ಈ ಕಡೇ ದಿವಸಗಳಲ್ಲಿ ಐಕ್ಯವನ್ನು ಕಾಪಾಡಿಕೊಳ್ಳಿರಿ
“ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಿರಿ. . . . ಒಂದೇ ಆತ್ಮದಲ್ಲಿ ದೃಢರಾಗಿ ನಿಂತು ಸುವಾರ್ತೆಯಲ್ಲಿಟ್ಟ ನಂಬಿಕೆಗೋಸ್ಕರ ಐಕಮತ್ಯದಿಂದ ಹೋರಾಡುವವರಾಗಿರಿ.”—ಫಿಲಿಪ್ಪಿ 1:27.
1. ಯೆಹೋವನ ಸಾಕ್ಷಿಗಳ ಮತ್ತು ಲೋಕದ ನಡುವೆ ಯಾವ ಸ್ಪಷ್ಟವಾದ ವೈದೃಶ್ಯವಿದೆ?
ಇವು “ಕಡೇ ದಿವಸಗಳು.” ನಿಸ್ಸಂದೇಹವಾಗಿ “ವ್ಯವಹರಿಸಲು ಕಷ್ಟವಾದ ಕಠಿನಕಾಲಗಳು” (NW) ಇಲ್ಲಿವೆ. (2 ತಿಮೊಥೆಯ 3:1-5) ಈ “ಅಂತ್ಯ ಕಾಲ”ದಲ್ಲಿ ಮಾನವ ಸಮಾಜದಲ್ಲಿ ಅಶಾಂತಿಯೊಂದಿಗೆ, ಯೆಹೋವನ ಸಾಕ್ಷಿಗಳಾದರೊ ಅವರ ಶಾಂತಿ ಮತ್ತು ಐಕ್ಯದ ಕಾರಣ ಸ್ಪಷ್ಟವಾದ ವೈದೃಶ್ಯದಲ್ಲಿ ಎದ್ದುಕಾಣುತ್ತಾರೆ. (ದಾನಿಯೇಲ 12:4) ಆದರೆ ಯೆಹೋವನ ಆರಾಧಕರ ಈ ಭೌಗೋಲಿಕ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಯು ಈ ಐಕ್ಯವನ್ನು ಕಾಪಾಡಿಕೊಳ್ಳಲು ಪ್ರಯಾಸಪಡುವಂತೆ ಕೇಳಿಕೊಳ್ಳಲ್ಪಡುತ್ತಾನೆ.
2. ಐಕ್ಯವನ್ನು ಕಾಪಾಡಿಕೊಳ್ಳುವ ಕುರಿತು ಪೌಲನು ಏನು ಹೇಳಿದನು, ಮತ್ತು ಯಾವ ಪ್ರಶ್ನೆಯನ್ನು ನಾವು ಪರಿಗಣಿಸುವೆವು?
2 ಐಕ್ಯವನ್ನು ಕಾಪಾಡಿಕೊಳ್ಳುವಂತೆ ಅಪೊಸ್ತಲ ಪೌಲನು ಜೊತೆ ಕ್ರೈಸ್ತರನ್ನು ಪ್ರಬೋಧಿಸಿದನು. ಅವನು ಬರೆದುದು: “ಹೇಗೂ ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಿರಿ. ಆಗ ನಾನು ಬಂದು ನಿಮ್ಮನ್ನು ನೋಡಿದರೂ ಸರಿಯೇ, ದೂರದಲ್ಲಿದ್ದು ನಿಮ್ಮ ಸುದ್ದಿಯನ್ನು ಕೇಳಿದರೂ ಸರಿಯೇ, ನೀವು ನಿಮ್ಮ ವಿರೋಧಿಗಳಿಗೆ ಯಾವ ವಿಷಯದಲ್ಲಾದರೂ ಹೆದರದೆ ಒಂದೇ ಆತ್ಮದಲ್ಲಿ ದೃಢವಾಗಿ ನಿಂತು ಸುವಾರ್ತೆಯಲ್ಲಿಟ್ಟ ನಂಬಿಕೆಗೋಸ್ಕರ ಐಕಮತ್ಯದಿಂದ ಹೋರಾಡುವವರಾಗಿದ್ದೀರೆಂದು ನಾನು ತಿಳಿದುಕೊಳ್ಳುವೆನು. ನೀವು ಹೀಗಿರುವುದು ವಿರೋಧಿಗಳ ನಾಶನಕ್ಕೂ ನಿಮ್ಮ ರಕ್ಷಣೆಗೂ ದೇವರಿಂದಾದ ಪ್ರಮಾಣವಾಗಿದೆ.” (ಫಿಲಿಪ್ಪಿ 1:27, 28) ಕ್ರೈಸ್ತರೋಪಾದಿ ನಾವು ಒಂದುಗೂಡಿ ಕೆಲಸ ನಡಿಸಬೇಕೆಂದು ಪೌಲನ ಮಾತುಗಳು ಸ್ಪಷ್ಟವಾಗಿ ತೋರಿಸುತ್ತವೆ. ಹಾಗಾದರೆ, ಈ ಕಷ್ಟಕರವಾದ ಸಮಯದಲ್ಲಿ ನಮ್ಮ ಕ್ರಿಸ್ತೀಯ ಐಕ್ಯವನ್ನು ಕಾಪಾಡಿಕೊಳ್ಳಲು ನಮಗೆ ಯಾವುದು ಸಹಾಯಮಾಡುವುದು?
ದೈವಿಕ ಚಿತ್ತಕ್ಕೆ ಅಧೀನರಾಗಿರಿ
3. ಸುನ್ನತಿಯಿಲ್ಲದ ಅನ್ಯಜನರು ಮೊದಲಾಗಿ ಯೇಸುವಿನ ಹಿಂಬಾಲಕರಾದದ್ದು ಯಾವಾಗ ಮತ್ತು ಹೇಗೆ?
3 ನಮ್ಮ ಐಕ್ಯವನ್ನು ಕಾಪಾಡಿಕೊಳ್ಳುವ ಒಂದು ವಿಧವು ದೈವಿಕ ಚಿತ್ತಕ್ಕೆ ಎಲ್ಲಾ ಸಮಯಗಳಲ್ಲಿ ಅಧೀನರಾಗುವುದೇ. ಇದು ನಮ್ಮ ಯೋಚಿಸುವಿಕೆಯಲ್ಲಿ ಒಂದು ಕ್ರಮಪಡಿಸುವಿಕೆಯನ್ನು ಕೇಳಿಕೊಂಡೀತು. ಯೇಸು ಕ್ರಿಸ್ತನ ಆರಂಭದ ಯೆಹೂದಿ ಶಿಷ್ಯರನ್ನು ಗಮನಕ್ಕೆ ತನ್ನಿರಿ. ಸಾ.ಶ. 36ರಲ್ಲಿ ಅಪೊಸ್ತಲ ಪೇತ್ರನು ಸುನ್ನತಿಯಾಗದ ಅನ್ಯಜನರಿಗೆ ಮೊದಲಾಗಿ ಸಾರಿದಾಗ, ದೇವರು ರಾಷ್ಟ್ರಗಳ ಆ ಜನರ ಮೇಲೆ ತನ್ನ ಪವಿತ್ರಾತ್ಮವನ್ನು ದಯಪಾಲಿಸಿದನು, ಮತ್ತು ಅವರು ದೀಕ್ಷಾಸ್ನಾನ ಮಾಡಿಸಿಕೊಂಡರು. (ಅ. ಕೃತ್ಯಗಳು ಅಧ್ಯಾಯ 10) ಆ ಸಮಯದ ತನಕ, ಯೆಹೂದ್ಯರು, ಯೆಹೂದಿ ಮತಾಂತರಿಗಳು, ಮತ್ತು ಸಮಾರ್ಯದವರು ಮಾತ್ರ, ಯೇಸು ಕ್ರಿಸ್ತನ ಹಿಂಬಾಲಕರಾಗಿ ಪರಿಣಮಿಸಿದ್ದರು.—ಅ. ಕೃತ್ಯಗಳು 8:4-8, 26-38.
4. ಕೊರ್ನೇಲ್ಯನ ಸಂಬಂಧದಲ್ಲಿ ಸಂಭವಿಸಿದ್ದ ವಿಷಯವನ್ನು ವಿವರಿಸಿದ ಬಳಿಕ, ಪೇತ್ರನು ಅಂದದ್ದೇನು, ಮತ್ತು ಇದು ಯೇಸುವಿನ ಯೆಹೂದಿ ಶಿಷ್ಯರಿಗೆ ಯಾವ ಪರೀಕ್ಷೆಯನ್ನು ಒಡ್ಡಿತು?
4 ಅಪೊಸ್ತಲರು ಮತ್ತು ಯೆರೂಸಲೇಮಿನಲ್ಲಿದ್ದ ಇತರ ಸಹೋದರರು ಕೊರ್ನೇಲ್ಯನ ಮತ್ತು ಇತರ ಅನ್ಯಜನರ ಮತಾಂತರದ ಸುದ್ದಿಯನ್ನು ತಿಳಿದಾಗ, ಅವರು ಪೇತ್ರನ ವರದಿಯನ್ನು ಕೇಳುವುದರಲ್ಲಿ ಆಸಕ್ತರಾಗಿದ್ದರು. ಕೊರ್ನೇಲ್ಯನ ಮತ್ತು ಇತರ ವಿಶ್ವಾಸಿ ಅನ್ಯಜನರ ಸಂಬಂಧದಲ್ಲಿ ಏನು ಸಂಭವಿಸಿತ್ತೆಂಬುದನ್ನು ವಿವರಿಸಿಯಾದ ಬಳಿಕ, ಅಪೊಸ್ತಲನು ಈ ಮಾತುಗಳಿಂದ ಕೊನೆಗೊಳಿಸಿದನು: “ದೇವರು ಕರ್ತನಾಗಿರುವ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಮಗೆ [ಯೆಹೂದ್ಯರಿಗೆ] ಕೊಟ್ಟ ವರಕ್ಕೆ ಸರಿಯಾದ ವರವನ್ನು ಅವರಿಗೂ [ನಂಬುವವರಾದ ಆ ಅನ್ಯಜನರಿಗೂ] ಕೊಟ್ಟಿರಲಾಗಿ ದೇವರನ್ನು ತಡೆಯುವದಕ್ಕೆ ನಾನು ಶಕ್ತನೋ?” (ಅ. ಕೃತ್ಯಗಳು 11:1-17) ಇದು ಯೇಸು ಕ್ರಿಸ್ತನ ಯೆಹೂದಿ ಹಿಂಬಾಲಕರನ್ನು ಒಂದು ಪರೀಕ್ಷೆಗೆ ಒಡ್ಡಿತು. ಅವರು ದೇವರ ಚಿತ್ತಕ್ಕೆ ಅಧೀನರಾಗಿ, ವಿಶ್ವಾಸಿ ಅನ್ಯಜನರನ್ನು ತಮ್ಮ ಜೊತೆ ಆರಾಧಕರಾಗಿ ಸ್ವೀಕರಿಸಲಿದ್ದರೊ? ಇಲ್ಲವೆ ಯೆಹೋವನ ಭೂಸೇವಕರ ಐಕ್ಯವು ಗಂಡಾಂತರಕ್ಕೊಳಗಾಗಲಿತ್ತೊ?
5. ದೇವರು ಅನ್ಯಜನರಿಗೆ ಪಶ್ಚಾತ್ತಾಪವನ್ನು ಅನುಗ್ರಹಿಸಿದ ನಿಜತ್ವಕ್ಕೆ ಅಪೊಸ್ತಲರು ಮತ್ತು ಇತರ ಸಹೋದರರು ಹೇಗೆ ಪ್ರತಿಕ್ರಿಯಿಸಿದರು, ಮತ್ತು ಈ ಮನೋಭಾವದಿಂದ ನಾವು ಏನನ್ನು ಕಲಿಯಬಲ್ಲೆವು?
5 ವೃತ್ತಾಂತವು ತಿಳಿಸುವುದು: “ಹೀಗೆಂದ ಮಾತುಗಳನ್ನು ಆ ಸುನ್ನತಿಯವರು [ಅಪೊಸ್ತಲರು ಮತ್ತು ಇತರ ಸಹೋದರರು] ಕೇಳಿ ಆಕ್ಷೇಪಣೆ ಮಾಡುವುದನ್ನು ಬಿಟ್ಟು—ಹಾಗಾದರೆ ದೇವರು ಅನ್ಯಜನರಿಗೂ ಜೀವಕೊಡಬೇಕೆಂದು ಅವರ ಮನಸ್ಸುಗಳನ್ನು ತನ್ನ ಕಡೆಗೆ ತಿರುಗಿಸಿದ್ದಾನೆ ಎಂದು ದೇವರನ್ನು ಕೊಂಡಾಡಿದರು.” (ಅ. ಕೃತ್ಯಗಳು 11:18) ಆ ಮನೋಭಾವವು ಯೇಸುವಿನ ಹಿಂಬಾಲಕರ ಐಕ್ಯವನ್ನು ಕಾಪಾಡಿತು ಮತ್ತು ಪ್ರವರ್ಧಿಸಿತು. ಕೇವಲ ಕೊಂಚ ಸಮಯದೊಳಗೆ, ಅನ್ಯಜನರ ಅಥವಾ ರಾಷ್ಟ್ರಗಳ ಜನರ ನಡುವೆ ಸಾರುವ ಕಾರ್ಯವು ಮುಂದೆ ಸಾಗಿತು, ಮತ್ತು ಅಂತಹ ಚಟುವಟಿಕೆಗಳ ಮೇಲೆ ಯೆಹೋವನ ಆಶೀರ್ವಾದವು ಇತ್ತು. ಒಂದು ಹೊಸ ಸಭೆಯ ರಚನೆಯ ಸಂಬಂಧದಲ್ಲಿ ಅಥವಾ ದೇವರ ಪವಿತ್ರಾತ್ಮದ ಮಾರ್ಗದರ್ಶನದ ಕೆಳಗೆ ಯಾವುದೊ ದೇವಪ್ರಭುತ್ವ ಕ್ರಮಪಡಿಸುವಿಕೆಯು ಮಾಡಲ್ಪಡುವಾಗ, ನಮ್ಮ ಸಹಕಾರವು ಕೇಳಲ್ಪಟ್ಟಲ್ಲಿ, ನಾವು ಸ್ವತಃ ಸಮ್ಮತಿಯನ್ನೀಯಬೇಕು. ನಮ್ಮ ಹೃದಯಪೂರ್ವಕವಾದ ಸಹಕಾರವು ಯೆಹೋವನನ್ನು ಮೆಚ್ಚಿಸುವುದು ಮತ್ತು ಈ ಕಡೇ ದಿವಸಗಳಲ್ಲಿ ನಮ್ಮ ಐಕ್ಯವನ್ನು ಕಾಪಾಡಿಕೊಳ್ಳಲು ನಮಗೆ ಸಹಾಯಮಾಡುವುದು.
ಸತ್ಯವನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ
6. ಯೆಹೋವನ ಆರಾಧಕರ ಐಕ್ಯದ ಮೇಲೆ ಸತ್ಯವು ಯಾವ ಪರಿಣಾಮವನ್ನು ಬೀರುತ್ತದೆ?
6 ಯೆಹೋವನ ಆರಾಧಕರ ಕುಟುಂಬದ ಭಾಗದೋಪಾದಿ, ನಾವು ಐಕ್ಯವನ್ನು ಕಾಪಾಡುತ್ತೇವೆ ಯಾಕಂದರೆ, ನಾವೆಲ್ಲರು “ಯೆಹೋವನಿಂದ ಶಿಕ್ಷಿತರಾಗಿ”ದ್ದೇವೆ ಮತ್ತು ಆತನ ಪ್ರಕಟಿಸಲ್ಪಟ್ಟ ಸತ್ಯವನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತೇವೆ. (ಯೋಹಾನ 6:45; ಕೀರ್ತನೆ 43:3) ನಮ್ಮ ಬೋಧನೆಗಳು ದೇವರ ವಾಕ್ಯದ ಮೇಲೆ ಆಧಾರಿಸಿರಲಾಗಿ, ನಮ್ಮೆಲ್ಲರ ಮಾತು ಒಂದೇ ಆಗಿರುತ್ತದೆ. ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಯೆಹೋವನಿಂದ ಲಭ್ಯಗೊಳಿಸಲ್ಪಟ್ಟಿರುವ ಆತ್ಮಿಕ ಆಹಾರವನ್ನು ನಾವು ಸಂತೋಷದಿಂದ ಸ್ವೀಕರಿಸುತ್ತೇವೆ. (ಮತ್ತಾಯ 24:45-47) ಅಂತಹ ಏಕರೂಪದ ಬೋಧನೆಯು ಲೋಕವ್ಯಾಪಕವಾಗಿ ನಮ್ಮ ಐಕ್ಯವನ್ನು ಕಾಪಾಡಿಕೊಳ್ಳಲು ನಮಗೆ ನೆರವನ್ನೀಯುತ್ತದೆ.
7. ಒಂದು ನಿರ್ದಿಷ್ಟವಾದ ವಿಷಯವನ್ನು ತಿಳಿದುಕೊಳ್ಳಲು ನಮಗೆ ವೈಯಕ್ತಿಕವಾಗಿ ಕಷ್ಟಕರವಾದರೆ, ನಾವೇನು ಮಾಡಬೇಕು, ಮತ್ತು ನಾವೇನು ಮಾಡಬಾರದು?
7 ಒಂದು ನಿರ್ದಿಷ್ಟವಾದ ಬೋಧನೆಯನ್ನು ತಿಳಿದುಕೊಳ್ಳಲು ಅಥವಾ ಅಂಗೀಕರಿಸಲು ನಮಗೆ ವೈಯಕ್ತಿಕವಾಗಿ ಕಷ್ಟವಾಗುವಾಗ ಏನು? ನಾವು ವಿವೇಕಕ್ಕಾಗಿ ಪ್ರಾರ್ಥನೆಮಾಡಿ, ಶಾಸ್ತ್ರಗಳಲ್ಲಿ ಮತ್ತು ಕ್ರೈಸ್ತ ಪ್ರಕಾಶನಗಳಲ್ಲಿ ಸಂಶೋಧನೆಯನ್ನು ಮಾಡಬೇಕು. (ಜ್ಞಾನೋಕ್ತಿ 2:4, 5; ಯಾಕೋಬ 1:5-8) ಹಿರಿಯನೊಬ್ಬನೊಂದಿಗಿನ ಚರ್ಚೆಯು ಸಹಾಯಕಾರಿಯಾಗಿರಬಹುದು. ವಿಷಯವನ್ನು ಅರ್ಥಮಾಡಿಕೊಳ್ಳಲು ಇನ್ನೂ ಸಾಧ್ಯವಾಗದಿದ್ದರೆ, ಅದನ್ನು ಅಲ್ಲಿಗೆ ಬಿಟ್ಟುಬಿಡುವುದು ಉತ್ತಮವಾಗಿರಬಹುದು. ಪ್ರಾಯಶಃ ಆ ವಿಷಯದ ಮೇಲಿನ ಅಧಿಕ ಮಾಹಿತಿಯು ಪ್ರಕಾಶಿಸಲ್ಪಡುವುದು, ಮತ್ತು ಆಗ ನಮ್ಮ ತಿಳಿವಳಿಕೆಯು ಅಧಿಕ ವಿಸ್ತಾರಗೊಳ್ಳುವುದು. ಆದರೆ, ಭಿನ್ನವಾದ ನಮ್ಮ ಸ್ವಂತ ಅಭಿಪ್ರಾಯವನ್ನು ಅಂಗೀಕರಿಸುವಂತೆ ಸಭೆಯಲ್ಲಿರುವ ಇತರರ ಮನವೊಪ್ಪಿಸಲು ಪ್ರಯತ್ನಿಸುವುದು ತಪ್ಪಾಗಿರುವುದು. ಇದು ವೈಷಮ್ಯವನ್ನು ಬಿತ್ತುವುದಾಗಿದೆ, ಐಕ್ಯವನ್ನು ಕಾಪಾಡುವ ಕಾರ್ಯನಡಿಸುವಿಕೆಯಲ್ಲ. “ಸತ್ಯವನ್ನನುಸರಿಸಿ ನಡೆಯುವವರಾಗಿ,” ಇತರರೂ ಹಾಗೆ ಮಾಡುವಂತೆ ಪ್ರೋತ್ಸಾಹನೆ ನೀಡುವುದು ಅದೆಷ್ಟು ಉತ್ತಮವಾಗಿರುವುದು!—3 ಯೋಹಾನ 4.
8. ಸತ್ಯದ ಕಡೆಗೆ ಯಾವ ಮನೋಭಾವವು ಸೂಕ್ತವಾಗಿರುತ್ತದೆ?
8 ಒಂದನೆಯ ಶತಮಾನದಲ್ಲಿ, ಪೌಲನು ಹೇಳಿದ್ದು: “ಈಗ ಕಂಚಿನ ದರ್ಪಣದಲ್ಲಿ ಕಾಣಿಸುವಂತೆ [ದೇವರ ಮುಖವು] ನಮಗೆ ಮೊಬ್ಬಾಗಿ ಕಾಣಿಸುತ್ತದೆ; ಆಗ ಮುಖಾಮುಖಿಯಾಗಿ ಆತನನ್ನು ನೋಡುವೆವು. ಈಗ ಸ್ವಲ್ಪಮಾತ್ರ ನನಗೆ ತಿಳಿದದೆ; ಆಗ ದೇವರು ನನ್ನನ್ನು ಸಂಪೂರ್ಣವಾಗಿ ತಿಳುಕೊಂಡಂತೆ ನಾನು ಸಂಪೂರ್ಣವಾಗಿ ತಿಳುಕೊಳ್ಳುವೆನು.” (1 ಕೊರಿಂಥ 13:12) ಆದಿ ಕ್ರೈಸ್ತರು ಎಲ್ಲ ವಿವರಗಳನ್ನು ತಿಳಿದುಕೊಳ್ಳದಿದ್ದರೂ, ಅವರು ಐಕ್ಯರಾಗಿ ಉಳಿದರು. ಇಂದು ಯೆಹೋವನ ಉದ್ದೇಶದ ಮತ್ತು ಆತನ ಸತ್ಯವಾಕ್ಯದ ಹೆಚ್ಚು ಸ್ಪಷ್ಟವಾದ ತಿಳಿವಳಿಕೆಯು ನಮಗಿದೆ. ಆದುದರಿಂದ ‘ನಂಬಿಗಸ್ತ ಆಳಿನ’ ಮುಖಾಂತರ ನಾವು ಪಡೆದುಕೊಂಡಿರುವ ಸತ್ಯಕ್ಕಾಗಿ ನಾವು ಕೃತಜ್ಞರಾಗಿರೋಣ. ಮತ್ತು ಯೆಹೋವನು ತನ್ನ ಸಂಸ್ಥೆಯ ಮೂಲಕವಾಗಿ ನಮ್ಮನ್ನು ನಡಿಸಿದುದಕ್ಕಾಗಿ ನಾವು ಉಪಕಾರ ಹೇಳೋಣ. ನಮಗೆ ಯಾವಾಗಲೂ ಜ್ಞಾನದ ಒಂದೇ ಮಟ್ಟವು ಇರದಿದ್ದರೂ, ನಾವು ಆತ್ಮಿಕವಾಗಿ ಉಪವಾಸ ಬಿದ್ದಿರುವುದಾಗಲಿ ಬಾಯಾರಿರುವುದಾಗಲಿ ಇಲ್ಲ. ಬದಲಿಗೆ, ನಮ್ಮ ಕುರುಬನಾದ ಯೆಹೋವನು ನಮ್ಮನ್ನು ಐಕ್ಯದಲ್ಲಿ ಒಂದಾಗಿರಿಸಿದ್ದಾನೆ ಮತ್ತು ನಮ್ಮನ್ನು ಒಳ್ಳೇದಾಗಿ ಪರಾಮರಿಸಿದ್ದಾನೆ.—ಕೀರ್ತನೆ 23:1-3.
ನಾಲಗೆಯನ್ನು ಸರಿಯಾಗಿ ಉಪಯೋಗಿಸಿರಿ
9. ಐಕ್ಯವನ್ನು ಪ್ರವರ್ಧಿಸಲು ನಾಲಗೆಯನ್ನು ಹೇಗೆ ಉಪಯೋಗಿಸಸಾಧ್ಯವಿದೆ?
9 ಇತರರನ್ನು ಪ್ರೋತ್ಸಾಹಿಸಲು ನಾಲಗೆಯನ್ನು ಉಪಯೋಗಿಸುವುದು, ಐಕ್ಯವನ್ನು ಮತ್ತು ಸಹೋದರತ್ವದ ಆತ್ಮವನ್ನು ಪ್ರವರ್ಧಿಸುವ ಒಂದು ಪ್ರಾಮುಖ್ಯ ವಿಧವಾಗಿದೆ. ಒಂದನೆಯ ಶತಮಾನದ ಆಡಳಿತ ಮಂಡಳಿಯಿಂದ ಕಳುಹಿಸಲ್ಪಟ್ಟಂತೆ, ಸುನ್ನತಿಯ ಕುರಿತ ಒಂದು ಸಮಸ್ಯೆಯನ್ನು ಬಗೆಹರಿಸಿದ ಆ ಪತ್ರವು, ಪ್ರೋತ್ಸಾಹನೆಯ ಒಂದು ಮೂಲವಾಗಿತ್ತು. ಅದನ್ನು ಓದಿದ ಬಳಿಕ, ಅಂತಿಯೋಕ್ಯದಲ್ಲಿದ್ದ ಅನ್ಯ ಶಿಷ್ಯರು “ಅದರಿಂದ ಧೈರ್ಯತಂದುಕೊಂಡು [“ಉತ್ತೇಜನಕ್ಕಾಗಿ,” NW] ಸಂತೋಷಪಟ್ಟರು.” ಯೆರೂಸಲೇಮಿನಿಂದ ಆ ಪತ್ರದೊಂದಿಗೆ ಕಳುಹಿಸಲ್ಪಟ್ಟ ಯೂದ ಮತ್ತು ಸೀಲರು “ಸಹೋದರರನ್ನು ಅನೇಕ ಮಾತುಗಳಿಂದ ಪ್ರಬೋಧಿಸಿ ದೃಢಪಡಿಸಿದರು.” ಪೌಲ ಮತ್ತು ಬಾರ್ನಬರ ಉಪಸ್ಥಿತಿಯು ಅಂತಿಯೋಕ್ಯದಲ್ಲಿದ್ದ ಜೊತೆ ವಿಶ್ವಾಸಿಗಳನ್ನು ಸಹ ಉತ್ತೇಜಿಸಿ, ಬಲಪಡಿಸಿತೆಂಬುದು ನಿಸ್ಸಂಶಯ. (ಅ. ಕೃತ್ಯಗಳು 15:1-3, 23-32) ನಾವು ಕ್ರೈಸ್ತ ಕೂಟಗಳಿಗಾಗಿ ಕೂಡಿಬರುವಾಗ ಮತ್ತು ನಮ್ಮ ಹಾಜರಿ ಹಾಗೂ ಭಕ್ತಿವರ್ಧಕ ಹೇಳಿಕೆಗಳ ಮೂಲಕ ‘ಒಬ್ಬರನ್ನೊಬ್ಬರು ಪ್ರೋತ್ಸಾಹಿಸು’ವಾಗ ಬಹುಮಟ್ಟಿಗೆ ಇದನ್ನೇ ಮಾಡಬಲ್ಲೆವು.—ಇಬ್ರಿಯ 10:24, 25.
10. ಹೀನಾಮಾನವಾದ ಬಯ್ಯುವಿಕೆಯು ಸಂಭವಿಸುವಲ್ಲಿ, ಐಕ್ಯವನ್ನು ಕಾಪಾಡಲಿಕ್ಕಾಗಿ ಏನು ಮಾಡಬೇಕಾದೀತು?
10 ಹಾಗಿದ್ದರೂ, ನಾಲಗೆಯ ದುರುಪಯೋಗವು ನಮ್ಮ ಐಕ್ಯವನ್ನು ಬೆದರಿಸಬಲ್ಲದು. “ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ,” ಎಂದು ಬರೆದನು ಶಿಷ್ಯನಾದ ಯಾಕೋಬನು. “ಎಷ್ಟು ಕೊಂಚ ಕಿಚ್ಚು ಎಷ್ಟು ದೊಡ್ಡ ಕಾಡನ್ನು ಉರಿಸುತ್ತದೆ ನೋಡಿರಿ.” (ಯಾಕೋಬ 3:5, 6ಎ) ಜಗಳಗಳನ್ನು ಬಿತ್ತುವವರನ್ನು ಯೆಹೋವನು ಹೇಸುತ್ತಾನೆ. (ಜ್ಞಾನೋಕ್ತಿ 6:16-19) ಅಂತಹ ಮಾತು ಅನೈಕ್ಯವನ್ನು ಉಂಟುಮಾಡಬಲ್ಲದು. ಹಾಗಾದರೆ, ಹೀನಾಮಾನವಾಗಿ ಬಯ್ಯುವಿಕೆ ಅಂದರೆ, ಒಬ್ಬನ ಮೇಲೆ ಬೈಗಳನ್ನು ಸುರಿಯುತ್ತಾ ಮಾತಾಡುವುದು ಅಥವಾ ಅವನನ್ನು ಅಥವಾ ಅವಳನ್ನು ಮಾತುಗಳಿಂದ ಅಪಮಾನಕ್ಕೆ ಗುರಿಪಡಿಸುವುದು ಇರುವಲ್ಲಿ ಆಗೇನು? ಆ ತಪ್ಪಿತಸ್ಥನಿಗೆ ಸಹಾಯಮಾಡಲು ಹಿರಿಯರು ಪ್ರಯತ್ನಿಸುವರು. ಆದರೂ ಪಶ್ಚಾತ್ತಾಪ ಪಡದ ಬೈಯುವವನನ್ನು, ಸಭೆಯ ಶಾಂತಿ, ಕ್ರಮಬದ್ಧತೆ ಮತ್ತು ಐಕ್ಯವನ್ನು ಕಾಪಾಡಿಕೊಳ್ಳಲಿಕ್ಕಾಗಿ ಬಹಿಷ್ಕರಿಸಬೇಕು. ಎಷ್ಟೆಂದರೂ, ಪೌಲನು ಬರೆದುದು: “ಕ್ರೈಸ್ತಸಹೋದರನೆನಿಸಿಕೊಂಡವನು . . . ಬೈಯುವವನಾದರೂ . . . ಆಗಿದ್ದ ಪಕ್ಷದಲ್ಲಿ ಅವನ ಸಹವಾಸ ಮಾಡಬಾರದು, ಅಂಥವನ ಸಂಗಡ ಊಟಮಾಡಲೂ ಬಾರದು.”—1 ಕೊರಿಂಥ 5:11.
11. ನಾವು ಹೇಳಿದ ಯಾವುದೊ ಒಂದು ವಿಷಯವು ನಮ್ಮ ಮತ್ತು ಒಬ್ಬ ಜೊತೆ ವಿಶ್ವಾಸಿಯ ನಡುವೆ ಮನಸ್ತಾಪವನ್ನು ಉಂಟುಮಾಡಿದಲ್ಲಿ, ನಮ್ರತೆಯು ಏಕೆ ಪ್ರಾಮುಖ್ಯ?
11 ನಾಲಗೆಯನ್ನು ಹತೋಟಿಯಲ್ಲಿಡುವುದು ಐಕ್ಯವನ್ನು ಕಾಪಾಡಲು ನಮಗೆ ನೆರವಾಗುತ್ತದೆ. (ಯಾಕೋಬ 3:10-18) ಆದರೆ ನಾವು ಹೇಳಿರುವ ಯಾವುದೋ ಒಂದು ವಿಷಯವು ನಮ್ಮ ಮತ್ತು ಒಬ್ಬ ಜೊತೆ ಕ್ರೈಸ್ತನ ನಡುವೆ ಮನಸ್ತಾಪವನ್ನು ಉಂಟುಮಾಡಿದೆ ಎಂದು ಎಣಿಸೋಣ. ಅವಶ್ಯವಿದ್ದಲ್ಲಿ ಕ್ಷಮೆಯಾಚಿಸುತ್ತಾ, ನಮ್ಮ ಸಹೋದರನೊಂದಿಗೆ ಸಮಾಧಾನವಾಗುವುದರಲ್ಲಿ ಮೊದಲಹೆಜ್ಜೆಯನ್ನು ತೆಗೆದುಕೊಳ್ಳುವುದು ಸೂಕ್ತವಾಗಿರದೆ? (ಮತ್ತಾಯ 5:23, 24) ಇದು ನಮ್ರತೆ ಅಥವಾ ದೀನ ಮನಸ್ಸನ್ನು ಅವಶ್ಯಪಡಿಸುತ್ತದೆ ನಿಜ, ಆದರೆ ಪೇತ್ರನು ಬರೆದುದು: “ನೀವೆಲ್ಲರೂ ದೀನಮನಸ್ಸೆಂಬ ವಸ್ತ್ರದಿಂದ ಸೊಂಟಾಕಟ್ಟಿಕೊಂಡು ಒಬ್ಬರಿಗೊಬ್ಬರು ಸೇವೆಮಾಡಿರಿ. ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.” (1 ಪೇತ್ರ 5:5) ನಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಸೂಕ್ತವಾದ ಕ್ಷಮಾಯಾಚನೆಯನ್ನು ಮಾಡುತ್ತಾ, ನಮ್ಮ ಸಹೋದರರೊಂದಿಗೆ ‘ಸಮಾಧಾನವನ್ನು ಬೆನ್ನಟ್ಟಲು’ ನಮ್ರತೆಯು ನಮ್ಮನ್ನು ಪ್ರೇರಿಸುವುದು. ಯೆಹೋವನ ಕುಟುಂಬದ ಐಕ್ಯವನ್ನು ಕಾಪಾಡಲು ಇದು ಸಹಾಯಮಾಡುತ್ತದೆ.—1 ಪೇತ್ರ 3:10, 11.
12. ಯೆಹೋವನ ಜನರ ಐಕ್ಯವನ್ನು ಪ್ರವರ್ಧಿಸಲು ಮತ್ತು ಕಾಪಾಡಲು ನಾವು ನಮ್ಮ ನಾಲಗೆಯನ್ನು ಹೇಗೆ ಉಪಯೋಗಿಸಬಲ್ಲೆವು?
12 ನಾವು ನಮ್ಮ ನಾಲಗೆಯನ್ನು ಸರಿಯಾಗಿ ಉಪಯೋಗಿಸುವುದಾದರೆ, ಯೆಹೋವನ ಸಂಸ್ಥೆಯಲ್ಲಿರುವವರ ನಡುವೆ ಕೌಟುಂಬಿಕ ಆತ್ಮವನ್ನು ನಾವು ಮತ್ತೂ ಹೆಚ್ಚಿಸಬಲ್ಲೆವು. ಪೌಲನು ಅದನ್ನೇ ಮಾಡಿದುದರಿಂದ, ಥೆಸಲೊನೀಕದವರಿಗೆ ಅವನು ಇದನ್ನು ಜ್ಞಾಪಿಸಲು ಶಕ್ತನಾಗಿದ್ದನು: “ತಂದೆಯು ತನ್ನ ಮಕ್ಕಳಿಗೆ ಹೇಗೋ ಹಾಗೆಯೇ ನಾವು ನಿಮ್ಮಲ್ಲಿ ಪ್ರತಿಯೊಬ್ಬನಿಗೆ ಬುದ್ಧಿಹೇಳುತ್ತಾ ಧೈರ್ಯಪಡಿಸುತ್ತಾ ತನ್ನ ರಾಜ್ಯಪ್ರಭಾವಗಳಲ್ಲಿ ಪಾಲುಗಾರರಾಗುವದಕ್ಕೆ ಕರೆಯುವ ದೇವರಿಗೆ ಯೋಗ್ಯರಾಗಿ ನೀವು ನಡೆಯಬೇಕೆಂದು ಖಂಡಿತವಾಗಿ ಹೇಳುತ್ತಾ ಇದ್ದೆವೆಂಬದು ನಿಮಗೇ ತಿಳಿದದೆ.” (1 ಥೆಸಲೊನೀಕ 2:11, 12) ಈ ವಿಷಯದಲ್ಲಿ ಒಂದು ಒಳ್ಳೆಯ ಮಾದರಿಯನ್ನು ಇಟ್ಟವನಾಗಿ, ಪೌಲನು ಜೊತೆ ಕ್ರೈಸ್ತರನ್ನು, “ಮನಗುಂದಿದವರನ್ನು ಧೈರ್ಯಪಡಿಸಿರಿ” ಎಂದು ಪ್ರೇರಿಸಶಕ್ತನಾಗಿದ್ದನು. (1 ಥೆಸಲೊನೀಕ 5:14) ಇತರರನ್ನು ಸಂತೈಸಲು, ಪ್ರೋತ್ಸಾಹಿಸಲು, ಮತ್ತು ಭಕ್ತಿವೃದ್ಧಿಮಾಡಲು ನಾವು ನಮ್ಮ ನಾಲಗೆಯನ್ನು ಬಳಸುವ ಮೂಲಕ ಎಷ್ಟು ಒಳಿತನ್ನು ಮಾಡಬಲ್ಲೆವೆಂದು ಯೋಚಿಸಿರಿ. ಹೌದು, “ಸಮಯೋಚಿತವಾದ ವಚನದಲ್ಲಿ ಎಷ್ಟೋ ಸ್ವಾರಸ್ಯ!” (ಜ್ಞಾನೋಕ್ತಿ 15:23) ಅಷ್ಟಲ್ಲದೆ, ಅಂತಹ ಮಾತು ಯೆಹೋವನ ಜನರ ಐಕ್ಯವನ್ನು ಪ್ರವರ್ಧಿಸಲು ಮತ್ತು ಕಾಪಾಡಲು ಸಹಾಯಮಾಡುತ್ತದೆ.
ಕ್ಷಮಿಸುವವರಾಗಿರಿ!
13. ನಾವು ಕ್ಷಮಿಸುವವರಾಗಿರಬೇಕು ಏಕೆ?
13 ನಾವು ಕ್ರೈಸ್ತ ಐಕ್ಯವನ್ನು ಕಾಪಾಡಿಕೊಳ್ಳಬೇಕಾದರೆ, ಕ್ಷಮೆಯಾಚಿಸಿರುವ ಒಬ್ಬ ತಪ್ಪಿತಸ್ಥನನ್ನು ಕ್ಷಮಿಸುವುದು ಅತ್ಯಾವಶ್ಯಕವಾಗಿದೆ. ಮತ್ತು ನಾವು ಎಷ್ಟು ಸಾರಿ ಕ್ಷಮಿಸಬೇಕು? ಯೇಸು ಪೇತ್ರನಿಗೆ ಹೇಳಿದುದು: “ಏಳು ಸಾರಿ ಎಂದಲ್ಲ, ಏಳೆಪ್ಪತ್ತು ಸಾರಿ.” (ಮತ್ತಾಯ 18:22) ನಾವು ಕ್ಷಮಿಸದೆ ಇರುವುದಾದರೆ, ನಾವು ನಮಗೆ ಪ್ರಯೋಜನವನ್ನು ಮಾಡಿಕೊಳ್ಳುವುದಿಲ್ಲ. ಅದು ಹೇಗೆ? ಒಳ್ಳೇದು, ದ್ವೇಷೋದ್ರೇಕವನ್ನು ಮತ್ತು ಒಂದು ಹಗೆಯನ್ನು ಮನಸ್ಸಿನಲ್ಲಿ ಪೋಷಿಸುವುದು ನಮ್ಮ ಮನಶ್ಶಾಂತಿಯನ್ನು ಅಪಹರಿಸುವುದು. ಮತ್ತು ಕ್ರೂರವಾದ ಹಾಗೂ ಕ್ಷಮಿಸದಿರುವ ವಿಧಾನಗಳಿಗಾಗಿ ನಾವು ಖ್ಯಾತರಾಗುವುದಾದರೆ, ನಾವು ನಮ್ಮ ಮೇಲೆ ಬೇರೆಯವರಿಂದ ಬಹಿಷ್ಕಾರವನ್ನು ಬರಮಾಡಿಯೇವು. (ಜ್ಞಾನೋಕ್ತಿ 11:17) ಮನಸ್ಸಿನಲ್ಲಿ ಹಗೆಯನ್ನು ಇಟ್ಟುಕೊಳ್ಳುವುದು ದೇವರಿಗೆ ಮೆಚ್ಚಿಕೆಯಾಗಿರುವುದಿಲ್ಲ ಮತ್ತು ಅದು ಗಂಭೀರವಾದ ಪಾಪಕ್ಕೆ ನಡಿಸಬಲ್ಲದು. (ಯಾಜಕಕಾಂಡ 19:18) ಸ್ನಾನಿಕನಾದ ಯೋಹಾನನ ಮೇಲೆ “ದ್ವೇಷವಿಟ್ಟುಕೊಂಡ” ದುಷ್ಟೆ ಹೆರೋದ್ಯಳಿಂದ ಹೂಡಲ್ಪಟ್ಟ ಒಳಸಂಚಿನಲ್ಲಿ, ಸ್ನಾನಿಕನಾದ ಯೋಹಾನನ ತಲೆಕೊಯ್ಯಲ್ಪಟ್ಟಿತೆಂಬುದನ್ನು ನೆನಪಿಸಿಕೊಳ್ಳಿರಿ.—ಮಾರ್ಕ 6:19-28.
14. (ಎ) ಕ್ಷಮಾಪಣೆಯ ಕುರಿತು ಮತ್ತಾಯ 6:14, 15 ನಮಗೆ ಏನನ್ನು ಕಲಿಸುತ್ತದೆ? (ಬಿ) ಯಾರನ್ನಾದರೂ ಕ್ಷಮಿಸುವ ಮುಂಚೆ ಯಾವಾಗಲೂ ಒಂದು ಕ್ಷಮಾಯಾಚನೆಗಾಗಿ ನಾವು ಕಾಯಬೇಕೊ?
14 ಯೇಸುವಿನ ಮಾದರಿ ಪ್ರಾರ್ಥನೆಯು ಈ ಮಾತುಗಳನ್ನು ಒಳಗೊಳ್ಳುತ್ತದೆ: “ನಮಗೆ ತಪ್ಪುಮಾಡಿರುವ ಪ್ರತಿಯೊಬ್ಬನನ್ನು ನಾವು ಕ್ಷಮಿಸುತ್ತೇವಾದ್ದರಿಂದ ನಮ್ಮ ಪಾಪಗಳನ್ನು ಕ್ಷಮಿಸು.” (ಲೂಕ 11:4) ನಾವು ಕ್ಷಮಿಸದೆ ಇರುವವರಾದರೆ, ಒಂದಾನೊಂದು ದಿನ ಯೆಹೋವ ದೇವರು ನಮ್ಮ ಪಾಪಗಳನ್ನು ಇನ್ನು ಮುಂದೆ ಕ್ಷಮಿಸದೆ ಇರುವ ಗಂಡಾಂತರಕ್ಕೆ ನಾವು ಒಳಗಾದೇವು, ಯಾಕಂದರೆ ಯೇಸು ಹೇಳಿದ್ದು: “ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷಮಿಸುವನು. ಆದರೆ ನೀವು ಜನರ ತಪ್ಪುಗಳನ್ನು ಕ್ಷಮಿಸದೆ ಹೋದರೆ ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವದಿಲ್ಲ.” (ಮತ್ತಾಯ 6:14, 15) ಆದುದರಿಂದ ಯೆಹೋವನ ಆರಾಧಕರ ಕುಟುಂಬದಲ್ಲಿ ಐಕ್ಯವನ್ನು ಕಾಪಾಡುವುದರಲ್ಲಿ ನಾವು ನಮ್ಮ ಪಾಲನ್ನು ನಿಜವಾಗಿ ಮಾಡಬಯಸುವುದಾದರೆ, ದುರ್ಲಕ್ಷ್ಯದಿಂದಾಗಿ ಮತ್ತು ಯಾವುದೇ ಕೆಟ್ಟ ಉದ್ದೇಶವಿರದೆ ಮಾಡಲ್ಪಟ್ಟ ಒಂದು ತಪ್ಪನ್ನು, ಪ್ರಾಯಶಃ ಕೇವಲ ಮರೆತುಬಿಡುತ್ತಾ, ನಾವು ಕ್ಷಮಿಸುವವರಾಗಿರುವೆವು. ಪೌಲನು ಅಂದದ್ದು: “ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.” (ಕೊಲೊಸ್ಸೆ 3:13) ನಾವು ಕ್ಷಮಿಸುವವರಾಗಿರುವಾಗ, ಯೆಹೋವನ ಸಂಸ್ಥೆಯ ಅಮೂಲ್ಯವಾದ ಐಕ್ಯವನ್ನು ಕಾಪಾಡಲು ನಾವು ಸಹಾಯಮಾಡುತ್ತೇವೆ.
ಐಕ್ಯ ಮತ್ತು ವೈಯಕ್ತಿಕ ನಿರ್ಣಯಗಳು
15. ವೈಯಕ್ತಿಕ ನಿರ್ಣಯಗಳನ್ನು ಮಾಡುವಾಗ ಐಕ್ಯವನ್ನು ಕಾಪಾಡಲು ಯೆಹೋವನ ಜನರಿಗೆ ಯಾವುದು ಸಹಾಯಮಾಡುತ್ತದೆ?
15 ವೈಯಕ್ತಿಕ ನಿರ್ಣಯಗಳನ್ನು ಮಾಡುವ ಸುಯೋಗ ಮತ್ತು ಜವಾಬ್ದಾರಿಯೊಂದಿಗೆ, ದೇವರು ನಮ್ಮನ್ನು ಸ್ವತಂತ್ರ ನೈತಿಕ ಕಾರ್ಯಸ್ಥರಾಗಿ ನಿರ್ಮಿಸಿದನು. (ಧರ್ಮೋಪದೇಶಕಾಂಡ 30:19, 20; ಗಲಾತ್ಯ 6:5) ಆದರೂ, ನಾವು ನಮ್ಮ ಐಕ್ಯವನ್ನು ಕಾಪಾಡಿಕೊಳ್ಳಶಕ್ತರಾಗಿದ್ದೇವೆ ಯಾಕಂದರೆ ಬೈಬಲ್ ನಿಯಮಗಳನ್ನು ಮತ್ತು ಮೂಲತತ್ವಗಳನ್ನು ನಾವು ಪಾಲಿಸುತ್ತೇವೆ. ವೈಯಕ್ತಿಕ ನಿರ್ಣಯಗಳನ್ನು ಮಾಡುವಾಗ ನಾವು ಅವುಗಳನ್ನು ಪರಿಗಣನೆಗೆ ತರುತ್ತೇವೆ. (ಅ. ಕೃತ್ಯಗಳು 5:29; 1 ಯೋಹಾನ 5:3) ತಾಟಸ್ಥ್ಯದ ಕುರಿತು ಒಂದು ಪ್ರಶ್ನೆಯೇಳುತ್ತದೆ ಎಂದು ಎಣಿಸೋಣ. ನಾವು ‘ಈ ಲೋಕದ ಭಾಗವಾಗಿಲ್ಲ,’ ಮತ್ತು ನಾವು ‘ಕತ್ತಿಗಳನ್ನು ಕುಲುಮೆಗೆ ಹಾಕಿ ಗುಳಗಳನ್ನಾಗಿ’ ಮಾಡಿದ್ದೇವೆಂದು ಜ್ಞಾಪಿಸಿಕೊಳ್ಳುವ ಮೂಲಕ ಒಂದು ತಿಳಿವಳಿಕೆಯುಳ್ಳ ವೈಯಕ್ತಿಕ ನಿರ್ಣಯವನ್ನು ನಾವು ಮಾಡಬಲ್ಲೆವು. (ಯೋಹಾನ 17:16; ಯೆಶಾಯ 2:2-4) ತದ್ರೀತಿಯಲ್ಲಿ, ರಾಜ್ಯಕ್ಕೆ ನಮ್ಮ ಸಂಬಂಧದ ಕುರಿತು ಒಂದು ವೈಯಕ್ತಿಕ ನಿರ್ಣಯವನ್ನು ನಾವು ಮಾಡಬೇಕಾದಾಗ, ಐಹಿಕ ವಿಷಯಗಳಲ್ಲಿ “ಮೇಲಧಿಕಾರಿಗಳಿಗೆ” ನಾವು ನಮ್ಮನ್ನು ಅಧೀನಪಡಿಸಿಕೊಳ್ಳುತ್ತೇವಾದರೂ, “ದೇವರದನ್ನು ದೇವರಿಗೆ” ಸಲ್ಲಿಸುವ ವಿಷಯವಾಗಿ ಬೈಬಲು ಹೇಳುವುದನ್ನು ನಾವು ಪರಿಗಣನೆಗೆ ತರುತ್ತೇವೆ. (ಲೂಕ 20:25; ರೋಮಾಪುರ 13:1-7; ತೀತ 3:1, 2) ಹೌದು, ವೈಯಕ್ತಿಕ ನಿರ್ಣಯಗಳನ್ನು ಮಾಡುವಾಗ ಬೈಬಲ್ ನಿಯಮಗಳನ್ನು ಮತ್ತು ಮೂಲತತ್ವಗಳನ್ನು ಗಣನೆಗೆ ತರುವುದು, ನಮ್ಮ ಕ್ರಿಸ್ತೀಯ ಐಕ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
16. ಶಾಸ್ತ್ರೀಯವಾಗಿ ಸರಿಯೂ ಅಲ್ಲ ತಪ್ಪೂ ಅಲ್ಲದಿರುವ ನಿರ್ಣಯಗಳನ್ನು ಮಾಡುವಾಗ, ಐಕ್ಯವನ್ನು ಕಾಪಾಡಲು ನಾವು ಹೇಗೆ ಸಹಾಯಮಾಡಬಲ್ಲೆವು? ದೃಷ್ಟಾಂತಿಸಿರಿ.
16 ಪೂರ್ತಿ ವೈಯಕ್ತಿಕವಾದ ಮತ್ತು ಬೈಬಲ್ ನಿಯಮ ಅಥವಾ ಮೂಲತತ್ವವನ್ನು ಒಳಗೊಳ್ಳದ ಒಂದು ನಿರ್ಣಯವನ್ನು ಮಾಡುವಾಗಲೂ ಕ್ರಿಸ್ತೀಯ ಐಕ್ಯವನ್ನು ಕಾಪಾಡಿಕೊಳ್ಳಲು ನಾವು ಸಹಾಯಮಾಡಬಲ್ಲೆವು. ಅದು ಹೇಗೆ? ನಮ್ಮ ನಿರ್ಣಯದಿಂದ ಬಾಧಿತರಾಗಬಹುದಾದ ಇತರರಿಗೆ ಪ್ರೀತಿಪರ ಆಸ್ಥೆಯನ್ನು ತೋರಿಸುವ ಮೂಲಕವೇ. ದೃಷ್ಟಾಂತ: ಪುರಾತನ ಕೊರಿಂಥದಲ್ಲಿದ್ದ ಸಭೆಯಲ್ಲಿ, ವಿಗ್ರಹಕ್ಕೆ ನೈವೇದ್ಯಮಾಡಲ್ಪಟ್ಟ ಮಾಂಸದ ಕುರಿತು ಒಂದು ಸಮಸ್ಯೆಯು ತಲೆದೋರಿತು. ನಿಶ್ಚಯವಾಗಿಯೂ ಒಬ್ಬ ಕ್ರೈಸ್ತನು, ವಿಗ್ರಹಾರಾಧನಾ ಸಂಸ್ಕಾರಗಳಲ್ಲಿ ಭಾಗವಹಿಸುವುದಿಲ್ಲ. ಆದರೂ, ಸಾರ್ವಜನಿಕ ಮಾರುಕಟ್ಟೆಯಲ್ಲಿ ಮಾರಲ್ಪಟ್ಟ, ಸರಿಯಾಗಿ ರಕ್ತ ಬಸಿದು ತೆಗೆದ ಈ ರೀತಿಯ ಮಾಂಸವನ್ನು ತಿನ್ನುವುದು ಪಾಪವಾಗಿರಲಿಲ್ಲ. (ಅ. ಕೃತ್ಯಗಳು 15:28, 29; 1 ಕೊರಿಂಥ 10:25) ಆದರೂ, ಈ ಮಾಂಸವನ್ನು ತಿನ್ನುವ ವಿಷಯದಲ್ಲಿ ಕೆಲವು ಕ್ರೈಸ್ತರ ಮನಸ್ಸಾಕ್ಷಿಗಳು ತೊಂದರೆಗೊಳಗಾದವು. ಆದುದರಿಂದ ಅವರನ್ನು ಎಡವುವುದರಿಂದ ದೂರವಿರುವಂತೆ ಇತರ ಕ್ರೈಸ್ತರನ್ನು ಪೌಲನು ಪ್ರಚೋದಿಸಿದನು. ವಾಸ್ತವವಾಗಿ ಅವನು ಬರೆದುದು: “ಭೋಜನಪದಾರ್ಥದಿಂದ ನನ್ನ ಸಹೋದರನಿಗೆ ವಿಘ್ನವಾಗುವದಾದರೆ ನಾನು ಎಂದಿಗೂ ಮಾಂಸವನ್ನು ತಿನ್ನುವದಿಲ್ಲ; ನಾನು ನನ್ನ ಸಹೋದರನಿಗೆ ವಿಘ್ನವನ್ನುಂಟುಮಾಡಬಾರದಲ್ಲಾ.” (1 ಕೊರಿಂಥ 8:13) ಹೀಗೆ ಬೈಬಲಿನ ಯಾವ ನಿಯಮವಾಗಲಿ ಮೂಲತತ್ವವಾಗಲಿ ಒಳಗೊಳ್ಳದೆ ಇದ್ದರೂ, ದೇವರ ಕುಟುಂಬದ ಐಕ್ಯವನ್ನು ಬಾಧಿಸಸಾಧ್ಯವಿರುವ ವೈಯಕ್ತಿಕ ನಿರ್ಣಯಗಳನ್ನು ಮಾಡುವಾಗ, ಇತರರನ್ನು ಪರಿಗಣನೆಗೆ ತಂದುಕೊಳ್ಳುವುದು ಎಷ್ಟು ಪ್ರೀತಿಪರವಾಗಿದೆ!
17. ವೈಯಕ್ತಿಕ ನಿರ್ಣಯಗಳನ್ನು ನಾವು ಮಾಡಲೇಬೇಕಾದಾಗ, ಏನು ಮಾಡುವುದು ಉಚಿತವಾಗಿದೆ?
17 ಯಾವ ಮಾರ್ಗವನ್ನು ತೆಗೆದುಕೊಳ್ಳಬೇಕೆಂಬುದರ ಬಗ್ಗೆ ನಮಗೆ ನಿಶ್ಚಯತೆಯು ಇಲ್ಲದಿರುವುದಾದರೆ, ಒಂದು ಶುದ್ಧ ಮನಸ್ಸಾಕ್ಷಿಯನ್ನು ಉಳಿಸಿಕೊಳ್ಳುವ ಒಂದು ರೀತಿಯಲ್ಲಿ ನಿರ್ಣಯವನ್ನು ಮಾಡುವುದು ವಿವೇಕಯುತವಾಗಿದೆ, ಮತ್ತು ಇತರರು ನಮ್ಮ ನಿರ್ಣಯವನ್ನು ಗೌರವಿಸತಕ್ಕದು. (ರೋಮಾಪುರ 14:10-12) ನಿಶ್ಚಯವಾಗಿ, ನಾವೊಂದು ವೈಯಕ್ತಿಕ ನಿರ್ಣಯವನ್ನು ಮಾಡಬೇಕಾದಾಗ, ಯೆಹೋವನ ಮಾರ್ಗದರ್ಶನವನ್ನು ಪ್ರಾರ್ಥನೆಯಲ್ಲಿ ನಾವು ಕೋರಬೇಕು. ಕೀರ್ತನೆಗಾರನಂತೆ, ನಾವು ಭರವಸೆಯಿಂದ ಪ್ರಾರ್ಥಿಸಬಲ್ಲೆವು: “ಕಿವಿಗೊಟ್ಟು ಕೇಳಿ ಬೇಗ ನನ್ನನ್ನು ಬಿಡಿಸು. . . . ನೀನೇ ನನ್ನ ಬಂಡೆಯೂ ಕೋಟೆಯೂ ಆಗಿದ್ದೀಯಲ್ಲಾ; ಆದದರಿಂದ ನಿನ್ನ ಹೆಸರಿನ ನಿಮಿತ್ತ ದಾರಿತೋರಿಸಿ ನನ್ನನ್ನು ನಡಿಸು.”—ಕೀರ್ತನೆ 31:2, 3.
ಕ್ರೈಸ್ತ ಐಕ್ಯವನ್ನು ಯಾವಾಗಲೂ ಕಾಪಾಡಿಕೊಳ್ಳಿರಿ
18. ಕ್ರೈಸ್ತ ಸಭೆಯ ಐಕ್ಯವನ್ನು ಪೌಲನು ಹೇಗೆ ದೃಷ್ಟಾಂತಿಸಿದನು?
18 1 ಕೊರಿಂಥ 12ನೆಯ ಅಧ್ಯಾಯದಲ್ಲಿ, ಕ್ರೈಸ್ತ ಸಭೆಯ ಐಕ್ಯವನ್ನು ದೃಷ್ಟಾಂತಿಸಲಿಕ್ಕಾಗಿ ಪೌಲನು ಮನುಷ್ಯ ದೇಹವನ್ನು ಉಪಯೋಗಿಸಿದನು. ಪ್ರತಿಯೊಂದು ಅಂಗದ ಪರಸ್ಪರ ಅವಲಂಬನೆ ಮತ್ತು ಪ್ರಮುಖತೆಯನ್ನು ಅವನು ಒತ್ತಿಹೇಳಿದನು. “ಅವೆಲ್ಲವು ಒಂದೇ ಅಂಗವಾಗಿದ್ದರೆ ದೇಹವೆಲ್ಲಿರುವದು?” ಎಂದು ಕೇಳಿದನು ಪೌಲನು. “ಆದರೆ ಅಂಗಗಳೇನೋ ಅನೇಕ. ದೇಹವು ಒಂದೇ. ಕಣ್ಣು ಕೈಗೆ—ನೀನು ನನಗೆ ಅವಶ್ಯವಿಲ್ಲವೆಂದೂ, ತಲೆಯು ಕಾಲುಗಳಿಗೆ—ನೀವು ನನಗೆ ಅವಶ್ಯವಿಲ್ಲವೆಂದೂ ಹೇಳುವದಕ್ಕಾಗುವದಿಲ್ಲ.” (1 ಕೊರಿಂಥ 12:19-21) ತದ್ರೀತಿಯಲ್ಲಿ, ಯೆಹೋವನ ಕುಟುಂಬದಲ್ಲಿರುವ ನಮ್ಮಲ್ಲಿ ಎಲ್ಲರು ಒಂದೇ ಕೆಲಸವನ್ನು ನಡಸುವದಿಲ್ಲ. ಆದರೂ, ನಾವು ಐಕ್ಯರಾಗಿದ್ದೇವೆ, ಮತ್ತು ನಮಗೆ ಒಬ್ಬರಿಗೊಬ್ಬರ ಅಗತ್ಯವಿದೆ.
19. ದೇವರ ಆತ್ಮಿಕ ಒದಗಿಸುವಿಕೆಗಳಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು, ಮತ್ತು ಈ ಸಂಬಂಧದಲ್ಲಿ ಒಬ್ಬ ವೃದ್ಧ ಸಹೋದರನು ಅಂದದ್ದೇನು?
19 ದೇಹಕ್ಕೆ ಆಹಾರ, ಆರೈಕೆ, ಮತ್ತು ಮಾರ್ಗದರ್ಶನದ ಅಗತ್ಯವಿರುವ ಹಾಗೆ, ದೇವರು ತನ್ನ ವಾಕ್ಯ, ಆತ್ಮ, ಮತ್ತು ಸಂಸ್ಥೆಯ ಮೂಲಕ ಒದಗಿಸುವ ಆತ್ಮಿಕ ಒದಗಿಸುವಿಕೆಗಳು ನಮಗೆ ಬೇಕಾಗಿವೆ. ಈ ಒದಗಿಸುವಿಕೆಗಳಿಂದ ಪ್ರಯೋಜನವನ್ನು ಪಡೆಯಲಿಕ್ಕಾಗಿ, ನಾವು ಯೆಹೋವನ ಭೌಮಿಕ ಕುಟುಂಬದ ಭಾಗವಾಗಿರಬೇಕು. ದೇವರ ಸೇವೆಯಲ್ಲಿ ಅನೇಕ ವರ್ಷಗಳನ್ನು ಕಳೆದ ಅನಂತರ ಒಬ್ಬ ಸಹೋದರನು ಬರೆದುದು: “ಸತ್ಯವು ಅಷ್ಟು ಸ್ಪಷ್ಟವಾಗಿರದೆ ಇದ್ದ 1914ಕ್ಕೆ ತುಸು ಮುಂಚಿನ ಆ ಆರಂಭದ ದಿನಗಳಿಂದ . . . ಸತ್ಯವು ಮಧ್ಯಾಹ್ನದ ಸೂರ್ಯನಂತೆ ಹೊಳೆಯುವ ಈ ದಿನದ ತನಕ, ಯೆಹೋವನ ಉದ್ದೇಶಗಳ ಜ್ಞಾನದಲ್ಲಿ ಜೀವಿಸಿದುದಕ್ಕಾಗಿ ನಾನು ಎಷ್ಟೋ ಕೃತಜ್ಞನು. ನನಗೆ ಒಂದು ವಿಷಯವು ಅತ್ಯಂತ ಮಹತ್ವದ್ದಾಗಿರುವಲ್ಲಿ, ಅದು ಯೆಹೋವನ ದೃಶ್ಯ ಸಂಸ್ಥೆಗೆ ಒತ್ತಾಗಿ ಇರುವುದೇ ಆಗಿದೆ. ಮಾನವ ವಿವೇಚನೆಯ ಮೇಲೆ ಆತುಕೊಂಡಿರುವುದು ಎಷ್ಟು ಅವಿವೇಕವೆಂಬುದಾಗಿ ಆರಂಭದ ನನ್ನ ಅನುಭವ ನನಗೆ ಕಲಿಸಿತು. ಆ ವಿಷಯದ ಮೇಲೆ ನನ್ನ ಮನಸ್ಸು ನಿರ್ಧಾರ ಮಾಡಿದೊಡನೆ, ಆ ನಂಬಿಗಸ್ತ ಸಂಸ್ಥೆಯೊಂದಿಗೆ ಉಳಿಯಲು ನಾನು ದೃಢನಿಶ್ಚಯಮಾಡಿದೆ. ಬೇರೆ ಯಾವ ವಿಧದಲ್ಲಿ ಒಬ್ಬನು ಯೆಹೋವನ ಅನುಗ್ರಹವನ್ನೂ ಆಶೀರ್ವಾದವನ್ನೂ ಪಡೆದುಕೊಳ್ಳಬಲ್ಲನು?”
20. ಯೆಹೋವನ ಜನರೋಪಾದಿ ನಮ್ಮ ಐಕ್ಯದ ಕುರಿತು ಏನನ್ನು ಮಾಡಲು ನಾವು ನಿಶ್ಚಿತರಾಗಿರಬೇಕು?
20 ಲೌಕಿಕವಾದ ಅಂಧಕಾರ ಮತ್ತು ಅನೈಕ್ಯದೊಳಗಿಂದ ಯೆಹೋವನು ತನ್ನ ಜನರನ್ನು ಹೊರಗೆ ಕರೆದಿದ್ದಾನೆ. (1 ಪೇತ್ರ 2:9) ಸ್ವತಃ ತನ್ನೊಂದಿಗೆ ಮತ್ತು ನಮ್ಮ ಜೊತೆ ವಿಶ್ವಾಸಿಗಳೊಂದಿಗೆ ಆಶೀರ್ವದಿತ ಐಕ್ಯದೊಳಗೆ ಆತನು ನಮ್ಮನ್ನು ತಂದಿರುತ್ತಾನೆ. ಈ ಐಕ್ಯವು ಈಗ ಅತಿ ಹತ್ತಿರದಲ್ಲಿರುವ ಹೊಸ ವಿಷಯಗಳ ವ್ಯವಸ್ಥೆಯಲ್ಲಿ ಅಸ್ತಿತ್ವದಲ್ಲಿರುವುದು. ಆದುದರಿಂದ ಈ ಕಠಿನವಾದ ಕಡೇ ದಿವಸಗಳಲ್ಲಿ, ನಾವು ‘ಪ್ರೀತಿಯನ್ನು ಧರಿಸಿಕೊಳ್ಳುವುದನ್ನು’ ಮುಂದುವರಿಸುತ್ತಾ, ನಮ್ಮ ಅಮೂಲ್ಯವಾದ ಐಕ್ಯವನ್ನು ಪ್ರವರ್ಧಿಸಲು ಮತ್ತು ಕಾಪಾಡಲು ನಮಗೆ ಸಾಧ್ಯವಾದುದೆಲ್ಲವನ್ನು ಮಾಡೋಣ.—ಕೊಲೊಸ್ಸೆ 3:14.
ನೀವು ಹೇಗೆ ಉತ್ತರಿಸುವಿರಿ?
▫ ದೇವರ ಚಿತ್ತವನ್ನು ಮಾಡುವುದು ಮತ್ತು ಸತ್ಯವನ್ನು ಬಿಗಿಯಾಗಿ ಹಿಡಿದುಕೊಳ್ಳುವುದು ಐಕ್ಯವನ್ನು ಕಾಪಾಡಲು ನಮಗೆ ಹೇಗೆ ಸಹಾಯಮಾಡಬಲ್ಲದು?
▫ ಐಕ್ಯವು ನಾಲಗೆಯ ಯೋಗ್ಯ ಉಪಯೋಗಕ್ಕೆ ಹೇಗೆ ಸಂಬಂಧಿಸುತ್ತದೆ?
▫ ಕ್ಷಮಿಸುವವರಾಗಿರುವುದರಲ್ಲಿ ಯಾವುದು ಒಳಗೊಂಡಿದೆ?
▫ ವೈಯಕ್ತಿಕ ನಿರ್ಣಯಗಳನ್ನು ಮಾಡುವಾಗ ನಾವು ಐಕ್ಯವನ್ನು ಹೇಗೆ ಕಾಪಾಡಬಲ್ಲೆವು?
▫ ಕ್ರೈಸ್ತ ಐಕ್ಯವನ್ನು ಯಾಕೆ ಕಾಪಾಡಬೇಕು?
[ಪುಟ 16 ರಲ್ಲಿರುವ ಚಿತ್ರ]
ಈ ಕುರುಬನು ತನ್ನ ಹಿಂಡನ್ನು ಒಟ್ಟಿಗೆ ಇಟ್ಟುಕೊಳ್ಳುವಂತೆಯೇ ಯೆಹೋವನು ತನ್ನ ಜನರನ್ನು ಐಕ್ಯವಾಗಿಡುತ್ತಾನೆ
[ಪುಟ 18 ರಲ್ಲಿರುವ ಚಿತ್ರಗಳು]
ನಾವು ತಪ್ಪನ್ನು ಮಾಡುವಾಗ, ನಮ್ರತೆಯಿಂದ ಕ್ಷಮೆಯಾಚಿಸುವ ಮೂಲಕ ನಾವು ಐಕ್ಯವನ್ನು ಪ್ರವರ್ಧಿಸಲು ಸಹಾಯ ಮಾಡುತ್ತೇವೆ