“ಎಚ್ಚರಿಕೆಯಿಂದಿರಿ”
“ಎಲ್ಲವುಗಳ ಅಂತ್ಯವು ಸಮೀಪಿಸಿದೆ. ಆದುದರಿಂದ . . . ಪ್ರಾರ್ಥನೆಗಳ ವಿಷಯದಲ್ಲಿ ಎಚ್ಚರಿಕೆಯಿಂದಿರಿ.”—1 ಪೇತ್ರ 4:7, NW.
1. ಯೇಸುವಿನ ಬೋಧನೆಯ ಮುಖ್ಯವಿಷಯ ಏನಾಗಿತ್ತು?
ಯೇಸು ಕ್ರಿಸ್ತನು ಭೂಮಿಯಲ್ಲಿದ್ದಾಗ, ಅವನ ಬೋಧನೆಯ ಮುಖ್ಯವಿಷಯ ದೇವರ ರಾಜ್ಯವಾಗಿತ್ತು. ಆ ರಾಜ್ಯದ ಮೂಲಕವೇ ಯೆಹೋವನು ತನ್ನ ವಿಶ್ವ ಪರಮಾಧಿಕಾರವನ್ನು ನಿರ್ದೋಷೀಕರಿಸುವನು ಮತ್ತು ತನ್ನ ಹೆಸರನ್ನು ಪವಿತ್ರೀಕರಿಸುವನು. ಈ ಕಾರಣದಿಂದಲೇ ಯೇಸು ತನ್ನ ಶಿಷ್ಯರಿಗೆ ಹೀಗೆ ಪ್ರಾರ್ಥಿಸುವಂತೆ ಕಲಿಸಿದನು: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾ. 4:17; 6:9, 10) ಈ ರಾಜ್ಯ ಸರಕಾರವು ಶೀಘ್ರದಲ್ಲೇ ಸೈತಾನನ ಜಗತ್ತನ್ನು ಅಂತ್ಯಗೊಳಿಸಿ, ಭೂಮಿಯಾದ್ಯಂತ ದೇವರ ಚಿತ್ತ ನೆರವೇರುವಂತೆ ನೋಡಿಕೊಳ್ಳುವುದು. ದಾನಿಯೇಲನು ಮುಂತಿಳಿಸಿದಂತೆ, ದೇವರ ರಾಜ್ಯವು “ಆ [ಅಂದರೆ ಸದ್ಯದ ದಿನದ] ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”—ದಾನಿ. 2:44.
2. (ಎ) ಯೇಸು ರಾಜ್ಯಾಧಿಕಾರದಲ್ಲಿ ಪ್ರತ್ಯಕ್ಷನಾಗಿದ್ದಾನೆಂದು ಆತನ ಹಿಂಬಾಲಕರಿಗೆ ಹೇಗೆ ತಿಳಿದುಬರಲಿತ್ತು? (ಬಿ) ಆ ಸೂಚನೆ ಬೇರೇನನ್ನು ಗುರುತಿಸಲಿತ್ತು?
2 ದೇವರ ರಾಜ್ಯದ ಬರೋಣವು ಯೇಸುವಿನ ಹಿಂಬಾಲಕರಿಗೆ ತುಂಬ ಮಹತ್ತ್ವದ ವಿಷಯವಾಗಿದ್ದರಿಂದ ಅವರು ಅವನಿಗೆ ಕೇಳಿದ್ದು: “ನೀನು ಪ್ರತ್ಯಕ್ಷನಾಗುವದಕ್ಕೂ ಯುಗದ ಸಮಾಪ್ತಿಗೂ ಸೂಚನೆಯೇನು?” (ಮತ್ತಾ. 24:3) ರಾಜ್ಯಾಧಿಕಾರವುಳ್ಳವನಾಗಿ ಕ್ರಿಸ್ತನು ಪ್ರತ್ಯಕ್ಷನಾಗುವಾಗ ಭೂಮಿಯಲ್ಲಿರುವವರಿಗೆ ಅದನ್ನು ನೋಡಲು ಅಸಾಧ್ಯವಾಗಿರಲಿತ್ತು. ಈ ಕಾರಣಕ್ಕಾಗಿ, ಅವರು ನೋಡಬಹುದಾದ ಒಂದು ದೃಶ್ಯ ಸೂಚನೆಯನ್ನು ಕೊಡಲಾಯಿತು. ಆ ಸೂಚನೆಯಲ್ಲಿ, ವಿಭಿನ್ನ ವೈಶಿಷ್ಟ್ಯಗಳು ಸೇರಿರಲಿದ್ದವು ಮತ್ತು ಇವುಗಳನ್ನು ಬೈಬಲ್ನಲ್ಲಿ ಮುಂತಿಳಿಸಲಾಗಿದೆ. ಹೀಗೆ, ಆ ಸಮಯದಲ್ಲಿ ಬದುಕಿರುವ ಯೇಸುವಿನ ಹಿಂಬಾಲಕರು ಆ ಸೂಚನೆಯನ್ನು ನೋಡಿ, ಆತನು ಸ್ವರ್ಗದಲ್ಲಿ ಆಳಲಾರಂಭಿಸಿದ್ದಾನೆ ಎಂಬುದನ್ನು ವಿವೇಚಿಸಿ ತಿಳಿದುಕೊಳ್ಳಸಾಧ್ಯವಿತ್ತು. ಈ ಸೂಚನೆಯು, ಈಗ ಭೂಮಿಯಲ್ಲಿರುವ ದುಷ್ಟ ವ್ಯವಸ್ಥೆಯ ‘ಕಡೇ ದಿವಸಗಳು’ ಎಂದು ಬೈಬಲ್ ಯಾವುದನ್ನು ಕರೆಯುತ್ತದೋ ಆ ಅವಧಿಯ ಆರಂಭವನ್ನೂ ಗುರುತಿಸಲಿತ್ತು.—2 ತಿಮೊ. 3:1-5, 13; ಮತ್ತಾ. 24:7-14.
ಕಡೇ ದಿವಸಗಳಲ್ಲಿ ಎಚ್ಚರಿಕೆಯಿಂದಿರಿ
3. ಕ್ರೈಸ್ತರು ಏಕೆ ಎಚ್ಚರಿಕೆಯಿಂದಿರಬೇಕು?
3 ಅಪೊಸ್ತಲ ಪೇತ್ರನು ಬರೆದದ್ದು: “ಎಲ್ಲವುಗಳ ಅಂತ್ಯವು ಸಮೀಪಿಸಿದೆ. ಆದುದರಿಂದ ಸ್ವಸ್ಥಚಿತ್ತರಾಗಿರಿ ಮತ್ತು ಪ್ರಾರ್ಥನೆಗಳ ವಿಷಯದಲ್ಲಿ ಎಚ್ಚರಿಕೆಯಿಂದಿರಿ.” (1 ಪೇತ್ರ 4:7, NW) ಯೇಸುವಿನ ಹಿಂಬಾಲಕರು ಎಚ್ಚರಿಕೆಯಿಂದಿರಬೇಕಿತ್ತು, ಅಂದರೆ ಆತನು ರಾಜ್ಯಾಧಿಕಾರದಲ್ಲಿ ಪ್ರತ್ಯಕ್ಷನಾಗಿದ್ದಾನೆಂದು ಸೂಚಿಸುವ ಲೋಕ ಘಟನೆಗಳನ್ನು ಎಚ್ಚರದಿಂದ ಗಮನಿಸುತ್ತಿರಬೇಕಿತ್ತು. ಈ ದುಷ್ಟ ವ್ಯವಸ್ಥೆಯ ಅಂತ್ಯವು ಹೆಚ್ಚೆಚ್ಚು ಸಮೀಪಬಂದಂತೆ ಅವರು ಇನ್ನಷ್ಟು ಹೆಚ್ಚು ಎಚ್ಚರಿಕೆ ವಹಿಸಬೇಕಿತ್ತು. ಯೇಸು ತನ್ನ ಶಿಷ್ಯರಿಗಂದದ್ದು: “ಮನೇಯಜಮಾನನು . . . [ಸೈತಾನನ ಲೋಕಕ್ಕೆ ನ್ಯಾಯತೀರ್ಪು ಮಾಡಲು] ಯಾವಾಗ ಬರುತ್ತಾನೋ ನಿಮಗೆ ಗೊತ್ತಿಲ್ಲದ ಕಾರಣ ಎಚ್ಚರವಾಗಿರಿ.” —ಮಾರ್ಕ 13:35, 36.
4. ಸೈತಾನನ ಲೋಕದ ಭಾಗವಾಗಿರುವವರ ಹಾಗೂ ಯೆಹೋವನ ಸೇವಕರ ಮನೋಭಾವದ ಮಧ್ಯೆಯಿರುವ ವ್ಯತ್ಯಾಸ ತಿಳಿಸಿ. (ಚೌಕ ನೋಡಿ.)
4 ಲೋಕದಲ್ಲಿ ಅಧಿಕಾಂಶ ಜನರು ಸೈತಾನನ ಪ್ರಭುತ್ವದ ಕೆಳಗಿದ್ದಾರೆ ಮತ್ತು ಲೋಕದಲ್ಲಿ ನಡೆಯುತ್ತಿರುವ ಘಟನೆಗಳ ಅರ್ಥವೇನೆಂಬುದಕ್ಕೆ ಗಮನಹರಿಸಿಲ್ಲ. ರಾಜ್ಯಾಧಿಕಾರವುಳ್ಳ ಕ್ರಿಸ್ತನ ಸಾನ್ನಿಧ್ಯವನ್ನು ಅವರು ವಿವೇಚಿಸಿ ತಿಳಿದುಕೊಂಡಿಲ್ಲ. ಕ್ರಿಸ್ತನ ನಿಜ ಹಿಂಬಾಲಕರಾದರೊ ಎಚ್ಚರಿಕೆಯಿಂದಿದ್ದು, ಗತ ಶತಮಾನದಲ್ಲಿ ನಡೆದ ಘಟನೆಗಳ ನಿಜಾರ್ಥವನ್ನು ಗ್ರಹಿಸಿಕೊಂಡಿದ್ದಾರೆ. 1925ರಿಂದ, ಯೆಹೋವನ ಸಾಕ್ಷಿಗಳು ಸ್ವರ್ಗೀಯ ರಾಜ್ಯಾಧಿಕಾರದಲ್ಲಿ ಕ್ರಿಸ್ತನ ಸಾನ್ನಿಧ್ಯವು 1914ರಲ್ಲಿ ಆರಂಭವಾಯಿತು ಎಂಬದನ್ನು ಗ್ರಹಿಸಿದ್ದಾರೆ. Iನೇ ಲೋಕ ಯುದ್ಧ ಮತ್ತು ಅದನ್ನು ಹಿಂಬಾಲಿಸಿ ನಡೆದ ಘಟನೆಗಳು ಇದಕ್ಕೆ ಖಚಿತವಾದ ಪುರಾವೆ ಕೊಟ್ಟಿವೆ. ಆಗ, ಸೈತಾನನ ಪ್ರಭಾವದಡಿ ಈ ದುಷ್ಟ ವ್ಯವಸ್ಥೆಯ ಕಡೇ ದಿವಸಗಳು ಆರಂಭಗೊಂಡವು. ಶ್ರದ್ಧೆಯಿಂದ ಲಕ್ಷ್ಯಕೊಡುವ ಅನೇಕ ಜನರು Iನೇ ಲೋಕ ಯುದ್ಧದ ಮುಂಚೆ ಮತ್ತು ನಂತರದ ಅವಧಿಯಲ್ಲಾಗಿರುವ ದೊಡ್ಡ ವ್ಯತ್ಯಾಸವನ್ನು ಗ್ರಹಿಸಿದ್ದಾರೆ. ಆದರೆ ಅದಕ್ಕೆ ಕಾರಣವೇನೆಂಬುದು ಅವರ್ಯಾರಿಗೂ ತಿಳಿದಿಲ್ಲ.—“ಕೋಲಾಹಲದ ಯುಗಾರಂಭ” ಎಂಬ ಚೌಕ ನೋಡಿ.
5. ನಾವು ಎಚ್ಚರದಿಂದುಳಿಯುವುದು ಪ್ರಾಮುಖ್ಯವೇಕೆ?
5 ಈಗ ಹತ್ತಿರಹತ್ತಿರ ಒಂದು ಶತಮಾನದಿಂದ, ಲೋಕಾದ್ಯಂತ ನಡೆಯುತ್ತಿರುವ ಭೀಕರ ಘಟನೆಗಳು ನಾವೀಗ ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆಂಬ ಸಾಕ್ಷ್ಯಕೊಡುತ್ತವೆ. ಶಕ್ತಿಶಾಲಿ ದೇವದೂತ ಪಡೆಗಳನ್ನು ಸೈತಾನನ ಲೋಕದ ವಿರುದ್ಧ ನಡೆಸುವಂತೆ ಯೆಹೋವನು ಕ್ರಿಸ್ತನಿಗೆ ಅಪ್ಪಣೆಕೊಡಲು ಕೇವಲ ಕೊಂಚ ಸಮಯ ಬಾಕಿ ಇದೆ. (ಪ್ರಕ. 19:11-21) ಎಚ್ಚರವಾಗಿರುವಂತೆ ನಿಜ ಕ್ರೈಸ್ತರಿಗೆ ಹೇಳಲಾಗಿದೆ. ಈ ವ್ಯವಸ್ಧೆಯ ಅಂತ್ಯವನ್ನು ಎದುರುನೋಡುತ್ತಿರುವ ನಾವು ಇದನ್ನು ತುರ್ತಿನೊಂದಿಗೆ ಮಾಡುವುದು ಅವಶ್ಯ. (ಮತ್ತಾ. 24:42) ನಾವು ಎಚ್ಚರದಿಂದುಳಿದು, ಕ್ರಿಸ್ತನ ನಿರ್ದೇಶನದ ಕೆಳಗೆ ಭೂಮಿಯಾದ್ಯಂತ ಒಂದು ನಿರ್ದಿಷ್ಟ ಕೆಲಸವನ್ನು ಪೂರೈಸಬೇಕು.
ಭೂವ್ಯಾಪಕ ಕೆಲಸ
6, 7. ರಾಜ್ಯ ಸಾರುವ ಕೆಲಸವು ಕಡೇ ದಿವಸಗಳಲ್ಲಿ ಹೇಗೆ ಅಭಿವೃದ್ಧಿಯಾಗಿದೆ?
6 ಯೆಹೋವನ ಸೇವಕರು ಮಾಡಲಿರುವ ಕೆಲಸವನ್ನು, ದುಷ್ಟ ವ್ಯವಸ್ಥೆಯ ಕಡೇ ದಿವಸಗಳನ್ನು ಗುರುತಿಸುವ ಸಂಘಟಿತ ಸೂಚನೆಯ ಭಾಗವಾಗಿ ಮುಂತಿಳಿಸಲಾಗಿತ್ತು. ಈ ಅಂತ್ಯಕಾಲದಲ್ಲಿ ಏನೇನು ನಡೆಯಲಿದೆ ಎಂಬುದನ್ನು ಒಂದೊಂದಾಗಿ ಹೇಳುತ್ತಿದ್ದಾಗ ಯೇಸು ಈ ಭೌಗೋಳಿಕ ಕೆಲಸವನ್ನು ವರ್ಣಿಸಿದನು. ಅವನ ಪ್ರವಾದನೆಯಲ್ಲಿ ಈ ಅರ್ಥಭರಿತ ವಾಕ್ಯ ಇದೆ: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.”—ಮತ್ತಾ. 24:14.
7 ಯೇಸುವಿನ ಪ್ರವಾದನೆಯ ಈ ಅಂಶಕ್ಕೆ ಸಂಬಂಧಿಸಿರುವ ಕೆಲವು ವಾಸ್ತವಾಂಶಗಳ ಕುರಿತು ಯೋಚಿಸಿ. 1914ರಲ್ಲಿ ಕಡೇ ದಿವಸಗಳು ಆರಂಭವಾದಾಗ ಸುವಾರ್ತಾ ಘೋಷಕರ ಸಂಖ್ಯೆ ತುಂಬ ಕಡಿಮೆಯಿತ್ತು. ಆದರೆ ಈಗ ಅದು ತುಂಬ ಹೆಚ್ಚಿದೆ. ಲೋಕದಾದ್ಯಂತ 70 ಲಕ್ಷಕ್ಕೂ ಹೆಚ್ಚು ಯೆಹೋವನ ಸಾಕ್ಷಿಗಳು ಸಾರುತ್ತಿದ್ದಾರೆ ಮತ್ತು ಅವರು 1,00,000ಕ್ಕಿಂತಲೂ ಹೆಚ್ಚು ಸಭೆಗಳಾಗಿ ಸಂಘಟಿತರಾಗಿದ್ದಾರೆ. 2008ರಲ್ಲಿ ಕ್ರಿಸ್ತನ ಮರಣದ ಜ್ಞಾಪಕಾಚರಣೆಗಾಗಿ ಇನ್ನೂ 1 ಕೋಟಿ ಜನರು ಅವರೊಂದಿಗೆ ಸೇರಿಬಂದರು. ಹಿಂದಿನ ವರ್ಷದ ಹಾಜರಿಗೆ ಹೋಲಿಸುವಾಗ ಇದೆಷ್ಟು ಗಮನಾರ್ಹ!
8. ವಿರೋಧದಿಂದಾಗಿ ನಮ್ಮ ಸಾರುವ ಕೆಲಸದ ಯಶಸ್ಸು ನಿಂತುಹೋಗಿಲ್ಲವೇಕೆ?
8 ಈ ವ್ಯವಸ್ಥೆಯ ಅಂತ್ಯ ಬರುವ ಮುಂಚೆ ಎಲ್ಲ ಜನಾಂಗಗಳಿಗೆ ದೇವರ ರಾಜ್ಯದ ಕುರಿತು ಎಷ್ಟು ಸಮಗ್ರ ಸಾಕ್ಷಿಕೊಡಲಾಗುತ್ತಿದೆ! “ಈ ಪ್ರಪಂಚದ ದೇವರು” ಪಿಶಾಚನಾದ ಸೈತಾನನಾಗಿದ್ದರೂ ಈ ಕೆಲಸವು ನಡೆಯುತ್ತಿದೆ. (2 ಕೊರಿಂ. 4:4) ಈ ಲೋಕದ ಎಲ್ಲ ರಾಜಕೀಯ, ಧಾರ್ಮಿಕ ಮತ್ತು ವಾಣಿಜ್ಯ ಘಟಕಗಳು ಹಾಗೂ ಪ್ರಸಾರ ಮಾಧ್ಯಮಗಳು ಅವನ ಹಿಡಿತದಲ್ಲಿವೆ. ಹೀಗಿರುವಾಗ, ಸಾಕ್ಷಿ ಕಾರ್ಯ ಅಚ್ಚರಿ ಮೂಡಿಸುವಷ್ಟು ಯಶಸ್ಸು ಕಾಣಲು ಕಾರಣವೇನು? ಖಂಡಿತವಾಗಿ ಯೆಹೋವನ ಬೆಂಬಲವೇ. ಆದ್ದರಿಂದಲೇ, ರಾಜ್ಯ ಸಾರುವಿಕೆಯ ಕೆಲಸವನ್ನು ನಿಲ್ಲಿಸಲು ಸೈತಾನನು ಮಾಡುವ ಯತ್ನಗಳ ಹೊರತೂ ಈ ಕೆಲಸವು ಅಸಾಧಾರಣ ರೀತಿಯಲ್ಲಿ ನಡೆಯುತ್ತಾ ಇದೆ.
9. ನಮ್ಮ ಆಧ್ಯಾತ್ಮಿಕ ಸಮೃದ್ಧಿಯನ್ನು ಒಂದು ಚಮತ್ಕಾರವೆಂದು ಕರೆಯಬಹುದೇಕೆ?
9 ರಾಜ್ಯ ಸಾರುವ ಕೆಲಸದ ಯಶಸ್ಸು ಹಾಗೂ ಯೆಹೋವನ ಜನರ ಅಭಿವೃದ್ಧಿ ಮತ್ತು ಆಧ್ಯಾತ್ಮಿಕ ಸಮೃದ್ಧಿ ಒಂದು ಚಮತ್ಕಾರವೇ ಸರಿ. ದೇವರ ಬೆಂಬಲ, ಅಂದರೆ ಆತನು ತನ್ನ ಜನರಿಗೆ ಕೊಡುವ ಮಾರ್ಗದರ್ಶನ ಹಾಗೂ ಸಂರಕ್ಷಣೆ ಇಲ್ಲದಿದ್ದಲ್ಲಿ ಸಾರುವ ಕೆಲಸವನ್ನು ಮಾಡುವುದು ಅಸಾಧ್ಯವಾಗಿರುತ್ತಿತ್ತು. (ಮತ್ತಾಯ 19:26 ಓದಿ.) ಸೇವೆಗೆ ಸಿದ್ಧರಿರುವ ಮತ್ತು ಎಚ್ಚರಿಕೆಯಿಂದಿರುವ ಜನರ ಹೃದಯಗಳಲ್ಲಿ ದೇವರಾತ್ಮವು ಕೆಲಸಮಾಡುತ್ತಿರುವುದರಿಂದ, ಈ ಸಾರುವ ಕೆಲಸ ಯಶಸ್ವಿಯಾಗಿ ಮುಕ್ತಾಯಗೊಳ್ಳುವುದು ಮತ್ತು “ಆಗ ಅಂತ್ಯವು ಬರುವದು” ಎಂಬ ನಿಶ್ಚಯ ನಮಗಿರಬಲ್ಲದು. ಆ ಸಮಯವು ಶೀಘ್ರವಾಗಿ ಧಾವಿಸಿ ಬರುತ್ತಿದೆ.
“ಆ ಮಹಾಸಂಕಟ”
10. ಬರಲಿರುವ ಮಹಾ ಸಂಕಟವನ್ನು ಯೇಸು ಹೇಗೆ ವರ್ಣಿಸಿದನು?
10 “ಮಹಾಸಂಕಟ” ಎಂದು ಕರೆಯಲಾಗುವ ಅವಧಿಯಲ್ಲಿ ಈ ದುಷ್ಟ ವ್ಯವಸ್ಥೆ ಅಂತ್ಯಗೊಳ್ಳುವುದು. (ಪ್ರಕ. 7:14, NIBV) ಈ ಮಹಾಸಂಕಟ ಎಷ್ಟು ದೀರ್ಘಕಾಲ ನಡೆಯುವುದೆಂದು ಬೈಬಲ್ ತಿಳಿಸುವುದಿಲ್ಲ. ಆದರೆ ಯೇಸು ಹೇಳಿದ್ದು: “ಅಂಥ ಮಹಾಸಂಕಟವು ಲೋಕಾದಿಯಿಂದ ಇಂದಿನವರೆಗೂ ಆಗಲಿಲ್ಲ. ಇನ್ನು ಮುಂದೆಯೂ ಆಗುವುದಿಲ್ಲ.” (ಮತ್ತಾ. 24:21, NIBV) ಮಾನವಕುಲವು ಈಗಾಗಲೇ ಹಲವಾರು ಸಂಕಟಗಳನ್ನು ಅನುಭವಿಸಿದೆ. ಉದಾಹರಣೆಗೆ, IIನೇ ಲೋಕ ಯುದ್ಧದಲ್ಲಿ 5-6 ಕೋಟಿ ಜನರು ಜೀವ ಕಳೆದುಕೊಂಡರು. ಆದರೆ ಇವೆಲ್ಲವುಗಳಿಗೆ ಹೋಲಿಸುವಾಗ, ಬರಲಿರುವ ಮಹಾಸಂಕಟವು ತುಂಬ ಕಠಿನವಾಗಿರುವುದು. ಅರ್ಮಗೆದ್ದೋನ್ ಯುದ್ಧದೊಂದಿಗೆ ಅದು ಕೊನೆಗೊಳ್ಳುವುದು. ಆಗ ಯೆಹೋವನು, ಸೈತಾನನ ಭೂವ್ಯವಸ್ಥೆಯ ಪ್ರತಿಯೊಂದು ಜಾಡನ್ನು ಅಳಿಸಿಹಾಕಲು ತನ್ನ ಸಂಹಾರ ಪಡೆಗಳನ್ನು ಕಳುಹಿಸುವನು.—ಪ್ರಕ. 16:14, 16.
11, 12. ಯಾವ ಘಟನೆ ಮಹಾಸಂಕಟದ ಆರಂಭವನ್ನು ಸೂಚಿಸುವುದು?
11 ಬೈಬಲ್ ಪ್ರವಾದನೆಗಳು, ಮಹಾಸಂಕಟ ಆರಂಭವಾಗುವ ತಾರೀಖನ್ನು ಕೊಡುವುದಿಲ್ಲ. ಆದರೆ ಅದು ಯಾವ ಅಸಾಮಾನ್ಯ ಘಟನೆಯಿಂದ ಆರಂಭಗೊಳ್ಳುವುದೆಂದು ಅವು ತಿಳಿಸುತ್ತವೆ. ಆ ಘಟನೆಯೇನೆಂದರೆ, ರಾಜಕೀಯ ಶಕ್ತಿಗಳಿಂದ ಎಲ್ಲಾ ಸುಳ್ಳು ಧರ್ಮಗಳ ನಾಶನ. ಪ್ರಕಟನೆ 17 ಮತ್ತು 18ನೇ ಅಧ್ಯಾಯಗಳಲ್ಲಿರುವ ಬೈಬಲ್ ಪ್ರವಾದನೆಗಳಲ್ಲಿ ಸುಳ್ಳು ಧರ್ಮವನ್ನು, ಭೂಮಿಯ ರಾಜಕೀಯ ವ್ಯವಸ್ಥೆಗಳೊಂದಿಗೆ ಅನೈತಿಕ ಸಂಬಂಧವಿರುವ ಜಾರಸ್ತ್ರೀಗೆ ಹೋಲಿಸಲಾಗಿದೆ. ಈ ರಾಜಕೀಯ ಘಟಕಗಳೇ “ಆ ಜಾರಸ್ತ್ರೀಯನ್ನು ದ್ವೇಷಿಸಿ ಅವಳನ್ನು ಗತಿಗೆಟ್ಟವಳನ್ನಾಗಿಯೂ ಬಟ್ಟೆಯಿಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು ಅವಳನ್ನು ಬೆಂಕಿಯಿಂದ ಸುಟ್ಟುಬಿಡುವ” ಸಮಯ ಬೇಗನೆ ಬರಲಿದೆಯೆಂದು ಪ್ರಕಟನೆ 17:16 ತೋರಿಸುತ್ತದೆ.
12 ಅದು ನಡೆಯುವ ಸಮಯ ಬಂದಾಗ, ಎಲ್ಲ ಸುಳ್ಳು ಧರ್ಮಗಳನ್ನು ನಾಶಮಾಡುವ ತನ್ನ ‘ಅಭಿಪ್ರಾಯವನ್ನು ನೆರವೇರಿಸುವದಕ್ಕೆ ದೇವರು ಅವರ [ರಾಜಕೀಯ ಧುರೀಣರ] ಹೃದಯಗಳನ್ನು ಪ್ರೇರಿಸುವನು.’ (ಪ್ರಕ. 17:17) ಆದುದರಿಂದಲೇ ಈ ನಾಶನ ದೇವರಿಂದ ಬಂದದ್ದೆಂದು ಹೇಳಬಹುದು. ಇದು, ತನ್ನ ಚಿತ್ತಕ್ಕೆ ವಿರುದ್ಧವಾದ ಬೋಧನೆಗಳನ್ನು ಕಲಿಸಿರುವ ಮತ್ತು ತನ್ನ ಸೇವಕರನ್ನು ಹಿಂಸಿಸಿರುವ ಕಪಟ ಧರ್ಮಗಳ ವಿರುದ್ಧ ದೇವರ ನ್ಯಾಯತೀರ್ಪಾಗಿರುವುದು. ಸುಳ್ಳು ಧರ್ಮದ ಈ ನಾಶನ ಲೋಕದ ಹೆಚ್ಚಿನವರಿಗೆ ಅನಿರೀಕ್ಷಿತವಾಗಿರುವುದು. ಆದರೆ ಯೆಹೋವನ ನಂಬಿಗಸ್ತ ಸೇವಕರು ಈ ನಾಶನವನ್ನು ಖಂಡಿತ ನಿರೀಕ್ಷಿಸುತ್ತಿದ್ದಾರೆ ಮತ್ತು ಈ ಕಡೇ ದಿವಸಗಳಾದ್ಯಂತ ಇತರರಿಗೂ ಅದನ್ನು ತಿಳಿಸುತ್ತಿದ್ದಾರೆ.
13. ಸುಳ್ಳು ಧರ್ಮದ ಅಂತ್ಯ ಕ್ಷಿಪ್ರವಾಗಿ ನಡೆದುಹೋಗುವುದೆಂದು ಹೇಗೆ ತಿಳಿದುಬರುತ್ತದೆ?
13 ಸುಳ್ಳು ಧರ್ಮವು ನಾಶಗೊಳ್ಳುವುದನ್ನು ನೋಡಿ ಜನರಿಗೆ ಭಾರೀ ಆಘಾತವಾಗುವುದು. “ಭೂರಾಜರು” ಸಹ ಈ ನಾಶನದ ಬಗ್ಗೆ, “ಅಯ್ಯೋ, ಅಯ್ಯೋ, . . . ನಿನಗೆ ವಿಧಿಸಲ್ಪಟ್ಟ ದಂಡನೆಯು ಒಂದೇ ಗಳಿಗೆಯಲ್ಲಿ ಬಂತಲ್ಲಾ” ಎಂದು ಘೋಷಿಸುವರೆಂದು ಬೈಬಲ್ ಪ್ರವಾದನೆ ತೋರಿಸುತ್ತದೆ. (ಪ್ರಕ. 18:9, 10, 16, 19) ಈ ಘಟನೆ “ಒಂದೇ ಗಳಿಗೆಯಲ್ಲಿ” ನಡೆಯುವುದೆಂಬ ಬೈಬಲಿನ ಮಾತು, ಅದು ಕ್ಷಿಪ್ರವಾಗಿ ನಡೆದುಹೋಗುವುದು ಎಂಬುದನ್ನು ತೋರಿಸುತ್ತದೆ.
14. ವೈರಿಗಳು ಕೊನೆಯಲ್ಲಿ ತನ್ನ ಸೇವಕರ ಮೇಲೆ ಆಕ್ರಮಣಮಾಡುವಾಗ ಯೆಹೋವನು ಏನು ಮಾಡುವನು?
14 ತೀರ್ಪಿನ ಸಂದೇಶಗಳನ್ನು ಘೋಷಿಸುವ ಯೆಹೋವನ ಸೇವಕರ ಮೇಲೆ ಸುಳ್ಳು ಧರ್ಮದ ನಾಶನದ ಬಳಿಕ ಒಂದು ಆಕ್ರಮಣ ನಡೆಯಲಿದೆಯೆಂದು ನಮಗೆ ತಿಳಿದಿದೆ. (ಯೆಹೆ. 38:14-16) ಆದರೆ ಅದು ಆರಂಭವಾಗುವಾಗ ಆಕ್ರಮಣಕಾರರು ಯೆಹೋವನನ್ನು ಎದುರಿಸಬೇಕಾಗುವುದು. ಏಕೆಂದರೆ ಆತನು ತನ್ನ ನಂಬಿಗಸ್ತ ಜನರನ್ನು ಸಂರಕ್ಷಿಸುವ ಮಾತುಕೊಟ್ಟಿದ್ದಾನೆ. ಆತನು ಘೋಷಿಸುವುದು: “ನಾನು ರೋಷಾವಿಷ್ಟನಾಗಿ ಕೋಪದಿಂದುರಿಯುತ್ತಾ ಹೀಗೆ ನುಡಿದಿದ್ದೇನೆ . . . ನಾನೇ ಯೆಹೋವನು ಎಂದು ತಿಳಿದುಕೊಳ್ಳುವಂತೆ . . . ವ್ಯಕ್ತನಾಗುವೆನು.” (ಯೆಹೆಜ್ಕೇಲ 38:18-23 ಓದಿ.) ದೇವರು ತನ್ನ ವಾಕ್ಯದಲ್ಲಿ ಹೇಳುವುದು: ‘ನಿಮ್ಮನ್ನು [ನಂಬಿಗಸ್ತ ಸೇವಕರನ್ನು] ತಾಕುವವನು ನನ್ನ ಕಣ್ಣುಗುಡ್ಡನ್ನು ತಾಕುವವನಾಗಿದ್ದಾನೆ.’ (ಜೆಕ. 2:8) ಆದುದರಿಂದ ವೈರಿಗಳು ಭೌಗೋಳಿಕವಾಗಿ ತನ್ನ ಸೇವಕರ ಮೇಲೆ ಆಕ್ರಮಣ ಮಾಡಲಾರಂಭಿಸುವಾಗ ಯೆಹೋವನು ಖಂಡಿತ ಕ್ರಿಯೆಗೈಯುವನು. ಇದು, ಮಹಾಸಂಕಟದ ಕೊನೆಯ ಘಟ್ಟ ಅಂದರೆ ಅರ್ಮಗೆದ್ದೋನ್ಗೆ ನಡೆಸುವುದು. ಆಗ ಕ್ರಿಸ್ತನ ಅಪ್ಪಣೆಯ ಮೇರೆಗೆ, ಶಕ್ತಿಶಾಲಿ ದೇವದೂತ ಪಡೆಗಳು ಸೈತಾನನ ಲೋಕದ ವಿರುದ್ಧ ಯೆಹೋವನ ತೀರ್ಪುಗಳನ್ನು ಜಾರಿಗೊಳಿಸುವವು.
ನಮ್ಮ ಮೇಲೆ ಯಾವ ಪರಿಣಾಮ ಬೀರಬೇಕು?
15. ಈ ವ್ಯವಸ್ಥೆಯ ಅಂತ್ಯ ಸಮೀಪವಿದೆ ಎಂಬ ತಿಳುವಳಿಕೆ ನಮ್ಮ ಮೇಲೆ ಯಾವ ಪರಿಣಾಮ ಬೀರಬೇಕು?
15 ಈ ದುಷ್ಟ ವ್ಯವಸ್ಥೆಯ ಅಂತ್ಯವು ಶೀಘ್ರವಾಗಿ ಧಾವಿಸಿ ಬರುತ್ತಿದೆಯೆಂಬ ತಿಳುವಳಿಕೆ ನಮ್ಮ ಮೇಲೆ ಯಾವ ಪರಿಣಾಮ ಬೀರಬೇಕು? ಅಪೊಸ್ತಲ ಪೇತ್ರನು ಬರೆದದ್ದು: “ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವದರಿಂದ ನೀವು ದೇವರ ದಿನದ ಪ್ರತ್ಯಕ್ಷತೆಯನ್ನು ಎದುರು ನೋಡುತ್ತಾ ಹಾರೈಸುತ್ತಾ ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕಲ್ಲಾ.” (2 ಪೇತ್ರ 3:11, 12) ಈ ಮಾತುಗಳು, ನಮ್ಮ ನಡತೆಗೆ ನಿಕಟ ಗಮನ ಕೊಡುವ ಅಗತ್ಯಕ್ಕೆ ಒತ್ತು ಕೊಡುತ್ತವೆ. ನಮ್ಮ ನಡತೆ, ದೇವರ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿರಬೇಕು ಮತ್ತು ನಮ್ಮ ಜೀವನವು ಯೆಹೋವನ ಮೇಲೆ ನಮಗಿರುವ ಪ್ರೀತಿಯನ್ನು ಪ್ರತಿಬಿಂಬಿಸುತ್ತಾ ಭಕ್ತಿಯ ಕ್ರಿಯೆಗಳಿಂದ ತುಂಬಿರಬೇಕು. ಆ ಕ್ರಿಯೆಗಳಲ್ಲಿ, ಅಂತ್ಯ ಬರುವ ಮುಂಚೆ ರಾಜ್ಯ ಸುವಾರ್ತೆಯನ್ನು ಸಾರಲು ನಮ್ಮಿಂದಾದುದೆಲ್ಲವನ್ನೂ ಮಾಡುವುದು ಸೇರಿದೆ. ಪೇತ್ರನು ಇದನ್ನೂ ಬರೆದನು: “ಎಲ್ಲವುಗಳ ಅಂತ್ಯವು ಸಮೀಪಿಸಿದೆ. . . . ಪ್ರಾರ್ಥನೆಗಳ ವಿಷಯದಲ್ಲಿ ಎಚ್ಚರಿಕೆಯಿಂದಿರಿ.” (1 ಪೇತ್ರ 4:7, NW) ಸತತವಾಗಿ ಪ್ರಾರ್ಥಿಸುವ ಮೂಲಕ ನಾವು ಯೆಹೋವನಿಗೆ ಸಮೀಪವಾಗಬಲ್ಲೆವು ಮತ್ತು ಆತನ ಮೇಲೆ ನಮಗಿರುವ ಪ್ರೀತಿಯನ್ನು ತೋರಿಸಬಲ್ಲೆವು. ಈ ಪ್ರಾರ್ಥನೆಗಳಲ್ಲಿ, ಪವಿತ್ರಾತ್ಮ ಹಾಗೂ ಲೋಕವ್ಯಾಪಕ ಸಭೆಯ ಮೂಲಕ ನಮಗೆ ಮಾರ್ಗದರ್ಶನ ಕೊಡುವಂತೆ ನಾವಾತನಲ್ಲಿ ಕೇಳಿಕೊಳ್ಳಬಹುದು.
16. ದೇವರ ಸಲಹೆಗೆ ನಾವೇಕೆ ನಿಕಟವಾಗಿ ಅಂಟಿಕೊಳ್ಳಬೇಕು?
16 ಈ ಅಪಾಯಕಾರಿ ಸಮಯಗಳಲ್ಲಿ ದೇವರ ವಾಕ್ಯದ ಈ ಸಲಹೆಗೆ ನಾವು ನಿಕಟವಾಗಿ ಅಂಟಿಕೊಳ್ಳಬೇಕು: “ನೀವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿರದೆ ಜ್ಞಾನವಂತರಾಗಿರ್ರಿ. ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ.” (ಎಫೆ. 5:15, 16) ಇತಿಹಾಸದಲ್ಲಿ ಹಿಂದೆಂದಿಗಿಂತಲೂ ಈಗ ದುಷ್ಟತನ ಹೆಚ್ಚಾಗಿದೆ. ಜನರು ಯೆಹೋವನ ಚಿತ್ತವನ್ನು ಮಾಡದಂತೆ ತಡೆಗಟ್ಟಲು ಇಲ್ಲವೇ ಅವರ ಮನಸ್ಸನ್ನು ಬೇರೆಡೆಗೆ ಅಪಕರ್ಷಿಸಲು ಸೈತಾನನು ಹಲವಾರು ವಿಷಯಗಳನ್ನು ರಚಿಸಿದ್ದಾನೆ. ದೇವರ ಸೇವಕರಾಗಿರುವ ನಮಗೆ ಇದು ತಿಳಿದಿದೆ, ಮತ್ತು ಯಾವುದೇ ವಿಷಯವು ದೇವರ ಕಡೆಗಿನ ನಮ್ಮ ನಿಷ್ಠೆಯನ್ನು ಮುರಿಯುವಂತೆ ನಾವು ಬಿಡುವುದಿಲ್ಲ. ಶೀಘ್ರದಲ್ಲೇ ಏನು ನಡೆಯಲಿದೆಯೆಂದು ಸಹ ನಮಗೆ ತಿಳಿದಿದೆ ಮತ್ತು ನಾವು ಯೆಹೋವನಲ್ಲೂ ಆತನ ಉದ್ದೇಶಗಳಲ್ಲೂ ಭರವಸೆಯನ್ನಿಡುತ್ತೇವೆ.—1 ಯೋಹಾನ 2:15-17 ಓದಿ.
17. ಪುನರುತ್ಥಾನ ನಡೆಯುತ್ತಿರುವಾಗ ಅರ್ಮಗೆದ್ದೋನ್ನಿಂದ ಪಾರಾದವರು ಹೇಗೆ ಪ್ರತಿಕ್ರಿಯಿಸುವರೆಂದು ವರ್ಣಿಸಿರಿ.
17 ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನ ಆಗುವುದು’ ಎಂದು ಬೈಬಲ್ ತಿಳಿಸುತ್ತದೆ. ಹೀಗಾಗುವಾಗ ಮೃತರನ್ನು ಜೀವಕ್ಕೆ ತರುವ ದೇವರ ಅದ್ಭುತಕರ ವಾಗ್ದಾನ ನೆರವೇರಲಿದೆ. (ಅ. ಕೃ. 24:15) ‘ಪುನರುತ್ಥಾನ ಆಗುವುದು’ ಎಂಬ ಮಾತೇ ತಿಳಿಸುವಂತೆ ಆ ವಾಗ್ದಾನ ನಿಶ್ಚಿತವಾಗಿದೆ. ಅದರ ಬಗ್ಗೆ ಸಂದೇಹವೇ ಇಲ್ಲ, ಏಕೆಂದರೆ ಯೆಹೋವನು ಮಾತುಕೊಟ್ಟಿದ್ದಾನೆ! ಯೆಶಾಯ 26:19 ವಾಗ್ದಾನಿಸುವುದು: “ಮೃತರಾದ ನಿನ್ನ ಜನರು ಬದುಕುವರು, . . . ಮಣ್ಣಿನಲ್ಲಿ ಪವಳಿಸಿರುವವರೇ, ಎಚ್ಚತ್ತು ಹರ್ಷಧ್ವನಿ ಗೈಯಿರಿ! . . . ಭೂಮಿಯು ಸತ್ತವರನ್ನು ಹೊರಪಡಿಸುವದು.” ದೇವರ ಪುರಾತನಕಾಲದ ಜನರು ತಮ್ಮ ಸ್ವದೇಶಕ್ಕೆ ಪುನಃಸ್ಥಾಪಿಸಲ್ಪಟ್ಟಾಗ ಆ ಮಾತುಗಳು ಪ್ರಥಮ ಬಾರಿ ನೆರವೇರಿದವು. ಇದು, ಅವು ಹೊಸ ಲೋಕದಲ್ಲಿ ಅಕ್ಷರಶಃವಾಗಿ ನೆರವೇರಲಿವೆ ಎಂಬ ಭರವಸೆ ಕೊಡುತ್ತದೆ. ಪುನರುತ್ಥಿತರು ತಮ್ಮ ಪ್ರಿಯ ವ್ಯಕ್ತಿಗಳೊಂದಿಗೆ ಪುನಃ ಒಂದಾಗುವಾಗ ಎಂಥ ಹರ್ಷೋಲ್ಲಾಸವಿರುವುದು! ಹೌದು, ಸೈತಾನನ ಲೋಕದ ಅಂತ್ಯ ನಿಕಟವಿದೆ ಮತ್ತು ದೇವರ ಹೊಸ ಲೋಕ ಹತ್ತಿರವಿದೆ. ನಾವು ಎಚ್ಚರಿಕೆಯಿಂದಿರುವುದು ಎಷ್ಟು ಅತ್ಯಾವಶ್ಯಕ!
[ಪುಟ 18ರಲ್ಲಿರುವ ಚಿತ್ರ]
ಅರ್ಮಗೆದ್ದೋನಿನಲ್ಲಿ, ಯೆಹೋವನು ತನ್ನ ಶಕ್ತಿಶಾಲಿ ದೇವದೂತ ಪಡೆಗಳನ್ನು ಕಳುಹಿಸುವನು
[ಪುಟ 19ರಲ್ಲಿರುವ ಚಿತ್ರ]
ನಿಮಗೆ ಜ್ಞಾಪಕವಿದೆಯೇ?
• ಯೇಸುವಿನ ಬೋಧನೆಯ ಮುಖ್ಯವಿಷಯ ಏನಾಗಿತ್ತು?
• ರಾಜ್ಯ ಸಾರುವ ಕೆಲಸವು ಈಗ ಎಷ್ಟು ವ್ಯಾಪಕವಾಗಿದೆ?
• ಎಚ್ಚರಿಕೆಯಿಂದಿರುವುದು ಏಕೆ ಅತ್ಯಾವಶ್ಯಕ?
• ಅ. ಕೃತ್ಯಗಳು 24:15ರಲ್ಲಿರುವ ವಾಗ್ದಾನದಲ್ಲಿ ನಿಮ್ಮನ್ನು ಉತ್ತೇಜಿಸಿದ ಸಂಗತಿ ಯಾವುದು?
[ಪುಟ 16ರಲ್ಲಿರುವ ಚಿತ್ರ]
ಕೋಲಾಹಲದ ಯುಗಾರಂಭ
ಕೋಲಾಹಲದ ಯುಗ: ಒಂದು ಹೊಸ ಲೋಕದಲ್ಲಿನ ಸಾಹಸಗಳು (ಇಂಗ್ಲಿಷ್) ಎಂಬ ಶೀರ್ಷಿಕೆಯುಳ್ಳ ಪುಸ್ತಕವನ್ನು 2007ರಲ್ಲಿ ಹೊರಡಿಸಲಾಯಿತು. ಇದರ ಲೇಖಕರಾದ ಆ್ಯಲನ್ ಗ್ರೀನ್ಸ್ಪ್ಯಾನ್ ಅವರು ಸುಮಾರು 20 ವರ್ಷಗಳ ವರೆಗೆ ‘ಯುನೈಟೆಡ್ ಸ್ಟೇಟ್ಸ್ ಫೆಡರಲ್ ರಿಸರ್ವ್ ಬೋರ್ಡ್’ನ ಅಧ್ಯಕ್ಷರಾಗಿದ್ದರು. ಈ ಮಂಡಳಿಯು ಆ ದೇಶದ ಕೇಂದ್ರೀಯ ಬ್ಯಾಂಕ್ ವ್ಯವಸ್ಥೆಯ ಮೇಲೆ ನಿಗಾ ಇಡುತ್ತದೆ. ಗ್ರೀನ್ಸ್ಪ್ಯಾನ್ ಅವರು ಆ ಪುಸ್ತಕದಲ್ಲಿ, 1914ರ ಮುಂಚೆ ಮತ್ತು ಬಳಿಕ ಲೋಕದ ಪರಿಸ್ಥಿತಿಯಲ್ಲಾದ ಎದ್ದುಕಾಣುವ ವ್ಯತ್ಯಾಸವನ್ನು ಒತ್ತಿಹೇಳುತ್ತಾರೆ:
“ಎಲ್ಲ ವರದಿಗಳಿಗನುಸಾರ, 1914ರ ಮುಂಚಿನ ಜಗತ್ತು ಹೆಚ್ಚು ಉನ್ನತಮಟ್ಟದ ಸೌಜನ್ಯತೆ ಮತ್ತು ಸಾಂಸ್ಕೃತಿಕ ಹಾಗೂ ತಾಂತ್ರಿಕ ಅಭಿವೃದ್ಧಿಯೆಡೆಗೆ ಶರವೇಗದಿಂದ ಸಾಗುತ್ತಿತ್ತು. ಈ ಎಲ್ಲ ಅಭಿವೃದ್ಧಿ ಎಷ್ಟು ಗಮನಾರ್ಹವಾಗಿತ್ತೆಂದರೆ ಮಾನವ ಸಮಾಜವು ಉತ್ಕೃಷ್ಟತೆಯನ್ನು ಮುಟ್ಟಲಿದೆಯೆಂಬಂತೆ ತೋರುತ್ತಿತ್ತು. ದರಿದ್ರ ಗುಲಾಮೀ ವ್ಯಾಪಾರವು ಹತ್ತೊಂಬತ್ತನೇ ಶತಮಾನದಲ್ಲಿ ಕೊನೆಗೊಂಡಿತ್ತು. ಅಮಾನುಷ ಹಿಂಸಾಚಾರವು ಇಳಿಮುಖವಾಗುತ್ತಿದ್ದಂತೆ ಕಾಣುತ್ತಿತ್ತು. . . . ಹತ್ತೊಂಬತ್ತನೇ ಶತಮಾನದಾದ್ಯಂತ ಲೋಕದಲ್ಲೆಲ್ಲ ಆಗಿದ್ದ ಆವಿಷ್ಕಾರಗಳಿಂದಾಗಿ ರೈಲು, ಟೆಲಿಫೋನ್, ವಿದ್ಯುತ್ ದೀಪ, ಸಿನೆಮಾ, ಮೋಟಾರು ಗಾಡಿ ಮತ್ತು ಅಸಂಖ್ಯಾತ ಗೃಹೋಪಕರಣಗಳು ಇತ್ಯಾದಿ ಹುಟ್ಟಿಕೊಂಡವು. ವೈದ್ಯಕೀಯ ವಿಜ್ಞಾನ, ಉತ್ತಮ ಪೌಷ್ಠಿಕತೆ, ಕುಡಿಯುವ ನೀರಿನ ಸೌಕರ್ಯ ಮುಂತಾದವುಗಳಿಂದಾಗಿ ಮಾನವನ ಜೀವನಾಯುಷ್ಯವು ಹೆಚ್ಚಿತು . . . ಈ ಮುನ್ನಡೆ ಹೀಗೆಯೇ ಸಾಗುವುದೆಂದು ಎಲ್ಲರೂ ಎಣಿಸಿದ್ದರು.”
ಆದರೆ . . . “Iನೇ ಲೋಕ ಯುದ್ಧವು ಸೌಜನ್ಯತೆ ಮತ್ತು ಸಾಂಸ್ಕೃತಿಕ ಹಾಗೂ ತಾಂತ್ರಿಕ ಅಭಿವೃದ್ಧಿಗೆ ಕೊಟ್ಟ ಪೆಟ್ಟು, ಭೌತಿಕವಾಗಿ ಹೆಚ್ಚು ವಿನಾಶಕಾರಿಯಾದ IIನೇ ಲೋಕ ಯುದ್ಧಕ್ಕಿಂತ ಹೆಚ್ಚು ಧ್ವಂಸಕಾರಿ ಆಗಿತ್ತು. ಏಕೆಂದರೆ Iನೇ ಲೋಕ ಯುದ್ಧವು ಒಂದು ವಿಚಾರಧಾರೆಯನ್ನೇ ಸುಟ್ಟು ಬೂದಿಮಾಡಿತು. ನಾನು, ಆ Iನೇ ಲೋಕ ಯುದ್ಧದ ಮುಂಚಿನ ವರ್ಷಗಳಲ್ಲಿದ್ದ ಆಲೋಚನೆಯನ್ನು ಈಗಲೂ ಮನಸ್ಸಿನಿಂದ ಅಳಿಸಿಹಾಕಲಾರೆ. ಆಗ ಮಾನವಕುಲವು ಕ್ಷಿಪ್ರವಾಗಿ ಬಾನೆತ್ತರಕ್ಕೆ ಪ್ರಗತಿಮಾಡುತ್ತಿರುವಂತೆ ತೋರುತ್ತಿತ್ತು. ಇಂದು ನಮಗಿರುವ ಹೊರನೋಟವು, ಒಂದು ಶತಮಾನದಷ್ಟು ಹಿಂದೆ ನಮಗಿದ್ದ ಹೊರನೋಟಕ್ಕೆ ತದ್ವಿರುದ್ಧವಾಗಿದೆ; ಅದು ಇಂದಿನ ನೈಜ ಸ್ಥಿತಿಗೆ ಹೆಚ್ಚು ಹತ್ತಿರವಿದೆ. Iನೇ ಲೋಕ ಯುದ್ಧವು ಆ ಹಿಂದಿನ ಯುಗಕ್ಕೆ ಮಾಡಿದ್ದನ್ನೇ ಈಗ ಭಯೋತ್ಪಾದನೆ, ಭೌಗೋಳಿಕ ಕಾವೇರುವಿಕೆ ಇಲ್ಲವೇ ಜನಸಾಮಾನ್ಯರ ಬೆಂಬಲ ಪಡೆಯಬೇಕೆಂಬ ರಾಜಕೀಯ ಸಿದ್ಧಾಂತವು, ಜೀವನಮಟ್ಟವನ್ನು ಸುಧಾರಿಸುತ್ತಿರುವ ಜಾಗತೀಕರಣದ ಈ ಯುಗಕ್ಕೆ ಮಾಡುವುದೋ? ಅದನ್ನು ಯಾರೂ ಖಚಿತವಾಗಿ ಉತ್ತರಿಸಲಾರರು.”
ಗ್ರೀನ್ಸ್ಪ್ಯಾನ್ ಅವರು ತಮ್ಮ ವಿದ್ಯಾರ್ಥಿ ದಿನಗಳಲ್ಲಿ ಅರ್ಥಶಾಸ್ತ್ರದ ಪ್ರೊಫೆಸರರಾದ ಬೆಂಜಮಿನ್ ಎಮ್. ಆ್ಯಂಡರ್ಸನ್ (1886-1949) ಹೇಳಿದ ಈ ಒಂದು ಮಾತನ್ನು ಜ್ಞಾಪಿಸಿಕೊಳ್ಳುತ್ತಾರೆ: “Iನೇ ಲೋಕ ಯುದ್ಧದ ಮುಂಚೆ, ಆ ಲೋಕ ಹೇಗಿತ್ತು ಎಂಬುದನ್ನು ನೆನಪಿನಲ್ಲಿಡುವಷ್ಟು ಮತ್ತು ಅರ್ಥಮಾಡಿಕೊಳ್ಳುವಷ್ಟು ದೊಡ್ಡವರಾಗಿದ್ದವರು, ಈಗಲೂ ಆ ಕಾಲವನ್ನು ಭಾವುಕತೆಯಿಂದ ನೆನಪಿಸಿಕೊಳ್ಳುತ್ತಾರೆ. ಆ ಸಮಯದಲ್ಲಿದ್ದ ಭದ್ರತೆಯ ಪ್ರಜ್ಞೆಯು ಅನಂತರ ಎಂದೂ ಕಾಣಸಿಕ್ಕಿಲ್ಲ.” —ಈಕನಾಮಿಕ್ಸ್ ಆ್ಯಂಡ್ ದ ಪಬ್ಲಿಕ್ ವೆಲ್ಫೆರ್.
ಇದೇ ರೀತಿಯ ತೀರ್ಮಾನವು, ಜಿ.ಜೆ. ಮೆಯರ್ ಎಂಬವರು 2006ರಲ್ಲಿ ಪ್ರಕಾಶಿಸಿದ, ಹಾಳಾಗಿಹೋದ ಲೋಕ (ಇಂಗ್ಲಿಷ್) ಎಂಬ ಸಂಪುಟದಲ್ಲಿದೆ. ಅದು ಹೀಗನ್ನುತ್ತದೆ: “ಐತಿಹಾಸಿಕ ಘಟನೆಗಳು ‘ಎಲ್ಲವನ್ನು ಬದಲಾಯಿಸಿದವು’ ಎಂದು ಹೆಚ್ಚಾಗಿ ಹೇಳಲಾಗುತ್ತದೆ. ಮಹಾ ಯುದ್ಧದ [1914-1918] ವಿಷಯದಲ್ಲಂತೂ ಈ ಮಾತು ನೂರಕ್ಕೆ ನೂರು ಸತ್ಯ. ಆ ಯುದ್ಧ ನಿಜವಾಗಿ ಎಲ್ಲವನ್ನೂ ಬದಲಾಯಿಸಿತು. ಕೇವಲ ದೇಶಗಳ ಗಡಿಗಳನ್ನು, ಸರಕಾರಗಳನ್ನು ಹಾಗೂ ರಾಷ್ಟ್ರಗಳ ಭವಿಷ್ಯತ್ತನ್ನು ಮಾತ್ರವಲ್ಲ, ಜನರು ಲೋಕವನ್ನೂ ತಮ್ಮನ್ನೂ ದೃಷ್ಟಿಸುವ ವಿಧವನ್ನು ಬದಲಾಯಿಸಿತು. ಅದು ಕಾಲಪ್ರವಾಹದಲ್ಲಿ ಒಂದು ರೀತಿಯ ಕಂದಕವನ್ನು ರಚಿಸಿತು. ಅಂದರೆ ಯುದ್ಧಾನಂತರದ ಜಗತ್ತನ್ನು ಯುದ್ಧಕ್ಕಿಂತ ಮುಂಚೆ ಇದ್ದ ಜಗತ್ತಿನಿಂದ ಶಾಶ್ವತವಾಗಿ ಬೇರ್ಪಡಿಸಿತು.”