ಅಧ್ಯಯನ ಲೇಖನ 25
‘ಚಿಕ್ಕ ಮಕ್ಕಳ ತರ ಇರೋ ಜನ್ರನ್ನ ನೋಯಿಸಬೇಡಿ’
“ಚಿಕ್ಕ ಮಕ್ಕಳ ತರ ಇರೋ ಜನ್ರಲ್ಲಿ ಒಬ್ಬರನ್ನೂ ಕೀಳಾಗಿ ನೋಡಬೇಡಿ.”—ಮತ್ತಾ. 18:10.
ಗೀತೆ 39 ನಮ್ಮ ಶಾಂತಿ ಸಂಪತ್ತು
ಕಿರುನೋಟa
1. ಯೆಹೋವ ದೇವರು ನಿಮ್ಮನ್ನ ಪ್ರೀತಿಸ್ತಾರೆ ಅಂತ ಹೇಗೆ ಗೊತ್ತಾಗುತ್ತೆ?
ಈ ಲೋಕದಲ್ಲಿ ಕೋಟಿಗಟ್ಟಲೆ ಜನರಿದ್ದಾರೆ. ಆದರೂ ಯೆಹೋವ ದೇವರು ನಿಮ್ಮನ್ನೇ ಆರಿಸಿಕೊಂಡಿದ್ದಾರೆ. (ಯೋಹಾ. 6:44) ನೀವಿನ್ನೂ ದೇವರ ಬಗ್ಗೆ ತಿಳ್ಕೊಳ್ಳದೇ ಇರುವಾಗಲೇ ದೇವರು ನಿಮ್ಮ ಮನಸ್ಸನ್ನು ನೋಡಿದ್ರು. ಮುಂದೆ ನೀವು ಆತನನ್ನ ಪ್ರೀತಿಸ್ತೀರಿ ಅನ್ನೋದನ್ನ ನೋಡಿ ನಿಮ್ಮನ್ನ ಆರಿಸಿಕೊಂಡಿದ್ದಾರೆ. (1 ಪೂರ್ವ. 28:9) ಯೆಹೋವ ದೇವರು ನಿಮ್ಮ ಬಗ್ಗೆ ಚೆನ್ನಾಗಿ ತಿಳ್ಕೊಂಡಿದ್ದಾರೆ, ನಿಮ್ಮನ್ನ ಅರ್ಥ ಮಾಡ್ಕೊಳ್ತಾರೆ, ಪ್ರೀತಿಸ್ತಾರೆ. ಇದನ್ನ ಕೇಳಿದಾಗ ನಿಮಗೆ ಎಷ್ಟು ಸಂತೋಷ ಆಗುತ್ತಲ್ವಾ?
2. ಯೇಸು ಕೊಟ್ಟ ಉದಾಹರಣೆಯಿಂದ ನಮಗೇನು ಗೊತ್ತಾಗುತ್ತೆ?
2 ಯೆಹೋವ ದೇವರು ನಿಮ್ಮನ್ನೂ ಪ್ರೀತಿಸ್ತಾರೆ, ಬೇರೆ ಸಹೋದರ ಸಹೋದರಿಯರನ್ನೂ ಪ್ರೀತಿಸ್ತಾರೆ. ಎಷ್ಟು ಪ್ರೀತಿಸ್ತಾರೆ ಅಂತ ಗೊತ್ತಾ? ಅದನ್ನ ಅರ್ಥ ಮಾಡಿಕೊಳ್ಳೋಕೆ ಯೇಸು ಒಂದು ಉದಾಹರಣೆ ಹೇಳಿದ್ರು. ಅದ್ರಲ್ಲಿ ಯೆಹೋವ ದೇವರನ್ನ ಕುರುಬನಿಗೆ ಹೋಲಿಸಿದ್ರು. ಒಬ್ಬ ಕುರುಬನ ಹತ್ರ 100 ಕುರಿಗಳು ಇರುತ್ತೆ. ಅದ್ರಲ್ಲಿ ಒಂದು ಕುರಿ ತಪ್ಪಿಸ್ಕೊಂಡು ಬಿಟ್ರೆ ಅವನು ಏನು ಮಾಡ್ತಾನೆ? “ಉಳಿದಿರೋ 99 ಕುರಿಯನ್ನ ಬೆಟ್ಟದಲ್ಲೇ ಬಿಟ್ಟು ತಪ್ಪಿಹೋಗಿರೋ ಆ ಒಂದು ಕುರಿಯನ್ನ ಹುಡ್ಕೊಂಡು” ಹೋಗ್ತಾನೆ. ಆ ಕುರಿ ಸಿಕ್ಕಿದಾಗ ‘ಎಲ್ಲಿ ಹೋಗಿದ್ದೆ ನೀನು’ ಅಂತ ಕೋಪ ಮಾಡ್ಕೊಂಡು ಆ ಕುರಿಗೆ ಬೈಯಲ್ಲ. ಆ ಕುರಿ ಸಿಕ್ಕಿದಕ್ಕೆ ಖುಷಿಪಡ್ತಾನೆ. ನೋಡಿದ್ರಾ, ಯೆಹೋವ ದೇವರಿಗೆ ಎಲ್ಲರೂ ಮುಖ್ಯ. ಅದಕ್ಕೆ ಯೇಸು “ಚಿಕ್ಕ ಮಕ್ಕಳ ತರ ಇರೋ ಒಬ್ಬನೂ ನಾಶ ಆಗೋದು ಸ್ವರ್ಗದಲ್ಲಿರೋ ನನ್ನ ಅಪ್ಪನಿಗೆ ಇಷ್ಟ ಇಲ್ಲ” ಅಂತ ಅಂದ್ರು.—ಮತ್ತಾ. 18:12-14.
3. ನಾವು ಈ ಲೇಖನದಲ್ಲಿ ಏನು ಚರ್ಚಿಸ್ತೀವಿ?
3 ನಮ್ಮ ಸಹೋದರ ಸಹೋದರಿಯರನ್ನ ಯೆಹೋವ ದೇವರು ಇಷ್ಟೊಂದು ಪ್ರೀತಿಸ್ತಾರೆ ಅಂದಮೇಲೆ ನಾವೂ ಅವರನ್ನ ಪ್ರೀತಿಸಬೇಕು. ಮತ್ತಾಯ 18ನೇ ಅಧ್ಯಾಯದಲ್ಲಿ ಹೇಳಿರೋ ‘ಚಿಕ್ಕ ಮಕ್ಕಳ ತರ ಇರೋ ಜನರು’ ಯಾರು? ನಾವು ಅವರಿಗೆ ನೋವು ಮಾಡದೆ ಇರೋದು ಹೇಗೆ? ಒಂದುವೇಳೆ ಅವರು ನಮಗೆ ನೋವು ಮಾಡಿದರೆ ನಾವೇನು ಮಾಡಬೇಕು? ಈ ಎಲ್ಲ ಪ್ರಶ್ನೆಗಳಿಗೂ ನಾವು ಈ ಲೇಖನದಲ್ಲಿ ಉತ್ತರ ತಿಳುಕೊಳ್ತೀವಿ.
‘ಚಿಕ್ಕ ಮಕ್ಕಳ ತರ ಇರೋ ಜನರು’
4. ‘ಚಿಕ್ಕ ಮಕ್ಕಳ ತರ ಇರೋ ಜನರು’ ಯಾರು?
4 ‘ಚಿಕ್ಕ ಮಕ್ಕಳ ತರ ಇರೋ ಜನರು’ ಅಂದ್ರೆ ಯೇಸುವಿನ ಶಿಷ್ಯರು ಅಂತರ್ಥ. ಇವರಲ್ಲಿ ಚಿಕ್ಕವರು ದೊಡ್ಡವರು ಎಲ್ಲರೂ ಇದ್ದಾರೆ. ಇವರು ಚಿಕ್ಕ ಮಕ್ಕಳ ತರ ಯೇಸುವಿನಿಂದ ಕಲಿಯೋಕೆ ಆಸೆಪಡ್ತಾರೆ. (ಮತ್ತಾ. 18:3) ಇವರ ಸಂಸ್ಕೃತಿ, ಅಭಿಪ್ರಾಯ, ಸ್ವಭಾವ ಬೇರೆಬೇರೆ ಇದ್ರೂ ಎಲ್ಲರೂ ಯೇಸು ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರನ್ನ ಯೇಸು ತುಂಬ ಪ್ರೀತಿಸ್ತಾನೆ.—ಮತ್ತಾ. 18:6; ಯೋಹಾ. 1:12.
5. ತನ್ನ ಜನರಿಗೆ ಯಾರಾದ್ರೂ ನೋವು ಮಾಡಿದ್ರೆ ಯೆಹೋವ ದೇವರಿಗೆ ಹೇಗನಿಸುತ್ತೆ?
5 ಯೆಹೋವ ದೇವರಿಗೆ ನಮ್ಮ ಮೇಲೆ ಬೆಟ್ಟದಷ್ಟು ಪ್ರೀತಿ ಇದೆ. ಆ ಪ್ರೀತಿಯನ್ನ ಅರ್ಥ ಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡಿ. ನಾವು ಮಕ್ಕಳನ್ನ ಎಷ್ಟು ಜೋಪಾನವಾಗಿ ನೋಡಿಕೊಳ್ತೀವಿ ಅಲ್ವಾ? ಮಕ್ಕಳು ಅಮಾಯಕರು, ಅವರಿಗೆ ದೊಡ್ಡವರಷ್ಟು ಶಕ್ತಿ ಇರಲ್ಲ. ಯಾರಾದ್ರೂ ಮಕ್ಕಳಿಗೆ ತೊಂದ್ರೆ ಕೊಟ್ರೆ, ನೋವು ಮಾಡ್ತಿದ್ರೆ ನಮಗೆ ಬೇಜಾರು ಆಗುತ್ತೆ. ಅವರ ಮೇಲೆ ಕೋಪನೂ ಬರುತ್ತೆ. ಅದೇ ತರ ಯೆಹೋವನ ಜನರಿಗೆ ಯಾರಾದ್ರೂ ನೋವು ಮಾಡಿದ್ರೆ ದೇವರಿಗೆ ಬೇಜಾರಾಗುತ್ತೆ, ಅವರ ಮೇಲೆ ಕೋಪನೂ ಬರುತ್ತೆ.—ಯೆಶಾ. 63:9; ಮಾರ್ಕ 9:42.
6. ಒಂದನೇ ಕೊರಿಂಥ 1:26-29 ವಚನದಲ್ಲಿ ಹೇಳೋ ಪ್ರಕಾರ ಯೇಸುವಿನ ಶಿಷ್ಯರನ್ನ ಈ ಲೋಕದ ಜನರು ಹೇಗೆ ನೋಡ್ತಾರೆ?
6 ಈ ಲೋಕದಲ್ಲಿ ಹೆಸರು ಮಾಡಿದವ್ರನ್ನ, ಶ್ರೀಮಂತರನ್ನ ಜನರು ದೊಡ್ಡ ವ್ಯಕ್ತಿಗಳು ಅಂದ್ಕೊಳ್ತಾರೆ, ತುಂಬ ಮರ್ಯಾದೆ ಕೊಡ್ತಾರೆ. ಆದ್ರೆ ಯೇಸುವಿನ ಶಿಷ್ಯರನ್ನ ಲೆಕ್ಕಕ್ಕೆ ಬಾರದವರು ಅಂತ ಕೀಳಾಗಿ ನೋಡ್ತಾರೆ. (1 ಕೊರಿಂಥ 1:26-29 ಓದಿ.) ಆದ್ರೆ ಯೆಹೋವ ದೇವರು ನಮ್ಮನ್ನು ಅವರ ತರ ನೋಡಲ್ಲ.
7. ನಮ್ಮ ಸಹೋದರ ಸಹೋದರಿಯರ ಹತ್ರ ಹೇಗೆ ನಡ್ಕೊಬೇಕು ಅಂತ ದೇವರು ಇಷ್ಟಪಡ್ತಾರೆ?
7 ನಾವು ಹೊಸದಾಗಿ ಸತ್ಯ ಕಲಿಯುತ್ತಾ ಇರಲಿ ಅಥವಾ ತುಂಬ ವರ್ಷಗಳಿಂದ ಯೆಹೋವನ ಸೇವೆ ಮಾಡ್ತಾ ಇರಲಿ ದೇವರಿಗೆ ಎಲ್ಲರೂ ಇಷ್ಟನೇ. ಅಂದಮೇಲೆ ನಾವು ಕೆಲವರನ್ನು ಮಾತ್ರ ಅಲ್ಲ, ‘ಎಲ್ಲ ಸಹೋದರ ಸಹೋದರಿಯರನ್ನೂ ಪ್ರೀತಿಸಬೇಕು.’ (1 ಪೇತ್ರ 2:17) ಅವರಿಗೆ ನೋವಾಗುವ ತರ ನಾವು ನಡ್ಕೋಬಾರದು. ನಮ್ಮಿಂದ ಯಾರಿಗಾದ್ರೂ ಬೇಜಾರಾಗಿದೆ ಅಂತ ಗೊತ್ತಾದಾಗ ಅವರು ‘ಹೀಗೆ ಚಿಕ್ಕಚಿಕ್ಕದಕ್ಕೂ ಬೇಜಾರು ಮಾಡ್ಕೊಂಡ್ರೆ ನಾನೇನು ಮಾಡಕ್ಕಾಗುತ್ತೆ. ಅದು ಅವರ ತಪ್ಪು ಅಥವಾ ಇರಲಿ ನಂದೇ ತಪ್ಪು ಅದನ್ನವರು ಕ್ಷಮಿಸಬಹುದಲ್ವಾ!’ ಅಂದ್ಕೊಂಡು ಬಿಟ್ಟುಬಿಡಬಾರದು. ಅದರ ಬದ್ಲು ಅವರು ಯಾಕೆ ಬೇಜಾರು ಮಾಡ್ಕೊಳ್ತಾರೆ ಅಂತ ಯೋಚನೆ ಮಾಡಬೇಕು. ಕೆಲವರು ಬೆಳೆದ ಬಂದ ವಾತಾವರಣ ಹೇಗಿರುತ್ತೆ ಅಂದ್ರೆ ‘ನಾನು ಏನಕ್ಕೂ ಲಾಯಕ್ಕಿಲ್ಲ’ ಅಂತ ಅಂದ್ಕೊಳ್ತಾರೆ. ಇನ್ನು ಕೆಲವರು ಸತ್ಯಕ್ಕೆ ಹೊಸದಾಗಿ ಬಂದಿರೋದ್ರಿಂದ ಬೇರೆಯವರನ್ನ ಕ್ಷಮಿಸೋದು ಹೇಗೆ ಅಂತ ಇನ್ನೂ ಗೊತ್ತಿರಲ್ಲ. ಕಾರಣ ಏನೇ ಆದರೂ ಬೇರೆಯವರಿಗೆ ನಮ್ಮಿಂದ ನೋವಾದರೆ ತಕ್ಷಣ ಅದನ್ನ ಸರಿಮಾಡಬೇಕು. ಇನ್ನೊಂದು ಕಡೆ, ಬೇಜಾರಾಗಿರೋ ವ್ಯಕ್ತಿ ‘ಎಲ್ಲದಕ್ಕೂ ಬೇಜಾರು ಮಾಡಿಕೊಳ್ತಿದ್ದೀನಾ’ ಅಂತನೂ ಯೋಚಿಸಬೇಕು. ಆಮೇಲೆ ಆ ಸ್ವಭಾವವನ್ನ ಬಿಟ್ಟುಬಿಡೋಕೆ ಪ್ರಯತ್ನ ಮಾಡಬೇಕು. ಹೀಗೆ ಮಾಡಿದ್ರೆ ಆ ವ್ಯಕ್ತಿನೂ ನೆಮ್ಮದಿಯಾಗಿ ಇರ್ತಾನೆ ಬೇರೆಯವರೂ ಸಂತೋಷವಾಗಿ ಇರ್ತಾರೆ.
ಬೇರೆಯವರನ್ನ ಶ್ರೇಷ್ಠವಾಗಿ ನೋಡಿ
8. ಯೇಸುವಿನ ಶಿಷ್ಯರು ಸ್ಥಾನಮಾನದ ಬಗ್ಗೆ ಯಾಕೆ ಯೋಚನೆ ಮಾಡಿದ್ರು?
8 ‘ಚಿಕ್ಕ ಮಕ್ಕಳ ತರ ಇರೋ ಜನ್ರ’ ಬಗ್ಗೆ ಯೇಸು ಯಾಕೆ ಮಾತು ಎತ್ತಿದ? ಯಾಕಂದ್ರೆ ಯೇಸು ಹತ್ರ ಶಿಷ್ಯರು ‘ಸ್ವರ್ಗದಲ್ಲಿ ದೇವರ ಜೊತೆ ಬೇರೆಯವರು ಇರ್ತಾರಲ್ವಾ, ಅದ್ರಲ್ಲಿ ದೊಡ್ಡವರು ಯಾರು?’ ಅಂತ ಕೇಳ್ತಿದ್ರು. (ಮತ್ತಾ. 18:1) “ಯೆಹೂದಿ ಗಂಡಸರಿಗೆ ಅವರ ಪ್ರಾಣಕ್ಕಿಂತ ಸಮಾಜದಲ್ಲಿ ಹೆಸರು, ಸ್ಥಾನಮಾನನೇ ದೊಡ್ಡದಾಗಿತ್ತು. ಜನರನ್ನ ಮೆಚ್ಚಿಸುವುದೇ ಮುಖ್ಯವಾಗಿತ್ತು” ಅಂತ ಒಬ್ಬ ಪಂಡಿತ ಹೇಳ್ತಾರೆ. ಆಗಿನ ಕಾಲದಲ್ಲಿ ಯೆಹೂದ್ಯರು ಸ್ಥಾನಮಾನಕ್ಕೆ ತುಂಬ ಪ್ರಾಮುಖ್ಯತೆ ಕೊಡ್ತಿದ್ರಿಂದ ಶಿಷ್ಯರು ಹಾಗೆ ಕೇಳಿದ್ರು.
9. ಯೇಸು ಶಿಷ್ಯರಿಗೆ ಏನು ಮಾಡಬೇಕು ಅಂತ ಹೇಳಿದ?
9 ಶಿಷ್ಯರು ತಮ್ಮ ಮನಸ್ಸಲ್ಲಿದ್ದ ಆ ಪೈಪೋಟಿಯನ್ನ ಬೇರುಸಮೇತ ಕಿತ್ತುಹಾಕಬೇಕಿತ್ತು. ಅದಕ್ಕೆ ಅವರು ತುಂಬ ಪ್ರಯತ್ನ ಹಾಕಬೇಕಿತ್ತು. ಹಾಗಾಗಿ ಯೇಸು “ನಿಮ್ಮಲ್ಲಿ ದೊಡ್ಡವರು ಎಲ್ರಿಗಿಂತ ಚಿಕ್ಕವರಾಗಿ ಇರಬೇಕು. ಮೇಲ್ವಿಚಾರಕರು ಬೇರೆಯವರ ಸೇವೆ ಮಾಡಬೇಕು” ಅಂತ ಹೇಳಿದ. (ಲೂಕ 22:26) ನಾವು ಚಿಕ್ಕವರಾಗಿ ಇರಬೇಕಂದ್ರೆ ಬೇರೆಯವರನ್ನ ನಮಗಿಂತ ಶ್ರೇಷ್ಠರಾಗಿ ನೋಡಬೇಕು. “ಏನೇ ಆದ್ರೂ ಜಗಳ ಮಾಡಬೇಡಿ, ‘ನಾನೇ ಮೇಲು’ ಅಂತ ಹೆಮ್ಮೆಪಡದೆ ದೀನತೆ ತೋರಿಸಿ, ನಿಮಗಿಂತ ಬೇರೆಯವ್ರನ್ನ ಶ್ರೇಷ್ಠವಾಗಿ ನೋಡಿ.” (ಫಿಲಿ. 2:3) ಬೇರೆಯವರನ್ನ ನೋಯಿಸದೆ ಇರಬೇಕಂದ್ರೆ ನಮ್ಮ ಮನಸ್ಸಲ್ಲಿ ಯಾವಾಗಲೂ ಈ ಭಾವನೆ ಇರಬೇಕು.
10. ಪೌಲ ಕೊಟ್ಟ ಯಾವ ಬುದ್ಧಿವಾದನ ನಾವು ಮನಸ್ಸಲ್ಲಿಡಬೇಕು?
10 ಒಂದಲ್ಲ ಒಂದು ವಿಷಯದಲ್ಲಿ ನಮ್ಮ ಸಹೋದರ ಸಹೋದರಿಯರು ನಮಗಿಂತ ಶ್ರೇಷ್ಠರಾಗಿ ಇರುತ್ತಾರೆ. ಅವರಲ್ಲಿ ಒಳ್ಳೇ ಗುಣಗಳೂ ಇರುತ್ತೆ, ಅದಕ್ಕೆ ನಾವು ಯಾವಾಗಲೂ ಗಮನ ಕೊಡಬೇಕು. ಪೌಲ ಕೊರಿಂಥದವರಿಗೆ ಕೊಟ್ಟ ಬುದ್ಧಿವಾದನ ನಾವು ಮನಸ್ಸಲ್ಲಿ ಇಡಬೇಕು. ಅವನು ಹೇಳಿದ್ದು “‘ನಾನು ಬೇರೆಯವ್ರಿಗಿಂತ ಶ್ರೇಷ್ಠ’ ಅಂತ ನೀನು ನೆನಸ್ತಿಯಲ್ಲಾ, ನಿನ್ನ ಹತ್ರ ಅಂಥದ್ದು ಏನಿದೆ? ನಿನ್ನ ಹತ್ರ ಇರೋದೆಲ್ಲ ದೇವರೇ ಕೊಟ್ಟಿದ್ದಲ್ವಾ? ಅಂದ್ಮೇಲೆ ನೀನೇ ಏನೋ ನಿನ್ನ ಸ್ವಂತ ಶಕ್ತಿಯಿಂದ ಎಲ್ಲ ಪಡ್ಕೊಂಡಿರೋ ಹಾಗೆ ಯಾಕೆ ಕೊಚ್ಕೊಳ್ತೀಯಾ?” (1 ಕೊರಿಂ. 4:7) ಬೇರೆಯವರಿಗಿಂತ ನಾವೇ ಶ್ರೇಷ್ಠ ಅಂತ ಅನಿಸೋ ಯಾವುದಾದ್ರೂ ಘಟನೆ ನಡೆದಾಗ ಅಥವಾ ಅಂಥ ಸನ್ನಿವೇಶಗಳು ಬಂದಾಗ ತಕ್ಷಣ ನಾವು ಹುಷಾರಾಗಿಬಿಡಬೇಕು. ಉದಾಹರಣೆಗೆ ನಾವು ಒಂದು ಒಳ್ಳೇ ಭಾಷಣ ಕೊಟ್ಟಾಗ ಅಥವಾ ನಮಗೊಂದು ಒಳ್ಳೇ ಬೈಬಲ್ ಅಧ್ಯಯನ ಸಿಕ್ಕಿದಾಗ ಯಾರಾದ್ರೂ ನಮ್ಮನ್ನ ಹೊಗಳಿದ್ರೆ ಅದನ್ನೆಲ್ಲ ಯೆಹೋವ ದೇವರಿಗೆ ಸಲ್ಲಿಸಬೇಕು.
ಮನಸಾರೆ ಕ್ಷಮಿಸಿ
11. ರಾಜ ಮತ್ತು ಸೇವಕನ ಕಥೆಯಿಂದ ನೀವೇನು ಕಲಿತ್ರಿ?
11 ಬೇರೆಯವರನ್ನ ನೋಯಿಸಬಾರದು ಅಂತ ಹೇಳಿದ ಮೇಲೆ ಯೇಸು, ರಾಜ ಮತ್ತು ಸೇವಕನ ಕಥೆ ಹೇಳಿದನು. ಆ ಸೇವಕ ರಾಜನ ಹತ್ರ ತುಂಬ ಸಾಲ ಮಾಡಿದ್ರೂ ಆ ರಾಜ ಅದನ್ನ ಮನ್ನ ಮಾಡಿಬಿಟ್ಟ. ಆದ್ರೆ ಈ ಸೇವಕನ ಹತ್ತಿರ ಇನ್ನೊಬ್ಬ ಸೇವಕ ಸ್ವಲ್ಪ ಸಾಲ ಮಾಡಿದ್ದ. ರಾಜ ಆ ಸೇವಕನ ಸಾಲ ಮನ್ನ ಮಾಡಿದ ಹಾಗೆ ಈ ಸೇವಕನೂ ಮನ್ನ ಮಾಡಬೇಕಿತ್ತು. ಆದ್ರೆ ಅವನು ಹಾಗೆ ಮಾಡದೆ ಇದ್ದಿದ್ದಕ್ಕೆ ರಾಜ ಆ ಸೇವಕನನ್ನ ಜೈಲಿಗೆ ಹಾಕಿಬಿಟ್ಟ. ಇದ್ರಿಂದ ನಮಗೇನು ಪಾಠ? “ನೀವು ನಿಮ್ಮ ಸಹೋದರನನ್ನ ಮನಸಾರೆ ಕ್ಷಮಿಸದಿದ್ರೆ ಸ್ವರ್ಗದಲ್ಲಿರೋ ನನ್ನ ಅಪ್ಪ ಸಹ ನಿಮ್ಮನ್ನ ಕ್ಷಮಿಸಲ್ಲ” ಅಂತ ಯೇಸು ಹೇಳಿದನು.—ಮತ್ತಾ. 18:21-35.
12. ನಾವು ಕ್ಷಮಿಸದೇ ಇದ್ರೆ ಬೇರೆಯವರಿಗೆ ಹೇಗೆ ನೋವು ಮಾಡಿಬಿಡ್ತೀವಿ?
12 ನಾವು ಬೇರೆಯವರನ್ನ ಕ್ಷಮಿಸದೆ ಇದ್ರೆ ಏನಾಗುತ್ತೆ? ಆ ಕಥೆಯಲ್ಲಿರೋ ಸೇವಕ, ಅವನ ಹತ್ರ ಸ್ವಲ್ಪ ಸಾಲ ಮಾಡಿದ ಸೇವಕನನ್ನ ಕ್ಷಮಿಸಲಿಲ್ಲ. “ಸಾಲ ತೀರಿಸೋ ತನಕ ಅವನನ್ನ ಜೈಲಿಗೆ ಹಾಕಿಸಿದ.” ಅದೂ ಅಲ್ಲದೆ ‘ಇದನ್ನ ನೋಡಿದ ಬೇರೆ ಸೇವಕರಿಗೂ ತುಂಬ ದುಃಖ ಆಯ್ತು.’ ಕೊನೆಗೆ ಅವನೂ ಜೈಲಿಗೆ ಹೋದ. ಅದೇ ತರ ನಾವೂ ನಮ್ಮ ಸಹೋದರ ಸಹೋದರಿಯರನ್ನ ಕ್ಷಮಿಸಿಲ್ಲ ಅಂದ್ರೆ ಅವರ ಜೊತೆ ಮುಖ ಕೊಟ್ಟು ಮಾತಾಡಕ್ಕಾಗಲ್ಲ, ಅವರಿಗೆ ಪ್ರೀತಿ ತೋರಿಸಕ್ಕಾಗಲ್ಲ. ಅಷ್ಟೇ ಅಲ್ಲ, ನಾವು ಮುಂಚಿನ ತರ ಚೆನ್ನಾಗಿ ಮಾತಾಡದೇ ಇರೋದನ್ನ ನೋಡಿ ಸಭೆಯಲ್ಲಿರೋ ಬೇರೆ ಸಹೋದರ ಸಹೋದರಿಯರಿಗೆ ಒಂಥರ ಬೇಜಾರು, ಮುಜುಗರ ಆಗುತ್ತೆ. ಹೀಗೆ ಬೇರೆಯವರಿಗೂ ನೋವು ಮಾಡಿಬಿಡ್ತೀವಿ.
13. ಈ ಪಯನೀಯರ್ ಸಹೋದರಿಯಿಂದ ನೀವೇನು ಕಲಿತ್ರಿ?
13 ನಾವು ನಮ್ಮ ಸಹೋದರ ಸಹೋದರಿಯರನ್ನ ಕ್ಷಮಿಸಿದ್ರೆ ನಾವೂ ಖುಷಿಯಾಗಿ ಇರುತ್ತೀವಿ, ಬೇರೆಯವರೂ ಖುಷಿಯಾಗಿ ಇರ್ತಾರೆ. ಪಯನೀಯರಾಗಿದ್ದ ಸಹೋದರಿ ಕ್ರಿಸ್ಟಲ್ಗೆ ಹೀಗೆ ಆಯ್ತು.b ಸಭೆಯಲ್ಲಿರೋ ಒಬ್ಬ ಸಹೋದರಿ ಅವರಿಗೆ ತುಂಬ ನೋವು ಮಾಡಿಬಿಟ್ರು. ಅದ್ರ ಬಗ್ಗೆ ಅವರು ಹೀಗೆ ಹೇಳ್ತಾರೆ: “ಅವರು ಆಡಿದ ಮಾತುಗಳು ನನ್ನ ಎದೆಗೆ ಚಾಕು ತಗೊಂಡು ಚುಚ್ಚಿದ ಹಾಗಿತ್ತು. ಅವರ ಜೊತೆ ಸೇವೆಗೆ ಹೋಗೋಕೆ ನಂಗೆ ಇಷ್ಟ ಆಗ್ತಿರಲಿಲ್ಲ. ಸೇವೆಯಲ್ಲಿರೋ ನನ್ನ ಹುರುಪನ್ನ ಕಳ್ಕೊಂಡೆ. ಆಮೇಲೆ ನನ್ನ ಸಂತೋಷನೂ ಕಳ್ಕೊಂಡೆ. ‘ನನಗೆ ಬೇಜಾರು ಆಗಿದ್ರಲ್ಲಿ ತಪ್ಪೇನಿಲ್ಲ’ ಅಂತ ಮೊದಮೊದಲು ಅವಳಿಗೆ ಅನಿಸಿದ್ರೂ ಆ ಬೇಜಾರನ್ನ ಇನ್ನೂ ಮನಸ್ಸಲ್ಲಿ ಹಾಗೇ ಇಟ್ಕೊಂಡಿರಲಿಲ್ಲ.” ಇದಕ್ಕೆ ಅವಳಿಗೆ ಅಕ್ಟೋಬರ್ 15, 1999ರ ಕಾವಲಿನಬುರುಜುವಿನಲ್ಲಿ ಬಂದ “ನಿಮ್ಮ ಹೃದಯಾಂತರಾಳದಿಂದ ಕ್ಷಮಿಸಿರಿ” ಅನ್ನೋ ಲೇಖನ ಸಹಾಯ ಮಾಡ್ತು. ಅದ್ರಲ್ಲಿದ್ದ ಬುದ್ಧಿವಾದನ ದೀನತೆಯಿಂದ ಪಾಲಿಸಿದ್ರು. ಆ ಸಹೋದರಿಯನ್ನ ಕ್ಷಮಿಸಿದ್ರು. ಇದಾದ ಮೇಲೆ ಸಹೋದರಿ ಹೇಳ್ತಾರೆ, “ನಾವು ಹೊಸ ವ್ಯಕ್ತಿತ್ವ ಧರಿಸಿಕೊಳ್ಳೋಕೆ ತುಂಬ ಪ್ರಯತ್ನ ಮಾಡ್ತೀವಿ. ಪ್ರತಿದಿನ ತಪ್ಪಿ ಹೋಗ್ತೀವಿ. ಆದ್ರೂ ಯೆಹೋವ ದೇವರು ಅವಾಗೆಲ್ಲ ನಮ್ಮನ್ನ ಕ್ಷಮಿಸಲ್ವಾ? ಅದೇ ತರ ನಾನೂ ಕ್ಷಮಿಸಿದಾಗ ನನ್ನ ಎದೆ ಮೇಲಿದ್ದ ದೊಡ್ಡ ಭಾರನೇ ಇಳಿದ ಹಾಗಾಯ್ತು. ಹೋದ ಖುಷಿ ಮತ್ತೆ ಬಂತು.”
14. (ಎ) ಅಪೊಸ್ತಲ ಪೇತ್ರನಿಗೆ ಬೇರೆಯವರನ್ನ ಕ್ಷಮಿಸೋದು ಕಷ್ಟ ಆಗಿರಬೇಕು ಅನ್ನೋದು ಮತ್ತಾಯ 18:21, 22ರಿಂದ ಹೇಗೆ ಗೊತ್ತಾಗುತ್ತೆ? (ಬಿ) ಪೇತ್ರನಿಗೆ ಯೇಸು ಕೊಟ್ಟ ಉತ್ತರದಿಂದ ನಾವೇನು ಕಲಿತೀವಿ?
14 ಬೇರೆಯವರನ್ನ ಕ್ಷಮಿಸಬೇಕು ಅಂತ ನಮಗೆ ಗೊತ್ತಿದ್ರೂ ಅದನ್ನ ಮಾಡೋಕೆ ಕಷ್ಟ ಆಗುತ್ತೆ. ಅಪೊಸ್ತಲ ಪೇತ್ರನಿಗೂ ಹೀಗೆ ಅನಿಸ್ತು. (ಮತ್ತಾಯ 18:21, 22 ಓದಿ.) ಆ ತರ ಕಷ್ಟ ಆದಾಗ ಏನು ಮಾಡಬೇಕು? ಒಂದು, ಯೆಹೋವ ದೇವರು ನಿಮ್ಮನ್ನ ಎಷ್ಟು ಸಾರಿ ಕ್ಷಮಿಸಿದ್ದಾರೆ ಅಂತ ಯೋಚನೆ ಮಾಡಿ. (ಮತ್ತಾ. 18:32, 33) ನಮಗೆ ದೇವರ ಕ್ಷಮೆಯನ್ನ ಪಡ್ಕೊಳ್ಳೋ ಯೋಗ್ಯತೆ ಇಲ್ಲಾಂದ್ರೂ ದೇವರು ನಮ್ಮನ್ನ ಧಾರಾಳವಾಗಿ ಕ್ಷಮಿಸಿದ್ದಾರೆ. (ಕೀರ್ತ. 103:8-10) ಅಷ್ಟೇ ಅಲ್ಲ “ಒಬ್ರನ್ನೊಬ್ರು ಪ್ರೀತಿಸೋದು ನಮ್ಮ ಕರ್ತವ್ಯ.” ನಮ್ಮ ಸಹೋದರ ಸಹೋದರಿಯರನ್ನ ಕ್ಷಮಿಸಬೇಕು ಅನ್ನೋ ಸಾಲ ನಮ್ಮ ಮೇಲಿದೆ. ಅದನ್ನ ನಾವು ತೀರಿಸಲೇಬೇಕು. (1 ಯೋಹಾ. 4:11) ಎರಡು, ಕ್ಷಮಿಸೋದ್ರಿಂದ ಯಾವೆಲ್ಲ ಪ್ರಯೋಜನ ಇದೆ ಅಂತ ಯೋಚನೆ ಮಾಡಿ. ಸಭೆಯಲ್ಲಿ ಒಗ್ಗಟ್ಟಿರುತ್ತೆ, ಯೆಹೋವ ದೇವರ ಜೊತೆ ನಮ್ಮ ಸಂಬಂಧ ಚೆನ್ನಾಗಿರುತ್ತೆ. ನಮ್ಮ ಎದೆ ಮೇಲಿರೋ ಭಾರ ಇಳಿದು ಹೋಗುತ್ತೆ. ನಮಗೆ ನೋವು ಮಾಡಿದವರ ಜೊತೆ ನಾವು ಚೆನ್ನಾಗಿ ನಡಕೊಂಡ್ರೆ ಅವರಿಗೂ ಖುಷಿ ಆಗುತ್ತೆ. (2 ಕೊರಿಂ. 2:7; ಕೊಲೊ. 3:14) ಕ್ಷಮಿಸಬೇಕು ಅಂತ ಹೇಳಿಕೊಟ್ಟಿರೋ ಯೆಹೋವ ದೇವರಿಗೆ ಪ್ರಾರ್ಥಿಸಿ. ನಮ್ಮ ಮತ್ತು ನಮ್ಮ ಸಹೋದರ ಸಹೋದರಿಯರ ಸಂಬಂಧಕ್ಕೆ ಹುಳಿ ಹಿಂಡೋಕೆ ಸೈತಾನ ಕಾಯ್ತಾ ಇರುತ್ತಾನೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ. (ಎಫೆ. 4:26, 27) ಅವನ ಬಲೆಗೆ ಬೀಳದೆ ಇರೋಕೆ ಯೆಹೋವ ದೇವರ ಸಹಾಯ ಬೇಕೇಬೇಕು.
ಬೇರೆಯವರಿಂದ ನೋವಾದಾಗ . . .
15. ಬೇರೆಯವರು ಮಾಡಿರೋ ನೋವನ್ನ ಮರಿಯೋಕೆ ಆಗ್ತಿಲ್ಲ ಅಂದ್ರೆ ಕೊಲೊಸ್ಸೆ 3:13 ಹೇಳೋ ಪ್ರಕಾರ ಏನು ಮಾಡಬೇಕು?
15 ಬೇರೆಯವರು ನಿಮಗೆ ನೋವು ಮಾಡಿದಾಗ ಏನು ಮಾಡಬೇಕು? ನಿಮ್ಮ ಮಧ್ಯ ಇರೋ ಸಂಬಂಧ ಹಾಳಾಗದೇ ಇರೋಕೆ ನಿಮ್ಮಿಂದ ಏನೆಲ್ಲ ಆಗುತ್ತೋ ಅದನ್ನೆಲ್ಲ ಮಾಡಬೇಕು. ಮನಸ್ಸು ಬಿಚ್ಚಿ ಯೆಹೋವ ದೇವರ ಹತ್ರ ಎಲ್ಲ ಹೇಳ್ಕೊಬೇಕು. ನಿಮಗೆ ನೋವು ಮಾಡಿದವರಿಗೋಸ್ಕರ ಬೇಡ್ಕೊಳ್ಳಿ. ‘ದೇವರೇ, ನೀನು ಅವರಲ್ಲಿ ನೋಡಿರೋ ಒಳ್ಳೇ ಗುಣಗಳನ್ನ ನನಗೂ ನೋಡೋಕೆ ಸಹಾಯ ಮಾಡಪ್ಪಾ’ ಅಂತ ಬೇಡ್ಕೊಳ್ಳಿ. (ಲೂಕ 6:28) ಒಂದುವೇಳೆ ನಿಮಗೆ ಆ ನೋವನ್ನ ಮರಿಯೋಕೆ ಆಗ್ತಾ ಇಲ್ಲಾಂದ್ರೆ ಸರಿಯಾದ ಸಮಯ ನೋಡಿ ಅವರ ಹತ್ರ ಮಾತಾಡಿ. ಅವರು ಇದನ್ನ ಬೇಕುಬೇಕು ಅಂತ ಮಾಡಿಲ್ಲ ಅನ್ನೋದನ್ನ ಮನಸ್ಸಲ್ಲಿ ಇಟ್ಕೊಳ್ಳಿ. (ಮತ್ತಾ. 5:23, 24; 1 ಕೊರಿಂ. 13:7) ಅವರ ಜೊತೆ ಮಾತಾಡುವಾಗಲೂ ಇದನ್ನ ಮನಸ್ಸಲ್ಲಿ ಇಟ್ಕೊಳ್ಳಿ. ಒಂದುವೇಳೆ ಅವರಿಂದ ನಮಗೆ ನೋವು ಆಗಿದೆ ಅನ್ನೋದನ್ನ ಅವರು ಒಪ್ಪಿಕೊಳ್ಳದೇ ಇದ್ರೂ ಪರವಾಗಿಲ್ಲ “ಸಹಿಸ್ಕೊಳ್ತಾ ಇರಿ.” ಅವರ ಜೊತೆ ಮಾತಾಡೋದನ್ನ ಬಿಟ್ಟುಬಿಡಬೇಡಿ. (ಕೊಲೊಸ್ಸೆ 3:13 ಓದಿ.) ಎಲ್ಲಕ್ಕಿಂತ ಮುಖ್ಯವಾಗಿ ಮನಸ್ಸಲ್ಲಿ ಕೋಪ ಇಟ್ಕೊಬೇಡಿ. ಇದು ಯೆಹೋವ ದೇವರ ಜೊತೆ ನಿಮಗಿರೋ ಸ್ನೇಹವನ್ನ ಹಾಳುಮಾಡಿಬಿಡುತ್ತೆ. ಆ ಸ್ನೇಹನೇ ನಿಮಗೆ ಎಲ್ಲಕ್ಕಿಂತ ದೊಡ್ಡದು ಅಂತ ತೋರಿಸಿ.—ಕೀರ್ತ. 119:165.
16. ನಮ್ಮೆಲ್ಲರಿಗೂ ಯಾವ ಜವಾಬ್ದಾರಿ ಇದೆ?
16 ನಾವೆಲ್ಲ ಒಬ್ಬನೇ ಕುರುಬನ ಕೆಳಗೆ ಒಂದೇ ಹಿಂಡಾಗಿ ಯೆಹೋವನನ್ನ ಒಗ್ಗಟ್ಟಾಗಿ ಸೇವೆ ಮಾಡೋ ಸೌಭಾಗ್ಯ ನಮಗಿದೆ. (ಯೋಹಾ. 10:16) ಆ ಒಗ್ಗಟ್ಟಿಂದ ‘ಪ್ರಯೋಜನ ಹೊಂದುತ್ತಿರುವ ನಿಮಗೆ ಅದನ್ನು ಕಾಪಾಡಿಕೊಳ್ಳಲು ಸಹಾಯಮಾಡುವ ಜವಾಬ್ದಾರಿಯಿದೆ. ಹಾಗಾಗಿ ನಮ್ಮ ಸಹೋದರ ಸಹೋದರಿಯರನ್ನ ಯೆಹೋವನಂತೆಯೇ ವೀಕ್ಷಿಸಲು ನಮ್ಮನ್ನು ತರಬೇತುಗೊಳಿಸಬೇಕು’ ಅಂತ ಯೆಹೋವನ ಚಿತ್ತ ಮಾಡಲು ಸಂಘಟಿತರು ಪುಸ್ತಕದ ಪುಟ 166-167ರಲ್ಲಿದೆ. ‘ಚಿಕ್ಕ ಮಕ್ಕಳ ತರ ಇರೋ ನಾವೆಲ್ಲ’ ಯೆಹೋವ ದೇವರಿಗೆ ತುಂಬ ಇಷ್ಟ. ನಿಮ್ಮ ಸಹೋದರ ಸಹೋದರಿಯನ್ನ ನೀವೂ ಹಾಗೇ ಇಷ್ಟಪಡಬೇಕು ಅಲ್ವಾ? ಅವರಿಗೋಸ್ಕರ ನೀವು ಏನೇನು ಮಾಡ್ತಾ ಇದ್ದೀರೋ ಅದನ್ನೆಲ್ಲ ಯೆಹೋವ ದೇವರು ಗಮನಿಸ್ತಾರೆ, ಖುಷಿಪಡ್ತಾರೆ.—ಮತ್ತಾ. 10:42.
17. ನಾವು ಯಾವ ದೃಢತೀರ್ಮಾನ ಮಾಡೋಣ?
17 ನಮ್ಮ ಸಹೋದರ ಸಹೋದರಿಯರನ್ನ ನಾವು ತುಂಬ ಪ್ರೀತಿಸ್ತೀವಿ. ಹಾಗಾಗಿ ಅವರ “ನಂಬಿಕೆಯನ್ನ ಕಮ್ಮಿ ಮಾಡೋ ತರ ಅಥವಾ ನಂಬಿಕೆ ಕಳ್ಕೊಳ್ಳೋ ತರ ಯಾವುದನ್ನೂ ಮಾಡದ ಹಾಗೆ ದೃಢತೀರ್ಮಾನ ಮಾಡೋಣ.” (ರೋಮ. 14:13) ನಮ್ಮ ಸಹೋದರ ಸಹೋದರಿಯರನ್ನ ನಮಗಿಂತ ಶ್ರೇಷ್ಠರಾಗಿ ನೋಡೋಣ. ಅವರನ್ನ ಮನಸಾರೆ ಕ್ಷಮಿಸೋಣ. ಏನೇ ಬೇಜಾರಿದ್ರೂ ಅದನ್ನ ಮನಸ್ಸಲ್ಲಿ ಇಟ್ಕೊಳ್ಳದೆ ಮರೆತುಬಿಡೋಣ. “ಬೇರೆಯವ್ರ ಜೊತೆ ಶಾಂತಿಯಿಂದ ಇರೋಕೆ, ಒಬ್ರನ್ನೊಬ್ರು ಬಲಪಡಿಸೋಕೆ ನಮ್ಮಿಂದ ಆಗೋದನ್ನೆಲ್ಲ ಮಾಡೋಣ.”—ರೋಮ. 14:19.
ಗೀತೆ 77 ಕ್ಷಮಿಸುವವರಾಗಿರಿ
a ನಾವು ಅಪರಿಪೂರ್ಣರು ಆಗಿರೋದ್ರಿಂದ ನಮ್ಮ ಮಾತಲ್ಲಿ ಅಥವಾ ನಡ್ಕೊಳ್ಳೋ ರೀತಿಯಲ್ಲಿ ಸಹೋದರ ಸಹೋದರಿಯರಿಗೆ ನೋವು ಮಾಡಿಬಿಡ್ತೀವಿ. ಆಗ ನಾವೇ ಮುಂದೆ ಹೋಗಿ ಕ್ಷಮೆ ಕೇಳ್ತಿವಾ ಅಥವಾ ‘ಅದು ಅವರ ಪ್ರಾಬ್ಲಮ್ ನಾನ್ ಯಾಕೆ ಕ್ಷಮೆ ಕೇಳಲಿ’ ಅಂತ ಅಂದುಕೊಳ್ತಿವಾ? ಬೇರೆಯವರು ಏನಾದ್ರೂ ಹೇಳಿದಾಗ ಮಾಡಿದಾಗ ಪಟ್ಟಂಥ ಬೇಜಾರು ಮಾಡಿಕೊಳ್ತೀವಾ? ಕೋಪಿಸಿಕೊಳ್ತೀವಾ? ‘ನಾನ್ ಇರೋದೇ ಹೀಗೆ, ನಾನ್ಯಾಕೆ ಚೇಂಜ್ ಆಗಬೇಕು’ ಅಂತ ವಾದಿಸ್ತೀವಾ ಅಥವಾ ಚೇಂಜ್ ಮಾಡಿಕೊಳ್ತೀವಾ?
b ಹೆಸರು ಬದಲಾಗಿದೆ.
c ಚಿತ್ರ ವಿವರಣೆ: ಸಭೆಯಲ್ಲಿ ಒಬ್ಬ ಸಹೋದರಿಗೆ ಇನ್ನೊಬ್ಬ ಸಹೋದರಿಯ ಮೇಲೆ ಬೇಜಾರಾಗಿದೆ. ಒಬ್ಬರೇ ಇರುವಾಗ ಅದನ್ನ ಮಾತಾಡಿ ಸರಿ ಮಾಡಿಕೊಂಡಿದ್ದಾರೆ. ಆಗಿದ್ದನ್ನೆಲ್ಲ ಮರೆತು ಒಟ್ಟಿಗೆ ಯೆಹೋವ ದೇವರ ಸೇವೆ ಮಾಡ್ತಿದ್ದಾರೆ.