ಕರ್ತನ ಪ್ರಾರ್ಥನೆ ನಿಮಗೆ ಯಾವ ಅರ್ಥದಲ್ಲಿದೆ?
ಪರ್ವತಪ್ರಸಂಗದಲ್ಲಿ ಯೇಸು ಕ್ರಿಸ್ತನಿಂದ ಕೊಡಲ್ಪಟ್ಟ ಕರ್ತನ ಪ್ರಾರ್ಥನೆಯು, ಬೈಬಲಿನ ಮತ್ತಾಯ 6ನೆಯ ಅಧ್ಯಾಯದ 9ರಿಂದ 13ನೆಯ ವಚನಗಳಲ್ಲಿ ಕಂಡುಬರುತ್ತದೆ. ಈ ಪ್ರಾರ್ಥನೆಯ ಕುರಿತು ತಿಳಿಸುವ ತುಸು ಮುಂಚೆ ಯೇಸು ಹೇಳಿದ್ದು: “ಪ್ರಾರ್ಥನೆಮಾಡುವಾಗ ಅಜ್ಞಾನಿಗಳ ಹಾಗೆ ಹೇಳಿದ್ದನ್ನೇ ಸುಮ್ಮಸುಮ್ಮನೆ ಹೇಳಬೇಡ; ಅವರು ಬಹಳ ಮಾತುಗಳನ್ನಾಡಿದರೆ ತಮ್ಮ ಪ್ರಾರ್ಥನೆಯನ್ನು ದೇವರು ಕೇಳುತ್ತಾನೆಂದು ನೆನಸುತ್ತಾರೆ.”—ಮತ್ತಾಯ 6:7.
ಆದುದರಿಂದ, ಕರ್ತನ ಪ್ರಾರ್ಥನೆಯಲ್ಲಿರುವ ಪದಗಳನ್ನೇ ಪುನಃ ಪುನಃ ಪಠಿಸಬೇಕೆಂಬುದು ಯೇಸುವಿನ ಉದ್ದೇಶವಾಗಿರಲಿಲ್ಲ ಎಂಬುದು ಸುಸ್ಪಷ್ಟ. ಬೇರೆ ಸಭಿಕರ ಪ್ರಯೋಜನಕ್ಕಾಗಿ ಅವನು ಸಮಯಾನಂತರ ಈ ಪ್ರಾರ್ಥನೆಯನ್ನು ಪುನರಾವರ್ತಿಸಿದನು ಎಂಬುದು ನಿಜ. (ಲೂಕ 11:2-4) ಆದರೆ, ಮತ್ತಾಯ ಹಾಗೂ ಲೂಕನ ಸುವಾರ್ತಾ ವೃತ್ತಾಂತಗಳಲ್ಲಿರುವ ಪ್ರಾರ್ಥನೆಯ ಪದರಚನೆಯಲ್ಲಿ ಸ್ವಲ್ಪ ಮಟ್ಟಿಗಿನ ವ್ಯತ್ಯಾಸವಿದೆ. ಅಷ್ಟುಮಾತ್ರವಲ್ಲ, ತದನಂತರ ಯೇಸುವಿನಿಂದ ಹಾಗೂ ಅವನ ಶಿಷ್ಯರಿಂದ ಮಾಡಲ್ಪಟ್ಟ ಪ್ರಾರ್ಥನೆಗಳು, ಅವನ ಮಾದರಿ ಪ್ರಾರ್ಥನೆಯ ನಿರ್ದಿಷ್ಟ ಪದಗಳ ಉಪಯೋಗಕ್ಕೇ ಕಟ್ಟುನಿಟ್ಟಾಗಿ ಅಂಟಿಕೊಂಡಿರಲಿಲ್ಲ.
ಹಾಗಾದರೆ, ಕರ್ತನ ಪ್ರಾರ್ಥನೆಯು ಬೈಬಲಿನಲ್ಲಿ ಏಕೆ ದಾಖಲಿಸಲ್ಪಟ್ಟಿದೆ? ಈ ಮಾದರಿ ಪ್ರಾರ್ಥನೆಯ ಮೂಲಕ, ನಮ್ಮ ಪ್ರಾರ್ಥನೆಗಳು ಹೇಗೆ ದೇವರಿಗೆ ಸ್ವೀಕಾರಾರ್ಹವಾಗಿರಸಾಧ್ಯವಿದೆ ಎಂಬುದನ್ನು ಯೇಸು ನಮಗೆ ಕಲಿಸುತ್ತಾನೆ. ಈ ಪ್ರಾರ್ಥನೆಯಲ್ಲಿ, ಜೀವನದ ಕುರಿತಾದ ಕೆಲವು ಮೂಲಭೂತ ಪ್ರಶ್ನೆಗಳಿಗೂ ನಾವು ಉತ್ತರಗಳನ್ನು ಕಂಡುಕೊಳ್ಳುತ್ತೇವೆ. ಆದುದರಿಂದಲೇ ಕರ್ತನ ಪ್ರಾರ್ಥನೆಯ ಒಂದೊಂದು ಭಾಗವನ್ನೂ ನಾವೀಗ ಪರಿಗಣಿಸೋಣ.
ದೇವರ ನಾಮವೇನು?
“ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.” (ಮತ್ತಾಯ 6:10ಎ) ಮಾದರಿ ಪ್ರಾರ್ಥನೆಯ ಈ ಆರಂಭದ ನುಡಿಗಳು, ದೇವರನ್ನು “ನಮ್ಮ ತಂದೆಯೇ” ಎಂದು ಸಂಬೋಧಿಸುವ ಮೂಲಕ ಆತನ ಸಮೀಪಕ್ಕೆ ಹೋಗುವಂತೆ ನಮಗೆ ಸಹಾಯಮಾಡುತ್ತವೆ. ವಾತ್ಸಲ್ಯಭರಿತರೂ ಅರ್ಥಮಾಡಿಕೊಳ್ಳುವವರೂ ಆಗಿರುವ ಒಬ್ಬ ಹೆತ್ತವರ ಕಡೆಗೆ ಸಹಜವಾಗಿಯೇ ಸೆಳೆಯಲ್ಪಡುವ ಒಂದು ಮಗುವಿನಂತೆ, ನಮ್ಮ ಸ್ವರ್ಗೀಯ ತಂದೆಯು ನಮಗೆ ಕಿವಿಗೊಡಲು ಬಯಸುತ್ತಾನೆಂಬ ದೃಢವಿಶ್ವಾಸದಿಂದ ನಾವು ಆತನನ್ನು ಸಮೀಪಿಸಸಾಧ್ಯವಿದೆ. “ಪ್ರಾರ್ಥನೆಯನ್ನು ಕೇಳುವವನೇ, ನರರೆಲ್ಲರು ನಿನ್ನ ಬಳಿಗೆ ಬರುವರು” ಎಂದು ಅರಸನಾದ ದಾವೀದನು ಹಾಡಿದನು.—ಕೀರ್ತನೆ 65:2.
ದೇವರ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿಕ್ಕಾಗಿ, ಅಥವಾ ಪವಿತ್ರೀಕರಿಸಲ್ಪಡಲಿಕ್ಕಾಗಿ ಪ್ರಾರ್ಥಿಸುವಂತೆ ಯೇಸು ನಮಗೆ ಉಪದೇಶಿಸುತ್ತಾನೆ. ಆದರೆ ದೇವರ ನಾಮವೇನು? ಬೈಬಲ್ ಈ ಮಾತುಗಳಲ್ಲಿ ಉತ್ತರಿಸುತ್ತದೆ: “ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತ.” (ಕೀರ್ತನೆ 83:18) ನೀವೆಂದಾದರೂ ಯೆಹೋವ ಎಂಬ ನಾಮವನ್ನು ಬೈಬಲಿನಲ್ಲಿ ನೋಡಿದ್ದೀರೋ?
ವಾಸ್ತವದಲ್ಲಿ, ಪುರಾತನ ಬೈಬಲ್ ಹಸ್ತಪ್ರತಿಗಳಲ್ಲಿ ದೇವರ ಯೆಹೋವ ಎಂಬ ನಾಮವು ಸುಮಾರು 7,000 ಬಾರಿ ಕಂಡುಬರುತ್ತದೆ. ಆದರೂ, ಕೆಲವು ಭಾಷಾಂತರಕಾರರು ಈ ನಾಮವನ್ನು ತಮ್ಮ ಬೈಬಲ್ ಭಾಷಾಂತರಗಳಿಂದ ಸಂಪೂರ್ಣವಾಗಿ ತೆಗೆದುಹಾಕುವ ಸಾಹಸಕ್ಕೇ ಕೈಹಾಕಿದ್ದಾರೆ. ಆದುದರಿಂದ, ನಮ್ಮ ಸೃಷ್ಟಿಕರ್ತನು ತನ್ನ ನಾಮವನ್ನು ಪರಿಶುದ್ಧಗೊಳಿಸುವಂತೆ ಅಥವಾ ಪವಿತ್ರೀಕರಿಸುವಂತೆ ನಾವು ಆತನಿಗೆ ಪ್ರಾರ್ಥಿಸುವುದು ಸೂಕ್ತವಾದದ್ದಾಗಿದೆ. (ಯೆಹೆಜ್ಕೇಲ 36:23) ಇಂಥ ಪ್ರಾರ್ಥನೆಗೆ ಹೊಂದಿಕೆಯಲ್ಲಿ ಕ್ರಿಯೆಗೈಯುವ ಒಂದು ವಿಧವು, ನಾವು ದೇವರಿಗೆ ಪ್ರಾರ್ಥಿಸುವಾಗ ಯೆಹೋವ ಎಂಬ ನಾಮವನ್ನು ಉಪಯೋಗಿಸುವುದೇ ಆಗಿದೆ.
ಪಟ್ರಿಷ ಎಂಬ ಹೆಸರಿನ ಒಬ್ಬ ಸ್ತ್ರೀಯು ಕ್ಯಾಥೊಲಿಕ್ ಧರ್ಮದಲ್ಲಿ ಬೆಳೆಸಲ್ಪಟ್ಟಿದ್ದಳು ಮತ್ತು ಕರ್ತನ ಪ್ರಾರ್ಥನೆಯೊಂದಿಗೆ ಚಿರಪರಿಚಿತಳಾಗಿದ್ದಳು. ಯೆಹೋವನ ಸಾಕ್ಷಿಗಳಲ್ಲೊಬ್ಬರು ಅವಳಿಗೆ ಬೈಬಲಿನಲ್ಲಿ ದೇವರ ನಾಮವನ್ನು ತೋರಿಸಿದಾಗ ಅವಳು ಹೇಗೆ ಪ್ರತಿಕ್ರಿಯಿಸಿದಳು? “ನನಗದನ್ನು ನಂಬಲಾಗಲಿಲ್ಲ!” ಎಂದು ಅವಳು ಉದ್ಗರಿಸಿದಳು. “ಆದುದರಿಂದ ನನ್ನ ಸ್ವಂತ ಬೈಬಲಿನಲ್ಲಿ ಅದನ್ನು ತೆರೆದು ನೋಡಿದೆ, ಮತ್ತು ಅದರಲ್ಲೂ ಆ ನಾಮವಿತ್ತು. ತದನಂತರ ಆ ಸಾಕ್ಷಿಯು ನನಗೆ ಮತ್ತಾಯ 6:9, 10ನ್ನು ತೋರಿಸಿ, ಕರ್ತನ ಪ್ರಾರ್ಥನೆಯಲ್ಲೂ ದೇವರ ಹೆಸರಿನ ಬಗ್ಗೆ ಸೂಚಿಸಲಾಗಿದೆ ಎಂಬುದನ್ನು ವಿವರಿಸಿದರು. ಇದರಿಂದಾಗಿ ನಾನು ನಿಜವಾಗಿಯೂ ತುಂಬ ಪುಳಕಿತಳಾದೆ ಮತ್ತು ನನ್ನೊಂದಿಗೆ ಬೈಬಲ್ ಅಧ್ಯಯನ ನಡೆಸಿ ಎಂದು ಅವರನ್ನು ಕೇಳಿಕೊಂಡೆ.”
ಭೂಮಿಯ ಮೇಲೆ ದೇವರ ಚಿತ್ತ ನೆರವೇರಲಿದೆ
“ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾಯ 6:10ಬಿ) ಯೇಸುವಿನ ಮಾದರಿ ಪ್ರಾರ್ಥನೆಯ ಈ ಭಾಗವು ಹೇಗೆ ನೆರವೇರುವುದು? ಪರಲೋಕವು ಶಾಂತಿ ಮತ್ತು ನೆಮ್ಮದಿಯ ತಾಣವಾಗಿದೆ ಎಂಬುದು ಅಧಿಕಾಂಶ ಜನರ ಕಲ್ಪನೆ. ಶಾಸ್ತ್ರವಚನಗಳು ಪರಲೋಕವನ್ನು, ಯೆಹೋವನ “ಪವಿತ್ರವೂ ಸುಂದರವೂ ಆದ ಉನ್ನತ ಸ್ಥಾನ” ಎಂದು ಸೂಚಿಸಿ ಮಾತಾಡುತ್ತದೆ. (ಯೆಶಾಯ 63:15, NW) ಆದುದರಿಂದಲೇ, ದೇವರ ಚಿತ್ತವು “ಪರಲೋಕದಲ್ಲಿ ನೆರವೇರುವ ಪ್ರಕಾರ” ಭೂಲೋಕದಲ್ಲಿಯೂ ನೆರವೇರುವಂತೆ ನಾವು ಪ್ರಾರ್ಥಿಸುವುದರಲ್ಲಿ ಆಶ್ಚರ್ಯವೇನಿಲ್ಲ! ಆದರೆ ಇದು ಎಂದಾದರೂ ಸಂಭವಿಸುವುದೊ?
ಯೆಹೋವನ ಪ್ರವಾದಿಯಾಗಿದ್ದ ದಾನಿಯೇಲನು ಮುಂತಿಳಿಸಿದ್ದು: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ [ಭೂ]ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” (ದಾನಿಯೇಲ 2:44) ಈ ಸ್ವರ್ಗೀಯ ರಾಜ್ಯ ಅಥವಾ ಸರಕಾರವು, ಒಂದು ನೀತಿಯ ಆಳ್ವಿಕೆಯ ಮೂಲಕ ಇಡೀ ಭೂಮಿಯಾದ್ಯಂತ ಶಾಂತಿಯನ್ನು ತರಲು ಕ್ರಿಯೆ ಕೈಗೊಳ್ಳಲಿರುವುದು.—2 ಪೇತ್ರ 3:13.
ದೇವರ ರಾಜ್ಯವು ಬರಲಿಕ್ಕಾಗಿ ಮತ್ತು ಆತನ ಚಿತ್ತವು ಭೂಲೋಕದಲ್ಲಿ ನೆರವೇರಲಿಕ್ಕಾಗಿ ಪ್ರಾರ್ಥಿಸುವುದು, ಆಶಾಭಂಗಕ್ಕೆ ನಡೆಸದಿರುವ ನಂಬಿಕೆಯ ಒಂದು ಅಭಿವ್ಯಕ್ತಿಯಾಗಿದೆ. ಕ್ರೈಸ್ತ ಅಪೊಸ್ತಲ ಯೋಹಾನನು ಬರೆದುದು: “ಸಿಂಹಾಸನದೊಳಗಿಂದ ಬಂದ ಮಹಾ ಶಬ್ದವು ನನಗೆ ಕೇಳಿಸಿತು. ಅದು—ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು ಎಂದು ಹೇಳಿತು.” ಅನಂತರ ಯೋಹಾನನು ಕೂಡಿಸಿದ್ದು: “ಆಗ ಸಿಂಹಾಸನದ ಮೇಲೆ ಕೂತಿದ್ದವನು . . . ಇದನ್ನು ಬರೆ; ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ ಎಂದು ಹೇಳಿದನು.”—ಪ್ರಕಟನೆ 21:3-5.
ಪ್ರಾರ್ಥನೆ ಮತ್ತು ನಮ್ಮ ಶಾರೀರಿಕ ಆವಶ್ಯಕತೆಗಳು
ಮಾದರಿ ಪ್ರಾರ್ಥನೆಯಲ್ಲಿ ಯೇಸು ಏನು ಹೇಳಿದನೋ ಅದರ ಮೂಲಕ, ಪ್ರಾರ್ಥಿಸುವಾಗ ದೇವರ ನಾಮ ಮತ್ತು ಚಿತ್ತಕ್ಕೆ ಸಂಬಂಧಿಸಿದ ವಿಷಯವೇ ನಮ್ಮ ಮುಖ್ಯ ಚಿಂತೆಯಾಗಿರಬೇಕು ಎಂಬುದನ್ನು ಅವನು ತೋರಿಸಿದನು. ಆದರೂ, ಮಾದರಿ ಪ್ರಾರ್ಥನೆಯು ಯೆಹೋವನಿಗೆ ಯೋಗ್ಯವಾಗಿಯೇ ಸಂಬೋಧಿಸಲ್ಪಡುವ ವೈಯಕ್ತಿಕ ವಿನಂತಿಗಳೊಂದಿಗೆ ಮುಂದುವರಿಯುತ್ತದೆ.
ಇವುಗಳಲ್ಲಿ ಮೊದಲನೆಯದ್ದು: “ನಮ್ಮ ಅನುದಿನದ ಆಹಾರವನ್ನು ಈ ಹೊತ್ತೂ ದಯಪಾಲಿಸು.” (ಮತ್ತಾಯ 6:11) ಇದು ಭೌತಿಕ ಸಂಪತ್ತಿಗಾಗಿರುವ ಒಂದು ವಿನಂತಿಯಾಗಿರುವುದಿಲ್ಲ. “ನಮ್ಮ ಅನುದಿನದ ಆಹಾರವನ್ನು ಪ್ರತಿದಿನವೂ” ಒದಗಿಸಲಿಕ್ಕಾಗಿ ಪ್ರಾರ್ಥಿಸುವಂತೆ ಯೇಸು ನಮ್ಮನ್ನು ಉತ್ತೇಜಿಸಿದನು. (ಲೂಕ 11:3) ನಾವು ದೇವರನ್ನು ಪ್ರೀತಿಸುವಲ್ಲಿ ಮತ್ತು ಆತನಿಗೆ ವಿಧೇಯರಾಗುವಲ್ಲಿ ಖಂಡಿತವಾಗಿಯೂ ಆತನು ನಮ್ಮ ದೈನಂದಿನ ಆವಶ್ಯಕತೆಗಳನ್ನು ಪೂರೈಸುವನು ಎಂಬ ನಂಬಿಕೆಯಿಂದ ಕರ್ತನ ಪ್ರಾರ್ಥನೆಗೆ ಹೊಂದಿಕೆಯಲ್ಲಿ ಪ್ರಾರ್ಥಿಸಸಾಧ್ಯವಿದೆ.
ಆರ್ಥಿಕ ಸಮಸ್ಯೆಗಳ ಕುರಿತಾದ ಅನಗತ್ಯ ಚಿಂತೆಯು, ನಮ್ಮ ಆಧ್ಯಾತ್ಮಿಕ ಅಗತ್ಯವನ್ನು ಅಲಕ್ಷಿಸುವಂತೆ ಮತ್ತು ಹೀಗೆ ದೇವರು ನಮ್ಮಿಂದ ಏನನ್ನು ನಿರೀಕ್ಷಿಸುತ್ತಾನೋ ಅದನ್ನು ಮಾಡುವುದರಲ್ಲಿ ತಪ್ಪಿಬೀಳುವಂತೆ ಮಾಡಸಾಧ್ಯವಿದೆ. ಆದರೆ, ದೇವರ ಆರಾಧನೆಗೆ ನಮ್ಮ ಜೀವನದಲ್ಲಿ ಪ್ರಥಮ ಸ್ಥಾನವನ್ನು ಕೊಡುವಲ್ಲಿ, ಅನ್ನವಸ್ತ್ರಗಳಂಥ ಶಾರೀರಿಕ ಆವಶ್ಯಕತೆಗಳಿಗಾಗಿರುವ ನಮ್ಮ ಬೇಡಿಕೆಗಳು ಆಲಿಸಲ್ಪಟ್ಟು ಅನುಗ್ರಹಿಸಲ್ಪಡುವವು ಎಂಬ ವಿಷಯದಲ್ಲಿ ನಾವು ಖಾತ್ರಿಯಿಂದಿರಸಾಧ್ಯವಿದೆ. ಯೇಸು ಹೇಳಿದ್ದು: “ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.” (ಮತ್ತಾಯ 6:26-33) ದೇವರ ನೀತಿಗಾಗಿ ತವಕಪಡುವುದು ಒಂದು ಪಂಥಾಹ್ವಾನವಾಗಿದೆ, ಏಕೆಂದರೆ ನಾವೆಲ್ಲರೂ ಪಾಪಿಗಳಾಗಿದ್ದೇವೆ ಮತ್ತು ನಮ್ಮೆಲ್ಲರಿಗೆ ಕ್ಷಮಾಪಣೆಯ ಅಗತ್ಯವಿದೆ. (ರೋಮಾಪುರ 5:12) ಕರ್ತನ ಪ್ರಾರ್ಥನೆಯಲ್ಲಿ ಈ ವಿಚಾರವೂ ಒಳಗೂಡಿದೆ.
ನಮ್ಮ ಪ್ರಾರ್ಥನೆಗಳು ಮತ್ತು ಕ್ಷಮಾಪಣೆ
“ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆ ನಮ್ಮ ತಪ್ಪುಗಳನ್ನು ಕ್ಷಮಿಸು.” (ಮತ್ತಾಯ 6:12; ಲೂಕ 11:4) ಯೆಹೋವ ದೇವರು ನಿಜವಾಗಿಯೂ ನಮ್ಮ ಪಾಪಗಳನ್ನು ಕ್ಷಮಿಸುವನೋ?
ಪುರಾತನ ಇಸ್ರಾಯೇಲಿನ ಅರಸನಾದ ದಾವೀದನು ಗಂಭೀರವಾದ ಪಾಪಗಳನ್ನು ಮಾಡಿದನಾದರೂ, ಪಶ್ಚಾತ್ತಾಪವನ್ನು ತೋರಿಸಿದನು ಮತ್ತು ದೃಢವಿಶ್ವಾಸದಿಂದ ಹೀಗೆ ಪ್ರಾರ್ಥಿಸಿದನು: “ಕರ್ತನೇ [“ಯೆಹೋವನೇ,” NW], ನೀನು ಒಳ್ಳೆಯವನೂ ಕ್ಷಮಿಸುವವನೂ ನಿನಗೆ ಮೊರೆಯಿಡುವವರೆಲ್ಲರಲ್ಲಿ ಕೃಪಾಪೂರ್ಣನೂ ಆಗಿದ್ದೀಯಲ್ಲಾ.” (ಕೀರ್ತನೆ 86:5) ಇದೆಷ್ಟು ಸಾಂತ್ವನದಾಯಕ ವಿಚಾರವಾಗಿದೆ! ನಮ್ಮ ಸ್ವರ್ಗೀಯ ಪಿತನು, ಪಶ್ಚಾತ್ತಾಪ ಮನೋಭಾವದಿಂದ ಮೊರೆಯಿಡುವವರ ಪಾಪಗಳನ್ನು “ಕ್ಷಮಿಸಲು ಸಿದ್ಧ”ನಾಗಿದ್ದಾನೆ ಎಂದು ನೂತನ ಲೋಕ ಭಾಷಾಂತರವು ತಿಳಿಸುತ್ತದೆ. ಯೆಹೋವ ದೇವರು ನಮ್ಮ ಪಾಪಗಳನ್ನು ಸಂಪೂರ್ಣವಾಗಿ ಕ್ಷಮಿಸಬಲ್ಲನು.
ಆದರೂ, ಯೇಸು ಒಂದು ಷರತ್ತನ್ನು ಒಡ್ಡಿದನು: ದೇವರಿಂದ ಕ್ಷಮಿಸಲ್ಪಡಬೇಕಾದರೆ, ನಾವು ಇತರರನ್ನು ಕ್ಷಮಿಸಲೇಬೇಕು. (ಮತ್ತಾಯ 6:14, 15) ನೀತಿವಂತನಾಗಿದ್ದ ಯೋಬನು ಮೂವರು ಸಂಗಡಿಗರಿಂದ ದುರುಪಚರಿಸಲ್ಪಟ್ಟರೂ, ಅವನು ಅವರನ್ನು ಕ್ಷಮಿಸಿಬಿಟ್ಟನು ಮತ್ತು ಅವರಿಗೋಸ್ಕರ ಪ್ರಾರ್ಥಿಸಿದನು ಸಹ. (ಯೋಬ 42:10) ನಮ್ಮ ವಿರುದ್ಧ ತಪ್ಪುಮಾಡುವವರನ್ನು ಕ್ಷಮಿಸುವಲ್ಲಿ, ನಾವು ದೇವರನ್ನು ಸಂತೋಷಪಡಿಸುವೆವು ಮತ್ತು ಆತನ ಕರುಣೆಯಿಂದ ಪ್ರಯೋಜನ ಹೊಂದುವೆವು.
ನಮ್ಮ ವಿನಂತಿಗಳನ್ನು ಕೇಳಿಸಿಕೊಳ್ಳಲು ದೇವರಿಗಿರುವ ಸಿದ್ಧಮನಸ್ಸು, ನಾವಾತನ ಸಮ್ಮತಿಯನ್ನು ಪಡೆಯಲು ಪ್ರಯತ್ನಿಸುವಂತೆ ನಮ್ಮನ್ನು ಪ್ರಚೋದಿಸಬೇಕು. ಮತ್ತು ನಾವು ಅಪರಿಪೂರ್ಣರಾಗಿರುವುದಾದರೂ ಆತನ ಸಮ್ಮತಿಯನ್ನು ಪಡೆಯಲು ಪ್ರಯತ್ನಿಸಸಾಧ್ಯವಿದೆ. (ಮತ್ತಾಯ 26:41) ಇಲ್ಲಿಯೂ ಯೆಹೋವನು ನಮಗೆ ಸಹಾಯಮಾಡಬಲ್ಲನು. ಈ ವಿಷಯವನ್ನೇ, ಯೇಸು ಮಾದರಿ ಪ್ರಾರ್ಥನೆಯನ್ನು ಅತ್ಯಾವಶ್ಯಕವಾದ ಒಂದು ವಿನಂತಿಯೊಂದಿಗೆ ಕೊನೆಗೊಳಿಸುವ ಮೂಲಕ ತೋರಿಸಿದನು.
ನೀತಿಯ ಮಾರ್ಗವನ್ನು ಬೆನ್ನಟ್ಟಲಿಕ್ಕಾಗಿ ಸಹಾಯ
“ನಮ್ಮನ್ನು ಶೋಧನೆಯೊಳಗೆ ಸೇರಿಸದೆ ಕೇಡಿನಿಂದ [ಕೆಡುಕನಿಂದ] ನಮ್ಮನ್ನು ತಪ್ಪಿಸು.” (ಮತ್ತಾಯ 6:13) ಯೆಹೋವನು ನಮ್ಮನ್ನು ಶೋಧನೆ ಇಲ್ಲವೆ ಪ್ರಲೋಭನೆಯ ಸಮಯದಲ್ಲಿ ಕೈಬಿಡುವುದಿಲ್ಲ ಅಥವಾ ನಾವು ಪಾಪದಲ್ಲಿ ಬೀಳುವಂತೆ ಮಾಡುವುದಿಲ್ಲ. ಆತನ ವಾಕ್ಯವು ತಿಳಿಸುವುದು: “ದೇವರು ಕೆಟ್ಟದ್ದಕ್ಕೇನೂ ಸಂಬಂಧಪಟ್ಟವನಲ್ಲ; ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸುವದಿಲ್ಲ.” (ಯಾಕೋಬ 1:13) ನಾವು ಶೋಧನೆಗೊಳಗಾಗುವಂತೆ ದೇವರು ಅನುಮತಿಸುತ್ತಾನೆ, ಆದರೆ ಆತನು ಮಹಾನ್ ಪ್ರಲೋಭನಕಾರನಿಂದ ಅಂದರೆ ಪಿಶಾಚನಾದ ಸೈತಾನನು ಎಂದು ಕುಪ್ರಸಿದ್ಧನಾಗಿರುವ “ಕೆಡುಕನಿಂದ” ನಮ್ಮನ್ನು ಕಾಪಾಡಬಲ್ಲನು.
ಅಪೊಸ್ತಲ ಪೇತ್ರನು ಜೊತೆ ಕ್ರೈಸ್ತರನ್ನು ಹೀಗೆ ಉತ್ತೇಜಿಸಿದನು: “ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ; ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.” (1 ಪೇತ್ರ 5:8) ವಾಸ್ತವದಲ್ಲಿ ಸೈತಾನನು ಪರಿಪೂರ್ಣ ಮನುಷ್ಯನಾಗಿದ್ದ ಯೇಸು ಕ್ರಿಸ್ತನನ್ನು ಸಹ ಪ್ರಲೋಭಿಸಲು ಪ್ರಯತ್ನಿಸಿದನು! ಪಿಶಾಚನ ಗುರಿ ಏನಾಗಿತ್ತು? ಯೇಸುವನ್ನು ಯೆಹೋವ ದೇವರ ಶುದ್ಧಾರಾಧನೆಯಿಂದ ದೂರ ಸೆಳೆಯುವುದೇ ಆಗಿತ್ತು. (ಮತ್ತಾಯ 4:1-11) ನೀವು ದೇವರ ಸೇವೆಯನ್ನು ಮಾಡಲು ಪ್ರಯತ್ನಿಸುತ್ತಿರುವುದಾದರೆ, ನಿಮ್ಮನ್ನೂ ನುಂಗಿಬಿಡುವುದು ಸೈತಾನನ ಗುರಿಯಾಗಿದೆ!
ತನ್ನ ಹಿಡಿತದಲ್ಲಿರುವ ಲೋಕದ ಮೂಲಕ ಪಿಶಾಚನು, ದೇವರು ಸಮ್ಮತಿಸದ ರೀತಿನೀತಿಗಳಲ್ಲಿ ಒಳಗೂಡುವಂತೆ ನಮ್ಮನ್ನು ಪ್ರಲೋಭಿಸಬಹುದು. (1 ಯೋಹಾನ 5:19) ಹೀಗಿರುವುದರಿಂದ, ವಿಶೇಷವಾಗಿ ನಾವು ಸತತವಾಗಿರುವ ಒಂದು ಪ್ರಲೋಭನೆಯನ್ನು ಎದುರಿಸುತ್ತಿರುವಾಗ, ಸಹಾಯಕ್ಕಾಗಿ ಕ್ರಮವಾಗಿ ದೇವರ ಕಡೆಗೆ ತಿರುಗುವುದು ಅತ್ಯಾವಶ್ಯಕವಾದದ್ದಾಗಿದೆ. ಮತ್ತು ದೈವಪ್ರೇರಿತ ವಾಕ್ಯವಾಗಿರುವ ಬೈಬಲಿಗೆ ಹೊಂದಿಕೆಯಲ್ಲಿ ನಾವು ಯೆಹೋವನನ್ನು ಆರಾಧಿಸುವಲ್ಲಿ, ಪಿಶಾಚನನ್ನು ಪ್ರತಿರೋಧಿಸಲು ನಮಗೆ ಸಹಾಯಮಾಡುವ ಮೂಲಕ ಆತನು ನಮ್ಮನ್ನು ಕಾಪಾಡುವನು. ಬೈಬಲ್ ನಮಗೆ ಹೀಗೆ ತಿಳಿಸುತ್ತದೆ: ‘ದೇವರು ನಂಬಿಗಸ್ಥನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸನು.’—1 ಕೊರಿಂಥ 10:13.
ದೇವರಲ್ಲಿ ನಂಬಿಕೆಯು ಅತ್ಯಾವಶ್ಯಕ
ನಮ್ಮ ಸ್ವರ್ಗೀಯ ಪಿತನಿಗೆ ನಮ್ಮಲ್ಲಿ ಪ್ರತಿಯೊಬ್ಬರಲ್ಲಿಯೂ ಆಸಕ್ತಿಯಿದೆ ಎಂದು ತಿಳಿದಿರುವುದು ಎಷ್ಟು ಹೃದಯೋತ್ತೇಜಕವಾಗಿದೆ! ಹೇಗೆ ಪ್ರಾರ್ಥಿಸಬೇಕು ಎಂಬುದನ್ನು ತನ್ನ ಮಗನಾದ ಯೇಸು ಕ್ರಿಸ್ತನೇ ನಮಗೆ ಕಲಿಸುವಂತೆಯೂ ಆತನು ಏರ್ಪಡಿಸಿದನು. ಖಂಡಿತವಾಗಿಯೂ ಇದು ನಾವು ಯೆಹೋವ ದೇವರನ್ನು ಸಂತೋಷಪಡಿಸಲು ಬಯಸುವಂತೆ ಮಾಡುತ್ತದೆ. ನಾವಿದನ್ನು ಹೇಗೆ ಮಾಡಸಾಧ್ಯವಿದೆ?
ಬೈಬಲ್ ಹೇಳುವುದು: “ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.” (ಇಬ್ರಿಯ 11:6) ಇಂಥ ನಂಬಿಕೆಯನ್ನು ಹೇಗೆ ಪಡೆದುಕೊಳ್ಳಸಾಧ್ಯವಿದೆ? “ಸಾರಿದ ವಾರ್ತೆಯು ನಂಬಿಕೆಗೆ ಆಧಾರ” ಎಂದು ಬೈಬಲ್ ತಿಳಿಸುತ್ತದೆ. (ರೋಮಾಪುರ 10:17) ನಿಜ ನಂಬಿಕೆಯಿಂದ ದೇವರನ್ನು ಸೇವಿಸಲು ಹಂಬಲಿಸುವವರೆಲ್ಲರೊಂದಿಗೆ ಶಾಸ್ತ್ರೀಯ ವಿಷಯಗಳ ಕುರಿತು ಮಾತಾಡಲು ಯೆಹೋವನ ಸಾಕ್ಷಿಗಳು ಸಂತೋಷಿಸುತ್ತಾರೆ.
ಕರ್ತನ ಪ್ರಾರ್ಥನೆಯ ಕುರಿತಾದ ಈ ಚರ್ಚೆಯು, ಅದರ ಅರ್ಥಕ್ಕಾಗಿರುವ ನಿಮ್ಮ ಗಣ್ಯತೆಯನ್ನು ಇನ್ನಷ್ಟು ಆಳಗೊಳಿಸಿದೆ ಎಂದು ನಿರೀಕ್ಷಿಸಲಾಗಿದೆ. ಯೆಹೋವನ ಕುರಿತು ಹಾಗೂ ‘ತನ್ನನ್ನು ಹುಡುಕುವವರಿಗಾಗಿ’ ಆತನು ನೀಡಲಿರುವ ಪ್ರತಿಫಲಗಳ ಕುರಿತು ಇನ್ನೂ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳುವ ಮೂಲಕ, ದೇವರಲ್ಲಿನ ನಿಮ್ಮ ನಂಬಿಕೆಯನ್ನು ನೀವು ಇನ್ನಷ್ಟು ಬಲಪಡಿಸಸಾಧ್ಯವಿದೆ. ನಿಮ್ಮ ಸ್ವರ್ಗೀಯ ಪಿತನೊಂದಿಗೆ ನಿತ್ಯಕ್ಕೂ ಆಪ್ತ ಸಂಬಂಧದಲ್ಲಿ ನೀವು ಆನಂದಿಸಸಾಧ್ಯವಾಗುವಂತೆ, ಆತನ ಕುರಿತು ಮತ್ತು ಆತನ ಉದ್ದೇಶಗಳ ಕುರಿತು ನೀವು ಹೆಚ್ಚನ್ನು ಕಲಿಯುವಂತಾಗಲಿ.—ಯೋಹಾನ 17:3.
[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ. ನಮ್ಮ ಅನುದಿನದ ಆಹಾರವನ್ನು ಈ ಹೊತ್ತೂ ದಯಪಾಲಿಸು. ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆ ನಮ್ಮ ತಪ್ಪುಗಳನ್ನು ಕ್ಷಮಿಸು. ನಮ್ಮನ್ನು ಶೋಧನೆಯೊಳಗೆ ಸೇರಿಸದೆ ಕೇಡಿನಿಂದ ನಮ್ಮನ್ನು ತಪ್ಪಿಸು.”—ಮತ್ತಾಯ 6:9-13
[ಪುಟ 7ರಲ್ಲಿರುವ ಚಿತ್ರ]
ತನ್ನನ್ನು ಪ್ರೀತಿಸುವವರ ಆವಶ್ಯಕತೆಗಳನ್ನು ಯೆಹೋವನು ಪೂರೈಸುತ್ತಾನೆ
[ಪುಟ 7ರಲ್ಲಿರುವ ಚಿತ್ರ]
ಪಿಶಾಚನನ್ನು ಪ್ರತಿರೋಧಿಸಲಿಕ್ಕಾಗಿಯೂ ದೇವರು ನಮಗೆ ಸಹಾಯಮಾಡುತ್ತಾನೆ
[ಪುಟ 7ರಲ್ಲಿರುವ ಚಿತ್ರ]
ನಮಗೆ ವಿರುದ್ಧವಾಗಿ ತಪ್ಪುಮಾಡಿದವರನ್ನು ನಾವು ಯೋಬನಂತೆ ಕ್ಷಮಿಸುವಲ್ಲಿ, ದೇವರ ಕರುಣೆಯಿಂದ ನಾವು ಪ್ರಯೋಜನ ಹೊಂದಸಾಧ್ಯವಿದೆ