ದಿವ್ಯ ಭಕ್ತಿಯ ಜನರಿಗೆ ವಿಮೋಚನೆ ಸಮೀಪ !
“ದಿವ್ಯ ಭಕ್ತಿಯ ಜನರನ್ನು ಪರೀಕ್ಷೆಯಿಂದ ವಿಮೋಚಿಸುವ ವಿಧವನ್ನು, ಆದರೆ ಅನೀತಿಯ ಜನರನ್ನು ನಾಶಪಡಿಸಲಿಕ್ಕಾಗಿ ನ್ಯಾಯ ತೀರ್ಪಿನ ದಿನಕ್ಕಾಗಿ ಕಾದಿರಿಸಲು ಯೆಹೋವನು ಬಲ್ಲನು.”—2 ಪೇತ್ರ 2:9, NW.
1. (ಎ) ನಮ್ಮ ದಿನಗಳಲ್ಲಿ ಯಾವ ಸಂಕಟದ ಪರಿಸ್ಥಿತಿಗಳು ಮಾನವ ಸಂತತಿಯನ್ನು ಎದುರಿಸಿವೆ? (ಬಿ) ಈ ದೃಷ್ಟಿಯಲ್ಲಿ ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸಲಿದ್ದೇವೆ?
ಸರ್ವ ಮಾನವ ಸಂತತಿಗೆ ಜೀವನ ಸಮಸ್ಯೆಗಳು ವೃದ್ಧಿಯಾಗುತ್ತಾ ಇವೆ. ಒಬ್ಬನು ಪ್ರಾಪಂಚಿಕ ವಸ್ತುಗಳು ಸಮೃದ್ಧಿಯಾಗಿರುವ ಸ್ಥಳದಲ್ಲಿ ಜೀವಿಸಲಿ ಅತ್ಯಂತ ಕೊರತೆಯಿರುವ ಸ್ಥಳದಲ್ಲಿ ಜೀವಿಸಲಿ, ಇದು ಸತ್ಯ. ಅಭದ್ರತೆ ಸರ್ವ ವ್ಯಾಪಿಯಾಗಿದೆ. ಚಿಂತಿಸಲು ಅಸ್ಥಿರ ಆರ್ಥಿಕ ಪರಿಸ್ಥಿತಿಗಳು ಸಾಲವೂ ಎಂಬಂತೆ, ಗಂಭೀರವಾದ ಪರಿಸರ ಸಮಸ್ಯೆಗಳು ಭೂಗೃಹವನ್ನಾಕ್ರಮಿಸುತ್ತಿದ್ದು ಸರ್ವ ಜೀವಕ್ಕೆ ಅಪಾಯ ತರುತ್ತಿವೆ. ರೋಗವು ಬಹಳವಾಗಿ ಹಬ್ಬಿದೆ. ಸಾಂಕ್ರಾಮಿಕ ರೋಗಗಳು, ಹೃದ್ರೋಗಗಳು ಮತ್ತು ಕ್ಯಾನ್ಸರಿನ ಪೀಡೆ ಬಹು ಆಹುತಿಯನ್ನು ತೆಗೆದು ಕೊಳ್ಳುತ್ತಿದೆ. ನೈತಿಕ ದುರಾಚಾರ, ಮಾನವ ಭಾವಾವೇಶವನ್ನು ಮತ್ತು ಪಾರಿವಾರಿಕ ಜೀವನವನ್ನು ಧ್ವಂಸ ಮಾಡಿದೆ. ಇಷ್ಟೇ ಅಲ್ಲ, ಲೋಕವು ಹಿಂಸೆಯಿಂದ ನೆನೆದು ಹೋಗಿದೆ. ಮಾನವ ಸಮಾಜ ಎದುರಿಸುತ್ತಿರುವ ಈ ವಿಷಯಗಳ ವೀಕ್ಷಣದಲ್ಲಿ ನಾವು ವಾಸ್ತವವಾಗಿ ಹೀಗೆ ಪ್ರಶ್ನಿಸುತ್ತೇವೆ: ಬೇಗನೇ ವಿಮೋಚನೆ ಹೊಂದುತ್ತೇವೆಂದು ನಿರೀಕ್ಷಿಸಲು ಯಾವುದೇ ಸ್ವಸ್ಥ ಆಧಾರವಾದರೂ ಇದೆಯೇ? ಇರುವಲ್ಲಿ, ಅದು ಹೇಗೆ ಬರುವುದು ಮತ್ತು ಯಾರಿಗೆ?—ಹಬಕ್ಕೂಕ 1:2; 2:1-3 ಹೋಲಿಸಿರಿ.
2, 3. (ಎ) 2 ಪೇತ್ರ 2:9 ರಲ್ಲಿ ಹೇಳಿರುವುದು ನಮಗೆ ಇಂದು ಭರವಸದಾಯಕವಾಗಿರುವುದು ಹೇಗೆ? (ಬಿ) ಪ್ರೋತ್ಸಾಹಕ್ಕೆ ಆಧಾರವಾಗಿ, ಯಾವ ನಿರ್ದಿಷ್ಟ ವಿಮೋಚನಾ ಕಾರ್ಯಗಳನ್ನು ಬೈಬಲ್ ಸೂಚಿಸುತ್ತದೆ?
2 ನಮ್ಮ ದಿನಗಳಲ್ಲಿ ಸಂಭವಿಸುವ ವಿಷಯಗಳು ಮಾನವ ಇತಿಹಾಸದಲ್ಲಿ ನಡೆದಿದ್ದ ಇತರ ಅತಿ ಗಮನಾರ್ಹ ಸಮಯಗಳನ್ನು ಜ್ಞಾಪಕಕ್ಕೆ ತರುತ್ತವೆ. ಆ ಸಮಯಗಳಲ್ಲಿ ದೇವರು ನಡೆಸಿದ ವಿಮೋಚನಾ ಕೃತ್ಯಗಳನ್ನು ತಿಳಿಸಿದ ಬಳಿಕ ಅಪೊಸ್ತಲ ಪೇತ್ರನು ಈ ಭರವಸೆ ನೀಡುವ ತೀರ್ಮಾನಕ್ಕೆ ಬರುತ್ತಾನೆ: “ದಿವ್ಯ ಭಕ್ತಿಯ ಜನರನ್ನು ಪರೀಕ್ಷೆಯಿಂದ ವಿಮೋಚಿಸುವ ವಿಧವನ್ನು ಯೆಹೋವನು ಬಲ್ಲನು.” (2 ಪೇತ್ರ 2:9) 2 ಪೇತ್ರ 2:4-10 (NW) ರಲ್ಲಿ ಈ ಹೇಳಿಕೆಯ ಪೂರ್ವಾಪರ ಸಂದರ್ಭಗಳನ್ನು ಗಮನಿಸಿರಿ:
3 “ದೇವರು ನಿಶ್ಚಯವಾಗಿಯೂ ಪಾಪ ಮಾಡಿದ ದೇವದೂತರನ್ನು ಶಿಕ್ಷಿಸದೆ ಬಿಡಲಿಲ್ಲ. ಆತನು ಅವರನ್ನು ಟಾರ್ಟರಸಿಗೆ ಎಸೆಯುವುದರ ಮೂಲಕ ಕಗ್ಗತ್ತಲೆಯ ಗುಂಡಿಗಳಿಗೆ ಒಪ್ಪಿಸಿ ಅವರನ್ನು ನ್ಯಾಯತೀರ್ಪಿಗೆ ಕಾದಿರಿಸಿದನು. ಮತ್ತು ಆತನು ಪೂರ್ವಕಾಲದ ಜಗತ್ತನ್ನು ಶಿಕ್ಷಿಸದೆ ಬಿಡದಿದ್ದರೂ ನೀತಿಯ ಬೋಧಕನಾದ ನೋಹನನ್ನು ಇತರ ಏಳು ಜನರೊಂದಿಗೆ, ಭಕ್ತಿಹೀನ ಜಗತ್ತಿನ ಜನರ ಮೇಲೆ ಜಲಪ್ರಲಯವನ್ನು ಬರಮಾಡಿದಾಗ ಭದ್ರವಾಗಿರಿಸಿದನು. ಮತ್ತು ಸೊದೋಮ್ ಮತ್ತು ಗಮೋರ ನಗರಗಳನ್ನು ಭಸ್ಮಮಾಡುವದರ ಮೂಲಕ ಆತನು ಅವರಿಗೆ ತೀರ್ಪು ವಿಧಿಸಿ ಭಕ್ತಿ ಹೀನರ ಮೇಲೆ ಏನು ಬರುವುದೋ ಅದಕ್ಕೆ ಮಾದರಿಯನ್ನಿಟ್ಟನು. ಮತ್ತು ಆತನು ಸಡಿಲು ನಡತೆಯಲ್ಲಿ ಲೋಲುಪರಾಗಿದ್ದ ನಿಯಮ ಪ್ರತಿಭಟಿಸುವ ಜನರಿಂದ ಅತಿಯಾಗಿ ವ್ಯಥೆಗೀಡಾಗಿದ್ದ ನೀತಿವಂತನಾದ ಲೋಟನನ್ನು ರಕ್ಷಿಸಿದನು. ಆ ನೀತಿವಂತ ಪುರುಷನೋ ಅವರ ಮಧ್ಯೆ ದಿನೇ ದಿನೇ ವಾಸಿಸುತ್ತಿದ್ದಾಗ ನೋಡಿದ ಮತ್ತು ಕೇಳಿದ ವಿಷಯಗಳಿಂದ ತನ್ನ ನೀತಿಯ ಆತ್ಮವನ್ನು ಅವರ ನಿಯಮರಹಿತ ಕೃತ್ಯಗಳ ಕಾರಣದಿಂದ ಪೀಡಿಸಿ ಕೊಳ್ಳುತ್ತಿದ್ದನು. ದಿವ್ಯ ಭಕ್ತಿಯ ಜನರನ್ನು ಪರೀಕ್ಷೆಯಿಂದ ವಿಮೋಚಿಸುವ ವಿಧವನ್ನು ಆದರೆ, ಅನೀತಿಯ ಜನರನ್ನು ವಿಶೇಷವಾಗಿ, ಶರೀರವನ್ನು ಮಲಿನಗೊಳಿಸುವ ಅಪೇಕ್ಷೆಯಿಂದ ಅದನ್ನು ಬೆನ್ನಟ್ಟುವವರನ್ನು ಮತ್ತು ಪ್ರಭುತ್ವವನ್ನು ತಿರಸ್ಕಾರದಿಂದ ಕಾಣುವವರನ್ನು ನಾಶ ಪಡಿಸಲಿಕ್ಕಾಗಿ ನ್ಯಾಯತೀರ್ಪಿನ ದಿನಕ್ಕಾಗಿ ಕಾದಿರಿಸಲು ಯೆಹೋವನು ಬಲ್ಲನು.” ಈ ವಚನಗಳು ತೋರಿಸುವಂತೆ ನೋಹನ ಮತ್ತು ಲೋಟನ ದಿನಗಳ ಸಂಭವಗಳು ನಮಗೆ ಅರ್ಥಗರ್ಭಿತವಾಗಿವೆ.
ನೋಹನ ದಿನಗಳಲ್ಲಿದ್ದ ಮನೋಭಾವ
4. ನೋಹನ ದಿನಗಳಲ್ಲಿ ಭೂಮಿ ಹಾಳಾಗಿದೆ ಎಂಬ ದೃಷ್ಟಿಯಲ್ಲಿ ದೇವರು ನೋಡಿದ್ದೇಕೆ? (ಕೀರ್ತನೆ 11:5)
4 ಆದಿಕಾಂಡ 6 ನೇ ಅಧ್ಯಾಯದ ಐತಿಹಾಸಿಕ ವೃತ್ತಾಂತವು ನೋಹನ ದಿನಗಳಲ್ಲಿ ಭೂಮಿ ದೇವರ ದೃಷ್ಟಿಯಲ್ಲಿ ಹಾಳಾಗಿತ್ತು ಎಂದು ಹೇಳುತ್ತದೆ. ಇದೇಕೆ? ಹಿಂಸಾಕೃತ್ಯಗಳ ಕಾರಣವೇ. ಅಲ್ಲೊಂದು ಇಲ್ಲೊಂದು ಪಾಪ ಕೃತ್ಯಗಳು ನಡೆಯುತ್ತವೆ ಎಂದು ಇದರ ಅರ್ಥವಲ್ಲ. ಆದಿಕಾಂಡ 6:1, “ಈ ಭೂಮಿ ಹಿಂಸಾ ಕೃತ್ಯಗಳಿಂದ ತುಂಬಿ ಹೋಗಿತ್ತು” ಎಂದು ವರದಿ ಮಾಡುತ್ತದೆ.
5. (ಎ) ಮಾನವರ ಯಾವ ಮನೋಭಾವ ನೋಹನ ದಿನಗಳ ಬಲಾತ್ಕಾರಕ್ಕೆ ನೆರವಾದವು? (ಬಿ) ಹನೋಕನು ಭಕ್ತಿಹೀನತೆಯ ಕುರಿತು ಯಾವ ಎಚ್ಚರಿಕೆ ನೀಡಿದ್ದನು?
5 ಇದರ ಹಿಂದೆ ಏನಿತ್ತು? 2 ನೇ ಪೇತ್ರದಿಂದ ಉಲ್ಲೀಖಿಸಿದ ಶಾಸ್ತ್ರ ವಚನ ಭಕ್ತಿಹೀನರನ್ನು ಸೂಚಿಸುತ್ತದೆ. ಹೌದು, ಭಕ್ತಿಹೀನತೆಯ ಒಂದು ಮನೋಭಾವ ಮಾನವ ವಿಚಾರಗಳನ್ನು ವ್ಯಾಪಿಸಿತ್ತು. ದೈವಿಕ ನಿಯಮಕ್ಕೆ ಸಾಮಾನ್ಯವಾದ ಅಲಕ್ಷ್ಯಭಾವ ಮಾತ್ರ ಇದರಲ್ಲಿ ಸೇರಿರದೆ ದೇವರ ಕಡೆಗೆ ಪ್ರತಿಭಟನಾ ಮನೋಭಾವ ಕೂಡಿತ್ತು.a ಮತ್ತು ಮನುಷ್ಯರು ದೇವರ ಕಡೆಗೆ ಪ್ರತಿಭಟನೆ ತೋರಿಸುವಾಗ, ಜೊತೆ ಮಾನವರೊಂದಿಗೆ ದಯೆಯಿಂದ ವ್ಯವಹರಿಸುವರೆಂದು ನಾವು ಹೇಗೆ ನಿರೀಕ್ಷಿಸ ಬಹುದು? ನೋಹನು ಹುಟ್ಟುವ ಮೊದಲೇ ಭಕ್ತಿಹೀನತೆ ಎಷ್ಟು ವ್ಯಾಪಕವಾಗಿತ್ತೆಂದರೆ ಹನೋಕನು ಇದರ ಫಲಿತಾಂಶವನ್ನು ಪ್ರವಾದಿಸುವಂತೆ ಯೆಹೋವನು ಪ್ರೇರಿಸಿದ್ದನು. (ಯೂದ 14, 15) ದೇವರ ವಿರುದ್ಧವಾಗಿ ಅವರ ಪ್ರತಿಭಟನೆ ದೈವಿಕ ದಂಡನೆಯ ತೀರ್ಪನ್ನು ತರುವುದು ನಿಶ್ಚಯವಾಗಿತ್ತು.
6, 7. ಜಲಪ್ರಳಯಕ್ಕೆ ಮೊದಲು ಬೆಳೆದಿದ್ದ ದುಷ್ಟ ಪರಿಸ್ಥಿತಿಗಳಲ್ಲಿ ದೇವದೂತರನ್ನೊಳಗೊಂಡಿದ್ದ ಯಾವ ಸಂಗತಿ ಅತಿದೊಡ್ಡ ವಿಷಯವಾಗಿತ್ತು?
6 ಆ ದಿನಗಳ ಹಿಂಸಾಕೃತ್ಯಗಳಿಗೆ ಸಹಾಯ ಮಾಡಿದ ಇನ್ನೊಂದು ಪ್ರಭಾವವಿತ್ತು. ಆದಿಕಾಂಡ 6:1, 2 ಹೀಗೆ ಹೇಳಿ ಅದಕ್ಕೆ ನಮ್ಮ ಗಮನ ಸೆಳೆಯುತ್ತದೆ: “ಭೂಮಿಯ ಮೇಲೆ ಜನರು ಹೆಚ್ಚುತ್ತಾ ಅವರಿಗೆ ಹೆಣ್ಣು ಮಕ್ಕಳು ಹುಟ್ಟಲು ಸತ್ಯದೇವರ ಪುತ್ರರು ಮನುಷ್ಯ ಪುತ್ರಿಯರ ಸೌಂದರ್ಯವನ್ನು ನೋಡಿ ತಮಗೆ ಇಷ್ಟರಾದವರನ್ನು ಹೆಂಡರನ್ನಾಗಿ ಮಾಡಿಕೊಂಡರು.” ಈ ಸತ್ಯ ದೇವರ ಪುತ್ರರಾರು? ಇವರು ಕೇವಲ ಮನುಷ್ಯರಾಗಿರಲಿಲ್ಲ. ಮನುಷ್ಯರು ಶತಮಾನಗಳಿಂದ ಸ್ತ್ರೀಯರ ಸೌಂದರ್ಯ ನೋಡಿ ಅವರನ್ನು ಮದುವೆ ಮಾಡಿ ಕೊಳ್ಳುತ್ತಿದ್ದರು. ಈ ದೇವ ಪುತ್ರರು ದೇಹ ತಾಳಿ ಬಂದ ದೇವ ದೂತರಾಗಿದ್ದರು. ಯೂದ 6 ರಲ್ಲಿ ಅವರನ್ನು, “ತಮ್ಮ ದೊರೆತನವನ್ನು ಕಾಪಾಡದೆ ತಮಗೆ ತಕ್ಕ ವಾಸಸ್ಥಾನವನ್ನು ಬಿಟ್ಟ ದೇವ ದೂತರು” ಎಂದು ವರ್ಣಿಸಲಾಗಿದೆ.—1 ಪೇತ್ರ 3:19, 20 ಹೋಲಿಸಿ.
7 ಪುರುಷ ದೇಹತಾಳಿ ಬಂದ ಈ ಅತಿ ಮಾನುಷ ಜೀವಿಗಳು ಮನುಷ್ಯ ಪುತ್ರಿಯರನ್ನು ಸಂಭೋಗಿಸಿದಾಗ, ಪರಿಣಾಮವೇನಾಯಿತು? “ಆ ಕಾಲದಲ್ಲಿ ಅಂದರೆ ದೇವ ಪುತ್ರರು ಮನುಷ್ಯ ಪುತ್ರಿಯರನ್ನು ಕೂಡಿ ಮಕ್ಕಳನ್ನು ಪಡೆದ ಕಾಲದಲ್ಲಿ ಮಹಾ ಶರೀರಿಗಳು [ನೆಫೀಲಿಮರು NW] ಭೂಮಿಯ ಮೇಲೆ ಇದ್ದರು; ಅನಂತರದಲ್ಲಿಯೂ ಇದ್ದರು. ಪೂರ್ವದಲ್ಲಿ ಹೆಸರುಗೊಂಡ ಪರಾಕ್ರಮಶಾಲಿಗಳು ಇವರೇ.” ಈ ಅಪ್ರಾಕೃತಿಕ ಸಂಯೋಗದಿಂದ ಹುಟ್ಟಿದವರೇ ತಮ್ಮ ಅಧಿಕ ಬಲವನ್ನು ಇತರರನ್ನು ಹಿಂಸಿಸಲು ಉಪಯೋಗಿಸಿದ ಬಲಾಢ್ಯರಾದ ನೆಫೀಲಿಯರು.
8. ಭೂಮಿಯ ಮೇಲಣ ಕೆಟ್ಟ ಪರಿಸ್ಥಿತಿಗಳಿಗೆ ಯೆಹೋವನು ಹೇಗೆ ಪ್ರತಿವರ್ತನೆ ತೋರಿಸಿದನು?
8 ಹಾಗಾದರೆ, ಆಗ ಪರಿಸ್ಥಿತಿ ಎಷ್ಟು ಕೆಟ್ಟು ಹೋಯಿತು? “ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿರುವುದನ್ನೂ ಅವರು ಹೃದಯದಲ್ಲಿ ಯೋಚಿಸುವದೆಲ್ಲವೂ ಯಾವಾಗಲೂ ಬರೀ ಕೆಟ್ಟದ್ದಾಗಿರುವದನ್ನೂ ಯೆಹೋವನು” ನೋಡುವಷ್ಟೂ ಕೆಟ್ಟು ಹೋಯಿತು. ಇದಕ್ಕೆ ದೇವರ ಪ್ರತಿಕ್ರಿಯೆ ಏನಾಗಿತ್ತು? ಯೆಹೋವನು “ತಾನು ಭೂಮಿಯ ಮೇಲೆ ಮನುಷ್ಯರನ್ನು ಉಂಟುಮಾಡಿದ್ದಕ್ಕೆ ಪಶ್ಚಾತ್ತಾಪ” ಪಟ್ಟನು. ಅಂದರೆ, ಮಾನವರನ್ನು ಉಂಟುಮಾಡಿದುದು ತಪ್ಪೆಂದು ದೇವರಿಗೆ ಅನಿಸಿತೆಂದು ಇದರ ಆರ್ಥವಲ್ಲ. ಬದಲಿಗೆ, ತಾನು ಮಾನವರನ್ನು ನಿರ್ಮಿಸಿದ ಮೇಲೆ ಅವರ ನಡತೆ ತಾನು ಅವರನ್ನು ನಾಶ ಮಾಡಬೇಕಾಗುವಷ್ಟೂ ಕೆಟ್ಟದ್ದಾಯಿತಲ್ಲಾ ಎಂಬುದಕ್ಕೆ ಆತನು ವಿಷಾಧಿಸಿದನು.—ಆದಿಕಾಂಡ 6:5-7.
ವಿಮೋಚನೆಗೆ ನಡಿಸಿದ ಮಾರ್ಗ
9. (ಎ) ದೇವರು ನೋಹನೊಂದಿಗೆ ಅನುಗ್ರಹದಿಂದ ವ್ಯವಹರಿಸಿದ್ದೇಕೆ? (ಬಿ) ದೇವರು ನೋಹನಿಗೆ ಯಾವ ಮುನ್ನರಿವು ಕೊಟ್ಟನು?
9 ಆದರೆ ನೋಹನಿಗೆ “ಯೆಹೋವನ ದಯೆವು ದೊರಕಿತು. . . . ನೋಹನು ನೀತವಂತನೂ ತನ್ನ ಕಾಲದವರಲ್ಲಿ ತಪ್ಪಿಲ್ಲದವನೂ ಆಗಿದ್ದನು. ಅವನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದು ಕೊಂಡನು.” (ಆದಿಕಾಂಡ 6:8, 9) ಆದುದರಿಂದ ಯೆಹೋವನು ನೋಹನಿಗೆ ತಾನು ಭೂವ್ಯಾಪಕವಾದ ಜಲಪ್ರಲಯವನ್ನು ಬರಮಾಡುವುದರ ಕುರಿತು ಮುನ್ನೆಚ್ಚರಿಕೆ ಕೊಟ್ಟು ಒಂದು ನಾವೆಯನ್ನು ಕಟ್ಟುವಂತೆ ಆಜ್ಞಾಪಿಸಿದನು. ನೋಹ ಮತ್ತು ಅವನ ಕುಟುಂಬವನ್ನು ಬಿಟ್ಟು, ಉಳಿದ ಎಲ್ಲಾ ಮಾನವರು ಭೂಮಿಯಿಂದ ಅಳಿದು ಹೋಗಲಿದ್ದರು. ಯಾವವುಗಳನ್ನು ನೋಹನು ನಾವೆಯೊಳಗೆ ತೆಗೆದು ಕೊಂಡು ಹೋಗಬೇಕಿತ್ತೋ ಆ ಪ್ರತಿಯೊಂದು ಮೂಲ ಜಾತಿಯ ಪ್ರತಿನಿಧಿ ಪ್ರಾಣಿಗಳನ್ನು ಬಿಟ್ಟು ಉಳಿದ ಪ್ರಾಣಿ ಸೃಷ್ಟಿಯೆಲ್ಲವೂ ನಾಶವಾಗಲಿತ್ತು.—ಆದಿಕಾಂಡ 6:13, 14, 17.
10. (ಎ) ಸಂರಕ್ಷೆಗಾಗಿ ಯಾವ ತಯಾರಿ ಮಾಡಲಿಕ್ಕಿತ್ತು, ಮತ್ತು ಅದೆಷ್ಟು ದೊಡ್ಡ ಕೆಲಸವಾಗಿತ್ತು? (ಬಿ) ನೋಹನು ತನ್ನ ಕೆಲಸವನ್ನು ವಹಿಸಿಕೊಂಡ ರೀತಿಯಲ್ಲಿ ಏನು ಗಮನಾರ್ಹವಾಗಿದೆ?
10 ಈ ಮುನ್ನರಿವು ನೋಹನ ಮೇಲೆ ಭಾರವಾದ ಜವಾಬ್ದಾರಿಕೆಯನ್ನು ಹಾಕಿತು. ಅವನು ನಾವೆಯನ್ನು ಕಟ್ಟಬೇಕಾಗಿತ್ತು. ಇದೊಂದು ಭಾರೀ ಪೆಟ್ಟಿಗೆಯ ರೂಪದಲ್ಲಿ ಇರಬೇಕಿತ್ತು. ಒಟ್ಟು ಗಾತ್ರದಲ್ಲಿ ಅದು 14 ಲಕ್ಷ ಘನ ಅಡಿ ದೊಡ್ಡದಾಗಿ ಇರಬೇಕಿತ್ತು. ಅದರಲ್ಲಿ ನೋಹನು ಅಹಾರವನ್ನು ಸಂಗ್ರಹಿಸಿ ಬಳಿಕ ಪ್ರಾಣಿಗಳು, ಪಕ್ಷಿಗಳು, ಹೀಗೆ “ಜೀವಿಗಳ ಪ್ರತಿ ಜಾತಿಯನ್ನು” ಒಟ್ಟು ಕೂಡಿಸಬೇಕಿತ್ತು. ಈ ಯೋಜನೆಯಲ್ಲಿ ಅನೇಕ ವರ್ಷಗಳ ಕೆಲಸ ಸೇರಿರಲಿಕ್ಕಿತ್ತು. ಇದಕ್ಕೆ ನೋಹನ ಪ್ರತಿವರ್ತನೆಯೇನು? “ದೇವರು ಅಪ್ಪಣೆ ಕೊಟ್ಟ ಪ್ರಕಾರವೇ ನೋಹನು ಮಾಡಿದನು.”—ಆದಿಕಾಂಡ 6:14-16, 19-22; ಇಬ್ರಿಯ 11:7.
11. ತನ್ನ ಕುಟುಂಬದ ವಿಷಯದಲ್ಲಿ ನೋಹನಿಗೆ ಯಾವ ಪ್ರಾಮುಖ್ಯ ಜವಾಬ್ದಾರಿಯಿತ್ತು?
11 ಆ ಕೆಲಸ ಮಾಡುತ್ತಿರುವಾಗ ತನ್ನ ಕುಟುಂಬದ ಆತ್ಮಿಕತೆಯನ್ನು ಬೆಳೆಸುವುದಕ್ಕೂ ನೋಹನು ಸಮಯವನ್ನು ಬದಿಗಿಡಬೇಕಾಗಿತ್ತು. ಅವರ ಸುತ್ತಲಿದ್ದ ಜನರ ಹಿಂಸಾತ್ಮಕ ಮಾರ್ಗ ಮತ್ತು ಪ್ರತಿಭಟನಾ ಮನೋಭಾವವನ್ನು ಅವರು ಅನುಸರಿಸುವ ವಿರುದ್ಧ ಅವರನ್ನು ಕಾಪಾಡುವ ಅವಶ್ಯವಿತ್ತು. ದಿನನಿತ್ಯದ ಜೀವನ ವಿಚಾರಗಳಲ್ಲಿ ಅವರು ತೀರಾ ಮಗ್ನರಾಗಿರದೆ ಇರುವುದು ಪ್ರಾಮುಖ್ಯವಾಗಿತ್ತು. ಮಾಡಲು ಒಂದು ಕೆಲಸವನ್ನು ದೇವರು ಅವರಿಗೆ ಕೊಟ್ಟಿದ್ದನು ಮತ್ತು ಅವರ ಜೀವ ಅದರ ಸುತ್ತಲೂ ಕಟ್ಟಲ್ಪಡುವದು ಅತಿ ಪ್ರಾಮುಖ್ಯವಾಗಿತ್ತು. ನೋಹನ ಕುಟುಂಬ ನೋಹನು ಕೊಟ್ಟ ಮಾಹಿತಿಯನ್ನು ಅಂಗೀಕರಿಸಿ ಅವನ ನಂಬಿಕೆಯಲ್ಲಿ ಭಾಗಿಯಾಗಿತ್ತೆಂದು ನಮಗೆ ಗೊತ್ತು. ಏಕೆಂದರೆ ನೋಹ, ಪತ್ನಿ, ಅವರ ಮೂವರು ಪುತ್ರರು ಮತ್ತು ಪುತ್ರರ ಪತ್ನಿಯಂದಿರು, ಹೀಗೆ ಒಟ್ಟು ಎಂಟು ಮಂದಿಯನ್ನು ಮನ್ನಣೆ ಪಡೆದ ಜನರಾಗಿ ಶಾಸ್ತ್ರವು ತೋರಿಸುತ್ತದೆ.—ಆದಿಕಾಂಡ 6:18; 1 ಪೇತ್ರ 3:20.
12. 2 ಪೇತ್ರ 2:5 ರಲ್ಲಿ ತೋರಿಸಿರುವಂತೆ ನೋಹನು ಯಾವ ಜವಾಬ್ದಾರಿಯನ್ನು ನಂಬಿಕೆಯಿಂದ ನೆರವೇರಿಸಿದನು?
12 ನೋಹನಿಗೆ ಇನ್ನೊಂದು ಜವಾಬ್ದಾರಿ—ಬರಲಿದ್ದ ಪ್ರಳಯ ಮತ್ತು ಏಕೆ ಬರುತ್ತದೆ ಎಂದು ಎಚ್ಚರಿಸುವ ಜವಾಬ್ದಾರಿಯಿತ್ತು. ಅವನು ಈ ಜವಾಬ್ದಾರಿಯನ್ನು ನಿರ್ವಹಿಸಿದನೆಂಬದು ಸ್ಪಷ್ಟ . ಏಕೆಂದರೆ ದೇವರ ವಾಕ್ಯದಲ್ಲಿ ಅವನನ್ನು “ನೀತಿಯ ಬೋಧಕನು” ಎಂದು ಸೂಚಿಸಲಾಗಿದೆ.—2 ಪೇತ್ರ 2:5.
13. ತನ್ನ ದೇವದತ್ತ ಕೆಲಸವನ್ನು ಪಾಲಿಸುತ್ತಿದ್ದಾಗ ನೋಹನಿಗೆ ಯಾವ ಪರಿಸ್ಥಿತಿಗಳು ಎದುರಾದವು?
13 ಆಗ ನೋಹನು ಆ ಕೆಲಸವನ್ನು ನೆರವೇರಿಸಿದ ಪರಿಸ್ಥಿತಿಗಳನ್ನು ತುಸು ನೆನಸಿ ಕೊಳ್ಳಿರಿ. ನಿಮ್ಮನ್ನು ಅವನ ಸ್ಥಾನದಲ್ಲಿ ಇಡಿರಿ. ನೀವು ನೋಹ ಅಥವಾ ಅವನ ಕುಟುಂಬದ ಸದಸ್ಯರಾಗಿದ್ದರೆ, ನೆಫೀಲಿಯರು ಮತ್ತು ಭಕ್ತಿಹೀನ ಜನರ ಹಿಂಸಾತ್ಮಕ ಕೃತ್ಯಗಳಿಂದ ನೀವು ಆವರಿಸಲ್ಪಡುತಿದ್ತಿರ್ದಿ. ದಂಗೆಯೆದ್ದಿದ್ದ ದೇವ ದೂತ ಪ್ರಭಾವವು ನೇರವಾಗಿ ನಿಮ್ಮೆದುರು ನಿಲ್ಲುತ್ತಿತ್ತು. ನೀವು ನಾವೆಯ ಕೆಲಸ ಮಾಡುತ್ತಿರುವಾಗ ಅಪಹಾಸ್ಯಗೊಳಗಾಗುತ್ತಿದ್ದಿರಿ. ಮತ್ತು ಬರಲಿರುವ ಜಲಪ್ರಲಯದ ಕುರಿತು ನೀವು ವರ್ಷಗಟ್ಟಳೆ ಎಚ್ಚರಿಸುತ್ತಿರುವಾಗ ಜನರು ತಮ್ಮ ದಿನನಿತ್ಯದ ಕಾರ್ಯಗಳಲ್ಲಿ ಎಷ್ಟು ಮುಳುಗಿರುತ್ತಾರೆಂದರೆ “ಪ್ರಳಯದ ನೀರು ಬಂದು ಎಲ್ಲರನ್ನು ಬುಡುಕೊಂಡು ಹೋಗುವ ತನಕ” ಅವರು “ಯಾವ ಗಮನವನ್ನೂ ಕೊಡುವದಿಲ್ಲ.”—ಮತ್ತಾಯ 24:39; ಲೂಕ 17:26, 27.
ನೋಹನ ಅನುಭವ ನಿಮಗೆ ಯಾವ ಅರ್ಥದಲ್ಲಿದೆ?
14. ನೋಹನ ಮತ್ತು ಅವನ ಕುಟುಂಬದ ಎದುರಿಗಿದ್ದ ಸ್ಥಿತಿಯನ್ನು ತಿಳಿಯುವದು ನಮಗೆ ಇಂದು ಕಷ್ಟವಲ್ಲವೇಕೆ?
14 ನಮ್ಮ ವಾಚಕರಿಗೆ ಇಂಥ ಸನ್ನಿವೇಶವನ್ನು ಊಹಿಸುವುದು ಏನೂ ಕಷ್ಟವಲ್ಲ. ಏಕೆ? ಏಕೆಂದರೆ ನಮ್ಮ ದಿನಗಳ ಪರಿಸ್ಥಿತಿಗಳು ನೋಹನ ದಿನಗಳಿಗೆ ತೀರಾ ಸದೃಶ್ಯವಾಗಿವೆ. ಹೀಗೆಯೇ ನಿರೀಕ್ಷಿಸತಕ್ಕವೆಂದು ಯೇಸು ಕ್ರಿಸ್ತನು ನುಡಿದನು. ವಿಷಯ ವ್ಯವಸ್ಥೆಯ ಅಂತ್ಯ ಕಾಲದಲ್ಲಿ ತನ್ನ ಸಾನ್ನಿಧ್ಯದ ಕುರಿತಾದ ಮಹಾ ಪ್ರವಾದನೆಯಲ್ಲಿ ಯೇಸು ಮುಂತಿಳಿಸಿದ್ದು: “ನೋಹನ ದಿನಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಪ್ರತ್ಯಕ್ಷತೆಯೂ ಇರುವದು.”—ಮತ್ತಾಯ 24:37.
15, 16. (ಎ) ನೋಹನ ದಿನಗಳಂತೆಯೇ ಭೂಮಿ ಇಂದು ಹಿಂಸೆಯಿಂದ ತುಂಬಿರುವದು ಹೇಗೆ ಸತ್ಯ? (ಬಿ) ಯೆಹೋವನ ಸೇವಕರು ಇಂದು ವಿಶೇಷವಾಗಿ ಯಾವ ಬಲಾತ್ಕಾರಕ್ಕೆ ಒಳಗಾಗಿದ್ದಾರೆ?
15 ಹಾಗಿರುವುದು ನಿಜವೂ? ಇಂದು ಲೋಕವು ಹಿಂಸೆಯಿಂದ ತುಂಬಿದೆಯೋ? ಹೌದು ! ಈ ಶತಮಾನದ ಯುದ್ಧಗಳಲ್ಲಿ 10 ಕೋಟಿಗಿಂತಲೂ ಹೆಚ್ಚು ಜನರು ಸತ್ತಿದ್ದಾರೆ. ನಮ್ಮ ಕೆಲವು ವಾಚಕರಿಗೆ ಇದು ನೇರವಾಗಿ ತಟ್ಟಿದೆ. ಇದಕ್ಕಿಂತಲೂ ಹೆಚ್ಚು ಜನರು ಹಣ ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ದೋಚುವ ಉದ್ದೇಶವಿರುವ ಪಾತಕಿಗಳಿಂದ ಬೆದರಿಸಲ್ಪಟ್ಟಿದ್ದಾರೆ. ಚಿಕ್ಕವರು ಶಾಲೆಯಲ್ಲಿ ಹಿಂಸಾತ್ಮಕ ಕೃತ್ಯಗಳಿಗೆ ಬಲಿಬೀಳುತ್ತಿದ್ದಾರೆ.
16 ಆದರೆ ಯೆಹೋವನ ಸೇವಕರು ಯುದ್ಧದ ಹಾವಳಿ ಮತ್ತು ಪಾತಕ ಕೃತ್ಯಗಳಿಗಿಂತಲೂ ಹೆಚ್ಚಿನದನ್ನು ಅನುಭವಿಸುತ್ತಾರೆ. ಅವರು ಲೋಕದ ಭಾಗವಾಗಿ ಇರದೆ ದಿವ್ಯಭಕ್ತಿಯ ಜನರಾಗಿ ಇರುವುದರಿಂದಲೂ ಅವರ ಮೇಲೆ ಬಲಾತ್ಕಾರ ನಡೆಯುತ್ತದೆ. (2 ತಿಮೊಥಿ 3:10-12) ಕೆಲವು ಸಲ ಈ ಬಲಾತ್ಕಾರ ಕೇವಲ ತಳ್ಳುವಿಕೆ ಅಥವಾ ಅಪ್ಪಳಿಕೆಯ ಮೂಲಕ ತೋರಿಸಲ್ಪಡ ಬಹುದು; ಇನ್ನು ಕೆಲವು ಸಲ ಇದರಲ್ಲಿ ಆಸ್ತಿ ನಾಶ, ಕ್ರೂರವಾದ ಹೊಡೆತ ಮತ್ತು ಕೊಲೆಗಳು ಸಹ ಕೂಡಿರುತ್ತವೆ.—ಮತ್ತಾಯ 24:9.
17. ಭಕ್ತಿಹೀನತೆ ಇಂದು ವ್ಯಾಪಕವೂ? ವಿವರಿಸಿರಿ.
17 ಇಂಥ ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗವಹಿಸುವಾಗ ಭಕ್ತಿಹೀನರು, ಹಲವು ಸಲ, ಲಜ್ಜಾರಹಿತರಾಗಿ ದೇವರಿಗೆ ತಮ್ಮ ತಿರಸ್ಕಾರವನ್ನು ತೋರಿಸಿದ್ದಾರೆ. ಆಫ್ರಿಕಾದ ಒಂದು ಭಾಗದಲ್ಲಿ ಪೋಲಿಸರು ಹೇಳಿದ್ದು: “ಈ ಸರಕಾರ ನಮ್ಮದು. ದೇವರು ಇರುವುದಾದರೆ ನೀನು ಅವನ ಬಳಿಗೆ ಹೋಗಿ ಅವನು ಬಂದು ಸಹಾಯ ಮಾಡುವಂತೆ ಕೇಳು.” ಸೆರೆಮನೆ ಮತ್ತು ಕೂಟಶಿಬಿರಗಳಲ್ಲಿ ಯೆಹೋವನ ಸಾಕ್ಷಿಗಳು ಜರ್ಮನಿಯ ಸ್ಯಾಕ್ಸೆನ್ಹಾಸೆನಿನಲ್ಲಿ ಬ್ಯಾರನಾಸ್ಕಿಯಂಥ ಪುರುಷರನ್ನು ಸಂಧಿಸಿದ್ದಾರೆ. ಅವನು ಮೂದಲಿಸಿದ್ದು: “ನಾನು ಯೆಹೋವನೊಂದಿಗೆ ಜಗಳ ಹೂಡಿದ್ದೇನೆ. ನಾನು ಬಲಾಢ್ಯನೋ ಯೆಹೋವನೋ ಎಂದು ನೋಡೋಣ.” ಸ್ವಲ್ಪ ಸಮಯದ ನಂತರ ಬ್ಯಾರನಾಸ್ಕಿ ರೋಗ ಹಿಡಿದು ಸತ್ತನು. ಆದರೆ ಇತರರು ಇದೇ ರೀತಿಯ ಮನೋಭಾವವನ್ನು ತೋರಿಸುತ್ತಾ ಹೋಗುತ್ತಿದ್ದಾರೆ. ಹಿಂಸಾಪೂರಿತ ಯುದ್ಧವನ್ನು ಮಾಡುತ್ತಿರುವ ಅಧಿಕಾರಿಗಳು ಮಾತ್ರ ದೇವರನ್ನು ಪ್ರತಿಭಟಿಸುವದಲ್ಲ. ಅದನ್ನು ಮಾಡುವುದರಲ್ಲಿ ನಿರತರಾಗಿರುವ ಬೇರೆಯವರ ಹೃದಯದಲ್ಲೂ ಯಾವ ದೇವಭಯವೂ ಇಲ್ಲವೆಂಬದಕ್ಕೆ ರುಜುವಾತನ್ನು ಕೊಡುವ ಸಂಗತಿಗಳನ್ನು ದೇವರ ಸೇವಕರು ಭೂಸುತ್ತಲೂ ನೋಡುತ್ತಿದ್ದಾರೆ ಮತ್ತು ಕೇಳುತ್ತಿದ್ದಾರೆ.
18. ಮಾನವ ಸಂತತಿಯ ಉದ್ರೇಕಿತ ಸ್ಥಿತಿಗತಿಗೆ ದುಷ್ಟಾತ್ಮಗಳು ಹೇಗೆ ಸಹಾಯ ಮಾಡುತ್ತಿವೆ?
18 ನೋಹನ ದಿನಗಳಿಗೆ ತೀರಾ ಸದೃಶ್ಯವಾಗಿರುವ ಈ ದಿನಗಳಲ್ಲಿ ದುಷ್ಟಾತ್ಮಗಳಿಂದ ಬರುವ ಅಡಿತ್ಡಡೆಗಳನ್ನು ನಾವು ನೋಡುತ್ತೇವೆ. (ಪ್ರಕಟನೆ 12:7-9) ಈ ದೆವ್ವಗಳು ನೋಹನ ದಿನಗಳಲ್ಲಿ ಮನುಷ್ಯ ದೇಹತಾಳಿ ಬಂದು ಸ್ತ್ರೀಯರನ್ನು ಮದುವೆಯಾದ ದೇವದೂತರೇ. ಜಲಪ್ರಲಯ ಬಂದಾಗ ಅವರ ಹೆಂಡತಿ, ಮಕ್ಕಳು ನಾಶವಾದರು. ಆದರೆ ಈ ಅವಿಧೇಯ ದೇವದೂತರು ಆತ್ಮ ಲೋಕಕ್ಕೆ ಹಿಂತಿರುಗಿ ಹೋಗಬೇಕಾಯಿತು. ಅಂದಿನಿಂದ ಅವರಿಗೆ ಯೆಹೋವನ ಪವಿತ್ರ ಸಂಘಟನೆಯಲ್ಲಿ ಸ್ಥಳವಿರದೆ ಟಾರ್ಟರಸ್ ಎಂಬ ದೈವಿಕ ಜ್ಞಾನೋದಯವಿಲ್ಲದ ಕಗ್ಗತ್ತಲೆಯ ಸ್ಥಿತಿಗೆ ಅವರನ್ನು ಒಪ್ಪಿಸಲಾಯಿತು. (2 ಪೇತ್ರ 2:4, 5) ಈಗ ಸೈತಾನನ ಮೇಲ್ವಿಚಾರಣೆಯ ಕೆಳಗೆ ಕೆಲಸ ನಡಿಸುತ್ತಾ ಮಾನವರೊಂದಿಗೆ ಸಮೀಪ ಸಂಪರ್ಕವನ್ನು ಇಟ್ಟುಕೊಳ್ಳುತ್ತಾ ಬಂದಿದ್ದಾರೆ. ಮತ್ತು ಇನ್ನು ಮುಂದೆ ದೇಹತಾಳಿ ಬರಲು ಅಶಕ್ತರಾದರೂ ಪುರುಷ, ಸ್ತ್ರೀ ಮತ್ತು ಮಕ್ಕಳನ್ನು ಸಹ ಅವರು ತಮ್ಮ ನಿಯಂತ್ರಣದೊಳಗೆ ಇಟ್ಟುಕೊಳ್ಳಲು ಪ್ರಯತ್ನಿಸಿದ್ದಾರೆ. ಇದರಲ್ಲಿ ಕೆಲವನ್ನು ಅವರು ಮಾಂತ್ರಿಕ ಆಚಾರಗಳ ಮೂಲಕ ಮಾಡಿರುತ್ತಾರೆ. ಮಾನವ ವಿವೇಚನೆಗೆ ಮೀರುವ ರೀತಿಯಲ್ಲಿ ಮನುಷ್ಯರು ಒಬ್ಬರನ್ನೊಬ್ಬರು ನಾಶ ಮಾಡುವಂತೆಯೂ ಅವರು ಮಾನವ ಸಂತತಿಯನ್ನು ಉದ್ರೇಕಿಸುತ್ತಾರೆ. ಆದರೆ ಇಷ್ಟೇಯಲ್ಲ.
19. (ಎ) ವಿಶೇಷವಾಗಿ ಯಾರ ವಿರುದ್ಧ ದೆವ್ವಗಳು ತಮ್ಮ ಹಗೆಯನ್ನು ಸಾಧಿಸುತ್ತವೆ? (ಬಿ) ದೆವ್ವಗಳು ನಾವು ಏನು ಮಾಡಲು ನಿರ್ಬಂಧಕ್ಕೊಳಗಾಗುವಂತೆ ಪ್ರಯತ್ನಿಸುತ್ತವೆ?
19 ಈ ದೆವ್ವಗಳು, “ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು” ಹೇಳುವವರ ಮೇಲೆಯೂ ಯುದ್ಧ ಮಾಡುತ್ತವೆಂದು ಬೈಬಲು ತೋರಿಸುತ್ತದೆ. (ಪ್ರಕಟನೆ 12:12, 17) ಈ ದುಷ್ಟ ಆತ್ಮಗಳು ಯೆಹೋವನ ಸೇವಕರ ಮೇಲೆ ಬರುವ ಹಿಂಸೆಯ ಮುಖ್ಯ ಪ್ರೇರೇಪಕರಾಗಿದ್ದಾರೆ. (ಎಫೆಸದವರಿಗೆ 6:10-13) ನಂಬಿಗಸ್ತ ಮಾನವರು ಯೆಹೋವನಿಗೆ ಸಮಗ್ರತೆಯನ್ನು ಮುರಿಯುವಂತೆಯೂ, ಯೇಸುವು ಮೆಸ್ಸೀಯ ರಾಜನಾಗಿರುವ ಯೆಹೋವನ ರಾಜ್ಯವನ್ನು ಸಾರುವುದನ್ನು ನಿಲ್ಲಿಸುವಂತೆಯೂ ನಿರ್ಬಂಧಪಡಿಸಲು ಅಥವಾ ಪುಸಲಾಯಿಸಲು ಸಾಧ್ಯವಿರುವ ಸಕಲ ವಿಧಗಳನ್ನು ಅವರು ಉಪಯೋಗಿಸುತ್ತಾರೆ.
20. ತಮ್ಮ ಹಿಡಿತದೊಳಗಿಂದ ಹೊರಗೆ ಬಾರದಂತೆ ಜನರನ್ನು ತಡೆಯಲು ದೆವ್ವಗಳು ಹೇಗೆ ಪ್ರಯತ್ನಿಸುತ್ತವೆ? (ಯಾಕೋಬ 4:7)
20 ಅವರ ಬಲಾತ್ಕಾರದ ಪ್ರಭಾವದಿಂದ ಉಪಶಮನ ಪಡೆಯಲು ಇಚ್ಛಿಸುವವರನ್ನು ತಡೆಯಲು ಈ ದೆವ್ವಗಳು ಪ್ರಯತ್ನಿಸುತ್ತವೆ. ಬ್ರೆಸೀಲಿನ ಒಬ್ಬ ಮಾಜಿ ಪ್ರೇತವ್ಯವಹಾರಿಣಿ ವರದಿ ಮಾಡಿದಂತೆ, ಸಾಕ್ಷಿಗಳು ಅವಳ ಮನೆಗೆ ಬಂದಾಗ, ಬಾಗಿಲು ತೆರೆಯದಂತೆ ದೆವ್ವದ ಸರ್ವ ಆಜ್ಞಾಪಿಸಿದರೂ ಅವಳು ತೆರೆದ ಕಾರಣ ಸತ್ಯವನ್ನು ಕಲಿಯುವಂತಾಯಿತು. ಅನೇಕ ಸ್ಥಳಗಳಲ್ಲಿ ದೆವ್ವಗಳು ಯೆಹೋವನ ಸಾಕ್ಷಿಗಳ ಕೆಲಸವನ್ನು ನಿಲ್ಲಿಸ ಪ್ರಯತ್ನಿಸಲು ಮಾಟಗಾರರನ್ನು ಪ್ರತ್ಯಕ್ಷವಾಗಿ ಉಪಯೋಗಿಸುವದುಂಟು. ಉದಾಹರಣೆಗೆ, ಸೂರಿನಾಮ್ ದೇಶದ ಒಂದು ಹಳ್ಳಿಯಲ್ಲಿ ಯೆಹೋವನ ಸಾಕ್ಷಿಗಳ ವಿರೋಧಿಗಳು ಒಬ್ಬ ಪ್ರೇತವ್ಯವಹಾರಿಯನ್ನು ಉಪಯೋಗಿಸಿದರು. ಇವನು ತನ್ನ ಮಾಂತ್ರಿಕ ಬೆತ್ತವನ್ನು ಜನರೆಡೆಗೆ ತೋರಿಸಿದ ಮಾತ್ರಕ್ಕೆ ಅವರು ಒಡನೆ ಸತ್ತು ಹೋಗುವುದಕ್ಕೆ ಪ್ರಸಿದ್ಧನು. ಈ ಪ್ರೇತವ್ಯವಹಾರಿ, ದೆವ್ವಸ್ವಾಧೀನನಾಗಿ ತನ್ನ ಕುಣಿಯುವ ಮತ್ತು ಡೋಲುಬಡೆಯುವ ಪರಿಜನರೊಂದಿಗೆ ಯೆಹೋವನ ಸಾಕ್ಷಿಗಳನ್ನು ಎದುರಾದನು. ಅವನು ತನ್ನ ಮಂತ್ರ ಜಪಿಸುತ್ತಾ ತನ್ನ ಬೆತ್ತವನ್ನು ಅವರ ಕಡೆ ತೋರಿಸಿದನು. ಸಾಕ್ಷಿಗಳು ಒಡನೇ ಸತ್ತು ಬೀಳುವುದನ್ನು ಹಳ್ಳಿಗರು ನಿರೀಕ್ಷಿಸಿದ್ದರೂ ಆಗ ಮಂತ್ರವಾದಿಯೇ ಮೂರ್ಛೆತಪ್ಪಿ ಬಿದ್ದು, ಅವನ ನಾಚಿದ ಬೆಂಬಲಿಗರು ಅವನನ್ನು ಹೊತ್ತುಕೊಂಡು ಹೋಗಬೇಕಾಯಿತು.
21. ನೋಹನ ದಿನಗಳಂತೆಯೇ, ಜನರಲ್ಲಿ ಹೆಚ್ಚಿನವರು ನಮ್ಮ ಸಾರುವಿಕೆಗೆ ಹೇಗೆ ಪ್ರತಿಕ್ರಿಯೆ ತೋರಿಸುತ್ತಾರೆ ಮತ್ತು ಏಕೆ?
21 ಮಾಟಮಂತ್ರಗಳು ಅಷ್ಟು ಬಹಿರಂಗವಾಗಿ ಆಚರಿಸಲ್ಪಡದ ಸ್ಥಳಗಳಲ್ಲಿಯೂ, ತಮ್ಮ ದಿನನಿತ್ಯದ ವಿಚಾರಗಳಲ್ಲಿಯೇ ಮುಳುಗಿ ಅದಕ್ಕೆ ತಡೆಯಾಗಲು ಬಯಸದಿರುವ ಜನರಿಗೆ ಸಾರಲು ಪ್ರಯತ್ನಿಸುವದು ಎಷ್ಟು ಕಷ್ಟಕರವೆಂಬದರ ಅನುಭವ ಪ್ರತಿಯೊಬ್ಬ ಯೆಹೋವನ ಸಾಕ್ಷಿಗಿದೆ. ನೋಹನ ದಿನಗಳಲ್ಲಿದ್ದಂತೆಯೇ ಜನರಲ್ಲಿ ಅತಿ ದೊಡ್ಡ ಭಾಗ ‘ಯಾವ ಗಮನವನ್ನೂ ಕೊಡುವದಿಲ್ಲ.’ (ಮತ್ತಾಯ 24: 37-39, NW) ನಮ್ಮ ಐಕ್ಯ ಮತ್ತು ಸಾಧನೆಗಳನ್ನು ಕೆಲವರು ಪ್ರಶಂಸಿಸಬಹುದು. ಆದರೆ ನಮ್ಮ ಆತ್ಮಿಕ ರಚನಾ ಕೆಲಸ, ಅಂದರೆ ಅನೇಕಾನೇಕ ತಾಸುಗಳ ವ್ಯಕ್ತಿಪರ ಅಧ್ಯಯನ, ನಿಯತಕ್ರಮದ ಕೂಟದ ಹಾಜರಿ ಮತ್ತು ಕ್ಷೇತ್ರ ಸೇವೆ—ಇವೆಲ್ಲಾ ಜನರಿಗೆ ಹುಚ್ಚುತನವಾಗಿದೆ. ಅವರ ಜೀವನವು ಈಗ ಸಾಧ್ಯವಿರುವ ಪ್ರಾಪಂಚಿಕ ಸೊತ್ತುಗಳಲ್ಲಿ ಮತ್ತು ಇಂದ್ರಿಯಭೋಗಗಳಲ್ಲಿ ಕೇಂದ್ರೀಕರಿಸಿರುವ ಕಾರಣ ದೇವರ ವಾಕ್ಯದ ವಾಗ್ದಾನಗಳ ಮೇಲೆ ನಮಗೆ ಇರುವ ಭರವಸೆಯನ್ನು ಅವರು ಅಪಹಾಸ್ಯ ಮಾಡುತ್ತಾರೆ.
22, 23. ನೋಹನ ದಿನಗಳ ಘಟನೆಗಳು ಯೆಹೋವನು ದಿವ್ಯ ಭಕ್ತಿಯ ಜನರನ್ನು ಪರೀಕೆಯ್ಷೊಳಗಿಂದ ಬಿಡಿಸುವನೆಂಬದಕ್ಕೆ ಸ್ವಸ್ಥ ಭರವಸೆಯನ್ನು ಹೇಗೆ ಕೊಡುತ್ತವೆ?
22 ಯೆಹೋವನ ನಿಷ್ಠ ಸೇವಕರು ದೇವರ ಪ್ರೀತಿಯಿಲ್ಲದವರಿಂದ ಯಾವಾಗಲೂ ನಿಂದೆಗೊಳಗಾಗುವರೋ? ನಿಶ್ಚಯವಾಗಿಯೂ ಇಲ್ಲ ! ನೋಹನ ದಿನಗಳಲ್ಲಿ ಏನಾಯಿತು? ದೇವರ ಆದೇಶಾನುಸಾರ ನೋಹನೂ ಅವನ ಕುಟುಂಬವೂ ಕಟ್ಟಿಮುಗಿಸಲ್ಪಟ್ಟ ನಾವೆಯೊಳಗೆ ಹೋದರು. ಬಳಿಕ, ದೈವಿಕವಾಗಿ ನಿಶ್ಚಯಿಸಲ್ಪಟ್ಟ ಸಮಯದಲ್ಲಿ, “ಭೂಮಿಯ ಕೆಳಗಿರುವ ಸಾಗರದ ಸೆಲೆಗಳು ಒಡೆದವು; ಆಕಾಶದ ತೂಬುಗಳು ತೆರೆದವು.” ಬೆಟ್ಟಗಳು ಮುಳುಗುವಷ್ಟರ ಮಟ್ಟಿಗೂ ಜಲಪ್ರಳಯ ಮುಂದುವರಿಯಿತು. (ಆದಿಕಾಂಡ 7:11, 17-20) ತಮ್ಮ ಯೋಗ್ಯ ವಾಸಸ್ಥಳವನ್ನು ತ್ಯಜಿಸಿದ್ದ ದೇವದೂತರು ತಾವು ತಾಳಿದ್ದ ಮನುಷ್ಯ ದೇಹಗಳನ್ನು ಬಿಟ್ಟು ಆತ್ಮಲೋಕಕ್ಕೆ ಹಿಂದಿರುಗಿದರು. ನೆಫೀಲಿಯರು ಮತ್ತು ಉಳಿದ ಭಕ್ತಿಹೀನ ಲೋಕದವರು ನೋಹನ ಎಚ್ಚರಿಕೆಗೆ ಉದಾಸೀನಭಾವ ತೋರಿಸಿದವರೊಂದಿಗೆ ನಾಶವಾದರು. ಆದರೆ ನೋಹ, ಅವನ ಪತ್ನಿ, ಮೂವರು ಪುತ್ರರು ಮತ್ತು ಅವರ ಹೆಂಡತಿಯರು ರಕ್ಷಣೆ ಹೊಂದಿದರು. ಹೀಗೆ, ಯೆಹೋವ ದೇವರು ನೋಹನನ್ನೂ ಅವನ ಕುಟುಂಬವನ್ನೂ ಅವರು ಅನೇಕ ವರ್ಷ ಕಾಲ ಸಹಿಸಿ ಕೊಂಡಿದ್ದ ಪರೀಕ್ಷೆಯೊಳಗಿಂದ ವಿಮೋಚಿಸಿದನು.
23 ಯೆಹೋವನು ಇಂದು ದಿವ್ಯಭಕ್ತಿಯ ಜನರಿಗೆ ಹಾಗೆಯೇ ಮಾಡುವನೋ? ಇದಕ್ಕೆ ನಿಶ್ಚಯವಾಗಿಯೂ ಯಾವ ಸಂದೇಹವೂ ಇಲ್ಲ. ಆತನು ಅದನ್ನು ವಾಗ್ದಾನಿಸಿದ್ದಾನೆ. ಆತನು ಸುಳ್ಳು ಹೇಳಲಾರನು.—ತೀತ 1:2; 2 ಪೇತ್ರ 3:5-7. (w90 4/15)
[ಅಧ್ಯಯನ ಪ್ರಶ್ನೆಗಳು]
a “ಅನೋಮಿಯ ಎಂದರೆ ದೇವರ ನಿಯಮಗಳಿಗೆ ಅಲಕ್ಷ್ಯಭಾವ ಅಥವಾ ಪ್ರತಿಭಟನೆ; ಅಸೀಬಿಯ [‘ಭಕ್ತಿಹೀನ ಜನರು’ ಎಂದು ಭಾಷಾಂತರವಾಗಿರುವ ಪದದ ನಾಮಪದ ರೂಪ] ಎಂದರೆ ದೇವರೆಂಬ ವ್ಯಕ್ತಿಯ ಕಡೆಗೆ ತೋರಿಸುವ ಇದೇ ರೀತಿಯ ಮನೋಭಾವ.”—ವೈನ್ಸ್ ಎಕ್ಸ್ಪೊಸಿಟರಿ ಡಿಕ್ಷನೆರಿ ಆಫ್ ಓಲ್ಡ್ ಆ್ಯಂಡ್ ನ್ಯೂ ಟೆಸ್ಟಮೆಂಟ್ ವರ್ಡ್ಸ್, ಸಂಪುಟ 4, ಪುಟ 170.
ನಿಮಗೆ ಜ್ಞಾಪಕವಿದೆಯೇ?
◻ ದಿವ್ಯ ಭಕ್ತಿಯ ಜನರನ್ನು ಪರೀಕೆಯ್ಷೊಳಗಿಂದ ವಿಮೋಚಿಸಲು ಯೆಹೋವನು ಬಲ್ಲನೆಂದು ಪೇತ್ರನು ಹೇಗೆ ತೋರಿಸಿದನು?
◻ ನೋಹನ ದಿನಗಳ ಬಲಾತ್ಕಾರಿ ಕೃತ್ಯಗಳಿಗೆ ಯಾವ ಸಂಗತಿಗಳು ನೆರವಾದವು?
◻ ಬರಲಿದ್ದ ಜಲಪ್ರಳಯದ ವೀಕ್ಷಣೆಯಲ್ಲಿ ನೋಹನಿಗೆ ಯಾವ ಜವಾಬ್ದಾರಿಯಿತ್ತು?
◻ ನೋಹನ ದಿನಗಳಿಗೆ ಸಮಾನವಾಗಿರುವ ಯಾವ ವಿಷಯಗಳನ್ನು ನಮ್ಮ ದಿನಗಳಲ್ಲಿ ನಾವು ನೋಡುತ್ತೇವೆ?
[ಪುಟ 14 ರಲ್ಲಿರುವ ಚಿತ್ರ]
ನಾವೆಯನ್ನು ಕಟ್ಟುವುದರಲ್ಲಿ ಅನೇಕ ವರ್ಷಗಳ ಶ್ರಮವು ಸೇರಿಕೊಂಡಿತ್ತು
[ಪುಟ 15 ರಲ್ಲಿರುವ ಚಿತ್ರ]
ತನ್ನ ಕುಟುಂಬದ ಆತ್ಮಿಕತೆಯನ್ನು ಬೆಳೆಸುವರೆ ನೋಹನು ಸಮಯವನ್ನು ಮೀಸಲಾಗಿಟ್ಟನು