ಸ್ವನೀತಿಯ ಕುರಿತು ಜಾಗರೂಕರಾಗಿರ್ರಿ!
ಪ್ರಥಮ ಶತಮಾನದಲ್ಲಿ, ಫರಿಸಾಯರು ದೇವರ ನೀತಿವಂತ ಆರಾಧಕರಾಗಿರುವ ಒಂದು ಒಳ್ಳೆಯ ಖ್ಯಾತಿಯನ್ನು ಪಡೆದಿದ್ದರು. ಅವರು ಶಾಸ್ತ್ರಗಳ ಶ್ರದ್ಧಾಪೂರ್ವಕ ವಿದ್ಯಾರ್ಥಿಗಳಾಗಿದ್ದರು ಮತ್ತು ಪದೇ ಪದೇ ಪ್ರಾರ್ಥಿಸುತ್ತಿದ್ದರು. ಕೆಲವು ಜನರು ಅವರನ್ನು ದಯಾಪರರು ಮತ್ತು ವಿವೇಚನೆಯುಳ್ಳವರಾಗಿ ವೀಕ್ಷಿಸಿದರು. ಯೆಹೂದಿ ಇತಿಹಾಸಕಾರ ಜೋಸೀಫಸ್ ಬರೆದುದು: “ಫರಿಸಾಯರು ಒಬ್ಬರು ಇನ್ನೊಬ್ಬರ ಕಡೆಗೆ ವಾತ್ಸಲ್ಯವುಳ್ಳವರಾಗಿದ್ದಾರೆ ಮತ್ತು ಸಮುದಾಯದಲ್ಲಿ ಹೊಂದಾಣಿಕೆಯ ಸಂಬಂಧಗಳನ್ನು ಬೆಳೆಸುತ್ತಾರೆ.” ಆ ಸಮಯದಲ್ಲಿ ಯೆಹೂದಿ ಸಮಾಜದಲ್ಲಿ ಪ್ರಾಯಶಃ ಅವರು ತೀರ ಹೆಚ್ಚಾಗಿ ಗೌರವಿಸಲ್ಪಟ್ಟ ಮತ್ತು ಉಚ್ಚವಾಗಿ ಗಣ್ಯಮಾಡಲ್ಪಟ್ಟ ವ್ಯಕ್ತಿಗಳಾಗಿದ್ದದ್ದು ಆಶ್ಚರ್ಯದ ಸಂಗತಿಯಲ್ಲ!
ಆದಾಗಲೂ, ಇಂದು “ಫರಿಸಾಯಿಕ” ಎಂಬ ಶಬ್ದ ಮತ್ತು ಸಂಬಂಧಿಸಿರುವ ಪದಗಳು, ತಿರಸ್ಕಾರ, ಧರ್ಮಾಡಂಬರ, ಸ್ವನೀತಿ, ಇತರರಿಗಿಂತ ಪವಿತ್ರರಾಗಿರುವ ಮನೋಭಾವ, ಅತಿರೇಕ ಧರ್ಮಶ್ರದ್ಧೆ ಮತ್ತು ತುಟಿ ಸೇವೆಯನ್ನು ಕೊಡುವುದರೊಂದಿಗೆ ಸಮಾನಾರ್ಥಕವಾಗಿವೆ. ಫರಿಸಾಯರು ತಮ್ಮ ಒಳ್ಳೇ ಹೆಸರನ್ನು ಏಕೆ ಕಳೆದುಕೊಂಡರು?
ಅದು ಯಾಕಂದರೆ, ಅನೇಕ ಯೆಹೂದ್ಯರಿಗೆ ಅಸದೃಶವಾಗಿ, ಯೇಸು ಕ್ರಿಸ್ತನು ಫರಿಸಾಯರ ಬಾಹ್ಯ ತೋರಿಕೆಯಿಂದ ವಂಚಿಸಲ್ಪಡಲಿಲ್ಲ. ಅವನು ಅವರನ್ನು ‘ಹೊರಗೆ ಚಂದವಾಗಿ ಕಾಣುವ ಆದರೆ ಒಳಗೆ ನೋಡಿದರೆ ಸತ್ತವರ ಎಲುಬುಗಳಿಂದಲೂ ಎಲ್ಲಾ ಹೊಲಸಿನಿಂದಲೂ ತುಂಬಿರುವ ಸುಣ್ಣಾ ಹಚ್ಚಿದ ಸಮಾಧಿಗಳಿಗೆ’ ಹೋಲಿಸಿದನು.—ಮತ್ತಾಯ 23:27.
ಸಾರ್ವಜನಿಕ ಸ್ಥಳಗಳಲ್ಲಿ ನಿಂತಿರುವಾಗ ಅವರು ಉದ್ದುದ್ದ ಪ್ರಾರ್ಥನೆಗಳನ್ನು ಸಲ್ಲಿಸಿದರೆಂಬುದು ನಿಜ, ಆದರೆ, ಯೇಸು ಅಂದಂತೆ ಇದು ಕೇವಲ ಇತರರಿಂದ ನೋಡಲ್ಪಡಲಿಕ್ಕಾಗಿತ್ತು. ಅವರ ಆರಾಧನೆ ಬರಿಯ ನಟನೆಯಾಗಿತ್ತು. ಸಂಧ್ಯಾ ಭೋಜನಗಳಲ್ಲಿ ಪ್ರಮುಖವಾದ ಸ್ಥಳಗಳನ್ನು ಮತ್ತು ಸಭಾಮಂದಿರಗಳಲ್ಲಿ ಮುಂದಿನ ಆಸನಗಳನ್ನು ಅವರು ತುಂಬ ಇಷ್ಟಪಡುತ್ತಿದ್ದರು. ಎಲ್ಲಾ ಯೆಹೂದ್ಯರು ತಮ್ಮ ಉಡುಪುಗಳಲ್ಲಿ ಗೊಂಡೆಗಳನ್ನು ಧರಿಸುವ ಹಂಗುಳ್ಳವರಾಗಿದ್ದಾಗ, ತೀರ ಉದ್ದವಾದ ಗೊಂಡೆಗಳನ್ನು ಧರಿಸುವ ಮೂಲಕ ಫರಿಸಾಯರು ಜನರ ಮನಸ್ಸುಗಳನ್ನು ಪ್ರಭಾವಿಸಲು ಪ್ರಯತ್ನಿಸಿದರು. ತಾಯಿತಿಗಳಾಗಿ ಧರಿಸಲ್ಪಟ್ಟ ದೊಡ್ಡದುಮಾಡಲ್ಪಟ್ಟ ಜ್ಞಾಪಕ ಪಟ್ಟಿಗಳನ್ನು ಪ್ರದರ್ಶಿಸಲು ಅವರು ಹೆಮ್ಮೆಪಡುತ್ತಿದ್ದರು. (ಮತ್ತಾಯ 6:5; 23:5-8) ಅವರ ಕಪಟತನ, ಅವರ ಲೋಭ, ಮತ್ತು ಅವರ ಅಹಂಕಾರ ಕೊನೆಗೆ ಅವರಿಗೆ ಅವಮಾನವನ್ನು ತಂದಿತು.
ಫರಿಸಾಯರ ಕುರಿತ ದೇವರ ತಿರಸ್ಕರಣೆಯನ್ನು ಯೇಸು ಬಹಿರಂಗಪಡಿಸಿದನು: “ಕಪಟಿಗಳೇ, ನಿಮ್ಮ ವಿಷಯದಲ್ಲಿ ಯೆಶಾಯನು ವಿಹಿತವಾಗಿ ಪ್ರವಾದಿಸಿದ್ದಾನೆ; ಅವನು ಬರೆದದ್ದೇನಂದರೆ—ಈ ಜನರು ಮಾತಿನಿಂದ ನನ್ನನ್ನು ಸನ್ಮಾನಿಸುತ್ತಾರೆ, ಆದರೆ ಅವರ ಮನಸ್ಸು ನನಗೆ ದೂರವಾಗಿದೆ. ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಅವರು ಬೋಧಿಸುವದರಿಂದ ನನಗೆ ಭಕ್ತಿ ತೋರಿಸುವದು ವ್ಯರ್ಥ ಎಂಬದೇ.” (ಮತ್ತಾಯ 15:7-9) ಅವರ ನೀತಿಯು ನಿಜವಾಗಿ ಸ್ವನೀತಿಯಾಗಿತ್ತು. ಗ್ರಾಹ್ಯವಾಗಿಯೇ, ಯೇಸು ತನ್ನ ಶಿಷ್ಯರಿಗೆ ಎಚ್ಚರಿಸಿದ್ದು: “ಫರಿಸಾಯರ ಕಪಟವೆಂಬ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರ್ರಿ.” (ಲೂಕ 12:1) ಇಂದು, ನಾವು ಕೂಡ ಸ್ವನೀತಿಯ ಕುರಿತಾಗಿ “ಜಾಗರೂಕ”ರಾಗಿರಬೇಕು ಅಥವಾ ಧಾರ್ಮಿಕ ಕಪಟಿಗಳಾಗುವ ವಿರುದ್ಧ ಕಾಪಾಡಿಕೊಳ್ಳಬೇಕು.
ಹಾಗೆ ಮಾಡುವುದರಲ್ಲಿ, ಒಬ್ಬ ವ್ಯಕ್ತಿಯು ರಾತ್ರಿ ಬೆಳಗಾಗುವುದರೊಳಗೆ ಸ್ವನೀತಿವಂತನಾಗುವುದಿಲವ್ಲೆಂಬ ಸಂಗತಿಯನ್ನು ನಾವು ಸ್ವೀಕರಿಸಬೇಕು. ಬದಲಾಗಿ, ಈ ಪ್ರವೃತ್ತಿಯು ಒಂದು ಸಮಯಾವಧಿಯಲ್ಲಿ ಪ್ರಗತಿಪರವಾಗಿ ನುಸುಳಿಕೊಳ್ಳುತ್ತದೆ. ಒಬ್ಬ ವ್ಯಕ್ತಿಯು ಉದ್ದೇಶಪೂರ್ವಕವಲ್ಲದೆಯೂ ಫರಿಸಾಯರ ಅನಪೇಕ್ಷಿತ ಲಕ್ಷಣಗಳನ್ನು ಗಳಿಸಬಹುದು.
ಒಂದು ಶ್ರೇಷ್ಠ ಮನೋಭಾವ
ನಾವು “ಜಾಗರೂಕರಾಗಿ”ರಬೇಕಾದ ಲಕ್ಷಣಗಳಲ್ಲಿ ಕೆಲವು ಯಾವುವು? ಸ್ವನೀತಿಯ ವ್ಯಕ್ತಿಗಳು ಸಾಮಾನ್ಯವಾಗಿ “ತಾವು ಎಂದೂ ಯಾವುದೇ ತಪ್ಪನ್ನು ಮಾಡದೇ ಇದ್ದವರಂತೆ ಮಾತಾಡುತ್ತಾರೆ, ನಿಲ್ಲುತ್ತಾರೆ ಮತ್ತು ಕಾಣುತ್ತಾರೆ,” ಎಂದು ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ ಆ್ಯಂಡ್ ಎಥಿಕ್ಸ್ ವಿವರಿಸುತ್ತದೆ. ಸ್ವನೀತಿವಂತರು, ಕೊಚ್ಚಿಕೊಳ್ಳುವವರೂ ತಮ್ಮನ್ನೇ ಪ್ರವರ್ಧಿಸುವವರೂ ಆಗಿರುತ್ತಾರೆ. ಇದು ಫರಿಸಾಯರಲ್ಲಿ ಒಂದು ಪ್ರಧಾನ ಸಮಸ್ಯೆಯಾಗಿತ್ತು.
ಈ ಫರಿಸಾಯಿಕ ಮನೋಭಾವವನ್ನು ಯೇಸು ಒಂದು ದೃಷ್ಟಾಂತದೊಂದಿಗೆ ವರ್ಣಿಸಿದನು: “ಪ್ರಾರ್ಥನೆಮಾಡಬೇಕೆಂದು ಇಬ್ಬರು ಮನುಷ್ಯರು ದೇವಾಲಯಕ್ಕೆ ಹೋದರು; ಒಬ್ಬನು ಫರಿಸಾಯನು, ಒಬ್ಬನು ಸುಂಕದವನು. ಫರಿಸಾಯನು ನಿಂತುಕೊಂಡು ಪ್ರಾರ್ಥಿಸುವಾಗ ತನ್ನೊಳಗೆ—ದೇವರೇ, ಸುಲುಕೊಳ್ಳುವವರೂ ಅನ್ಯಾಯಗಾರರೂ ಹಾದರಮಾಡುವವರೂ ಆಗಿರುವ ಉಳಿದ ಜನರಂತೆ ನಾನಲ್ಲ, ಈ ಸುಂಕದವನಂತೆಯೂ ಅಲ್ಲ; ಆದದರಿಂದ ನಿನಗೆ ಸ್ತೋತ್ರಮಾಡುತ್ತೇನೆ. ವಾರಕ್ಕೆ ಎರಡಾವರ್ತಿ ಉಪವಾಸಮಾಡುತ್ತೇನೆ; ನಾನು ಸಂಪಾದಿಸುವ ಎಲ್ಲಾದರಲ್ಲಿಯೂ ಹತ್ತರಲ್ಲೊಂದು ಪಾಲು ಕೊಡುತ್ತೇನೆ.” ಇದಕ್ಕೆ ವ್ಯತಿರಿಕ್ತವಾಗಿ ಸುಂಕದವನು ತನ್ನ ತಪ್ಪುಗಳನ್ನು ನಮ್ರನಾಗಿ ಒಪ್ಪಿಕೊಂಡನು ಮತ್ತು ಆ ಬಡಾಯಿಕೋರ ಫರಿಸಾಯನಿಗಿಂತ ಹೆಚ್ಚು ನೀತಿವಂತನಾಗಿ ಪರಿಣಮಿಸಿದನು. “ತಾವೇ ನೀತಿವಂತರೆಂದು ತಮ್ಮಲ್ಲಿ ಭರವಸವಿಟ್ಟುಕೊಂಡು ಉಳಿದವರನ್ನು ಉದಾಸೀನಮಾಡುವಂಥ”ವರಿಗೆ ಯೇಸು ಈ ದೃಷ್ಟಾಂತವನ್ನು ಸಂಬೋಧಿಸಿದನು.—ಲೂಕ 18:9-14.
ನಮ್ಮ ಸ್ವಾಭಾವಿಕ ಸಾಮರ್ಥ್ಯಗಳು ಅಥವಾ ಪ್ರಯೋಜನಗಳ ಕಾರಣದಿಂದ ನಾವು ಇತರರಿಗಿಂತ ಉತ್ತಮರಾಗಿದ್ದೇವೆ ಎಂಬುದಾಗಿ ಅಪರಿಪೂರ್ಣ ಮಾನವರೋಪಾದಿ ನಮಗೆ ಕೆಲವೊಮ್ಮೆ ಅನಿಸಬಹುದು. ಆದರೆ ಕ್ರೈಸ್ತರು ಅಂತಹ ಆಲೋಚನೆಗಳನ್ನು ಕೂಡಲೇ ತೆಗೆದುಹಾಕಬೇಕು. ಕ್ರೈಸ್ತ ಜೀವಿತದಲ್ಲಿ ನಿಮಗೆ ಹಲವಾರು ವರ್ಷಗಳ ಅನುಭವವಿರಬಹುದು. ನೀವು ಒಬ್ಬ ನಿಪುಣ ಬೈಬಲ್ ಶಿಕ್ಷಕರಾಗಿರಬಹುದು. ಅಥವಾ ಪ್ರಾಯಶಃ ನೀವು ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳಲು ಅಭಿಷೇಕಿಸಲ್ಪಟ್ಟಿದ್ದೀರೆಂದು ಹೇಳಿಕೊಳ್ಳುತ್ತೀರಿ. ಸಭೆಯಲ್ಲಿ ಕೆಲವರು ಪೂರ್ಣ ಸಮಯದ ಸೇವಕರು, ಹಿರಿಯರು ಅಥವಾ ಶುಶ್ರೂಷಾ ಸೇವಕರಾಗಿ ವಿಶೇಷ ಸುಯೋಗಗಳನ್ನು ಆನಂದಿಸುತ್ತಾರೆ. ನಿಮ್ಮನ್ನೆ ಕೇಳಿಕೊಳ್ಳಿ ‘ಯೆಹೋವನು ನನಗೆ ಏನನ್ನು ಕೊಟ್ಟಿದ್ದಾನೋ ಅದನ್ನು, ಇತರರಿಗಿಂತ ಶ್ರೇಷ್ಠನೆಂದು ಭಾವಿಸಿಕೊಳ್ಳಲು ಒಂದು ಆಧಾರವಾಗಿ ನಾನು ಉಪಯೋಗಿಸುವಲ್ಲಿ ಯೆಹೋವನಿಗೆ ಹೇಗೆ ಅನಿಸುವುದು?’ ಖಂಡಿತವಾಗಿ, ಇದು ಅವನನ್ನು ಅಪ್ರಸನ್ನಗೊಳಿಸುವುದು.—ಫಿಲಿಪ್ಪಿ 2:3, 4.
ಒಬ್ಬ ಕ್ರೈಸ್ತನು ತನ್ನ ದೇವದತ್ತ ಸಾಮರ್ಥ್ಯಗಳು, ಸುಯೋಗಗಳು ಅಥವಾ ಅಧಿಕಾರದಿಂದಾಗಿ ಶ್ರೇಷ್ಠತೆಯ ಒಂದು ಭಾವವನ್ನು ಪ್ರದರ್ಶಿಸುವಾಗ, ಅವನು ವಾಸ್ತವದಲ್ಲಿ, ದೇವರಿಗೆ ಮಾತ್ರ ತಕ್ಕದ್ದಾಗಿರುವ ಮಹಿಮೆ ಮತ್ತು ಪ್ರಶಸ್ತಿಯನ್ನು ಆತನಿಂದ ಕಸಿದುಕೊಳ್ಳುತ್ತಾನೆ. “ಯಾರೂ ತನ್ನ ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳ”ದಿರುವಂತೆ ಬೈಬಲು ಕ್ರೈಸ್ತನಿಗೆ ಸ್ಪಷ್ಟವಾಗಿಗಿ ಪ್ರಬೋಧಿಸುತ್ತದೆ. ಅದು ನಮ್ಮನ್ನು ಉತ್ತೇಜಿಸುವುದು: “ನಿಮ್ಮ ನಿಮ್ಮೊಳಗೆ ಏಕಮನಸ್ಸುಳ್ಳವರಾಗಿರ್ರಿ. ದೊಡ್ಡಸ್ತಿಕೆಯ ಮೇಲೆ ಮನಸ್ಸಿಡದೆ ದೀನರ ಸಂಗಡ ಬಳಿಕೆಯಾಗಿರ್ರಿ. ನಿಮ್ಮನ್ನು ನೀವೇ ಬುದ್ಧಿವಂತರೆಂದು ಎಣಿಸಿಕೊಳ್ಳಬೇಡಿರಿ.”—ರೋಮಾಪುರ 12:3, 16.
“ತೀರ್ಪುಮಾಡಬೇಡಿರಿ”
ಒಂದು ಬೈಬಲ್ ವಿಶ್ವಕೋಶಕ್ಕನುಸಾರ, ಒಬ್ಬ ಸ್ವನೀತಿಯ ವ್ಯಕ್ತಿಯು “ಅವುಗಳ ಭಾವಾರ್ಥಕ್ಕೆ ಲಕ್ಷ್ಯಕೊಡದೆ ಕಾನೂನುಬದ್ಧ ಆವಶ್ಯಕತೆಗಳ ತನ್ನ ಶಬ್ದಾರ್ಥದ ಪರಿಪಾಲನೆಯಿಂದಾಗಿ, ತನ್ನನ್ನೇ ನೈತಿಕವಾಗಿ ಪ್ರಾಮಾಣಿಕನು ಅಥವಾ ದೇವರೊಂದಿಗೆ ಯೋಗ್ಯ ನಿಲುವಿನಲ್ಲಿರುವವನಾಗಿ ಪರಿಗಣಿಸುತ್ತಾನೆ.” ಇನ್ನೊಂದು ಕೃತಿ ಸ್ವನೀತಿವಂತರನ್ನು, “ಇತರರಲ್ಲಿ ದುಷ್ಟತನವನ್ನು ಕಂಡುಹಿಡಿಯುವುದರಲ್ಲೇ ತಮ್ಮ ಎಲ್ಲಾ ಸಮಯವನ್ನು ವ್ಯಯಮಾಡುವ ಅತಿರೇಕದ ಧಾರ್ಮಿಕ ಜನರು” ಆಗಿ ವರ್ಣಿಸುತ್ತದೆ.
ಫರಿಸಾಯರು ಈ ವಿಷಯದಲ್ಲಿ ದೋಷಿಗಳಾಗಿದ್ದರು. ಸಮಯಾನಂತರ, ದೇವರ ನಿಯಮಗಳು ಮತ್ತು ಸೂತ್ರಗಳಿಗಿಂತ ಅವರ ಮಾನವನಿರ್ಮಿತ ನಿಯಮಗಳು ಹೆಚ್ಚು ಪ್ರಾಮುಖ್ಯವಾಗಿ ತೋರಿದವು. (ಮತ್ತಾಯ 23:23; ಲೂಕ 11:41-44) ಅವರು ಸ್ವತಃ ತಮ್ಮನ್ನು ನ್ಯಾಯಾಧೀಶರನ್ನಾಗಿ ನೇಮಿಸಿಕೊಂಡರು, ಮತ್ತು ತಮ್ಮ ಸ್ವನೀತಿಯ ಮಟ್ಟಗಳನ್ನು ತಲಪದಿದ್ದ ಯಾರನ್ನಾದರೂ ಖಂಡಿಸುವ ಪ್ರವೃತ್ತಿಯವರಾಗಿದ್ದರು. ಅವರ ಶ್ರೇಷ್ಠ ಮನೋಭಾವವು ಮತ್ತು ಅತಿಶಯಮಾಡಲ್ಪಟ್ಟ ಸ್ವಪ್ರತಿಷ್ಠೆಯು ಇತರ ಜನರನ್ನು ನಿಯಂತ್ರಿಸುವ ಒಂದು ಅಗತ್ಯವನ್ನು ಉತ್ಪಾದಿಸಿತು. ಯೇಸುವನ್ನು ನಿಯಂತ್ರಿಸುವ ಅವರ ಅಸಾಮರ್ಥ್ಯವು ಅವರನ್ನು ಸಿಟ್ಟುಗೊಳಿಸಿತು, ಆದುದರಿಂದ ಅವರು ಆತನ ಕೊಲೆಯ ಹೂಟಹೂಡಿದರು.—ಯೋಹಾನ 11:47-53.
ತನ್ನನ್ನು ಒಬ್ಬ ನ್ಯಾಯಾಧೀಶನಾಗಿ ಸ್ಥಾಪಿಸಿಕೊಂಡು, ತಪ್ಪುಗಳಿಗಾಗಿ ಯಾವಾಗಲೂ ಹುಡುಕುತ್ತಾ, ತನ್ನ ಸುತ್ತಲಿರುವವರೆಲ್ಲರನ್ನು ವಿಮರ್ಶಿಸುತ್ತಾ ತಳವಾರಿಕೆ ನಡೆಸುತ್ತಾ ಇರುವವನೊಬ್ಬನ ಸಹವಾಸದಲ್ಲಿರುವುದು ಎಷ್ಟು ಅಹಿತಕರ. ನಿಜವಾಗಿಯೂ, ಸಭೆಯಲ್ಲಿ ಯಾರೊಬ್ಬನಿಗೂ ತನ್ನ ಅಭಿಪ್ರಾಯಗಳು ಮತ್ತು ಸ್ವನಿರ್ಮಿತ ನಿಯಮಗಳನ್ನು ಇತರರ ಮೇಲೆ ಹೇರುವ ಅಧಿಕಾರವಿಲ್ಲ. (ರೋಮಾಪುರ 14:10-13) ದಿನನಿತ್ಯ ಜೀವನದ ಅನೇಕ ಅಂಶಗಳು ವೈಯಕ್ತಿಕ ನಿರ್ಣಯದ ಕ್ಷೇತ್ರದೊಳಗೆ ಬೀಳುತ್ತವೆಂದು ಸಮತೆಯ ಕ್ರೈಸ್ತರು ಅರಿಯುತ್ತಾರೆ. ಪರಿಪೂರ್ಣತಾವಾದಿಗಳು ಮತ್ತು ತಗಾದೆ ಮಾಡುವವರು ಆಗಿರುವ ಒಂದು ಪ್ರವೃತ್ತಿಯಿರುವವರು ವಿಶೇಷವಾಗಿ ಇತರರಿಗೆ ತೀರ್ಪು ಮಾಡುವುದನ್ನು ಹೋಗಲಾಡಿಸಬೇಕು.
ಯೆಹೋವನ ಐಹಿಕ ಸಂಸ್ಥೆಯ ಸಲೀಸಾದ ಕಾರ್ಯಾಚರಣೆಗೆ ನೆರವು ನೀಡಲು ಕ್ರೈಸ್ತ ಸಭೆಗೆ ನಿರ್ದೇಶನಗಳನ್ನು ಹೊಂದಲು ಅಧಿಕಾರವು ನೀಡಲ್ಪಟ್ಟಿದೆ, ನಿಜ. (ಇಬ್ರಿಯ 13:17) ಆದರೆ ಕೆಲವರು ಈ ನಿರ್ದೇಶನಗಳನ್ನು ತಿರುಚಿದ್ದಾರೆ ಅಥವಾ ತಮ್ಮ ಸ್ವಂತ ನಿಯಮಗಳನ್ನು ಕೂಡಿಸಿದ್ದಾರೆ. ಒಂದು ಕ್ಷೇತ್ರದಲ್ಲಿ ಭಾಷಣವೊಂದನ್ನು ನೀಡುತ್ತಿರುವಾಗ, ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿನ ಎಲ್ಲಾ ವಿದ್ಯಾರ್ಥಿಗಳು ಸೂಟ್ಗಳನ್ನು ಧರಿಸಬೇಕಾಗಿತ್ತು ಮತ್ತು ಅವರ ಜಾಕೆಟುಗಳ ಎಲ್ಲಾ ಗುಂಡಿಗಳನ್ನು ಹಾಕಬೇಕಾಗಿತ್ತು. ಹಾಗೆ ಮಾಡಲು ತಪ್ಪುವ ವಿದ್ಯಾರ್ಥಿಯು ಭವಿಷ್ಯದಲ್ಲಿ ಭಾಷಣಗಳನ್ನು ಕೊಡಲು ಅನರ್ಹನಾಗುತ್ತಿದ್ದನು. ಅಂತಹ ಕಟ್ಟುನಿಟ್ಟಿನ ನಿಯಮಗಳನ್ನು ಮಾಡುವ ಬದಲಿಗೆ, ಅವಶ್ಯವಿದ್ದಂತೆ ದಯಾಪರ, ವೈಯಕ್ತಿಕ ಮಾರ್ಗದರ್ಶನೆಯನ್ನು ಕೊಡುವುದು ಹೆಚ್ಚು ಸಮಂಜಸವೂ, ದೇವರ ವಾಕ್ಯಕ್ಕೆ ಹೊಂದಿಕೆಯುಳ್ಳದ್ದೂ ಆಗಿರುವುದಲ್ಲವೇ?—ಯಾಕೋಬ 3:17.
ಒಬ್ಬ ಕ್ರೈಸ್ತನು ಅನೇಕ ವೈಯಕ್ತಿಕ ಕಷ್ಟಗಳನ್ನು ಅನುಭವಿಸುತ್ತಿರುವಲ್ಲಿ, ಅವನು ಆತ್ಮಿಕವಾಗಿ ಕೊರತೆಯುಳ್ಳವನಾಗಿರಬೇಕೆಂಬ ನೋಟವನ್ನೂ ಸ್ವನೀತಿಯು ಪ್ರವರ್ಧಿಸಬಹುದು. ಸ್ವನೀತಿವಂತರಾದ ಎಲೀಫಜ, ಬಿಲದ್ದ, ಮತ್ತು ಚೋಫರ ಇವರು ನಂಬಿಗಸ್ತ ಯೋಬನ ಕುರಿತಾಗಿ ಅದನ್ನೇ ನೆನಸಿದರು. ಸನ್ನಿವೇಶದ ಕುರಿತಾಗಿ ಅವರಿಗೆ ಸರಿಯಾದ ತಿಳಿವಳಿಕೆಯಿರಲಿಲ್ಲ, ಆದುದರಿಂದ ಯೋಬನನ್ನು ತಪ್ಪುಗೈಯುವಿಕೆಗಾಗಿ ದೂಷಿಸುವುದು ದುರಹಂಕಾರದ ಸಂಗತಿಯಾಗಿತ್ತು. ಯೋಬನ ಸಂಕಷ್ಟಗಳ ಅವರ ತಿರುಚಿಸಲ್ಪಟ್ಟ ಅಭಿಪ್ರಾಯಕ್ಕಾಗಿ ಯೆಹೋವನು ಅವರನ್ನು ಶಿಸ್ತುಗೊಳಿಸಿದನು.—ಯೋಬ ಅಧ್ಯಾಯಗಳು 4, 5, 8, 11, 18, 20ನ್ನು ನೋಡಿರಿ.
ತಪ್ಪಾಗಿ ಮಾರ್ಗದರ್ಶಿಸಲ್ಪಟ್ಟ ಹುರುಪು
ಸ್ವನೀತಿ ಮತ್ತು ಹುರುಪು ಹೆಚ್ಚಾಗಿ ಪರಸ್ಪರ ಸಂಬಂಧಿಸಲ್ಪಟ್ಟಿವೆ. ಧಾರ್ಮಿಕ ಒಲವುಳ್ಳ ಯೆಹೂದ್ಯರ ಕುರಿತಾಗಿ ಮಾತಾಡುತ್ತಾ ಅಪೊಸ್ತಲ ಪೌಲನು, “ಅವರ ಆಸಕ್ತಿ [“ದೇವರಿಗಾಗಿ ಹುರುಪು,” NW] ಜ್ಞಾನಾನುಸಾರವಾದದ್ದಲ್ಲ. ಅವರು ದೇವರಿಂದ ದೊರಕುವ ನೀತಿಯನ್ನರಿಯದೆ ಸ್ವನೀತಿಯನ್ನೇ ಸ್ಥಾಪಿಸಬೇಕೆಂದು ಪ್ರಯತ್ನಿಸುತ್ತಾ ಇದದ್ದರಿಂದ ದೇವರ ನೀತಿಗೆ ಅಧೀನರಾಗಲಿಲ್ಲ” ಎಂದು ಹೇಳಿದನು. (ರೋಮಾಪುರ 10:2, 3) ಒಬ್ಬ ಫರಿಸಾಯನೋಪಾದಿ, ಯೆಹೋವನ ನೀತಿಯ ಮೇಲೆ ಆಧಾರಿತವಾಗಿರದೆ ಅವನ ಹುರುಪು ತಪ್ಪಾಗಿ ಮಾರ್ಗದರ್ಶಿಸಲ್ಪಟ್ಟಿದ್ದರೂ, ಪೌಲನು ಸ್ವತಃ ವಿಪರೀತವಾಗಿ ಹುರುಪುಳ್ಳವನಾಗಿದ್ದನು.—ಗಲಾತ್ಯ 1:13, 14; ಫಿಲಿಪ್ಪಿ 3:6.
ಯೋಗ್ಯವಾಗಿಯೇ ಬೈಬಲ್ ಬುದ್ಧಿ ಹೇಳುವುದು: “ಧರ್ಮವನ್ನು ಅತಿಯಾಗಿ ಆಚರಿಸದಿರು; ಜ್ಞಾನವನ್ನು ಅಧಿಕವಾಗಿ ಆರ್ಜಿಸಬೇಡ; ನಿನ್ನನ್ನು ನೀನೇ ನಾಶನಕ್ಕೆ ಏಕೆ ಗುರಿಮಾಡಿಕೊಳ್ಳುವಿ?” (ಪ್ರಸಂಗಿ 7:16) ಸಭೆಯೊಂದರಲ್ಲಿ ಕ್ರೈಸ್ತನೊಬ್ಬನು ನ್ಯಾಯನಿಷ್ಠನಾಗಿ ಆರಂಭಿಸಬಹುದು, ಆದರೆ ಅವನ ನ್ಯಾಯನಿಷ್ಠತೆ ಮತ್ತು ಹುರುಪು ಸ್ವನೀತಿಯಾಗಿ ಅವನತಿ ಹೊಂದಬಲ್ಲದು. ಯೆಹೋವನ ನೀತಿಯ ಬದಲಿಗೆ ಮಾನವ ವಿವೇಕದಿಂದ ಮಾರ್ಗದರ್ಶಿಸಲ್ಪಟ್ಟಾಗ, ಧಾರ್ಮಿಕ ಹುರುಪು ಇತರರನ್ನು ನೋಯಿಸಬಲ್ಲದು. ಹೇಗೆ?
ಉದಾಹರಣೆಗಾಗಿ ಹೆತ್ತವರು, ಇತರರ ಆತ್ಮಿಕ ಅಗತ್ಯಗಳನ್ನು ಪರಾಮರಿಸುವುದರಲ್ಲಿ ಅತಿರೇಕವಾಗಿ ಮಗ್ನರಾಗಬಹುದು, ಮತ್ತು ಈ ಕಾರ್ಯಗತಿಯಲ್ಲಿ ತಮ್ಮ ಸ್ವಂತ ಕುಟುಂಬದ ಅಗತ್ಯಗಳನ್ನು ಅವರು ಅಲಕ್ಷಿಸಬಹುದು. ಅಥವಾ ಹೆತ್ತವರು ತೀರ ಹೆಚ್ಚಾಗಿ ಹುರುಪುಳ್ಳವರಾಗಿರುತ್ತಾ, ಅವರು ಪ್ರಾಯಶಃ ಮಾಡಲು ಸಾಧ್ಯವಿರುವಂತಹದ್ದಕ್ಕಿಂತ ಹೆಚ್ಚನ್ನು ತಮ್ಮ ಮಕ್ಕಳಿಂದ ಕೇಳಿಕೊಳ್ಳತ್ತಿರಬಹುದು. (ಎಫೆಸ 6:4; ಕೊಲೊಸ್ಸೆ 3:21) ಅಂತಹ ಅಸಮಂಜಸ ಬೇಡಿಕೆಗಳನ್ನು ತಲಪಲು ಅಶಕ್ತರಾಗಿದ್ದು, ಕೆಲವು ಮಕ್ಕಳು ಒಂದು ಇಬ್ಬಗೆಯ ಜೀವನವನ್ನು ನಡಿಸುವ ಮೂಲಕ ಪ್ರತಿಕ್ರಿಯಿಸುತ್ತಾರೆ. ವಿವೇಚನೆಯುಳ್ಳ ಒಬ್ಬ ಹೆತ್ತವನು ತನ್ನ ಕುಟುಂಬದ ಸೀಮಿತಗಳನ್ನು ಪರಿಗಣಿಸಿ ಯೋಗ್ಯವಾದ ಅಳವಡಿಸುವಿಕೆಗಳನ್ನು ಮಾಡುವನು.—ಆದಿಕಾಂಡ 33:12-14ನ್ನು ಹೋಲಿಸಿರಿ.
ವಿಪರೀತ ಹುರುಪು, ಇತರರೊಂದಿಗಿನ ವ್ಯವಹಾರಗಳಲ್ಲಿ ಅತ್ಯಾವಶ್ಯಕವಾದ ಔಚಿತ್ಯಜ್ಞಾನ, ಸಹಾನುಭೂತಿ, ಮತ್ತು ಕೋಮಲತೆಯನ್ನು ಸಹ ನಮ್ಮಿಂದ ವಂಚಿಸಬಲ್ಲದು. ಒಬ್ಬ ವ್ಯಕ್ತಿಯು ರಾಜ್ಯ ಹಿತಾಸಕ್ತಿಗಳನ್ನು ಮುಂದುವರಿಸಲು ತುಂಬ ಕಠಿನವಾಗಿ ಶ್ರಮಿಸಬಹುದು. ಆದಾಗಲೂ, ಅವನ ವಿಪರೀತ ಹುರುಪು ಜನರನ್ನು ನೋಯಿಸಬಹುದು. ಪೌಲನು ಅಂದದ್ದು: “ನನಗೆ ಪ್ರವಾದನವರವಿದ್ದರೂ ಎಲ್ಲಾ ರಹಸ್ಯಗಳೂ ಸಕಲ ವಿಧವಾದ ವಿದ್ಯೆಯೂ ತಿಳಿದರೂ, ಬೆಟ್ಟಗಳನ್ನು ತೆಗೆದಿಡುವದಕ್ಕೆ ಬೇಕಾದಷ್ಟು ನಂಬಿಕೆಯಿದ್ದರೂ ನಾನು ಪ್ರೀತಿಯಿಲ್ಲದವನಾಗಿದ್ದರೆ ಏನೂ ಅಲ್ಲದವನಾಗಿದ್ದೇನೆ. ನನಗಿರುವದೆಲ್ಲವನ್ನು ಅನ್ನದಾನಮಾಡಿದರೂ, ನನ್ನ ದೇಹವನ್ನು ಸುಡುವದಕ್ಕೆ ಒಪ್ಪಿಸಿದರೂ ಪ್ರೀತಿಯು ನನಗಿಲ್ಲದಿದ್ದರೆ ನನಗೇನೂ ಪ್ರಯೋಜನವಾಗುವದಿಲ್ಲ.”—1 ಕೊರಿಂಥ 13:2, 3.
ದೇವರು ನಮ್ರ ವ್ಯಕ್ತಿಗಳಿಗೆ ಅನುಗ್ರಹ ತೋರಿಸುತ್ತಾನೆ
ಕ್ರೈಸ್ತರೋಪಾದಿ, ಅದು ಬಡಿಯುವ ಮುಂಚೆಯೇ ನಾವು ಸ್ವನೀತಿಯ ಬೆದರಿಕೆಯನ್ನು ಗುರುತಿಸಿಕೊಳ್ಳುವ ಅಗತ್ಯವಿದೆ. ಒಂದು ಶ್ರೇಷ್ಠ ಮನೋಭಾವ, ಇತರರನ್ನು ತೀರ್ಪುಮಾಡುವ ಹವ್ಯಾಸ, ಮತ್ತು ಮಾನವ ವಿವೇಕದ ಮೇಲೆ ಆಧರಿತವಾದ ಕುರುಡು ಹುರುಪನ್ನು ನಾವು ಹೋಗಲಾಡಿಸಬೇಕು.
ಫರಿಸಾಯಿಕ ಮನೋಭಾವಗಳ ಕುರಿತಾಗಿ ನಾವು “ಜಾಗರೂಕ”ರಾಗಿರುವಾಗ, ಇತರರನ್ನು ಸ್ವನೀತಿಯುಳ್ಳವರೆಂದು ತೀರ್ಪುಮಾಡುವ ಬದಲಿಗೆ, ನಮ್ಮ ಸ್ವಂತ ಪ್ರವೃತ್ತಿಗಳು ಮತ್ತು ಇಷ್ಟಗಳ ಮೇಲೆ ಕೇಂದ್ರೀಕರಿಸುವುದು ಹೆಚ್ಚು ಉತ್ತಮವಾಗಿರುವುದು. ಯೇಸು ಫರಿಸಾಯರನ್ನು ತೀರ್ಪುಮಾಡಿ ಅವರನ್ನು ನಿತ್ಯ ನಾಶನಕ್ಕೆ ಅರ್ಹರಾಗಿರುವ “ಸರ್ಪಜಾತಿಯವ”ರೆಂದು ಖಂಡಿಸಿದನೆಂಬುದು ಸತ್ಯ. ಆದರೆ ಯೇಸು ಜನರ ಹೃದಯಗಳನ್ನು ಓದಸಾಧ್ಯವಿತ್ತು. ನಾವು ಹಾಗೆ ಮಾಡಸಾಧ್ಯವಿಲ್ಲ.—ಮತ್ತಾಯ 23:33.
ನಾವು ನಮ್ಮ ಸ್ವಂತದ್ದಲ್ಲ, ಬದಲಾಗಿ ದೇವರ ನೀತಿಯನ್ನು ಹುಡುಕೋಣ. (ಮತ್ತಾಯ 6:33) ಆಗ ಮಾತ್ರ ನಮಗೆ ಯೆಹೋವನ ಅನುಗ್ರಹವು ಇರಸಾಧ್ಯವಿದೆ, ಯಾಕಂದರೆ ಬೈಬಲು ನಮ್ಮೆಲ್ಲರಿಗೆ ಬುದ್ಧಿ ಹೇಳುವುದು: “ನೀವೆಲ್ಲರೂ ದೀನಮನಸ್ಸೆಂಬ ವಸ್ತ್ರದಿಂದ ಸೊಂಟಾಕಟ್ಟಿಕೊಂಡು ಒಬ್ಬರಿಗೊಬ್ಬರು ಸೇವೆಮಾಡಿರಿ. ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.”—1 ಪೇತ್ರ 5:5.