ಸೆಂಟ್ ಪೀಟರ್ಸ್ ಫಿಶ್
ಇಸ್ರಯೇಲಿನ ಗಲಿಲಾಯ ಸಮುದ್ರ ತೀರದಲ್ಲಿರುವ ಯಾವುದಾದರೊಂದು ರೆಸ್ಟರಾಂಟನ್ನು ನೀವು ಸಂದರ್ಶಿಸುವಲ್ಲಿ, ಭಕ್ಷ್ಯಪಟ್ಟಿಯಲ್ಲಿ “ಸೆಂಟ್ ಪೀಟರ್ಸ್ ಫಿಶ್” ಇರುವುದನ್ನು ನೋಡುವಾಗ ನೀವು ಕುತೂಹಲಿಗಳಾದೀರಿ. ಅದು, ವಿಶೇಷವಾಗಿ ಪ್ರವಾಸಿಗಳ ಮಧ್ಯೆ ಭಕ್ಷ್ಯಗಳಲ್ಲಿ ಅತಿ ಜನಪ್ರಿಯ ಭಕ್ಷ್ಯವೆಂದು ವೇಟರ್ ನಿಮಗೆ ಹೇಳಬಹುದು. ಅದನ್ನು ಹಿಡಿದ ಕೂಡಲೇ ಹುರಿದು ತಿನ್ನುವಲ್ಲಿ ಅದು ಬಹಳ ರುಚಿಕರ. ಆದರೆ ಅದನ್ನು ಅಪೊಸ್ತಲ ಪೀಟರ್ (ಪೇತ್ರ)ಗೆ ಸಂಬಂಧಿಸಿರುವುದೇಕೆ?
ಮತ್ತಾಯ 17:24-27ರಲ್ಲಿ ವರ್ಣಿಸಿರುವ ಒಂದು ಘಟನೆ ಇದಕ್ಕೆ ಉತ್ತರವನ್ನೀಯುತ್ತದೆ. ಪೇತ್ರನು ಗಲಿಲಾಯ ಸಮುದ್ರದ ಬಳಿ ಇರುವ ಕಪೆರ್ನೌಮನ್ನು ಸಂದರ್ಶಿಸಿದಾಗ, ಯೇಸು ದೇವಾಲಯದ ತೆರಿಗೆಯನ್ನು ಕೊಡುತ್ತಾನೊ ಎಂದು ಪೇತ್ರನನ್ನು ಕೇಳಲಾಯಿತು. ದೇವರ ಪುತ್ರನಾಗಿರುವ ತನಗೆ ತೆರಿಗೆ ತೆರುವ ಹಂಗಿರುವುದಿಲ್ಲವೆಂದು ಯೇಸು ತರುವಾಯ ತಿಳಿಯಪಡಿಸಿದನು. ಆದರೆ ಬೇರೆಯವರನ್ನು ಮುಗ್ಗರಿಸದಿರುವ ಸಲುವಾಗಿ, ಪೇತ್ರನು ಸಮುದ್ರಕ್ಕೆ ಹೋಗಿ, ಗಾಳ ಹಾಕಿ ಮೊದಲು ದೊರೆಯುವ ಮೀನಿನ ಬಾಯಲ್ಲಿ ದೊರೆಯುವ ನಾಣ್ಯದಿಂದ ತೆರಿಗೆಯನ್ನು ತೆರುವಂತೆ ಯೇಸು ಏರ್ಪಡಿಸಿದನು.
“ಸೆಂಟ್ ಪೀಟರ್ಸ್ ಫಿಶ್” ಎಂಬ ಹೆಸರು, ಬೈಬಲಿನಲ್ಲಿ ದಾಖಲೆಯಾಗಿರುವ ಈ ಘಟನೆಯಿಂದ ಬಂದಿದೆ. ಆದರೆ ಪೇತ್ರನು ಯಾವ ರೀತಿಯ ಮೀನನ್ನು ಹಿಡಿದನು?
ಯಥೇಷ್ಟ ಮೀನಿರುವ ಸಮುದ್ರ
ಸುಮಾರು 20 ಜಾತಿಯ ಮೀನುಗಳಿರುವ ಗಲಿಲಾಯ ಸಮುದ್ರದಲ್ಲಿ, ಸುಮಾರು ಹತ್ತು ಜಾತಿಯ ಮೀನುಗಳು ಮಾತ್ರ ಪೇತ್ರನು ಹಿಡಿದ ಜಾತಿಯದ್ದಾಗಿರಬಹುದೆಂದು ಯೋಚಿಸಲಾಗಿದೆ. ಈ ಹತ್ತು ಜಾತಿಗಳನ್ನು, ವ್ಯಾಪಾರದೃಷ್ಟಿಯಿಂದ ಪ್ರಮುಖವಾಗಿರುವ ಮೂರು ಗುಂಪುಗಳಾಗಿ ವಿಭಾಗಿಸಲಾಗಿದೆ.
ಇವುಗಳಲ್ಲಿ ಅತಿ ದೊಡ್ಡ ಗುಂಪನ್ನು ಮುಷ್ಟ್ ಎಂದು ಕರೆಯಲಾಗುತ್ತದೆ. ಆ್ಯರಬಿಕ್ ಭಾಷೆಯಲ್ಲಿ ಇದರ ಅರ್ಥವು “ಬಾಚಣಿಗೆ” ಎಂದಾಗಿದೆ. ಇದು ಏಕೆಂದರೆ, ಅದರ ಐದು ಜಾತಿಗಳಲ್ಲಿ ಬೆನ್ನಿನ ಮೇಲೆ ಬಾಚಣಿಗೆಯಂತಹ ಈಜುರೆಕ್ಕೆಗಳಿವೆ. ಈ ಮುಷ್ಟ್ ಮೀನಿನ ಒಂದು ಜಾತಿ 45 ಸೆಂಟಿಮೀಟರ್ ಉದ್ದ ಬೆಳೆದು ಅದರ ತೂಕ ಸುಮಾರು ಎರಡು ಕಿಲೋ ಆಗಿರುತ್ತದೆ.
ಎರಡನೆಯ ಗುಂಪಿನ ಹೆಸರು ಕಿನ್ನೆರೆತ್ ಸಾರ್ಡಿನ್. ಇದು ಚಿಕ್ಕ ಹೆರಿಂಗ್ ಮೀನನ್ನು ಹೋಲುತ್ತದೆ. ಸಾರ್ಡಿನ್ ದೊರೆಯುವ ಋತುವಿನಲ್ಲಿ ಪ್ರತಿ ರಾತ್ರಿ ಅನೇಕ ಟನ್ನು ಮೀನುಗಳನ್ನು ಹಿಡಿಯಲಾಗುತ್ತದೆ. ಇದರ ಮೊತ್ತವು ವರ್ಷಕ್ಕೆ ಸುಮಾರು ಒಂದು ಸಾವಿರ ಟನ್ನುಗಳಷ್ಟಾಗುತ್ತದೆ. ಪೂರ್ವಕಾಲದಿಂದಲೂ ಈ ಸಾರ್ಡಿನ್ ಮೀನನ್ನು ಉಪ್ಪಿನಕಾಯಿಯಂತೆ ತಯಾರಿಸಿ ಕಾಪಾಡಲಾಗುತ್ತದೆ.
ಬೀನೀ ಎಂಬುದು ಮೂರನೆಯ ಗುಂಪಿನ ಹೆಸರು. ಅದು ಬಾರ್ಬಲ್ ಎಂದೂ ಪ್ರಸಿದ್ಧವಾಗಿದೆ. ಇದರ ಮೂರು ಜಾತಿಗಳ ಬಾಯಿಯ ಮೂಲೆಗಳಲ್ಲಿ ಗಡ್ಡದ ಕೂದಲಿನಂತಹ ಸ್ಪರ್ಶಾಂಗಗಳಿವೆ. ಈ ಕಾರಣದಿಂದಲೇ ಬೀನೀ, ಅಂದರೆ “ಕೂದಲು” ಎಂಬ ಸೆಮಿಟಿಕ್ ಹೆಸರು ಅದಕ್ಕಿದೆ. ಮೃದ್ವಂಗಿ, ಬಸವನಹುಳು ಮತ್ತು ಚಿಕ್ಕ ಮೀನುಗಳು ಇದರ ಆಹಾರ. ಉದ್ದ ತಲೆಯ ಬಾರ್ಬಲ್ ಸುಮಾರು 75 ಸೆಂಟಿಮೀಟರ್ ಉದ್ದ ಬೆಳೆದು ಅದರ ತೂಕ ಏಳು ಕಿಲೊಗಳಿಗಿಂತಲೂ ಹೆಚ್ಚು ಆಗಿರುತ್ತದೆ. ಬಾರ್ಬಲ್ ತುಂಬ ಮಾಂಸವಿರುವ ಮೀನಾಗಿದ್ದು ಯೆಹೂದಿ ಸಬ್ಬತ್ ಮತ್ತು ಹಬ್ಬಗಳಲ್ಲಿ ಜನಪ್ರಿಯ ಭಕ್ಷ್ಯವಾಗಿದೆ.
ಆ ಮೂರು ಪ್ರಮುಖ ವ್ಯಾಪಾರದೃಷ್ಟಿಯ ಗುಂಪುಗಳಲ್ಲಿ, ಗಲಿಲಾಯ ಸಮುದ್ರದ ಅತಿ ದೊಡ್ಡ ಮೀನಾದ ಕ್ಯಾಟ್ಫಿಶ್ (ಬೆಕ್ಕುಮೀನು) ಸೇರಿರುವುದಿಲ್ಲ. ಈ ಮೀನು 1.2 ಮೀಟರ್ಗಳಷ್ಟು ಉದ್ದವಿದ್ದು, ತೂಕ ಸುಮಾರು 11 ಕಿಲೊ ಆಗಿರುತ್ತದೆ. ಆದರೆ ಈ ಮೀನಿಗೆ ಪೊರೆ ಇಲ್ಲದಿರುವುದರಿಂದ ಇದು ಮೋಶೆಯ ಧರ್ಮಶಾಸ್ತ್ರಾನುಸಾರ ಅಶುದ್ಧವಾಗಿತ್ತು. (ಯಾಜಕಕಾಂಡ 11:9-12) ಆದಕಾರಣ, ಇದನ್ನು ಯೆಹೂದ್ಯರು ತಿನ್ನುವುದಿಲ್ಲ ಮತ್ತು ಹಾಗಿರುವುದರಿಂದ ಪೇತ್ರನು ಹಿಡಿದ ಮೀನು ಆ ಜಾತಿಯದ್ದಾಗಿರಲಿಕ್ಕಿಲ್ಲ.
ಪೇತ್ರನು ಹಿಡಿದ ಮೀನು ಯಾವುದಾಗಿತ್ತು?
“ಸೆಂಟ್ ಪೀಟರ್ಸ್ ಫಿಶ್” ಎಂದು ಸಾಮಾನ್ಯವಾಗಿ ಅಂಗೀಕರಿಸಲ್ಪಡುವುದು ಮುಷ್ಟ್ ಎಂಬ ಮೀನಾಗಿದೆ. ಮತ್ತು ಇದನ್ನೇ ಗಲಿಲಾಯ ಸಮುದ್ರದ ಬಳಿಯಿರುವ ರೆಸ್ಟರಾಂಟ್ಗಳಲ್ಲಿ ಬಡಿಸಲಾಗುತ್ತದೆ. ಸಂಬಂಧಸೂಚಕವಾಗಿ ಸ್ವಲ್ಪವೇ ಮುಳ್ಳಿರುವ ಈ ಮೀನನ್ನು ಸಿದ್ಧಪಡಿಸಿ ತಿನ್ನುವುದು ಸುಲಭ. ಆದರೆ, ಪೇತ್ರನು ನಿಜವಾಗಿ ಹಿಡಿದ ಮೀನು ಅದಾಗಿತ್ತೊ?
ಮೆಂಡಲ್ ನೂನ್ ಎಂಬವರು 50ಕ್ಕೂ ಹೆಚ್ಚು ವರ್ಷಕಾಲ ಗಲಿಲಾಯ ಸಮುದ್ರದ ಕರಾವಳಿಯಲ್ಲಿ ಜೀವಿಸಿರುವ ಒಬ್ಬ ಬೆಸ್ತರಾಗಿದ್ದು, ಸ್ಥಳಿಕ ಮೀನುಗಳ ಬಗ್ಗೆ ಅತಿ ಗೌರವಿಸಲ್ಪಟ್ಟಿರುವ ಪರಿಣತರು. ಅವರು ಹೇಳಿದ್ದು: “ಮುಷ್ಟ್ ಮೀನಿಗೆ ಪ್ಲವಕ ಸಸ್ಯಜೀವಿಗಳೇ ಆಹಾರ ಮತ್ತು ಅದು ಇನ್ನಾವ ಆಹಾರದಿಂದಲೂ ಆಕರ್ಷಿತವಾಗುವುದಿಲ್ಲ. ಆದಕಾರಣ ಅದನ್ನು ಬಲೆಗಳಲ್ಲಿ ಹಿಡಿಯಲಾಗುತ್ತದೆಯೆ ಹೊರತು ಗಾಳ ಮತ್ತು ಹಗ್ಗದಿಂದ ಹಿಡಿಯಲಾಗುವುದಿಲ್ಲ.” ಹೀಗಿರುವುದರಿಂದ, ಪೇತ್ರನು ಹಿಡಿದ ಮೀನು ಇದಾಗಿರುವುದು ಅಸಂಭವ. ಇದಕ್ಕಿಂತಲೂ ಹೆಚ್ಚು ಅಸಂಭವವಾಗಿರುವ ಮೀನು ಸಾರ್ಡಿನ್. ಏಕೆಂದರೆ ಸೆಂಟ್ ಪೀಟರ್ಸ್ ಫಿಶ್ ಆಗುವ ಯೋಗ್ಯತೆಯಿರಲು ಅದು ತೀರ ಚಿಕ್ಕದಾಗಿರುತ್ತದೆ.
ಈಗ ನಮ್ಮ ಕ್ಷೇತ್ರ ಬಾರ್ಬಲ್ ಮೀನಿಗೆ ಸೀಮಿತವಾಗಿರುತ್ತದೆ. ಇದು “ಸೆಂಟ್ ಪೀಟರ್ಸ್ ಫಿಶ್” ಎಂಬ ಹೆಸರಿಗೆ ಹೆಚ್ಚು ಅರ್ಹವಾಗಿದೆಯೆಂಬುದು ಕೆಲವರ ಅಭಿಪ್ರಾಯ. ನೂನ್ ಹೇಳಿದ್ದು: “[ಗಲಿಲಾಯ ಸಮುದ್ರದ] ಬೆಸ್ತರು ಸ್ಮರಣಾತೀತ ಸಮಯದಿಂದಲೂ ಬಾರ್ಬಲ್ ಮೀನುಗಳನ್ನು ಹಿಡಿಯಲು ಸಾರ್ಡಿನ್ ಮೀನನ್ನು ಸಿಕ್ಕಿಸಿದ ಗಾಳವನ್ನು ಉಪಯೋಗಿಸಿರುತ್ತಾರೆ. ಇವು ಪರಭಕ್ಷಕಗಳೂ ಸಮುದ್ರದಡಿಯಲ್ಲಿನ ಜಲಜೀವಿಗಳನ್ನು ತಿನ್ನುವ ಮೀನುಗಳೂ ಆಗಿವೆ.” ಅವರು ಸಮಾಪ್ತಿಯಲ್ಲಿ ಹೇಳುವುದು: “ಪೇತ್ರನು ಬಾರ್ಬಲನ್ನು ಹಿಡಿದದ್ದು ಹೆಚ್ಚುಕಡಿಮೆ ಖಂಡಿತ.”
ಹಾಗಾದರೆ, “ಸೆಂಟ್ ಪೀಟರ್ಸ್ ಫಿಶ್” ಎಂದು ಹೇಳುತ್ತಾ ಮುಷ್ಟ್ ಮೀನನ್ನು ಏಕೆ ಬಡಿಸಲಾಗುತ್ತದೆ? ನೂನ್ ಉತ್ತರ ಕೊಡುವುದು: “ಹೆಸರಿನ ಬದಲಾವಣೆಯ ಗಲಿಬಿಲಿಗೆ ಕೇವಲ ಒಂದೇ ವಿವರಣೆಯಿರಸಾಧ್ಯವಿದೆ. ಇದು ಪ್ರವಾಸೋದ್ಯಮಕ್ಕೆ ಲಾಭದಾಯಕ! . . . ಯಾತ್ರಿಕರು ದೂರ ಪ್ರದೇಶಗಳಿಂದ ಬರಲಾರಂಭಿಸಿದಾಗ, ಸಮುದ್ರ ಬಳಿಯಲ್ಲಿ ಆದಿಯಲ್ಲಿದ್ದ ಭೋಜನಶಾಲೆಗಳಲ್ಲಿ ಮುಷ್ಟ್ ಮೀನಿಗೆ ‘ಸೆಂಟ್ ಪೀಟರ್ಸ್ ಫಿಶ್’ ಎಂಬ ಹೆಸರು ಕೊಡುವುದು ಲಾಭದಾಯಕವಾಗಿ ಕಂಡುಬಂದುದ್ದು ನಿಸ್ಸಂದೇಹ. ಆಗ ಅತಿ ಜನಪ್ರಿಯವೂ ಸುಲಭವಾಗಿ ತಯಾರಿಸಸಾಧ್ಯವಿದ್ದ ಮೀನು ಅತಿ ವಿಕ್ರಯಾರ್ಹ ಹೆಸರನ್ನು ಪಡೆದುಕೊಂಡಿತು!”
ಪೇತ್ರನು ಯಾವ ಮೀನನ್ನು ಹಿಡಿದನೆಂದು ನಾವು ಖಡಾಖಂಡಿತವಾಗಿ ಹೇಳಸಾಧ್ಯವಿಲ್ಲದಿದ್ದರೂ, “ಸೆಂಟ್ ಪೀಟರ್ಸ್ ಫಿಶ್” ಎಂದು ನಿಮಗೆ ಬಡಿಸಲಾಗುವ ಯಾವ ಮೀನೂ ಹೆಚ್ಚು ಮಟ್ಟಿಗೆ ಅತಿ ರುಚಿಕರವಾದ ಭಕ್ಷ್ಯವಾಗಿ ಪರಿಣಮಿಸುವುದು ಸಂಭವನೀಯ.(g02 2/22)
[ಪುಟ 19ರಲ್ಲಿರುವ ಚಿತ್ರ]
“ಮುಷ್ಟ್”
[ಪುಟ 19ರಲ್ಲಿರುವ ಚಿತ್ರ]
ಬಾರ್ಬಲ್
[Picture credit Line on page 19]
Garo Nalbandian