ಅಧ್ಯಯನ ಲೇಖನ 15
ನೀವು ‘ಮಾತಲ್ಲಿ ಮಾದರಿಯಾಗಿದ್ದೀರಾ?’
‘ನಿನ್ನ ಮಾತಲ್ಲಿ ನಂಬಿಗಸ್ತರಿಗೆ ಮಾದರಿಯಾಗಿರು.’—1 ತಿಮೊ. 4:12.
ಗೀತೆ 121 ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ
ಕಿರುನೋಟa
1. ನಮಗೆ ಮಾತಾಡೋ ಸಾಮರ್ಥ್ಯವನ್ನ ಯಾರು ಕೊಟ್ರು?
ಯೆಹೋವ ದೇವರು ನಮ್ಮೆಲ್ಲರಿಗೂ ಮಾತಾಡೋ ಸಾಮರ್ಥ್ಯನ ಒಂದು ಗಿಫ್ಟ್ ಆಗಿ ಕೊಟ್ಟಿದ್ದಾನೆ. ಆದಾಮ ಸೃಷ್ಟಿಯಾದ ಕ್ಷಣದಿಂದಾನೇ ತನ್ನ ಸ್ವರ್ಗೀಯ ಅಪ್ಪ ಯೆಹೋವನ ಜೊತೆ ಮಾತಾಡೋಕೆ ಶುರುಮಾಡಿದ. ಆಮೇಲೆ ಅವನು ಹೊಸ ಪದಗಳನ್ನ ಕಂಡುಹಿಡಿದು ಪ್ರಾಣಿಗಳಿಗೆ ಹೆಸರಿಟ್ಟ. (ಆದಿ. 2:19) ಅವನ ತರ ಮಾತಾಡೋ ಸಾಮರ್ಥ್ಯ ಇರೋ ಹವ್ವಳ ಹತ್ರ ಮೊದಲ ಸಲ ಮಾತಾಡಿದಾಗ ಅವನ ಮೈಯೆಲ್ಲಾ ಜುಮ್ ಅನಿಸಿರಬೇಕು!—ಆದಿ. 2:22, 23.
2. (ಎ) ಮಾತಾಡೋ ಸಾಮರ್ಥ್ಯ ಹೇಗೆ ಹದಗೆಡೋಕೆ ಶುರುವಾಯ್ತು? (ಬಿ) ಈಗ ಪರಿಸ್ಥಿತಿ ಹೇಗಿದೆ?
2 ದೇವರು ಕೊಟ್ಟ ಈ ಗಿಫ್ಟ್ನ ಮನುಷ್ಯರು ತುಂಬ ಬೇಗ ಹಾಳು ಮಾಡಿಕೊಂಡುಬಿಟ್ರು. ಸೈತಾನ ಹವ್ವಳಿಗೆ ಸುಳ್ಳು ಹೇಳಿದ. ಇದರಿಂದ ಮನುಷ್ಯರಿಗೆ ಪಾಪ ಮತ್ತು ಮರಣ ಬಂತು. (ಆದಿ. 3:1-4) ಆದಾಮ ತಾನು ಮಾಡಿದ ತಪ್ಪಿಗೆ ಹವ್ವ ಮತ್ತು ಯೆಹೋವನೇ ಕಾರಣ ಅಂತ ದೂರು ಹೇಳಿ ತನ್ನ ಗಿಫ್ಟ್ನ ದುರುಪಯೋಗಿಸಿಕೊಂಡ. (ಆದಿ. 3:12) ಕಾಯಿನ ತಮ್ಮನನ್ನು ಕೊಂದ ಮೇಲೆ ಯೆಹೋವನ ಹತ್ರ ಸುಳ್ಳು ಹೇಳಿದ. (ಆದಿ. 4:9) ಕೆಲವು ವರ್ಷಗಳಾದ ಮೇಲೆ ಕಾಯಿನನ ವಂಶದಲ್ಲಿ ಬಂದ ಲೆಮೆಕ ತನ್ನ ಕಾಲದಲ್ಲಿದ್ದ ಜನರು ಎಷ್ಟು ಕ್ರೂರಿಗಳಾಗಿದ್ರು ಅನ್ನೋದರ ಬಗ್ಗೆ ಕವಿತೆ ಬರೆದ. (ಆದಿ. 4:23, 24) ಹಾಗಾದ್ರೆ ಈಗ ಜನ್ರು ಹೇಗಿದ್ದಾರೆ? ರಾಜಕೀಯ ನಾಯಕರು ಜನರ ಮುಂದೆ ಕೆಟ್ಟ ಮಾತುಗಳನ್ನಾಡುತ್ತಾರೆ. ಈಗಿನ ಚಲನಚಿತ್ರಗಳಲ್ಲೂ ಇದು ಸರ್ವೇಸಾಮಾನ್ಯ ಆಗಿಬಿಟ್ಟಿದೆ. ಅಷ್ಟೇ ಅಲ್ಲ, ಸ್ಕೂಲಿಗೆ ಹೋಗೋ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ರೂ ಕೆಟ್ಟ ಮಾತುಗಳನ್ನಾಡುತ್ತಾರೆ, ಬೈತಾರೆ. ಇದನ್ನೆಲ್ಲಾ ನೋಡುವಾಗ ಇವತ್ತು ಲೋಕ ಎಷ್ಟು ಹದಗೆಟ್ಟಿದೆ ಅಂತ ಗೊತ್ತಾಗುತ್ತೆ.
3. (ಎ) ನಾವ್ಯಾಕೆ ಹುಷಾರಾಗಿರಬೇಕು? (ಬಿ) ಈ ಲೇಖನದಲ್ಲಿ ಏನು ಕಲಿತೀವಿ?
3 ಜನರು ಕೆಟ್ಟದಾಗಿ ಮಾತಾಡೋದನ್ನ ಕೇಳ್ತಾ-ಕೇಳ್ತಾ ನಾವೂ ಅವರ ತರ ಆಗಿಬಿಡಬಹುದು. ಅದಕ್ಕೇ ನಾವು ಹುಷಾರಾಗಿರಬೇಕು. ಕ್ರೈಸ್ತರಾಗಿ ನಾವು ಯೆಹೋವನನ್ನ ಖುಷಿಪಡಿಸೋಕೆ ಇಷ್ಟಪಡ್ತೀವಿ. ಅದಕ್ಕೆ ನಾವು ಕೆಟ್ಟಮಾತುಗಳನ್ನ ಆಡದೇ ಇರೋದಷ್ಟೇ ಅಲ್ಲ ನಮ್ಮ ಮಾತಲ್ಲಿ ಯೆಹೋವನನ್ನ ಹೊಗಳಬೇಕು. ಹಾಗಾಗಿ ಸೇವೆಯಲ್ಲಿ, ಕೂಟಗಳಲ್ಲಿ ಮತ್ತು ಬೇರೆಯವರ ಜೊತೆ ಮಾತಾಡುವಾಗ ಈ ಸಾಮರ್ಥ್ಯನ ಹೇಗೆ ಒಳ್ಳೇ ರೀತಿಯಲ್ಲಿ ಬಳಸೋದು ಅಂತ ಈ ಲೇಖನದಲ್ಲಿ ಕಲಿಯೋಣ. ಆದ್ರೆ ಅದಕ್ಕೂ ಮೊದಲು ನಮ್ಮ ಮಾತು ಯೆಹೋವನಿಗೆ ಯಾಕೆ ಮುಖ್ಯ ಅಂತ ನೋಡೋಣ.
ನಮ್ಮ ಮಾತು ಯೆಹೋವನಿಗೆ ಯಾಕೆ ಮುಖ್ಯ
4. ಮಲಾಕಿ 3:16 ರಲ್ಲಿ ಹೇಳೋ ಹಾಗೆ ನಮ್ಮ ಮಾತು ಯೆಹೋವನಿಗೆ ಯಾಕೆ ಮುಖ್ಯ?
4 ಮಲಾಕಿ 3:16 ಓದಿ. ಯಾರು ತಮ್ಮ ಮಾತಲ್ಲಿ ಯೆಹೋವನ ಮೇಲೆ ತಮಗೆ ಭಯಭಕ್ತಿ ಇದೆ, ಆತನ ಹೆಸರನ್ನ ಅವರು ಧ್ಯಾನಿಸ್ತಾರೆ ಅಂತ ತೋರಿಸ್ತಾರೋ, ಅಂಥವರ ಹೆಸರನ್ನ “ಜ್ಞಾಪಕ ಪುಸ್ತಕದಲ್ಲಿ” ಬರೆದಿಡೋಕೆ ಯೆಹೋವ ಯಾಕೆ ಹೇಳಿದನು? ಯಾಕಂದ್ರೆ ನಮ್ಮ ಮಾತು ನಮ್ಮ ಮನಸ್ಸಲ್ಲಿ ಏನಿದೆ ಅಂತ ತೋರಿಸಿಕೊಡುತ್ತೆ. “ಹೃದಯದಲ್ಲಿ ಇರೋದೇ ಬಾಯಲ್ಲಿ ಬರೋದು” ಅಂತ ಯೇಸು ಹೇಳಿದನು. (ಮತ್ತಾ. 12:34) ನಾವು ಯಾವ ವಿಷಯದ ಬಗ್ಗೆ ಮಾತಾಡುತ್ತೀವೋ ಅದರಿಂದ ನಮಗೆ ಯೆಹೋವನ ಮೇಲೆ ಪ್ರೀತಿ ಇದ್ಯಾ ಇಲ್ವಾ ಅಂತ ಗೊತ್ತಾಗುತ್ತೆ. ಯಾರೆಲ್ಲಾ ಆತನನ್ನ ಪ್ರೀತಿಸ್ತಾರೋ ಅವರಿಗೆ ಆತನು ಹೊಸಲೋಕದಲ್ಲಿ ಶಾಶ್ವತ ಜೀವ ಕೊಡ್ತಾನೆ.
5. (ಎ) ನಾವು ಮಾಡೋ ಆರಾಧನೆಯನ್ನ ಯೆಹೋವ ಯಾವಾಗ ಮೆಚ್ಚಿಕೊಳ್ತಾನೆ? (ಬಿ) ಚಿತ್ರದಲ್ಲಿ ತೋರಿಸಿರೋ ಹಾಗೆ ನಮ್ಮ ಮಾತಿನ ಬಗ್ಗೆ ನಾವೇನು ಮನಸ್ಸಲ್ಲಿಡಬೇಕು?
5 ನಾವು ಮಾಡೋ ಆರಾಧನೆ ಯೆಹೋವನಿಗೆ ಇಷ್ಟ ಆಗಬೇಕಾದ್ರೆ ನಮ್ಮ ಮಾತು ಯಾವಾಗಲೂ ಸರಿಯಾಗಿರಬೇಕು. (ಯಾಕೋ. 1:26) ದೇವರನ್ನ ಪ್ರೀತಿಸದವರು ಯಾವಾಗಲೂ ಕೋಪದಿಂದ, ದುರಹಂಕಾರದಿಂದ ಮತ್ತು ಬೇರೆಯವರ ಮನಸ್ಸಿಗೆ ನೋವಾಗೋ ತರ ಮಾತಾಡ್ತಾರೆ. (2 ತಿಮೊ. 3:1-5) ಆದ್ರೆ ನಾವು ಆ ತರ ಇರಬಾರದು. ನಾವು ಯೆಹೋವನಿಗೆ ಇಷ್ಟ ಆಗೋ ತರ ಮಾತಾಡಬೇಕು. ಹಾಗಾಗಿ ಸಿಹಿಸುದ್ದಿ ಸಾರುವಾಗ, ಕೂಟಗಳಲ್ಲಿ ಇರುವಾಗ ಮಾತ್ರ ಅಲ್ಲ, ನಾಲ್ಕು ಗೋಡೆಗಳ ಮಧ್ಯೆ ಇರುವಾಗಲೂ ಅಂದ್ರೆ ನಮ್ಮ ಕುಟುಂಬದವರ ಜೊತೆನೂ ಪ್ರೀತಿ, ದಯೆಯಿಂದ ಮಾತಾಡಬೇಕು. ಆಗ ಯೆಹೋವ ನಮ್ಮನ್ನ ಇಷ್ಟಪಡ್ತಾನೆ.—1 ಪೇತ್ರ 3:7.
6. ಕಿಂಬರ್ಲಿ ಒಳ್ಳೇ ರೀತಿಯಲ್ಲಿ ಮಾತಾಡಿದ್ರಿಂದ ಏನಾಯ್ತು?
6 ನಮ್ಮ ಮಾತು ನಾವು ಯೆಹೋವನ ಆರಾಧಕರಾ ಇಲ್ವಾ ಅನ್ನೋದನ್ನ ತೋರಿಸಿಕೊಡುತ್ತೆ. ಇದರಿಂದ “ದೇವರನ್ನ ಆರಾಧಿಸುವವನಿಗೂ ಆರಾಧಿಸದವನಿಗೂ ಇರೋ ವ್ಯತ್ಯಾಸವನ್ನ” ಬೇರೆಯವರಿಗೆ ತೋರಿಸಿಕೊಡ್ತೀವಿ. (ಮಲಾ. 3:18) ಸಹೋದರಿ ಕಿಂಬರ್ಲಿb ಅವರ ಉದಾಹರಣೆ ನೋಡಿ. ಅವರು ಒಂದು ಸಲ ತನ್ನ ಕ್ಲಾಸ್ಮೇಟ್ ಜೊತೆ ಸ್ಕೂಲ್ ಪ್ರಾಜೆಕ್ಟ್ ಮಾಡ್ತಾ ಇದ್ರು. ಪ್ರಾಜೆಕ್ಟ್ ಮುಗಿಸಿದ ಮೇಲೆ ಕಿಂಬರ್ಲಿಯ ಕ್ಲಾಸ್ಮೇಟ್, ಇವಳು ಬೇರೆಯವರ ತರ ಅಲ್ಲ ಅಂತ ಅರ್ಥಮಾಡಿಕೊಂಡಳು. ಕಿಂಬರ್ಲಿ ಯಾವತ್ತೂ ಬೇರೆ ಮಕ್ಕಳ ಬಗ್ಗೆ ಅವರ ಮುಂದೆ ಒಂಥರಾ ಹಿಂದೆ ಇನ್ನೊಂದು ಥರ ಮಾತಾಡುತ್ತಿರಲಿಲ್ಲ. ಯಾರಿಗೂ ಬೈಯುತ್ತಿರಲಿಲ್ಲ. ಎಲ್ಲರ ಬಗ್ಗೆ ಒಳ್ಳೇದೇ ಮಾತಾಡ್ತಾ ಇದ್ದಳು. ಇದು ಅವಳ ಕ್ಲಾಸ್ಮೇಟ್ಗೆ ಎಷ್ಟು ಇಷ್ಟ ಆಯ್ತಂದ್ರೆ ಅವಳು ಬೈಬಲ್ ಕಲಿಯೋಕೆ ಶುರುಮಾಡಿದಳು. ಮಾತಾಡೋ ಸಾಮರ್ಥ್ಯನ ನಾವು ಸರಿಯಾಗಿ ಉಪಯೋಗಿಸುವಾಗ ಯೆಹೋವನಿಗೆ ಎಷ್ಟು ಖುಷಿಯಾಗುತ್ತೆ ಅಲ್ವಾ? ಇದರಿಂದ ಬೇರೆಯವರೂ ಸತ್ಯಕ್ಕೆ ಬರಬಹುದು.
7. ನಿಮ್ಮ ಮಾತು ಹೇಗಿರಬೇಕು ಅಂತ ಆಸೆಪಡ್ತೀರಾ?
7 ಯೆಹೋವ ದೇವರಿಗೆ ಮತ್ತು ನಮ್ಮ ಸಹೋದರ ಸಹೋದರಿಯರಿಗೆ ಇಷ್ಟ ಆಗೋ ತರ ಮಾತಾಡೋಕೆ ನಾವೆಲ್ರೂ ಆಸೆ ಪಡ್ತೀವಿ. ಹಾಗಾಗಿ ನಮ್ಮ ‘ಮಾತಲ್ಲಿ ಮಾದರಿಯಾಗಿರೋಕೆ’ ಏನು ಮಾಡಬೇಕು ಅಂತ ನಾವೀಗ ನೋಡೋಣ.
ಸೇವೆಯಲ್ಲಿ ಮಾದರಿಯಾಗಿರಿ
8. ಸೇವೆ ಮಾಡುವಾಗ ನಾವು ಹೇಗೆ ಯೇಸು ತರ ಇರಬೇಕು?
8 ಯಾರಾದ್ರೂ ಕೋಪ ಬರಿಸಿದಾಗಲೂ ಪ್ರೀತಿ ಮತ್ತು ಗೌರವದಿಂದ ಮಾತಾಡಿ. ಯೇಸು ಸೇವೆ ಮಾಡುತ್ತಿದ್ದಾಗ ಕೆಲವರು ಅವನನ್ನ ಕುಡುಕ, ಹೊಟ್ಟೆಬಾಕ, ಸೈತಾನನ ಕಡೆಯವನು, ಸಬ್ಬತ್ ನಿಯಮನ ಮುರಿಯುವವನು, ದೇವದೂಷಕ ಅಂತೆಲ್ಲಾ ಸುಳ್ಳಾರೋಪ ಹಾಕಿದ್ರು. (ಮತ್ತಾ. 11:19; 26:65; ಲೂಕ 11:15; ಯೋಹಾ. 9:16) ಆದ್ರೆ ಯೇಸು ಅವರ ಮೇಲೆ ಕೋಪ ಮಾಡಿಕೊಂಡು ಅವರಿಗೆ ತಿರುಗಿಸಿ ಬೈಯಲಿಲ್ಲ. ನಮಗೂ ಯಾರಾದ್ರು ಬೈದಾಗ ನಾವೂ ತಿರುಗಿಸಿ ಬೈಯೋಕೆ ಹೋಗಬಾರದು. (1 ಪೇತ್ರ 2:21-23) ಇದನ್ನ ಮಾಡೋದು ಹೇಳಿದಷ್ಟು ಸುಲಭ ಅಲ್ಲ. (ಯಾಕೋ. 3:2) ಆದ್ರೂ ಇದನ್ನ ಮಾಡೋಕೆ ಆಗುತ್ತೆ. ಹೇಗೆ ಅಂತ ನೋಡೋಣ.
9. ಸೇವೆಗೆ ಹೋದಾಗ ನಮಗೆ ಯಾರಾದ್ರೂ ಬೈದ್ರೆ ನಾವೇನು ಮಾಡಬೇಕು?
9 ಸಿಹಿಸುದ್ದಿ ಸಾರುವಾಗ ಯಾರಾದ್ರೂ ನಮ್ಮನ್ನ ಬೈದ್ರೆ ನಾವು ಬೇಜಾರು ಮಾಡಿಕೊಳ್ಳಬಾರದು. “ನಾನು ಸಿಹಿಸುದ್ದಿ ಸಾರುವಾಗ, ಜನರಿಗೆ ಸತ್ಯ ತಿಳಿಸೋದು ತುಂಬ ಮುಖ್ಯ ಮತ್ತು ಮುಂದೆ ಒಂದಿನ ಅವರು ಬದಲಾಗಬಹುದು ಅನ್ನೋದನ್ನ ಯಾವಾಗಲೂ ಮನಸ್ಸಲ್ಲಿ ಇಟ್ಟುಕೊಂಡಿರುತ್ತೀನಿ” ಅಂತ ಸಹೋದರ ಸ್ಯಾಮ್ ಹೇಳ್ತಾರೆ. ಕೆಲವೊಮ್ಮೆ ಮನೆಯವರ ಮೂಡ್ ಸರಿಯಿಲ್ಲದೆ ಇದ್ದಾಗ ನಾವು ಅವರ ಮನೆ ಬಾಗಿಲು ತಟ್ಟಿದ್ರೆ ಅವರಿಗೆ ಕೋಪ ಬರಬಹುದು. ಅಂಥ ಸಮಯದಲ್ಲಿ ನಾವು ಸಹೋದರಿ ಸಿಂತಿಯಾ ತರ ಮಾಡಬೇಕು. ಅವರಿಗೆ ಯಾರಾದ್ರೂ ಬೈದಾಗ ತಕ್ಷಣ ಪ್ರಾರ್ಥನೆ ಮಾಡ್ತಾರೆ. ಮನೆಯವರ ಮೇಲೆ ಕೋಪಿಸಿಕೊಳ್ಳದೆ ಇರೋಕೆ, ತಿರುಗಿಸಿ ಏನೂ ಮಾತಾಡದೇ ಇರೋಕೆ ಸಹಾಯ ಮಾಡಪ್ಪಾ ಅಂತ ಯೆಹೋವ ಹತ್ರ ಕೇಳ್ತಾರೆ.
10. ಒಂದನೇ ತಿಮೊತಿ 4:13 ರಲ್ಲಿ ಹೇಳಿರೋ ತರ ನಾವು ಏನು ಮಾಡ್ತಾ ಇರಬೇಕು?
10 ಚೆನ್ನಾಗಿ ಕಲಿಸಿ. ತಿಮೊತಿಗೆ ಕಲಿಸೋದ್ರಲ್ಲಿ ಈಗಾಗಲೇ ತುಂಬ ಅನುಭವ ಇತ್ತು. ಆದ್ರೆ ಅದನ್ನ ಇನ್ನೂ ಚೆನ್ನಾಗಿ ಮಾಡೋಕೆ ಕಲಿಯಬೇಕಿತ್ತು. (1 ತಿಮೊತಿ 4:13 ಓದಿ.) ನಾವು ಸೇವೆಯಲ್ಲಿ ಜನರಿಗೆ ಚೆನ್ನಾಗಿ ಕಲಿಸಬೇಕು ಅಂದ್ರೆ ಏನು ಮಾಡಬೇಕು? ಚೆನ್ನಾಗಿ ತಯಾರಿ ಮಾಡಬೇಕು. ಜನರಿಗೆ ಕಲಿಸೋ ಸಾಮರ್ಥ್ಯ ಬೆಳೆಸಿಕೊಳ್ಳೋಕೆ ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ ಅನ್ನೋ ಕಿರುಹೊತ್ತಗೆ ಮತ್ತು ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿಯಲ್ಲಿ “ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ” ಅನ್ನೋ ಭಾಗದಿಂದ ನಮಗೆ ತುಂಬ ತರಬೇತಿ ಸಿಗುತ್ತೆ. ಇವುಗಳಿಂದ ಕಲಿಯೋಕೆ ನೀವು ಪ್ರಯತ್ನ ಮಾಡಿದ್ದೀರಾ? ನಾವು ಸೇವೆಗೆ ಹೋಗುವಾಗ ಚೆನ್ನಾಗಿ ತಯಾರಿ ಮಾಡಿಕೊಂಡು ಹೋದ್ರೆ ಜನರ ಹತ್ರ ಭಯ, ಆತಂಕ ಇಲ್ಲದೇ ಮಾತಾಡೋಕೆ ಆಗುತ್ತೆ.
11. ಕೆಲವರು ಚೆನ್ನಾಗಿ ಕಲಿಸೋ ಸಾಮರ್ಥ್ಯನ ಹೇಗೆ ಬೆಳೆಸಿಕೊಂಡಿದ್ದಾರೆ?
11 ಸಹೋದರ ಸಹೋದರಿಯರಿಂದನೂ ನಾವು ಕಲಿಯಬಹುದು. ಕೆಲವು ಸಹೋದರರು ಚೆನ್ನಾಗಿ ಕಲಿಸೋಕೆ ಯಾವ ವಿಧಾನಗಳನ್ನ ಬಳಸ್ತಾರೆ ಅಂತ ಸಹೋದರ ಸ್ಯಾಮ್ ಗಮನಿಸ್ತಾರೆ. ಆಮೇಲೆ ಅವರ ತರಾನೇ ಕಲಿಸೋಕೆ ಪ್ರಯತ್ನ ಮಾಡ್ತಾರೆ. ಭಾಷಣ ಕೊಡುವಾಗ ಅನುಭವ ಇರೋ ಸಹೋದರರು ಒಂದು ವಿಷಯವನ್ನ ಹೇಗೆ ವಿವರಿಸುತ್ತಾರೆ ಅನ್ನೋದನ್ನ ಸಹೋದರಿ ಟ್ಯಾಲಿಯ ಗಮನ ಕೊಟ್ಟು ಕೇಳಿಸಿಕೊಳ್ತಾರೆ. ಇದ್ರಿಂದ ಸೇವೆಯಲ್ಲಿ ಜನರು ಪ್ರಶ್ನೆಗಳನ್ನ ಕೇಳಿದಾಗ ಹೇಗೆ ಉತ್ತರ ಕೊಡಬೇಕು, ಹೇಗೆ ವಿಷಯಗಳನ್ನ ವಿವರಿಸಬೇಕು ಅಂತ ಕಲ್ತಿದ್ದಾರೆ.
ಕೂಟಗಳಲ್ಲಿ ಮಾದರಿಯಾಗಿರಿ
12. ಕೆಲವರಿಗೆ ಯಾವುದು ಕಷ್ಟ ಅನಿಸುತ್ತೆ?
12 ಕೂಟಗಳಲ್ಲಿ ಚೆನ್ನಾಗಿ ತಯಾರಿ ಮಾಡಿ ಉತ್ತರ ಹೇಳೋಕೆ ಮತ್ತು ಹಾಡು ಹಾಡೋಕೆ ನಮ್ಮೆಲ್ಲರಿಗೂ ಅವಕಾಶ ಇದೆ. (ಕೀರ್ತ. 22:22) ಆದ್ರೆ ಇದನ್ನ ಮಾಡೋಕೆ ಕೆಲವರಿಗೆ ಕಷ್ಟ ಆಗಬಹುದು. ನಿಮಗೂ ಕಷ್ಟ ಅನಿಸಿದ್ಯಾ? ಕೆಲವರ ಅನುಭವವನ್ನ ಈಗ ನೋಡೋಣ.
13. ಕೂಟಗಳಲ್ಲಿ ಮನಸಾರೆ ಹಾಡೋಕೆ ಏನು ಮಾಡಬೇಕು?
13 ಮನಸಾರೆ ಹಾಡಿ. ನಾವು ಕೂಟಗಳಲ್ಲಿ ಯೆಹೋವನನ್ನು ಸ್ತುತಿಸೋಕೆ ಹಾಡು ಹಾಡ್ತೀವಿ ಅನ್ನೋದನ್ನ ನೆನಪಲ್ಲಿಟ್ಟುಕೊಳ್ಳಬೇಕು. ಸಾರಾ ಅನ್ನೋ ಸಹೋದರಿಗೆ ಅಷ್ಟು ಚೆನ್ನಾಗಿ ಹಾಡೋಕೆ ಬರಲ್ಲ ಅಂತ ಅನಿಸಿದ್ರೂ ಕೂಟಗಳಲ್ಲಿ ಹಾಡೋದನ್ನ ಬಿಟ್ಟುಬಿಡಲಿಲ್ಲ. ಯೆಹೋವನನ್ನು ಸ್ತುತಿಸೋಕೆ ಆಸೆ ಪಡುತ್ತಿದ್ರು. ಹಾಗಾಗಿ ಅವರು ಕೂಟಗಳಿಗೆ ತಯಾರಿ ಮಾಡುವಾಗಲೇ ಹಾಡನ್ನ ಚೆನ್ನಾಗಿ ಪ್ರಾಕ್ಟಿಸ್ ಮಾಡ್ತಾ ಇದ್ರು. ಕೂಟದಲ್ಲಿ ಕಲಿಯೋ ವಿಷಯಕ್ಕೂ, ಆ ಹಾಡಿಗೂ ಏನು ಸಂಬಂಧ ಅಂತ ನೋಡ್ತಿದ್ರು. “ಇದ್ರಿಂದ ನಾನು ಹೇಗೆ ಹಾಡ್ತೀನಿ ಅನ್ನೋದರ ಮೇಲಲ್ಲ, ಹಾಡಲ್ಲಿರೋ ವಿಷಯಗಳ ಮೇಲೆ ನನಗೆ ಗಮನ ಕೊಡೋಕೆ ಆಯ್ತು” ಅಂತ ಆ ಸಹೋದರಿ ಹೇಳ್ತಾರೆ.
14. ಕೂಟಗಳಲ್ಲಿ ಉತ್ತರ ಕೊಡೋಕೆ ಭಯ ಆದ್ರೆ ನಾವೇನು ಮಾಡಬೇಕು?
14 ಎಲ್ಲಾ ಕೂಟಗಳಲ್ಲೂ ಉತ್ತರ ಹೇಳೋಕೆ ಪ್ರಯತ್ನ ಮಾಡಿ. ಕೆಲವರಿಗೆ ಇದನ್ನ ಮಾಡೋಕೆ ತುಂಬ ಕಷ್ಟ. “ಕೂಟಗಳಲ್ಲಿ ಉತ್ತರ ಹೇಳೋಕೆ ನನಗೆ ತುಂಬ ಭಯ ಆಗುತ್ತೆ. ಆದ್ರೆ ನನ್ನ ಉತ್ತರ ಕೇಳಿಸಿಕೊಳ್ಳುವವರಿಗೆ ನನಗಾಗ್ತಿರೋ ಭಯ ಗೊತ್ತಾಗಲ್ಲ.” ಅಂತ ಟ್ಯಾಲಿಯ ಹೇಳ್ತಾರೆ. ಆದ್ರೂ ಅವರು ಉತ್ತರ ಹೇಳೋಕೆ ತುಂಬ ಪ್ರಯತ್ನ ಮಾಡ್ತಾರೆ. ಅವರು ಕೂಟಗಳಿಗೆ ತಯಾರಿ ಮಾಡುವಾಗ ಮೊದಲು ಉತ್ತರ ಕೊಡೋರು ನೇರವಾಗಿ, ಸರಳವಾಗಿ, ಚಿಕ್ಕ ಉತ್ತರ ಕೊಡಬೇಕು ಅನ್ನೋದನ್ನ ಮನಸ್ಸಲ್ಲಿ ಇಟ್ಟುಕೊಳ್ತಾರೆ. “ಹಾಗಾಗಿ ನಾನು ಚಿಕ್ಕ ಉತ್ತರ ಕೊಟ್ಟಾಗ ನನಗೆ ಬೇಜಾರಾಗಲ್ಲ. ಯಾಕಂದ್ರೆ ಕೂಟ ನಡಿಸ್ತಿರೋ ಸಹೋದರರಿಗೆ ಬೇಕಾಗಿರೋದು ಅದೇ” ಅಂತ ಅವರು ಹೇಳ್ತಾರೆ.
15. ಉತ್ತರ ಹೇಳೋ ವಿಷಯದ ಬಗ್ಗೆ ನಾವು ಏನನ್ನ ಮನಸ್ಸಲ್ಲಿಡಬೇಕು?
15 ನಾಚಿಕೆ ಸ್ವಭಾವ ಇಲ್ಲದೆ ಇರೋರು ಕೂಡ ಕೆಲವೊಮ್ಮೆ ಉತ್ತರ ಹೇಳೋಕೆ ಹಿಂದೆ ಮುಂದೆ ನೋಡ್ತಾರೆ. ಯಾಕೆ? “ನಾನು ಕೊಡೋ ಉತ್ತರ ತುಂಬ ಚಿಕ್ಕದು, ಅಷ್ಟೇನು ಚೆನ್ನಾಗಿರಲ್ಲ” ಅಂತ ಸಹೋದರಿ ಜೂಲಿಯೆಟ್ ಹೇಳ್ತಾರೆ. ಆದ್ರೆ ನಾವು ಈ ತರ ಯೋಚನೆ ಮಾಡಬಾರದು. ನಮ್ಮಿಂದ ಆದಷ್ಟು ಒಳ್ಳೇ ಉತ್ತರ ಕೊಡಬೇಕು ಅಂತ ಯೆಹೋವ ಇಷ್ಟ ಪಡ್ತಾನೆ ಅನ್ನೋದನ್ನ ನಾವು ನೆನಪಲ್ಲಿಡಬೇಕು.c ಅಷ್ಟೇ ಅಲ್ಲ, ನಮಗೆ ಭಯ ಆದ್ರೂ ಕೂಟಗಳಲ್ಲಿ ಉತ್ತರ ಕೊಡ್ತಾ ಇದ್ರೆ ಯೆಹೋವನಿಗೆ ಇಷ್ಟ ಆಗುತ್ತೆ.
ಬೇರೆಯವರ ಜೊತೆ ಮಾತಾಡುವಾಗ ಮಾದರಿಯಾಗಿರಿ
16. ನಾವು ಯಾವ ರೀತಿಯ ಮಾತುಗಳನ್ನಾಡಬಾರದು?
16 “ಬೈಗುಳ” ಮತ್ತು ಬೇರೆಯವರ ಮನಸ್ಸು ನೋಯಿಸುವ ಮಾತುಗಳನ್ನಾಡಬೇಡಿ. (ಎಫೆ. 4:31) ಕ್ರೈಸ್ತರಾಗಿ ನಾವು ಕೆಟ್ಟ ಮಾತುಗಳನ್ನ ಆಡಲೇಬಾರದು. ಆದ್ರೆ ಕೆಲವೊಮ್ಮೆ ನಾವು ನಮಗೇ ಗೊತ್ತಿಲ್ಲದೆ ಬೇರೆಯವರಿಗೆ ನೋವಾಗೋ ತರ ಮತ್ತು ಬೇಜಾರಾಗೋ ತರ ಮಾತಾಡಿಬಿಡಬಹುದು. ಅದಕ್ಕೆ ನಾವು ಹುಷಾರಾಗಿರಬೇಕು. ಉದಾಹರಣೆಗೆ ಬೇರೆ ದೇಶ, ಭಾಷೆ, ಸಂಸ್ಕೃತಿಯ ಜನರ ಬಗ್ಗೆ ಕೀಳಾಗಿ ಅಥವಾ ಹೀಯಾಳಿಸಿ ಮಾತಾಡಬಾರದು. ಇದರ ಬಗ್ಗೆ ಒಬ್ಬ ಸಹೋದರ ಹೀಗೆ ಹೇಳಿದ್ರು: “ಕೆಲವೊಮ್ಮೆ ನಾನು ತಮಾಷೆಗೆ ಬೇರೆಯವರನ್ನ ರೇಗಿಸುತ್ತಿದ್ದೆ. ಆದ್ರೆ ಇದ್ರಿಂದ ಬೇರೆಯವರ ಮನಸ್ಸಿಗೆ ತುಂಬ ನೋವಾಗಿದೆ. ಹೀಗಾದಾಗೆಲ್ಲ ನನ್ನ ಹೆಂಡತಿ ಪಕ್ಕಕ್ಕೆ ಕರಕೊಂಡು ಹೋಗಿ ನನ್ನ ತಪ್ಪನ್ನ ನನಗೆ ಅರ್ಥ ಮಾಡಿಸುತ್ತಿದ್ದಳು. ನಾನು ಹಾಗೆ ಮಾತಾಡಿದ್ರಿಂದ ಅವಳಿಗೆ ಮತ್ತು ಬೇರೆಯವರಿಗೆ ನೋವಾಗ್ತಿದೆ ಅಂತ ಹೇಳ್ತಿದ್ದಳು.”
17. ಎಫೆಸ 4:29 ರಲ್ಲಿ ಹೇಳೋ ಹಾಗೆ, ನಾವು ಬೇರೆಯವರನ್ನ ಹೇಗೆ ಹುರಿದುಂಬಿಸಬಹುದು?
17 ಬೇರೆಯವರನ್ನ ಹುರಿದುಂಬಿಸೋ ತರ ಮಾತಾಡಿ. ಬೇರೆಯವರಲ್ಲಿ ಯಾವಾಗಲೂ ತಪ್ಪು ಹುಡುಕೋ ಬದಲು ಅವರನ್ನ ಹೊಗಳಿ. (ಎಫೆಸ 4:29 ಓದಿ.) ಇಸ್ರಾಯೇಲ್ಯರಿಗೆ ತುಂಬ ಆಶೀರ್ವಾದಗಳು ಸಿಕ್ತು. ಆದ್ರೆ ಅವರು ಅದಕ್ಕೆ ಖುಷಿ ಪಡೋದು ಬಿಟ್ಟು ಯಾವಾಗಲೂ ಗೊಣಗುತ್ತಾ ಇದ್ರು. ಹಾಗೇ ಒಬ್ಬ ವ್ಯಕ್ತಿ ಬೇರೆಯವರಲ್ಲಿ ತಪ್ಪನ್ನೇ ಹುಡುಕ್ತಾ ಇದ್ರೆ ಅವನನ್ನ ನೋಡಿದವರೂ ಅದನ್ನೇ ಕಲಿತಾರೆ. ಉದಾಹರಣೆಗೆ, ಹತ್ತು ಗೂಢಾಚಾರರು ಹೇಳಿದ ಸುದ್ದಿಯನ್ನು ಕೇಳಿ “ಇಸ್ರಾಯೇಲ್ಯರೆಲ್ಲ . . . ಮೋಶೆ, ಆರೋನರ ವಿರುದ್ಧ ಗೊಣಗೋಕೆ ಶುರು ಮಾಡಿದ್ರು.” (ಅರ. 13:31–14:4) ಆದ್ರೆ ನಾವು ಯಾವಾಗಲೂ ಬೇರೆಯವರನ್ನ ಹೊಗಳ್ತಿದ್ರೆ ಎಲ್ಲರೂ ಖುಷಿಯಾಗಿರುತ್ತಾರೆ. ಯೆಫ್ತಾಹನ ಮಗಳನ್ನ ನೆನಪಿಸಿಕೊಳ್ಳಿ. ಅವಳನ್ನ ನೋಡೋಕೆ ಅವಳ ಫ್ರೆಂಡ್ಸ್ ಪ್ರತಿವರ್ಷ ಹೋಗುತ್ತಿದ್ದರು. ಅವಳನ್ನ ಹೊಗಳುತ್ತಿದ್ರು. ಇದರಿಂದ ಜೀವನ ಪೂರ್ತಿ ಯೆಹೋವನ ಸೇವೆ ಮಾಡೋಕೆ ಅವಳಿಗೆ ತುಂಬ ಪ್ರೋತ್ಸಾಹ ಸಿಕ್ಕಿರಬೇಕು. (ನ್ಯಾಯ. 11:40) ಸಹೋದರಿ ಸಾರಾ ಹೀಗೆ ಹೇಳ್ತಾರೆ: “ನಾವು ಬೇರೆಯವರನ್ನ ಹೊಗಳಿದಾಗ, ತಮ್ಮನ್ನು ಯೆಹೋವ ತುಂಬ ಪ್ರೀತಿಸ್ತಾನೆ, ಸಂಘಟನೆಗೆ ತಾವು ತುಂಬ ಅಮೂಲ್ಯ ಅಂತ ಅವರಿಗೆ ಅನಿಸುತ್ತೆ.” ಹಾಗಾಗಿ ಅವಕಾಶ ಸಿಕ್ಕಿದಾಗೆಲ್ಲಾ ಮನಸಾರೆ ಬೇರೆಯವರನ್ನ ಹೊಗಳಿ.
18. (ಎ) ಕೀರ್ತನೆ 15:1, 2 ರ ಪ್ರಕಾರ ನಾವ್ಯಾಕೆ ಸತ್ಯವನ್ನೇ ಹೇಳಬೇಕು? (ಬಿ) ಸತ್ಯ ಹೇಳೋದು ಅಂದ್ರೇನು?
18 ಸತ್ಯವನ್ನೇ ಮಾತಾಡಿ. ನಾವು ಸುಳ್ಳು ಹೇಳೋದು ಯೆಹೋವನಿಗೆ ಇಷ್ಟ ಇಲ್ಲ. ಯಾಕಂದ್ರೆ ಅದನ್ನ ಆತನು ದ್ವೇಷಿಸುತ್ತಾನೆ. (ಜ್ಞಾನೋ. 6:16, 17) ಇವತ್ತು ಜನರಿಗೆ ಸುಳ್ಳು ಹೇಳೋದು ಸರ್ವೇಸಾಮಾನ್ಯ ಆಗಿದ್ರೂ ನಾವು ಸುಳ್ಳು ಹೇಳಲ್ಲ. ಈ ವಿಷಯದಲ್ಲಿ ನಾವು ಯೆಹೋವ ಇಷ್ಟಪಡೋ ತರಾನೇ ನಡೆದುಕೊಳ್ತೀವಿ. (ಕೀರ್ತನೆ 15:1, 2 ಓದಿ.) ನಾವು ಸುಳ್ಳು ಹೇಳದೇ ಇರಬಹುದು ನಿಜ, ಆದ್ರೆ ಒಂದು ವಿಷಯದ ಬಗ್ಗೆ ಪೂರ್ತಿ ಮಾಹಿತಿ ಕೊಡದೇ ಅದನ್ನ ಮುಚ್ಚಿಟ್ರೆ ಅದೂ ಸುಳ್ಳಾಗುತ್ತೆ. ಹಾಗಾಗಿ ಅದನ್ನೂ ನಾವು ಮಾಡಬಾರದು.
19. ನಾವು ಯಾವ ವಿಷಯದ ಬಗ್ಗೆ ಹುಷಾರಾಗಿರಬೇಕು?
19 ಬೇರೆಯವರ ಬಗ್ಗೆ ಕಿವಿಯೂದಬೇಡಿ. (ಜ್ಞಾನೋ. 25:23; 2 ಥೆಸ. 3:11) ಬೇರೆಯವರ ಬಗ್ಗೆ ಗಾಳಿಸುದ್ದಿ ಹಬ್ಬಿಸೋದ್ರಿಂದ ಏನೆಲ್ಲಾ ಕೆಟ್ಟದಾಗುತ್ತೆ ಅಂತ ಜೂಲಿಯೆಟ್ ಹೇಳ್ತಾರೆ ನೋಡಿ: “ಯಾರಾದ್ರೂ ನನ್ನ ಹತ್ರ ಬಂದು ಒಬ್ಬ ವ್ಯಕ್ತಿ ಬಗ್ಗೆ ತಪ್ಪಾಗಿ ಹೇಳಿದಾಗ ಅದು ನನಗೆ ಇಷ್ಟ ಆಗಲ್ಲ. ಅದನ್ನ ಹೇಳ್ತಿರೋ ವ್ಯಕ್ತಿ ಮೇಲೆ ನಂಬಿಕೆ ಹೋಗಿಬಿಡುತ್ತೆ. ಯಾಕಂದ್ರೆ ಇವತ್ತು ಬೇರೆಯವರ ಬಗ್ಗೆ ನನ್ನ ಹತ್ರ ಹೇಳ್ತಿರೋ ಇವರು ನಾಳೆ ನನ್ನ ಬಗ್ಗೆ ಬೇರೆಯವರ ಹತ್ರ ಹೋಗಿ ಹೇಳಲ್ಲ ಅಂತ ಏನು ಗ್ಯಾರಂಟಿ?” ಹಾಗಾಗಿ ಯಾರಾದ್ರೂ ನಿಮ್ಮ ಹತ್ರ ಅಂತೆ-ಕಂತೆಗಳನ್ನ ಹೇಳೋಕೆ ಬಂದ್ರೆ ವಿಷಯನ ಬದಲಾಯಿಸಿ ಬೇರೆಯವರ ಬಗ್ಗೆ ಒಳ್ಳೇದನ್ನೇ ಮಾತಾಡಿ.—ಕೊಲೊ. 4:6.
20. ನೀವು ಯಾವ ನಿರ್ಧಾರ ಮಾಡಿದ್ದೀರಾ?
20 ಈಗ ಎಲ್ಲಾ ಕಡೆ ಕೆಟ್ಟ ಮಾತಾಡುವವರೇ ಜಾಸ್ತಿಯಾಗಿದ್ದಾರೆ. ಆದ್ರೆ ನಾವು ಯಾವಾಗಲೂ ಯೆಹೋವನಿಗೆ ಇಷ್ಟ ಆಗೋ ತರಾನೇ ಮಾತಾಡೋಕೆ ಪ್ರಯತ್ನ ಮಾಡಬೇಕು. ಯಾಕಂದ್ರೆ ಆತನು ನಮಗೆ ಮಾತಾಡೋ ಸಾಮರ್ಥ್ಯನ ಗಿಫ್ಟ್ ತರ ಕೊಟ್ಟಿದ್ದಾನೆ. ನಾವು ಈ ಸಾಮರ್ಥ್ಯನ ಒಳ್ಳೇ ರೀತಿಯಲ್ಲಿ ಉಪಯೋಗಿಸಿಕೊಂಡಾಗ ಅಂದ್ರೆ ಸೇವೆಯಲ್ಲಿ, ಕೂಟಗಳಲ್ಲಿ ಮತ್ತು ಬೇರೆಯವರ ಜೊತೆ ಆತನಿಗೆ ಇಷ್ಟ ಆಗೋ ತರ ಮಾತಾಡಿದ್ರೆ ಖಂಡಿತ ಆತನು ಖುಷಿಪಡ್ತಾನೆ. ಯೆಹೋವ ಈ ಲೋಕದಲ್ಲಿರೋ ಕೆಟ್ಟ ಜನರನ್ನ ನಾಶಮಾಡಿದ ಮೇಲೆ ಆತನಿಗೆ ಗೌರವ ತರೋ ಹಾಗೆ ಮಾತಾಡೋಕೆ ನಮಗೆ ಇನ್ನೂ ಸುಲಭ ಆಗುತ್ತೆ. (ಯೂದ 15) ಅಲ್ಲಿ ತನಕ ‘ನಮ್ಮ ಮಾತು’ ಯಾವಾಗಲೂ ಆತನಿಗೆ ಇಷ್ಟ ಆಗೋ ತರಾನೇ ಇರಬೇಕು ಅಂತ ನಿರ್ಧಾರ ಮಾಡೋಣ.—ಕೀರ್ತ. 19:14.
ಗೀತೆ 83 ನಮಗೆ ಸ್ವನಿಯಂತ್ರಣ ಅಗತ್ಯ
a ಮಾತು ಅನ್ನೋದು ನಮಗೆ ಯೆಹೋವನಿಂದ ಸಿಕ್ಕಿರೋ ಗಿಫ್ಟ್. ಆದ್ರೆ ಈ ಗಿಫ್ಟ್ನ ತುಂಬ ಜನ ಯೆಹೋವನಿಗೆ ಇಷ್ಟ ಆಗೋ ತರ ಉಪಯೋಗಿಸುತ್ತಿಲ್ಲ. ಆದ್ರೆ ನಾವು ಬೇರೆಯವರಿಗೆ ಹುರಿದುಂಬಿಸೋ ತರ ಹೇಗೆ ಮಾತಾಡೋದು? ಸೇವೆಗೆ ಹೋದಾಗ, ಕೂಟಗಳಲ್ಲಿ ಮತ್ತು ಬೇರೆಯವರ ಜೊತೆ ಮಾತಾಡುವಾಗ ಯೆಹೋವನಿಗೆ ಇಷ್ಟ ಆಗೋ ತರ ಹೇಗೆ ಮಾತಾಡೋದು ಅಂತ ಈ ಲೇಖನದಲ್ಲಿ ನೋಡೋಣ.
b ಕೆಲವರ ಹೆಸರುಗಳು ಬದಲಾಗಿವೆ.
c ಹೆಚ್ಚಿನ ಮಾಹಿತಿಗಾಗಿ ಜನವರಿ 2019ರ ಕಾವಲಿನಬುರುಜುವಿನಲ್ಲಿರೋ “ಸಭೆಯಲ್ಲಿ ಯೆಹೋವನನ್ನು ಸ್ತುತಿಸಿ” ಅನ್ನೋ ಲೇಖನ ನೋಡಿ.
d ಚಿತ್ರ ವಿವರಣೆ ಪುಟ: ಕೋಪದಿಂದ ಮಾತಾಡ್ತಿರೋ ಮನೆಯವನಿಗೆ ಒಬ್ಬ ಸಹೋದರ ತಿರುಗಿಸಿ ಮಾತಾಡ್ತಿದ್ದಾನೆ; ಕೂಟದಲ್ಲಿ ಒಬ್ಬ ಸಹೋದರ ಹಾಡದೆ ಸುಮ್ಮನೆ ನಿಂತಿದ್ದಾನೆ; ಒಬ್ಬ ಸಹೋದರಿ ಗಾಳಿಸುದ್ದಿ ಹಬ್ಬಿಸುತ್ತಿದ್ದಾರೆ.