“ಎಲ್ಲಾ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ”
“ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ.” ಮತ್ತಾಯ 28:19ರಲ್ಲಿರುವ ಯೇಸುವಿನ ಆಜ್ಞೆಯನ್ನು ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಈ ರೀತಿಯಲ್ಲಿ ಭಾಷಾಂತರಿಸುತ್ತದೆ. ಆದರೆ, ಈ ನಿರೂಪಣೆಯು ಟೀಕಿಸಲ್ಪಟ್ಟಿದೆ. ಉದಾಹರಣೆಗೆ, ಒಂದು ಧಾರ್ಮಿಕ ಕರಪತ್ರವು ಪ್ರತಿಪಾದಿಸುವುದು: “ಗ್ರೀಕ್ ಗ್ರಂಥಪಾಠದಿಂದ ಇದರ ಭಾಷಾಂತರವು ಈ ರೀತಿಯಲ್ಲಿ ಮಾತ್ರವೇ ಸಾಧ್ಯ: ‘ಎಲ್ಲಾ ರಾಷ್ಟ್ರಗಳನ್ನು ಶಿಷ್ಯರನ್ನಾಗಿ ಮಾಡಿರಿ!’” ಇದು ಸತ್ಯವಾಗಿದೆಯೋ?
“ಎಲ್ಲಾ ರಾಷ್ಟ್ರಗಳನ್ನು ಶಿಷ್ಯರನ್ನಾಗಿ ಮಾಡಿರಿ” ಎಂಬ ಈ ನಿರೂಪಣೆಯು, ಅನೇಕ ಬೈಬಲ್ ಭಾಷಾಂತರಗಳಲ್ಲಿ ಕಂಡುಬರುತ್ತದೆ ಹಾಗೂ ಇದು ಗ್ರೀಕ್ ಭಾಷೆಯ ಒಂದು ಅಕ್ಷರಶಃ ಭಾಷಾಂತರವಾಗಿದೆ. ಆದುದರಿಂದ, “ಎಲ್ಲಾ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ . . . ದೀಕ್ಷಾಸ್ನಾನಮಾಡಿಸಿ” (ಓರೆಅಕ್ಷರಗಳು ನಮ್ಮವು.) ಎಂಬ ಭಾಷಾಂತರಕ್ಕೆ ಯಾವ ಆಧಾರವಿದೆ? ಅದರ ಪೂರ್ವಾಪರದ ಆಧಾರವಿದೆ. “ಅವರಿಗೆ . . . ದೀಕ್ಷಾಸ್ನಾನಮಾಡಿಸಿ” ಎಂಬ ಅಭಿವ್ಯಕ್ತಿಯು ದೇಶಗಳಿಗೆ ಸೂಚಿಸುವುದಿಲ್ಲ, ಸ್ಪಷ್ಟವಾಗಿ ವ್ಯಕ್ತಿಗಳಿಗೆ ಸೂಚಿಸುತ್ತದೆ. ಜರ್ಮನ್ ವಿದ್ವಾಂಸನಾದ ಹಾನ್ಸ್ ಬ್ರೂನ್ಸ್ ಹೇಳುವುದು: “‘ಅವರಿಗೆ’ ಎಂಬ ಆ [ಪದವು] ರಾಷ್ಟ್ರಗಳಿಗೆ ಸೂಚಿಸುವುದಿಲ್ಲ (ಗ್ರೀಕ್ ಭಾಷೆ ಒಂದು ಸ್ಫುಟವಾದ ವ್ಯತ್ಯಾಸವನ್ನು ಮಾಡುತ್ತದೆ) ಬದಲಾಗಿ ಜನಾಂಗಗಳಲ್ಲಿರುವ ಜನರಿಗೆ ಸೂಚಿಸುತ್ತದೆ.”
ಅಷ್ಟಲ್ಲದೆ, ಯೇಸುವಿನ ಆಜ್ಞೆಯು ಯಾವ ರೀತಿಯಲ್ಲಿ ಕಾರ್ಯರೂಪಕ್ಕೆ ತರಲ್ಪಟ್ಟಿತೋ ಅದನ್ನು ಪರಿಗಣಿಸಬೇಕು. ಏಷ್ಯಾ ಮೈನರ್ನ ಒಂದು ಪಟ್ಟಣವಾದ ದೆರ್ಬೆಯಲ್ಲಿ ಪೌಲ ಮತ್ತು ಬಾರ್ನಬರ ಶುಶ್ರೂಷೆಯ ಕುರಿತಾಗಿ ನಾವು ಓದುವುದು: ಅವರು “ಸುವಾರ್ತೆಯನ್ನು ಸಾರಿ ಅನೇಕರನ್ನು ಶಿಷ್ಯರಾಗ ಮಾಡಿದ ಮೇಲೆ ಹಿಂತಿರುಗಿ ಲುಸ್ತ್ರಕ್ಕೂ ಇಕೋನ್ಯಕ್ಕೂ ಅಂತಿಯೋಕ್ಯಕ್ಕೂ” ಬಂದರು. (ಅ. ಕೃತ್ಯಗಳು 14:21) ಪೌಲ ಮತ್ತು ಬಾರ್ನಬರು, ದೆರ್ಬೆಯ ನಗರವನ್ನು ಶಿಷ್ಯರನ್ನಾಗಿ ಮಾಡಲಿಲ್ಲ, ಬದಲಿಗೆ ದೆರ್ಬೆಯಲ್ಲಿದ್ದ ಜನರಲ್ಲಿ ಕೆಲವರನ್ನು ಶಿಷ್ಯರನ್ನಾಗಿ ಮಾಡಿದರು ಎಂಬುದನ್ನು ಗಮನಿಸಿರಿ.
ತದ್ರೀತಿಯಲ್ಲಿ, ಅಂತ್ಯದ ಸಮಯದ ಸಂಬಂಧದಲ್ಲಿ, ಇಡೀ ರಾಷ್ಟ್ರಗಳು ದೇವರಿಗೆ ಸೇವೆಸಲ್ಲಿಸುವವು ಎಂಬುದಾಗಿ ಅಲ್ಲ, ಬದಲಿಗೆ “ಮಹಾ ಸಮೂಹವು . . . ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ” ಹಾಗೆ ಮಾಡುವರೆಂದು ಪ್ರಕಟನೆಯ ಪುಸ್ತಕವು ಮುಂತಿಳಿಸಿತು. (ಪ್ರಕಟನೆ 7:9, ಓರೆಅಕ್ಷರಗಳು ನಮ್ಮವು.) ಹೀಗೆ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್, ‘ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರದ’ ಭರವಸಾರ್ಹ ಭಾಷಾಂತರವಾಗಿ ನಿರ್ದೋಷೀಕರಿಸಲ್ಪಡುತ್ತದೆ.—2 ತಿಮೊಥೆಯ 3:16.