“ಸದಾ ಎಚ್ಚರವಾಗಿರಿ” ಏಕೆ ಪ್ರಾಮುಖ್ಯ?
“ನಿನ್ನ ಸಾನ್ನಿಧ್ಯಕ್ಕೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆ ಏನು?” (ಮತ್ತಾ. 24:3) ಶಿಷ್ಯರ ಈ ಪ್ರಶ್ನೆಗೆ ಯೇಸು ಸ್ಪಷ್ಟವಾದ, ಕಣ್ಣಿಗೆ ಕಟ್ಟುವಂಥ ಘಟನೆಗಳ ವಿವರಗಳನ್ನು ಸೂಚನೆಯಾಗಿ ನೀಡಿದನು. ಚಾಚೂತಪ್ಪದೆ ನೇರವೇರಲಿದ್ದ ಈ ಸೂಚನೆ ಮತ್ತಾಯ 24, ಮಾರ್ಕ 13 ಮತ್ತು ಲೂಕ 21ನೇ ಅಧ್ಯಾಯಗಳಲ್ಲಿ ದಾಖಲಾಗಿದೆ. ಸೂಚನೆಯನ್ನು ತಿಳಿಸಿದ ಬಳಿಕ ಯೇಸು, “ಸದಾ ಎಚ್ಚರವಾಗಿರಿ” ಎಂದು ಹೇಳಿದನು.—ಮತ್ತಾ. 24:42.
ಅಂತ್ಯವನ್ನು ಗುರುತಿಸುವ ಸೂಚನೆ ಸ್ಪಷ್ಟವಾಗಿದ್ದ ಮೇಲೆ “ಸದಾ ಎಚ್ಚರವಾಗಿರಿ” ಎಂದು ಹೇಳುವ ಆವಶ್ಯಕತೆ ಏನಿತ್ತು? ಎರಡು ಕಾರಣ ಇದ್ದಿರಬಹುದು. ಒಂದು, ಲೋಕದ ಬೇರೆ ಬೇರೆ ವಿಷಯಗಳೆಡೆಗೆ ಗಮನ ಹರಿದು ಕೆಲವರು ಸೂಚನೆಯನ್ನು ಗಾಳಿಗೆ ತೂರಬಹುದು, ಫಲಿತಾಂಶವಾಗಿ ಆಧ್ಯಾತ್ಮಿಕತೆ ಪತನಗೊಂಡು ಅವರು ಎಚ್ಚರವಾಗಿ ಉಳಿಯದೆ ಹೋಗಬಹುದು. ಎರಡನೇ ಕಾರಣ, ಸೂಚನೆಯಲ್ಲಿನ ಘಟನೆಗಳ ಸರಮಾಲೆಯ ಕುರಿತು ಕ್ರೈಸ್ತನೊಬ್ಬನು ತಿಳಿದುಕೊಂಡಿದ್ದರೂ ತಾನು ಜೀವಿಸುತ್ತಿರುವ ಸ್ಥಳದಲ್ಲಿ ಅವು ಸಂಭವಿಸದಿರುವ ಕಾರಣ ಸೂಚನೆಯ ತೀವ್ರ ಪ್ರಭಾವವನ್ನು ಮನಗಾಣದೇ ಹೋಗಬಹುದು. ಹಾಗಾಗಿ, ಯೇಸು ನುಡಿದ ಪ್ರವಾದನೆಯ ಪ್ರಧಾನ ಭಾಗವಾಗಿರುವ “ಮಹಾ ಸಂಕಟ” ಬರಲು ಬಹಳ ಸಮಯವಿದೆ, “ಸದಾ ಎಚ್ಚರವಾಗಿ” ಇರಲಿಕ್ಕಾಗಿ ನಿಧಾನವಾಗಿ ಹೆಜ್ಜೆಗಳನ್ನು ತೆಗೆದುಕೊಂಡರೆ ಆಯ್ತೆಂದು ಭಾವಿಸಬಹುದು.—ಮತ್ತಾ. 24:21.
“ಅವರು ಲಕ್ಷ್ಯಕೊಡಲೇ ಇಲ್ಲ”
ಯೇಸು, ನೋಹನ ಕಾಲದಲ್ಲಿ ಜೀವಿಸಿದ್ದ ಜನರ ಕುರಿತು ತನ್ನ ಹಿಂಬಾಲಕರಿಗೆ ನೆನಪಿಸಿದನು. ನೋಹನ ಸುವಾರ್ತೆ ಕಾರ್ಯ, ಭಾರಿ ಗಾತ್ರದ ನಾವೆಯ ನಿರ್ಮಾಣ, ಆ ದಿನಗಳಲ್ಲಿದ್ದ ಹಿಂಸಾಚಾರ ಇವೆಲ್ಲವೂ ತೆರೆಮರೆಯಾಗಿರಲಿಲ್ಲ. ಆದರೆ ಆ ಜನರು ಅದ್ಯಾವುದಕ್ಕೂ “ಲಕ್ಷ್ಯಕೊಡಲೇ ಇಲ್ಲ.” (ಮತ್ತಾ. 24:37-39) ಅದೇ ರೀತಿಯ ಮನೋಭಾವ ಇಂದಿನ ಜನರಲ್ಲೂ ಮನೆಮಾಡಿದೆ. ಉದಾಹರಣೆಗೆ, ರಸ್ತೆ ಬದಿಗಳಲ್ಲಿ ವೇಗ ಮಿತಿಯನ್ನು ಸೂಚಿಸುವ ಫಲಕಗಳು ಇದ್ದರೂ ಅನೇಕರು ಅದನ್ನು ಗಮನಿಸಿ ಪಾಲಿಸುವುದಿಲ್ಲ. ಪರಿಣಾಮವಾಗಿ, ವಾಹನ ಚಾಲಕರ ವೇಗಕ್ಕೆ ಕಡಿವಾಣ ಹಾಕುವ ಸಲುವಾಗಿ ಅಲ್ಲಲ್ಲಿ ರಸ್ತೆ ಉಬ್ಬುಗಳನ್ನು ಹಾಕಬೇಕಾದ ಅನಿವಾರ್ಯತೆ ಅಧಿಕಾರಿಗಳದ್ದು. ಕ್ರೈಸ್ತರು ಕಡೇ ದಿವಸಗಳ ಸೂಚನೆಯ ಕುರಿತು ಅರಿತಿರಬಹುದು. ಆದರೆ ಕೆಲವರು ಅದಕ್ಕೆ ಗಮನನೀಡದಷ್ಟು ಇತರ ಕಾರ್ಯಚಟುವಟಿಕೆಗಳಲ್ಲಿ ಮಗ್ನರಾಗಿಬಿಡಬಹುದು. ಪಶ್ಚಿಮ ಆಫ್ರಿಕದ ಆರಿಲ್ ಎಂಬ ಹುಡುಗಿಯ ಉದಾಹರಣೆ ಗಮನಿಸಿ.
ಅವಳು ಮಹಿಳೆಯರ ಹ್ಯಾಂಡ್ಬಾಲ್ ಆಟವನ್ನು ಟೀವಿಯಲ್ಲಿ ಯಾವಾಗಲೂ ವೀಕ್ಷಿಸುತ್ತಿದ್ದಳು. ಶಾಲೆಯಲ್ಲಿ ಒಂದು ತಂಡವನ್ನು ಆರಂಭಿಸಿದಾಗ ಆಡಬೇಕೆನ್ನುವ ತೀವ್ರ ಬಯಕೆ ಆಧ್ಯಾತ್ಮಿಕತೆಗೆ ಎದುರಾಗುವ ಅಪಾಯವನ್ನು ಗಮನಿಸದಷ್ಟು ಕುರುಡಾಗಿಸಿತು. ಆಕೆ ಗೋಲ್ಕೀಪರ್ ಆಗಲು ಒಪ್ಪಿಗೆ ನೀಡಿದಳು. ಮುಂದೇನಾಯಿತು? ಅವಳು ಹೇಳುವುದನ್ನು ಕೇಳಿ: “ತಂಡದಲ್ಲಿದ್ದ ಕೆಲವರಿಗೆ ಬಾಯ್ಫ್ರೆಂಡ್ ಇದ್ದರು. ಆ ಹುಡುಗರು ಡ್ರಗ್ಸ್ ತಗೊಳ್ತಿದ್ದರು ಮತ್ತು ಧೂಮಪಾನ ಮಾಡುತ್ತಿದ್ದರು. ಅಂಥ ದುರಭ್ಯಾಸವಿಲ್ಲದ ನಾನು ಅವರ ನಗೆಪಾಟಲಿಗೆ ಗುರಿಯಾಗುತ್ತಿದ್ದೆ. ಇದೆಲ್ಲಾ ಸಹಜ, ನಿಭಾಯಿಸಬಹುದೆಂದು ನಾನಂದುಕೊಂಡೆ. ಆದರೆ ಆಟ ಆಧ್ಯಾತ್ಮಿಕತೆಯನ್ನು ಸವೆಯಿಸತೊಡಗಿತು. ಮನಸ್ಸಿನಲ್ಲಿ ಸದಾ ಹ್ಯಾಂಡ್ಬಾಲ್ ಕ್ರೀಡೆಯೇ ತುಂಬಿರುತ್ತಿತ್ತು. ಕೂಟಗಳಲ್ಲಿ ಕೂತಿದ್ದರೂ ಮನಸ್ಸು ಮಾತ್ರ ರಾಜ್ಯ ಸಭಾಗೃಹವನ್ನು ಬಿಟ್ಟು ಹ್ಯಾಂಡ್ಬಾಲ್ ಕೋರ್ಟ್ ಸುತ್ತ ಗಿರಕಿ ಹೊಡೆಯುತ್ತಿತ್ತು. ನನ್ನ ಕ್ರೈಸ್ತ ವ್ಯಕ್ತಿತ್ವ ಕೂಡ ಬದಲಾಗತೊಡಗಿತು. ಆಡಬೇಕು ಎಂದು ಆರಂಭವಾದ ಹುಮ್ಮಸ್ಸು ಕೊನೆಗೆ ಗೆಲ್ಲಬೇಕೆಂಬ ಛಲವಾಯಿತು. ನನ್ನ ಛಲ ಸಾಧಿಸಲು ಕಠಿಣ ಅಭ್ಯಾಸ ಮಾಡಿದೆ. ಮಾನಸಿಕ ಒತ್ತಡ ಅಧಿಕಗೊಂಡಿತು. ಹ್ಯಾಂಡ್ಬಾಲ್ಗೋಸ್ಕರ ಗೆಳೆತನವನ್ನು ನಿರ್ಲಕ್ಷಿಸಿದೆ.
“ಒಂದು ಆಟದಲ್ಲಿ ಎದುರಾಳಿ ತಂಡಕ್ಕೆ ಪೆನಲ್ಟಿ ಷಾಟ್ ಹೊಡೆಯುವ ಅವಕಾಶ ಸಿಕ್ಕಿತು. ನನ್ನ ಮನಸ್ಸಿನಲ್ಲಿ ಆಟ ಎಷ್ಟು ಆಳವಾಗಿತ್ತು ಎಂಬ ಅರಿವು ನನಗೆ ಉಂಟಾದದ್ದು ಆಗಲೇ. ಗೋಲ್ಕೀಪರ್ ಆಗಿದ್ದ ನಾನು ಆ ಹೊಡೆತವನ್ನು ಸದೆಬಡಿಯಬೇಕಿತ್ತು. ನನಗರಿವಿಲ್ಲದೆ ಶಕ್ತಿ ನೀಡುವಂತೆ ಯೆಹೋವನಿಗೆ ಮೊರೆಯಿಟ್ಟಿದ್ದೆ! ನನ್ನ ಆಧ್ಯಾತ್ಮಿಕತೆಯ ಮಟ್ಟ ಎಷ್ಟಕ್ಕೆ ಇಳಿದಿದೆ ಎಂಬುದು ಆಗ ನನ್ನ ಗಮನಕ್ಕೆ ಬಂತು. ನಾನು ಆಧ್ಯಾತ್ಮಿಕ ಪುನಶ್ಚೇತನ ಪಡೆದುಕೊಳ್ಳಲು ಪ್ರಯತ್ನಿಸಿದೆ.
“ಯುವಜನರು ಪ್ರಶ್ನಿಸುವುದು—ನಾನು ನನ್ನ ಜೀವಿತವನ್ನು ಹೇಗೆ ಉಪಯೋಗಿಸುವೆ?a ಎಂಬ ಡಿವಿಡಿಯನ್ನು ನಾನು ಮೊದಲೊಮ್ಮೆ ವೀಕ್ಷಿಸಿದ್ದೆ. ಅದನ್ನು ಮತ್ತೊಮ್ಮೆ ವೀಕ್ಷಿಸಲು ಮತ್ತು ಪಾಠವನ್ನು ಅನ್ವಯಿಸಿಕೊಳ್ಳಲು ನಿರ್ಧರಿಸಿದೆ. ಡಿವಿಡಿಯಲ್ಲಿ ನಾನು ನೋಡಿದ್ದ ಕಥೆಯ ಪಾತ್ರಧಾರಿ ಆ್ಯಂಡ್ರೆಯಂತೆ ನನ್ನ ಪರಿಸ್ಥಿತಿಯೂ ಇತ್ತು. ಯುವಕ ಆ್ಯಂಡ್ರೆಗೆ ಹಿರಿಯರೊಬ್ಬರು ಫಿಲಿಪ್ಪಿ 3:8ನ್ನು ಓದಿ ಧ್ಯಾನಿಸುವಂತೆ ನೀಡಿದ ಸಲಹೆಯನ್ನು ನಾನು ಪಾಲಿಸಿದೆ. ಹ್ಯಾಂಡ್ಬಾಲ್ ತಂಡವನ್ನು ತೊರೆಯಲು ಅದು ಬಲಕೊಟ್ಟಿತು.
“ನನ್ನ ಜೀವನದಲ್ಲಿ ಮತ್ತೆ ಬದಲಾವಣೆಯ ಗಾಳಿ ಬೀಸಿತು! ನನ್ನಲ್ಲಿದ್ದ ಸ್ಪರ್ಧಾ ಮನೋಭಾವ ಇಲ್ಲವಾಯಿತು. ಒತ್ತಡ ಕಣ್ಮರೆಯಾಯಿತು. ಸಭೆಯಲ್ಲಿನ ಗೆಳೆಯರಿಗೆ ಮತ್ತೆ ಹತ್ತಿರವಾಗಿ ಉಲ್ಲಾಸಿಸಿದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಪೂರ್ಣ ಮನಸ್ಸಿನಿಂದ ಭಾಗವಹಿಸಲು ಸಾಧ್ಯವಾಯಿತು. ಕೂಟಗಳಲ್ಲಿ ಗಮನ ನೀಡಿದೆ, ಆನಂದಿಸಿದೆ. ಶುಶ್ರೂಷೆಯಲ್ಲಿ ಪ್ರಗತಿಯಾಯಿತು. ನಾನೀಗ ಪ್ರತಿ ತಿಂಗಳು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುತ್ತೇನೆ.”
ಯೇಸು ನೀಡಿದ ಸೂಚನೆಗೆ ಲಕ್ಷ್ಯ ಕೊಡದಂತೆ ಯಾವುದಾದರೂ ವಿಷಯ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆದಿದೆಯಾ? ಉದಾಸೀನ ಮಾಡಬೇಡಿ. ಆರಿಲ್ ಮಾಡಿದಂತೆ ಸೂಕ್ತ ಹೆಜ್ಜೆಗಳನ್ನು ತೆಗೆದುಕೊಳ್ಳಿ. ಈ ಮುಂದಿನವುಗಳನ್ನು ನೀವು ಮಾಡಬಹುದು. ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ ಅನ್ನು ಸದ್ಬಳಕೆ ಮಾಡಿಕೊಳ್ಳಿ. ನಿಕ್ಷೇಪಗಳನ್ನು ಪತ್ತೆಹಚ್ಚಲು ಅದು ಮಾರ್ಗದರ್ಶಿ. ನಿಮ್ಮ ಹಾಗೆ ಪ್ರಲೋಭನೆಗಳನ್ನು ಎದುರಿಸಿದವರ ಅನುಭವಗಳನ್ನು ಹಾಗೂ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಲು ಅದು ನೆರವಾಗುವುದು. ಕ್ರೈಸ್ತ ಕೂಟಗಳಿಗೆ ಚೆನ್ನಾಗಿ ತಯಾರಿ ಮಾಡುವ ಮೂಲಕ ಮತ್ತು ಕೂಟಗಳಲ್ಲಿ ಟಿಪ್ಪಣಿ ಬರೆದುಕೊಳ್ಳುವ ಮೂಲಕ ಪ್ರಯೋಜನ ಹೊಂದಿರಿ. ಕೂಟಗಳಲ್ಲಿ ಮುಂದಿನ ಸಾಲುಗಳಲ್ಲಿ ಕುಳಿತುಕೊಳ್ಳುವುದು ಹೆಚ್ಚು ಗಮನ ನೀಡಲು ನೆರವಾಗುವುದೆಂಬುದು ಅನೇಕರ ಅನುಭವ. ಸಭಿಕರೊಂದಿಗೆ ಚರ್ಚೆಯಿರುವಾಗ ಆರಂಭದಲ್ಲೇ ಉತ್ತರ ನೀಡಲು ಪ್ರಯತ್ನಿಸಿ. ವಾರ್ತೆಗಳಲ್ಲಿ ವರದಿಯಾಗುವ ಘಟನೆಗಳು ಸೂಚನೆಯ ಭಾಗವಾಗಿವೆಯಾ, “ಕಡೇ ದಿವಸಗಳ” ಇತರ ಲಕ್ಷಣವಾಗಿವೆಯಾ ಎಂದು ಹೋಲಿಸಿ ನೋಡಿ. ಹೀಗೆ ಆಧ್ಯಾತ್ಮಿಕವಾಗಿ ಎಚ್ಚರವಾಗಿರಿ.—2 ತಿಮೊ. 3:1-5; 2 ಪೇತ್ರ 3:3, 4; ಪ್ರಕ. 6:1-8.
“ನಿಮ್ಮನ್ನು ಸಿದ್ಧರಾಗಿಟ್ಟುಕೊಳ್ಳಿ”
ಕಡೇ ದಿವಸಗಳನ್ನು ಗುರುತಿಸುವ ಸೂಚನೆ ಜಾಗತಿಕವಾಗಿದ್ದು, “ಭೂಮಿಯಾದ್ಯಂತ” ಇರುವ ಜನರನ್ನು ಒಳಗೂಡುತ್ತದೆ. (ಮತ್ತಾ. 24:7, 14) ಲಕ್ಷಗಟ್ಟಲೆ ಜನರು ಅಂಟುರೋಗ, ಆಹಾರದ ಅಭಾವ, ಭೂಕಂಪ ಹಾಗೂ ಸೂಚನೆಯಲ್ಲಿನ ಇತರ ಘಟನೆಗಳು ಸಂಭವಿಸುತ್ತಿರುವ ಪ್ರದೇಶಗಳಲ್ಲಿ ಜೀವಿಸುತ್ತಿದ್ದಾರೆ. ಆದರೆ ಇತರ ಅನೇಕರು ಇಂಥ ವಿಕೋಪಗಳಿಲ್ಲದ ಸ್ಥಳಗಳಲ್ಲಿ ಸ್ವಲ್ಪ ಮಟ್ಟಿಗೆ ನೆಮ್ಮದಿಯಿಂದ ಜೀವಿಸುತ್ತಿದ್ದಾರೆ. ಸೂಚನೆಯಲ್ಲಿನ ಘಟನೆಗಳು ಇಷ್ಟರ ವರೆಗೆ ನೀವು ಜೀವಿಸಿರುವ ಪ್ರದೇಶವನ್ನು ಬಾಧಿಸದೆ ಇರಬಹುದು. ಅಂದ ಮಾತ್ರಕ್ಕೆ ಮಹಾ ಸಂಕಟ ಬರಲು ಬಹಳ ಸಮಯ ಇದೆ ಎಂದು ತರ್ಕಿಸುವುದು ಸರಿಯಾ? ಅದು ವಿವೇಕವಾಗಿರುವುದಾ?
ಉದಾಹರಣೆಗೆ, “ಅಂಟುರೋಗಗಳೂ ಆಹಾರದ ಕೊರತೆಗಳೂ ಇರುವವು” ಎಂದು ಯೇಸು ಹೇಳಿದ ಕುರಿತು ಸ್ವಲ್ಪ ಯೋಚಿಸಿ. (ಲೂಕ 21:11) ಮೊದಲನೆಯದಾಗಿ, ಇವೆರಡೂ ಒಂದೇ ಪ್ರಮಾಣದಲ್ಲಿ ಎಲ್ಲಾ ಪ್ರದೇಶಗಳಲ್ಲಿ ಸಂಭವಿಸುವವು ಎಂದು ಅವನು ಹೇಳಲಿಲ್ಲ. “ಒಂದರ ನಂತರ ಇನ್ನೊಂದು ಸ್ಥಳದಲ್ಲಿ” ಉಂಟಾಗುವವು ಎಂದು ಹೇಳಿದನಷ್ಟೆ. ಹಾಗಾಗಿ ಒಂದು ಘಟನೆ ಏಕ ಕಾಲದಲ್ಲಿ ಭೂಮಿಯ ಎಲ್ಲಾ ಕಡೆ ಸಂಭವಿಸಬೇಕೆಂದು ನಾವು ನಿರೀಕ್ಷಿಸಬಾರದು. ಎರಡನೆಯದಾಗಿ, ಯೇಸು ಆಹಾರದ ಅಭಾವದ ಕುರಿತು ತಿಳಿಸಿದ ನಂತರ ಅತಿಯಾದ ಭೋಜನದ ಕುರಿತು ತನ್ನ ಶಿಷ್ಯರಿಗೆ ಎಚ್ಚರಿಸಿದನು. “ನಿಮ್ಮ ಹೃದಯಗಳು ಎಂದಿಗೂ ಅತಿಯಾದ ಭೋಜನ” ಮುಂತಾದ ಭಾರಗಳಿಂದ ಕುಗ್ಗಿಹೋಗದಂತೆ “ಗಮನಕೊಟ್ಟುಕೊಳ್ಳಿರಿ” ಎಂದು ಅವನು ಅವರಿಗೆ ಹೇಳಿದನು. (ಲೂಕ 21:34) ಅಂದರೆ, ಎಲ್ಲಾ ಕ್ರೈಸ್ತರು ಸೂಚನೆಯ ಪ್ರತಿಯೊಂದು ಘಟನೆಯ ತೀವ್ರತೆಯನ್ನು ಅನುಭವಿಸಲಾರರು. ಯೇಸು ಹೇಳಿದ್ದನ್ನು ಗಮನಿಸಿ: “ಈ ಸಂಗತಿಗಳು ಸಂಭವಿಸುತ್ತಿರುವುದನ್ನು ನೀವು ಸಹ ನೋಡುವಾಗ ದೇವರ ರಾಜ್ಯವು ಹತ್ತಿರದಲ್ಲಿದೆ ಎಂಬುದನ್ನು ತಿಳಿದುಕೊಳ್ಳಿರಿ.” (ಲೂಕ 21:31) ನಾವಿರುವ ಪ್ರದೇಶದಲ್ಲಿ ಸೂಚನೆಯ ಒಂದಂಶ ನೆರವೇರುವುದನ್ನು ನಾವು ಕಾಣಲಿ ಕಾಣದಿರಲಿ, ಎಲ್ಲಾ ಅಂಶಗಳು ಜಾಗತಿಕ ಪ್ರಮಾಣದಲ್ಲಿ ನೆರವೇರುತ್ತಿರುವುದನ್ನು ಆಧುನಿಕ ಸಂಪರ್ಕ ಮಾಧ್ಯಮಗಳ ಮೂಲಕ ನೋಡುತ್ತೇವೆ.
ಯೆಹೋವ ದೇವರು ಮಹಾ ಸಂಕಟ ಆರಂಭವಾಗಲು “ದಿನ ಮತ್ತು ಗಳಿಗೆ” ನಿಶ್ಚಯಪಡಿಸಿದ್ದಾರೆ ಎನ್ನುವುದನ್ನು ಸಹ ಜ್ಞಾಪಕದಲ್ಲಿ ಇಟ್ಟುಕೊಳ್ಳಿ. (ಮತ್ತಾ. 24:36) ಭೂಮಿಯಲ್ಲಿ ನಡೆಯುತ್ತಿರುವ ಘಟನೆಗಳ ತೀವ್ರತೆ ಆ ದಿನಾಂಕವನ್ನು ಬದಲಾಯಿಸಲಾರದು.
ಭೂಮಿಯಾದ್ಯಂತ ಇರುವ ಕ್ರೈಸ್ತರಿಗೆ ಯೇಸು, “ನಿಮ್ಮನ್ನು ಸಿದ್ಧರಾಗಿಟ್ಟುಕೊಳ್ಳಿರಿ” ಎಂದು ಬುದ್ಧಿ ಹೇಳಿದನು. (ಮತ್ತಾ. 24:44) ಹೌದು, ನಾವು ಸದಾ ಸಿದ್ಧರಾಗಿರಬೇಕು. ಪ್ರತಿನಿತ್ಯ ದಿನವಿಡೀ ನಾವು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿರಲು ಸಾಧ್ಯವಿಲ್ಲ ನಿಜ. ಅದೇ ರೀತಿ, ಮಹಾ ಸಂಕಟ ಆರಂಭವಾಗುವ ಸಮಯದಲ್ಲಿ ನಾವೇನು ಮಾಡುತ್ತಿರುವೆವು ಎಂದು ನಮ್ಮಲ್ಲಿ ಯಾರೂ ಭವಿಷ್ಯ ಕೂಡ ಹೇಳಲಾರೆವು. ಕೆಲವರು ಕೆಲಸದ ಸ್ಥಳದಲ್ಲಿರಬಹುದು ಅಥವಾ ಮನೆಗೆಲಸದಲ್ಲಿ ನಿರತರಾಗಿರಬಹುದು. (ಮತ್ತಾ. 24:40, 41) ಆದರೆ, ಸಿದ್ಧರಾಗಿದ್ದೇವೆಂದು ತೋರಿಸುವುದು ಹೇಗೆ?
ಇಮ್ಯಾನ್ವೆಲ್, ಪತ್ನಿ ವಿಕ್ಟಾರಿನ್ ಮತ್ತು ಅವರ ಆರು ಪುತ್ರಿಯರು ಆಫ್ರಿಕ ದೇಶದ ಪ್ರದೇಶವೊಂದರಲ್ಲಿ ವಾಸವಿದ್ದಾರೆ. ಅವರಿರುವ ಆ ಸ್ಥಳದಲ್ಲಿ ಸೂಚನೆಯ ಭಾಗವಾಗಿರುವ ಎಲ್ಲ ಘಟನೆಗಳ ಪೂರ್ಣ ಬಿಸಿ ತಟ್ಟುವುದಿಲ್ಲ. ಹಾಗಾಗಿ ಅವರು ತಮ್ಮನ್ನು ಸಿದ್ಧವಾಗಿಟ್ಟುಕೊಳ್ಳಲು ಪ್ರತಿದಿನವೂ ಆಧ್ಯಾತ್ಮಿಕ ಚರ್ಚೆಗಳನ್ನು ನಡೆಸುತ್ತಾರೆ. ಇಮ್ಯಾನ್ವೆಲ್ ಮಾತನ್ನು ಕೇಳಿ: “ಎಲ್ಲರೂ ಚರ್ಚೆಗೆ ಒಟ್ಟುಸೇರುವಂಥ ಒಂದು ಸಮಯ ಕಂಡುಕೊಳ್ಳುವುದು ಕಷ್ಟವಾಗಿತ್ತು. ಆದ್ದರಿಂದ ಬೆಳಿಗ್ಗೆ ಆರರಿಂದ ಆರೂವರೆಯ ಅರ್ಧ ಗಂಟೆಯನ್ನು ನಾವು ಆಯ್ಕೆ ಮಾಡಿಕೊಂಡೆವು. ದಿನವಚನವನ್ನು ಚರ್ಚಿಸಿದ ಬಳಿಕ ನಾವು ಆ ವಾರದ ಕೂಟಗಳಲ್ಲಿ ಕಲಿಯಲಾಗುವ ಸಾಹಿತ್ಯವೊಂದರಿಂದ ಕೆಲವು ಪ್ಯಾರಗ್ರಾಫ್ಗಳನ್ನು ಅಧ್ಯಯನ ಮಾಡುತ್ತೇವೆ.” ಹೀಗೆ ಮಾಡಿದ್ದರಿಂದ ಎಚ್ಚರವಾಗಿರಲು ಅವರಿಗೆ ಸಾಧ್ಯವಾಯಿತಾ? ಖಂಡಿತ! ಇಮ್ಯಾನ್ವೆಲ್ ಹಿರಿಯರ ಮಂಡಲಿಯ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಕ್ಟಾರಿನ್ ಆಗಾಗ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುತ್ತಾರೆ ಮತ್ತು ಅನೇಕ ಜನರಿಗೆ ಸತ್ಯ ಸ್ವೀಕರಿಸಲು ನೆರವಾಗಿದ್ದಾರೆ. ಅವರ ಪುತ್ರಿಯರು ಉತ್ತಮ ರೀತಿಯಲ್ಲಿ ಆಧ್ಯಾತ್ಮಿಕ ಪ್ರಗತಿ ಮಾಡುತ್ತಿದ್ದಾರೆ.
“ನೋಡುತ್ತಾ ಇರಿ, ಎಚ್ಚರವಾಗಿ ಇರಿ” ಎಂದು ಯೇಸು ತಿಳಿಸಿದ್ದಾನೆ. (ಮಾರ್ಕ 13:33) ನಿಮ್ಮ ಗಮನ ಬೇರೆಡೆಗೆ ತಿರುಗಿ ಆಧ್ಯಾತ್ಮಿಕ ಜಾಗೃತಿ ಮಂದವಾಗದಂತೆ ನೋಡಿಕೊಳ್ಳಿ. ಆರಿಲ್ ಮಾಡಿದಂತೆ ನಮ್ಮ ಸಾಹಿತ್ಯದಲ್ಲಿರುವ ಮತ್ತು ಸಭಾ ಕೂಟಗಳಲ್ಲಿ ದೊರೆಯುವ ಸಲಹೆಗಳನ್ನು ಪಾಲಿಸಿ. ಇಮ್ಯಾನ್ವೆಲ್ ಕುಟುಂಬ ಮಾಡಿದಂತೆ ಪ್ರತಿದಿನ ಆಧ್ಯಾತ್ಮಿಕ ಚಟುವಟಿಕೆಯಲ್ಲಿ ಒಳಗೂಡಿ. ಹೀಗೆ ಸಿದ್ಧವಾಗಿದ್ದು “ಸದಾ ಎಚ್ಚರವಾಗಿರಿ.”
[ಪಾದಟಿಪ್ಪಣಿ]
a ಯೆಹೋವನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಲು ಶ್ರಮಿಸಿ ಜಯ ಸಾಧಿಸಿದ ಕ್ರೈಸ್ತ ಯುವಕನೊಬ್ಬನ ಕಥೆ. ಈ ಡಿವಿಡಿ ಕನ್ನಡದಲ್ಲಿ ಲಭ್ಯವಿಲ್ಲ.
[ಪುಟ 4ರಲ್ಲಿರುವ ಚಿತ್ರ]
ಪ್ರತಿದಿನದ ಆಧ್ಯಾತ್ಮಿಕ ಚರ್ಚೆ ಸದಾ ಸಿದ್ಧವಾಗಿರುವಂತೆ ಇಮ್ಯಾನ್ವೆಲ್ ಕುಟುಂಬಕ್ಕೆ ಸಹಾಯ ಮಾಡುತ್ತದೆ