‘ಕಣ್ಣಿಗೆ ಪ್ರತಿಯಾಗಿ ಕಣ್ಣು’ ಅರ್ಥವೇನು?
ಬೈಬಲ್ ಕೊಡುವ ಉತ್ತರ
ಹಿಂದಿನ ಕಾಲದ ಇಸ್ರಾಯೇಲ್ಯರಿಗೆ ದೇವರು ಮೋಶೆಯ ಮೂಲಕ ಕೊಟ್ಟ ಧರ್ಮಶಾಸ್ತ್ರದಲ್ಲಿ ‘ಕಣ್ಣಿಗೆ ಪ್ರತಿಯಾಗಿ ಕಣ್ಣು’ ಎಂಬ ನಿಯಮ ಇದೆ. ಯೇಸು ಪರ್ವತ ಪ್ರಸಂಗದಲ್ಲೂ ಅದನ್ನು ಹೇಳಿದನು. (ಮತ್ತಾಯ 5:38, ಸತ್ಯವೇದವು; ವಿಮೋಚನಕಾಂಡ 21:24, 25; ಧರ್ಮೋಪದೇಶಕಾಂಡ 19:21) ಅಪರಾಧ ಮಾಡಿದವನಿಗೆ ತಕ್ಕ ಶಿಕ್ಷೆ ಆಗಬೇಕು ಅನ್ನುವುದೇ ಇದರ ಅರ್ಥ.a
ಒಬ್ಬ ಇನ್ನೊಬ್ಬನಿಗೆ ಬೇಕುಬೇಕು ಅಂತ ಹಾನಿಮಾಡಿದಾಗ ಈ ನಿಯಮ ಅನ್ವಯವಾಗುತ್ತಿತ್ತು. ಅಂಥ ವ್ಯಕ್ತಿಗೆ ಸಿಗುವ ಶಿಕ್ಷೆಯ ಬಗ್ಗೆ ಮೋಶೆಯ ನಿಯಮದಲ್ಲಿ ಹೀಗಿತ್ತು: “ಅವನು ಮೂಳೆ ಮುರಿದ್ರೆ ಇವನೂ ಮೂಳೆಯನ್ನ ಮುರಿಬೇಕು. ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು ಕೊಡಬೇಕು. ಅವನು ಯಾವ ತರ ಹಾನಿ ಮಾಡಿದ್ದಾನೋ ಅದೇ ತರ ಅವನಿಗೂ ಹಾನಿ ಮಾಡಬೇಕು.”—ಯಾಜಕಕಾಂಡ 24:20.
‘ಕಣ್ಣಿಗೆ ಪ್ರತಿಯಾಗಿ ಕಣ್ಣು’ ಎಂಬ ನಿಯಮ ಕೊಟ್ಟದ್ದು ಏಕೆ?
‘ಕಣ್ಣಿಗೆ ಪ್ರತಿಯಾಗಿ ಕಣ್ಣು’ ನಿಯಮ ಎಲ್ಲರಿಗೂ ಸೇಡು ತೀರಿಸಲು ಅನುಮತಿ ಕೊಡಲಿಲ್ಲ. ಬದಲಿಗೆ ಅಪರಾಧಿಗೆ ತಕ್ಕ ಶಿಕ್ಷೆ ಕೊಡಲು, ಅವನ ಜೊತೆ ತುಂಬ ಕಠಿಣವಾಗಿಯೋ ತುಂಬ ಮೃದುವಾಗಿಯೋ ನಡೆದುಕೊಳ್ಳದೇ ಇರಲು ನ್ಯಾಯಾಧೀಶರಿಗೆ ಸಹಾಯ ಮಾಡಿತು.
ಅಲ್ಲದೆ ಈ ನಿಯಮ, ಬೇರೆಯವರಿಗೆ ಬೇಕುಬೇಕು ಅಂತ ಹಾನಿಮಾಡದಂತೆ ಅಥವಾ ಹಾನಿಮಾಡಲು ಸಂಚು ಮಾಡದಂತೆ ತಡೆಯಿತು. ನಿಯಮ ಪುಸ್ತಕದಲ್ಲಿ ಹೀಗಿದೆ: “ಆಗ ಇದನ್ನ [ದೇವರ ನ್ಯಾಯದ ಪ್ರಕಾರ ಕೊಟ್ಟ ತೀರ್ಪನ್ನ] ಕೇಳಿಸ್ಕೊಂಡ ಜನ್ರು ಹೆದರಿ ಮುಂದೆ ಯಾವತ್ತೂ ಅಂಥ ಕೆಟ್ಟ ಕೆಲಸ ಮಾಡಲ್ಲ.”—ಧರ್ಮೋಪದೇಶಕಾಂಡ 19:20.
‘ಕಣ್ಣಿಗೆ ಪ್ರತಿಯಾಗಿ ಕಣ್ಣು’ ಎಂಬ ನಿಯಮವನ್ನು ಕ್ರೈಸ್ತರು ಪಾಲಿಸಬೇಕಾ?
ಇಲ್ಲ, ಕ್ರೈಸ್ತರು ಇದನ್ನು ಪಾಲಿಸಬೇಕಿಲ್ಲ. ನಿಯಮ ಪುಸ್ತಕದಲ್ಲಿದ್ದ ಈ ನಿಯಮ ಯೇಸು ಸತ್ತಾಗ ಕೊನೆ ಆಯಿತು.—ರೋಮನ್ನರಿಗೆ 10:4.
ಆದರೆ ಈ ನಿಯಮ ದೇವರ ಯೋಚನೆಯನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಉದಾಹರಣೆಗೆ ದೇವರು ನ್ಯಾಯಕ್ಕೆ ತುಂಬ ಬೆಲೆ ಕೊಡುತ್ತಾನೆ ಅಂತ ತಿಳಿದುಕೊಳ್ಳುತ್ತೇವೆ. (ಕೀರ್ತನೆ 89:14) ಅಲ್ಲದೆ, ತಪ್ಪು ಮಾಡಿದವನಿಗೆ “ಸರಿಯಾದ ಪ್ರಮಾಣದಲ್ಲಿ” ಶಿಕ್ಷೆ ಆಗಬೇಕು, ಇದೇ ದೇವರ ನ್ಯಾಯದ ಮಟ್ಟ ಅಂತನೂ ಗೊತ್ತಾಗುತ್ತೆ.—ಯೆರೆಮೀಯ 30:11.
‘ಕಣ್ಣಿಗೆ ಪ್ರತಿಯಾಗಿ ಕಣ್ಣು’ ನಿಯಮದ ಬಗ್ಗೆ ತಪ್ಪು ಕಲ್ಪನೆಗಳು
ತಪ್ಪು: ‘ಕಣ್ಣಿಗೆ ಪ್ರತಿಯಾಗಿ ಕಣ್ಣು’ ಕಠಿಣ ನಿಯಮ.
ಸರಿ: ನ್ಯಾಯತೀರಿಸುವಾಗ ತುಂಬ ಕಠಿಣವಾಗಿ ಕ್ರೂರವಾಗಿ ನಡೆದುಕೊಳ್ಳಬೇಕು ಅಂತ ಈ ನಿಯಮ ಹೇಳುತ್ತಿಲ್ಲ. ನ್ಯಾಯಾಧೀಶರು ಅಪರಾಧಿಗೆ ಶಿಕ್ಷೆ ಕೊಡುವುದಕ್ಕೆ ಮುಂಚೆ ನಿಜವಾಗಲೂ ಏನು ನಡೆಯಿತು, ಬೇಕುಬೇಕು ಅಂತನೇ ತಪ್ಪು ಮಾಡಿದ್ದಾನಾ ಎಂದು ನೋಡಬೇಕಿತ್ತು. (ವಿಮೋಚನಕಾಂಡ 21:28-30; ಅರಣ್ಯಕಾಂಡ 35:22-25) ಈ ರೀತಿ ‘ಕಣ್ಣಿಗೆ ಪ್ರತಿಯಾಗಿ ಕಣ್ಣು’ ನಿಯಮ ಮಿತಿಮೀರಿ ಶಿಕ್ಷೆ ಕೊಡದ ಹಾಗೆ ತಡೆಯಿತು.
ತಪ್ಪು: ‘ಕಣ್ಣಿಗೆ ಪ್ರತಿಯಾಗಿ ಕಣ್ಣು’ ನಿಯಮದಿಂದ ಸೇಡು ತೀರಿಸುವ ವಿಷಯಕ್ಕೆ ಕೊನೆ ಇರಲಿಲ್ಲ.
ಸರಿ: “ನೀವು ಯಾರಿಗೂ ಸೇಡು ತೀರಿಸಬಾರದು ಅಥವಾ ಯಾರ ಮೇಲೂ ದ್ವೇಷ ಸಾಧಿಸಬಾರದು” ಎಂದು ಮೋಶೆಯ ನಿಯಮನೇ ಹೇಳುತ್ತದೆ. (ಯಾಜಕಕಾಂಡ 19:18) ಹಾಗಾಗಿ ದೇವರು ಕೊಟ್ಟ ನಿಯಮ ಸೇಡು ತೀರಿಸುವುದಕ್ಕೆ ಪ್ರೋತ್ಸಾಹ ಕೊಡಲಿಲ್ಲ. ಬದಲಿಗೆ ದೇವರ ಮೇಲೆ ಭರವಸೆ ಇಡುವಂತೆ ಮತ್ತು ತಪ್ಪುಗಳನ್ನು ಸರಿ ಮಾಡಲು ಅಧಿಕಾರವಿರುವ ಕಾನೂನು ವ್ಯವಸ್ಥೆಯಿಂದ ಸಹಾಯ ಪಡೆಯುವಂತೆ ಜನರನ್ನು ಪ್ರೋತ್ಸಾಹಿಸಿತು.—ಧರ್ಮೋಪದೇಶಕಾಂಡ 32:35.
a ಈ ಕಾನೂನು ತತ್ವಕ್ಕೆ ಸೂಚಿಸಲು ಕೆಲವೊಮ್ಮೆ ಲೆಕ್ಸ್ಟಲಿಯೊನಿಸ್ ಎಂಬ ಲ್ಯಾಟಿನ್ ಪದ ಬಳಸುತ್ತಿದ್ದರು. ಈ ತತ್ವ ಹಿಂದಿನ ಕಾಲದ ಬೇರೆ ಸಮುದಾಯಗಳ ಕಾನೂನಿನಲ್ಲೂ ಇತ್ತು.