ಭೂಮಿಯ ಮೇಲೆ ನಿತ್ಯಜೀವ —ಕ್ರಿಸ್ತನೂ ಕಲಿಸಿದ ನಿರೀಕ್ಷೆಯೋ?
“[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ.”—ಪ್ರಕ. 21:4.
1, 2. ಪ್ರಥಮ ಶತಮಾನದ ಅನೇಕ ಯೆಹೂದ್ಯರು ಭೂಮಿಯ ಮೇಲಿನ ನಿತ್ಯಜೀವವನ್ನು ನಿರೀಕ್ಷಿಸುತ್ತಿದ್ದರೆಂದು ನಮಗೆ ಹೇಗೆ ಗೊತ್ತು?
ಶ್ರೀಮಂತನೂ ಗಣ್ಯವ್ಯಕ್ತಿಯೂ ಆಗಿದ್ದ ಯೌವನಸ್ಥನೊಬ್ಬನು ಓಡುತ್ತಾ ಬಂದು ಯೇಸುವಿನೆದುರು ಮೊಣಕಾಲೂರಿ, “ಒಳ್ಳೇ ಬೋಧಕನೇ, ನಾನು ನಿತ್ಯಜೀವಕ್ಕೆ ಬಾಧ್ಯನಾಗಬೇಕಾದರೆ ಏನು ಮಾಡಬೇಕು?” ಎಂದು ಕೇಳಿದನು. (ಮಾರ್ಕ 10:17) ಆ ಯೌವನಸ್ಥನು ನಿತ್ಯಜೀವಕ್ಕೆ ಬಾಧ್ಯನಾಗುವುದರ ಕುರಿತು ಕೇಳುತ್ತಿದ್ದನು. ಆದರೆ ಅವನು ಕೇಳುತ್ತಿದ್ದದ್ದು ಸ್ವರ್ಗದಲ್ಲಿನ ನಿತ್ಯಜೀವದ ಕುರಿತೋ, ಭೂಮಿಯ ಮೇಲಿನ ನಿತ್ಯಜೀವದ ಕುರಿತೋ? ಹಿಂದಿನ ಲೇಖನದಲ್ಲಿ ಚರ್ಚಿಸಿದಂತೆ, ಶತಮಾನಗಳ ಹಿಂದೆಯೇ ದೇವರು ಯೆಹೂದ್ಯರಿಗೆ ಪುನರುತ್ಥಾನ ಮತ್ತು ಭೂಮಿಯ ಮೇಲಿನ ನಿತ್ಯಜೀವದ ನಿರೀಕ್ಷೆಯನ್ನು ಕೊಟ್ಟಿದ್ದನು. ಪ್ರಥಮ ಶತಮಾನದ ಅನೇಕ ಯೆಹೂದ್ಯರೂ ಆ ನಿರೀಕ್ಷೆಯಿಟ್ಟುಕೊಂಡಿದ್ದರು.
2 ಯೇಸುವಿನ ಸ್ನೇಹಿತೆ ಮಾರ್ಥಳು ಮೃತಪಟ್ಟ ತನ್ನ ತಮ್ಮನ ಕುರಿತು, “ಕಡೇ ದಿನದಲ್ಲಾಗುವ ಪುನರುತ್ಥಾನದಲ್ಲಿ ಅವನು ಎದ್ದುಬರುವನೆಂದು ನಾನು ಬಲ್ಲೆನು” ಎಂದು ಹೇಳಿದಾಗ ಖಂಡಿತವಾಗಿಯೂ ಭೂಮಿಯ ಮೇಲಿನ ಪುನರುತ್ಥಾನವು ಆಕೆಯ ಮನಸ್ಸಿನಲ್ಲಿ ಇದ್ದಿರಬೇಕು. (ಯೋಹಾ. 11:24) ಆ ಸಮಯದ ಸದ್ದುಕಾಯರು ಪುನರುತ್ಥಾನದಲ್ಲಿ ನಂಬಿಕೆಯಿಡುತ್ತಿರಲಿಲ್ಲ ಎಂಬುದು ನಿಜ. (ಮಾರ್ಕ 12:18) ಹಾಗಿದ್ದರೂ, ಕ್ರೈಸ್ತ ಶಕದ ಆರಂಭದ ಶತಮಾನದಲ್ಲಿ ಯೆಹೂದಿಮತ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ಜಾರ್ಜ್ ಫುಟ್ ಮೂರ್ ಎಂಬವರು ಹೇಳಿದ್ದು: ‘ಲೋಕ ಇತಿಹಾಸದಲ್ಲಿ ಬದಲಾವಣೆಯಾಗುವುದೆಂದು ನಿರೀಕ್ಷಿಸಲಾದ ಸಮಯದಲ್ಲಿ, ಈ ಹಿಂದೆ ಮೃತಪಟ್ಟವರೆಲ್ಲರೂ ಪುನರುತ್ಥಾನಗೊಂಡು ಭೂಮಿಯ ಮೇಲೆ ಜೀವಿಸುವರು ಎಂಬ ನಂಬಿಕೆ ಅನೇಕರಲ್ಲಿ ಇತ್ತೆಂಬುದನ್ನು ಸಾ.ಶ.ಪೂ. ಎರಡನೇ ಅಥವಾ ಒಂದನೇ ಶತಮಾನದ ಬರವಣಿಗೆಗಳು ದೃಢೀಕರಿಸುತ್ತವೆ.’ ಯೇಸುವನ್ನು ಸಮೀಪಿಸಿದ ಆ ಶ್ರೀಮಂತ ಯೌವನಸ್ಥನು ನಿತ್ಯಜೀವವನ್ನು ಪಡೆಯಲಿಚ್ಚಿಸಿದ್ದು ಭೂಮಿಯ ಮೇಲೆಯೇ.
3. ಈ ಲೇಖನದಲ್ಲಿ ಯಾವ ಪ್ರಶ್ನೆಗಳನ್ನು ಪರಿಗಣಿಸಲಾಗುವುದು?
3 ಇಂದು ಅನೇಕ ಧರ್ಮಗಳವರು ಮತ್ತು ಬೈಬಲ್ ವಿದ್ವಾಂಸರು, ಭೂಮಿಯ ಮೇಲಿನ ನಿತ್ಯಜೀವದ ನಿರೀಕ್ಷೆಯ ಕುರಿತು ಯೇಸು ಬೋಧಿಸಲಿಲ್ಲ ಎಂದು ಹೇಳುತ್ತಾರೆ. ಅಧಿಕಾಂಶ ಜನರು ತಾವು ಮರಣಾನಂತರ ಆತ್ಮಲೋಕದಲ್ಲಿ ಜೀವಿಸುವೆವೆಂದು ನಂಬುತ್ತಾರೆ. ಆದ್ದರಿಂದ ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳಲ್ಲಿ “ನಿತ್ಯಜೀವ” ಎಂಬ ಅಭಿವ್ಯಕ್ತಿಯನ್ನು ಓದುವಾಗೆಲ್ಲಾ ಅದು ಸ್ವರ್ಗದಲ್ಲಿನ ಜೀವನಕ್ಕೆ ಸೂಚಿಸುತ್ತದೆಂದು ಅನೇಕರು ಭಾವಿಸುತ್ತಾರೆ. ಆದರೆ ಇದು ನಿಜವೋ? ನಿತ್ಯಜೀವದ ಕುರಿತು ಯೇಸು ಮಾತಾಡಿದಾಗ ಅದರ ಅರ್ಥವೇನಾಗಿತ್ತು? ಅವನ ಶಿಷ್ಯರ ನಂಬಿಕೆ ಏನಾಗಿತ್ತು? ಭೂಮಿಯ ಮೇಲಿನ ನಿತ್ಯಜೀವದ ನಿರೀಕ್ಷೆಯ ಕುರಿತು ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳು ಬೋಧಿಸುತ್ತವೋ?
“ಹೊಸ ಸೃಷ್ಟಿಯಲ್ಲಿ” ನಿತ್ಯಜೀವ
4. “ಹೊಸ ಸೃಷ್ಟಿಯಲ್ಲಿ” ಯಾವೆಲ್ಲಾ ಸಂಗತಿಗಳು ನಡೆಯಲಿಕ್ಕಿವೆ?
4 ಅಭಿಷಿಕ್ತ ಕ್ರೈಸ್ತರು ಪುನರುತ್ಥಾನಗೊಂಡು ಸ್ವರ್ಗದಿಂದ ಭೂಮಿಯ ಮೇಲೆ ಆಳುವರೆಂದು ಬೈಬಲ್ ಬೋಧಿಸುತ್ತದೆ. (ಲೂಕ 12:32; ಪ್ರಕ. 5:9, 10; 14:1-3) ಆದರೆ ನಿತ್ಯಜೀವದ ಕುರಿತು ಮಾತಾಡಿದಾಗೆಲ್ಲಾ ಯೇಸುವಿನ ಮನಸ್ಸಿನಲ್ಲಿ ಆ ಗುಂಪು ಮಾತ್ರ ಇರಲಿಲ್ಲ. ತನ್ನ ಸಂಪತ್ತನ್ನೆಲ್ಲಾ ಬಿಟ್ಟು ಕ್ರಿಸ್ತನ ಹಿಂಬಾಲಕನಾಗುವಂತೆ ಸಿಕ್ಕಿದ ಆಮಂತ್ರಣವನ್ನು ಆ ಶ್ರೀಮಂತ ಯೌವನಸ್ಥನು ನಿರಾಕರಿಸಿ ಹೊರಟುಹೋದ ಬಳಿಕ ಯೇಸು ತನ್ನ ಶಿಷ್ಯರಿಗೆ ಏನು ಹೇಳಿದನೆಂಬುದನ್ನು ಪರಿಗಣಿಸಿ. (ಮತ್ತಾಯ 19:28, 29 ಓದಿ.) ‘ಇಸ್ರಾಯೇಲಿನ ಹನ್ನೆರಡು ಕುಲಗಳ’ ಮೇಲೆ ಅಂದರೆ ಸ್ವರ್ಗದಲ್ಲಿ ಆಳುವ ವರ್ಗದವರನ್ನು ಬಿಟ್ಟು ಉಳಿದ ಮಾನವಕುಲದ ಮೇಲೆ ತನ್ನ ಅಪೊಸ್ತಲರು ಆಳುವರು ಹಾಗೂ ನ್ಯಾಯತೀರಿಸುವರೆಂದು ಯೇಸು ಹೇಳಿದನು. (1 ಕೊರಿಂ. 6:2) ತನ್ನನ್ನು ಹಿಂಬಾಲಿಸುವ “ಪ್ರತಿಯೊಬ್ಬನಿಗೂ” ಸಿಗುವ ಬಹುಮಾನದ ಕುರಿತು ಸಹ ಯೇಸು ಮಾತಾಡಿದನು. ಅಂಥವರು ಕೂಡ ‘ನಿತ್ಯಜೀವಕ್ಕೆ ಬಾಧ್ಯರಾಗುವರು.’ ಈ ಎಲ್ಲಾ ಸಂಗತಿಗಳು “ಹೊಸ ಸೃಷ್ಟಿಯಲ್ಲಿ” ನಡೆಯಲಿರುವವು.
5. “ಹೊಸ ಸೃಷ್ಟಿ” ಎಂದರೇನು? ವಿವರಿಸಿ.
5 ಯೇಸು ಹೇಳಿದ “ಹೊಸ ಸೃಷ್ಟಿಯ” ಅರ್ಥವೇನು? ದ ಬೈಬಲ್—ಆ್ಯನ್ ಅಮೆರಿಕನ್ ಟ್ರಾನ್ಸ್ಲೇಶನ್ನಲ್ಲಿ ಈ ಪದವನ್ನು “ನೂತನ ಲೋಕ” ಎಂದು ಭಾಷಾಂತರಿಸಲಾಗಿದೆ. ದ ಜೆರುಸಲೇಮ್ ಬೈಬಲ್ನಲ್ಲಿ ಈ ಪದವನ್ನು, “ಎಲ್ಲವೂ ನೂತನಗೊಳಿಸಲ್ಪಟ್ಟಾಗ” ಎಂದೂ, ದ ಹೋಲಿ ಬೈಬಲ್—ನ್ಯೂ ಇಂಟರ್ನ್ಯಾಷನಲ್ ವರ್ಷನ್ನಲ್ಲಿ “ಎಲ್ಲದರ ನವೀಕರಣ” ಎಂದೂ ಭಾಷಾಂತರಿಸಲಾಗಿದೆ. ಯೇಸು ಯಾವುದೇ ಅರ್ಥವಿವರಣೆ ಕೊಡದೆ ಈ ಪದವನ್ನು ಬಳಸಿದ್ದರಿಂದ, ಶತಮಾನಗಳಿಂದ ಯೆಹೂದ್ಯರ ನಿರೀಕ್ಷೆ ಏನಾಗಿತ್ತೋ ಅದಕ್ಕೆ ಸೂಚಿಸಿಯೇ ಮಾತಾಡಿರಬೇಕು. ಆದಾಮ ಹವ್ವರು ಪಾಪ ಮಾಡುವ ಮೊದಲು ಏದೆನ್ ತೋಟದಲ್ಲಿ ಯಾವ ಪರಿಸ್ಥಿತಿಯಿತ್ತೋ ಅಂಥ ಪರಿಸ್ಥಿತಿಯಿರಲಿಕ್ಕಾಗಿ, ಭೂಮಿಯ ಮೇಲಿನ ಪರಿಸ್ಥಿತಿಗಳ ಹೊಸ ಸೃಷ್ಟಿಯಾಗಲಿದೆಯೆಂದು ಅವರು ನಂಬುತ್ತಿದ್ದರು. ‘ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಸೃಷ್ಟಿಸುವ’ ದೇವರ ವಾಗ್ದಾನವನ್ನು ಈ ಹೊಸ ಸೃಷ್ಟಿಯು ನೆರವೇರಿಸುವುದು.—ಯೆಶಾ. 65:17.
6. ಕುರಿ ಮತ್ತು ಆಡುಗಳ ದೃಷ್ಟಾಂತವು, ನಿತ್ಯಜೀವದ ನಿರೀಕ್ಷೆಯ ಕುರಿತು ನಮಗೇನನ್ನು ಬೋಧಿಸುತ್ತದೆ?
6 ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಕುರಿತು ಮಾತಾಡುತ್ತಿದ್ದಾಗ ಯೇಸು ಮತ್ತೆ ನಿತ್ಯಜೀವದ ಬಗ್ಗೆ ಪ್ರಸ್ತಾಪಿಸಿದನು. (ಮತ್ತಾ. 24:1-3) ಅವನಂದದ್ದು: “ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಎಲ್ಲ ದೂತರೊಡನೆ ಕೂಡಿಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಳ್ಳುವನು. ಆಗ ಎಲ್ಲ ಜನಾಂಗಗಳವರು ಅವನ ಮುಂದೆ ಒಟ್ಟುಗೂಡಿಸಲ್ಪಡುವರು ಮತ್ತು ಒಬ್ಬ ಕುರುಬನು ಕುರಿಗಳನ್ನು ಆಡುಗಳಿಂದ ಪ್ರತ್ಯೇಕಿಸುವಂತೆಯೇ ಅವನು ಜನರನ್ನು ಪ್ರತ್ಯೇಕಿಸುವನು.” ಪ್ರತಿಕೂಲ ತೀರ್ಪನ್ನು ಹೊಂದುವವರು “ನಿತ್ಯಛೇದನಕ್ಕೆ ಹೋಗುವರು, ಆದರೆ ನೀತಿವಂತರು ನಿತ್ಯಜೀವಕ್ಕೆ ಹೋಗುವರು.” ನಿತ್ಯಜೀವವನ್ನು ಪಡೆಯುವ “ನೀತಿವಂತರು” ಕ್ರಿಸ್ತನ ಆತ್ಮಾಭಿಷಿಕ್ತ ‘ಸಹೋದರರನ್ನು’ ನಿಷ್ಠೆಯಿಂದ ಬೆಂಬಲಿಸುವವರಾಗಿದ್ದಾರೆ. (ಮತ್ತಾ. 25:31-34, 40, 41, 45, 46) ಅಭಿಷಿಕ್ತರನ್ನು ಸ್ವರ್ಗೀಯ ರಾಜ್ಯದಲ್ಲಿ ಆಳಲು ಆಯ್ಕೆಮಾಡಲಾಗಿರುವ ಕಾರಣ, ಅಲ್ಲಿ ತಿಳಿಸಲಾಗಿರುವ “ನೀತಿವಂತರು” ಆ ರಾಜ್ಯದ ಭೂಪ್ರಜೆಗಳಾಗಿರಲೇಬೇಕು. ‘[ಯೆಹೋವನಿಂದ ನೇಮಿತನಾದ ರಾಜನಿಗೆ] ಸಮುದ್ರದಿಂದ ಸಮುದ್ರದ ವರೆಗೂ ನದಿಯಿಂದ ಭೂಮಿಯ ಕಟ್ಟಕಡೆಯ ವರೆಗೂ ಪ್ರಜೆಗಳು’ ಇರುವರೆಂದು ಬೈಬಲ್ ಮುಂತಿಳಿಸಿತ್ತು. (ಕೀರ್ತ. 72:8, NW) ಈ ಪ್ರಜೆಗಳು ಭೂಮಿಯ ಮೇಲೆ ನಿತ್ಯಜೀವವನ್ನು ಆನಂದಿಸುವರು.
ಯೋಹಾನನು ಬರೆದ ಸುವಾರ್ತೆ ಏನನ್ನುತ್ತದೆ?
7, 8. ಯಾವ ಎರಡು ನಿರೀಕ್ಷೆಗಳ ಕುರಿತು ಯೇಸು ನಿಕೊದೇಮನ ಬಳಿ ಮಾತಾಡಿದನು?
7 ಮತ್ತಾಯ, ಮಾರ್ಕ ಮತ್ತು ಲೂಕನ ಸುವಾರ್ತೆಗಳಲ್ಲಿ ದಾಖಲಾಗಿರುವಂತೆ ಈಗಾಗಲೇ ತಿಳಿಸಲಾಗಿರುವ ಸಂದರ್ಭಗಳಲ್ಲಿ ಯೇಸು “ನಿತ್ಯಜೀವ” ಎಂಬ ಪದವನ್ನು ಉಪಯೋಗಿಸಿದನು. ಸದಾಕಾಲದ ಜೀವನದ ಕುರಿತ ಯೇಸುವಿನ ಮಾತುಗಳನ್ನು ಯೋಹಾನನು ಬರೆದ ಸುವಾರ್ತೆಯಲ್ಲಿ ಸುಮಾರು 17 ಬಾರಿ ಉಲ್ಲೇಖಿಸಲಾಗಿದೆ. ಭೂಮಿಯ ಮೇಲಿನ ನಿತ್ಯಜೀವದ ನಿರೀಕ್ಷೆಯ ಕುರಿತು ಯೇಸು ಏನು ಹೇಳಿದನೆಂಬುದನ್ನು ನೋಡಲು, ಆ ಸಂದರ್ಭಗಳಲ್ಲಿ ಕೆಲವೊಂದನ್ನು ನಾವೀಗ ಪರಿಶೀಲಿಸೋಣ.
8 ಯೋಹಾನನಿಗನುಸಾರ ಯೇಸು ಮೊದಲ ಬಾರಿ ನಿತ್ಯಜೀವದ ಕುರಿತು ಮಾತಾಡಿದ್ದು ನಿಕೊದೇಮನೆಂಬ ಫರಿಸಾಯನ ಬಳಿ. ಅವನು ನಿಕೊದೇಮನಿಗೆ ಅಂದದ್ದು: “ಒಬ್ಬನು ನೀರಿನಿಂದಲೂ ಪವಿತ್ರಾತ್ಮದಿಂದಲೂ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ಪ್ರವೇಶಿಸಲು ಸಾಧ್ಯವಿಲ್ಲ.” ಸ್ವರ್ಗದ ರಾಜ್ಯವನ್ನು ಪ್ರವೇಶಿಸುವ ಪ್ರತಿಯೊಬ್ಬನೂ ‘ಪುನಃ ಹುಟ್ಟಲೇ’ ಬೇಕು. (ಯೋಹಾ. 3:3-5) ಆದರೆ ಯೇಸು ಅಷ್ಟನ್ನು ಹೇಳಿ ಸುಮ್ಮನಾಗಲಿಲ್ಲ. ಅವನು ಮುಂದುವರಿಸಿ, ಇಡೀ ಲೋಕದ ಮುಂದಿರುವ ನಿರೀಕ್ಷೆಯ ಕುರಿತು ಮಾತಾಡಿದನು. (ಯೋಹಾನ 3:16 ಓದಿ.) ಅಭಿಷಿಕ್ತ ಹಿಂಬಾಲಕರಿಗೆ ಸ್ವರ್ಗದಲ್ಲಿ ಹಾಗೂ ಇತರರಿಗೆ ಭೂಮಿಯಲ್ಲಿ ಇರುವ ನಿತ್ಯಜೀವದ ನಿರೀಕ್ಷೆಗೆ ಸೂಚಿಸಿ ಯೇಸು ಮಾತಾಡುತ್ತಿದ್ದನು.
9. ಯೇಸು ಸಮಾರ್ಯದ ಸ್ತ್ರೀಯೊಂದಿಗೆ ಯಾವ ನಿರೀಕ್ಷೆಯ ಕುರಿತು ಮಾತಾಡಿದನು?
9 ಯೆರೂಸಲೇಮಿನಲ್ಲಿ ನಿಕೊದೇಮನೊಂದಿಗೆ ಮಾತಾಡಿದ ಬಳಿಕ ಯೇಸು ಉತ್ತರದಲ್ಲಿದ್ದ ಗಲಿಲಾಯದ ಕಡೆಗೆ ಪ್ರಯಾಣ ಬೆಳೆಸುತ್ತಾನೆ. ಮಾರ್ಗದಲ್ಲಿ ಅವನು, ಸಮಾರ್ಯದ ಸಿಖರ್ ಎಂಬ ಪಟ್ಟಣದ ಹತ್ತಿರ ಯಾಕೋಬನ ಬಾವಿಯ ಬಳಿ ಒಬ್ಬ ಮಹಿಳೆಯನ್ನು ಭೇಟಿಮಾಡುತ್ತಾನೆ. ಅವನು ಆಕೆಗೆ, “ನಾನು ಕೊಡುವ ನೀರನ್ನು ಕುಡಿಯುವ ಯಾವನಿಗೂ ಎಂದಿಗೂ ಬಾಯಾರಿಕೆಯಾಗುವುದಿಲ್ಲ; ನಾನು ಅವನಿಗೆ ಕೊಡುವ ನೀರು ಅವನಲ್ಲಿ ನಿತ್ಯಜೀವವನ್ನು ಕೊಡಲಿಕ್ಕಾಗಿ ಗುಳುಗುಳಿಸುವ ನೀರಿನ ಬುಗ್ಗೆಯಾಗುವುದು” ಎಂದು ಹೇಳಿದನು. (ಯೋಹಾ. 4:5, 6, 14) ಈ ನೀರು, ಭೂಮಿಯ ಮೇಲೆ ಜೀವಿಸಲಿಕ್ಕಿರುವವರನ್ನೂ ಸೇರಿಸಿ ಸಕಲ ಮಾನವಕುಲಕ್ಕೆ ನಿತ್ಯಜೀವವನ್ನು ಪುನಃ ಕೊಡಲು ದೇವರು ಮಾಡಿರುವ ಏರ್ಪಾಡುಗಳನ್ನು ಸೂಚಿಸುತ್ತದೆ. ಪ್ರಕಟನೆ ಪುಸ್ತಕದಲ್ಲಿ ಸ್ವತಃ ದೇವರು ಹೀಗೆ ಹೇಳುತ್ತಿರುವುದಾಗಿ ವರ್ಣಿಸಲಾಗಿದೆ: “ದಾಹಪಡುತ್ತಿರುವ ಯಾವನಿಗೂ ನಾನು ಜೀವಜಲದ ಬುಗ್ಗೆಯಿಂದ ಉಚಿತವಾಗಿ ಕೊಡುವೆನು.” (ಪ್ರಕ. 21:5, 6; 22:17) ಹೀಗೆ ಯೇಸು ಸಮಾರ್ಯದ ಸ್ತ್ರೀಯೊಂದಿಗೆ, ರಾಜ್ಯದ ಅಭಿಷಿಕ್ತ ವಾರಸುದಾರರಿಗೆ ಮಾತ್ರವಲ್ಲ ಭೂನಿರೀಕ್ಷೆಯಲ್ಲಿ ನಂಬಿಕೆಯಿಟ್ಟಿರುವ ಮಾನವರಿಗೂ ಸಿಗುವ ನಿತ್ಯಜೀವದ ಕುರಿತು ಮಾತಾಡಿದನು.
10. ಬೇತ್ಸಥಾ ಕೊಳದ ಬಳಿ ಒಬ್ಬನನ್ನು ಗುಣಪಡಿಸಿದ ಬಳಿಕ, ಯೇಸು ಧಾರ್ಮಿಕ ವಿರೋಧಿಗಳಿಗೆ ನಿತ್ಯಜೀವದ ಕುರಿತು ಏನು ಹೇಳಿದನು?
10 ಅದಾದ ಮುಂದಿನ ವರ್ಷ ಯೇಸು ಪುನಃ ಯೆರೂಸಲೇಮಿನಲ್ಲಿದ್ದನು. ಅಲ್ಲಿ ಅವನು ಬೇತ್ಸಥಾ ಕೊಳದ ಬಳಿ ಒಬ್ಬ ರೋಗಿಯನ್ನು ಗುಣಪಡಿಸಿದನು. ಇದನ್ನು ಟೀಕಿಸಿದ ಯೆಹೂದ್ಯರಿಗೆ ಯೇಸು ವಿವರಿಸಿದ್ದು: “ತಂದೆಯು ಮಾಡುವುದನ್ನು ಕಂಡು ಮಗನು ಮಾಡುತ್ತಾನೆಯೇ ಹೊರತು ಸ್ವಪ್ರೇರಣೆಯಿಂದ ಒಂದೇ ಒಂದು ವಿಷಯವನ್ನೂ ಮಾಡಲಾರನು.” ತಂದೆಯು ‘ನ್ಯಾಯತೀರ್ಪಿನ ಕೆಲಸವನ್ನೆಲ್ಲ ಮಗನಿಗೆ ಒಪ್ಪಿಸಿದ್ದಾನೆ’ ಎಂದು ಅವರಿಗೆ ಹೇಳಿದ ಬಳಿಕ ಯೇಸುವಂದದ್ದು: “ನನ್ನ ವಾಕ್ಯವನ್ನು ಕೇಳಿಸಿಕೊಂಡು ನನ್ನನ್ನು ಕಳುಹಿಸಿದಾತನನ್ನು ನಂಬುವವನಿಗೆ ನಿತ್ಯಜೀವವಿದೆ.” ಯೇಸು ಇನ್ನೂ ಕೂಡಿಸಿ ಹೇಳಿದ್ದು: “ಸ್ಮರಣೆಯ ಸಮಾಧಿಗಳಲ್ಲಿ ಇರುವವರೆಲ್ಲರೂ [ಮನುಷ್ಯ ಕುಮಾರನ] ಸ್ವರವನ್ನು ಕೇಳಿ ಹೊರಗೆ ಬರುವ ಕಾಲ ಬರುತ್ತದೆ; ಒಳ್ಳೇದನ್ನು ಮಾಡಿದವರು ಜೀವಕ್ಕಾಗಿ ಪುನರುತ್ಥಾನವನ್ನು ಹೊಂದುವರು, ದುಷ್ಕೃತ್ಯಗಳನ್ನು ನಡೆಸಿದವರು ನ್ಯಾಯತೀರ್ಪಿಗಾಗಿ ಪುನರುತ್ಥಾನವನ್ನು ಹೊಂದುವರು.” (ಯೋಹಾ. 5:1-9, 19, 22, 24-29) ಇಲ್ಲಿ ಯೇಸು, ಭೂಮಿಯ ಮೇಲಿನ ನಿತ್ಯಜೀವದ ಕುರಿತಾದ ಯೆಹೂದ್ಯರ ನಿರೀಕ್ಷೆಯನ್ನು ನೆರವೇರಿಸಲು ದೇವರಿಂದ ನೇಮಿಸಲ್ಪಟ್ಟವನು ತಾನೇ ಮತ್ತು ಸತ್ತವರನ್ನು ಎಬ್ಬಿಸುವ ಮೂಲಕ ಇದನ್ನು ಮಾಡುವೆನೆಂದು ಹಿಂಸಿಸುತ್ತಿದ್ದ ಆ ಯೆಹೂದ್ಯರಿಗೆ ಹೇಳುತ್ತಿದ್ದನು.
11. ಯೋಹಾನ 6:48-51ರಲ್ಲಿ ದಾಖಲಾಗಿರುವ ಯೇಸುವಿನ ಮಾತುಗಳಲ್ಲಿ, ಭೂಮಿಯ ಮೇಲಿನ ನಿತ್ಯಜೀವದ ನಿರೀಕ್ಷೆಯೂ ಒಳಗೂಡಿದೆಯೆಂದು ನಮಗೆ ಹೇಗೆ ತಿಳಿದಿದೆ?
11 ಗಲಿಲಾಯದಲ್ಲಿ ತಮಗೆ ಅಗತ್ಯವಿದ್ದ ರೊಟ್ಟಿಯನ್ನು ಅದ್ಭುತಕರವಾಗಿ ಒದಗಿಸಿದ ಯೇಸುವನ್ನು ಸಾವಿರಾರು ಜನರು ಹಿಂಬಾಲಿಸಲಾರಂಭಿಸಿದರು. ಯೇಸು ಅವರೊಂದಿಗೆ, “ಜೀವದ ರೊಟ್ಟಿ” ಎಂಬ ಮತ್ತೊಂದು ತರಹದ ರೊಟ್ಟಿಯ ಕುರಿತು ಮಾತಾಡಿದನು. (ಯೋಹಾನ 6:40, 48-51 ಓದಿ.) “ನಾನು ಕೊಡಲಿರುವ ರೊಟ್ಟಿಯು ನನ್ನ ಮಾಂಸವೇ ಆಗಿದೆ” ಎಂದು ಅವನು ಹೇಳಿದನು. ಯೇಸು ತನ್ನ ಪ್ರಾಣವನ್ನು ತನ್ನೊಟ್ಟಿಗೆ ಸ್ವರ್ಗೀಯ ರಾಜ್ಯದಲ್ಲಿ ಆಳುವವರಿಗಾಗಿ ಮಾತ್ರ ಕೊಡದೇ, ವಿಮೋಚಿಸಸಾಧ್ಯವಿರುವ ಮಾನವಕುಲವೆಂಬ “ಲೋಕದ ಜೀವಕ್ಕಾಗಿ” ಸಹ ಕೊಟ್ಟನು. “ಈ ರೊಟ್ಟಿಯನ್ನು ಯಾವನಾದರೂ ತಿಂದರೆ,” ಅಂದರೆ ಯೇಸುವಿನ ಯಜ್ಞಕ್ಕಿರುವ ವಿಮೋಚನಾ ಸಾಮರ್ಥ್ಯದ ಮೇಲೆ ನಂಬಿಕೆಯನ್ನಿಟ್ಟರೆ ಅವನಿಗೆ ನಿತ್ಯಜೀವದ ನಿರೀಕ್ಷೆಯು ಲಭಿಸುತ್ತದೆ. ‘ಸದಾಕಾಲ ಬದುಕುವುದರ’ ಕುರಿತ ಯೇಸುವಿನ ಮಾತುಗಳಲ್ಲಿ, ಮೆಸ್ಸೀಯನ ಆಳ್ವಿಕೆಯಡಿಯಲ್ಲಿ ಭೂಮಿಯ ಮೇಲಿನ ನಿತ್ಯಜೀವದ ಕುರಿತು ಯೆಹೂದ್ಯರ ದೀರ್ಘಕಾಲದ ನಿರೀಕ್ಷೆಯೂ ಒಳಗೂಡಿತ್ತೆಂಬುದರಲ್ಲಿ ಯಾವುದೇ ಸಂದೇಹವಿಲ್ಲ.
12. ‘ನನ್ನ ಕುರಿಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ’ ಎಂದು ಯೇಸು ವಿರೋಧಿಗಳಿಗೆ ಹೇಳಿದಾಗ ಯಾವ ನಿರೀಕ್ಷೆಗೆ ಸೂಚಿಸುತ್ತಿದ್ದನು?
12 ಕಾಲಾನಂತರ, ಯೆರೂಸಲೇಮಿನಲ್ಲಿ ಪ್ರತಿಷ್ಠಾಪನೆಯ ಹಬ್ಬದಂದು ಯೇಸು ತನ್ನ ವಿರೋಧಿಗಳಿಗೆ ಹೇಳಿದ್ದು: “ನೀವು ನನ್ನ ಕುರಿಗಳಲ್ಲದೇ ಇರುವ ಕಾರಣ ನಂಬುತ್ತಿಲ್ಲ. ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ; ನಾನು ಅವುಗಳನ್ನು ತಿಳಿದಿದ್ದೇನೆ ಮತ್ತು ಅವು ನನ್ನ ಹಿಂದೆ ಬರುತ್ತವೆ. ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ.” (ಯೋಹಾ. 10:26-28) ಯೇಸು ಇಲ್ಲಿ, ಸ್ವರ್ಗದಲ್ಲಿನ ಜೀವನದ ಕುರಿತು ಮಾತ್ರ ಮಾತಾಡುತ್ತಿದ್ದನೋ ಅಥವಾ ಭೂಪರದೈಸಿನಲ್ಲಿನ ನಿತ್ಯಜೀವವೂ ಅವನ ಮನಸ್ಸಿನಲ್ಲಿತ್ತೋ? ಯೇಸು ತನ್ನ ಶಿಷ್ಯರನ್ನು ಸ್ವಲ್ಪ ಸಮಯದ ಹಿಂದೆಯಷ್ಟೇ, “ಚಿಕ್ಕ ಹಿಂಡೇ, ಭಯಪಡಬೇಡ, ಏಕೆಂದರೆ ನಿಮಗೆ ರಾಜ್ಯವನ್ನು ಕೊಡುವುದಕ್ಕೆ ನಿಮ್ಮ ತಂದೆಯು ಒಪ್ಪಿಗೆ ಕೊಟ್ಟಿದ್ದಾನೆ” ಎಂಬ ಮಾತುಗಳಿಂದ ಸಂತೈಸಿದ್ದನು. (ಲೂಕ 12:32) ಆದರೂ, ಇದೇ ಪ್ರತಿಷ್ಠಾಪನೆಯ ಹಬ್ಬದಂದು ಯೇಸು ಹೀಗೂ ಹೇಳಿದ್ದನು: “ಇದಲ್ಲದೆ ಈ ಹಟ್ಟಿಗೆ ಸೇರದಿರುವ ಬೇರೆ ಕುರಿಗಳೂ ನನಗಿವೆ; ಅವುಗಳನ್ನೂ ನಾನು ತರಬೇಕು.” (ಯೋಹಾ. 10:16) ಹಾಗಾಗಿ ಯೇಸು ತನ್ನ ವಿರೋಧಿಗಳೊಂದಿಗೆ ಮಾತಾಡಿದಾಗ ತನ್ನ ಮಾತುಗಳಲ್ಲಿ, ‘ಚಿಕ್ಕ ಹಿಂಡಿನ’ ಸ್ವರ್ಗೀಯ ಜೀವನದ ನಿರೀಕ್ಷೆ ಹಾಗೂ ಲಕ್ಷಾಂತರ ‘ಬೇರೆ ಕುರಿಗಳ’ ಭೂಮಿಯ ಮೇಲಿನ ನಿತ್ಯಜೀವದ ನಿರೀಕ್ಷೆಯನ್ನು ಒಳಗೂಡಿಸಿದ್ದನು.
ವಿವರಣೆಯ ಅಗತ್ಯವಿಲ್ಲದ ನಿರೀಕ್ಷೆ
13. “ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ” ಎಂದು ಯೇಸು ಹೇಳಿದ್ದರ ಅರ್ಥವೇನಾಗಿತ್ತು?
13 ಯೇಸು ಯಾತನಾ ಕಂಬದ ಮೇಲೆ ಕಡುನೋವನ್ನು ಅನುಭವಿಸುತ್ತಿದ್ದಾಗಲೂ ಮಾನವಕುಲದ ನಿರೀಕ್ಷೆಯನ್ನು ಅಲ್ಲಗಳೆಯಲಾಗದ ರೀತಿಯಲ್ಲಿ ದೃಢೀಕರಿಸಿದನು. ಅವನ ಪಕ್ಕದಲ್ಲಿ ತೂಗಹಾಕಲ್ಪಟ್ಟಿದ್ದ ದುಷ್ಕರ್ಮಿಯೊಬ್ಬನು, “ಯೇಸುವೇ, ನೀನು ನಿನ್ನ ರಾಜ್ಯದಲ್ಲಿ ಬರುವಾಗ ನನ್ನನ್ನು ಜ್ಞಾಪಿಸಿಕೋ” ಎಂದು ಹೇಳಿದನು. ಯೇಸು ಅವನಿಗೆ, “ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ ಎಂದು ಈಹೊತ್ತೇ ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ” ಎಂದು ಮಾತುಕೊಟ್ಟನು. (ಲೂಕ 23:42, 43) ಬಹುಶಃ ಅವನೊಬ್ಬ ಯೆಹೂದ್ಯನಾಗಿದ್ದರಿಂದ ಅವನಿಗೆ ಪರದೈಸಿನ ಕುರಿತು ಯಾವುದೇ ವಿವರಣೆ ಅಗತ್ಯವಿರಲಿಲ್ಲ. ಭವಿಷ್ಯದಲ್ಲಿ ಭೂಮಿಯ ಮೇಲೆ ದೊರೆಯಲಿದ್ದ ನಿತ್ಯಜೀವದ ನಿರೀಕ್ಷೆಯ ಕುರಿತು ಅವನಿಗೆ ತಿಳಿದಿತ್ತು.
14. (ಎ) ಸ್ವರ್ಗೀಯ ನಿರೀಕ್ಷೆಯ ಕುರಿತಾದ ಯೇಸುವಿನ ಪ್ರಸ್ತಾಪನೆಯನ್ನು ಅರ್ಥಮಾಡಿಕೊಳ್ಳಲು ಅಪೊಸ್ತಲರಿಗೆ ಕಷ್ಟವಾಯಿತೆಂದು ಯಾವುದು ತೋರಿಸುತ್ತದೆ? (ಬಿ) ಯೇಸುವಿನ ಹಿಂಬಾಲಕರು ಸ್ವರ್ಗೀಯ ನಿರೀಕ್ಷೆಯ ಅರ್ಥವನ್ನು ಯಾವಾಗ ಸ್ಪಷ್ಟವಾಗಿ ಗ್ರಹಿಸಿದರು?
14 ಹಾಗಾದರೆ ಯಾವುದಕ್ಕೆ ವಿವರಣೆ ಅಗತ್ಯವಿತ್ತು? ಸ್ವರ್ಗೀಯ ನಿರೀಕ್ಷೆಯ ಕುರಿತಾದ ಯೇಸುವಿನ ಪ್ರಸ್ತಾಪನೆಗೇ. ಶಿಷ್ಯರಿಗೋಸ್ಕರ ಸ್ಥಳವನ್ನು ಸಿದ್ಧಪಡಿಸಲು ಸ್ವರ್ಗಕ್ಕೆ ಹೋಗುವುದಾಗಿ ಯೇಸು ಹೇಳಿದಾಗ, ಅವರಿಗೆ ಅದರರ್ಥ ತಿಳಿಯಲಿಲ್ಲ. (ಯೋಹಾನ 14:2-5 ಓದಿ.) ತದನಂತರ ಅವನು ಅವರಿಗೆ ಹೇಳಿದ್ದು: “ನಾನು ನಿಮಗೆ ಇನ್ನೂ ಅನೇಕ ವಿಷಯಗಳನ್ನು ಹೇಳಲಿಕ್ಕಿದೆ, ಆದರೆ ಸದ್ಯಕ್ಕೆ ನೀವು ಅವುಗಳನ್ನು ಸಹಿಸಿಕೊಳ್ಳಲಾರಿರಿ. ಆದರೂ ಆ ಒಬ್ಬನು, ಸತ್ಯದ ಪವಿತ್ರಾತ್ಮ ಬರುವಾಗ ಅವನು ನಿಮ್ಮನ್ನು ಮಾರ್ಗದರ್ಶಿಸಿ ನೀವು ಸತ್ಯವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವಂತೆ ನಿಮಗೆ ಸಹಾಯಮಾಡುವನು.” (ಯೋಹಾ. 16:12, 13) ಸಾ.ಶ. 33ರ ಪಂಚಾಶತ್ತಮದ ನಂತರ ಅಂದರೆ ಭಾವೀ ರಾಜರಾಗಲು ಯೇಸುವಿನ ಹಿಂಬಾಲಕರು ದೇವರಾತ್ಮದಿಂದ ಅಭಿಷೇಕಿಸಲ್ಪಟ್ಟ ನಂತರವೇ, ಅವರಿಗೆ ತಮ್ಮ ಸಿಂಹಾಸನಗಳು ಸ್ವರ್ಗದಲ್ಲಿ ಇರಲಿವೆ ಎಂಬುದು ಅರ್ಥವಾಯಿತು. (1 ಕೊರಿಂ. 15:49; ಕೊಲೊ. 1:5; 1 ಪೇತ್ರ 1:3, 4) ಸ್ವರ್ಗೀಯ ಬಾಧ್ಯತೆಯ ನಿರೀಕ್ಷೆಯು ಪ್ರಕಟವಾದ ಒಂದು ಹೊಸ ವಿಷಯವಾಗಿದ್ದು, ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳಲ್ಲಿರುವ ಪ್ರೇರಿತ ಪತ್ರಗಳ ಕೇಂದ್ರಬಿಂದುವಾಗಿ ಪರಿಣಮಿಸಿತು. ಆದರೆ ಈ ಪತ್ರಗಳು ಮಾನವಕುಲದ ನಿರೀಕ್ಷೆಯಾದ ಭೂಮಿಯ ಮೇಲಿನ ನಿತ್ಯಜೀವವನ್ನು ದೃಢೀಕರಿಸುತ್ತವೋ?
ಪ್ರೇರಿತ ಪತ್ರಗಳು ಏನನ್ನುತ್ತವೆ?
15, 16. ಇಬ್ರಿಯರಿಗೆ ಬರೆದ ಪ್ರೇರಿತ ಪತ್ರ ಹಾಗೂ ಪೇತ್ರನ ಮಾತುಗಳು, ಭೂಮಿಯ ಮೇಲಿನ ನಿತ್ಯಜೀವದ ನಿರೀಕ್ಷೆಯ ಕಡೆಗೆ ಹೇಗೆ ನಿರ್ದೇಶಿಸುತ್ತವೆ?
15 ಇಬ್ರಿಯರಿಗೆ ಬರೆದ ಪತ್ರದಲ್ಲಿ ಅಪೊಸ್ತಲ ಪೌಲನು ತನ್ನ ಜೊತೆ ವಿಶ್ವಾಸಿಗಳನ್ನು “ಪವಿತ್ರ ಸಹೋದರರೇ, ಸ್ವರ್ಗೀಯ ಕರೆಯಲ್ಲಿ ಪಾಲುಗಾರರಾಗಿರುವವರೇ” ಎಂದು ಸಂಬೋಧಿಸಿದನು. ಅಲ್ಲದೆ, “ಬರಲಿರುವ ನಿವಾಸಿತ ಭೂಮಿಯನ್ನು” ದೇವರು ಯೇಸುವಿಗೆ ಅಧೀನಪಡಿಸಿದ್ದಾನೆ ಎಂದು ಸಹ ಅವನು ಹೇಳಿದನು. (ಇಬ್ರಿ. 2:3, 5; 3:1) ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳಲ್ಲಿ “ನಿವಾಸಿತ ಭೂಮಿ” ಎಂಬುದರ ಮೂಲ ಪದವು ಯಾವಾಗಲೂ, ಮಾನವರಿಂದ ತುಂಬಿರುವ ಭೂಮಿಗೆ ಸೂಚಿಸುತ್ತದೆ. ಆದಕಾರಣ ‘ಬರಲಿರುವ ನಿವಾಸಿತ ಭೂಮಿಯು,’ ಯೇಸು ಕ್ರಿಸ್ತನ ಆಳ್ವಿಕೆಯಡಿಯಲ್ಲಿ ಭೂಮಿಯ ಮೇಲೆ ಬರಲಿರುವ ಭವಿಷ್ಯದ ವಿಷಯಗಳ ವ್ಯವಸ್ಥೆಯೇ ಆಗಿದೆ. ಆಗ ದೇವರ ಈ ವಾಗ್ದಾನವನ್ನು ಯೇಸು ಪೂರೈಸುವನು: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತ. 37:29.
16 ಮಾನವಕುಲದ ಭವಿಷ್ಯದ ಕುರಿತು ಬರೆಯುವಂತೆ ಅಪೊಸ್ತಲ ಪೇತ್ರನೂ ಪವಿತ್ರಾತ್ಮದಿಂದ ಪ್ರೇರಿತನಾದನು. ಅವನು ಬರೆದದ್ದು: “ಈಗ ಇರುವ ಆಕಾಶ ಮತ್ತು ಭೂಮಿಯು ಬೆಂಕಿಗಾಗಿ ಇಡಲ್ಪಟ್ಟಿದ್ದು, ನ್ಯಾಯತೀರ್ಪಿನ ದಿನಕ್ಕಾಗಿ ಮತ್ತು ದೇವಭಕ್ತಿಯಿಲ್ಲದ ಜನರ ನಾಶನಕ್ಕಾಗಿ ಕಾದಿರಿಸಲ್ಪಡುತ್ತಿವೆ.” (2 ಪೇತ್ರ 3:7) ಹಾಗಾದರೆ ಈಗಿರುವ ಸರ್ಕಾರಗಳೆಂಬ ಆಕಾಶ ಹಾಗೂ ದುಷ್ಟ ಮಾನವ ಸಮಾಜದ ಸ್ಥಾನವನ್ನು ಯಾವುದು ಭರ್ತಿಮಾಡುವುದು? (2 ಪೇತ್ರ 3:13 ಓದಿ.) “ನೂತನ ಆಕಾಶ” ಅಂದರೆ ದೇವರ ಮೆಸ್ಸೀಯ ರಾಜ್ಯ ಹಾಗೂ “ನೂತನ ಭೂಮಿ” ಅಂದರೆ ಸತ್ಯಾರಾಧಕರ ನೀತಿಯುತ ಮಾನವ ಸಮಾಜವೇ.
17. ಪ್ರಕಟನೆ 21:1-4ರಲ್ಲಿ ಮಾನವಕುಲದ ನಿರೀಕ್ಷೆಯನ್ನು ಹೇಗೆ ವರ್ಣಿಸಲಾಗಿದೆ?
17 ಬೈಬಲಿನ ಕೊನೆಯ ಪುಸ್ತಕವು, ಪರಿಪೂರ್ಣತೆಗೆ ಪುನಃಸ್ಥಾಪಿಸಲ್ಪಟ್ಟ ಮಾನವಕುಲದ ದರ್ಶನವನ್ನು ಕೊಡುವ ಮೂಲಕ ನಮ್ಮ ಹೃದಯವನ್ನು ಕಲಕುತ್ತದೆ. (ಪ್ರಕಟನೆ 21:1-4 ಓದಿ.) ಏದೆನ್ ತೋಟದಲ್ಲಿ ಮಾನವನು ಪರಿಪೂರ್ಣತೆ ಕಳೆದುಕೊಂಡಂದಿನಿಂದಲೂ ವಿಶ್ವಾಸಿ ಮಾನವಕುಲವು ಈ ನಿರೀಕ್ಷೆಯನ್ನೇ ಇಟ್ಟುಕೊಂಡಿದೆ. ನೀತಿವಂತ ಜನರು ಭೂಮಿಯ ಮೇಲೆ ಪರದೈಸಿನಲ್ಲಿ ವಯಸ್ಸಾಗುವಿಕೆಯ ನೋವುಭರಿತ ಪರಿಣಾಮಗಳನ್ನು ಅನುಭವಿಸದೇ ನಿರಂತರ ಬದುಕುವರು. ಈ ನಿರೀಕ್ಷೆಯು, ಹೀಬ್ರು ಹಾಗೂ ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳ ಮೇಲೆ ದೃಢವಾಗಿ ಆಧರಿತವಾಗಿದೆ ಮತ್ತು ಈ ದಿನದ ವರೆಗೂ ಯೆಹೋವನ ನಂಬಿಗಸ್ತ ಸೇವಕರನ್ನು ಬಲಪಡಿಸುತ್ತಿದೆ.—ಪ್ರಕ. 22:1, 2.
ನೀವು ವಿವರಿಸಬಲ್ಲಿರೋ?
• ಯೇಸು ಹೇಳಿದ “ಹೊಸ ಸೃಷ್ಟಿಯ” ಅರ್ಥವೇನು?
• ನಿಕೊದೇಮನ ಬಳಿ ಯೇಸು ಯಾವುದರ ಕುರಿತು ಮಾತಾಡಿದನು?
• ತನ್ನ ಪಕ್ಕದಲ್ಲಿ ತೂಗಹಾಕಲ್ಪಟ್ಟಿದ್ದ ದುಷ್ಕರ್ಮಿಯೊಬ್ಬನಿಗೆ ಯೇಸು ಯಾವ ಮಾತು ಕೊಟ್ಟನು?
• ಇಬ್ರಿಯರಿಗೆ ಬರೆದ ಪತ್ರ ಹಾಗೂ ಪೇತ್ರನ ಮಾತುಗಳು, ಭೂಮಿಯ ಮೇಲಿನ ನಿತ್ಯಜೀವದ ನಿರೀಕ್ಷೆಯನ್ನು ಹೇಗೆ ದೃಢೀಕರಿಸುತ್ತವೆ?
[ಪುಟ 8ರಲ್ಲಿರುವ ಚಿತ್ರ]
ಕುರಿಸದೃಶ ಜನರು ಭೂಮಿಯ ಮೇಲೆ ನಿತ್ಯಜೀವ ಪಡೆಯುವರು
[ಪುಟ 10ರಲ್ಲಿರುವ ಚಿತ್ರ]
ಯೇಸು ನಿತ್ಯಜೀವದ ಕುರಿತು ಇತರರೊಂದಿಗೆ ಮಾತಾಡಿದನು