ಯೆಹೋವನ ಭಯ ಹುಟ್ಟಿಸುವ ದಿನವು ಹತ್ತಿರವಿದೆ
“ಭಯಭಕ್ತಿಯಿಂದ ತನ್ನ ನಾಮಸ್ಮರಣೆಮಾಡುವವರ ಹೆಸರುಗಳನ್ನು ತನ್ನ ಮುಂದೆ ಜ್ಞಾಪಕದ ಪುಸ್ತಕದಲ್ಲಿ ಬರೆಯಿಸಿದನು.”—ಮಲಾಕಿಯ 3:16.
1, 2. ಯಾವ ಭಯ ಹುಟ್ಟಿಸುವ ದಿನದ ಕುರಿತು ಮಲಾಕಿಯನು ಮುನ್ಎಚ್ಚರಿಸುತ್ತಾನೆ?
ಭಯೋತ್ಪಾದಕವಾಗಿತದ್ತು! 1945, ಆಗಸ್ಟ್ 6 ರಂದು, ದಿನವು ಉದಯಿಸಿದಂತೆ, ಕ್ಷಣಮಾತ್ರದಲ್ಲಿಯೇ ಒಂದು ಮಹಾ ನಗರವು ನೆಲಸಮ ಮಾಡಲ್ಪಟ್ಟಿತು. ಮಡಿದವರು ಸುಮಾರು 80,000 ಜನರು! ವಿಪರೀತವಾಗಿ ಗಾಯಗೊಂಡವರು ಹತ್ತಾರು ಸಾವಿರ ಜನರು! ಅತ್ಯುಗ್ರವಾದ ಬೆಂಕಿ! ನ್ಯೂಕ್ಲಿಯರ್ ಬಾಂಬು ಈ ಮಹಾ ನಾಶನವನ್ನುಂಟುಮಾಡಿತ್ತು. ಆ ವಿನಾಶದ ಸಮಯದಲ್ಲಿ ಯೆಹೋವನ ಸಾಕ್ಷಿಗಳ ಸ್ಥಿತಿ ಏನಾಗಿತ್ತು? ಹಿರೊಶೀಮದಲ್ಲಿ, ತನ್ನ ಕ್ರೈಸ್ತ ಸಮಗ್ರತೆಯ ನಿಮಿತ್ತ ಸೆರೆಮನೆಯ ರಕ್ಷಣಾತ್ಮಕ ಗೊಡೆಗಳೊಳಗೆ ಬಂಧಿತನಾಗಿದ್ದ ಏಕೈಕ ಸಾಕ್ಷಿ ಅಲ್ಲಿದ್ದನು. ಸೆರೆಮನೆಯು ಚೂರುಗಳಾಗಿ ಕುಸಿದು ಬಿದ್ದಿತು, ಆದರೆ ನಮ್ಮ ಸಹೋದರನು ಗಾಯಗೊಳ್ಳಲಿಲ್ಲ. ಅವನು ಹೇಳಿದಂತೆ, ಅವನು ಪರಮಾಣು ಬಾಂಬೆಸೆಯಲ್ಪಟ್ಟವನಾಗಿ ಸೆರೆಮನೆಯಿಂದ ಹೊರಬಂದನು. ಇದು ಬಹುಶಃ ಬಾಂಬು ಸಾಧಿಸಿದಂತಹ ಏಕೈಕ ಒಳ್ಳೆಯ ವಿಷಯವಾಗಿತ್ತು.
2 ಆ ಬಾಂಬ್ ಸಿಡಿತವು ಭಯಂಕರವಾಗಿದ್ದರೂ, ತುಸು ಮುಂದೆ ಇರುವ “ಯೆಹೋವನ . . . ಭಯಂಕರವಾದ ಮಹಾದಿನ”ಕ್ಕೆ ಹೋಲಿಸುವಾಗ, ಅದು ನಿಕೃಷ್ಟತೆಯಲ್ಲಿ ಬಾಡಿಹೋಗುತ್ತದೆ. (ಮಲಾಕಿಯ 4:5) ಹೌದು, ಗತಕಾಲದಲ್ಲಿ ಭಯ ಹುಟ್ಟಿಸಿದ ದಿನಗಳು ಇದ್ದವು, ಆದರೆ ಯೆಹೋವನ ಈ ದಿನವು ಅವೆಲ್ಲವುಗಳನ್ನು ಮೀರಿಸುವುದು.—ಮಾರ್ಕ 13:19.
3. ಜಲಪ್ರಳಯಕ್ಕೆ ನಡೆಸುವ ಮಾರ್ಗದಲ್ಲಿ “ಭೂನಿವಾಸಿಗಳೆಲ್ಲರ” ಮತ್ತು ನೋಹನ ಕುಟುಂಬದವರ ನಡುವೆ ಯಾವ ವ್ಯತ್ಯಾಸವನ್ನು ಗಮನಿಸಬೇಕಾಗಿದೆ?
3 ನೋಹನ ದಿನದಲ್ಲಿ “ಭೂನಿವಾಸಿಗಳೆಲ್ಲರೂ ತಮ್ಮ ನಡವಳಿಕೆಯನ್ನು ಕೆಡಿಸಿಕೊಂಡಿದ್ದರು,” ಮತ್ತು ದೇವರು ಘೋಷಿಸಿದ್ದು: “ಭೂಲೋಕವು ಅವರ ಅನ್ಯಾಯದಿಂದ ತುಂಬಿ ಅದೆ; ನಾನು ಅವರನ್ನೂ ಭೂಮಿಯ ಮೇಲಿರುವದೆಲ್ಲವನ್ನೂ ಅಳಿಸಿಬಿಡುತ್ತೇನೆ.” (ಆದಿಕಾಂಡ 6:12, 13) ಮತ್ತಾಯ 24:39 ರಲ್ಲಿ ದಾಖಲಿಸಲ್ಪಟ್ಟಂತೆ, ಜನರು “ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಗುವ ತನಕ ಏನೂ ತಿಳಿಯದೆ ಇದರ್ದಲ್ಲಾ” ಎಂದು ಯೇಸು ಹೇಳಿದನು. ಆದರೆ “ಸುನೀತಿಯನ್ನು ಸಾರುವವನಾಗಿದ್ದ” ನಂಬಿಗಸ್ತ ನೋಹನು, ದೇವ ಭಯವುಳ್ಳ ತನ್ನ ಕುಟುಂಬದೊಂದಿಗೆ ಆ ಜಲಪ್ರಳಯವನ್ನು ಪಾರಾದನು.—2 ಪೇತ್ರ 2:5.
4. ಸೊದೋಮ್ ಮತ್ತು ಗೊಮೋರ ಪಟ್ಟಣಗಳಿಂದ ಯಾವ ಎಚ್ಚರಿಕೆಯ ಉದಾಹರಣೆಯು ಒದಗಿಸಲ್ಪಡುತ್ತದೆ?
4 ಯೂದ 7 ವರದಿಸುವುದು, “ಸೊದೋಮ ಗೊಮೋರ ಪಟ್ಟಣಗಳವರೂ ಅವುಗಳ ಸುತ್ತುಮುತ್ತಣ ಪಟ್ಟಣಗಳವರೂ . . . ತಮ್ಮನ್ನು ಜಾರತ್ವಕ್ಕೆ ಒಪ್ಪಿಸಿಬಿಟ್ಟು ಸ್ವಭಾವವಿರುದ್ಧವಾದ ಭೋಗವನ್ನನುಸರಿಸಿದರ್ದಿಂದ ಅವರು ನಿತ್ಯವಾದ ಅಗ್ನಿಯಲ್ಲಿ ದಂಡನೆಯನ್ನು ಅನುಭವಿಸುತ್ತಾ [ದುರ್ಮಾರ್ಗಿಗಳಿಗೆ ಆಗುವ ದುರ್ಗತಿಗೆ] ಉದಾಹರಣೆಯಾಗಿ ಇಡಲ್ಪಟ್ಟಿದ್ದಾರೆ.” ದೇವಭಯವಿಲ್ಲದ ಆ ಜನರು ತಮ್ಮ ಅಸಹ್ಯಕರವಾಗಿದ್ದ ಕೊಳಕು ಜೀವನ ಶೈಲಿಯ ಕಾರಣ ಅಳಿದು ಹೋದರು. ಈ ಆಧುನಿಕ ಲೋಕದ ಕಾಮಾಭಿಮುಖವಾದ ಸಮುದಾಯಗಳು ಎಚ್ಚರದಿಂದಿರಲಿ! ಹಾಗಿದ್ದರೂ, ಆ ವಿನಾಶದ ಸಮಯದಲ್ಲಿ ದೇವ ಭಯವುಳ್ಳ ಲೋಟನು ಮತ್ತು ಅವನ ಹೆಣ್ಣುಮಕ್ಕಳು ಜೀವಂತ ಸಂರಕ್ಷಿಸಲ್ಪಟ್ಟರು ಎಂಬುದನ್ನು ಗಮನಿಸಿರಿ. ಅಂತೆಯೇ ವೇಗವಾಗಿ ಸಮೀಪಿಸುತ್ತಿರುವ ಮಹಾ ಸಂಕಟದ ಸಮಯದಲ್ಲಿ ಯೆಹೋವನ ಆರಾಧಕರು ರಕ್ಷಿಸಲ್ಪಡುವರು.—2 ಪೇತ್ರ 2:6-9.
5. ಯೆರೂಸಲೇಮಿನ ಮೇಲೆ ವಿಧಿಸಲಾದ ನ್ಯಾಯತೀರ್ಪುಗಳಿಂದ ನಾವು ಏನನ್ನು ಕಲಿಯಬಲ್ಲೆವು?
5 ಅನಂತರ, ಒಂದು ಸಮಯದಲ್ಲಿ “ಭೂಲೋಕದಲೆಲ್ಲಾ ಕಂಗೊಳಿಸುತ್ತಿರುವ” ಮಹಿಮಾಭರಿತ ಪಟ್ಟಣವಾಗಿದ್ದ ಯೆರೂಸಲೇಮನ್ನು ಅಳಿಸಲು ಯೆಹೋವನು ದಾಳಿಮಾಡುವ ಸೇನೆಗಳನ್ನು ಬಳಸಿದಾಗ, ಒದಗಿಸಲ್ಪಟ್ಟ ಎಚ್ಚರಿಕೆಯ ಉದಾಹರಣೆಗಳನ್ನು ಪರಿಗಣಿಸಿರಿ. (ಕೀರ್ತನೆ 48:2) ದೇವರ ಜನರೆಂದು ಹೇಳಿಕೊಳ್ಳುವವರು ಸತ್ಯಾರಾಧನೆಯನ್ನು ತೊರೆದ ಕಾರಣ, ಈ ದುಃಖಕರ ಘಟನೆಗಳು, ಮೊದಲು ಸಾ.ಶ.ಪೂ. 607 ರಲ್ಲಿ ಮತ್ತು ಪುನಃ ಸಾ.ಶ. 70 ರಲ್ಲಿ ಸಂಭವಿಸಿದವು. ಸಂತಸಕರವಾಗಿ, ಯೆಹೋವನ ನಿಷ್ಠಾವಂತ ಸೇವಕರು ಬದುಕಿ ಉಳಿದರು. (ಕೆಳಗೆ ಚಿತ್ರಿಸಿದ) ಸಾ.ಶ. 70ರ ವಿಪತ್ತು, “ಅಂಥ ಸಂಕಟವು ದೇವರು ಮಾಡಿದ ಸೃಷ್ಟಿಮೊದಲುಗೊಂಡು ಇಂದಿನ ವರೆಗೂ ಆಗಲಿಲ್ಲ,” ಎಂಬುದಾಗಿ ವರ್ಣಿಸಲ್ಪಟ್ಟಿದೆ. ಅದು ನಿರ್ಣಾಯಕವಾಗಿ ಧರ್ಮಭ್ರಷ್ಟ ಯೆಹೂದಿ ವಿಷಯಗಳ ವ್ಯವಸ್ಥೆಯನ್ನು ತೆಗೆದುಹಾಕಿತು, ಮತ್ತು ಖಂಡಿತವಾಗಿಯೂ ಆ ಸಂಬಂಧದಲ್ಲಿ ಅದು “ಇನ್ನು ಮೇಲೆ ಆಗುವದಿಲ್ಲ.” (ಮಾರ್ಕ 13:19) ಆದರೆ ದೈವಿಕ ನ್ಯಾಯತೀರ್ಪಿನ ಈ ನಿರ್ವಹಣೆಯೂ, ಇಡೀ ಲೋಕದ ವಿಷಯಗಳ ವ್ಯವಸ್ಥೆಯನ್ನು ಈಗ ಬೆದರಿಸುವ ‘ಮಹಾ ಸಂಕಟದ’ ಕೇವಲ ಒಂದು ಛಾಯೆಯಾಗಿತ್ತು.—ಪ್ರಕಟನೆ 7:14.
6. ಆಪತ್ತುಗಳನ್ನು ಯೆಹೋವನು ಏಕೆ ಅನುಮತಿಸುತ್ತಾನೆ?
6 ದೇವರು ಇಷ್ಟೊಂದು ಜೀವಗಳ ನಷ್ಟದೊಂದಿಗೆ ಭಯಂಕರವಾದ ಆಪತ್ತುಗಳನ್ನು ಯಾಕೆ ಅನುಮತಿಸಿದನು? ನೋಹನ, ಸೊದೋಮ್ ಮತ್ತು ಗೊಮೋರದ, ಮತ್ತು ಯೆರೂಸಲೇಮಿನ ವಿದ್ಯಮಾನಗಳಲ್ಲಿ, ಯೆಹೋವನು ಭೂಮಿಯ ಮೇಲೆ ತಮ್ಮ ಮಾರ್ಗವನ್ನು ಕೆಡಿಸಿಕೊಂಡಿದ್ದ, ಅಕ್ಷರಾರ್ಥಕವಾದ ಮಾಲಿನ್ಯ ಮತ್ತು ನೈತಿಕ ಅವನತಿಯಿಂದ ಸುಂದರವಾದ ಈ ಗ್ರಹವನ್ನು ಕಳಂಕಿಸಿದ್ದ, ಮತ್ತು ಸತ್ಯಾರಾಧನೆಯಿಂದ ಮತಭ್ರಷ್ಟರಾಗಿದ್ದ, ಅಥವಾ ಅದನ್ನು ತಿರಸ್ಕರಿಸಿದ್ದ ಜನರ ಮೇಲೆ ನ್ಯಾಯತೀರ್ಪನ್ನು ವಿಧಿಸುತ್ತಿದ್ದನು. ಇಂದು ನಾವು ಇಡೀ ಲೋಕವನ್ನು ಆವರಿಸಲಿರುವ ನ್ಯಾಯತೀರ್ಪಿನ ಸರ್ವವ್ಯಾಪಕ ನಿರ್ವಹಣೆಯ ಅಂಚಿನಲ್ಲಿ ಇದ್ದೇವೆ.—2 ಥೆಸಲೊನೀಕ 1:6-9.
“ಕಡೇ ದಿವಸಗಳಲ್ಲಿ”
7. (ಎ) ಪ್ರಾಚೀನ ದೈವಿಕ ನ್ಯಾಯತೀರ್ಪುಗಳು ಯಾವುದರ ಪ್ರವಾದನಾ ಸೂಚಕಗಳಾಗಿದ್ದವು? (ಬಿ) ಯಾವ ಮಹಿಮಾಭರಿತ ಪ್ರತೀಕ್ಷೆಯು ಮುಂದೆ ಕಾದಿದೆ?
7 ಪ್ರಾಚೀನ ಸಮಯಗಳ ಆ ನಾಶನಗಳು 2 ಪೇತ್ರ 3:3-13 ರಲ್ಲಿ ವರ್ಣಿಸಲಾದ ಭಯ ಹುಟ್ಟಿಸುವ ಮಹಾ ಸಂಕಟದ ಪ್ರವಾದನಾ ಬಿಂಬಗಳಾಗಿದ್ದವು. ಅಪೊಸ್ತಲನು ಹೇಳುವುದು: “ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯ ಮಾಡು” ವರು. ನಂತರ, ನೋಹನ ದಿನವನ್ನು ಕೇಂದ್ರೀಕರಿಸುತ್ತಾ, ಪೇತ್ರನು ಬರೆಯುವುದು: “ಆ ಕಾಲದಲ್ಲಿದ್ದ ಲೋಕವು ಜಲಪ್ರಲಯದಲ್ಲಿ ನಾಶವಾಯಿತು. ಆದರೆ ಈಗಿರುವ ಭೂಮ್ಯಾಕಾಶಗಳು ಅದೇ ವಾಕ್ಯದ ಬಲದಿಂದ ಬೆಂಕಿಯ ಮೂಲಕ ನಾಶವಾಗುವದಕ್ಕೆ ಇಡಲ್ಪಟ್ಟಿವೆ; ಮತ್ತು ಭಕ್ತಿಹೀನರ ಶಿಕ್ಷಾವಿಧಿಯೂ ನಾಶವೂ ಉಂಟಾಗುವ ದಿನಕ್ಕಾಗಿ ಆ ಬೆಂಕಿ ಸಿದ್ಧವಾಗಿದೆ.” ಎಲ್ಲ ಸಂಕಟಗಳಲ್ಲಿ ಅತ್ಯಂತ ದೊಡ್ಡದಾದ ಸಂಕಟವನ್ನು ಹಿಂಬಾಲಿಸಿ ಬರುವ, ಬಹು ಸಮಯದಿಂದ ಕಾದಿರುವ ಮೆಸ್ಸೀಯನ ರಾಜ್ಯಾಳಿಕೆಯು ಹೊಸ ಆಯಾಮ—‘ನೀತಿಯು ವಾಸವಾಗಿರುವ ನೂತನಾಕಾಶಮಂಡಲ ಮತ್ತು ನೂತನಭೂಮಂಡಲ’—ಗಳನ್ನು ತೆಗೆದುಕೊಳ್ಳುವುದು. ಎಂತಹ ಒಂದು ಆನಂದಭರಿತ ಪ್ರತೀಕ್ಷೆ!
8. ಲೋಕ ಘಟನೆಗಳು ಯಾವ ವಿಧದಲ್ಲಿ ಒಂದು ಪರಮಾವಧಿಯ ಕಡೆಗೆ ಸಾಗುತ್ತಿವೆ?
8 ನಮ್ಮ 20 ನೆಯ ಶತಮಾನದಲ್ಲಿ, ಲೋಕ ಘಟನೆಗಳು ಪ್ರಗತಿಪರವಾಗಿ ಒಂದು ಪರಮಾವಧಿಯ ಕಡೆಗೆ ಸಾಗಿವೆ. ಹಿರೊಶೀಮದ ಧ್ವಂಸವು ದೈವಿಕ ತನಿಖೆಯಾಗಿರದಿದ್ದರೂ, ಅಂತ್ಯದ ಸಮಯಕ್ಕಾಗಿ ಯೇಸು ಪ್ರವಾದಿಸಿದಂತಹ “ಮಹಾ ಸೂಚನೆ” ಗಳಲ್ಲಿ ಅದನ್ನು ಸೇರಿಸಬಹುದು. (ಲೂಕ 21:11) ಅದು ಮಾನವಕುಲವನ್ನು ಇನ್ನೂ ಬೆದರಿಸುವ ಒಂದು ನ್ಯೂಕ್ಲಿಯರ್ ಬೆದರಿಕೆಯನ್ನು ಆರಂಭಮಾಡಿತು. ಹೀಗೆ, 1993 ನವಂಬರ 23ರ ದ ನ್ಯೂ ಯಾರ್ಕ್ ಟೈಮ್ಸ್ ನಲ್ಲಿನ ಒಂದು ತಲೆ ಪಂಕ್ತಿಯು ಓದುವುದು: “ಬಂದೂಕುಗಳು ತುಸು ಕಿಲುಬುಗಟ್ಟಿರಬಹುದು ಆದರೆ ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳು ಕ್ರಿಯೆಗೆ ಸಿದ್ಧವಾಗಿವೆ.” ಈ ನಡುವೆ, ಅಂತಾರಾಷ್ಟ್ರೀಯ, ಅಂತರ್ ಕುಲಗಳ ಮತ್ತು ಅಂತರ್ಜಾತೀಯ ಯುದ್ಧಗಳು ದಿಗಿಲುಗೊಳಿಸುವ ಕೊಯ್ಲನ್ನು ಕೊಯ್ಯುತ್ತಾ ಮುಂದುವರಿದಿವೆ. ಕಳೆದುಹೋದ ಯುದ್ಧಗಳಲ್ಲಿ, ಅಪಘಾತಕ್ಕೀಡಾದವರಲ್ಲಿ ಸೈನಿಕರು ಹೆಚ್ಚಿನ ಸಂಖ್ಯೆಯಲಿದ್ದರು. ಇಂದು, ನಿರಾಶ್ರಿತರಾಗಿ ತಮ್ಮ ಸ್ವದೇಶಗಳನ್ನು ಬಿಟ್ಟು ಓಡಿಹೋಗುವ ಲಕ್ಷಾಂತರ ಜನರೊಂದಿಗೆ ಕೂಡಿಸಿ, ಯುದ್ಧಗಳಲ್ಲಿ ಗಾಯಗೊಳ್ಳುವ 80 ಪ್ರತಿಶತ ಜನರು ಅಯೋಧರಾಗಿದ್ದಾರೆಂದು ವರದಿಸಲಾಗುತ್ತದೆ.
9. ಧಾರ್ಮಿಕ ಮುಖಂಡರು ಲೋಕದೊಂದಿಗೆ ಸ್ನೇಹವನ್ನು ಹೇಗೆ ಪ್ರದರ್ಶಿಸಿದ್ದಾರೆ?
9 ಯುದ್ಧಗಳಲ್ಲಿ ಮತ್ತು ರಕ್ತಮಯ ಕ್ರಾಂತಿಗಳಲ್ಲಿ ಸಕ್ರಿಯವಾಗಿ ಒಳಗೊಳ್ಳುವ ಮೂಲಕ, ಧಾರ್ಮಿಕ ಮುಖಂಡರು “ಇಹಲೋಕಸ್ನೇಹ” ವನ್ನು ಅನೇಕ ವೇಳೆ ತೋರಿಸಿದ್ದಾರೆ, ಮತ್ತು ತೋರಿಸುತ್ತಾ ಮುಂದುವರಿದಿದ್ದಾರೆ. (ಯಾಕೋಬ 4:4) ವಾಣಿಜ್ಯ ಲೋಕದ ದುರಾಶೆಯ ಭಾರಿವ್ಯಾಪಾರಿಗಳು, ರಾಶಿಗಟ್ಟಲೆ ಯುದ್ಧ ಸಾಧನಗಳನ್ನು ತಯಾರಿಸಿ, ಅಮಲೌಷಧ ಸಾಮ್ರಾಜ್ಯಗಳನ್ನು ಕಟ್ಟಿದಂತೆ, ಅವರೊಂದಿಗೆ ಕೆಲವರು ಜೊತೆಗೂಡಿ ಕೆಲಸಮಾಡಿದ್ದಾರೆ. ಉದಾಹರಣೆಗೆ, ದಕ್ಷಿಣ ಅಮೆರಿಕದ ಒಬ್ಬ ಅಮಲೌಷಧ ದೊರೆಯ ಹತ್ಯೆಯನ್ನು ವರದಿಸುವಲ್ಲಿ, ದ ನ್ಯೂ ಯಾರ್ಕ್ ಟೈಮ್ಸ್ ಹೇಳಿದ್ದು: “ನ್ಯಾಯಸಮ್ಮತವಾದ ವ್ಯಾಪಾರದ ಸಂಪತ್ತಿನ ವಾದಗಳ ಮತ್ತು ಒಬ್ಬ ಉಪಕಾರಿಯ ಸ್ವರೂಪದ ಹಿಂದೆ ತನ್ನ ಅಮಲೌಷಧ ವ್ಯವಹಾರವನ್ನು ಅಡಗಿಸುತ್ತಾ, ತನ್ನ ಸ್ವಂತ ರೇಡಿಯೊ ಪ್ರದರ್ಶನವನ್ನು ಅವನು ಪ್ರಾಯೋಜಿಸಿದ್ದನು, ಮತ್ತು ಅನೇಕ ವೇಳೆ ರೋಮನ್ ಕ್ಯಾತೊಲಿಕ್ ಪಾದ್ರಿಗಳಿಂದ ಒಡಗೂಡಿರುತ್ತಿದ್ದನು.” ಅಮಲೌಷಧ ವ್ಯಸನಿಗಳಾದ ಲಕ್ಷಾಂತರ ಜನರ ಜೀವಿತಗಳನ್ನು ನಾಶಮಾಡುವುದರ ಜೊತೆಗೆ, ಈ ಅಮಲೌಷಧ ದೊರೆಯು ವೈಯಕ್ತಿಕವಾಗಿ ಸಾವಿರಾರು ಜನರ ಕೊಲೆಗಳನ್ನು ನಿರ್ದೇಶಿಸಿದ್ದನೆಂದು ದ ವಾಲ್ ಸ್ಟ್ರೀಟ್ ಜರ್ನಲ್ ವರದಿಸಿತು. ಲಂಡನಿನ ದ ಟೈಮ್ಸ್ ಗಮನಿಸಿದ್ದು: “ಬಲಿಯ ಶವಸಂಸ್ಕಾರದ ಆರಾಧನೆಯು ಬೇರೆ ಕಡೆಯಲ್ಲಿ ಆಗುತ್ತಿರುವ ಅದೇ ವೇಳೆಗೆ . . . ಉಪಕಾರಗಳನ್ನು ಸಲ್ಲಿಸಲು ಕೊಲೆಗಾರರು ಅನೇಕ ವೇಳೆ ವಿಶೇಷವಾದೊಂದು ಆರಾಧನೆಗೆ ಹಣವನ್ನು ನೀಡುತ್ತಾರೆ.” ಎಂತಹ ದುಷ್ಟತನ!
10. ಲೋಕ ಪರಿಸ್ಥಿತಿಗಳ ಕ್ಷೀಣಿಸುವಿಕೆಯನ್ನು ನಾವು ಹೇಗೆ ವೀಕ್ಷಿಸಬೇಕು?
10 ದೆವ್ವ ಪ್ರೇರಿತ ಜನರು ಈ ಭೂಮಿಯ ಮೇಲೆ ಇನ್ನೂ ಯಾವ ಹಾವಳಿಯನ್ನು ಹೇರುವರೆಂದು ಯಾರಿಗೆ ಗೊತ್ತು? 1 ಯೋಹಾನ 5:19 ಹೇಳುವಂತೆ, “ಲೋಕವೆಲ್ಲವು ಕೆಡುಕನ,” ಪಿಶಾಚನಾದ ಸೈತಾನನ “ವಶದಲ್ಲಿ ಬಿದಿದ್ದೆ.” “ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದು” ಬಂದಿರುವ ಸಮಯವು ಇದಾಗಿದೆ. (ಪ್ರಕಟನೆ 12:12) ಆದರೂ ಸಂತಸಕರವಾಗಿ, “ಕರ್ತನ [“ಯೆಹೋವನ,” NW] ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದೆಂದು” ರೋಮಾಪುರ 10:13 ನಮಗೆ ಆಶ್ವಾಸನೆ ನೀಡುತ್ತದೆ.
ನ್ಯಾಯತೀರ್ಪಿನಲ್ಲಿ ದೇವರು ಹತ್ತಿರ ಬರುತ್ತಾನೆ
11. ಇಸ್ರಾಯೇಲಿನಲ್ಲಿನ ಯಾವ ಪರಿಸ್ಥಿತಿಗಳು ಮಲಾಕಿಯನ ಪ್ರವಾದನೆಯನ್ನು ಬರಿಸಿದವು?
11 ಮಾನವಕುಲದ ಅತಿ ಸಮೀಪದ ಭವಿಷ್ಯತ್ತಿನ ಕುರಿತು, ಏನು ಸಂಭವಿಸಲಿಕ್ಕಿದೆ ಎಂಬುದರ ಬಗ್ಗೆ ಮಲಾಕಿಯನ ಪ್ರವಾದನೆಯು ಬೆಳಕನ್ನು ಚೆಲ್ಲುತ್ತದೆ. ಪ್ರಾಚೀನ ಹೀಬ್ರು ಪ್ರವಾದಿಗಳ ದೀರ್ಘವಾದ ಸಾಲಿನಲ್ಲಿ ಮಲಾಕಿಯನು ಕೊನೆಯಲ್ಲಿ ಸೇರಿಸಲ್ಪಟ್ಟಿದ್ದಾನೆ. ಯೆರೂಸಲೇಮಿನ ನಾಶನವನ್ನು ಇಸ್ರಾಯೇಲ್ ಸಾ.ಶ.ಪೂ. 607 ರಲ್ಲಿ ಅನುಭವಿಸಿತ್ತು. ಆದರೆ 70 ವರ್ಷಗಳಾನಂತರ ಆ ರಾಷ್ಟ್ರವನ್ನು ಅದರ ದೇಶಕ್ಕೆ ಪುನಃಸ್ಥಾಪಿಸುವಲ್ಲಿ, ಯೆಹೋವನು ಕರುಣಾಮಯವಾದ ಪ್ರೀತಿಯ ದಯೆಯನ್ನು ಪ್ರದರ್ಶಿಸಿದ್ದನು. ಆದರೂ, ಒಂದು ನೂರು ವರ್ಷಗಳೊಳಗೆ, ಇಸ್ರಾಯೇಲ್ ಪುನಃ ಧರ್ಮಭ್ರಷ್ಟತೆ ಮತ್ತು ದುಷ್ಟತನದಲ್ಲಿ ಕೊಚ್ಚಿಕೊಂಡು ಹೋಗುತ್ತಿತ್ತು. ಜನರು ಯೆಹೋವನ ನಾಮವನ್ನು ಅವಮಾನಿಸುತ್ತಿದ್ದರು, ಆತನ ನೀತಿಯ ನಿಯಮಗಳನ್ನು ಕಡೆಗಣಿಸುತ್ತಿದ್ದರು, ಮತ್ತು ಯಜ್ಞಕ್ಕಾಗಿ ಕುರುಡ, ಕುಂಟ, ಮತ್ತು ಅಸ್ವಸ್ಥ ಪ್ರಾಣಿಗಳನ್ನು ತರುವ ಮೂಲಕ ಆತನ ಆಲಯವನ್ನು ಮಲಿನಗೊಳಿಸುತ್ತಿದ್ದರು. ವಿದೇಶೀ ಹೆಂಗಸರನ್ನು ಮದುವೆ ಮಾಡಿಕೊಳ್ಳಬಹುದೆಂಬ ಕಾರಣದಿಂದ ಅವರು ತಮ್ಮ ಯೌವನದ ಪತ್ನಿಯರನ್ನು ತೊರೆದುಬಿಡುತ್ತಿದ್ದರು.—ಮಲಾಕಿಯ 1:6-8; 2:13-16.
12, 13. (ಎ) ಅಭಿಷಿಕ್ತ ಯಾಜಕ ವರ್ಗಕ್ಕೆ ಯಾವ ಶುದ್ಧೀಕರಣವು ಅಗತ್ಯವಾಗಿತ್ತು? (ಬಿ) ಶುದ್ಧಮಾಡುವಿಕೆಯ ಮೂಲಕ ಮಹಾ ಸಮೂಹವು ಕೂಡ ಹೇಗೆ ಪ್ರಯೋಜನ ಪಡೆಯುತ್ತದೆ?
12 ಶುದ್ಧೀಕರಿಸುವ ಕಾರ್ಯವೊಂದರ ಅಗತ್ಯವಿತ್ತು. ಅದು ಮಲಾಕಿಯ 3:1-4 ರಲ್ಲಿ ವರ್ಣಿಸಲ್ಪಟ್ಟಿದೆ. ಪ್ರಾಚೀನ ಇಸ್ರಾಯೇಲಿನಂತೆ, ಯೆಹೋವನ ಆಧುನಿಕ ದಿನದ ಸಾಕ್ಷಿಗಳು ಶುದ್ಧಗೊಳಿಸಲ್ಪಡುವ ಅಗತ್ಯವಿತ್ತು, ಆದುದರಿಂದ ಮಲಾಕಿಯನ ಮೂಲಕ ವರ್ಣಿಸಲಾದ ಶುದ್ಧೀಕರಿಸುವ ಕಾರ್ಯವನ್ನು ಅವರಿಗೆ ಅನ್ವಯಿಸಸಾಧ್ಯವಿದೆ. ಮೊದಲನೆಯ ಲೋಕ ಯುದ್ಧವು ಅದರ ಮುಕ್ತಾಯದ ಕಡೆಗೆ ಸಾಗಿದಂತೆ, ಬೈಬಲ್ ವಿದ್ಯಾರ್ಥಿಗಳೆಂದು ಆಗ ಗುರುತಿಸಲ್ಪಡುತ್ತಿದ್ದ ಸಾಕ್ಷಿಗಳಲ್ಲಿ ಕೆಲವರು, ಲೌಕಿಕ ವ್ಯವಹಾರಗಳಲ್ಲಿ ಕಟ್ಟುನಿಟ್ಟಾದ ತಾಟಸ್ಥ್ಯವನ್ನು ಕಾಪಾಡಲಿಲ್ಲ. 1918 ರಲ್ಲಿ, ಯೆಹೋವನು ಆತನ ಆರಾಧಕರ ಸಣ್ಣ ಗುಂಪನ್ನು ಲೌಕಿಕ ಕಲೆಗಳಿಂದ ಶುದ್ಧಗೊಳಿಸಲು ಆತನ ಆತ್ಮಿಕ ಆಲಯದ ಏರ್ಪಾಡಿಗೆ, ಆತನ “ಒಡಂಬಡಿಕೆಯ ದೂತ” ನಾದ ಕ್ರಿಸ್ತ ಯೇಸುವನ್ನು ಕಳುಹಿಸಿದನು. ಪ್ರವಾದನಾತ್ಮಕವಾಗಿ, ಯೆಹೋವನು ಹೀಗೆ ಕೇಳಿದ್ದನು: “ಆತನು ಬರುವ ದಿನವನ್ನು ಯಾರು ತಾಳಾರು? ಆತನು ಕಾಣಿಸಿಕೊಳ್ಳುವಾಗ ಯಾರು ನಿಂತಾರು? ಆತನು ಅಕ್ಕಸಾಲಿಗನ ಬೆಂಕಿಗೂ ಅಗಸನ ಚೌಳಿಗೂ ಸಮಾನನಾಗಿದ್ದಾನೆ; ಬೆಳ್ಳಿಯನ್ನು ಶೋಧಿಸುವ ಅಕ್ಕಸಾಲಿಗನಂತೆ ಕುಳಿತು ಲೇವಿ ವಂಶದವರನ್ನು ಶೋಧಿಸಿ ಬೆಳ್ಳಿಬಂಗಾರಗಳನ್ನೋ ಎಂಬಂತೆ ಶುದ್ಧೀಕರಿಸುವನು; ಅವರು ಸದ್ಧರ್ಮಿಗಳಾಗಿ ಯೆಹೋವನಿಗೆ ನೈವೇದ್ಯಗಳನ್ನು ತಂದೊಪ್ಪಿಸುವರು.” ಶುದ್ಧೀಕರಿಸಲ್ಪಟ್ಟ ಜನರೋಪಾದಿ, ಅವರು ಅದನ್ನೇ ಮಾಡಿದ್ದಾರೆ!
13 ಆ ಅಭಿಷಿಕ್ತ ಯಾಜಕ ಗುಂಪಿನ ಸಂಖ್ಯೆಯು ಕೇವಲ 1,44,000. (ಪ್ರಕಟನೆ 7:4-8; 14:1, 3) ಹಾಗಾದರೆ, ಇಂದು ಇತರ ಸಮರ್ಪಿತ ಕ್ರೈಸ್ತರ ವಿಷಯದಲ್ಲೀನು? ಲಕ್ಷಾಂತರಗಳಲ್ಲಿ ಈಗ ಅಭಿವೃದ್ಧಿ ಹೊಂದುತ್ತಾ, ಇವರು “ಒಂದು ಮಹಾ ಸಮೂಹ” ವನ್ನು ರಚಿಸುತ್ತಾರೆ. ‘ಕುರಿಮರಿಯ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆಯುತ್ತಾ, ಅವುಗಳನ್ನು ಬಿಳಿಯಾಗಿ ಮಾಡುತ್ತಾ,’ ಅವರು ಕೂಡ ಲೌಕಿಕ ಮಾರ್ಗಗಳ ವಿಷಯದಲ್ಲಿ ಶುದ್ಧೀಕರಿಸಲ್ಪಡಬೇಕಾಗಿದೆ. (ಪ್ರಕಟನೆ 7:9, 14) ಹೀಗೆ, ಕುರಿಮರಿಯಾದ ಕ್ರಿಸ್ತ ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯನ್ನು ಇಡುವ ಮೂಲಕ, ಯೆಹೋವನ ಮುಂದೆ ಶುದ್ಧವಾದ ನಿಲುವನ್ನು ಕಾಪಾಡಿಕೊಳ್ಳಲು ಅವರು ಶಕ್ತರಾಗಿದ್ದಾರೆ. ಯೆಹೋವನ ಭಯ ಹುಟ್ಟಿಸುವ ದಿನವಾದ, ಸಂಪೂರ್ಣ ಮಹಾ ಸಂಕಟದಿಂದ ಬದುಕಿ ಉಳಿಯುವ ವಾಗ್ದಾನ ಅವರಿಗೆ ಮಾಡಲಾಗಿದೆ.—ಚೆಫನ್ಯ 2:2, 3.
14. ಇಂದು ದೇವರ ಜನರು ಹೊಸ ವ್ಯಕ್ತಿತ್ವವನ್ನು ವಿಕಸಿಸಲು ಮುಂದುವರಿದಂತೆ, ಯಾವ ಮಾತುಗಳಿಗೆ ಕಿವಿಗೊಡಬೇಕು?
14 ಯಾಜಕಯೋಗ್ಯ ಉಳಿಕೆಯವರೊಂದಿಗೆ, ಈ ಮಹಾ ಸಮೂಹವು ದೇವರ ಮುಂದಿನ ಮಾತುಗಳನ್ನು ಆಲಿಸಬೇಕು: “ನಾನು ನ್ಯಾಯತೀರಿಸುವದಕ್ಕೆ ನಿಮ್ಮ ಬಳಿಗೆ ಬರುವೆನು; ಮಾಟಗಾರ, ಸೂಳೆಗಾರ, ಸುಳ್ಳುಸಾಕ್ಷಿ, ಕೂಲಿಹಿಡಿದು ಕೂಲಿಯವನನ್ನು ಮೋಸ ಪಡಿಸುವವನು, ವಿಧವೆಯರನ್ನೂ ಅನಾಥರನ್ನೂ ಬಾಧಿಸುವವನು, ವಿದೇಶಿಯ ನ್ಯಾಯತಪ್ಪಿಸುವವನು, ಅಂತು ನನಗಂಜದಿರುವ ಇವರೆಲ್ಲರಿಗೆ ವಿರುದ್ಧವಾಗಿ ನಾನು ಶೀಘ್ರಸಾಕ್ಷಿಯಾಗಿರುವೆನು; . . . ಯೆಹೋವನಾದ ನಾನು ಮಾರ್ಪಟ್ಟಿಲ್ಲ.” (ಮಲಾಕಿಯ 3:5, 6) ಇಲ್ಲ, ಯೆಹೋವನ ಮಟ್ಟಗಳು ಬದಲಾಗುವುದಿಲ್ಲ, ಆದುದರಿಂದ ಯೆಹೋವನ ಭಯದಲ್ಲಿ ಆತನ ಜನರು ಇಂದು, ಕ್ರೈಸ್ತ ವ್ಯಕ್ತಿತ್ವವನ್ನು ವಿಕಸಿಸಲು ಅವರು ಮುಂದುವರಿದಂತೆ, ಎಲ್ಲ ರೀತಿಯ ಮೂರ್ತಿಪೂಜೆಯನ್ನು ತೊರೆಯಬೇಕು ಮತ್ತು ಸತ್ಯವಂತರೂ ಪ್ರಾಮಾಣಿಕರೂ ಮತ್ತು ದಾನಪರರು ಆಗಿರಬೇಕು.—ಕೊಲೊಸ್ಸೆ 3:9-14.
15. (ಎ) ಯಾವ ಕರುಣಾಮಯ ಆಮಂತ್ರಣವನ್ನು ಯೆಹೋವನು ನೀಡುತ್ತಾನೆ? (ಬಿ) ಯೆಹೋವನಿಂದ ‘ಕದಿಯುವುದನ್ನು’ ನಾವು ಹೇಗೆ ತೊರೆಯಬಹುದು?
15 ಯೆಹೋವನ ನೀತಿಯ ಮಾರ್ಗಗಳಿಂದ ಆಚೆ ತಿರುಗಿರಬಹುದಾದ ಪ್ರತಿಯೊಬ್ಬನಿಗೂ ಹೀಗೆ ಹೇಳುತ್ತಾ ಆತನು ಒಂದು ಆಮಂತ್ರಣವನ್ನು ನೀಡುತ್ತಾನೆ: “ನನ್ನ ಕಡೆಗೆ ಪುನಃ ತಿರುಗಿರಿ; ತಿರುಗಿದರೆ ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು.” “ಯಾವ ವಿಷಯದಲ್ಲಿ ತಿರುಗೋಣ” ವೆಂದು ಇವರು ಕೇಳಿದರೆ ಆತನು ಉತ್ತರಿಸುವುದು: “ನೀವೋ ನನ್ನಿಂದ ಕದ್ದುಕೊಳ್ಳುತ್ತಿದ್ದೀರಿ.” “ನಿನ್ನಿಂದ ಏನು ಕದ್ದುಕೊಂಡಿದ್ದೇವೆ?” ಎಂಬ ಮುಂದಿನ ಪ್ರಶ್ನೆಗೆ ಉತ್ತರ ನೀಡುವಲ್ಲಿ, ಆತನ ಆಲಯದ ಸೇವೆಗೆ ಅರ್ಪಣೆಗಳೋಪಾದಿ ತಮ್ಮ ಅತ್ಯುತ್ತಮವಾದದ್ದನ್ನು ತರಲು ತಪ್ಪಿಹೋಗುವ ಮೂಲಕ ಅವರು ತನ್ನನ್ನು ಕದ್ದಿದ್ದಾರೆಂದು ಯೆಹೋವನು ಹೇಳುತ್ತಾನೆ. (ಮಲಾಕಿಯ 3:7, 8) ಯೆಹೋವನ ಜನರ ಒಂದು ಭಾಗವಾದ ಕಾರಣ, ಯೆಹೋವನ ಸೇವೆಗೆ ನಮ್ಮ ಶಕ್ತಿಗಳ, ಸಾಮರ್ಥ್ಯಗಳ, ಮತ್ತು ಪ್ರಾಪಂಚಿಕ ಸ್ವತ್ತುಗಳ ಅತ್ಯುತ್ತಮ ಭಾಗವನ್ನು ಅರ್ಪಿಸಲು ನಾವು ನಿಶ್ಚಯವಾಗಿಯೂ ಬಯಸುವವರಾಗಿರತಕ್ಕದ್ದು. ಹೀಗೆ, ದೇವರಿಂದ ಕದಿಯುವ ಬದಲು, ನಾವು ‘ಮೊದಲು ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕುತ್ತಾ ಇರುತ್ತೇವೆ.’—ಮತ್ತಾಯ 6:33.
16. ಮಲಾಕಿಯ 3:10-12 ರಲ್ಲಿ ಯಾವ ಉತ್ತೇಜನವನ್ನು ನಾವು ಕಂಡುಕೊಳ್ಳುತ್ತೇವೆ?
16 ಮಲಾಕಿಯ 3:10-12 ಸೂಚಿಸುವಂತೆ, ಲೋಕದ ಸ್ವಾರ್ಥಪರ ಪ್ರಾಪಂಚಿಕ ಮಾರ್ಗಗಳನ್ನು ತಿರಸ್ಕರಿಸುವವರೆಲ್ಲರಿಗೆ ಮಹಾ ಪ್ರತಿಫಲವೊಂದಿದೆ: “ನಾನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಯುವೆನೋ ಇಲ್ಲವೋ ನನ್ನನ್ನು ಹೀಗೆ ಪರೀಕ್ಷಿಸಿರಿ; ಇದು ಸೇನಾಧೀಶ್ವರ ಯೆಹೋವನ ನುಡಿ.” ಗುಣಗ್ರಾಹಿಗಳಾಗಿರುವ ಎಲ್ಲರಿಗೆ, ಯೆಹೋವನು ಆತ್ಮಿಕ ಏಳಿಗೆ ಮತ್ತು ಲಾಭವನ್ನು ವಾಗ್ದಾನಿಸುತ್ತಾನೆ. ಆತನು ಕೂಡಿಸುವುದು: “ಆಗ ಸಕಲ ಜನಾಂಗಗಳವರು ನಿಮ್ಮನ್ನು ಧನ್ಯರೆಂದು ಕೊಂಡಾಡುವರು; ನಿಮ್ಮ ದೇಶವು ಆನಂದವಾಗಿರುವದು.” ಇಂದು ಭೂಮಿಯಾದ್ಯಂತ ಇರುವ ದೇವರ ಲಕ್ಷಾಂತರ ಕೃತಜ್ಞ ಜನರೊಳಗೆ ಅದು ನಿಜವಾಗಿ ಪರಿಣಮಿಸಿಲ್ಲವೊ?
ಜೀವದ ಪುಸ್ತಕದಲ್ಲಿರುವ ಸಮಗ್ರತೆ ಪಾಲಕರು
17-19. (ಎ) ರುಆಂಡದಲ್ಲಿನ ಗಲಭೆಯು ಅಲ್ಲಿರುವ ನಮ್ಮ ಸಹೋದರರನ್ನು ಹೇಗೆ ಪ್ರಭಾವಿಸಿದೆ? (ಬಿ) ಯಾವ ದೃಢನಿಶ್ಚಯದೊಂದಿಗೆ ಈ ಎಲ್ಲ ನಂಬಿಗಸ್ತರು ಮುಂದೆ ಸಾಗಿದ್ದಾರೆ?
17 ಈ ಸಂದರ್ಭದಲ್ಲಿ, ರುಆಂಡದ ನಮ್ಮ ಸಹೋದರ ಸಹೋದರಿಯರ ಸಮಗ್ರತೆಯ ಕುರಿತು ನಾವು ಹೇಳಿಕೆಯನ್ನು ನೀಡಬಹುದು. ಯೆಹೋವನ ಆರಾಧನೆಯ ಆತ್ಮಿಕ ಗೃಹಕ್ಕೆ ಅವರು ಯಾವಾಗಲೂ ಆತ್ಮಿಕ ಅರ್ಪಣೆಗಳಲ್ಲಿ ಅತ್ಯುತ್ತಮವಾದದ್ದನ್ನು ತಂದಿದ್ದಾರೆ. ಉದಾಹರಣೆಗೆ, ದಶಂಬರ 1993 ರಲ್ಲಿ ಅವರ “ದೈವಿಕ ಬೋಧನೆ” ಜಿಲ್ಲಾ ಅಧಿವೇಶನದಲ್ಲಿ, ಅವರ 2,080 ರಾಜ್ಯ ಪ್ರಚಾರಕರು 4,075ರ ಒಟ್ಟು ಹಾಜರಿಯ ಫಲ ಅನುಭವಿಸಿದರು. 230 ಹೊಸ ಸಾಕ್ಷಿಗಳು ದೀಕ್ಷಾಸ್ನಾನ ಪಡೆದರು, ಮತ್ತು ಅವರಲ್ಲಿ ಬಹುಮಟ್ಟಿಗೆ 150 ಸಾಕ್ಷಿಗಳು ಮುಂದಿನ ತಿಂಗಳು ಆಕ್ಸಿಲಿಯರಿ ಪಯನೀಯರ್ ಸೇವೆಯಲ್ಲಿ ಸೇರಿದರು.
18 ಎಪ್ರಿಲ್ 1994 ರಲ್ಲಿ ಕುಲಸಂಬಂಧವಾದ ದ್ವೇಷವು ಸಿಡಿದಾಗ, ರಾಜಧಾನಿಯಾದ ಕಿಗಾಲಿಯಲ್ಲಿದ್ದ ಸಿಟಿ ಮೇಲ್ವಿಚಾರಕ ಮತ್ತು ಅವನ ಇಡೀ ಕುಟುಂಬವನ್ನು ಸೇರಿಸಿ, ಕಡಿಮೆ ಪಕ್ಷ 180 ಸಾಕ್ಷಿಗಳನ್ನು ಕೊಲಲ್ಲಾಯಿತು. ಕಿಗಾಲಿಯಲ್ಲಿನ ವಾಚ್ಟವರ್ ಸೊಸೈಟಿಯ ಆಫೀಸಿನಲ್ಲಿ ನಾಲ್ವರು ಹೂಟುಗಳು ಮತ್ತು ಇಬ್ಬರು ಟೂಟ್ಸಿಗಳಾಗಿದ್ದ ಆರು ಭಾಷಾಂತರಕಾರರು, ಭಾರಿ ಬೆದರಿಕೆಗಳಲ್ಲಿಯೂ ಹಲವಾರು ವಾರಗಳ ವರೆಗೆ ಕೆಲಸಮಾಡುವುದನ್ನು ಮುಂದುವರಿಸಿದರು. ಅನಂತರ ಟೂಟ್ಸಿಗಳು ಓಡಿಹೋಗಬೇಕಿತ್ತು, ಆದರೆ ತನಿಖೆ ಕಟ್ಟೆಯ ಬಳಿ ಕೊಲ್ಲಲ್ಪಟ್ಟರು. ಅಂತಿಮವಾಗಿ, ತಮ್ಮ ಕಂಪ್ಯೂಟರ್ ಸಜ್ಜಿನಲ್ಲಿ ಉಳಿದದ್ದನ್ನು ತೆಗೆದುಕೊಂಡು ಉಳಿದ ನಾಲ್ವರು ಸಾಯಿರ್ನಲ್ಲಿರುವ ಗೋಮಗೆ ಓಡಿಹೋದರು. ಅಲ್ಲಿ ಅವರು ನಿಷ್ಠಾವಂತರಾಗಿ ಕಾವಲಿನಬುರುಜು ಪತ್ರಿಕೆಯನ್ನು ಕಿನಿಯಾರವಂಡಾ ಭಾಷೆಯಲ್ಲಿ ಭಾಷಾಂತರಿಸಲು ಮುಂದುವರಿಸಿದರು.—ಯೆಶಾಯ 54:17.
19 ಈ ಆಶ್ರಿತ ಸಾಕ್ಷಿಗಳು, ಉಗ್ರ ಪರಿಸ್ಥಿತಿಗಳಲ್ಲಿರುವುದಾದರೂ, ಪ್ರಾಪಂಚಿಕ ಒದಗಿಸುವಿಕೆಗಳ ಮೊದಲು ಯಾವಾಗಲೂ ಆತ್ಮಿಕ ಆಹಾರಕ್ಕಾಗಿ ಕೇಳಿಕೊಂಡರು. ಮಹಾ ತ್ಯಾಗಗಳನ್ನು ಮಾಡುತ್ತಾ, ಹಲವಾರು ದೇಶಗಳಿಂದ ಪ್ರೀತಿಯ ಸಹೋದರರು, ಅವರಿಗೆ ಸರಬರಾಯಿಗಳು ಸಿಗುವಂತೆ ಮಾಡಲು ಶಕ್ತರಾದರು. ಬಾಯಿಮಾತಿನಲ್ಲಿ ಮತ್ತು ಒತ್ತಡದಲ್ಲಿ ಅವರ ಕ್ರಮಬದ್ಧತೆಯ ಮೂಲಕ, ಈ ಆಶ್ರಿತರು ಅದ್ಭುತಕರವಾದೊಂದು ಸಾಕ್ಷಿಯನ್ನು ನೀಡಿದ್ದಾರೆ. ತಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ಯೆಹೋವನ ಆರಾಧನೆಗೆ ತರಲು ಅವರು ನಿಶ್ಚಯವಾಗಿಯೂ ಮುಂದುವರಿದಿದ್ದಾರೆ. ರೋಮಾಪುರ 14:8 ರಲ್ಲಿ ವ್ಯಕ್ತಪಡಿಸಲಾದಂತೆ, ಅವರು ಪೌಲನಂತಹ ಒಂದು ದೃಢನಿಶ್ಚಯವನ್ನು ಪ್ರದರ್ಶಿಸಿದ್ದಾರೆ: “ನಾವು ಬದುಕಿದರೆ ಕರ್ತ[“ಯೆಹೋವ,” NW] ನಿಗಾಗಿ ಬದುಕುತ್ತೇವೆ; ಸತ್ತರೆ ಕರ್ತ[“ಯೆಹೋವ,” NW] ನಿಗಾಗಿ ಸಾಯುತ್ತೇವೆ; ಬದುಕಿದರೂ ಸತ್ತರೂ ನಾವು ಕರ್ತ[“ಯೆಹೋವ,” NW] ನವರೇ.”
20, 21. (ಎ) ಯಾರ ಹೆಸರುಗಳು ಯೆಹೋವನ ಜ್ಞಾಪಕದ ಪುಸ್ತಕದಲ್ಲಿ ಬರೆಯಲ್ಪಟ್ಟಿಲ್ಲ? (ಬಿ) ಯಾರ ಹೆಸರುಗಳು ಪುಸ್ತಕದಲ್ಲಿ ಕಾಣಿಸಿಕೊಳ್ಳುತ್ತವೆ, ಮತ್ತು ಯಾಕೆ?
20 ಸಮಗ್ರತೆಯಲ್ಲಿ ಆತನನ್ನು ಸೇವಿಸುವವರೆಲ್ಲರ ದಾಖಲೆಯನ್ನು ಯೆಹೋವನು ಇಡುತ್ತಾನೆ. ಮಲಾಕಿಯನ ಪ್ರವಾದನೆಯು ಮುಂದುವರಿಯುವುದು: “ಇಂಥ ಮಾತುಗಳನ್ನು ಕೇಳಿ ಯೆಹೋವನ ಭಕ್ತರು ಒಬ್ಬರಿಗೊಬ್ಬರು ಮಾತಾಡಿಕೊಳ್ಳಲು ಯೆಹೋವನು ಕಿವಿಗೊಟ್ಟು ಆಲಿಸಿ ಭಯಭಕ್ತಿಯಿಂದ ತನ್ನ ನಾಮಸ್ಮರಣೆಮಾಡುವವರ ಹೆಸರುಗಳನ್ನು ತನ್ನ ಮುಂದೆ ಜ್ಞಾಪಕದ ಪುಸ್ತಕದಲ್ಲಿ ಬರೆಯಿಸಿದನು.”—ಮಲಾಕಿಯ 3:16.
21 ಯೆಹೋವನ ನಾಮವನ್ನು ಘನಪಡಿಸುವುದರಲ್ಲಿ ನಾವು ದಿವ್ಯ ಭಯವನ್ನು ತೋರಿಸುವುದು ಇಂದು ಎಷ್ಟು ಪ್ರಾಮುಖ್ಯವಾಗಿದೆ! ಹಾಗೆ ಮಾಡುವುದಾದರೆ, ಈ ಲೋಕದ ವ್ಯವಸ್ಥೆಗಳನ್ನು ಮೆಚ್ಚಿಕೆಯಿಂದ ಬೆಂಬಲಿಸುವವರು ಪ್ರತಿಕೂಲವಾದ ನ್ಯಾಯತೀರ್ಪನ್ನು ಅನುಭವಿಸುವಂತೆ ನಾವು ಅನುಭವಿಸಲಾರೆವು. ಪ್ರಕಟನೆ 17:8 ವರದಿಸುವುದೇನೆಂದರೆ, ‘ಅವರ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಬರೆದಿರುವುದಿಲ್ಲ.’ ತರ್ಕಬದ್ಧವಾಗಿಯೇ, ಯೆಹೋವನ ಜೀವಬಾಧ್ಯರ ಪುಸ್ತಕದಲ್ಲಿ ಬರೆಯಲ್ಪಟ್ಟಿರುವ ಉತ್ತಮೋತ್ತಮವಾದ ಹೆಸರು, ಜೀವದ ಮುಖ್ಯ ಕಾರ್ಯಕಾರಿ, ದೇವರ ಸ್ವಂತ ಮಗನಾದ ಯೇಸು ಕ್ರಿಸ್ತನದ್ದು. ಮತ್ತಾಯ 12:21 ಘೋಷಿಸುವುದು: “ಅನ್ಯಜನರು ಈತನ ಹೆಸರನ್ನು ಕೇಳಿ ನಿರೀಕ್ಷೆಯಿಂದಿರುವರು.” ಯೇಸುವಿನ ಪ್ರಾಯಶ್ಚಿತ್ತ ಯಜ್ಞವು ಅದರಲ್ಲಿ ನಂಬಿಕೆ ಇಡುವವರೆಲ್ಲರಿಗೆ ನಿತ್ಯಜೀವದ ಖಾತ್ರಿಯನ್ನು ಕೊಡುತ್ತದೆ. ಆ ಪಟ್ಟಿಯಲ್ಲಿ ಯೇಸುವಿನ ಹೆಸರಿನ ಜೊತೆಗೆ ನಮ್ಮ ವೈಯಕ್ತಿಕ ಹೆಸರುಗಳನ್ನು ಕೂಡಿಸುವುದು ಎಂತಹ ಒಂದು ಸುಯೋಗವಾಗಿದೆ!
22. ಯೆಹೋವನು ನ್ಯಾಯತೀರ್ಪನ್ನು ವಿಧಿಸುವಾಗ ಯಾವ ವ್ಯತ್ಯಾಸವು ವ್ಯಕ್ತವಾಗಿರುವುದು?
22 ನ್ಯಾಯತೀರ್ಪಿನಲ್ಲಿ ದೇವರ ಸೇವಕರ ಸ್ಥಾನವು ಏನಾಗಿರುವುದು? ಯೆಹೋವನು ಮಲಾಕಿಯ 3:17, 18 ರಲ್ಲಿ ಉತ್ತರಿಸುವುದು: “ಒಬ್ಬನು ತನ್ನನ್ನು ಸೇವಿಸುವ ಸ್ವಂತ ಮಗನನ್ನು ಕರುಣಿಸುವಂತೆ ನಾನು ಅವರನ್ನು ಕರುಣಿಸುವೆನು. ಆಗ ಶಿಷ್ಟರಿಗೂ ದುಷ್ಟರಿಗೂ ದೇವರನ್ನು ಸೇವಿಸುವವರಿಗೂ ಸೇವಿಸದವರಿಗೂ ಇರುವ ತಾರತಮ್ಯವನ್ನು ಮತ್ತೆ ಕಾಣುವಿರಿ.” ವರ್ಗೀಕರಣವು ಎಲ್ಲರಿಗೆ ಸ್ಪಷ್ಟವಾಗಿಗಿರುವುದು: ದುಷ್ಟರು ನಿತ್ಯನಾಶನಕ್ಕೆ ಬೇರ್ಪಡಿಸಲ್ಪಡುವರು, ಮತ್ತು ನೀತಿವಂತರು ರಾಜ್ಯದ ಪರಿಸರದಲ್ಲಿ ನಿತ್ಯಜೀವಕ್ಕಾಗಿ ಅನುಮೋದಿಸಲ್ಪಡುವರು. (ಮತ್ತಾಯ 25:31-46) ಹೀಗೆ ಕುರಿಗಳಂಥ ವ್ಯಕ್ತಿಗಳ ಒಂದು ಮಹಾ ಸಮೂಹವು ಯೆಹೋವನ ಮಹಾ ಹಾಗೂ ಭಯ ಹುಟ್ಟಿಸುವ ದಿನವನ್ನು ಪಾರಾಗುವುದು.
ನೀವು ಜ್ಞಾಪಿಸಿಕೊಳ್ಳುತ್ತೀರೊ?
▫ ಬೈಬಲ್ ಸಮಯಗಳಲ್ಲಿ ಯೆಹೋವನು ಯಾವ ನ್ಯಾಯತೀರ್ಪುಗಳನ್ನು ವಿಧಿಸಿದನು?
▫ ಪ್ರಾಚೀನ ಸಮಯಗಳ ಪರಿಸ್ಥಿತಿಗಳೊಂದಿಗೆ ಇಂದಿನ ಪರಿಸ್ಥಿತಿಗಳು ಹೇಗೆ ಸದೃಶವಾಗಿವೆ?
▫ ಮಲಾಕಿಯನ ಪ್ರವಾದನೆಯ ನೆರವೇರಿಕೆಯಲ್ಲಿ ಯಾವ ಶುದ್ಧೀಕರಣವು ಸಂಭವಿಸಿದೆ?
▫ ದೇವರ ಜ್ಞಾಪಕದ ಪುಸ್ತಕದಲ್ಲಿ ಯಾರ ಹೆಸರುಗಳು ಬರೆಯಲ್ಪಟ್ಟಿವೆ?