ಅಧ್ಯಾಯ 43
ದೃಷ್ಟಾಂತಗಳ ಮೂಲಕ ಕಲಿಸುವುದು
ಫರಿಸಾಯರನ್ನು ಗದರಿಸುವಾಗ ಯೇಸುವು ಕಪೆರ್ನೌಮಿನಲ್ಲಿ ಇದ್ದನೆಂದು ಸ್ಪಷ್ಟವಾಗುತ್ತದೆ. ಅದೇ ದಿನ ಸ್ವಲ್ಪ ಸಮಯದ ನಂತರ, ಅವನು ಮನೆ ಬಿಟ್ಟು ಜನರು ನೆರೆದಿದ್ದ ಸಮೀಪದ ಗಲಿಲಾಯ ಸಮುದ್ರದ ಬಳಿ ನಡೆದು ಹೋಗುತ್ತಾನೆ. ಅಲ್ಲಿ ಅವನು ಒಂದು ದೋಣಿಯನ್ನು ಹತ್ತಿ, ತುಸು ದೂರ ಹೋಗಿ, ತೀರದಲ್ಲಿದ್ದ ಜನರಿಗೆ ಸ್ವರ್ಗರಾಜ್ಯದ ಕುರಿತು ಬೋಧಿಸಲಾರಂಭಿಸುತ್ತಾನೆ. ಅವನು ಈ ಬೋಧನೆಯನ್ನು ಜನರಿಗೆ ಪರಿಚಿತವಾದ ಹಿನ್ನೆಲೆಗಳಿದ್ದ ರೂಪಕ ಕಥೆ ಅಥವಾ ದೃಷ್ಟಾಂತ ಮಾಲೆಯ ಮೂಲಕ ನೀಡುತ್ತಾನೆ.
ಪ್ರಥಮವಾಗಿ ಯೇಸು ಬೀಜ ಬಿತ್ತುವವನ ಕುರಿತು ಹೇಳುತ್ತಾನೆ. ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದು ಹಕ್ಕಿಗಳಿಂದ ತಿನ್ನಲ್ಪಡುತ್ತವೆ. ಇತರ ಬೀಜಗಳು ಅಡಿಯಲ್ಲಿ ಬಂಡೆಯಿರುವ ಮಣ್ಣಿನ ಮೇಲೆ ಬೀಳುತ್ತವೆ. ಅಲ್ಲಿ ಬೇರುಗಳಿಗೆ ಆಳವಿಲ್ಲದಿರುವದರಿಂದ ಸಸಿಗಳು ಸೂರ್ಯನ ತಾಪದಿಂದ ಬಾಡಿ ಹೋಗುತ್ತವೆ. ಇತರ ಬೀಜಗಳು ಮುಳ್ಳಿನ ಮಧ್ಯೆ ಬೀಳಲಾಗಿ ಸಸಿಗಳು ಎದ್ದು ಬರುವಾಗ ಮುಳ್ಳು ಅವನ್ನು ತಲೆಯೆತ್ತದಂತೆ ಮಾಡುತ್ತದೆ. ಅಂತಿಮವಾಗಿ, ಕೆಲವು ಬೀಜಗಳು ಉತ್ತಮ ಮಣ್ಣಿನಲ್ಲಿ ಬೀಳಲಾಗಿ, ಕೆಲವು ನೂರರಷ್ಟು, ಕೆಲವು ಆರ್ವತ್ತರಷ್ಟು, ಇನ್ನು ಕೆಲವು ಮೂವತ್ತರಷ್ಟು ಫಲ ಕೊಡುತ್ತವೆ.
ಇನ್ನೊಂದು ದೃಷ್ಟಾಂತದಲ್ಲಿ, ಯೇಸುವು, ದೇವರ ರಾಜ್ಯವು ಒಬ್ಬ ಮನುಷ್ಯನು ಬೀಜ ಬಿತ್ತುವಂತೆ ಇದೆ ಎಂದು ಹೇಳುತ್ತಾನೆ. ದಿನಗಳು ಕಳೆದಷ್ಟಕ್ಕೆ, ಮನುಷ್ಯನು ನಿದ್ರಿಸಿ, ಎಚ್ಚರಗೊಂಡಂತೆ ಬೀಜ ಬೆಳೆಯುತ್ತದೆ. ಇದು ಹೇಗೆಂದು ಈ ಮನುಷ್ಯನಿಗೆ ಗೊತ್ತಾಗುವದಿಲ್ಲ. ಅದು ತನ್ನಷ್ಟಕ್ಕೆ ತಾನೇ ಬೆಳೆದು ಧಾನ್ಯವನ್ನು ಫಲಿಸುತ್ತದೆ. ಧಾನ್ಯ ಹಣ್ಣಾದಾಗ ಮನುಷ್ಯನು ಕೊಯ್ಯುತ್ತಾನೆ.
ಯೇಸುವು ತನ್ನ ಮೂರನೆಯ ದೃಷ್ಟಾಂತದಲ್ಲಿ, ಯೋಗ್ಯ ರೀತಿಯ ಬೀಜವನ್ನು ಬಿತ್ತಿದ ಒಬ್ಬ ಮನುಷ್ಯನ ಕುರಿತು ಹೇಳುತ್ತಾನೆ. ಆದರೆ “ಜನರು ನಿದ್ರೆಮಾಡುವ ಕಾಲದಲ್ಲಿ” ವೈರಿಯೊಬ್ಬನು ಬಂದು ಗೋದಿಯ ಮಧ್ಯದಲ್ಲಿ ಹಣಜಿಯನ್ನು ಬಿತ್ತಿ ಹೋಗುತ್ತಾನೆ. ಆ ಮನುಷ್ಯನ ಸೇವಕರು ತಾವು ಹಣಜಿಯನ್ನು ಕೀಳಬೇಕೋ ಎಂದು ವಿಚಾರಿಸುತ್ತಾರೆ. ಆದರೆ ಅವನು ಉತ್ತರಿಸುವದು: ‘ಬೇಡ. ನೀವು ಹಾಗೆ ಮಾಡಿದರೆ ಗೋದಿಯಲ್ಲಿ ಕೆಲವನ್ನು ಕೂಡ ಕೀಳುವಿರಿ. ಕೊಯ್ಲಿನ ತನಕ ಅವೆರಡೂ ಸಂಗಡ ಬೆಳೆಯಲಿ. ಆಗ ನಾನೇ ಕೊಯ್ಯುವವರಿಗೆ ಕಳೆಯನ್ನು ಪ್ರತ್ಯೇಕಿಸಿ ಸುಡಬೇಕೆಂತಲೂ ಮತ್ತು ಗೋದಿಯನ್ನು ನನ್ನ ಕಣಜಕ್ಕೆ ಹಾಕಬೇಕೆಂದೂ ಹೇಳುತ್ತೇನೆ.’
ತನ್ನ ಭಾಷಣವನ್ನು ತೀರದಲ್ಲಿದ್ದ ಜನರಿಗೆ ಮುಂದರಿಸುತ್ತಾ, ಯೇಸು ಇನ್ನೆರಡು ದೃಷ್ಟಾಂತಗಳನ್ನು ಒದಗಿಸುತ್ತಾನೆ. “ಪರಲೋಕ ರಾಜ್ಯವು” ಒಬ್ಬ ಮನುಷ್ಯನು ಬಿತ್ತುವ ಸಾಸಿವೆ ಕಾಳಿನಂತಿದೆಯೆಂದು ಅವನು ವಿವರಿಸುತ್ತಾನೆ. ಅದು ಎಲ್ಲಾ ಬೀಜಗಳಿಗಿಂತ ಸಣ್ಣದಾಗಿದ್ದರೂ, ಕಾಯಿಪಲ್ಯ ಗಿಡಗಳಲ್ಲಿ ಅತ್ಯಂತ ದೊಡ್ಡದಾಗಿ ಬೆಳೆಯುತ್ತದೆಂದು ಹೇಳುತ್ತಾನೆ. ಅದು ಮರವಾದಾಗ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ಆಶ್ರಯ ಪಡೆಯುತ್ತವೆ.
ಕೆಲವರು ಇಂದು ಇದಕ್ಕೆ ಆಕ್ಷೇಪವೆತ್ತಿ ಸಾಸಿವೆ ಕಾಳಿಗಿಂತಲೂ ಚಿಕ್ಕದಾದ ಬೀಜಗಳಿವೆ ಎಂದು ಹೇಳುತ್ತಾರೆ. ಆದರೆ ಯೇಸುವು ಇಲ್ಲಿ ಸಸ್ಯ ವಿಜ್ಞಾನದ ವಿಷಯದಲ್ಲಿ ಪಾಠ ಕಲಿಸುವದಿಲ್ಲ. ಅವನ ದಿನಗಳ ಗಲಿಲಾಯದ ಜನರಿಗೆ ತಿಳಿದಿದ್ದ ಬೀಜಗಳಲ್ಲಿ ಸಾಸಿವೆ ಬೀಜ ಅತಿ ಚಿಕ್ಕದಾದ ಬೀಜವಾಗಿದೆ. ಆದುದರಿಂದ ಯೇಸು ಚಿತ್ರೀಕರಿಸುವ ಅತಿಶಯ ಬೆಳವಣಿಗೆಯ ವಿಷಯವನ್ನು ಅವರು ಗಣ್ಯ ಮಾಡುತ್ತಾರೆ.
ಅಂತಿಮವಾಗಿ ಯೇಸು “ಪರಲೋಕ ರಾಜ್ಯ”ವನ್ನು ಒಬ್ಬ ಮಹಿಳೆ ಮೂರು ಸೇರು ಹಿಟ್ಟಿನಲ್ಲಿ ಬೆರೆಸಿದ ಹುಳಿಹಿಟ್ಟಿಗೆ ಹೋಲಿಸುತ್ತಾನೆ. ಕ್ರಮೇಣ, ಆ ಹುದುಗು ಹಿಟ್ಟಿನ ಪ್ರತಿಯೊಂದು ಭಾಗಕ್ಕೂ ಹರಡುತ್ತದೆ, ಎಂದು ಅವನು ಹೇಳುತ್ತಾನೆ.
ಈ ಐದು ದೃಷ್ಟಾಂತಗಳನ್ನು ಕೊಟ್ಟ ಬಳಿಕ ಜನರ ಗುಂಪನ್ನು ಹಿಂದೆ ಕಳುಹಿಸಿ, ತಾನು ಉಳುಕೊಳ್ಳುತ್ತಿದ್ದ ಮನೆಗೆ ಹಿಂದೆ ಹೋಗುತ್ತಾನೆ. ಶೀಘ್ರವೇ ಅವನ ಹನ್ನೆರಡು ಅಪೊಸ್ತಲರೂ, ಇತರರೂ ಅಲ್ಲಿ ಅವನ ಬಳಿ ಬರುತ್ತಾರೆ.
ಯೇಸುವಿನ ದೃಷ್ಟಾಂತಗಳಿಂದ ಪ್ರಯೋಜನ ಪಡೆಯುವದು
ಯೇಸುವು ಸಮುದ್ರ ತೀರದಲ್ಲಿದ್ದ ಜನರ ಗುಂಪಿಗೆ ಉಪನ್ಯಾಸ ಮಾಡಿದ ಬಳಿಕ ಶಿಷ್ಯರು ಅವನ ಬಳಿ ಬಂದಾಗ ಅವರು ಅವನ ಹೊಸ ಶಿಕ್ಷಣ ವಿಧಾನದ ಕುರಿತು ಕುತೂಹಲ ಪ್ರದರ್ಶಿಸುತ್ತಾರೆ. ಓ, ಅವನು ಈ ಮೊದಲೂ ದೃಷ್ಟಾಂತಗಳನ್ನು ಉಪಯೋಗಿಸುವದನ್ನು ಅವರು ಕೇಳಿದ್ದರು, ಆದರೆ ಇಷ್ಟೊಂದು ಸವಿಸ್ತಾರವಾಗಿ ಅಲ್ಲ. ಆದುದರಿಂದ ಅವರು ವಿಚಾರಿಸುತ್ತಾರೆ: “ಯಾಕೆ ಸಾಮ್ಯರೂಪವಾಗಿ ಅವರ ಸಂಗಡ ನೀನು ಮಾತಾಡುತ್ತೀ?”
ಇದಕ್ಕೆ ಒಂದು ಕಾರಣವು, “ನಾನು ಬಾಯಿದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು; ಲೋಕಾದಿಯಿಂದ ಮರೆಯಾಗಿದ್ದವುಗಳನ್ನು ಹೊರಪಡಿಸುವೆನು” ಎಂಬ ಪ್ರವಾದಿಯ ಮಾತುಗಳನ್ನು ನೆರವೇರಿಸಲಿಕ್ಕಾಗಿಯೇ. ಆದರೆ ಇದಕ್ಕಿಂತಲೂ ಹೆಚ್ಚಿನದ್ದು ಅದರಲ್ಲಿ ಇತ್ತು. ದೃಷ್ಟಾಂತಗಳ ಉಪಯೋಗವು ಜನರ ಹೃದಯದ ಮನೋಭಾವವನ್ನು ಪ್ರಕಟಿಸುವ ಉದ್ದೇಶವನ್ನು ನೆರವೇರಿಸುತ್ತದೆ.
ವಾಸ್ತವವೇನಂದರೆ, ಅನೇಕರು ಯೇಸುವಿನಲ್ಲಿ ಆಸಕ್ತಿ ವಹಿಸುವದು ಅವನು ನಿಪುಣ ಕಥೆಗಾರ ಮತ್ತು ಅದ್ಭುತ ಮಾಡುವವನೆಂಬ ಸರಳ ಕಾರಣದಿಂದಲೇ ಹೊರತು, ಕರ್ತನೋಪಾದಿ ಸೇವೆ ಮಾಡಲು ಮತ್ತು ನಿಸ್ವಾರ್ಥತೆಯಿಂದ ಹಿಂಬಾಲಿಸಲು ಯೋಗ್ಯನಾದವನು ಎಂಬ ಕಾರಣದಿಂದಲ್ಲ. ವಿಷಯಗಳನ್ನು ಅವರು ನೋಡುವ ದೃಷ್ಟಿಕೋನಕ್ಕೆ ಇಲ್ಲವೇ ಅವರ ಜೀವಿತದ ವಿಧಾನದಲ್ಲಿ ಯಾವುದೇ ಬಾಧೆಯಾಗಲು ಅವರು ಬಯಸುವದಿಲ್ಲ. ಸಂದೇಶವು ಅಷ್ಟು ಆಳವಾಗಿ ತೂರಿಹೋಗಲು ಅವರು ಆಶಿಸುವದಿಲ್ಲ.
ಆದುದರಿಂದ ಯೇಸುವು ಹೇಳುವದು: “ನಾನು ಅವರ ಸಂಗಡ ಸಾಮ್ಯರೂಪವಾಗಿ ಮಾತಾಡುವದಕ್ಕೆ ಕಾರಣವೇನಂದರೆ ಅವರಿಗೆ ಕಣ್ಣಿದ್ದರೂ ನೋಡುವದಿಲ್ಲ, ಕಿವಿಯಿದ್ದರೂ ಕೇಳುವದಿಲ್ಲ, ಮತ್ತು ತಿಳುಕೊಳ್ಳುವದಿಲ್ಲ. ಯೆಶಾಯನು ಹೇಳಿದ ಪ್ರವಾದನೆಯು ಅವರಲ್ಲಿ ನೆರವೇರುತ್ತದೆ. ಅದೇನಂದರೆ . . . ‘ಈ ಜನರ ಹೃದಯವು ಕೊಬ್ಬಿತು, ಕಿವಿ ಮಂದವಾಯಿತು.’”
ಯೇಸು ಹೇಳುತ್ತಾ ಮುಂದುವರಿದದ್ದು: “ಆದರೆ ನಿಮ್ಮ ಕಣ್ಣು ಕಾಣುತ್ತವೆ, ನಿಮ್ಮ ಕಿವಿ ಕೇಳುತ್ತವೆ. ನಿಮಗೆ ಸತ್ಯವಾಗಿ ಹೇಳುತ್ತೇನೆ, ನೀವು ನೋಡುತ್ತಿರುವ ಕಾರ್ಯಗಳನ್ನು ಬಹುಮಂದಿ ಪ್ರವಾದಿಗಳೂ ಸತ್ಪುರುಷರೂ ನೋಡಬೇಕೆಂದು ಅಪೇಕ್ಷಿಸಿದರೂ ನೋಡಲಿಲ್ಲ. ನೀವು ಕೇಳುತ್ತಿರುವ ಸಂಗತಿಗಳನ್ನು ಅವರು ಕೇಳಬೇಕೆಂದು ಅಪೇಕ್ಷಿಸಿದರೂ ಕೇಳಲಿಲ್ಲ.”
ಹೌದು, 12 ಮಂದಿ ಅಪೊಸ್ತಲರು ಮತ್ತು ಅವರ ಜೊತೆಯಲ್ಲಿದ್ದವರಲ್ಲಿ ಗ್ರಹಣಶಕ್ತಿಯ ಹೃದಯಗಳಿದ್ದವು. ಆದುದರಿಂದ ಯೇಸು ಹೇಳುವದು: “ಪರಲೋಕ ರಾಜ್ಯದ ಗುಟ್ಟುಗಳನ್ನು ತಿಳಿಯುವ ವರ ನಿಮಗೇ ಕೊಟ್ಟಿದೆ. ಅವರಿಗೆ ಕೊಟ್ಟಿಲ್ಲ.” ಅವರಿಗೆ ತಿಳುವಳಿಕೆ ಪಡೆಯುವ ಅಪೇಕ್ಷೆ ಇದ್ದುದರಿಂದ ಯೇಸುವು ತನ್ನ ಶಿಷ್ಯರಿಗೆ ಬೀಜ ಬಿತ್ತುವವನ ದೃಷ್ಟಾಂತದ ವಿವರಣೆ ಕೊಡುತ್ತಾನೆ.
“ಬೀಜವೆಂದರೆ ದೇವರ ವಾಕ್ಯ” ಎನ್ನುತ್ತಾನೆ ಯೇಸು, ಮತ್ತು ಮಣ್ಣು ಹೃದಯವಾಗಿರುತ್ತದೆ. ದಾರಿಯ ಮಗ್ಗುಲಿನ ಗಟ್ಟಿ ನೆಲದಲ್ಲಿ ಬಿತ್ತಿದ ಬೀಜದ ಕುರಿತು ಅವನು ವಿವರಿಸುವದು: “ಕೆಲವರು ವಾಕ್ಯವನ್ನು ಕೇಳಿದ ಕೂಡಲೇ ಪಿಶಾಚನು ಬಂದು ಅವರು ನಂಬಿ ರಕ್ಷಣೆಯನ್ನು ಹೊಂದಬಾರದೆಂದು ವಾಕ್ಯವನ್ನು ಅವರ ಹೃದಯದಿಂದ ತೆಗೆದು ಬಿಡುತ್ತಾನೆ.”
ಇನ್ನೊಂದು ಪಕ್ಕದಲ್ಲಿ, ಕೆಳಗಡೆ ಬಂಡೆಯಿದ್ದ ನೆಲದ ಮೇಲೆ ಬಿತ್ತಿದ ಬೀಜವು ವಾಕ್ಯವನ್ನು ಸಂತೋಷದಿಂದ ಅಂಗೀಕರಿಸುವ ಜನರ ಹೃದಯಗಳನ್ನು ಸೂಚಿಸುತ್ತದೆ. ಆದರೆ ವಾಕ್ಯವು ಇಂಥ ಹೃದಯಗಳಲ್ಲಿ ಆಳವಾಗಿ ಬೇರೂರದ ಕಾರಣ ಪರೀಕ್ಷೆ ಅಥವಾ ಹಿಂಸೆ ಬರುವ ಸಮಯದಲ್ಲಿ ಇಂಥ ಜನರು ಬಿದ್ದು ಹೋಗುತ್ತಾರೆ.
ಮುಳ್ಳುಗಳ ಮಧ್ಯೆ ಬಿದ್ದ ಬೀಜದ ಕುರಿತು ಅದು ವಾಕ್ಯವನ್ನು ಕೇಳಿದವರನ್ನು ಸೂಚಿಸುತ್ತದೆಂದು ಯೇಸುವು ಮುಂದರಿಸುತ್ತಾನೆ. ಆದರೂ ಇವರು ಈ ಜೀವನದ ಚಿಂತೆ, ಐಶ್ವರ್ಯ ಮತ್ತು ಸುಖಗಳಿಂದ ಸೆಳೆಯಲ್ಪಡುವದರಿಂದ, ಪೂರ್ತಿಯಾಗಿ ಅದುಮಲ್ಪಟ್ಟು ಯಾವುದನ್ನೂ ಪೂರ್ಣತೆಯ ಹಂತಕ್ಕೆ ತರುವುದಿಲ್ಲ.
ಕೊನೆಗೆ, ಒಳ್ಳೆಯ ಮಣ್ಣಿನ ಮೇಲೆ ಬಿದ್ದ ಬೀಜದ ಕುರಿತು, ಯೇಸುವು ಹೇಳುವದು, ಇವರು ದೇವರ ವಾಕ್ಯವನ್ನು ಉತ್ತಮ ಹಾಗೂ ಒಳ್ಳೆಯ ಹೃದಯದಿಂದ ಕೇಳಿ, ಜ್ಞಾಪಕದಲ್ಲಿಟ್ಟುಕೊಂಡು, ಸಹನೆಯಿಂದ ಫಲ ಬಿಡುವವರಾಗಿರುತ್ತಾರೆ.
ಅವನ ಬೋಧನೆಗಳ ವಿವರಣೆಗಳನ್ನು ಪಡೆಯಲು ಯೇಸುವನ್ನು ಹುಡುಕಿ, ವಿಚಾರಿಸಿದ ಈ ಶಿಷ್ಯರು ಎಷ್ಟು ಧನ್ಯರು! ಸತ್ಯವನ್ನು ಇತರರಿಗೆ ನೀಡಲಿಕ್ಕಾಗಿ, ತನ್ನ ದೃಷ್ಟಾಂತಗಳು ಗ್ರಹಿಸಲ್ಪಡಬೇಕೆಂದು ಯೇಸು ಉದ್ದೇಶಿಸುತ್ತಾನೆ. “ದೀಪವನ್ನು ತಂದು ಕೊಳಗದೊಳಗಾಗಲಿ, ಮಂಚದ ಕೆಳಗಾಗಲಿ ಇಡುವದುಂಟೇ?” ಎಂದು ಅವನು ಕೇಳುತ್ತಾನೆ. ಇಲ್ಲ, “ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರೆ.” ಈ ರೀತಿ ಯೇಸು ಕೂಡಿಸಿದ್ದು: “ಆದ ಕಾರಣ, ನೀವು ಹೇಗೆ ಕಿವಿಗೊಡುತ್ತೀರೋ ಅದರ ವಿಷಯ ಎಚ್ಚರಿಕೆಯಿಂದಿರ್ರಿ.”
ಹೆಚ್ಚಿನ ಉಪದೇಶದಿಂದ ಧನ್ಯರಾಗುವದು
ಶಿಷ್ಯರಿಗೆ ಬಿತ್ತುವವನ ದೃಷ್ಟಾಂತದ ವಿವರಣೆ ಆಗಲೇ ಸಿಕ್ಕಿದ ನಂತರ, ಅವರು ಹೆಚ್ಚು ಕಲಿಯಲು ಬಯಸುತ್ತಾರೆ. “ಹೊಲದಲ್ಲಿಯ ಹಣಜಿಯ ಸಾಮ್ಯದ ಅರ್ಥವನ್ನು ನಮಗೆ ಹೇಳು,” ಎಂದು ಅವರು ಕೇಳಿಕೊಳ್ಳುತ್ತಾರೆ.
ಸಮುದ್ರದ ದಡದಲ್ಲಿದ್ದ ಜನಸಮುದಾಯಕ್ಕಿಂತ ಈ ಶಿಷ್ಯರ ಮನೋಭಾವ ಎಷ್ಟು ಭಿನ್ನವಾಗಿತ್ತು! ಆ ಜನರಿಗೆ ದೃಷ್ಟಾಂತಗಳ ಒಳಾರ್ಥವನ್ನು ತಿಳಿಯುವ ತೀವ್ರಾಪೇಕ್ಷೆಯ ಕೊರತೆ ಇತ್ತು. ಅವುಗಳ ಹೊರಮೇರೆಯಲ್ಲಿ ಮಾತ್ರ ಅವರು ತೃಪ್ತರಾಗುತ್ತಾರೆ. ಸಮುದ್ರ ಬದಿಯ ಜನಸಮುದಾಯ ಮತ್ತು ಅವನ ಬಳಿ ಮನೆಯ ತನಕ ಬಂದ ತನ್ನ ಅನ್ವೇಷಣಾಶೀಲ ಶಿಷ್ಯರ ಮಧ್ಯೆ ಇರುವ ವ್ಯತ್ಯಾಸವನ್ನು ತೋರಿಸುತ್ತಾ, ಯೇಸುವು ಹೇಳುವದು:
“ನೀವು ಅಳೆಯುವ ಅಳತೆಯಿಂದಲೇ ನಿಮಗೆ ಅಳೆಯುವರು; ಇನ್ನೂ ಕೂಡಿಸಿ ಕೊಡುವರು.” ಶಿಷ್ಯರು ಯೇಸುವಿಗೆ ತೀವ್ರಾಸಕ್ತಿ ಮತ್ತು ಗಮನವನ್ನು ಅಳೆದು ಕೊಡುತ್ತಿದ್ದುದರಿಂದ, ಇನ್ನೂ ಹೆಚ್ಚು ಉಪದೇಶದಿಂದ ಆಶೀರ್ವದಿಸಲ್ಪಡುತ್ತಾರೆ. ಹೀಗೆ, ಯೇಸು ತನ್ನ ಶಿಷ್ಯರ ಪ್ರಶ್ನೆಗೆ ಉತ್ತರ ನೀಡುತ್ತಾ ಹೇಳುವದು:
“ಒಳ್ಳೆಯ ಬೀಜವನ್ನು ಬಿತ್ತುವವನೆಂದರೆ, ಮನುಷ್ಯ ಕುಮಾರನು. ಹೊಲವೆಂದರೆ ಲೋಕ; ಒಳ್ಳೆಯ ಬೀಜವೆಂದರೆ ಪರಲೋಕ ರಾಜ್ಯದವರು [ರಾಜ್ಯದ ಪುತ್ರರು, NW]; ಹಣಜಿಯೆಂದರೆ ಸೈತಾನನವರು, [ದುಷ್ಟನ ಪುತ್ರರು, NW]. ಅದನ್ನು ಬಿತ್ತುವ ವೈರಿ ಅಂದರೆ ಪಿಶಾಚನು. ಸುಗ್ಗೀ ಕಾಲ ಅಂದರೆ ವಿಷಯಗಳ ವ್ಯವಸ್ಥೆಯ ಸಮಾಪ್ತಿ; ಕೊಯ್ಯುವವರು ಅಂದರೆ ದೇವದೂತರು.”
ಈ ದೃಷ್ಟಾಂತದ ಪ್ರತಿಯೊಂದು ಭಾಗವನ್ನು ಗುರುತಿಸಿದ ಬಳಿಕ ಯೇಸುವು ಇದರ ಪರಿಣಾಮವನ್ನು ವರ್ಣಿಸುತ್ತಾನೆ. ವಿಷಯಗಳ ವ್ಯವಸ್ಥೆಯ ಸಮಾಪ್ತಿಯಲ್ಲಿ ಕೊಯ್ಯುವವರು, ಅಥವಾ ದೇವದೂತರು ಹಣಜಿ ಸದೃಶವಾದ ಖೋಟಾ ಕ್ರೈಸ್ತರನ್ನು ನಿಜ “ರಾಜ್ಯದ ಪುತ್ರರಿಂದ” ಪ್ರತ್ಯೇಕಿಸುವರೆಂದು ಅವನು ಹೇಳುತ್ತಾನೆ. ಆಗ “ದುಷ್ಟನ ಪುತ್ರರು” ನಾಶಕ್ಕಾಗಿ ಗುರುತಿಸಲ್ಪಡುವರು. ಆದರೆ ದೇವರ ರಾಜ್ಯದ ಪುತ್ರರಾದ “ನೀತಿವಂತರು” ತಮ್ಮ ತಂದೆಯ ರಾಜ್ಯದಲ್ಲಿ ತೇಜೋಮಯವಾಗಿ ಪ್ರಕಾಶಿಸುವರು.
ಮುಂದೆ, ಯೇಸುವು ತನ್ನ ಅನ್ವೇಷಕ ಮನಸ್ಸಿನ ಶಿಷ್ಯರನ್ನು ಇನ್ನೂ ಮೂರು ದೃಷ್ಟಾಂತಗಳನ್ನು ಕೊಟ್ಟು, ಆಶೀರ್ವದಿಸುತ್ತಾನೆ. ಮೊದಲಾಗಿ ಅವನು ಹೇಳುವದು: “ಪರಲೋಕ ರಾಜ್ಯವು ಹೊಲದಲ್ಲಿ ಹೂಳಿಟ್ಟ ದ್ರವ್ಯಕ್ಕೆ ಹೋಲಿಕೆಯಾಗಿದೆ. ಒಬ್ಬನು ಅದನ್ನು ಕಂಡುಕೊಂಡು ಮುಚ್ಚಿಬಿಟ್ಟು ಅದರಿಂದಾದ ಸಂತೋಷದಿಂದ ತನ್ನ ಬದುಕನ್ನೆಲ್ಲಾ ಮಾರಿ, ಆ ಹೊಲವನ್ನು ಕೊಂಡುಕೊಂಡನು.”
ಮತ್ತೂ ಅವನು ಮುಂದುವರಿಸುವದು: “ಪರಲೋಕ ರಾಜ್ಯವು ಉತ್ತಮವಾದ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ. ಅವನು ಬಹುಬೆಲೆಯುಳ್ಳ ಒಂದು ಮುತ್ತನ್ನು ಕಂಡು, ತನ್ನ ಬದುಕನ್ನೆಲ್ಲಾ ಮಾರಿ ಬಂದು ಅದನ್ನು ಕೊಂಡುಕೊಂಡನು.”
ಯೇಸುವು ತಾನೇ ಆ ಹೂಳಿಟ್ಟ ನಿಕ್ಷೇಪವನ್ನು ಕಂಡುಹಿಡಿದ ಮನುಷ್ಯನಿಗೆ ಮತ್ತು ಹೆಚ್ಚು ಬೆಲೆಯ ಮುತ್ತು ಸಿಕ್ಕಿದ ವ್ಯಾಪಾರಿಗೆ ಹೋಲಿಕೆಯಾಗಿದ್ದಾನೆ. ಅವನು ಒಂದು ರೀತಿಯಲ್ಲಿ ತನ್ನ ಸರ್ವಸ್ವವನ್ನೂ ಮಾರಿಬಿಟ್ಟನು ಅಂದರೆ ಅಲ್ಪನಾದ ಮನುಷ್ಯನಾಗುವ ಕಾರಣದಿಂದ ತನಗೆ ಸ್ವರ್ಗದಲ್ಲಿದ್ದ ಗೌರವದ ಸ್ಥಾನವನ್ನು ತೊರೆದುಬಿಟ್ಟನು. ಮತ್ತು ಭೂಮಿಯಲ್ಲಿ ಮನುಷ್ಯನಾಗಿದ್ದಾಗ ನಿಂದೆ, ಮತ್ತು ದ್ವೇಷದ ಹಿಂಸೆಯನ್ನು ತಾಳಿಕೊಂಡು, ತಾನು ದೇವರ ರಾಜ್ಯದ ಪ್ರಭುವಾಗಲು ಯೋಗ್ಯನೆಂದು ತೋರಿಸಿದನು.
ಯೇಸುವಿನ ಹಿಂಬಾಲಕರು ಸಹ, ಕ್ರಿಸ್ತನೊಂದಿಗೆ ಜೊತೆ ಪ್ರಭುಗಳಾಗುವ ಅಥವಾ ರಾಜ್ಯದ ಭೂಪ್ರಜೆಗಳಾಗುವ ಮಹಾ ಬಹುಮಾನ ಪಡೆಯಲು ಸರ್ವವನ್ನೂ ಮಾರಿ ಬಿಡಬೇಕೆಂಬ ಪಂಥಾಹ್ವಾನ ಅವರ ಮುಂದೆ ಇಡಲ್ಪಡುತ್ತದೆ. ನಾವು ದೇವರ ರಾಜ್ಯದಲ್ಲಿ ಸಿಗಲಿರುವ ಭಾಗವನ್ನು ಜೀವನದ ಇನ್ಯಾವ ವಿಷಯಕ್ಕಿಂತಲೂ ಹೆಚ್ಚು ಬೆಲೆಯದ್ದೆಂದೂ, ಬೆಲೆ ಕಟ್ಟಲಾಗದ ನಿಕ್ಷೇಪ ಅಥವಾ ಅಮೂಲ್ಯವಾದ ಮುತ್ತು ಎಂದು ಪರಿಗಣಿಸುವೆವೂ?
ಕೊನೆಯದಾಗಿ, ಯೇಸುವು “ಪರಲೋಕ ರಾಜ್ಯ” ವನ್ನು ಸಕಲ ವಿಧವಾದ ಮೀನುಗಳನ್ನು ಹಿಡಿಯುವ ಎಳೆಬಲೆಗೆ ಹೋಲಿಸುತ್ತಾನೆ. ಮೀನುಗಳನ್ನು ಪ್ರತ್ಯೇಕಿಸುವಾಗ ಅಯೋಗ್ಯವಾದವುಗಳನ್ನು ಹೊರಗೆ ಬಿಸಾಡಿ, ಒಳ್ಳೆಯವುಗಳನ್ನು ಜೋಪಾಸನೆ ಮಾಡಲಾಗುತ್ತದೆ. ಆದುದರಿಂದ ವಿಷಯಗಳ ವ್ಯವಸ್ಥೆಯ ಅಂತ್ಯದಲ್ಲಿ ಹಾಗಿರುವದೆಂದು ಯೇಸುವು ಹೇಳುತ್ತಾನೆ; ದೇವದೂತರು ನೀತಿವಂತರಿಂದ ದುಷ್ಟರನ್ನು ಪ್ರತ್ಯೇಕಿಸಿ ದುಷ್ಟರನ್ನು ನಾಶಕ್ಕಾಗಿ ಬದಿಗಿಡುವರು.
ಈ ಮೀನುಗಾರಿಕೆಯ ಯೋಜನೆಯನ್ನು ಯೇಸುವು ತಾನೇ ಆರಂಭಿಸುತ್ತಾ, “ಮನುಷ್ಯರನ್ನು ಹಿಡಿಯುವ ಬೆಸ್ತ” ರಾಗಲು ತನ್ನ ಪ್ರಥಮ ಶಿಷ್ಯರನ್ನು ಕರೆಯುತ್ತಾನೆ. ದೇವದೂತರ ಕಣ್ಗಾವಲಿನಲ್ಲಿ ಈ ಮೀನುಗಾರಿಕೆ ಶತಮಾನಗಳಲ್ಲಿ ಮುಂದುವರಿಯುತ್ತದೆ. ಅಂತಿಮವಾಗಿ, ಅಭಿಷಿಕ್ತ ಕ್ರೈಸ್ತರ ಸಭೆಯ ಸಹಿತ ಭೂಮಿಯಲ್ಲಿ ಕ್ರೈಸ್ತರೆನಿಸಿಕೊಳ್ಳುವ ಎಲ್ಲಾ ಸಂಸ್ಥೆಗಳನ್ನು ಪ್ರತಿನಿಧಿಸುವ ಈ ಬಲೆಯನ್ನು ಎಳೆಯುವ ಸಮಯ ಬರುತ್ತದೆ.
ಅಯೋಗ್ಯವಾದ ಮೀನುಗಳು ನಾಶನಕ್ಕೆ ಬಿಸಾಡಲ್ಪಡುತ್ತವಾದರೂ, ಕೃತಜ್ಞತಾಪೂರ್ವಕವಾಗಿ ‘ಒಳ್ಳೆಯ ಮೀನು’ ಗಳು ಉಳಿಸಲ್ಪಟ್ಟಿವೆ. ಯೇಸುವಿನ ಶಿಷ್ಯರಂತೆ ಹೆಚ್ಚಿನ ಜ್ಞಾನ ಮತ್ತು ತಿಳುವಳಿಕೆಗೆ ತೀವ್ರಾಪೇಕ್ಷೆಯನ್ನು ತೋರಿಸುವಲ್ಲಿ ನಮಗೆ ಹೆಚ್ಚು ಉಪದೇಶದ ಧನ್ಯತೆ ಮಾತ್ರವಲ್ಲ, ಅನಂತ ಜೀವದ ದೇವರ ಆಶೀರ್ವಾದವು ದೊರೆಯುವದು. ಮತ್ತಾಯ 13:1-52; ಮಾರ್ಕ 4:1-34; ಲೂಕ 8:4-18; ಕೀರ್ತನೆ 78:2; ಯೆಶಾಯ 6:9, 10.
▪ ಯೇಸು ಜನಗುಂಪುಗಳಿಗೆ ದೃಷ್ಟಾಂತಗಳ ಮೂಲಕ ಯಾವಾಗ ಮತ್ತು ಎಲ್ಲಿ ಮಾತಾಡಿದನು?
▪ ಯೇಸುವು ಜನಸಮುದಾಯಗಳಿಗೆ ಯಾವ ಐದು ದೃಷ್ಟಾಂತಗಳನ್ನು ಈಗ ಹೇಳಿದನು?
▪ ಸಾಸಿವೆ ಬೀಜ ಎಲ್ಲಾ ಬೀಜಗಳಿಗಿಂತ ಚಿಕ್ಕದು ಎಂದು ಯೇಸುವು ಹೇಳಿದ್ದೇಕೆ?
▪ ಯೇಸುವು ದೃಷ್ಟಾಂತಗಳಲ್ಲಿ ಮಾತಾಡಿದ್ದೇಕೆ?
▪ ತಾವು ಜನರ ಗುಂಪಿಗಿಂತ ಭಿನ್ನರೆಂದು ಯೇಸುವಿನ ಶಿಷ್ಯರು ಹೇಗೆ ತೋರಿಸುತ್ತಾರೆ?
▪ ಬೀಜ ಬಿತ್ತುವವನ ಸಾಮ್ಯಕ್ಕೆ ಯೇಸುವು ಯಾವ ವಿವರಣೆಯನ್ನೊದಗಿಸುತ್ತಾನೆ?
▪ ಸಮುದ್ರ ತೀರದ ಜನರ ಗುಂಪಿಗಿಂತ ಶಿಷ್ಯರು ಹೇಗೆ ಭಿನ್ನರಾಗಿದ್ದಾರೆ?
▪ ಬಿತ್ತುವವನು, ಹೊಲ, ಒಳ್ಳೆಯ ಬೀಜ, ವೈರಿ, ಸುಗ್ಗೀಕಾಲ ಮತ್ತು ಕೊಯ್ಯುವವರು ಯಾರನ್ನು ಅಥವಾ ಯಾವುದನ್ನು ಪ್ರತಿನಿಧೀಕರಿಸುತ್ತಾರೆ?
▪ ಯೇಸುವು ಇನ್ಯಾವ ಮೂರು ದೃಷ್ಟಾಂತಗಳನ್ನು ಒದಗಿಸಿದನು, ಮತ್ತು ನಾವು ಅವುಗಳಿಂದ ಏನನ್ನು ಕಲಿಯಬಲ್ಲೆವು?