ಯೆಹೋವನ ವಾಕ್ಯವು ಸಜೀವವಾದದ್ದು
ಮಲಾಕಿಯ ಪುಸ್ತಕದ ಮುಖ್ಯಾಂಶಗಳು
ಯೆರೂಸಲೇಮಿನಲ್ಲಿ ದೇವಾಲಯವು ಜೀರ್ಣೋದ್ಧಾರಗೊಂಡು ಈಗಾಗಲೇ 70ಕ್ಕಿಂತಲೂ ಹೆಚ್ಚು ವರ್ಷಗಳು ಕಳೆದಿವೆ. ಅಷ್ಟು ವರ್ಷಗಳು ಉರುಳಿದರೂ ಯೆಹೂದ್ಯರ ಆಧ್ಯಾತ್ಮಿಕತೆಯು ತುಂಬಾ ಹೀನಾಯ ಸ್ಥಿತಿಯಲ್ಲಿದೆ. ಎಷ್ಟೆಂದರೆ, ಯಾಜಕರು ಸಹ ಭ್ರಷ್ಟರಾಗಿದ್ದಾರೆ. ಈ ದುರವಸ್ಥೆಯ ಅರಿವನ್ನು ಅವರಿಗೆ ಯಾರು ಮೂಡಿಸುವರು? ಅವರು ಆಧ್ಯಾತ್ಮಿಕವಾಗಿ ನವಚೈತನ್ಯವನ್ನು ಪಡೆದುಕೊಳ್ಳುವಂತೆ ಯಾರು ಸಹಾಯಮಾಡುವರು? ಈ ಕೆಲಸವನ್ನು ಯೆಹೋವನು ಮಲಾಕಿಯನಿಗೆ ವಹಿಸುತ್ತಾನೆ.
ಮಲಾಕಿಯನು ಹೀಬ್ರು ಶಾಸ್ತ್ರಗಳ ಕೊನೆಯ ಪುಸ್ತಕವನ್ನು ಪ್ರಭಾವಶಾಲಿ ಶೈಲಿಯಲ್ಲಿ ಬರೆದನು. ಇದರಲ್ಲಿ ದೈವಪ್ರೇರಿತವಾದ ಪ್ರವಾದನೆಗಳಿವೆ. ಮಲಾಕಿಯನ ಈ ಪ್ರವಾದನಾ ವಾಕ್ಯಗಳಿಗೆ ಗಮನಕೊಡುವುದು, ಸದ್ಯದ ದುಷ್ಟ ವ್ಯವಸ್ಥೆಯು ಅಂತ್ಯಗೊಳ್ಳುವಾಗ ಬರುವ ‘ಯೆಹೋವನ ಆಗಮನದ ಭಯಂಕರವಾದ ಮಹಾದಿನಕ್ಕಾಗಿ’ ನಾವು ತಯಾರಿರುವಂತೆ ನೆರವಾಗುತ್ತದೆ.—ಮಲಾಕಿಯ 4:5.
ಯಾಜಕರು ‘ಬಹು ಜನರನ್ನು ಮುಗ್ಗರಿಸುವ ಹಾಗೆ ಮಾಡಿದ್ದಾರೆ’
“ನಾನು ನಿಮ್ಮನ್ನು ಪ್ರೀತಿಸಿದ್ದೇನೆ” ಎಂದು ಹೇಳುವ ಮೂಲಕ ಇಸ್ರಾಯೇಲಿನ ಕಡೆಗೆ ತನಗಿರುವ ಭಾವನೆಗಳನ್ನು ಯೆಹೋವನು ವ್ಯಕ್ತಪಡಿಸುತ್ತಾನೆ. ಆದರೆ ಯಾಜಕರು ದೇವರ ನಾಮವನ್ನು ಧಿಕ್ಕರಿಸಿದ್ದಾರೆ. ಯಾವ ರೀತಿಯಲ್ಲಿ? ‘[ಆತನ] ಯಜ್ಞವೇದಿಯ ಮೇಲೆ ಅಶುದ್ಧ ಪದಾರ್ಥಗಳನ್ನು ಅರ್ಪಿಸುವ’ ಹಾಗೂ “ಕುಂಟಾದದ್ದನ್ನೂ ರೋಗದ ಪಶುವನ್ನೂ ಅರ್ಪಿಸುವ” ಮೂಲಕವೇ.—ಮಲಾಕಿಯ 1:2, 6-8.
ಮಾತ್ರವಲ್ಲ, ಯಾಜಕರು ತಮ್ಮ ‘ಧರ್ಮೋಪದೇಶದಿಂದ ಬಹು ಜನರನ್ನು ಮುಗ್ಗರಿಸುವ ಹಾಗೆ ಮಾಡಿದ್ದಾರೆ.’ ಜನರು ಸಹ ‘ಒಬ್ಬರಿಗೊಬ್ಬರು ದ್ರೋಹಮಾಡಿದ್ದಾರೆ.’ ಕೆಲವರು ಅನ್ಯ ಸ್ತ್ರೀಯರನ್ನು ಹೆಂಡತಿಯರನ್ನಾಗಿ ಮಾಡಿಕೊಂಡಿದ್ದಾರೆ. ಇತರರು ‘[ತಮ್ಮ] ಯೌವನದ ಹೆಂಡತಿಯರಿಗೆ’ ದ್ರೋಹಮಾಡಿದ್ದಾರೆ.—ಮಲಾಕಿಯ 2:8, 10, 11, 14-16.
ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:
2:3—ಯಾಜಕರ ಮುಖದ ಮೇಲೆ ‘ಮಲವನ್ನು ಚೆಲ್ಲಿಬಿಡುವುದರ’ ಅರ್ಥವೇನಾಗಿತ್ತು? ಧರ್ಮಶಾಸ್ತ್ರಕ್ಕನುಸಾರ ಯಜ್ಞಪಶುಗಳ ಮಲವನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಸುಡಬೇಕಾಗಿತ್ತು. (ಯಾಜಕಕಾಂಡ 16:27) ಯಾಜಕನ ಮುಖದ ಮೇಲೆ ಮಲವನ್ನು ಚೆಲ್ಲಿಬಿಡುವುದು, ಯೆಹೋವನು ಯಜ್ಞಗಳನ್ನು ತಿರಸ್ಕರಿಸಿದ್ದಾನೆ ಮತ್ತು ಅದನ್ನು ಅರ್ಪಿಸಿದವರು ಆತನಿಗೆ ಅಸಹ್ಯವಾಗಿದ್ದಾರೆ ಎಂಬುದನ್ನು ಅರ್ಥೈಸಿತು.
2:13—ಯಾರ ಕಣ್ಣೀರು ಯೆಹೋವನ ಯಜ್ಞವೇದಿಯನ್ನು ಮುಚ್ಚಿತು? ಇದು ಆಲಯಕ್ಕೆ ಬಂದು ಯೆಹೋವನ ಮುಂದೆ ತಮ್ಮ ಮನದಾಳದ ಅಳಲನ್ನು ತೋಡಿಕೊಂಡ ಹೆಂಡತಿಯರ ಕಣ್ಣೀರಾಗಿತ್ತು. ಅವರ ಆ ದುಃಖಕ್ಕೆ ಕಾರಣವೇನಾಗಿತ್ತು? ಬಹುಶಃ ಅವರಿಗಿಂತಲೂ ಚಿಕ್ಕ ವಯಸ್ಸಿನ ಅನ್ಯಜಾತಿಯ ತರುಣಿಯರನ್ನು ವಿವಾಹವಾಗುವ ಸಲುವಾಗಿ ಅವರ ಯೆಹೂದಿ ಗಂಡಂದಿರು ನ್ಯಾಯಸಮ್ಮತವಲ್ಲದ ಆಧಾರದ ಮೇರೆಗೆ ವಿವಾಹವಿಚ್ಛೇದ ಪಡೆದು ಅವರನ್ನು ತೊರೆದುಬಿಟ್ಟಿದ್ದರು.
ನಮಗಾಗಿರುವ ಪಾಠಗಳು:
1:10. ಬಾಗಿಲನ್ನು ಮುಚ್ಚುವಂಥ ಅಥವಾ ಯಜ್ಞವೇದಿಯ ಮೇಲೆ ಬೆಂಕಿ ಉರಿಸುವಂಥ ಸಣ್ಣಪುಟ್ಟ ಸೇವೆಗಳಿಗೂ ಹಣ ಕೇಳುತ್ತಿದ್ದ ದುರಾಶೆಯ ಯಾಜಕರು ಅರ್ಪಿಸುತ್ತಿದ್ದ ಯಜ್ಞವನ್ನು ಯೆಹೋವನು ಮೆಚ್ಚಲಿಲ್ಲ. ಕ್ರೈಸ್ತ ಶುಶ್ರೂಷೆಯಲ್ಲಿ ನಾವು ಮಾಡುವ ಕಾರ್ಯಗಳನ್ನು ಸೇರಿಸಿ ನಮ್ಮ ಆರಾಧನಾ ಕ್ರಿಯೆಗಳು ಎಂದಿಗೂ ಆರ್ಥಿಕ ಲಾಭಕ್ಕಾಗಿರದೇ, ದೇವರ ಹಾಗೂ ನೆರೆಯವರ ಮೇಲೆ ನಮಗಿರುವ ನಿಸ್ವಾರ್ಥ ಪ್ರೀತಿಯಿಂದ ಪ್ರಚೋದಿಸಲ್ಪಡಬೇಕು ಎಂಬುದು ಎಷ್ಟೊಂದು ಪ್ರಾಮುಖ್ಯವಾಗಿದೆ!—ಮತ್ತಾಯ 22:37-39; 2 ಕೊರಿಂಥ 11:7.
1:14; 2:17. ಯೆಹೋವನು ಕಪಟವನ್ನು ಸಹಿಸುವುದಿಲ್ಲ.
2:7-9. ಸಭೆಯಲ್ಲಿ ಬೋಧಿಸುವ ಜವಾಬ್ದಾರಿಯುಳ್ಳವರು ತಮ್ಮ ಬೋಧನೆಯು ದೇವರ ವಾಕ್ಯವಾದ ಪವಿತ್ರ ಬೈಬಲಿಗೆ ಮತ್ತು ‘ನಂಬಿಗಸ್ತ ಮನೆವಾರ್ತೆಯವನ’ ಬೈಬಲಾಧಾರಿತ ಸಾಹಿತ್ಯಗಳಿಗೆ ಹೊಂದಿಕೆಯಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.—ಲೂಕ 12:42; ಯಾಕೋಬ 3:11.
2:10, 11. ‘ಕರ್ತನಲ್ಲಿ ಮಾತ್ರ’ ವಿವಾಹವಾಗುವ ಸಲಹೆಯನ್ನು ತನ್ನ ಆರಾಧಕರು ಗಂಭೀರವಾಗಿ ತೆಗೆದುಕೊಳ್ಳುವಂತೆ ಯೆಹೋವನು ನಿರೀಕ್ಷಿಸುತ್ತಾನೆ.—1 ಕೊರಿಂಥ 7:39, NW.
2:15, 16. ಸತ್ಯಾರಾಧಕರು ತಮ್ಮ ಯೌವನದ ಪತ್ನಿಯರೊಂದಿಗೆ ಮಾಡಿಕೊಂಡ ವೈವಾಹಿಕ ಒಪ್ಪಂದಕ್ಕೆ ಉಚ್ಚ ಗೌರವವನ್ನು ತೋರಿಸುತ್ತಾರೆ.
‘ಕರ್ತನು ತನ್ನ ಆಲಯಕ್ಕೆ ಬರುವನು’
‘ಒಡಂಬಡಿಕೆಯ ದೂತನೊಂದಿಗೆ [ಯೇಸು ಕ್ರಿಸ್ತನೊಂದಿಗೆ]’ “ಕರ್ತನು [ಯೆಹೋವ ದೇವರು] ತನ್ನ ಆಲಯಕ್ಕೆ ಫಕ್ಕನೆ ಬರುವನು.” ಆತನು ‘ನ್ಯಾಯತೀರಿಸುವುದಕ್ಕೆ [ತನ್ನ ಜನರ] ಬಳಿಗೆ ಬರುವನು’ ಮತ್ತು ಎಲ್ಲ ರೀತಿಯ ದುಷ್ಟಜನರಿಗೆ ಶೀಘ್ರಸಾಕ್ಷಿಯಾಗಿರುವನು. ಅಷ್ಟಲ್ಲದೆ, ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರ ಹೆಸರುಗಳನ್ನು “ಜ್ಞಾಪಕದ ಪುಸ್ತಕದಲ್ಲಿ” ಬರೆಯಲಿರುವನು.—ಮಲಾಕಿಯ 3:1, 3, 5, 16.
‘ಒಲೆಯಂತೆ ಉರಿಯುತ್ತಿರುವ’ ದಿನವು ಬರುವುದು ಮತ್ತು ದುಷ್ಟತನವನ್ನು ದಹಿಸಿಬಿಡುವುದು. ಆ ದಿನವು ಬರುವ ಮೊದಲು, ‘ತಂದೆಗಳ ಮನಸ್ಸನ್ನು ಮಕ್ಕಳ ಕಡೆಗೂ ಮಕ್ಕಳ ಮನಸ್ಸನ್ನು ತಂದೆಗಳ ಕಡೆಗೂ ತಿರುಗಿಸಲಿಕ್ಕಾಗಿ’ ಪ್ರವಾದಿಯೊಬ್ಬನನ್ನು ಕಳುಹಿಸಲಾಗುವುದು.—ಮಲಾಕಿಯ 4:1, 5, 6.
ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:
3:1-3—“ಕರ್ತನು” ಹಾಗೂ “ಒಡಂಬಡಿಕೆಯ ದೂತನು” ಆಲಯಕ್ಕೆ ಯಾವಾಗ ಬಂದರು ಮತ್ತು ಅವರಿಗಿಂತಲೂ ಮೊದಲು ಯಾರನ್ನು ಕಳುಹಿಸಲಾಯಿತು? ಪ್ರತಿನಿಧಿಯೊಬ್ಬನ ಮೂಲಕ ಯೆಹೋವನು ಸಾ. ಶ. 33ರ ನೈಸಾನ್ 10ರಂದು ತನ್ನ ಆಲಯಕ್ಕೆ ಬಂದು ಅದನ್ನು ಶುದ್ಧೀಕರಿಸಿದನು. ಆ ಸಂದರ್ಭದಲ್ಲಿಯೇ ಯೇಸು ಆಲಯಕ್ಕೆ ಹೋಗಿ ಅದರಲ್ಲಿ ಮಾರುವವರನ್ನೂ ಕೊಳ್ಳುವವರನ್ನೂ ಹೊರಡಿಸಿದನು. (ಮಾರ್ಕ 11:15) ಈ ಘಟನೆಯು ಯೇಸು ನೇಮಿತ ಅರಸನಾಗಿ ಅಭಿಷೇಕಿಸಲ್ಪಟ್ಟು ಮೂರುವರೆ ವರ್ಷಗಳಾದ ಮೇಲೆ ಸಂಭವಿಸಿತು. ಇದರ ಹೋಲಿಕೆಯಲ್ಲಿ, ಪರಲೋಕದಲ್ಲಿ ಯೇಸು ಅರಸನಾಗಿ ಸಿಂಹಾಸನವೇರಿ ಮೂರುವರೆ ವರ್ಷಗಳ ಬಳಿಕ ಅವನು ಯೆಹೋವನೊಂದಿಗೆ ಆಧ್ಯಾತ್ಮಿಕ ಆಲಯಕ್ಕೆ ಬಂದನೆಂದು ವ್ಯಕ್ತವಾಗುತ್ತದೆ. ಮಾತ್ರವಲ್ಲ, ದೇವಜನರನ್ನು ಶುದ್ಧೀಕರಿಸುವ ಆವಶ್ಯಕತೆಯನ್ನು ಕಂಡನು. ಒಂದನೇ ಶತಮಾನದಲ್ಲಿ, ಯೇಸು ಕ್ರಿಸ್ತನ ಆಗಮನಕ್ಕೆ ಮುಂಚೆ ಯೆಹೂದ್ಯರನ್ನು ಅಣಿಗೊಳಿಸಲು ಸ್ನಾನಿಕ ಯೋಹಾನನನ್ನು ಕಳುಹಿಸಲಾಯಿತು. ಹಾಗೆಯೇ, ಆಧುನಿಕ ಸಮಯದಲ್ಲಿ, ಯೆಹೋವನು ತನ್ನ ಆಧ್ಯಾತ್ಮಿಕ ಆಲಯಕ್ಕೆ ಆಗಮಿಸುವುದಕ್ಕೆ ಮುಂಚೆ ದಾರಿಯನ್ನು ಸಿದ್ಧಪಡಿಸಲು ಒಬ್ಬ ದೂತನನ್ನು ಕಳುಹಿಸಲಾಯಿತು. 1880ರಷ್ಟು ಹಿಂದೆಯೇ, ಪ್ರಾಮಾಣಿಕ ಜನರಿಗೆ ಬೈಬಲಿನ ಅನೇಕ ಮೂಲಭೂತ ಬೋಧನೆಗಳನ್ನು ಕಲಿಸಲಿಕ್ಕಾಗಿ ಬೈಬಲ್ ವಿದ್ಯಾರ್ಥಿಗಳ ಗುಂಪೊಂದು ಬೈಬಲ್ ಶಿಕ್ಷಣ ಕಾರ್ಯಕ್ರಮವನ್ನು ಆರಂಭಿಸಿತು.
3:10—“ದಶಮಾಂಶ” ತೆಗೆದುಕೊಂಡು ಬರುವುದು ನಮ್ಮಲ್ಲಿರುವ ಸರ್ವವನ್ನೂ ಯೆಹೋವನಿಗೆ ಕೊಡುವುದನ್ನು ಸೂಚಿಸುತ್ತದೋ? ಯೇಸುವಿನ ಮರಣದ ಆಧಾರದ ಮೇರೆಗೆ ಮೋಶೆಯ ಧರ್ಮಶಾಸ್ತ್ರವನ್ನು ತೆಗೆದುಹಾಕಲಾಗಿದೆ. ಆದುದರಿಂದ, ದಶಮಾಂಶ ರೂಪದಲ್ಲಿ ಹಣವನ್ನು ನೀಡುವುದು ಇಂದು ಯೆಹೋವನ ಆರಾಧನೆಯ ಒಂದು ಆವಶ್ಯಕತೆಯಾಗಿಲ್ಲ. ಆದರೂ, ದಶಮಾಂಶಕ್ಕೆ ಒಂದು ಸೂಚಿತಾರ್ಥವಿದೆ. (ಎಫೆಸ 2:14) ಅದು ನಮ್ಮಲ್ಲಿರುವ ಸರ್ವವನ್ನೂ ಕೊಡುವುದನ್ನು ಸೂಚಿಸುತ್ತಿಲ್ಲ. ದಶಮಾಂಶವನ್ನು ವರ್ಷ ವರ್ಷವೂ ಅರ್ಪಿಸಲಾಗುತ್ತಿತ್ತು. ಆದರೆ ನಾವು ನಮ್ಮ ಸರ್ವಸ್ವವನ್ನು ಯೆಹೋವನಿಗೆ ಒಮ್ಮೆ ಮಾತ್ರ ಅರ್ಪಿಸುತ್ತೇವೆ. ಅದು ನಮ್ಮನ್ನು ಆತನಿಗೆ ಸಮರ್ಪಿಸಿಕೊಂಡು ಅದನ್ನು ನೀರಿನ ದೀಕ್ಷಾಸ್ನಾನದ ಮೂಲಕ ತೋರಿಸಿಕೊಟ್ಟಾಗಲೇ ಆಗಿದೆ. ಅಂದಿನಿಂದ ನಮ್ಮದೆಲ್ಲವೂ ಯೆಹೋವನಿಗೆ ಸೇರಿದ್ದಾಗಿದೆ. ಹಾಗಿದ್ದರೂ, ನಮ್ಮಲ್ಲಿರುವುದರಲ್ಲಿ ಒಂದು ಭಾಗವನ್ನು ಸಾಂಕೇತಿಕ ದಶಮಾಂಶವಾಗಿ ಆತನ ಸೇವೆಯಲ್ಲಿ ಉಪಯೋಗಿಸುವಂತೆ ಆತನು ಅನುಮತಿಸುತ್ತಾನೆ. ಅಂದರೆ, ಇದು ಆತನ ಸೇವೆಯಲ್ಲಿ ನಮ್ಮ ಸನ್ನಿವೇಶ ಅನುಮತಿಸುವಷ್ಟನ್ನು ಮತ್ತು ನಮ್ಮ ಹೃದಯ ಪ್ರಚೋದಿಸುವಷ್ಟನ್ನು ಕೊಡುವುದಾಗಿದೆ. ಯೆಹೋವನಿಗೆ ನಾವು ಅರ್ಪಿಸುವ ವಿಷಯಗಳಲ್ಲಿ, ರಾಜ್ಯವನ್ನು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸಕ್ಕಾಗಿ ನಾವು ಉಪಯೋಗಿಸುವ ಸಮಯ, ಶಕ್ತಿಸಾಮರ್ಥ್ಯ ಮತ್ತು ಸಂಪತ್ತುಗಳು ಸೇರಿವೆ. ಅಲ್ಲದೆ, ಕ್ರೈಸ್ತ ಕೂಟಗಳಿಗೆ ಹಾಜರಾಗುವುದು, ಅಸ್ವಸ್ಥರು ಮತ್ತು ವೃದ್ಧರಾಗಿರುವ ನಮ್ಮ ಜೊತೆ ವಿಶ್ವಾಸಿಗಳನ್ನು ಭೇಟಿಯಾಗುವುದು ಹಾಗೂ ಸತ್ಯಾರಾಧನೆಗಾಗಿ ಆರ್ಥಿಕ ಬೆಂಬಲ ನೀಡುವುದು ಸಹ ಸೇರಿವೆ.
4:3—ಯೆಹೋವನ ಆರಾಧಕರು ‘ದುಷ್ಟರನ್ನು ತುಳಿದುಬಿಡುವುದು’ ಹೇಗೆ? ಭೂಮಿಯಲ್ಲಿರುವ ದೇವಜನರು ಅಕ್ಷರಾರ್ಥವಾಗಿ ‘ದುಷ್ಟರನ್ನು ತುಳಿದುಬಿಡುವುದಿಲ್ಲ.’ ಅಂದರೆ, ದುಷ್ಟರ ಮೇಲೆ ದೇವರು ನ್ಯಾಯತೀರ್ಪನ್ನು ತರುವಾಗ ಅವರು ಅದರಲ್ಲಿ ಭಾಗವಹಿಸುವುದಿಲ್ಲ. ಬದಲಿಗೆ, ಸೈತಾನನ ಲೋಕದ ಅಂತ್ಯವನ್ನು ಅನುಸರಿಸಿ ಬರುವ ವಿಜಯೋತ್ಸವದಲ್ಲಿ ಪೂರ್ಣಹೃದಯದಿಂದ ಭಾಗವಹಿಸುವ ಮೂಲಕ ಯೆಹೋವನ ಭೂಸೇವಕರು ಸಾಂಕೇತಿಕ ಅರ್ಥದಲ್ಲಿ ದುಷ್ಟರನ್ನು ತುಳಿದುಬಿಡುವರು.—ಕೀರ್ತನೆ 145:20; ಪ್ರಕಟನೆ 20:1-3.
4:4—ನಾವೇಕೆ ‘ಮೋಶೆಯ ಧರ್ಮಶಾಸ್ತ್ರವನ್ನು . . . ಜ್ಞಾಪಕಮಾಡಿಕೊಳ್ಳಬೇಕು?’ ಮೋಶೆಯ ಧರ್ಮಶಾಸ್ತ್ರವನ್ನು ಕ್ರೈಸ್ತರು ಅನುಸರಿಸುವ ಅಗತ್ಯವಿಲ್ಲವಾದರೂ ಅದು “ಮುಂದೆ ಬರಬೇಕಾಗಿದ್ದ ಮೇಲುಗಳ ಛಾಯೆ” ಆಗಿತ್ತು. (ಇಬ್ರಿಯ 10:1) ಆದುದರಿಂದ, ಮೋಶೆಯ ಧರ್ಮಶಾಸ್ತ್ರಕ್ಕೆ ಲಕ್ಷ್ಯಕೊಡುವುದು ಅದರಲ್ಲಿ ಬರೆದಿರುವ ವಿಷಯಗಳು ಹೇಗೆ ನೆರವೇರುತ್ತಿವೆ ಎಂಬುದನ್ನು ತಿಳಿದುಕೊಳ್ಳಲು ನಮಗೆ ಸಹಾಯಮಾಡಬಲ್ಲದು. (ಲೂಕ 24:44, 45) ಅಷ್ಟಲ್ಲದೆ, ಧರ್ಮಶಾಸ್ತ್ರವು ‘ಪರಲೋಕವಸ್ತುಗಳಿಗೆ ಪ್ರತಿರೂಪವಾಗಿರುವ ವಸ್ತುಗಳನ್ನು’ ಹೊಂದಿದೆ. ಆದಕಾರಣ, ಕ್ರೈಸ್ತ ನಡತೆ ಮತ್ತು ಬೋಧನೆಗಳ ಅರ್ಥವನ್ನು ನಾವು ಗ್ರಹಿಸಿಕೊಳ್ಳಬೇಕಾದರೆ ಅದನ್ನು ಅಧ್ಯಯನ ಮಾಡಲೇಬೇಕು.—ಇಬ್ರಿಯ 9:23.
4:5, 6—“ಪ್ರವಾದಿಯಾದ ಎಲೀಯ” ಯಾರನ್ನು ಪ್ರತಿನಿಧಿಸುತ್ತಾನೆ? ಜನರ ಹೃದಯಗಳನ್ನು ಸಿದ್ಧಪಡಿಸುವ ಪುನಸ್ಥಾಪನೆಯ ಕೆಲಸವನ್ನು ‘ಎಲೀಯನು’ ಮಾಡುವನೆಂದು ಮುಂತಿಳಿಸಲಾಗಿತ್ತು. ಸಾ. ಶ. ಒಂದನೇ ಶತಮಾನದಲ್ಲಿ ಯೇಸು ಕ್ರಿಸ್ತನು ಸ್ನಾನಿಕನಾದ ಯೋಹಾನನನ್ನು “ಎಲೀಯ”ನೆಂದು ಗುರುತಿಸಿದನು. (ಮತ್ತಾಯ 11:12-14; ಮಾರ್ಕ 9:11-13) ಯೋಹಾನನ ಆಧುನಿಕ ದಿನದ ಪ್ರತಿರೂಪವನ್ನು “ಯೆಹೋವನ ಆಗಮನದ ಭಯಂಕರವಾದ ಮಹಾದಿನವು ಬರುವದಕ್ಕೆ ಮುಂಚೆಯೇ” ಕಳುಹಿಸಲಾಗಿದೆ. ನಮ್ಮ ದಿನದಲ್ಲಿ ಎಲೀಯನು ‘ನಂಬಿಗಸ್ತನೂ ವಿವೇಕಿಯೂ ಆದ ಆಳನ್ನೇ’ ವಿನಾಃ ಬೇರೆ ಯಾರನ್ನು ಪ್ರತಿನಿಧಿಸುತ್ತಿಲ್ಲ. (ಮತ್ತಾಯ 24:45) ಈ ಅಭಿಷಿಕ್ತ ಕ್ರೈಸ್ತ ವರ್ಗದವರು, ದೇವರೊಂದಿಗೆ ತಮ್ಮ ಸಂಬಂಧವನ್ನು ಪುನಸ್ಥಾಪಿಸುವಂತೆ ಜನರಿಗೆ ಶ್ರದ್ಧೆಯಿಂದ ಸಹಾಯಮಾಡುತ್ತಿದ್ದಾರೆ.
ನಮಗಾಗಿರುವ ಪಾಠಗಳು:
3:10. ನಮ್ಮಲ್ಲಿರುವ ಅತ್ಯುತ್ತಮವಾದುದನ್ನು ಯೆಹೋವನಿಗೆ ನಾವು ಕೊಡದಿದ್ದಲ್ಲಿ ಆತನ ಆಶೀರ್ವಾದವನ್ನು ಕಳೆದುಕೊಳ್ಳುತ್ತೇವೆ.
3:14, 15. ಯಾಜಕರ ಕೆಟ್ಟ ಮಾದರಿಯಿಂದಾಗಿ ಯೆಹೂದ್ಯರು ದೇವರ ಸೇವೆ ಮಾಡುವುದು ವ್ಯರ್ಥವೆಂದು ಎಣಿಸಲಾರಂಭಿಸಿದರು. ಆದುದರಿಂದ, ಕ್ರೈಸ್ತ ಸಭೆಯಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ಒಳ್ಳೆಯ ಮಾದರಿಗಳಾಗಿರತಕ್ಕದ್ದು.—1 ಪೇತ್ರ 5:1-3.
3:16. ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರ ಹಾಗೂ ತನಗೆ ನಂಬಿಗಸ್ತರಾಗಿರುವವರ ದಾಖಲೆಯನ್ನು ಇಡುತ್ತಾನೆ. ಆತನು ಸೈತಾನನ ದುಷ್ಟ ಲೋಕವನ್ನು ನಾಶಪಡಿಸುವಾಗ ಅವರನ್ನು ಜ್ಞಾಪಿಸಿಕೊಂಡು ಉಳಿಸುವನು. ಆದುದರಿಂದ, ದೇವರಿಗೆ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲಿಕ್ಕಾಗಿ ನಾವು ಮಾಡಿರುವ ದೃಢನಿರ್ಧಾರವನ್ನು ಎಂದಿಗೂ ಸಡಿಲಗೊಳಿಸದಿರೋಣ.—ಯೋಬ 27:5.
4:1. ಯೆಹೋವನಿಗೆ ಲೆಕ್ಕ ಒಪ್ಪಿಸುವ ದಿನದಲ್ಲಿ “ರೆಂಬೆ” ಮತ್ತು “ಬುಡ” ಎರಡಕ್ಕೂ ಒಂದೇ ಗತಿಯಾಗುತ್ತದೆ ಅಂದರೆ, ಎಳೆಯ ಮಕ್ಕಳು ತಮ್ಮ ಹೆತ್ತವರಿಗಾಗುವ ನ್ಯಾಯತೀರ್ಪನ್ನೇ ಹೊಂದುತ್ತಾರೆ. ಹಾಗಾದರೆ, ತಮ್ಮ ಅಪ್ರಾಪ್ತವಯಸ್ಸಿನ ಮಕ್ಕಳ ಕಡೆಗೆ ಹೆತ್ತವರಿಗೆ ಎಂತಹ ಜವಾಬ್ದಾರಿಯಿದೆ! ಕ್ರೈಸ್ತ ತಂದೆತಾಯಂದಿರು ದೇವರ ಮೆಚ್ಚುಗೆಯನ್ನು ಪಡೆಯಲು ಶ್ರಮಪಡಬೇಕು ಮತ್ತು ಆತನೊಂದಿಗೆ ಉತ್ತಮ ನಿಲುವನ್ನು ಕಾಪಾಡಿಕೊಳ್ಳಬೇಕು.—1 ಕೊರಿಂಥ 7:14.
‘ದೇವರಿಗೆ ಭಯಪಡಿರಿ’
“ಯೆಹೋವನ . . . ಭಯಂಕರವಾದ ಮಹಾದಿನ”ವನ್ನು ಯಾರು ಪಾರಾಗುವರು? (ಮಲಾಕಿಯ 4:5) ಯೆಹೋವನು ಹೇಳುವುದು: “ನನ್ನ ನಾಮದಲ್ಲಿ ಭಯಭಕ್ತಿಯಿಟ್ಟಿರುವ ನಿಮಗೋ [ದೇವರ] ಧರ್ಮವೆಂಬ ಸೂರ್ಯನು ಸ್ವಸ್ಥತೆಯನ್ನುಂಟುಮಾಡುವ ಕಿರಣಗಳುಳ್ಳವನಾಗಿ ಮೂಡುವನು; ಕೊಟ್ಟಿಗೆಯಿಂದ ಬಿಟ್ಟ ಕರುಗಳಂತೆ ನೀವು ಹೊರಟು ಬಂದು ಕುಣಿದಾಡುವಿರಿ.”—ಮಲಾಕಿಯ 4:2.
“ಧರ್ಮವೆಂಬ ಸೂರ್ಯ”ನಾಗಿರುವ ಯೇಸು ಕ್ರಿಸ್ತನು, ದೇವರ ನಾಮದಲ್ಲಿ ಭಯಭಕ್ತಿಯಿಟ್ಟಿರುವವರಿಗೆ ಕಿರಣಗಳುಳ್ಳವನಾಗಿ ಮೂಡುವನು ಮತ್ತು ಅವರು ದೇವರ ಮೆಚ್ಚುಗೆಯನ್ನು ಪಡೆಯುವರು. (ಯೋಹಾನ 8:12) ಅವರಿಗೆ “ಸ್ವಸ್ಥತೆ” ಸಹ ಉಂಟಾಗುವುದು. ಅವರು ಈಗ ಆಧ್ಯಾತ್ಮಿಕ ಸ್ವಸ್ಥತೆಯನ್ನು ಪಡೆಯುವರು ಮತ್ತು ದೇವರ ನೂತನ ಲೋಕದಲ್ಲಿ ಶಾರೀರಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಪೂರ್ಣ ಸ್ವಸ್ಥತೆಯನ್ನು ಪಡೆಯುವರು. (ಪ್ರಕಟನೆ 22:1, 2) ಹೀಗೆ, “ಕೊಟ್ಟಿಗೆಯಿಂದ ಬಿಟ್ಟ ಕರುಗಳಂತೆ” ಸಂಭ್ರಮದಿಂದ ಉಲ್ಲಾಸಿಸುವರು. ಇಂಥ ಆಶೀರ್ವಾದಗಳನ್ನು ಮುನ್ನೋಡುತ್ತಾ ನಾವು ಅರಸ ಸೊಲೊಮೋನನ ಈ ಕೆಳಗಿನ ಬುದ್ಧಿವಾದಕ್ಕೆ ಮನಸಾರೆ ಕಿವಿಗೊಡುವ: “ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.”—ಪ್ರಸಂಗಿ 12:13.
[Picture on page 28]
ಪ್ರವಾದಿ ಮಲಾಕಿಯ, ದೇವರ ಒಬ್ಬ ನಿಷ್ಠಾವಂತ ಹುರುಪಿನ ಸೇವಕ
[Picture on page 31]
ನಮ್ಮ ಬೋಧನೆ ಬೈಬಲಿಗೆ ಅನುಸಾರವಾಗಿರಬೇಕು
[Picture on page 31]
ಯೆಹೋವನ ಸೇವಕರು ತಮ್ಮ ವೈವಾಹಿಕ ಒಪ್ಪಂದವನ್ನು ಗೌರವಿಸುತ್ತಾರೆ