ಮೆಸ್ಸೀಯನನ್ನು ಎದುರುನೋಡಿದರು
“ಬರಬೇಕಾಗಿದ್ದ ಕ್ರಿಸ್ತನನ್ನು ಜನರು ಎದುರುನೋಡುತ್ತಿದ್ದ ಕಾರಣ, ‘ಪ್ರಾಯಶಃ ಇವನೇ ಕ್ರಿಸ್ತನಾಗಿರಬಹುದೊ’ ಎಂದು ಯೋಹಾನನ ಕುರಿತು ಎಲ್ಲರೂ ತಮ್ಮ ಹೃದಯಗಳಲ್ಲಿ ತರ್ಕಿಸುತ್ತಿದ್ದರು.”—ಲೂಕ 3:15.
1. ದೇವದೂತನು ಮಾಡಿದ ಯಾವ ಘೋಷಣೆಯನ್ನು ಕುರುಬರು ಕೇಳಿಸಿಕೊಂಡರು?
ರಾತ್ರಿ ಸಮಯ. ಕುರುಬರು ಹೊರಗೆ ಬಯಲಿನಲ್ಲಿ ಕುರಿಮಂದೆಗಳನ್ನು ಮೇಯಿಸುತ್ತಿದ್ದಾರೆ. ಥಟ್ಟನೆ ಒಬ್ಬ ದೇವದೂತನು ಅವರ ಬಳಿ ಬಂದು ನಿಲ್ಲುತ್ತಾನೆ. ದೇವರ ಮಹಿಮೆ ಅವರ ಸುತ್ತಲೂ ಪ್ರಜ್ವಲಿಸುತ್ತದೆ! ಕುರುಬರು ಅವಾಕ್ಕಾಗುತ್ತಾರೆ! ಮುಂದೇನಾಯಿತು? ದೇವದೂತನು ಈ ಘೋಷಣೆ ಮಾಡುತ್ತಾನೆ: “ಭಯಪಡಬೇಡಿ, ಎಲ್ಲ ಜನರಿಗೆ ಮಹಾ ಆನಂದವನ್ನು ಉಂಟುಮಾಡುವಂಥ ಶುಭವರ್ತಮಾನವನ್ನು ನಾನು ನಿಮಗೆ ಪ್ರಕಟಪಡಿಸುತ್ತಿದ್ದೇನೆ. ಏಕೆಂದರೆ ದಾವೀದನ ಊರಿನಲ್ಲಿ ಇಂದು ನಿಮಗಾಗಿ ಒಬ್ಬ ರಕ್ಷಕನು ಹುಟ್ಟಿದ್ದಾನೆ; ಅವನು ಕರ್ತನಾಗಿರುವ ಕ್ರಿಸ್ತನೇ.” ಹುಟ್ಟಿದ ಆ ಶಿಶುವನ್ನು ಕುರುಬರು ಹತ್ತಿರದ ಪಟ್ಟಣದಲ್ಲಿ ಒಂದು ಗೋದಲಿಯಲ್ಲಿ ಕಾಣಬಹುದಿತ್ತು. ಆ ಶಿಶುವೇ ಮುಂದೆ ಮೆಸ್ಸೀಯನಾಗಲಿದ್ದನು. ದೇವದೂತನ ಮಾತು ಮುಗಿದ ತಕ್ಷಣ “ಸ್ವರ್ಗೀಯ ಸೈನ್ಯದವರ ಒಂದು ಸಮೂಹವು . . . ಅತ್ಯುನ್ನತ ಸ್ಥಳಗಳಲ್ಲಿ ದೇವರಿಗೆ ಮಹಿಮೆ ಮತ್ತು ಭೂಮಿಯಲ್ಲಿ [ದೇವರ] ಪ್ರಸನ್ನತೆಯಿರುವ ಜನರ ಮಧ್ಯೆ ಶಾಂತಿ” ಎಂದು ಯೆಹೋವ ದೇವರನ್ನು ಸ್ತುತಿಸಿ ಕೀರ್ತಿಸಿದರು.—ಲೂಕ 2:8-14.
2. “ಮೆಸ್ಸೀಯ” ಎಂದರೇನು? ಮೆಸ್ಸೀಯನನ್ನು ಗುರುತಿಸುವುದು ಹೇಗೆ?
2 ಯೆಹೂದಿ ಕುರುಬರಿಗೆ “ಮೆಸ್ಸೀಯ” ಅಥವಾ “ಕ್ರಿಸ್ತ” ಅಂದರೆ ದೇವರ “ಅಭಿಷಿಕ್ತ” ಎಂಬ ವಿಷಯ ಚೆನ್ನಾಗಿ ತಿಳಿದಿತ್ತು. (ವಿಮೋ. 29:5-7) ಆದರೆ ದೇವದೂತನು ಹೇಳಿದ ಈ ಶಿಶುವೇ ಯೆಹೋವ ದೇವರು ಅಭಿಷೇಕಿಸಿದ ಮೆಸ್ಸೀಯನೆಂದು ಖಚಿತಪಡಿಸಿಕೊಂಡು ಬೇರೆಯವರಿಗೆ ಹೇಗೆ ಮನಗಾಣಿಸಬಹುದಿತ್ತು? ಮೆಸ್ಸೀಯನ ಕುರಿತಾದ ಅನೇಕ ಪ್ರವಾದನೆಗಳು ಈಗಾಗಲೇ ಹೀಬ್ರು ಶಾಸ್ತ್ರಗ್ರಂಥದಲ್ಲಿದ್ದವು. ಅವುಗಳನ್ನು ಈ ಮಗುವಿನ ಕಾರ್ಯಚಟುವಟಿಕೆ ಮತ್ತು ಜೀವನಶೈಲಿಯೊಂದಿಗೆ ಹೋಲಿಸಿನೋಡುವ ಮೂಲಕ ಖಾತ್ರಿಮಾಡಿಕೊಳ್ಳಬಹುದಿತ್ತು.
ಏಕೆ ಎದುರುನೋಡಿದರು?
3, 4. ದಾನಿಯೇಲ 9:24, 25ನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು?
3 ಇದಾದ ಹಲವು ವರ್ಷಗಳ ನಂತರ ಸ್ನಾನಿಕ ಯೋಹಾನ ಶುಶ್ರೂಷೆಯನ್ನು ಆರಂಭಿಸಿದಾಗ ಅನೇಕರು ಅವನೇ ಮೆಸ್ಸೀಯನಾಗಿರಬೇಕು ಎಂದು ಯೋಚಿಸಿದರು. (ಲೂಕ 3:15 ಓದಿ.) ಕೆಲವರು ಮೆಸ್ಸೀಯನ ಕುರಿತಾದ ‘ಎಪ್ಪತ್ತು ವಾರಗಳ’ ಪ್ರವಾದನೆಯನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದರೆಂದು ಕಾಣುತ್ತದೆ. ಅಂಥವರು ಮೆಸ್ಸೀಯನು ಯಾವ ಸಮಯದಲ್ಲಿ ಆಗಮಿಸುವನೆಂದು ಹೇಳಸಾಧ್ಯವಿತ್ತು. ಏಕೆಂದರೆ ಆ ಪ್ರವಾದನೆಯ ಒಂದು ಅಂಶ ಹೀಗಿತ್ತು: “ಯೆರೂಸಲೇಮು ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ ಎಂಬ ದೈವೋಕ್ತಿಯು ಹೊರಡುವಂದಿನಿಂದ ಅಭಿಷಿಕ್ತನಾದ ಪ್ರಭುವು ಬರುವದರೊಳಗೆ ಏಳು ವಾರಗಳು ಕಳೆಯಬೇಕು! ಅದು ಪುನಃ ಕಟ್ಟಲ್ಪಟ್ಟು ಅರುವತ್ತೆರಡು ವಾರ ಇರುವದು.” (ದಾನಿ. 9:24, 25) ಇಲ್ಲಿ ಹೇಳಲಾಗಿರುವ ವಾರಗಳು ದಿನಗಳಿರುವ ವಾರಗಳಲ್ಲ, ಬದಲಿಗೆ ವರ್ಷಗಳಿರುವ ವಾರಗಳಾಗಿವೆ ಎಂದು ಅನೇಕ ವಿದ್ವಾಂಸರು ಒಪ್ಪುತ್ತಾರೆ. ಉದಾಹರಣೆಗೆ, KRCBC ಪ್ರಕಟಿಸಿರುವ ಪವಿತ್ರ ಬೈಬಲ್ ಏಳು ವಾರಗಳನ್ನು “ಏಳೆಪ್ಪತ್ತು ವರ್ಷಗಳು” ಎಂದು ಹೇಳುತ್ತದೆ.
4 ಇಂದು ಯೆಹೋವನ ಜನರಿಗೆ, ದಾನಿಯೇಲ 9:25ರಲ್ಲಿ ತಿಳಿಸಿರುವ 69 ವಾರಗಳು 483 ವರ್ಷಗಳು ಎಂದು ತಿಳಿದಿದೆ. ಮಾತ್ರವಲ್ಲ ಈ 483 ವರ್ಷಗಳನ್ನು ಯಾವ ಇಸವಿಯಿಂದ ಲೆಕ್ಕಿಸಬೇಕು ಎಂದೂ ಗೊತ್ತಿದೆ. ಯೆರೂಸಲೇಮನ್ನು ಜೀರ್ಣೋದ್ಧಾರಮಾಡಿ ಪುನಃ ಕಟ್ಟುವಂತೆ ರಾಜ ಅರ್ತಷಸ್ತನು ನೆಹೆಮೀಯನಿಗೆ ಅಧಿಕಾರ ಕೊಟ್ಟ ಸಮಯದಿಂದ ಅಂದರೆ ಕ್ರಿ.ಪೂ. 455ನೇ ಇಸವಿಯಿಂದ ಲೆಕ್ಕಿಸಬೇಕು. (ನೆಹೆ. 2:1-8) ಅಲ್ಲಿಂದ 483 ವರ್ಷಗಳನ್ನು ಲೆಕ್ಕಿಸುತ್ತಾ ಬಂದರೆ, ಅದು ಯೇಸು ಕ್ರಿಸ್ತನು ದೀಕ್ಷಾಸ್ನಾನಹೊಂದಿ ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟು ಮೆಸ್ಸೀಯನಾದ ಸಮಯಕ್ಕೆ ಅಂದರೆ ಕ್ರಿ.ಶ. 29ಕ್ಕೆ ಬಂದು ನಿಲ್ಲುತ್ತದೆ.—ಮತ್ತಾ. 3:13-17.a
5. ನಾವೀಗ ಯಾವ ಪ್ರವಾದನೆಗಳನ್ನು ಪರಿಗಣಿಸಲಿದ್ದೇವೆ?
5 ಬೈಬಲಿನಲ್ಲಿ ಮೆಸ್ಸೀಯನ ಕುರಿತಾದ ಇತರ ಅನೇಕ ಪ್ರವಾದನೆಗಳೂ ಇವೆ. ನಾವೀಗ ಮೆಸ್ಸೀಯನ ಜನನ, ಅವನ ಬಾಲ್ಯಜೀವನ ಹಾಗೂ ಶುಶ್ರೂಷೆಗೆ ಸಂಬಂಧಿಸಿದ ಪ್ರವಾದನೆಗಳನ್ನು ನೋಡೋಣ. ಅವು ಹೇಗೆ ಯೇಸುವಿನಲ್ಲಿ ನೆರವೇರಿದವು ಎಂದೂ ಅರ್ಥಮಾಡಿಕೊಳ್ಳೋಣ. ಇದು ದೇವರ ವಾಕ್ಯದಲ್ಲಿ ನಮಗಿರುವ ಭರವಸೆಯನ್ನು ಹೆಚ್ಚಿಸುವುದು. ಅಲ್ಲದೆ ಜನರು ಎದುರುನೋಡುತ್ತಿದ್ದ ಮೆಸ್ಸೀಯನು ಯೇಸುವೇ ಎಂದು ಖಚಿತಪಡಿಸುವುದು.
ಜನನ ಹಾಗೂ ಬಾಲ್ಯಜೀವನದ ಕುರಿತ ಪ್ರವಾದನೆಗಳು
6. ಆದಿಕಾಂಡ 49:10 ಹೇಗೆ ನೆರವೇರಿತೆಂದು ವಿವರಿಸಿ.
6 ಮೆಸ್ಸೀಯನು ಇಸ್ರಾಯೇಲಿನ ಯೆಹೂದ ಕುಲದಲ್ಲಿ ಹುಟ್ಟುವನು. ಮರಣಶಯ್ಯೆಯಲ್ಲಿದ್ದ ಯಾಕೋಬನು ಪುತ್ರರನ್ನು ಆಶೀರ್ವದಿಸುತ್ತಾ ಹೀಗೆ ಹೇಳಿದನು: “ರಾಜದಂಡವನ್ನು ಹಿಡಿಯತಕ್ಕವನು [“ಶಿಲೋವನೆಂಬವನು,” BSI ರೆಫರೆನ್ಸ್ ಬೈಬಲ್, ಪಾದಟಿಪ್ಪಣಿ] ಬರುವ ತನಕ ಆ ದಂಡವು ಯೆಹೂದನ ಕೈಯಿಂದ ತಪ್ಪುವದಿಲ್ಲ, ಮುದ್ರೆಕೋಲು ಅವನ ಪಾದಗಳ ಬಳಿಯಿಂದ ಕದಲುವದಿಲ್ಲ; ಅವನಿಗೆ ಅನ್ಯಜನಗಳೂ ವಿಧೇಯರಾಗಿರುವರು.” (ಆದಿ. 49:10) ಈ ಮಾತುಗಳು ಮೆಸ್ಸೀಯನಿಗೆ ಸಂಬಂಧಿಸಿವೆ ಎಂದು ಯೆಹೂದಿ ವಿದ್ವಾಂಸರು ಅರ್ಥಮಾಡಿಕೊಂಡಿದ್ದರು. ಯಾಕೋಬನ ಮಾತಿನ ಅರ್ಥವೇನಾಗಿತ್ತು? ಅವನು ಮುಂಬರಲಿರುವ ಅರಸನೊಬ್ಬನ ಕುರಿತು ಮಾತಾಡುತ್ತಿದ್ದನು. ಏಕೆಂದರೆ, ರಾಜದಂಡ ಹಾಗೂ ಮುದ್ರೆಕೋಲು ರಾಜನಿಗೆ ಆಡಳಿತ ನಡೆಸುವ ಅಧಿಕಾರವಿದೆ ಎಂದು ಸೂಚಿಸುತ್ತವೆ. ಹಾಗಾಗಿ ಆಡಳಿತ ನಡೆಸಲು ನಿಜವಾದ ಅಧಿಕಾರ ಹೊಂದಿರುವ ರಾಜನೊಬ್ಬನು ಯೆಹೂದನ ವಂಶದಲ್ಲಿ ಬರುವನೆಂದು ಈ ಪ್ರವಾದನೆ ಸೂಚಿಸಿತು. ಯೆಹೂದ ವಂಶದ ಮೊದಲ ರಾಜ ದಾವೀದನಾದರೆ ಕೊನೆಯ ರಾಜ ಚಿದ್ಕೀಯನಾಗಿದ್ದನು. ಆದರೆ ಯಾಕೋಬ ನುಡಿದ ಪ್ರವಾದನೆ ಶಿಲೋವ ಎಂಬ ಮತ್ತೊಬ್ಬ ಅರಸ ಬರುವನೆಂದು ಹಾಗೂ ಅವನ ಆಡಳಿತ ಶಾಶ್ವತವಾಗಿರುವುದೆಂದು ತಿಳಿಸಿತು. ಶಿಲೋವ ಎಂದರೆ ಅಧಿಕಾರ “ಯಾರಿಗೆ ಸೇರಿದ್ದೋ ಅವನು” ಎಂದರ್ಥ. ದೇವರು ಸಹ ಈ ಶಿಲೋವನೇ ನಿಜವಾದ ಬಾಧ್ಯನು ಎಂದು ಚಿದ್ಕೀಯನಿಗೆ ಹೇಳಿದ್ದನು. (ಯೆಹೆ. 21:26, 27) ಚಿದ್ಕೀಯನ ನಂತರ ದಾವೀದನ ವಂಶದಲ್ಲಿ ರಾಜ್ಯಕ್ಕೆ ಬಾಧ್ಯನಾಗಲಿದ್ದವನೆಂದರೆ ಯೇಸು ಮಾತ್ರವೇ. ಯೇಸುವಿನ ಜನನಕ್ಕೆ ಮುಂಚೆಯೇ ದೇವದೂತ ಗಬ್ರಿಯೇಲನು ಮರಿಯಳಿಗೆ ಯೇಸುವಿನ ಕುರಿತು, “ಯೆಹೋವ ದೇವರು ಅವನ ತಂದೆಯಾದ ದಾವೀದನ ಸಿಂಹಾಸನವನ್ನು ಅವನಿಗೆ ಕೊಡುವನು ಮತ್ತು ಅವನು ಯಾಕೋಬನ ಮನೆತನದ ಮೇಲೆ ಸದಾಕಾಲಕ್ಕೂ ರಾಜನಾಗಿ ಆಳುವನು, ಅವನ ರಾಜ್ಯಕ್ಕೆ ಅಂತ್ಯವೇ ಇರದು” ಎಂದು ಹೇಳಿದನು. (ಲೂಕ 1:32, 33) ಯೆಹೂದ ಕುಲದವನಾದ ಯೇಸು ದಾವೀದನ ವಂಶದವನಾಗಿದ್ದನು. ಮಾತ್ರವಲ್ಲ ಯೆಹೋವ ದೇವರು ವಾಗ್ದಾನ ಮಾಡಿದ್ದ ಬಾಧ್ಯಸ್ಥನಾಗಿದ್ದನು. ಹಾಗಾಗಿ ಯೇಸು ಕ್ರಿಸ್ತನೇ ಶಿಲೋವನು.—ಮತ್ತಾ. 1:1-3, 6; ಲೂಕ 3:23, 31-34.
7. ಮೆಸ್ಸೀಯನು ಎಲ್ಲಿ ಹುಟ್ಟಿದನು? ಇದು ಏಕೆ ಮಹತ್ವದ ವಿಷಯವಾಗಿದೆ?
7 ಮೆಸ್ಸೀಯನು ಬೇತ್ಲೆಹೇಮಿನಲ್ಲಿ ಹುಟ್ಟುವನು. “ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಗ್ರಾಮಗಳಲ್ಲಿ ಚಿಕ್ಕದ್ದಾಗಿದ್ದರೂ ಇಸ್ರಾಯೇಲನ್ನು ಆಳತಕ್ಕವನು ನಿನ್ನೊಳಗಿಂದ ನನಗಾಗಿ ಹೊರಡುವನು; ಆತನ ಹೊರಡೋಣದ ಮೂಲವು ಪುರಾತನವೂ ಅನಾದಿಯೂ ಆದದ್ದು” ಎಂದು ಪ್ರವಾದಿ ಮೀಕನು ಬರೆದನು. (ಮೀಕ 5:2) ಅಂದರೆ ಮೆಸ್ಸೀಯನು ಹುಟ್ಟುವುದು ಈ ಮೊದಲು ಎಫ್ರಾತ ಎಂದು ಕರೆಯಲ್ಪಡುತ್ತಿದ್ದ ಯೆಹೂದದ ಒಂದು ಊರಾದ ಬೇತ್ಲೆಹೇಮಿನಲ್ಲಿಯೇ. ಆದರೆ ಯೇಸುವಿನ ತಾಯಿ ಮರಿಯ ತನ್ನ ಗಂಡನಾದ ಯೋಸೇಫನೊಂದಿಗೆ ನಜರೇತ್ ಎಂಬ ಊರಿನಲ್ಲಿ ವಾಸಿಸುತ್ತಿದ್ದಳು. ರೋಮನ್ ಚಕ್ರವರ್ತಿಯು ಜನರು ತಮ್ಮ ತಮ್ಮ ಹುಟ್ಟೂರಿನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಆಜ್ಞೆ ಕೊಟ್ಟದ್ದರಿಂದ ಅವರು ಬೇತ್ಲೆಹೇಮಿಗೆ ತೆರಳಬೇಕಾಯಿತು. ಮತ್ತು ಅಲ್ಲಿಯೇ ಯೇಸು ಕ್ರಿ.ಪೂ. 2ನೇ ಇಸವಿಯಲ್ಲಿ ಜನಿಸಿದನು. (ಮತ್ತಾ. 2:1, 5, 6) ಮೀಕನು ದಾಖಲಿಸಿದ ಪ್ರವಾದನೆ ಚಾಚೂತಪ್ಪದೆ ನೆರವೇರಿತು.
8, 9. ಯೇಸುವಿನ ಜನನ ಹಾಗೂ ಅದರ ನಂತರ ಸಂಭವಿಸಲಿದ್ದ ಸಂಗತಿಗಳ ಕುರಿತು ಏನೆಂದು ಪ್ರವಾದಿಸಲಾಗಿತ್ತು?
8 ಮೆಸ್ಸೀಯನು ಹುಟ್ಟುವುದು ಕನ್ಯೆಯಲ್ಲಿ. (ಯೆಶಾಯ 7:14 ಓದಿ.) ಯೆಶಾಯ 7:14ರಲ್ಲಿನ ಪ್ರವಾದನೆಯು “ಒಬ್ಬ ಕನ್ನಿಕೆಯು” ಗಂಡು ಮಗುವಿಗೆ ಜನ್ಮನೀಡುವಳೆಂದು ತಿಳಿಸುತ್ತದೆ. ಯೆಶಾಯ 7:14ರ ಪ್ರವಾದನೆಯು ಯೇಸುವಿನ ಜನನದ ವಿಷಯದಲ್ಲಿ ನೆರವೇರಿತು ಎಂದು ಮತ್ತಾಯನು ಸುವಾರ್ತಾ ಪುಸ್ತಕದಲ್ಲಿ ಬರೆದನು. ಹಾಗೆ ಬರೆದಾಗ ದೇವರ ಪವಿತ್ರಾತ್ಮದಿಂದ ಪ್ರೇರಿತನಾಗಿ ಮರಿಯಳಿಗೆ “ಕನ್ಯೆ” ಎಂಬ ಪದವನ್ನು ಬಳಸಿದನು. ಮತ್ತಾಯನಲ್ಲದೇ ಲೂಕನು ಕೂಡ ಮರಿಯಳು ಕನ್ಯೆಯಾಗಿದ್ದಳು ಹಾಗೂ ದೇವರ ಪವಿತ್ರಾತ್ಮದಿಂದಾಗಿ ಗರ್ಭಿಣಿಯಾದಳೆಂದು ದೃಢೀಕರಿಸಿದ್ದಾನೆ.—ಮತ್ತಾ. 1:18-25; ಲೂಕ 1:26-35.
9 ಮೆಸ್ಸೀಯನ ಜನನದ ನಂತರ ಪುಟಾಣಿ ಕೂಸುಗಳನ್ನು ಕೊಲ್ಲಲಾಗುವುದು. ಮೆಸ್ಸೀಯನ ಜನನದ ನೂರಾರು ವರ್ಷಗಳ ಮುಂಚೆಯೇ ಇಂಥ ಇನ್ನೊಂದು ಘಟನೆ ನಡೆದಿತ್ತು. ಈಜಿಪ್ಟಿನ ಫರೋಹನು ಎಲ್ಲ ಇಬ್ರಿಯ ಗಂಡುಮಕ್ಕಳನ್ನು ನೈಲ್ ನದಿಯಲ್ಲಿ ಹಾಕಿ ಸಾಯಿಸುವಂತೆ ಅಪ್ಪಣೆ ಕೊಟ್ಟಿದ್ದನು. (ವಿಮೋ. 1:22) ಆದರೆ ಯೆರೆಮೀಯ 31:15, 16ರಲ್ಲಿನ ಪ್ರವಾದನೆ, “ರಾಹೇಲಳು ತನ್ನ ಮಕ್ಕಳಿಗೋಸ್ಕರ” ಅತ್ತಳೆಂದೂ ಅದಕ್ಕೆ ಕಾರಣ ಆಕೆಯ ಮಕ್ಕಳನ್ನು ಶತ್ರುಗಳು ತೆಗೆದುಕೊಂಡು ಹೋದದ್ದೆಂದೂ ತಿಳಿಸುತ್ತದೆ. ಆಕೆಯ ಗೋಳಾಟವು ಯೆರೂಸಲೇಮಿನ ಉತ್ತರಕ್ಕಿರುವ ಬೆನ್ಯಾಮೀನ್ನ ರಾಮದ ವರೆಗೆ ಕೇಳಿಬರುತ್ತದೆ ಎಂದು ಅಲ್ಲಿ ಹೇಳಲಾಗಿದೆ. ಯೆರೆಮೀಯನ ಈ ಮಾತುಗಳು ರಾಜ ಹೆರೋದನು ಬೇತ್ಲೆಹೇಮಿನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಎಲ್ಲ ಗಂಡುಕೂಸುಗಳನ್ನು ಕೊಲ್ಲುವ ಆಜ್ಞೆ ಹೊರಡಿಸಿದಾಗ ನೆರವೇರಿದವು ಎಂದು ಮತ್ತಾಯ ತಿಳಿಸುತ್ತಾನೆ. (ಮತ್ತಾಯ 2:16-18 ಓದಿ.) ಹೆತ್ತ ಕರುಳುಗಳಿಗಾದ ಕಡುಸಂಕಟವನ್ನು ಸ್ವಲ್ಪ ಊಹಿಸಿಕೊಳ್ಳಿ!
10. ಹೋಶೇಯ 11:1 ಯೇಸುವಿನ ವಿಷಯದಲ್ಲಿ ಹೇಗೆ ನೆರವೇರಿತು?
10 ಇಸ್ರಾಯೇಲ್ಯರಂತೆಯೇ ಮೆಸ್ಸೀಯನನ್ನೂ ಈಜಿಪ್ಟಿನಿಂದ ಕರೆಯಲಾಗುವುದು. (ಹೋಶೇ. 11:1) ಹೆರೋದನು ಕೂಸುಗಳನ್ನು ಕೊಲ್ಲುವ ಆ ಮಾರಣಾಂತಿಕ ಆಜ್ಞೆ ಹೊರಡಿಸುವ ಮುಂಚೆಯೇ ಒಬ್ಬ ದೇವದೂತನು ಯೋಸೇಫ, ಮರಿಯ ಮತ್ತು ಯೇಸು ಈಜಿಪ್ಟಿಗೆ ಪಲಾಯನ ಮಾಡುವಂತೆ ಹೇಳಿದನು. ಅವರು ‘ಹೆರೋದನು ತೀರಿಹೋಗುವ ತನಕ ಅಲ್ಲಿಯೇ ಉಳಿದರು; ಹೀಗೆ “ಈಜಿಪ್ಟಿನಿಂದ ನಾನು ನನ್ನ ಮಗನನ್ನು ಕರೆದೆನು” ಎಂದು ಯೆಹೋವನು [ಹೋಶೇಯ ಎಂಬ] ತನ್ನ ಪ್ರವಾದಿಯ ಮೂಲಕ ಹೇಳಿದ ಮಾತು ನೆರವೇರುವಂತಾಯಿತು.’ (ಮತ್ತಾ. 2:13-15) ತನ್ನ ಜನನ ಹಾಗೂ ಬಾಲ್ಯಜೀವನದ ಕುರಿತಾದ ಈ ಎಲ್ಲ ಪ್ರವಾದನೆಗಳು ಚಾಚೂತಪ್ಪದೆ ನೆರವೇರುವಂತೆ ಯೇಸು ಸಂಘಟಿಸಿರಲು ಸಾಧ್ಯವೇ ಇಲ್ಲ ಅಲ್ಲವೆ?
ಮೆಸ್ಸೀಯನು ಕಾರ್ಯೋನ್ಮುಖನಾಗುತ್ತಾನೆ!
11. ಯೆಹೋವನ ಅಭಿಷಿಕ್ತನ ಮುಂದೆ ಮಾರ್ಗವನ್ನು ಸಿದ್ಧಪಡಿಸಲಾದದ್ದು ಯಾವ ರೀತಿಯಲ್ಲಿ?
11 ದೇವರ ಅಭಿಷಿಕ್ತನ ಮುಂದೆ ಮಾರ್ಗವನ್ನು ಸಿದ್ಧಪಡಿಸಲಾಗುವುದು. ಈ ಕೆಲಸವನ್ನು ‘ಪ್ರವಾದಿಯಾದ ಎಲೀಯನು’ ಮಾಡುವನೆಂದೂ ಅವನು ಮೆಸ್ಸೀಯನ ಬರೋಣಕ್ಕಾಗಿ ಜನರ ಮನಸ್ಸನ್ನು ಸಿದ್ಧಪಡಿಸುವನೆಂದೂ ಮಲಾಕಿಯನು ಪ್ರವಾದಿಸಿದ್ದನು. (ಮಲಾಕಿಯ 4:5, 6 ಓದಿ.) ಈ ‘ಎಲೀಯನು’ ಸ್ನಾನಿಕನಾದ ಯೋಹಾನನೇ ಎಂದು ಯೇಸು ಹೇಳಿದನು. (ಮತ್ತಾ. 11:12-14) ಯೋಹಾನನ ಶುಶ್ರೂಷೆಯು ಯೆಶಾಯನು ನುಡಿದ ಪ್ರವಾದನೆಯನ್ನು ನೆರವೇರಿಸಿತು ಎಂದು ಮಾರ್ಕನು ಸೂಚಿಸಿದನು. (ಯೆಶಾ. 40:3; ಮಾರ್ಕ 1:1-4) ಆದರೆ ಯೋಹಾನನು ಎಲೀಯನಂತೆ ಕೆಲಸಮಾಡುತ್ತಾ ತನ್ನ ಮುಂದೂತನಾಗಿರುವಂತೆ ಯೇಸುವೇನು ವಿನಂತಿಸಿರಲಿಲ್ಲ. ಬದಲಿಗೆ ಈ “ಎಲೀಯನ” ಕಾರ್ಯಗಳು ದೇವರ ಚಿತ್ತಾನುಸಾರ ನಡೆದದ್ದಾಗಿದ್ದವು ಹಾಗೂ ಮೆಸ್ಸೀಯನನ್ನು ಗುರುತಿಸಲು ಸಹಾಯಕವಾಗಿದ್ದವು.
12. ದೇವರು ನೀಡಿದ ಯಾವ ನೇಮಕ ಮೆಸ್ಸೀಯನನ್ನು ಗುರುತಿಸಲು ಸಹಾಯಮಾಡುತ್ತದೆ?
12 ದೇವರು ಮೆಸ್ಸೀಯನಿಗೆ ವಿಶೇಷ ನೇಮಕ ಕೊಡುವನು. ಯೇಸು ತಾನು ಬೆಳೆದ ಊರಾದ ನಜರೇತಿನ ಸಭಾಮಂದಿರಕ್ಕೆ ಹೋಗಿ ಯೆಶಾಯನ ಸುರುಳಿಗಳನ್ನು ತೆಗೆದುಕೊಂಡು ಹೀಗೆ ಓದಿದನು: “ಯೆಹೋವನ ಆತ್ಮವು ನನ್ನ ಮೇಲೆ ಇದೆ. ಆತನು ನನ್ನನ್ನು ಬಡವರಿಗೆ ಸುವಾರ್ತೆಯನ್ನು ಪ್ರಕಟಿಸುವುದಕ್ಕಾಗಿ ಅಭಿಷೇಕಿಸಿದನು; ಬಂದಿಗಳಿಗೆ ಬಿಡುಗಡೆಯನ್ನು ಸಾರುವುದಕ್ಕೂ ಕುರುಡರಿಗೆ ದೃಷ್ಟಿಯನ್ನು ಕೊಡುವುದಕ್ಕೂ ಜಜ್ಜಲ್ಪಟ್ಟವರನ್ನು ಬಿಡುಗಡೆಮಾಡಿ ಕಳುಹಿಸುವುದಕ್ಕೂ ಯೆಹೋವನ ಸ್ವೀಕೃತ ವರ್ಷವನ್ನು ಸಾರುವುದಕ್ಕೂ ನನ್ನನ್ನು ಕಳುಹಿಸಿದ್ದಾನೆ.” ಓದಿದ ನಂತರ ಯೇಸು ಆ ಪ್ರವಾದನೆ ತನ್ನ ಕುರಿತಾಗಿಯೇ ಎಂದು ಹೇಳಿದನು. ಹೌದು, ಅವನು ನಿಜವಾದ ಮೆಸ್ಸೀಯನಾಗಿದ್ದನು. ಆದಕಾರಣ ಕೊನೆಯಲ್ಲಿ ಅವನು “ಈಗಷ್ಟೇ ನೀವು ಕೇಳಿಸಿಕೊಂಡ ಈ ಶಾಸ್ತ್ರವಚನವು ಇಂದು ನೆರವೇರಿತು” ಎಂದು ಸ್ಪಷ್ಟಪಡಿಸಿದನು.—ಲೂಕ 4:16-21.
13. ಯೇಸು ಗಲಿಲಾಯದಲ್ಲಿ ಸೇವೆ ಮಾಡುವ ಕುರಿತು ಪ್ರವಾದನೆ ಏನು ತಿಳಿಸಿತ್ತು?
13 ಮೆಸ್ಸೀಯನು ಗಲಿಲಾಯದಲ್ಲಿ ಸೇವೆ ಮಾಡುವ ಕುರಿತು ಮುಂತಿಳಿಸಲಾಗಿತ್ತು. “ಜೆಬುಲೋನ್ ಮತ್ತು ನಫ್ತಾಲಿ ಸೀಮೆಗಳ” ಹಾಗೂ “ಗಲಿಲಾಯ” ಸೀಮೆಯ ಕುರಿತು ಯೆಶಾಯನು “ಕತ್ತಲಲ್ಲಿ ಸಂಚರಿಸಿದ ಜನರಿಗೆ ದೊಡ್ಡ ಬೆಳಕು ಕಾಣಿಸಿತು; ಕಾರ್ಗತ್ತಲಾದ ದೇಶದಲ್ಲಿದ್ದವರಿಗೆ ಪ್ರಕಾಶವು ಹೊಳೆಯಿತು” ಎಂದು ಪ್ರವಾದಿಸಿದನು. (ಯೆಶಾ. 9:1, 2) ಯೇಸು ಗಲಿಲಾಯ ಪ್ರಾಂತದ ಕಪೆರ್ನೌಮ್ನಲ್ಲಿ ತನ್ನ ಶುಶ್ರೂಷೆಯನ್ನು ಆರಂಭಿಸಿದನು. ಅಲ್ಲಿ ವಾಸವಾಗಿದ್ದ ಜೆಬುಲೂನ್ ಹಾಗೂ ನಫ್ತಾಲಿ ಕುಲದ ಅನೇಕ ಜನರಿಗೆ ಸತ್ಯವನ್ನು ಬೋಧಿಸಿದನು. ಹೀಗೆ ಅವರಿಗೆ ಆಧ್ಯಾತ್ಮಿಕ ಬೆಳಕು ಪ್ರಕಾಶಿಸಿತು. (ಮತ್ತಾ. 4:12-16) ಯೇಸು ತನ್ನ ಪ್ರಸಿದ್ಧ ಪರ್ವತ ಪ್ರಸಂಗ ಕೊಟ್ಟದ್ದು, ಅಪೊಸ್ತಲರನ್ನು ಆರಿಸಿದ್ದು, ಪ್ರಥಮ ಅದ್ಭುತ ಮಾಡಿದ್ದು ಹಾಗೂ ಪುನರುತ್ಥಾನದ ನಂತರ 500 ಮಂದಿಗೆ ಕಾಣಿಸಿಕೊಂಡದ್ದು ಗಲಿಲಾಯದಲ್ಲೇ. (ಮತ್ತಾ. 5:1–7:27; 28:16-20; ಮಾರ್ಕ 3:13, 14; ಯೋಹಾ. 2:8-11; 1 ಕೊರಿಂ. 15:6) ಹೀಗೆ ಯೇಸು ‘ಜೆಬುಲೋನ್ ಮತ್ತು ನಫ್ತಾಲಿ ಸೀಮೆಗಳಲ್ಲಿ’ ಸಾರಿದಾಗ ಯೆಶಾಯನ ಪ್ರವಾದನೆ ನೆರವೇರಿತು. ಅವನು ಇಸ್ರಾಯೇಲಿನ ಬೇರೆ ಸ್ಥಳಗಳಲ್ಲೂ ದೇವರ ರಾಜ್ಯದ ಸಂದೇಶವನ್ನು ಸಾರಿದನು.
ಮೆಸ್ಸೀಯನ ಇತರ ಕಾರ್ಯಚಟುವಟಿಕೆಗಳ ಕುರಿತ ಪ್ರವಾದನೆಗಳು
14. ಕೀರ್ತನೆ 78:2 ಯೇಸುವಿನಲ್ಲಿ ಹೇಗೆ ನೆರವೇರಿತು?
14 ಮೆಸ್ಸೀಯನು ಸಾಮ್ಯ ಹಾಗೂ ದೃಷ್ಟಾಂತ ಉಪಯೋಗಿಸಿ ಮಾತಾಡುವನು. ಕೀರ್ತನೆಗಾರ ಆಸಾಫನು, “ನಾನು ಬಾಯ್ದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು” ಎಂದು ಹಾಡಿದನು. (ಕೀರ್ತ. 78:2) ಈ ಕೀರ್ತನೆ ಯೇಸುವಿನ ಕುರಿತಾದ ಪ್ರವಾದನೆ ಎಂದು ಹೇಗೆ ಗೊತ್ತು? ಮತ್ತಾಯ ತಿಳಿಸುತ್ತಾನೆ. ಯೇಸು ಕ್ರಿಸ್ತನು ದೇವರ ರಾಜ್ಯವನ್ನು ಸಾಸಿವೆ ಕಾಳಿಗೆ ಹಾಗೂ ಹುಳಿಹಿಟ್ಟಿಗೆ ಹೋಲಿಸಿ ಮಾತಾಡಿದ್ದನ್ನು ಉಲ್ಲೇಖಿಸಿದ ನಂತರ ಮತ್ತಾಯ ಹೀಗೆ ಹೇಳಿದನು: “ದೃಷ್ಟಾಂತವನ್ನು ಉಪಯೋಗಿಸದೆ [ಯೇಸುವೆಂದೂ] ಅವರೊಂದಿಗೆ ಮಾತಾಡುತ್ತಿರಲಿಲ್ಲ. ಹೀಗೆ ಪ್ರವಾದಿಯ ಮೂಲಕ ತಿಳಿಸಲ್ಪಟ್ಟ ಮಾತು ನೆರವೇರುವಂತಾಯಿತು. ಅದೇನೆಂದರೆ, ‘ನಾನು ದೃಷ್ಟಾಂತಗಳ ಮೂಲಕ ಮಾತಾಡುವೆನು; ಲೋಕಾದಿಯಿಂದ ಮರೆಯಾಗಿಡಲ್ಪಟ್ಟಿರುವ ವಿಷಯಗಳನ್ನು ಪ್ರಕಟಪಡಿಸುವೆನು.’” (ಮತ್ತಾ. 13:31-35) ಹೌದು, ಸಾಮ್ಯಗಳು ಅಥವಾ ದೃಷ್ಟಾಂತಗಳು ಯೇಸುವಿನ ಬೋಧನೆಯನ್ನು ಪರಿಣಾಮಕಾರಿಯಾಗಿ ಮಾಡಿದವು.
15. ಯೆಶಾಯ 53:4 ಹೇಗೆ ನೆರವೇರಿತೆಂದು ವಿವರಿಸಿ.
15 ಮೆಸ್ಸೀಯನು ನಮ್ಮ ರೋಗಗಳನ್ನು ಹೊತ್ತುಕೊಂಡನು. ಅವನು “ನಮ್ಮ ಸಂಕಷ್ಟಗಳನ್ನು ಅನುಭವಿಸಿದನು; ಅವನು ಹೊತ್ತ ಹೊರೆಯು ನಮ್ಮ ಸಂಕಟವೇ” ಎಂದು ಯೆಶಾಯ ಪ್ರವಾದಿಸಿದನು. (ಯೆಶಾ. 53:4) ಯೇಸು ಪೇತ್ರನ ಅತ್ತೆಯನ್ನು ಗುಣಪಡಿಸಿದ ನಂತರ ಇತರ ಅನೇಕರನ್ನು ಗುಣಪಡಿಸಿದನು. ಆ ಘಟನೆಯನ್ನು ಉಲ್ಲೇಖಿಸುತ್ತಾ ಮತ್ತಾಯನು ಹೀಗೆ ಬರೆದನು: “ಪ್ರವಾದಿಯಾದ ಯೆಶಾಯನ ಮೂಲಕ ತಿಳಿಸಲ್ಪಟ್ಟ ಮಾತು ನೆರವೇರುವಂತಾಯಿತು. ಅದೇನೆಂದರೆ, ‘ಅವನು ನಮ್ಮ ಕಾಯಿಲೆಗಳನ್ನು ತಾನೇ ತೆಗೆದುಕೊಂಡು ನಮ್ಮ ರೋಗಗಳನ್ನು ಹೊತ್ತುಕೊಂಡನು.’” (ಮತ್ತಾ. 8:14-17) ಯೇಸು ಈ ಸಂದರ್ಭವಲ್ಲದೆ ಇತರ ಅನೇಕ ಸಂದರ್ಭಗಳಲ್ಲಿ ಕೂಡ ಜನರ ಕಾಯಿಲೆಗಳನ್ನು ಗುಣಪಡಿಸಿದನು.
16. ಯೆಶಾಯ 53:1 ಯೇಸುವಿನಲ್ಲಿ ಹೇಗೆ ನೆರವೇರಿತೆಂದು ಅಪೊಸ್ತಲ ಯೋಹಾನನು ಹೇಳಿದ್ದಾನೆ?
16 ಮೆಸ್ಸೀಯನು ಅನೇಕ ಒಳ್ಳೇ ಕಾರ್ಯಗಳನ್ನು ಮಾಡಿದರೂ ಹೆಚ್ಚಿನ ಜನರು ಅವನಲ್ಲಿ ನಂಬಿಕೆಯಿಡುವುದಿಲ್ಲ. (ಯೆಶಾಯ 53:1 ಓದಿ.) ಯೆಶಾಯನ ಈ ಪ್ರವಾದನೆ ಹೇಗೆ ನೆರವೇರಿತೆಂದು ಯೋಹಾನನು ಹೇಳಿದ್ದಾನೆ. “[ಯೇಸು] ಅವರ ಮುಂದೆ ಅಷ್ಟೊಂದು ಸೂಚಕಕಾರ್ಯಗಳನ್ನು ಮಾಡಿದ್ದರೂ ಅವರು ಅವನಲ್ಲಿ ನಂಬಿಕೆ ಇಡುತ್ತಿರಲಿಲ್ಲ; ಹೀಗೆ ‘ಯೆಹೋವನೇ, ನಮ್ಮಿಂದ ಕೇಳಿಸಿಕೊಂಡ ವಿಷಯದಲ್ಲಿ ಯಾರು ನಂಬಿಕೆಯಿಟ್ಟಿದ್ದಾರೆ? ಯೆಹೋವನ ಬಾಹು ಯಾರಿಗೆ ತೋರಿಸಲ್ಪಟ್ಟಿತು?’ ಎಂದು ಪ್ರವಾದಿಯಾದ ಯೆಶಾಯನ ಮೂಲಕ ತಿಳಿಸಲ್ಪಟ್ಟ ಮಾತು ನೆರವೇರಿತು.” (ಯೋಹಾ. 12:37, 38) ಅಷ್ಟೇ ಅಲ್ಲ, ಅಪೊಸ್ತಲ ಪೌಲನು ಯೇಸುವಿನ ಕುರಿತು ಸುವಾರ್ತೆ ಸಾರಿದಾಗಲೂ ಹೆಚ್ಚಿನ ಮಂದಿ ಯೇಸುವನ್ನು ಮೆಸ್ಸೀಯನೆಂದು ನಂಬಲಿಲ್ಲ.—ರೋಮ. 10:16, 17.
17. ಯೋಹಾನನು ಕೀರ್ತನೆ 69:4ನ್ನು ಹೇಗೆ ಯೇಸುವಿಗೆ ಅನ್ವಯಿಸಿದನು?
17 ಮೆಸ್ಸೀಯನನ್ನು ವಿನಾಕಾರಣ ದ್ವೇಷಿಸುವರು. (ಕೀರ್ತ. 69:4) ಅಪೊಸ್ತಲ ಯೋಹಾನನು ದಾಖಲಿಸಿದ ಯೇಸುವಿನ ಮಾತುಗಳನ್ನು ಗಮನಿಸಿ: “ಬೇರೆ ಯಾರೂ ಮಾಡದ ಕಾರ್ಯಗಳನ್ನು ನಾನು [ಜನರ] ಮಧ್ಯೆ ನಡಿಸದಿರುತ್ತಿದ್ದರೆ ಅವರಲ್ಲಿ ಯಾವುದೇ ಪಾಪವಿರುತ್ತಿರಲಿಲ್ಲ; ಈಗ ಅವರು ನನ್ನ ಕಾರ್ಯಗಳನ್ನು ನೋಡಿದ್ದಾರೆ, ಆದರೂ ನನ್ನನ್ನೂ ನನ್ನ ತಂದೆಯನ್ನೂ ದ್ವೇಷಿಸಿದ್ದಾರೆ. ಹೀಗೆ ‘ಯಾವುದೇ ಕಾರಣವಿಲ್ಲದೆ ಅವರು ನನ್ನನ್ನು ದ್ವೇಷಿಸಿದರು’ ಎಂದು ಅವರ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ನೆರವೇರುವಂತೆ ಇದೆಲ್ಲವೂ ಆಯಿತು.” (ಯೋಹಾ. 15:24, 25) ಯೇಸುವನ್ನು ಜನರು ದ್ವೇಷಿಸಿದರೆಂದೂ ಅದರಲ್ಲೂ ಯೆಹೂದಿ ಧಾರ್ಮಿಕ ಮುಖಂಡರು ದ್ವೇಷದ ವಿಷ ಕಾರಿದರೆಂದೂ ಸುವಾರ್ತಾ ವೃತ್ತಾಂತಗಳು ಸಾಕ್ಷ್ಯ ಒದಗಿಸುತ್ತವೆ. ಮಾತ್ರವಲ್ಲ, “ನಿಮ್ಮನ್ನು ದ್ವೇಷಿಸಲು ಲೋಕಕ್ಕೆ ಯಾವುದೇ ಕಾರಣವಿಲ್ಲ, ಆದರೆ ಅದರ ಕೃತ್ಯಗಳು ಕೆಟ್ಟವುಗಳೆಂದು ನಾನು ಸಾಕ್ಷಿಕೊಡುವುದರಿಂದ ಅದು ನನ್ನನ್ನು ದ್ವೇಷಿಸುತ್ತದೆ” ಎಂದು ಕ್ರಿಸ್ತನು ಹೇಳಿದನು.—ಯೋಹಾ. 7:7.
18. ಯೇಸುವೇ ಮೆಸ್ಸೀಯನು ಎಂಬ ದೃಢಭರವಸೆ ಹೆಚ್ಚಿಸಲು ನಾವೇನನ್ನು ಪರಿಗಣಿಸಬೇಕು?
18 ಯೇಸುವೇ ಮೆಸ್ಸೀಯನು ಎಂಬ ವಿಷಯದಲ್ಲಿ ಒಂದನೇ ಶತಮಾನದ ಶಿಷ್ಯರಿಗೆ ಎಳ್ಳಷ್ಟೂ ಸಂಶಯವಿರಲಿಲ್ಲ. ಏಕೆಂದರೆ ಹೀಬ್ರು ಶಾಸ್ತ್ರಗ್ರಂಥದಲ್ಲಿದ್ದ ಮೆಸ್ಸೀಯನ ಕುರಿತ ಎಲ್ಲ ಪ್ರವಾದನೆಗಳು ಯೇಸುವಿನಲ್ಲಿ ನೆರವೇರಿದವೆಂದು ಅವರಿಗೆ ಚೆನ್ನಾಗಿ ಗೊತ್ತಿತ್ತು. (ಮತ್ತಾ. 16:16) ಕೆಲವು ಪ್ರವಾದನೆಗಳು ಯೇಸುವಿನ ಜನನ, ಬಾಲ್ಯಜೀವನ ಹಾಗೂ ಶುಶ್ರೂಷೆಯಲ್ಲಿ ನೆರವೇರಿದವು ಎಂದು ನಾವು ಈ ಲೇಖನದಲ್ಲಿ ಕಲಿತೆವು. ಮೆಸ್ಸೀಯನ ಕುರಿತ ಬೇರೆ ಕೆಲವು ಪ್ರವಾದನೆಗಳನ್ನು ಮುಂದಿನ ಲೇಖನದಲ್ಲಿ ಪರಿಗಣಿಸೋಣ. ಅವುಗಳನ್ನು ಆಳವಾಗಿ ಅಧ್ಯಯನ ಮಾಡುವಲ್ಲಿ, ಯೆಹೋವ ದೇವರು ನೇಮಿಸಿದ ಮೆಸ್ಸೀಯನು ಯೇಸು ಕ್ರಿಸ್ತನೇ ಎಂದು ನಾವು ಸಹ ದೃಢಭರವಸೆಯಿಂದ ಹೇಳಬಲ್ಲೆವು.
[ಪಾದಟಿಪ್ಪಣಿ]
a ‘ಎಪ್ಪತ್ತು ವಾರಗಳ’ ಕುರಿತ ಸವಿವರ ಮಾಹಿತಿಗಾಗಿ ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಪುಸ್ತಕದ ಅಧ್ಯಾಯ 11 ನೋಡಿ.
ನಿಮ್ಮ ಉತ್ತರವೇನು?
• ಯೇಸುವಿನ ಜನನಕ್ಕೆ ಸಂಬಂಧಿಸಿದಂತೆ ಯಾವ ಪ್ರವಾದನೆಗಳು ನೆರವೇರಿದವು?
• ಮೆಸ್ಸೀಯನ ಮುಂದೆ ಮಾರ್ಗವನ್ನು ಸಿದ್ಧಪಡಿಸಿದ್ದು ಯಾವ ರೀತಿಯಲ್ಲಿ?
• ಯೆಶಾಯ 53ನೇ ಅಧ್ಯಾಯದಲ್ಲಿರುವ ಯಾವ ಪ್ರವಾದನಾ ವಾಕ್ಯಗಳು ಯೇಸುವಿನಲ್ಲಿ ನೆರವೇರಿದವು?