“ಸತ್ಯವನ್ನೂ ಶಾಂತಿಯನ್ನೂ ಪ್ರೀತಿಸಿರಿ”!
“ಸೇನಾಧೀಶ್ವರ ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು . . . ಸತ್ಯವನ್ನೂ ಸಮಾಧಾನ [“ಶಾಂತಿ,” NW]ವನ್ನೂ ಪ್ರೀತಿಸಿರಿ.”—ಜೆಕರ್ಯ 8:18, 19.
1, 2. (ಎ) ಶಾಂತಿಯ ಸಂಬಂಧದಲ್ಲಿ ಮಾನವ ಜಾತಿಯ ದಾಖಲೆಯು ಏನಾಗಿದೆ? (ಬಿ) ಈ ಪ್ರಚಲಿತ ಲೋಕವು ನಿಜವಾದ ಶಾಂತಿಯನ್ನು ಎಂದೂ ನೋಡದೇಕೆ?
“ಲೋಕವು ಶಾಂತಿಯನ್ನು ಎಂದೂ ಅನುಭವಿಸಿದ್ದಿಲ್ಲ. ಎಲ್ಲಾದರೂ—ಮತ್ತು ಅನೇಕ ವೇಳೆ ಒಂದೇ ಸಮಯದಲ್ಲಿ ಹೆಚ್ಚಿನ ಸ್ಥಳಗಳಲ್ಲಿ—ಯಾವಾಗಲೂ ಯುದ್ಧವು ಇದ್ದೇ ಇದೆ.” ಹೀಗೆಂದು ಹೇಳಿದರು ಅಮೆರಿಕದ ಮ್ಯಾಸಚೂಸೆಟ್ಸ್ ವಿಶ್ವವಿದ್ಯಾನಿಲಯದ ಪ್ರೊಫೆಸರ್, ಮಿಲ್ಟನ್ ಮೇಯರ್. ಮಾನವ ಕುಲದ ಬಗ್ಗೆ ಎಂತಹ ವಿಷಾದಕರ ಹೇಳಿಕೆ! ನಿಜ, ಮನುಷ್ಯರು ಶಾಂತಿಯನ್ನು ಬಯಸಿದ್ದಾರೆ. ಅದನ್ನು ಕಾಪಾಡಲು ರಾಜಕಾರಣಿಗಳು ಎಲ್ಲ ಬಗೆಯ ಮಾರ್ಗಗಳನ್ನು—ರೋಮನ್ ಸಮಯಗಳ ಪಾಕ್ಸ್ ರೋಮಾನದಿಂದ ಹಿಡಿದು ಶೀತಲ ಯುದ್ಧದ ಸಮಯದಲ್ಲಿ “ಪರಸ್ಪರ ನಿಶ್ಚಿತ ನಾಶನ”ದ ಕಾರ್ಯನೀತಿಯ ವರೆಗೆ—ಪ್ರಯತ್ನಿಸಿದ್ದಾರೆ. ಆದರೂ ಕಟ್ಟಕಡೆಗೆ ಅವರ ಎಲ್ಲ ಪ್ರಯತ್ನಗಳು ವಿಫಲಗೊಂಡವು. ಯೆಶಾಯನು ಅದನ್ನು ಅನೇಕ ಶತಮಾನಗಳ ಹಿಂದೆ ವ್ಯಕ್ತಪಡಿಸಿದಂತೆ, ‘ಶಾಂತಿಯ ರಾಯಭಾರಿಗಳು ಘೋರವಾಗಿ ಅತ್ತಿದ್ದಾರೆ.’ (ಯೆಶಾಯ 33:7, NW) ಇದು ಹೀಗೇಕೆ?
2 ಏಕೆಂದರೆ ಬಾಳುವ ಶಾಂತಿಯು ದ್ವೇಷ ಮತ್ತು ಲೋಭದ ಅನುಪಸ್ಥಿತಿಯಿಂದ ಉದ್ಭವಿಸಬೇಕು; ಅದು ಸತ್ಯದಲ್ಲಿ ನೆಲೆಸಿರಬೇಕು. ಶಾಂತಿಯು ಸುಳ್ಳುಗಳ ಮೇಲೆ ಆಧಾರಿತವಾಗಿರಲಾರದು. ಆ ಕಾರಣದಿಂದಲೇ ಪ್ರಾಚೀನ ಇಸ್ರಾಯೇಲಿಗೆ ಪುನಸ್ಸ್ಥಾಪನೆಯನ್ನೂ ಶಾಂತಿಯನ್ನೂ ವಾಗ್ದಾನಿಸುವಾಗ, ಯೆಹೋವನು ಹೇಳಿದ್ದು: “ನಾನು ಆಕೆಗೆ ಸುಖವನ್ನು ನದಿಯಂತೆ ದಯಪಾಲಿಸಿ ತುಂಬಿ ತುಳುಕುವ ತೊರೆಯನ್ನೋ ಎಂಬಂತೆ ಜನಾಂಗಗಳ ವೈಭವವನ್ನು ನೀಡುವೆನು.” (ಯೆಶಾಯ 66:12) ಈ ವಿಷಯಗಳ ವ್ಯವಸ್ಥೆಯ ದೇವರು, ಪಿಶಾಚನಾದ ಸೈತಾನನು, “ಕೊಲೆಗಾರ,” ಒಬ್ಬ ಕೊಲೆಗಡುಕ ಮತ್ತು “ಸುಳ್ಳುಗಾರನೂ ಸುಳ್ಳಿಗೆ ಮೂಲಪುರುಷನೂ” ಆಗಿದ್ದಾನೆ. (ಯೋಹಾನ 8:44; 2 ಕೊರಿಂಥ 4:4) ಇಂತಹ ಒಬ್ಬ ದೇವನಿರುವ ಲೋಕದಲ್ಲಿ ಶಾಂತಿಯು ಎಂದಾದರೂ ಹೇಗಿರಬಲ್ಲದು?
3. ಒಂದು ತೊಂದರೆಯುಕ್ತ ಲೋಕದಲ್ಲಿ ಅವರು ಜೀವಿಸುತ್ತಿರುವ ಹೊರತೂ, ಯಾವ ಗಮನಾರ್ಹವಾದ ಕೊಡುಗೆಯನ್ನು ಯೆಹೋವನು ತನ್ನ ಜನರಿಗೆ ನೀಡಿದ್ದಾನೆ?
3 ಆದರೂ ಗಮನಾರ್ಹವಾಗಿ, ಯೆಹೋವನು ತನ್ನ ಜನರಿಗೆ, ಅವರು ಸೈತಾನನ ಯುದ್ಧ ಛಿದ್ರವಾದ ಲೋಕದಲ್ಲಿ ಜೀವಿಸುತ್ತಿರುವಾಗಲೂ ಶಾಂತಿಯನ್ನು ನೀಡುತ್ತಾನೆ. (ಯೋಹಾನ 17:16) ಸಾ.ಶ.ಪೂ. ಆರನೆಯ ಶತಮಾನದಲ್ಲಿ, ಯೆರೆಮೀಯನ ಮುಖಾಂತರ ತನ್ನ ವಾಗ್ದಾನವನ್ನು ಆತನು ನೆರವೇರಿಸಿದನು ಮತ್ತು ಅವರನ್ನು ತಮ್ಮ ಸ್ವದೇಶಕ್ಕೆ ಪುನಸ್ಸ್ಥಾಪಿಸಿದಾಗ ತನ್ನ ವಿಶೇಷ ರಾಷ್ಟ್ರಕ್ಕೆ “ಶಾಂತಿಯನ್ನೂ ಸತ್ಯವನ್ನೂ” ನೀಡಿದನು. (ಯೆರೆಮೀಯ 33:6, NW) ಮತ್ತು ಈ ಕೊನೆಯ ದಿವಸಗಳಲ್ಲಿ, ತನ್ನ ಜನರು ಈ ಲೋಕವು ಈ ವರೆಗೆ ನೋಡಿರುವ ತೊಂದರೆಯ ಅತಿಕೆಟ್ಟ ಸಮಯದಲ್ಲಿ ಜೀವಿಸಿರುವುದಾದರೂ, ಅವರಿಗೆ ತಮ್ಮ “ದೇಶ”ದಲ್ಲಿ ಅಥವಾ ಐಹಿಕ ಆತ್ಮಿಕ ನೆಲೆಯಲ್ಲಿ “ಶಾಂತಿಯನ್ನೂ ಸತ್ಯವನ್ನೂ” ನೀಡಿದ್ದಾನೆ. (ಯೆಶಾಯ 66:8, NW; ಮತ್ತಾಯ 24:7-13; ಪ್ರಕಟನೆ 6:1-8) ಜೆಕರ್ಯ 8ನೆಯ ಅಧ್ಯಾಯದ ನಮ್ಮ ಚರ್ಚೆಯನ್ನು ನಾವು ಮುಂದುವರಿಸಿದಂತೆ, ಈ ದೇವದತ್ತ ಶಾಂತಿ ಮತ್ತು ಸತ್ಯದ ಹೆಚ್ಚು ಆಳವಾದ ಗಣ್ಯತೆಯನ್ನು ನಾವು ಪಡೆಯುವೆವು ಮತ್ತು ಅದರಲ್ಲಿ ನಮ್ಮ ಪಾಲನ್ನು ಸುರಕ್ಷಿತವಾಗಿಡಲು ನಾವು ಏನು ಮಾಡಬೇಕೆಂಬುದನ್ನು ನೋಡುವೆವು.
‘ನಿಮ್ಮ ಕೈಗಳು ಬಲಗೊಳ್ಳಲಿ’
4. ಇಸ್ರಾಯೇಲು ಶಾಂತಿಯನ್ನು ಅನುಭವಿಸಬೇಕಾದಲ್ಲಿ ಅವರು ಹೇಗೆ ವರ್ತಿಸಬೇಕೆಂದು ಜೆಕರ್ಯನು ಉತ್ತೇಜಿಸಿದನು?
4 ಜೆಕರ್ಯ 8ನೆಯ ಅಧ್ಯಾಯಲ್ಲಿ ಆರನೆಯ ಬಾರಿ, ಯೆಹೋವನಿಂದ ಒಂದು ರೋಮಾಂಚಗೊಳಿಸುವ ಪ್ರಕಟನೆಯನ್ನು ನಾವು ಕೇಳುತ್ತೇವೆ: “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ—ದೇವಾಲಯವನ್ನು ಕಟ್ಟುವ ಉದ್ದೇಶದಿಂದ ಸೇನಾಧೀಶ್ವರ ಯೆಹೋವನ ಆ ಮಂದಿರದ ಅಸ್ತಿವಾರವನ್ನು ಹಾಕಿದ ಕಾಲದಲ್ಲಿಯೂ ಇದ್ದ ಪ್ರವಾದಿಗಳ ಬಾಯಿಂದ ಈ ಮಾತುಗಳನ್ನು ಈಗ ಕೇಳುವವರೇ, ನಿಮ್ಮ ಕೈಗಳು ಬಲಗೊಳ್ಳಲಿ! ಆ ಕಾಲಕ್ಕೆ ಮುಂಚೆ ಮನುಷ್ಯನಿಗಾಗಲಿ ಪಶುವಿಗಾಗಲಿ ದುಡಿತದಿಂದ ಏನೂ ಜೀವನವಾಗುತ್ತಿರಲಿಲ್ಲ; ಹೋಗಿ ಬರುವವರಿಗೆ ಶತ್ರುಗಳ ದೆಸೆಯಿಂದ ಭಯವಿಲ್ಲದೆ ಇರಲಿಲ್ಲ; ಒಬ್ಬರನ್ನೊಬ್ಬರು ಎದುರಿಸುವಂತೆ ಎಲ್ಲರನ್ನೂ ಪ್ರೇರಿಸುತ್ತಿದ್ದೆನು.”—ಜೆಕರ್ಯ 8:9, 10.
5, 6. (ಎ) ಇಸ್ರಾಯೇಲ್ಯರ ನಿರುತ್ಸಾಹದ ಕಾರಣ ಯಾವ ಸನ್ನಿವೇಶವು ಇಸ್ರಾಯೇಲಿನಲ್ಲಿತ್ತು? (ಬಿ) ಇಸ್ರಾಯೇಲು ಯೆಹೋವನ ಆರಾಧನೆಯನ್ನು ಪ್ರಥಮವಾಗಿಟ್ಟರೆ ಯಾವ ಬದಲಾವಣೆಯನ್ನು ಆತನು ವಾಗ್ದಾನಿಸಿದನು?
5 ಯೆರೂಸಲೇಮಿನಲ್ಲಿ ಆಲಯವು ಪುನರ್ನಿರ್ಮಾಣಗೊಳ್ಳುತ್ತಿರುವಾಗ ಜೆಕರ್ಯನು ಈ ಮಾತುಗಳನ್ನು ಆಡಿದನು. ಈ ಹಿಂದೆ, ಬಾಬೆಲಿನಿಂದ ಹಿಂದಿರುಗಿದ್ದ ಇಸ್ರಾಯೇಲ್ಯರು ನಿರುತ್ಸಾಹಗೊಂಡರು ಮತ್ತು ಆಲಯದ ನಿರ್ಮಾಣ ಕಾರ್ಯವನ್ನು ನಿಲ್ಲಿಸಿದರು. ತಮ್ಮ ಗಮನವನ್ನು ಅವರು ತಮ್ಮ ಸ್ವಂತ ಸುಖಕ್ಕೆ ತಿರುಗಿಸಿಕೊಂಡ ಕಾರಣ, ಯೆಹೋವನಿಂದ ಅವರಿಗೆ ಆಶೀರ್ವಾದವಾಗಲಿ ಶಾಂತಿಯಾಗಲಿ ದೊರೆಯಲಿಲ್ಲ. ಅವರು ತಮ್ಮ ಜಮೀನುಗಳ ವ್ಯವಸಾಯ ಮಾಡಿದರೂ, ತಮ್ಮ ದ್ರಾಕ್ಷಿ ತೋಟಗಳ ಆರೈಕೆ ಮಾಡಿದರೂ ಅವರು ಏಳಿಗೆ ಹೊಂದಲಿಲ್ಲ. (ಹಗ್ಗಾಯ 1:3-6) ಅವರು ಕೆಲಸಮಾಡುತ್ತಿದ್ದದ್ದು ‘ಯಾವ ಕೂಲಿಗೂ ಅಲ್ಲವೊ’ ಎಂಬಂತಿತ್ತು.
6 ಆಲಯವು ಈಗ ಪುನರ್ನಿರ್ಮಾಣಗೊಳ್ಳುತ್ತಿದ್ದ ಕಾರಣ, ಯೆಹೋವನ ಆರಾಧನೆಯನ್ನು ಧೈರ್ಯದಿಂದ ಪ್ರಥಮವಾಗಿಡಲು, “ಬಲ”ವುಳ್ಳವರಾಗಿರಲು ಜೆಕರ್ಯನು ಯೆಹೂದ್ಯರನ್ನು ಉತ್ತೇಜಿಸಿದನು. ಅವರು ಹಾಗೆ ಮಾಡುವುದಾದರೆ ಏನು ಸಂಭವಿಸಬಹುದಿತ್ತು? “ಇಂದಿನಿಂದಲೋ ಈ ಜನಶೇಷದವರ ವಿಷಯದಲ್ಲಿ ನಾನು ಪೂರ್ವಕಾಲದಲ್ಲಿ ಇದ್ದಂತೆ ಇರೆನು; ಇದು ಸೇನಾಧೀಶ್ವರ ಯೆಹೋವನ ನುಡಿ. ನೆಮ್ಮದಿಯ ಬೆಳೆಯಾಗುವದು; ದ್ರಾಕ್ಷಾಲತೆಯು ಹಣ್ಣುಬಿಡುವದು, ಭೂಮಿಯು ಧಾನ್ಯವನ್ನೀಯುವದು, ಆಕಾಶವು ಇಬ್ಬನಿಯನ್ನು ಸುರಿಸುವದು; ಈ ಜನಶೇಷದವರು ಇವುಗಳನ್ನೆಲ್ಲಾ ಅನುಭವಿಸುವಂತೆ ಅನುಗ್ರಹಿಸುವೆನು. ಯೆಹೂದ ಕುಲವೇ, ಇಸ್ರಾಯೇಲ್ ವಂಶವೇ, ನಿಮ್ಮ ಹೆಸರು ಹೇಗೆ ಜನಾಂಗಗಳಲ್ಲಿ ಶಾಪದ ಮಾತಾಗಿ ಸಲ್ಲುತ್ತಿತ್ತೋ ಹಾಗೆಯೇ ನಾನು ನಿಮ್ಮನ್ನು ರಕ್ಷಿಸಿದ ಮೇಲೆ ನಿಮ್ಮ ಹೆಸರು ಹರಕೆಯ ಮಾತಾಗಿ ಸಲ್ಲುವದು; ಹೆದರಬೇಡಿರಿ, ನಿಮ್ಮ ಕೈಗಳು ಬಲಗೊಳ್ಳಲಿ!” (ಜೆಕರ್ಯ 8:11-13) ಇಸ್ರಾಯೇಲ್ ದೃಢಸಂಕಲ್ಪದಿಂದ ಕಾರ್ಯಗೈಯುವುದಾದರೆ ಆಕೆ ಏಳಿಗೆ ಹೊಂದುವಳು. ಈ ಮುಂಚೆ, ಶಾಪದ ಒಂದು ಉದಾಹರಣೆಯನ್ನು ಉದ್ಧರಿಸಲು ರಾಷ್ಟ್ರಗಳು ಬಯಸಿದಾಗ, ಅವು ಇಸ್ರಾಯೇಲ್ಗೆ ಕೈ ತೋರಿಸಿದವು. ಈಗ ಇಸ್ರಾಯೇಲ್ ಆಶೀರ್ವಾದದ ಒಂದು ಉದಾಹರಣೆಯಾಗಿರುವುದು. ‘ತಮ್ಮ ಕೈಗಳು ಬಲಗೊಳ್ಳುವಂತೆ’ ಬಿಡಲು ಎಂತಹ ಒಂದು ಅತ್ಯುತ್ತಮ ಕಾರಣ!
7. (ಎ) 1995ರ ಸೇವಾ ವರ್ಷದಲ್ಲಿ ತುತ್ತತುದಿಗೇರುತ್ತಾ ಯಾವ ರೋಮಾಂಚಕ ಬದಲಾವಣೆಗಳನ್ನು ಯೆಹೋವನ ಜನರು ಅನುಭವಿಸಿದ್ದಾರೆ? (ಬಿ) ವಾರ್ಷಿಕ ವರದಿಯನ್ನು ನೋಡುತ್ತಾ, ಯಾವ ದೇಶಗಳು ಪ್ರಚಾರಕರ, ಪಯನೀಯರರ, ಸರಾಸರಿ ತಾಸುಗಳ ಗಮನಾರ್ಹವಾದ ವರದಿಯನ್ನು ಹೊಂದಿವೆಯೆಂದು ನೀವು ಕಾಣುತ್ತೀರಿ?
7 ಇಂದಿನ ಕುರಿತೇನು? ಒಳ್ಳೆಯದು, 1919ರ ಮುಂಚಿನ ವರ್ಷಗಳಲ್ಲಿ, ಯೆಹೋವನ ಜನರು ಕೊಂಚಮಟ್ಟಿಗೆ ಹುರುಪಿನಲ್ಲಿ ಕೊರತೆಯುಳ್ಳವರಾಗಿದ್ದರು. ಅವರು ಪ್ರಥಮ ಜಾಗತಿಕ ಯುದ್ಧದಲ್ಲಿ ಪೂರ್ಣವಾದ ತಟಸ್ಥ ನಿಲುವನ್ನು ತೆಗೆದುಕೊಳ್ಳಲಿಲ್ಲ, ಮತ್ತು ತಮ್ಮ ರಾಜನಾದ ಯೇಸು ಕ್ರಿಸ್ತನನ್ನು ಅನುಸರಿಸುವ ಬದಲು ಒಬ್ಬ ಮನುಷ್ಯನನ್ನು ಅನುಸರಿಸುವ ಪ್ರವೃತ್ತಿಯುಳ್ಳವರಾಗಿದ್ದರು. ಫಲಸ್ವರೂಪವಾಗಿ, ಕೆಲವರು ಸಂಸ್ಥೆಯ ಒಳಗಿನಿಂದ ಮತ್ತು ಹೊರಗಿನಿಂದ ಬಂದ ವಿರೋಧದ ಮೂಲಕ ನಿರುತ್ಸಾಹಗೊಂಡರು. ಅನಂತರ, 1919ರಲ್ಲಿ ಯೆಹೋವನ ಸಹಾಯದಿಂದ ತಮ್ಮ ಕೈಗಳು ಬಲಗೊಳ್ಳುವಂತೆ ಅವರು ಬಿಟ್ಟರು. (ಜೆಕರ್ಯ 4:6) ಯೆಹೋವನು ಅವರಿಗೆ ಶಾಂತಿಯನ್ನು ದಯಪಾಲಿಸಿದನು ಮತ್ತು ಅವರು ಅತಿಯಾಗಿ ಏಳಿಗೆ ಹೊಂದಿದರು. ಇದು 1995ರ ಸೇವಾ ವರ್ಷದಲ್ಲಿ ತುತ್ತತುದಿಗೇರುತ್ತಾ, ಕಳೆದ 75 ವರ್ಷಗಳ ಅವರ ದಾಖಲೆಯಲ್ಲಿ ಕಂಡುಬರುತ್ತದೆ. ಒಂದು ಜನಾಂಗದೋಪಾದಿ, ಯೆಹೋವನ ಸಾಕ್ಷಿಗಳು ರಾಷ್ಟ್ರವಾದ, ಜಾತಿವಾದ, ಅವಿಚಾರಭಾವನೆ ಮತ್ತು ದ್ವೇಷದ ಇತರ ಎಲ್ಲ ಮೂಲಗಳನ್ನು ತೊರೆಯುತ್ತಾರೆ. (1 ಯೋಹಾನ 3:14-18) ಅವರು ಯೆಹೋವನನ್ನು ಆತನ ಆತ್ಮಿಕ ಆಲಯದಲ್ಲಿ ಯಥಾರ್ಥವಾದ ಹುರುಪಿನೊಂದಿಗೆ ಸೇವಿಸುತ್ತಾರೆ. (ಇಬ್ರಿಯ 13:15; ಪ್ರಕಟನೆ 7:15) ಕಳೆದ ವರ್ಷವೇ ಅವರು ತಮ್ಮ ಸ್ವರ್ಗೀಯ ತಂದೆಯ ಕುರಿತು ಇತರರೊಂದಿಗೆ ಮಾತಾಡುತ್ತಾ ಒಂದು ನೂರು ಕೋಟಿಗಿಂತಲೂ ಹೆಚ್ಚಿನ ತಾಸುಗಳನ್ನು ವ್ಯಯಿಸಿದರು! ಪ್ರತಿ ತಿಂಗಳು ಅವರು 48,65,060 ಬೈಬಲ್ ಅಧ್ಯಯನಗಳನ್ನು ನಡೆಸಿದರು. ಪ್ರತಿ ತಿಂಗಳು ಸರಾಸರಿ 6,63,521 ಮಂದಿ ಪಯನೀಯರ್ ಸೇವೆಯಲ್ಲಿ ಭಾಗವಹಿಸಿದರು. ತಮ್ಮ ಆರಾಧನೆಯಲ್ಲಿ ನಿಜವಾಗಿಯೂ ಉತ್ಸಾಹಿಗಳಾಗಿರುವ ಜನರ ಒಂದು ಉದಾಹರಣೆಯನ್ನು ಕೊಡಲು ಕ್ರೈಸ್ತಪ್ರಪಂಚದಲ್ಲಿರುವ ಶುಶ್ರೂಷಕರು ಬಯಸುವಾಗ, ಅವರು ಕೆಲವೊಮ್ಮೆ ಯೆಹೋವನ ಸಾಕ್ಷಿಗಳ ಕಡೆಗೆ ಕೈ ತೋರಿಸುತ್ತಾರೆ.
8. ‘ಶಾಂತಿಯ ಬೀಜ’ದಿಂದ ಪ್ರತಿಯೊಬ್ಬ ಕ್ರೈಸ್ತನು ಹೇಗೆ ಪ್ರಯೋಜನ ಪಡೆಯಬಲ್ಲನು?
8 ತಮ್ಮ ಹುರುಪಿನ ಕಾರಣ, ಯೆಹೋವನು ತನ್ನ ಜನರಿಗೆ ‘ಶಾಂತಿಯ ಬೀಜವನ್ನು’ ಕೊಡುತ್ತಾನೆ. ಆ ಬೀಜವನ್ನು ಬೆಳೆಸುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಹೃದಯದಲ್ಲಿ ಮತ್ತು ತನ್ನ ಜೀವನದಲ್ಲಿ ಶಾಂತಿಯು ಬೆಳೆಯುವುದನ್ನು ಕಾಣುವನು. ಯೆಹೋವನೊಂದಿಗೆ ಮತ್ತು ಜೊತೆ ಕ್ರೈಸ್ತರೊಂದಿಗೆ ಶಾಂತಿಯನ್ನು ಬೆನ್ನಟ್ಟುವ ಪ್ರತಿಯೊಬ್ಬ ವಿಶ್ವಾಸಿ ಕ್ರೈಸ್ತನು ಯೆಹೋವನ ನಾಮವಿರುವ ಜನರ ಸತ್ಯ ಮತ್ತು ಶಾಂತಿಯಲ್ಲಿ ಪಾಲ್ಗೊಳ್ಳುತ್ತಾನೆ. (1 ಪೇತ್ರ 3:11; ಹೋಲಿಸಿ ಯಾಕೋಬ 3:18.) ಅದು ಅದ್ಭುತಕರವಾಗಿರುವುದಿಲ್ಲವೊ?
“ಹೆದರಬೇಡಿರಿ”
9. ತನ್ನ ಜನರೊಂದಿಗಿನ ವ್ಯವಹಾರಗಳಲ್ಲಿ ಯಾವ ಬದಲಾವಣೆಯನ್ನು ಯೆಹೋವನು ವಾಗ್ದಾನಿಸಿದನು?
9 ಈಗ ನಾವು ಯೆಹೋವನಿಂದ ಬಂದ ಏಳನೆಯ ಪ್ರಕಟನೆಯನ್ನು ಓದುತ್ತೇವೆ. ಅದು ಏನಾಗಿದೆ? “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ—ನಿಮ್ಮ ಪಿತೃಗಳು ನನಗೆ ಸಿಟ್ಟೆಬ್ಬಿಸಿದಾಗ ನಿಮಗೆ ಕೇಡುಮಾಡಬೇಕೆಂದು ನಾನು ನಿಷ್ಕರುಣಿಯಾಗಿ ಸಂಕಲ್ಪಿಸಿದಂತೆ ಈ ಕಾಲದಲ್ಲಿ ಯೆರೂಸಲೇಮಿಗೂ ಯೆಹೂದ ಕುಲಕ್ಕೂ ಮೇಲುಮಾಡಬೇಕೆಂದು ಹೊಸ ಸಂಕಲ್ಪ ಮಾಡಿಕೊಂಡಿದ್ದೇನೆ; ಹೆದರಬೇಡಿರಿ; ಇದು ಸೇನಾಧೀಶ್ವರ ಯೆಹೋವನ ನುಡಿ.”—ಜೆಕರ್ಯ 8:14, 15.
10. ತಾವು ಭಯಪಟ್ಟಿರುವುದಿಲ್ಲವೆಂದು ಯೆಹೋವನ ಸಾಕ್ಷಿಗಳ ಯಾವ ವರದಿಯು ತೋರಿಸುತ್ತದೆ?
10 ಪ್ರಥಮ ಜಾಗತಿಕ ಯುದ್ಧದ ಸಮಯದಲ್ಲಿ ಯೆಹೋವನ ಜನರು ಆತ್ಮಿಕ ಅರ್ಥದಲ್ಲಿ ಚದರಿಹೋಗಿದ್ದರೂ, ತಮ್ಮ ಹೃದಯಗಳಲ್ಲಿ ಒಳ್ಳೆಯದನ್ನು ಮಾಡಲು ಅವರು ಬಯಸಿದರು. ಆದಕಾರಣ, ಒಂದಿಷ್ಟು ಶಿಸ್ತನ್ನು ನೀಡಿದ ಬಳಿಕ ಯೆಹೋವನು ಅವರೊಂದಿಗೆ ವ್ಯವಹರಿಸುವ ತನ್ನ ವಿಧವನ್ನು ಬದಲಿಸಿದನು. (ಮಲಾಕಿಯ 3:2-4) ಇಂದು, ನಾವು ಮನಸ್ಸು ತಿರುಗಿಸಿ ಆತನು ಮಾಡಿರುವ ವಿಷಯಕ್ಕಾಗಿ ಆತನಿಗೆ ಉತ್ಸಾಹಶೀಲರಾಗಿ ಉಪಕಾರ ಸಲ್ಲಿಸುತ್ತೇವೆ. ನಾವು ‘ಎಲ್ಲಾ ಜನಾಂಗಗಳವರಿಂದ ಹಗೆ’ಮಾಡಲ್ಪಟ್ಟಿದ್ದೇವೆ ನಿಜ. (ಮತ್ತಾಯ 24:9) ಅನೇಕರನ್ನು ಸೆರೆಮನೆಯಲ್ಲಿ ಹಾಕಲಾಗಿದೆ, ಮತ್ತು ಕೆಲವರು ತಮ್ಮ ನಂಬಿಕೆಗಾಗಿ ಮರಣವನ್ನೂ ಹೊಂದಿದ್ದಾರೆ. ನಾವು ಅನೇಕ ವೇಳೆ ಔದಾಸೀನ್ಯ ಇಲ್ಲವೆ ವಿರೋಧವನ್ನು ಎದುರಿಸುತ್ತೇವೆ. ಆದರೆ ನಾವು ಹೆದರುವುದಿಲ್ಲ. ಯೆಹೋವನು ಯಾವುದೇ ವಿರೋಧ—ದೃಶ್ಯ ಅಥವಾ ಅದೃಶ್ಯ—ಕ್ಕಿಂತ ಹೆಚ್ಚು ಬಲಿಷ್ಠನೆಂದು ನಮಗೆ ಗೊತ್ತಿದೆ. (ಯೆಶಾಯ 40:15; ಎಫೆಸ 6:10-13) “ಯೆಹೋವನನ್ನು ನಿರೀಕ್ಷಿಸಿಕೊಂಡಿರು; ದೃಢವಾಗಿರು; ನಿನ್ನ ಹೃದಯವು ಧೈರ್ಯದಿಂದಿರಲಿ,” ಎಂಬ ಮಾತುಗಳಿಗೆ ಕಿವಿಗೊಡುವುದನ್ನು ನಾವು ನಿಲ್ಲಿಸೆವು.—ಕೀರ್ತನೆ 27:14.
“ಒಬ್ಬರೊಂದಿಗೊಬ್ಬರು ಸತ್ಯವನ್ನೇ ಆಡಿರಿ”
11, 12. ಯೆಹೋವನು ತನ್ನ ಜನರಿಗೆ ಕೊಡುವ ಆಶೀರ್ವಾದಗಳಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲು ನಾವು ಬಯಸುವುದಾದರೆ, ನಾವು ವ್ಯಕ್ತಿಗತವಾಗಿ ಏನನ್ನು ಮನಸ್ಸಿನಲ್ಲಿಡಬೇಕು?
11 ಯೆಹೋವನಿಂದ ಬರುವ ಆಶೀರ್ವಾದಗಳಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲು, ನಾವು ಜ್ಞಾಪಕದಲ್ಲಿಟ್ಟುಕೊಳ್ಳಬೇಕಾದ ವಿಷಯಗಳಿವೆ. ಜೆಕರ್ಯನು ಹೇಳುವುದು: “ನೀವು ಮಾಡಬೇಕಾದ ಕಾರ್ಯಗಳು ಇವೇ—ಒಬ್ಬರೊಂದಿಗೊಬ್ಬರು ಸತ್ಯವನ್ನೇ ಆಡಿರಿ. ನಿಮ್ಮ ಚಾವಡಿಗಳಲ್ಲಿ ಸತ್ಯವನ್ನೂ ಶಾಂತಿಪ್ರದನ್ಯಾಯವನ್ನೂ ಸ್ಥಾಪಿಸಿರಿ; ನಿಮ್ಮಲ್ಲಿ ಯಾವನೂ ತನ್ನ ಹೃದಯದಲ್ಲಿ ನೆರೆಯವನಿಗೆ ಕೇಡನ್ನು ಬಗೆಯದಿರಲಿ; ಸುಳ್ಳುಸಾಕ್ಷಿಗೆ ಎಂದೂ ಸಂತೋಷಪಡಬೇಡಿರಿ; ಇವುಗಳನ್ನೆಲ್ಲಾ ದ್ವೇಷಿಸುವವನಾಗಿದ್ದೇನೆ; ಇದು ಯೆಹೋವನ ನುಡಿ.”—ಜೆಕರ್ಯ 8:16, 17, NW.
12 ಸತ್ಯವನ್ನಾಡುವಂತೆ ಯೆಹೋವನು ನಮ್ಮನ್ನು ಪ್ರೇರೇಪಿಸುತ್ತಾನೆ. (ಎಫೆಸ 4:15, 25) ಹಾನಿಕರ ಸಂಗತಿಗಳ ಸಂಚು ನಡೆಸುವವರ, ವೈಯಕ್ತಿಕ ಲಾಭಕ್ಕಾಗಿ ಸತ್ಯವನ್ನಡಗಿಸುವ ಅಥವಾ ಸುಳ್ಳು ಪ್ರಮಾಣಗಳನ್ನು ನುಡಿಯುವವರ ಪ್ರಾರ್ಥನೆಗಳನ್ನು ಆತನು ಆಲಿಸುವುದಿಲ್ಲ. (ಜ್ಞಾನೋಕ್ತಿ 28:9) ಆತನು ಧರ್ಮಭ್ರಷ್ಟತೆಯನ್ನು ದ್ವೇಷಿಸುವುದರಿಂದ, ಬೈಬಲ್ ಸತ್ಯಕ್ಕೆ ನಾವು ಅಂಟಿಕೊಂಡಿರಬೇಕೆಂದು ಆತನು ಬಯಸುತ್ತಾನೆ. (ಕೀರ್ತನೆ 25:5; 2 ಯೋಹಾನ 9-11) ಇನ್ನೂ ಹೆಚ್ಚಾಗಿ, ಇಸ್ರಾಯೇಲಿನಲ್ಲಿನ ನಗರ ದ್ವಾರಗಳಲ್ಲಿದ್ದ ಹಿರಿಯ ಪುರುಷರಂತೆ, ನ್ಯಾಯವಿಚಾರಣೆಯ ಕೇಸುಗಳನ್ನು ನಿರ್ವಹಿಸುವ ಹಿರಿಯರು ತಮ್ಮ ಸಲಹೆ ಮತ್ತು ನಿರ್ಣಯಗಳನ್ನು ವೈಯಕ್ತಿಕ ಅಭಿಪ್ರಾಯದ ಮೇಲಲ್ಲ, ಬೈಬಲ್ ಸತ್ಯದ ಮೇಲೆ ಆಧರಿಸತಕ್ಕದ್ದು. (ಯೋಹಾನ 17:17) ಕ್ರೈಸ್ತ ಕುರುಬರೋಪಾದಿ, ಕಾದಾಡುವ ಪಕ್ಷಗಳ ನಡುವೆ ಶಾಂತಿಯನ್ನು ಪುನಸ್ಸ್ಥಾಪಿಸಲು ಮತ್ತು ದೇವರೊಂದಿಗೆ ಶಾಂತಿಯನ್ನು ಪುನಃ ಪಡೆಯಲಿಕ್ಕಾಗಿ ಪಶ್ಚಾತ್ತಾಪಿ ಪಾಪಿಗಳಿಗೆ ಸಹಾಯಮಾಡಲು ಪ್ರಯತ್ನಿಸುತ್ತಾ, “ಶಾಂತಿಪ್ರದನ್ಯಾಯವನ್ನೂ” ಅವರು ಹುಡುಕಬೇಕೆಂದು ಯೆಹೋವನು ಬಯಸುತ್ತಾನೆ. (ಯಾಕೋಬ 5:14, 15; ಯೂದ 23) ಅದೇ ಸಮಯದಲ್ಲಿ, ತಪ್ಪುಮಾಡುವುದರಲ್ಲಿ ಉದ್ದೇಶಪೂರ್ವಕವಾಗಿ ಪಟ್ಟುಹಿಡಿಯುವ ಮೂಲಕ ಶಾಂತಿಭಂಗ ಮಾಡುವವರನ್ನು ಧೈರ್ಯದಿಂದ ಹೊರಹಾಕುತ್ತಾ, ಅವರು ಸಭೆಯ ಶಾಂತಿಯನ್ನು ಕಾಪಾಡುತ್ತಾರೆ.—1 ಕೊರಿಂಥ 6:9, 10.
“ಹರ್ಷೋಲ್ಲಾಸ”
13. (ಎ) ಉಪವಾಸದ ಕುರಿತಾಗಿ ಯಾವ ಬದಲಾವಣೆಯನ್ನು ಜೆಕರ್ಯನು ಪ್ರವಾದಿಸಿದನು? (ಬಿ) ಯಾವ ಉಪವಾಸವನ್ನು ಇಸ್ರಾಯೇಲಿನಲ್ಲಿ ಆಚರಿಸಲಾಯಿತು?
13 ಈಗ ನಾವು ಎಂಟನೆಯ ವಿಧಿಯುಕ್ತ ಪ್ರಕಟನೆಯನ್ನು ಕೇಳುತ್ತೇವೆ: “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ—ನಾಲ್ಕನೆಯ ತಿಂಗಳಿನ ಉಪವಾಸ, ಐದನೆಯ ತಿಂಗಳಿನ ಉಪವಾಸ, ಏಳನೆಯ ತಿಂಗಳಿನ ಉಪವಾಸ, ಹತ್ತನೆಯ ತಿಂಗಳಿನ ಉಪವಾಸ, ಇವು ಯೆಹೂದ ವಂಶಕ್ಕೆ ವಿಶೇಷವಾದ ಹಬ್ಬಗಳಾಗಿ ಹರ್ಷೋಲ್ಲಾಸಗಳನ್ನುಂಟುಮಾಡುವವು; ಹೀಗಿರಲು ಸತ್ಯವನ್ನೂ ಸಮಾಧಾನ [“ಶಾಂತಿ,” NW]ವನ್ನೂ ಪ್ರೀತಿಸಿರಿ.” (ಜೆಕರ್ಯ 8:19) ಮೋಶೆಯ ಧರ್ಮಶಾಸ್ತ್ರದ ಕೆಳಗೆ, ತಮ್ಮ ಪಾಪಗಳಿಗಾಗಿ ದುಃಖವನ್ನು ವ್ಯಕ್ತಪಡಿಸಲು ಇಸ್ರಾಯೇಲ್ಯರು ದೋಷಪರಿಹಾರಕ ದಿನದಂದು ಉಪವಾಸ ಮಾಡಿದರು. (ಯಾಜಕಕಾಂಡ 16:29-31) ಜೆಕರ್ಯನ ಮೂಲಕ ಉಲ್ಲೇಖಿಸಲ್ಪಟ್ಟ ನಾಲ್ಕು ಉಪವಾಸಗಳು, ಯೆರೂಸಲೇಮಿನ ವಿಜಯ ಮತ್ತು ನಾಶನದ ಸಂಬಂಧದಲ್ಲಿನ ಘಟನೆಗಳಿಗಾಗಿ ಶೋಕಿಸಲು ಆಚರಿಸಲ್ಪಟ್ಟವೆಂಬುದು ವ್ಯಕ್ತ. (2 ಅರಸುಗಳು 25:1-4, 8, 9, 22-26) ಹಾಗಿದ್ದರೂ ಈಗ, ಆಲಯವು ಪುನಃ ಕಟ್ಟಲ್ಪಡುತ್ತಿತ್ತು ಮತ್ತು ಯೆರೂಸಲೇಮ್ ಪುನಃ ಜನವಿಶಿಷ್ಟ ಮಾಡಲ್ಪಡುತ್ತಿತ್ತು. ಶೋಕಿಸುವುದು ಹರ್ಷಪಡುವುದಕ್ಕೆ ಬದಲಾಗುತ್ತಿತ್ತು, ಮತ್ತು ಉಪವಾಸಗಳು ಉತ್ಸವದ ಕಾಲಗಳಾಗಸಾಧ್ಯವಿತ್ತು.
14, 15. (ಎ) ಜ್ಞಾಪಕಾಚರಣೆಯು ಹರ್ಷಪಡುವುದಕ್ಕೆ ಒಂದು ಮಹಾ ಕಾರಣವಾಗಿತ್ತು ಹೇಗೆ ಮತ್ತು ಇದು ನಮಗೆ ಯಾವುದರ ನೆನಪು ಹುಟ್ಟಿಸಬೇಕು? (ಬಿ) ವಾರ್ಷಿಕ ವರದಿಯಲ್ಲಿ ಕಂಡುಬರುವಂತೆ, ಯಾವ ದೇಶಗಳು ಜ್ಞಾಪಕದಲ್ಲಿ ಎದ್ದುಕಾಣುವ ಹಾಜರಿಗಳನ್ನು ಪಡೆದಿದ್ದವು?
14 ಇಂದು ಜೆಕರ್ಯನ ಮೂಲಕ ಉಲ್ಲೇಖಿಸಲ್ಪಟ್ಟ ಉಪವಾಸಗಳನ್ನಾಗಲಿ ಧರ್ಮಶಾಸ್ತ್ರದಲ್ಲಿ ಆಜ್ಞಾಪಿಸಲ್ಪಟ್ಟ ಉಪವಾಸವನ್ನಾಗಲಿ ನಾವು ಆಚರಿಸುವುದಿಲ್ಲ. ಯೇಸು ನಮ್ಮ ಪಾಪಗಳಿಗಾಗಿ ತನ್ನ ಜೀವವನ್ನು ಅರ್ಪಿಸಿದುದರಿಂದ, ಮಹಾ ಪಾಪಪರಿಹಾರಕ ದಿನದ ಆಶೀರ್ವಾದಗಳನ್ನು ನಾವು ಅನುಭವಿಸುತ್ತಿದ್ದೇವೆ. ನಮ್ಮ ಪಾಪಗಳು ಕೇವಲ ನಾಮಮಾತ್ರಕ್ಕಲ್ಲ, ಆದರೆ ಸಂಪೂರ್ಣವಾಗಿ ಕ್ಷಮಿಸಲ್ಪಡುತ್ತವೆ. (ಇಬ್ರಿಯ 9:6-14) ಸ್ವರ್ಗೀಯ ಮಹಾಯಾಜಕನಾದ ಯೇಸು ಕ್ರಿಸ್ತನ ಆಜ್ಞೆಯನ್ನು ಅನುಸರಿಸುತ್ತಾ, ನಾವು ಅವನ ಮರಣದ ಜ್ಞಾಪಕವನ್ನು ಕ್ರೈಸ್ತರಿಂದ ಆಚರಿಸಲ್ಪಡುವ ಏಕಮಾತ್ರ ವಿಧಿಯುಕ್ತ ಆಚರಣೆಯೋಪಾದಿ ಆಚರಿಸುತ್ತೇವೆ. (ಲೂಕ 22:19, 20) ಆ ಆಚರಣೆಗಾಗಿ ನಾವು ಪ್ರತಿವರ್ಷ ಕೂಡಿಬಂದಂತೆ ನಾವು “ಹರ್ಷೋಲ್ಲಾಸ”ವನ್ನು ಅನುಭವಿಸುವುದಿಲ್ಲವೊ?
15 ಕಳೆದ ವರ್ಷ, ಜ್ಞಾಪಕವನ್ನು ಆಚರಿಸಲು 1,31,47,201 ಮಂದಿ ಕೂಡಿಬಂದರು, 1994ರ ಹೋಲಿಕೆಯಲ್ಲಿ 8,58,284 ಮಂದಿ ಹೆಚ್ಚು. ಎಂತಹ ಜನಸ್ತೋಮ! ಆ ಆಚರಣೆಗೆ ತಮ್ಮ ರಾಜ್ಯ ಸಭಾಗೃಹಗಳೊಳಗೆ ಅಸಾಮಾನ್ಯವಾಗಿ ದೊಡ್ಡ ಸಂಖ್ಯೆಯಲ್ಲಿ ಜನರು ಒಳನುಗ್ಗಿದಂತೆ, ಯೆಹೋವನ ಸಾಕ್ಷಿಗಳ 78,620 ಸಭೆಗಳಲ್ಲಿನ ಹರ್ಷವನ್ನು ಚಿತ್ರಿಸಿಕೊಳ್ಳಿರಿ. ಖಂಡಿತವಾಗಿ, ಉಪಸ್ಥಿತರೆಲ್ಲರೂ “ಮಾರ್ಗವೂ ಸತ್ಯವೂ ಜೀವವೂ” ಆಗಿರುವಾತನ ಮತ್ತು ಈಗ ಯೆಹೋವನ ಮಹಾ “ಸಮಾಧಾನದ ಪ್ರಭು” ಆಗಿ ಆಳುವವನ ಮರಣವನ್ನು ಸ್ಮರಿಸಿಕೊಂಡಂತೆ “ಸತ್ಯವನ್ನೂ ಶಾಂತಿಯನ್ನೂ ಪ್ರೀತಿ”ಸಲು ಪ್ರೇರೇಪಿಸಲ್ಪಟ್ಟರು. (ಯೋಹಾನ 14:6; ಯೆಶಾಯ 9:6) ಗಲಭೆ ಮತ್ತು ಯುದ್ಧದಿಂದ ಪೀಡಿಸಲ್ಪಟ್ಟ ದೇಶಗಳಲ್ಲಿ ಅದನ್ನು ಆಚರಿಸಿದವರಿಗೆ ಆ ಆಚರಣೆಯು ವಿಶೇಷ ಅರ್ಥವುಳ್ಳದ್ದಾಗಿತ್ತು. ನಮ್ಮ ಸಹೋದರರಲ್ಲಿ ಕೆಲವರು 1995ರಲ್ಲಿ ವಿವರಿಸಲಾಗದ ಭೀಕರತೆಗಳನ್ನು ಕಣ್ಣಾರೆ ಕಂಡರು. ಆದರೂ ‘ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ಅವರ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ’ ಕಾಪಾಡಿತು.—ಫಿಲಿಪ್ಪಿ 4:7.
‘ಯೆಹೋವನ ಪ್ರಸನ್ನತೆಯನ್ನು ಬೇಡೋಣ’
16, 17. ರಾಷ್ಟ್ರಗಳ ಜನರು ‘ಯೆಹೋವನ ಪ್ರಸನ್ನತೆಯನ್ನು ಬೇಡುವುದು’ ಹೇಗೆ?
16 ಜ್ಞಾಪಕವನ್ನು ಹಾಜರಾದ ಆ ಲಕ್ಷಾಂತರ ಮಂದಿಯಾದರೊ ಎಲ್ಲಿಂದ ಬಂದರು? ಯೆಹೋವನ ಒಂಬತ್ತನೆಯ ಪ್ರಕಟನೆಯು ವಿವರಿಸುವುದು: “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ—ಇನ್ನು ಮುಂದೆ ಜನಾಂಗಗಳೂ ದೊಡ್ಡ ಪಟ್ಟಣಗಳ ನಿವಾಸಿಗಳೂ ಬರುವರು; ಒಂದು ಊರಿನವರು ಇನ್ನೊಂದೂರಿಗೆ ಹೋಗಿ—ಯೆಹೋವನ ಪ್ರಸನ್ನತೆಯನ್ನು ಬೇಡುವದಕ್ಕೂ ಸೇನಾಧೀಶ್ವರ ಯೆಹೋವನನ್ನು ಆಶ್ರಯಿಸುವದಕ್ಕೂ ಹೋಗೋಣ ಬನ್ನಿರಿ, ನಾವೂ ಹೋಗುತ್ತೇವೆ ಎಂದು ಹೇಳುವರು. ಹೀಗೆ ಬಹು ದೇಶಗಳವರೂ ಬಲವಾದ ಜನಾಂಗಗಳವರೂ ಯೆರೂಸಲೇಮಿನಲ್ಲಿ ಸೇನಾಧೀಶ್ವರ ಯೆಹೋವನನ್ನು ಆಶ್ರಯಿಸುವದಕ್ಕೂ ಯೆಹೋವನ ಪ್ರಸನ್ನತೆಯನ್ನು ಬೇಡುವದಕ್ಕೂ ಬರುವರು.”—ಜೆಕರ್ಯ 8:20-22.
17 ಜ್ಞಾಪಕಕ್ಕೆ ಹಾಜರಾದ ಜನರು “ಸೇನಾಧೀಶ್ವರ ಯೆಹೋವನನ್ನು ಆಶ್ರಯಿಸು”ವುದಕ್ಕೆ ಬಯಸಿದರು. ಅವರಲ್ಲಿ ಅನೇಕರು ಆತನ ಸಮರ್ಪಿತ, ಸ್ನಾತ ಸೇವಕರಾಗಿದ್ದರು. ಹಾಜರಿಯಲ್ಲಿದ್ದ ಇತರ ಲಕ್ಷಾಂತರ ಜನರು ಇನ್ನೂ ಆ ಹಂತವನ್ನು ತಲಪಿದ್ದಿರಲಿಲ್ಲ. ಕೆಲವೊಂದು ದೇಶಗಳಲ್ಲಿ ಜ್ಞಾಪಕದ ಹಾಜರಿಯು ರಾಜ್ಯ ಪ್ರಚಾರಕರ ಸಂಖ್ಯೆಗಿಂತ ನಾಲ್ಕು ಅಥವಾ ಐದು ಪಟ್ಟು ಹೆಚ್ಚಾಗಿತ್ತು. ಪ್ರಗತಿಯನ್ನು ಮಾಡಲು ಮುಂದುವರಿಯುವಂತೆ ಇಷ್ಟೊಂದು ಆಸಕ್ತ ಜನರಿಗೆ ಸಹಾಯದ ಅಗತ್ಯವಿದೆ. ಯೇಸು ನಮ್ಮ ಪಾಪಗಳಿಗಾಗಿ ಸತ್ತನೆಂಬ ಮತ್ತು ಈಗ ದೇವರ ರಾಜ್ಯದಲ್ಲಿ ಆಳುತ್ತಿದ್ದಾನೆಂಬ ಜ್ಞಾನದಲ್ಲಿ ಅತ್ಯಾನಂದಪಡುವಂತೆ ನಾವು ಅವರಿಗೆ ಕಲಿಸೋಣ. (1 ಕೊರಿಂಥ 5:7, 8; ಪ್ರಕಟನೆ 11:15) ಮತ್ತು ತಮ್ಮನ್ನು ಯೆಹೋವ ದೇವರಿಗೆ ಸಮರ್ಪಿಸಿಕೊಳ್ಳುವಂತೆ ಮತ್ತು ಆತನ ನೇಮಿತ ರಾಜನಿಗೆ ಅಧೀನರಾಗುವಂತೆ ನಾವು ಅವರನ್ನು ಉತ್ತೇಜಿಸೋಣ. ಈ ವಿಧದಲ್ಲಿ ಅವರು ‘ಯೆಹೋವನ ಪ್ರಸನ್ನತೆಯನ್ನು ಬೇಡುವರು.’—ಕೀರ್ತನೆ 116:18, 19; ಫಿಲಿಪ್ಪಿ 2:12, 13.
“ಜನಾಂಗಗಳ ವಿವಿಧಭಾಷೆಗಳವರಾದ ಹತ್ತು ಜನರು”
18, 19. (ಎ) ಜೆಕರ್ಯ 8:23ರ ನೆರವೇರಿಕೆಯಲ್ಲಿ, ಇಂದು “ಯೆಹೂದ್ಯ”ನು ಯಾರಾಗಿದ್ದಾನೆ? (ಬಿ) ಇಂದು “ಯೆಹೂದ್ಯನೊಬ್ಬನ ಸೆರಗನ್ನು ಹಿಡಿದು”ಕೊಳ್ಳುವ “ಹತ್ತು ಜನರು” ಯಾರಾಗಿದ್ದಾರೆ?
18 ಜೆಕರ್ಯನ ಎಂಟನೆಯ ಅಧ್ಯಾಯದಲ್ಲಿ ಕೊನೆಯ ಸಲ, ನಾವು ಓದುವುದು: “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ.” ಯೆಹೋವನ ಅಂತಿಮ ಘೋಷಣೆಯು ಏನಾಗಿದೆ? “ಆ ಕಾಲದಲ್ಲಿ ಜನಾಂಗಗಳ ವಿವಿಧಭಾಷೆಗಳವರಾದ ಹತ್ತು ಜನರು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು—ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ ಎಂದು ಹೇಳುವರು.” (ಜೆಕರ್ಯ 8:23) ಜೆಕರ್ಯನ ದಿನದಲ್ಲಿ, ಸ್ವಾಭಾವಿಕ ಇಸ್ರಾಯೇಲ್ ದೇವರಾದುಕೊಂಡ ಜನಾಂಗವಾಗಿತ್ತು. ಆದರೆ, ಪ್ರಥಮ ಶತಮಾನದಲ್ಲಿ ಇಸ್ರಾಯೇಲ್ ಯೆಹೋವನ ಮೆಸ್ಸೀಯನನ್ನು ತಿರಸ್ಕರಿಸಿತು. ಆದಕಾರಣ, ನಮ್ಮ ದೇವರು “ಯೆಹೂದ್ಯನೊಬ್ಬ”ನನ್ನು—ಒಂದು ಹೊಸ ಇಸ್ರಾಯೇಲನ್ನು—ಆತ್ಮಿಕ ಯೆಹೂದ್ಯರಿಂದ ರಚಿಸಲ್ಪಟ್ಟ ‘ದೇವರ ಇಸ್ರಾಯೇಲ್’ ಅನ್ನು, ತನ್ನ ವಿಶೇಷ ಜನರೋಪಾದಿ ಆರಿಸಿಕೊಂಡನು. (ಗಲಾತ್ಯ 6:16; ಯೋಹಾನ 1:11; ರೋಮಾಪುರ 2:28, 29) ಯೇಸುವಿನೊಂದಿಗೆ ಅವನ ಸ್ವರ್ಗೀಯ ರಾಜ್ಯದಲ್ಲಿ ಆಳಲು ಮಾನವಜಾತಿಯ ಮಧ್ಯದಿಂದ ಆರಿಸಲ್ಪಟ್ಟ ಇವರ ಅಂತಿಮ ಸಂಖ್ಯೆಯು 1,44,000 ಆಗಿರಲಿತ್ತು.—ಪ್ರಕಟನೆ 14:1, 4.
19 ಈ 1,44,000 ಮಂದಿಯಲ್ಲಿ ಹೆಚ್ಚಿನವರು ಈಗಾಗಲೇ ನಂಬಿಗಸ್ತರಾಗಿ ಸತ್ತಿದ್ದಾರೆ ಮತ್ತು ತಮ್ಮ ಸ್ವರ್ಗೀಯ ಪ್ರತಿಫಲಕ್ಕೆ ಹೋಗಿದ್ದಾರೆ. (1 ಕೊರಿಂಥ 15:51, 52; ಪ್ರಕಟನೆ 6:9-11) ಕೊಂಚ ಜನರು ಭೂಮಿಯ ಮೇಲೆ ಉಳಿದಿದ್ದಾರೆ ಮತ್ತು “ಯೆಹೂದ್ಯ”ನೊಂದಿಗೆ ಹೋಗಲು ಆರಿಸಿಕೊಳ್ಳುವ ಆ “ಹತ್ತು ಜನರು,” ನಿಶ್ಚಯವಾಗಿ “ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರಿಂದ ತೆಗೆಯಲ್ಪಟ್ಟ . . . ಒಂದು ಮಹಾ ಸಮೂಹ”ವಾಗಿದ್ದಾರೆಂಬುದನ್ನು ನೋಡಲು ಇವರು ಹರ್ಷಿಸುತ್ತಾರೆ.—ಪ್ರಕಟನೆ 7:9, NW; ಯೆಶಾಯ 2:2, 3; 60:4-10, 22.
20, 21. ಈ ಲೋಕದ ಅಂತ್ಯವು ಸಮೀಪಿಸಿದಂತೆ, ನಾವು ಹೇಗೆ ಯೆಹೋವನೊಂದಿಗೆ ಶಾಂತಿಯಲ್ಲಿ ಉಳಿಯಬಹುದು?
20 ಈ ಲೋಕದ ಅಂತ್ಯವು ಅನಿವಾರ್ಯವಾಗಿ ಸಮೀಪಿಸಿದಂತೆ, ಕ್ರೈಸ್ತಪ್ರಪಂಚವು ಯೆರೆಮೀಯನ ದಿನದಲ್ಲಿದ್ದ ಯೆರೂಸಲೇಮಿನಂತಿದೆ: “ಸುಖವನ್ನು ನಿರೀಕ್ಷಿಸಿದೆವು, ಯಾವ ಮೇಲೂ ಆಗಲಿಲ್ಲ; ಕ್ಷೇಮಕಾಲವನ್ನು ಎದುರುನೋಡಿದೆವು, ಹಾ, ಅಂಜಿಕೆಯೇ!” (ಯೆರೆಮೀಯ 14:19) ರಾಷ್ಟ್ರಗಳು ಸುಳ್ಳು ಧರ್ಮದ ಮೇಲೆ ತಿರುಗಿ ಅದನ್ನು ಒಂದು ಹಿಂಸಾತ್ಮಕ ಅಂತ್ಯಕ್ಕೆ ತರುವಾಗ ಆ ಅಂಜಿಕೆಯು ಪರಾಕಾಷ್ಠವನ್ನು ತಲಪುವುದು. ಇದಾದ ಸ್ವಲ್ಪದರಲ್ಲಿಯೇ, ಸ್ವತಃ ರಾಷ್ಟ್ರಗಳೇ ದೇವರ ಅಂತಿಮ ಯುದ್ಧವಾದ ಅರ್ಮಗೆದೋನಿನಲ್ಲಿ ನಾಶನವನ್ನು ಅನುಭವಿಸುವವು. (ಮತ್ತಾಯ 24:29, 30; ಪ್ರಕಟನೆ 16:14, 16; 17:16-18; 19:11-21) ಅದು ಎಂತಹ ಗಲಿಬಿಲಿಯ ಸಮಯವಾಗಿರುವುದು!
21 ಅದರ ಮಧ್ಯದಲ್ಲೂ ಯೆಹೋವನು ಸತ್ಯವನ್ನು ಪ್ರೀತಿಸಿ ‘ಶಾಂತಿಯ ಬೀಜ’ವನ್ನು ಬೆಳೆಸುವವರನ್ನು ರಕ್ಷಿಸುವನು. (ಜೆಕರ್ಯ 8:12; ಚೆಫನ್ಯ 2:3) ಹಾಗಾದರೆ ನಾವು, ಹುರುಪಿನಿಂದ ಆತನನ್ನು ಬಹಿರಂಗವಾಗಿ ಸ್ತುತಿಸುತ್ತಾ, ‘ಯೆಹೋವನ ಪ್ರಸನ್ನತೆಯನ್ನು ಬೇಡಲು’ ಸಾಧ್ಯವಾದಷ್ಟು ಹೆಚ್ಚಿನ ಜನರಿಗೆ ಸಹಾಯ ಮಾಡುತ್ತಾ, ಆತನ ಜನರ ದೇಶದೊಳಗೆ ಸುರಕ್ಷಿತವಾಗಿ ಉಳಿಯೋಣ. ನಾವು ಹಾಗೆ ಮಾಡುವಲ್ಲಿ, ಯೆಹೋವನ ಶಾಂತಿಯನ್ನು ಸದಾ ಅನುಭವಿಸುವೆವು. ಹೌದು, “ಯೆಹೋವನು ತನ್ನ ಜನರಿಗೆ ಬಲವನ್ನು ಅನುಗ್ರಹಿಸುವನು; ಆತನು ತನ್ನ ಪ್ರಜೆಗೆ ಸುಕ್ಷೇಮವನ್ನು ದಯಪಾಲಿಸುವನು.”—ಕೀರ್ತನೆ 29:11.
ನೀವು ವಿವರಿಸಬಲ್ಲಿರೊ?
◻ ಜೆಕರ್ಯನ ದಿನದಲ್ಲಿ ದೇವರ ಜನರು ‘ತಮ್ಮ ಕೈಗಳು ಬಲಗೊಳ್ಳುವಂತೆ ಬಿಟ್ಟದ್ದು’ ಹೇಗೆ? ಇಂದು?
◻ ನಾವು ಹಿಂಸೆ, ವಿರೋಧ ಮತ್ತು ಔದಾಸೀನ್ಯಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ?
◻ ನಾವು ‘ಒಬ್ಬರು ಇನ್ನೊಬ್ಬರೊಂದಿಗೆ ಸತ್ಯವನ್ನು ಮಾತಾಡುವುದರಲ್ಲಿ’ ಏನು ಒಳಗೊಂಡಿದೆ?
◻ ಒಬ್ಬ ವ್ಯಕ್ತಿಯು ‘ಯೆಹೋವನ ಪ್ರಸನ್ನತೆಯನ್ನು ಬೇಡುವುದು’ ಹೇಗೆ?
◻ ಜೆಕರ್ಯ 8:23ರ ನೆರವೇರಿಕೆಯಲ್ಲಿ ಹರ್ಷಪಡುವುದಕ್ಕೆ ಯಾವ ಮಹಾ ಕಾರಣವು ಕಂಡುಬರುತ್ತದೆ?
[ಪುಟ 18 ರಲ್ಲಿರುವ ಚಿತ್ರ]
ಕಳೆದ ವರ್ಷ ದೇವರ ರಾಜ್ಯದ ಕುರಿತು ಜನರೊಂದಿಗೆ ಮಾತಾಡುತ್ತಾ ಯೆಹೋವನ ಸಾಕ್ಷಿಗಳು 1,15,03,53,444 ತಾಸುಗಳನ್ನು ವ್ಯಯಿಸಿದರು