“ನಿಮ್ಮ ಬಿಡುಗಡೆಯು ಸಮೀಪವಾಗುತ್ತಿದೆ”!
“ನಿಮ್ಮನ್ನು ನೆಟ್ಟಗಾಗಿಸಿಕೊಳ್ಳಿರಿ ಮತ್ತು ನಿಮ್ಮ ತಲೆಯನ್ನು ಮೇಲಕ್ಕೆತ್ತಿರಿ, ಏಕೆಂದರೆ ನಿಮ್ಮ ಬಿಡುಗಡೆಯು ಸಮೀಪವಾಗುತ್ತಿದೆ.”—ಲೂಕ 21:28.
1. ಕ್ರಿ.ಶ. 66ರಲ್ಲಿ ಏನೆಲ್ಲಾ ನಡೆಯಿತು? (ಲೇಖನದ ಆರಂಭದ ಚಿತ್ರ ನೋಡಿ.)
ನೀವೊಬ್ಬ ಕ್ರೈಸ್ತರಾಗಿದ್ದು ಕ್ರಿ.ಶ. 66ರಲ್ಲಿ ಯೆರೂಸಲೇಮಿನಲ್ಲಿದ್ದೀರಿ ಎಂದು ಊಹಿಸಿ. ಅಲ್ಲಿ ಬಹಳಷ್ಟು ಸಂಗತಿಗಳು ನಡೆಯುತ್ತಾ ಇವೆ. ರೋಮನ್ ಅಧಿಕಾರಿಯಾದ ಫ್ಲೋರಸ್ ಎಂಬವನು ಆಲಯದ ಭಂಡಾರದಿಂದ 17 ತಲಾಂತುಗಳನ್ನು ಕದ್ದಿದ್ದಾನೆ. ಆದ್ದರಿಂದ ಯೆಹೂದ್ಯರಿಗೆ ತುಂಬ ಕೋಪ ಬಂದು ಅನೇಕ ರೋಮನ್ ಸೈನಿಕರನ್ನು ಕೊಂದು ಹಾಕಿದ್ದಾರೆ. ತಾವು ಇನ್ಮುಂದೆ ರೋಮನ್ ಆಳ್ವಿಕೆಯಡಿ ಇಲ್ಲ, ಸ್ವತಂತ್ರರು ಎಂದು ಯೆಹೂದ್ಯರು ಘೋಷಿಸಿಕೊಂಡಿದ್ದರಿಂದ ರೋಮನ್ ಸರ್ಕಾರ ತಕ್ಷಣ ಪ್ರತಿಕ್ರಿಯಿಸಿ ಸೆಸ್ಟಿಯಸ್ ಗ್ಯಾಲಸ್ ಮತ್ತು ಅವನ 30,000 ಸೈನಿಕರನ್ನು ಕಳುಹಿಸಿದೆ. ಇವರು ಮೂರು ತಿಂಗಳಿನೊಳಗೆ ಯೆರೂಸಲೇಮಿನ ಸುತ್ತಲೂ ಮುತ್ತಿಗೆ ಹಾಕಿದ್ದಾರೆ. ಹಾಗಾಗಿ ಯೆಹೂದಿ ದಂಗೆಕೋರರು ಆಲಯದೊಳಗೆ ಅಡಗಿಕೊಂಡಿದ್ದಾರೆ. ಆದರೆ ರೋಮನ್ ಸೈನಿಕರು ಆಲಯದ ಹೊರಗಿನ ಗೋಡೆಯವರೆಗೆ ತಲುಪಿ ಒಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ನಗರದಲ್ಲಿ ಇರುವವರಿಗೆಲ್ಲ ಭಯ ಆಗುತ್ತಾ ಇದೆ. ನಿಮಗೆ ಹೇಗನಿಸುತ್ತಾ ಇದೆ?
2. (ಎ) ತಮ್ಮ ನಗರದ ಸುತ್ತಲು ರೋಮನ್ ಸೈನಿಕರು ಮುತ್ತಿಗೆ ಹಾಕಿದ್ದನ್ನು ನೋಡಿ ಕ್ರೈಸ್ತರು ಏನು ಮಾಡಬೇಕಿತ್ತು? (ಬಿ) ಇದು ಹೇಗೆ ಸಾಧ್ಯವಾಯಿತು?
2 ವರ್ಷಗಳ ಹಿಂದೆಯೇ ಯೇಸು ಈ ಘಟನೆಯ ಕುರಿತು ತನ್ನ ಶಿಷ್ಯರನ್ನು ಎಚ್ಚರಿಸಿ ಹೀಗೆ ನಿರ್ದೇಶಿಸಿದ್ದನು: “ಯೆರೂಸಲೇಮ್ ಪಟ್ಟಣವು ಶಿಬಿರ ಹೂಡಿರುವ ಸೈನ್ಯಗಳಿಂದ ಸುತ್ತುವರಿಯಲ್ಪಟ್ಟಿರುವುದನ್ನು ನೀವು ನೋಡುವಾಗ ಅದರ ಹಾಳುಗೆಡಹುವಿಕೆ ಸಮೀಪಿಸಿದೆ ಎಂದು ತಿಳಿದುಕೊಳ್ಳಿರಿ. ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗತೊಡಗಲಿ, ಯೆರೂಸಲೇಮ್ ಪಟ್ಟಣದೊಳಗಿರುವವರು ಅಲ್ಲಿಂದ ಹೊರಟುಹೋಗಲಿ ಮತ್ತು ಹಳ್ಳಿ ಪ್ರದೇಶಗಳಲ್ಲಿರುವವರು ಅದರೊಳಗೆ ಪ್ರವೇಶಿಸದಿರಲಿ.” (ಲೂಕ 21:20, 21) ಆದರೆ ರೋಮನ್ ಸೈನಿಕರು ನಗರದ ಸುತ್ತಲು ಮುತ್ತಿಗೆ ಹಾಕಿರುವಾಗ ಯೇಸುವಿನ ಈ ನಿರ್ದೇಶನವನ್ನು ಪಾಲಿಸುತ್ತಾ ಅವನ ಶಿಷ್ಯರು ಯೆರೂಸಲೇಮಿನಿಂದ ಹೊರಡಲು ಹೇಗೆ ತಾನೇ ಸಾಧ್ಯ? ಅಚ್ಚರಿ ಮೂಡಿಸುವ ವಿಷಯವೊಂದು ನಡೆಯಿತು. ರೋಮನ್ ಸೈನ್ಯ ದಿಢೀರೆಂದು ಯೆರೂಸಲೇಮನ್ನು ಬಿಟ್ಟುಹೋಯಿತು! ಹೀಗೆ ಯೇಸು ಹೇಳಿದಂತೆಯೇ ಆ ಆಕ್ರಮಣದ ದಿನಗಳನ್ನು “ಕಡಮೆ”ಮಾಡಲಾಯಿತು. (ಮತ್ತಾ. 24:22) ಸೈನ್ಯವು ಯೆರೂಸಲೇಮನ್ನು ಬಿಟ್ಟು ಹೊರಟಾಗ ನಂಬಿಗಸ್ತ ಕ್ರೈಸ್ತರು ಯೇಸುವಿನ ಮಾತನ್ನು ಪಾಲಿಸುತ್ತಾ ತಕ್ಷಣ ಅಲ್ಲಿಂದ ಬೆಟ್ಟಕ್ಕೆ ಓಡಿ ಹೋಗುವ ಅವಕಾಶ ಸಿಕ್ಕಿತು.a (ಪಾದಟಿಪ್ಪಣಿ ನೋಡಿ.) ನಂತರ ಕ್ರಿ.ಶ. 70ರಲ್ಲಿ ಯೆರೂಸಲೇಮಿಗೆ ಒಂದು ಹೊಸ ರೋಮನ್ ಸೈನ್ಯ ಹಿಂದಿರುಗಿತು. ಈ ಸಲ ಅವರು ನಗರವನ್ನು ನಾಶಮಾಡಿದರು. ಆದರೆ ಯೇಸುವಿನ ನಿರ್ದೇಶನವನ್ನು ಪಾಲಿಸಿದ್ದವರೆಲ್ಲರೂ ಪಾರಾದರು.
3. (ಎ) ಕ್ರೈಸ್ತರು ಬೇಗನೆ ಯಾವ ಸನ್ನಿವೇಶವನ್ನು ಎದುರಿಸಲಿದ್ದಾರೆ? (ಬಿ) ಈ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ?
3 ಯೇಸುವಿನ ಈ ಎಚ್ಚರಿಕೆ ಮತ್ತು ನಿರ್ದೇಶನಗಳು ಇಂದು ನಮ್ಮ ದಿನಕ್ಕೂ ಅನ್ವಯಿಸುತ್ತವೆ. ಬೇಗನೆ ನಾವು ಕೂಡ ಇಂಥ ಒಂದು ಸನ್ನಿವೇಶದಲ್ಲಿ ಇರಲಿದ್ದೇವೆ. “ಮಹಾ ಸಂಕಟ” ತಟ್ಟನೆ ಆರಂಭವಾದಾಗ ಏನಾಗಲಿದೆ ಎಂದು ವಿವರಿಸಲು ಯೇಸು ಪ್ರಥಮ ಶತಮಾನದಲ್ಲಿ ನಡೆದ ಘಟನೆಗಳನ್ನು ಬಳಸಿದನು. (ಮತ್ತಾ. 24:3, 21, 29) ಯೆರೂಸಲೇಮಿನ ನಾಶನದಿಂದ ನಂಬಿಗಸ್ತ ಸೇವಕರು ಪಾರಾದರು. ಹಾಗೆಯೇ ಭೂವ್ಯಾಪಕವಾಗಿ ಬರಲಿರುವ ವಿಪತ್ತಿನಿಂದ “ಮಹಾ ಸಮೂಹ” ಪಾರಾಗಲಿದೆ. (ಪ್ರಕಟನೆ 7:9, 13, 14 ಓದಿ.) ಭವಿಷ್ಯದಲ್ಲಾಗುವ ಈ ಘಟನೆಗಳನ್ನೆಲ್ಲಾ ನಾವು ಅರ್ಥಮಾಡಿಕೊಳ್ಳುವುದು ತುಂಬ ಪ್ರಾಮುಖ್ಯ. ಏಕೆ? ಏಕೆಂದರೆ ಅದು ನಮ್ಮ ಜೀವದ ಪ್ರಶ್ನೆ. ಆದ್ದರಿಂದ ಈ ಘಟನೆಗಳು ವೈಯಕ್ತಿಕವಾಗಿ ನಮ್ಮನ್ನು ಹೇಗೆ ಬಾಧಿಸುತ್ತವೆಂದು ಚರ್ಚಿಸೋಣ.
ಮಹಾ ಸಂಕಟದ ಆರಂಭ
4. ಮಹಾ ಸಂಕಟ ಹೇಗೆ ಆರಂಭವಾಗಲಿದೆ?
4 ಮಹಾ ಸಂಕಟ ಹೇಗೆ ಆರಂಭವಾಗಲಿದೆ? ಸುಳ್ಳು ಧರ್ಮದ ನಾಶನದಿಂದ. ಬೈಬಲಿನಲ್ಲಿ ಸುಳ್ಳು ಧರ್ಮವನ್ನು “ಮಹಾ ಬಾಬೆಲ್, ವೇಶ್ಯೆಯರ . . . ತಾಯಿ” ಎಂದು ಕರೆಯಲಾಗಿದೆ. (ಪ್ರಕ. 17:5-7) ಸುಳ್ಳು ಧರ್ಮವನ್ನು ವೇಶ್ಯೆ ಎಂದು ಯಾಕೆ ಕರೆಯಲಾಗಿದೆ? ಏಕೆಂದರೆ ಅವುಗಳ ಧರ್ಮಗುರುಗಳು ದೇವರಿಗೆ ನಂಬಿಗಸ್ತರಾಗಿ ಉಳಿದಿಲ್ಲ. ಯೇಸುವನ್ನು ಮತ್ತು ಅವನ ರಾಜ್ಯವನ್ನು ನಿಷ್ಠೆಯಿಂದ ಬೆಂಬಲಿಸುವುದನ್ನು ಬಿಟ್ಟಿದ್ದಾರೆ. ಹೆಚ್ಚಿನ ಅಧಿಕಾರವನ್ನು ಗಿಟ್ಟಿಸಲಿಕ್ಕಾಗಿ ಅವರು ಮಾನವ ಸರ್ಕಾರಗಳನ್ನು ಬೆಂಬಲಿಸಿದ್ದಾರೆ ಮತ್ತು ಬೈಬಲ್ ಬೋಧನೆಗಳನ್ನು ಅಲಕ್ಷ್ಯ ಮಾಡಿದ್ದಾರೆ. ಹಾಗಾಗಿ ಅಭಿಷಿಕ್ತರ ಆರಾಧನೆ ಶುದ್ಧವಾಗಿರುವ ಹಾಗೆ ಇವರ ಆರಾಧನೆ ಶುದ್ಧವಾಗಿಲ್ಲ. (2 ಕೊರಿಂ. 11:2; ಯಾಕೋ. 1:27; ಪ್ರಕ. 14:4) ಆದರೆ ಮಹಾ ಬಾಬೆಲನ್ನು ಯಾರು ನಾಶ ಮಾಡುತ್ತಾರೆ? ಯೆಹೋವನು ‘ಕಡುಗೆಂಪು ಬಣ್ಣದ ಕಾಡುಮೃಗದ ಹತ್ತು ಕೊಂಬುಗಳ’ ಮೂಲಕ “ತನ್ನ ಯೋಚನೆಯನ್ನು ಕಾರ್ಯರೂಪಕ್ಕೆ” ತರುತ್ತಾನೆ. “ಕಡುಗೆಂಪು ಬಣ್ಣದ ಕಾಡುಮೃಗ” ವಿಶ್ವ ಸಂಸ್ಥೆಯನ್ನು ಚಿತ್ರಿಸುತ್ತದೆ. ‘ಹತ್ತು ಕೊಂಬುಗಳು’ ವಿಶ್ವ ಸಂಸ್ಥೆಗೆ ಬೆಂಬಲ ನೀಡುವ ಎಲ್ಲಾ ರಾಜಕೀಯ ಶಕ್ತಿಗಳನ್ನು ಸೂಚಿಸುತ್ತದೆ.—ಪ್ರಕಟನೆ 17:3, 16-18 ಓದಿ.
5, 6. ಮಹಾ ಬಾಬೆಲ್ ನಾಶವಾಗುವಾಗ ಅದರ ಎಲ್ಲಾ ಸದಸ್ಯರು ಸಾಯುವುದಿಲ್ಲ ಎಂದು ನಾವೇಕೆ ಹೇಳುತ್ತೇವೆ?
5 ಮಹಾ ಬಾಬೆಲ್ ನಾಶವಾಗುವಾಗ ಸುಳ್ಳು ಧರ್ಮದ ಎಲ್ಲಾ ಸದಸ್ಯರು ಕೊಲ್ಲಲ್ಪಡುತ್ತಾರಾ? ಇಲ್ಲ. ಏನಾಗಲಿದೆ ಎಂದು ಬರೆದಿಡಲು ಯೆಹೋವನು ತನ್ನ ಪ್ರವಾದಿಯಾದ ಜೆಕರ್ಯನನ್ನು ಪ್ರೇರಿಸಿದನು. ಒಮ್ಮೆ ಸುಳ್ಳು ಧರ್ಮದ ಭಾಗವಾಗಿದ್ದ ಒಬ್ಬನು ಆ ಸಮಯದಲ್ಲಿ ಹೀಗನ್ನುವನು: “ನಾನು ಪ್ರವಾದಿಯಲ್ಲ, ಹೊಲದ ಕೆಲಸದವನು; ಚಿಕ್ಕತನದಿಂದಲೂ ಗುಲಾಮನಾಗಿದ್ದೇನೆ ಎಂದು ಹೇಳಲು ಮತ್ತೊಬ್ಬನು ಅವನನ್ನು—ನಿನ್ನ ಎದೆಯ ಮೇಲಿನ ಈ ಗಾಯಗಳೇನು ಎಂದು ಕೇಳಿದರೆ ಅವನು—ಮಿತ್ರರ ಮನೆಯಲ್ಲಿ ನನಗಾದ ಗಾಯಗಳು ಎಂದುತ್ತರ ಕೊಡುವನು.” (ಜೆಕ. 13:4-6) ಹಾಗಾದರೆ ಈ ವಚನ ಸೂಚಿಸುವಂತೆ ಧರ್ಮಗುರುಗಳು ಸಹ ತಮಗೇನು ಧರ್ಮಶ್ರದ್ಧೆಯಿಲ್ಲ ಎಂಬಂತೆ ನಟಿಸುವರು ಮತ್ತು ತಾವು ಆ ಸುಳ್ಳು ಧರ್ಮಗಳ ಭಾಗವಾಗಿರಲಿಲ್ಲ ಎಂದು ಹೇಳಿಕೊಳ್ಳುವರು.
6 ಆ ಸಮಯದಲ್ಲಿ ದೇವರ ಜನರಿಗೆ ಏನಾಗಲಿದೆ? ಯೇಸು ವಿವರಿಸುತ್ತಾನೆ: “ವಾಸ್ತವದಲ್ಲಿ, ಆ ದಿನಗಳನ್ನು ಕಡಮೆಮಾಡದಿದ್ದರೆ ಯಾವನೂ ಉಳಿಯನು. ಆದರೆ ಆಯ್ದುಕೊಳ್ಳಲ್ಪಟ್ಟವರ ನಿಮಿತ್ತವಾಗಿ ಆ ದಿನಗಳು ಕಡಮೆಮಾಡಲ್ಪಡುವವು.” (ಮತ್ತಾ. 24:22) ಒಂದನೇ ಶತಮಾನದಲ್ಲಿ ಯೆರೂಸಲೇಮಿನ ಸಂಕಟವನ್ನು ‘ಕಡಮೆಮಾಡಲಾಯಿತು’ ಅಂದರೆ ಅದನ್ನು ಮಧ್ಯದಲ್ಲಿ ಸ್ವಲ್ಪ ಸಮಯ ತಡೆಯಲಾಯಿತು. “ಆಯ್ದುಕೊಳ್ಳಲ್ಪಟ್ಟವರು” ಅಥವಾ ಅಭಿಷಿಕ್ತ ಕ್ರೈಸ್ತರಿಗೆ ಆಗ ಓಡಿ ಹೋಗಲು ಅವಕಾಶ ಸಿಕ್ಕಿತು. ಹಾಗೆಯೇ ಮಹಾ ಸಂಕಟದ ಮೊದಲನೇ ಭಾಗವನ್ನು “ಆಯ್ದುಕೊಳ್ಳಲ್ಪಟ್ಟವರ” ಸಲುವಾಗಿ “ಕಡಮೆ”ಮಾಡಲಾಗುವುದು ಅಂದರೆ ಮಧ್ಯದಲ್ಲೇ ಸ್ವಲ್ಪ ಸಮಯಕ್ಕೆ ತಡೆಯಲಾಗುವುದು. ದೇವರ ಜನರನ್ನು ನಾಶಮಾಡಲು ರಾಜಕೀಯ ಶಕ್ತಿಗಳಾಗಿರುವ ‘ಹತ್ತು ಕೊಂಬುಗಳಿಗೆ’ ಅವಕಾಶ ಕೊಡಲಾಗುವುದಿಲ್ಲ. ಬದಲಿಗೆ ಎಲ್ಲಾ ಸುಳ್ಳು ಧರ್ಮಗಳ ನಾಶನದ ನಂತರ ಸ್ವಲ್ಪ ಸಮಯ ಶಾಂತಿ ಇರಲಿದೆ.
ಪರೀಕ್ಷೆ ಮತ್ತು ನ್ಯಾಯತೀರ್ಪಿನ ಸಮಯ
7, 8. (ಎ) ಸುಳ್ಳು ಧರ್ಮದ ನಾಶನದ ನಂತರ ನಮಗೆ ಯಾವ ಅವಕಾಶವಿದೆ? (ಬಿ) ಆ ಸಮಯದಲ್ಲಿ ಬೇರೆಲ್ಲರಿಗಿಂತ ದೇವರ ಜನರು ಹೇಗೆ ಭಿನ್ನರಾಗಿರುತ್ತಾರೆ?
7 ಸುಳ್ಳು ಧರ್ಮದ ನಾಶನದ ನಂತರ ಏನಾಗಲಿದೆ? ನಮ್ಮ ಹೃದಯದಲ್ಲಿ ನಿಜವಾಗಿಯೂ ಏನಿದೆ ಎಂದು ತೋರಿಸುವ ಸಮಯ ಅದಾಗಿರುತ್ತದೆ. ಆಗ ಹೆಚ್ಚಿನ ಜನರು ‘ಪರ್ವತಗಳ ಬಂಡೆರಾಶಿಗೆ’ ಹೋಲಿಸಲಾಗಿರುವ ಮಾನವ ಸಂಘಟನೆಗಳಿಂದ ಸಹಾಯ ಮತ್ತು ಸಂರಕ್ಷಣೆಯನ್ನು ಪಡೆಯಲು ಪ್ರಯತ್ನಿಸುತ್ತಾರೆ. (ಪ್ರಕ. 6:15-17) ಆದರೆ ಯೆಹೋವನ ಜನರು ಸಂರಕ್ಷಣೆಗಾಗಿ ಆತನ ಕಡೆಗೆ ನೋಡುತ್ತಾರೆ. ಒಂದನೇ ಶತಮಾನದಲ್ಲಿ ಆಕ್ರಮಣದ ದಿನಗಳು ‘ಕಡಮೆ ಮಾಡಲ್ಪಟ್ಟಾಗ’ ಯೆಹೂದ್ಯರೆಲ್ಲರು ಒಮ್ಮೆಲೆ ಕ್ರೈಸ್ತರಾಗುವ ಸಮಯ ಅದಾಗಿರಲಿಲ್ಲ. ಬದಲಿಗೆ ಈಗಾಗಲೇ ಕ್ರೈಸ್ತರಾಗಿರುವವರು ಯೇಸುವಿನ ನಿರ್ದೇಶನದ ಪ್ರಕಾರ ಯೆರೂಸಲೇಮಿನಿಂದ ಹೊರಗೆ ಹೋಗಬೇಕಿತ್ತು. ಹಾಗೆಯೇ ಭವಿಷ್ಯದಲ್ಲಿ ಮಹಾ ಬಾಬೆಲಿನ ಮೇಲೆ ಆಕ್ರಮಣ ‘ಕಡಮೆ ಮಾಡಲ್ಪಟ್ಟಾಗ’ ಅನೇಕರು ಒಮ್ಮೆಲೆ ನಿಜ ಕ್ರೈಸ್ತರಾಗುವರೆಂದು ನಾವು ನೆನಸಬಾರದು. ಬದಲಿಗೆ ಇದು ಎಲ್ಲಾ ನಿಜ ಆರಾಧಕರಿಗೆ ಯೆಹೋವನ ಮೇಲೆ ಅವರಿಗಿರುವ ಪ್ರೀತಿಯನ್ನು ತೋರಿಸಲು ಮತ್ತು ಅಭಿಷಿಕ್ತರನ್ನು ಬೆಂಬಲಿಸಲು ಒಂದು ಅವಕಾಶ ಆಗಿರುತ್ತದೆ.—ಮತ್ತಾ. 25:34-40.
8 ಆ ಪರೀಕ್ಷೆಯ ಸಮಯದಲ್ಲಿ ನಿರ್ದಿಷ್ಟವಾಗಿ ಏನಾಗಲಿದೆ ಎಂದು ನಮಗೆ ಗೊತ್ತಿಲ್ಲ. ಆದರೆ ಜೀವನ ಸುಲಭವಾಗಿರುವುದಿಲ್ಲ ಮತ್ತು ನಾವು ತ್ಯಾಗಗಳನ್ನು ಮಾಡಬೇಕಾಗುತ್ತದೆಂದು ನಿರೀಕ್ಷಿಸಬೇಕು. ಒಂದನೇ ಶತಮಾನದಲ್ಲಿನ ಕ್ರೈಸ್ತರು ಪಾರಾಗಲಿಕ್ಕೆ ತಮ್ಮ ಮನೆಗಳನ್ನು ಬಿಟ್ಟು ಹೋಗಬೇಕಾಯಿತು, ಕಷ್ಟಗಳನ್ನು ಸಹಿಸಬೇಕಾಯಿತು. (ಮಾರ್ಕ 13:15-18) ನಾವು ನಮ್ಮನ್ನು ಹೀಗೆ ಕೇಳಿಕೊಳ್ಳಬೇಕು: ‘ಭೌತಿಕ ವಸ್ತುಗಳನ್ನು ಬಿಟ್ಟುಬಿಡಲು ನಾನು ತಯಾರಿದ್ದೇನೊ? ಯೆಹೋವನಿಗೆ ನಿಷ್ಠನಾಗಿ ಉಳಿಯಲಿಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೊ?’ ತುಸು ಯೋಚಿಸಿ! ಆ ಸಮಯದಲ್ಲಿ ಪ್ರವಾದಿ ದಾನಿಯೇಲನಂತೆ ಎಂಥ ಪರಿಸ್ಥಿತಿಯಡಿಯಲ್ಲೂ ನಮ್ಮ ದೇವರನ್ನು ಆರಾಧಿಸುವವರು ನಾವು ಮಾತ್ರ ಆಗಿರುತ್ತೇವೆ.—ದಾನಿ. 6:10, 11.
9, 10. (ಎ) ಮಹಾ ಸಂಕಟದ ಸಮಯದಲ್ಲಿ ದೇವರ ಜನರು ಯಾವ ಸಂದೇಶವನ್ನು ಘೋಷಿಸುತ್ತಾರೆ? (ಬಿ) ದೇವರ ಜನರ ಶತ್ರುಗಳು ಹೇಗೆ ಪ್ರತಿಕ್ರಿಯಿಸುತ್ತಾರೆ?
9 ಮಹಾ ಸಂಕಟದ ಸಮಯದಲ್ಲಿ ನಾವು ‘ರಾಜ್ಯದ ಸುವಾರ್ತೆಯನ್ನು’ ಸಾರುವುದಿಲ್ಲ. ಏಕೆಂದರೆ ಅದನ್ನು ಸಾರುವ ಸಮಯ ಕಳೆದು ಹೋಗಿರುತ್ತದೆ. “ಅಂತ್ಯ”ದ ಸಮಯ ಬಂದಿರುತ್ತದೆ! (ಮತ್ತಾ. 24:14) ಆಗ ದೇವರ ಜನರು ಎಲ್ಲಾ ಜನರನ್ನು ಬಾಧಿಸಲಿರುವ ನ್ಯಾಯತೀರ್ಪಿನ ಕುರಿತ ಸಂದೇಶವನ್ನು ಧೈರ್ಯದಿಂದ ಘೋಷಿಸುವರು. ಆ ಸಂದೇಶ ಸೈತಾನನ ದುಷ್ಟ ಲೋಕ ಇನ್ನೇನು ಪೂರ್ತಿಯಾಗಿ ನಾಶವಾಗಲಿದೆ ಎಂದಾಗಿರಬಹುದು. ಬೈಬಲ್ ಈ ಸಂದೇಶವನ್ನು ಆಲಿಕಲ್ಲುಗಳಿಗೆ ಹೋಲಿಸಿ ಹೀಗನ್ನುತ್ತದೆ: “ಆಕಾಶದಿಂದ ಮನುಷ್ಯರ ಮೇಲೆ ದೊಡ್ಡ ಆಲಿಕಲ್ಲಿನ ಮಳೆ ಸುರಿಯಿತು; ಪ್ರತಿಯೊಂದು ಕಲ್ಲು ಸುಮಾರು ಒಂದು ತಲಾಂತು ತೂಕವುಳ್ಳದ್ದಾಗಿತ್ತು; ಆ ಆಲಿಕಲ್ಲಿನ ಬಾಧೆಯ ಕಾರಣ ಮನುಷ್ಯರು ದೇವರನ್ನು ದೂಷಿಸಿದರು, ಏಕೆಂದರೆ ಅದರ ಬಾಧೆಯು ಅಸಾಮಾನ್ಯವಾಗಿ ಮಹತ್ತಾದದ್ದಾಗಿತ್ತು.”—ಪ್ರಕ. 16:21.
10 ಈ ತೀಕ್ಷ್ಣ ಸಂದೇಶವನ್ನು ನಮ್ಮ ಶತ್ರುಗಳು ಕೇಳಲಿದ್ದಾರೆ. ಜನಾಂಗಗಳ ಗುಂಪೊಂದು ಅಂದರೆ ಬೈಬಲಿನಲ್ಲಿ ಹೇಳಲಾಗಿರುವ ಮಾಗೋಗಿನ ಗೋಗ ಇದಕ್ಕೆ ಹೇಗೆ ಪ್ರತಿಕ್ರಿಯಿಸುವುದೆಂದು ವಿವರಿಸಲು ಯೆಹೋವನು ಪ್ರವಾದಿ ಯೆಹೆಜ್ಕೇಲನನ್ನು ಪ್ರೇರಿಸಿದನು: “ಕರ್ತನಾದ ಯೆಹೋವನು ಇಂತೆನ್ನುತ್ತಾನೆ—ಆಗ ನಿನ್ನ ಮನಸ್ಸಿನಲ್ಲಿ ಆಲೋಚನೆಗಳು ಹುಟ್ಟುವವು; ನೀನು—ಆಹಾ, ನಾನು ಪೌಳಿಗೋಡೆಯಿಲ್ಲದ ಹಳ್ಳಿಪಳ್ಳಿಗಳು ತುಂಬಿದ ದೇಶವನ್ನು ನುಗ್ಗಿ ಅಗುಳಿ ಬಾಗಿಲು ಗೋಡೆಗಳಿಲ್ಲದೆ ನೆಮ್ಮದಿಯಿಂದ ನಿರ್ಭಯವಾಗಿರುವವರ ಮೇಲೆ ಬೀಳುವೆನು ಅಂದುಕೊಂಡು ಸೂರೆಗೆಯ್ದು ಕೊಳ್ಳೆಹೊಡೆಯಬೇಕೆಂತಲೂ ನಿರ್ಜನವಾಗಿದ್ದು ಜನಭರಿತವಾದ ಪ್ರದೇಶಗಳ ಮೇಲೆ ಕೈಮಾಡಬೇಕೆಂತಲೂ ಜನಾಂಗಗಳೊಳಗಿಂದ ಒಟ್ಟುಗೂಡಿ ದನ ಮೊದಲಾದ ಸೊತ್ತನ್ನು ಸಂಗ್ರಹಿಸಿಕೊಂಡು ಲೋಕದ ನಟ್ಟನಡುವೆ ವಾಸಿಸುವವರನ್ನು ಹತಿಸಬೇಕೆಂತಲೂ ಕುತಂತ್ರವನ್ನು ಕಲ್ಪಿಸುವಿ.” (ಯೆಹೆ. 38:10-12) ‘ಲೋಕದ ನಟ್ಟನಡುವೆ ವಾಸಿಸುತ್ತಿದ್ದಾರೋ’ ಎಂಬಂತೆ ದೇವರ ಜನರು ಬೇರೆಲ್ಲರಿಗಿಂತ ಭಿನ್ನರಾಗಿ ಎದ್ದು ಕಾಣುತ್ತಾರೆ. ಆಗ ಜನಾಂಗಗಳಿಗೆ ತಮ್ಮನ್ನೇ ತಡೆಯಲಿಕ್ಕೆ ಆಗುವುದಿಲ್ಲ. ಯೆಹೋವನ ಅಭಿಷಿಕ್ತರನ್ನು ಮತ್ತು ಅವರನ್ನು ಬೆಂಬಲಿಸುವವರನ್ನು ಆಕ್ರಮಿಸಲು ಅವು ತುದಿಗಾಲಲ್ಲಿ ನಿಂತಿರುವವು.
11. (ಎ) ಮಹಾ ಸಂಕಟದ ಸಮಯದಲ್ಲಿ ಆಗುವ ಘಟನೆಗಳ ಕ್ರಮದ ಬಗ್ಗೆ ನಾವೇನು ನೆನಪಿಡಬೇಕು? (ಬಿ) ಸೂಚನೆಗಳನ್ನು ನೋಡಿ ಜನರು ಹೇಗೆ ಪ್ರತಿಕ್ರಿಯಿಸುವರು?
11 ಮುಂದೇನಾಗುತ್ತದೆ? ಘಟನೆಗಳು ಸರಿಯಾಗಿ ಯಾವ ಕ್ರಮದಲ್ಲಿ ನಡೆಯಲಿವೆಯೆಂದು ಬೈಬಲ್ ಹೇಳುವುದಿಲ್ಲ. ಆದರೆ ಕೆಲವು ಘಟನೆಗಳು ಬಹುಶಃ ಒಂದೇ ಸಮಯದಲ್ಲಿ ನಡೆಯಬಹುದು. ವಿಷಯಗಳ ವ್ಯವಸ್ಥೆಯ ಸಮಾಪ್ತಿ ಬಗ್ಗೆ ಪ್ರವಾದನೆಯಲ್ಲಿ ಯೇಸು ಹೀಗಂದನು: “ಸೂರ್ಯ, ಚಂದ್ರ ಮತ್ತು ನಕ್ಷತ್ರಗಳಲ್ಲಿ ಸೂಚನೆಗಳು ತೋರಿಬರುವವು; ಭೂಮಿಯ ಮೇಲೆ ಸಮುದ್ರದ ಭೋರ್ಗರೆತ ಮತ್ತು ಅದರ ತಳಮಳದಿಂದಾಗಿ ಜನಾಂಗಗಳು ದಿಕ್ಕುತೋಚದೆ ಸಂಕಟಪಡುವವು. ಮತ್ತು ಆಕಾಶದ ಶಕ್ತಿಗಳು ಕುಲುಕಿಸಲ್ಪಡುವುದರಿಂದ ನಿವಾಸಿತ ಭೂಮಿಗೆ ಬರುತ್ತಿರುವ ಸಂಗತಿಗಳ ನಿಮಿತ್ತ ಜನರು ಭಯದಿಂದ ಮತ್ತು ನಿರೀಕ್ಷಣೆಯಿಂದ ಮೂರ್ಛೆಹೋದಂತಾಗುವರು. ಆಗ ಅವರು ಮನುಷ್ಯಕುಮಾರನು ಶಕ್ತಿಯಿಂದಲೂ ಮಹಾ ಮಹಿಮೆಯಿಂದಲೂ ಮೇಘದಲ್ಲಿ ಬರುವುದನ್ನು ಕಾಣುವರು.” (ಲೂಕ 21:25-27; ಮಾರ್ಕ 13:24-26 ಓದಿ.) ಈ ಪ್ರವಾದನೆ ನೆರವೇರುವಾಗ ಆಕಾಶದಲ್ಲಿ ಭಯಾನಕ ಸೂಚನೆಗಳು ಮತ್ತು ಘಟನೆಗಳು ನಡೆಯಬಹುದಾ? ಏನಾಗುತ್ತದೆಂದು ನಾವು ಕಾದು ನೋಡಬೇಕು. ಆದರೆ ಈ ಸೂಚನೆಗಳನ್ನು ದೇವರ ಶತ್ರುಗಳು ನೋಡುವಾಗ ಅವರು ಭಯದಿಂದ ಬೆಚ್ಚಿಬೀಳುವರು ಎಂದು ನಮಗೆ ಖಂಡಿತ ಗೊತ್ತು.
12, 13. (ಎ) ಯೇಸು “ಶಕ್ತಿಯಿಂದಲೂ ಮಹಾ ಮಹಿಮೆಯಿಂದಲೂ” ಬಂದಾಗ ಏನು ನಡೆಯಲಿದೆ? (ಬಿ) ಆ ಸಮಯದಲ್ಲಿ ದೇವರ ಜನರು ಹೇಗೆ ಪ್ರತಿಕ್ರಿಯಿಸಲಿದ್ದಾರೆ?
12 ಯೇಸು “ಶಕ್ತಿಯಿಂದಲೂ ಮಹಾ ಮಹಿಮೆಯಿಂದಲೂ” ಬಂದಾಗ ಏನು ನಡೆಯಲಿದೆ? ನಂಬಿಗಸ್ತರಿಗೆ ಬಹುಮಾನ, ನಂಬಿಗಸ್ತರಲ್ಲದವರಿಗೆ ಶಿಕ್ಷೆ ಸಿಗುತ್ತದೆ. (ಮತ್ತಾ. 24:46, 47, 50, 51; 25:19, 28-30) ಇದನ್ನು ವಿವರವಾಗಿ ಹೇಳಲು ಯೇಸು ಒಂದು ದೃಷ್ಟಾಂತವನ್ನು ಬಳಸಿದನು. ಅವನು ಹೀಗಂದನು: “ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಎಲ್ಲ ದೂತರೊಡನೆ ಕೂಡಿಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಳ್ಳುವನು. ಆಗ ಎಲ್ಲ ಜನಾಂಗಗಳವರು ಅವನ ಮುಂದೆ ಒಟ್ಟುಗೂಡಿಸಲ್ಪಡುವರು ಮತ್ತು ಒಬ್ಬ ಕುರುಬನು ಕುರಿಗಳನ್ನು ಆಡುಗಳಿಂದ ಪ್ರತ್ಯೇಕಿಸುವಂತೆಯೇ ಅವನು ಜನರನ್ನು ಪ್ರತ್ಯೇಕಿಸುವನು. ಅವನು ಕುರಿಗಳನ್ನು ತನ್ನ ಬಲಗಡೆಯಲ್ಲಿಯೂ ಆಡುಗಳನ್ನು ಎಡಗಡೆಯಲ್ಲಿಯೂ ನಿಲ್ಲಿಸುವನು.” (ಮತ್ತಾ. 25:31-33) ಕುರಿ ಮತ್ತು ಆಡುಗಳಿಗೆ ಏನಾಗಲಿದೆ? ಅವರಿಗೆ ತೀರ್ಪು ಆಗಲಿದೆ. ಆಡುಗಳು, ಅಂದರೆ ಅಪನಂಬಿಗಸ್ತರು ನಿತ್ಯ ನಾಶನಕ್ಕೆ ಹೋಗುವರು. ಆದರೆ ಕುರಿಗಳಿಗೆ ಅಂದರೆ ನಂಬಿಗಸ್ತರಿಗೆ ನಿತ್ಯಜೀವ ಸಿಗಲಿದೆ.—ಮತ್ತಾ. 25:46.
13 ತಾವು ನಾಶವಾಗುತ್ತೇವೆಂದು ತಿಳಿದಾಗ ಆಡುಗಳಂಥ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ? ಅವರು “ಗೋಳಾಡುತ್ತಾ ಎದೆಬಡಿದುಕೊಳ್ಳುವರು.” (ಮತ್ತಾ. 24:30) ಆದರೆ ಅಭಿಷಿಕ್ತರು ಮತ್ತು ಅವರಿಗೆ ಬೆಂಬಲ ಕೊಡುವವರು ಹೇಗೆ ಪ್ರತಿಕ್ರಿಯಿಸುವರು? ಅವರು ಯೇಸು ಹೇಳಿದ ಹಾಗೆ ಮಾಡುವರು: “ಇವೆಲ್ಲವೂ ಸಂಭವಿಸಲು ತೊಡಗುವಾಗ ನಿಮ್ಮನ್ನು ನೆಟ್ಟಗಾಗಿಸಿಕೊಳ್ಳಿರಿ ಮತ್ತು ನಿಮ್ಮ ತಲೆಯನ್ನು ಮೇಲಕ್ಕೆತ್ತಿರಿ, ಏಕೆಂದರೆ ನಿಮ್ಮ ಬಿಡುಗಡೆಯು ಸಮೀಪವಾಗುತ್ತಿದೆ.” (ಲೂಕ 21:28) ನಮಗೊಂದು ಸಕಾರಾತ್ಮಕ ಮನೋಭಾವ ಇದ್ದು, ಬಿಡುಗಡೆಯಾಗಲಿದೆ ಎಂಬ ದೃಢಭರವಸೆ ಇರುತ್ತದೆ.
ರಾಜ್ಯದಲ್ಲಿ ಪ್ರಕಾಶಮಾನವಾಗಿ ಹೊಳೆಯುವರು
14, 15. (ಎ) ಮಾಗೋಗಿನ ಗೋಗನ ಆಕ್ರಮಣ ಶುರುವಾದ ಮೇಲೆ ಯಾವ ಒಟ್ಟುಗೂಡಿಸುವಿಕೆ ಕೆಲಸ ನಡೆಯಲಿದೆ? (ಬಿ) ಇದು ಹೇಗೆ ಸಂಭವಿಸಲಿದೆ?
14 ಮಾಗೋಗಿನ ಗೋಗನು ದೇವರ ಜನರ ಮೇಲೆ ಆಕ್ರಮಣ ಮಾಡಲು ಶುರುಮಾಡಿದ ನಂತರ ಏನಾಗಲಿದೆ? ಮನುಷ್ಯಕುಮಾರನು “ದೇವದೂತರನ್ನು ಕಳುಹಿಸಿ ದೇವರು ಆಯ್ದುಕೊಂಡ ತನ್ನವರನ್ನು ಭೂಮಿಯ ಕಟ್ಟಕಡೆಯಿಂದ ಆಕಾಶದ ಕಟ್ಟಕಡೆಯ ವರೆಗೆ ನಾಲ್ಕೂ ದಿಕ್ಕುಗಳಿಂದ ಒಟ್ಟುಗೂಡಿಸುವನು” ಎನ್ನುತ್ತದೆ ಬೈಬಲ್. (ಮಾರ್ಕ 13:27; ಮತ್ತಾ. 24:31) ಈ ಒಟ್ಟುಗೂಡಿಸುವಿಕೆಯ ಕೆಲಸ ಅಭಿಷಿಕ್ತ ಕ್ರೈಸ್ತರು ಆರಂಭದಲ್ಲಿ ಒಟ್ಟುಗೂಡಿಸಲ್ಪಟ್ಟ ಸಮಯಕ್ಕೆ ಸೂಚಿಸುವುದಿಲ್ಲ. ಭೂಮಿಯಲ್ಲಿ ಇನ್ನು ಇರುವ ಅಭಿಷಿಕ್ತರ ಕೊನೆಯ ಮುದ್ರೆಯೊತ್ತುವಿಕೆಗೂ ಸೂಚಿಸುವುದಿಲ್ಲ. (ಮತ್ತಾ. 13:37, 38) ಈ ಕೊನೆಯ ಮುದ್ರೆಯೊತ್ತುವಿಕೆ ಮಹಾ ಸಂಕಟ ಆರಂಭವಾಗುವ ಸ್ವಲ್ಪ ಮುಂಚೆಯೇ ನಡೆಯಲಿದೆ. (ಪ್ರಕ. 7:1-4) ಹಾಗಾದರೆ ಈ ಒಟ್ಟುಗೂಡಿಸುವಿಕೆಯ ಕೆಲಸ ಎಂದರೇನು? ಇನ್ನು ಭೂಮಿಯಲ್ಲಿರುವ ಅಭಿಷಿಕ್ತರು ತಮ್ಮ ಬಹುಮಾನ ಪಡೆಯುತ್ತಾ ಸ್ವರ್ಗಕ್ಕೆ ಹೋಗುವ ಸಮಯಕ್ಕೆ ಸೂಚಿಸುತ್ತದೆ. (1 ಥೆಸ. 4:15-17; ಪ್ರಕ. 14:1) ಈ ಘಟನೆಯು ಮಾಗೋಗಿನ ಗೋಗನು ತನ್ನ ಆಕ್ರಮಣ ಶುರುಮಾಡಿದ ನಂತರ ಯಾವುದೋ ಒಂದು ಹಂತದಲ್ಲಿ ನಡೆಯಲಿದೆ. (ಯೆಹೆ. 38:11) ಆಗ ಯೇಸು ಹೇಳಿದ ಹಾಗೆ “ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಷ್ಟು ಪ್ರಕಾಶಮಾನವಾಗಿ ಹೊಳೆಯುವರು.”—ಮತ್ತಾ. 13:43.b (ಪಾದಟಿಪ್ಪಣಿ ನೋಡಿ.)
15 ಯೇಸು ಬಂದು ಕ್ರೈಸ್ತರನ್ನು ದೇಹ ಸಮೇತ ಸ್ವರ್ಗಕ್ಕೆ ಕರಕೊಂಡು ಹೋಗುವನೆಂದು ಅನೇಕ ಚರ್ಚುಗಳ ಜನರು ನಂಬುತ್ತಾರೆ. ಭೂಮಿಯನ್ನು ಆಳಲು ಯೇಸು ಹಿಂದಿರುಗಿ ಬರುವುದು ಸಹ ಕಣ್ಣಿಗೆ ಕಾಣಿಸುತ್ತದೆಂದು ನೆನಸುತ್ತಾರೆ. ಆದರೆ “ಮನುಷ್ಯಕುಮಾರನ ಸೂಚನೆಯು ಆಕಾಶದಲ್ಲಿ ಕಾಣಿಸಿಕೊಳ್ಳುವುದು” ಮತ್ತು ಯೇಸು “ಆಕಾಶದ ಮೇಘಗಳ ಮೇಲೆ” ಬರುವನೆಂದು ಬೈಬಲ್ ಹೇಳುವಾಗ ಯೇಸು ಹಿಂದಿರುಗುವುದು ಕಣ್ಣಿಗೆ ಕಾಣಿಸುವುದಿಲ್ಲವೆಂದು ಅದು ಸ್ಪಷ್ಟವಾಗಿ ತೋರಿಸುತ್ತದೆ. (ಮತ್ತಾ. 24:30) “ಮಾಂಸವೂ ರಕ್ತವೂ ದೇವರ ರಾಜ್ಯಕ್ಕೆ ಬಾಧ್ಯವಾಗಲಾರದು” ಎಂದೂ ಬೈಬಲ್ ಹೇಳುತ್ತದೆ. ಹಾಗಾಗಿ ಸ್ವರ್ಗಕ್ಕೆ ಎತ್ತಲ್ಪಟ್ಟವರೆಲ್ಲರು ‘ಕೊನೆಯ ತುತೂರಿಯು ಊದಲ್ಪಡುವಾಗ ಒಂದೇ ಕ್ಷಣದಲ್ಲಿ, ಕಣ್ಣುರೆಪ್ಪೆ ಬಡಿಯುವಷ್ಟರೊಳಗೆ’ ಮೊದಲು ‘ಮಾರ್ಪಾಡಾಗಬೇಕು.’c (ಪಾದಟಿಪ್ಪಣಿ ನೋಡಿ.) (1 ಕೊರಿಂಥ 15:50-53 ಓದಿ.) ಭೂಮಿಯಲ್ಲಿರುವ ನಂಬಿಗಸ್ತ ಅಭಿಷಿಕ್ತರೆಲ್ಲರೂ ಒಮ್ಮೆಲೆ ಕ್ಷಣಮಾತ್ರದಲ್ಲಿ ಸ್ವರ್ಗಕ್ಕೆ ಒಟ್ಟುಗೂಡಿಸಲ್ಪಡುವರು.
16, 17. ಕುರಿಮರಿಯ ವಿವಾಹದ ಮುಂಚೆ ಏನಾಗಬೇಕು?
16 ಎಲ್ಲಾ 1,44,000 ಮಂದಿ ಅಭಿಷಿಕ್ತರು ಸ್ವರ್ಗಕ್ಕೆ ಹೋದ ಮೇಲೆ ಕುರಿಮರಿಯ ವಿವಾಹದ ಅಂತಿಮ ತಯಾರಿ ಶುರುವಾಗುತ್ತದೆ. (ಪ್ರಕ. 19:9) ಆದರೆ ಆ ರೋಮಾಂಚಕಾರಿ ಘಟನೆ ನಡೆಯುವ ಮುಂಚೆ ಏನೋ ಸಂಭವಿಸುತ್ತದೆ. ಉಳಿದ ಅಭಿಷಿಕ್ತರು ಭೂಮಿಯಲ್ಲಿರುವಾಗಲೇ ಮಾಗೋಗಿನ ಗೋಗನು ದೇವರ ಜನರ ಮೇಲೆ ಆಕ್ರಮಣ ಮಾಡುತ್ತಾನೆ ಎಂದು ನೆನಪಿಡಿ. (ಯೆಹೆ. 38:16) ಇದಕ್ಕೆ ದೇವರ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ? ಅವರು ಈ ನಿರ್ದೇಶನಗಳನ್ನು ಪಾಲಿಸುತ್ತಾರೆ: “ಈ ಸಾರಿ ನೀವು ಯುದ್ಧಮಾಡುವದು ಅವಶ್ಯವಿಲ್ಲ. . . . ಸುಮ್ಮನೆ ನಿಂತುಕೊಂಡು ಯೆಹೋವನು ನಿಮಗೋಸ್ಕರ ನಡಿಸುವ ರಕ್ಷಣಾಕಾರ್ಯವನ್ನು ನೋಡಿರಿ; ಹೆದರಬೇಡಿರಿ, ಕಳವಳಗೊಳ್ಳಬೇಡಿರಿ.” (2 ಪೂರ್ವ. 20:17) ಗೋಗನ ಆಕ್ರಮಣ ಶುರುವಾದ ಸ್ವಲ್ಪ ಸಮಯದಲ್ಲಿ ಭೂಮಿಯಲ್ಲಿರುವ ಉಳಿದ ಅಭಿಷಿಕ್ತರನ್ನು ಸ್ವರ್ಗಕ್ಕೆ ಕೊಂಡೊಯ್ಯಲಾಗುವುದು. ಗೋಗನ ಆಕ್ರಮಣಕ್ಕೆ ಸ್ವರ್ಗದಲ್ಲಾಗುವ ಪ್ರತಿಕ್ರಿಯೆ ಏನೆಂದು ಪ್ರಕಟನೆ 17:14 ತಿಳಿಸುತ್ತದೆ. ದೇವರ ಜನರ ಶತ್ರುಗಳು “ಕುರಿಮರಿಯೊಂದಿಗೆ ಯುದ್ಧಮಾಡುವರು, ಆದರೆ ಅವನು ಕರ್ತರ ಕರ್ತನೂ ರಾಜರ ರಾಜನೂ ಆಗಿರುವುದರಿಂದ ಕುರಿಮರಿಯು ಅವರನ್ನು ಜಯಿಸುವನು. ಮಾತ್ರವಲ್ಲದೆ, ಕರೆಯಲ್ಪಟ್ಟವರೂ ಆಯ್ದುಕೊಳ್ಳಲ್ಪಟ್ಟವರೂ ಅವನೊಂದಿಗೆ ನಂಬಿಗಸ್ತರಾಗಿರುವವರೂ ಜಯಿಸುವರು.” ಹೀಗೆ ಯೇಸು ಸ್ವರ್ಗದಲ್ಲಿರುವ ತನ್ನ 1,44,000 ಮಂದಿ ಅಭಿಷಿಕ್ತ ರಾಜರೊಟ್ಟಿಗೆ ಭೂಮಿಯಲ್ಲಿರುವ ದೇವಜನರನ್ನು ಕಾಪಾಡುವನು.
17 ಇದು ಅರ್ಮಗೆದೋನ್ ಯುದ್ಧಕ್ಕೆ ನಡೆಸುತ್ತದೆ. ಯೆಹೋವನ ಪವಿತ್ರ ನಾಮಕ್ಕೆ ಇದರಿಂದ ಮಹಿಮೆ ಬರುತ್ತದೆ. (ಪ್ರಕ. 16:16) ಆಡುಗಳು ಅಥವಾ ಅಪನಂಬಿಗಸ್ತರು ಎಂದು ತೀರ್ಪು ಹೊಂದುವವರು ನಾಶವಾಗುತ್ತಾರೆ. ಇನ್ಮುಂದೆ ಭೂಮಿಯಲ್ಲಿ ದುಷ್ಟತನವಿರುವುದಿಲ್ಲ. “ಮಹಾ ಸಮೂಹ”ವು ಅರ್ಮಗೆದೋನ್ನನ್ನು ಪಾರಾಗುತ್ತದೆ. ನಂತರ ಕುರಿಮರಿಯ ವಿವಾಹ ನಡೆಯಲಿದೆ. ಇದೇ ಪ್ರಕಟನೆ ಪುಸ್ತಕದಲ್ಲಿನ ರೋಮಾಂಚಕ ಸಮಾಪ್ತಿ! (ಪ್ರಕ. 21:1-4)d (ಪಾದಟಿಪ್ಪಣಿ ನೋಡಿ.) ಭೂಮಿಯಲ್ಲಿ ಪಾರಾಗಿ ಉಳಿಯುವವರೆಲ್ಲರು ದೇವರ ಅನುಗ್ರಹವನ್ನು ಆನಂದಿಸುತ್ತಾರೆ ಹಾಗೂ ಆತನ ಅಪಾರ ಪ್ರೀತಿ ಮತ್ತು ಧಾರಾಳತನವನ್ನು ಅನುಭವಿಸುತ್ತಾರೆ. ನಾವು ಆ ಸಮಯಕ್ಕಾಗಿ ಕಾತುರದಿಂದ ಕಾಯುತ್ತಿದ್ದೇವೆ. ಆ ಮದುವೆ ಔತಣ ಎಷ್ಟು ಅದ್ಧೂರಿ ಆಗಿರಲಿದೆ ಅಲ್ಲವೇ!—2 ಪೇತ್ರ 3:13 ಓದಿ.
18. ಬೇಗನೆ ರೋಮಾಂಚಕಾರಿ ಘಟನೆಗಳು ನಡೆಯಲಿರುವುದರಿಂದ ನಮ್ಮ ದೃಢತೀರ್ಮಾನ ಏನಾಗಿರಬೇಕು?
18 ಈ ಎಲ್ಲಾ ರೋಮಾಂಚಕಾರಿ ಘಟನೆಗಳು ಬೇಗನೆ ನಡೆಯಲಿರುವುದರಿಂದ ನಮ್ಮಲ್ಲಿ ಪ್ರತಿಯೊಬ್ಬರು ಈಗ ಏನು ಮಾಡಬೇಕು? ಅಪೊಸ್ತಲ ಪೇತ್ರನು ಹೀಗೆ ಬರೆಯುವಂತೆ ಯೆಹೋವನು ಪ್ರೇರಿಸಿದನು: “ಇವುಗಳೆಲ್ಲವೂ ಹೀಗೆ ಲಯವಾಗಿ ಹೋಗುವುದರಿಂದ ನೀವು ಯಾವ ರೀತಿಯ ವ್ಯಕ್ತಿಗಳಾಗಿರಬೇಕು ಎಂಬುದನ್ನು ಆಲೋಚಿಸಿರಿ. ನೀವು ಪವಿತ್ರ ನಡತೆಯುಳ್ಳವರೂ ದೇವಭಕ್ತಿಯ ಕ್ರಿಯೆಗಳುಳ್ಳವರೂ ಆಗಿರಬೇಕು, ಏಕೆಂದರೆ ನೀವು ಯೆಹೋವನ ದಿನದ ಸಾನ್ನಿಧ್ಯವನ್ನು ಎದುರುನೋಡುತ್ತಾ ಮನಸ್ಸಿನಲ್ಲಿ ನಿಕಟವಾಗಿ ಇಡುತ್ತಾ ಇದ್ದೀರಲ್ಲಾ. . . . ಆದುದರಿಂದ ಪ್ರಿಯರೇ, ನೀವು ಇವುಗಳನ್ನು ಎದುರುನೋಡುತ್ತಿರುವುದರಿಂದ ಕೊನೆಗೆ ಆತನ ದೃಷ್ಟಿಯಲ್ಲಿ ಕಳಂಕವಿಲ್ಲದವರು, ನಿರ್ದೋಷಿಗಳು ಮತ್ತು ಶಾಂತಿಯಿಂದಿರುವವರು ಆಗಿ ಕಂಡುಬರಲು ನಿಮ್ಮ ಕೈಲಾದದ್ದೆಲ್ಲವನ್ನು ಮಾಡಿರಿ.” (2 ಪೇತ್ರ 3:11, 12, 14) ಸುಳ್ಳು ಧರ್ಮಗಳ ಜೊತೆ ಯಾವುದೇ ಸಂಬಂಧವಿಡದೆ ನಮ್ಮ ಆರಾಧನೆಯನ್ನು ಶುದ್ಧವಾಗಿಡಲು ಮತ್ತು ಶಾಂತಿಯ ಅರಸನಾದ ಯೇಸುವನ್ನು ಬೆಂಬಲಿಸಲು ಮಾಡಿರುವ ದೃಢತೀರ್ಮಾನವನ್ನು ಮುಂದುವರಿಸೋಣ.
c ಆ ಸಮಯದಲ್ಲಿ ಜೀವಂತವಾಗಿರುವ ಅಭಿಷಿಕ್ತರ ಶರೀರಗಳನ್ನು ಸ್ವರ್ಗಕ್ಕೆ ಕೊಂಡೊಯ್ಯಲಾಗುವುದಿಲ್ಲ. (1 ಕೊರಿಂ. 15:48, 49) ಯೇಸುವಿನ ಮಾನವ ಶರೀರ ಇಲ್ಲವಾದ ರೀತಿಯಲ್ಲೇ ಇವರ ಶರೀರಗಳು ಸಹ ಬಹುಶಃ ಇಲ್ಲವಾಗುವವು.
d ಘಟನೆಗಳ ಕ್ರಮದ ಬಗ್ಗೆ 45ನೇ ಕೀರ್ತನೆ ಸಹ ಕೆಲವು ವಿವರಗಳನ್ನು ಕೊಡುತ್ತದೆ. ಮೊದಲು ರಾಜ ಯುದ್ಧ ಮಾಡುತ್ತಾನೆ, ನಂತರ ಮದುವೆ ನಡೆಯುತ್ತದೆ.