ಯೆಹೂದ್ಯರ ಸಭಾಮಂದಿರ ಯೇಸು ಮತ್ತು ಆತನ ಶಿಷ್ಯರು ಸಾರಿದ ಸ್ಥಳ
“[ಯೇಸು] ಗಲಿಲಾಯದಾದ್ಯಂತ ಸಂಚರಿಸಿ ಅವರ ಸಭಾಮಂದಿರಗಳಲ್ಲಿ ಬೋಧಿಸುತ್ತಾ ರಾಜ್ಯದ ಸುವಾರ್ತೆಯನ್ನು ಸಾರುತ್ತಾ . . . ಬಂದನು.”—ಮತ್ತಾಯ 4:23.
ಸುವಾರ್ತಾ ಪುಸ್ತಕಗಳನ್ನು ನಾವು ಓದುವಾಗ, ಅನೇಕ ಸಲ ಯೇಸು ಸಭಾಮಂದಿರದಲ್ಲಿ ಇದ್ದನೆಂದು ನೋಡುತ್ತೇವೆ. ಆತನು ಬೆಳೆದು ದೊಡ್ಡವನಾದ ನಜರೇತ್ ಊರಿನಲ್ಲಿರಲಿ, ಮೂರುವರೆ ವರ್ಷಗಳ ಶುಶ್ರೂಷೆಯ ಕಾರ್ಯಮಗ್ನ ಸಮಯದಲ್ಲಿ ಹೆಚ್ಚಾಗಿ ಉಳುಕೊಳ್ಳುತ್ತಿದ್ದ ಕಪೆರ್ನೌಮ್ ಪಟ್ಟಣದಲ್ಲಿರಲಿ ಅಥವಾ ಭೇಟಿನೀಡಿದ ಯಾವುದೇ ಊರು ಹಳ್ಳಿಗಳಲ್ಲಿರಲಿ ಹೆಚ್ಚಾಗಿ ಅಲ್ಲಿದ್ದ ಸಭಾಮಂದಿರಗಳಿಗೆ ಹೋಗಿ ದೇವರ ರಾಜ್ಯದ ಕುರಿತು ಸಾರಿ ಬೋಧಿಸುತ್ತಿದ್ದನು. ಆತನು ತನ್ನ ಶುಶ್ರೂಷೆಯ ಕಡೆ ಹಿನ್ನೋಟ ಬೀರುತ್ತಾ ಅಂದದ್ದು: “ನಾನು ಯಾವಾಗಲೂ ಯೆಹೂದ್ಯರೆಲ್ಲರೂ ಕೂಡಿಬರುವ ಸಭಾಮಂದಿರಗಳಲ್ಲಿಯೂ ದೇವಾಲಯದಲ್ಲಿಯೂ ಬೋಧಿಸಿದ್ದೇನೆ.”—ಯೋಹಾನ 18:20.
ಯೇಸುವಿನಂತೆ ಆತನ ಅಪೊಸ್ತಲರು ಮತ್ತು ಆದಿ ಕ್ರೈಸ್ತರು ಕೂಡ ಅನೇಕವೇಳೆ ಯೆಹೂದ್ಯರ ಸಭಾಮಂದಿರಗಳಲ್ಲಿ (ಸಿನಗಾಗ್) ಬೋಧಿಸುತ್ತಿದ್ದರು. ಯೆಹೂದ್ಯರು ಸಭಾಮಂದಿರಗಳಲ್ಲಿ ಆರಾಧನೆಗಾಗಿ ಕೂಡಿಬರಲು ಆರಂಭಿಸಿದ್ದು ಹೇಗೆ? ಯೇಸುವಿನ ಸಮಯದಲ್ಲಿ ಆ ಆರಾಧನಾ ಸ್ಥಳಗಳು ಹೇಗಿದ್ದವು? ಈ ಬಗ್ಗೆ ನಾವೀಗ ಸೂಕ್ಷ್ಮವಾಗಿ ಪರಿಗಣಿಸೋಣ.
ಯೆಹೂದ್ಯರ ಜೀವನದ ಕೇಂದ್ರಬಿಂದು ಯೆರೂಸಲೇಮ್ ಪಟ್ಟಣದಲ್ಲಿದ್ದ ಪವಿತ್ರ ದೇವಾಲಯದಲ್ಲಿ ಜರಗುತ್ತಿದ್ದ ಹಬ್ಬಗಳಿಗೆ ಹಾಜರಾಗಲು ಯೆಹೂದಿ ಗಂಡಸರೆಲ್ಲರೂ ವರ್ಷಕ್ಕೆ ಮೂರು ಬಾರಿ ಯೆರೂಸಲೇಮಿಗೆ ಪ್ರಯಾಣಿಸುತ್ತಿದ್ದರು. ಆದರೆ ದೈನಂದಿನ ಆರಾಧನೆಗಾಗಿ ತಮ್ಮ ತಮ್ಮ ಊರುಗಳಲ್ಲಿದ್ದ ಸಭಾಮಂದಿರಗಳಿಗೆ ಹೋಗುತ್ತಿದ್ದರು. ಪ್ಯಾಲಸ್ತೀನ್ನಲ್ಲಿದ್ದ ಯೆಹೂದ್ಯರು ಮತ್ತು ಬೇರೆ ದೇಶಗಳಲ್ಲಿ ನೆಲೆಸಿದ್ದ ಯೆಹೂದಿ ಸಮುದಾಯದವರು ಹೀಗೇ ಮಾಡುತ್ತಿದ್ದರು.
ಆರಾಧನೆಗಾಗಿ ಸಭಾಮಂದಿರಗಳನ್ನು ಉಪಯೋಗಿಸುವುದು ಯಾವಾಗ ಆರಂಭವಾಯಿತು? ಯೆಹೂದ್ಯರು ಬಾಬೆಲಿನಲ್ಲಿ ಕೈದಿಗಳಾಗಿದ್ದಾಗ (ಕ್ರಿ.ಪೂ. 607-537) ಅಂದರೆ ಯೆರೂಸಲೇಮಿನಲ್ಲಿ ಯೆಹೋವ ದೇವರ ಆಲಯವು ಹಾಳುಬಿದ್ದಿದ್ದ ಅವಧಿಯಲ್ಲಿ ಆರಂಭವಾಗಿರಬಹುದೆಂದು ಕೆಲವರ ನಂಬಿಕೆ. ಅಥವಾ ಯೆಹೂದ್ಯರು ಬಾಬೆಲಿನ ಬಂದಿವಾಸದಿಂದ ಸ್ವದೇಶಕ್ಕೆ ಹಿಂದಿರುಗಿದ ನಂತರವೂ ಆಗಿರಬಹುದು. ಏಕೆಂದರೆ ಆ ಸಮಯದಲ್ಲಿ ಯಾಜಕ ಎಜ್ರನು ದೇವರ ನಿಯಮಗಳ ಕುರಿತು ಹೆಚ್ಚೆಚ್ಚು ಜ್ಞಾನ, ತಿಳುವಳಿಕೆಯನ್ನು ಪಡೆದುಕೊಳ್ಳುವಂತೆ ಸ್ವಜನರಿಗೆ ಉತ್ತೇಜನ ನೀಡಿದ್ದನು.—ಎಜ್ರ 7:10; 8:1-8; 10:3.
ಸಭಾಮಂದಿರ ಇಲ್ಲವೆ ಸಿನಗಾಗ್ ಎಂಬ ಪದದ ಮೂಲಾರ್ಥ “ಒಟ್ಟಾಗಿ ಸೇರುವುದು” ಅಥವಾ “ಸಭೆ” ಎಂದಾಗಿತ್ತು. ಹೀಬ್ರು ಶಾಸ್ತ್ರಗ್ರಂಥದ ಗ್ರೀಕ್ ಭಾಷಾಂತರವಾದ ಸೆಪ್ಟ್ಯುಅಜಿಂಟ್ನಲ್ಲೂ ಆ ಪದವನ್ನು ಆ ಅರ್ಥದಲ್ಲೇ ಬಳಸಲಾಗಿದೆ. ಆದರೆ ಕಾಲಕ್ರಮೇಣ ಆ ಪದವನ್ನು ಆರಾಧನೆಗಾಗಿ ಜನರು ಕೂಡಿಬರುತ್ತಿದ್ದ ಕಟ್ಟಡಕ್ಕೆ ಸೂಚಿಸಲು ಬಳಸಲಾಯಿತು. ಕ್ರಿ.ಶ. ಒಂದನೇ ಶತಮಾನದಷ್ಟಕ್ಕೆ, ಯೇಸು ಭೇಟಿನೀಡಿದ ಎಲ್ಲಾ ಊರುಗಳಲ್ಲೂ ಅದರದ್ದೇ ಆದ ಸಭಾಮಂದಿರವಿತ್ತು. ಪಟ್ಟಣಗಳಲ್ಲಂತೂ ಹಲವಾರು ಇದ್ದವು. ಹಾಗೆ ಯೆರೂಸಲೇಮ್ ಪಟ್ಟಣದಲ್ಲೂ ಹಲವಾರು ಸಭಾಮಂದಿರಗಳಿದ್ದವು. ಈ ಕಟ್ಟಡಗಳು ಹೇಗಿದ್ದವು?
ನಿರಾಡಂಬರದ ಆರಾಧನಾ ಸ್ಥಳ ಸಭಾಮಂದಿರಗಳನ್ನು ಕಟ್ಟಲು ಯೆಹೂದ್ಯರು ಸಾಮಾನ್ಯವಾಗಿ ಎತ್ತರದ ಪ್ರದೇಶವನ್ನು ಆರಿಸುತ್ತಿದ್ದರು. ಆ ಕಟ್ಟಡದ ಪ್ರವೇಶದ್ವಾರವನ್ನು (1) ಯೆರೂಸಲೇಮ್ನ ದಿಕ್ಕಿನ ಕಡೆ ಇಡುತ್ತಿದ್ದರು. ಆದರೆ ಇಂಥ ಮಟ್ಟಗಳನ್ನು ಯಾವಾಗಲೂ ಪಾಲಿಸಲು ಸಾಧ್ಯವಿಲ್ಲದ್ದರಿಂದ ಅವರು ತಮ್ಮ ಯೋಜನೆಗಳನ್ನು ಹೊಂದಿಸಿಕೊಳ್ಳುತ್ತಿದ್ದರೆಂದು ತೋರುತ್ತದೆ.
ಸಭಾಮಂದಿರ ಹೆಚ್ಚಾಗಿ ನಿರಾಡಂಬರದ್ದಾಗಿರುತ್ತಿತ್ತು. ಪೀಠೋಪಕರಣಗಳೂ ಹೆಚ್ಚು ಇರುತ್ತಿರಲಿಲ್ಲ. ಸಭಾಮಂದಿರದ ಪ್ರಧಾನ ವಸ್ತು ಒಂದು ಪೆಠಾರಿ ಅಥವಾ ಪೆಟ್ಟಿಗೆ (2) ಆಗಿತ್ತು. ಅದರಲ್ಲಿ ಯೆಹೂದ್ಯರ ಅತ್ಯಮೂಲ್ಯ ಆಸ್ತಿಯಾದ ಪವಿತ್ರ ಧರ್ಮಗ್ರಂಥದ ಸುರುಳಿಗಳನ್ನು ಇಡಲಾಗುತ್ತಿತ್ತು. ಆ ಪೆಟ್ಟಿಗೆಯನ್ನು ಇಡಲು ಒಂದು ಸುರಕ್ಷಿತ ಕೋಣೆ (3) ಇತ್ತು. ಕೂಟಗಳು ನಡೆಯುವಾಗ ಅಲ್ಲಿಂದ ಆ ಪೆಟ್ಟಿಗೆಯನ್ನು ತಂದು, ಮುಗಿದಾಗ ವಾಪಸ್ಸು ಇಡಲಾಗುತ್ತಿತ್ತು.
ಪೆಟ್ಟಿಗೆಯ ಪಕ್ಕಗಳಲ್ಲಿ, ಸಭಿಕರಿಗೆ ಮುಖಮಾಡಿ ಮುಖ್ಯ ಪೀಠಗಳು (4) ಇದ್ದವು. ಅಲ್ಲಿ ಸಭಾಮಂದಿರದ ಮೇಲ್ವಿಚಾರಕರು ಮತ್ತು ವಿಶೇಷ ಅತಿಥಿಗಳು ಕುಳಿತುಕೊಳ್ಳುತ್ತಿದ್ದರು. (ಮತ್ತಾಯ 23:5, 6) ಸಭಾಂಗಣದ ಮಧ್ಯಭಾಗಕ್ಕೆ ಹತ್ತಿರದಲ್ಲಿ ಸ್ವಲ್ಪ ಎತ್ತರವಾಗಿ ಒಂದು ವೇದಿಕೆ, ಆ ವೇದಿಕೆಯ ಮೇಲೆ ಭಾಷಣಕಾರನಿಗೆಂದು ಒಂದು ಸ್ಟ್ಯಾಂಡ್ ಮತ್ತು ಪೀಠ (5) ಇತ್ತು. ಸಭಿಕರು ಕುಳಿತುಕೊಳ್ಳುವಂತೆ ವೇದಿಕೆಗೆ ಮುಖಮಾಡಿ ಮೂರೂ ಬದಿಗಳಲ್ಲಿ ಬೆಂಚುಗಳಿದ್ದವು (6).
ಸಭಾಮಂದಿರದ ಕಾರ್ಯನಿರ್ವಹಣೆ ಮಾಡುತ್ತಿದ್ದದ್ದು, ಆರ್ಥಿಕ ಬೆಂಬಲ ನೀಡುತ್ತಿದ್ದದ್ದು ಸಾಮಾನ್ಯವಾಗಿ ಸ್ಥಳೀಯ ಸಭೆಯವರೇ. ಶ್ರೀಮಂತ ಬಡವರೆನ್ನದೆ ಎಲ್ಲರೂ ಸ್ವಪ್ರೇರಣೆಯಿಂದ ಕೊಡುತ್ತಿದ್ದ ಕಾಣಿಕೆಗಳಿಂದ ಕಟ್ಟಡವನ್ನು ಸುಸ್ಥಿತಿಯಲ್ಲಿಡಲಾಗುತ್ತಿತ್ತು ಮತ್ತು ದುರಸ್ತಿಗೊಳಿಸಲಾಗುತ್ತಿತ್ತು. ಈ ಸಭಾಮಂದಿರದಲ್ಲಿ ಕೂಟಗಳು ಹೇಗೆ ನಡೆಯುತ್ತಿದ್ದವು?
ಸಭಾಮಂದಿರದಲ್ಲಿ ನಡೆಯುತ್ತಿದ್ದ ಆರಾಧನೆ ಆರಾಧನೆಯಲ್ಲಿ ಸ್ತುತಿಗೀತೆ, ಪ್ರಾರ್ಥನೆ, ಶಾಸ್ತ್ರಗ್ರಂಥದ ಓದುವಿಕೆ ಇತ್ತು. ಬೋಧಿಸುವಿಕೆ, ಉಪದೇಶವೂ ಒಳಗೂಡಿತ್ತು. ಸಭೆಯು ಆರಂಭಗೊಳ್ಳುತ್ತಿದ್ದದ್ದು ‘ಶೆಮಾ’ ಎಂಬ ಯೆಹೂದಿ ಪ್ರಾರ್ಥನೆಯ ಪಠಣದೊಂದಿಗೆ. ಈ ಹೆಸರು ಮೂಲಭಾಷೆಯಲ್ಲಿ ಅವರು ಪಠಿಸುತ್ತಿದ್ದ ಮೊದಲ ವಚನದ ಮೊದಲ ಪದದಿಂದ ಬಂದಿದೆ: ‘ಕೇಳಿರಿ [ಶೆಮಾ] ಇಸ್ರಾಯೇಲ್ಯರೇ; ನಮ್ಮ ದೇವರಾದ ಯೆಹೋವನು ಒಬ್ಬನೇ ದೇವರು.’—ಧರ್ಮೋಪದೇಶಕಾಂಡ 6:4.
ಶೆಮಾ ಪಠಿಸಿದ ನಂತರ ಟೋರದಿಂದ ಒಂದು ಭಾಗವನ್ನು ಓದಿ ವಿವರಿಸಲಾಗುತ್ತಿತ್ತು. ಪ್ರವಾದಿ ಮೋಶೆ ಬರೆದ ಬೈಬಲಿನ ಮೊದಲ ಐದು ಪುಸ್ತಕಗಳೇ ಟೋರ. (ಅ. ಕಾರ್ಯಗಳು 15:21) ಇದಾದ ಮೇಲೆ, ಪ್ರವಾದಿಗಳ ಬರಹಗಳಿಂದ (ಹಫ್ತಾರಾಸ್) ಭಾಗಗಳನ್ನು ಓದಿ, ಅರ್ಥವಿವರಣೆ ನೀಡಿ, ಅನ್ವಯವನ್ನೂ ತಿಳಿಸಲಾಗುತ್ತಿತ್ತು. ಈ ಭಾಗವನ್ನು ಕೆಲವೊಮ್ಮೆ ಅತಿಥಿ ಭಾಷಣಕಾರರು ನಡೆಸಿಕೊಡುತ್ತಿದ್ದರು. ಯೇಸು ಹೀಗೆ ಮಾಡಿದ್ದನ್ನು ಲೂಕ 4:16-21ರಲ್ಲಿ ನಾವು ಓದಬಹುದು.
ಆ ಸಮಯದಲ್ಲಿ ಯೇಸುವಿನ ಕೈಗೆ ಕೊಡಲಾಗಿದ್ದ ಸುರುಳಿಯಲ್ಲಿ ಇಂದಿರುವ ಬೈಬಲ್ಗಳಲ್ಲಿ ಇರುವಂತೆ ಅಧ್ಯಾಯಗಳ ಮತ್ತು ವಚನಗಳ ಗುರುತಿರಲಿಲ್ಲ. ಆದ್ದರಿಂದ ಯೇಸು ತಾನು ಓದಬೇಕೆಂದಿದ್ದ ಭಾಗವನ್ನು ತೆರೆಯಲಿಕ್ಕಾಗಿ ಒಂದೆಡೆ ತನ್ನ ಎಡಗೈಯಿಂದ ಸುರುಳಿಯನ್ನು ಬಿಡಿಸುತ್ತಾ ಇನ್ನೊಂದೆಡೆ ಬಲಗೈಯಲ್ಲಿ ಸುತ್ತುತ್ತಾ ಇರುವುದನ್ನು ನಾವು ಊಹಿಸಿಕೊಳ್ಳಬಹುದು. ಓದಿದ ಬಳಿಕ ಸುರುಳಿಯನ್ನು ಆರಂಭದ ಭಾಗಕ್ಕೆ ತಿರುಗಿಸಿ ಸುತ್ತಿಡಬೇಕಾಗಿತ್ತು.
ಹೆಚ್ಚಾಗಿ ಈ ಭಾಗಗಳನ್ನು ಮೂಲ ಹೀಬ್ರು ಭಾಷೆಯಲ್ಲಿ ಓದಿ ಆರಮೇಯಿಕ್ ಭಾಷೆಗೆ ಭಾಷಾಂತರಿಸಲಾಗುತ್ತಿತ್ತು. ಗ್ರೀಕ್ ಭಾಷೆಯ ಸಭೆಗಳಲ್ಲಿ ಸೆಪ್ಟ್ಯುಅಜಿಂಟ್ ಅನ್ನು ಬಳಸಲಾಗುತ್ತಿತ್ತು.
ದಿನನಿತ್ಯದ ಜೀವನದಲ್ಲಿ ಅದಕ್ಕಿದ್ದ ಮಹತ್ವ ಯೆಹೂದ್ಯರ ದಿನನಿತ್ಯದ ಬದುಕಿನಲ್ಲಿ ಸಭಾಮಂದಿರ ತುಂಬ ಮಹತ್ವದ ಪಾತ್ರವಹಿಸಿತ್ತು. ಎಷ್ಟೆಂದರೆ ಸಭಾಮಂದಿರಕ್ಕೆ ತಾಗಿ ಅಥವಾ ಅದೇ ಸಂಕೀರ್ಣದಲ್ಲಿದ್ದ ಇನ್ನಿತರ ಕಟ್ಟಡಗಳನ್ನು ಸೇರಿಸಿ ಅದನ್ನು ಬೇರೆ ಬೇರೆ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. ಕೆಲವೊಮ್ಮೆ ಅಲ್ಲಿ ನ್ಯಾಯವಿಚಾರಣೆಗಳು ನಡೆಯುತ್ತಿದ್ದವು. ಅಲ್ಲಿ ಯೆಹೂದ್ಯರ ಇನ್ನಿತರ ಸಾಮಾಜಿಕ ಕೂಟಗಳನ್ನೂ ಸಮ್ಮೇಳನಗಳನ್ನೂ ನಡೆಸಲಾಗುತ್ತಿತ್ತು ಮತ್ತು ಕಟ್ಟಡದಲ್ಲೇ ಇದ್ದ ಭೋಜನಶಾಲೆಯಲ್ಲಿ ಊಟದ ವ್ಯವಸ್ಥೆಯನ್ನೂ ಮಾಡಲಾಗುತ್ತಿತ್ತು. ಪ್ರಯಾಣಿಕರು ತಂಗಲು ಸಭಾಮಂದಿರದ ಕಟ್ಟಡದಲ್ಲಿ ಕೋಣೆಗಳಿದ್ದವು.
ಅಷ್ಟೇ ಅಲ್ಲ ಪ್ರತಿಯೊಂದು ಊರಲ್ಲಿದ್ದ ಸಭಾಮಂದಿರದ ಕಟ್ಟಡದಲ್ಲೇ ಹೆಚ್ಚಾಗಿ ಒಂದು ಶಾಲೆಯೂ ಇರುತ್ತಿತ್ತು. ಒಂದು ಕೋಣೆಯ ತುಂಬ ಮಕ್ಕಳು ಕುಳಿತು, ಮೇಣದ ಹಲಗೆಯ ಮೇಲೆ ಅಧ್ಯಾಪಕನು ಬರೆದಿರುವ ದೊಡ್ಡ ದೊಡ್ಡ ಅಕ್ಷರಗಳನ್ನು ಓದಲು ಕಲಿಯುತ್ತಿರುವುದನ್ನು ನಾವು ಕಲ್ಪಿಸಿಕೊಳ್ಳಬಹುದು. ಈ ರೀತಿಯ ಶಾಲೆಗಳಿಂದಾಗಿ ಪ್ರಾಚೀನ ಯೆಹೂದ್ಯರು ಅಕ್ಷರಸ್ಥರಾಗಿದ್ದರು, ಸಾಮಾನ್ಯ ಜನರಿಗೂ ಶಾಸ್ತ್ರಗ್ರಂಥಗಳ ಪರಿಚಯವಿತ್ತು.
ಆದರೆ ಮುಖ್ಯವಾಗಿ ಸಭಾಮಂದಿರಗಳನ್ನು ಕ್ರಮವಾಗಿ ನಡೆಯುವ ಆರಾಧನೆಗಾಗಿ ಬಳಸಲಾಗುತ್ತಿತ್ತು. ಹೀಗಿರುವುದರಿಂದ ಅವುಗಳಲ್ಲಿ ನಡೆಯುತ್ತಿದ್ದ ಯೆಹೂದ್ಯರ ಕೂಟಗಳಿಗೂ ಒಂದನೇ ಶತಮಾನದ ಕ್ರೈಸ್ತರ ಕೂಟಗಳಿಗೂ ಹೋಲಿಕೆಗಳಿದ್ದದ್ದು ಆಶ್ಚರ್ಯಕರವಲ್ಲ. ಕ್ರೈಸ್ತ ಕೂಟಗಳ ಉದ್ದೇಶವೂ ಪ್ರಾರ್ಥನೆ, ಸ್ತುತಿಗೀತೆ ಮತ್ತು ದೇವರ ವಾಕ್ಯವನ್ನು ಓದಿ ಚರ್ಚಿಸುವ ಮೂಲಕ ಯೆಹೋವನನ್ನು ಆರಾಧಿಸುವುದೇ ಆಗಿತ್ತು. ಇನ್ನಿತರ ಹೋಲಿಕೆಗಳೂ ಇವೆ. ಆ ಎರಡೂ ಆರಾಧನಾ ಸ್ಥಳಗಳಲ್ಲಿ ಸ್ವಯಂ ಪ್ರೇರಿತ ಕಾಣಿಕೆಗಳಿಂದ ಬೇರೆ ಬೇರೆ ಅಗತ್ಯಗಳನ್ನು ಪೂರೈಸಲಾಗುತ್ತಿತ್ತು ಮತ್ತು ಖರ್ಚುಗಳನ್ನು ಭರಿಸಲಾಗುತ್ತಿತ್ತು. ಮಾತ್ರವಲ್ಲ ಅವೆರಡರಲ್ಲಿಯೂ ದೇವರ ವಾಕ್ಯವನ್ನು ಓದಿ ಚರ್ಚಿಸಲಿಕ್ಕಾಗಿ ಧರ್ಮಗುರುಗಳ ಪ್ರತ್ಯೇಕ ಗುಂಪಿರಲಿಲ್ಲ. ಕೂಟಗಳನ್ನು ಸಂಘಟಿಸಿ ನಿರ್ದೇಶಿಸಲಿಕ್ಕಾಗಿ ಜವಾಬ್ದಾರಿಯುತ ಹಿರೀಪುರುಷರಿದ್ದರು.
ಯೇಸು ಮತ್ತು ಆತನ ಒಂದನೇ ಶತಮಾನದ ಹಿಂಬಾಲಕರು ಇಟ್ಟ ಮಾದರಿಯನ್ನೇ ನಿಕಟವಾಗಿ ಪಾಲಿಸಲು ಇಂದು ಯೆಹೋವನ ಸಾಕ್ಷಿಗಳು ಯತ್ನಿಸುತ್ತಾರೆ. ಅವರ ಸಭಾಗೃಹಗಳಲ್ಲಿ ನಡೆಯುವ ಕೂಟಗಳಲ್ಲೂ ಪ್ರಾಚೀನ ಸಭಾಮಂದಿರಗಳಲ್ಲಿ ನಡೆಯುತ್ತಿದ್ದ ಕೂಟಗಳ ಕೆಲವು ವೈಶಿಷ್ಟ್ಯಗಳಿವೆ. ಎಲ್ಲಕ್ಕಿಂತ ಮಿಗಿಲಾಗಿ ಸಾಕ್ಷಿಗಳು ಒಟ್ಟಾಗಿ ಕೂಡಿಬರುವುದು ಸತ್ಯಪ್ರಿಯರಿಗೆ ಹಿಂದಿನಿಂದಲೂ ಇದ್ದ ಅದೇ ಉದ್ದೇಶದಿಂದ. ಅದು, ‘ದೇವರ ಸಮೀಪಕ್ಕೆ ಬರುವುದೇ’ ಆಗಿದೆ.—ಯಾಕೋಬ 4:8. (w10-E 04/01)
[ಪುಟ 16, 17ರಲ್ಲಿರುವ ಚಿತ್ರ]
ಇದು ಒಂದನೇ ಶತಮಾನದ ಗಾಮ್ಲಾ ಸಭಾಮಂದಿರದ ನಕ್ಷೆಯ ಆಧಾರಿತ ಪುನರ್ರಚನೆ
[ಪುಟ 18ರಲ್ಲಿರುವ ಚಿತ್ರ]
ಸಭಾಮಂದಿರದ ಶಾಲೆಗಳಲ್ಲಿ 6-13ರ ವಯಸ್ಸಿನ ಹುಡುಗರಿಗೆ ಶಿಕ್ಷಣ ಕೊಡಲಾಗುತ್ತಿತ್ತು