ಯೆಹೋವನು ದ್ರೋಹಮಾರ್ಗವನ್ನು ದ್ವೇಷಿಸುತ್ತಾನೆ
‘ನಾವು ಒಬ್ಬರಿಗೊಬ್ಬರು ದ್ರೋಹಮಾಡದಿರೋಣ.’—ಮಲಾಕಿಯ 2:10.
1. ನಾವು ನಿತ್ಯಜೀವವನ್ನು ಪಡೆಯಬೇಕಾದರೆ ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?
ನೀವು ನಿತ್ಯಜೀವವನ್ನು ಬಯಸುತ್ತೀರೊ? ಬೈಬಲು ವಾಗ್ದಾನಿಸಿರುವ ಆ ನಿರೀಕ್ಷೆಯನ್ನು ನೀವು ನಂಬುವುದಾದರೆ ನೀವು ಪ್ರಾಯಶಃ, ‘ನಿಶ್ಚಯವಾಗಿ ಬಯಸುತ್ತೇನೆ’ ಎಂದು ಹೇಳುವಿರಿ. ಆದರೆ ದೇವರ ನೂತನ ಲೋಕದಲ್ಲಿ ಅನಂತ ಜೀವನದ ಅನುಗ್ರಹವನ್ನು ನೀವು ಅಪೇಕ್ಷಿಸುವಲ್ಲಿ, ಆತನ ಆವಶ್ಯಕತೆಗಳನ್ನು ನೀವು ಪೂರೈಸಬೇಕಾಗುತ್ತದೆ. (ಪ್ರಸಂಗಿ 12:13; ಯೋಹಾನ 17:3) ಅಪರಿಪೂರ್ಣ ಮಾನವರು ಅದನ್ನು ಮಾಡುವಂತೆ ಅಪೇಕ್ಷಿಸುವುದು ನ್ಯಾಯಸಮ್ಮತವಲ್ಲವೆಂಬುದು ಸರಿಯೊ? ಅಲ್ಲ, ಏಕೆಂದರೆ ಯೆಹೋವನು ಈ ಪ್ರೋತ್ಸಾಹಕರವಾದ ಹೇಳಿಕೆಯನ್ನು ಮಾಡುತ್ತಾನೆ: “ನನಗೆ ಯಜ್ಞವು ಬೇಡ, ಕರುಣೆಯೇ ಬೇಕು; ಹೋಮಗಳಿಗಿಂತ ದೇವಜ್ಞಾನವೇ ಇಷ್ಟ.” (ಹೋಶೇಯ 6:6) ಈ ಕಾರಣದಿಂದ ದೋಷಪ್ರವೃತ್ತಿಯಿರುವ ಮಾನವರೂ ದೇವರ ಆವಶ್ಯಕತೆಗಳನ್ನು ಪೂರೈಸಬಲ್ಲರು.
2. ಅನೇಕ ಮಂದಿ ಇಸ್ರಾಯೇಲ್ಯರು ಯೆಹೋವನಿಗೆ ದ್ರೋಹ ಮಾಡಿದ್ದು ಹೇಗೆ?
2 ಆದರೂ, ಎಲ್ಲರಿಗೆ ದೇವರ ಚಿತ್ತವನ್ನು ಮಾಡುವ ಮನಸ್ಸಿರುವುದಿಲ್ಲ. ಅನೇಕ ಮಂದಿ ಇಸ್ರಾಯೇಲ್ಯರಿಗೂ ಈ ಮನಸ್ಸಿರಲಿಲ್ಲವೆಂದು ಹೋಶೇಯನು ತಿಳಿಯಪಡಿಸುತ್ತಾನೆ. ಅವರು ಜನಾಂಗವಾಗಿ, ಒಂದು ಒಡಂಬಡಿಕೆಯೊಳಗೆ ಬರುತ್ತೇವೆಂದು, ದೇವರ ನಿಯಮಗಳಿಗೆ ವಿಧೇಯರಾಗುತ್ತೇವೆಂದು ಒಪ್ಪಿಕೊಂಡಿದ್ದರು. (ವಿಮೋಚನಕಾಂಡ 24:1-8) ಆದರೂ, ಸ್ವಲ್ಪ ಸಮಯದೊಳಗೆ ಅವರು ಆತನ ನಿಯಮಗಳನ್ನು ಉಲ್ಲಂಘಿಸಿ ‘ನಿಬಂಧನೆಯನ್ನು ಮೀರಿದರು.’ ಆದಕಾರಣ, ಯೆಹೋವನು ಇಸ್ರಾಯೇಲ್ಯರ ಬಗ್ಗೆ, “ಅವರು . . . ನನಗೆ ದ್ರೋಹಮಾಡಿದ್ದಾರೆ” ಎಂದು ಹೇಳಿದನು. (ಹೋಶೇಯ 6:7) ಅಂದಿನಿಂದ ಅನೇಕ ಜನರು ಹೀಗೆ ದ್ರೋಹ ಮಾಡಿರುತ್ತಾರೆ. ಆದರೆ ಯೆಹೋವನು ದ್ರೋಹವನ್ನು, ಅದು ಆತನಿಗೆ ಮಾಡಿರಲಿ, ಇಲ್ಲವೆ ಆತನನ್ನು ಪ್ರೀತಿಸಿ ಸೇವಿಸುವವರಿಗೆ ಮಾಡಿರಲಿ, ದ್ವೇಷಿಸುತ್ತಾನೆ.
3. ಈ ಅಧ್ಯಯನದಲ್ಲಿ ಯಾವ ವಿಶ್ಲೇಷಣೆಯನ್ನು ಮಾಡಲಾಗುವುದು?
3 ದ್ರೋಹದ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನವನ್ನು ಮತ್ತು ಸಂತುಷ್ಟ ಜೀವನವನ್ನು ಅನುಭವಿಸಬೇಕಾದರೆ ನಾವು ಹೊಂದಬೇಕಾದ ಆ ದೃಷ್ಟಿಕೋನವನ್ನು ಎತ್ತಿಹೇಳಿದ ಪ್ರವಾದಿಯು ಹೋಶೇಯನೊಬ್ಬನೇ ಅಲ್ಲ. ಹಿಂದಿನ ಲೇಖನದಲ್ಲಿ, ಮಲಾಕಿಯ ಪುಸ್ತಕದ ಒಂದನೆಯ ಅಧ್ಯಾಯದಿಂದ ಹಿಡಿದು ಅವನ ಪ್ರವಾದನಾ ಸಂದೇಶದಲ್ಲಿ ಹೆಚ್ಚಿನದ್ದನ್ನು ನಾವು ವಿಶ್ಲೇಷಿಸತೊಡಗಿದೆವು. ಈಗ ನಾವು ಆ ಪುಸ್ತಕದ ಎರಡನೆಯ ಅಧ್ಯಾಯಕ್ಕೆ ತಿರುಗಿಸಿ, ದ್ರೋಹದ ಬಗ್ಗೆ ದೇವರಿಗಿರುವ ದೃಷ್ಟಿಕೋನವು ಇನ್ನೂ ಹೆಚ್ಚಿನ ಗಮನವನ್ನು ಹೇಗೆ ಪಡೆಯುತ್ತದೆಂಬುದನ್ನು ನೋಡೋಣ. ಅಲ್ಲಿ ಮಲಾಕಿಯನು, ದೇವಜನರು ಬಾಬೆಲಿನ ಬಂಧನದೊಳಗಿಂದ ಹಿಂದಿರುಗಿ ಬಂದು ದಶಕಗಳು ಕಳೆದ ಮೇಲೆ ಅವರ ಮಧ್ಯೆ ಇದ್ದ ಪರಿಸ್ಥಿತಿಯ ಮೇಲೆ ಕೇಂದ್ರೀಕರಿಸುತ್ತಾನಾದರೂ, ಆ ಎರಡನೆಯ ಅಧ್ಯಾಯವು ನಮಗೆ ಇಂದು ಸಹ ನಿಜಾರ್ಥವನ್ನು ಹೊಂದಿರುತ್ತದೆ.
ನಿಂದಾರ್ಹ ಯಾಜಕರು
4. ಯೆಹೋವನು ಯಾಜಕರಿಗೆ ಯಾವ ಎಚ್ಚರಿಕೆಯನ್ನು ಕೊಟ್ಟನು?
4 ಎರಡನೆಯ ಅಧ್ಯಾಯವು, ಯೆಹೂದಿ ಯಾಜಕರು ದೇವರ ನೀತಿಯ ಮಾರ್ಗದಿಂದ ಅಗಲಿದ್ದಕ್ಕಾಗಿ ಯೆಹೋವನು ಅವರನ್ನು ಖಂಡಿಸುವುದರಿಂದ ಆರಂಭಗೊಳ್ಳುತ್ತದೆ. ಅವರು ಆತನ ಸಲಹೆಗೆ ಕಿವಿಗೊಟ್ಟು ತಮ್ಮ ಮಾರ್ಗಗಳನ್ನು ತಿದ್ದಿಕೊಳ್ಳದಿರುವಲ್ಲಿ, ಗಂಭೀರವಾದ ಪರಿಣಾಮಗಳು ಖಂಡಿತವಾಗಿಯೂ ಅನುಸರಿಸಿ ಬರುವವು. ಆರಂಭದ ಎರಡು ವಚನಗಳನ್ನು ಗಮನಿಸಿರಿ: “ಯಾಜಕರೇ, ಈ ಅಪ್ಪಣೆಯು ಈಗ ನಿಮಗಾಗಿದೆ—ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ—ನನ್ನ ನಾಮವನ್ನು ಘನಪಡಿಸಬೇಕೆಂಬ ಆಜ್ಞೆಯನ್ನು ನೀವು ಆಲಿಸಿ ಮಂದಟ್ಟುಮಾಡಿಕೊಳ್ಳದಿದ್ದರೆ ನಾನು ನಿಮಗೆ ಶಾಪವನ್ನು ಬರಮಾಡುವೆನು, ನಿಮಗೆ ಆಶೀರ್ವಾದವಾಗಿ ದಯಪಾಲಿಸಿದವುಗಳನ್ನೂ ಶಪಿಸುವೆನು.” ಆ ಯಾಜಕರು ಜನರಿಗೆ ದೇವರ ನಿಯಮಗಳನ್ನು ಕಲಿಸಿ, ತಾವೇ ಪಾಲಿಸುತ್ತಿದ್ದಲ್ಲಿ, ಅವರಿಗೆ ಆಶೀರ್ವಾದಗಳು ದೊರೆಯುತ್ತಿದ್ದವು. ಆದರೆ ಅದನ್ನು ಅಸಡ್ಡೆ ಮಾಡಿದ ಕಾರಣ ಶಾಪವು ಬರುವುದು. ಯಾಜಕರು ಉಚ್ಚರಿಸಿದ ಆಶೀರ್ವಾದಗಳೂ ಶಾಪವಾಗಿ ಪರಿಣಮಿಸುವುವು.
5, 6. (ಎ) ಆ ಯಾಜಕರು ವಿಶೇಷವಾಗಿ ನಿಂದಾರ್ಹರಾಗಿದ್ದದ್ದೇಕೆ? (ಬಿ) ಆ ಯಾಜಕರ ವಿಷಯದಲ್ಲಿ ತನಗಿದ್ದ ತಿರಸ್ಕಾರವನ್ನು ಯೆಹೋವನು ಹೇಗೆ ವ್ಯಕ್ತಪಡಿಸಿದನು?
5 ಆ ಯಾಜಕರು ವಿಶೇಷವಾಗಿ ನಿಂದಾರ್ಹರಾಗಿದ್ದದ್ದು ಏಕೆ? ವಚನ 7ರಲ್ಲಿ ಇದರ ಸ್ಪಷ್ಟವಾದ ಸೂಚನೆಯಿದೆ: “ಜ್ಞಾನಾನುಸಾರವಾಗಿ ಮಾತಾಡುವದು ಯಾಜಕನ ತುಟಿಗಳ ಧರ್ಮವಷ್ಟೆ; ಅವನು ಸೇನಾಧೀಶ್ವರ ಯೆಹೋವನ ದೂತನಾಗಿರುವ ಕಾರಣ ಜನರು ಅವನ ಬಾಯಿಂದ ಧರ್ಮೋಪದೇಶವನ್ನು ಕೇಳಿಕೊಳ್ಳತಕ್ಕದ್ದು.” ಸುಮಾರು ಒಂದು ಸಾವಿರಕ್ಕೂ ಹೆಚ್ಚು ವರುಷಗಳ ಹಿಂದೆ, ಮೋಶೆಯ ಮೂಲಕ ಇಸ್ರಾಯೇಲ್ಯರಿಗೆ ಕೊಡಲ್ಪಟ್ಟಿದ್ದ ನಿಯಮಗಳ ವಿಷಯದಲ್ಲಿ, “ಯೆಹೋವನು ಮೋಶೆಯ ಮೂಲಕ ಇಸ್ರಾಯೇಲ್ಯರಿಗೆ ಮಾಡಿದ ಎಲ್ಲಾ ಆಜ್ಞೆಗಳನ್ನು ಜನರಿಗೆ ಬೋಧಿಸು”ವದು ಯಾಜಕರ ಕರ್ತವ್ಯ ಎಂದು ಹೇಳಲಾಗಿತ್ತು. (ಯಾಜಕಕಾಂಡ 10:11) ಆದರೆ ವಿಷಾದಕರವಾಗಿ, ಸಮಯಾನಂತರ, 2 ಪೂರ್ವಕಾಲವೃತ್ತಾಂತ 15:3ರ ಲೇಖಕನು ವರದಿ ಮಾಡಿದ್ದು: “ಇಸ್ರಾಯೇಲ್ಯರಿಗೆ ಬಹುಕಾಲದ ವರೆಗೆ ನಿಜವಾದ ದೇವರೂ ಬೋಧಿಸುವ ಯಾಜಕರೂ ಧರ್ಮಶಾಸ್ತ್ರವೂ ಇರಲಿಲ್ಲ.”
6 ಮಲಾಕಿಯನ ಕಾಲದಲ್ಲಿ ಅಂದರೆ ಸಾ.ಶ.ಪೂ. ಐದನೆಯ ಶತಮಾನದಲ್ಲಿ, ಯಾಜಕರ ಸ್ಥಿತಿಗತಿ ತದ್ರೀತಿಯದ್ದೇ ಆಗಿತ್ತು. ಅವರು ದೇವರ ನಿಯಮವನ್ನು ಜನರಿಗೆ ಕಲಿಸುವುದರಲ್ಲಿ ತಪ್ಪಿಬಿದ್ದಿದ್ದರು. ಆದಕಾರಣ ಆ ಯಾಜಕರು ಲೆಕ್ಕವನ್ನೊಪ್ಪಿಸಲು ಅರ್ಹರಾಗಿದ್ದರು. ಯೆಹೋವನು ಅವರಿಗೆ ಆಡಿದಂಥ ಬಲವಾದ ಮಾತುಗಳನ್ನು ಗಮನಿಸಿರಿ. ಮಲಾಕಿಯ 2:3 ತಿಳಿಸುವುದು: “ನಿಮ್ಮ ಮುಖದ ಮೇಲೆ ಮಲವನ್ನು, ನಿಮ್ಮ ಹಬ್ಬದ ಪಶುಗಳ ಮಲವನ್ನು ಚೆಲ್ಲಿಬಿಡುವೆನು.” ಅದೆಂತಹ ಖಂಡನೆ! ಯಜ್ಞಪಶುಗಳ ಮಲವನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಸುಟ್ಟುಬಿಡಬೇಕಾಗಿತ್ತು. (ಯಾಜಕಕಾಂಡ 16:27) ಆದರೆ ಅದೇ ಮಲವು ಅವರ ಮುಖಗಳ ಮೇಲೆ ಚೆಲ್ಲಲ್ಪಡುವುದೆಂದು ಯೆಹೋವನು ಹೇಳುವುದರಿಂದ, ಆತನು ಅವರ ಯಜ್ಞಗಳನ್ನೂ ಅವನ್ನು ಅರ್ಪಿಸುವವರನ್ನೂ ತಿರಸ್ಕಾರದಿಂದ ಕಾಣುತ್ತಿದ್ದು, ತಳ್ಳಿಹಾಕಿದನೆಂದೂ ತೋರಿಸುತ್ತದೆ.
7. ಧರ್ಮಶಾಸ್ತ್ರದ ಬೋಧಕರ ಮೇಲೆ ಯೆಹೋವನು ಸಿಟ್ಟುಗೊಂಡದ್ದೇಕೆ?
7 ಮಲಾಕಿಯನ ದಿನಗಳಿಗಿಂತ ಶತಕಗಳ ಹಿಂದೆ, ದೇವದರ್ಶನದ ಗುಡಾರವನ್ನು ಮತ್ತು ಬಳಿಕ ದೇವಾಲಯ ಹಾಗೂ ಪವಿತ್ರ ಸೇವೆಯನ್ನು ನೋಡಿಕೊಳ್ಳುವಂತೆ ಯೆಹೋವನು ಯಾಜಕರನ್ನು ನೇಮಿಸಿದ್ದನು. ಅವರು ಇಸ್ರಾಯೇಲ್ ಜನಾಂಗದ ಬೋಧಕರಾಗಿದ್ದರು. ಅವರ ನೇಮಕದ ಪೂರೈಕೆಯು ಅವರಿಗೂ ಆ ಜನಾಂಗಕ್ಕೂ ಜೀವ ಮತ್ತು ಶಾಂತಿಯ ಅರ್ಥದಲ್ಲಿತ್ತು. (ಅರಣ್ಯಕಾಂಡ 3:5-8) ಆದರೂ ಆ ಲೇವ್ಯರು ಅವರಿಗೆ ಆರಂಭದಲ್ಲಿದ್ದ ಯೆಹೋವನ ಪೂಜ್ಯ ಭಯವನ್ನು ಕಳೆದುಕೊಂಡರು. ಆದಕಾರಣ ಯೆಹೋವನು ಅವರಿಗೆ ಹೇಳಿದ್ದು: “ನೀವೋ ದಾರಿತಪ್ಪಿದ್ದೀರಿ; ನಿಮ್ಮ ಧರ್ಮೋಪದೇಶದಿಂದ ಬಹು ಜನರನ್ನು ಮುಗ್ಗರಿಸುವ ಹಾಗೆ ಮಾಡಿದ್ದೀರಿ; ಲೇವಿಯ ಒಡಂಬಡಿಕೆಯನ್ನು ಭಂಗಪಡಿಸಿದ್ದೀರಿ . . . ನೀವು ನನ್ನ ಮಾರ್ಗಗಳನ್ನು ಅನುಸರಿಸದೆ” ಹೋಗಿದ್ದೀರಿ. (ಮಲಾಕಿಯ 2:8, 9) ಸತ್ಯವನ್ನು ಕಲಿಸಲು ಅವರು ತಪ್ಪಿಹೋದುದರ ಮತ್ತು ಅವರ ಲೋಪವುಳ್ಳ ಮಾದರಿಯ ಮೂಲಕ ಆ ಯಾಜಕರು ಅನೇಕ ಇಸ್ರಾಯೇಲ್ಯರನ್ನು ದಾರಿತಪ್ಪುವಂತೆ ಮಾಡಿದ್ದರಿಂದ ಯೆಹೋವನು ನ್ಯಾಯವಾಗಿಯೇ ಅವರ ಮೇಲೆ ಸಿಟ್ಟುಗೊಂಡನು.
ದೇವರ ಮಟ್ಟಗಳನ್ನು ಅನುಸರಿಸುವುದು
8. ಮನುಷ್ಯರು ದೇವರ ಮಟ್ಟಗಳನ್ನು ಪಾಲಿಸಬೇಕೆಂದು ನಿರೀಕ್ಷಿಸುವುದು ವಿಪರೀತವಾದ ಬೇಡಿಕೆಯಾಗಿದೆಯೊ? ವಿವರಿಸಿ.
8 ಆ ಯಾಜಕರು ಸಹಾನುಭೂತಿಗೆ ಅರ್ಹರೆಂದೂ, ಅವರು ಅಪರಿಪೂರ್ಣ ಮಾನವರಾಗಿದ್ದುದರಿಂದ ದೇವರ ಮಟ್ಟಗಳನ್ನು ಪಾಲಿಸುವುದನ್ನು ಅವರಿಂದ ನಿರೀಕ್ಷಿಸಲಾಗದು ಎಂಬ ಕಾರಣಕ್ಕಾಗಿ ಅವರು ಕ್ಷಮಿಸಲ್ಪಡಬೇಕಿತ್ತೆಂದೂ ನಾವು ಆ ಯಾಜಕರ ವಿಷಯದಲ್ಲಿ ಯೋಚಿಸದಿರೋಣ. ವಾಸ್ತವವೇನಂದರೆ, ಮಾನವರು ದೇವರ ಆಜ್ಞೆಯನ್ನು ಪಾಲಿಸಲು ಶಕ್ತರಾಗಿದ್ದಾರೆ. ಏಕೆಂದರೆ ಅವರಿಗೆ ಅಸಾಧ್ಯವಾಗಿರುವುದನ್ನು ಯೆಹೋವನು ಅವರಿಂದ ನಿರೀಕ್ಷಿಸಲಾರನು. ಅವರಲ್ಲಿ ಕೆಲವು ಮಂದಿ ಯಾಜಕರು ದೇವರ ಮಟ್ಟಗಳನ್ನು ಪಾಲಿಸುತ್ತಿದ್ದಿರಬಹುದು. ಮತ್ತು ತರುವಾಯ ಒಬ್ಬನು, ಅಂದರೆ ಮಹಾನ್ “ಮಹಾಯಾಜಕ”ನಾಗಿದ್ದ ಯೇಸುವು ದೇವರ ಮಟ್ಟಗಳನ್ನು ಪಾಲಿಸಿದನೆಂಬುದರಲ್ಲಿ ಸಂಶಯವಿಲ್ಲ. (ಇಬ್ರಿಯ 3:1) ಅವನ ವಿಷಯದಲ್ಲಿ, “ಅವನ ಬಾಯಲ್ಲಿ ಸತ್ಯಬೋಧನೆಯು ನೆಲೆಸಿತ್ತು, ಅವನ ತುಟಿಗಳಲ್ಲಿ ಅನ್ಯಾಯವೇನೂ ಕಾಣಲಿಲ್ಲ; ಅವನು ಶಾಂತಿಯಿಂದಲೂ ಸದ್ಧರ್ಮದಿಂದಲೂ ನನ್ನೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಾ ಬಹು ಜನರನ್ನು ಪಾಪದ ಕಡೆಯಿಂದ ತಿರುಗಿಸಿದನು” ಎಂದು ನಿಜವಾಗಿಯೂ ಹೇಳಸಾಧ್ಯವಿತ್ತು.—ಮಲಾಕಿಯ 2:6, NW.
9. ನಮ್ಮ ಕಾಲದಲ್ಲಿ ನಂಬಿಗಸ್ತಿಕೆಯಿಂದ ಯಾರು ಸತ್ಯವನ್ನು ಹಂಚಿದ್ದಾರೆ?
9 ಇದಕ್ಕೆ ಹೋಲಿಕೆಯಾಗಿ, ಈಗ ಸುಮಾರು ಒಂದು ಶತಮಾನದಿಂದ, ಸ್ವರ್ಗೀಯ ನಿರೀಕ್ಷೆಯಿರುವ ಕ್ರಿಸ್ತನ ಅಭಿಷಿಕ್ತ ಸಹೋದರರು, “ದೇವರಿಗೆ ಸಮರ್ಪಕವಾದ ಆತ್ಮೀಯಯಜ್ಞಗಳನ್ನು ಸಮರ್ಪಿಸುವದಕ್ಕೆ ಪವಿತ್ರ ಯಾಜಕವರ್ಗದವರಾಗಿ” ಸೇವೆ ಮಾಡುತ್ತಿದ್ದಾರೆ. (1 ಪೇತ್ರ 2:5) ಬೈಬಲ್ ಸತ್ಯಗಳನ್ನು ಇತರರಿಗೆ ಹಂಚುವುದರಲ್ಲಿ ಅವರು ನಾಯಕತ್ವವನ್ನು ವಹಿಸಿದ್ದಾರೆ. ಅವರು ಕಲಿಸುವ ಸತ್ಯವನ್ನು ಕಲಿತಿರುವವರಾದ ನೀವು ಅನುಭವದಿಂದ, ಸತ್ಯದ ನಿಯಮಗಳೇ ಅವರ ಬಾಯಲ್ಲಿವೆಯೆಂದು ಕಂಡುಹಿಡಿದಿರುವುದಿಲ್ಲವೊ? ಧಾರ್ಮಿಕ ಅಸತ್ಯದಿಂದ ತಿರಿಗಿ ಬರುವಂತೆ ಅವರು ಎಷ್ಟು ಜನರಿಗೆ ಸಹಾಯ ಮಾಡಿದ್ದಾರೆಂದರೆ, ಅದರ ಪರಿಣಾಮವಾಗಿ ಈಗ ಲಕ್ಷಾಂತರ ಜನರು ಲೋಕಾದ್ಯಂತವಾಗಿ ಬೈಬಲ್ ಸತ್ಯಗಳನ್ನು ಕಲಿತು ನಿತ್ಯಜೀವದ ನಿರೀಕ್ಷೆಯುಳ್ಳವರಾಗಿದ್ದಾರೆ. ಇವರಿಗೆ ಸರದಿಯಾಗಿ, ಇನ್ನಿತರ ಲಕ್ಷಾಂತರ ಜನರಿಗೆ ದೇವರ ನಿಯಮಗಳನ್ನು ಬೋಧಿಸುವ ಸುಯೋಗವಿದೆ.—ಯೋಹಾನ 10:16; ಪ್ರಕಟನೆ 7:9.
ಹುಷಾರಾಗಿರುವ ಕಾರಣ
10. ನಾವು ಹುಷಾರಾಗಿರಲು ಯಾವ ಕಾರಣವಿದೆ?
10 ಆದರೂ ನಮಗೆ ಹುಷಾರಾಗಿರಲು ಕಾರಣವಿದೆ. ಮಲಾಕಿಯ 2:1-9ರಲ್ಲಿ ಸೂಚಿಸಿರುವ ಪಾಠವನ್ನು ಗ್ರಹಿಸಲು ನಾವು ತಪ್ಪಿಹೋದೇವು. ನಮ್ಮ ತುಟಿಗಳಲ್ಲಿ ಅನೀತಿಯು ಕಂಡುಬರದಂತೆ ನಾವು ವೈಯಕ್ತಿಕವಾಗಿ ಎಚ್ಚರಿಕೆಯಿಂದಿದ್ದೇವೊ? ಉದಾಹರಣೆಗೆ, ನಾವು ಏನು ಹೇಳುತ್ತೇವೊ ಅದನ್ನು ನಮ್ಮ ಕುಟುಂಬದ ಸದಸ್ಯರು ನಿಜವಾಗಿಯೂ ನಂಬಬಲ್ಲರೊ? ಸಭೆಯಲ್ಲಿರುವ ನಮ್ಮ ಆತ್ಮಿಕ ಸೋದರಸೋದರಿಯರೂ ಹಾಗೆ ನಂಬಬಲ್ಲರೊ? ಪಾರಿಭಾಷಿಕವಾಗಿ ನಿಷ್ಕೃಷ್ಟವಾದ ಪದಗಳಾಗಿರುವುದಾದರೂ, ತಪ್ಪಭಿಪ್ರಾಯವನ್ನು ಕೊಡುವಂಥ ಮಾತುಗಳನ್ನು ಉಪಯೋಗಿಸಿ ಮಾತಾಡುವ ಅಭ್ಯಾಸವನ್ನು ಒಬ್ಬನು ಬೆಳೆಸಿಕೊಳ್ಳುವುದು ಸುಲಭ. ಅಥವಾ, ವ್ಯಾಪಾರ ವಹಿವಾಟಿನ ವಿವರಗಳನ್ನು ಒಬ್ಬನು ಅತಿಶಯಿಸಿ ಹೇಳಬಹುದು ಅಥವಾ ಅಡಗಿಸಿಡಬಹುದು. ಆದರೆ ಇದನ್ನು ಯೆಹೋವನು ನೋಡುವುದಿಲ್ಲವೊ? ಮತ್ತು ನಾವಿಂತಹ ಅಭ್ಯಾಸಗಳನ್ನು ಅನುಸರಿಸುವಲ್ಲಿ ಆತನು ನಮ್ಮ ತುಟಿಗಳಿಂದ ಸ್ತೋತ್ರಯಜ್ಞಗಳನ್ನು ಅಂಗೀಕರಿಸಾನೊ?
11. ವಿಶೇಷವಾಗಿ ಯಾರು ಹುಷಾರಾಗಿರುವುದು ಅಗತ್ಯ?
11 ಇಂದು ಸಭೆಗಳಲ್ಲಿ ದೇವರ ವಾಕ್ಯವನ್ನು ಬೋಧಿಸುವ ಸುಯೋಗವುಳ್ಳವರಿಗೆ ಮಲಾಕಿಯ 2:7 ಎಚ್ಚರಿಕೆಯನ್ನು ಕೊಡಬೇಕು. “ಜ್ಞಾನಾನುಸಾರವಾಗಿ ಮಾತಾಡುವದು ಯಾಜಕನ ತುಟಿಗಳ ಧರ್ಮವಷ್ಟೆ; . . . ಜನರು ಅವನ ಬಾಯಿಂದ ಧರ್ಮೋಪದೇಶವನ್ನು ಕೇಳಿಕೊಳ್ಳತಕ್ಕದ್ದು.” ಇಂತಹ ಬೋಧಕರ ಮೇಲೆ ಬರುವ ಜವಾಬ್ದಾರಿ ಭಾರವಾದದ್ದಾಗಿದೆ, ಏಕೆಂದರೆ ಅವರಿಗೆ “ಕಠಿನವಾದ ತೀರ್ಪು ಆಗುವದೆಂದು” ಯಾಕೋಬ 3:1 ಸೂಚಿಸುತ್ತದೆ. ಅವರು ಹುರುಪಿನಿಂದಲೂ ಉತ್ಸಾಹದಿಂದಲೂ ಕಲಿಸಬೇಕಾಗಿರುವುದು ನಿಜವಾದರೂ, ಅವರ ಬೋಧನೆಯು ದೇವರ ಲಿಖಿತ ವಾಕ್ಯದ ಮೇಲೆ ಮತ್ತು ಯೆಹೋವನ ಸಂಸ್ಥೆಯಿಂದ ಬರುವ ಮಾಹಿತಿಯ ಮೇಲೆ ಸ್ಥಿರವಾಗಿ ಆಧಾರಿಸಲ್ಪಟ್ಟದ್ದಾಗಿರಬೇಕು. ಈ ವಿಧದಲ್ಲಿ ಅವರು ‘ಇತರರಿಗೆ ಬೋಧಿಸಲು ಸಾಕಷ್ಟು ಯೋಗ್ಯತೆ ಪಡೆದವರಾಗಿರುವರು.’ ಹೀಗೆ ಅವರಿಗೆ ಈ ಬುದ್ಧಿವಾದವು ಕೊಡಲ್ಪಡುತ್ತದೆ: “ನೀನು ದೇವರ ದೃಷ್ಟಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು.”—2 ತಿಮೊಥೆಯ 2:2, 15.
12. ಬೋಧಿಸುವವರು ಯಾವ ಜಾಗರೂಕತೆಯನ್ನು ವಹಿಸುವುದು ಅಗತ್ಯ?
12 ನಾವು ಜಾಗರೂಕರಾಗಿಲ್ಲದಿರುವಲ್ಲಿ, ನಮ್ಮ ಬೋಧನೆಯಲ್ಲಿ ನಮ್ಮ ಸ್ವಂತ ವಿಷಯಗಳನ್ನು ಅಥವಾ ಅಭಿಪ್ರಾಯಗಳನ್ನು ಹೆಣೆಯುವಂತೆ ಪ್ರೇರಿಸಲ್ಪಡಬಹುದು. ತನ್ನ ಸ್ವಂತ ತೀರ್ಮಾನಗಳು ಯೆಹೋವನ ಸಂಸ್ಥೆಯು ಬೋಧಿಸುವುದಕ್ಕೆ ವ್ಯತಿರಿಕ್ತವಾಗಿರುವುದಾದರೂ ಅವು ಸರಿಯೆಂದು ಭರವಸೆಯಿರುವಂಥ ಒಬ್ಬ ವ್ಯಕ್ತಿಗೆ ಇದು ವಿಶೇಷವಾಗಿ ಹಾನಿಕರವಾಗಿದೆ. ಆದುದರಿಂದ ಕುರಿಗಳನ್ನು ಮುಗ್ಗರಿಸಸಾಧ್ಯವಿರುವ ಸ್ವವಿಚಾರಗಳಿಗಲ್ಲ, ಬದಲಾಗಿ ದೇವರಿಂದ ಬರುವ ಜ್ಞಾನಕ್ಕೆ ಸಭಾಬೋಧಕರು ಅಂಟಿಕೊಳ್ಳಬೇಕೆಂದು ಮಲಾಕಿಯ 2ನೆಯ ಅಧ್ಯಾಯವು ತೋರಿಸುತ್ತದೆ. ಯೇಸು ಹೇಳಿದ್ದು: “ಆದರೆ ನನ್ನಲ್ಲಿ ನಂಬಿಕೆಯಿಡುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಅಡ್ಡಿಯಾದರೆ ಅಂಥವನ ಕೊರಳಿಗೆ ಬೀಸುವ ಕಲ್ಲು ಕಟ್ಟಿ ಅವನನ್ನು ಆಳವಾದ ಸಮುದ್ರದಲ್ಲಿ ಮುಣುಗಿಸಿಬಿಡುವದು ಅವನಿಗೆ ಹಿತವಾಗುವದು.”—ಮತ್ತಾಯ 18:6.
ಅವಿಶ್ವಾಸಿಯನ್ನು ಮದುವೆಮಾಡಿಕೊಳ್ಳುವುದು
13, 14. ಮಲಾಕಿಯನು ಎತ್ತಿತೋರಿಸಿದ ಒಂದು ದ್ರೋಹಮಾರ್ಗ ಯಾವುದಾಗಿತ್ತು?
13 ಹತ್ತನೆಯ ವಚನದಿಂದ ಹಿಡಿದು, ಮಲಾಕಿಯ 2ನೆಯ ಅಧ್ಯಾಯವು ದ್ರೋಹವನ್ನು ಇನ್ನೂ ಹೆಚ್ಚು ನೇರವಾಗಿ ಎತ್ತಿಹೇಳುತ್ತದೆ. ಮಲಾಕಿಯನು ಪರಸ್ಪರ ಸಂಬಂಧವಿರುವ ಎರಡು ವರ್ತನೆಗಳ ಮೇಲೆ ಕೇಂದ್ರೀಕರಿಸುತ್ತ, ಈ “ದ್ರೋಹ” ಎಂಬ ಪದವನ್ನು ಪದೇ ಪದೇ ಉಪಯೋಗಿಸುತ್ತಾನೆ. ಪ್ರಥಮವಾಗಿ, ಮಲಾಕಿಯನು ತನ್ನ ಸಲಹೆಯನ್ನು ಈ ಪ್ರಶ್ನೆಗಳನ್ನು ಹಾಕಿ ಆರಂಭಿಸುವುದನ್ನು ಗಮನಿಸಿರಿ: “ನಮ್ಮೆಲ್ಲರಿಗೂ ಒಬ್ಬನೇ ತಂದೆಯಷ್ಟೆ; ಒಬ್ಬನೇ ದೇವರು ನಮ್ಮನ್ನು ಸೃಷ್ಟಿಸಿದನಲ್ಲಾ; ಹೀಗಿರಲು ನಾವು ಒಬ್ಬರಿಗೊಬ್ಬರು ದ್ರೋಹಮಾಡಿ ದೇವರು ನಮ್ಮ ಪಿತೃಗಳೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಭಂಗಪಡಿಸುವದೇಕೆ?” ಬಳಿಕ, ಇಸ್ರಾಯೇಲ್ಯರ ಈ ದ್ರೋಹಮಾರ್ಗವು “ಯೆಹೋವನ ಪ್ರಿಯ ದೇವಾಲಯವನ್ನು [“ಯೆಹೋವನ ಪಾವಿತ್ರ್ಯವನ್ನು,” NW] ಹೊಲೆಗೆಡಿಸಿದೆ” ಎಂದು 11ನೆಯ ವಚನವು ತಿಳಿಸುತ್ತದೆ. ಅವರು ಅಷ್ಟು ಗಂಭೀರವಾದ ಯಾವ ಪಾಪವನ್ನು ಮಾಡುತ್ತಿದ್ದರು? ಆ ವಚನವು ಕೆಟ್ಟ ಪದ್ಧತಿಗಳಲ್ಲಿ ಒಂದನ್ನು ಗುರುತಿಸುತ್ತದೆ: ಅವರು “ಅನ್ಯದೇವತೆಯ ಮಗಳನ್ನು ಮದುವೆ”ಮಾಡಿಕೊಂಡಿದ್ದಾರೆ.
14 ಬೇರೆ ಮಾತುಗಳಲ್ಲಿ ಹೇಳುವುದಾದರೆ, ಯೆಹೋವನ ಸಮರ್ಪಿತ ಜನಾಂಗದ ಭಾಗವಾಗಿದ್ದ ಕೆಲವು ಜನ ಇಸ್ರಾಯೇಲ್ಯರು ಆತನನ್ನು ಆರಾಧಿಸದವರನ್ನು ಮದುವೆ ಮಾಡಿಕೊಂಡಿದ್ದಾರೆ. ಅದೇಕೆ ಅಷ್ಟು ಗಂಭೀರವಾದ ವಿಷಯವೆಂಬುದನ್ನು ನೋಡುವರೆ ಆ ವಚನದ ಪೂರ್ವಾಪರವು ನಮಗೆ ಸಹಾಯ ಮಾಡುತ್ತದೆ. ಅವರಿಗಿದ್ದದ್ದು ಒಬ್ಬನೇ ತಂದೆಯೆಂದು 10ನೆಯ ವಚನವು ಹೇಳುತ್ತದೆ. ಆ ತಂದೆಯು (ಇಸ್ರಾಯೇಲ್ ಎಂದು ಪುನರ್ನಾಮಕರಣವಾಗಿದ್ದ) ಯಾಕೋಬನಾಗಲಿ, ಅಬ್ರಹಾಮನಾಗಲಿ, ಆದಾಮನೇ ಆಗಲಿ ಆಗಿರಲಿಲ್ಲ. ಮಲಾಕಿಯ 1:6, ಯೆಹೋವನೇ ಆ “ತಂದೆ” ಎಂದು ತೋರಿಸುತ್ತದೆ. ಇಸ್ರಾಯೇಲ್ ಜನಾಂಗ ಆತನೊಂದಿಗೆ ಒಂದು ಸಂಬಂಧದಲ್ಲಿತ್ತು. ಅವರು ಅವರ ಪಿತೃಗಳೊಂದಿಗೆ ಮಾಡಿದ್ದ ಒಡಂಬಡಿಕೆಯಲ್ಲಿ ಒಂದು ಭಾಗವಾಗಿದ್ದರು. ಆ ಒಡಂಬಡಿಕೆಯ ನಿಯಮಗಳಲ್ಲಿ ಒಂದು ಇದಾಗಿತ್ತು: “ಅವರೊಡನೆ ಬೀಗತನಮಾಡಬಾರದು; ಅವರ ಮಕ್ಕಳಿಗೆ ಹೆಣ್ಣುಗಳನ್ನು ಕೊಡಲೂ ಬಾರದು, ಅವರಿಂದ ತರಲೂ ಬಾರದು.”—ಧರ್ಮೋಪದೇಶಕಾಂಡ 7:3.
15. (ಎ) ಅವಿಶ್ವಾಸಿಯನ್ನು ಮದುವೆಮಾಡಿಕೊಳ್ಳುವುದನ್ನು ಕೆಲವರು ಹೇಗೆ ಸಮರ್ಥಿಸಬಹುದು? (ಬಿ) ಮದುವೆಯ ವಿಚಾರದಲ್ಲಿ ಯೆಹೋವನು ತನ್ನ ಅಭಿಪ್ರಾಯವನ್ನು ಹೇಗೆ ವ್ಯಕ್ತಪಡಿಸುತ್ತಾನೆ?
15 ಇಂದು ಕೆಲವರು ಹೀಗೆ ತರ್ಕಿಸಬಹುದು: ‘ನಾನು ಇಷ್ಟಪಡುವ ವ್ಯಕ್ತಿ ಬಹಳ ಒಳ್ಳೆಯವನು/ಳು. ಸಕಾಲದಲ್ಲಿ, ಅವನು (ಅಥವಾ ಅವಳು) ಸತ್ಯವನ್ನು ಸ್ವೀಕರಿಸಬಹುದು.’ ಇಂತಹ ವಿಚಾರವು, “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ಯಾರು ತಿಳಿದಾರು?” ಎಂಬ ಪ್ರೇರಿತ ಎಚ್ಚರಿಕೆಯನ್ನು ದೃಢಪಡಿಸುತ್ತದೆ. (ಯೆರೆಮೀಯ 17:9) ಅವಿಶ್ವಾಸಿಯನ್ನು ಮದುವೆಮಾಡಿಕೊಳ್ಳುವುದರ ವಿಷಯದಲ್ಲಿ ದೇವರ ದೃಷ್ಟಿಕೋನವನ್ನು ಮಲಾಕಿಯ 2:12ರಲ್ಲಿ ವ್ಯಕ್ತಪಡಿಸಲಾಗಿದೆ: “ಇಂಥ ಕೆಲಸವನ್ನು ನಡಿಸಿದ . . . ಎಲ್ಲರನ್ನೂ ಯೆಹೋವನು . . . ನಿರ್ಮೂಲಮಾಡುವನು.” ಹೀಗಿರುವುದರಿಂದ, ಕ್ರೈಸ್ತರು “ಕರ್ತನಲ್ಲಿ” ಮದುವೆಯಾಗುವಂತೆ ಪ್ರೋತ್ಸಾಹಿಸಲ್ಪಟ್ಟಿದ್ದಾರೆ. (1 ಕೊರಿಂಥ 7:39, NW) ಕ್ರೈಸ್ತ ವ್ಯವಸ್ಥೆಯಲ್ಲಿ, ಅವಿಶ್ವಾಸಿಯನ್ನು ಮದುವೆಯಾಗಿರುವುದಕ್ಕಾಗಿ ವಿಶ್ವಾಸಿಯನ್ನು “ನಿರ್ಮೂಲ”ಮಾಡುವ ಸಂಗತಿ ಇಲ್ಲವಾದರೂ, ಒಂದುವೇಳೆ ಆ ಅವಿಶ್ವಾಸಿಯು ಅವನ ಅಥವಾ ಅವಳ ಅವಿಶ್ವಾಸದಲ್ಲಿಯೇ ಉಳಿಯುವಲ್ಲಿ, ದೇವರು ಶೀಘ್ರದಲ್ಲಿ ಈ ವ್ಯವಸ್ಥೆಗೆ ಅಂತ್ಯವನ್ನು ತರುವಾಗ ಆ ಅವಿಶ್ವಾಸಿಗೆ ಏನಾಗುವುದು?—ಕೀರ್ತನೆ 37:37, 38.
ಒಬ್ಬನ ವಿವಾಹಜೊತೆಯನ್ನು ಪೀಡಿಸುವುದು
16, 17. ಕೆಲವರು ಆಯ್ದುಕೊಂಡ ದ್ರೋಹಮಾರ್ಗ ಏನಾಗಿತ್ತು?
16 ಆ ಬಳಿಕ ಮಲಾಕಿಯನು ಎರಡನೆಯ ದ್ರೋಹದ ಬಗ್ಗೆ ಚಿಂತಿಸುತ್ತಾನೆ: ವಿವಾಹಜೊತೆಯನ್ನು ಪೀಡಿಸುವುದು, ವಿಶೇಷವಾಗಿ ನ್ಯಾಯವಲ್ಲದ ಕ್ಷುಲ್ಲಕ ಕಾರಣಗಳಿಗೆ ವಿಚ್ಛೇದನೆ ನೀಡುವ ಮೂಲಕ. ಎರಡನೆಯ ಅಧ್ಯಾಯದ 14ನೆಯ ವಚನವು ಹೇಳುವುದು: “ನಿನಗೂ ನಿನ್ನ ಯೌವನದ ಹೆಂಡತಿಗೂ ಆದ ಒಡಂಬಡಿಕೆಗೆ ಯೆಹೋವನೇ ಸಾಕ್ಷಿಯಾಗಿದ್ದಾನಲ್ಲಾ. ನಿನ್ನ ಸಹಚಾರಿಣಿಯೂ ನಿನ್ನ ಒಡಂಬಡಿಕೆಯ ಪತ್ನಿಯೂ ಆದ ಆಕೆಗೆ ದ್ರೋಹಮಾಡಿದ್ದೀ.” ತಮ್ಮ ಪತ್ನಿಯರಿಗೆ ಈ ರೀತಿಯಲ್ಲಿ ದ್ರೋಹ ಬಗೆದು ಯೆಹೂದಿ ಗಂಡಂದಿರು ಯೆಹೋವನ ಯಜ್ಞವೇದಿಯು ‘ಕಣ್ಣೀರಿನಿಂದ ತುಂಬುವಂತೆ’ ಮಾಡಿದರು. ಆ ಪುರುಷರು ನ್ಯಾಯವಿರುದ್ಧವಾದ ಆಧಾರಗಳ ಮೇರೆಗೆ ವಿವಾಹ ವಿಚ್ಛೇದ ಪಡೆಯುತ್ತಿದ್ದರು. ಅವರು ತಮ್ಮ ಯೌವನಕಾಲದ ಪತ್ನಿಯರನ್ನು, ಪ್ರಾಯಶಃ ಯುವತಿಯರಾದ ಅಥವಾ ವಿಧರ್ಮಿಗಳಾದ ಸ್ತ್ರೀಯರನ್ನು ಮದುವೆಯಾಗುವ ಉದ್ದೇಶದಿಂದ ಬಿಟ್ಟುಬಿಡುತ್ತಿದ್ದರು. ಮತ್ತು ಆ ಭ್ರಷ್ಟ ಯಾಜಕರು ಅದಕ್ಕೆ ಅನುಮತಿ ಕೊಡುತ್ತಿದ್ದರು! ಆದರೂ, ಮಲಾಕಿಯ 2:16 ಹೇಳುವುದು: “ನಾನು ಪತ್ನೀತ್ಯಾಗವನ್ನೂ [“ವಿವಾಹ ವಿಚ್ಛೇದವನ್ನೂ,” NW] ಹೆಂಡತಿಗೆ ಅನ್ಯಾಯ ಮಾಡುವವನನ್ನೂ ಹಗೆಮಾಡುತ್ತೇನೆ.” ಸಮಯಾನಂತರ, ವಿವಾಹ ವಿಚ್ಛೇದಕ್ಕಿರುವ ಏಕಮಾತ್ರ ಕಾರಣವು ಅನೈತಿಕತೆಯೆಂದೂ, ಅದು ಮಾತ್ರ ನಿರಪರಾಧಿ ಜೊತೆಯು ಪುನರ್ವಿವಾಹ ಮಾಡಿಕೊಳ್ಳುವಂತೆ ಅನುಮತಿಸುತ್ತದೆಂದೂ ಯೇಸು ತೋರಿಸಿದನು.—ಮತ್ತಾಯ 19:9.
17 ಮಲಾಕಿಯನ ಮಾತುಗಳನ್ನು ಚಿಂತಿಸಿ ನೋಡಿ. ಅವು ಹೃದಯಗಳನ್ನೂ ದಯಾಭಾವಗಳನ್ನೂ ಹೇಗೆ ಸ್ಪರ್ಶಿಸುತ್ತವೆಂಬುದನ್ನು ನೋಡಿರಿ. ಅವನು “ನಿನ್ನ ಸಹಚಾರಿಣಿಯೂ ನಿನ್ನ ಒಡಂಬಡಿಕೆಯ ಪತ್ನಿಯೂ” ಆಗಿರುವವಳ ವಿಷಯದಲ್ಲಿ ಮಾತಾಡುತ್ತಾನೆ. ಇದರಲ್ಲಿ ಸೇರಿರುವ ಪ್ರತಿಯೊಬ್ಬ ಪುರುಷನು ಜೊತೆ ಆರಾಧಕಳಾದ ಇಸ್ರಾಯೇಲಿನ ಸ್ತ್ರೀಯನ್ನು, ಪ್ರಿಯ ಸಂಗಾತಿಯಾಗಿ, ಜೀವನ ಸಹಭಾಗಿಯಾಗಿ ಆರಿಸಿಕೊಂಡಿದ್ದನು. ಆ ವಿವಾಹವು ಅವನು ಅಥವಾ ಅವಳು ಯುವ ವ್ಯಕ್ತಿಯಾಗಿದ್ದಾಗ ನಡೆದಿರಬಹುದಾಗಿದ್ದರೂ, ಸಂದುಹೋದ ಕಾಲವೂ ಬಂದಿರುವ ವೃದ್ಧಾಪ್ಯವೂ ಅವರು ಮಾಡಿದ್ದ ಒಡಂಬಡಿಕೆಯನ್ನು ಅಂದರೆ ಅವರ ವಿವಾಹ ಕರಾರನ್ನು ರದ್ದುಮಾಡಿರುವುದಿಲ್ಲ.
18. ದ್ರೋಹದ ವಿಷಯದಲ್ಲಿ ಕೊಡಲ್ಪಟ್ಟ ಮಲಾಕಿಯನ ಸಲಹೆಯು ಇಂದು ಯಾವ ವಿಧಗಳಲ್ಲಿ ಅನ್ವಯಿಸುತ್ತದೆ?
18 ಆ ವಿವಾದಾಂಶಗಳ ಬಗ್ಗೆ ಇರುವ ಸಲಹೆಯು ಇಂದು ಸಹ ಅಷ್ಟೇ ಪ್ರಬಲವಾಗಿ ಅನ್ವಯಿಸುತ್ತದೆ. ಕೆಲವರು ಕರ್ತನಲ್ಲಿ ಮಾತ್ರ ಮದುವೆಯಾಗಬೇಕೆಂಬ ದೇವರ ನಿರ್ದೇಶನವನ್ನು ಅಲಕ್ಷಿಸುತ್ತಿರುವುದು ವಿಷಾದಕರ. ಮತ್ತು ಕೆಲವರು ತಮ್ಮ ವಿವಾಹವನ್ನು ಬಲವಾಗಿರಿಸಲು ಕೆಲಸ ಮಾಡುತ್ತ ಮುಂದುವರಿಯದಿರುವುದೂ ವಿಷಾದಕರ. ಇದಕ್ಕೆ ಬದಲಾಗಿ, ಅವರು ಯಾವುದೊ ನೆವವನ್ನು ಕೊಟ್ಟು, ದೇವರು ದ್ವೇಷಿಸುವ ಮಾರ್ಗವನ್ನು ಅನುಸರಿಸಿ, ಬೇರೊಬ್ಬನನ್ನೊ ಬೇರೊಬ್ಬಳನ್ನೊ ಮದುವೆಯಾಗಲು ಅಶಾಸ್ತ್ರೀಯವಾದ ವಿವಾಹ ವಿಚ್ಛೇದನೆಯನ್ನು ಪಡೆಯುತ್ತಾರೆ. ಹೀಗೆ ಮಾಡುವ ಮೂಲಕ ‘ಯೆಹೋವನನ್ನು ಬೇಸರಗೊಳಿಸಿದ್ದಾರೆ.’ ಹಿಂದೆ, ಮಲಾಕಿಯನ ದಿನಗಳಲ್ಲಿ ದೈವಿಕ ಸಲಹೆಯನ್ನು ಹಾಗೆ ಅಸಡ್ಡೆಮಾಡಿದವರು, “ನ್ಯಾಯತೀರಿಸುವ ದೇವರು ಎಲ್ಲಿಯೋ?” ಎಂದು ಕೇಳುವಷ್ಟೂ ಸೊಕ್ಕುಳ್ಳವರಾಗಿದ್ದರು. ಎಂತಹ ವ್ಯತಿರಿಕ್ತವಾದ ಯೋಚನೆಯಿದು! ಅಂತಹ ಬೋನಿನೊಳಗೆ ನಾವಾದರೊ ಬೀಳದಿರೋಣ.—ಮಲಾಕಿಯ 2:17.
19. ಪತಿಪತ್ನಿಯರು ದೇವರಾತ್ಮವನ್ನು ಹೇಗೆ ಪಡೆಯಬಲ್ಲರು?
19 ಪ್ರಶಂಸಾತ್ಮಕವಾಗಿ ಹೇಳುವುದಾದರೆ, ಕೆಲವು ಮಂದಿ ಗಂಡಂದಿರು ತಮ್ಮ ಪತ್ನಿಯರಿಗೆ ದ್ರೋಹ ಬಗೆಯುತ್ತಿರಲಿಲ್ಲವೆಂದು ಮಲಾಕಿಯನು ತೋರಿಸುತ್ತಾನೆ. ಅವರಲ್ಲಿ ‘ದೇವರ ಪವಿತ್ರಾತ್ಮದ ಅಂಶ’ ಇನ್ನೂ ಇತ್ತು. (ವಚನ 15, NW) ಸಂತೋಷಕರವಾಗಿ ಇಂದು, ‘ತಮ್ಮ ಹೆಂಡತಿಯರಿಗೆ ಮಾನ ಸಲ್ಲಿಸುವ’ ಅನೇಕ ಮಂದಿ ಪುರುಷರು ಯೆಹೋವನ ಸಂಸ್ಥೆಯಲ್ಲಿದ್ದಾರೆ. (1 ಪೇತ್ರ 3:7) ಅವರು ತಮ್ಮ ಪತ್ನಿಯರ ಮೇಲೆ ಶಾರೀರಿಕ ಅಥವಾ ಮೌಖಿಕ ದೌರ್ಜನ್ಯವನ್ನು ನಡೆಸುವುದಿಲ್ಲ. ಅವರು ವಿಕೃತ ಕಾಮಕೇಳಿಗಳಲ್ಲಿ ಭಾಗವಹಿಸಬೇಕೆಂದು ಹೆಂಡತಿಯರನ್ನು ಒತ್ತಾಯಪಡಿಸುವುದೂ ಇಲ್ಲ, ಇತರ ಸ್ತ್ರೀಯರೊಂದಿಗೆ ಪ್ರಣಯಚೇಷ್ಟೆಯನ್ನಾಡಿಯೊ ಅಶ್ಲೀಲ ಚಿತ್ರ ಸಾಹಿತ್ಯಗಳನ್ನು ನೋಡಿಯೊ ತಮ್ಮ ಹೆಂಡತಿಯರನ್ನು ಅಗೌರವಕ್ಕೊಳಪಡಿಸುವುದೂ ಇಲ್ಲ. ದೇವರಿಗೂ ಆತನ ನಿಯಮಗಳಿಗೂ ನಿಷ್ಠರಾಗಿರುವ ನಂಬಿಗಸ್ತ ಪತ್ನಿಯರ ಒಂದು ಮಹಾ ಸಮೂಹದಲ್ಲಿಯೂ ಯೆಹೋವನ ಸಂಸ್ಥೆ ಸಂತೋಷಪಡುತ್ತದೆ. ಇಂತಹ ಸ್ತ್ರೀಪುರುಷರೆಲ್ಲರಿಗೂ ಯೆಹೋವನು ಯಾವುದನ್ನು ದ್ವೇಷಿಸುತ್ತಾನೆಂದು ತಿಳಿದಿರುವುದರಿಂದ ಅವರು ಹಾಗೆಯೇ ಯೋಚಿಸಿ ವರ್ತಿಸುತ್ತಾರೆ. ನೀವೂ ಅವರಂತೆಯೇ ‘ದೇವರಿಗೆ ವಿಧೇಯರಾಗಿ’ ಮುಂದುವರಿಯಿರಿ ಮತ್ತು ಆತನ ಪವಿತ್ರಾತ್ಮದಿಂದ ಆಶೀರ್ವಾದವನ್ನು ಪಡೆಯುವವರಾಗಿರ್ರಿ.—ಅ. ಕೃತ್ಯಗಳು 5:29.
20. ಮಾನವಕುಲಕ್ಕೆ ಯಾವ ಸಮಯವು ಸಮೀಪಿಸುತ್ತಿದೆ?
20 ಯೆಹೋವನು ಬೇಗನೇ ಈ ಇಡೀ ಲೋಕವನ್ನೇ ತೀರ್ಪಿಗೊಳಪಡಿಸುವನು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವಿಶ್ವಾಸ ಮತ್ತು ಕ್ರಿಯೆಗಳಿಗಾಗಿ ಆತನಿಗೆ ಲೆಕ್ಕವೊಪ್ಪಿಸಬೇಕಾಗಿದೆ. “ಹೀಗಿರಲಾಗಿ ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು.” (ರೋಮಾಪುರ 14:12) ಆದಕಾರಣ ಈ ಹಂತದಲ್ಲಿ ಕುತೂಹಲ ಕೆರಳಿಸುವ ಈ ಪ್ರಶ್ನೆ ನಮ್ಮ ಮುಂದಿದೆ: ಯೆಹೋವನ ದಿನದಲ್ಲಿ ಯಾರು ಬದುಕಿ ಉಳಿಯುವರು? ಈ ಲೇಖನಮಾಲೆಯ ಮೂರನೆಯ ಮತ್ತು ಕೊನೆಯ ಲೇಖನವು ಈ ವಿಷಯವನ್ನು ಚರ್ಚಿಸುವುದು.
ನೀವು ವಿವರಿಸಬಲ್ಲಿರೋ?
• ಯೆಹೋವನು ಇಸ್ರಾಯೇಲಿನ ಯಾಜಕರನ್ನು ಯಾವ ಮೂಲ ಕಾರಣಕ್ಕಾಗಿ ಖಂಡಿಸಿದನು?
• ದೇವರ ಮಟ್ಟಗಳನ್ನು ಪಾಲಿಸುವುದು ಮಾನವರಿಗೆ ಅಸಾಧ್ಯವಲ್ಲವೇಕೆ?
• ನಮ್ಮ ಬೋಧನೆಗಳಲ್ಲಿ ನಾವಿಂದು ಜಾಗರೂಕತೆಯನ್ನು ಏಕೆ ವಹಿಸಬೇಕು?
• ಯೆಹೋವನು ವಿಶೇಷವಾಗಿ ಯಾವ ಎರಡು ಪದ್ಧತಿಗಳನ್ನು ಖಂಡಿಸಿದನು?
[ಪುಟ 15ರಲ್ಲಿರುವ ಚಿತ್ರ]
ಮಲಾಕಿಯನ ಕಾಲದಲ್ಲಿ ಯೆಹೋವನ ಮಾರ್ಗಗಳನ್ನು ಪಾಲಿಸದೆ ಇದ್ದದಕ್ಕಾಗಿ ಯಾಜಕರು ಖಂಡಿಸಲ್ಪಟ್ಟರು
[ಪುಟ 16ರಲ್ಲಿರುವ ಚಿತ್ರ]
ನಾವು ನಮ್ಮ ಸ್ವಂತ ಅಭಿಪ್ರಾಯಗಳನ್ನಲ್ಲ, ಬದಲಾಗಿ ಯೆಹೋವನ ಮಾರ್ಗಗಳನ್ನು ಬೋಧಿಸುವ ವಿಷಯದಲ್ಲಿ ಜಾಗರೂಕತೆಯಿಂದಿರಬೇಕು
[ಪುಟ 18ರಲ್ಲಿರುವ ಚಿತ್ರಗಳು]
ಕ್ಷುಲ್ಲಕ ಕಾರಣಗಳಿಗಾಗಿ ತಮ್ಮ ಪತ್ನಿಯರನ್ನು ವಿಚ್ಛೇದಮಾಡಿ ವಿಧರ್ಮಿ ಸ್ತ್ರೀಯರನ್ನು ಮದುವೆಮಾಡಿಕೊಂಡ ಇಸ್ರಾಯೇಲ್ಯರನ್ನು ಯೆಹೋವನು ಖಂಡಿಸಿದನು
[ಪುಟ 18ರಲ್ಲಿರುವ ಚಿತ್ರ]
ಇಂದು ಕ್ರೈಸ್ತರು ತಮ್ಮ ವಿವಾಹದ ಒಡಂಬಡಿಕೆಯನ್ನು ಗೌರವಿಸುತ್ತಾರೆ