಮ್ಮ ಸ್ವದೇಶಕ್ಕೆ ಹಿಂದಿರುಗಿದಾಗ, ಅವರ ಬಳಿ ಮಿಲಿಟರಿ ಸೈನ್ಯವಿರಲಿಲ್ಲ. ಆದರೂ, ಅವರು ಬಾಬೆಲಿನಿಂದ ಬರುತ್ತಿದ್ದಾಗ ಯೆಹೋವನು ಅವರನ್ನು ಸಂರಕ್ಷಿಸಿದನು ಮತ್ತು ಅವರಿಗೆ ಮಾರ್ಗದರ್ಶನವನ್ನು ನೀಡಿದನು. ತರುವಾಯ ಸ್ವಲ್ಪದರಲ್ಲಿ ಅವರು ಆಲಯದ ಕೆಲಸವನ್ನು ಆರಂಭಿಸಿದಾಗ ಆತನ ಆತ್ಮವು ವಿಷಯಗಳನ್ನು ನಿರ್ದೇಶಿಸಿತು. ಮತ್ತು ಅವರು ಮನಃಪೂರ್ವಕವಾಗಿ ಕೆಲಸಮಾಡಲು ಪುನಃ ಆರಂಭಿಸುವಾಗ, ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ಅವರನ್ನು ಬೆಂಬಲಿಸಲಿಕ್ಕಿದ್ದನು.
19 ಎಂಟು ದರ್ಶನಗಳ ಸರಣಿಯ ಮೂಲಕ ಜೆಕರ್ಯನಿಗೆ, ಜನರು ಆಲಯದ ಕೆಲಸವನ್ನು ನಂಬಿಗಸ್ತಿಕೆಯಿಂದ ಮಾಡಿಮುಗಿಸುವ ತನಕ ಯೆಹೋವನು ಅವರೊಂದಿಗೆ ಇರುವನೆಂಬ ಆಶ್ವಾಸನೆಯನ್ನು ನೀಡಲಾಯಿತು. 3ನೇ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿರುವ ನಾಲ್ಕನೆಯ ದರ್ಶನವು, ಆಲಯವನ್ನು ಪೂರ್ಣಗೊಳಿಸಲು ಯೆಹೂದ್ಯರು ಮಾಡಿದ ಪ್ರಯತ್ನಗಳನ್ನು ಪ್ರತಿರೋಧಿಸುವುದರಲ್ಲಿ ಸೈತಾನನು ಕ್ರಿಯಾಶೀಲನಾಗಿದ್ದನು ಎಂಬುದನ್ನು ತೋರಿಸುತ್ತದೆ. (ಜೆಕರ್ಯ 3:1) ಮಹಾಯಾಜಕನಾದ ಯೆಹೋಶುವನು ಹೊಸ ಆಲಯದಲ್ಲಿ ಜನರ ಪರವಾಗಿ ಸೇವೆಸಲ್ಲಿಸುವುದನ್ನು ನೋಡಲು ಸೈತಾನನು ಸಂತೋಷಪಡಲಿಲ್ಲವೆಂಬುದು ನಿಶ್ಚಯ. ಯೆಹೂದ್ಯರು ಆಲಯವನ್ನು ಕಟ್ಟುವುದನ್ನು ತಡೆಯುವುದರಲ್ಲಿ ಸೈತಾನನು ಕ್ರಿಯಾಶೀಲನಾಗಿದ್ದರೂ, ಅಡ್ಡಿತಡೆಗಳನ್ನು ತೆಗೆದುಹಾಕುವುದರಲ್ಲಿ ಮತ್ತು ಆಲಯವು ಪೂರ್ಣವಾಗುವ ತನಕ ಕೆಲಸವು ಮುಂದುವರಿಸಲ್ಪಡುವಂತೆ ಯೆಹೂದ್ಯರನ್ನು ಚೈತನ್ಯಗೊಳಿಸುವುದರಲ್ಲಿ ಯೆಹೋವನ ಆತ್ಮವು ಮುಖ್ಯ ಪಾತ್ರವನ್ನು ವಹಿಸಲಿತ್ತು.
20 ನಿರ್ಮಾಣಕಾರ್ಯದ ಮೇಲೆ ನಿಷೇಧಾಜ್ಞೆಯು ಹೊರಡಿಸಲ್ಪಡುವಂತೆ ಮಾಡಶಕ್ತರಾಗಿದ್ದ ಸರಕಾರಿ ಅಧಿಕಾರಿಗಳಿಂದ ಬರುತ್ತಿದ್ದ ವಿರೋಧವು ತುಂಬ ದುಸ್ತರವಾದ ತಡೆಯಾಗಿ ತೋರುತ್ತಿತು. ಆದರೂ, “ಬೆಟ್ಟ”ದಂತಿದ್ದ ಈ ತಡೆಯು ತೆಗೆದುಹಾಕಲ್ಪಟ್ಟು “ನೆಲಸಮ” ಆಗುವುದೆಂದು ಯೆಹೋವನು ವಚನಕೊಟ್ಟನು. (ಜೆಕರ್ಯ 4:7) ಮತ್ತು ಹಾಗೆಯೇ ಆಯಿತು! ಅರಸನಾದ 1ನೆಯ ದಾರ್ಯಾವೆಷನು ಇದರ ತನಿಖೆಮಾಡಿದನು ಮತ್ತು ಆಲಯವನ್ನು ಪುನಃ ಕಟ್ಟುವಂತೆ ಯೆಹೂದ್ಯರಿಗೆ ಅಧಿಕೃತ ಒಪ್ಪಿಗೆಯನ್ನು ನೀಡಿದ್ದ ಕೋರೆಷನ ಮೂಲ ಆಜ್ಞೆಯನ್ನು ಪತ್ತೆಹಚ್ಚಿದನು. ಆದುದರಿಂದ ದಾರ್ಯಾವೆಷನು ಆ ನಿಷೇಧವನ್ನು ರದ್ದುಪಡಿಸಿದನು ಮತ್ತು ನಿರ್ಮಾಣಕಾರ್ಯದ ಖರ್ಚುವೆಚ್ಚಗಳಿಗಾಗಿ ರಾಜಖಜಾನೆಯಿಂದ ಯೆಹೂದ್ಯರಿಗೆ ಹಣಕೊಡಲ್ಪಡುವಂತೆ ಅಪ್ಪಣೆಕೊಟ್ಟನು. ಎಷ್ಟು ಬದಲಾದ ಸನ್ನಿವೇಶ! ಯೆಹೋವನ ಪವಿತ್ರಾತ್ಮವು ಇದರಲ್ಲಿ ಪಾತ್ರ ವಹಿಸಿತೊ? ಹೌದು ಎಂಬ ಖಾತ್ರಿ ನಮಗಿರಬಲ್ಲದು. ಆ ಆಲಯವು 1ನೆಯ ದಾರ್ಯಾವೆಷನ ಆಳ್ವಿಕೆಯ ಆರನೆಯ ವರುಷದಲ್ಲಿ ಅಂದರೆ ಸಾ.ಶ.ಪೂ. 515ರಲ್ಲಿ ಪೂರ್ಣಗೊಂಡಿತು.—ಎಜ್ರ 6:1, 15.
21 ಹಗ್ಗಾಯ 2:5ರಲ್ಲಿ, ದೇವರು ಸೀನಾಯಿ ಬೆಟ್ಟದ ಬಳಿ ಯೆಹೂದ್ಯರೊಂದಿಗೆ ಮಾಡಿಕೊಂಡ ಒಡಂಬಡಿಕೆಯ ವಿಷಯದಲ್ಲಿ ಪ್ರವಾದಿಯು ಅವರಿಗೆ ನೆನಪು ಹುಟ್ಟಿಸಿದನು; ಆ ಸಮಯದಲ್ಲಿ, “ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು.” (ವಿಮೋಚನಕಾಂಡ 19:18) 6 ಮತ್ತು 7ನೆಯ ವಚನಗಳಲ್ಲಿ ಸಾಂಕೇತಿಕ ಭಾಷೆಯಲ್ಲಿ ವರ್ಣಿಸಿರುವಂತೆ, ಯೆಹೋವನು ಹಗ್ಗಾಯ ಮತ್ತು ಜೆಕರ್ಯರ ದಿವಸಗಳಲ್ಲಿ ಇನ್ನೊಂದು ಕಂಪನವನ್ನು ಉಂಟುಮಾಡಲಿದ್ದನು. ಪಾರಸಿಯ ಸಾಮ್ರಾಜ್ಯದ ಕಾರ್ಯಕಲಾಪಗಳಲ್ಲಿ ಏರುಪೇರು ಉಂಟಾಗಲಿಕ್ಕಿತ್ತು, ಆದರೆ ಆಲಯದ ಕೆಲಸವು ಮುಂದುವರಿದು ಪೂರ್ಣವಾಗಲಿತ್ತು. “ಸಮಸ್ತ ಜನಾಂಗಗಳ ಇಷ್ಟವಸ್ತುಗಳು” ಅಂದರೆ ಯೆಹೂದ್ಯೇತರರು ಸಹ ಕಟ್ಟಕಡೆಗೆ ಆ ಆರಾಧನಾ ಸ್ಥಳದಲ್ಲಿ ಯೆಹೂದ್ಯರೊಂದಿಗೆ ದೇವರನ್ನು ಮಹಿಮೆಪಡಿಸಲಿದ್ದರು. ನಮ್ಮ ಸಮಯದಲ್ಲಿ ಇನ್ನೂ ಪ್ರಾಮುಖ್ಯವಾದ ವಿಧದಲ್ಲಿ ದೇವರು ನಮ್ಮ ಕ್ರೈಸ್ತ ಸಾರುವಿಕೆಯ ಮೂಲಕ ‘ಜನಾಂಗಗಳನ್ನು ನಡುಗಿಸಿದ್ದಾನೆ,’ ಮತ್ತು “ಸಮಸ್ತ ಜನಾಂಗಗಳ ಇಷ್ಟವಸ್ತುಗಳು” ಅಭಿಷಿಕ್ತ ಉಳಿಕೆಯವರ ಜೊತೆ ಸೇರಿಕೊಂಡು ದೇವರನ್ನು ಆರಾಧಿಸಲು ಬಂದಿವೆ. ನಿಜವಾಗಿಯೂ, ಅಭಿಷಿಕ್ತರು ಮತ್ತು ಬೇರೆ ಕುರಿವರ್ಗದವರು ಈಗ ಒಟ್ಟಿಗೆ ಯೆಹೋವನ ಆಲಯವನ್ನು ವೈಭವದಿಂದ ತುಂಬಿಸುತ್ತಿದ್ದಾರೆ. ಇಂಥ ಸತ್ಯ ಆರಾಧಕರು, ಯೆಹೋವನು ಇನ್ನೊಂದು ಅರ್ಥದಲ್ಲಿ ‘ಆಕಾಶವನ್ನೂ ಭೂಮಿಯನ್ನೂ ಅದುರಿಸುವ’ ಸಮಯಕ್ಕಾಗಿ ನಂಬಿಕೆಯಿಂದ ಕಾಯುತ್ತಿದ್ದಾರೆ. ಆ ಅದುರಿಸುವಿಕೆಯು, ಜನಾಂಗಗಳ ಸಂಸ್ಥಾನಬಲವನ್ನು ಉರುಳಿಸಲು ಮತ್ತು ಸಂಹಾರಮಾಡಲಿಕ್ಕಾಗಿ ಇರುವುದು.—ಹಗ್ಗಾಯ 2:22.
22 ‘ಆಕಾಶ, ಭೂಮಿ, ಸಮುದ್ರ, ಒಣನೆಲದಿಂದ’ ಚಿತ್ರಿಸಲ್ಪಟ್ಟಿರುವ ವಿವಿಧ ಘಟಕಗಳಲ್ಲಿ ಸಂಭವಿಸಿರುವ ಅದುರಿಸುವಿಕೆಯು ನಮ್ಮ ಜ್ಞಾಪಕಕ್ಕೆ ತರಲ್ಪಟ್ಟಿದೆ. ಈ ಬದಲಾವಣೆಗಳಲ್ಲಿ ಒಂದು ಅಂಶವು, ಪಿಶಾಚನಾದ ಸೈತಾನನೂ ಅವನ ದೆವ್ವಗಳೂ ಭೂಪರಿಸರಕ್ಕೆ ದೊಬ್ಬಲ್ಪಟ್ಟಿರುವುದಾಗಿದೆ. (ಪ್ರಕಟನೆ 12:7-12) ಇದಕ್ಕೆ ಕೂಡಿಸಿ, ದೇವರ ಅಭಿಷಿಕ್ತರ ಮುಂದಾಳತ್ವದಲ್ಲಿ ಮಾಡಲ್ಪಟ್ಟಿರುವ ಸಾರುವ ಕೆಲಸವು, ಈ ವಿಷಯಗಳ ವ್ಯವಸ್ಥೆಯ ಮಾನವ ಸಮಾಜದ ಅಂಶಗಳನ್ನು ನಿಶ್ಚಯವಾಗಿಯೂ ಅದುರಿಸಿದೆ. (ಪ್ರಕಟನೆ 11:18) ಅದರ ಹೊರತಾಗಿಯೂ, ಸಮಸ್ತ ಜನಾಂಗಗಳ ಇಷ್ಟವಸ್ತುಗಳ ಒಂದು “ಮಹಾ ಸಮೂಹವು” ಯೆಹೋವನನ್ನು ಸೇವಿಸುವುದರಲ್ಲಿ ಆತ್ಮಿಕ ಇಸ್ರಾಯೇಲ್ಯರ ಜೊತೆಗೂಡಿದೆ. (ಪ್ರಕಟನೆ 7:9, 10) ಅತಿ ಬೇಗನೆ ದೇವರು ಅರ್ಮಗೆದೋನಿನಲ್ಲಿ ಜನಾಂಗಗಳನ್ನು ಅದುರಿಸುವನು ಎಂಬ ಸುವಾರ್ತೆಯನ್ನು ಸಾರುವುದರಲ್ಲಿ ಈ ಮಹಾ ಸಮೂಹವು ಅಭಿಷಿಕ್ತ ಕ್ರೈಸ್ತರ ಜೊತೆ ಕೆಲಸಮಾಡುತ್ತಿದೆ. ಈ ಘಟನೆಯು ಅಂದರೆ ಅರ್ಮಗೆದೋನ್ ಯುದ್ಧವು, ಭೂವ್ಯಾಪಕವಾಗಿ ಸತ್ಯಾರಾಧನೆಯನ್ನು ಪರಿಪೂರ್ಣ ಸ್ಥಿತಿಗೆ ತರಲು ಮಾರ್ಗವನ್ನು ತೆರೆಯುವುದು.
ನಿಮಗೆ ನೆನಪಿದೆಯೆ?
• ಯಾವಾಗ ಮತ್ತು ಯಾವ ಪರಿಸ್ಥಿತಿಗಳ ಕೆಳಗೆ ಹಗ್ಗಾಯ ಹಾಗೂ ಜೆಕರ್ಯರು ಪ್ರವಾದಿಸಿದರು?
• ಹಗ್ಗಾಯ ಮತ್ತು ಜೆಕರ್ಯರು ತಿಳಿಸಿದ ಸಂದೇಶವನ್ನು ನೀವು ಹೇಗೆ ಅನ್ವಯಿಸಿಕೊಳ್ಳಸಾಧ್ಯವಿದೆ?
• ಜೆಕರ್ಯ 4:6 ನಿಮಗೆ ಏಕೆ ಉತ್ತೇಜನದಾಯಕವಾದದ್ದಾಗಿ ಕಂಡುಬರುತ್ತದೆ?
[ಅಧ್ಯಯನ ಪ್ರಶ್ನೆಗಳು]
1. ನಮ್ಮ ದಿನದ ಯಾವ ಪ್ರವಾದನಾ ಹೋಲಿಕೆಯ ಬಗ್ಗೆ ಯೇಸು ಸೂಚಿಸಿ ಮಾತಾಡಿದನು?
2. ಯೆಹೋವನು ಹಗ್ಗಾಯ ಮತ್ತು ಜೆಕರ್ಯರಿಗೆ ಯಾವ ನೇಮಕವನ್ನು ಕೊಟ್ಟನು?
3, 4. ಹಗ್ಗಾಯನ ಮತ್ತು ಜೆಕರ್ಯನ ಪ್ರವಾದನೆಗಳಲ್ಲಿ ನಾವು ಏಕೆ ಆಸಕ್ತರಾಗಿರಬೇಕು?
5, 6. ಹಗ್ಗಾಯ ಮತ್ತು ಜೆಕರ್ಯರ ಪ್ರವಾದನೆಗಳ ಹಿನ್ನೆಲೆ ಏನಾಗಿತ್ತು?
7. ಹಗ್ಗಾಯ ಮತ್ತು ಜೆಕರ್ಯರ ದಿನಗಳಲ್ಲಿದ್ದ ಸನ್ನಿವೇಶವು ಆಧುನಿಕ ಸಮಯಗಳಲ್ಲಿ ಯಾವ ಹೋಲಿಕೆಯನ್ನು ಹೊಂದಿದೆ?
8. ನಮ್ಮ ಕೆಲಸಕ್ಕೆ ದೇವರು ಬೆಂಬಲ ನೀಡುತ್ತಿದ್ದಾನೆ ಎಂದು ನಾವು ಏಕೆ ಖಾತ್ರಿಯಿಂದಿರಸಾಧ್ಯವಿದೆ?
9. ಯಾವ ಪುರಾತನ ಸನ್ನಿವೇಶಕ್ಕೆ ನಾವು ಗಮನಕೊಡಬೇಕಾಗಿದೆ, ಮತ್ತು ಏಕೆ?
10. ಯೆಹೂದ್ಯರು ಯಾವ ತಪ್ಪಾದ ದೃಷ್ಟಿಕೋನವನ್ನು ಬೆಳೆಸಿಕೊಂಡರು, ಮತ್ತು ಫಲಿತಾಂಶವೇನಾಗಿತ್ತು?
11. ಹಗ್ಗಾಯನ ಕಾಲದ ಯೆಹೂದ್ಯರಿಗೆ ಯೆಹೋವನು ಏಕೆ ಸಲಹೆಯನ್ನು ನೀಡಬೇಕಾಯಿತು?
12, 13. ಹಗ್ಗಾಯ 1:6 ಯೆಹೂದ್ಯರ ಸನ್ನಿವೇಶವನ್ನು ಹೇಗೆ ವರ್ಣಿಸುತ್ತದೆ, ಮತ್ತು ಆ ವಚನದ ಅರ್ಥವೇನಾಗಿದೆ?
14, 15. ಹಗ್ಗಾಯ 1:6ರಿಂದ ನಾವು ಯಾವ ಪಾಠವನ್ನು ಕಲಿಯುತ್ತೇವೆ?
16-18. ಜೆಕರ್ಯ 4:6ರ ಪುರಾತನಕಾಲದ ಹಿನ್ನೆಲೆಯಲ್ಲಿ ಅದರ ಅರ್ಥವೇನಾಗಿತ್ತು?
19. ದೇವರ ಆತ್ಮವು ಯಾವ ಬಲವಾದ ಪ್ರಭಾವವನ್ನು ಜಯಿಸಿತು?
20. ದೇವರ ಚಿತ್ತವನ್ನು ಪೂರೈಸುವಂತೆ ಪವಿತ್ರಾತ್ಮವು ಯೆಹೂದ್ಯರಿಗೆ ಹೇಗೆ ಸಹಾಯಮಾಡಿತು?
21. (ಎ) ಪುರಾತನ ಕಾಲದಲ್ಲಿ ದೇವರು ‘ಸಕಲಜನಾಂಗಗಳನ್ನು ಹೇಗೆ ನಡುಗಿಸಿದನು,’ ಮತ್ತು “ಇಷ್ಟವಸ್ತುಗಳು” ಹೇಗೆ ಹೊರಬಂದವು? (ಬಿ) ಇದರ ಆಧುನಿಕ ದಿನದ ನೆರವೇರಿಕೆ ಏನಾಗಿದೆ?
22. ಜನಾಂಗಗಳು ಹೇಗೆ ‘ಅದುರಿಸಲ್ಪಡುತ್ತಿವೆ,’ ಯಾವ ಫಲಿತಾಂಶದೊಂದಿಗೆ, ಮತ್ತು ಇನ್ನೂ ಏನು ಸಂಭವಿಸಲಿಕ್ಕಿದೆ?
[ಪುಟ 20ರಲ್ಲಿರುವ ಚಿತ್ರಗಳು]
ಹಗ್ಗಾಯ ಮತ್ತು ಜೆಕರ್ಯರ ಬರಹಗಳು ನಮಗೆ ದೇವರ ಬೆಂಬಲದ ಆಶ್ವಾಸನೆಯನ್ನು ನೀಡುತ್ತವೆ
[ಪುಟ 23ರಲ್ಲಿರುವ ಚಿತ್ರ]
“ಈ ಆಲಯವು ಹಾಳುಬಿದ್ದಿದೆಯಲ್ಲಾ; ನೀವು ಒಳಗೋಡೆಗೆಲ್ಲಾ ಹಲಿಗೆಹೊದಿಸಿಕೊಂಡ ಸ್ವಂತ ಮನೆಗಳಲ್ಲಿ ವಾಸಿಸುವದಕ್ಕೆ ಈ ಸಮಯವು ತಕ್ಕದ್ದೋ?”
[ಪುಟ 24ರಲ್ಲಿರುವ ಚಿತ್ರ]
‘ಜನಾಂಗಗಳ ಇಷ್ಟವಸ್ತುಗಳನ್ನು’ ತಲಪುವ ಕೆಲಸದಲ್ಲಿ ಯೆಹೋವನ ಜನರು ಭಾಗವಹಿಸುತ್ತಾರೆ