ಯಾರಿಂದಲಾದರೂ ಈ ಲೋಕವನ್ನು ನಿಜವಾಗಿಯೂ ಬದಲಾಯಿಸಲು ಸಾಧ್ಯವಿದೆಯೋ?
“ಎಲ್ಲಕ್ಕಿಂತಲೂ ಮಿಗಿಲಾಗಿ ತಮಗೆ ಶಾಂತಿ ಮತ್ತು ಭದ್ರತೆ ಬೇಕು—ಹಾಗೂ ತಮ್ಮ ಜೀವನಗಳನ್ನು ಉತ್ತಮಗೊಳಿಸುವ ಅವಕಾಶಗಳು ಸಿಗಬೇಕು ಎಂದು ಬಡಜನರು ನಮಗೆ ಹೇಳುತ್ತಾರೆ. ಶ್ರೀಮಂತ ದೇಶಗಳ ಹಾಗೂ ಶ್ರೀಮಂತ ಕಂಪನಿಗಳ ಶಕ್ತಿಯುತ ಪ್ರಭಾವವು ತಮ್ಮ ಪ್ರಯತ್ನಗಳನ್ನು ಮಣ್ಣುಪಾಲು ಮಾಡದಂತೆ ತಡೆಯುವ ನ್ಯಾಯಯುತವಾದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವ್ಯವಸ್ಥೆಗಳು ತಮಗೆ ಬೇಕು ಎಂದು ಅವರು ಹೇಳುತ್ತಾರೆ.”
ಒಂದು ಅಂತಾರಾಷ್ಟ್ರೀಯ ಪರಿಹಾರ ಏಜೆನ್ಸಿಯ ಕಾರ್ಯನಿರ್ವಾಹಕಿಯು ಬಡಜನರ ಆಶೆ ಆಕಾಂಕ್ಷೆಗಳನ್ನು ಈ ಮಾತುಗಳಲ್ಲಿ ವರ್ಣಿಸಿದಳು. ವಾಸ್ತವದಲ್ಲಿ, ಲೋಕದ ದುರಂತಗಳು ಮತ್ತು ಅನ್ಯಾಯಗಳಲ್ಲಿ ಸಿಕ್ಕಿಕೊಳ್ಳುವ ಎಲ್ಲ ಅಮಾಯಕರ ಬಯಕೆಯನ್ನು ಅವಳ ಮಾತುಗಳು ಸೂಕ್ತವಾಗಿ ವರ್ಣಿಸಬಲ್ಲವು. ಅವರೆಲ್ಲರೂ ನಿಜ ಶಾಂತಿ ಮತ್ತು ಭದ್ರತೆ ತುಂಬಿರುವ ಲೋಕಕ್ಕಾಗಿ ಹಾತೊರೆಯುತ್ತಾರೆ. ಇಂತಹ ಒಂದು ಲೋಕವು ಎಂದಾದರೂ ನಿಜವಾಗಿಯೂ ಬರುವುದೋ? ಮೂಲಭೂತವಾಗಿ ಅನ್ಯಾಯವು ತುಂಬಿರುವ ಈ ಲೋಕವನ್ನು ಬದಲಾಯಿಸುವ ಶಕ್ತಿ ಮತ್ತು ಸಾಮರ್ಥ್ಯ ನಿಜವಾಗಿಯೂ ಯಾರಲ್ಲಿಯಾದರೂ ಇದೆಯೋ?
ಬದಲಾವಣೆಗಳನ್ನು ತರಲು ಪ್ರಯತ್ನಗಳು
ಅನೇಕರು ಬದಲಾವಣೆಗಳನ್ನು ತರಲು ಪ್ರಯತ್ನಿಸಿದ್ದಾರೆ. ಉದಾಹರಣೆಗೆ, ಅಸ್ವಸ್ಥರಿಗೆ ಶುದ್ಧವಾದ, ಅನುಕಂಪಭರಿತ ಆರೈಕೆಯನ್ನು ನೀಡುವ ವಿಷಯದಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಎಂಬ 19ನೇ ಶತಮಾನದ ಇಂಗ್ಲೆಂಡ್ನ ಸ್ತ್ರೀಯು ತನ್ನ ಜೀವಮಾನವನ್ನೇ ಮುಡಿಪಾಗಿಟ್ಟಳು. ಅವಳ ದಿನದಲ್ಲಿ—ಪೂತಿನಾಶಕಗಳು (antiseptics) ಮತ್ತು ಪ್ರತಿಜೀವಕಗಳು (antibiotics) ಇಲ್ಲದಿದ್ದ ಒಂದು ಸಮಯದಲ್ಲಿ—ಆಸ್ಪತ್ರೆಗಳಲ್ಲಿ ಇಂದು ನಾವು ನಿರೀಕ್ಷಿಸುವಂಥ ರೀತಿಯ ಆರೋಗ್ಯಾರೈಕೆಯು ನೀಡಲ್ಪಡುತ್ತಿರಲಿಲ್ಲ. “ನರ್ಸ್ಗಳು ಅನಕ್ಷರಸ್ಥರಾಗಿದ್ದರು, ಕೊಳಕಾಗಿರುತ್ತಿದ್ದರು ಮತ್ತು ಕುಡಿಕತನ ಹಾಗೂ ಅನೈತಿಕತೆಗಾಗಿ ಕುಖ್ಯಾತರಾಗಿದ್ದರು” ಎಂದು ಒಂದು ಪುಸ್ತಕ ತಿಳಿಸುತ್ತದೆ. ನರ್ಸಿಂಗ್ ವೃತ್ತಿಯನ್ನು ಬದಲಾಯಿಸುವುದರಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಯಾವುದೇ ಯಶಸ್ಸನ್ನು ಗಳಿಸಿದಳೋ? ಹೌದು ಗಳಿಸಿದಳು. ತದ್ರೀತಿಯಲ್ಲಿ, ಕಾಳಜಿವಹಿಸುವ, ನಿಸ್ವಾರ್ಥಭಾವದ ಅಸಂಖ್ಯಾತ ವ್ಯಕ್ತಿಗಳು ಜೀವನದ ಅನೇಕ ಕ್ಷೇತ್ರಗಳಲ್ಲಿ ಎದ್ದುಕಾಣುವ ಯಶಸ್ಸನ್ನು ಗಳಿಸಿದ್ದಾರೆ. ಸಾಕ್ಷರತೆ, ವಿದ್ಯಾಭ್ಯಾಸ, ಔಷಧಶಾಸ್ತ್ರ, ವಸತಿಸೌಕರ್ಯ, ಉಣಬಡಿಸುವ ಕಾರ್ಯಕ್ರಮಗಳು ಇತ್ಯಾದಿ ಕ್ಷೇತ್ರಗಳಲ್ಲಿ ಅವರು ಬದಲಾವಣೆಯನ್ನು ತಂದಿದ್ದಾರೆ. ಇದರ ಪರಿಣಾಮವಾಗಿ, ಅಹಿತಕರ ಪರಿಸ್ಥಿತಿಯಲ್ಲಿ ಜೀವಿಸುತ್ತಿರುವ ಲಕ್ಷಾಂತರ ಜನರ ಜೀವನದ ಗುಣಮಟ್ಟದಲ್ಲಿ ಗಮನಾರ್ಹವಾದ ಸುಧಾರಣೆಗಳು ಮಾಡಲ್ಪಟ್ಟಿವೆ.
ಆದರೂ, ಕೋಟ್ಯಂತರ ವ್ಯಕ್ತಿಗಳು ಈಗಲೂ ಯುದ್ಧ, ಪಾತಕ, ರೋಗ, ಕ್ಷಾಮ ಮತ್ತು ಇತರ ವಿಪತ್ಕಾರಕ ಘಟನೆಗಳಿಂದ ಬಾಧಿಸಲ್ಪಡುತ್ತಿದ್ದಾರೆ ಎಂಬ ಘೋರ ಸತ್ಯವನ್ನು ನಮ್ಮಿಂದ ಅಲ್ಲಗಳೆಯಸಾಧ್ಯವಿಲ್ಲ. “ಬಡತನವು ಪ್ರತಿನಿತ್ಯ 30,000 ಮಂದಿಯನ್ನು ಕೊಲ್ಲುತ್ತದೆ” ಎಂದು ಐರ್ಲಂಡ್ನ ‘ಕನ್ಸರ್ನ್’ ಎಂಬ ನೆರವು ನೀಡುವ ಏಜೆನ್ಸಿ ತಿಳಿಸುತ್ತದೆ. ಕಳೆದ ಶತಮಾನಗಳಿಂದ ಅನೇಕ ಸುಧಾರಕರ ಗುರಿಹಲಗೆಯಾಗಿರುವ ಗುಲಾಮ ಪದ್ಧತಿ ಸಹ ಈಗಲೂ ಅಸ್ತಿತ್ವದಲ್ಲಿದೆ. “ಅಟ್ಲ್ಯಾಂಟಿಕ್ ಸಾಗರದ ದ್ವಾರಾ ಮಾಡಲ್ಪಡುತ್ತಿದ್ದ ಗುಲಾಮ ವ್ಯಾಪಾರದ ಸಮಯದಲ್ಲಿ ಆಫ್ರಿಕದಿಂದ ಕದಿಯಲ್ಪಟ್ಟ ಎಲ್ಲ ಜನರಿಗಿಂತ ಹೆಚ್ಚಿನ ಗುಲಾಮರು ಈಗ ಅಸ್ತಿತ್ವದಲ್ಲಿದ್ದಾರೆ” ಎಂದು ತ್ಯಾಜ್ಯಾರ್ಹ ಜನರು—ಭೌಗೋಳಿಕ ಆರ್ಥಿಕತೆಯಲ್ಲಿ ಹೊಸ ಗುಲಾಮ ಪದ್ಧತಿ (ಇಂಗ್ಲಿಷ್) ಎಂಬ ಪುಸ್ತಕವು ತಿಳಿಸುತ್ತದೆ.
ಸಂಪೂರ್ಣವಾದ ಮತ್ತು ಶಾಶ್ವತವಾದ ಬದಲಾವಣೆಯನ್ನು ತರಲು ಜನರು ಮಾಡಿದ ಪ್ರಯತ್ನಗಳನ್ನು ಯಾವುದು ಭಂಗಗೊಳಿಸಿದೆ? ಶ್ರೀಮಂತರ ಮತ್ತು ಬಲಿಷ್ಠರ ಶಕ್ತಿಯುತವಾದ ಪ್ರಭಾವವು ಮಾತ್ರವೋ, ಅಥವಾ ಹೆಚ್ಚಿನದ್ದು ಒಳಗೂಡಿದೆಯೋ?
ಬದಲಾವಣೆಯ ಹಾದಿಯಲ್ಲಿ ಅಡ್ಡಿಗಳು
ದೇವರ ವಾಕ್ಯಕ್ಕನುಸಾರ, ನಿಜಕ್ಕೂ ನ್ಯಾಯಯುತವಾಗಿರುವ ಒಂದು ಲೋಕವನ್ನು ತರುವುದರಲ್ಲಿ ಅತಿ ದೊಡ್ಡ ಅಡ್ಡಗೋಡೆಯಂತೆ ನಿಂತಿರುವುದು ಪಿಶಾಚನಾದ ಸೈತಾನನೇ. “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ” ಎಂದು ಅಪೊಸ್ತಲ ಯೋಹಾನನು ನಮಗೆ ತಿಳಿಸುತ್ತಾನೆ. (1 ಯೋಹಾನ 5:19) ವಾಸ್ತವದಲ್ಲಿ ಈಗ ಸೈತಾನನು ‘ಭೂಲೋಕದವರನ್ನೆಲ್ಲಾ ಮರುಳುಗೊಳಿಸುತ್ತಿದ್ದಾನೆ.’ (ಪ್ರಕಟನೆ 12:9) ಅವನ ದುಷ್ಟ ಪ್ರಭಾವವು ತೆಗೆದುಹಾಕಲ್ಪಡುವ ವರೆಗೂ ಕೆಡುಕು ಮತ್ತು ಅನ್ಯಾಯಕ್ಕೆ ಬಲಿಪಶುಗಳಾಗುವ ಜನರು ಇದ್ದೇ ಇರುವರು. ಈ ಶೋಚನೀಯ ಸ್ಥಿತಿಯನ್ನು ಬರಮಾಡಿದ್ದು ಯಾವುದು?
ನಮ್ಮ ಮೂಲ ಹೆತ್ತವರಾದ ಆದಾಮಹವ್ವರಿಗೆ, ಇಡೀ ಮಾನವ ಕುಟುಂಬಕ್ಕೆ ಪರಿಪೂರ್ಣವಾದ ಪರದೈಸ್ ಮನೆಯಾಗಿರಲು ವಿನ್ಯಾಸಿಸಲ್ಪಟ್ಟ ಭೂಮಿಯನ್ನು ಕೊಡಲಾಯಿತು. ಅದು ‘ಬಹು ಒಳ್ಳೇದಾಗಿದ್ದ’ ಲೋಕವಾಗಿತ್ತು. (ಆದಿಕಾಂಡ 1:31) ಆದರೆ ಇಂದು ಪರಿಸ್ಥಿತಿ ಇಷ್ಟು ಭಿನ್ನವಾಗಿದೆಯೇಕೆ? ಇದಕ್ಕೆ ಸೈತಾನನು ಹೊಣೆಗಾರನು. ಸ್ತ್ರೀಪುರುಷರು ಪಾಲಿಸಬೇಕಾದ ನಿಯಮಗಳನ್ನು ಕೊಡಲು ದೇವರಿಗಿರುವ ಹಕ್ಕನ್ನು ಅವನು ಪ್ರಶ್ನಿಸಿದನು. ದೇವರು ಆಳ್ವಿಕೆ ಮಾಡುವ ವಿಧವು ಅನ್ಯಾಯಕರವಾಗಿದೆ ಎಂದವನು ಸೂಚಿಸಿದನು. ಸರಿ ಯಾವುದು ತಪ್ಪು ಯಾವುದು ಎಂಬುದನ್ನು ತಾವಾಗಿಯೇ ನಿರ್ಣಯಿಸುವ ಒಂದು ಸ್ವತಂತ್ರ ಮಾರ್ಗಕ್ರಮವನ್ನು ಆರಿಸಿಕೊಳ್ಳುವಂತೆ ಅವನು ಆದಾಮಹವ್ವರಿಗೆ ಪ್ರಚೋದಿಸಿದನು. (ಆದಿಕಾಂಡ 3:1-6) ಇದು ನ್ಯಾಯಯುತವಾದ ಒಂದು ಲೋಕವನ್ನು ಸ್ಥಾಪಿಸುವ ಮಾನವ ಪ್ರಯತ್ನಗಳಿಗೆ ಎರಡನೇ ತಡೆಗೋಡೆಯಾದ ಪಾಪ ಮತ್ತು ಮರಣವನ್ನು ಫಲಿಸಿತು.—ರೋಮಾಪುರ 5:12.
ಇದನ್ನು ಏಕೆ ಅನುಮತಿಸಬೇಕು?
‘ಆದರೆ ಪಾಪ ಮತ್ತು ಅಪರಿಪೂರ್ಣತೆ ಬೆಳೆಯುವಂತೆ ದೇವರು ಏಕೆ ಅನುಮತಿಸಿದನು? ಆತನು ತನ್ನ ಅಪಾರ ಶಕ್ತಿಯನ್ನು ಉಪಯೋಗಿಸುತ್ತಾ ದಂಗೆಯೆದ್ದವರನ್ನು ನಿರ್ಮೂಲಮಾಡಿ ಪುನಃ ಎಲ್ಲವನ್ನೂ ಹೊಸದಾಗಿ ಆರಂಭಿಸಲಿಲ್ಲವೇಕೆ?’ ಎಂದು ಕೆಲವರು ಕೇಳಬಹುದು. ಅದೊಂದು ಸುಲಭವಾದ ಪರಿಹಾರವಾಗಿ ತೋರುತ್ತದೆ. ಆದರೆ, ಶಕ್ತಿಯನ್ನು ಉಪಯೋಗಿಸುವುದು ಗಂಭೀರವಾದ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಈ ಲೋಕದಲ್ಲಿರುವ ಬಡವರು ಮತ್ತು ದಬ್ಬಾಳಿಕೆಗೆ ಒಳಗಾಗಿರುವವರಿಗೆ ಆಗುತ್ತಿರುವ ಪ್ರಧಾನ ಅನ್ಯಾಯಗಳಲ್ಲಿ ಶಕ್ತಿಯ ದುರುಪಯೋಗವು ಒಂದಾಗಿದೆ ಎಂಬುದು ನಿಜವಲ್ಲವೇ? ಒಬ್ಬ ಸರ್ವಾಧಿಕಾರಿಯು, ತನ್ನ ಕಾರ್ಯನೀತಿಗಳನ್ನು ಸಮ್ಮತಿಸದ ಯಾವುದೇ ವ್ಯಕ್ತಿಯನ್ನು ತೊಲಗಿಸಿಬಿಡಲು ತನ್ನ ಶಕ್ತಿಯನ್ನು ಉಪಯೋಗಿಸುವುದು ಸಹೃದಯದ ವ್ಯಕ್ತಿಗಳ ಮನಸ್ಸಿನಲ್ಲಿ ಸಂದೇಹಗಳನ್ನು ಎಬ್ಬಿಸುವುದಿಲ್ಲವೇ?
ತಾನು ಶಕ್ತಿಯನ್ನು ದುರುಪಯೋಗಿಸುವ ಒಬ್ಬ ಸರ್ವಾಧಿಕಾರಿಯಲ್ಲ ಎಂದು ಸಹೃದಯದ ವ್ಯಕ್ತಿಗಳಿಗೆ ಖಾತ್ರಿಪಡಿಸಲಿಕ್ಕಾಗಿ ದೇವರು, ದೈವಿಕ ನಿಯಮಗಳು ಮತ್ತು ಮೂಲತತ್ತ್ವಗಳಿಂದ ಸ್ವತಂತ್ರರಾಗಿ ವರ್ತಿಸುವಂತೆ ಸೈತಾನನಿಗೆ ಮತ್ತು ಮಾನವ ದಂಗೆಕೋರರಿಗೆ ಅನುಮತಿಸುವ ಆಯ್ಕೆಯನ್ನು ಮಾಡಿದನು—ಆದರೆ ಇದು ಸೀಮಿತ ಸಮಯಾವಧಿಗೆ ಮಾತ್ರ ಅನುಮತಿಸಲ್ಪಟ್ಟಿದೆ. ದೇವರು ಆಳ್ವಿಕೆ ನಡೆಸುವ ವಿಧವು ಮಾತ್ರ ಸರಿಯಾದ ವಿಧವಾಗಿದೆ ಎಂಬುದನ್ನು ಸಮಯವು ರುಜುಪಡಿಸುವುದು. ಆತನು ನಮ್ಮ ಮೇಲೆ ಹಾಕುವ ಯಾವುದೇ ನಿರ್ಬಂಧಗಳು ನಮ್ಮ ಒಳಿತಿಗಾಗಿದೆ ಎಂಬುದನ್ನು ಅದು ತೋರಿಸಿಕೊಡುವುದು. ವಾಸ್ತವದಲ್ಲಿ, ದೇವರ ಆಳ್ವಿಕೆಯ ವಿರುದ್ಧ ಎಬ್ಬಿಸಲ್ಪಟ್ಟ ದಂಗೆಯ ಫಲಿತಾಂಶಗಳು, ದೇವರು ಹಾಕುವ ನಿರ್ಬಂಧಗಳು ನಮ್ಮ ಒಳಿತಿಗಾಗಿವೆ ಎಂಬುದನ್ನು ಈಗಾಗಲೇ ರುಜುಪಡಿಸಿವೆ. ಮತ್ತು ಅವು, ದೇವರು ತಾನು ಆರಿಸಿಕೊಂಡಿರುವ ಸಮಯದಲ್ಲಿ ದುಷ್ಟತನವನ್ನು ನಿರ್ನಾಮಮಾಡಲಿಕ್ಕಾಗಿ ತನ್ನ ಮಹಾ ಶಕ್ತಿಯನ್ನು ಉಪಯೋಗಿಸಲಿರುವುದು ಸಂಪೂರ್ಣವಾಗಿ ನ್ಯಾಯವಾದದ್ದಾಗಿದೆ ಎಂಬುದನ್ನು ರುಜುಪಡಿಸಿವೆ. ಆ ನಿರ್ನಾಮವು ತುಂಬ ಬೇಗನೆ ನಡೆಯಲಿದೆ.—ಆದಿಕಾಂಡ 18:23-32; ಧರ್ಮೋಪದೇಶಕಾಂಡ 32:4; ಕೀರ್ತನೆ 37:9, 10, 38.
ದೇವರು ಕ್ರಿಯೆಗೈಯುವ ತನಕ, ನಾವು “ನರಳುತ್ತಾ ಪ್ರಸವವೇದನೆಪಡುತ್ತಾ” ಅನ್ಯಾಯದಿಂದ ತುಂಬಿರುವ ಒಂದು ವ್ಯವಸ್ಥೆಯಲ್ಲಿ ಸಿಕ್ಕಿಕೊಂಡಿರುವೆವು. (ರೋಮಾಪುರ 8:22) ನಾವು ವಿಷಯಗಳನ್ನು ಬದಲಾಯಿಸಲು ಏನನ್ನೇ ಮಾಡುವುದಾದರೂ, ನಮ್ಮಿಂದ ಸೈತಾನನನ್ನು ತೊಲಗಿಸಿಬಿಡಲು ಸಾಧ್ಯವಿರುವುದಿಲ್ಲ, ಅಥವಾ ನಾವು ಅನುಭವಿಸುವ ಎಲ್ಲ ಕಷ್ಟಸಂಕಟಗಳ ಮೂಲಕಾರಣವಾಗಿರುವ ಅಪರಿಪೂರ್ಣತೆಯನ್ನು ನಮ್ಮಿಂದ ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವಿರುವುದಿಲ್ಲ. ನಾವು ಆದಾಮನಿಂದ ಪಿತ್ರಾರ್ಜಿತವಾಗಿ ಪಡೆದುಕೊಂಡಿರುವ ಪಾಪದ ಪರಿಣಾಮಗಳನ್ನು ತೆಗೆದುಹಾಕುವುದು ನಮ್ಮ ಶಕ್ತಿಗೆ ಮೀರಿದ ವಿಷಯವಾಗಿದೆ.—ಕೀರ್ತನೆ 49:7-9.
ಯೇಸು ಕ್ರಿಸ್ತನು ಶಾಶ್ವತವಾದ ಬದಲಾವಣೆಯನ್ನು ತರುವನು
ಹಾಗಾದರೆ ಈ ಪರಿಸ್ಥಿತಿಯಿಂದ ನಮಗೆ ಮುಕ್ತಿಯೇ ಇಲ್ಲ ಎಂದಾಗಿದೆಯೋ? ಖಂಡಿತವಾಗಿಯೂ ಹಾಗಲ್ಲ. ಶಾಶ್ವತವಾದ ಬದಲಾವಣೆಯನ್ನು ತರುವ ಜವಾಬ್ದಾರಿಯು ನಶ್ವರನಾದ ಮಾನವಮಾತ್ರದವನಿಗಿಂತ ಎಷ್ಟೋ ಶಕ್ತಿಶಾಲಿಯಾಗಿರುವ ಒಬ್ಬಾತನಿಗೆ ಕೊಡಲ್ಪಟ್ಟಿದೆ. ಅವನು ಯಾರು? ಅವನು ಯೇಸು ಕ್ರಿಸ್ತನೇ. ಅವನನ್ನು ಬೈಬಲಿನಲ್ಲಿ ಮಾನವಕುಲದ ರಕ್ಷಣೆಗಾಗಿರುವ ದೇವರ ‘ಮುಖ್ಯ ಕಾರ್ಯಭಾರಿ’ (NW) ಎಂದು ಕರೆಯಲಾಗಿದೆ.—ಅ. ಕೃತ್ಯಗಳು 5:31.
ಅವನೀಗ ಕ್ರಿಯೆಗೈಯಲು ದೇವರ ನೇಮಿತ ಸಮಯಕ್ಕಾಗಿ ಕಾಯುತ್ತಿದ್ದಾನೆ. (ಪ್ರಕಟನೆ 11:18) ಅವನು ನಿರ್ದಿಷ್ಟವಾಗಿ ಏನು ಮಾಡುವನು? ಅವನು ‘ಸಮಸ್ತವನ್ನು ಸರಿಮಾಡುವ ಕಾಲದ ವಿಷಯವಾಗಿ ದೇವರು ಪೂರ್ವದಲ್ಲಿದ್ದ ತನ್ನ ಪರಿಶುದ್ಧ ಪ್ರವಾದಿಗಳ ಬಾಯಿಂದ ಹೇಳಿಸಿದ’ ವಿಷಯಗಳನ್ನು ನೆರವೇರಿಸುವನು. (ಅ. ಕೃತ್ಯಗಳು 3:21) ಉದಾಹರಣೆಗೆ, ಯೇಸು “ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. . . . ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು.” (ಕೀರ್ತನೆ 72:12-16) ಯೇಸು ಕ್ರಿಸ್ತನ ಮೂಲಕ, ‘ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಡುವ’ ವಾಗ್ದಾನವನ್ನು ದೇವರು ಮಾಡುತ್ತಾನೆ. (ಕೀರ್ತನೆ 46:9) ತನ್ನ ಶುದ್ಧೀಕರಿಸಲ್ಪಟ್ಟ ಭೂಮಿಯ “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು” ಎಂದು ದೇವರು ವಾಗ್ದಾನಿಸುತ್ತಾನೆ. ಕುರುಡರು, ಕಿವುಡರು, ಕುಂಟರು—ಕಾಯಿಲೆ ಮತ್ತು ರೋಗದಿಂದ ಬಾಧಿಸಲ್ಪಟ್ಟಿರುವ ಸಕಲರೂ ಪರಿಪೂರ್ಣ ಆರೋಗ್ಯವನ್ನು ಮರಳಿ ಪಡೆದುಕೊಳ್ಳುವರು. (ಯೆಶಾಯ 33:24; 35:5, 6; ಪ್ರಕಟನೆ 21:3, 4) ಹಿಂದೆ ಮೃತಪಟ್ಟವರು ಸಹ ಪ್ರಯೋಜನವನ್ನು ಪಡೆದುಕೊಳ್ಳುವರು. ಅನ್ಯಾಯ ಮತ್ತು ದಬ್ಬಾಳಿಕೆಗೆ ಬಲಿಯಾದವರನ್ನು ಪುನಃ ಜೀವಕ್ಕೆ ತರುವ ವಾಗ್ದಾನವನ್ನು ಆತನು ಮಾಡುತ್ತಾನೆ.—ಯೋಹಾನ 5:28, 29.
ಯೇಸು ಕ್ರಿಸ್ತನು ಭಾಗಶಃ ಹಾಗೂ ತಾತ್ಕಾಲಿಕ ಬದಲಾವಣೆಯನ್ನು ತರುವುದಿಲ್ಲ. ಬದಲಿಗೆ ಎಲ್ಲ ಅಡ್ಡಿತಡೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ ನಿಜಕ್ಕೂ ನ್ಯಾಯಯುತವಾಗಿರುವ ಒಂದು ಲೋಕವನ್ನು ಸ್ಥಾಪಿಸುವನು. ಅವನು ಪಾಪ ಮತ್ತು ಅಪರಿಪೂರ್ಣತೆಯನ್ನು ತೆಗೆದುಹಾಕಿ, ಪಿಶಾಚನಾದ ಸೈತಾನ ಹಾಗೂ ಅವನ ದಂಗೆಕೋರ ಮಾರ್ಗಕ್ರಮವನ್ನು ಹಿಂಬಾಲಿಸುವ ಸಕಲರನ್ನೂ ನಾಶಮಾಡಿಬಿಡುವನು. (ಪ್ರಕಟನೆ 19:19, 20; 20:1-3, 10) ದೇವರು ತಾತ್ಕಾಲಿಕವಾಗಿ ಅನುಮತಿಸಿರುವ ದುಃಖ ಮತ್ತು ನರಳಾಟ ‘ಎರಡನೆಯ ಸಲ ಉಂಟಾಗದು.’ (ನಹೂಮ 1:9) ದೇವರ ರಾಜ್ಯವು ಬರುವಂತೆ ಮತ್ತು ದೇವರ ಚಿತ್ತವು ‘ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರುವಂತೆ’ ಪ್ರಾರ್ಥಿಸಲು ಕಲಿಸಿದಾಗ ಯೇಸುವಿನ ಮನಸ್ಸಿನಲ್ಲಿ ಇದೇ ವಿಚಾರವಿತ್ತು.—ಮತ್ತಾಯ 6:10.
‘ಆದರೆ, “ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವರು” ಎಂದು ಸ್ವತಃ ಯೇಸುವೇ ಹೇಳಲಿಲ್ಲವೇ? ಅದರರ್ಥ ಅನ್ಯಾಯ ಮತ್ತು ಬಡತನ ಸದಾ ಇರುವುದು ಎಂದಾಗಿರುವುದಿಲ್ಲವೋ?’ ಎಂದು ನೀವು ಆಕ್ಷೇಪಿಸಬಹುದು. (ಮತ್ತಾಯ 26:11) ಹೌದು, ಬಡವರು ನಮ್ಮ ಬಳಿಯಲ್ಲಿ ಯಾವಾಗಲೂ ಇರುವರು ಎಂದು ಯೇಸು ಹೇಳಿದ್ದು ನಿಜ. ಆದರೆ, ಈ ವಿಷಯಗಳ ವ್ಯವಸ್ಥೆಯು ಇರುವ ತನಕ ಬಡಜನರು ಇರುವರು ಎಂಬ ಅರ್ಥದಲ್ಲಿ ಅವನು ಇದನ್ನು ಹೇಳಿದನು ಎಂಬುದಕ್ಕೆ ಅವನ ಮಾತುಗಳ ಪೂರ್ವಾಪರ ಮತ್ತು ದೇವರ ವಾಕ್ಯದ ವಾಗ್ದಾನಗಳು ಸೂಚಿಸುತ್ತವೆ. ಯಾವ ಮಾನವನಿಂದಲೂ ಬಡತನ ಮತ್ತು ಅನ್ಯಾಯವನ್ನು ತೆಗೆದುಹಾಕಲು ಸಾಧ್ಯವಾಗದು ಎಂಬುದನ್ನು ಅವನು ತಿಳಿದಿದ್ದನು. ಮತ್ತು ತಾನು ಎಲ್ಲವನ್ನೂ ಬದಲಾಯಿಸಲಿದ್ದೇನೆ ಎಂಬುದನ್ನು ಸಹ ಅವನು ತಿಳಿದಿದ್ದನು. ಅವನು ಸಂಪೂರ್ಣವಾಗಿ ಹೊಸದಾಗಿರುವ ಒಂದು ವಿಷಯಗಳ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರುವನು. ಅದು ‘ನೂತನಾಕಾಶಮಂಡಲ ಹಾಗೂ ನೂತನಭೂಮಂಡಲವಾಗಿದ್ದು’ ಅದರಲ್ಲಿ ನೋವು, ಕಾಯಿಲೆ, ಬಡತನ ಮತ್ತು ಮರಣವು ಗತಕಾಲದ ಸಂಗತಿಯಾಗಿರುವುದು.—2 ಪೇತ್ರ 3:13; ಪ್ರಕಟನೆ 21:1.
‘ಪರೋಪಕಾರ ಮಾಡುವದನ್ನು ಮರೆಯಬೇಡಿರಿ’
ಇತರ ಜನರ ಸಹಾಯಾರ್ಥವಾಗಿ ನಮ್ಮಿಂದಾದಷ್ಟನ್ನು ಮಾಡುವುದು ವ್ಯರ್ಥವಾಗಿದೆ ಎಂಬುದು ಇದರರ್ಥವೋ? ಖಂಡಿತವಾಗಿಯೂ ಇಲ್ಲ. ಇತರರು ಪರೀಕ್ಷೆಗಳನ್ನು ಮತ್ತು ಸಂಕಷ್ಟಕರ ಸನ್ನಿವೇಶಗಳನ್ನು ಎದುರಿಸುವಾಗ ಅವರಿಗೆ ಸಹಾಯಮಾಡುವಂತೆ ಬೈಬಲ್ ನಮ್ಮನ್ನು ಪ್ರೋತ್ಸಾಹಿಸುತ್ತದೆ. “ಉಪಕಾರಮಾಡುವದಕ್ಕೆ ನಿನ್ನ ಕೈಲಾದಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ” ಎಂದು ಪುರಾತನ ಕಾಲದ ರಾಜ ಸೊಲೊಮೋನನು ಬರೆಯುತ್ತಾನೆ. (ಜ್ಞಾನೋಕ್ತಿ 3:27) “ಪರೋಪಕಾರವನ್ನೂ ಧರ್ಮಮಾಡುವದನ್ನೂ ಮರೆಯಬೇಡಿರಿ” ಎಂದು ಅಪೊಸ್ತಲ ಪೌಲನು ಪ್ರಚೋದಿಸುತ್ತಾನೆ.—ಇಬ್ರಿಯ 13:16.
ಇತರರ ಸಹಾಯಾರ್ಥವಾಗಿ ನಮ್ಮಿಂದ ಏನನ್ನು ಮಾಡಲು ಸಾಧ್ಯವಿದೆಯೋ ಅದನ್ನು ಮಾಡುವಂತೆ ಸ್ವತಃ ಯೇಸು ಕ್ರಿಸ್ತನೇ ಪ್ರೋತ್ಸಾಹಿಸಿದನು. ಒಬ್ಬ ಮನುಷ್ಯನು ಕಳ್ಳರ ಕೈಗೆ ಸಿಕ್ಕಿ ಹೊಡೆತಗಳನ್ನು ತಿಂದು ತನ್ನ ಬಳಿಯಿದ್ದ ಎಲ್ಲವನ್ನೂ ಕಳಕೊಂಡು ಬಿದ್ದಿದ್ದನ್ನು ಕಂಡ ಸಮಾರ್ಯದವನ ದೃಷ್ಟಾಂತವನ್ನು ಅವನು ತಿಳಿಸಿದನು. ಆ ಸಮಾರ್ಯದವನು ‘ಕನಿಕರಪಟ್ಟು,’ ಹೊಡೆಯಲ್ಪಟ್ಟಿದ್ದ ಮನುಷ್ಯನ ಗಾಯಗಳನ್ನು ಕಟ್ಟಲು ಮತ್ತು ಆ ಆಕ್ರಮಣದಿಂದ ಅವನು ಚೇತರಿಸಿಕೊಳ್ಳುವಂತೆ ಮಾಡಲು ತನ್ನ ಸ್ವಂತ ಸಂಪನ್ಮೂಲಗಳನ್ನು ಉಪಯೋಗಿಸಿದನು. (ಲೂಕ 10:29-37) ಆ ಕರುಣಾಮಯಿ ಸಮಾರ್ಯದವನು ಈ ಲೋಕವನ್ನು ಬದಲಾಯಿಸಲಿಲ್ಲವಾದರೂ, ಮತ್ತೊಬ್ಬ ಮನುಷ್ಯನ ಜೀವಕ್ಕೆ ಸಂಬಂಧಿಸಿದ ಮಟ್ಟಿಗೆ ಅವನು ಮಾಡಿದ ಸಹಾಯವು ದೊಡ್ಡ ವ್ಯತ್ಯಾಸವನ್ನು ಉಂಟುಮಾಡಿತು. ನಾವು ಸಹ ಇದನ್ನೇ ಮಾಡಬಲ್ಲೆವು.
ಆದರೆ, ಒಬ್ಬೊಬ್ಬ ವ್ಯಕ್ತಿಗೆ ಸಹಾಯಮಾಡುವುದಕ್ಕಿಂತ ಹೆಚ್ಚಿನದ್ದನ್ನು ಯೇಸು ಕ್ರಿಸ್ತನು ಮಾಡಬಲ್ಲನು. ಅವನಿಂದ ನಿಜಕ್ಕೂ ಬದಲಾವಣೆಯನ್ನು ತರಲು ಸಾಧ್ಯವಿದೆ ಮತ್ತು ಅದನ್ನು ಅವನು ಬೇಗನೆ ಮಾಡಲಿದ್ದಾನೆ. ಅವನಿದನ್ನು ಮಾಡುವಾಗ, ಇಂದಿನ ಅನ್ಯಾಯಭರಿತ ಸನ್ನಿವೇಶಗಳಿಗೆ ತುತ್ತಾಗಿರುವವರಿಗೆ ತಮ್ಮ ಜೀವನಗಳನ್ನು ಉತ್ತಮಗೊಳಿಸಲು ಮತ್ತು ನಿಜ ಶಾಂತಿ ಹಾಗೂ ಭದ್ರತೆಯನ್ನು ಪಡೆದುಕೊಳ್ಳಲು ಸಾಧ್ಯವಿರುವುದು.—ಕೀರ್ತನೆ 4:8; 37:10, 11.
ಈ ಎಲ್ಲ ವಿಷಯಗಳು ಸಂಭವಿಸಲಿಕ್ಕಾಗಿ ನಾವು ಕಾಯುತ್ತಿರುವಾಗ, ಅನ್ಯಾಯದಿಂದ ತುಂಬಿರುವ ಈ ಲೋಕದ ಬಲಿಪಶುಗಳಾಗಿರುವ ಎಲ್ಲರಿಗೆ ಹಿಂಜರಿಕೆಯಿಲ್ಲದೆ ಆಧ್ಯಾತ್ಮಿಕವಾಗಿಯೂ ಶಾರೀರಿಕವಾಗಿಯೂ ನಮ್ಮಿಂದ ಸಾಧ್ಯವಿರುವ ಯಾವುದೇ “ಒಳ್ಳೇದನ್ನು ಮಾಡೋಣ.”—ಗಲಾತ್ಯ 6:10.
[ಪುಟ 5ರಲ್ಲಿರುವ ಚಿತ್ರಗಳು]
ಫ್ಲಾರೆನ್ಸ್ ನೈಟಿಂಗೇಲ್ ನರ್ಸಿಂಗ್ ವೃತ್ತಿಯಲ್ಲಿ ಗಮನಾರ್ಹವಾದ ಮತ್ತು ಶಾಶ್ವತವಾದ ಬದಲಾವಣೆಗಳನ್ನು ಮಾಡಿದಳು
[ಕೃಪೆ]
Courtesy National Library of Medicine
[ಪುಟ 7ರಲ್ಲಿರುವ ಚಿತ್ರಗಳು]
ಕ್ರಿಸ್ತನ ಹಿಂಬಾಲಕರು ಪರೋಪಕಾರವನ್ನು ಮಾಡುತ್ತಾರೆ
[ಪುಟ 4ರಲ್ಲಿರುವ ಚಿತ್ರ ಕೃಪೆ]
The Star, Johannesburg, S.A.