ಅಧ್ಯಾಯ ಇಪ್ಪತ್ತೊಂದು
ಭಯ ಮತ್ತು ಸಂದೇಹವನ್ನು ಮೆಟ್ಟಿನಿಂತವನು
1-3. (1) ಆ ದಿನದಂದು ಪೇತ್ರ ಏನೆಲ್ಲ ನೋಡಿದ್ದನು? (2) ಆ ರಾತ್ರಿ ಅವನು ಪಟ್ಟ ಪಾಡೇನು?
ಪೇತ್ರ ತನ್ನ ಮೈಯ ಕಸುವನ್ನೆಲ್ಲ ಒಟ್ಟುಸೇರಿಸಿ ಗಲಿಲಾಯ ಸಮುದ್ರದಲ್ಲಿ ದೋಣಿಗೆ ಹುಟ್ಟುಹಾಕುತ್ತಾ ಇದ್ದ. ಸುತ್ತಮುತ್ತ ಗಾಢ ಕತ್ತಲು. ಜೋರಾಗಿ ಬೀಸುತ್ತಿದ್ದ ಗಾಳಿ ಸಮುದ್ರದಲ್ಲಿ ದೊಡ್ಡ ಕೋಲಾಹಲವನ್ನೇ ಎಬ್ಬಿಸಿತ್ತು. ಇದ್ದಕ್ಕಿದ್ದಂತೆ ಅವನಿಗೆ ಪೂರ್ವದ ದಿಗಂತದಲ್ಲಿ ಮಸುಕುಮಸುಕಾದ ಬೆಳಕು ಕಂಡಂತಾಯಿತು. ಕಣ್ಣನ್ನು ಕಿರಿದಾಗಿಸಿ ಅದೇನಿರಬಹುದೆಂದು ನೋಡಲು ಪ್ರಯತ್ನಿಸಿದ. ಬೆಳಗಾಯಿತೇನೊ ಅಂದುಕೊಂಡ. ತುಂಬ ಹೊತ್ತಿನಿಂದ ದೋಣಿಗೆ ಹುಟ್ಟು ಹಾಕಿಹಾಕಿ ಅವನ ಬೆನ್ನು, ಭುಜ ಸಿಡಿಯುತ್ತಿತ್ತು. ಬೀಸುತ್ತಿದ್ದ ಬಿರುಗಾಳಿ ಅವನ ತಲೆ ಕೂದಲನ್ನೆಲ್ಲ ಕೆದರಿಸಿಬಿಟ್ಟಿತ್ತು. ದೋಣಿಯ ಮುಂಭಾಗಕ್ಕೆ ಬಂದು ಅಪ್ಪಳಿಸುತ್ತಿದ್ದ ಅಲೆಗಳಿಂದ ತಣ್ಣನೆಯ ನೀರಿನ ಎರಚಲು ಅವನನ್ನು ಪೂರ್ತಿ ತೋಯಿಸಿಬಿಟ್ಟಿತ್ತು. ಆದರೂ ಅವನು ದೋಣಿಗೆ ಹುಟ್ಟುಹಾಕುತ್ತಾ ಇದ್ದ.
2 ಪೇತ್ರ ಮತ್ತವನ ಸಂಗಡಿಗರನ್ನು ಇನ್ನೊಂದು ತೀರಕ್ಕೆ ಹೋಗುವಂತೆ ಯೇಸುವೇ ಹೇಳಿದ್ದನು. ಆ ದಿನ ಅವರು ಕೆಲವೇ ರೊಟ್ಟಿ ಹಾಗೂ ಮೀನಿನಿಂದ ಯೇಸು ಅದ್ಭುತವಾಗಿ ಸಾವಿರಾರು ಜನರ ಹಸಿವನ್ನು ನೀಗಿಸಿದ್ದನ್ನು, ನಂತರ ಆ ಜನರು ಯೇಸುವನ್ನು ರಾಜನನ್ನಾಗಿ ಮಾಡಲು ಯತ್ನಿಸಿದ್ದನ್ನು ನೋಡಿದ್ದರು. ಆದರೆ ಯೇಸುವಿಗೆ ರಾಜಕೀಯದಲ್ಲಿ ಒಳಗೂಡಲು ಎಳ್ಳಷ್ಟು ಮನಸ್ಸಿರಲಿಲ್ಲ. ತನ್ನ ಹಿಂಬಾಲಕರೂ ರಾಜಕೀಯದಲ್ಲಿ ಒಳಗೂಡಬಾರದೆಂದು ಕಲಿಸಲಿಚ್ಛಿಸಿದ್ದನು. ಹಾಗಾಗಿ ತನ್ನೊಂದಿಗಿದ್ದ ಶಿಷ್ಯರನ್ನು ದೋಣಿ ಹತ್ತಿ ಆಚೆ ದಡಕ್ಕೆ ಹೋಗುವಂತೆ ಒತ್ತಾಯಿಸಿದ್ದನು. ತಾನೂ ಜನರ ಕೈಗೆ ಸಿಗದಂತೆ ಬೆಟ್ಟಕ್ಕೆ ಹೋಗಿದ್ದನು. ಅಲ್ಲಿ ಏಕಾಂತದಲ್ಲಿ ಪ್ರಾರ್ಥಿಸತೊಡಗಿದ್ದನು.—ಮಾರ್ಕ 6:35-45; ಯೋಹಾನ 6:14-17 ಓದಿ.
3 ಶಿಷ್ಯರು ತೀರದಿಂದ ಹೊರಟಾಗ, ಸ್ವಲ್ಪ ಡೊಂಕಾದ ಚಂದ್ರ ನೆತ್ತಿಯ ಮೇಲಿತ್ತು. ಈಗ ಅದು ನಿಧಾನವಾಗಿ ಪಶ್ಚಿಮ ದಿಗಂತದಲ್ಲಿ ಮುಳುಗುತ್ತಾ ಇತ್ತು. ರಾತ್ರಿಯಿಡಿ ಶಿಷ್ಯರು ದೋಣಿಗೆ ಹುಟ್ಟುಹಾಕಿದ್ದರೂ ಸಮುದ್ರದಲ್ಲಿ ಸಾಗಿ ಬಂದದ್ದು ಬರೀ ಕೆಲವೇ ಮೈಲಿ. ಹುಟ್ಟುಹಾಕುವ ಪ್ರಯಾಸದ ಕೆಲಸದ ಜೊತೆಗೆ ಗಾಳಿಯ ಆರ್ಭಟ ಹಾಗೂ ಅಲೆಗಳ ಅಬ್ಬರದಿಂದಾಗಿ ದೋಣಿಯಲ್ಲಿದ್ದವರು ಒಬ್ಬರೊಂದಿಗೊಬ್ಬರು ಮಾತಾಡಲು ಕಷ್ಟವಾಗುತ್ತಿತ್ತು. ಹಾಗಾಗಿ ಪೇತ್ರ ಬಹುಶಃ ಅವನದ್ದೇ ಯೋಚನೆಗಳಲ್ಲಿ ಮುಳುಗಿದ್ದನು.
ಎರಡು ವರ್ಷಗಳಲ್ಲಿ ಪೇತ್ರನು ಯೇಸುವಿನಿಂದ ಎಷ್ಟೋ ಕಲಿತಿದ್ದ. ಆದರೆ ಕಲಿಯಲಿಕ್ಕೆ ಇನ್ನೂ ಬಹಳಷ್ಟಿತ್ತು
4. ಪೇತ್ರ ಏಕೆ ನಮಗೆ ಅನುಕರಣಯೋಗ್ಯ ಮಾದರಿ ಆಗಿದ್ದಾನೆ?
4 ಪೇತ್ರನಿಗೆ ಯೋಚಿಸಲಿಕ್ಕೆ ಲೆಕ್ಕವಿಲ್ಲದಷ್ಟು ವಿಷಯಗಳಿದ್ದವು. ಏಕೆಂದರೆ ಅವನ ಮತ್ತು ಯೇಸುವಿನ ಎರಡಕ್ಕಿಂತ ಹೆಚ್ಚು ವರ್ಷದ ಪರಿಚಯದಲ್ಲಿ ಹಲವಾರು ಘಟನೆಗಳು ನಡೆದಿದ್ದವು. ಯೇಸುವಿನಿಂದ ಅವನು ಎಷ್ಟೋ ಕಲಿತಿದ್ದ. ಆದರೆ ಕಲಿಯಲಿಕ್ಕೆ ಇನ್ನೂ ಬಹಳಷ್ಟಿತ್ತು. ಅದರಲ್ಲೂ ಸಂದೇಹ ಹಾಗೂ ಭಯವನ್ನು ಮೆಟ್ಟಿನಿಲ್ಲಲು ಕಲಿಯಬೇಕಿತ್ತು. ಅದನ್ನು ಕಲಿಯಲು ಪೇತ್ರ ಸಿದ್ಧನಿದ್ದ. ಹಾಗಾಗಿ ನಮಗೆಲ್ಲ ಅವನೊಬ್ಬ ಅನುಕರಣಯೋಗ್ಯ ಮಾದರಿಯಾಗಿದ್ದಾನೆ. ಹೇಗೆಂದು ನೋಡೋಣ.
“ನಮಗೆ ಮೆಸ್ಸೀಯನು ಸಿಕ್ಕಿದ್ದಾನೆ”
5, 6. ಪೇತ್ರನ ಜೀವನ ಹೇಗೆ ಸಾಗುತ್ತಿತ್ತು?
5 ಯೇಸುವನ್ನು ಭೇಟಿಯಾದ ಮೊದಲ ದಿನ ಪೇತ್ರನಿಗೆ ಮರೆಯಲಾಗದ ದಿನವಾಗಿತ್ತು. ಅವನ ಸಹೋದರನಾದ ಅಂದ್ರೆಯ “ನಮಗೆ ಮೆಸ್ಸೀಯನು ಸಿಕ್ಕಿದ್ದಾನೆ” ಎಂಬ ಅಚ್ಚರಿಯ ಸುದ್ದಿಯನ್ನು ಅವನಿಗೆ ತಂದುಕೊಟ್ಟಿದ್ದ. ಆ ಮಾತುಗಳಿಂದ ಪೇತ್ರನ ಬದುಕಿನ ದಿಸೆಯೇ ಬದಲಾಗತೊಡಗಿತು. ಅವನ ಜೀವನ ಮುಂದೆಂದೂ ಹಿಂದಿನಂತೆ ಇರಲಿಲ್ಲ.—ಯೋಹಾ. 1:41.
6 ಪೇತ್ರ ಕಪೆರ್ನೌಮಿನಲ್ಲಿ ವಾಸವಾಗಿದ್ದ. ಈ ಪಟ್ಟಣ ‘ಗಲಿಲಾಯ ಸಮುದ್ರ’ ಎಂಬ ಸಿಹಿನೀರಿನ ಸರೋವರದ ಉತ್ತರ ತೀರದಲ್ಲಿತ್ತು. ಪೇತ್ರ ಅಂದ್ರೆಯರು ಜೆಬೆದಾಯನ ಪುತ್ರರಾದ ಯಾಕೋಬ ಯೋಹಾನರೊಂದಿಗೆ ಮೀನುಗಾರಿಕೆಯಲ್ಲಿ ಪಾಲುದಾರರಾಗಿದ್ದರು. ಪೇತ್ರನ ಮನೆಯಲ್ಲಿ ಅವನೂ ಅವನ ಹೆಂಡತಿ ಮಾತ್ರವಲ್ಲ ಅವನ ಅತ್ತೆ, ಸಹೋದರನಾದ ಅಂದ್ರೆಯ ಸಹ ವಾಸವಾಗಿದ್ದರು. ಪೇತ್ರನಿಗೆ ಸಂಸಾರ ಸಾಗಿಸಲು ಮೀನುಹಿಡಿಯುವ ಕಸುಬು ಆಧಾರವಾಗಿತ್ತು. ಇದು ಶ್ರಮದ ಕೆಲಸ. ತುಂಬ ಶಕ್ತಿ, ಕೌಶಲ ಬೇಕಾಗುತ್ತಿತ್ತು. ಬೆಸ್ತರ ಕೆಲಸದ ಬಗ್ಗೆ ಸ್ವಲ್ಪ ಯೋಚಿಸಿ. ಎಷ್ಟೋ ರಾತ್ರಿಗಳಂದು ಸೂರ್ಯೋದಯದ ವರೆಗೂ ಕೆಲಸಮಾಡಬೇಕಾಗುತ್ತಿತ್ತು. ಎರಡು ದೋಣಿಗಳಲ್ಲಿರುವವರು ಸೇರಿ ವ್ಯೂಹ ರಚಿಸಿ ಬಲೆ ಬೀಸಬೇಕಿತ್ತು. ಮೀನು ತುಂಬಿದ ಬಲೆಗಳನ್ನು ಮೇಲೆಳೆದು ದೋಣಿಗೆ ಹಾಕಬೇಕಿತ್ತು. ಹಗಲಲ್ಲಿ ಆಯಾ ಮೀನುಗಳನ್ನು ವಿಂಗಡಿಸಿ, ಮಾರಬೇಕಿತ್ತು. ಇಷ್ಟಕ್ಕೆ ಕೆಲಸ ಮುಗಿಯುತ್ತಿರಲಿಲ್ಲ. ಬಲೆಗಳನ್ನು ಸರಿಮಾಡಿ, ಶುಚಿಗೊಳಿಸಬೇಕಿತ್ತು ಸಹ.
7. (1) ಪೇತ್ರನಿಗೆ ಯೇಸುವಿನ ಬಗ್ಗೆ ಏನು ಸುದ್ದಿ ಸಿಕ್ಕಿತು? (2) ಆ ಸುದ್ದಿ ಏಕೆ ರೋಮಾಂಚಕಾರಿಯಾಗಿತ್ತು?
7 ಅಂದ್ರೆಯನು ಸ್ನಾನಿಕ ಯೋಹಾನನ ಶಿಷ್ಯನಾಗಿದ್ದನೆಂದು ಬೈಬಲ್ ಹೇಳುತ್ತದೆ. ಯೋಹಾನ ಸಾರುತ್ತಿದ್ದ ಸಂದೇಶದ ಬಗ್ಗೆ ಅಂದ್ರೆಯನು ಬಂದು ಹೇಳುತ್ತಿದ್ದಾಗೆಲ್ಲ ಖಂಡಿತವಾಗಿ ಪೇತ್ರ ಕಿವಿ ನಿಮಿರಿಸಿ ಕೇಳುತ್ತಿದ್ದ. ಹಾಗೆ ಒಂದು ದಿನ ಯೋಹಾನನು ನಜರೇತಿನ ಯೇಸುವಿನ ಕಡೆಗೆ ಬೊಟ್ಟುಮಾಡಿ “ನೋಡಿ, ದೇವರ ಕುರಿಮರಿ!” ಎಂದು ಹೇಳುವಾಗ ಅಂದ್ರೆಯ ಅಲ್ಲೇ ಇದ್ದ. ಅವನು ಆ ಕೂಡಲೇ ಯೇಸುವಿನ ಹಿಂಬಾಲಕನಾದ. ಉತ್ಸಾಹದಿಂದ ಪೇತ್ರನ ಬಳಿ ಬಂದು ‘ಮೆಸ್ಸೀಯನು ಸಿಕ್ಕಿದ್ದಾನೆ’ ಎಂಬ ರೋಮಾಂಚಕಾರಿ ಸುದ್ದಿ ಕೊಟ್ಟ. (ಯೋಹಾ. 1:35-40) ಸುಮಾರು 4,000 ವರ್ಷಗಳ ಹಿಂದೆ ಏದೆನಿನಲ್ಲಾದ ದಂಗೆಯ ಬಳಿಕ ಯೆಹೋವ ದೇವರು ಮಾನವಕುಲಕ್ಕೆ ನಿಜ ನಿರೀಕ್ಷೆಯನ್ನು ಕೊಡಲಿರುವ ಒಬ್ಬ ವಿಶೇಷ ವ್ಯಕ್ತಿ ಬರಲಿದ್ದಾನೆಂದು ಮಾತುಕೊಟ್ಟಿದ್ದನು. (ಆದಿ. 3:15) ಆ ರಕ್ಷಕನನ್ನೇ, ಹೌದು ಮೆಸ್ಸೀಯನನ್ನೇ ಅಂದ್ರೆಯನು ಭೇಟಿಯಾಗಿ ಬಂದಿದ್ದ! ಈಗ ಪೇತ್ರನು ಕೂಡ ಮೆಸ್ಸೀಯನಾದ ಯೇಸುವನ್ನು ಭೇಟಿಯಾಗಲು ಅವಸರ ಅವಸರದಿಂದ ಹೋದ.
8. (1) ಯೇಸು ಪೇತ್ರನಿಗೆ ಕೊಟ್ಟ ಹೆಸರಿನ ಅರ್ಥವೇನು? (2) ಈ ಹೆಸರು ಪೇತ್ರನಿಗೆ ಸೂಕ್ತವಲ್ಲವೆಂದು ಈಗಲೂ ಕೆಲವರಿಗೆ ಅನಿಸುವುದೇಕೆ?
8 ಪೇತ್ರನಿಗೆ ಸೀಮೋನ ಎಂಬ ಹೆಸರಿತ್ತು. ಆದರೆ ಯೇಸು ಅವನನ್ನು ನೋಡಿದ ಕೂಡಲೇ, “ನೀನು ಯೋಹಾನನ ಮಗನಾದ ಸೀಮೋನನು; ನೀನು ಕೇಫನೆಂದು (ಇದನ್ನು ಪೇತ್ರ ಎಂದು ಭಾಷಾಂತರಿಸಲಾಗುತ್ತದೆ) ಕರೆಯಲ್ಪಡುವಿ” ಎಂದು ಹೇಳಿದನು. (ಯೋಹಾ. 1:42) “ಕೇಫ” ಎಂಬುದು ಸಾಮಾನ್ಯ ನಾಮಪದ. ಅದರರ್ಥ “ಕಲ್ಲು” ಇಲ್ಲವೆ “ಬಂಡೆ.” ಯೇಸು ಈ ಮಾತುಗಳನ್ನು ಪ್ರವಾದನಾತ್ಮಕವಾಗಿ ನುಡಿದನೆಂಬುದು ವ್ಯಕ್ತ. ಅಂದರೆ ತನ್ನ ಹಿಂಬಾಲಕರ ಮಧ್ಯೆ ಪೇತ್ರನು ಮುಂದಕ್ಕೆ ಬಂಡೆಯಂತೆ ಸ್ಥಿರವಾಗಿ, ಬಲವಾಗಿ, ಭರವಸಾರ್ಹನಾಗಿ ಇದ್ದು ಸತ್ಪ್ರಭಾವ ಬೀರಲಿದ್ದಾನೆಂದು ಯೇಸು ಮುಂಗಂಡನು. ಆದರೆ ಸ್ವತಃ ಪೇತ್ರನಿಗೆ ತನ್ನ ಬಗ್ಗೆ ಹಾಗನಿಸುತ್ತಿತ್ತೇ? ಇಲ್ಲವೆಂದು ತೋರುತ್ತದೆ. ಸುವಾರ್ತಾ ವೃತ್ತಾಂತಗಳನ್ನು ಇಂದು ಓದುವವರಲ್ಲೂ ಕೆಲವರಿಗೆ ಪೇತ್ರನಲ್ಲಿ ಬಂಡೆಯಂಥ ಯಾವುದೇ ಗುಣಗಳು ಇರಲಿಲ್ಲವೆಂದು ಅನಿಸುತ್ತದೆ. ಬೈಬಲ್ ದಾಖಲೆಯಲ್ಲಿ ಅವನ ವ್ಯಕ್ತಿತ್ವದ ವರ್ಣನೆ ನೋಡಿದರೆ ಅವನು ಅಸ್ಥಿರ, ಚಂಚಲ, ಅನಿಶ್ಚಿತ ಸ್ವಭಾವದವನಂತೆ ತೋರುತ್ತದೆಂಬುದು ಇನ್ನೂ ಕೆಲವರ ಅಭಿಪ್ರಾಯ.
9. (1) ಯೆಹೋವ ಮತ್ತು ಅವನ ಪುತ್ರ ಜನರಲ್ಲಿ ಏನನ್ನು ಹುಡುಕುತ್ತಾರೆ? (2) ನಾವೇಕೆ ಅವರ ದೃಷ್ಟಿಕೋನವನ್ನು ನಂಬಬೇಕೆಂದು ನೆನಸುತ್ತೀರಿ?
9 ಪೇತ್ರನಲ್ಲಿ ಕುಂದುಕೊರತೆಗಳಿದ್ದವು ನಿಜ. ಯೇಸುವಿಗೂ ಅದರ ಬಗ್ಗೆ ಗೊತ್ತಿತ್ತು. ಆದರೆ ಅವನು ತನ್ನ ತಂದೆಯಾದ ಯೆಹೋವನಂತೆ ಯಾವಾಗಲೂ ಜನರಲ್ಲಿ ಒಳ್ಳೇ ಅಂಶಗಳಿಗಾಗಿ ಹುಡುಕುತ್ತಿದ್ದನು. ಪೇತ್ರನಲ್ಲೂ ಹಲವಾರು ಒಳ್ಳೇ ಗುಣಗಳಿರುವುದನ್ನು ಯೇಸು ನೋಡಿದನು. ಆ ಒಳ್ಳೇ ಗುಣಗಳನ್ನು ಹೊರತರಲು ಪೇತ್ರನಿಗೆ ಸಹಾಯಮಾಡಿದನು. ಯೆಹೋವ ಮತ್ತು ಯೇಸು ಈಗಲೂ ನಮ್ಮಲ್ಲಿ ಒಳ್ಳೇ ಅಂಶಗಳಿಗಾಗಿ ಹುಡುಕುತ್ತಾರೆ. ‘ಅಂಥದ್ದೇನೂ ಒಳ್ಳೇದು ನಮ್ಮಲ್ಲಿಲ್ಲ’ ಎಂದು ನಮಗನಿಸಬಹುದು. ಆದರೆ ನಮ್ಮ ಬಗ್ಗೆ ಅವರಿಗಿರುವ ದೃಷ್ಟಿಕೋನವನ್ನು ನಾವು ನಂಬಬೇಕು ಮತ್ತು ಅವರಿಂದ ತರಬೇತಿ ಪಡೆದು ರೂಪಿಸಲ್ಪಡಲು ಪೇತ್ರನಂತೆ ಸಿದ್ಧರಿರಬೇಕು.—1 ಯೋಹಾನ 3:19, 20 ಓದಿ.
“ಹೆದರಬೇಡ”
10. (1) ಪೇತ್ರ ಏನನ್ನು ಕಂಡುಕೇಳಿರಬೇಕು? (2) ಹಾಗಿದ್ದರೂ ಯಾವುದಕ್ಕೆ ಹಿಂದಿರುಗಿದನು?
10 ಯೇಸುವನ್ನು ಪ್ರಥಮ ಬಾರಿ ಭೇಟಿಯಾದ ನಂತರ ಪೇತ್ರ ಸ್ವಲ್ಪ ಸಮಯದ ಮಟ್ಟಿಗೆ ಸಾರುವ ಸಂಚಾರದಲ್ಲಿ ಯೇಸುವನ್ನು ಜೊತೆಗೂಡಿರಬೇಕು. ಈ ಸಮಯದಲ್ಲಿ ಯೇಸು ಕಾನಾದ ಮದುವೆ ಔತಣದಲ್ಲಿ ನೀರನ್ನು ದ್ರಾಕ್ಷಾಮದ್ಯವಾಗಿ ಮಾಡಿ ಮೊದಲ ಅದ್ಭುತ ನಡಿಸಿದ್ದನ್ನು ನೋಡಲು ಪೇತ್ರನಿಗೆ ಸಾಧ್ಯವಾಗಿರಬೇಕು. ಇದಕ್ಕಿಂತ ಮುಖ್ಯವಾಗಿ, ದೇವರ ರಾಜ್ಯದ ಅದ್ಭುತ ಸಂದೇಶ ಮತ್ತು ಅದರಿಂದ ಸಿಗುವ ನಿರೀಕ್ಷೆಯನ್ನು ಯೇಸುವಿನಿಂದ ಅವನು ಕೇಳಿಸಿಕೊಂಡಿರಬೇಕು. ಇಷ್ಟೆಲ್ಲ ನೋಡಿ ಕೇಳಿದ ಮೇಲೂ ಪೇತ್ರ ಯೇಸುವಿನ ಜೊತೆ ಸಾರುವ ಸಂಚಾರದಲ್ಲಿ ಮುಂದುವರಿಯಲಿಲ್ಲ. ತನ್ನ ಕಸುಬಿಗೆ ಹಿಂದಿರುಗಿದ. ಆದರೆ ಕೆಲವು ತಿಂಗಳ ಬಳಿಕ ಪುನಃ ಪೇತ್ರ ಮತ್ತು ಯೇಸುವಿನ ಮುಖಾಮುಖಿ ಭೇಟಿಯಾಯಿತು. ಈ ಸಲ ಯೇಸು ಪೇತ್ರನಿಗೆ ಪೂರ್ಣ ಸಮಯ ತನ್ನೊಟ್ಟಿಗೆ ಸಾರುವ ಕೆಲಸದಲ್ಲಿ ತೊಡಗುವಂತೆ ಆಮಂತ್ರಿಸಿದ.
11, 12. (1) ಎಂದಿಗಿಂತ ಆ ರಾತ್ರಿ ಪೇತ್ರ ಮಾಡಿದ ಕೆಲಸ ಹೆಚ್ಚು ಪ್ರಯಾಸಕರವಾಗಿತ್ತೇಕೆ? (2) ಯೇಸುವಿಗೆ ಕಿವಿಗೊಡುತ್ತಿದ್ದಾಗ ಪೇತ್ರನ ಮನಸ್ಸಲ್ಲಿ ಯಾವ ಪ್ರಶ್ನೆಗಳು ಎದ್ದಿರಬಹುದು?
11 ಈ ಭೇಟಿಯ ಹಿಂದಿನ ರಾತ್ರಿ ಪೇತ್ರ ಮೀನುಹಿಡಿಯಲು ಹೋಗಿ ನಿರಾಸೆಯಿಂದ ಹಿಂದಿರುಗಿದ್ದ. ಅವನೂ ಅವನ ಜೊತೆ-ಬೆಸ್ತರೂ ರಾತ್ರಿಯಿಡೀ ಪುನಃ ಪುನಃ ತಮ್ಮ ಬಲೆಗಳನ್ನು ಬೀಸಿದ್ದರೂ ಅವರಿಗೆ ಮೀನು ಸಿಕ್ಕಿರಲೇ ಇಲ್ಲ. ಪೇತ್ರ ತನ್ನೆಲ್ಲ ಅನುಭವ, ಕೌಶಲ ಬಳಸಿ ಮೀನು ಹಿಡಿಯಲು ಖಂಡಿತ ಪ್ರಯತ್ನಿಸಿದ್ದ. ಆ ಸರೋವರದ ಬೇರೆ ಬೇರೆ ಸ್ಥಳಗಳಲ್ಲಿ ಬಲೆ ಹಾಕಿ ಮೀನಿಗಾಗಿ ಹುಡುಕಾಡಿದ್ದ. ಮೀನಿನ ದಂಡುಗಳು ಎಲ್ಲಿವೆಯೆಂದು ತನಗೆ ಕತ್ತಲಲ್ಲೂ ಕಾಣಿಸುವಂತಿದ್ದರೆ ಅಥವಾ ಹೇಗಾದರೂ ಮೀನುಗಳು ಬಲೆಯಲ್ಲಿ ಸಿಕ್ಕಿಬೀಳುವಂತೆ ತನ್ನಿಂದ ಮಾಡಲಿಕ್ಕಾಗುತ್ತಿದ್ದರೆ ಚೆನ್ನಾಗಿರುತ್ತಿತ್ತೆಂದು ಅನೇಕ ಬೆಸ್ತರಂತೆ ಅವನೂ ಎಷ್ಟೋ ಸಲ ಆಶಿಸಿರಬಹುದು. ಇಂಥ ಯೋಚನೆಗಳಿಂದ ಅವನ ಹತಾಶೆ ಇನ್ನೂ ಹೆಚ್ಚಾಗಿರಬೇಕು. ಅವನೇನು ಮೋಜಿಗಾಗಿ ಮೀನುಹಿಡಿಯುತ್ತಿರಲಿಲ್ಲ, ಮನೆಮಂದಿಯ ಹೊಟ್ಟೆತುಂಬಿಸಬೇಕಿತ್ತು. ಆದರೆ ಅಂದು ಅವನು ಬರೀಗೈಲಿ ವಾಪಸ್ಸಾಗಿದ್ದ. ತೀರಕ್ಕೆ ಬಂದಾಗ ಬಲೆಗಳನ್ನು ಶುಚಿಮಾಡುವ ಕೆಲಸದಲ್ಲಿ ಮುಳುಗಿದ್ದ. ಆಗಲೇ ಅವನಿದ್ದ ಕಡೆಗೆ ಯೇಸು ಬಂದನು.
ಯೇಸು ತನ್ನ ಸಾರುವಿಕೆಯ ಮುಖ್ಯ ವಿಷಯವಾದ ದೇವರ ರಾಜ್ಯದ ಬಗ್ಗೆ ಮಾತಾಡುವುದನ್ನು ಪೇತ್ರ ಎಷ್ಟೋ ಸಾರಿ ಕೇಳಿಸಿಕೊಂಡಿದ್ದರೂ ಅವನಿಗೆ ಬೇಸರವೆನಿಸಲಿಲ್ಲ
12 ಜನರು ಯೇಸುವನ್ನು ಮುತ್ತಿಕೊಂಡಿದ್ದರು. ಅವರು ಅವನ ಒಂದೊಂದು ಮಾತನ್ನೂ ಕಾತುರದಿಂದ ಕೇಳುತ್ತಾ ಇದ್ದರು. ಎಲ್ಲರಿಗೂ ತನ್ನ ಮಾತು ಸರಿಯಾಗಿ ಕೇಳಿಸಲೆಂದು ಯೇಸು ಪೇತ್ರನ ದೋಣಿ ಹತ್ತಿ, ಅದನ್ನು ದಡದಿಂದ ಸ್ವಲ್ಪ ದೂರಕ್ಕೆ ನೂಕುವಂತೆ ಹೇಳಿ ಅಲ್ಲಿಂದಲೇ ಬೋಧಿಸಲಾರಂಭಿಸಿದ. ನೀರಿನ ಮೇಲಿಂದ ಅವನ ಸ್ವರ ತೇಲಿಬಂದು ದಡದಲ್ಲಿದ್ದವರಿಗೆ ಸ್ಪಷ್ಟವಾಗಿ ಕೇಳುತ್ತಿತ್ತು. ಪೇತ್ರ ಸಹ ತದೇಕಚಿತ್ತದಿಂದ ಕಿವಿಗೊಡುತ್ತಿದ್ದ. ಯೇಸು ತನ್ನ ಸಾರುವಿಕೆಯ ಮುಖ್ಯ ವಿಷಯವಾದ ದೇವರ ರಾಜ್ಯದ ಬಗ್ಗೆ ಮಾತಾಡುತ್ತಿದ್ದ. ಪೇತ್ರ ಈ ವಿಷಯವನ್ನು ಎಷ್ಟೋ ಸಾರಿ ಕೇಳಿಸಿಕೊಂಡಿದ್ದರೂ ಅವನಿಗೆ ಬೇಸರವೆನಿಸಲಿಲ್ಲ. ಆದರೂ ಏನೋ ಅಳುಕು. ‘ನಿರೀಕ್ಷೆಯ ಈ ಸಂದೇಶವನ್ನು ದೇಶದಾದ್ಯಂತ ಹಬ್ಬಿಸಲು ಯೇಸುವಿಗೆ ಸಹಾಯಮಾಡುವುದು ಎಂಥ ಒಂದು ಸುಯೋಗ! ಆದರೆ ನಾನು ಅವನ ಜೊತೆ ಹೋಗುವ ಪರಿಸ್ಥಿತಿಯಲ್ಲಿದ್ದೇನಾ? ಹಾಗೆ ಹೋದರೆ ನನ್ನನ್ನೇ ನಂಬಿಕೊಂಡಿರುವವರ ಗತಿ ಏನು?’ ಎಂಬ ಯೋಚನೆಗಳು ಅವನ ಮನದಲ್ಲಿ ಗಿರಕಿಹೊಡೆಯುತ್ತಿದ್ದಿರಬಹುದು. ಜೊತೆಗೆ ಹಿಂದಿನ ರಾತ್ರಿಯೇ ಅವನು ಪಟ್ಟ ಪಾಡೆಲ್ಲ ನೆನಪಿಗೆ ಬಂದಾಗ, ಈ ಎಲ್ಲ ಜಂಜಾಟದ ಮಧ್ಯೆ ತನಗೆ ಸಾರಲು ಸಮಯ ಸಿಗಲಿಕ್ಕಿಲ್ಲವೆಂದು ಅವನು ನೆನಸಿರಬೇಕು.—ಲೂಕ 5:1-3.
13, 14. (1) ಯೇಸು ಪೇತ್ರನಿಗಾಗಿ ಯಾವ ಅದ್ಭುತ ನಡಿಸಿದ? (2) ಪೇತ್ರನ ಪ್ರತಿಕ್ರಿಯೆ ಏನಾಗಿತ್ತು?
13 ಯೇಸು ಜನರೊಂದಿಗೆ ಮಾತಾಡುವುದನ್ನು ಮುಗಿಸಿದ ನಂತರ ಪೇತ್ರನಿಗೆ “ಆಳವಾದ ಸ್ಥಳಕ್ಕೆ ದೋಣಿಯನ್ನು ನಡಿಸಿ ಮೀನು ಹಿಡಿಯಲಿಕ್ಕಾಗಿ ನಿಮ್ಮ ಬಲೆಗಳನ್ನು ಇಳಿಸಿರಿ” ಎಂದು ಹೇಳಿದ. ಆದರೆ ಪೇತ್ರನಿಗೆ ಮೀನು ಸಿಗುವುದರ ಬಗ್ಗೆ ಸಂದೇಹವಿತ್ತು. ಹಾಗಾಗಿ ಅವನು “ಉಪದೇಶಕನೇ, ನಾವು ರಾತ್ರಿಯೆಲ್ಲ ಪ್ರಯಾಸಪಟ್ಟರೂ ಏನೂ ಸಿಗಲಿಲ್ಲ” ಎಂದ. ಅವನು ಆಗತಾನೇ ಬಲೆಗಳನ್ನು ತೊಳೆದಿಟ್ಟಿದ್ದ ಬೇರೆ. ಹಾಗಾಗಿ ಬಲೆಗಳನ್ನು ಈಗ ಅದೂ ಮೀನು ಸಿಗದ ಈ ಹಗಲುಹೊತ್ತಿನಲ್ಲಿ ನೀರಿಗಿಳಿಸಲು ಅವನಿಗೆ ಸ್ವಲ್ಪವೂ ಮನಸ್ಸಿರಲಿಲ್ಲವೆಂದು ತೋರುತ್ತದೆ. ಆದರೂ “ಈಗ ನಿನ್ನ ಮಾತಿನಂತೆ ನಾನು ಬಲೆಗಳನ್ನು ಕೆಳಗಿಳಿಸುತ್ತೇನೆ” ಎಂದು ಯೇಸುವಿಗೆ ಹೇಳಿ ಅವನ ಮಾತು ಪಾಲಿಸಲು ಮುಂದಾದ. ತನ್ನ ಸಂಗಡಿಗರಿಗೆ ಇನ್ನೊಂದು ದೋಣಿಯಲ್ಲಿ ತಮ್ಮನ್ನು ಹಿಂಬಾಲಿಸಿ ಬರುವಂತೆ ಬಹುಶಃ ಸನ್ನೆಮಾಡಿದ.—ಲೂಕ 5:4, 5.
14 ಬಲೆ ಇಳಿಸಿದ ನಂತರ ಪೇತ್ರ ಅದನ್ನು ಬಹಳ ಸಲೀಸಾಗಿ ಎತ್ತಲಿಕ್ಕೆ ಹೋದ. ಆದರೆ ಅದು ವಿಪರೀತ ಭಾರವಾಗಿತ್ತು. ಅವನಿಗೆ ನಂಬಲಿಕ್ಕೇ ಆಗಲಿಲ್ಲ. ಇನ್ನಷ್ಟು ಶಕ್ತಿಬಳಸಿ ಎಳೆದ. ಆಗವನಿಗೆ ಬಲೆಯಲ್ಲಿ ವಿಲಿವಿಲಿ ಒದ್ದಾಡುತ್ತಿರುವ ರಾಶಿರಾಶಿ ಮೀನಿರುವುದು ಕಂಡಿತು. ಸಹಾಯಕ್ಕಾಗಿ ಇನ್ನೊಂದು ದೋಣಿಯಲ್ಲಿದ್ದ ಪುರುಷರನ್ನು ಉದ್ವೇಗದಿಂದ ಕೂಗಿದ. ಅವರೆಲ್ಲ ಸೇರಿ ಆ ಮೀನುಗಳನ್ನು ದೋಣಿಯಲ್ಲಿ ತುಂಬಿಸಲು ಪ್ರಯತ್ನಿಸಿದರು. ಅದು ಆಗುವುದಿಲ್ಲವೆಂದು ಗೊತ್ತಾದಾಗ ಎರಡನೇ ದೋಣಿಯಲ್ಲೂ ತುಂಬಿಸಲಾರಂಭಿಸಿದರು. ಮೀನಿನ ರಾಶಿ ಎಷ್ಟಿತ್ತೆಂದರೆ ಅದರ ಭಾರಕ್ಕೆ ಎರಡೂ ದೋಣಿಗಳು ಮುಳುಗಲಾರಂಭಿಸಿದವು. ಪೇತ್ರ ಆಶ್ಚರ್ಯದಿಂದ ಭಾವಪರವಶನಾದ. ಕ್ರಿಸ್ತನ ಶಕ್ತಿಯನ್ನು ಅವನು ಕಣ್ಣಾರೆ ಕಂಡದ್ದು ಇದೇನು ಮೊದಲನೇ ಸಲವಲ್ಲ. ಆದರೆ ಈಗ ನಡೆದ ಅದ್ಭುತ ಸ್ವತಃ ಅವನಿಗಾಗಿಯೇ ನಡೆಸಿದ್ದಾಗಿತ್ತು. ಅವನ ಜೊತೆಗಿದ್ದ ವ್ಯಕ್ತಿಗೆ ಮೀನುಗಳನ್ನು ಬಲೆಯಲ್ಲಿ ಸಿಕ್ಕಿಬೀಳುವಂತೆಯೂ ಮಾಡುವಷ್ಟು ಸಾಮರ್ಥ್ಯವಿತ್ತು! ಪೇತ್ರನಿಗೆ ಈಗ ಗಾಬರಿಯಾಯಿತು. ಮೊಣಕಾಲೂರಿ, “ಸ್ವಾಮಿ, ನನ್ನನ್ನು ಬಿಟ್ಟುಹೋಗು. ನಾನು ಪಾಪಿಷ್ಠನು” ಎಂದ. ದೇವರ ಶಕ್ತಿಯನ್ನು ಹೀಗೂ ಬಳಸಶಕ್ತನಾಗಿದ್ದ ಮಹಾನ್ ವ್ಯಕ್ತಿಯ ಜೊತೆ ಇರಲು ತಾನು ಅರ್ಹನಲ್ಲವೆಂದು ಅವನಿಗನಿಸಿತು.—ಲೂಕ 5:6-9 ಓದಿ.
15. ಪೇತ್ರನು ಸಂದೇಹಪಡುವ, ಭಯಪಡುವ ಅಗತ್ಯವಿಲ್ಲ ಎಂದು ಯೇಸು ಕಲಿಸಿದ್ದು ಹೇಗೆ?
15 ಯೇಸು ಅವನಿಗೆ “ಹೆದರಬೇಡ. ಇಂದಿನಿಂದ ನೀನು ಮನುಷ್ಯರನ್ನು ಸಜೀವವಾಗಿ ಹಿಡಿಯುವವನಾಗುವಿ” ಎಂದು ದಯೆಯಿಂದ ಹೇಳಿದ. (ಲೂಕ 5:10) ಆಗತಾನೇ ನಡೆದಿದ್ದ ಅದ್ಭುತವನ್ನು ಕಣ್ಣಾರೆ ಕಂಡ ಪೇತ್ರನಿಗೆ ತನ್ನ ಕುಟುಂಬದ ಹೊಟ್ಟೆಪಾಡು ಹೇಗೆ, ಏನು ಎಂದು ಸಂದೇಹಪಡಲು ಕಾರಣವಿರಲಿಲ್ಲ. ಅದೇ ರೀತಿ ತಾನು ಯೋಗ್ಯನಲ್ಲ ಎಂದು ನೆನಸಿ ಹೆದರಲು ಸಹ ಈಗ ಅವನಿಗೆ ಕಾರಣವಿರಲಿಲ್ಲ. ಏಕೆಂದರೆ ಯೇಸು ತಾನು ಮಾಡುತ್ತಿದ್ದ ಮಹತ್ತರವಾದ ಕೆಲಸಕ್ಕೆ, ಇಡೀ ಮಾನವಕುಲದ ಭವಿಷ್ಯತ್ತನ್ನು ಪ್ರಭಾವಿಸುವ ಕೆಲಸಕ್ಕೆ ಪೇತ್ರನಿಗೆ ಕರೆಕೊಟ್ಟಿದ್ದ. ಅಲ್ಲದೆ ಯೇಸುವಿನ ದೇವರು “ಮಹಾಕೃಪೆಯಿಂದ ಕ್ಷಮಿಸುವ”ವನು. (ಯೆಶಾ. 55:7) ಪೇತ್ರನು ಸಾರುವ ಕೆಲಸಕ್ಕೆ ಆದ್ಯತೆ ಕೊಟ್ಟರೆ ಯೆಹೋವನು ಖಂಡಿತವಾಗಿ ಅವನ ಶಾರೀರಿಕ ಹಾಗೂ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಲಿದ್ದನು.—ಮತ್ತಾ. 6:33.
16. (1) ಪೇತ್ರ, ಯಾಕೋಬ, ಯೋಹಾನರು ಯೇಸು ಕೊಟ್ಟ ಆಮಂತ್ರಣಕ್ಕೆ ಯಾವ ಪ್ರತಿಕ್ರಿಯೆ ತೋರಿಸಿದರು? (2) ಅವರ ಆ ನಿರ್ಣಯ ಅತ್ಯುತ್ತಮವಾಗಿತ್ತೇಕೆ?
16 ಪೇತ್ರ ಆ ಕರೆಗೆ ತಕ್ಷಣ ಪ್ರತಿಕ್ರಿಯಿಸಿದನು. ಯಾಕೋಬ ಯೋಹಾನರೂ ಹಾಗೇ ಮಾಡಿದರು. “ಅವರು ದೋಣಿಗಳನ್ನು ದಡಕ್ಕೆ ತಂದು ಎಲ್ಲವನ್ನೂ ಬಿಟ್ಟು ಅವನನ್ನು ಹಿಂಬಾಲಿಸಿದರು.” (ಲೂಕ 5:11) ಇದು ಪೇತ್ರ ತನ್ನ ಜೀವನದಲ್ಲಿ ಮಾಡಿದ ಅತ್ಯುತ್ತಮ ನಿರ್ಣಯವಾಗಿತ್ತು. ಹೀಗೆ ಅವನು ಯೇಸುವಿನಲ್ಲಿ ಮತ್ತು ಆತನನ್ನು ಕಳುಹಿಸಿದಾತನಲ್ಲಿ ತನಗಿರುವ ನಂಬಿಕೆಯನ್ನು ತೋರಿಸಿದನು. ಇಂದು ಸಂದೇಹ ಹಾಗೂ ಭಯವನ್ನು ಮೆಟ್ಟಿನಿಂತು ದೇವರ ಸೇವೆಯಲ್ಲಿ ತೊಡಗುವ ಕ್ರೈಸ್ತರು ಅದೇ ರೀತಿ ನಂಬಿಕೆ ತೋರಿಸುತ್ತಿದ್ದಾರೆ. ಯೆಹೋವನಲ್ಲಿ ಅವರಿಗಿರುವ ಅಂಥ ಭರವಸೆ ಯಾವತ್ತೂ ಹುಸಿಯಾಗುವುದಿಲ್ಲ.—ಕೀರ್ತ. 22:4, 5.
“ನೀನೇಕೆ ಸಂಶಯಕ್ಕೆ ಆಸ್ಪದಕೊಟ್ಟೆ?”
17. ಯೇಸುವಿನೊಂದಿಗಿನ ಪ್ರಥಮ ಭೇಟಿಯ ನಂತರದ ಎರಡು ವರ್ಷಗಳಲ್ಲಿ ನಡೆದ ಯಾವ ಘಟನೆಗಳು ಪೇತ್ರನಿಗೆ ನೆನಪಾಗಿರಬಹುದು?
17 ಯೇಸುವನ್ನು ಪ್ರಥಮ ಬಾರಿ ಭೇಟಿಯಾಗಿ ಸುಮಾರು ಎರಡು ವರ್ಷ ಕಳೆದ ಬಳಿಕವೇ, ಈ ಅಧ್ಯಾಯದ ಆರಂಭದಲ್ಲಿ ವರ್ಣಿಸಲಾದ ಸನ್ನಿವೇಶದಲ್ಲಿ ಪೇತ್ರನಿದ್ದ. ಬಿರುಗಾಳಿ ಎದ್ದಿದ್ದ ಗಲಿಲಾಯ ಸಮುದ್ರದಲ್ಲಿ ಪೇತ್ರ ದೋಣಿಗೆ ಹುಟ್ಟುಹಾಕುತ್ತಾ ಯಾವುದರ ಬಗ್ಗೆ ಯೋಚಿಸುತ್ತಿದ್ದನೆಂದು ನಿಖರವಾಗಿ ಹೇಳಲಾಗದು. ಆದರೆ ಯೋಚಿಸಲಿಕ್ಕೆ ತುಂಬ ವಿಷಯಗಳಿದ್ದದಂತೂ ನಿಜ. ಉದಾಹರಣೆಗೆ, ಯೇಸು ಅವನ ಅತ್ತೆಯನ್ನು ಗುಣಪಡಿಸಿದ್ದ. ಪರ್ವತ ಪ್ರಸಂಗ ಕೊಟ್ಟಿದ್ದ. ಯೆಹೋವನು ಆರಿಸಿದ್ದ ಸೇವಕ, ಮೆಸ್ಸೀಯ ತಾನೇ ಎಂದು ತನ್ನ ಬೋಧನೆ ಹಾಗೂ ಮಹತ್ಕಾರ್ಯಗಳ ಮೂಲಕ ಆಗಿಂದಾಗ್ಗೆ ತೋರಿಸಿಕೊಟ್ಟಿದ್ದ. ತಿಂಗಳುಗಳು ಉರುಳಿದಂತೆ ಪೇತ್ರನಲ್ಲಿದ್ದ ಭಯ, ಸಂದೇಹ ಸ್ವಲ್ಪಮಟ್ಟಿಗೆ ಕಡಿಮೆಯಾಗಿತ್ತು. ಯೇಸು ಅವನನ್ನು ತನ್ನ 12 ಮಂದಿ ಅಪೊಸ್ತಲರಲ್ಲಿ ಒಬ್ಬನನ್ನಾಗಿಯೂ ಆರಿಸಿಕೊಂಡಿದ್ದ! ಹಾಗಿದ್ದರೂ ಪೇತ್ರನಲ್ಲಿದ್ದ ಭಯ, ಸಂದೇಹ ಪೂರ್ತಿಯಾಗಿ ಹೋಗಿರಲಿಲ್ಲ. ಇದು ಸ್ವಲ್ಪ ಸಮಯದಲ್ಲೇ ಬೆಳಕಿಗೆ ಬಂತು.
18, 19. (1) ಪೇತ್ರ ಗಲಿಲಾಯ ಸಮುದ್ರದಲ್ಲಿ ಏನು ಕಂಡನೆಂಬದನ್ನು ವರ್ಣಿಸಿ. (2) ಯೇಸು ಪೇತ್ರನ ವಿನಂತಿಯನ್ನು ಹೇಗೆ ಪೂರೈಸಿದನು?
18 ಅದು ನಾಲ್ಕನೆ ಜಾವ ಅಂದರೆ ಬೆಳಗ್ಗೆ 3 ಗಂಟೆಯಿಂದ ಸೂರ್ಯೋದಯದ ನಡುವಿನ ಸಮಯ. ಇದ್ದಕ್ಕಿದ್ದ ಹಾಗೆ ಪೇತ್ರ ಹುಟ್ಟುಹಾಕುವುದನ್ನು ನಿಲ್ಲಿಸಿ, ದಂಗುಬಡಿದವನಾಗಿ ನೆಟ್ಟಗೆ ಕೂತುಬಿಟ್ಟ. ದೂರದಲ್ಲಿ ಏನೋ ಚಲಿಸುತ್ತಿರುವಂತೆ ಕಂಡಿತು! ಅದೇನಿರಬಹುದೆಂದು ನೋಡಲು ಪ್ರಯತ್ನಿಸಿದ. ಬಿರುಗಾಳಿಯ ಅಬ್ಬರದಿಂದ ಎತ್ತರಕ್ಕೆ ಹಾರುತ್ತಾ ಚಂದಿರನ ಬೆಳಕನ್ನು ಪ್ರತಿಫಲಿಸುತ್ತಿದ್ದ ಅಲೆಗಳೇ? ಖಂಡಿತ ಅಲೆಗಳಂತೂ ಅಲ್ಲ. ಅದು ಸ್ಥಿರವಾಗಿದೆ, ನೆಟ್ಟಗಿದೆ. ಅರೆ, ಒಬ್ಬ ಮನುಷ್ಯನ ತರ ಕಾಣುತ್ತದಲ್ಲಾ! ಹೌದು, ಮನುಷ್ಯನೇ! ಅದೂ, ಸಮುದ್ರದ ಮೇಲೆ ನಡೆದು ಬರುತ್ತಿದ್ದಾನೆ!! ಅವನು ದೋಣಿಯಲ್ಲಿದ್ದವರನ್ನು ದಾಟಿ ಮುಂದೆ ಹೋಗಲಿದ್ದಾನೇನೊ ಎಂಬಂತೆ ಕಂಡಿತು. ಶಿಷ್ಯರು ಅದೇನಿರಬಹುದೋ ಎಂದು ನೆನಸಿ ಭಯಭೀತರಾದರು. ಆಗ ಆ ಮನುಷ್ಯ “ಧೈರ್ಯವಾಗಿರಿ, ನಾನೇ; ಭಯಪಡಬೇಡಿರಿ” ಎಂದು ಹೇಳಿದ. ಅವನು ಬೇರಾರೂ ಅಲ್ಲ, ಯೇಸುವೇ!—ಮತ್ತಾ. 14:25-27.
19 ಯೇಸುವಿನ ಮಾತಿಗೆ ಪ್ರತಿಯಾಗಿ ಪೇತ್ರ, “ಕರ್ತನೇ, ಅದು ನೀನೇ ಆಗಿರುವಲ್ಲಿ, ನೀರಿನ ಮೇಲೆ ನಡೆದು ನಿನ್ನ ಬಳಿಗೆ ಬರುವಂತೆ ನನಗೆ ಅಪ್ಪಣೆಕೊಡು” ಎಂದ. (ಮತ್ತಾ. 14:28) ಇದು ಅವನ ಮೊದಲ ಪ್ರತಿಕ್ರಿಯೆ. ಇದರಲ್ಲಿ ಹೆದರಿಕೆಯ ಸುಳಿವೇ ಇರಲಿಲ್ಲ. ಮೈಪುಳಕಗೊಳಿಸುವ ಈ ಅದ್ಭುತ ನೋಡಿ ಅವನಲ್ಲೇನೊ ಉದ್ರೇಕ. ತನ್ನ ನಂಬಿಕೆಯನ್ನು ಇನ್ನಷ್ಟು ದೃಢಗೊಳಿಸಲು ಪ್ರಯತ್ನಿಸುತ್ತಾ ಆ ಅದ್ಭುತದ ಭಾಗವಾಗುವ ತನ್ನಿಚ್ಛೆಯನ್ನು ವ್ಯಕ್ತಪಡಿಸಿದ. ಯೇಸು ಅವನಿಗೆ ಬರುವಂತೆ ದಯೆಯಿಂದ ಹೇಳಿದ. ಪೇತ್ರ ದಡಬಡ ಅಂತ ದೋಣಿಯ ಹೊರಗೆ ಅಡಿಯಿಟ್ಟ. ಏರಿಳಿತವಿರುವ ನೀರಿನ ಮೇಲೆ ಕಾಲಿಟ್ಟಂತೆ ಅವನ ಪಾದಗಳಿಗೆ ಏನೋ ಸ್ಥಿರವಾದ ಆಧಾರ ಸಿಕ್ಕಿದಂತಾಯಿತು. ನೀರಿನ ಮೇಲೆ ಕಾಲೂರಿ ನಿಂತಾಗ ಅವನಿಗೆ ಹೇಗನಿಸಿರಬೇಕೆಂದು ಸ್ವಲ್ಪ ಊಹಿಸಿ. ಅವನು ಯೇಸುವಿನ ಕಡೆಗೆ ಹೆಜ್ಜೆಯಿಡುತ್ತಾ ಹೋದಂತೆ ಬೆರಗಿನಿಂದ ಮೈಮರೆತಿರಬಹುದು. ಆದರೆ ಸ್ವಲ್ಪದರಲ್ಲೇ ಅವನ ಪ್ರತಿಕ್ರಿಯೆ ಇನ್ನೊಂದು ರೀತಿಯದ್ದಾಯಿತು.—ಮತ್ತಾಯ 14:29 ಓದಿ.
20. (1) ಪೇತ್ರನ ಗಮನ ಬೇರೆಡೆ ಸರಿದದ್ದು ಹೇಗೆ? (2) ಇದರ ಪರಿಣಾಮವೇನಾಗಿತ್ತು? (3) ಯೇಸು ಪೇತ್ರನಿಗೆ ಯಾವ ಪಾಠ ಕಲಿಸಿದ?
20 ಪೇತ್ರ ನಂಬಿಕೆ ತೋರಿಸಿದ ಕಾರಣ, ಬಿರುಗಾಳಿ ಎಬ್ಬಿಸಿದ ಅಲೆಗಳ ಮಧ್ಯೆಯೂ ನೀರಿನ ಮೇಲೆ ನಡೆಯುವಂತೆ ಯೆಹೋವನ ಶಕ್ತಿಯಿಂದ ಸಾಧ್ಯಗೊಳಿಸಿದವನು ಯೇಸು. ಆದ್ದರಿಂದ ಪೇತ್ರನು ತನ್ನ ಪೂರ್ತಿ ಗಮನವನ್ನು ಯೇಸುವಿನ ಮೇಲೆಯೇ ನೆಡಬೇಕಿತ್ತು. ಆದರೆ ಅವನ ಗಮನ ಬೇರೆ ಕಡೆಗೆ ಹರಿಯಿತು. “ಬಿರುಗಾಳಿಯನ್ನು ನೋಡಿ ಅವನು ಭಯ”ಗೊಂಡ ಎನ್ನುತ್ತದೆ ಬೈಬಲ್. ಗಾಳಿಯ ಅಬ್ಬರಕ್ಕೆ ಎದ್ದ ದೊಡ್ಡ ದೊಡ್ಡ ಅಲೆಗಳು ಬಂದು ದೋಣಿಗೆ ಬಡಿಯುತ್ತಾ, ನೊರೆ ಹಾಗೂ ತುಂತುರು ನೀರನ್ನು ಎರಚುತ್ತಾ ಇರುವುದನ್ನು ನೋಡಿದ್ದೇ ಸೈ ಪೇತ್ರ ಹೆದರಿ ಕಂಗಾಲಾದ. ತಾನು ಸರೋವರದಲ್ಲಿ ಮುಳುಗಿ ಸಾಯುತ್ತಿರುವುದನ್ನು ಮನಸ್ಸಲ್ಲಿ ಚಿತ್ರಿಸಿಕೊಂಡಿರಬೇಕು. ಅವನ ಹೃದಯದಲ್ಲಿ ಭಯ ಹೆಚ್ಚುತ್ತಾ ಹೋದಂತೆ, ಅವನ ನಂಬಿಕೆ ಕುಗ್ಗುತ್ತಾ ಹೋಯಿತು. ಮುಂದೆ ಸ್ಥಿರವಾಗಿ ಉಳಿಯುವನು ಎಂಬ ಕಾರಣಕ್ಕೆ ‘ಬಂಡೆ’ ಎಂದು ಯೇಸುವಿನಿಂದ ಹೆಸರು ಪಡೆದ ಈತನು ಈಗ ನಂಬಿಕೆಯಲ್ಲಿ ಅಸ್ಥಿರಗೊಂಡದ್ದರಿಂದ ಕಲ್ಲಿನ ಹಾಗೆ ಮುಳುಗಲಾರಂಭಿಸಿದನು. ಪೇತ್ರ ಒಬ್ಬ ನಿಪುಣ ಈಜುಗಾರ. ಆದರೆ ಈಗ ಅವನು ತನ್ನ ಸಾಮರ್ಥ್ಯದ ಮೇಲೆ ಹೊಂದಿಕೊಳ್ಳಲಿಲ್ಲ. “ಕರ್ತನೇ ನನ್ನನ್ನು ಕಾಪಾಡು” ಎಂದು ಕೂಗಿದ. ಆಗ ಯೇಸು ಅವನ ಕೈಹಿಡಿದು ಮೇಲೆತ್ತಿದನು. ಅವರಿನ್ನೂ ನೀರಿನ ಮೇಲೆ ಇದ್ದಾಗಲೇ ಪೇತ್ರನಿಗೆ ಒಂದು ಪ್ರಾಮುಖ್ಯ ಪಾಠ ಕಲಿಸಲಿಕ್ಕಾಗಿ “ಎಲೈ ಅಲ್ಪವಿಶ್ವಾಸಿಯೇ, ನೀನೇಕೆ ಸಂಶಯಕ್ಕೆ ಆಸ್ಪದಕೊಟ್ಟೆ?” ಎಂದನು.—ಮತ್ತಾ. 14:30, 31.
21. (1) ಸಂದೇಹವು ಏಕೆ ಅಪಾಯಕರ? (2) ನಾವು ಹೇಗೆ ಅದನ್ನು ಕಿತ್ತೆಸೆಯಬಲ್ಲೆವು?
21 “ನೀನೇಕೆ ಸಂಶಯಕ್ಕೆ ಆಸ್ಪದಕೊಟ್ಟೆ?” ಎಂಬ ಮಾತುಗಳು ಎಷ್ಟು ಸೂಕ್ತವಾಗಿವೆ! ಏಕೆಂದರೆ ಸಂದೇಹ ಎಂಬುದು ತುಂಬ ಕೆಟ್ಟದ್ದು, ವಿನಾಶಕಾರಿ. ನಾವದಕ್ಕೆ ಮಣಿದರೆ ಅದು ನಮ್ಮ ನಂಬಿಕೆಯನ್ನು ಸ್ವಲ್ಪಸ್ವಲ್ಪವಾಗಿ ತಿಂದುಹಾಕಿ, ನಮ್ಮ ಆಧ್ಯಾತ್ಮಿಕತೆಯನ್ನು ಮುಳುಗಿಸಿ ಬಿಡಬಲ್ಲದು. ಆದ್ದರಿಂದ ನಾವು ಸಂದೇಹಗಳನ್ನು ಕಿತ್ತೆಸೆಯಬೇಕು. ಹೇಗೆ? ಸರಿಯಾದ ವಿಷಯದ ಮೇಲೆ ಗಮನ ನೆಡುವ ಮೂಲಕ. ನಮ್ಮಲ್ಲಿ ಹೆದರಿಕೆಹುಟ್ಟಿಸುವ, ನಮ್ಮನ್ನು ನಿರಾಶೆಗೊಳಿಸುವ, ನಮ್ಮ ಗಮನವನ್ನು ಯೆಹೋವ ಮತ್ತು ಆತನ ಪುತ್ರನ ಮೇಲಿಂದ ಬೇರೆಡೆ ಸೆಳೆಯುವಂಥ ವಿಷಯಗಳ ಬಗ್ಗೆಯೇ ಸದಾ ಯೋಚಿಸುತ್ತಿರುವಲ್ಲಿ ನಮ್ಮ ಸಂದೇಹಗಳು ಖಂಡಿತ ಉಲ್ಬಣಗೊಳ್ಳುವವು. ಆದರೆ ನಾವು ಯೆಹೋವ ಮತ್ತು ಆತನ ಪುತ್ರನ ಮೇಲೆ, ತಮ್ಮನ್ನು ಪ್ರೀತಿಸುವವರಿಗಾಗಿ ಅವರು ಮಾಡಿರುವ, ಮಾಡುತ್ತಿರುವ, ಮುಂದಕ್ಕೆ ಮಾಡಲಿರುವ ವಿಷಯಗಳ ಮೇಲೆ ಗಮನ ನೆಡುವಲ್ಲಿ ನಮ್ಮ ನಂಬಿಕೆಯನ್ನು ತಿಂದುಹಾಕುವ ಸಂದೇಹಗಳನ್ನು ಕಿತ್ತೆಸೆಯಲು ಶಕ್ತರಾಗುವೆವು.
22. ಪೇತ್ರನ ನಂಬಿಕೆ ಏಕೆ ಅನುಕರಣಯೋಗ್ಯ?
22 ಪೇತ್ರನು ಯೇಸುವಿನ ಹಿಂದೆ ನಡೆದು ದೋಣಿಗೆ ಮರಳುತ್ತಿದ್ದಾಗ ಬಿರುಗಾಳಿ ಕಡಿಮೆಯಾಗುವುದನ್ನು ನೋಡಿದನು. ಗಲಿಲಾಯ ಸಮುದ್ರ ಶಾಂತವಾಯಿತು. ದೋಣಿಯಲ್ಲಿದ್ದ ಇತರ ಶಿಷ್ಯರು “ನಿಜವಾಗಿಯೂ ನೀನು ದೇವರ ಮಗನು” ಎಂದು ಯೇಸುವಿಗೆ ಹೇಳಿದಾಗ ಪೇತ್ರನೂ ದನಿಗೂಡಿಸಿದ. (ಮತ್ತಾ. 14:33) ಅತ್ತ ದಿಗಂತದಲ್ಲಿ ಸೂರ್ಯ ಮೇಲೇರಿದಂತೆ ಇತ್ತ ಪೇತ್ರನ ಹೃದಯದಲ್ಲಿ ಕೃತಜ್ಞತೆಯ ಭಾವ ಉಕ್ಕೇರಿರಬೇಕು. ಭಯ ಮತ್ತು ಸಂದೇಹವನ್ನು ಮೆಟ್ಟಿನಿಂತ. ಆದರೆ ಅವನು ಇನ್ನೂ ತುಂಬ ಬದಲಾವಣೆಗಳನ್ನು ಮಾಡಿಕೊಂಡು ಯೇಸು ಮುಂತಿಳಿಸಿದಂತೆ ಬಂಡೆಯಂಥ ಕ್ರೈಸ್ತನಾಗಬೇಕಿತ್ತು. ಅದಕ್ಕಾಗಿ ಪ್ರಯತ್ನ ಹಾಕುತ್ತಾ, ಪ್ರಗತಿ ಮಾಡುತ್ತಾ ಇರಲು ಅವನು ದೃಢಮನಸ್ಸು ಮಾಡಿದ. ನಿಮಗೂ ಅಂಥ ದೃಢಮನಸ್ಸಿದೆಯೇ? ಹಾಗಿದ್ದರೆ ಪೇತ್ರನ ನಂಬಿಕೆ ಅನುಕರಣಯೋಗ್ಯವೆಂದು ಕಂಡುಕೊಳ್ಳುವಿರಿ.