ಅಧ್ಯಾಯ 107
ಮದುವೆ ಊಟದ ಸಾಮ್ಯ
ಎರಡು ಸಾಮ್ಯಗಳ ಮೂಲಕ ಯೇಸುವು ಶಾಸ್ತ್ರಿಗಳ ಮತ್ತು ಮಹಾ ಯಾಜಕರುಗಳ ಮೋಸವನ್ನು ಬಯಲುಗೊಳಿಸಿದನು, ಇದರಿಂದ ಅವರು ಇವನನ್ನು ಕೊಲ್ಲಲು ಬಯಸಿದರು. ಆದರೆ ಯೇಸುವು ಅವರನ್ನು ಪೂರ್ತಿಯಾಗಿ ಭೇದಿಸಲಿದ್ದನು. ಅವರಿಗೆ ಇನ್ನೂ ಒಂದು ಸಾಮ್ಯವನ್ನು ಅವನು ತಿಳಿಸುತ್ತಾ ಅಂದದ್ದು:
“ಪರಲೋಕ ರಾಜ್ಯವು ಮಗನಿಗೆ ಮದುವೆ ಮಾಡಿದ [ಮದುವೆ ಊಟ ಮಾಡಿಸಿದ, NW] ಒಬ್ಬ ಅರಸನಿಗೆ ಹೋಲಿಕೆಯಾಗಿದೆ. ಅವನು ಮದುವೆಗೆ [ಊಟಕ್ಕೆ] ಹೇಳಿಸಿಕೊಂಡವರನ್ನು ಕರೆಯುವದಕ್ಕೆ ತನ್ನ ಆಳುಗಳನ್ನು ಕಳುಹಿಸಲು, ಬರುವದಕ್ಕೆ ಅವರಿಗೆ ಮನಸ್ಸಿರಲಿಲ್ಲ.”
ಯೆಹೋವ ದೇವರು ಅರಸನಾಗಿದ್ದು ಅವನ ಮಗನಾದ ಯೇಸು ಕ್ರಿಸ್ತನ ಮದುವೆ ಊಟವನ್ನು ಸಿದ್ಧಗೊಳಿಸುತ್ತಾನೆ. ಕಟ್ಟಕಡೆಗೆ 1,44,000 ಅಭಿಷಿಕ್ತ ಹಿಂಬಾಲಕರಿರುವ ಮದಲಗಿತ್ತಿಯು ಪರಲೋಕದಲ್ಲಿ ಯೇಸುವಿನೊಂದಿಗೆ ಐಕ್ಯಗೊಳ್ಳುವದು. ಅರಸನ ಪ್ರಜೆಗಳು ಇಸ್ರಾಯೇಲ್ ಜನರಾಗಿದ್ದರು, ಅವರು ಸಾ.ಶ.ಪೂ. 1513ರಲ್ಲಿ ನಿಯಮದೊಡಂಬಡಿಕೆಯೊಳಗೆ ತರಲ್ಪಟ್ಟು, “ಯಾಜಕರಾಜ್ಯ” ಆಗುವ ಒಂದು ಅವಕಾಶವನ್ನು ಪಡೆದರು. ಹೀಗೆ ಆ ಸಂದರ್ಭದಲ್ಲಿ ಮದುವೆಯ ಊಟಕ್ಕೆ ಆಮಂತ್ರಣವು ಮೂಲದಲ್ಲಿ ಅವರಿಗೆ ನೀಡಲ್ಪಟ್ಟಿತು.
ಆದಾಗ್ಯೂ, ಯೇಸುವೂ ಅವನ ಶಿಷ್ಯರೂ (ಅರಸನ ಆಳುಗಳು) ರಾಜ್ಯದ ಸಾರುವಿಕೆಯನ್ನು ಆರಂಭಿಸುವ ತನಕ ಅಂದರೆ ಸಾ.ಶ. 29ರ ಮಾಗಿ ಕಾಲದ ತನಕ ಆಮಂತ್ರಿತರಿಗೆ ಮೊದಲ ಕರೆಯು ಕೊಡಲ್ಪಡಲಿಲ್ಲ. ಆದರೆ ಸಾ.ಶ. 29 ರಿಂದ ಸಾ.ಶ. 33ರ ತನಕ ಆಳುಗಳಿಂದ ಕೊಡಲ್ಪಟ್ಟ ಈ ಕರೆಯನ್ನು ಪಡೆದ ಮಾಂಸಿಕ ಇಸ್ರಾಯೇಲ್ಯರು ಬರುವದಕ್ಕೆ ಮನಸ್ಸಿಲ್ಲದವರಾಗಿದ್ದರು. ಆದುದರಿಂದ ದೇವರು ಅಮಂತ್ರಿತರ ಜನಾಂಗಕ್ಕೆ ಇನ್ನೊಂದು ಸಂದರ್ಭವನ್ನು ಕೊಡುತ್ತಾನೆ, ಯೇಸುವು ವರ್ಣಿಸುವದು:
“ತಿರಿಗಿ ಬೇರೆ ಆಳುಗಳನ್ನು ಕರೆದು—ನೀವು ಊಟಕ್ಕೆ ಹೇಳಿಸಿಕೊಂಡವರ ಬಳಿಗೆ ಹೋಗಿ—ಇಗೋ, ಅಡಿಗೆ ಸಿದ್ಧವಾಗಿದೆ; ನನ್ನ ಹೋರಿಗಳನ್ನೂ ಕೊಬ್ಬಿದ ಪಶುಗಳನ್ನೂ ಕೊಯಿಸಿದ್ದೇನೆ; ಎಲ್ಲಾ ಸಿದ್ಧವಾಗಿದೆ; ಮದುವೆಯ ಊಟಕ್ಕೆ ಬನ್ನಿರೆಂದು ಅವರಿಗೆ ಹೇಳಿರೆಂದು ಅಪ್ಪಣೆಕೊಟ್ಟು ಕಳುಹಿಸಿದನು.” ಆಮಂತ್ರಿತರಿಗೆ ಎರಡನೆಯ ಹಾಗೂ ಕೊನೆಯ ಕರೆಯನ್ನು ಸಾ.ಶ. 33ರ ಪಂಚಾಶತ್ತಮದಲ್ಲಿ ಕೊಡಲು ಆರಂಭವಾಯಿತು, ಆಗ ಯೇಸುವಿನ ಹಿಂಬಾಲಕರ ಮೇಲೆ ಪವಿತ್ರಾತ್ಮವು ಸುರಿಸಲ್ಪಟ್ಟಿತು. ಈ ಕರೆಯು ಸಾ.ಶ. 36ರ ತನಕ ಮುಂದುವರಿಯಿತು.
ಆದರೂ, ಇಸ್ರಾಯೇಲ್ಯರ ಅಧಿಕಾಂಶ ಜನರು ಈ ಕರೆಯನ್ನು ಸಹ ತಿರಸ್ಕರಿಸಿದರು. “ಆದರೆ ಅವರು ಅಲಕ್ಷ್ಯಮಾಡಿ,” ಯೇಸುವು ಹೇಳುವದು, “ಒಬ್ಬನು ತನ್ನ ಹೊಲಕ್ಕೆ ಒಬ್ಬನು ತನ್ನ ವ್ಯಾಪಾರಕ್ಕೆ ಹೋಗಿಬಿಟ್ಟರು; ಉಳಿದವರು ಅವನ ಆಳುಗಳನ್ನು ಹಿಡಿದು ಬೈದು ಕೊಂದುಹಾಕಿದರು.” “ಆದರೆ” ಯೇಸುವು ಮುಂದರಿಸುವದು, “ಅರಸನು ಸಿಟ್ಟುಗೊಂಡು ತನ್ನ ದಂಡುಗಳನ್ನು ಕಳುಹಿಸಿ ಆ ಕೊಲೆಗಾರರನ್ನು ನಾಶಮಾಡಿ ಅವರ ಪಟ್ಟಣವನ್ನು ಸುಟ್ಟುಬಿಟ್ಟನು.” ಇದು ಸಾ.ಶ. 70 ರಲ್ಲಿ ಸಂಭವಿಸಿತು, ಆಗ ಯೆರೂಸಲೇಮ್ ರೋಮನರಿಂದ ನೆಲಸಮಗೊಳಿಸಲ್ಪಟ್ಟಿತು ಮತ್ತು ಆ ಕೊಲೆಗಾರರು ಕೊಲ್ಲಲ್ಪಟ್ಟರು.
ಅನಂತರ ಯೇಸುವು ತನ್ಮಧ್ಯೆ ಏನು ಸಂಭವಿಸಿತು ಎನ್ನುವದನ್ನು ವಿವರಿಸುತ್ತಾನೆ: “ಆಗ [ಅರಸನು] ತನ್ನ ಆಳುಗಳಿಗೆ—ಮದುವೆಗೆ ಸಿದ್ಧವಾಗಿದೆ ಸರಿ, ಆದರೆ ಕರೆಯಲ್ಪಟ್ಟವರು ಯೋಗ್ಯರಾಗಿರಲಿಲ್ಲ. ನೀವು ಈಗ ನಾಲ್ಕು ಹಾದಿಗಳು ಕೂಡುವ ಸ್ಥಳಗಳಿಗೆ ಹೋಗಿ ಕಂಡವರನ್ನೆಲ್ಲಾ ಮದುವೆಯ ಊಟಕ್ಕೆ ಕರೆಯಿರಿ ಎಂದು ಹೇಳಿದನು. ಆ ಆಳುಗಳು ಇದನ್ನು ಮಾಡಿದರು, ಮತ್ತು “ಮೇಜಿನ ಮೇಲೆ ಊಟಕ್ಕೆ ಕೂತವರಿಂದ ಮದುವೆಯ ಸಂಭ್ರಮದ ಕೋಣೆಯು ತುಂಬಿಕೊಂಡಿತು.” (NW)
ಆಮಂತ್ರಿತರ ಪಟ್ಟಣದ ಹೊರಗೆ ಹಾದಿಗಳಿಂದ ಅತಿಥಿಗಳನ್ನು ಒಟ್ಟುಗೂಡಿಸುವ ಕಾರ್ಯವು ಸಾ.ಶ. 36 ರಿಂದ ಆರಂಭಗೊಂಡಿತು. ರೋಮೀಯ ಸೇನಾಧಿಕಾರಿಯಾದ ಕೊರ್ನೇಲ್ಯನೂ, ಅವನ ಕುಟುಂಬವೂ, ಸುನ್ನತಿಯಾಗದ ಯೆಹೂದ್ಯೇತರರು ಒಟ್ಟುಗೂಡಿಸಲ್ಪಟ್ಟವರಲ್ಲಿ ಮೊದಲನೆಯವರು. ಈ ಯೆಹೂದ್ಯೇತರರ ಒಟ್ಟುಗೂಡಿಸುವಿಕೆಯು, ಎಲ್ಲರೂ ಮೂಲ ಕರೆಗೆ ಓಗೊಡಲು ನಿರಾಕರಿಸಿದವರ ಸ್ಥಾನದಲ್ಲಿ ಬದಲಿಯಾಗಿ ಬಂದವರಾಗಿದ್ದು, ಅದು ಈ 20-ನೆಯ ಶತಮಾನದ ತನಕ ಮುಂದುವರಿದದೆ.
ಈ 20-ನೆಯ ಶತಮಾನದಲ್ಲಿ ಮದುವೆಯ ಸಂಭ್ರಮದ ಕೋಣೆಯು ತುಂಬಿಕೊಳ್ಳುತ್ತದೆ. ಅನಂತರ ಏನಾಯಿತು ಎಂದು ಯೇಸುವು ಹೇಳುತ್ತಾನೆ: “ಆ ಮೇಲೆ ಅರಸನು ಕೂತವರನ್ನು ನೋಡುವದಕ್ಕೆ ಒಳಕ್ಕೆ ಬರಲಾಗಿ ಮದುವೇಬಟ್ಟೆಯನ್ನು ಹಾಕಿಕೊಳ್ಳದ ಒಬ್ಬನನ್ನು ಕಂಡು ಅವನನ್ನು—ಏನಪ್ಪಾ, ಮದುವೆಯ ಬಟ್ಟೆ ಇಲ್ಲದೆ ನೀನಿಲ್ಲಿ ಹೇಗೆ ಒಳಕ್ಕೆ ಬಂದಿ ಎಂದು ಕೇಳಲು ಅವನು ಸುಮ್ಮನಿದ್ದನು. ಆ ಮೇಲೆ ಅರಸನು ಸೇವಕರಿಗೆ—ಅವನ ಕೈಕಾಲು ಕಟ್ಟಿ ಅವನನ್ನು ಹೊರಗೆ ಕತ್ತಲೆಗೆ ನೂಕಿರಿ ಎಂದು ಹೇಳಿದನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು.”
ಮದುವೆಯ ಬಟ್ಟೆಯಿಲ್ಲದ ವ್ಯಕ್ತಿಯು ಕ್ರೈಸ್ತ ಧರ್ಮದ ಖೋಟಾ ಕ್ರೈಸ್ತರನ್ನು ಚಿತ್ರಿಸುತ್ತಾನೆ. ಆತ್ಮಿಕ ಇಸ್ರಾಯೇಲ್ಯರೋಪಾದಿ ಯೋಗ್ಯವಾದ ಗುರುತು ಇವರಿಗಿದೆ ಎಂದು ದೇವರು ಅವರನ್ನು ಎಂದಿಗೂ ಅಂಗೀಕರಿಸಿರಲಿಲ್ಲ. ರಾಜ್ಯದ ಬಾಧ್ಯಸ್ಥರನ್ನಾಗಿ ದೇವರು ಅವರನ್ನು ಎಂದಿಗೂ ಪವಿತ್ರಾತ್ಮದಿಂದ ಅಭಿಪಷೇಕ ಮಾಡಿರಲಿಲ್ಲ. ಆದುದರಿಂದ ನಾಶನವನ್ನು ಹೊಂದುವ ಕತ್ತಲೆಯೊಳಗೆ ಅವರು ನೂಕಲ್ಪಟ್ಟರು.
ಯೇಸುವು ತನ್ನ ಸಾಮ್ಯವನ್ನು ಹೀಗನ್ನುತ್ತಾ ಸಮಾಪ್ತಿಗೊಳಿಸುತ್ತಾನೆ: “ಹೀಗೆ ಕರೆಯಲ್ಪಟ್ಟವರು ಬಹು ಜನ, ಆಯಲ್ಪಟ್ಟವರು ಸ್ವಲ್ಪ ಜನ.” ಹೌದು, ಕ್ರಿಸ್ತನ ಮದಲಗಿತ್ತಿಯ ಸದಸ್ಯರಾಗಲು ಇಸ್ರಾಯೇಲ್ ಜನಾಂಗದಿಂದ ಬಹುಮಂದಿಯನ್ನು ಕರೆಯಲಾಗಿತ್ತು, ಆದರೆ ಕೆಲವೇ ಮಾಂಸಿಕ ಇಸ್ರಾಯೇಲ್ಯರು ಆರಿಸಲ್ಪಟ್ಟರು. ಸ್ವರ್ಗೀಯ ಬಹುಮಾನ ಪಡೆಯುವ 1,44,000 ಮಂದಿ ಅತಿಥಿಗಳಲ್ಲಿ ಅಧಿಕ ಸಂಖ್ಯಾತರು ಇಸ್ರಾಯೇಲ್ಯರಲ್ಲದವರಾಗಿರುತ್ತಾರೆಂದು ರುಜುವಾಯಿತು. ಮತ್ತಾಯ 22:1-14; ವಿಮೋಚನಕಾಂಡ 19:1-6; ಪ್ರಕಟನೆ 14:1-3.
▪ ಮದುವೆಯ ಊಟಕ್ಕೆ ಮೂಲದಲ್ಲಿ ಆಮಂತ್ರಿಸಲ್ಪಟ್ಟವರು ಯಾರು, ಮತ್ತು ಅವರಿಗೆ ಈ ಆಮಂತ್ರಣವು ನೀಡಲ್ಪಟ್ಟದ್ದು ಯಾವಾಗ?
▪ ಆಮಂತ್ರಿತರಿಗೆ ಮೊದಲ ಕರೆಯು ಯಾವಾಗ ಕೊಡಲ್ಪಟ್ಟಿತು, ಮತ್ತು ಇದನ್ನು ಕೊಡಲು ಉಪಯೋಗಿಸಲ್ಪಟ್ಟ ಆಳುಗಳು ಯಾರು?
▪ ಎರಡನೆಯ ಕರೆಯು ಯಾವಾಗ ಕೊಡಲ್ಪಟ್ಟಿತು, ಮತ್ತು ಅನಂತರ ಯಾರನ್ನು ಅಮಂತ್ರಿಸಲಾಯಿತು?
▪ ಮದುವೆಯ ಬಟ್ಟೆಯಿಲ್ಲದ ವ್ಯಕ್ತಿಯಿಂದ ಯಾರು ಚಿತ್ರಿಸಲ್ಪಟ್ಟಿರುತ್ತಾನೆ?
▪ ಕರೆಯಲ್ಪಟ್ಟ ಬಹುಮಂದಿ ಮತ್ತು ಆಯಲ್ಪಟ್ಟ ಸ್ವಲ್ಪ ಜನ ಯಾರು?