ಕಪಟತನ ನೀವು ಅದನ್ನು ಹೇಗೆ ನಿಭಾಯಿಸುತ್ತೀರಿ?
ಗೆತ್ಸೇಮನೆ ತೋಟದಲ್ಲಿ ಇಸ್ಕರಿಯೋತ ಯೂದನು ಯೇಸುವಿನ ಬಳಿಗೆ ಹೋಗಿ “ಆತನಿಗೆ ಮುದ್ದಿಟ್ಟನು.” ಸಾಮಾನ್ಯವಾಗಿ, ಇದು ಕೋಮಲ ಪ್ರೀತಿಯ ಒಂದು ಸಾಂಪ್ರದಾಯಿಕ ವ್ಯಕ್ತಪಡಿಸುವಿಕೆಯಾಗಿರುತ್ತಿತ್ತು. ಆದರೆ ಯೂದನ ಭಾವಾಭಿನಯವು, ರಾತ್ರಿ ವೇಳೆಯಲ್ಲಿ ಯೇಸುವನ್ನು ಹಿಡಿಯಲಿಕ್ಕಾಗಿ ಬಂದಿದ್ದವರಿಗೆ ಅವನ ಗುರುತನ್ನು ಸೂಚಿಸಲಿಕ್ಕಾಗಿ ಮಾಡಿದ ನಾಟಕವಾಗಿತ್ತು. (ಮತ್ತಾಯ 26:48, 49) ಯೂದನು ಒಬ್ಬ ಕಪಟಿಯಾಗಿದ್ದನು. ಕಪಟಿಯಾಗಿರುವ ಒಬ್ಬ ವ್ಯಕ್ತಿಯು ತನ್ನ ನಿಜ ಬಣ್ಣವನ್ನು ತೋರ್ಪಡಿಸುವುದಿಲ್ಲ, ಅವನು ತನ್ನ ಕೆಟ್ಟ ಹೇತುಗಳನ್ನು ಪ್ರಾಮಾಣಿಕತೆಯ ಮುಖವಾಡದ ಹಿಂದೆ ಮರೆಮಾಡುತ್ತಾನೆ. “ಕಪಟಿ” ಎಂದು ತರ್ಜುಮೆಮಾಡಲ್ಪಟ್ಟಿರುವ ಗ್ರೀಕ್ ಶಬ್ದದ ಅರ್ಥ, “ಉತ್ತರಕೊಡುವಾತನು” ಎಂದಾಗಿದೆ ಮತ್ತು ಇದು ಒಬ್ಬ ರಂಗ ನಟನಿಗೂ ಸೂಚಿತವಾಗಿದೆ. ಸಕಾಲದಲ್ಲಿ ಈ ಶಬ್ದವನ್ನು, ಇತರರನ್ನು ವಂಚಿಸಲಿಕ್ಕಾಗಿ ಸೋಗುಹಾಕಿಕೊಳ್ಳುವ ಯಾವನೇ ವ್ಯಕ್ತಿಯನ್ನು ಸೂಚಿಸಲು ಉಪಯೋಗಿಸಲಾಯಿತು.
ನೀವು ಕಪಟತನಕ್ಕೆ ಹೇಗೆ ಪ್ರತಿಕ್ರಿಯಿಸುತ್ತೀರಿ? ಉದಾಹರಣೆಗೆ, ಸಿಗರೇಟ್ ಉತ್ಪಾದಕರ ಉತ್ಪನ್ನವು ತುಂಬ ಹಾನಿಕರವಾದದ್ದಾಗಿದೆ ಎಂದು ವೈದ್ಯಕೀಯ ಪುರಾವೆಗಳು ರುಜುಪಡಿಸುತ್ತವಾದರೂ, ಆ ಉತ್ಪಾದಕರು ಧೂಮಪಾನವನ್ನು ಉತ್ತೇಜಿಸುವುದನ್ನು ನೀವು ನೋಡುವಾಗ ನಿಮಗೆ ಕೋಪಬರುತ್ತದೋ? ತಮ್ಮ ವಶಕ್ಕೆ ಒಪ್ಪಿಸಲ್ಪಟ್ಟಿರುವವರನ್ನು ದುರುಪಚರಿಸುವ ಗೃಹಪಾಲಕರ ಕಪಟಭಾವವನ್ನು ನೋಡಿ ನೀವು ರೋಷಗೊಳ್ಳುತ್ತೀರೋ? ನೀವು ತುಂಬ ಪ್ರಾಮಾಣಿಕನೆಂದು ಪರಿಗಣಿಸಿದ್ದ ಒಬ್ಬ ಸ್ನೇಹಿತನು ವಿಶ್ವಾಸಘಾತುಕನಾಗಿ ಪರಿಣಮಿಸುವಾಗ ನಿಮ್ಮ ಮನಸ್ಸಿಗೆ ನೋವಾಗುತ್ತದೋ? ಧಾರ್ಮಿಕ ಕಪಟತನವು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರುತ್ತದೆ?
‘ಅಯ್ಯೋ, ಕಪಟಿಗಳೇ!’
ಯೇಸು ಭೂಮಿಯಲ್ಲಿದ್ದಾಗ ಅಸ್ತಿತ್ವದಲ್ಲಿದ್ದ ಧಾರ್ಮಿಕ ವಾತಾವರಣವನ್ನು ಪರಿಗಣಿಸಿರಿ. ಶಾಸ್ತ್ರಿಗಳು ಮತ್ತು ಫರಿಸಾಯರು ದೇವರ ಧರ್ಮಶಾಸ್ತ್ರದ ನಿಷ್ಠಾವಂತ ಬೋಧಕರೆಂಬಂತೆ ನಟಿಸುತ್ತಿದ್ದರೂ, ವಾಸ್ತವದಲ್ಲಿ ಅವರು ದೇವರಿಂದ ವಿಮುಖಗೊಳಿಸುವಂತಹ ಮಾನವ ಬೋಧನೆಗಳನ್ನು ಜನರ ಮನಸ್ಸುಗಳಲ್ಲಿ ತುಂಬಿಸಿದರು. ಶಾಸ್ತ್ರಿಗಳು ಮತ್ತು ಫರಿಸಾಯರು ನಿಯಮದ ಶಬ್ದಾರ್ಥವನ್ನು ಬಹು ನಿಷ್ಠೆಯಿಂದ ಪಾಲಿಸುವಂತೆ ಒತ್ತಾಯಿಸುತ್ತಿದ್ದರಾದರೂ, ಪ್ರೀತಿ ಮತ್ತು ಸಹಾನುಭೂತಿಯನ್ನು ತೋರಿಸುವಂತಹ ಮೂಲಭೂತ ತತ್ತ್ವಗಳನ್ನು ಅವರು ಕಡೆಗಣಿಸಿದರು. ಸಾರ್ವಜನಿಕರ ಮುಂದೆ ಅವರು ದೇವರ ಭಕ್ತರಾಗಿ ನಟಿಸಿದರೂ, ಅವರ ಖಾಸಗಿ ಜೀವನವು ಕೆಟ್ಟತನದಿಂದ ತುಂಬಿತ್ತು. ಅವರ ಕೃತ್ಯಗಳು ಅವರ ಮಾತುಗಳೊಂದಿಗೆ ಹೊಂದಿಕೆಯಲ್ಲಿರಲಿಲ್ಲ. ಈ ರೀತಿ ಮಾಡುವುದರಲ್ಲಿನ ಅವರ ಹೇತುವು, ‘ಜನರಿಗೆ ಕಾಣಬೇಕೆಂಬುದೇ’ ಆಗಿತ್ತು. ಅವರು ‘ಸುಣ್ಣ ಹಚ್ಚಿದ ಸಮಾಧಿಗಳಿಗೆ ಹೋಲುತ್ತಿದ್ದರು; ಇವು ಹೊರಗೆ ಚಂದವಾಗಿ ಕಾಣುತ್ತವೆ. ಒಳಗೆ ನೋಡಿದರೆ ಸತ್ತವರ ಎಲುಬುಗಳಿಂದಲೂ ಎಲ್ಲಾ ಹೊಲಸಿನಿಂದಲೂ ತುಂಬಿರುತ್ತವೆ.’ ಅವರ ಕಪಟತನವನ್ನು ಧೈರ್ಯವಾಗಿ ಬಯಲುಪಡಿಸುತ್ತಾ, “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ” ಎಂದು ಯೇಸು ಅವರಿಗೆ ಪುನಃ ಪುನಃ ಹೇಳಿದನು.—ಮತ್ತಾಯ 23:5, 13-31.
ನೀವು ಆ ದಿನಗಳಲ್ಲಿ ಜೀವಿಸಿರುತ್ತಿದ್ದಲ್ಲಿ, ಇತರ ಪ್ರಾಮಾಣಿಕ ಹೃದಯದ ಜನರಂತೆಯೇ ನೀವು ಸಹ ಧಾರ್ಮಿಕ ಕಪಟತನವನ್ನು ನೋಡಿ ನಿಜವಾಗಿಯೂ ಹೇಸಿಗೆಪಡುತ್ತಿದ್ದಿರೋ ಏನೋ. (ರೋಮಾಪುರ 2:21-24; 2 ಪೇತ್ರ 2:1-3) ಆದರೆ ಶಾಸ್ತ್ರಿಗಳು ಮತ್ತು ಫರಿಸಾಯರ ಕಪಟ ಮನೋಭಾವವು, ಯೇಸು ಕ್ರಿಸ್ತನಿಂದ ಮತ್ತು ಅವನ ಶಿಷ್ಯರಿಂದ ಕಲಿಸಲ್ಪಟ್ಟ ಹಾಗೂ ಆಚರಿಸಲ್ಪಟ್ಟ ಧರ್ಮವನ್ನೂ ಒಳಗೊಂಡು ಎಲ್ಲ ಧರ್ಮಗಳನ್ನು ತಿರಸ್ಕರಿಸುವಂತೆ ನೀವು ಬಿಡುತ್ತಿದ್ದಿರೋ? ಒಂದುವೇಳೆ ಹಾಗೆ ಮಾಡುತ್ತಿದ್ದಲ್ಲಿ ಅದು ನಿಮಗೇ ನಷ್ಟಕರವಾಗಿರುತ್ತಿರಲಿಲ್ಲವೋ?
ಧಾರ್ಮಿಕ ಜನರ ಕಪಟ ನಡವಳಿಕೆಯು, ಹೇಸಿಗೆಯ ಭಾವನೆಯಿಂದಾಗಿ ನಾವು ಧರ್ಮವನ್ನು ಬಿಟ್ಟು ದೂರ ಹೋಗುವಂತೆ ಮಾಡಬಹುದು. ಈ ಪ್ರತಿಕ್ರಿಯೆಯು ಸತ್ಯಾರಾಧಕರ ಪ್ರಾಮಾಣಿಕತೆಯನ್ನು ವಿವೇಚಿಸದಂತೆ ನಮ್ಮನ್ನು ಕುರುಡರನ್ನಾಗಿ ಮಾಡಸಾಧ್ಯವಿದೆ. ಕಪಟತನದ ವಿರುದ್ಧ ರಕ್ಷಣೆಗಾಗಿ ನಾವು ಕಟ್ಟಿಕೊಳ್ಳುವ ತಡೆಗಳೇ, ನಿಜವಾದ ಸ್ನೇಹಿತರಿಂದಲೂ ನಮ್ಮನ್ನು ವಿಮುಖಗೊಳಿಸಬಹುದು. ಆದುದರಿಂದ, ಕಪಟತನಕ್ಕೆ ನಾವು ತೋರಿಸುವ ಪ್ರತಿಕ್ರಿಯೆಯು ನ್ಯಾಯಬದ್ಧವಾಗಿರಬೇಕು ಮತ್ತು ಸಮತೂಕವುಳ್ಳದ್ದಾಗಿರಬೇಕು.
“ನಿಮ್ಮ ಕಣ್ಣುಗಳನ್ನು ತೆರೆದಿಡಿ”
ಮೊದಲಾಗಿ, ನಾವು ಕಪಟಿಗಳನ್ನು ಗುರುತಿಸಲು ಕಲಿಯಬೇಕು. ಇದು ಯಾವಾಗಲೂ ಸುಲಭವಾಗಿರುವುದಿಲ್ಲ. ಒಂದು ಕುಟುಂಬವು ತುಂಬ ಬೆಲೆಯನ್ನು ತೆತ್ತು ಈ ಪಾಠವನ್ನು ಕಲಿಯಿತು. ಈ ಕುಟುಂಬದ ತಾಯಿಯು, ಕೋಮ ಎಂದು ಕರೆಯಲ್ಪಡುವ ಅತಿಸುಪ್ತಿಯ ಸ್ಥಿತಿಯಲ್ಲಿದ್ದರು. ಆಸ್ಪತ್ರೆಯ ಉದಾಸೀನತೆಯಿಂದಾಗಿ ಹೀಗೆ ಸಂಭವಿಸಿತೆಂದು, ಆಸ್ಪತ್ರೆಯ ವಿರುದ್ಧ ಮೊಕದ್ದಮೆಯನ್ನು ಹೂಡಲಿಕ್ಕಾಗಿ ಕುಟುಂಬವು ಒಬ್ಬ ವಕೀಲನನ್ನು ಗೊತ್ತುಪಡಿಸಿಕೊಂಡಿತು. ಈ ವಕೀಲನು ಸ್ಥಳಿಕ ಚರ್ಚಿನ ಒಬ್ಬ ಪಾದ್ರಿಯೂ ಆಗಿದ್ದನು. ಮೊಕದ್ದಮೆಯ ಫೈಸಲಿನಂತೆ, ಆ ಆಸ್ಪತ್ರೆಯು 34 ಲಕ್ಷ ಡಾಲರುಗಳನ್ನು ನೀಡಿದರೂ, ಕುಟುಂಬದ ದುರಂತವು ಇನ್ನಷ್ಟು ಹದಗೆಟ್ಟಿತು. ಆ ತಾಯಿ ಭಿಕಾರಿಯಂತೆ ಸತ್ತಳು ಮತ್ತು ಅವಳ ಶವಸಂಸ್ಕಾರಕ್ಕೂ ಅವರ ಬಳಿ ಹಣವಿರಲಿಲ್ಲ. ಏಕೆ? ಏಕೆಂದರೆ ಆ ವಕೀಲನು ಅಧಿಕಾಂಶ ಹಣವನ್ನು ತನ್ನ ಜೇಬಿಗೆ ಇಳಿಸಿಕೊಂಡಿದ್ದನು. ಈ ವಕೀಲನ ಕುರಿತು ಒಂದು ಕಾನೂನುಸಂಬಂಧಿತ ಪತ್ರಿಕೆಯು ಹೇಳಿದ್ದು: “ಅವನು ರೂಢಿಸಿಕೊಂಡಿದ್ದಂಥ ನಡತೆಯನ್ನೇ ಅವನು ವೇದಿಕೆಯಿಂದ ಸಾರುತ್ತಿದ್ದಲ್ಲಿ . . . , ಅವನ ಸಂದೇಶವು ಹೀಗಿರುತ್ತಿತ್ತು: ನಾವೀಗ ಭಕ್ಷಿಸೋಣ.” ಅಂತಹ ಜನರಿಂದ ನಾವು ನಮ್ಮನ್ನು ಹೇಗೆ ಸಂರಕ್ಷಿಸಿಕೊಳ್ಳಸಾಧ್ಯವಿದೆ?
ತನ್ನ ದಿನದಲ್ಲಿ ಧಾರ್ಮಿಕ ಕಪಟತನವನ್ನು ಎದುರಿಸುತ್ತಿದ್ದವರಿಗೆ ಯೇಸು, “ನಿಮ್ಮ ಕಣ್ಣುಗಳನ್ನು ತೆರೆದಿಡಿ” ಎಂಬ ಬುದ್ಧಿವಾದವನ್ನು ನೀಡಿದನು. (ಮತ್ತಾಯ 16:6, NW; ಲೂಕ 12:1) ಹೌದು, ನಾವು ಯಾವಾಗಲೂ ಜಾಗರೂಕರಾಗಿರಬೇಕು. ಜನರು ಉದಾತ್ತ ಗುರಿಗಳನ್ನು ಇಟ್ಟುಕೊಂಡಿದ್ದೇವೆಂದು ಹೇಳಿಕೊಳ್ಳಬಹುದು ಮತ್ತು ಪ್ರಾಮಾಣಿಕತೆಯನ್ನು ಹೊರಸೂಸಬಹುದು, ಆದರೆ ನಾವು ಗಮನಾರ್ಹ ಮಟ್ಟಿಗೆ ಜಾಗರೂಕರಾಗಿರಬೇಕು ಮತ್ತು ಒಂದೇ ಏಟಿಗೆ ಎಂಬಂತೆ ಎಲ್ಲರನ್ನೂ ಆ ಕೂಡಲೆ ಅಂಗೀಕರಿಸುವುದರಿಂದ ದೂರವಿರಬೇಕು. ಏಕೆಂದರೆ, ಖೋಟಾನೋಟು ಚಲಾವಣೆಯಲ್ಲಿದೆ ಎಂಬುದು ನಮಗೆ ಒಂದುವೇಳೆ ತಿಳಿದುಬರುವಲ್ಲಿ, ನಮ್ಮ ಬ್ಯಾಂಕ್ ನೋಟುಗಳನ್ನು ನಾವು ಜಾಗರೂಕತೆಯಿಂದ ಪರೀಕ್ಷಿಸುವುದಿಲ್ಲವೋ?
ಸತ್ಯ ಕ್ರೈಸ್ತ ಸಭೆಯಲ್ಲಿಯೂ ಕಪಟಿಗಳು ಕಂಡುಬಂದಿದ್ದಾರೆ. ಅವರ ಕುರಿತು ಶಿಷ್ಯ ಯಾಕೋಬನು ಎಚ್ಚರಿಕೆ ನೀಡುತ್ತಾ ಹೇಳಿದ್ದು: “ಇವರು ಸಮುದ್ರದೊಳಗಿರುವ ಗುಪ್ತವಾದ ಬಂಡೆಗಳಂತಿದ್ದು ನಿಮ್ಮ ಪ್ರೇಮಭೋಜನಗಳಲ್ಲಿ ಸೇರಿ ತಿಂದು ಕುಡಿಯುತ್ತಾರೆ; ನಿರ್ಭಯವಾಗಿ ಸ್ವಂತ ಹೊಟ್ಟೆಯನ್ನೇ ನೋಡಿಕೊಳ್ಳುವ ಕುರುಬರಾಗಿದ್ದಾರೆ. ಇವರು ಗಾಳಿಯಿಂದ ಹೊಡಿಸಿಕೊಂಡು ಹೋಗುವ ನೀರಿಲ್ಲದ ಮೇಘಗಳೂ, ಎಲೆಗಳುದುರಿ ಹಣ್ಣು ಬಿಡದೆ ಒಣಗಿಹೋಗಿ ಬೇರು ಸಹಿತ ಕಿತ್ತು ಬಿದ್ದ ಮರಗಳೂ” ಆಗಿದ್ದಾರೆ.—ಯೂದ 12.
‘ನಮ್ಮ ಕಣ್ಣುಗಳನ್ನು ತೆರೆದಿಡುವುದರ’ ಅರ್ಥ, ಯಾರು ಪ್ರೀತಿಭರಿತರಾಗಿರುವಂತೆ ನಟಿಸುತ್ತಿದ್ದು, ವಾಸ್ತವದಲ್ಲಿ ಸ್ವಾರ್ಥಮಗ್ನರೂ ದೇವರ ವಾಕ್ಯದ ಮೇಲಾಧಾರಿತವಲ್ಲದ ಅಭಿಪ್ರಾಯಗಳನ್ನು ಉತ್ತೇಜಿಸುವವರೂ ಆಗಿರುತ್ತಾರೋ ಅಂಥವರಿಂದ ವಂಚಿಸಲ್ಪಡುವುದರಿಂದ ದೂರವಿರುವುದು ಎಂದಾಗಿದೆ. ಪ್ರಶಾಂತವಾದ ನೀರಿನ ಮೇಲ್ಮೈಯ ಕೆಳಗಿರುವ ಮೊನಚಾದ ಬಂಡೆಯೋಪಾದಿ, ಅಂತಹ ವ್ಯಕ್ತಿಯು ಅಜಾಗರೂಕ ಜನರಿಗೆ ಆತ್ಮಿಕ ನಷ್ಟವನ್ನು ಉಂಟುಮಾಡಸಾಧ್ಯವಿದೆ. (1 ತಿಮೊಥೆಯ 1:19) ಆ ಕಪಟಿಯು ಬಹಳಷ್ಟು ಆತ್ಮಿಕ ಚೈತನ್ಯದ ಭರವಸೆ ನೀಡುವುದಾದರೂ, ಅವನು ಮಳೆಯನ್ನೇ ಉತ್ಪಾದಿಸದಿರುವಂತಹ ‘ನೀರಿಲ್ಲದ ಮೇಘವಾಗಿ’ ಪರಿಣಮಿಸಬಹುದು. ಹಣ್ಣು ಬಿಡದಿರುವಂತಹ ಮರದೋಪಾದಿ, ಒಬ್ಬ ವಂಚಕನು ನಿಜವಾದ ಕ್ರೈಸ್ತ ಫಲವನ್ನು ಉತ್ಪಾದಿಸದಿರಬಹುದು. (ಮತ್ತಾಯ 7:15-20; ಗಲಾತ್ಯ 5:19-21) ಹೌದು, ಅಂತಹ ವಂಚಕರ ವಿರುದ್ಧ ನಾವು ಯಾವಾಗಲೂ ಜಾಗರೂಕರಾಗಿರಬೇಕು. ಆದರೆ, ಹಾಗೆ ಮಾಡುವಾಗ ಪ್ರತಿಯೊಬ್ಬರ ಹೇತುಗಳನ್ನು ಸಂದೇಹಾಸ್ಪದವಾಗಿ ನೋಡಬಾರದು.
“ತೀರ್ಪು ಮಾಡಬೇಡಿರಿ”
ಅಪರಿಪೂರ್ಣ ಮಾನವರು ತಮ್ಮ ಸ್ವಂತ ತಪ್ಪುಗಳನ್ನು ಅಲಕ್ಷಿಸುತ್ತಾ, ಬೇರೆಯವರ ತಪ್ಪುಗಳಿಗೆ ಕೈತೋರಿಸುವುದು ಎಷ್ಟು ಸುಲಭ! ಆದರೂ, ಈ ಪ್ರವೃತ್ತಿಯು ನಾವು ಕಪಟತನಕ್ಕೆ ಸುಲಭವಾಗಿ ಬಲಿಬೀಳುವಂತೆ ಮಾಡುತ್ತದೆ. ಯೇಸು ಹೇಳಿದ್ದು: “ಕಪಟಿಯೇ, ಮೊದಲು ನಿನ್ನ ಕಣ್ಣಿನೊಳಗಿಂದ ತೊಲೆಯನ್ನು ತೆಗೆದುಹಾಕಿಕೋ; ಆ ಮೇಲೆ ನಿನ್ನ ಸಹೋದರನ ಕಣ್ಣಿನೊಳಗಿಂದ ರವೆಯನ್ನು ತೆಗೆಯುವದಕ್ಕೆ ಚೆನ್ನಾಗಿ ಕಾಣಿಸುವದು.” ಈ ವಿಷಯದಲ್ಲಿ ಅವನ ಸಲಹೆಗೆ ಕಿವಿಗೊಡುವುದು ಒಳ್ಳೇದು: “ತೀರ್ಪುಮಾಡ ಬೇಡಿರಿ; ಹಾಗೆ ನಿಮಗೂ ತೀರ್ಪಾಗುವದಿಲ್ಲ. ನೀವು ಮಾಡುವ ತೀರ್ಪಿಗೆ ಸರಿಯಾಗಿ ನಿಮಗೂ ತೀರ್ಪಾಗುವದು; . . . ನೀನು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯೋಚಿಸುವದೇಕೆ?”—ಮತ್ತಾಯ 7:1-5.
ಕೆಲವೊಮ್ಮೆ ಇತರರು ಕಪಟವಾಗಿ ತೋರಬಹುದಾದ ವಿಷಯಗಳನ್ನು ಮಾಡುವಾಗ, ಅವರನ್ನು ಕಪಟಿಗಳ ವರ್ಗಕ್ಕೆ ಸೇರಿಸಲು ಆತುರಪಡುವ ವಿಷಯದಲ್ಲಿ ನಾವು ಜಾಗರೂಕರಾಗಿರತಕ್ಕದ್ದು. ಉದಾಹರಣೆಗೆ, ಅಪೊಸ್ತಲ ಪೇತ್ರನು ಯೆರೂಸಲೇಮಿನಿಂದ ಬಂದಿದ್ದ ಯೆಹೂದಿ ಹಿನ್ನೆಲೆಯ ಸಂದರ್ಶಕರನ್ನು ಸಂತೋಷಪಡಿಸಲಿಕ್ಕಾಗಿ, ಅಂತಿಯೋಕ್ಯದಲ್ಲಿರುವ ಅನ್ಯ ಜೊತೆ ವಿಶ್ವಾಸಿಗಳಿಂದ ‘ತನ್ನನ್ನು ಪ್ರತ್ಯೇಕಿಸಿಕೊಂಡನು.’ ಬಾರ್ನಬನೂ ‘ಪೇತ್ರನ ಮತ್ತು ಇನ್ನಿತರರ ಕಪಟದ ಸೆಳವಿಗೆ ಬಿದ್ದನು.’ ಆ ಅನ್ಯರು ಕ್ರೈಸ್ತ ಸಭೆಯೊಳಗೆ ಅಂಗೀಕರಿಸಲ್ಪಡಲಿಕ್ಕಾಗಿರುವ ಮಾರ್ಗವನ್ನು ತೆರೆಯುವ ಅಪೂರ್ವ ಸದವಕಾಶವು ಪೇತ್ರನಿಗೇ ಇತ್ತಾದರೂ ಅವನು ಹೀಗೆ ಮಾಡಿದನು. (ಗಲಾತ್ಯ 2:11-14; ಅ. ಕೃತ್ಯಗಳು 10:24-28, 34, 35) ಆದರೆ ಬಾರ್ನಬನೂ ಪೇತ್ರನೂ ಮಾಡಿದ ಈ ಸಣ್ಣ ತಪ್ಪು, ಶಾಸ್ತ್ರಿಗಳು ಮತ್ತು ಫರಿಸಾಯರು ಅಥವಾ ಇಸ್ಕರಿಯೋತ ಯೂದನ ವರ್ಗಕ್ಕೆ ಅವರನ್ನು ಸೇರಿಸಲಿಲ್ಲ ಎಂಬುದಂತೂ ಖಂಡಿತ.
“ನಿಮ್ಮ ಪ್ರೀತಿಯು ನಿಷ್ಕಪಟವಾಗಿರಲಿ”
“ನೀನು ಇತರರಿಗೆ ಒಳ್ಳೇದನ್ನು ಮಾಡುವಾಗ, ನಿನ್ನ ಮುಂದೆ ಹೋಗಲಿಕ್ಕಾಗಿ ಕೊಂಬೂದುವವನೊಬ್ಬನನ್ನು ಗೊತ್ತುಪಡಿಸಿಕೊಳ್ಳಬೇಡ—ಜನರು ತಮ್ಮನ್ನು ಹೊಗಳುವುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಸಭಾಮಂದಿರಗಳಲ್ಲಿ ಮತ್ತು ಬೀದಿಗಳಲ್ಲಿ ನಟರು ಹಾಗೆ ಮಾಡುತ್ತಾರೆ” ಎಂದು ಯೇಸು ಬುದ್ಧಿಹೇಳಿದನು. (ಮತ್ತಾಯ 6:2, ಫಿಲಿಪ್ಸ್) “ನಿಮ್ಮ ಪ್ರೀತಿಯು ನಿಷ್ಕಪಟವಾಗಿರಲಿ” ಎಂದು ಅಪೊಸ್ತಲ ಪೌಲನು ಬರೆದನು. (ರೋಮಾಪುರ 12:9) “ಶುದ್ಧಹೃದಯ” ಮತ್ತು “ನಿಷ್ಕಪಟವಾದ ನಂಬಿಕೆ”ಯನ್ನು ಹೊಂದಿರುವಂತೆ ಅವನು ಯುವ ತಿಮೊಥೆಯನನ್ನು ಉತ್ತೇಜಿಸಿದನು. (1 ತಿಮೊಥೆಯ 1:5) ಒಂದುವೇಳೆ ನಮ್ಮ ಪ್ರೀತಿ ಹಾಗೂ ನಂಬಿಕೆಯು ಪ್ರಾಮಾಣಿಕವಾಗಿರುವಲ್ಲಿ, ಮತ್ತು ಸ್ವಾರ್ಥಭಾವ ಹಾಗೂ ವಂಚನೆಯಿಂದ ಭ್ರಷ್ಟಗೊಂಡಿರದಿದ್ದಲ್ಲಿ, ಇತರರು ನಮ್ಮ ಮೇಲೆ ಭರವಸೆಯಿಡುತ್ತಾರೆ. ಅಷ್ಟುಮಾತ್ರವಲ್ಲ, ನಮ್ಮ ಸುತ್ತಲೂ ಇರುವವರಿಗೆ ನಾವು ನಿಜವಾದ ಬಲ ಹಾಗೂ ಉತ್ತೇಜನದ ಮೂಲವಾಗಿರುವೆವು. (ಫಿಲಿಪ್ಪಿ 2:4; 1 ಯೋಹಾನ 3:17, 18; 4:20, 21) ಎಲ್ಲಕ್ಕಿಂತಲೂ ಮಿಗಿಲಾಗಿ ನಾವು ಯೆಹೋವನ ಅನುಗ್ರಹವನ್ನು ಪಡೆದುಕೊಳ್ಳುವೆವು.
ಇನ್ನೊಂದು ಕಡೆಯಲ್ಲಿ, ಯಾರು ಕಪಟಿಗಳಾಗಿರುತ್ತಾರೋ ಅವರ ಕಪಟತನವು ಕ್ರಮೇಣ ಮಾರಕವಾಗಿ ಪರಿಣಮಿಸುತ್ತದೆ. ಕಟ್ಟಕಡೆಗೆ ಆ ಕಪಟತನವು ಬಯಲಾಗುತ್ತದೆ. “ಮರೆಯಾಗಿರುವ ಯಾವದೂ ವ್ಯಕ್ತವಾಗದೆ ಇರುವದಿಲ್ಲ; ಹೊರಪಡದ ರಹಸ್ಯವೂ ಇಲ್ಲ” ಎಂದು ಯೇಸು ಕ್ರಿಸ್ತನು ಹೇಳಿದನು. (ಮತ್ತಾಯ 10:26; ಲೂಕ 12:2) ಜ್ಞಾನಿ ಅರಸನಾದ ಸೊಲೊಮೋನನು ಉದ್ಗರಿಸಿದ್ದು: “ಒಳ್ಳೇದಾಗಲಿ ಕೆಟ್ಟದಾಗಲಿ ಸಕಲ ರಹಸ್ಯ ಸಂಗತಿಗಳನ್ನು ವಿಮರ್ಶಿಸುವ ನ್ಯಾಯವಿಚಾರಣೆಗೆ ದೇವರು ಪ್ರತಿಯೊಂದು ಕಾರ್ಯವನ್ನು ಗುರಿಮಾಡುವನು.”—ಪ್ರಸಂಗಿ 12:14.
ಈ ಮಧ್ಯೆ, ಬೇರೆಯವರ ಕಪಟ ಮನೋಭಾವವು, ನಮ್ಮ ನಿಜ ಸ್ನೇಹಿತರ ನಿಷ್ಕಪಟ ಪ್ರೀತಿಯಿಂದ ನಾವು ವಂಚಿತರಾಗುವಷ್ಟರ ಮಟ್ಟಿಗೆ ನಮ್ಮ ಮೇಲೆ ಪ್ರಭಾವ ಬೀರುವಂತೆ ನಾವೇಕೆ ಅನುಮತಿಸಬೇಕು? ಅತಿಯಾಗಿ ಸಂದೇಹಪಡುವವರಾಗಿರದೆ ಇರುವ ಮೂಲಕ ಸಹ ನಾವು ಜಾಗ್ರತೆಯನ್ನು ವಹಿಸಸಾಧ್ಯವಿದೆ. ಮತ್ತು ಎಲ್ಲ ರೀತಿಯಿಂದಲೂ ನಾವು ನಮ್ಮ ಸ್ವಂತ ಪ್ರೀತಿ ಹಾಗೂ ನಂಬಿಕೆಯನ್ನು ನಿಷ್ಕಪಟವಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿರೋಣ.—ಯಾಕೋಬ 3:17; 1 ಪೇತ್ರ 1:22.
[ಪುಟ 22, 23ರಲ್ಲಿರುವ ಚಿತ್ರಗಳು]
ಶಾಸ್ತ್ರಿಗಳು ಮತ್ತು ಫರಿಸಾಯರ ಕಪಟ ಮನೋಭಾವವು, ಯೇಸು ಕ್ರಿಸ್ತನಿಂದ ಮತ್ತು ಅವನ ಶಿಷ್ಯರಿಂದ ನಿಮ್ಮನ್ನು ವಿಮುಖಗೊಳಿಸುವಂತೆ ನೀವು ಬಿಡುತ್ತಿದ್ದಿರೋ?