ಅಧ್ಯಾಯ 98
ಯೇಸುವಿನ ಮರಣವು ಸಮೀಪಿಸುತ್ತಿದ್ದಂತೆಯೇ ಶಿಷ್ಯರು ವಾಗ್ವಾದ ಮಾಡುತ್ತಾರೆ
ಯೇಸುವು ಮತ್ತು ಅವನ ಶಿಷ್ಯರು ಯೊರ್ದನ್ ಹೊಳೆಯ ಸಮೀಪದಲ್ಲಿದ್ದಾರೆ, ಅಲ್ಲಿ ಅವರು ಯೂದಾಯಕ್ಕೆ ಹೋಗಲು ಪೆರಿಯ ಪ್ರಾಂತ್ಯದಿಂದ ಹಾದುಹೋಗುತ್ತಾರೆ. ಹೆಚ್ಚು ಕಡಿಮೆ ಕೇವಲ ಒಂದು ವಾರದಷ್ಟು ಹತ್ತಿರದಲ್ಲಿದ್ದ ಸಾ.ಶ. 33ರ ಪಸ್ಕ ಹಬ್ಬಕ್ಕೆ ಹೋಗಲು ಬಹುಮಂದಿ ಅವರೊಂದಿಗೆ ಪ್ರಯಾಣಿಸುತ್ತಾರೆ.
ಶಿಷ್ಯರ ಮುಂದಿನಿಂದ ಯೇಸುವು ನಡೆಯುತ್ತಿದ್ದನು ಮತ್ತು ಅವನ ನಿರ್ಭೀತಿಯ ದೃಢಸಂಕಲ್ಪದಿಂದ ಅವರು ಬೆರಗುಗೊಂಡಿದ್ದರು. ಕೆಲವು ವಾರಗಳ ಹಿಂದೆ ಲಾಜರನು ಸತ್ತಾಗ ಪೆರಿಯದಿಂದ ಯೂದಾಯಕ್ಕೆ ಹೋಗಲು ಇದ್ದಾಗ, ತೋಮನು ಇತರರಿಗೆ ಹುರಿದುಂಬಿಸಿದ್ದನ್ನು ನೆನಪಿಗೆ ತನ್ನಿರಿ: “ನಾವು ಸಹ ಹೋಗಿ ಆತನೊಡನೆ ಸಾಯೋಣ.” ಲಾಜರನನ್ನು ಪುನರುತ್ಥಾನಗೊಳಿಸಿದ ನಂತರ ಯೇಸುವನ್ನು ಕೊಲ್ಲಲು ಸನ್ಹೇದ್ರಿನ್ ಸಭೆಯು ಹಂಚಿಕೆ ಹೂಡಿದ್ದನ್ನೂ ನೆನಪಿಗೆ ತನ್ನಿರಿ. ಆದುದರಿಂದ ಪುನಃ ಯೂದಾಯವನ್ನು ಪ್ರವೇಶಿಸುವಾಗ ಶಿಷ್ಯರಲ್ಲಿ ಭೀತಿಯುಂಟಾಗುವದರಲ್ಲಿ ಆಶ್ಚರ್ಯವೇನೂ ಇಲ್ಲ.
ಮುಂದಕ್ಕೆ ಏನು ಸಂಭವಿಸಲಿದೆಯೋ ಅದಕ್ಕಾಗಿ ಅವರನ್ನು ಅಣಿಗೊಳಿಸಲು, ಯೇಸುವು ಅವನ ಹನ್ನೆರಡು ಮಂದಿ ಶಿಷ್ಯರನ್ನು ಒತ್ತಟ್ಟಿಗೆ ಕರೆದು, ಅವರಿಗನ್ನುವದು: “ನೋಡಿರಿ, ನಾವು ಯೆರೂಸಲೇಮಿಗೆ ಹೋಗುತ್ತಾ ಇದ್ದೇವೆ; ಮತ್ತು ಮನುಷ್ಯಕುಮಾರನನ್ನು ಮಹಾಯಾಜಕರ ಮತ್ತು ಶಾಸ್ತ್ರಿಗಳ ಕೈಗೆ ಹಿಡುಕೊಡುವರು. ಅವರು ಅವನಿಗೆ ಮರಣ ದಂಡನೆಯನ್ನು ವಿಧಿಸಿ ಅವನನ್ನು ಅಪಹಾಸ್ಯ ಮಾಡುವದಕ್ಕೂ ಕೊರಡೆಗಳಿಂದ ಹೊಡೆಯುವದಕ್ಕೂ ವಧಿಸುವದಕ್ಕೂ ಅನ್ಯರ ಕೈಗೆ ಒಪ್ಪಿಸುವರು; ಅವನು ಸತ್ತ ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡುವನು.”
ತನ್ನ ಮರಣ ಮತ್ತು ಪುನರುತ್ಥಾನದ ವಿಷಯದಲ್ಲಿ ಇತ್ತೀಚಿಗಿನ ತಿಂಗಳುಗಳಲ್ಲಿ ತನ್ನ ಶಿಷ್ಯರಿಗೆ ಯೇಸುವು ಹೇಳಿದ್ದು ಇದು ಮೂರನೆಯ ಬಾರಿಯಾಗಿತ್ತು. ಮತ್ತು ಅವರು ಅವನನ್ನು ಆಲಿಸಿದರೂ, ಅದನ್ನು ಗ್ರಹಿಸಿಕೊಳ್ಳಲು ಅಶಕ್ತರಾದರು. ಅದು ಪ್ರಾಯಶಃ, ಅವರು ಇಸ್ರಾಯೇಲ್ ರಾಜ್ಯವನ್ನು ಭೂಮಿಯ ಮೇಲೆ ಪುನಃ ಸ್ಥಾಪಿಸಲ್ಪಡುವದನ್ನು ನಂಬುತ್ತಿದ್ದರಿಂದ ಮತ್ತು ಕ್ರಿಸ್ತನೊಂದಿಗೆ ಐಹಿಕ ರಾಜ್ಯದಲ್ಲಿ ಮಹಿಮೆ ಮತ್ತು ಮಾನವನ್ನು ಪಡೆದು ಆನಂದಿಸುವದನ್ನು ಅವರು ಮುನ್ನೋಡುತ್ತಿದ್ದದ್ದರಿಂದ ಆಗಿರಬಹುದು.
ಪಸ್ಕ ಹಬ್ಬಕ್ಕೆ ಹೋಗುವವರಲ್ಲಿ ಅಪೊಸ್ತಲ ಯಾಕೋಬ ಮತ್ತು ಯೋಹಾನರ ತಾಯಿ ಸಲೋಮೆಯು ಇದ್ದಳು. ಯೇಸುವು ಇವರನ್ನು “ಗುಡುಗಿನ ಮರಿಗಳು” ಎಂದು ಕರೆದಿದ್ದನು, ಅವರ ದಹಿಸುವ ಮಾನಸಿಕ ಭಾವನೆಗಾಗಿ ಅದು ಕೊಡಲ್ಪಟ್ಟಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಕ್ರಿಸ್ತನ ರಾಜ್ಯದಲ್ಲಿ ಪ್ರತಿಷ್ಠೆಯುಳ್ಳವರಾಗಿರಬೇಕೆಂಬ ಮಹತ್ವಾಕಾಂಕ್ಷೆಯನ್ನು ಇವರಿಬ್ಬರು ಕೆಲವು ಸಮಯದಿಂದ ಬೆಳೆಸಿದ್ದರು ಮತ್ತು ಅವರ ಈ ಆಶೆಗಳನ್ನು ಅವರು ತಮ್ಮ ತಾಯಿಗೆ ವ್ಯಕ್ತಪಡಿಸಿದ್ದರು. ಈಗ ಅವಳು ಯೇಸುವಿನ ಬಳಿಗೆ ಅವರ ಪರವಾಗಿ ಬರುತ್ತಾಳೆ, ಅಡ್ಡ ಬಿದ್ದು, ಒಂದು ವಿನಂತಿಯನ್ನು ಮಾಡುತ್ತಾಳೆ.
“ನಿನಗೇನು ಬೇಕಮ್ಮಾ?” ಯೇಸುವು ಕೇಳುತ್ತಾನೆ.
ಅವಳು ಉತ್ತರಿಸುವದು: “ನಿನ್ನ ರಾಜ್ಯದಲ್ಲಿ ನನ್ನ ಈ ಇಬ್ಬರು ಮಕ್ಕಳಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲೂ ಮತ್ತೊಬ್ಬನು ಎಡಗಡೆಯಲ್ಲೂ ಕೂತುಕೊಳ್ಳುವದಕ್ಕೆ ಅಪ್ಪಣೆಯಾಗಬೇಕು.”
ಈ ವಿನಂತಿಯ ಮೂಲವನ್ನು ಅರಿತುಕೊಂಡು, ಯೇಸುವು ಯಾಕೋಬ ಮತ್ತು ಯೋಹಾನರಿಗೆ ಹೇಳುವದು: “ನೀವು ಬೇಡಿಕೊಂಡದ್ದು ಏನೆಂದು ನಿಮಗೆ ತಿಳಿಯದು. ನಾನು ಕುಡಿಯಬೇಕಾಗಿರುವ ಪಾತ್ರೆಯಲ್ಲಿ ನೀವು ಕುಡಿಯುವದು ನಿಮ್ಮಿಂದಾದೀತೇ?”
“ಆಗುವದು” ಎಂದವರು ಉತ್ತರಿಸಿದರು. ಅವನು ಭಯಂಕರ ಹಿಂಸೆಯನ್ನು ಎದುರಿಸಿ, ಕಟ್ಟಕಡೆಯಲ್ಲಿ ವಧಿಸಲ್ಪಡಲಿದ್ದಾನೆ ಎಂಬದನ್ನು ಯೇಸುವು ಅವರಿಗೆ ಈಗಾಗಲೇ ಹೇಳಿದ್ದರೂ ಕೂಡ, ಅವನು ಕುಡಿಯಲಿದ್ದ “ಪಾತ್ರೆ” ಅದೆಂಬರ್ಥದಲ್ಲಿದ್ದರೂ ಅದನ್ನು ಅವರು ಗ್ರಹಿಸಲು ಅಶಕ್ತರಾಗಿದ್ದರು.
ಆದರೂ ಯೇಸುವು ಅವರಿಗೆ ಹೇಳಿದ್ದು: “ನನ್ನ ಪಾತ್ರೆಯಲ್ಲಿ ಕುಡಿಯುವಿರಿ ಸರಿ; ಆದರೆ ನನ್ನ ಎಡಬಲಗಡೆಗಳಲ್ಲಿ ಕೂತುಕೊಳ್ಳುವಂತೆ ಅನುಗ್ರಹಮಾಡುವದು ನನ್ನದಲ್ಲ; ನನ್ನ ತಂದೆಯಿಂದ ಅದು ಯಾರಿಗೆಂದು ಸಿದ್ಧಪಡಿಸಿದೆಯೋ ಅವರಿಗೇ ಸಿಕ್ಕುವದು.”
ಸಮಯಾನಂತರ ಇತರ ಹತ್ತು ಮಂದಿ ಅಪೊಸ್ತಲರು ಯಾಕೋಬ ಮತ್ತು ಯೋಹಾನರು ವಿನಂತಿಸಿದ್ದನ್ನು ತಿಳಿಯುತ್ತಾರೆ ಮತ್ತು ಅವರು ಸಿಟ್ಟುಗೊಳ್ಳುತ್ತಾರೆ. ತಮ್ಮಲ್ಲಿ ದೊಡ್ಡವನು ಯಾರು ಎಂಬ ಅವರ ಹಿಂದಿನ ವಾಗ್ವಾದದಲ್ಲಿ ಯಾಕೋಬ ಮತ್ತು ಯೋಹಾನರು ಹೆಚ್ಚು ಪ್ರತಿಷ್ಠೆಯುಳ್ಳವರಾಗಿದ್ದಿರಬಹುದು. ಆ ವಿಷಯದ ಮೇಲೆ ಅವರಿಗೆ ಯೇಸುವು ಕೊಟ್ಟ ಬುದ್ಧಿವಾದವನ್ನು ಅವರು ಅನ್ವಯಿಸಲಿಲ್ಲ ಎಂಬದು ಅವರ ಪ್ರಚಲಿತ ವಿನಂತಿಯು ತೋರಿಸುತ್ತದೆ. ದೊಡ್ಡತನದಲ್ಲಿ ಅವರಿಗಿದ್ದ ಅಪೇಕ್ಷೆ ಇನ್ನೂ ಬಲವಾಗಿದ್ದದ್ದು ವಿಷಾದಕರ.
ಈ ಸದ್ಯದ ವಾಗ್ವಾದವನ್ನು ಮತ್ತು ಅದರಿಂದ ಉಂಟಾದ ಕಡು ಮನೋಭಾವವನ್ನು ಸರಿ ಪಡಿಸಲು, ಯೇಸುವು ತನ್ನ 12 ಮಂದಿಗಳನ್ನು ಒಟ್ಟಿಗೆ ಕರೆಯುತ್ತಾನೆ. ಪ್ರೀತಿಪೂರ್ವಕವಾಗಿ, ಅವನು ಅವರಿಗೆ ಬುದ್ಧಿಹೇಳುತ್ತಾ, ಅಂದದ್ದು: “ಜನಗಳನ್ನಾಡುವವರು ಅವರ ಮೇಲೆ ಅಹಂಕಾರದಿಂದ ದೊರೆತನ ಮಾಡುತ್ತಾರೆ, ಮತ್ತು ದೊಡ್ಡವರು ಬಲಾತ್ಕಾರದಿಂದ ಅಧಿಕಾರ ನಡಿಸುತ್ತಾರೆ ಎಂದು ನೀವು ಬಲ್ಲಿರಷ್ಟೇ. ನಿಮ್ಮಲ್ಲಿ ಹಾಗಿರಬಾರದು; ಆದರೆ ನಿಮ್ಮಲ್ಲಿ ದೊಡ್ಡವನಾಗಿರಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು; ನಿಮ್ಮಲ್ಲಿ ಮೊದಲನೆಯವನಾಗ ಬೇಕೆಂದಿರುವವನು ನಿಮ್ಮ ಆಳಾಗಿರಬೇಕು.”
ಅವರು ಅನುಕರಿಸಬೇಕಾದ ಉದಾಹರಣೆಯನ್ನು ಯೇಸುವು ಇಡುತ್ತಾ, ಅವನು ವಿವರಿಸುವದು: “ಹಾಗೆಯೇ ಮನುಷ್ಯ ಕುಮಾರನು ಸೇವೆ ಮಾಡಿಸಿ ಕೊಳ್ಳುವದಕ್ಕೆ ಬರಲಿಲ್ಲ, ಸೇವೆ ಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು.” ಯೇಸುವು ಇತರರ ಪರವಾಗಿ ಕೇವಲ ಸೇವೆ ಮಾಡಿದ್ದು ಮಾತ್ರವಲ್ಲ, ಮಾನವ ಕುಲಕ್ಕಾಗಿ ಸಾಯುವಷ್ಟರ ತನಕವೂ ಅದನ್ನು ಮಾಡಲಿದ್ದನು! ಇತರರಿಂದ ಸೇವೆ ಮಾಡಿಸಿಕೊಳ್ಳುವ ಬದಲು ಸೇವೆ ಮಾಡಲು, ಪ್ರತಿಷ್ಠೆಯ ಸ್ಥಾನದಲ್ಲಿರುವ ಬದಲಾಗಿ ಕಡಿಮೆಯವನಾಗ ಬಯಸುವ ಕ್ರಿಸ್ತನಂಥ ಅದೇ ಮನೋಭಾವವು ಶಿಷ್ಯರಲ್ಲಿರಬೇಕಾದ ಜರೂರಿಯಿತ್ತು. ಮತ್ತಾಯ 20:17-28; ಮಾರ್ಕ 3:17; 9:33-37; 10:32-45; ಲೂಕ 18:31-34; ಯೋಹಾನ 11:16.
▪ ಶಿಷ್ಯರಲ್ಲಿ ಭೀತಿಯುಂಟಾದದ್ದು ಯಾಕೆ?
▪ ಮುಂದಕ್ಕೆ ಏನೋ ಬರಲಿರುವದೋ ಅದಕ್ಕಾಗಿ ಯೇಸುವು ತನ್ನ ಶಿಷ್ಯರನ್ನು ತಯಾರಿಸಿದ್ದು ಹೇಗೆ?
▪ ಯೇಸುವಿಗೆ ಯಾವ ವಿನಂತಿಯನ್ನು ಮಾಡಲಾಯಿತು ಮತ್ತು ಇತರ ಅಪೊಸ್ತಲರು ಇದರಿಂದ ಹೇಗೆ ಬಾಧಿತರಾದರು?
▪ ತನ್ನ ಅಪೊಸ್ತಲರ ಸಮಸ್ಯೆಯನ್ನು ಯೇಸುವು ಹೇಗೆ ನಿಭಾಯಿಸಿದನು?