ಅಧ್ಯಯನ ಲೇಖನ 51
ಯೇಸುವಿನ ಮಾತನ್ನ ಕೇಳುತ್ತಾ ಇರಿ
“ಇವನು ನನ್ನ ಪ್ರೀತಿಯ ಮಗ. ಇವನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ. ಇವನ ಮಾತು ಕೇಳಿ.”—ಮತ್ತಾ. 17:5.
ಗೀತೆ 65 “ಇದೇ ಮಾರ್ಗ”
ಕಿರುನೋಟa
1-2. (ಎ) ಯೇಸುವಿನ ಮೂರು ಅಪೊಸ್ತಲರಿಗೆ ಯೆಹೋವ ಏನು ಮಾಡೋಕೆ ಹೇಳಿದನು? ಮತ್ತು ಅವರೇನು ಮಾಡಿದ್ರು? (ಬಿ) ಈ ಲೇಖನದಲ್ಲಿ ನಾವೇನು ಕಲಿತೀವಿ?
ಕ್ರಿಸ್ತಶಕ 32ರಲ್ಲಿ ಪಸ್ಕ ಹಬ್ಬ ಆದಮೇಲೆ ಪೇತ್ರ, ಯಾಕೋಬ ಮತ್ತು ಯೋಹಾನ ಹೆರ್ಮೋನ್ ಬೆಟ್ಟದ ಮೇಲೆ ಇದ್ರು. ಅಲ್ಲಿ ಅವರು ಒಂದು ದರ್ಶನ ನೋಡಿದ್ರು. ಅದರಲ್ಲಿ ಯೇಸುವಿನ ರೂಪ ಬದಲಾಯ್ತು. “ಆತನ ಮುಖ ಸೂರ್ಯನ ತರ, ಆತನ ಬಟ್ಟೆ ಬೆಳಕಿನ ತರ ಹೊಳಿತು.” (ಮತ್ತಾ. 17:1-4) ಆ ದರ್ಶನದ ಕೊನೆಯಲ್ಲಿ ಯೆಹೋವ ದೇವರು “ಇವನು ನನ್ನ ಪ್ರೀತಿಯ ಮಗ. ಇವನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ. ಇವನ ಮಾತು ಕೇಳಿ” ಅಂತ ಹೇಳಿದ್ದನ್ನ ಶಿಷ್ಯರು ಕೇಳಿಸಿಕೊಂಡ್ರು. (ಮತ್ತಾ. 17:5) ಈ ಮೂರು ಅಪೊಸ್ತಲರು ಯೇಸುವಿನ ಮಾತನ್ನ ಕೇಳಿದ್ರು ಅನ್ನೋದನ್ನ ತಮ್ಮ ಜೀವನ ರೀತಿಯಲ್ಲಿ ತೋರಿಸಿಕೊಟ್ರು. ನಾವೂ ಈ ಶಿಷ್ಯರ ತರ ಯೇಸು ಮಾತನ್ನ ಕೇಳಬೇಕು.
2 ಹಿಂದಿನ ಲೇಖನದಲ್ಲಿ, ನಾವು ಮಾಡಬಾರದು ಅಂತ ಯೇಸು ಹೇಳಿದ ವಿಷಯಗಳನ್ನ ನೋಡಿದ್ವಿ. ಈ ಲೇಖನದಲ್ಲಿ ಯೇಸು ನಮಗೆ ಏನು ಮಾಡಬೇಕು ಅಂತ ಹೇಳ್ತಿದ್ದಾನೆ ಅನ್ನೋದನ್ನ ನೋಡೋಣ.
“ಇಕ್ಕಟ್ಟಾದ ಬಾಗಿಲಿಂದ ಹೋಗಿ”
3. ಮತ್ತಾಯ 7:13, 14ರ ಪ್ರಕಾರ ನಾವೇನು ಮಾಡಬೇಕು?
3 ಮತ್ತಾಯ 7:13, 14 ಓದಿ. ಇಲ್ಲಿ ಯೇಸು 2 ತರದ ಬಾಗಿಲುಗಳ ಬಗ್ಗೆ ಹೇಳ್ತಿದ್ದಾನೆ. ಈ 2 ಬಾಗಿಲುಗಳು 2 ತರದ ದಾರಿಗೆ ನಡೆಸುತ್ತೆ. ಒಂದು, ‘ಅಗಲವಾದ’ ದಾರಿ ಇನ್ನೊಂದು ‘ಇಕ್ಕಟ್ಟಾದ’ ದಾರಿ. ನಮಗೆ ಮೂರನೇ ದಾರಿ ಇಲ್ಲ. ಈ ಎರಡು ದಾರಿಯಲ್ಲೇ ಯಾವುದಾದರು ಒಂದನ್ನ ಆಯ್ಕೆ ಮಾಡಬೇಕು. ಇದು ನಮ್ಮ ಜೀವನದಲ್ಲಿ ಮಾಡಬೇಕಾಗಿರೋ ಪ್ರಾಮುಖ್ಯವಾದ, ದೊಡ್ಡ ಆಯ್ಕೆ. ಇದರ ಮೇಲೆ ನಮ್ಮ ಭವಿಷ್ಯ ನಿಂತಿದೆ. ಯಾಕಂದ್ರೆ ಇದ್ರಲ್ಲಿ ಒಂದು ದಾರಿ ಮಾತ್ರ ನಮ್ಮನ್ನ ಜೀವಕ್ಕೆ ನಡೆಸುತ್ತೆ.
4. ‘ಅಗಲವಾದ’ ದಾರಿ ಬಗ್ಗೆ ವಿವರಿಸಿ.
4 ಈ ಎರಡೂ ದಾರಿಗಳು ಬೇರೆ-ಬೇರೆ. ‘ಅಗಲವಾದ’ ದಾರಿಯಲ್ಲಿ ಹೋಗೋದು ತುಂಬ ಸುಲಭ. ಅದಕ್ಕೇ ಆ ದಾರಿಯಲ್ಲಿ ತುಂಬ ಜನ ಹೋಗ್ತಾ ಇರೋದನ್ನ ನೋಡಿ ಬೇರೆಯವರೂ ಅದೇ ದಾರಿಯಲ್ಲಿ ಹೋಗ್ತಾರೆ. ಆದ್ರೆ ಅವರನ್ನ ಆ ದಾರಿಯಲ್ಲಿ ಕರಕೊಂಡು ಹೋಗ್ತಿರೋದು ಸೈತಾನ ಮತ್ತು ಆ ದಾರಿ ನಾಶಕ್ಕೆ ನಡೆಸುತ್ತೆ ಅಂತ ಅವರಿಗೆ ಗೊತ್ತಿಲ್ಲ.—1 ಕೊರಿಂ. 6:9, 10; 1 ಯೋಹಾ. 5:19.
5. ‘ಇಕ್ಕಟ್ಟಾದ’ ದಾರಿಯನ್ನ ಕಂಡುಹಿಡಿದು ಅದರಲ್ಲಿ ನಡಿಯೋಕೆ ಕೆಲವರು ಯಾವ ಪ್ರಯತ್ನಗಳನ್ನ ಮಾಡಿದ್ದಾರೆ?
5 ‘ಇಕ್ಕಟ್ಟಾದ’ ದಾರಿ ‘ಅಗಲವಾದ’ ದಾರಿ ತರ ಅಲ್ಲ ಮತ್ತು ಆ ದಾರಿಯಲ್ಲಿ ಸ್ವಲ್ಪ ಜನ ಮಾತ್ರ ಹೋಗ್ತಾರೆ ಅಂತ ಯೇಸು ಹೇಳಿದ್ದನು. ಯಾಕೆ? ಯಾಕಂದ್ರೆ ಸುಳ್ಳು ಪ್ರವಾದಿಗಳು ಬಂದು ತುಂಬ ಜನರನ್ನ ಮೋಸ ಮಾಡ್ತಾರೆ ಅಂತ ಯೇಸು ಮುಂದಿನ ವಚನದಲ್ಲಿ ಎಚ್ಚರಿಸಿದ್ರು. (ಮತ್ತಾ. 7:15) ಯೇಸು ಹೇಳಿದ ಮಾತು ನಿಜ ಆಗ್ತಿದೆ. ಇವತ್ತು ಲೋಕದಲ್ಲಿ ಸಾವಿರಾರು ಧರ್ಮಗಳಿವೆ. ಆ ಎಲ್ಲಾ ಧರ್ಮನೂ ತಾವು ಹೇಳ್ತಿರೋದೇ ಸತ್ಯ ಅಂತ ಹೇಳಿಕೊಳ್ತವೆ. ಇದ್ರಿಂದ ತುಂಬ ಜನರಿಗೆ ಯಾವುದು ನಿಜವಾದ ಧರ್ಮ ಅಂತ ಗೊತ್ತಾಗ್ತಿಲ್ಲ. ಹಾಗಾಗಿ ಅವರು ಜೀವಕ್ಕೆ ನಡೆಸೋ ದಾರಿಯನ್ನ ಹುಡುಕೋಕೂ ಹೋಗ್ತಿಲ್ಲ. ಆದ್ರೆ ಆ ದಾರಿಯನ್ನ ಹುಡುಕೋದು ಅಷ್ಟು ಕಷ್ಟ ಏನಿಲ್ಲ. “ನಾನು ಕಲಿಸಿದ್ದನ್ನ ಯಾವಾಗ್ಲೂ ಮಾಡ್ತಾ ಇದ್ರೆ ನೀವು ನನ್ನ ನಿಜ ಶಿಷ್ಯರಾಗ್ತೀರ. ಸತ್ಯ ಏನಂತ ನಿಮಗೆ ಗೊತ್ತಾಗುತ್ತೆ. ಆ ಸತ್ಯ ನಿಮ್ಮನ್ನ ಬಿಡುಗಡೆ ಮಾಡುತ್ತೆ” ಅಂತ ಯೇಸುನೇ ಹೇಳಿದ್ದಾನೆ. (ಯೋಹಾ. 8:31, 32) ಆದ್ರೆ ನೀವು ಅಗಲವಾದ ದಾರಿಯಲ್ಲಿ ಹೋಗ್ತಿರೋ ಜನರ ಹಿಂದೆ ಹೋಗಲಿಲ್ಲ, ಸತ್ಯವನ್ನ ಹುಡುಕಿದ್ದೀರ. ಅದಕ್ಕೆ ನಿಮ್ಮನ್ನ ಮೆಚ್ಚಿಕೊಳ್ಳಬೇಕು. ಬೈಬಲನ್ನ ಚೆನ್ನಾಗಿ ಕಲ್ತಿದ್ದೀರ, ಯೆಹೋವ ನಮ್ಮಿಂದ ಏನು ಬಯಸ್ತಾನೆ ಅಂತ ತಿಳಿದುಕೊಂಡಿದ್ದೀರ, ಯೇಸುವಿನ ಮಾತನ್ನ ಕೇಳಿದ್ದೀರ. ಅಷ್ಟೇ ಅಲ್ಲ, ಸುಳ್ಳು ಧರ್ಮಗಳಲ್ಲಿ ಹೇಳಿಕೊಡೋ ವಿಷಯಗಳನ್ನ ಬಿಟ್ಟುಬಿಡಬೇಕು, ಹಬ್ಬಗಳನ್ನ ಅವರ ಪದ್ಧತಿಗಳನ್ನ ನಾವು ಆಚರಿಸಬಾರದು, ಅದು ಯೆಹೋವನಿಗೆ ಇಷ್ಟ ಇಲ್ಲ ಅಂತನೂ ಕಲ್ತಿದ್ದೀರ. ಇದನ್ನೆಲ್ಲ ಬಿಟ್ಟುಬಿಡೋಕೆ ನಿಮಗೆ ಕಷ್ಟ ಆಗಿರುತ್ತೆ, ಆದ್ರೂ ಬದಲಾವಣೆ ಮಾಡಿಕೊಂಡಿದ್ದೀರ. (ಮತ್ತಾ. 10:34-36) ಯಾಕಂದ್ರೆ ನೀವು ಯೆಹೋವನನ್ನ ತುಂಬ ಪ್ರೀತಿಸ್ತೀರ. ಆತನನ್ನ ಖುಷಿಪಡಿಸೋಕೆ ನೋಡ್ತೀರ. ಇದನ್ನ ನೋಡಿದಾಗ ಯೆಹೋವ ದೇವರಿಗೆ ಎಷ್ಟು ಖುಷಿಯಾಗುತ್ತೆ ಅಲ್ವಾ?—ಜ್ಞಾನೋ. 27:11.
ಇಕ್ಕಟ್ಟಾದ ದಾರಿಯಲ್ಲಿ ನಡಿತಾ ಇರೋಕೆ ಏನು ಮಾಡಬೇಕು?
6. ಇಕ್ಕಟ್ಟಾದ ದಾರಿಯಲ್ಲಿ ನಡಿತಾ ಇರೋಕೆ ನಮಗೆ ಯಾವುದು ಸಹಾಯ ಮಾಡುತ್ತೆ? (ಕೀರ್ತನೆ 119:9, 10, 45, 133)
6 ಇಕ್ಕಟ್ಟಾದ ದಾರಿಯಲ್ಲಿ ನಡಿತಾ ಇರೋಕೆ ನಾವೇನು ಮಾಡಬೇಕು? ಬೈಬಲಲ್ಲಿರೋ ಯೆಹೋವನ ನೀತಿ-ನಿಯಮಗಳನ್ನ ಪಾಲಿಸಬೇಕು. ಉದಾಹರಣೆಗೆ, ಕಡಿದಾದ ಇಳಿಜಾರು ರಸ್ತೆಯಲ್ಲಿ, ಗಾಡಿ ರಸ್ತೆಯಿಂದ ಕೆಳಗೆ ಬಿದ್ದು ಹೋಗಬಾರದು ಅಂತ ತಡೆಗಂಬಿಗಳನ್ನ ರಸ್ತೆ ಬದಿಯಲ್ಲಿ ಕಟ್ಟಿರುತ್ತಾರೆ. ಇದು ಜನರ ಜೀವ ಕಾಪಾಡುತ್ತೆ. ‘ಈ ತಡೆಗಂಬಿಗಳಿಂದ ತುಂಬ ಕಷ್ಟ ಆಗ್ತಿದೆ, ಇವು ನಮಗೆ ಬೇಕಾಗಿಲ್ಲ’ ಅಂತ ಯಾವ ಚಾಲಕನೂ ಹೇಳಲ್ಲ. ಹಾಗೇ ಯೆಹೋವನ ನೀತಿ-ನಿಯಮಗಳು ಈ ತಡೆಗಂಬಿಗಳಿದ್ದ ಹಾಗೆ. ನಾವು ಇಕ್ಕಟ್ಟಾದ ದಾರಿಯಲ್ಲಿ ನಡಿತಾ ಇರೋಕೆ ಈ ನೀತಿ-ನಿಯಮಗಳು ಸಹಾಯ ಮಾಡುತ್ತೆ.—ಕೀರ್ತನೆ 119:9, 10, 45, 133 ಓದಿ.
7. ಯುವಜನರು ಇಕ್ಕಟ್ಟಾದ ದಾರಿ ಬಗ್ಗೆ ಏನು ಅಂದ್ಕೊಬಾರದು ಮತ್ತು ಯಾಕೆ?
7 ಯುವಜನರೇ, ಯೆಹೋವನ ನೀತಿ-ನಿಯಮಗಳು ನಿಮಗೆ ತುಂಬ ಕಟ್ಟುನಿಟ್ಟು ಅನಿಸ್ತಿದ್ಯಾ? ನಿಮಗೆ ಇಷ್ಟಬಂದ ಹಾಗೆ ಇರೋಕೆ ಆಗ್ತಿಲ್ಲ ಅಂತ ಅನಿಸ್ತಿದ್ಯಾ? ನಿಮಗೆ ಹಾಗನಿಸಬೇಕು ಅನ್ನೋದೇ ಸೈತಾನನ ಆಸೆ. ಅಗಲವಾದ ದಾರಿಯಲ್ಲಿ ಹೋಗ್ತಾ ಇರುವವರು ಸಂತೋಷವಾಗಿ ಇದ್ದಾರೆ ಅಂತ ನಮಗೆ ಅನಿಸೋ ಹಾಗೆ ಅವನು ಮಾಡ್ತಿದ್ದಾನೆ. ‘ನನ್ನ ಫ್ರೆಂಡ್ಸ್, ಇಂಟರ್ನೆಟ್ನಲ್ಲಿ ಸಿಗೋ ಜನರು ಅವರ ಜೀವನದಲ್ಲಿ ಮಜಾ ಮಾಡ್ತಿದ್ದಾರೆ ಆದ್ರೆ ನನ್ನ ಜೀವನದಲ್ಲಿ ಏನು ಖುಷಿನೇ ಇಲ್ಲ, ನಾನೇನೋ ಕಳಕೊಳ್ತಿದ್ದೀನಿ’ ಅಂತ ನಿಮಗೆ ಅನಿಸಬೇಕು ಅನ್ನೋದು ಸೈತಾನನ ಬಯಕೆ.b ಆದ್ರೆ ಒಂದು ವಿಷಯ ನೆನಪಿಡಿ. ಅಗಲವಾದ ದಾರಿಯಲ್ಲಿ ಹೋಗ್ತಾ ಇರುವವರಿಗೆ ಆ ದಾರಿ ನಾಶಕ್ಕೆ ಕರಕೊಂಡು ಹೋಗುತ್ತೆ ಅಂತ ಸೈತಾನ ಹೇಳಿಲ್ಲ. ಆದ್ರೆ ಯೆಹೋವ ದೇವರು ನಮ್ಮಿಂದ ಏನೂ ಮುಚ್ಚಿಟ್ಟಿಲ್ಲ. ಇಕ್ಕಟ್ಟಾದ ದಾರಿಯಲ್ಲಿ ಹೋದ್ರೆ ನಮಗೆ ಏನೆಲ್ಲಾ ಆಶೀರ್ವಾದಗಳು ಸಿಗುತ್ತೆ ಅಂತ ಸ್ಪಷ್ಟವಾಗಿ ಹೇಳಿದ್ದಾರೆ.—ಕೀರ್ತ. 37:29; ಯೆಶಾ. 35:5, 6; 65:21-23.
8. ಯುವಜನರೇ, ಟೋನಿಯಿಂದ ನೀವೇನು ಕಲಿತ್ರಿ?
8 ಟೋನಿ ಅನ್ನೋ ಯುವ ಸಹೋದರನ ಉದಾಹರಣೆ ನೋಡಿ.c ಸ್ಕೂಲಲ್ಲಿ ಫ್ರೆಂಡ್ಸ್ ಅವನಿಗೆ ಸೆಕ್ಸ್ ಮಾಡೋಕೆ ಒತ್ತಾಯ ಮಾಡುತ್ತಿದ್ರು. ಆದ್ರೆ ಅವನು ತಾನೊಬ್ಬ ಯೆಹೋವನ ಸಾಕ್ಷಿ, ಬೈಬಲಲ್ಲಿರೋ ನೀತಿ-ನಿಯಮಗಳನ್ನ ಪಾಲಿಸ್ತೀನಿ ಅಂತ ಹೇಳಿದಾಗ ಕೆಲವು ಹುಡುಗಿಯರು ಸೆಕ್ಸ್ ಮಾಡೋಕೆ ಇನ್ನೂ ಒತ್ತಾಯ ಮಾಡಿದ್ರು. ಆದ್ರೆ ಟೋನಿ ಅವರ ಬಲೆಗೆ ಬೀಳಲಿಲ್ಲ. ಯೆಹೋವನಿಗೆ ಯಾವುದು ಇಷ್ಟಾನೋ ಅದನ್ನೇ ಮಾಡಿದ. ಇದೊಂದೇ ಅಲ್ಲ, ಅವನಿಗೆ ಇನ್ನೂ ಒಂದು ಸಮಸ್ಯೆ ಬಂತು. ಅವನು ಹೇಳಿದ್ದು, “ನಮ್ ಟೀಚರ್ಸ್ ‘ನೀನು ದೊಡ್ಡ ಯೂನಿವರ್ಸಿಟಿಗೆ ಸೇರಿಕೊಳ್ಳಬೇಕು, ಆಗ ಜನ ನಿನ್ನನ್ನ ತುಂಬ ಗೌರವಿಸ್ತಾರೆ, ಇಲ್ಲಾಂದ್ರೆ ನಿನಗೆ ಮುಂದೆ ಒಳ್ಳೇ ಕೆಲಸ ಸಿಗಲ್ಲ, ನಿನ್ನ ಜೀವನ ಚೆನ್ನಾಗಿರಲ್ಲ’ ಅಂತೆಲ್ಲಾ ಹೇಳಿದ್ರು.” ಈ ಸಮಸ್ಯೆಯನ್ನ ಎದುರಿಸೋಕೆ ಟೋನಿಗೆ ಯಾವುದು ಸಹಾಯ ಮಾಡಿತು? ಅವನು ಹೇಳ್ತಾನೆ, “ನಾನು ಸಭೆಯವರ ಜೊತೆ ಬೆರೆಯೋಕೆ ಶುರು ಮಾಡಿದೆ. ಅವರು ನನಗೆ ಮನೆಯವರ ತರ ಆಗಿಬಿಟ್ರು. ನಾನು ಇನ್ನೂ ಚೆನ್ನಾಗಿ ಬೈಬಲ್ ಅಧ್ಯಯನ ಮಾಡೋಕೆ ಶುರು ಮಾಡಿದೆ. ಆಗ ಇದೇ ಸತ್ಯ ಅಂತ ನನಗೆ ಗೊತ್ತಾಯ್ತು. ನಾನು ದೀಕ್ಷಾಸ್ನಾನ ತಗೊಂಡು ಯೆಹೋವನ ಸೇವೆ ಮಾಡಬೇಕು ಅಂತ ನಿರ್ಧಾರ ಮಾಡಿದೆ.”
9. ಇಕ್ಕಟ್ಟಾದ ದಾರಿಯಲ್ಲಿ ನಡಿತಾ ಇರೋಕೆ ನಾವೇನು ಮಾಡಬೇಕು?
9 ನಾವು ಇಕ್ಕಟ್ಟಾದ ದಾರಿ ಬಿಟ್ಟು ಅಗಲವಾದ ದಾರಿಗೆ ಹೋಗಬೇಕು ಅನ್ನೋದೇ ಸೈತಾನನ ಆಸೆ. “ನಾಶಕ್ಕೆ ಹೋಗೋ” ಅಗಲವಾದ ದಾರಿಯಲ್ಲಿರೋ ಜನರ ಜೊತೆ ನಾವೂ ಸೇರಿಕೊಳ್ಳಬೇಕು ಅನ್ನೋದೇ ಅವನ ಬಯಕೆ. (ಮತ್ತಾ. 7:13) ನಾವು ಯೇಸು ಮಾತನ್ನ ಕೇಳಿ ಪಾಲಿಸಿದ್ರೆ ಮತ್ತು ಇಕ್ಕಟ್ಟಾದ ದಾರಿಯಲ್ಲಿ ಹೋದ್ರೆ ಮಾತ್ರ ಶಾಶ್ವತ ಜೀವ ಸಿಗುತ್ತೆ. ಇದನ್ನ ಮನಸ್ಸಲ್ಲಿಟ್ರೆ ಇಕ್ಕಟ್ಟಾದ ದಾರಿಯಲ್ಲಿ ಹೋಗ್ತಾ ಇರೋಕೆ ಆಗುತ್ತೆ. ಯೇಸು ನಮಗೆ ಮಾಡೋಕೆ ಹೇಳಿರೋ ಇನ್ನೊಂದು ವಿಷಯವನ್ನ ಈಗ ನೋಡೋಣ.
ನಿನ್ನ ಸಹೋದರನ ಜೊತೆ ಸಮಾಧಾನ ಮಾಡ್ಕೊ
10. ನಾವೇನು ಮಾಡಬೇಕಂತ ಮತ್ತಾಯ 5:23, 24ರಲ್ಲಿ ಯೇಸು ಹೇಳಿದ್ದಾನೆ?
10 ಮತ್ತಾಯ 5:23, 24 ಓದಿ. ಯೆಹೋವನಿಗಾಗಿ ಪ್ರಾಣಿಗಳ ಬಲಿ ಕೊಡೋದು ಯೆಹೂದ್ಯರಿಗೆ ತುಂಬ ಪ್ರಾಮುಖ್ಯವಾಗಿತ್ತು. ಇದರ ಬಗ್ಗೆನೇ ಯೇಸು ಈ ವಚನದಲ್ಲಿ ಹೇಳ್ತಿದ್ದಾನೆ. ಆಗಿನ ಕಾಲದಲ್ಲಿ ಒಬ್ಬ ಯೆಹೂದಿ, ಬಲಿ ಕೊಡೋಕೆ ಒಂದು ಪ್ರಾಣಿಯನ್ನ ಆಲಯಕ್ಕೆ ತಂದಿದ್ದಾನೆ ಅಂದ್ಕೊಳ್ಳಿ. ಆ ಪ್ರಾಣಿಯನ್ನ ಇನ್ನೇನು ಪುರೋಹಿತನ ಕೈಗೆ ಕೊಡಬೇಕು ಅನ್ನುವಾಗ ತನ್ನ ಸಹೋದರನಿಗೆ ಅವನ ಮೇಲೆ ಬೇಜಾರಾಗಿರೋದು ನೆನಪಾಗುತ್ತೆ. ಆಗ ಏನು ಮಾಡಬೇಕಿತ್ತು? ಆ ಪ್ರಾಣಿಯನ್ನ ಅಲ್ಲೇ ‘ಬಿಟ್ಟು ಹೋಗಬೇಕಿತ್ತು.’ ಯಾಕೆ? ಯಾಕಂದ್ರೆ ಬಲಿ ಕೊಡೋದಕ್ಕಿಂತ ಮುಖ್ಯವಾದ ಒಂದು ವಿಷಯವನ್ನ ಅವನು ಮಾಡಬೇಕಿತ್ತು. ಯೇಸು ಹೇಳಿದ ಹಾಗೆ ಅವನು ‘ಮೊದ್ಲು ಹೋಗಿ ತನ್ನ ಸಹೋದರನ ಜೊತೆ ಸಮಾಧಾನ ಮಾಡ್ಕೊಬೇಕಿತ್ತು.’
11. ಏಸಾವನ ಜೊತೆ ಸಮಾಧಾನ ಮಾಡಿಕೊಳ್ಳೋಕೆ ಯಾಕೋಬ ಏನೆಲ್ಲಾ ಮಾಡಿದ?
11 ನಮ್ಮ ಸಹೋದರರ ಜೊತೆ ಸಮಾಧಾನ ಮಾಡ್ಕೊಳ್ಳೋದರ ಬಗ್ಗೆ ಯಾಕೋಬನಿಂದನೂ ಪಾಠ ಕಲಿಯಬಹುದು. ಯಾಕೋಬ ತನ್ನ ಸ್ವದೇಶದಿಂದ ಬಂದು ಈಗಾಗಲೇ 20 ವರ್ಷಗಳಾಗಿತ್ತು. ಈಗ ಯೆಹೋವನ ದೂತ ಅವನನ್ನ ವಾಪಸ್ ಅಲ್ಲಿಗೆ ಹೋಗೋಕೆ ಹೇಳ್ತಿದ್ದಾನೆ. (ಆದಿ. 31:11, 13, 38) ಸಮಸ್ಯೆ ಏನಂದ್ರೆ, ಯಾಕೋಬನ ಅಣ್ಣ ಏಸಾವ, ಅವನನ್ನ ಕೊಲ್ಲೋಕೆ ಕಾಯ್ತಿದ್ದ. (ಆದಿ. 27:41) ಹಾಗಾಗಿ ಯಾಕೋಬ “ಏನಾಗುತ್ತೋ ಅಂತ ಚಿಂತೆಯಲ್ಲಿ ಮುಳುಗಿದ.” (ಆದಿ. 32:7) ಆದ್ರೂ ತನ್ನ ಅಣ್ಣನ ಜೊತೆ ಸಮಾಧಾನ ಮಾಡಿಕೊಳ್ಳೋಕೆ ತೀರ್ಮಾನ ಮಾಡಿದ. ಮೊದಲನೇದಾಗಿ, ಯೆಹೋವನ ಹತ್ರ ತುಂಬ ಬೇಡಿಕೊಂಡ. ಆಮೇಲೆ ಅಣ್ಣನಿಗೆ ಉಡುಗೊರೆಗಳನ್ನ ಕಳಿಸಿದ. (ಆದಿ. 32:9-15) ಆಮೇಲೆ ಅಣ್ಣನನ್ನ ನೋಡಿದ ತಕ್ಷಣ ನಮಸ್ಕಾರ ಮಾಡಿದ. ಅದೂ ಒಂದು ಸಲ ಅಲ್ಲ, ಎರಡು ಸಲ ಅಲ್ಲ, ಏಳು ಸಲ ಬಗ್ಗಿ ನಮಸ್ಕಾರ ಮಾಡಿದ. ಯಾಕೋಬ ದೀನತೆಯಿಂದ ತನ್ನ ಅಣ್ಣನಿಗೆ ಮರ್ಯಾದೆ ಕೊಟ್ಟು ಅವನ ಜೊತೆ ಸಮಾಧಾನ ಮಾಡಿಕೊಂಡ.—ಆದಿ. 33:3, 4.
12. ತನ್ನ ಅಣ್ಣನ ಜೊತೆ ಸಮಾಧಾನ ಮಾಡಿಕೊಳ್ಳೋಕೆ ಯಾಕೋಬ ಯಾವ ಎರಡು ವಿಷಯ ಮಾಡಿದ?
12 ಯಾಕೋಬ ಅವನ ಅಣ್ಣನ ಜೊತೆ ಸಮಾಧಾನ ಮಾಡಿಕೊಳ್ಳೋಕೆ ಏನು ಮಾಡಿದ ಅಂತ ಗಮನಿಸಿದ್ರಾ? ಮೊದಲು ತಯಾರಿ ಮಾಡಿದ. ಸಹಾಯಕ್ಕಾಗಿ ಯೆಹೋವನ ಹತ್ರ ಬೇಡಿಕೊಂಡ. ಆಮೇಲೆ, ಪ್ರಾರ್ಥನೆಗೆ ತಕ್ಕ ಹಾಗೆ ಅಣ್ಣನ ಕೋಪವನ್ನ ಕಡಿಮೆ ಮಾಡೋಕೆ ಏನೆಲ್ಲಾ ಮಾಡಬೇಕೋ ಅದನ್ನೆಲ್ಲ ಮಾಡಿದ. ಎರಡನೇದಾಗಿ, ತನ್ನ ಅಣ್ಣನ ಜೊತೆ ಸಮಾಧಾನ ಮಾಡಿಕೊಳ್ಳಬೇಕು ಅಂತ ತೀರ್ಮಾನ ಮಾಡಿದ. ಅದಕ್ಕೆ ಅವನ ಅಣ್ಣನ ಹತ್ತಿರ ಹೋದಾಗ ಯಾರು ಸರಿ ಯಾರು ತಪ್ಪು ಅಂತ ವಾದ ಮಾಡಿಲ್ಲ.
ಎಲ್ಲರ ಜೊತೆ ಸಮಾಧಾನ ಮಾಡಿಕೊಳ್ಳೋದು ಹೇಗೆ?
13-14. ಒಂದುವೇಳೆ ನಾವು ನಮ್ಮ ಸಹೋದರರನ್ನ ನೋಯಿಸಿದ್ರೆ ಏನು ಮಾಡಬೇಕು?
13 ಜೀವಕ್ಕೆ ನಡೆಸೋ ದಾರಿಯಲ್ಲಿ ನಾವು ಇರಬೇಕಂದ್ರೆ ಎಲ್ಲರ ಜೊತೆ ಸಮಾಧಾನ ಮಾಡಿಕೊಳ್ಳಬೇಕು. (ರೋಮ. 12:18) ಒಂದುವೇಳೆ, ನಾವು ಬೇರೆಯವರ ಮನಸ್ಸು ನೋಯಿಸಿದ್ರೆ ಏನು ಮಾಡಬೇಕು? ಯಾಕೋಬನ ತರ ಯೆಹೋವನ ಹತ್ರ ಪ್ರಾರ್ಥನೆ ಮಾಡಬೇಕು. ನಮ್ಮ ಸಹೋದರರ ಜೊತೆ ಸಮಾಧಾನ ಮಾಡಿಕೊಳ್ಳೋಕೆ ಸಹಾಯ ಮಾಡಪ್ಪಾ ಅಂತ ಬೇಡಿಕೊಳ್ಳಬೇಕು.
14 ನಮ್ಮನ್ನೇ ನಾವು ಪರೀಕ್ಷೆ ಮಾಡಿಕೊಳ್ಳಬೇಕು. ‘ನಾನು ನನ್ನ ತಪ್ಪನ್ನ ಒಪ್ಪಿಕೊಂಡು ದೀನತೆಯಿಂದ ಕ್ಷಮೆ ಕೇಳೋಕೆ ಸಿದ್ಧನಾಗಿದ್ದೀನಾ? ನಾನೇ ಮುಂದೆ ಹೋಗಿ ನಮ್ಮ ಸಹೋದರ ಸಹೋದರಿ ಜೊತೆ ಸಮಾಧಾನ ಮಾಡಿಕೊಂಡ್ರೆ, ಯೆಹೋವನಿಗೂ ಯೇಸುಗೂ ಹೇಗೆ ಅನಿಸುತ್ತೆ?’ ಅಂತ ನಮ್ಮನ್ನೇ ಕೇಳಿಕೊಳ್ಳಬೇಕು. ನಾವು ಈ ರೀತಿ ನಮ್ಮನ್ನೇ ಪರೀಕ್ಷೆ ಮಾಡಿಕೊಳ್ಳೋದ್ರಿಂದ ಯೇಸು ಹೇಳಿದ ಮಾತನ್ನ ಕೇಳ್ತೀವಿ ಮತ್ತು ನಮ್ಮ ಸಹೋದರ ಸಹೋದರಿಯರ ಜೊತೆ ಸಮಾಧಾನ ಮಾಡಿಕೊಳ್ತೀವಿ. ಇದನ್ನ ಮಾಡೋಕೆ ಯಾಕೋಬನ ತರ ದೀನರಾಗಿರಬೇಕು.
15. ಎಫೆಸ 4:2, 3ರಲ್ಲಿರೋ ತತ್ವ ಸಹೋದರರ ಜೊತೆ ಸಮಾಧಾನ ಮಾಡಿಕೊಳ್ಳೋಕೆ ಹೇಗೆ ಸಹಾಯ ಮಾಡುತ್ತೆ?
15 ಒಂದುವೇಳೆ ಯಾಕೋಬ ಏಸಾವನ ಹತ್ತಿರ ಬಂದು, ‘ನೀನು ಮಾಡಿದ್ದೇ ತಪ್ಪು ನನ್ನದೇನು ತಪ್ಪಿಲ್ಲ’ ಅಂತ ವಾದ ಮಾಡಿದ್ರೆ, ಅದು ಖಂಡಿತ ಸಮಾಧಾನದಿಂದ ಮುಗಿತಾ ಇರಲಿಲ್ಲ. ಪರಿಸ್ಥಿತಿ ಕೈ ಮೀರಿ ಹೋಗ್ತಿತ್ತು. ನಾವು ನಮ್ಮ ಸಹೋದರರ ಜೊತೆ ಸಮಾಧಾನ ಮಾಡಿಕೊಳ್ಳೋಕೆ ಹೋಗುವಾಗ ದೀನತೆ ತೋರಿಸಬೇಕು ಅಂತ ಇದ್ರಿಂದ ಕಲಿತೀವಿ. (ಎಫೆಸ 4:2, 3 ಓದಿ.) ಜ್ಞಾನೋಕ್ತಿ 18:19 ಹೀಗೆ ಹೇಳುತ್ತೆ, “ಬೇಜಾರಾಗಿರೋ ಸಹೋದರನನ್ನ ಗೆಲ್ಲೋದಕ್ಕಿಂತ ಭದ್ರಕೋಟೆ ಇರೋ ಪಟ್ಟಣ ಗೆಲ್ಲೋದು ಸುಲಭ, ಭದ್ರಕೋಟೆಯ ಕಂಬಿಗಳ ತರ ಜಗಳಗಳು ಜನ್ರನ್ನ ಬೇರೆಬೇರೆ ಮಾಡಿಬಿಡುತ್ತೆ.” ಹಾಗಾಗಿ ನಾವು ದೀನತೆಯಿಂದ ಸಹೋದರ ಸಹೋದರಿಯರ ಹತ್ರ ಕ್ಷಮೆ ಕೇಳಿದ್ರೆ, ಅವರ ಜೊತೆ ಸಮಾಧಾನ ಮಾಡಿಕೊಳ್ಳೋಕೆ ಸುಲಭ ಆಗುತ್ತೆ.
16. ನಾವು ಯಾವುದರ ಬಗ್ಗೆ ಗಮನ ಕೊಡಬೇಕು ಮತ್ತು ಯಾಕೆ?
16 ನಮ್ಮ ಸಹೋದರರ ಜೊತೆಗೆ ಸಮಾಧಾನ ಮಾಡಿಕೊಳ್ಳೋಕೆ ಹೋಗೋ ಮುಂಚೆ ನಾವು ಏನು ಮಾತಾಡ್ತೀವಿ, ಹೇಗೆ ಮಾತಾಡ್ತೀವಿ ಅಂತ ಚೆನ್ನಾಗಿ ಯೋಚನೆ ಮಾಡಬೇಕು. ಅವರ ಹತ್ತಿರ ಮಾತಾಡೋಕೆ ಹೋದಾಗ ಹಳೇ ವಿಷಯಗಳನ್ನ ಮರೆತು ಮತ್ತೆ ಅವ್ರ ಜೊತೆ ಒಳ್ಳೇ ಸಂಬಂಧ ಬೆಳೆಸಿಕೊಳ್ಳೋದೇ ನಮ್ಮ ಗುರಿಯಾಗಿರಬೇಕು. ಮಾತಾಡುವಾಗ ಅವರು ನಮಗೆ ನೋವಾಗೋ ತರ ಏನಾದ್ರು ಹೇಳಬಹುದು. ಆ ಸಮಯದಲ್ಲಿ ನಾವು ಕೋಪ ಮಾಡಿಕೊಂಡು, ನಾವೇ ಸರಿ ಅಂತ ಮಾತಾಡಿದ್ರೆ, ಸಮಾಧಾನ ಮಾಡಿಕೊಳ್ಳೋಕೆ ಆಗುತ್ತಾ? ಹಾಗಾಗಿ ಯಾರು ಸರಿ ಯಾರು ತಪ್ಪು ಅಂತ ಸಾಬೀತು ಮಾಡೋದಕ್ಕಿಂತ ಆ ಸಹೋದರನ ಜೊತೆ ಸಮಾಧಾನ ಮಾಡಿಕೊಳ್ಳೋದೇ ತುಂಬ ಮುಖ್ಯ ಅನ್ನೋದನ್ನ ನೆನಪಲ್ಲಿಡಿ.—1 ಕೊರಿಂ. 6:7.
17. ಗಿಲ್ಬರ್ಟ್ ಅವರಿಂದ ನೀವೇನು ಕಲಿತ್ರಿ?
17 ಬ್ರದರ್ ಗಿಲ್ಬರ್ಟ್ ಸಮಾಧಾನ ಮಾಡಿಕೊಳ್ಳೋಕೆ ತುಂಬ ಪ್ರಯತ್ನ ಪಟ್ಟರು. ಅವರು ಹೇಳಿದ್ದು, “ನನಗೂ ನನ್ನ ಮಗಳಿಗೂ ಅಷ್ಟಕ್ಕಷ್ಟೇ, ಮುನಿಸಿಕೊಂಡಿದ್ವಿ. ನಾವು ಮತ್ತೆ ಒಂದಾಗೋಕೆ ಎರಡು ವರ್ಷ ಪ್ರಯತ್ನ ಹಾಕಿದೆ. ಪ್ರತಿಸಲ ನಾನು ನನ್ನ ಮಗಳ ಜೊತೆ ಮಾತಾಡೋ ಮುಂಚೆ ದೇವರ ಹತ್ತಿರ ಪ್ರಾರ್ಥಿಸ್ತಿದ್ದೆ. ‘ಅವಳು ಏನೇ ಹೇಳಿದ್ರೂ ನಾನು ಅದಕ್ಕೆ ಬೇಜಾರು ಮಾಡಿಕೊಳ್ಳಬಾರದು. ಅವಳನ್ನ ಕ್ಷಮಿಸಿಬಿಡಬೇಕು’ ಅಂತ ಮನಸ್ಸಲ್ಲಿ ಅಂದುಕೊಳ್ತಿದ್ದೆ. ನಾನು ಮಾಡಿದ್ದೇ ಸರಿ ಅಂತ ಸಾಬೀತು ಮಾಡೋದಕ್ಕಿಂತ ಸಮಾಧಾನ ಮಾಡಿಕೊಳ್ಳೋದೇ ಮುಖ್ಯ ಅಂತ ನನಗೆ ಗೊತ್ತಾಯ್ತು. ಕುಟುಂಬದಲ್ಲಿ ನಾವೆಲ್ಲ ಈಗ ಒಂದಾಗಿರೋದ್ರಿಂದ ನಾನು ತುಂಬ ಖುಷಿಯಾಗಿದ್ದೀನಿ.”
18-19. ನಾವು ಇನ್ನೊಬ್ಬರ ಮನಸ್ಸು ನೋಯಿಸಿದ್ರೆ ಏನು ಮಾಡಬೇಕು ಮತ್ತು ಯಾಕೆ?
18 ನೀವು ಒಬ್ಬ ಸಹೋದರ ಅಥವಾ ಸಹೋದರಿಯ ಮನಸ್ಸು ನೋಯಿಸಿದ್ದು ನಿಮ್ಮ ನೆನಪಿಗೆ ಬಂದ್ರೆ ಏನು ಮಾಡ್ತೀರಾ? ಯೇಸು ಹೇಳಿದ ಹಾಗೆ ಅವರ ಹತ್ರ ಹೋಗಿ ಸಮಾಧಾನ ಮಾಡಿಕೊಳ್ಳಬೇಕು. ಅದಕ್ಕೋಸ್ಕರ ಯೆಹೋವನ ಹತ್ರ ಪ್ರಾರ್ಥಿಸಿ ಮತ್ತು ಪವಿತ್ರಶಕ್ತಿಗಾಗಿ ಬೇಡ್ಕೊಳ್ಳಿ. ಹೀಗೆ ಮಾಡಿದ್ರೆ ನೀವು ಖುಷಿಖುಷಿಯಾಗಿ ಇರ್ತೀರ. ಯೇಸು ಹೇಳೋದನ್ನ ನೀವು ಕೇಳ್ತೀರ ಅಂತ ತೋರಿಸ್ತೀರ.—ಮತ್ತಾ. 5:9.
19 ‘ಸಭೆಯ ಯಜಮಾನನಾದ’ ಯೇಸುವಿನ ಮುಖಾಂತರ ಯೆಹೋವ ದೇವರು ನಮಗೆ ಇಷ್ಟು ಒಳ್ಳೇ ಬುದ್ಧಿವಾದ ಕೊಟ್ಟಿರೋದಕ್ಕೆ ನಾವು ಋಣಿಗಳಾಗಿರಬೇಕು ಅಲ್ವಾ? (ಎಫೆ. 5:23) ಪೇತ್ರ, ಯಾಕೋಬ ಮತ್ತು ಯೋಹಾನನ ತರ ನಾವೂ ‘ಯೇಸು ಮಾತನ್ನ ಕೇಳೋಣ.’ (ಮತ್ತಾ. 17:5) ಆತನ ಮಾತನ್ನ ಹೇಗೆ ಕೇಳೋದು ಅಂತ ನಾವು ಈ ಲೇಖನದಲ್ಲಿ ಕಲಿತ್ವಿ. ಒಂದು, ಸಹೋದರ ಸಹೋದರಿಯರ ಜೊತೆ ಸಮಾಧಾನ ಮಾಡಿಕೊಳ್ಳೋದು. ಇನ್ನೊಂದು, ಇಕ್ಕಟ್ಟಾದ ದಾರಿಯಲ್ಲಿ ನಡಿಯೋದು. ನಾವು ಹೀಗೆ ಮಾಡಿದ್ರೆ ಈಗಲೂ ಮುಂದಕ್ಕೂ ಖುಷಿಯಾಗಿ ಇರ್ತೀವಿ, ತುಂಬ ಆಶೀರ್ವಾದಗಳೂ ಸಿಗುತ್ತೆ.
ಗೀತೆ 77 ಕ್ಷಮಿಸುವವರಾಗಿರಿ
a ಜೀವಕ್ಕೆ ನಡೆಸೋ ಇಕ್ಕಟ್ಟಾದ ದಾರಿಯಲ್ಲಿ ನಾವು ಹೋಗಬೇಕು ಅಂತ ಯೇಸು ಹೇಳ್ತಿದ್ದಾನೆ. ಸಹೋದರ ಸಹೋದರಿಯರ ಮನಸ್ಸನ್ನ ನೋಯಿಸಿದ್ರೆ ಅವರ ಜೊತೆ ಸಮಾಧಾನ ಮಾಡ್ಕೊಳ್ಳಿ ಅಂತ ಹೇಳ್ತಿದ್ದಾನೆ. ಅವನು ಹೇಳಿದ ತರ ಮಾಡೋಕೆ ಕೆಲವೊಮ್ಮೆ ಯಾಕೆ ಕಷ್ಟ ಆಗಬಹುದು? ಕಷ್ಟ ಆದ್ರೂ ಹೇಗೆ ಮಾಡೋದು ಅಂತ ಈ ಲೇಖನದಲ್ಲಿ ನೋಡೋಣ.
b ಯುವಜನರ 10 ಪ್ರಶ್ನೆಗಳಿಗೆ ಉತ್ತರಗಳು ಅನ್ನೋ ಕಿರುಹೊತ್ತಗೆಯ “ಒತ್ತಡ ಹಾಕಿದಾಗ ಏನು ಮಾಡಲಿ?” ಅನ್ನೋ 6ನೇ ಪ್ರಶ್ನೆಯನ್ನ ಓದಿ ಮತ್ತು jw.org ವೆಬ್ಸೈಟ್ನಲ್ಲಿ ಇತರರ ಒತ್ತಡಕ್ಕೆ ಮಣಿಯದಿರಿ! ಅನ್ನೋ ಚಲಿಸುವ ಚಿತ್ರಗಳನ್ನ ನೋಡಿ (ಬೈಬಲ್ ಬೋಧನೆಗಳು > ಹದಿವಯಸ್ಕರು)
c ಕೆಲವು ಹೆಸರು ಬದಲಾಗಿವೆ.
d ಚಿತ್ರ ವಿವರಣೆ: ನಾವು ಯೆಹೋವನ ನೀತಿ-ನಿಯಮಗಳನ್ನ ಪಾಲಿಸಿದ್ರೆ “ಇಕ್ಕಟ್ಟಾದ” ದಾರಿಯಲ್ಲಿ ನಡಿಯೋಕೆ ಆಗುತ್ತೆ. ಆಗ ನಾವು ಅಶ್ಲೀಲ ಚಿತ್ರಗಳನ್ನು ನೋಡಲ್ಲ, ಅನೈತಿಕ ಜೀವನ ನಡೆಸಲ್ಲ, ಉನ್ನತ ಶಿಕ್ಷಣ ಮಾಡಿದ್ರೆ ಮಾತ್ರ ಜೀವನದಲ್ಲಿ ಖುಷಿಯಾಗಿ ಇರ್ತೀನಿ ಅಂತ ನೆನಸಲ್ಲ.
e ಚಿತ್ರ ವಿವರಣೆ: ಏಸಾವನ ಜೊತೆ ಸಮಾಧಾನ ಮಾಡಿಕೊಳ್ಳೋಕೆ ಯಾಕೋಬ 7 ಸಲ ಬಗ್ಗಿ ನಮಸ್ಕಾರ ಮಾಡಿದ.