ಯೆಹೋವನು ಸಮೃದ್ಧವಾಗಿ ಶಾಂತಿಯನ್ನೂ ಸತ್ಯವನ್ನೂ ಕೊಡುತ್ತಾನೆ
“ನಾನು ಅವರನ್ನು ಗುಣಪಡಿಸುವೆನು ಮತ್ತು ಅವರಿಗೆ ಸಮೃದ್ಧವಾಗಿ ಶಾಂತಿಯನ್ನೂ ಸತ್ಯವನ್ನೂ ಪ್ರಕಟಿಸುವೆನು.”—ಯೆರೆಮೀಯ 33:6, NW.
1, 2. (ಎ) ಶಾಂತಿಯ ವಿಷಯದಲ್ಲಿ, ರಾಷ್ಟ್ರಗಳ ದಾಖಲೆಯು ಏನಾಗಿದೆ? (ಬಿ) ಸಾ.ಶ.ಪೂ. 607ರಲ್ಲಿ, ಶಾಂತಿಯ ಕುರಿತು ಯಾವ ಪಾಠವನ್ನು ಯೆಹೋವನು ಇಸ್ರಾಯೇಲಿಗೆ ಕಲಿಸಿದನು?
ಶಾಂತಿ! ಅದು ಎಷ್ಟು ಅಪೇಕ್ಷಣೀಯ, ಆದರೂ ಮಾನವ ಇತಿಹಾಸದಲ್ಲಿ ಅದು ಎಷ್ಟು ವಿರಳವಾದದ್ದಾಗಿದೆ! ವಿಶೇಷವಾಗಿ 20ನೆಯ ಶತಮಾನವು ಶಾಂತಿಯ ಶತಮಾನವಾಗಿ ಪರಿಣಮಿಸಿಲ್ಲ. ಬದಲಿಗೆ, ಮಾನವ ಇತಿಹಾಸದಲ್ಲಿನ ಎರಡು ಅತ್ಯಂತ ವಿನಾಶಕರ ಯುದ್ಧಗಳನ್ನು ಅದು ಕಂಡಿದೆ. ಪ್ರಥಮ ಜಾಗತಿಕ ಯುದ್ಧದ ತರುವಾಯ, ಜಾಗತಿಕ ಶಾಂತಿಯನ್ನು ಕಾಪಾಡಲು ಜನಾಂಗ ಸಂಘವನ್ನು ಸ್ಥಾಪಿಸಲಾಯಿತು. ಆ ಸಂಘಟನೆಯು ನಿರರ್ಥಕವಾಯಿತು. ಎರಡನೆಯ ಜಾಗತಿಕ ಯುದ್ಧದ ಬಳಿಕ, ವಿಶ್ವ ಸಂಸ್ಥೆಯನ್ನು ಅದೇ ಗುರಿಯೊಂದಿಗೆ ಸ್ಥಾಪಿಸಲಾಯಿತು. ಅದು ಕೂಡ ಎಷ್ಟು ಸಂಪೂರ್ಣವಾಗಿ ನಿರರ್ಥಕವಾಗುತ್ತಿದೆ ಎಂಬುದನ್ನು ನೋಡಲು, ಕೇವಲ ದೈನಿಕ ವಾರ್ತಾಪತ್ರಿಕೆಗಳನ್ನು ಓದುವ ಅಗತ್ಯ ನಮಗಿದೆ.
2 ಮಾನವ ಸಂಘಟನೆಗಳು ಶಾಂತಿಯನ್ನು ತರಸಾಧ್ಯವಿಲ್ಲವೆಂಬ ವಿಷಯದಿಂದ ನಾವು ಆಶ್ಚರ್ಯಗೊಳ್ಳಬೇಕೊ? ಇಲ್ಲವೇ ಇಲ್ಲ. 2,500ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ, ದೇವರಾದುಕೊಂಡ ಜನಾಂಗವಾದ ಇಸ್ರಾಯೇಲಿಗೆ ಈ ಸಂಬಂಧದಲ್ಲಿ ಒಂದು ಪಾಠವು ಕಲಿಸಲ್ಪಟ್ಟಿತು. ಸಾ.ಶ.ಪೂ. ಏಳನೆಯ ಶತಮಾನದಲ್ಲಿ, ಪ್ರಬಲವಾದ ಲೋಕ ಶಕ್ತಿಯಾದ ಬಾಬೆಲಿನ ಮೂಲಕ ಇಸ್ರಾಯೇಲಿನ ಶಾಂತಿಯು ಬೆದರಿಸಲ್ಪಟ್ಟಿತು. ಶಾಂತಿಗಾಗಿ ಇಸ್ರಾಯೇಲ್ ಐಗುಪ್ತದ ಮೇಲೆ ಭರವಸೆಯಿಟ್ಟಿತು. ಐಗುಪ್ತವು ಸೋತಿತು. (ಯೆರೆಮೀಯ 37:5-8; ಯೆಹೆಜ್ಕೇಲ 17:11-15) ಸಾ.ಶ.ಪೂ. 607ರಲ್ಲಿ, ಬಾಬೆಲಿನ ಸೈನ್ಯಗಳು ಯೆರೂಸಲೇಮಿನ ಗೋಡೆಗಳನ್ನು ನಾಶಮಾಡಿದವು ಮತ್ತು ಯೆಹೋವನ ಆಲಯವನ್ನು ಸುಟ್ಟುಹಾಕಿದವು. ಹೀಗೆ ಮಾನವ ಸಂಘಟನೆಗಳ ಮೇಲೆ ಭರವಸೆಯಿಡುವುದರ ನಿರರ್ಥಕತೆಯನ್ನು ಇಸ್ರಾಯೇಲ್ ಕಠಿನವಾದ ವಿಧದಲ್ಲಿ ಕಲಿಯಿತು. ಶಾಂತಿಯನ್ನು ಅನುಭವಿಸುವುದರ ಬದಲಿಗೆ, ರಾಷ್ಟ್ರವು ಬಾಬೆಲಿನಲ್ಲಿ ಪರದೇಶವಾಸಕ್ಕೆ ನಿರ್ಬಂಧಗೊಳಿಸಲ್ಪಟ್ಟಿತು.—2 ಪೂರ್ವಕಾಲವೃತ್ತಾಂತ 36:17-21.
3. ಯೆರೆಮೀಯನ ಮುಖಾಂತರ ನೀಡಿದ ಯೆಹೋವನ ಮಾತುಗಳ ನೆರವೇರಿಕೆಯಲ್ಲಿ, ಯಾವ ಐತಿಹಾಸಿಕ ಘಟನೆಗಳು ಇಸ್ರಾಯೇಲಿಗೆ ಶಾಂತಿಯ ಕುರಿತ ಎರಡನೆಯ ಪ್ರಮುಖ ಪಾಠವನ್ನು ಕಲಿಸಿದವು?
3 ಹಾಗಿದ್ದರೂ ಯೆರೂಸಲೇಮಿನ ಪತನದ ಮೊದಲು, ತಾನು—ಐಗುಪ್ತವಲ್ಲ—ಇಸ್ರಾಯೇಲಿಗೆ ನಿಜವಾದ ಶಾಂತಿಯನ್ನು ತರುವೆನೆಂದು ಯೆಹೋವನು ಪ್ರಕಟಿಸಿದ್ದನು. ಯೆರೆಮೀಯನ ಮೂಲಕ ಆತನು ವಾಗ್ದಾನಿಸಿದ್ದು: “ನಾನು ಅವರನ್ನು ಗುಣಪಡಿಸುವೆನು ಮತ್ತು ಅವರಿಗೆ ಸಮೃದ್ಧವಾಗಿ ಶಾಂತಿಯನ್ನೂ ಸತ್ಯವನ್ನೂ ಪ್ರಕಟಿಸುವೆನು. ನಾನು ಯೆಹೂದದ ಬಂದಿಗಳನ್ನು ಮತ್ತು ಇಸ್ರಾಯೇಲಿನ ಬಂದಿಗಳನ್ನು ಹಿಂದೆ ತರುವೆನು ಮತ್ತು ಮೊದಲಿನಂತೆಯೇ ಅವರನ್ನು ಊರ್ಜಿತಪಡಿಸುವೆನು.” (ಯೆರೆಮೀಯ 33:6, 7, NW) ಸಾ.ಶ.ಪೂ. 539ರಲ್ಲಿ ಬಾಬೆಲು ಜಯಿಸಲ್ಪಟ್ಟಾಗ ಮತ್ತು ಇಸ್ರಾಯೇಲ್ಯ ಪರದೇಶವಾಸಿಗಳಿಗೆ ಸ್ವಾತಂತ್ರ್ಯವು ನೀಡಲ್ಪಟ್ಟಾಗ, ಯೆಹೋವನ ವಾಗ್ದಾನವು ನೆರವೇರಲಾರಂಭಿಸಿತು. (2 ಪೂರ್ವಕಾಲವೃತ್ತಾಂತ 36:22, 23) ಸಾ.ಶ.ಪೂ 537ರ ಕೊನೆಯ ಭಾಗದೊಳಗಾಗಿ, ಇಸ್ರಾಯೇಲ್ಯರ ಒಂದು ಗುಂಪು 70 ವರ್ಷಗಳಲ್ಲಿ ಪ್ರಥಮ ಸಲ ಇಸ್ರಾಯೇಲಿನ ಮಣ್ಣಿನ ಮೇಲೆ ಪರ್ಣಶಾಲೆಗಳ ಹಬ್ಬವನ್ನು ಆಚರಿಸಿತು! ಹಬ್ಬದ ಅನಂತರ ಅವರು ಯೆಹೋವನ ಆಲಯವನ್ನು ಪುನಃ ಕಟ್ಟಲು ಪ್ರಾರಂಭಿಸಿದರು. ಇದರ ಬಗ್ಗೆ ಅವರಿಗೆ ಹೇಗನಿಸಿತು? ದಾಖಲೆಯು ಹೇಳುವುದು: “ಯೆಹೋವನ ಆಲಯದ ಅಸ್ತಿವಾರವನ್ನು ಹಾಕುವ ಸಂಬಂಧದಲ್ಲಿ, ಅವರು ಯೆಹೋವನನ್ನು ಸ್ತುತಿಸುವುದರಲ್ಲಿ ಗಟ್ಟಿಯಾದ ಆರ್ಭಟದಿಂದ ಆರ್ಭಟಿಸಿದರು.”—ಎಜ್ರ 3:11, NW.
4. ಆಲಯದ ನಿರ್ಮಾಣ ಕಾರ್ಯವನ್ನು ಮಾಡುವಂತೆ ಯೆಹೋವನು ಇಸ್ರಾಯೇಲ್ಯರನ್ನು ಹೇಗೆ ಕೆರಳಿಸಿದನು, ಮತ್ತು ಶಾಂತಿಯ ಕುರಿತು ಯಾವ ವಾಗ್ದಾನವನ್ನು ಆತನು ಮಾಡಿದನು?
4 ಆ ಸಂತೋಷಕರ ಆರಂಭದ ಬಳಿಕವಾದರೊ, ಇಸ್ರಾಯೇಲ್ಯರು ವಿರೋಧಿಗಳಿಂದ ನಿರುತ್ಸಾಹಗೊಳಿಸಲ್ಪಟ್ಟರು ಮತ್ತು ಆಲಯ ನಿರ್ಮಾಣದ ಕೆಲಸವನ್ನು ನಿಲ್ಲಿಸಿದರು. ಕೆಲವು ವರ್ಷಗಳಾನಂತರ, ಪುನರ್ನಿರ್ಮಾಣದ ಕೆಲಸವನ್ನು ಪೂರ್ಣಗೊಳಿಸುವಂತೆ ಇಸ್ರಾಯೇಲ್ಯರನ್ನು ಕೆರಳಿಸಲು ಯೆಹೋವನು ಪ್ರವಾದಿಗಳಾದ ಹಗ್ಗಾಯನು ಮತ್ತು ಜೆಕರ್ಯರನ್ನು ಎಬ್ಬಿಸಿದನು. ಕಟ್ಟಲ್ಪಡಲಿದ್ದ ಆಲಯದ ಸಂಬಂಧದಲ್ಲಿ ಹಗ್ಗಾಯನು ಹೀಗೆ ಹೇಳುವುದನ್ನು ಕೇಳುವುದು ಅವರಿಗೆ ಎಷ್ಟು ರೋಮಾಂಚಕರವಾಗಿದ್ದಿರಬೇಕು: “ಈ ಆಲಯದ ಮುಂದಿನ ವೈಭವವು ಹಿಂದಿನ ವೈಭವಕ್ಕಿಂತ ವಿಶೇಷವಾಗಿರುವದು; ಇದು ಸೇನಾಧೀಶ್ವರ ಯೆಹೋವನ ನುಡಿ; ಈ ಸ್ಥಳದಲ್ಲಿ ಸಮಾಧಾನ [“ಶಾಂತಿ,” NW]ವನ್ನು ಅನುಗ್ರಹಿಸುವೆನು”!—ಹಗ್ಗಾಯ 2:9.
ಯೆಹೋವನು ತನ್ನ ವಾಗ್ದಾನಗಳನ್ನು ನೆರವೇರಿಸುತ್ತಾನೆ
5. ಜೆಕರ್ಯನ ಎಂಟನೆಯ ಅಧ್ಯಾಯದ ಕುರಿತು ಯಾವ ವಿಷಯವು ಗಮನಾರ್ಹವಾಗಿದೆ?
5 ಬೈಬಲ್ ಪುಸ್ತಕವಾದ ಜೆಕರ್ಯದಲ್ಲಿ, ಸಾ.ಶ.ಪೂ. ಆರನೆಯ ಶತಮಾನದಷ್ಟು ಹಿಂದೆ ದೇವರ ಜನರನ್ನು ಬಲಪಡಿಸಿದ ಹಲವಾರು ಪ್ರೇರಿತ ದರ್ಶನಗಳ ಮತ್ತು ಪ್ರವಾದನೆಗಳ ಕುರಿತು ನಾವು ಓದುತ್ತೇವೆ. ಅವೇ ಪ್ರವಾದನೆಗಳು ಯೆಹೋವನ ಬೆಂಬಲದ ಆಶ್ವಾಸನೆಯನ್ನು ನಮಗೆ ಕೊಡಲು ಮುಂದುವರಿಯುತ್ತವೆ. ನಮ್ಮ ದಿನದಲ್ಲಿಯೂ ಯೆಹೋವನು ತನ್ನ ಜನರಿಗೆ ಶಾಂತಿಯನ್ನು ಕೊಡುವನೆಂಬುದನ್ನು ನಂಬಲು ನಮಗೆ ಎಲ್ಲ ಕಾರಣವನ್ನು ಅವು ಕೊಡುತ್ತವೆ. ಉದಾಹರಣೆಗೆ ತನ್ನ ಹೆಸರಿರುವ ಪುಸ್ತಕದ ಎಂಟನೆಯ ಅಧ್ಯಾಯದಲ್ಲಿ ಪ್ರವಾದಿಯಾದ ಜೆಕರ್ಯನು ಹತ್ತು ಬಾರಿ, ‘ಯೆಹೋವನು ಇಂತೆನ್ನುತ್ತಾನೆ,’ ಎಂಬ ಮಾತುಗಳನ್ನು ನುಡಿಯುತ್ತಾನೆ. ಪ್ರತಿಯೊಂದು ಸಲ, ಆ ಅಭಿವ್ಯಕ್ತಿಯು ದೇವರ ಜನರ ಶಾಂತಿಯೊಂದಿಗೆ ಸಂಬಂಧಿಸುವ ಒಂದು ದೈವಿಕ ಪ್ರಕಟನೆಯನ್ನು ಪರಿಚಯಿಸುತ್ತದೆ. ಈ ಪ್ರವಾದನೆಗಳಲ್ಲಿ ಕೆಲವು ಹಿಂದೆ ಜೆಕರ್ಯನ ದಿನದಲ್ಲಿ ನೆರವೇರಿದವು. ಇಂದು ಎಲ್ಲವೂ ನೆರವೇರಿವೆ ಇಲ್ಲವೆ ನೆರವೇರುವ ಪ್ರಕ್ರಿಯೆಯಲ್ಲಿವೆ.
“ಚೀಯೋನಿಗಾಗಿ ನಾನು . . . ಅಸೂಯೆಪಡುವೆನು”
6, 7. ಯಾವ ವಿಧಗಳಲ್ಲಿ ಯೆಹೋವನು ‘ಚೀಯೋನಿಗಾಗಿ ಅತಿರೋಷದಿಂದ ಅಸೂಯೆ’ಪಟ್ಟನು?
6 ಆ ಅಭಿವ್ಯಕ್ತಿಯು ಮೊದಲು ಜೆಕರ್ಯ 8:2 (NW)ರಲ್ಲಿ ಕಂಡುಬರುತ್ತದೆ, ಅಲ್ಲಿ ನಾವು ಓದುವುದು: “ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ—ಚೀಯೋನಿಗಾಗಿ ನಾನು ಮಹಾ ಅಸೂಯೆಯಿಂದ ಅಸೂಯೆಪಡುವೆನು, ಮತ್ತು ಆಕೆಗಾಗಿ ಅತಿರೋಷದಿಂದ ಅಸೂಯೆಪಡುವೆನು.” ತನ್ನ ಜನರಿಗಾಗಿ ಅಸೂಯೆಪಡುವ ಅಥವಾ ಮಹಾ ಹುರುಪುಳ್ಳವನಾಗಿರುವ ಯೆಹೋವನ ವಾಗ್ದಾನವು, ಅವರ ಶಾಂತಿಯನ್ನು ಪುನಸ್ಸ್ಥಾಪಿಸುವುದರಲ್ಲಿ ಆತನು ಎಚ್ಚರವುಳ್ಳವನಾಗಿರುವನು ಎಂಬುದನ್ನು ಅರ್ಥೈಸಿತು. ಆಕೆಯ ದೇಶಕ್ಕೆ ಇಸ್ರಾಯೇಲಿನ ಪುನಸ್ಸ್ಥಾಪನೆಯು ಮತ್ತು ಆಲಯದ ಪುನರ್ನಿರ್ಮಾಣವು ಆ ಹುರುಪಿನ ಪ್ರಮಾಣವಾಗಿದ್ದವು.
7 ಆದರೂ, ಯೆಹೋವನ ಜನರನ್ನು ವಿರೋಧಿಸಿದ್ದವರ ಕುರಿತೇನು? ತನ್ನ ಜನರಿಗಾಗಿದ್ದ ಆತನ ಹುರುಪು, ಈ ವೈರಿಗಳ ಮೇಲಿನ ಆತನ “ಅತಿರೋಷ”ದ ಮೂಲಕ ಸಮಾನಗೊಳ್ಳಲಿತ್ತು. ನಂಬಿಗಸ್ತ ಯೆಹೂದ್ಯರು ಪುನರ್ನಿರ್ಮಿತ ಆಲಯದಲ್ಲಿ ಆರಾಧಿಸಿದಾಗ, ಈಗ ಬಿದ್ದುಹೋಗಿದ್ದ ಶಕ್ತಿಶಾಲಿ ಬಾಬೆಲಿನ ವಿಧಿಯ ಕುರಿತು ಪುನರಾಲೋಚಿಸಲು ಶಕ್ತರಾಗಿರಲಿದ್ದರು. ಆಲಯದ ಪುನರ್ನಿರ್ಮಾಣವನ್ನು ತಡೆಯಲು ಪ್ರಯತ್ನಿಸಿದ್ದ ವೈರಿಗಳ ಸಂಪೂರ್ಣ ಸೋಲಿನ ಕುರಿತು ಸಹ ಅವರು ಯೋಚಿಸಸಾಧ್ಯವಿತ್ತು. (ಎಜ್ರ 4:1-6; 6:3) ಮತ್ತು ಯೆಹೋವನು ತನ್ನ ವಾಗ್ದಾನವನ್ನು ನೆರವೇರಿಸಿದ್ದನೆಂದು ಅವರು ಆತನಿಗೆ ಉಪಕಾರ ಸಲ್ಲಿಸಬಹುದಿತ್ತು. ಆತನ ಹುರುಪು ಅವರಿಗೊಂದು ಜಯವನ್ನು ತಂದಿತು!
“ಸುವ್ರತನಗರಿ”
8. ಜೆಕರ್ಯನ ದಿನಗಳಲ್ಲಿ, ಆರಂಭಿಕ ಸಮಯಗಳೊಂದಿಗೆ ವೈದೃಶ್ಯದಲ್ಲಿ ಯೆರೂಸಲೇಮ್ ಒಂದು ಸುವ್ರತನಗರಿಯಾಗುವುದು ಹೇಗೆ?
8 ಎರಡನೆಯ ಬಾರಿ ಜೆಕರ್ಯನು ಬರೆಯುವುದು: “ಯೆಹೋವನು ಇಂತೆನ್ನುತ್ತಾನೆ.” ಈ ಸಂದರ್ಭದಲ್ಲಿ ಯೆಹೋವನ ಮಾತುಗಳು ಏನಾಗಿವೆ? “ನಾನು ಚೀಯೋನಿಗೆ ಹಿಂದಿರುಗಿದ್ದೇನೆ, ಯೆರೂಸಲೇಮಿನ ಮಧ್ಯದಲ್ಲಿ ವಾಸಿಸುವೆನು; ಆಗ ಯೆರೂಸಲೇಮು ಸುವ್ರತನಗರಿ ಅನ್ನಿಸಿಕೊಳ್ಳುವದು, ಸೇನಾಧೀಶ್ವರ ಯೆಹೋವನ ಪರ್ವತಕ್ಕೆ ಪರಿಶುದ್ಧಪರ್ವತವೆಂಬ ಹೆಸರು ಬರುವದು.” (ಜೆಕರ್ಯ 8:3) ಸಾ.ಶ.ಪೂ. 607ರ ಮುಂಚೆ, ಯೆರೂಸಲೇಮ್ ಖಂಡಿತವಾಗಿಯೂ ಒಂದು ಸುವ್ರತನಗರಿಯಾಗಿರಲಿಲ್ಲ. ಆಕೆಯ ಯಾಜಕರು ಮತ್ತು ಪ್ರವಾದಿಗಳು ಭ್ರಷ್ಟರಾಗಿದ್ದರು ಮತ್ತು ಆಕೆಯ ಜನರು ಅಪನಂಬಿಗಸ್ತರಾಗಿದ್ದರು. (ಯೆರೆಮೀಯ 6:13; 7:29-34; 13:23-27) ಈಗ ದೇವರ ಜನರು ಶುದ್ಧಾರಾಧನೆಗೆ ತಮ್ಮ ವಚನಬದ್ಧತೆಯನ್ನು ತೋರಿಸುತ್ತಾ ಆಲಯವನ್ನು ಪುನರ್ನಿರ್ಮಿಸುತ್ತಿದ್ದರು. ಆತ್ಮದಲ್ಲಿ ಪುನಃ ಒಮ್ಮೆ ಯೆಹೋವನು ಯೆರೂಸಲೇಮಿನಲ್ಲಿ ವಾಸಿಸಿದನು. ಶುದ್ಧಾರಾಧನೆಯ ಸತ್ಯಗಳು ಪುನಃ ಆಕೆಯಲ್ಲಿ ನುಡಿಯಲ್ಪಟ್ಟವು, ಆದುದರಿಂದ ಯೆರೂಸಲೇಮ್ “ಸುವ್ರತನಗರಿ”ಯೆಂದು ಕರೆಯಲ್ಪಡಸಾಧ್ಯವಿತ್ತು. ಆಕೆಯ ಉನ್ನತ ಸ್ಥಾನವು “ಯೆಹೋವನ ಪರ್ವತ”ವೆಂದು ಕರೆಯಲ್ಪಡಸಾಧ್ಯವಿತ್ತು.
9. 1919ರಲ್ಲಿ ‘ದೇವರ ಇಸ್ರಾಯೇಲು’ ಪರಿಸ್ಥಿತಿಯಲ್ಲಿ ಯಾವ ಗಮನಾರ್ಹ ಬದಲಾವಣೆಯನ್ನು ಅನುಭವಿಸಿತು?
9 ಈ ಎರಡು ಪ್ರಕಟನೆಗಳು ಪ್ರಾಚೀನ ಇಸ್ರಾಯೇಲಿಗೆ ಅರ್ಥಪೂರ್ಣವಾಗಿದ್ದಾಗ್ಯೂ, 20ನೆಯ ಶತಮಾನವು ಅಂತ್ಯಗೊಳ್ಳುವಾಗ ಅವು ನಮಗೂ ಹೆಚ್ಚಿನ ಅರ್ಥವುಳ್ಳವುಗಳಾಗಿವೆ. ಸುಮಾರು 80 ವರ್ಷಗಳ ಹಿಂದೆ, ಪ್ರಥಮ ಜಾಗತಿಕ ಯುದ್ಧದ ಸಮಯದಲ್ಲಿ, ‘ದೇವರ ಇಸ್ರಾಯೇಲ್’ ಅನ್ನು ಪ್ರತಿನಿಧಿಸಿದ ಆ ಕೆಲವೇ ಸಾವಿರ ಅಭಿಷಿಕ್ತರು, ಪ್ರಾಚೀನ ಇಸ್ರಾಯೇಲ್ ಬಾಬೆಲಿನಲ್ಲಿ ಬಂದಿವಾಸಕ್ಕೆ ಹೋದಂತೆಯೇ ಆತ್ಮಿಕ ಬಂದಿವಾಸದೊಳಗೆ ಪ್ರವೇಶಿಸಿದರು. (ಗಲಾತ್ಯ 6:16) ಪ್ರವಾದನಾತ್ಮಕವಾಗಿ, ಅವರು ಬೀದಿಯಲ್ಲಿ ಬಿದ್ದಿದ್ದ ಶವಗಳೋಪಾದಿ ವರ್ಣಿಸಲ್ಪಟ್ಟರು. ಹಾಗಿದ್ದರೂ, ಯೆಹೋವನನ್ನು “ಆತ್ಮ ಮತ್ತು ಸತ್ಯದಿಂದ” ಆರಾಧಿಸುವ ಪ್ರಾಮಾಣಿಕ ಬಯಕೆ ಅವರಲ್ಲಿತ್ತು. (ಯೋಹಾನ 4:24, NW) ಆದಕಾರಣ 1919ರಲ್ಲಿ, ಯೆಹೋವನು ಅವರನ್ನು ತಮ್ಮ ಆತ್ಮಿಕವಾಗಿ ಮೃತ ಪರಿಸ್ಥಿತಿಯಿಂದ ಎಬ್ಬಿಸುತ್ತಾ, ಬಂದಿವಾಸದಿಂದ ಬಿಡಿಸಿದನು. (ಪ್ರಕಟನೆ 11:7-13) ಹೀಗೆ ಯೆಹೋವನು ಯೆಶಾಯನ ಪ್ರವಾದನಾತ್ಮಕ ಪ್ರಶ್ನೆಗೆ ಪ್ರತಿಧ್ವನಿಸುವ ಹೌದು ಎಂಬ ಉತ್ತರವನ್ನು ನೀಡಿದನು: “ಒಂದು ದಿನದಲ್ಲಿ ರಾಷ್ಟ್ರವು [“ದೇಶವು,” NW] ಹುಟ್ಟೀತೇ? ಕ್ಷಣಮಾತ್ರದಲ್ಲಿ ಜನಾಂಗವನ್ನು ಹೆರಲಿಕ್ಕಾದೀತೇ?” (ಯೆಶಾಯ 66:8) 1919ರಲ್ಲಿ, ಯೆಹೋವನ ಜನರು ಪುನಃ ಒಮ್ಮೆ ತಮ್ಮ ಸ್ವಂತ “ದೇಶ”ದಲ್ಲಿ ಅಥವಾ ಭೂಮಿಯ ಮೇಲಿನ ಆತ್ಮಿಕ ನೆಲೆಯಲ್ಲಿ ಒಂದು ಆತ್ಮಿಕ ರಾಷ್ಟ್ರವಾಗಿ ಜೀವಿಸಿದರು.
10. 1919ರಲ್ಲಿ ಆರಂಭಿಸುತ್ತಾ, ಯಾವ ಆಶೀರ್ವಾದಗಳನ್ನು ಅಭಿಷಿಕ್ತ ಕ್ರೈಸ್ತರು ತಮ್ಮ “ದೇಶ”ದಲ್ಲಿ ಅನುಭವಿಸುತ್ತಿದ್ದಾರೆ?
10 ಆ ದೇಶದಲ್ಲಿ ಸುರಕ್ಷಿತರಾಗಿದ್ದ ಅಭಿಷಿಕ್ತ ಕ್ರೈಸ್ತರು ಯೆಹೋವನ ಮಹಾ ಆತ್ಮಿಕ ಆಲಯದಲ್ಲಿ ಸೇವಿಸಿದರು. ಅವರು, ಯೇಸುವಿನ ಭೌಮಿಕ ಸ್ವತ್ತುಗಳ ಕಾಳಜಿ ವಹಿಸುವ ಹೊಣೆಯನ್ನು ಸ್ವೀಕರಿಸುತ್ತಾ—20ನೆಯ ಶತಮಾನವು ತನ್ನ ಸಮಾಪ್ತಿಯನ್ನು ಸಮೀಪಿಸಿದಂತೆ ಅವರು ಇನ್ನೂ ಅನುಭವಿಸುವ ಒಂದು ಸುಯೋಗ—“ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಎಂಬುದಾಗಿ ಗೊತ್ತುಮಾಡಲ್ಪಟ್ಟರು. (ಮತ್ತಾಯ 24:45-47) ಯೆಹೋವನು “ಶಾಂತಿದಾಯಕನಾದ ದೇವರು” ಎಂಬ ಪಾಠವನ್ನು ಅವರು ಸರಿಯಾಗಿ ಕಲಿತರು.—1 ಥೆಸಲೊನೀಕ 5:23.
11. ಕ್ರೈಸ್ತಪ್ರಪಂಚದ ಧಾರ್ಮಿಕ ನಾಯಕರು ತಮ್ಮನ್ನು ದೇವರ ಜನರ ವೈರಿಗಳೆಂದು ಹೇಗೆ ತೋರಿಸಿಕೊಂಡಿದ್ದಾರೆ?
11 ಆದರೆ, ದೇವರ ಇಸ್ರಾಯೇಲಿನ ವೈರಿಗಳ ಕುರಿತೇನು? ತನ್ನ ಜನರಿಗಾಗಿ ಯೆಹೋವನ ಹುರುಪು, ವಿರೋಧಿಗಳ ವಿರುದ್ಧ ಆತನ ರೋಷದಿಂದ ಸರಿದೂಗಿಸಲ್ಪಟ್ಟಿದೆ. ಪ್ರಥಮ ಜಾಗತಿಕ ಯುದ್ಧದ ಸಮಯದಲ್ಲಿ, ಕ್ರೈಸ್ತಪ್ರಪಂಚದ ಧಾರ್ಮಿಕ ನಾಯಕರು, ಸತ್ಯವನ್ನಾಡುವ ಕ್ರೈಸ್ತರ ಈ ಚಿಕ್ಕ ಗುಂಪನ್ನು ಅಳಿಸಿಬಿಡಲು ಪ್ರಯತ್ನಿಸಿ, ವಿಫಲರಾದಂತೆ, ಮಹತ್ತರವಾದ ಒತ್ತಡವನ್ನು ತಂದರು. ಎರಡನೆಯ ಜಾಗತಿಕ ಯುದ್ಧದ ಸಮಯದಲ್ಲಿ, ಕ್ರೈಸ್ತಪ್ರಪಂಚದ ಶುಶ್ರೂಷಕರು ಒಂದೇ ಒಂದು ವಿಷಯದಲ್ಲಿ ಐಕ್ಯರಾಗಿದ್ದರು: ಹೋರಾಟದ ಎರಡೂ ಪಕ್ಕಗಳಲ್ಲಿ ಯೆಹೋವನ ಸಾಕ್ಷಿಗಳನ್ನು ನಿಗ್ರಹಿಸುವಂತೆ ಅವರು ಸರಕಾರಗಳನ್ನು ಒತ್ತಾಯಿಸಿದರು. ಇಂದು ಸಹ, ಅನೇಕ ದೇಶಗಳಲ್ಲಿ ಯೆಹೋವನ ಸಾಕ್ಷಿಗಳ ಕ್ರೈಸ್ತೋಚಿತ ಸಾರುವ ಕೆಲಸವನ್ನು ತಡೆಯುವಂತೆ ಅಥವಾ ನಿಷೇಧಿಸುವಂತೆ ಧಾರ್ಮಿಕ ನಾಯಕರು ಸರಕಾರಗಳನ್ನು ಕೆರಳಿಸುತ್ತಿದ್ದಾರೆ.
12, 13. ಕ್ರೈಸ್ತಪ್ರಪಂಚದ ವಿರುದ್ಧ ಯೆಹೋವನ ರೋಷವು ಹೇಗೆ ವ್ಯಕ್ತಗೊಳಿಸಲ್ಪಟ್ಟಿದೆ?
12 ಇದು ಯೆಹೋವನ ಗಮನಕ್ಕೆ ಬಾರದೆ ಹೋಗಿಲ್ಲ. ಪ್ರಥಮ ಜಾಗತಿಕ ಯುದ್ಧದ ಬಳಿಕ, ಮಹಾ ಬಾಬೆಲಿನ ಉಳಿದ ವಿಷಯಗಳೊಂದಿಗೆ ಕ್ರೈಸ್ತಪ್ರಪಂಚವು ಒಂದು ಪತನವನ್ನು ಅನುಭವಿಸಿತು. (ಪ್ರಕಟನೆ 14:8) 1922ರಲ್ಲಿ ಆರಂಭಿಸುತ್ತಾ, ಕ್ರೈಸ್ತಪ್ರಪಂಚದ ಪತನದ ವಾಸ್ತವಿಕತೆಯು ಸಾರ್ವಜನಿಕ ಅರಿವಾಯಿತು. ಆ ಸಮಯದಿಂದ ಆಕೆಯ ಆತ್ಮಿಕ ಮೃತ ಪರಿಸ್ಥಿತಿಯನ್ನು ಸಾರ್ವಜನಿಕವಾಗಿ ಬಯಲುಪಡಿಸುತ್ತಾ ಮತ್ತು ಬರಲಿರುವ ಆಕೆಯ ನಾಶನದ ಕುರಿತು ಎಚ್ಚರಿಸುತ್ತಾ, ಸಾಂಕೇತಿಕ ಉಪದ್ರವಗಳ ಒಂದು ಸರಣಿಯು ಸುರಿಸಲ್ಪಟ್ಟಿತು. (ಪ್ರಕಟನೆ 8:7–9:21) ಈ ಉಪದ್ರವಗಳ ಸುರಿಯುವಿಕೆಯು ಮುಂದುವರಿಯುತ್ತಿದೆ ಎಂಬುದಕ್ಕೆ ಪ್ರಮಾಣವಾಗಿ, 1995 ಎಪ್ರಿಲ್ 23ರಂದು “ಸುಳ್ಳು ಧರ್ಮದ ಅಂತ್ಯ ಸಮೀಪಿಸುತ್ತಿದೆ” ಎಂಬ ಭಾಷಣವು ಲೋಕವ್ಯಾಪಕವಾಗಿ ಕೊಡಲ್ಪಟ್ಟಿತು, ಇದನ್ನನುಸರಿಸಿ ರಾಜ್ಯ ವಾರ್ತೆ ಎಂಬ ವಿಶೇಷ ಸಂಚಿಕೆಯ ನೂರಾರು ಲಕ್ಷ ಪ್ರತಿಗಳು ಹಂಚಲ್ಪಟ್ಟವು.
13 ಇಂದು, ಕ್ರೈಸ್ತಪ್ರಪಂಚವು ಶೋಚನೀಯ ಸ್ಥಿತಿಯಲ್ಲಿದೆ. 20ನೆಯ ಶತಮಾನದ ಉದ್ದಕ್ಕೂ, ಆಕೆಯ ಪಾದ್ರಿಗಳು ಮತ್ತು ಶುಶ್ರೂಷಕರಿಂದ ಆಶೀರ್ವದಿಸಲ್ಪಟ್ಟ ದುಷ್ಟ ಯುದ್ಧಗಳಲ್ಲಿ ಆಕೆಯ ಸದಸ್ಯರು ಒಬ್ಬರನ್ನೊಬ್ಬರು ಕೊಂದಿದ್ದಾರೆ. ಕೆಲವು ದೇಶಗಳಲ್ಲಿ ಆಕೆಯ ಪ್ರಭಾವವು ಕಾರ್ಯತಃ ಶೂನ್ಯವಾಗಿದೆ. ಮಹಾ ಬಾಬೆಲಿನ ಉಳಿದ ಸಂಗತಿಗಳೊಂದಿಗೆ ಆಕೆ ನಾಶನಕ್ಕೆ ಮೀಸಲಾಗಿಡಲ್ಪಟ್ಟಿದ್ದಾಳೆ.—ಪ್ರಕಟನೆ 18:21.
ಯೆಹೋವನ ಜನರಿಗೆ ಶಾಂತಿ
14. ಶಾಂತಿಯಲ್ಲಿರುವ ಒಂದು ಜನಾಂಗದ ಕುರಿತು ಯಾವ ಪ್ರವಾದನಾತ್ಮಕ ಶಬ್ದಚಿತ್ರವು ಪ್ರವಾದನಾತ್ಮಕವಾಗಿ ಕೊಡಲ್ಪಟ್ಟಿದೆ?
14 ಇನ್ನೊಂದು ಕಡೆಯಲ್ಲಿ, ಈ ವರ್ಷ 1996ರಲ್ಲಿ ಯೆಹೋವನ ಜನರು ತಮ್ಮ ಪುನಸ್ಸ್ಥಾಪಿತ ದೇಶದಲ್ಲಿ ಸಮೃದ್ಧವಾದ ಶಾಂತಿಯನ್ನು ಅನುಭವಿಸುತ್ತಾರೆ. ಇದು ಯೆಹೋವನ ಮೂರನೆಯ ಪ್ರಕಟನೆಯಲ್ಲಿ ವರ್ಣಿಸಿದಂತಿದೆ: “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ—ಇನ್ನು ಮುಂದೆ ಯೆರೂಸಲೇಮಿನ ಚೌಕಗಳಲ್ಲಿ ಮುದುಕಮುದುಕಿಯರು ಕೂಡ್ರುವರು; ಅತಿವೃದ್ಧಾಪ್ಯದ ನಿಮಿತ್ತ ಪ್ರತಿಯೊಬ್ಬ ಮುದುಕನ ಕೈಯಲ್ಲಿ ಊರುಗೋಲಿರುವದು. ಆ ಪಟ್ಟಣದ ಚೌಕಗಳಲ್ಲಿ ಆಟವಾಡುವ ಬಾಲಕ ಬಾಲಕಿಯರೂ ತುಂಬಿಕೊಂಡಿರುವರು.”—ಜೆಕರ್ಯ 8:4, 5.
15. ರಾಷ್ಟ್ರಗಳ ಯುದ್ಧಗಳ ಹೊರತೂ, ಯೆಹೋವನ ಸೇವಕರಿಂದ ಯಾವ ಶಾಂತಿಯು ಅನುಭವಿಸಲ್ಪಟ್ಟಿದೆ?
15 ಈ ಹರ್ಷಮಯ ಶಬ್ದಚಿತ್ರವು ಯುದ್ಧದಿಂದ ಛಿದ್ರವಾದ ಈ ಲೋಕದ ಯಾವುದೊ ಗಮನಾರ್ಹವಾದ ವಿಷಯವನ್ನು ನಿದರ್ಶಿಸುತ್ತದೆ—ಶಾಂತಿಯಲ್ಲಿರುವ ಒಂದು ಜನಾಂಗ. 1919ರಿಂದ ಯೆಶಾಯನ ಪ್ರವಾದನಾತ್ಮಕ ಮಾತುಗಳು ನೆರವೇರಿವೆ: “ಯೆಹೋವನು . . . ದೂರದವನಿಗೂ ಸಮೀಪದವನಿಗೂ ಕ್ಷೇಮವಿರಲಿ, ಸುಕ್ಷೇಮವಿರಲಿ, ನಾನು ಅವರನ್ನು ಸ್ವಸ್ಥಮಾಡುವೆನು ಎಂದು ಹೇಳುತ್ತಾನೆ. . . . ದುಷ್ಟರಿಗೆ ಸಮಾಧಾನವೇ [“ಶಾಂತಿಯೇ,” NW] ಇಲ್ಲವೆಂದು ನನ್ನ ದೇವರು ನುಡಿಯುತ್ತಾನೆ.” (ಯೆಶಾಯ 57:19-21) ಯೆಹೋವನ ಜನರು, ಲೋಕದ ಭಾಗವಾಗಿ ಇರದಿದ್ದಾಗ್ಯೂ ರಾಷ್ಟ್ರಗಳ ಕ್ಷೋಭೆಯಿಂದ ಪ್ರಭಾವಿಸಲ್ಪಡದೆ ಇರುವುದನ್ನು ತೊರೆಯಲಾರರು ನಿಶ್ಚಯ. (ಯೋಹಾನ 17:15, 16) ಕೆಲವೊಂದು ದೇಶಗಳಲ್ಲಿ, ಅವರು ತೀವ್ರವಾದ ಕಷ್ಟಗಳನ್ನು ತಾಳಿಕೊಳ್ಳುತ್ತಾರೆ ಮತ್ತು ಕೊಂಚ ಜನರು ಕೊಲ್ಲಲ್ಪಟ್ಟಿದ್ದಾರೆ ಸಹ. ಆದರೂ, ನಿಜ ಕ್ರೈಸ್ತರಿಗೆ ಎರಡು ಪ್ರಧಾನ ವಿಧಗಳಲ್ಲಿ ಶಾಂತಿಯಿದೆ. ಮೊದಲನೆಯದಾಗಿ, ಅವರಿಗೆ “[ತಮ್ಮ] ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರೊಂದಿಗೆ . . . ಸಮಾಧಾನ [“ಶಾಂತಿ,” NW]” ಇದೆ. (ರೋಮಾಪುರ 5:1) ಎರಡನೆಯದಾಗಿ, ಅವರಿಗೆ ತಮ್ಮತಮ್ಮಲ್ಲಿ ಶಾಂತಿಯಿದೆ. ಅವರು “ಮೊದಲು ಪರಿಶುದ್ಧವಾದದ್ದು, ಆ ಮೇಲೆ ಸಮಾಧಾನ [“ಶಾಂತಿ,” NW]ಕರವಾದದ್ದು” ಆದ “ಮೇಲಣಿಂದ ಬರುವ ಜ್ಞಾನ”ವನ್ನು ಬೆಳೆಸಿಕೊಳ್ಳುತ್ತಾರೆ. (ಯಾಕೋಬ 3:17; ಗಲಾತ್ಯ 5:22-24) ಅಷ್ಟೇ ಅಲ್ಲದೆ, “ದೀನರು ದೇಶವನ್ನು ಅನುಭವಿಸುವ . . . ಅವರು ಮಹಾಸೌಖ್ಯದಿಂದ ಆನಂದಿಸುವ” ಸಮಯದಲ್ಲಿ, ಅತ್ಯಂತ ಪೂರ್ಣವಾದ ಅರ್ಥದಲ್ಲಿ ಶಾಂತಿಯನ್ನು ಅನುಭವಿಸುವುದಕ್ಕೆ ಅವರು ಎದುರುನೋಡುತ್ತಾರೆ.—ಕೀರ್ತನೆ 37:11.
16, 17. (ಎ) “ಮುದುಕಮುದುಕಿಯರು” ಅಷ್ಟೇ ಅಲ್ಲದೆ “ಬಾಲಕ ಬಾಲಕಿಯರೂ” ಯೆಹೋವನ ಸಂಸ್ಥೆಯನ್ನು ಹೇಗೆ ಬಲಗೊಳಿಸಿದ್ದಾರೆ? (ಬಿ) ಯೆಹೋವನ ಜನರ ಶಾಂತಿಯನ್ನು ಯಾವುದು ಪ್ರದರ್ಶಿಸುತ್ತದೆ?
16 ಯೆಹೋವನ ಜನರೊಳಗೆ ಇನ್ನೂ “ಮುದುಕಮುದುಕಿಯರು”—ಯೆಹೋವನ ಸಂಸ್ಥೆಯ ಆರಂಭಿಕ ವಿಜಯಗಳನ್ನು ಜ್ಞಾಪಿಸಿಕೊಳ್ಳುವ ಅಭಿಷಿಕ್ತರು—ಇದ್ದಾರೆ. ಅವರ ನಂಬಿಗಸ್ತಿಕೆ ಮತ್ತು ತಾಳ್ಮೆಯು ಬಹಳವಾಗಿ ಗಣ್ಯಮಾಡಲ್ಪಡುತ್ತದೆ. 1930ಗಳ ಆವೇಶದ ದಿನಗಳಲ್ಲಿ, IIನೆಯ ಜಾಗತಿಕ ಯುದ್ಧದ ಸಮಯದಲ್ಲಿ, ಅಷ್ಟೇ ಅಲ್ಲದೆ ಅದನ್ನನುಸರಿಸಿದ ಬೆಳವಣಿಗೆಯ ಉತ್ತೇಜನಕಾರಿ ವರ್ಷಗಳಲ್ಲಿ ಯುವ ಅಭಿಷಿಕ್ತರು ನಾಯಕತ್ವವನ್ನು ವಹಿಸಿದರು. ಅದೂ ಅಲ್ಲದೆ, ವಿಶೇಷವಾಗಿ 1935ರಿಂದ, “ಬೇರೆ ಕುರಿಗಳ” “ಮಹಾ ಸಮೂಹ”ವು ತನ್ನನ್ನು ತೋರ್ಪಡಿಸಿಕೊಂಡಿದೆ. (ಪ್ರಕಟನೆ 7:9; ಯೋಹಾನ 10:16) ಅಭಿಷಿಕ್ತ ಕ್ರೈಸ್ತರು ವೃದ್ಧರಾಗಿಯೂ ಅಲ್ಪ ಸಂಖ್ಯಾಕರೂ ಆಗಿರುವಂತೆ, ಬೇರೆ ಕುರಿಗಳು ಸಾರುವ ಕೆಲಸವನ್ನು ವಹಿಸಿಕೊಂಡಿದ್ದಾರೆ ಮತ್ತು ಅದನ್ನು ಭೂಮಿಯ ಆದ್ಯಂತ ವಿಸ್ತರಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬೇರೆ ಕುರಿಗಳು ದೇವರ ಜನರ ದೇಶದೊಳಗೆ ಪ್ರವಹಿಸುತ್ತಿದ್ದಾರೆ. ಅಷ್ಟೇಕೆ, ಕಳೆದ ವರ್ಷವೇ, ಯೆಹೋವನಿಗೆ ತಮ್ಮ ಸಮರ್ಪಣೆಯ ಸಂಕೇತವಾಗಿ ಅವರಲ್ಲಿ 3,38,491 ಜನರು ದೀಕ್ಷಾಸ್ನಾನ ಪಡೆದುಕೊಂಡರು! ಆತ್ಮಿಕವಾಗಿ ಹೇಳುವುದಾದರೆ, ಇಂತಹ ಹೊಸಬರು ನಿಶ್ಚಯವಾಗಿಯೂ ಎಳೆಯರಾಗಿದ್ದಾರೆ. “ಸಿಂಹಾಸನಾಸೀನನಾಗಿರುವ ನಮ್ಮ ದೇವರಿಗೂ ಯಜ್ಞದ ಕುರಿಯಾದಾತನಿಗೂ” ಕೃತಜ್ಞತೆಯುಳ್ಳ ಸ್ತುತಿಗಳನ್ನು ಹಾಡುವವರ ಪಂಕ್ತಿಗಳನ್ನು ಹೆಚ್ಚಿಸಿದಂತೆ, ಅವರ ಹುಮ್ಮಸ್ಸು ಮತ್ತು ಉತ್ಸಾಹವು ಅಮೂಲ್ಯವೆಂದೆಣಿಸಲ್ಪಡುತ್ತದೆ.—ಪ್ರಕಟನೆ 7:10.
17 ಇಂದು, ‘ಚೌಕಗಳು ಆಟವಾಡುವ ಬಾಲಕ ಬಾಲಕಿಯರಿಂದ’—ಯೌವನಸದೃಶ ಹುರುಪಿನ ಸಾಕ್ಷಿಗಳಿಂದ—‘ತುಂಬಿಕೊಂಡಿವೆ.’ 1995ರ ಸೇವಾ ವರ್ಷದಲ್ಲಿ 232 ದೇಶಗಳಿಂದ ಮತ್ತು ಸಮುದ್ರದ ದ್ವೀಪಗಳಿಂದ ವರದಿಗಳು ದೊರೆತವು. ಆದರೆ ಅಭಿಷಿಕ್ತರ ಮತ್ತು ಬೇರೆ ಕುರಿಗಳ ನಡುವೆ ಅಂತಾರಾಷ್ಟ್ರೀಯ ವೈರತ್ವ, ಅಂತರ್ಜಾತಿಯ ದ್ವೇಷ, ಅಯೋಗ್ಯವಾದ ಅಸೂಯೆ ಇರುವುದಿಲ್ಲ. ಪ್ರೀತಿಯಲ್ಲಿ ಐಕ್ಯರಾಗಿ ಎಲ್ಲರೂ ಆತ್ಮಿಕವಾಗಿ ಒಟ್ಟಿಗೆ ಬೆಳೆಯುತ್ತಾರೆ. ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಸಹೋದರತ್ವವು ಲೋಕ ದೃಶ್ಯದ ಮೇಲೆ ನಿಜವಾಗಿಯೂ ಅಪೂರ್ವವಾಗಿದೆ.—ಕೊಲೊಸ್ಸೆ 3:14; 1 ಪೇತ್ರ 2:17.
ಯೆಹೋವನಿಗೆ ಬಹು ಕಷ್ಟಕರವೊ?
18, 19. 1919ರ ವರ್ಷಗಳಿಂದ, ಮಾನವ ದೃಷ್ಟಿಕೋನದಿಂದ ಬಹು ಕಷ್ಟಕರವಾಗಿ ತೋರಿರಬಹುದಾದ ವಿಷಯವನ್ನು ಯೆಹೋವನು ಹೇಗೆ ಸಾಧಿಸಿದ್ದಾನೆ?
18 ಹಿಂದೆ 1918ರಲ್ಲಿ, ಕೇವಲ ಕೆಲವೇ ಸಾವಿರ ನಿರುತ್ಸಾಹಿತ ವ್ಯಕ್ತಿಗಳಿಂದ ಸಂಯೋಜಿತರಾಗಿದ್ದ ಅಭಿಷಿಕ್ತ ಉಳಿಕೆಯವರು ಆತ್ಮಿಕ ಬಂದಿವಾಸದಲ್ಲಿದ್ದಾಗ, ಘಟನೆಗಳು ತೆಗೆದುಕೊಳ್ಳಲಿದ್ದ ಮಾರ್ಗವನ್ನು ಯಾರೂ ಮುಂಗಾಣಸಾಧ್ಯವಿರಲಿಲ್ಲ. ಆದರೂ ಯೆಹೋವನಿಗೆ ಗೊತ್ತಿತ್ತು—ಆತನ ನಾಲ್ಕನೆಯ ಪ್ರವಾದನಾತ್ಮಕ ಪ್ರಕಟನೆಯಿಂದ ಸಮರ್ಥಿಸಲ್ಪಟ್ಟಂತೆ: “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ—ಆ ಕಾಲದ ಸ್ಥಿತಿಯು ಈ ಜನಶೇಷದವರ ದೃಷ್ಟಿಗೆ ಅತ್ಯಾಶ್ಚರ್ಯವಾದರೂ ನನ್ನ ದೃಷ್ಟಿಗೆ ಅತ್ಯಾಶ್ಚರ್ಯವೋ? ಇದು ಸೇನಾಧೀಶ್ವರ ಯೆಹೋವನ ನುಡಿ.”—ಜೆಕರ್ಯ 8:6.
19 1919ರಲ್ಲಿ, ಯೆಹೋವನ ಆತ್ಮವು ಆತನ ಜನರನ್ನು ಮುಂದಿದ್ದ ಕೆಲಸಕ್ಕಾಗಿ ಪುನರುಜ್ಜೀವಿಸಿತು. ಹಾಗಿದ್ದರೂ, ಯೆಹೋವನ ಆರಾಧಕರ ಸಣ್ಣ ಸಂಸ್ಥೆಗೆ ಅಂಟಿಕೊಂಡಿರಲು ನಂಬಿಕೆಯ ಅಗತ್ಯವಿತ್ತು. ಅವರು ಅತಿ ಅಲ್ಪ ಸಂಖ್ಯಾಕರಾಗಿದ್ದರು ಮತ್ತು ಅನೇಕ ವಿಷಯಗಳು ಸ್ಪಷ್ಟವಾಗಿರಲಿಲ್ಲ. ಹಾಗಿದ್ದರೂ, ಕೊಂಚ ಕೊಂಚವಾಗಿ ಯೆಹೋವನು ಅವರನ್ನು ಸಂಘಟನಾತ್ಮಕವಾಗಿ ಬಲಪಡಿಸಿದನು ಮತ್ತು ಸುವಾರ್ತೆಯನ್ನು ಸಾರುವ ಹಾಗೂ ಶಿಷ್ಯರನ್ನಾಗಿ ಮಾಡುವ ಕ್ರೈಸ್ತ ಕೆಲಸವನ್ನು ಮಾಡುವಂತೆ ಅವರನ್ನು ಸಜ್ಜುಗೊಳಿಸಿದನು. (ಯೆಶಾಯ 60:17, 19; ಮತ್ತಾಯ 24:14; 28:19, 20) ಕ್ರಮೇಣವಾಗಿ, ಆತನು ತಾಟಸ್ಥ್ಯ ಮತ್ತು ವಿಶ್ವದ ಪರಮಾಧಿಕಾರಗಳಂತಹ ಪ್ರಮುಖ ವಿವಾದಾಂಶಗಳ ಕುರಿತು ವಿವೇಚಿಸುವಂತೆ ಅವರಿಗೆ ಸಹಾಯ ಮಾಡಿದನು. ಸಾಕ್ಷಿಗಳ ಆ ಸಣ್ಣ ಗುಂಪಿನ ಮೂಲಕ ತನ್ನ ಚಿತ್ತವನ್ನು ಸಾಧಿಸುವುದು ಯೆಹೋವನಿಗೆ ಬಹು ಕಷ್ಟಕರವಾಗಿತ್ತೊ? ಉತ್ತರವು ಖಂಡಿತವಾಗಿಯೂ ಇಲ್ಲ ಎಂದಾಗಿದೆ! ಇದು ಈ ಪತ್ರಿಕೆಯ 12ರಿಂದ 15ನೆಯ ಪುಟಗಳಲ್ಲಿ ಸಮರ್ಥಿಸಲ್ಪಟ್ಟಿದೆ, ಇದು 1995ರ ಸೇವಾ ವರ್ಷಕ್ಕಾಗಿರುವ ಯೆಹೋವನ ಸಾಕ್ಷಿಗಳ ಚಟುವಟಿಕೆಯ ರೇಖಾಪಟವನ್ನು ಪ್ರಕಟಿಸುತ್ತದೆ.
“ನಾನು ಅವರಿಗೆ ದೇವರಾಗಿರುವೆನು”
20. ದೇವರ ಜನರ ಒಟ್ಟುಗೂಡಿಸುವಿಕೆಯು ಎಷ್ಟು ವಿಸ್ತಾರವಾಗಿರುವುದೆಂದು ಪ್ರವಾದಿಸಲ್ಪಟ್ಟಿತ್ತು?
20 ಐದನೆಯ ಪ್ರಕಟನೆಯು ಇಂದು ಯೆಹೋವನ ಸಾಕ್ಷಿಗಳ ಸಂತುಷ್ಟ ಪರಿಸ್ಥಿತಿಯನ್ನು ಇನ್ನೂ ಹೆಚ್ಚಾಗಿ ತೋರಿಸುತ್ತದೆ: “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ—ಇಗೋ, ನಾನು ನನ್ನ ಜನರನ್ನು ಮೂಡಣ ದೇಶದಿಂದಲೂ ಪಡುವಣ ದೇಶದಿಂದಲೂ ಪಾರುಮಾಡಿ ಬರಗೊಳಿಸುವೆನು, ಅವರು ಯೆರೂಸಲೇಮಿನೊಳಗೇ ವಾಸವಾಗಿರುವರು; ಸತ್ಯಸಂಧತೆಯಿಂದಲೂ ಸದ್ಧರ್ಮದಿಂದಲೂ ಅವರು ನನಗೆ ಪ್ರಜೆಯಾಗಿರುವರು, ಹಾಗೆಯೇ ನಾನು ಅವರಿಗೆ ದೇವರಾಗಿರುವೆನು.”—ಜೆಕರ್ಯ 8:7, 8.
21. ಯಾವ ವಿಧದಲ್ಲಿ ಯೆಹೋವನ ಜನರ ಸಮೃದ್ಧವಾದ ಶಾಂತಿಯು ಕಾಪಾಡಲ್ಪಟ್ಟಿದೆ ಮತ್ತು ವಿಸ್ತರಿಸಲ್ಪಟ್ಟಿದೆ?
21 1996ರಲ್ಲಿ, ಸುವಾರ್ತೆಯು ‘ಮೂಡಣ ದೇಶದಿಂದ ಪಡುವಣ ದೇಶ’ದ ವರೆಗೆ, ಲೋಕದ ಸುತ್ತಲೂ ಸಾರಲ್ಪಟ್ಟಿದೆ ಎಂದು ನಾವು ನಿಸ್ಸಂದೇಹವಾಗಿ ಹೇಳಸಾಧ್ಯವಿದೆ. ಎಲ್ಲ ರಾಷ್ಟ್ರಗಳ ಜನರಿಂದ ಶಿಷ್ಯರನ್ನು ಮಾಡಲಾಗಿದೆ, ಮತ್ತು ಅವರು ಯೆಹೋವನ ವಾಗ್ದಾನದ ನೆರವೇರಿಕೆಯನ್ನು ಕಂಡಿದ್ದಾರೆ: “ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು, ಅವರಿಗೆ ಅಧಿಕ ಸುಕ್ಷೇಮ [“ಶಾಂತಿ,” NW]ವಾಗುವದು.” (ಯೆಶಾಯ 54:13) ನಮಗೆ ಶಾಂತಿಯಿದೆ ಏಕೆಂದರೆ ನಾವು ಯೆಹೋವನಿಂದ ಶಿಕ್ಷಿತರಾಗಿದ್ದೇವೆ. ಈ ಉದ್ದೇಶವನ್ನು ಮನಸ್ಸಿನಲ್ಲಿಡುತ್ತಾ, ಸಾಹಿತ್ಯವು 300ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ ಪ್ರಕಾಶಿಸಲ್ಪಟ್ಟಿದೆ. ಕಳೆದ ವರ್ಷವೇ 21 ಹೆಚ್ಚಿನ ಭಾಷೆಗಳು ಕೂಡಿಸಲ್ಪಟ್ಟವು. ಕಾವಲಿನಬುರುಜು ಪತ್ರಿಕೆಯು ಈಗ ಏಕಕಾಲಿಕವಾಗಿ 111 ಭಾಷೆಗಳಲ್ಲಿ ಮತ್ತು ಎಚ್ಚರ!ವು 54 ಭಾಷೆಗಳಲ್ಲಿ ಪ್ರಕಾಶಿಸಲ್ಪಡುತ್ತವೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅಧಿವೇಶನಗಳು ದೇವರ ಜನರ ಶಾಂತಿಯ ಸಾರ್ವಜನಿಕ ಪ್ರದರ್ಶನವನ್ನು ಒದಗಿಸುತ್ತವೆ. ಸಾಪ್ತಾಹಿಕ ಕೂಟಗಳು ನಮ್ಮನ್ನು ಐಕ್ಯಗೊಳಿಸುತ್ತವೆ ಮತ್ತು ದೃಢವಾಗಿ ಉಳಿಯಲು ನಮಗೆ ಬೇಕಾದ ಉತ್ತೇಜನವನ್ನು ಕೊಡುತ್ತವೆ. (ಇಬ್ರಿಯ 10:23-25) ಹೌದು, ಯೆಹೋವನು ತನ್ನ ಜನರನ್ನು “ಸತ್ಯಸಂಧತೆಯಿಂದಲೂ ಸದ್ಧರ್ಮದಿಂದಲೂ” ಶಿಕ್ಷಿಸುತ್ತಿದ್ದಾನೆ. ತನ್ನ ಜನರಿಗೆ ಆತನು ಶಾಂತಿಯನ್ನು ನೀಡುತ್ತಿದ್ದಾನೆ. ಆ ಸಮೃದ್ಧವಾದ ಶಾಂತಿಯಲ್ಲಿ ಪಾಲ್ಗೊಳ್ಳಲು ನಾವು ಎಷ್ಟು ಆಶೀರ್ವದಿತರು!
ನೀವು ವಿವರಿಸಬಲ್ಲಿರೊ?
◻ ಆಧುನಿಕ ಸಮಯಗಳಲ್ಲಿ, ಯೆಹೋವನ ತನ್ನ ಜನರಿಗಾಗಿ ‘ಅತಿರೋಷದಿಂದ ಅಸೂಯೆ’ಪಟ್ಟಿರುವುದು ಹೇಗೆ?
◻ ಯುದ್ಧದಿಂದ ಛಿದ್ರವಾದ ದೇಶಗಳಲ್ಲಿಯೂ ಯೆಹೋವನ ಜನರು ಶಾಂತಿಯನ್ನು ಹೇಗೆ ಆನಂದಿಸುತ್ತಾರೆ?
◻ ಯಾವ ವಿಧದಲ್ಲಿ ‘ಚೌಕಗಳು ಬಾಲಕ ಬಾಲಕಿಯರಿಂದ ತುಂಬಿಕೊಂಡಿವೆ’?
◻ ಯೆಹೋವನ ಜನರು ಆತನಿಂದ ಕಲಿಸಲ್ಪಡಸಾಧ್ಯವಾಗುವಂತೆ ಯಾವ ಮುನ್ನೇರ್ಪಾಡುಗಳು ಮಾಡಲ್ಪಟ್ಟಿವೆ?
[ಪುಟ 12-15ರಲ್ಲಿರುವಚಿತ್ರ]
ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ 1995ನೆಯ ಸೇವಾ ವರ್ಷದ ವರದಿ
(See volume)
[ಪುಟ 8 ರಲ್ಲಿರುವಚಿತ್ರ]
ಯೆಹೋವನು ಶಾಂತಿಯ ಏಕಮಾತ್ರ ವಿಶ್ವಸನೀಯ ಮೂಲನೆಂದು ಸಾ.ಶ.ಪೂ. ಆರನೆಯ ಶತಮಾನದಲ್ಲಿ ಆಲಯವನ್ನು ಪುನರ್ನಿರ್ಮಿಸಿದ ನಂಬಿಗಸ್ತ ಯೆಹೂದ್ಯರು ಕಲಿತರು