ಬೈಬಲಿನ ದೃಷ್ಟಿಕೋನ
ನಮ್ಮ ವೈರಿಗಳನ್ನು ಪ್ರೀತಿಸಲು ಸಾಧ್ಯವೇ?
ಯೇಸು ಕ್ರಿಸ್ತನು ಅಂದದ್ದು: “ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ವೈರಿಗಳನ್ನು ಪ್ರೀತಿಸುತ್ತಾ ಇರಿ; ನಿಮ್ಮನ್ನು ಹಿಂಸೆಪಡಿಸುವವರಿಗಾಗಿ ಪ್ರಾರ್ಥಿಸುತ್ತಾ ಇರಿ. ಇದರಿಂದ ನೀವು ಸ್ವರ್ಗದಲ್ಲಿರುವ ನಿಮ್ಮ ತಂದೆಯ ಮಕ್ಕಳಾಗುವಿರಿ; ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಉದಯಿಸುವಂತೆ ಮಾಡುತ್ತಾನೆ ಮತ್ತು ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.”—ಮತ್ತಾಯ 5:44, 45.
ಧರ್ಮವು ಪ್ರೀತಿ-ಶಾಂತಿಯನ್ನು ಹುಟ್ಟಿಸುತ್ತದೋ, ದ್ವೇಷ ಹಿಂಸಾಚಾರಗಳನ್ನು ಹೊತ್ತಿಸುತ್ತದೋ? ನೀವೇನು ನೆನಸುತ್ತೀರಿ? ಹೆಚ್ಚಿನವರಿಗೆ ಧರ್ಮವು ದ್ವೇಷಹಿಂಸಾಚಾರಕ್ಕೆ ಕಾರಣ ಎಂದನಿಸುತ್ತದೆ. ವಿಶೇಷವಾಗಿ ಅದು ರಾಜಕೀಯ, ಜಾತೀಯತೆ ಇಲ್ಲವೆ ರಾಷ್ಟ್ರೀಯತೆಯೊಂದಿಗೆ ಬೆರೆಯುವಾಗ ಫಲಿತಾಂಶ ಹೀಗಾಗುತ್ತದೆ. ಆದರೆ ಯೇಸುವಿನ ಮಾತುಗಳು ತೋರಿಸುವಂತೆ ನಿಜವಾಗಿಯೂ ‘ದೇವರ ಮಕ್ಕಳಾಗಿರುವವರು’ ದೇವರ ಪ್ರೀತಿಯನ್ನು ಅನುಕರಿಸುತ್ತಾ ತಮ್ಮ ವೈರಿಗಳನ್ನೂ ಪ್ರೀತಿಸುತ್ತಾರೆ.
ಇನ್ನೊಬ್ಬ ದೇವಭಕ್ತನು ಹೀಗಂದನು: “ನಿನ್ನ ವೈರಿಯು ಹಸಿದಿರುವುದಾದರೆ ಅವನಿಗೆ ಊಟಕ್ಕೆ ಕೊಡು; ಅವನು ಬಾಯಾರಿದ್ದರೆ ಅವನಿಗೆ ಏನನ್ನಾದರೂ ಕುಡಿಯಲು ಕೊಡು; . . . ಕೆಟ್ಟದ್ದು ನಿನ್ನನ್ನು ಜಯಿಸುವಂತೆ ಬಿಡಬೇಡ, ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸುತ್ತಾ ಇರು.” (ರೋಮನ್ನರಿಗೆ 12:20, 21) ಆದರೆ ಇಂದಿನ ವಿಭಜಿತ ಲೋಕದಲ್ಲಿ ಅಂಥ ಪ್ರೀತಿಯನ್ನು ತೋರಿಸಲು ನಿಜವಾಗಿಯೂ ಸಾಧ್ಯವೇ? ‘ಹೌದು’ ಎಂದು ಯೆಹೋವನ ಸಾಕ್ಷಿಗಳು ಘಂಟಾಘೋಷವಾಗಿ ಉತ್ತರಿಸುತ್ತಾರೆ! ಯೇಸು ಮತ್ತು ಅವನ ಆರಂಭದ ಹಿಂಬಾಲಕರ ಮಾದರಿಯನ್ನು ಪರಿಗಣಿಸಿ.
ಅವರು ತಮ್ಮ ವೈರಿಗಳನ್ನು ಪ್ರೀತಿಸಿದರು
ದೇವರ ಕುರಿತ ಸತ್ಯವನ್ನು ಯೇಸು ಕಲಿಸಿದನು. ಅನೇಕರು ಅವನಿಗೆ ಸಂತೋಷದಿಂದ ಕಿವಿಗೊಟ್ಟರು. ಆದರೆ ಇನ್ನಿತರರು ಅವನ ವಿರುದ್ಧವೆದ್ದರು. ಇವರಲ್ಲಿ ಕೆಲವರು ಅಜ್ಞಾನದಿಂದ ವಿರೋಧಿಸಿದರು. (ಯೋಹಾನ 7:12, 13; ಅ. ಕಾರ್ಯಗಳು 2:36-38; 3:15, 17) ಹಾಗಿದ್ದರೂ ಯೇಸು ತನ್ನ ವಿರೋಧಿಗಳನ್ನೂ ಸೇರಿಸಿ ಎಲ್ಲರೊಂದಿಗೆ ಜೀವದಾಯಕ ಸಂದೇಶ ಹಂಚಿಕೊಳ್ಳುವುದನ್ನು ಮುಂದುವರಿಸಿದನು. (ಮಾರ್ಕ 12:13-34) ಏಕೆ? ಅವರಲ್ಲಿ ಕೆಲವರಾದರೂ ತಮ್ಮ ಮಾರ್ಗಗಳನ್ನು ಬದಲಾಯಿಸಿ, ಆತನನ್ನು ಮೆಸ್ಸೀಯನೆಂದು ಅಂಗೀಕರಿಸಿ, ದೇವರ ವಾಕ್ಯದಲ್ಲಿರುವ ಆಧ್ಯಾತ್ಮಿಕ ಸತ್ಯಗಳಿಗೆ ಅನುಗುಣವಾಗಿ ಜೀವಿಸುವರೆಂದು ಅವನಿಗೆ ತಿಳಿದಿತ್ತು.—ಯೋಹಾನ 7:1, 37-46; 17:17.
ಶಸ್ತ್ರಧಾರಿ ವಿರೋಧಿಗಳು ಯೇಸುವನ್ನು ಅನ್ಯಾಯವಾಗಿ ದಸ್ತಗಿರಿಮಾಡಿದ ರಾತ್ರಿಯಂದು ಸಹ ಅವನು ತನ್ನ ವೈರಿಗಳಿಗೆ ಪ್ರೀತಿ ತೋರಿಸಿದನು. ಉದಾಹರಣೆಗೆ, ಅವನನ್ನು ಸೆರೆಹಿಡಿದವರಲ್ಲಿ ಒಬ್ಬನ ಕಿವಿಯನ್ನು ಅಪೊಸ್ತಲ ಪೇತ್ರನು ಕತ್ತಿಯಿಂದ ಕತ್ತರಿಸಿದಾಗ ಯೇಸು ಗುಣಪಡಿಸಿದನು. ಆ ಸಂದರ್ಭದಲ್ಲಿ ಯೇಸು ತಿಳಿಸಿದ ಒಂದು ಪ್ರಮುಖ ಮೂಲತತ್ತ್ವವು, ಇಂದಿಗೂ ಅವನ ನಿಜ ಹಿಂಬಾಲಕರಿಗೆ ದಾರಿದೀಪ. ಅದೇನೆಂದರೆ, “ಕತ್ತಿಯನ್ನು ಹಿಡಿಯುವವರೆಲ್ಲರು ಕತ್ತಿಯಿಂದಲೇ ನಾಶವಾಗುವರು.” (ಮತ್ತಾಯ 26:48-52; ಯೋಹಾನ 18:10, 11) ಇದಾಗಿ ಸುಮಾರು 30 ವರ್ಷ ಕಳೆದ ಬಳಿಕ ಪೇತ್ರನು ಬರೆದದ್ದು: “ಕ್ರಿಸ್ತನು ಸಹ ನಿಮಗೋಸ್ಕರ ಕಷ್ಟವನ್ನು ಅನುಭವಿಸಿ ನೀವು ತನ್ನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸುವಂತೆ ನಿಮಗೋಸ್ಕರ ಮಾದರಿಯನ್ನು ತೋರಿಸಿ ಹೋದನು. . . . ಅವನು ಕಷ್ಟವನ್ನು ಅನುಭವಿಸುತ್ತಿದ್ದಾಗ ಯಾರನ್ನೂ ಬೆದರಿಸದೆ, [ದೇವರಿಗೆ] ತನ್ನನ್ನು ಒಪ್ಪಿಸಿಕೊಡುತ್ತಾ ಇದ್ದನು.” (1 ಪೇತ್ರ 2:21, 23) ಹೌದು, ಕ್ರಿಸ್ತನ ನಿಜ ಹಿಂಬಾಲಕರು ಅನುಸರಿಸುವ ಮಾರ್ಗ ಪ್ರೀತಿಯ ಮಾರ್ಗವೇ ಹೊರತು ಪ್ರತೀಕಾರದ್ದಲ್ಲ ಎಂದು ಪೇತ್ರನು ಕಲಿತನು.—ಮತ್ತಾಯ 5:9.
‘ಯೇಸುವಿನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸುವ’ ಎಲ್ಲರೂ ಅವನ ಪ್ರೀತಿಯ, ಸೌಜನ್ಯಭರಿತ ಸ್ವಭಾವವನ್ನು ಪ್ರತಿಬಿಂಬಿಸುತ್ತಾರೆ. “ಕರ್ತನ ದಾಸನು ಜಗಳವಾಡದೆ ಎಲ್ಲರೊಂದಿಗೆ ಕೋಮಲಭಾವದಿಂದಿರಬೇಕು; ಅವನು . . . ಕೇಡನ್ನು ಅನುಭವಿಸುತ್ತಿರುವಾಗ ತಾಳಿಕೊಳ್ಳುವವನೂ” ಆಗಿರಬೇಕು ಎನ್ನುತ್ತದೆ 2 ತಿಮೊಥೆಯ 2:24. ಈ ಗುಣಗಳು ಕ್ರೈಸ್ತನೊಬ್ಬನ ಜೀವನರೀತಿಯಲ್ಲಿ ತೋರಿಬರಬೇಕು ಏಕೆಂದರೆ ಆ ಜೀವನರೀತಿ ಶಾಂತಿ, ಸಾಮರಸ್ಯದಿಂದ ಕೂಡಿದ್ದಾಗಿರಬೇಕು.
ಶಾಂತಿಶೀಲರಾದ ‘ಕ್ರಿಸ್ತನ ರಾಯಭಾರಿಗಳು’
ಅಪೊಸ್ತಲ ಪೌಲನು ತನ್ನ ಜೊತೆ ವಿಶ್ವಾಸಿಗಳಿಗೆ ಬರೆದದ್ದು: “ನಾವು ಕ್ರಿಸ್ತನ ಬದಲಿಯಾಗಿ ರಾಯಭಾರಿಗಳಾಗಿದ್ದೇವೆ. ಕ್ರಿಸ್ತನ ಬದಲಿಯಾಗಿರುವ ನಾವು, ‘ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ ಬನ್ನಿರಿ’ ಎಂದು ಬೇಡಿಕೊಳ್ಳುತ್ತೇವೆ.” (2 ಕೊರಿಂಥ 5:20) ರಾಯಭಾರಿಗಳು ಯಾವ ದೇಶದಲ್ಲಿ ಇರುತ್ತಾರೊ ಆ ದೇಶದ ಆಂತರಿಕ ರಾಜಕೀಯ ಹಾಗೂ ಮಿಲಿಟರಿ ವ್ಯವಹಾರಗಳಲ್ಲಿ ತಲೆಹಾಕುವುದಿಲ್ಲ. ಅವರು ತಟಸ್ಥರಾಗಿರುತ್ತಾರೆ. ಅವರ ಕೆಲಸ, ತಾವು ಯಾರ ಪರವಾಗಿ ಮಾತಾಡಬೇಕೋ ಆ ಸರ್ಕಾರವನ್ನು ಪ್ರತಿನಿಧಿಸಿ, ಅದನ್ನು ಬೆಂಬಲಿಸುವುದೇ ಆಗಿದೆ.
ಕ್ರಿಸ್ತನ ರಾಯಭಾರಿಗಳು ಮತ್ತು ನಿಯೋಗಿಗಳ ವಿಷಯದಲ್ಲೂ ಇದು ಸತ್ಯ. ಅವರು ಯೇಸುವನ್ನು ತಮ್ಮ ಅರಸನೆಂದು ಅಂಗೀಕರಿಸುತ್ತಾರೆ ಮತ್ತು ಸುವಾರ್ತೆಯನ್ನು ಶಾಂತಿಯುತವಾಗಿ ಘೋಷಿಸುವ ಮೂಲಕ ಯೇಸುವಿನ ಸ್ವರ್ಗೀಯ ರಾಜ್ಯವನ್ನು ಬೆಂಬಲಿಸುತ್ತಾರೆ. (ಮತ್ತಾಯ 24:14; ಯೋಹಾನ 18:36) ಈ ಕಾರಣಕ್ಕಾಗಿಯೇ ಪೌಲನು ತನ್ನ ದಿನದ ಕ್ರೈಸ್ತರಿಗೆ ಹೀಗೆ ಬರೆದನು: “ನಾವು . . . ಶಾರೀರಿಕ ಪ್ರವೃತ್ತಿಗನುಸಾರ ಯುದ್ಧಮಾಡುವುದಿಲ್ಲ. ಯುದ್ಧಕ್ಕಾಗಿ ನಾವು ಉಪಯೋಗಿಸುವ ಆಯುಧಗಳು ಶಾರೀರಿಕವಾದವುಗಳಾಗಿರದೆ . . . ದೇವರಿಂದ ಶಕ್ತಿಯನ್ನು ಹೊಂದಿದವುಗಳಾಗಿವೆ. ದೇವರ ಜ್ಞಾನಕ್ಕೆ ವಿರುದ್ಧವಾಗಿ ಎಬ್ಬಿಸಲ್ಪಡುವ ಕುತರ್ಕಗಳನ್ನೂ ಪ್ರತಿಯೊಂದು ಉನ್ನತವಾದ ವಿಷಯವನ್ನೂ ನಾವು ಕೆಡವಿಹಾಕುವವರಾಗಿದ್ದೇವೆ.”—2 ಕೊರಿಂಥ 10:3-5; ಎಫೆಸ 6:13-20.
ಪೌಲನು ಆ ಮಾತುಗಳನ್ನು ಬರೆದ ಸಮಯದಲ್ಲಿ, ಅನೇಕ ದೇಶಗಳಲ್ಲಿ ಕ್ರೈಸ್ತರು ಹಿಂಸೆಗೆ ಗುರಿಯಾಗಿದ್ದರು. ಅವರು ಏಟಿಗೆ ಎದಿರೇಟು ಕೊಡಸಾಧ್ಯವಿತ್ತು. ಆದರೆ ಹಾಗೆ ಮಾಡದೆ ಅವರು ತಮ್ಮ ವೈರಿಗಳನ್ನು ಪ್ರೀತಿಸುವುದನ್ನು ಮುಂದುವರಿಸಿದರು. ದೇವರೊಂದಿಗೆ ಸಮಾಧಾನದ ಸಂಬಂಧ ಸ್ಥಾಪಿಸುವ ಸಂದೇಶವನ್ನು ಹಂಚಿಕೊಳ್ಳುವುದನ್ನೂ ಅವರು ಬಿಟ್ಟುಬಿಡಲಿಲ್ಲ. ಧರ್ಮ ಮತ್ತು ಯುದ್ಧದ ವಿಶ್ವಕೋಶ (ಇಂಗ್ಲಿಷ್) ತಿಳಿಸುವುದು: “ಯೇಸುವಿನ ಅತ್ಯಾರಂಭದ ಹಿಂಬಾಲಕರು ಯುದ್ಧವನ್ನೂ ಮಿಲಿಟರಿ ಸೇವೆಯನ್ನೂ ತ್ಯಜಿಸಿದರು” ಏಕೆಂದರೆ ಅವು “ಯೇಸು ಕಲಿಸಿದ ಪ್ರೀತಿಯ ಬೋಧೆಗೆ ಹಾಗೂ ವೈರಿಗಳನ್ನು ಪ್ರೀತಿಸಬೇಕೆಂಬ ಆಜ್ಞೆಗೆ” ವಿರುದ್ಧವಾಗಿದ್ದವು.a
ಆದಿ ಕ್ರೈಸ್ತರಂತೆಯೇ ಯೆಹೋವನ ಸಾಕ್ಷಿಗಳು ಯೇಸುವನ್ನು ತಮ್ಮ ರಾಜನೂ ದೇವರ ರಾಜ್ಯದ ಅರಸನೂ ಎಂದು ಅಂಗೀಕರಿಸುತ್ತಾರೆ. ಈ ರಾಜ್ಯವು ಭೂಮಿ ಮೇಲೆ ಬೇಗನೆ ಶಾಶ್ವತ ಶಾಂತಿ ಭದ್ರತೆಯನ್ನು ತರುವ ಒಂದು ಸ್ವರ್ಗೀಯ ಸರ್ಕಾರವಾಗಿದೆ. (ದಾನಿಯೇಲ 2:44; ಮತ್ತಾಯ 6:9, 10) ಆ ರಾಜ್ಯದ ರಾಯಭಾರಿಗಳೂ ನಿಯೋಗಿಗಳೂ ಆಗಿ ಅವರು ಅದರ ಹಿರಿಮೆಯನ್ನು ಘೋಷಿಸುತ್ತಾರೆ. ಅದೇ ಸಮಯದಲ್ಲಿ, ತಾವೀಗ ಇರುವಂಥ ದೇಶಗಳಲ್ಲಿ ಸತ್ಪ್ರಜೆಗಳಾಗಿರಲು ಪ್ರಯತ್ನಿಸುತ್ತಾರೆ. ಈ ನಿಟ್ಟಿನಲ್ಲಿ ಅವರು ತೆರಿಗೆಗಳನ್ನು ಕಟ್ಟುತ್ತಾರೆ ಮತ್ತು ದೇವರ ನಿಯಮಗಳಿಗೆ ವಿರುದ್ಧವಾಗಿರದ ಎಲ್ಲ ಕಾನೂನುಗಳನ್ನು ಪಾಲಿಸುತ್ತಾರೆ.—ಅ. ಕಾರ್ಯಗಳು 5:29; ರೋಮನ್ನರಿಗೆ 13:1, 7.
ಆದರೆ ದುಃಖಕರ ಸಂಗತಿಯೇನೆಂದರೆ ಆದಿ ಕ್ರೈಸ್ತರಂತೆಯೇ ಇಂದು ಯೆಹೋವನ ಸಾಕ್ಷಿಗಳನ್ನು ಕೆಲವೊಮ್ಮೆ ಅಪಾರ್ಥಮಾಡಲಾಗುತ್ತದೆ, ಹೆಸರನ್ನು ಕೆಡಿಸಲಾಗುತ್ತದೆ ಮತ್ತು ಹಿಂಸಿಸಲಾಗುತ್ತದೆ. ಆದರೂ ಅವರು ಪ್ರತೀಕಾರ ತೀರಿಸುವುದಿಲ್ಲ. ಬದಲಿಗೆ ‘ಎಲ್ಲರೊಂದಿಗೆ ಶಾಂತಿಶೀಲರಾಗಿರಲು’ ಪ್ರಯತ್ನಿಸುತ್ತಾರೆ. ವಿರೋಧಿಗಳಲ್ಲಿ ಕೆಲವರಾದರೂ ‘ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ’ ಬಂದು, ನಿತ್ಯಜೀವದ ಪ್ರತೀಕ್ಷೆಯನ್ನು ಪಡೆಯುವರೆಂದು ಅವರು ನಿರೀಕ್ಷಿಸುತ್ತಾರೆ.b—ರೋಮನ್ನರಿಗೆ 12:18; ಯೋಹಾನ 17:3. (g09-E 11)
[ಪಾದಟಿಪ್ಪಣಿಗಳು]
a “ಕಾನ್ಸ್ಟೆಂಟೀನನ [ಸಾ.ಶ. 306-337 ರೋಮನ್ ಸಾಮ್ರಾಟ] ಮುಂಚೆ ಇದ್ದ ಕ್ರೈಸ್ತ ಲೇಖಕರು ಯುದ್ಧದಿಂದಾಗುವ ಸಂಹಾರವನ್ನು ಒಕ್ಕೊರಳಿನಿಂದ ಖಂಡಿಸಿದರು” ಎನ್ನುತ್ತದೆ ಧರ್ಮ ಮತ್ತು ಯುದ್ಧದ ವಿಶ್ವಕೋಶ. ಆದರೆ ಬೈಬಲಿನಲ್ಲಿ ಮುಂತಿಳಿಸಲಾಗಿದ್ದ ಧರ್ಮಭ್ರಷ್ಟತೆ ಎಲ್ಲೆಡೆಯೂ ಹಬ್ಬಿದಾಗ ಈ ಮನೋಭಾವ ಬದಲಾಯಿತು.—ಅ. ಕಾರ್ಯಗಳು 20:29, 30; 1 ತಿಮೊಥೆಯ 4:1.
b ಪ್ರಥಮ ಶತಮಾನದ ಕ್ರೈಸ್ತರಂತೆ ಯೆಹೋವನ ಸಾಕ್ಷಿಗಳು, ಅವಶ್ಯವಿರುವಾಗೆಲ್ಲ ತಮ್ಮ ಧಾರ್ಮಿಕ ಸ್ವಾತಂತ್ರ್ಯವನ್ನು ಕಾನೂನುಬದ್ಧವಾಗಿ ಸಮರ್ಥಿಸುತ್ತಾರೆ.—ಅ. ಕಾರ್ಯಗಳು 25:11; ಫಿಲಿಪ್ಪಿ 1:7.
ನೀವೇನು ಹೇಳುತ್ತೀರಿ?
◼ ಕ್ರೈಸ್ತರು ತಮ್ಮ ವೈರಿಗಳೊಂದಿಗೆ ಹೇಗೆ ನಡೆದುಕೊಳ್ಳಬೇಕು?— ಮತ್ತಾಯ 5:43-45; ರೋಮನ್ನರಿಗೆ 12:20, 21.
◼ ಯೇಸು ಹಿಂಸಿಸಲ್ಪಟ್ಟಾಗ ಹೇಗೆ ಪ್ರತಿಕ್ರಿಯಿಸಿದನು?—1 ಪೇತ್ರ 2:21, 23.
◼ ಆದಿ ಕ್ರೈಸ್ತರು ಯುದ್ಧವನ್ನು ಏಕೆ ತೊರೆದರು?—2 ಕೊರಿಂಥ 5:20; 10:3-5.