ವಾಚಕರಿಂದ ಪ್ರಶ್ನೆಗಳು
ನವೆಂಬರ್ 1, 1995ರ “ಕಾವಲಿನಬುರುಜು” ಪತ್ರಿಕೆಯು, ಮತ್ತಾಯ 24:34ರಲ್ಲಿ ನಾವು ಓದುವಂತೆ, ಯೇಸು “ಈ ಸಂತತಿ”ಯ ಕುರಿತು ಹೇಳಿದ ವಿಷಯದ ಮೇಲೆ ಕೇಂದ್ರೀಕರಿಸಿತು. ದೇವರ ರಾಜ್ಯವು 1914ರಲ್ಲಿ ಸ್ವರ್ಗದಲ್ಲಿ ಸ್ಥಾಪಿಸಲ್ಪಟ್ಟಿತ್ತು ಎಂಬದರ ಕುರಿತು ಸ್ವಲ್ಪ ಅನಿಶ್ಚಿತತೆ ಇದೆಯೆಂಬುದು ಇದರ ಅರ್ಥವೊ?
ಕಾವಲಿನಬುರುಜು ಪತ್ರಿಕೆಯಲ್ಲಿನ ಆ ಚರ್ಚೆಯು, 1914ರ ಕುರಿತ ನಮ್ಮ ಮೂಲಭೂತ ಬೋಧನೆಯಲ್ಲಿ ಯಾವ ಬದಲಾವಣೆಯನ್ನೂ ಮಾಡಲಿಲ್ಲ. ರಾಜ್ಯಾಧಿಕಾರದಲ್ಲಿ ತನ್ನ ಸಾನ್ನಿಧ್ಯವನ್ನು ಗುರುತಿಸುವ ಸೂಚನೆಯನ್ನು ಯೇಸು ನೀಡಿದನು. ಈ ಸೂಚನೆಯು 1914ರಂದಿನಿಂದ ನೆರೆವೇರಿಕೆಯ ಪಥದಲ್ಲಿದೆಯೆಂಬುದಕ್ಕೆ ನಮಗೆ ಹೇರಳವಾದ ಪುರಾವೆಯಿದೆ. ಬರಗಳು, ಜಾಡ್ಯಗಳು, ಭೂಕಂಪಗಳು ಮತ್ತು ಇತರ ಪುರಾವೆಗಳ ಕುರಿತಾದ ವಾಸ್ತವಾಂಶಗಳು, ಯೇಸು 1914ರಂದಿನಿಂದ ದೇವರ ರಾಜ್ಯದ ರಾಜನಾಗಿ ಸಕ್ರಿಯನಾಗಿದ್ದಾನೆಂಬುದನ್ನು ದೃಢೀಕರಿಸುತ್ತವೆ. ಆ ಸಮಯದಂದಿನಿಂದ, ನಾವು ವಿಷಯಗಳ ವ್ಯವಸ್ಥೆಯ ಸಮಾಪ್ತಿಯಲ್ಲಿದ್ದೇವೆಂಬುದನ್ನು ಇದು ಸೂಚಿಸುತ್ತದೆ.
ಹಾಗಾದರೆ ಕಾವಲಿನಬುರುಜು ಪತ್ರಿಕೆಯು ಏನನ್ನು ಸ್ಪಷ್ಟಪಡಿಸುತ್ತಾ ಇತ್ತು? ಒಳ್ಳೇದು, ಮತ್ತಾಯ 24:34ರಲ್ಲಿರುವ “ಸಂತತಿ” ಎಂಬ ಪದವನ್ನು ಯೇಸು ಯಾವ ಅರ್ಥದಲ್ಲಿ ಬಳಸಿದನೊ ಅದು ತಾನೇ ಕೀಲಿ ಕೈಯಾಗಿದೆ. ಆ ವಚನವು ಓದುವುದು: “ಇದೆಲ್ಲಾ ಆಗುವ ತನಕ ಈ ಸಂತತಿಯು ಅಳಿದುಹೋಗುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.” “ಸಂತತಿ” ಎಂಬ ಪದದಿಂದ, ಯೇಸು ತನ್ನ ದಿನದಲ್ಲಿ ಮತ್ತು ನಮ್ಮ ದಿನದಲ್ಲಿ ಏನನ್ನು ಅರ್ಥೈಸಿದನು?
ಯೇಸು “ಸಂತತಿ” ಎಂಬ ಪದವನ್ನು, ಕೇವಲ ಯೆಹೂದಿ ಮುಖಂಡರಂತಹ ಇಲ್ಲವೆ ಕೇವಲ ತನ್ನ ನಿಷ್ಠಾವಂತ ಶಿಷ್ಯರಂತಹ ಯಾವುದೊ ಚಿಕ್ಕದಾದ ಅಥವಾ ನಿರ್ದಿಷ್ಟವಾದ ಗುಂಪಿನ ಸಂಬಂಧದಲ್ಲಿ ಬಳಸಲಿಲ್ಲ ಎಂಬುದನ್ನು ಅನೇಕ ವಚನಗಳು ದೃಢಪಡಿಸುತ್ತವೆ. ಬದಲಿಗೆ, ತನ್ನನ್ನು ತಿರಸ್ಕರಿಸಿದ ಯೆಹೂದಿ ಜನಸಮುದಾಯಗಳನ್ನು ಖಂಡಿಸುವುದರಲ್ಲಿ ಅವನು “ಸಂತತಿ” ಎಂಬ ಶಬ್ದವನ್ನು ಬಳಸಿದನು. ಆದರೂ ಸಂತೋಷಕರವಾಗಿ, ಅಪೊಸ್ತಲ ಪೇತ್ರನು ಪಂಚಾಶತ್ತಮದಂದು ಏನನ್ನು ಮಾಡುವಂತೆ ಉತ್ತೇಜಿಸಿದನೊ ಅದನ್ನು ಜನರು ಮಾಡಸಾಧ್ಯವಿತ್ತು, ಅದೇನಂದರೆ, ಪಶ್ಚಾತ್ತಾಪಪಟ್ಟು “ವಕ್ರಬುದ್ಧಿಯುಳ್ಳ ಈ ಸಂತತಿಯವರಿಂದ ತಪ್ಪಿಸಿ”ಕೊಳ್ಳುವುದೇ.—ಅ. ಕೃತ್ಯಗಳು 2:40.
ಆ ಹೇಳಿಕೆಯಲ್ಲಿ, ಪೇತ್ರನು ಸ್ಪಷ್ಟವಾಗಿ ಯಾವುದೇ ನಿಶ್ಚಿತ ವಯೋವರ್ಗದ ಜನರ ಅಥವಾ ಕಾಲ ವ್ಯಾಪ್ತಿಯ ಸಂಬಂಧದಲ್ಲಿ ಖಚಿತವಾಗಿ ಹೇಳುತ್ತಿರಲಿಲ್ಲ, ಇಲ್ಲವೆ ಅವನು ಆ “ಸಂತತಿ”ಯನ್ನು ಯಾವುದೇ ನಿರ್ದಿಷ್ಟವಾದ ತಾರೀಖಿಗೆ ಜೋಡಿಸುತ್ತಿರಲಿಲ್ಲ. ಯೇಸು ಹುಟ್ಟಿದ ವರ್ಷದಲ್ಲಿಯೇ ಜನಿಸಿದ ಸಂತತಿಯಿಂದ, ಅಥವಾ ಸಾ.ಶ. 29ರಲ್ಲಿ ಹುಟ್ಟಿದ ಸಂತತಿಯಿಂದಲೇ ಜನರು ತಪ್ಪಿಸಿಕೊಳ್ಳಬೇಕೆಂದು ಅವನು ಹೇಳಲಿಲ್ಲ. ಪೇತ್ರನು ಆ ಕಾಲಾವಧಿಯ—ಕೆಲವರು ಪ್ರಾಯಶಃ ತುಸು ಎಳೆಯರೂ, ಇತರರು ಪ್ರಾಯಸ್ಥರೂ ಆಗಿದ್ದ—ಅವಿಶ್ವಾಸಿ ಯೆಹೂದ್ಯರ ಕುರಿತು ಮಾತಾಡುತ್ತಿದ್ದನು. ಇವರು ಯೇಸುವಿನ ಬೋಧನೆಗೆ ಒಡ್ಡಲ್ಪಟ್ಟಿದ್ದರು, ಅವನ ಅದ್ಭುತಕೃತ್ಯಗಳನ್ನು ನೋಡಿದ್ದರು ಅಥವಾ ಅವುಗಳ ಕುರಿತು ಕೇಳಿದ್ದರು, ಆದರೂ ಅವನನ್ನು ಮೆಸ್ಸೀಯನಾಗಿ ಅಂಗೀಕರಿಸದೆ ಇದ್ದವರಾಗಿದ್ದರು.
ಪೇತ್ರನು ಮತ್ತು ಇತರ ಮೂವರು ಅಪೊಸ್ತಲರು ಎಣ್ಣೆ ಮರಗಳ ಗುಡ್ಡದ ಮೇಲೆ ಯೇಸುವಿನೊಂದಿಗೆ ಇದ್ದಾಗ, ಯೇಸು ಬಳಸಿದ “ಸಂತತಿ” ಎಂಬ ಶಬ್ದವನ್ನು ಪೇತ್ರನು ಅರ್ಥಮಾಡಿಕೊಂಡದ್ದು ಆ ರೀತಿಯಲ್ಲೇ ಎಂಬುದು ಸ್ಫುಟ. ಯೇಸುವಿನ ಪ್ರವಾದನಾತ್ಮಕ ಹೇಳಿಕೆಗನುಸಾರ, ಆ ಕಾಲಾವಧಿಯ ಯೆಹೂದ್ಯರು—ಮೂಲತಃ ಯೇಸುವಿನ ಸಮಕಾಲೀನರು—ಯೆಹೂದಿ ವ್ಯವಸ್ಥೆಯ ಅಂತ್ಯವು ಸಮೀಪವಿತ್ತೆಂದು ತೋರಿಸುವ ಯುದ್ಧಗಳು, ಭೂಕಂಪಗಳು, ಬರಗಳು, ಮತ್ತು ಇತರ ಪುರಾವೆಗಳನ್ನು ಅನುಭವಿಸಲಿಕ್ಕಿದ್ದರು ಅಥವಾ ಅವುಗಳ ಕುರಿತಾಗಿ ಕೇಳಲಿದ್ದರು. ವಾಸ್ತವದಲ್ಲಿ, ಸಾ.ಶ. 70ರಲ್ಲಿ ಅಂತ್ಯವು ಬರುವುದಕ್ಕೆ ಮುಂಚೆ ಆ ಸಂತತಿಯು ಅಳಿದುಹೋಗಲಿಲ್ಲ.—ಮತ್ತಾಯ 24:3-14, 34.
ಯೇಸುವಿನ ಮಾತುಗಳನ್ನು ನಾವು ಯಾವಾಗಲೂ ಆ ಅರ್ಥದಲ್ಲಿ ತೆಗೆದುಕೊಂಡಿರಲಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಅಂತ್ಯವು ಯಾವಾಗ ಬರುವುದೆಂಬುದರ ತಾರೀಖಿನ ಕುರಿತು ನಿಶ್ಚಿತವಾಗಿರಲು ಬಯಸುವ ಪ್ರವೃತ್ತಿ ಅಪರಿಪೂರ್ಣ ಮಾನವರಿಗಿದೆ. ಅಪೊಸ್ತಲರು ಸಹ ಹೆಚ್ಚು ನಿಶ್ಚಿತ ಹೇಳಿಕೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಿದರೆಂಬುದನ್ನು ಜ್ಞಾಪಿಸಿಕೊಳ್ಳಿರಿ. ಅವರು ಕೇಳಿದ್ದು: “ಸ್ವಾಮೀ, ನೀನು ಇದೇ ಕಾಲದಲ್ಲಿ ಇಸ್ರಾಯೇಲ್ ಜನರಿಗೆ ರಾಜ್ಯವನ್ನು ತಿರಿಗಿ ಸ್ಥಾಪಿಸಿಕೊಡುವಿಯೋ?” (ಓರೆಅಕ್ಷರಗಳು ನಮ್ಮವು.)—ಅ. ಕೃತ್ಯಗಳು 1:6.
ತದ್ರೀತಿಯ ಪ್ರಾಮಾಣಿಕ ಹೇತುಗಳಿಂದ, ಆಧುನಿಕ ಸಮಯಗಳಲ್ಲಿನ ದೇವರ ಸೇವಕರು, “ಸಂತತಿ”ಯ ಕುರಿತು ಯೇಸು ಏನನ್ನು ಹೇಳಿದನೋ ಅದರಿಂದ, 1914ರಿಂದ ಲೆಕ್ಕಿಸಲ್ಪಟ್ಟ ಸ್ಫುಟವಾದ ಕಾಲವನ್ನು ಪತ್ತೆಮಾಡಲು ಪ್ರಯತ್ನಿಸಿದ್ದಾರೆ. ಉದಾಹರಣೆಗೆ, ಒಂದು ತರ್ಕಸರಣಿಯು ಹೀಗಿತ್ತು: ಪ್ರಥಮ ಜಾಗತಿಕ ಯುದ್ಧ ಮತ್ತು ಇತರ ವಿಕಸನಗಳ ಅರ್ಥವನ್ನು ಗ್ರಹಿಸಿಕೊಳ್ಳಲು ಸಾಕಷ್ಟು ದೊಡ್ಡವರಾದ ಜನರಿಂದ ರಚಿತವಾಗಿರುವ ಒಂದು ಸಂತತಿಯು, 70 ಅಥವಾ 80 ವರ್ಷಗಳಷ್ಟು ದೀರ್ಘವಾಗಿರಸಾಧ್ಯವಿದೆ; ಈ ರೀತಿಯಲ್ಲಿ, ಅಂತ್ಯವು ಹೆಚ್ಚುಕಡಿಮೆ ಎಷ್ಟು ಹತ್ತಿರವಿದೆ ಎಂಬುದನ್ನು ನಾವು ಲೆಕ್ಕಹಾಕಬಲ್ಲೆವು.
ಅಂತಹ ತರ್ಕವು ಎಷ್ಟೇ ಸದ್ಭಾವನೆಯದ್ದಾಗಿರಲಿ, ಅದು ಯೇಸುವು ಮುಂದುವರಿಯುತ್ತಾ ಕೊಟ್ಟ ಸಲಹೆಯೊಂದಿಗೆ ಹೊಂದಿಕೆಯಲ್ಲಿತ್ತೊ? ಯೇಸು ಹೇಳಿದ್ದು: “ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ ನನ್ನ ತಂದೆಯೊಬ್ಬನಿಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ತಿಳಿಯದು, ಮಗನಿಗೂ ತಿಳಿಯದು. . . . ಹೀಗಿರಲಾಗಿ ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ.”—ಮತ್ತಾಯ 24:36-42.
ಹೀಗೆ, “ಈ ಸಂತತಿ”ಯ ಕುರಿತು ಕಾವಲಿನಬುರುಜು ಪತ್ರಿಕೆಯಲ್ಲಿನ ಇತ್ತೀಚಿನ ಮಾಹಿತಿಯು, 1914ರಲ್ಲಿ ಸಂಭವಿಸಿದ ವಿಷಯದ ಕುರಿತಾದ ನಮ್ಮ ತಿಳಿವಳಿಕೆಯನ್ನು ಬದಲಾಯಿಸಲಿಲ್ಲ. ಆದರೆ ಅದು ನಮಗೆ, “ಸಂತತಿ” ಎಂಬ ಶಬ್ದದ ಯೇಸುವಿನ ಬಳಕೆಯ ಕುರಿತಾಗಿ ಹೆಚ್ಚು ಸ್ಪಷ್ಟವಾದ ತಿಳಿವಳಿಕೆಯನ್ನು ಕೊಟ್ಟಿತು ನಿಶ್ಚಯ. ಅವನು ಆ ಶಬ್ದವನ್ನು ಬಳಸಿದ್ದು—1914ರಿಂದ ಗುಣಿಸುವುದನ್ನು ಆರಂಭಿಸಿ—ನಾವು ಅಂತ್ಯಕ್ಕೆ ಎಷ್ಟು ಹತ್ತಿರವಾಗಿದ್ದೇವೆಂಬುದನ್ನು ಲೆಕ್ಕಿಸುವುದಕ್ಕೆ ಆಧಾರವಾಗಿರಲಿಲ್ಲವೆಂಬುದನ್ನು ಕಾಣಲು ಇದು ನಮಗೆ ಸಹಾಯ ಮಾಡಿತು.