ಅಪೊಸ್ತಲ ಸಂಬಂಧಿತ ಸಮಯಗಳಲ್ಲಿ ಬೆಳಕಿನ ಬೆಳಗುಗಳು
“ನೀತಿವಂತನಿಗಾಗಿ ಬೆಳಕು ತಾನೇ ಬೆಳಗಿದೆ; ಆನಂದೋತ್ಸವ ಹೃದಯದಲ್ಲಿ ಸತ್ಯವಂತರಿಗೂ.”—ಕೀರ್ತನೆ 97:11, NW.
1. ಆದಿ ಕ್ರೈಸ್ತರನ್ನು ಇಂದು ಯೆಹೋವನ ಸಾಕ್ಷಿಗಳು ಹೋಲುವುದು ಹೇಗೆ?
ನಿಜ ಕ್ರೈಸ್ತರೋಪಾದಿ, ನಾವು ಕೀರ್ತನೆ 97:11ರ ಮಾತುಗಳನ್ನು ಎಷ್ಟೊಂದು ಗಣ್ಯಮಾಡುತ್ತೇವೆ! ನಮಗಾಗಿ ಸತತವಾಗಿ ‘ಬೆಳಕು ಬೆಳಗಿದೆ.’ ನಿಶ್ಚಯವಾಗಿ, ನಮ್ಮಲ್ಲಿ ಕೆಲವರು ಯೆಹೋವನ ಬೆಳಗುವ ಪ್ರಕಾಶವನ್ನು ಶತಮಾನಗಳಿಂದ ನೋಡಿದ್ದೇವೆ. ಇದೆಲ್ಲವು ನಮಗೆ ಜ್ಞಾನೋಕ್ತಿ 4:18ರ ಜ್ಞಾಪಕವನ್ನು ಹುಟ್ಟಿಸುತ್ತದೆ, ಅದು ಓದುವುದು: “ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ.” ಸಂಪ್ರದಾಯದ ಬದಲಿಗೆ ಶಾಸ್ತ್ರಗಳಿಗಾಗಿರುವ ನಮ್ಮ ಗಣ್ಯತೆಯಲ್ಲಿ, ಯೆಹೋವನ ಸಾಕ್ಷಿಗಳಾದ ನಾವು ಆದಿ ಕ್ರೈಸ್ತರನ್ನು ಹೋಲುತ್ತೇವೆ. ದೈವಿಕ ಪ್ರೇರಣೆಯ ಕೆಳಗೆ ಬರೆಯಲ್ಪಟ್ಟ ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಐತಿಹಾಸಿಕ ಪುಸ್ತಕಗಳಿಂದ ಮತ್ತು ಅದರ ಪತ್ರಗಳಿಂದ ಅವರ ಮನೋಭಾವವನ್ನು ಸ್ಪಷ್ಟವಾಗಿಗಿ ನೋಡಸಾಧ್ಯವಿದೆ.
2. ಯೇಸುವಿನ ಹಿಂಬಾಲಕರು ಪಡೆದಂತಹ ಬೆಳಕಿನ ಪ್ರಥಮ ಬೆಳಗುಗಳಲ್ಲಿ ಯಾವುವು ಒಳಗೊಂಡಿದ್ದವು?
2 ಯೇಸು ಕ್ರಿಸ್ತನ ಆದಿ ಹಿಂಬಾಲಕರು ಪಡೆದಂತಹ ಬೆಳಕಿನ ಪ್ರಥಮ ಬೆಳಗುಗಳಲ್ಲಿ, ಮೆಸ್ಸೀಯನಿಗೆ ಸಂಬಂಧಿಸಿದ ಬೆಳಗುಗಳು ಸೇರಿದ್ದವು. ಅಂದ್ರೆಯನು ತನ್ನ ಅಣನ್ಣಾದ ಸೀಮೋನನಿಗೆ ಹೇಳಿದ್ದು: “ಮೆಸ್ಸೀಯನು ನಮಗೆ ಸಿಕ್ಕಿದನು.” (ಯೋಹಾನ 1:41) ಸ್ವಲ್ಪ ಸಮಯದ ತರುವಾಯ, “ನೀನು ಬರಬೇಕಾಗಿರುವ ಕ್ರಿಸ್ತನು, ಜೀವಸ್ವರೂಪನಾದ ದೇವರ ಕುಮಾರನು” ಎಂದು ಯೇಸು ಕ್ರಿಸ್ತನಿಗೆ ಅಪೊಸ್ತಲ ಪೇತ್ರನು ಹೇಳಿದಾಗ, ಆ ದೃಷ್ಟಿಕೋನವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಸಾಕ್ಷ್ಯ ನೀಡುವಂತೆ ಪರಲೋಕದಲ್ಲಿರುವ ತಂದೆಯು ಅವನನ್ನು ಶಕ್ತಗೊಳಿಸಿದನು.—ಮತ್ತಾಯ 16:16, 17; ಯೋಹಾನ 6:68, 69.
ಅವರ ಸಾರುವ ನಿಯೋಗದ ಸಂಬಂಧದಲ್ಲಿ ಬೆಳಕು
3, 4. ಯೇಸುವಿನ ಪುನರುತ್ಥಾನದ ತರುವಾಯ, ಅವರ ಭವಿಷ್ಯದ ಚಟುವಟಿಕೆಯ ಸಂಬಂಧದಲ್ಲಿ ಯಾವ ಜ್ಞಾನೋದಯವನ್ನು ಅವನು ತನ್ನ ಹಿಂಬಾಲಕರಿಗೆ ನೀಡಿದನು?
3 ತನ್ನ ಪುನರುತ್ಥಾನದ ಬಳಿಕ, ಯೇಸು ಕ್ರಿಸ್ತನು ತನ್ನ ಎಲ್ಲಾ ಹಿಂಬಾಲಕರ ಮೇಲಿರುವ ಒಂದು ಕರ್ತವ್ಯದ ಕುರಿತಾಗಿ ಬೆಳಕಿನ ಬೆಳಗುಗಳನ್ನು ನೀಡಿದನು. ಬಹುಶಃ ಅವನು ಗಲಿಲಾಯದಲ್ಲಿ ನೆರೆದು ಬಂದಿದ್ದ 500 ಶಿಷ್ಯರಿಗೆ, “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ” ಎಂದು ಹೇಳಿದನು. (ಮತ್ತಾಯ 28:19, 20; 1 ಕೊರಿಂಥ 15:6) ತದನಂತರ, ಕ್ರಿಸ್ತನ ಎಲ್ಲ ಹಿಂಬಾಲಕರು ಸಾರುವವರಾಗಿರಬೇಕಿತ್ತು, ಮತ್ತು ಅವರ ಸಾರುವ ನಿಯೋಗವು “ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರಾಯೇಲನ ಮನೆತನ” ದವರಿಗೆ ಸೀಮಿತವಾಗಿರುವಂತಿರಲಿಲ್ಲ. (ಮತ್ತಾಯ 10:6) ಪಾಪಗಳ ಕ್ಷಮಾಪಣೆಗಾಗಿರುವ ಪಶ್ಚಾತ್ತಾಪದ ಸಂಕೇತದಲ್ಲಿ, ಯೋಹಾನನ ದೀಕ್ಷಾಸ್ನಾನವನ್ನೂ ಅವರು ನಡೆಸುವಂತಿರಲಿಲ್ಲ. ಬದಲಿಗೆ ಅವರು ಜನರನ್ನು “ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ” ದೀಕ್ಷಾಸ್ನಾನ ಮಾಡಿಸಬೇಕಿತ್ತು.
4 ಯೇಸು ಸ್ವರ್ಗಕ್ಕೆ ಆರೋಹಣ ಮಾಡುವ ಸ್ವಲ್ಪ ಸಮಯದ ಮುಂಚೆ, ಅವನ 11 ನಂಬಿಗಸ್ತ ಅಪೊಸ್ತಲರು ಕೇಳಿದ್ದು: “ಸ್ವಾಮೀ, ನೀನು ಇದೇ ಕಾಲದಲ್ಲಿ ಇಸ್ರಾಯೇಲ್ ಜನರಿಗೆ ರಾಜ್ಯವನ್ನು ತಿರಿಗಿ ಸ್ಥಾಪಿಸಿಕೊಡುವಿಯೋ?” ಆ ಪ್ರಶ್ನೆಯನ್ನು ಉತ್ತರಿಸುವ ಬದಲು, ಹೀಗೆ ಹೇಳುತ್ತಾ ಯೇಸು ಅವರ ಸಾರುವ ನಿಯೋಗದ ಕುರಿತು ಹೆಚ್ಚಿನ ಉಪದೇಶಗಳನ್ನು ನೀಡಿದನು: “ಆದರೆ ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯ ವರೆಗೂ ಸಾಕ್ಷಿಗಳಾಗಿರಬೇಕು.” ಅಲ್ಲಿಯ ವರೆಗೆ ಅವರು ಕೇವಲ ಯೆಹೋವನಿಗೆ ಸಾಕ್ಷಿಗಳಾಗಿದ್ದರು, ಆದರೆ ಈಗ ಅವರು ಕ್ರಿಸ್ತನಿಗೂ ಸಾಕ್ಷಿಗಳಾಗಿರುವರು.—ಅ. ಕೃತ್ಯಗಳು 1:6-8.
5, 6. ಪಂಚಾಶತ್ತಮದಲ್ಲಿ ಬೆಳಕಿನ ಯಾವ ಬೆಳಗುಗಳನ್ನು ಯೇಸುವಿನ ಶಿಷ್ಯರು ಪಡೆದರು?
5 ಕೇವಲ ಹತ್ತು ದಿನಗಳ ತರುವಾಯ, ಯೇಸುವಿನ ಹಿಂಬಾಲಕರು ಬೆಳಕಿನ ಎಂತಹ ಉಜ್ವಲ ಬೆಳಗುಗಳನ್ನು ಪಡೆದರು! ಸಾ.ಶ. 33ರ ಪಂಚಾಶತ್ತಮದ ದಿನದಂದು, ಪ್ರಥಮ ಬಾರಿಗೆ, ಅವರು ಯೋವೇಲ 2:28, 29ರ ಮಹತ್ವವನ್ನು ಗಣ್ಯಮಾಡಿದರು: “ತರುವಾಯ ನಾನು [ಯೆಹೋವನು] ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ನಿಮ್ಮಲ್ಲಿರುವ ಗಂಡಸರೂ ಹೆಂಗಸರೂ ಪ್ರವಾದಿಸುವರು; ನಿಮ್ಮ ಹಿರಿಯರಿಗೆ ಕನಸುಗಳು ಬೀಳುವವು, ನಿಮ್ಮ ಯೌವನಸ್ಥರಿಗೆ ದಿವ್ಯದರ್ಶನಗಳಾಗುವವು; ಇದಲ್ಲದೆ ಆ ದಿನಗಳಲ್ಲಿ ದಾಸದಾಸಿಯರ ಮೇಲೆಯೂ ನನ್ನ ಆತ್ಮವನ್ನು ಸುರಿಸುವೆನು.” ಯೆರೂಸಲೇಮಿನಲ್ಲಿ ನೆರೆದುಬಂದ ಎಲ್ಲರ, ಸುಮಾರು 120 ಪುರುಷರ ಹಾಗೂ ಸ್ತ್ರೀಯರ ತಲೆಗಳ ಮೇಲೆ ಬೆಂಕಿಯ ನಾಲಿಗೆಗಳ ರೂಪದಲ್ಲಿದ್ದ ಪವಿತ್ರಾತ್ಮವು ನೆಲೆಸಿರುವುದನ್ನು ಯೇಸುವಿನ ಶಿಷ್ಯರು ಕಂಡರು.—ಅ. ಕೃತ್ಯಗಳು 1:12-15; 2:1-4.
6 ಪಂಚಾಶತ್ತಮದ ದಿನವೇ, ಕೀರ್ತನೆ 16:10ರ ಮಾತುಗಳು ಪುನರುತ್ಥಾನಗೊಂಡ ಯೇಸು ಕ್ರಿಸ್ತನಿಗೆ ಅನ್ವಯಿಸಿದವೆಂಬುದಾಗಿ ಶಿಷ್ಯರು ಮೊದಲು ತಿಳಿದುಕೊಂಡರು. ಕೀರ್ತನೆಗಾರನು ಹೇಳಿದ್ದು: “ನೀನು [ಯೆಹೋವ ದೇವರು] ನನ್ನ ಜೀವಾತ್ಮವನ್ನು ಪಾತಾಳದಲ್ಲಿ ಬಿಡುವದಿಲ್ಲ. ನಿನ್ನ ಪ್ರಿಯನಿಗೆ ಅಧೋಲೋಕವನ್ನು ನೋಡಗೊಡಿಸುವದಿಲ್ಲ.” ಆ ಮಾತುಗಳು ರಾಜ ದಾವೀದನಿಗೆ ಅನ್ವಯಿಸಲು ಸಾಧ್ಯವಿರಲಿಲ್ಲವೆಂದು ಶಿಷ್ಯರು ಗ್ರಹಿಸಿದರು, ಯಾಕೆಂದರೆ ಅವನ ಸಮಾಧಿಯು ಆ ದಿನದ ವರೆಗೂ ಅವರ ಮಧ್ಯದಲ್ಲಿತ್ತು. ಈ ಹೊಸ ಬೆಳಕು ವಿವರಿಸಲ್ಪಟ್ಟದ್ದನ್ನು ಕೇಳಿದ ಸುಮಾರು 3,000 ಜನರು ಎಷ್ಟೊಂದು ಮನಗಾಣಿಸಲ್ಪಟ್ಟರೆಂದರೆ, ಅವರು ಆ ದಿನವೇ ದೀಕ್ಷಾಸ್ನಾನ ಪಡೆದರೆಂಬುದರಲ್ಲಿ ಆಶ್ಚರ್ಯವೇನೂ ಇಲ್ಲ!—ಅ. ಕೃತ್ಯಗಳು 2:14-41.
7. ರೋಮನ್ ಸೇನಾಪತಿ ಕೊರ್ನೇಲ್ಯನಿಗೆ ನೀಡಿದ ತನ್ನ ಭೇಟಿಯ ಸಮಯದಲ್ಲಿ ಯಾವ ಉಜ್ವಲ ಬೆಳಕನ್ನು ಅಪೊಸ್ತಲ ಪೇತ್ರನು ಪಡೆದನು?
7 ಅನೇಕ ಶತಮಾನಗಳ ವರೆಗೆ, ದೇವರು ಅವರ ಕುರಿತು ಹೇಳಿದ್ದನ್ನು ಇಸ್ರಾಯೇಲ್ಯರು ಗಣ್ಯಮಾಡಿದರು: “ಭೂಮಿಯ ಸಕಲಕುಲಗಳೊಳಗೆ ನಿಮ್ಮನ್ನು ಮಾತ್ರ ನನ್ನವರೆಂದು ಅರಿತುಕೊಂಡಿದ್ದೇನೆ.” (ಆಮೋಸ 3:2) ಆದುದರಿಂದ, ಸುನ್ನತಿಯಿಲ್ಲದ ಅನ್ಯಜನಾಂಗದ ವಿಶ್ವಾಸಿಗಳ ಮೇಲೆ ಮೊದಲ ಬಾರಿಗೆ ಪವಿತ್ರಾತ್ಮವು ಇಳಿದು ಬಂದಾಗ, ರೋಮನ್ ಸೇನಾಪತಿಯಾದ ಕೊರ್ನೇಲ್ಯನ ಮನೆಗೆ ಹೋಗಿದ್ದ ಅಪೊಸ್ತಲ ಪೇತ್ರನು ಮತ್ತು ಅವನೊಂದಿಗೆ ಜೊತೆಗೂಡಿದ್ದವರು ನಿಜವಾಗಿಯೂ ಬೆಳಕಿನ ಒಂದು ಉಜ್ವಲ ಬೆಳಗನ್ನು ಪಡೆದಿದ್ದರು. ದೀಕ್ಷಾಸ್ನಾನಕ್ಕೆ ಮೊದಲು ಪವಿತ್ರಾತ್ಮವು ಕೊಡಲ್ಪಟ್ಟದ್ದು ಇದೊಂದೇ ಬಾರಿ ಎಂಬುದು ಗಮನಾರ್ಹ. ಆದರೆ ಇದು ಅಗತ್ಯವಾಗಿತ್ತು. ಇಲ್ಲದಿದ್ದರೆ, ಸುನ್ನತಿಯಿಲ್ಲದ ಈ ಅನ್ಯಜನಾಂಗದವರು ದೀಕ್ಷಾಸ್ನಾನಕ್ಕೆ ಅರ್ಹರೆಂದು ಪೇತ್ರನಿಗೆ ಗೊತ್ತಾಗುತ್ತಿರಲಿಲ್ಲ. ಈ ಘಟನೆಯ ಮಹತ್ವವನ್ನು ಪೂರ್ಣವಾಗಿ ಗಣ್ಯಮಾಡುತ್ತಾ, ಪೇತ್ರನು ಕೇಳಿದ್ದು: “ನಮ್ಮ ಹಾಗೆಯೇ ಪವಿತ್ರಾತ್ಮವರವನ್ನು ಹೊಂದಿದ ಇವರಿಗೆ ನೀರಿನ ದೀಕ್ಷಾಸ್ನಾನವಾಗದಂತೆ ಯಾರಾದರೂ ಅಭ್ಯಂತರ ಮಾಡಾರೇ.” ನಿಶ್ಚಯವಾಗಿಯೂ, ಉಪಸ್ಥಿತದಿದ್ದವರಲ್ಲಿ ಯಾರೂ ಯೋಗ್ಯವಾಗಿ ಆಕ್ಷೇಪಿಸಸಾಧ್ಯವಿರಲಿಲ್ಲ, ಆದುದರಿಂದ ಈ ಅನ್ಯಜನಾಂಗದವರ ದೀಕ್ಷಾಸ್ನಾನವು ಜರುಗಿತು.—ಅ. ಕೃತ್ಯಗಳು 10:44-48; ಹೋಲಿಸಿ ಅ. ಕೃತ್ಯಗಳು 8:14-17.
ಇನ್ನು ಮುಂದೆ ಸುನ್ನತಿಯಿಲ್ಲ
8. ಸುನ್ನತಿಯ ಬೋಧನೆಯನ್ನು ತೊರೆಯುವುದು ಕಷ್ಟಕರವೆಂದು ಕೆಲವು ಆರಂಭದ ಕ್ರೈಸ್ತರು ಕಂಡುಕೊಂಡರೇಕೆ?
8 ಸುನ್ನತಿಯ ಪ್ರಶ್ನೆಯ ಸಂಬಂಧದಲ್ಲಿ ಸತ್ಯದ ಇನ್ನೂ ಹೆಚ್ಚಿನ ಉಜ್ವಲ ಬೆಳಗು ಕಾಣಿಸಿಕೊಂಡಿತು. ಸಾ.ಶ.ಪೂ. 1919 ರಲ್ಲಿ ಅಬ್ರಹಾಮನೊಂದಿಗಿನ ಯೆಹೋವನ ಒಡಂಬಡಿಕೆಯಿಂದಾಗಿ ಸುನ್ನತಿಯ ಆಚರಣೆಯು ಆರಂಭಿಸಿತು. ಅವನಿಗೂ ಅವನ ಮನೆವಾರ್ತೆಯ ಇತರ ಎಲ್ಲ ಗಂಡಸರಿಗೂ ಸುನ್ನತಿಯಾಗಬೇಕೆಂದು ದೇವರು ಅನಂತರ ಅಬ್ರಹಾಮನಿಗೆ ಆಜ್ಞಾಪಿಸಿದನು. (ಆದಿಕಾಂಡ 17:9-14, 23-27) ಆದುದರಿಂದ ಸುನ್ನತಿಯು ಅಬ್ರಹಾಮನ ವಂಶಸ್ಥರನ್ನು ಗುರುತಿಸುವ ಒಂದು ಚಿಹ್ನೆಯಾಯಿತು. ಮತ್ತು ಈ ಪದ್ಧತಿಯ ವಿಷಯದಲ್ಲಿ ಅವರು ಎಷ್ಟು ಹೆಮ್ಮೆಪಟ್ಟರು! ಫಲಸ್ವರೂಪವಾಗಿ, “ಸುನ್ನತಿಯಿಲ್ಲದವರು” ಎಂಬುದು ತಿರಸ್ಕಾರದ ಪದವಾಯಿತು. (ಯೆಶಾಯ 52:1; 1 ಸಮುವೇಲ 17:26, 27) ಆರಂಭದ ಯೆಹೂದಿ ಕ್ರೈಸ್ತರಲ್ಲಿ ಕೆಲವರು ಈ ಸಂಕೇತವನ್ನು ಉಳಿಸಿಕೊಳ್ಳಲು ಏಕೆ ಬಯಸಿದರೆಂದು ನೋಡುವುದು ಸುಲಭವಾಗಿದೆ. ಈ ವಿಷಯದ ಕುರಿತು ಅವರಲ್ಲಿ ಕೆಲವರು ಪೌಲ ಬಾರ್ನಬರೊಂದಿಗೆ ಬಹಳಷ್ಟು ಚರ್ಚೆಯನ್ನು ನಡೆಸಿದರು. ಅದನ್ನು ಬಗೆಹರಿಸಲು, ಪೌಲ ಮತ್ತು ಇತರರು, ಕ್ರೈಸ್ತ ಆಡಳಿತ ಮಂಡಲಿಯನ್ನು ವಿಚಾರಿಸಲಿಕ್ಕಾಗಿ ಯೆರೂಸಲೇಮಿಗೆ ಹೋದರು.—ಅ. ಕೃತ್ಯಗಳು 15:1, 2.
9. ಅ. ಕೃತ್ಯಗಳು 15 ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಂತೆ, ಆರಂಭದ ಆಡಳಿತ ಮಂಡಳಿಗೆ ಬೆಳಕಿನ ಯಾವ ಬೆಳಗುಗಳು ಪ್ರಕಟಿಸಲ್ಪಟ್ಟವು?
9 ಈ ಸಲ, ಯೆಹೋವನ ಸೇವಕರಿಗೆ ಸುನ್ನತಿಯು ಇನ್ನು ಮುಂದೆ ಒಂದು ಆವಶ್ಯಕತೆಯಾಗಿರುವುದಿಲ್ಲವೆಂಬ ಬೆಳಕನ್ನು ಆ ಆರಂಭದ ಕ್ರೈಸ್ತರು ಪಡೆದದ್ದು ಸ್ಪಷ್ಟವಾಗಿದ ಒಂದು ಅದ್ಭುತಕಾರ್ಯದ ಮೂಲಕವಲ್ಲ. ಬದಲಿಗೆ, ಶಾಸ್ತ್ರಗಳನ್ನು ಹುಡುಕುವ ಮೂಲಕ, ಮಾರ್ಗದರ್ಶನಕ್ಕಾಗಿ ಪವಿತ್ರಾತ್ಮನ ಮೇಲೆ ಆತುಕೊಳ್ಳುವ ಮೂಲಕ, ಮತ್ತು ಸುನ್ನತಿಯಿಲ್ಲದ ಅನ್ಯಜನಾಂಗದವರ ಪರಿವರ್ತನೆಯ ಸಂಬಂಧದಲ್ಲಿ ಪೇತ್ರ ಮತ್ತು ಪೌಲರ ಅನುಭವಗಳನ್ನು ಕೇಳುವ ಮೂಲಕ ಅವರು ಆ ಹೆಚ್ಚಿನ ಬೆಳಕನ್ನು ಪಡೆದರು. (ಅ. ಕೃತ್ಯಗಳು 15:6-21) ನಿರ್ಣಯವನ್ನು, ಭಾಗಶಃ ಹೀಗೆ ಓದಿದ ಪತ್ರವೊಂದರಲ್ಲಿ ಪ್ರಕಟಿಸಲಾಯಿತು: “ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ ರಕ್ತವನ್ನೂ ಕುತ್ತಿಗೆಹಿಸುಕಿ ಕೊಂದದ್ದನ್ನೂ ಹಾದರವನ್ನೂ ವಿಸರ್ಜಿಸುವದು ಅವಶ್ಯವಾಗಿದೆ. ಇದಕ್ಕೆ ಹೆಚ್ಚಿನ ಭಾರವನ್ನು ನಿಮ್ಮ ಮೇಲೆ ಹಾಕಬಾರದೆಂದು ಪವಿತ್ರಾತ್ಮನಿಗೂ ನಮಗೂ ವಿಹಿತವಾಗಿ ತೋರಿತು.” (ಅ. ಕೃತ್ಯಗಳು 15:28, 29) ಹೀಗೆ ಆರಂಭದ ಕ್ರೈಸ್ತರು ಸುನ್ನತಿಯನ್ನು ಆಚರಿಸುವ ಆಜ್ಞೆಯಿಂದ ಮತ್ತು ಮೋಶೆಯ ಧರ್ಮಶಾಸ್ತ್ರದ ಇತರ ಆವಶ್ಯಕತೆಗಳಿಂದ ಬಿಡುಗಡೆಗೊಳಿಸಲ್ಪಟ್ಟರು. ಆದಕಾರಣ, ಪೌಲನು ಗಲಾತ್ಯದ ಕ್ರೈಸ್ತರಿಗೆ ಹೀಗೆ ಹೇಳಸಾಧ್ಯವಿತ್ತು: “ಕ್ರಿಸ್ತನು ನಮ್ಮನ್ನು ಸ್ವತಂತ್ರದಲ್ಲಿರಿಸಬೇಕೆಂದು ನಮಗೆ ಬಿಡುಗಡೆಮಾಡಿದನು.”—ಗಲಾತ್ಯ 5:1.
ಸುವಾರ್ತೆಗಳಲ್ಲಿ ಬೆಳಕು
10. ಮತ್ತಾಯನ ಸುವಾರ್ತೆಯಲ್ಲಿ ಪ್ರಕಟಿಸಲಾದ ಬೆಳಕಿನ ಬೆಳಗುಗಳಲ್ಲಿ ಕೆಲವು ಯಾವುವು?
10 ಸಾ.ಶ. 41ರ ಸುಮಾರಿಗೆ ಬರೆಯಲ್ಪಟ್ಟ ಮತ್ತಾಯನ ಸುವಾರ್ತೆಯಲ್ಲಿ ಅದರ ಓದುಗರ ಪ್ರಯೋಜನಕ್ಕಾಗಿ ಬೆಳಕಿನ ಅನೇಕ ಬೆಳಗುಗಳು ಇವೆಯೆಂಬುದರಲ್ಲಿ ಯಾವ ಸಂದೇಹವೂ ಇರುವುದಿಲ್ಲ. ತುಲನಾತ್ಮಕವಾಗಿ ಪ್ರಥಮ ಶತಮಾನದ ಕ್ರೈಸ್ತರಲ್ಲಿ ಕೆಲವರು ಮಾತ್ರ ವೈಯಕ್ತಿಕವಾಗಿ ಯೇಸು ತನ್ನ ಬೋಧನೆಗಳನ್ನು ವಿವರಿಸಿದ್ದನ್ನು ಕೇಳಿದ್ದರು. ಯೇಸುವಿನ ಸಾರುವ ಕಾರ್ಯದ ಮುಖ್ಯ ವಿಷಯವು ರಾಜ್ಯವಾಗಿತ್ತೆಂದು ಮತ್ತಾಯನ ಸುವಾರ್ತೆಯು ವಿಶೇಷವಾಗಿ ಒತ್ತಿಹೇಳಿತು. ಮತ್ತು ಸರಿಯಾದ ಹೇತುವನ್ನು ಹೊಂದಿರುವುದರ ಪ್ರಮುಖತೆಯನ್ನು ಯೇಸು ಎಷ್ಟು ಬಲವಾಗಿ ಒತ್ತಿಹೇಳಿದನು! ಅವನ ಪರ್ವತ ಪ್ರಸಂಗದಲ್ಲಿ, ಅವನ ಸಾಮ್ಯಗಳಲ್ಲಿ (ಅಧ್ಯಾಯ 13 ರಲ್ಲಿ ದಾಖಲಿಸಿದವುಗಳಂತೆ), ಮತ್ತು ಅಧ್ಯಾಯಗಳು 24 ಮತ್ತು 25 ರಲ್ಲಿರುವ ಅವನ ಮಹಾ ಪ್ರವಾದನೆಯಲ್ಲಿ, ಬೆಳಕಿನ ಎಂತಹ ಬೆಳಗುಗಳಿವೆ! ಸಾ.ಶ. 33ರ ಪಂಚಾಶತ್ತಮದ ಸುಮಾರು ಎಂಟು ವರ್ಷಗಳ ಬಳಿಕವೇ ಬರೆಯಲ್ಪಟ್ಟ, ಮತ್ತಾಯನ ಸುವಾರ್ತಾ ವೃತ್ತಾಂತದಲ್ಲಿ ಇವೆಲ್ಲವು ಆರಂಭದ ಕ್ರೈಸ್ತರ ಗಮನಕ್ಕೆ ತರಲ್ಪಟ್ಟವು.
11. ಲೂಕ ಮತ್ತು ಮಾರ್ಕನ ಸುವಾರ್ತೆಗಳ ಒಳವಿಷಯದ ಕುರಿತು ಏನನ್ನು ಹೇಳಸಾಧ್ಯವಿದೆ?
11 ಸುಮಾರು 15 ವರ್ಷಗಳ ತರುವಾಯ, ಲೂಕನು ತನ್ನ ಸುವಾರ್ತೆಯನ್ನು ಬರೆದನು. ಅದರಲ್ಲಿ ಹೆಚ್ಚಿನದು ಮತ್ತಾಯನ ವೃತ್ತಾಂತಕ್ಕೆ ತದ್ರೀತಿಯದ್ದಾಗಿದ್ದರೂ, 59 ಪ್ರತಿಶತವು ಹೆಚ್ಚಿಗೆಯ ವಿಷಯವಾಗಿದೆ. ಯೇಸುವಿನ ಅದ್ಭುತ ಕಾರ್ಯಗಳಲ್ಲಿ ಆರನ್ನು ಮತ್ತು ಇತರ ಸುವಾರ್ತಾ ಬರಹಗಾರರಿಂದ ಪ್ರಸ್ತಾಪಿಸಲ್ಪಡದ, ಆತನ ಅನೇಕ ದೃಷ್ಟಾಂತಗಳನ್ನು ಎರಡು ಪಟ್ಟು ಹೆಚ್ಚಾಗಿ ಲೂಕನು ದಾಖಲಿಸಿದನು. ಕೆಲವೇ ವರ್ಷಗಳ ತರುವಾಯ ಮಾರ್ಕನು, ಒಬ್ಬ ಕಾರ್ಯನಿಷ್ಠ ವ್ಯಕ್ತಿಯೋಪಾದಿ, ಅದ್ಭುತಕಾರ್ಯಗಳನ್ನು ಮಾಡುವವನಂತೆ ಯೇಸು ಕ್ರಿಸ್ತನ ಮೇಲೆ ಮಹತ್ವವನ್ನು ಇರಿಸುತ್ತಾ, ತನ್ನ ಸುವಾರ್ತೆಯನ್ನು ಬರೆದನೆಂಬುದು ಸ್ಪಷ್ಟ. ಈ ಹಿಂದೆ ಮತ್ತಾಯನಿಂದ ಮತ್ತು ಲೂಕನಿಂದ ಆವರಿಸಲ್ಪಟ್ಟ ಘಟನೆಗಳನ್ನು ಮಾರ್ಕನು ಹೆಚ್ಚಾಗಿ ವರದಿಸಿದನಾದರೂ, ಅವರು ವರದಿಸದ ಒಂದು ಸಾಮ್ಯವನ್ನು ಅವನು ವರದಿಸಿದನು. ಆ ದೃಷ್ಟಾಂತದಲ್ಲಿ ಯೇಸು ದೇವರ ರಾಜ್ಯವನ್ನು, ಕುಡಿಯೊಡೆದು, ಎತ್ತರವಾಗಿ ಬೆಳೆದು, ಕ್ರಮೇಣ ಫಲವನ್ನು ನೀಡುವ ಬೀಜಕ್ಕೆ ಹೋಲಿಸಿದನು.a—ಮಾರ್ಕ 4:26-29.
12. ಎಷ್ಟರ ಮಟ್ಟಿಗೆ ಯೋಹಾನನ ಸುವಾರ್ತೆಯು ಹೆಚ್ಚಿನ ಜ್ಞಾನೋದಯವನ್ನು ಒದಗಿಸಿತು?
12 ಅನಂತರ, ಮಾರ್ಕನು ತನ್ನ ವೃತ್ತಾಂತವನ್ನು ಬರೆದು 30 ಕ್ಕಿಂತಲೂ ಹೆಚ್ಚು ವರ್ಷಗಳ ತರುವಾಯ, ಯೋಹಾನನ ಸುವಾರ್ತೆಯು ಇತ್ತು. ವಿಶೇಷವಾಗಿ ಯೇಸುವಿನ ಮಾನವಪೂರ್ವ ಅಸ್ತಿತ್ವದ ಅನೇಕ ಉಲ್ಲೀಖಗಳ ಮೂಲಕ, ಯೋಹಾನನು ಯೇಸುವಿನ ಶುಶ್ರೂಷೆಯ ಮೇಲೆ ಬೆಳಕಿನ ಎಂತಹ ಒಂದು ಪ್ರವಾಹವನ್ನು ಚೆಲ್ಲಿದನು! ಯೋಹಾನನು ಮಾತ್ರ ಲಾಜರನ ಪುನರುತ್ಥಾನದ ವೃತ್ತಾಂತವನ್ನು ಒದಗಿಸುತ್ತಾನೆ, ಮತ್ತು ಅವನು ಮಾತ್ರ ಅಧ್ಯಾಯಗಳು 13 ರಿಂದ 17ರ ವರೆಗೆ ದಾಖಲಿಸಿರುವಂತೆ, ತನ್ನ ನಂಬಿಗಸ್ತ ಅಪೊಸ್ತಲರಿಗೆ ಯೇಸುವಿನ ಅನೇಕ ಉತ್ತಮ ಹೇಳಿಕೆಗಳನ್ನು ಅಷ್ಟೇ ಅಲ್ಲದೆ ಮೋಸದಿಂದ ಅವನನ್ನು ಹಿಡಿಯಲ್ಲಿದ್ದ ರಾತ್ರಿಯಂದು ಅವನ ಹೃದಯೋಲ್ಲಾಸಗೊಳಿಸುವ ಪ್ರಾರ್ಥನೆಯನ್ನು ನಮಗೆ ನೀಡುತ್ತಾನೆ. ವಾಸ್ತವವಾಗಿ, ಯೋಹಾನನ ಸುವಾರ್ತೆಯ 92 ಪ್ರತಿಶತವು ಅಪೂರ್ವವಾಗಿದೆ ಎಂದು ಹೇಳಲಾಗುತ್ತದೆ.
ಪೌಲನ ಪತ್ರಗಳಲ್ಲಿ ಬೆಳಕಿನ ಬೆಳಗುಗಳು
13. ರೋಮಾಪುರದವರಿಗೆ ಬರೆದ ಪೌಲನ ಪತ್ರವನ್ನು, ಒಂದು ಸುವಾರ್ತೆಯೋ ಎಂಬಂತೆ ಕೆಲವರು ಪರಿಗಣಿಸಿದ್ದಾರೆ ಏಕೆ?
13 ಅಪೊಸ್ತಲ ಸಂಬಂಧಿತ ಸಮಯಗಳಲ್ಲಿ ಜೀವಿಸುತ್ತಿದ್ದ ಕ್ರೈಸ್ತರಿಗೆ ಸತ್ಯದ ಬೆಳಗುಗಳನ್ನು ತರಲು, ಅಪೊಸ್ತಲ ಪೌಲನು ವಿಶೇಷವಾಗಿ ಉಪಯೋಗಿಸಲ್ಪಟ್ಟನು. ದೃಷ್ಟಾಂತಕ್ಕಾಗಿ, ಲೂಕನು ತನ್ನ ಸುವಾರ್ತೆಯನ್ನು ಬಹುಮಟ್ಟಿಗೆ ಬರೆದ ಅದೇ ಸಮಯ—ಸಾ.ಶ. 56ರ ಸುಮಾರಿಗೆ ರೋಮಾಪುರದವರಿಗೆ ಬರೆಯಲ್ಪಟ್ಟ ಪೌಲನ ಪತ್ರವಿದೆ. ನೀತಿಯು ದೇವರ ಅಪಾತ್ರ ದಯೆಯ ಕಾರಣ ಮತ್ತು ಯೇಸು ಕ್ರಿಸ್ತನಲ್ಲಿ ನಂಬಿಕೆಯ ಮುಖಾಂತರ ಆರೋಪಿಸಲಾಗಿದೆ ಎಂಬ ನಿಜತ್ವವನ್ನು ಪೌಲನು ಈ ಪತ್ರದಲ್ಲಿ ಎತ್ತಿತೋರಿಸುತ್ತಾನೆ. ಸುವಾರ್ತೆಯ ಈ ವಿಷಯಾಂಶದ ಮೇಲೆ ಪೌಲನ ಒತ್ತು, ರೋಮಾಪುರದವರಿಗೆ ಬರೆದ ಅವನ ಪತ್ರವನ್ನು, ಅದು ಐದನೆಯ ಸುವಾರ್ತೆಯೋ ಎಂಬಂತೆ ಕೆಲವರು ವೀಕ್ಷಿಸುವಂತೆ ಮಾಡಿದೆ.
14-16. (ಎ) ಕೊರಿಂಥದಲ್ಲಿದ್ದ ಕ್ರೈಸ್ತರಿಗೆ ಬರೆದ ತನ್ನ ಮೊದಲನೆಯ ಪತ್ರದಲ್ಲಿ, ಐಕ್ಯಕ್ಕಾಗಿರುವ ಅಗತ್ಯದ ಮೇಲೆ ಯಾವ ಬೆಳಕನ್ನು ಪೌಲನು ಬೀರಿದನು? (ಬಿ) ನಡವಳಿಕೆಯ ಬಗ್ಗೆ ಯಾವ ಹೆಚ್ಚಿನ ಬೆಳಕು ಒಂದನೆಯ ಕೊರಿಂಥದಲ್ಲಿದೆ?
14 ಕೊರಿಂಥದಲ್ಲಿ ಕ್ರೈಸ್ತರನ್ನು ಬಾಧಿಸುತ್ತಿದ್ದ ಕೆಲವೊಂದು ವಿಷಯಗಳ ಕುರಿತು ಪೌಲನು ಬರೆದನು. ಕೊರಿಂಥದವರಿಗೆ ಬರೆದ ಅವನ ಪತ್ರವು ನಮ್ಮ ದಿನದ ವರೆಗೆ ಕ್ರೈಸ್ತರಿಗೆ ಪ್ರಯೋಜನ ತಂದಿರುವ ಹೆಚ್ಚಿನ ಪ್ರೇರಿತ ಸಲಹೆಯನ್ನು ಒಳಗೊಂಡಿದೆ. ಪ್ರಥಮವಾಗಿ, ಕೆಲವೊಂದು ವ್ಯಕ್ತಿಗಳ ಸುತ್ತಲೂ ಕೇಂದ್ರೀಕರಿಸುವ ವ್ಯಕ್ತಿ ಪ್ರಭಾವ ಪಂಥಗಳನ್ನು ರಚಿಸುವುದರಲ್ಲಿ ಅವರು ಮಾಡುತ್ತಿದ್ದ ತಪ್ಪಿನ ಕುರಿತಾಗಿ ಅವನು ಕೊರಿಂಥದವರಿಗೆ ತಿಳಿಸಬೇಕಿತ್ತು. ಧೈರ್ಯವಾಗಿ ಹೀಗೆ ಹೇಳುತ್ತಾ, ಅಪೊಸ್ತಲನು ಅವರ ಮಾನಸಿಕ ಮನೋಭಾವವನ್ನು ತಿದ್ದದನು: “ಸಹೋದರರೇ, ನಿಮ್ಮೆಲ್ಲರ ಮಾತು ಒಂದೇ ಆಗಿರಬೇಕು; ನಿಮ್ಮಲ್ಲಿ ಭೇದಗಳಿರಬಾರದು, ನೀವು ಒಂದೇ ಮನಸ್ಸೂ ಒಂದೇ ಅಭಿಪ್ರಾಯವೂ ಉಳ್ಳವರಾಗಿದ್ದು ಹೊಂದಿಕೆಯಿಂದಿರಬೇಕು ಎಂಬದಾಗಿ ನಾನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮ್ಮನ್ನು ಬೇಡಿಕೊಳ್ಳುತ್ತೇನೆ.”—1 ಕೊರಿಂಥ 1:10-15.
15 ಕೊರಿಂಥದಲ್ಲಿದ್ದ ಕ್ರೈಸ್ತ ಸಭೆಯಲ್ಲಿ ಮಹತ್ತರವಾದ ಅನೈತಿಕತೆಯನ್ನು ಸಹಿಸಿಕೊಳ್ಳಲಾಗುತ್ತಿತ್ತು. ‘ಅನ್ಯಜನರಲ್ಲಿಯೂ ಇಲ್ಲದ ಜಾರತ್ವವನ್ನು’ ಆಚರಿಸುತ್ತಾ, ಅಲ್ಲಿ ಒಬ್ಬ ಮನುಷ್ಯನು ತನ್ನ ತಂದೆಯ ಹೆಂಡತಿಯನ್ನು ಇಟ್ಟುಕೊಂಡಿದ್ದನು. ಸ್ಪಷ್ಟವಾಗಿಗಿ, ಪೌಲನು ಬರೆದದ್ದು: “ಆ ದುಷ್ಟನನ್ನು ನಿಮ್ಮ ಮಧ್ಯದಿಂದ ತೆಗೆದು” ಹಾಕಿರಿ. (1 ಕೊರಿಂಥ 5:1, 11-13) ಬಹಿಷ್ಕರಿಸುವುದು—ಅದು ಕ್ರೈಸ್ತ ಸಭೆಗೆ ಹೊಸದಾದ ವಿಷಯವಾಗಿತ್ತು. ಕೊರಿಂಥದ ಸಭೆಗೆ ಜ್ಞಾನೋದಯದ ಅಗತ್ಯವಿದ್ದ ಇನ್ನೊಂದು ವಿಷಯವು ಯಾವುದಾಗಿತ್ತೆಂದರೆ, ಅದರ ಕೆಲವು ಸದಸ್ಯರು ದೂರುಗಳನ್ನು ಬಗೆಹರಿಸುವ ಸಲುವಾಗಿ ತಮ್ಮ ಆತ್ಮಿಕ ಸಹೋದರರನ್ನು ಲೌಕಿಕ ನ್ಯಾಯಾಲಯಗಳಿಗೆ ಕೊಂಡೊಯ್ಯುತ್ತಿದ್ದರೆಂಬ ಸಂಗತಿಯೇ. ಇದನ್ನು ಮಾಡಿದಕ್ಕಾಗಿ ಪೌಲನು ಅವರನ್ನು ಬಲವಾಗಿ ಖಂಡಿಸಿದನು.—1 ಕೊರಿಂಥ 6:5-8.
16 ಕೊರಿಂಥದಲ್ಲಿದ್ದ ಸಭೆಯನ್ನು ಬಾಧಿಸಿದ ಇನ್ನೂ ಒಂದು ವಿಷಯವು ಲೈಂಗಿಕ ಸಂಬಂಧಗಳಿಗೆ ಸಂಬಂಧಿಸಿದ್ದಾಗಿತ್ತು. ಲೈಂಗಿಕ ಅನೈತಿಕತೆಯು ಚಾಲ್ತಿಯಲ್ಲಿದ್ದ ಕಾರಣ ಪ್ರತಿಯೊಬ್ಬ ಪುರುಷನಿಗೆ ತನ್ನ ಸ್ವಂತ ಹೆಂಡತಿ ಮತ್ತು ಪ್ರತಿಯೊಬ್ಬ ಸ್ತ್ರೀಗೆ ತನ್ನ ಸ್ವಂತ ಗಂಡನಿರುವುದು ಒಳ್ಳೆಯದೆಂದು, 1 ನೆಯ ಕೊರಿಂಥ 7 ನೆಯ ಅಧ್ಯಾಯದಲ್ಲಿ ಪೌಲನು ತೋರಿಸಿದನು. ಅವಿವಾಹಿತ ವ್ಯಕ್ತಿಗಳು ಕಡಿಮೆ ಅಪಕರ್ಷಣೆಯಿಂದ ಯೆಹೋವನನ್ನು ಸೇವಿಸಲು ಶಕ್ತರೆಂದು ಪೌಲನು ತೋರಿಸಿದನಾದರೂ, ಎಲ್ಲರಿಗೆ ಅವಿವಾಹಿತ ಸ್ಥಿತಿಯ ವರ ಇರಲಿಲ್ಲ. ಮತ್ತು ಒಬ್ಬ ಸ್ತ್ರೀಯ ಗಂಡನು ಸಾಯುವುದಾದರೆ, ಆಕೆ ಪುನಃ ವಿವಾಹವಾಗಲು ಸ್ವತಂತ್ರಳಾಗಸಾಧ್ಯವಿದೆ, ಆದರೆ ‘ಕರ್ತನಲ್ಲಿ ಮಾತ್ರ.’—1 ಕೊರಿಂಥ 7:39.
17. ಪುನರುತ್ಥಾನದ ಬೋಧನೆಯ ಬಗ್ಗೆ ಪೌಲನು ಯಾವ ಬೆಳಕನ್ನು ಬೀರಿದನು?
17 ಪುನರುತ್ಥಾನದ ಕುರಿತು ಬೆಳಕಿನ ಎಂತಹ ಬೆಳಗುಗಳನ್ನು ಬೀರುವಂತೆ ಕರ್ತನು ಪೌಲನನ್ನು ಉಪಯೋಗಿಸಿದನು! ಅಭಿಷಿಕ್ತ ಕ್ರೈಸ್ತರು ಯಾವ ರೀತಿಯ ದೇಹದೊಂದಿಗೆ ಎಬ್ಬಿಸಲ್ಪಡುವರು? “ಪ್ರಾಕೃತದೇಹವಾಗಿ ಬಿತ್ತಲ್ಪಡುತ್ತದೆ, ಆತ್ಮಿಕದೇಹವಾಗಿ ಎದ್ದು ಬರುವದು” ಎಂದು ಪೌಲನು ಬರೆದನು. ಯಾವ ಮಾಂಸಿಕ ದೇಹಗಳೂ ಸ್ವರ್ಗಕ್ಕೆ ಒಯ್ಯಲ್ಪಡವು, ಯಾಕೆಂದರೆ “ರಕ್ತ ಮಾಂಸವು ದೇವರ ರಾಜ್ಯಕ್ಕೆ ಬಾಧ್ಯವಾಗಲಾರದು.” ಎಲ್ಲ ಅಭಿಷಿಕ್ತರು ಮರಣದಲ್ಲಿ ನಿದ್ರೆಹೋಗುವದಿಲ್ಲವೆಂದು, ಆದರೆ ಯೇಸುವಿನ ಸಾನ್ನಿಧ್ಯದ ಸಮಯದಲ್ಲಿ ಕೆಲವರು ಮರಣ ಹೊಂದಿದ ಕೂಡಲೇ ಅಮರ ಜೀವಿತಕ್ಕೆ ಎಬ್ಬಿಸಲ್ಪಡುವರೆಂದು ಪೌಲನು ಕೂಡಿಸಿದನು.—1 ಕೊರಿಂಥ 15:43-53.
18. ಥೆಸಲೊನೀಕದವರಿಗೆ ಬರೆದ ಪೌಲನ ಪ್ರಥಮ ಪತ್ರವು ಭವಿಷ್ಯದ ಕುರಿತು ಯಾವ ಬೆಳಕನ್ನು ಒಳಗೊಂಡಿದೆ?
18 ಥೆಸಲೊನೀಕದಲ್ಲಿದ್ದ ಕ್ರೈಸ್ತರಿಗೆ ಬರೆದ ತನ್ನ ಪತ್ರದಲ್ಲಿ, ಭವಿಷ್ಯದ ಕುರಿತು ಬೆಳಕನ್ನು ಚೆಲಲ್ಲು ಪೌಲನು ಉಪಯೋಗಿಸಲ್ಪಟ್ಟನು. ಯೆಹೋವನ ದಿನವು ಕಳ್ಳನೋಪಾದಿ ರಾತ್ರಿಯಲ್ಲಿ ಬರಲಿತ್ತು. “ಸಮಾಧಾನವಾಗಿಯೂ ನಿರ್ಭಯವಾಗಿಯೂ ಇರುತ್ತೇವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆಬರುವ ಪ್ರಕಾರ ಬರುವದು; ಅವರು ಹೇಗೂ ತಪ್ಪಿಸಿಕೊಳ್ಳಲಾರರು” ಎಂದು ಸಹ ಪೌಲನು ವಿವರಿಸಿದನು.—1 ಥೆಸಲೊನೀಕ 5:2, 3.
19, 20. ಇಬ್ರಿಯರಿಗೆ ಬರೆದ ಪೌಲನ ಪತ್ರದಲ್ಲಿ ಬೆಳಕಿನ ಯಾವ ಬೆಳಗುಗಳನ್ನು ಯೆರೂಸಲೇಮ್ ಮತ್ತು ಯೂದಾಯದಲ್ಲಿದ್ದ ಕ್ರೈಸ್ತರು ಪಡೆದರು?
19 ಇಬ್ರಿಯರಿಗೆ ತನ್ನ ಪತ್ರವನ್ನು ಬರೆಯುವ ಮೂಲಕ, ಯೆರೂಸಲೇಮ್ ಮತ್ತು ಯೂದಾಯದಲ್ಲಿದ್ದ ಆದಿ ಕ್ರೈಸ್ತರಿಗೆ ಪೌಲನು ಬೆಳಕಿನ ಬೆಳಗುಗಳನ್ನು ಸಾಗಿಸಿದನು. ಮೋಶೆಯ ಆರಾಧನಾ ವ್ಯವಸ್ಥೆಗಿಂತ, ಕ್ರೈಸ್ತ ಆರಾಧನಾ ವ್ಯವಸ್ಥೆಯ ಶ್ರೇಷ್ಠತೆಯನ್ನು ಅವನು ಎಷ್ಟು ಶಕ್ತಿಶಾಲಿಯಾಗಿ ತೋರಿಸಿದನು! ದೇವದೂತರ ಮೂಲಕ ಸಾಗಿಸಲ್ಪಟ್ಟ ಧರ್ಮಶಾಸ್ತ್ರವನ್ನು ಅನುಸರಿಸುವ ಬದಲು, ಅಂತಹ ದಿವ್ಯ ವಾರ್ತಾವಾಹಕರಿಗಿಂತ ಬಹಳ ಶ್ರೇಷ್ಠನಾಗಿರುವ ದೇವರ ಮಗನ ಮೂಲಕ ಪ್ರಥಮವಾಗಿ ನುಡಿಯಲ್ಪಟ್ಟ ರಕ್ಷಣೆಯಲ್ಲಿ ಕ್ರೈಸ್ತರಿಗೆ ನಂಬಿಕೆಯಿದೆ. (ಇಬ್ರಿಯ 2:2-4) ದೇವರ ಗೃಹದಲ್ಲಿ ಮೋಶೆಯು ಬರಿಯ ಸೇವಕನಾಗಿದ್ದನು. ಹಾಗಿದ್ದರೂ, ಯೇಸು ಕ್ರಿಸ್ತನು ಇಡೀ ಮನೆಯ ಮೇಲೆ ಅಧಿಪತ್ಯ ನಡೆಸುತ್ತಾನೆ. ಆರೋನನ ಯಾಜಕತ್ವಕ್ಕಿಂತ ಬಹಳ ಶ್ರೇಷ್ಠವಾದ ಒಂದು ಸ್ಥಾನವನ್ನು ಹೊಂದಿರುತ್ತಾ, ಕ್ರಿಸ್ತನು ಮೆಲ್ಕೀಚೆದೆಕನ ಶ್ರೇಣಿಯ ಮಹಾ ಯಾಜಕನು. ನಂಬಿಕೆ ಮತ್ತು ವಿಧೇಯತೆಯ ಕೊರತೆಯಿಂದ ಇಸ್ರಾಯೇಲ್ಯರು ದೇವರ ವಿಶ್ರಾಂತಿಯೊಳಗೆ ಪ್ರವೇಶಿಸಲು ಅಶಕ್ತರಾದರೆಂದು, ಆದರೆ ಕ್ರೈಸ್ತರು ತಮ್ಮ ನಂಬಿಗಸ್ತಿಕೆ ಹಾಗೂ ವಿಧೇಯತೆಯಿಂದಾಗಿ ಅದನ್ನು ಪ್ರವೇಶಿಸುತ್ತಾರೆಂದು ಸಹ ಪೌಲನು ಸೂಚಿಸಿದನು.—ಇಬ್ರಿಯ 3:1–4:11.
20 ಹಾಗಿದ್ದರೂ, ಹೊಸ ಒಡಂಬಡಿಕೆಯು ನಿಯಮದ ಒಡಂಬಡಿಕೆಗಿಂತ ಬಹಳ ಶ್ರೇಷ್ಠವಾಗಿದೆ. ಯೆರೆಮೀಯ 31:31-34 ರಲ್ಲಿ 600 ವರ್ಷಗಳ ಹಿಂದೆ ಪ್ರವಾದಿಸಲಾದಂತೆ, ಹೊಸ ಒಡಂಬಡಿಕೆಯಲ್ಲಿರುವವರ ಹೃದಯಗಳ ಮೇಲೆ ದೇವರ ನಿಯಮವು ಬರೆಯಲ್ಪಟ್ಟಿದೆ ಮತ್ತು ಪಾಪಗಳ ನಿಜ ಕ್ಷಮಾಪಣೆಯನ್ನು ಅನುಭವಿಸುತ್ತಾರೆ. ತನ್ನ ಸ್ವಂತ ಪಾಪಗಳಿಗೆ ಮತ್ತು ಜನರ ಪಾಪಗಳಿಗೆ ವಾರ್ಷಿಕವಾಗಿ ಯಜ್ಞಗಳನ್ನು ಅರ್ಪಿಸುವ ಒಬ್ಬ ಮಹಾ ಯಾಜಕನಿರುವ ಬದಲು, ಕ್ರೈಸ್ತರಿಗೆ ಪಾಪರಹಿತನಾದ ಮತ್ತು ಪಾಪಗಳಿಗೆ ಯಜ್ಞವೊಂದನ್ನು ಒಮ್ಮೆಗೇ ಅರ್ಪಿಸಿದ ಯೇಸು ಕ್ರಿಸ್ತನು ಮಹಾ ಯಾಜಕನಂತಿದ್ದಾನೆ. ತನ್ನ ಅರ್ಪಣೆಯನ್ನು ಸಾದರಪಡಿಸಲು ಕೈಗಳಿಂದ ಮಾಡಿದ ಒಂದು ಪವಿತ್ರ ಸ್ಥಳವನ್ನು ಪ್ರವೇಶಿಸುವ ಬದಲು, ಅವನು ಯೆಹೋವನ ಸಮ್ಮುಖದಲ್ಲಿ ಕಾಣಿಸಿಕೊಳ್ಳಲು ಸ್ವರ್ಗವನ್ನೇ ಪ್ರವೇಶಿಸಿದನು. ಅಲ್ಲದೆ, ಮೋಶೆಯ ನಿಯಮದ ಒಡಂಬಡಿಕೆಯ ಕೆಳಗಿದ್ದ ಪ್ರಾಣಿಯ ಯಜ್ಞಗಳಿಗೆ ಪಾಪಗಳನ್ನು ಸಂಪೂರ್ಣವಾಗಿ ತೆಗೆಯಲು ಸಾಧ್ಯವಿರಲಿಲ್ಲ, ಇಲ್ಲದಿದ್ದರೆ ಅವುಗಳನ್ನು ವಾರ್ಷಿಕವಾಗಿ ಅರ್ಪಿಸತ್ತಿರಲಿಲ್ಲ. ಆದರೆ ಎಲ್ಲಾ ಸಮಯಕ್ಕಾಗಿ ಒಮ್ಮೆಗೇ ಅರ್ಪಿಸಲ್ಪಟ್ಟ ಕ್ರಿಸ್ತನ ಯಜ್ಞ, ಪಾಪಗಳನ್ನು ತೆಗೆಯುತ್ತದೆ. ಇದೆಲ್ಲಾ ಮಹಾ ಆತ್ಮಿಕ ದೇವಾಲಯದ ಮೇಲೆ ಬೆಳಕನ್ನು ಬೀರುತ್ತದೆ ಅದರ ಅಂಗಣದಲ್ಲಿ ಇಂದು ಅಭಿಷಿಕ್ತ ಉಳಿಕೆಯವರು ಮತ್ತು “ಬೇರೆ ಕುರಿಗಳು” ಸೇವಿಸುತ್ತವೆ.—ಯೋಹಾನ 10:16; ಇಬ್ರಿಯ 9:24-28.
21. ಅಪೊಸ್ತಲ ಸಂಬಂಧಿತ ಸಮಯಗಳಲ್ಲಿ ಕೀರ್ತನೆ 97:11 ಮತ್ತು ಜ್ಞಾನೋಕ್ತಿ 4:18ರ ನೆರವೇರಿಕೆಯ ಸಂಬಂಧದಲ್ಲಿ, ಈ ಚರ್ಚೆಯು ಏನನ್ನು ತೋರಿಸಿದೆ?
21 ಅಪೊಸ್ತಲ ಪೇತ್ರ ಮತ್ತು ಶಿಷ್ಯರಾದ ಯಾಕೋಬ ಹಾಗೂ ಯೂದರ ಪತ್ರಗಳಲ್ಲಿ ಕಂಡುಕೊಳ್ಳಲ್ಪಡುವ ಬೆಳಕಿನ ಬೆಳಗುಗಳಂತಹ ಹೆಚ್ಚಿನ ಉದಾಹರಣೆಗಳನ್ನು ನಮೂದಿಸಲು ಸಾಕಷ್ಟು ಸ್ಥಳವಿಲ್ಲ. ಆದರೆ, ಅಪೊಸ್ತಲ ಸಂಬಂಧಿತ ಸಮಯಗಳಲ್ಲಿ ಕೀರ್ತನೆ 97:11 ಮತ್ತು ಜ್ಞಾನೋಕ್ತಿ 4:18ರ ಗಮನಾರ್ಹ ನೆರವೇರಿಕೆಗಳಿದ್ದವೆಂದು ತೋರಿಸಲು ಈ ಮೊದಲೇ ಹೇಳಿದ ವಿಷಯವು ಸಾಕಾಗಬೇಕು. ಸತ್ಯವು, ಪ್ರತಿನಿಧಿರೂಪಗಳು ಮತ್ತು ಛಾಯೆಗಳಿಂದ ನೆರವೇರಿಕೆಗಳು ಮತ್ತು ವಾಸ್ತವಿಕತೆಗಳ ಕಡೆಗೆ ಮುಂದುವರಿಯಲಾರಂಭಿಸಿತು.—ಗಲಾತ್ಯ 3:23-25; 4:21-26.
22. ಅಪೊಸ್ತಲರ ಮರಣದ ಅನಂತರ ಏನು ಸಂಭವಿಸಿತು, ಮತ್ತು ಮುಂದಿನ ಲೇಖನವು ಏನನ್ನು ತೋರಿಸುವುದು?
22 ಯೇಸುವಿನ ಅಪೊಸ್ತಲರ ಮರಣದ ಮತ್ತು ಮುಂತಿಳಿಸಲ್ಪಟ್ಟ ಧರ್ಮಭ್ರಷ್ಟತೆಯ ನುಗ್ಗುವಿಕೆಯ ಅನಂತರ, ಸತ್ಯದ ಬೆಳಕು ಮಂದವಾಗಿ ಉರಿಯಿತು. (2 ಥೆಸಲೊನೀಕ 2:1-11) ಆದರೆ ಯೇಸುವಿನ ವಾಗ್ದಾನಕ್ಕನುಗುಣವಾಗಿ, ಅನೇಕ ಶತಮಾನಗಳ ತರುವಾಯ ಯಜಮಾನನು ಹಿಂದಿರುಗಿದನು ಮತ್ತು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” “ಮನೆಯವರಿಗೆ” ತಮ್ಮ ಆಹಾರವನ್ನು ಸರಿಯಾದ ಸಮಯಕ್ಕೆ ನೀಡುತ್ತಿರುವುದನ್ನು ಕಂಡುಕೊಂಡನು. ಫಲಸ್ವರೂಪವಾಗಿ, ಆ ದಾಸನನ್ನು ಯೇಸು ಕ್ರಿಸ್ತನು “ತನ್ನ ಎಲ್ಲಾ ಆಸ್ತಿಯ ಮೇಲೆ” ನೇಮಿಸಿದನು. (ಮತ್ತಾಯ 24:45-47) ಬೆಳಕಿನ ಯಾವ ಬೆಳಗುಗಳು ಹಿಂಬಾಲಿಸಿದವು? ಇದು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವುದು.
[ಅಧ್ಯಯನ ಪ್ರಶ್ನೆಗಳು]
a ನೆಲವು ಇಲ್ಲಿ, ವ್ಯಕ್ತಿತ್ವದ ಗುಣಗಳನ್ನು ಬೆಳೆಸಿಕೊಳ್ಳಲಿಕ್ಕಾಗಿ ಕ್ರೈಸ್ತನು ಆರಿಸಿಕೊಳ್ಳುವ ಪರಿಸರಕ್ಕೆ ಸೂಚಿಸುತ್ತದೆ.—ಜೂನ್ 15, 1980ರ ದ ವಾಚ್ಟವರ್, ಪುಟಗಳು 18-19 ನೋಡಿರಿ.
ನಿಮಗೆ ಜ್ಞಾಪಕವಿದೆಯೆ?
◻ ಸತ್ಯದ ತಿಳಿವಳಿಕೆಯು ಪ್ರಗತಿಪರವೆಂದು ಯಾವ ಬೈಬಲ್ ವಚನಗಳು ತೋರಿಸುತ್ತವೆ?
◻ ಅ. ಕೃತ್ಯಗಳ ಪುಸ್ತಕದಲ್ಲಿ ದಾಖಲಿಸಲ್ಪಟ್ಟಿರುವ ಬೆಳಕಿನ ಬೆಳಗುಗಳಲ್ಲಿ ಕೆಲವು ಯಾವುವು?
◻ ಸುವಾರ್ತೆಗಳಲ್ಲಿ ಯಾವ ಬೆಳಕು ಕಂಡುಕೊಳ್ಳಲ್ಪಟ್ಟಿದೆ?
◻ ಬೆಳಕಿನ ಯಾವ ಬೆಳಗುಗಳನ್ನು ಪೌಲನ ಪತ್ರಗಳು ಒಳಗೊಂಡಿವೆ?