ಯೇಸುವಿನ ಜೀವನ ಮತ್ತು ಶುಶ್ರೂಷೆ
ಇನ್ನೂ ಹೆಚ್ಚು ಶಿಕ್ಷಣದ ಮೂಲಕ ಧನ್ಯರು
ಶಿಷ್ಯರಿಗೆ ಬಿತ್ತುವವನ ದೃಷ್ಟಾಂತದ ವಿವರಣೆ ಆಗಲೇ ಸಿಕ್ಕಿತ್ತು. ಆದರೆ ಈಗ ಅವರು ಹೆಚ್ಚು ಕಲಿಯಲು ಬಯಸುತ್ತಾರೆ. “ಹೊಲದಲ್ಲಿಯ ಹಣಜಿಯ ಸಾಮ್ಯದ ಅರ್ಥವನ್ನು ನಮಗೆ ಹೇಳು” ಎಂದು ಅವರು ಕೇಳಿಕೊಳ್ಳುತ್ತಾರೆ.
ಸಮುದ್ರದ ಕರೆಯಲ್ಲಿದ್ದ ಜನಸಮುದಾಯದಕ್ಕಿಂತ ಈ ಶಿಷ್ಯರ ಮನೋಭಾವ ಎಷ್ಟು ಚೆನ್ನಾಗಿತ್ತು! ಆ ಜನರಿಗೆ ದೃಷ್ಟಾಂತಗಳ ಒಳಾರ್ಥವನ್ನು ತಿಳಿಯುವ ತೀವ್ರಾಪೇಕ್ಷೆ ಇಲ್ಲ. ಅವುಗಳ ಹೊರಮೇರೆಯಲ್ಲಿ ಮಾತ್ರ ಅವರು ತೃಪ್ತರಾಗುತ್ತಾರೆ. ಸಮುದ್ರ ಬದಿಯ ಜನಸಮುದಾಯ ಮತ್ತು ತನ್ನ ಅನ್ವೇಷಣಶೀಲ ಶಿಷ್ಯರ ಮಧ್ಯೆ ವ್ಯತ್ಯಾಸವನ್ನು ತೋರಿಸುತ್ತಾ ಯೇಸು ಹೇಳುವುದು:
“ನೀವು ಅಳೆಯುವ ಅಳತೆಯಿಂದಲೇ ನಿಮಗೆ ಅಳೆಯುವರು; ಇನ್ನೂ ಕೂಡಿಸಿಕೊಡುವರು.” ಶಿಷ್ಯರು ಯೇಸುವಿಗೆ ತೀವ್ರಾಸಕ್ತಿ ಮತ್ತು ಗಮನವನ್ನು ಅಳೆದು ಕೊಡುತ್ತದ್ದುದರಿಂದ ಇನ್ನೂ ಹೆಚ್ಚು ಶಿಕ್ಷಣದಿಂದ ಆಶೀರ್ವದಿಸಲ್ಪಡುತ್ತಾರೆ. ಯೇಸು ತನ್ನ ಶಿಷ್ಯರ ಪ್ರಶ್ನೆಗೆ ಉತ್ತರ ನೀಡುತ್ತಾ ಹೇಳುವುದು:
“ಒಳ್ಳೆಯ ಬೀಜವನ್ನು ಬಿತ್ತುವವನೆಂದರೆ ಮನುಷ್ಯಕುಮಾರನು. ಹೊಲವೆಂದರೆ ಲೋಕ; ಒಳ್ಳೆಯ ಬೀಜವೆಂದರೆ ಪರಲೋಕ ರಾಜ್ಯದವರು [ರಾಜ್ಯ ಪುತ್ರರು]; ಹಣಜಿ ಅಂದರೆ ಸೈತಾನನವರು [ದುಷ್ಟನ ಪುತ್ರರು]. ಅದನ್ನು ಬಿತ್ತುವ ವೈರಿ ಅಂದರೆ ಸೈತಾನನು. ಸುಗ್ಗೀ ಕಾಲ ಅಂದರೆ ಯುಗದ ಸಮಾಪ್ತಿ; ಕೊಯ್ಯುವವರು ಅಂದರೆ ದೇವದೂತರು.”
ಈ ದೃಷ್ಟಾಂತದ ಪ್ರತಿಯೊಂದು ಭಾಗವನ್ನು ಗುರುತಿಸಿದ ಬಳಿಕ ಯೇಸು ಇದರ ಪರಿಣಾಮವನ್ನು ವರ್ಣಿಸುತ್ತಾನೆ. ಯುಗದ ಸಮಾಪ್ತಿಯಲ್ಲಿ “ಕೊಯ್ಯುವವರು” ಅಂದರೆ ದೇವದೂತರು ಹಣಜಿ ಸದೃಶವಾದ ನಕಲು, ಕ್ರೈಸ್ತರನ್ನು ನಿಜ “ರಾಜ್ಯದ ಪುತ್ರ” ರಿಂದ ಪ್ರತ್ಯೇಕಿಸುವರೆಂದು ಅವನು ಹೇಳುತ್ತಾನೆ. ಆಗ “ದುಷ್ಟನ ಪುತ್ರರು” ನಾಶಕ್ಕಾಗಿ ಗುರುತಿಸಲ್ಪಡುವರು. ಆದರೆ ದೇವರ ರಾಜ್ಯದ ಪುತ್ರರಾದ ”ನೀತಿವಂತರು”ತಮ್ಮ ತಂದೆಯ ರಾಜ್ಯದಲ್ಲಿ ತೇಜೋಮಯವಾಗಿ ಪ್ರಕಾಶಿಸುವರು.
ಮುಂದೆ ಯೇಸು ತನ್ನ ತೀವ್ರಾಸಕ್ತಿಯ ಶಿಷ್ಯರನ್ನು ಇನ್ನು ಮೂರು ದೃಷ್ಟಾಂತಗಳನ್ನು ಕೊಟ್ಟು ಆಶೀರ್ವದಿಸುತ್ತಾನೆ. ಮೊದಲಾಗಿ ಅವನು ಹೇಳುವುದು: “ಪರಲೋಕರಾಜ್ಯವು ಹೊಲದಲ್ಲಿ ಹೂಳಿಟ್ಟ ದ್ರವ್ಯಕ್ಕೆ ಹೋಲಿಕೆಯಾಗಿದೆ. ಒಬ್ಬನು ಅದನ್ನು ಕಂಡುಕೊಂಡು ಮುಚ್ಚಿಬಿಟ್ಟು ಅದರಿಂದಾದ ಸಂತೋಷದಿಂದ ತನ್ನ ಬದುಕನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಂಡನು.”
ಮತ್ತು ಅವನು ಮುಂದುವರಿಸುವುದು: “ಪರಲೋಕರಾಜ್ಯವು ಉತ್ತಮವಾದ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ. ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡು ತನ್ನ ಬದುಕನ್ನೆಲ್ಲಾ ಮಾರಿ ಬಂದು ಅದನ್ನು ಕೊಂಡುಕೊಂಡನು.”
ಯೇಸು ತಾನೇ ಆ ಹೂಳಿಟ್ಟ ನಿಕ್ಷೇಪವನ್ನು ಕಂಡುಹಿಡಿದ ಮನುಷ್ಯನಿಗೆ ಮತ್ತು ಹೆಚ್ಚು ಬೆಲೆಯ ಮುತ್ತು ಸಿಕ್ಕಿದ ವ್ಯಾಪಾರಿಗೆ ಹೋಲಿಕೆಯಾಗಿದ್ದಾನೆ. ಅವನು ಒಂದು ರೀತಿಯಲ್ಲಿ ತನ್ನ ಸರ್ವಸ್ವವನ್ನು ಮಾರಿಬಿಟ್ಟನು. ಅಂದರೆ ಅಲ್ಪನಾದ ಮನುಷ್ಯನಾಗುವ ಕಾರಣದಿಂದ ತನಗೆ ಸ್ವರ್ಗದಲ್ಲಿದ್ದ ಗೌರವದ ಸ್ಥಾನವನ್ನು ತ್ಯಜಿಸಿದನು. ಮತ್ತು ಭೂಮಿಯಲ್ಲಿ ಮನುಷ್ಯನಾಗಿದ್ದಾಗ ಅವನು ನಿಂದೆ ಮತ್ತು ದ್ವೇಷದ ಹಿಂಸೆಯನ್ನು ತಾಳಿಕೊಂಡು ತಾನು ದೇವರ ರಾಜ್ಯದ ಪ್ರಭುವಾಗಲು ಯೋಗ್ಯನೆಂದು ತೋರಿಸುತ್ತಾನೆ.
ಯೇಸುವಿನ ಹಿಂಬಾಲಕರು ಸಹ ಕ್ರಿಸ್ತನೊಂದಿಗೆ ಜೊತೆ ಪ್ರಭುಗಳಾಗುವ ಅಥವಾ ರಾಜ್ಯದ ಭೂಪ್ರಜೆಯಾಗುವ ಮಹಾ ಬಹುಮಾನ ಪಡೆಯಲು ಸರ್ವವನ್ನು ಮಾರಿಬಿಡಬೇಕೆಂದು ಪಂಥಾಹ್ವಾನ ಅವರ ಮುಂದೆ ಇಡಲ್ಪಡುತ್ತದೆ. ನಾವು ದೇವರ ರಾಜ್ಯದಲ್ಲಿ ಸಿಗಲಿರುವ ಭಾಗವನ್ನು ಜೀವನದ ಇನ್ನಾವ ವಿಷಯಕ್ಕಿಂತಲೂ ಹೆಚ್ಚು ಬೆಲೆಯದ್ದೆಂದು, ಬೆಲೆಕಟ್ಟಲಾಗದ ನಿಕ್ಷೇಪ ಅಥವಾ ಅಮೂಲ್ಯವಾದ ಮುತ್ತೆಂದು ಎಣಿಸುವೆವೂ?
ಕೊನೆಯದಾಗಿ ಯೇಸು “ಪರಲೋಕ ರಾಜ್ಯ”ವನ್ನು ಸಕಲ ವಿಧಗಳಾದ ಮೀನುಗಳನ್ನು ಹಿಡಿಯುವ ಎಳೆಬಲೆಗೆ ಹೋಲಿಸುತ್ತಾನೆ. ಮೀನುಗಳನ್ನು ಪ್ರತ್ಯೇಕಿಸುವಾಗ ಅಯೋಗ್ಯವಾದವುಗಳನ್ನು ಹೊರಗೆ ಬಿಸಾಡಿ ಒಳ್ಳೆಯದವುಗಳನ್ನು ಜೋಪಾಸನೆ ಮಾಡಲಾಗುತ್ತದೆ. ವಿಷಯ ವ್ಯವಸ್ಥೆಯ ಅಂತ್ಯದಲ್ಲಿ ಹಾಗಿರುವುದೆಂದು ಯೇಸು ಹೇಳುತ್ತಾನೆ: ದೇವದೂತರು ನೀತಿವಂತರಿಂದ ದುಷ್ಟರನ್ನು ಪ್ರತ್ಯೇಕಿಸಿ ದುಷ್ಟರನ್ನು ನಾಶಕ್ಕಾಗಿ ಬದಿಗಿಡುವದು.
ಈ ಮೀನುಗಾರಿಕೆಯ ಯೋಜನೆಯನ್ನು ಯೇಸು ತಾನೇ ಆರಂಭಿಸುತ್ತಾ “ಮನುಷ್ಯರನ್ನು ಹಿಡಿಯುವ ಬೆಸ್ತ”ರಾಗಲು ತನ್ನ ಪ್ರಥಮ ಶಿಷ್ಯರನ್ನು ಕರೆಯುತ್ತಾನೆ. ದೇವದೂತರ ಕಣ್ಗಾವಲಿನಲ್ಲಿ ಈ ಮೀನುಗಾರಿಕೆ ಶತಮಾನಗಳಲ್ಲಿ ಮುಂದುವರಿಯುತ್ತದೆ. ಅಂತಿಮವಾಗಿ, ಭೂಮಿಯಲ್ಲಿ ಕ್ರೈಸ್ತರೆನಿಸಿಕೊಳ್ಳುವ ಸಂಸ್ಥೆಗಳನ್ನು ಸೂಚಿಸುವ ಈ “ಬಲೆ”ಯನ್ನು ಎಳೆಯುವ ಸಮಯ ಬರುತ್ತದೆ.
ಅಯೋಗ್ಯವಾದ ಮೀನುಗಳನ್ನು ನಾಶನಕ್ಕೆ ಬಿಸಾಲ್ಪಡುತ್ತವಾದರೂ ನಾವು ಉಳಿಸಲ್ಪಡುವ ‘ಒಳ್ಳೆಯ ಮೀನು’ಗಳಾಗ ಸಾಧ್ಯವಿದೆಯೆಂಬುದಕ್ಕೆ ಆಭಾರಿಗಳಾಗಬಹುದು. ಯೇಸುವಿನ ಶಿಷ್ಯರಂತೆ ಹೆಚ್ಚಿನ ಜ್ಞಾನ ಮತ್ತು ತಿಳುವಳಿಕೆಗೆ ತೀವ್ರಾಪೇಕ್ಷೆ ತೋರಿಸುವಲ್ಲಿ ನಮಗೆ ಹೆಚ್ಚು ಶಿಕ್ಷಣದ ಧನ್ಯತೆ ಮಾತ್ರವಲ್ಲ ದೇವರ ಅನಂತ ಜೀವದ ಆಶೀರ್ವಾದವೂ ದೊರೆಯುವುದು.—ಮತ್ತಾಯ 13:36-52; 4:19; ಮಾರ್ಕ 4:24,25.
◆ ಸಮುದ್ರ ತೀರದ ಜನರಿಗಿಂತ ಶಿಷ್ಯರು ಹೇಗೆ ಭಿನ್ನವಾಗಿದ್ದಾರೆ?
◆ ಬಿತ್ತುವವನು, ಹೊಲ, ಒಳ್ಳೆಯ ಬೀಜ, ವೈರಿ, ಸುಗ್ಗೀಕಾಲ ಮತ್ತು ಕೊಯ್ಯುವವರು ಯಾರನ್ನು ಅಥವಾ ಯಾವುದನ್ನು ಪ್ರತಿನಿಧೀಕರಿಸುತ್ತಾರೆ?
◆ ಯೇಸು ಇನ್ನಾವ ಮೂರು ದೃಷ್ಟಾಂತಗಳನ್ನು ಒದಗಿಸಿದನು, ಮತ್ತು ನಾವು ಅವುಗಳಿಂದ ಏನು ಕಲಿಯಬಲ್ಲಿವು?