ಅಧ್ಯಾಯ ಒಂಬತ್ತು
ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೊ?
ನಮ್ಮ ದಿನಗಳ ಯಾವ ಘಟನೆಗಳನ್ನು ಬೈಬಲಿನಲ್ಲಿ ಮುಂತಿಳಿಸಲಾಗಿತ್ತು?
“ಕಡೇ ದಿವಸಗಳಲ್ಲಿ” ಯಾವ ರೀತಿಯ ಜನರಿರುವರು ಎಂದು ದೇವರ ವಾಕ್ಯ ಹೇಳುತ್ತದೆ?
“ಕಡೇ ದಿವಸಗಳ” ಬಗ್ಗೆ ಬೈಬಲು ಯಾವ ಒಳ್ಳೆಯ ಸಂಗತಿಗಳನ್ನು ಮುಂತಿಳಿಸುತ್ತದೆ?
1. ನಾವು ಭವಿಷ್ಯತ್ತಿನ ಕುರಿತು ಎಲ್ಲಿ ಕಲಿತುಕೊಳ್ಳಬಲ್ಲೆವು?
ಟಿವಿ ವಾರ್ತೆಗಳನ್ನು ನೋಡುತ್ತಿರುವಾಗ, ‘ಈ ಲೋಕವು ಯಾವ ಸ್ಥಿತಿಗೆ ಬರುತ್ತಾ ಇದೆಯಪ್ಪ’ ಎಂದು ನೀವು ಯೋಚಿಸಿದ್ದುಂಟೊ? ದುರಂತಗಳು ಎಷ್ಟು ಬೇಗನೆ ಮತ್ತು ಅನಿರೀಕ್ಷಿತವಾಗಿ ನಡೆಯುತ್ತವೆಂದರೆ, ನಾಳೆ ಏನಾಗಲಿಕ್ಕಿದೆಯೆಂದು ಯಾವನೂ ಮುಂತಿಳಿಸಲಾರನು. (ಯಾಕೋಬ 4:13ಬಿ, 14) ಆದರೂ, ಭವಿಷ್ಯತ್ತಿನಲ್ಲಿ ಏನಾಗಲಿದೆಯೊ ಅದು ಯೆಹೋವನಿಗೆ ತಿಳಿದಿದೆ. (ಯೆಶಾಯ 46:10) ಆತನ ವಾಕ್ಯವಾದ ಬೈಬಲು ದೀರ್ಘ ಕಾಲದ ಹಿಂದೆಯೇ, ನಮ್ಮ ದಿನಗಳಲ್ಲಿ ನಡೆಯುತ್ತಿರುವ ಕೆಟ್ಟ ವಿಷಯಗಳನ್ನು ಮಾತ್ರವಲ್ಲ, ನಿಕಟ ಭವಿಷ್ಯತ್ತಿನಲ್ಲಿ ನಡೆಯಲಿರುವ ಆಶ್ಚರ್ಯಕರವಾದ ವಿಷಯಗಳನ್ನೂ ಮುಂತಿಳಿಸಿತು.
2, 3. ಶಿಷ್ಯರು ಯೇಸುವಿಗೆ ಯಾವ ಪ್ರಶ್ನೆಯನ್ನು ಕೇಳಿದರು, ಮತ್ತು ಅವನು ಯಾವ ಉತ್ತರವನ್ನು ಕೊಟ್ಟನು?
2 ದುಷ್ಟತನಕ್ಕೆ ಅಂತ್ಯವನ್ನು ತರುವ ಮತ್ತು ಭೂಮಿಯನ್ನು ಪರದೈಸಾಗಿ ಮಾಡಲಿರುವ ದೇವರ ರಾಜ್ಯದ ಕುರಿತು ಯೇಸು ಕ್ರಿಸ್ತನು ಮಾತಾಡಿದನು. (ಲೂಕ 4:43) ಆದುದರಿಂದ ಆ ರಾಜ್ಯವು ಯಾವಾಗ ಬರುವುದೆಂದು ತಿಳಿಯಲು ಜನರು ಅಪೇಕ್ಷಿಸಿದರು. ವಾಸ್ತವದಲ್ಲಿ, ಯೇಸುವಿನ ಶಿಷ್ಯರು ಅವನನ್ನು ಕೇಳಿದ್ದು: “ನೀನು ಪ್ರತ್ಯಕ್ಷನಾಗುವದಕ್ಕೂ ಯುಗದ” ಇಲ್ಲವೆ ಈ ವಿಷಯಗಳ ವ್ಯವಸ್ಥೆಯ “ಸಮಾಪ್ತಿಗೂ ಸೂಚನೆಯೇನು?” (ಮತ್ತಾಯ 24:3) ಇದಕ್ಕೆ ಉತ್ತರವಾಗಿ ಯೇಸು, ಈ ವಿಷಯಗಳ ವ್ಯವಸ್ಥೆಯ ಸಮಾಪ್ತಿಯು ಯಾವಾಗ ಬರುವುದೆಂಬುದನ್ನು ನಿಷ್ಕೃಷ್ಟವಾಗಿ ತಿಳಿದಿರುವಾತನು ಯೆಹೋವ ದೇವರು ಮಾತ್ರ ಎಂದು ಅವರಿಗೆ ಹೇಳಿದನು. (ಮತ್ತಾಯ 24:36) ಆದರೆ, ರಾಜ್ಯವು ಮಾನವಕುಲಕ್ಕೆ ನಿಜ ಶಾಂತಿ ಮತ್ತು ಭದ್ರತೆಯನ್ನು ತರುವುದಕ್ಕೆ ತುಸು ಮುಂಚಿತವಾಗಿ ಭೂಮಿಯ ಮೇಲೆ ನಡೆಯಲಿದ್ದ ಸಂಗತಿಗಳನ್ನು ಯೇಸು ಮುಂತಿಳಿಸಿದನು. ಆತನು ಏನನ್ನು ಮುಂತಿಳಿಸಿದನೊ ಅದು ಈಗ ನೆರವೇರುತ್ತ ಇದೆ!
3 ನಾವು “ಯುಗದ” ಇಲ್ಲವೆ ಈ ವಿಷಯಗಳ ವ್ಯವಸ್ಥೆಯ “ಸಮಾಪ್ತಿ”ಯಲ್ಲಿ ಜೀವಿಸುತ್ತಿದ್ದೇವೆಂಬ ಪುರಾವೆಯನ್ನು ಪರಿಶೀಲಿಸುವ ಮೊದಲು, ಯಾವ ಮನುಷ್ಯನೂ ನೋಡಲು ಸಾಧ್ಯವಿಲ್ಲದಿದ್ದಂಥ ಒಂದು ಯುದ್ಧದ ಬಗ್ಗೆ ತುಸು ಪರಿಗಣಿಸೋಣ. ಅದು ನಮ್ಮ ಕಣ್ಣಿಗೆ ಅಗೋಚರವಾಗಿರುವ ಸ್ವರ್ಗದಲ್ಲಿ ನಡೆಯಿತು ಮತ್ತು ಅದರಿಂದುಂಟಾದ ಪರಿಣಾಮ ನಮ್ಮನ್ನು ಬಾಧಿಸುತ್ತದೆ.
ಸ್ವರ್ಗದಲ್ಲಿ ನಡೆದ ಯುದ್ಧ
4, 5. (ಎ) ಯೇಸು ಅರಸನಾಗಿ ಸಿಂಹಾಸನಾರೂಢನಾದ ಸ್ವಲ್ಪದರಲ್ಲೇ ಸ್ವರ್ಗದಲ್ಲಿ ಏನು ನಡೆಯಿತು? (ಬಿ) ಪ್ರಕಟನೆ 12:12 ಹೇಳುವಂತೆ, ಸ್ವರ್ಗದಲ್ಲಿ ನಡೆದ ಆ ಯುದ್ಧದ ಪರಿಣಾಮ ಏನಾಗಲಿಕ್ಕಿತ್ತು?
4 ಈ ಪುಸ್ತಕದ ಹಿಂದಿನ ಅಧ್ಯಾಯವು ಯೇಸು ಕ್ರಿಸ್ತನು 1914ರಲ್ಲಿ ಸ್ವರ್ಗದಲ್ಲಿ ಅರಸನಾದನೆಂದು ವಿವರಿಸಿತು. (ದಾನಿಯೇಲ 7:13, 14) ಯೇಸು ರಾಜ್ಯಾಧಿಕಾರವನ್ನು ಪಡೆದ ಸ್ವಲ್ಪ ಸಮಯದಲ್ಲೇ ಕ್ರಮಕೈಕೊಂಡನು. “ಪರಲೋಕದಲ್ಲಿ ಯುದ್ಧ ನಡೆಯಿತು. ಮೀಕಾಯೇಲನೂ [ಯೇಸುವಿನ ಇನ್ನೊಂದು ಹೆಸರು] ಅವನ ದೂತರೂ ಘಟಸರ್ಪನ [ಪಿಶಾಚನಾದ ಸೈತಾನನ] ಮೇಲೆ ಯುದ್ಧಮಾಡುವದಕ್ಕೆ ಹೊರಟರು” ಎನ್ನುತ್ತದೆ ಬೈಬಲು.a ಸೈತಾನನೂ ಅವನ ದುಷ್ಟ ದೂತರಾದ ದೆವ್ವಗಳೂ ಆ ಯುದ್ಧದಲ್ಲಿ ಸೋತುಹೋಗಿ ಸ್ವರ್ಗದಿಂದ ಭೂಮಿಗೆ ದೊಬ್ಬಲ್ಪಟ್ಟರು. ಸೈತಾನನೂ ಅವನ ದೆವ್ವಗಳೂ ಭೂಮಿಗೆ ದೊಬ್ಬಲ್ಪಟ್ಟ ಕಾರಣ ದೇವರ ನಂಬಿಗಸ್ತ ಆತ್ಮಪುತ್ರರು ಸಂತೋಷಿಸಿದರು. ಮಾನವರಿಗಾದರೊ ಅಂತಹ ಸಂತೋಷದ ಅನುಭವವಾಗದು. ಬದಲಿಗೆ, ಬೈಬಲು ಮುಂತಿಳಿಸಿದ್ದು: ‘ಭೂಮಿಯೇ, ನಿನ್ನ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿನ್ನ ಕಡೆಗೆ ಇಳಿದುಬಂದಿದ್ದಾನೆ.’—ಪ್ರಕಟನೆ 12:7, 9, 12.
5 ಪರಲೋಕದಲ್ಲಿ ನಡೆದ ಯುದ್ಧದ ಪರಿಣಾಮವೇನಾಗಿರಲಿತ್ತು ಎಂಬುದನ್ನು ದಯವಿಟ್ಟು ಗಮನಿಸಿ. ಕೋಪಾವೇಶಗೊಂಡವನಾಗಿ ಸೈತಾನನು ಭೂಮಿಯಲ್ಲಿರುವವರ ಮೇಲೆ ದುರ್ಗತಿಯನ್ನು ಇಲ್ಲವೆ ಕ್ಲೇಶಗಳನ್ನು ತರಲಿದ್ದನು. ನೀವು ನೋಡಲಿರುವಂತೆ, ನಾವೀಗ ಆ ದುರ್ಗತಿಯ ಸಮಯದಲ್ಲೇ ಜೀವಿಸುತ್ತಿದ್ದೇವೆ. ಆದರೆ ಇದು ತುಲನಾತ್ಮಕವಾಗಿ ತುಸು ಸಮಯ, ಅಂದರೆ ‘ಸ್ವಲ್ಪ ಕಾಲ’ ಮಾತ್ರ ಇರಲಿದೆ. ಇದು ಸೈತಾನನಿಗೂ ತಿಳಿದಿದೆ. ಮತ್ತು ಬೈಬಲು ಈ ಅವಧಿಯನ್ನು “ಕಡೇ ದಿವಸಗಳು” ಎಂದು ಸೂಚಿಸುತ್ತದೆ. (2 ತಿಮೊಥೆಯ 3:1) ದೇವರು ಬೇಗನೆ ಈ ಭೂಮಿಯ ಮೇಲಿರುವ ಪಿಶಾಚನ ಪ್ರಭಾವವನ್ನು ತೆಗೆದುಹಾಕುವನೆಂಬುದಕ್ಕೆ ನಾವೆಷ್ಟು ಹರ್ಷಪಡಬಲ್ಲೆವು! ಬೈಬಲಿನಲ್ಲಿ ಮುಂತಿಳಿಸಲ್ಪಟ್ಟಿದ್ದಂಥ ಮತ್ತು ಈಗ ನಡೆಯುತ್ತಿರುವ ಕೆಲವು ಸಂಗತಿಗಳನ್ನು ನಾವು ಪರಿಗಣಿಸೋಣ. ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಮತ್ತು ಯೆಹೋವನನ್ನು ಪ್ರೀತಿಸುವವರಿಗೆ ದೇವರ ರಾಜ್ಯವು ಬೇಗನೆ ನಿತ್ಯಾಶೀರ್ವಾದಗಳನ್ನು ತರುತ್ತದೆಂದು ಇವು ರುಜುಪಡಿಸುತ್ತವೆ. ಆದರೆ ಪ್ರಥಮವಾಗಿ, ನಾವು ಜೀವಿಸುವ ಸಮಯವನ್ನು ಸೂಚಿಸುತ್ತದೆಂದು ಯೇಸು ಹೇಳಿದ ಆ ಸೂಚನೆಯ ನಾಲ್ಕು ವೈಶಿಷ್ಟ್ಯಗಳನ್ನು ಪರೀಕ್ಷಿಸೋಣ.
ಕಡೇ ದಿವಸಗಳ ಪ್ರಮುಖ ಘಟನೆಗಳು
6, 7. ಯುದ್ಧಗಳು ಮತ್ತು ಆಹಾರದ ಅಭಾವಗಳ ಕುರಿತು ಯೇಸು ತಿಳಿಸಿದ ಮಾತುಗಳು ಇಂದು ಹೇಗೆ ನೆರವೇರುತ್ತಿವೆ?
6 “ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು.” (ಮತ್ತಾಯ 24:7) ಕಳೆದ ನೂರು ವರುಷಗಳಲ್ಲಿ ಕೋಟ್ಯಂತರ ಜನರನ್ನು ಯುದ್ಧಗಳಲ್ಲಿ ಕೊಲ್ಲಲಾಗಿದೆ. ಬ್ರಿಟಿಷ್ ಇತಿಹಾಸಕಾರನೊಬ್ಬನು ಬರೆದುದು: “ಇಪ್ಪತ್ತನೆಯ ಶತಮಾನವು ಲಿಖಿತ ಇತಿಹಾಸದಲ್ಲೇ ಅತಿ ಮಾರಕವಾದದ್ದಾಗಿತ್ತು. . . . ಅದು ಹೆಚ್ಚುಕಡಮೆ ನಿರಂತರವಾಗಿ ನಡೆದ ಯುದ್ಧಗಳ ಶತಮಾನವಾಗಿತ್ತು. ಎಲ್ಲಿಯಾದರೂ ಸಂಘಟಿತವಾದ ಸಶಸ್ತ್ರ ಯುದ್ಧವು ನಡೆಯದೇ ಇದ್ದ ಅವಧಿಗಳು ಕೇವಲ ಕೆಲವಾಗಿದ್ದವು ಮತ್ತು ಅಲ್ಪಕಾಲಿಕವೂ ಆಗಿದ್ದವು.” ವರ್ಲ್ಡ್ವಾಚ್ ಸಂಸ್ಥೆಯ ಒಂದು ವರದಿಯು ಹೇಳುವುದು: “ಕ್ರಿ.ಶ. ಒಂದನೆಯ ಶತಮಾನದಿಂದ 1899ರ ವರೆಗೆ ನಡೆದ ಎಲ್ಲ ಯುದ್ಧಗಳಲ್ಲಿ ಗಾಯಾಳುಗಳಾದ ಇಲ್ಲವೆ ಸತ್ತ ಜನರಿಗಿಂತಲೂ ಮೂರು ಪಟ್ಟು ಜಾಸ್ತಿ ಜನರು [20ನೆಯ] ಶತಮಾನದಲ್ಲಿ ನಡೆದ ಯುದ್ಧಗಳಿಗೆ ಆಹುತಿಯಾದರು.” ಇಸವಿ 1914ರಿಂದ ನಡೆದಿರುವ ಯುದ್ಧಗಳಲ್ಲಿ ಹತ್ತು ಕೋಟಿಗಳಿಗಿಂತಲೂ ಹೆಚ್ಚು ಜನ ಸತ್ತಿದ್ದಾರೆ. ಪ್ರಿಯನಾದ ಒಬ್ಬ ವ್ಯಕ್ತಿಯನ್ನು ಯುದ್ಧದಲ್ಲಿ ಕಳೆದುಕೊಳ್ಳುವುದರಲ್ಲಿರುವ ಶೋಕವು ನಮಗೆ ತಿಳಿದಿದೆ ಎಂದು ಭಾವಿಸೋಣ. ಆದರೆ ಅಂತಹ ದುರವಸ್ಥೆ ಮತ್ತು ವೇದನೆಯನ್ನು ಕೋಟಿಗಟ್ಟಲೆ ಪಟ್ಟು ಹೆಚ್ಚಿಸುವುದಾದರೆ ಅದು ನಮ್ಮ ಗ್ರಹಿಕೆಗೆ ಮೀರಿದ್ದೇ ಸರಿ.
7 “ಬರಗಳು ಬರುವವು.” (ಮತ್ತಾಯ 24:7) ಕಳೆದ 30 ವರುಷಗಳಲ್ಲಿ ಆಹಾರದ ಉತ್ಪಾದನೆ ಬಹಳಷ್ಟು ವೃದ್ಧಿಯಾಗಿದೆ ಎಂಬುದು ಸಂಶೋಧಕರ ಹೇಳಿಕೆ. ಆದರೂ ಬರಗಳು ಇಲ್ಲವೆ ಆಹಾರದ ಅಭಾವಗಳು ಮುಂದುವರಿಯುತ್ತ ಇವೆ, ಏಕೆಂದರೆ ಆಹಾರವನ್ನು ಕೊಳ್ಳಲಿಕ್ಕಾಗಿ ಹಣವಾಗಲಿ ಬೆಳೆಗಳ ಉತ್ಪಾದನೆಗಾಗಿ ಜಮೀನಾಗಲಿ ಅನೇಕ ಜನರ ಬಳಿಯಿಲ್ಲ. ಲಕ್ಷಾಂತರ ಜನರು ತೀವ್ರ ಹಸಿವಿನಿಂದ ಬಳಲುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ ಅಂದಾಜುಮಾಡುವ ಪ್ರಕಾರ, ವರುಷಕ್ಕೆ 50 ಲಕ್ಷ ಮಕ್ಕಳ ಮರಣದಲ್ಲಿ ನ್ಯೂನಪೋಷಣೆ ದೊಡ್ಡ ಪಾತ್ರವನ್ನು ವಹಿಸುತ್ತದೆ.
8, 9. ಭೂಕಂಪಗಳ ಮತ್ತು ವ್ಯಾಧಿಗಳ ಕುರಿತಾದ ಯೇಸುವಿನ ಪ್ರವಾದನೆಗಳು ಸತ್ಯವಾಗಿ ಪರಿಣಮಿಸಿವೆಯೆಂಬುದನ್ನು ಯಾವುದು ತೋರಿಸುತ್ತದೆ?
8 “ಮಹಾಭೂಕಂಪಗಳಾಗುವವು.” (ಲೂಕ 21:11) ಅಮೆರಿಕದ ಭೂವಿಜ್ಞಾನ ಸಮೀಕ್ಷೆಯ ಪ್ರಕಾರ, ಕಟ್ಟಡಗಳಿಗೆ ಹಾನಿಮಾಡುವಂಥ ಹಾಗೂ ನೆಲದಲ್ಲಿ ಬಿರುಕು ಉಂಟುಮಾಡುವಂಥ ಸರಾಸರಿ 19 ಭೂಕಂಪಗಳು ಪ್ರತಿ ವರ್ಷ ಸಂಭವಿಸುತ್ತವೆ. ಕಟ್ಟಡಗಳನ್ನು ಸಂಪೂರ್ಣವಾಗಿ ನೆಲಸಮಮಾಡುವಷ್ಟು ಭೀಕರ ಭೂಕಂಪಗಳು ಸಹ ಪ್ರತಿವರ್ಷ ಸಂಭವಿಸುತ್ತವೆ. ಇಸವಿ 1900ರಿಂದ ಈಚೆಗೆ ಸಂಭವಿಸಿದ ಭೂಕಂಪದಿಂದಾಗಿ ಇಪ್ಪತ್ತು ಲಕ್ಷಕ್ಕೂ ಅಧಿಕ ಜನರ ಪ್ರಾಣನಷ್ಟವಾಗಿದೆ ಎಂದು ದಾಖಲೆಗಳು ತೋರಿಸುತ್ತವೆ. ಇನ್ನೊಂದು ವರದಿ ಹೇಳುವುದು: “ತಂತ್ರಜ್ಞಾನದ ಪ್ರಗತಿಯು ಮರಣದ ಸಂಖ್ಯೆಯನ್ನು ಕಡಿಮೆ ಮಾಡಿರುವುದು ಸ್ವಲ್ಪಮಟ್ಟಿಗೆ ಮಾತ್ರ.”
9 ‘ವ್ಯಾಧಿಗಳು.’ (ಲೂಕ 21:11, NIBV) ವೈದ್ಯಕೀಯ ಅಭಿವೃದ್ಧಿಗಳ ಮಧ್ಯೆಯೂ ಹಳೆಯ ಮತ್ತು ಹೊಸ ವ್ಯಾಧಿಗಳು ಇಲ್ಲವೆ ರೋಗಗಳು ಮಾನವಕುಲವನ್ನು ಪೀಡಿಸುತ್ತಿವೆ. ಒಂದು ವರದಿಯು ತಿಳಿಸುವುದೇನಂದರೆ, ಇತ್ತೀಚಿನ ದಶಕಗಳಲ್ಲಿ ಕ್ಷಯರೋಗ, ಮಲೇರಿಯ ಮತ್ತು ಕಾಲರಾ ಸೇರಿರುವ 20 ಹೆಸರಾಂತ ರೋಗಗಳು ಸರ್ವಸಾಮಾನ್ಯವಾಗಿಬಿಟ್ಟಿವೆ. ಮತ್ತು ಕೆಲವು ವಿಧದ ರೋಗಗಳನ್ನು ಔಷಧದಿಂದ ಗುಣಪಡಿಸುವುದು ಹೆಚ್ಚೆಚ್ಚು ಕಷ್ಟಕರವಾಗುತ್ತಿದೆ. ವಾಸ್ತವದಲ್ಲಿ, ಕಡಿಮೆಪಕ್ಷ 30 ಹೊಸ ರೋಗಗಳು ತಲೆದೋರಿವೆ. ಅವುಗಳಲ್ಲಿ ಕೆಲವಕ್ಕೆ ಯಾವುದೇ ಜ್ಞಾತ ಔಷಧಗಳಿಲ್ಲ ಮತ್ತು ಅವು ಮಾರಕವಾಗಿವೆ.
ಕಡೇ ದಿವಸಗಳಲ್ಲಿನ ಜನರು
10. ಇಂದು ನೀವು ಜನರಲ್ಲಿ, 2 ತಿಮೊಥೆಯ 3:1-5 ರಲ್ಲಿ ಮುಂತಿಳಿಸಲಾಗಿರುವ ಯಾವ ಗುಣಲಕ್ಷಣಗಳನ್ನು ನೋಡುತ್ತೀರಿ?
10 ಬೈಬಲು ಕೆಲವು ಲೋಕ ಘಟನೆಗಳನ್ನು ಗುರುತಿಸಿದ್ದಲ್ಲದೆ, ಕಡೇ ದಿವಸಗಳಲ್ಲಿ ಮಾನವ ಸಮಾಜದಲ್ಲಿಯೂ ಬದಲಾವಣೆಗಳು ಇರುವವೆಂದು ಮುಂತಿಳಿಸಿತು. ಸಾಮಾನ್ಯವಾಗಿ ಯಾವ ರೀತಿಯ ಜನರಿರುವರೆಂದು ಅಪೊಸ್ತಲ ಪೌಲನು ವರ್ಣಿಸಿದನು. ನಾವು 2 ತಿಮೊಥೆಯ 3:1-5 ರಲ್ಲಿ ಹೀಗೆ ಓದುತ್ತೇವೆ: “ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ.” ಭಾಗಶಃ, ಜನರು ಹೀಗಿರುವರೆಂದು ಪೌಲನು ಹೇಳಿದನು:
ಸ್ವಾರ್ಥಚಿಂತಕರು
ಹಣದಾಸೆಯವರು
ತಂದೆತಾಯಿಗಳಿಗೆ ಅವಿಧೇಯರು
ಉಪಕಾರನೆನಸದವರು
ಮಮತೆಯಿಲ್ಲದವರು
ದಮೆಯಿಲ್ಲದವರು
ಉಗ್ರತೆಯುಳ್ಳವರು
ದೇವರನ್ನು ಪ್ರೀತಿಸದೆ ಭೋಗಗಳನ್ನು ಪ್ರೀತಿಸುವವರು
ಭಕ್ತಿಯ ವೇಷವಿದ್ದರೂ ಅದರ ಬಲವನ್ನು ಬೇಡವೆನ್ನುವವರು
11. ದುಷ್ಟರಿಗೆ ಏನಾಗುವುದೆಂಬುದನ್ನು ಕೀರ್ತನೆ 92:7 ಹೇಗೆ ವರ್ಣಿಸುತ್ತದೆ?
11 ನಿಮ್ಮ ಸಮಾಜದಲ್ಲಿರುವ ಜನರು ಹೀಗಾಗಿದ್ದಾರೊ? ಹೌದೆಂಬುದರಲ್ಲಿ ಸಂದೇಹವಿಲ್ಲ. ಇಂತಹ ಕೆಟ್ಟ ಗುಣಗಳಿರುವ ಜನರು ಎಲ್ಲೆಡೆಯೂ ಇದ್ದಾರೆ. ಇದು ದೇವರು ಬೇಗನೆ ಕ್ರಮಕೈಕೊಳ್ಳಲಿದ್ದಾನೆಂದು ತೋರಿಸುತ್ತದೆ. ಏಕೆಂದರೆ ಬೈಬಲು ಹೇಳುವುದು: “ದುಷ್ಟರು ಹುಲ್ಲಿನಂತೆ ಬೆಳೆಯುವದೂ ಕೆಡುಕರು ಹೂವಿನಂತೆ ಮೆರೆಯುವದೂ ತೀರಾ ಹಾಳಾಗುವದಕ್ಕಾಗಿಯೇ.”—ಕೀರ್ತನೆ 92:7.
ಸಕಾರಾತ್ಮಕ ವಿಕಸನಗಳು!
12, 13. ಈ ‘ಅಂತ್ಯಕಾಲದಲ್ಲಿ’ “ನಿಜ ಜ್ಞಾನವು” ಹೇಗೆ ಸಮೃದ್ಧವಾಗಿದೆ?
12 ಬೈಬಲು ಮುಂತಿಳಿಸಿರುವಂತೆಯೇ, ಈ ಕಡೇ ದಿವಸಗಳು ನಿಜವಾಗಿಯೂ ದುರ್ಗತಿಗೆ ತುತ್ತಾಗಿವೆ. ಆದರೂ, ಈ ತೊಂದರೆಗ್ರಸ್ತ ಜಗತ್ತಿನಲ್ಲಿ ಯೆಹೋವನ ಆರಾಧಕರ ಮಧ್ಯೆ ಸಕಾರಾತ್ಮಕವಾದ ವಿಕಸನಗಳು ನಡೆಯುತ್ತಿವೆ.
13 “ನಿಜ ಜ್ಞಾನವು ಸಮೃದ್ಧವಾಗುವುದು” (NW) ಎಂದು ಬೈಬಲಿನ ದಾನಿಯೇಲ ಪುಸ್ತಕವು ಮುಂತಿಳಿಸಿತು. ಇದು ಯಾವಾಗ ಸಂಭವಿಸುವುದು? ‘ಅಂತ್ಯಕಾಲದಲ್ಲೇ.’ (ದಾನಿಯೇಲ 12:4) ವಿಶೇಷವಾಗಿ 1914ರಿಂದ, ತನ್ನನ್ನು ನಿಜವಾಗಿಯೂ ಸೇವಿಸಲು ಅಪೇಕ್ಷಿಸುವವರು ಬೈಬಲಿನ ತಿಳಿವಳಿಕೆಯಲ್ಲಿ ಬೆಳೆಯುವಂತೆ ಯೆಹೋವನು ಸಹಾಯ ನೀಡಿದ್ದಾನೆ. ಅವರು ದೇವರ ಹೆಸರು ಮತ್ತು ಆತನ ಉದ್ದೇಶ, ಯೇಸು ಕ್ರಿಸ್ತನ ವಿಮೋಚನಾ ಮೌಲ್ಯದ ಯಜ್ಞ, ಮೃತರ ಸ್ಥಿತಿ ಮತ್ತು ಪುನರುತ್ಥಾನದ ಕುರಿತಾದ ಅಮೂಲ್ಯ ಸತ್ಯಗಳ ವಿಷಯದಲ್ಲಿ ಹೆಚ್ಚೆಚ್ಚು ತಿಳಿವಳಿಕೆಯನ್ನು ಪಡೆದಿದ್ದಾರೆ. ಇದಲ್ಲದೆ, ಯೆಹೋವನ ಆರಾಧಕರು ತಮ್ಮ ಜೀವಿತಗಳನ್ನು ತಮಗೆ ಪ್ರಯೋಜನ ತರುವಂಥ ಮತ್ತು ದೇವರಿಗೆ ಸ್ತುತಿ ತರುವಂಥ ರೀತಿಯಲ್ಲಿ ಹೇಗೆ ಉಪಯೋಗಿಸಬೇಕೆಂಬುದನ್ನು ಕಲಿತುಕೊಂಡಿದ್ದಾರೆ. ದೇವರ ರಾಜ್ಯದ ಪಾತ್ರ ಮತ್ತು ಅದು ಭೂಮಿಯ ಮೇಲೆ ಹೇಗೆ ವಿಷಯಗಳನ್ನು ಸರಿಪಡಿಸುವುದೆಂಬುದರ ಕುರಿತು ಹೆಚ್ಚು ಸ್ಪಷ್ಟವಾದ ತಿಳಿವಳಿಕೆಯನ್ನು ಕೂಡ ಅವರು ಹೊಂದಿದ್ದಾರೆ. ಅವರಿಗಿರುವ ಈ ಜ್ಞಾನವನ್ನು ಅವರು ಹೇಗೆ ಉಪಯೋಗಿಸುತ್ತಿದ್ದಾರೆ? ಈ ಪ್ರಶ್ನೆಯು ನಮ್ಮ ಗಮನವನ್ನು, ಈ ಕಡೇ ದಿವಸಗಳಲ್ಲಿ ನೆರವೇರುತ್ತಿರುವ ಇನ್ನೊಂದು ಪ್ರವಾದನೆಯ ಕಡೆಗೆ ಸೆಳೆಯುತ್ತದೆ.
14. ಇಂದು ರಾಜ್ಯದ ಸುವಾರ್ತೆಯ ಸಾರುವಿಕೆ ಎಷ್ಟು ವ್ಯಾಪಕವಾಗಿದೆ, ಮತ್ತು ಅದನ್ನು ಯಾರು ಸಾರುತ್ತಿದ್ದಾರೆ?
14 “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು” ಎಂದು ಯೇಸು ಕ್ರಿಸ್ತನು ಸೈತಾನನ ಲೋಕದ ‘ಸಮಾಪ್ತಿಯ’ ಕುರಿತಾದ ತನ್ನ ಪ್ರವಾದನೆಯಲ್ಲಿ ಹೇಳಿದನು. (ಮತ್ತಾಯ 24:3, 14) ಇಂದು ಭೂವ್ಯಾಪಕವಾಗಿ ರಾಜ್ಯದ ಸುವಾರ್ತೆಯು, ಅಂದರೆ ಆ ರಾಜ್ಯವೆಂದರೇನು, ಅದು ಏನು ಮಾಡುವುದು ಮತ್ತು ನಾವು ಅದರ ಆಶೀರ್ವಾದಗಳನ್ನು ಹೇಗೆ ಪಡೆಯಬಲ್ಲೆವು ಎಂಬ ಸುವಾರ್ತೆಯು 230ಕ್ಕೂ ಹೆಚ್ಚು ದೇಶಗಳಲ್ಲಿ ಮತ್ತು 400ಕ್ಕೂ ಹೆಚ್ಚು ಭಾಷೆಗಳಲ್ಲಿ ಸಾರಲ್ಪಡುತ್ತ ಇದೆ. ಈ ರಾಜ್ಯದ ಸುವಾರ್ತೆಯನ್ನು ಲಕ್ಷಾಂತರ ಮಂದಿ ಯೆಹೋವನ ಸಾಕ್ಷಿಗಳು ಹುರುಪಿನಿಂದ ಸಾರುತ್ತಾರೆ. “ಅವರು ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ” ಆಗಿರುತ್ತಾರೆ. (ಪ್ರಕಟನೆ 7:9) ಈ ಸಾಕ್ಷಿಗಳು ಬೈಬಲು ನಿಜವಾಗಿಯೂ ಏನನ್ನು ಬೋಧಿಸುತ್ತದೆ ಎಂದು ತಿಳಿಯಬಯಸುವ ಲಕ್ಷಾಂತರ ಜನರೊಂದಿಗೆ ಉಚಿತವಾಗಿ ಮನೆ ಬೈಬಲ್ ಅಧ್ಯಯನಗಳನ್ನು ನಡೆಸುತ್ತಾರೆ. ಸತ್ಯ ಕ್ರೈಸ್ತರನ್ನು “ಎಲ್ಲರೂ ಹಗೆಮಾಡುವರು” ಎಂದು ಯೇಸು ಕ್ರಿಸ್ತನು ಮುಂತಿಳಿಸಿದ್ದರೂ, ಸಾರುವಿಕೆಯ ಕುರಿತಾದ ಆ ಪ್ರವಾದನೆಯು ಎಷ್ಟೊಂದು ಭಾವೋತ್ಪಾದಕ ರೀತಿಯಲ್ಲಿ ನೆರವೇರುತ್ತಿದೆ!—ಲೂಕ 21:17.
ನೀವೇನು ಮಾಡುವಿರಿ?
15. (ಎ) ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆಂಬುದನ್ನು ನೀವು ನಂಬುತ್ತೀರೊ, ಏಕೆ? (ಬಿ) ಯೆಹೋವನನ್ನು ವಿರೋಧಿಸುವವರಿಗೆ ಮತ್ತು ದೇವರ ರಾಜ್ಯದ ಆಳ್ವಿಕೆಗೆ ಅಧೀನರಾಗುವವರಿಗೆ ಆ “ಅಂತ್ಯವು” ಯಾವ ಅರ್ಥದಲ್ಲಿರುವುದು?
15 ಇಂದು ಇಷ್ಟೊಂದು ಬೈಬಲ್ ಪ್ರವಾದನೆಗಳು ನೆರವೇರುತ್ತಿರುವುದರಿಂದ, ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಎಂಬುದನ್ನು ನೀವು ಒಪ್ಪಿಕೊಳ್ಳುವುದಿಲ್ಲವೊ? ಯೆಹೋವನಿಗೆ ತೃಪ್ತಿಯಾಗುವ ಮಟ್ಟಿಗೆ ಸುವಾರ್ತೆಯು ಸಾರಲ್ಪಡುವಾಗ “ಅಂತ್ಯವು” ಬಂದೇ ಬರುತ್ತದೆ. (ಮತ್ತಾಯ 24:14) “ಅಂತ್ಯ” ಎಂದರೆ ದೇವರು ಭೂಮಿಯ ಮೇಲಿರುವ ದುಷ್ಟತನವನ್ನು ತೊಲಗಿಸಿಬಿಡುವ ಕಾಲವೇ. ಯೆಹೋವನು, ತನ್ನನ್ನು ಬೇಕುಬೇಕೆಂದೇ ವಿರೋಧಿಸುವ ಸಕಲರನ್ನು ನಾಶಗೊಳಿಸಲು ಯೇಸುವನ್ನು ಮತ್ತು ಬಲಶಾಲಿಗಳಾದ ದೇವದೂತರನ್ನು ಉಪಯೋಗಿಸುವನು. (2 ಥೆಸಲೊನೀಕ 1:6-9) ಆ ಬಳಿಕ ಸೈತಾನನು ಮತ್ತು ಅವನ ದೆವ್ವಗಳು ಜನಾಂಗಗಳನ್ನು ಎಂದಿಗೂ ತಪ್ಪುದಾರಿಗೆ ನಡೆಸರು. ತದನಂತರ, ತನ್ನ ನೀತಿಯ ಆಳ್ವಿಕೆಗೆ ಅಧೀನರಾಗುವ ಸಕಲರ ಮೇಲೆ ದೇವರ ರಾಜ್ಯವು ಹೇರಳವಾದ ಆಶೀರ್ವಾದಗಳನ್ನು ಸುರಿಸುವುದು.—ಪ್ರಕಟನೆ 20:1-3; 21:3-5.
16. ನೀವೇನನ್ನು ಮಾಡುವುದು ವಿವೇಕಪ್ರದವಾಗಿರುವುದು?
16 ಸೈತಾನನ ವಿಷಯಗಳ ವ್ಯವಸ್ಥೆಯ ಅಂತ್ಯವು ನಿಕಟವಾಗಿರುವುದರಿಂದ, ‘ನಾನು ಏನು ಮಾಡುತ್ತಿರಬೇಕು?’ ಎಂದು ನಾವು ನಮ್ಮನ್ನೇ ಕೇಳಿಕೊಳ್ಳುವುದು ಅಗತ್ಯ. ಯೆಹೋವನ ವಿಷಯದಲ್ಲಿ ಮತ್ತು ಆತನು ನಮ್ಮಿಂದ ಏನು ಅಪೇಕ್ಷಿಸುತ್ತಾನೊ ಅದರ ವಿಷಯದಲ್ಲಿ ಇನ್ನೂ ಹೆಚ್ಚನ್ನು ಕಲಿಯುತ್ತಾ ಹೋಗುವುದು ವಿವೇಕಪ್ರದವು. (ಯೋಹಾನ 17:3) ಬೈಬಲಿನ ಶ್ರದ್ಧಾಪೂರ್ವಕ ವಿದ್ಯಾರ್ಥಿಯಾಗಿರಿ. ಯೆಹೋವನ ಚಿತ್ತವನ್ನು ಮಾಡಲು ಬಯಸುವವರೊಂದಿಗೆ ಕ್ರಮವಾಗಿ ಕೂಡಿಬರುವುದನ್ನು ನಿಮ್ಮ ರೂಢಿಯಾಗಿ ಮಾಡಿಕೊಳ್ಳಿರಿ. (ಇಬ್ರಿಯ 10:24, 25) ಯೆಹೋವ ದೇವರು ಲೋಕವ್ಯಾಪಕವಾಗಿ ಜನರಿಗೆ ಲಭ್ಯಗೊಳಿಸಿರುವ ಸಮೃದ್ಧ ಜ್ಞಾನವನ್ನು ತೆಗೆದುಕೊಂಡು, ನೀವು ಕೂಡ ಆತನ ಅನುಗ್ರಹಪಾತ್ರರಾಗುವಂತೆ ನಿಮ್ಮ ಜೀವನದಲ್ಲಿ ಅಗತ್ಯವಿರುವ ಬದಲಾವಣೆಗಳನ್ನು ಮಾಡಿಕೊಳ್ಳಿರಿ.—ಯಾಕೋಬ 4:8.
17. ದುಷ್ಟರ ನಾಶನವು ಹೆಚ್ಚಿನ ಜನರನ್ನು ಭಯಚಕಿತಗೊಳಿಸುವುದೇಕೆ?
17 ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆಂಬುದರ ಸಾಕ್ಷ್ಯವನ್ನು ಹೆಚ್ಚಿನ ಜನರು ಅಸಡ್ಡೆಮಾಡುವರೆಂದು ಯೇಸು ಮುಂತಿಳಿಸಿದನು. ದುಷ್ಟರ ಮೇಲೆ ನಾಶನವು ಫಕ್ಕನೆ ಮತ್ತು ಅನಿರೀಕ್ಷಿತವಾಗಿ ಬರುವುದು. ರಾತ್ರಿಯಲ್ಲಿ ಬರುವ ಕಳ್ಳನಂತೆ, ಅದು ಹೆಚ್ಚಿನ ಜನರನ್ನು ಭಯಚಕಿತಗೊಳಿಸುವುದು. (1 ಥೆಸಲೊನೀಕ 5:2) ಯೇಸು ಎಚ್ಚರಿಸಿದ್ದು: “ನೋಹನ ದಿವಸಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಪ್ರತ್ಯಕ್ಷತೆಯೂ ಇರುವದು. ಹೇಗಂದರೆ ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಉಣ್ಣುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ ಇದ್ದು ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಗುವ ತನಕ ಏನೂ ತಿಳಿಯದೇ ಇದ್ದರಲ್ಲಾ [“ಏನೂ ಗಮನಕೊಡದೇ ಇದ್ದರಲ್ಲಾ,” NW]. ಅದರಂತೆ ಮನುಷ್ಯಕುಮಾರನು ಪ್ರತ್ಯಕ್ಷನಾಗುವ ಕಾಲದಲ್ಲಿಯೂ ಇರುವದು.”—ಮತ್ತಾಯ 24:37-39.
18. ನಾವು ಯೇಸುವಿನ ಯಾವ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು?
18 ಆದಕಾರಣ, ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿ ಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು. ಆ ದಿವಸವು ಭೂನಿವಾಸಿಗಳೆಲ್ಲರ ಮೇಲೆ ಬರುವದು. ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ [ಒಪ್ಪಿಗೆಯುಳ್ಳವರಾಗಿ] ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆ ಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ.” (ಲೂಕ 21:34-36) ಯೇಸುವಿನ ಈ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದು ವಿವೇಕಪ್ರದ. ಏಕೆ? ಏಕೆಂದರೆ, ಯೆಹೋವ ದೇವರ ಮತ್ತು “ಮನುಷ್ಯಕುಮಾರ”ನಾದ ಯೇಸು ಕ್ರಿಸ್ತನ ಒಪ್ಪಿಗೆ ಇರುವವರಿಗೆ, ಸೈತಾನನ ಈ ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ಪಾರಾಗುವ ಮತ್ತು ಈಗ ಅತಿ ನಿಕಟವಾಗಿರುವ ಆಶ್ಚರ್ಯಕರವಾದ ನೂತನ ಲೋಕದಲ್ಲಿ ನಿತ್ಯವಾಗಿ ಜೀವಿಸುವ ಪ್ರತೀಕ್ಷೆ ಇದೆ.—ಯೋಹಾನ 3:16; 2 ಪೇತ್ರ 3:13.
a ಮೀಕಾಯೇಲನೆಂಬುದು ಯೇಸು ಕ್ರಿಸ್ತನ ಇನ್ನೊಂದು ಹೆಸರಾಗಿದೆ ಎಂಬುದನ್ನು ತೋರಿಸುವ ಮಾಹಿತಿಗಾಗಿ ಪರಿಶಿಷ್ಟದ 218-19ನೇ ಪುಟಗಳನ್ನು ನೋಡಿ.