ಇಕ್ಕಟ್ಟಿನ ಸಮಯಗಳಲ್ಲಿ ಯೆಹೋವನಲ್ಲಿ ಪೂರ್ಣ ಭರವಸೆಯನ್ನು ಇಡಿರಿ
“ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷಸಹಾಯಕನು.”—ಕೀರ್ತನೆ 46:1.
1, 2. (ಎ) ನಾವು ದೇವರಲ್ಲಿ ಭರವಸೆಯಿಡುತ್ತೇವೆ ಎಂದು ಹೇಳುವುದು ಮಾತ್ರ ಸಾಲದು ಎಂಬುದನ್ನು ಯಾವ ಉದಾಹರಣೆಯು ತೋರಿಸಿಕೊಡುತ್ತದೆ? (ಬಿ) ನಾವು ಯೆಹೋವನಲ್ಲಿ ಭರವಸೆಯಿಡುತ್ತೇವೆ ಎಂದು ಹೇಳುವುದಕ್ಕಿಂತ ಹೆಚ್ಚಿನದ್ದನ್ನು ಮಾಡಬೇಕು ಏಕೆ?
ದೇವರಲ್ಲಿ ಭರವಸೆಯಿಡುತ್ತೇವೆ ಎಂದು ಹೇಳುವುದು ಸುಲಭ, ಆದರೆ ಅದನ್ನು ನಮ್ಮ ಕ್ರಿಯೆಗಳಲ್ಲಿ ತೋರಿಸುವುದು ಸುಲಭಸಾಧ್ಯವಲ್ಲ. ಉದಾಹರಣೆಗೆ, “ದೇವರಲ್ಲಿ ಭರವಸೆಯಿಡುತ್ತೇವೆ” ಎಂಬ ಅಭಿವ್ಯಕ್ತಿಯು ದೀರ್ಘ ಕಾಲದಿಂದಲೂ ಅಮೆರಿಕದ ನೋಟುಗಳು ಮತ್ತು ನಾಣ್ಯಗಳ ಮೇಲೆ ಕಂಡುಬಂದಿದೆ.a ಈ ಅಭಿವ್ಯಕ್ತಿಯು ಅಮೆರಿಕದ ರಾಷ್ಟ್ರೀಯ ಧ್ಯೇಯಮಂತ್ರವಾಗಿದೆಯೆಂದು 1956ರಲ್ಲಿ ಅಮೆರಿಕದ ಶಾಸನಸಭೆಯು ಘೋಷಿಸಿತು. ಆದರೆ ವ್ಯಂಗ್ಯಾತ್ಮಕವಾಗಿ, ಕೇವಲ ಆ ದೇಶದಲ್ಲಿ ಮಾತ್ರವಲ್ಲ ಲೋಕದಾದ್ಯಂತವಿರುವ ಅನೇಕ ಜನರು ದೇವರಲ್ಲಿ ಭರವಸವಿಡುವುದಕ್ಕಿಂತಲೂ ಹೆಚ್ಚಾಗಿ ಹಣ ಮತ್ತು ಪ್ರಾಪಂಚಿಕ ಐಶ್ವರ್ಯದಲ್ಲಿ ಭರವಸೆ ಇಡುತ್ತಾರೆ.—ಲೂಕ 12:16-21.
2 ಸತ್ಯ ಕ್ರೈಸ್ತರಾಗಿರುವ ನಾವು, ಯೆಹೋವನಲ್ಲಿ ಭರವಸೆಯಿಡುತ್ತೇವೆಂದು ಹೇಳುವುದಕ್ಕಿಂತಲೂ ಹೆಚ್ಚಿನದ್ದನ್ನು ಮಾಡಬೇಕಾಗಿದೆ. ಹೇಗೆ ‘ಕ್ರಿಯೆಗಳಿಲ್ಲದ ನಂಬಿಕೆಯು ಸತ್ತದ್ದಾಗಿದೆಯೋ’ ಹಾಗೆಯೇ ನಾವು ದೇವರಲ್ಲಿ ಭರವಸೆಯಿಡುತ್ತೇವೆ ಎಂಬ ಮಾತು ನಮ್ಮ ಕೃತ್ಯಗಳಲ್ಲಿ ತೋರಿಬರದಿದ್ದಲ್ಲಿ ಅದು ಅರ್ಥಹೀನವಾಗಿರುವುದು. (ಯಾಕೋಬ 2:26) ಯೆಹೋವನಲ್ಲಿರುವ ನಮ್ಮ ಭರವಸೆಯು ನಾವು ಪ್ರಾರ್ಥನೆಯಲ್ಲಿ ಆತನ ಕಡೆಗೆ ತಿರುಗುವಾಗ, ಆತನ ವಾಕ್ಯದಲ್ಲಿ ನಿರ್ದೇಶನಕ್ಕಾಗಿ ಹುಡುಕುವಾಗ, ಮತ್ತು ಮಾರ್ಗದರ್ಶನಕ್ಕಾಗಿ ಆತನ ಸಂಸ್ಥೆಯ ಕಡೆಗೆ ನೋಡುವಾಗ ಪ್ರತ್ಯಕ್ಷವಾಗುತ್ತದೆ ಎಂಬುದನ್ನು ನಾವು ಹಿಂದಿನ ಲೇಖನದಲ್ಲಿ ತಿಳಿದುಕೊಂಡೆವು. ಈ ಮೂರೂ ಹೆಜ್ಜೆಗಳನ್ನು ಇಕ್ಕಟ್ಟಿನ ಸಮಯಗಳಲ್ಲಿ ಹೇಗೆ ಕಾರ್ಯರೂಪಕ್ಕೆ ಹಾಕಬಹುದು ಎಂಬುದನ್ನು ಈಗ ಪರಿಗಣಿಸೋಣ.
ಒಂದು ಉದ್ಯೋಗವನ್ನು ಕಳೆದುಕೊಂಡಾಗ ಅಥವಾ ವೇತನವು ಕಡಿಮೆಯಾಗಿರುವಾಗ
3. ಈ “ಕಠಿನಕಾಲ”ಗಳಲ್ಲಿ ಯೆಹೋವನ ಸೇವಕರು ಯಾವ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಾರೆ, ಮತ್ತು ದೇವರು ನಮಗೆ ಸಹಾಯವನ್ನು ಒದಗಿಸಲು ಸಿದ್ಧನಿದ್ದಾನೆ ಎಂಬುದು ನಮಗೆ ಹೇಗೆ ಗೊತ್ತು?
3 ಈ “ಕಠಿನಕಾಲ”ಗಳಲ್ಲಿ, ಇತರ ಜನರು ಎದುರಿಸುವ ಆರ್ಥಿಕ ಬಿಕ್ಕಟ್ಟುಗಳನ್ನೇ ಕ್ರೈಸ್ತರಾದ ನಾವೂ ಎದುರಿಸುತ್ತೇವೆ. (2 ತಿಮೊಥೆಯ 3:1) ಆದುದರಿಂದ, ಅನಿರೀಕ್ಷಿತವಾಗಿ ನಾವು ನಮ್ಮ ಕೆಲಸವನ್ನು ಕಳೆದುಕೊಳ್ಳಬಹುದು ಅಥವಾ ಕಡಿಮೆ ವೇತನಕ್ಕಾಗಿ ಅನೇಕ ತಾಸುಗಳ ವರೆಗೆ ಕೆಲಸಮಾಡುವ ನಿರ್ಬಂಧಕ್ಕೊಳಗಾಗಬಹುದು. ಇಂತಹ ಪರಿಸ್ಥಿತಿಗಳ ಕೆಳಗೆ, ನಾವು ನಮ್ಮ ‘ಸ್ವಂತ ಜನರ’ ಆವಶ್ಯಕತೆಗಳನ್ನು ಪೂರೈಸುವುದು ಕೂಡ ಕಷ್ಟಕರವಾಗಬಹುದು. (1 ತಿಮೊಥೆಯ 5:8) ಇಂತಹ ಸಮಯಗಳಲ್ಲಿ ಸರ್ವೋನ್ನತ ದೇವರು ನಮಗೆ ಸಹಾಯಮಾಡಲು ಸಿದ್ಧನಿದ್ದಾನೋ? ಖಂಡಿತವಾಗಿಯೂ! ಈ ವಿಷಯಗಳ ವ್ಯವಸ್ಥೆಯಲ್ಲಿ ನಾವು ಎದುರಿಸುವ ಜೀವನದ ಪ್ರತಿಯೊಂದು ಕಷ್ಟದಿಂದ ಯೆಹೋವನು ನಮ್ಮನ್ನು ರಕ್ಷಿಸುವುದಿಲ್ಲ ನಿಜ. ಆದರೂ, ನಾವು ಆತನಲ್ಲಿ ಭರವಸೆಯಿಡುವುದಾದರೆ, ಕೀರ್ತನೆ 46:1ರ ಮಾತುಗಳು ನಮ್ಮ ವಿಷಯದಲ್ಲಿ ಸತ್ಯವಾಗಿರುವವು: “ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷಸಹಾಯಕನು.” ಆದರೂ, ಹಣಕಾಸಿನ ಬಿಕ್ಕಟ್ಟಿನ ಸಮಯಗಳಲ್ಲಿ ನಾವು ಯೆಹೋವನಲ್ಲಿ ಪೂರ್ಣ ಭರವಸೆಯಿಡುತ್ತೇವೆ ಎಂಬುದನ್ನು ಹೇಗೆ ತೋರಿಸಬಲ್ಲೆವು?
4. ಹಣಕಾಸಿನ ಸಮಸ್ಯೆಗಳನ್ನು ಎದುರಿಸುವಾಗ, ನಾವು ಯಾವುದಕ್ಕಾಗಿ ಪ್ರಾರ್ಥಿಸಬಹುದು, ಮತ್ತು ಈ ರೀತಿಯ ಪ್ರಾರ್ಥನೆಗಳಿಗೆ ಯೆಹೋವನು ಹೇಗೆ ಪ್ರತಿಕ್ರಿಯಿಸುತ್ತಾನೆ?
4 ಯೆಹೋವನಲ್ಲಿ ನಮಗೆ ಭರವಸೆಯಿದೆ ಎಂಬುದನ್ನು ಪ್ರದರ್ಶಿಸಬಲ್ಲ ಒಂದು ವಿಧವು ಪ್ರಾರ್ಥನೆಯಲ್ಲಿ ಆತನ ಕಡೆಗೆ ತಿರುಗುವುದಾಗಿದೆ. ಆದರೆ ನಾವು ಯಾವುದಕ್ಕಾಗಿ ಪ್ರಾರ್ಥಿಸಬಹುದು? ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿರುವಾಗ, ನಮಗೆ ಹಿಂದೆಂದಿಗಿಂತಲೂ ಈಗ ಹೆಚ್ಚಿನ ವ್ಯಾವಹಾರಿಕ ವಿವೇಕದ ಅಗತ್ಯವಿರಬಹುದು. ಆದುದರಿಂದ, ಖಂಡಿತವಾಗಿಯೂ ಅದಕ್ಕಾಗಿ ಪ್ರಾರ್ಥಿಸಿರಿ! ಯೆಹೋವನ ವಾಕ್ಯವು ನಮಗೆ ಆಶ್ವಾಸನೆಯನ್ನು ನೀಡುವುದು: “ನಿಮ್ಮಲ್ಲಿ ಯಾವನಿಗಾದರೂ ಜ್ಞಾನ [“ವಿವೇಕ,” NW] ಕಡಿಮೆಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ.” (ಯಾಕೋಬ 1:5) ಹೌದು, ಒಳ್ಳೆಯ ತೀರ್ಮಾನಗಳು ಮತ್ತು ಸರಿಯಾದ ಆಯ್ಕೆಗಳನ್ನು ಮಾಡುವಂತಾಗಲು ವಿವೇಕವನ್ನು—ಜ್ಞಾನ, ತಿಳಿವಳಿಕೆ, ಮತ್ತು ವಿವೇಚನೆಯನ್ನು ಸದುಪಯೋಗಿಸುವ ಸಾಮರ್ಥ್ಯವನ್ನು—ಯೆಹೋವನಲ್ಲಿ ಕೇಳಿಕೊಳ್ಳಿರಿ. ನಮ್ಮ ಪ್ರೀತಿಪರ ಸ್ವರ್ಗೀಯ ತಂದೆಯು ಅಂಥ ಪ್ರಾರ್ಥನೆಗಳಿಗೆ ತಾನು ಕಿವಿಗೊಡುವೆನೆಂಬ ಆಶ್ವಾಸನೆಯನ್ನು ನಮಗೆ ಕೊಡುತ್ತಾನೆ. ತಮ್ಮ ಪೂರ್ಣ ಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡುವವರ ಮಾರ್ಗಗಳನ್ನು ಆತನು ಸರಾಗಮಾಡಲು ಯಾವಾಗಲೂ ಸಿದ್ಧನಿರುತ್ತಾನೆ.—ಕೀರ್ತನೆ 65:2; ಜ್ಞಾನೋಕ್ತಿ 3:5, 6.
5, 6. (ಎ) ನಾವು ಆರ್ಥಿಕ ಒತ್ತಡಗಳನ್ನು ನಿಭಾಯಿಸಿಕೊಂಡು ಹೋಗಲು ಸಹಾಯಕ್ಕಾಗಿ ದೇವರ ವಾಕ್ಯದ ಕಡೆಗೆ ಏಕೆ ನೋಡಬಹುದು? (ಬಿ) ಒಂದು ಉದ್ಯೋಗವನ್ನು ಕಳೆದುಕೊಂಡಿರುವ ಸನ್ನಿವೇಶದಲ್ಲಿರುವಾಗ, ಚಿಂತೆಯನ್ನು ಕಡಿಮೆಗೊಳಿಸಲಿಕ್ಕಾಗಿ ನಾವೇನು ಮಾಡಬಹುದು?
5 ಯೆಹೋವನಲ್ಲಿ ಭರವಸೆಯಿಡುತ್ತೇವೆ ಎಂಬುದನ್ನು ತೋರಿಸುವ ಮತ್ತೊಂದು ವಿಧವು ಮಾರ್ಗದರ್ಶನಕ್ಕಾಗಿ ದೇವರ ವಾಕ್ಯದ ಕಡೆಗೆ ನೋಡುವುದಾಗಿದೆ. ಬೈಬಲಿನಲ್ಲಿ ಕಂಡುಬರುವ ಆತನ ವಿವೇಕಯುತ ಮರುಜ್ಞಾಪನಗಳು “ತುಂಬ ಭರವಸಾರ್ಹವಾಗಿ” ರುಜುವಾಗಿವೆ. (ಕೀರ್ತನೆ 93:5, NW) ಆ ಪ್ರೇರಿತ ಪುಸ್ತಕದ ಕೊನೆಯ ಅಕ್ಷರವು 1,900 ವರ್ಷಗಳಿಗಿಂತಲೂ ಹಿಂದೆ ಬರೆದು ಮುಗಿಸಲ್ಪಟ್ಟಿರುವುದಾದರೂ, ಅದರಲ್ಲಿ ಆರ್ಥಿಕ ಬಿಕ್ಕಟ್ಟುಗಳನ್ನು ಹೆಚ್ಚು ಉತ್ತಮವಾಗಿ ನಿಭಾಯಿಸಲು ಸಹಾಯಮಾಡಬಲ್ಲ ಭರವಸಾರ್ಹ ಬುದ್ಧಿವಾದ ಮತ್ತು ಗಾಢವಾದ ಒಳನೋಟವಿದೆ. ಬೈಬಲಿನಲ್ಲಿರುವ ವಿವೇಕದ ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ.
6 ವಿವೇಕಿ ರಾಜನಾದ ಸೊಲೊಮೋನನು ಬಹುಸಮಯದ ಹಿಂದೆ ಹೀಗೆ ಹೇಳಿದನು: “ದುಡಿಯುವವನು ಸ್ವಲ್ಪವೇ ಉಣ್ಣಲಿ ಹೆಚ್ಚೇ ಉಣ್ಣಲಿ ಹಾಯಾಗಿ ನಿದ್ರಿಸುವನು; ಐಶ್ವರ್ಯವಂತನ ಸಮೃದ್ಧಿಯೋ ಅವನಿಗೆ ನಿದ್ರೆ ಬರಲೀಸದು.” (ಪ್ರಸಂಗಿ 5:12) ನಮ್ಮ ಬಳಿಯಿರುವ ಭೌತಿಕ ವಸ್ತುಗಳನ್ನು ದುರಸ್ತಿಮಾಡಲು, ಶುಚಿಗೊಳಿಸಲು, ಕಾಪಾಡಲು, ಮತ್ತು ಸಂರಕ್ಷಿಸಲು ಸಮಯ ಮತ್ತು ಹಣ ವ್ಯಯವಾಗುತ್ತದೆ. ಆದುದರಿಂದ ನಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಸನ್ನಿವೇಶವನ್ನು ಎದುರಿಸುವಾಗ, ನಾವು ನಮ್ಮ ಜೀವನಶೈಲಿಯನ್ನು ಮರುಪರಿಶೀಲಿಸಲಿಕ್ಕಾಗಿ ಈ ಅವಕಾಶವನ್ನು ಉಪಯೋಗಿಸಬಹುದು. ನಮ್ಮ ಬಯಕೆಗಳೇನು ಮತ್ತು ಆವಶ್ಯಕತೆಗಳೇನು ಎಂಬುದನ್ನು ನಾವು ಬೇರ್ಪಡಿಸಲು ಪ್ರಯತ್ನಿಸಬಹುದು. ಚಿಂತೆಯನ್ನು ಕಡಿಮೆಗೊಳಿಸಲಿಕ್ಕಾಗಿ, ಕೆಲವು ಬದಲಾವಣೆಗಳನ್ನು ಮಾಡುವುದು ವಿವೇಕಯುತವಾಗಿರುವುದು. ಉದಾಹರಣೆಗೆ, ಪ್ರಾಯಶಃ ಒಂದು ಚಿಕ್ಕ ಮನೆಗೆ ಸ್ಥಳಾಂತರಿಸುವ ಅಥವಾ ಅನಗತ್ಯವಾದ ಸ್ವತ್ತುಗಳನ್ನು ತೆಗೆದುಹಾಕುವ ಮೂಲಕ ನಾವು ನಮ್ಮ ಜೀವನವನ್ನು ಸರಳಗೊಳಿಸಲು ಸಾಧ್ಯವಿದೆಯೋ?—ಮತ್ತಾಯ 6:22.
7, 8. (ಎ) ಅಪರಿಪೂರ್ಣ ಮಾನವರು ಪ್ರಾಪಂಚಿಕ ವಿಷಯಗಳ ಕುರಿತು ಅತಿಯಾಗಿ ಚಿಂತಿಸುವ ಪ್ರವೃತ್ತಿಯುಳ್ಳವರಾಗಿದ್ದಾರೆ ಎಂಬ ಅರಿವು ತನಗಿದೆಯೆಂಬುದನ್ನು ಯೇಸು ಹೇಗೆ ತೋರಿಸಿಕೊಟ್ಟನು? (ಪಾದಟಿಪ್ಪಣಿಯನ್ನೂ ನೋಡಿರಿ.) (ಬಿ) ಅನಾವಶ್ಯಕವಾದ ಚಿಂತೆಯನ್ನು ತಡೆಗಟ್ಟುವುದರ ಬಗ್ಗೆ ಯೇಸು ಯಾವ ವಿವೇಕಯುತ ಬುದ್ಧಿವಾದವನ್ನು ನೀಡಿದನು?
7 ಪರ್ವತ ಪ್ರಸಂಗದಲ್ಲಿ ಯೇಸು ಉಪದೇಶಿಸಿದ್ದು: “ನಮ್ಮ ಪ್ರಾಣಧಾರಣೆಗೆ ಏನು ಊಟಮಾಡಬೇಕು, ಏನು ಕುಡಿಯಬೇಕು, ನಮ್ಮ ದೇಹರಕ್ಷಣೆಗೆ ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ [“ಚಿಂತೆಮಾಡುವುದನ್ನು ನಿಲ್ಲಿಸಿರಿ,” NW].”b (ಮತ್ತಾಯ 6:25) ಅಪರಿಪೂರ್ಣ ಮಾನವರು ಮೂಲಭೂತ ಆವಶ್ಯಕತೆಗಳನ್ನು ಪಡೆದುಕೊಳ್ಳುವುದರ ಕುರಿತು ಸ್ವಾಭಾವಿಕವಾಗಿಯೇ ಚಿಂತೆಮಾಡುತ್ತಾರೆ ಎಂಬುದು ಯೇಸುವಿಗೆ ತಿಳಿದಿತ್ತು. ಹೀಗಿರುವಾಗ ಈ ವಿಷಯಗಳ ಕುರಿತು ನಾವು ‘ಚಿಂತೆಮಾಡುವುದನ್ನು ನಿಲ್ಲಿಸುವುದು’ ಹೇಗೆ? ‘ಮೊದಲು ದೇವರ ರಾಜ್ಯಕ್ಕಾಗಿ ತವಕಪಡಿರಿ’ ಎಂದು ಯೇಸು ಹೇಳಿದನು. ನಾವು ಯಾವುದೇ ಸಮಸ್ಯೆಗಳನ್ನು ಎದುರಿಸಲಿ, ನಮ್ಮ ಜೀವನದಲ್ಲಿ ನಾವು ಯಾವಾಗಲೂ ಯೆಹೋವನ ಆರಾಧನೆಗೆ ಆದ್ಯತೆಯನ್ನು ನೀಡಬೇಕು. ನಾವು ಹೀಗೆ ಮಾಡುವುದಾದರೆ, ನಮ್ಮ ದೈನಂದಿನ ಆವಶ್ಯಕತೆಗಳು ನಮ್ಮ ಸ್ವರ್ಗೀಯ ತಂದೆಯಿಂದ “ದೊರಕುವವು.” ನಮಗೆ ಆವಶ್ಯಕವಾಗಿರುವುದನ್ನು ಆತನು ಹೇಗಾದರೂ ಒದಗಿಸುವನು.—ಮತ್ತಾಯ 6:33.
8 ಯೇಸು ಬುದ್ಧಿವಾದದ ಈ ತುಣುಕನ್ನೂ ನೀಡಿದನು: “ನಾಳಿನ ವಿಷಯವಾಗಿ ಚಿಂತೆ ಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು.” (ಮತ್ತಾಯ 6:34) ನಾಳಿನ ದಿನವು ಏನನ್ನು ತರಬಹುದೋ ಎಂಬುದರ ಬಗ್ಗೆ ನಾವು ವಿಪರೀತವಾಗಿ ಚಿಂತಿಸುವುದು ವಿವೇಕಯುತವಾಗಿರದು. ಒಬ್ಬ ಬೈಬಲ್ ವಿದ್ವಾಂಸನು ಹೇಳಿದ್ದು: “ಭವಿಷ್ಯತ್ತಿನ ಕುರಿತಾದ ನಮ್ಮ ಭೀತಿಗಳು ವಾಸ್ತವಿಕತೆಯೊಂದಿಗೆ ಹೊಂದಿಕೆಯಾಗುವುದು ತೀರ ವಿರಳ.” ನಿಮ್ಮ ಆದ್ಯತೆಗಳ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿರಿ ಮತ್ತು ಆಯಾ ದಿನದ ಬದುಕನ್ನು ಆಯಾ ದಿನವೇ ಬದುಕಿರಿ ಎಂಬ ಬೈಬಲಿನ ಬುದ್ಧಿವಾದವನ್ನು ನಮ್ರತೆಯಿಂದ ಪಾಲಿಸುವುದು ಅನಾವಶ್ಯಕವಾದ ಚಿಂತೆಯನ್ನು ತಡೆಗಟ್ಟಲು ನಮಗೆ ಸಹಾಯಮಾಡುವುದು.—1 ಪೇತ್ರ 5:6, 7.
9. ಆರ್ಥಿಕ ಬಿಕ್ಕಟ್ಟನ್ನು ಎದುರಿಸುವಾಗ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಒದಗಿಸುವ ಪ್ರಕಾಶನಗಳಲ್ಲಿ ನಾವು ಯಾವ ಸಹಾಯವನ್ನು ಕಂಡುಕೊಳ್ಳಬಹುದು?
9 ಆರ್ಥಿಕ ಬಿಕ್ಕಟ್ಟನ್ನು ಎದುರಿಸುವಾಗ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಒದಗಿಸುವ ಪ್ರಕಾಶನಗಳಲ್ಲಿ ಸಹಾಯಕ್ಕಾಗಿ ಹುಡುಕುವ ಮೂಲಕವೂ ನಾವು ಯೆಹೋವನಲ್ಲಿ ಭರವಸೆ ಇಟ್ಟಿದ್ದೇವೆಂಬುದನ್ನು ತೋರಿಸಬಲ್ಲೆವು. (ಮತ್ತಾಯ 24:45) ಆರ್ಥಿಕ ಪಂಥಾಹ್ವಾನಗಳನ್ನು ನಿಭಾಯಿಸಲು ಸಹಾಯಕರವಾದ ಸಲಹೆಸೂಚನೆಗಳನ್ನು ಹೊಂದಿರುವ ಲೇಖನಗಳನ್ನು ಎಚ್ಚರ! ಪತ್ರಿಕೆಯು ಪ್ರಕಾಶಿಸುವುದನ್ನು ನಾವು ಆಗಿಂದಾಗ್ಗೆ ಕಂಡುಕೊಳ್ಳುತ್ತೇವೆ. 1991, ಆಗಸ್ಟ್ 8ರ (ಇಂಗ್ಲಿಷ್) ಸಂಚಿಕೆಯಲ್ಲಿ “ಉದ್ಯೋಗ ನಷ್ಟ—ಪರಿಹಾರಗಳೇನು?” ಎಂಬ ಲೇಖನವು, ನಿರುದ್ಯೋಗವನ್ನು ಎದುರಿಸಿದಾಗ ಆರ್ಥಿಕವಾಗಿಯೂ ಭಾವನಾತ್ಮಕವಾಗಿಯೂ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಅನೇಕರಿಗೆ ಸಹಾಯಮಾಡಿದ ಎಂಟು ಪ್ರಾಯೋಗಿಕ ನಿರ್ದೇಶನಗಳನ್ನು ಪಟ್ಟಿಮಾಡಿತು.c ಆದರೆ ಖಂಡಿತವಾಗಿಯೂ ಈ ರೀತಿಯ ನಿರ್ದೇಶನಗಳು ಹಣದ ನಿಜ ಮೌಲ್ಯದ ಕುರಿತಾದ ಯೋಗ್ಯ ದೃಷ್ಟಿಕೋನದೊಂದಿಗೆ ಸರಿದೂಗಿಸಲ್ಪಡಬೇಕು. ಅದೇ ಸಂಚಿಕೆಯಲ್ಲಿ ತೋರಿಬಂದ “ಹಣಕ್ಕಿಂತಲೂ ಹೆಚ್ಚು ಮುಖ್ಯವಾದ ವಿಷಯ” ಎಂಬ ಲೇಖನದಲ್ಲಿ ಇದರ ಕುರಿತು ಚರ್ಚಿಸಲಾಯಿತು.—ಪ್ರಸಂಗಿ 7:12.
ಆರೋಗ್ಯದ ಸಮಸ್ಯೆಗಳ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿರುವಾಗ
10. ಗಂಭೀರವಾದ ಕಾಯಿಲೆಯನ್ನು ಎದುರಿಸುತ್ತಿರುವಾಗ ಯೆಹೋವನಲ್ಲಿ ಭರವಸೆಯಿಡುವುದು ವ್ಯಾವಹಾರಿಕವಾದದ್ದಾಗಿದೆ ಎಂಬುದನ್ನು ರಾಜ ದಾವೀದನ ಉದಾಹರಣೆಯು ಹೇಗೆ ತೋರಿಸಿಕೊಡುತ್ತದೆ?
10 ಗಂಭೀರವಾದ ಕಾಯಿಲೆಯಿಂದ ಬಾಧಿಸಲ್ಪಟ್ಟಿರುವಾಗ ಯೆಹೋವನಲ್ಲಿ ಭರವಸೆಯಿಡುವುದು ವ್ಯಾವಹಾರಿಕವಾಗಿದೆಯೋ? ಖಂಡಿತವಾಗಿಯೂ ವ್ಯಾವಹಾರಿಕವಾಗಿದೆ! ತನ್ನ ಜನರ ಮಧ್ಯೆಯಿರುವ ಅಸ್ವಸ್ಥರ ವಿಷಯದಲ್ಲಿ ಯೆಹೋವನು ಅನುಭೂತಿ ತೋರಿಸುತ್ತಾನೆ. ಅದಕ್ಕಿಂತಲೂ ಮಿಗಿಲಾಗಿ, ಆತನು ಸಹಾಯಮಾಡಲು ಬಯಸುತ್ತಾನೆ. ಉದಾಹರಣೆಗೆ, ರಾಜ ದಾವೀದನನ್ನು ಪರಿಗಣಿಸಿರಿ. ಪ್ರಾಮಾಣಿಕನಾದ ಒಬ್ಬ ಅಸ್ವಸ್ಥ ವ್ಯಕ್ತಿಯೊಂದಿಗೆ ದೇವರು ಹೇಗೆ ವ್ಯವಹರಿಸುತ್ತಾನೆ ಎಂಬುದರ ಕುರಿತು ಬರೆಯುವಾಗ, ದಾವೀದನು ಸ್ವತಃ ಗಂಭೀರವಾಗಿ ಅಸ್ವಸ್ಥನಾಗಿದ್ದಿರಬಹುದು. ಅವನು ಹೇಳಿದ್ದು: “ಅವನು ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ ಯೆಹೋವನು ಅವನನ್ನು ಉದ್ಧರಿಸುವನು; ಅವನ ರೋಗವನ್ನೆಲ್ಲಾ ಪರಿಹರಿಸಿ ಆರೋಗ್ಯವನ್ನುಂಟುಮಾಡಿದಿಯಲ್ಲಾ.” (ಕೀರ್ತನೆ 41:1, 3, 7, 8) ದೇವರಲ್ಲಿ ದಾವೀದನು ಇಟ್ಟ ಭರವಸೆಯು ಬಲವಾದದ್ದಾಗಿತ್ತು, ಮತ್ತು ಕೊನೆಯಲ್ಲಿ ಅವನು ತನ್ನ ಅಸ್ವಸ್ಥತೆಯಿಂದ ಗುಣಮುಖನಾದನು. ಆದರೂ, ನಾವು ಆರೋಗ್ಯದ ಸಮಸ್ಯೆಗಳ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿರುವಾಗ ದೇವರಲ್ಲಿ ಭರವಸೆಯನ್ನು ಹೇಗೆ ತೋರಿಸಬಲ್ಲೆವು?
11. ಅಸ್ವಸ್ಥತೆಯಿಂದ ಬಾಧಿಸಲ್ಪಟ್ಟಿರುವಾಗ, ನಮ್ಮ ಸ್ವರ್ಗೀಯ ತಂದೆಯಿಂದ ನಾವೇನನ್ನು ಕೇಳಿಕೊಳ್ಳಬಹುದು?
11 ಅಸ್ವಸ್ಥತೆಯಿಂದ ಬಾಧಿಸಲ್ಪಟ್ಟಿರುವಾಗ, ಅದನ್ನು ತಾಳಿಕೊಳ್ಳುವಂತೆ ಯೆಹೋವನಿಗೆ ಪ್ರಾರ್ಥಿಸುವುದು ನಾವು ಆತನಲ್ಲಿ ಭರವಸೆಯಿಟ್ಟಿದ್ದೇವೆ ಎಂಬುದನ್ನು ತೋರಿಸುವ ಒಂದು ವಿಧವಾಗಿದೆ. ನಾವು “ಪ್ರಾಯೋಗಿಕ ವಿವೇಕವನ್ನು” ಉಪಯೋಗಿಸಿ ನಮ್ಮ ಪರಿಸ್ಥಿತಿಗಳು ವಾಸ್ತವಿಕವಾಗಿ ಅನುಮತಿಸುವಷ್ಟರ ಮಟ್ಟಿಗಿನ ಆರೋಗ್ಯವನ್ನು ಪಡೆದುಕೊಳ್ಳುವಂತೆ ನಮಗೆ ಸಹಾಯಮಾಡಬೇಕೆಂದು ನಾವು ಆತನ ಬಳಿ ಕೇಳಬಹುದು. (ಜ್ಞಾನೋಕ್ತಿ 3:21, NW) ಅಸ್ವಸ್ಥತೆಯನ್ನು ನಿಭಾಯಿಸಿಕೊಂಡು ಹೋಗಲು ನಮಗೆ ಸಹಿಷ್ಣುತೆ ಮತ್ತು ತಾಳ್ಮೆಯನ್ನು ಕೊಡುವಂತೆಯೂ ನಾವು ಆತನಲ್ಲಿ ಕೇಳಬಹುದು. ಎಲ್ಲಕ್ಕಿಂತಲೂ ಮಿಗಿಲಾಗಿ, ಏನೇ ಸಂಭವಿಸಲಿ, ನಾವಾತನಿಗೆ ನಂಬಿಗಸ್ತರಾಗಿರಲು ಮತ್ತು ಸಮತೂಕವನ್ನು ಕಾಪಾಡಿಕೊಂಡು ಹೋಗಲು ಬೇಕಾದ ಶಕ್ತಿಯನ್ನು ಒದಗಿಸುತ್ತಾ ನಮ್ಮನ್ನು ಪೋಷಿಸುವಂತೆ ನಾವು ಯೆಹೋವನಲ್ಲಿ ಕೇಳಿಕೊಳ್ಳುವೆವು. (ಫಿಲಿಪ್ಪಿ 4:13) ನಮ್ಮ ಪ್ರಸ್ತುತ ಜೀವನವನ್ನು ರಕ್ಷಿಸಿಕೊಳ್ಳುವುದಕ್ಕಿಂತಲೂ ದೇವರಿಗೆ ನಾವು ತೋರಿಸುವ ಸಮಗ್ರತೆಯನ್ನು ಕಾಪಾಡಿಕೊಳ್ಳುವುದು ಹೆಚ್ಚು ಪ್ರಾಮುಖ್ಯವಾಗಿದೆ. ನಾವು ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವುದಾದರೆ, ಮಹಾ ಪ್ರತಿಫಲದಾತನು ನಿತ್ಯಕ್ಕೂ ಪರಿಪೂರ್ಣ ಜೀವನ ಮತ್ತು ಆರೋಗ್ಯವನ್ನು ಕೊಡುವನು.—ಇಬ್ರಿಯ 11:6.
12. ವೈದ್ಯಕೀಯ ಚಿಕಿತ್ಸೆಯ ವಿಷಯದಲ್ಲಿ ವಿವೇಕಪ್ರದ ತೀರ್ಮಾನಗಳನ್ನು ಮಾಡುವುದರಲ್ಲಿ ಯಾವ ಶಾಸ್ತ್ರೀಯ ಮೂಲತತ್ತ್ವಗಳು ಸಹಾಯಮಾಡುವವು?
12 ಯೆಹೋವನಲ್ಲಿ ನಾವಿಡುವ ಭರವಸೆಯು, ನಾವು ಪ್ರಾಯೋಗಿಕ ಮಾರ್ಗದರ್ಶನಕ್ಕಾಗಿ ಆತನ ವಾಕ್ಯವಾದ ಬೈಬಲಿನಲ್ಲಿ ಹುಡುಕುವಂತೆಯೂ ಮಾಡುತ್ತದೆ. ವೈದ್ಯಕೀಯ ಚಿಕಿತ್ಸೆಯ ವಿಷಯದಲ್ಲಿ ವಿವೇಕಪ್ರದ ತೀರ್ಮಾನಗಳನ್ನು ಮಾಡಲು ನಮಗೆ ಶಾಸ್ತ್ರಗಳಲ್ಲಿನ ಮೂಲತತ್ತ್ವಗಳು ಸಹಾಯಮಾಡುವವು. ಉದಾಹರಣೆಗೆ, ಬೈಬಲು “ಮಾಟ”ದಲ್ಲಿ ತೊಡಗುವುದನ್ನು ಖಂಡಿಸುತ್ತದೆಂಬುದನ್ನು ತಿಳಿದಿರುವ ನಾವು, ಮಾಟಮಂತ್ರವನ್ನು ಒಳಗೊಂಡ ಯಾವುದೇ ರೋಗ ತಪಾಸಣೆ ಅಥವಾ ಚಿಕಿತ್ಸಾ ವಿಧಾನದಿಂದ ದೂರವಿರುವೆವು. (ಗಲಾತ್ಯ 5:19-21; ಧರ್ಮೋಪದೇಶಕಾಂಡ 18:10-12) ಬೈಬಲಿನ ಭರವಸಾರ್ಹ ವಿವೇಕದ ಮತ್ತೊಂದು ಉದಾಹರಣೆಯು ಇಲ್ಲಿದೆ: “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.” (ಜ್ಞಾನೋಕ್ತಿ 14:15) ಆದುದರಿಂದ, ಒಂದು ವೈದ್ಯಕೀಯ ಚಿಕಿತ್ಸೆಗೆ ಒಳಪಡಲಿಕ್ಕಿರುವಾಗ, ನಾವು “ಯಾವ ಮಾತನ್ನಾದರೂ ನಂಬುವ” ಬದಲು ಭರವಸಾರ್ಹ ಮಾಹಿತಿಗಾಗಿ ಹುಡುಕುವುದು ವಿವೇಕಯುತವಾಗಿರುವುದು. ಈ ರೀತಿಯ “ಸ್ವಸ್ಥಚಿತ್ತ”ತೆಯು ನಾವು ವಿಷಯಗಳನ್ನು ಸರಿದೂಗಿಸಿ ನೋಡಿ ತಿಳಿವಳಿಕೆಭರಿತ ತೀರ್ಮಾನವನ್ನು ಮಾಡಲು ನಮಗೆ ಸಹಾಯಮಾಡುವುದು.—ತೀತ 2:12.
13, 14. (ಎ) ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಆರೋಗ್ಯದ ಬಗ್ಗೆ ಯಾವ ಪ್ರಯೋಜನಕಾರಿ ಲೇಖನಗಳು ಆಗಿಂದಾಗ್ಗೆ ಪ್ರಕಾಶಿಸಲ್ಪಟ್ಟಿವೆ? (ಪುಟ 17ರಲ್ಲಿರುವ ಚೌಕವನ್ನು ನೋಡಿರಿ.) (ಬಿ) 2001, ಜನವರಿ 22ರ ಎಚ್ಚರ! ಪತ್ರಿಕೆಯಲ್ಲಿ ದೀರ್ಘಕಾಲಿಕ ಅಸ್ವಸ್ಥತೆಗಳನ್ನು ನಿಭಾಯಿಸುವುದರ ಕುರಿತು ಯಾವ ಬುದ್ಧಿವಾದವು ಕೊಡಲ್ಪಟ್ಟಿತು?
13 ನಂಬಿಗಸ್ತ ಆಳಿನಿಂದ ಒದಗಿಸಲ್ಪಟ್ಟಿರುವ ಪ್ರಕಾಶನಗಳಲ್ಲಿ ಹುಡುಕುವ ಮೂಲಕ ಸಹ ನಾವು ಯೆಹೋವನಲ್ಲಿರುವ ನಮ್ಮ ಭರವಸೆಯನ್ನು ವ್ಯಕ್ತಪಡಿಸಬಹುದು. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಆಗಿಂದಾಗ್ಗೆ ನಿರ್ದಿಷ್ಟವಾದ ಆರೋಗ್ಯ ಸಮಸ್ಯೆಗಳು ಮತ್ತು ಕಾಯಿಲೆಗಳ ವಿಷಯದಲ್ಲಿ ಬೋಧಪ್ರದವಾಗಿರುವಂಥ ಬೇರೆ ಬೇರೆ ಲೇಖನಗಳನ್ನು ಪ್ರಕಾಶಿಸಿವೆ.d ಕೆಲವೊಮ್ಮೆ, ವಿಭಿನ್ನವಾದ ನ್ಯೂನತೆಗಳು, ಅಸ್ವಸ್ಥತೆಗಳು, ಮತ್ತು ನಿರ್ಬಲತೆಗಳನ್ನು ಯಶಸ್ವಿದಾಯಕವಾಗಿ ನಿಭಾಯಿಸಿರುವ ವ್ಯಕ್ತಿಗಳ ಕುರಿತಾದ ಲೇಖನಗಳನ್ನೂ ಈ ಪತ್ರಿಕೆಗಳು ಛಾಪಿಸಿವೆ. ಇದಕ್ಕೆ ಕೂಡಿಸುತ್ತಾ, ದೀರ್ಘಕಾಲಿಕ ಆರೋಗ್ಯದ ಸಮಸ್ಯೆಗಳೊಂದಿಗೆ ಹೇಗೆ ಜೀವಿಸುವುದು ಎಂಬುದರ ಕುರಿತಾದ ಶಾಸ್ತ್ರೀಯ ಸಲಹೆಗಳನ್ನೂ ಪ್ರಾಯೋಗಿಕ ಬುದ್ಧಿವಾದವನ್ನೂ ಈ ಪತ್ರಿಕೆಗಳು ಒದಗಿಸಿವೆ.
14 ಉದಾಹರಣೆಗೆ, 2001, ಜನವರಿ 22ರ ಎಚ್ಚರ! (ಇಂಗ್ಲಿಷ್) ಸಂಚಿಕೆಯು, “ಅಸ್ವಸ್ಥರಿಗೆ ಸಾಂತ್ವನ” ಎಂಬ ಮುಖಪುಟ ಲೇಖನಗಳ ಸರಮಾಲೆಯನ್ನು ಪ್ರಕಾಶಿಸಿತು. ಆ ಲೇಖನಗಳು ಸಹಾಯಕಾರಿ ಬೈಬಲ್ ಮೂಲತತ್ತ್ವಗಳನ್ನು ಮತ್ತು ಹಲವಾರು ವರ್ಷಗಳ ವರೆಗೆ ದುರ್ಬಲಗೊಳಿಸುವ ಅಸ್ವಸ್ಥತೆಗಳೊಂದಿಗೆ ಜೀವಿಸಿರುವ ತಿಳಿವಳಿಕೆಯುಳ್ಳ ವ್ಯಕ್ತಿಗಳೊಂದಿಗೆ ಮಾಡಲ್ಪಟ್ಟ ಸಂದರ್ಶನಗಳಿಂದ ಪಡೆಯಲಾಗಿರುವ ನೇರವಾದ ಮಾಹಿತಿಯನ್ನು ಪ್ರಸ್ತುತಪಡಿಸಿದವು. “ನಿಮ್ಮ ಅನಾರೋಗ್ಯದೊಂದಿಗೆ ಯಶಸ್ವಿಕರವಾಗಿ ಜೀವಿಸುವುದು—ಹೇಗೆ?” ಎಂಬ ಲೇಖನವು ಈ ಕೆಳಗಿನ ಸಲಹೆಯನ್ನು ನೀಡಿತು: ನಿಮ್ಮ ಅಸ್ವಸ್ಥತೆಯ ಬಗ್ಗೆ ನ್ಯಾಯಸಮ್ಮತವಾಗಿ ನಿಮ್ಮಿಂದಾಗುವಷ್ಟು ತಿಳಿದುಕೊಳ್ಳಿರಿ. (ಜ್ಞಾನೋಕ್ತಿ 24:5) ಪ್ರಾಯೋಗಿಕವಾದ ಗುರಿಗಳನ್ನು ಇಡಿರಿ ಮತ್ತು ಇದರಲ್ಲಿ ಇತರರಿಗೆ ಸಹಾಯಮಾಡುವುದೂ ಒಳಗೂಡಿರಬಹುದು, ಆದರೆ ಇತರರು ತಲಪಬಲ್ಲ ಅದೇ ಗುರಿಗಳನ್ನು ನೀವೂ ತಲಪಲು ಸಾಧ್ಯವಿಲ್ಲದೆ ಇರಬಹುದು ಎಂಬುದನ್ನು ಮನಸ್ಸಿನಲ್ಲಿಡಿರಿ. (ಅ. ಕೃತ್ಯಗಳು 20:35; ಗಲಾತ್ಯ 6:4) ನಿಮ್ಮನ್ನು ಇತರರಿಂದ ಪ್ರತ್ಯೇಕಿಸಿಕೊಳ್ಳಬೇಡಿ. (ಜ್ಞಾನೋಕ್ತಿ 18:1) ಇತರರು ನಿಮ್ಮನ್ನು ಭೇಟಿಯಾಗಲು ಬರುವಾಗ, ಅದನ್ನು ಅವರಿಗೆ ಒಂದು ಹಿತಕರ ಅನುಭವವನ್ನಾಗಿ ಮಾಡಿರಿ. (ಜ್ಞಾನೋಕ್ತಿ 17:22) ಎಲ್ಲಕ್ಕಿಂತಲೂ ಮಿಗಿಲಾಗಿ, ಯೆಹೋವನೊಂದಿಗೆ ಮತ್ತು ಸಭೆಯೊಂದಿಗೆ ಆಪ್ತ ಬಂಧವನ್ನು ಕಾಪಾಡಿಕೊಳ್ಳಿರಿ. (ನಹೂಮ 1:7; ರೋಮಾಪುರ 1:11, 12) ಯೆಹೋವನು ತನ್ನ ಸಂಸ್ಥೆಯ ಮೂಲಕ ಕೊಡುವ ಭರವಸಾರ್ಹ ಮಾರ್ಗದರ್ಶನಕ್ಕಾಗಿ ನಾವಾತನಿಗೆ ಕೃತಜ್ಞರಾಗಿಲ್ಲವೋ?
ಒಂದು ಶಾರೀರಿಕ ಬಲಹೀನತೆಯು ಬೆನ್ನುಬಿಡದಿದ್ದಾಗ
15. ಅಪರಿಪೂರ್ಣ ಶರೀರದ ಬಲಹೀನತೆಗಳ ವಿರುದ್ಧ ಹೋರಾಡುವುದರಲ್ಲಿ ಜಯವನ್ನು ಸಾಧಿಸಲು ಅಪೊಸ್ತಲ ಪೌಲನಿಗೆ ಹೇಗೆ ಸಾಧ್ಯವಾಯಿತು, ಮತ್ತು ನಮಗೆ ಯಾವ ಆಶ್ವಾಸನೆಯಿದೆ?
15 “ನನ್ನ ಶರೀರಾಧೀನಸ್ವಭಾವದಲ್ಲಿ ಒಳ್ಳೇದೇನೂ ವಾಸವಾಗಿಲ್ಲ” ಎಂದು ಅಪೊಸ್ತಲ ಪೌಲನು ಬರೆದನು. (ರೋಮಾಪುರ 7:18) ಅಪರಿಪೂರ್ಣ ಶರೀರದ ಆಶೆಗಳು ಮತ್ತು ಬಲಹೀನತೆಗಳ ವಿರುದ್ಧ ಹೋರಾಡುವುದು ಎಷ್ಟು ಕಷ್ಟಕರವೆಂಬುದು ಪೌಲನಿಗೆ ತನ್ನ ಸ್ವಂತ ಅನುಭವದಿಂದ ತಿಳಿದಿತ್ತು. ಆದರೂ, ತಾನು ಅದನ್ನು ಜಯಿಸಬಲ್ಲೆ ಎಂಬ ಭರವಸೆಯೂ ಅವನಿಗಿತ್ತು. (1 ಕೊರಿಂಥ 9:26, 27) ಹೇಗೆ? ಯೆಹೋವನಲ್ಲಿ ಅಚಲವಾದ ಭರವಸೆಯನ್ನಿಡುವ ಮೂಲಕವೇ. ಆದುದರಿಂದಲೇ ಪೌಲನಿಗೆ ಹೀಗೆ ಹೇಳಲು ಸಾಧ್ಯವಾಯಿತು: “ಅಯ್ಯೋ, ನಾನು ಎಂಥ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು! ಇಂಥ ಮರಣಕ್ಕೆ ಒಳಗಾದ ಈ ದೇಹದಿಂದ ನನ್ನನ್ನು ಬಿಡಿಸುವವನು ಯಾರು? ಬಿಡಿಸುವವನು ಇದ್ದಾನೆಂಬದಕ್ಕಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ.” (ರೋಮಾಪುರ 7:24, 25) ನಮ್ಮ ಕುರಿತಾಗಿ ಏನು? ನಮಗೆ ಕೂಡ ಶಾರೀರಿಕ ಬಲಹೀನತೆಗಳ ವಿರುದ್ಧ ಒಂದು ಕದನವಿದೆ. ಈ ರೀತಿಯ ಬಲಹೀನತೆಗಳೊಂದಿಗೆ ನಾವು ಹೆಣಗಾಡುತ್ತಿರುವಾಗ, ನಮ್ಮಿಂದ ಇದನ್ನು ಜಯಿಸಲು ಸಾಧ್ಯವಿಲ್ಲ ಎಂದೆಣಿಸುತ್ತಾ ನಾವು ಭರವಸವನ್ನು ಕಳೆದುಕೊಳ್ಳುವುದು ಸುಲಭ. ಆದರೆ ನಾವು ಕೇವಲ ನಮ್ಮ ಸ್ವಂತ ಶಕ್ತಿಯ ಮೇಲೆ ಆತುಕೊಳ್ಳದೆ ಪೌಲನಂತೆ ಯೆಹೋವನ ಮೇಲೆ ಆತುಕೊಳ್ಳುವುದಾದರೆ ಆತನು ನಮಗೆ ಸಹಾಯವನ್ನು ಒದಗಿಸುವನು.
16. ಒಂದು ಶಾರೀರಿಕ ಬಲಹೀನತೆಯು ನಮ್ಮ ಬೆನ್ನುಬಿಡದಿದ್ದಾಗ, ನಾವು ಯಾವುದಕ್ಕಾಗಿ ಪ್ರಾರ್ಥಿಸಬೇಕು, ಮತ್ತು ನಾವು ಒಂದುವೇಳೆ ಹಿಂದಿನ ಸ್ಥಿತಿಗೆ ಮರಳುವುದಾದರೆ ಆಗೇನು ಮಾಡಬೇಕು?
16 ಒಂದು ಶಾರೀರಿಕ ಬಲಹೀನತೆಯು ನಮ್ಮ ಬೆನ್ನುಬಿಡದಿರುವಾಗ, ಪ್ರಾರ್ಥನೆಯಲ್ಲಿ ಯೆಹೋವನಿಗೆ ಮೊರೆಯಿಡುವ ಮೂಲಕ ನಾವಾತನಲ್ಲಿ ಭರವಸೆಯಿಟ್ಟಿದ್ದೇವೆ ಎಂಬುದನ್ನು ವ್ಯಕ್ತಪಡಿಸಬಲ್ಲೆವು. ನಾವು ಯೆಹೋವನ ಬಳಿ ಆತನ ಪವಿತ್ರಾತ್ಮದ ಸಹಾಯಕ್ಕಾಗಿ ಕೇಳಿಕೊಳ್ಳಬೇಕು, ಅಥವಾ ಬೇಡಿಕೊಳ್ಳಬೇಕು ಕೂಡ. (ಲೂಕ 11:9-13) ನಾವು ದೇವರಾತ್ಮದ ಫಲವಾಗಿರುವ ಶಮೆದಮೆಗಾಗಿ ನಿರ್ದಿಷ್ಟವಾಗಿ ಕೇಳಿಕೊಳ್ಳಬೇಕು. (ಗಲಾತ್ಯ 5:22, 23) ನಾವು ಸ್ವಲ್ಪ ಸಮಯದ ವರೆಗೆ ಒಂದು ಬಲಹೀನತೆಯನ್ನು ನಿಯಂತ್ರಿಸಿಕೊಂಡಿದ್ದು, ಪುನಃ ಹಿಂದಿನ ಸ್ಥಿತಿಗೆ ಮರಳುವುದಾದರೆ ಆಗೇನು ಮಾಡಬೇಕು? ಯಾವುದೇ ಕಾರಣಕ್ಕೂ ನಾವು ಪ್ರಯತ್ನವನ್ನು ಬಿಟ್ಟುಕೊಡಬಾರದು. ನಮ್ಮ ಕರುಣಾಮಯಿ ದೇವರ ಕ್ಷಮಾಪಣೆ ಮತ್ತು ಸಹಾಯಕ್ಕಾಗಿ ಕೋರುತ್ತಾ ಆತನಲ್ಲಿ ವಿನಯದಿಂದ ಪ್ರಾರ್ಥಿಸಲು ನಾವೆಂದಿಗೂ ಬಳಲಿಹೋಗದಿರೋಣ. ಅಪರಾಧಿ ಮನಸ್ಸಾಕ್ಷಿಯಿಂದ ಭಾರವಾಗಿರುವ “ಜಜ್ಜಿಹೋದ” ಮನಸ್ಸನ್ನು ಯೆಹೋವನು ಎಂದಿಗೂ ತಿರಸ್ಕರಿಸುವುದಿಲ್ಲ. (ಕೀರ್ತನೆ 51:17) ನಾವು ಯಥಾರ್ಥ ರೀತಿಯಲ್ಲಿ ಮತ್ತು ಪಶ್ಚಾತ್ತಾಪಭಾವದಿಂದ ಆತನಿಗೆ ಪ್ರಾರ್ಥಿಸುವುದಾದರೆ, ಶೋಧನೆಗಳನ್ನು ಪ್ರತಿರೋಧಿಸುವಂತೆ ಯೆಹೋವನು ನಮಗೆ ಸಹಾಯಮಾಡುವನು.—ಫಿಲಿಪ್ಪಿ 4:6, 7.
17. (ಎ) ನಾವು ಹೋರಾಡುತ್ತಿರುವ ನಿರ್ದಿಷ್ಟವಾದ ಬಲಹೀನತೆಯ ಕುರಿತು ಯೆಹೋವನಿಗೆ ಹೇಗನಿಸುತ್ತದೆ ಎಂಬುದರ ಕುರಿತು ಯೋಚಿಸುವುದು ಏಕೆ ಸಹಾಯಕಾರಿಯಾಗಿದೆ? (ಬಿ) ನಾವು ಮುಂಗೋಪವನ್ನು ನಿಯಂತ್ರಿಸಲು, ನಮ್ಮ ನಾಲಿಗೆಗೆ ಕಡಿವಾಣಹಾಕಲು, ಅಹಿತಕರ ಮನೋರಂಜನೆಯ ಕಡೆಗೆ ಓಲುವ ಪ್ರವೃತ್ತಿಯನ್ನು ಪ್ರತಿರೋಧಿಸಲು ಹೋರಾಡುತ್ತಿರುವಲ್ಲಿ, ಯಾವ ಶಾಸ್ತ್ರವಚನಗಳನ್ನು ಬಾಯಿಪಾಠಮಾಡಿಕೊಳ್ಳಬಹುದು?
17 ನಾವು ಸಹಾಯಕ್ಕಾಗಿ ಯೆಹೋವನ ವಾಕ್ಯದಲ್ಲಿ ಹುಡುಕುವ ಮೂಲಕವೂ ಆತನಲ್ಲಿ ಭರವಸೆಯಿಟ್ಟಿದ್ದೇವೆ ಎಂಬುದನ್ನು ತೋರಿಸಬಲ್ಲೆವು. ಒಂದು ಬೈಬಲ್ ಕನ್ಕಾರ್ಡೆನ್ಸ್ ಅಥವಾ ವರ್ಷದ ಅಂತ್ಯದಲ್ಲಿ ಕಾವಲಿನಬುರುಜುವಿನ ಕೊನೆಯ ಸಂಚಿಕೆಯಲ್ಲಿ ಕಂಡುಬರುವ ವಿಷಯಸೂಚಿಯನ್ನು ಉಪಯೋಗಿಸುತ್ತಾ, ‘ನಾನೀಗ ಹೋರಾಡುತ್ತಿರುವ ಈ ನಿರ್ದಿಷ್ಟ ಬಲಹೀನತೆಯ ಕುರಿತು ಯೆಹೋವನಿಗೆ ಹೇಗನಿಸುತ್ತದೆ?’ ಎಂಬ ಪ್ರಶ್ನೆಗೆ ನಾವು ಉತ್ತರವನ್ನು ಕಂಡುಕೊಳ್ಳಬಲ್ಲೆವು. ಈ ವಿಷಯವನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ ಎಂಬುದರ ಕುರಿತು ಯೋಚಿಸುವುದು, ಆತನನ್ನು ಮೆಚ್ಚಿಸಬೇಕೆಂಬ ನಮ್ಮ ಬಯಕೆಯನ್ನು ಬಲಪಡಿಸುವುದು. ಹೀಗೆ, ಆತನು ಹಗೆಮಾಡುವಂಥದ್ದನ್ನು ನಾವೂ ಹಗೆಮಾಡುವಲ್ಲಿ, ನಮ್ಮ ಆಲೋಚನಾ ರೀತಿಯು ಆತನ ಆಲೋಚನಾ ರೀತಿಯಂತೆ ರೂಪುಗೊಳ್ಳುವುದು. (ಕೀರ್ತನೆ 97:10) ತಾವು ನಿರ್ದಿಷ್ಟವಾಗಿ ಹೋರಾಡುತ್ತಿರುವಂಥ ಬಲಹೀನತೆಗಳಿಗೆ ಅನ್ವಯಿಸುವ ಬೈಬಲ್ ವಚನಗಳನ್ನು ಬಾಯಿಪಾಠಮಾಡಿಕೊಳ್ಳುವುದನ್ನು ಕೆಲವರು ಸಹಾಯಕರವಾಗಿ ಕಂಡುಕೊಂಡಿದ್ದಾರೆ. ನಾವು ಮುಂಗೋಪವನ್ನು ನಿಯಂತ್ರಿಸಲು ಪ್ರಯಾಸಪಡುತ್ತಿದ್ದೇವೋ? ಆಗ ನಾವು, ಜ್ಞಾನೋಕ್ತಿ 14:17 ಮತ್ತು ಎಫೆಸ 4:31ರಂತಹ ವಚನಗಳನ್ನು ಬಾಯಿಪಾಠಮಾಡಿಕೊಳ್ಳಬೇಕು. ನಮ್ಮ ನಾಲಿಗೆಗೆ ಕಡಿವಾಣಹಾಕುವುದು ಕಷ್ಟಕರವೆನಿಸುತ್ತಿದೆಯೋ? ನಾವು ಜ್ಞಾನೋಕ್ತಿ 12:18 ಮತ್ತು ಎಫೆಸ 4:29ರಂತಹ ವಚನಗಳನ್ನು ಕಂಠಪಾಠಮಾಡಿಕೊಳ್ಳಬಹುದು. ಅಹಿತಕರವಾದ ಮನೋರಂಜನೆಯ ಕಡೆಗೆ ನಮ್ಮ ಮನವು ಓಲುತ್ತದೋ? ನಾವು ಎಫೆಸ 5:3 ಮತ್ತು ಕೊಲೊಸ್ಸೆ 3:5ರಂತಹ ವಚನಗಳನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಬಹುದು.
18. ನಮ್ಮ ಬಲಹೀನತೆಯನ್ನು ಜಯಿಸಲಿಕ್ಕಾಗಿ ಹಿರಿಯರ ಬಳಿ ಸಹಾಯವನ್ನು ಕೋರಿಕೊಳ್ಳುವುದರಿಂದ ಮುಜುಗರವು ನಮ್ಮನ್ನು ತಡೆಗಟ್ಟುವಂತೆ ನಾವು ಏಕೆ ಬಿಡಬಾರದು?
18 ಯೆಹೋವನ ಮೇಲಣ ನಮ್ಮ ಆತುಕೊಳ್ಳುವಿಕೆಯನ್ನು ವ್ಯಕ್ತಪಡಿಸುವ ಮತ್ತೊಂದು ವಿಧವು, ಸಭೆಯಲ್ಲಿರುವ ಆತ್ಮನೇಮಿತ ಹಿರಿಯರಿಂದ ಸಹಾಯವನ್ನು ಕೋರಿಕೊಳ್ಳುವುದೇ ಆಗಿದೆ. (ಅ. ಕೃತ್ಯಗಳು 20:28) ವಾಸ್ತವದಲ್ಲಿ, ‘ಮನುಷ್ಯರಲ್ಲಿನ ಈ ದಾನಗಳು’ ತನ್ನ ಕುರಿಗಳನ್ನು ಸಂರಕ್ಷಿಸಲಿಕ್ಕಾಗಿ ಮತ್ತು ಪರಿಪಾಲಿಸಲಿಕ್ಕಾಗಿ ಯೆಹೋವನಿಂದ ಕ್ರಿಸ್ತನ ಮೂಲಕ ಕೊಡಲ್ಪಟ್ಟಿರುವ ಒದಗಿಸುವಿಕೆಯಾಗಿದ್ದಾರೆ. (ಎಫೆಸ 4:7, 8, 11-14) ಒಂದು ಬಲಹೀನತೆಯೊಂದಿಗೆ ಹೋರಾಡುತ್ತಿರುವಾಗ ಸಹಾಯಕ್ಕಾಗಿ ಕೇಳಿಕೊಳ್ಳುವುದು ಸುಲಭವಲ್ಲ ಎಂಬುದು ನಿಜವೇ. ನಮ್ಮ ಕುರಿತು ಹಿರಿಯರು ಕೀಳಾಗಿ ನೆನಸಬಹುದು ಎಂದೆಣಿಸಿ ನಮಗೆ ಮುಜುಗರವಾಗುತ್ತಿರಬಹುದು. ಆದರೆ ಸಹಾಯಕ್ಕಾಗಿ ಕೋರಿಕೊಳ್ಳಲು ನಾವು ತೋರಿಸುವ ಧೈರ್ಯವನ್ನು ಆತ್ಮಿಕವಾಗಿ ಪ್ರೌಢರಾಗಿರುವ ಈ ಪುರುಷರು ಮೆಚ್ಚುವರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಮಾತ್ರವಲ್ಲದೆ, ಹಿಂಡಿನೊಂದಿಗೆ ವ್ಯವಹರಿಸುವುದರಲ್ಲಿ ಹಿರಿಯರು ಯೆಹೋವನಲ್ಲಿರುವ ಗುಣಗಳನ್ನು ಪ್ರತಿಬಿಂಬಿಸಲು ಪ್ರಯತ್ನಿಸುತ್ತಾರೆ. ದೇವರ ವಾಕ್ಯದಿಂದ ಅವರು ಒದಗಿಸುವ ಸಾಂತ್ವನದಾಯಕ, ಪ್ರಾಯೋಗಿಕ ಬುದ್ಧಿವಾದ ಹಾಗೂ ಉಪದೇಶವೇ, ನಮ್ಮ ಬಲಹೀನತೆಯ ಮೇಲೆ ಜಯವನ್ನು ಸಾಧಿಸಬೇಕು ಎಂಬ ನಮ್ಮ ದೃಢಸಂಕಲ್ಪವನ್ನು ಇನ್ನಷ್ಟು ಬಲಪಡಿಸಲು ನಮಗೆ ಯಾವುದು ಅಗತ್ಯವಿದೆಯೋ ಅದಾಗಿರಬಹುದು.—ಯಾಕೋಬ 5:14-16.
19. (ಎ) ಈ ವ್ಯವಸ್ಥೆಯಲ್ಲಿನ ಜೀವನದ ನಿರರ್ಥಕತೆಯನ್ನು ಸೈತಾನನು ಹೇಗೆ ಉಪಯೋಗಿಸಲು ಪ್ರಯತ್ನಿಸುತ್ತಾನೆ? (ಬಿ) ಭರವಸೆಯಲ್ಲಿ ಏನು ಒಳಗೂಡಿದೆ, ಮತ್ತು ನಮ್ಮ ದೃಢಸಂಕಲ್ಪ ಏನಾಗಿರಬೇಕು?
19 ತನಗಿರುವ ಕಾಲವು ಸ್ವಲ್ಪವೆಂದು ಸೈತಾನನಿಗೆ ತಿಳಿದಿದೆ ಎಂಬುದನ್ನು ಎಂದಿಗೂ ಮರೆಯಬೇಡಿರಿ. (ಪ್ರಕಟನೆ 12:12) ನಮ್ಮನ್ನು ನಿರುತ್ತೇಜಿಸಲು ಮತ್ತು ನಮ್ಮ ಪ್ರಯತ್ನವನ್ನು ಬಿಟ್ಟುಕೊಡುವಂತೆ ಮಾಡಲು ಅವನು ಈ ಲೋಕದಲ್ಲಿನ ಜೀವನದ ನಿರರ್ಥಕತೆಯನ್ನು ಉಪಯೋಗಿಸಲು ಬಯಸುತ್ತಾನೆ. ರೋಮಾಪುರ 8:35-39ರಲ್ಲಿ ಏನು ತಿಳಿಸಲ್ಪಟ್ಟಿದೆಯೋ ಅದರಲ್ಲಿ ನಾವು ಪೂರ್ಣ ಭರವಸೆಯನ್ನು ಇಡೋಣ: “ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರು ಯಾರು? ಕಷ್ಟವೋ ಸಂಕಟವೋ ಹಿಂಸೆಯೋ ಅನ್ನವಿಲ್ಲದಿರುವದೋ ವಸ್ತ್ರವಿಲ್ಲದಿರುವದೋ ಗಂಡಾಂತರವೋ ಖಡ್ಗವೋ? . . . ಆದರೆ ನಮ್ಮನ್ನು ಪ್ರೀತಿಸಿದಾತನ ಮೂಲಕವಾಗಿ ನಾವು ಈ ಎಲ್ಲಾ ವಿಷಯಗಳಲ್ಲಿ ಪೂರ್ಣ ಜಯಶಾಲಿಗಳಾಗುತ್ತೇವೆ. ಹೇಗಂದರೆ ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ದುರಾತ್ಮಗಳಾಗಲಿ ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ ಮಹತ್ವಗಳಾಗಲಿ ಮೇಲಣ ಲೋಕವಾಗಲಿ ಕೆಳಗಣ ಲೋಕವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು.” ಯೆಹೋವನಲ್ಲಿನ ಭರವಸೆಯನ್ನು ವ್ಯಕ್ತಪಡಿಸುವ ಎಂತಹ ಹೇಳಿಕೆ ಇದಾಗಿದೆ! ಆದರೂ ಇಂತಹ ಭರವಸೆಯು, ಕೇವಲ ಒಂದು ಅನಿಸಿಕೆಯಾಗಿ ಇರುವುದಕ್ಕಿಂತಲೂ ಹೆಚ್ಚಿನದ್ದನ್ನು ಒಳಗೊಂಡಿದೆ. ಈ ಭರವಸೆಯಲ್ಲಿ ನಾವು ನಮ್ಮ ದೈನಂದಿನ ಜೀವನದಲ್ಲಿ ಮಾಡುವಂಥ ತಿಳಿವಳಿಕೆಭರಿತ ತೀರ್ಮಾನಗಳು ಒಳಗೂಡಿವೆ. ಆದುದರಿಂದ, ಇಕ್ಕಟ್ಟಿನ ಸಮಯಗಳಲ್ಲಿ ಯೆಹೋವನಲ್ಲಿ ಪೂರ್ಣ ಭರವಸೆ ಇಡುವುದನ್ನು ನಾವು ನಮ್ಮ ದೃಢಸಂಕಲ್ಪವಾಗಿ ಮಾಡೋಣ.
[ಪಾದಟಿಪ್ಪಣಿಗಳು]
a ಅಮೆರಿಕದ ನಾಣ್ಯ ಛಾಪಿಸುವ ಕಾರ್ಖಾನೆಗೆ 1861, ನವೆಂಬರ್ 20ರಂದು ಬರೆಯಲ್ಪಟ್ಟ ಪತ್ರದಲ್ಲಿ ಖಜಾನೆಯ ಸೆಕ್ರಿಟರಿ ಸೆಮನ್ ಪಿ. ಚೇಸ್ ಬರೆದುದು: “ಯಾವುದೇ ದೇಶವು ದೇವರ ಬಲವಿಲ್ಲದೆ ಶಕ್ತಿಯುತವಾಗಿರಲಾರದು, ಅಥವಾ ಆತನ ರಕ್ಷಣೆ ಇಲ್ಲದೆ ಸುರಕ್ಷಿತವಾಗಿರಲಾರದು. ದೇವರಲ್ಲಿ ನಮ್ಮ ಜನರಿಗಿರುವ ಭರವಸೆಯು ನಮ್ಮ ರಾಷ್ಟ್ರದ ನಾಣ್ಯಗಳ ಮೇಲೆ ಘೋಷಿಸಲ್ಪಡಬೇಕು.” ಇದರ ಫಲಿತಾಂಶವಾಗಿ, 1864ರಲ್ಲಿ ಪ್ರಥಮ ಬಾರಿಗೆ “ದೇವರಲ್ಲಿ ಭರವಸೆಯಿಡುತ್ತೇವೆ” ಎಂಬ ಧ್ಯೇಯಮಂತ್ರವು, ಚಲಾವಣೆಯಲ್ಲಿದ್ದ ಅಮೆರಿಕದ ಒಂದು ನಾಣ್ಯದ ಮೇಲೆ ತೋರಿಬಂತು.
b ಇಲ್ಲಿ ತಿಳಿಸಲ್ಪಟ್ಟಿರುವ ಚಿಂತೆಯು, “ಜೀವನದ ಎಲ್ಲಾ ಆನಂದವನ್ನು ತೆಗೆದುಬಿಡುವ ಕ್ಲೇಶಭರಿತ ಭಯವಾಗಿದೆ” ಎಂದು ಹೇಳಲಾಗುತ್ತದೆ. ಆದರೆ “ಚಿಂತೆಮಾಡಬೇಡಿರಿ” ಅಥವಾ “ಆತಂಕಗೊಳ್ಳಬೇಡಿರಿ” ಎಂದು ಭಾಷಾಂತರಿಸಲ್ಪಟ್ಟಿರುವ ಅಭಿವ್ಯಕ್ತಿಗಳು, ನಾವು ಚಿಂತೆಮಾಡಲು ಅಥವಾ ಆತಂಕಗೊಳ್ಳಲು ಆರಂಭಿಸಬಾರದು ಎಂಬುದನ್ನು ಅರ್ಥೈಸುತ್ತವೆ. ಆದರೆ ಒಂದು ಕೃತಿಯು ಹೇಳುವುದು: “ಗ್ರೀಕ್ ಕ್ರಿಯಾಪದದ ಧಾತುರೂಪವು ವರ್ತಮಾನಕಾಲದ ಆಜ್ಞಾರ್ಥಕ ಪದವಾಗಿದ್ದು, ಈಗಾಗಲೇ ಮಾಡಲ್ಪಡುತ್ತಿರುವ ಯಾವುದೋ ಒಂದು ಕ್ರಿಯೆಯನ್ನು ನಿಲ್ಲಿಸಲು ಅಪ್ಪಣೆ ನೀಡುವುದನ್ನು ಅರ್ಥೈಸುತ್ತದೆ.”
c ಆ ಎಂಟು ಅಂಶಗಳು ಇಲ್ಲಿವೆ: (1) ಗಾಬರಿಗೊಳ್ಳಬೇಡಿ; (2) ಸಕಾರಾತ್ಮಕವಾಗಿ ಯೋಚಿಸಿರಿ; (3) ಹೊಸ ರೀತಿಯ ಕೆಲಸಗಳಿಗೆ ಒಗ್ಗಿಕೊಳ್ಳಲು ಪ್ರಯತ್ನಿಸಿ; (4) ನಿಮ್ಮ—ಬೇರೆಯವರದ್ದಲ್ಲ—ಆದಾಯಕ್ಕೆ ತಕ್ಕಂತೆ ಜೀವಿಸಿರಿ; (5) ಕ್ರೆಡಿಟ್ ಮೇಲೆ ಖರೀದಿಮಾಡುವ ವಿಷಯದಲ್ಲಿ ಎಚ್ಚರವಾಗಿರಿ; (6) ಕುಟುಂಬವನ್ನು ಐಕ್ಯವಾಗಿರಿಸಿ; (7) ಸ್ವಗೌರವವನ್ನು ಕಾಪಾಡಿಕೊಳ್ಳಿ; ಮತ್ತು (8) ಒಂದು ಬಜಟನ್ನು ಮಾಡಿಕೊಳ್ಳಿ.
d ಯಾವುದೇ ವೈದ್ಯಕೀಯ ಚಿಕಿತ್ಸೆಯನ್ನು ಆರಿಸಿಕೊಳ್ಳುವುದು ಒಂದು ವೈಯಕ್ತಿಕ ತೀರ್ಮಾನವಾಗಿರುವುದರಿಂದ, ಈ ಬೈಬಲ್ ಆಧಾರಿತ ಪತ್ರಿಕೆಗಳು ಯಾವುದೇ ನಿರ್ದಿಷ್ಟ ವೈದ್ಯಕೀಯ ಚಿಕಿತ್ಸೆಗೆ ಶಿಫಾರಸ್ಸು ಮಾಡುವುದಿಲ್ಲ, ಇಲ್ಲವೆ ಬೆಂಬಲ ನೀಡುವುದಿಲ್ಲ. ಬದಲಿಗೆ, ನಿರ್ದಿಷ್ಟ ಕಾಯಿಲೆಗಳು ಮತ್ತು ನ್ಯೂನತೆಗಳ ಕುರಿತು ಚರ್ಚಿಸುವ ಲೇಖನಗಳ ಉದ್ದೇಶವು, ವಾಚಕರಿಗೆ ಅವುಗಳ ಕುರಿತಾಗಿ ಪ್ರಸ್ತುತ ತಿಳಿವಳಿಕೆಯನ್ನು ನೀಡುವುದೇ ಆಗಿದೆ.
ನೀವು ಜ್ಞಾಪಿಸಿಕೊಳ್ಳಬಲ್ಲಿರೋ?
• ಆರ್ಥಿಕ ಸಮಸ್ಯೆಗಳನ್ನು ಎದುರಿಸುವಾಗ, ನಾವು ಯೆಹೋವನಲ್ಲಿ ಭರವಸೆಯಿಡುತ್ತೇವೆ ಎಂಬುದನ್ನು ಯಾವ ವಿಧಗಳಲ್ಲಿ ತೋರಿಸಬಲ್ಲೆವು?
• ಆರೋಗ್ಯ ಸಮಸ್ಯೆಗಳಿಂದ ನಾವು ಇಕ್ಕಟ್ಟಿನಲ್ಲಿರುವಾಗ ನಾವು ದೇವರಲ್ಲಿ ಭರವಸೆಯನ್ನು ಹೇಗೆ ವ್ಯಕ್ತಪಡಿಸಬಲ್ಲೆವು?
• ಒಂದು ಶಾರೀರಿಕ ಬಲಹೀನತೆಯು ಬೆನ್ನುಬಿಡದಿದ್ದಾಗ, ನಾವು ನಿಜವಾಗಿಯೂ ಯೆಹೋವನ ಮೇಲೆ ಆತುಕೊಂಡಿದ್ದೇವೆ ಎಂಬುದನ್ನು ಹೇಗೆ ತೋರಿಸಬಲ್ಲೆವು?
[ಪುಟ 17ರಲ್ಲಿರುವ ಚೌಕ]
ಈ ಲೇಖನಗಳು ನಿಮಗೆ ನೆನಪಿವೆಯೋ?
ನಾವು ಆರೋಗ್ಯದ ಸಮಸ್ಯೆಗಳಿಂದಾಗಿ ಇಕ್ಕಟ್ಟಿನಲ್ಲಿರುವಾಗ, ಅಸ್ವಸ್ಥತೆಗಳು, ಬೇನೆಗಳು ಅಥವಾ ದುರ್ಬಲತೆಗಳೊಂದಿಗೆ ಯಶಸ್ವಿಯಾಗಿ ಹೋರಾಡಿದ ಇತರರ ಕುರಿತು ಓದುವುದು ಉತ್ತೇಜನದಾಯಕವಾಗಿರಲು ಸಾಧ್ಯವಿದೆ. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಪ್ರಕಾಶಿಸಲ್ಪಟ್ಟ ಕೆಲವು ಲೇಖನಗಳು ಈ ಕೆಳಗೆ ಕೊಡಲ್ಪಟ್ಟಿವೆ.
“ಕುರುಡಿಯಾಗಿದ್ದರೂ ಉಪಯುಕ್ತಳು ಹಾಗೂ ಸಂತೋಷಿತಳು.”—ಎಚ್ಚರ!, ಮಾರ್ಚ್ 8, 1999.
“ಆಪತ್ತಿನ ಸಮಯದಲ್ಲಿ ದೇವರ ಮೇಲೆ ಆತುಕೊಳ್ಳಲು ನಾವು ಕಲಿತುಕೊಂಡೆವು” ಎಂಬ ಲೇಖನವು, ಅನೇಕ ಅಸ್ವಸ್ಥತೆಗಳನ್ನು ಎದುರಿಸುತ್ತಿರುವಾಗ ತೋರಿಸಲ್ಪಟ್ಟ ಅಸಾಧಾರಣವಾದ ಭರವಸೆಯ ಕುರಿತು ತಿಳಿಸುತ್ತದೆ—ಎಚ್ಚರ!, ಜನವರಿ 8, 2000.
“ಮೌನದಿಂದಾಚೆಗೆ ಲೊಯ್ಡಳು ಮಾಡಿದ ಪ್ರಯಾಣ” ಎಂಬ ಲೇಖನವು ಮಸ್ತಿಷ್ಕ ಲಕ್ವವನ್ನು ನಿಭಾಯಿಸುವುದರ ಮೇಲೆ ಕೇಂದ್ರೀಕರಿಸಿತು.—ಎಚ್ಚರ!, (ಇಂಗ್ಲಿಷ್) ಮೇ 8, 2000.
“ನಾಳೆ ಏನಾಗುವುದೋ ನಿಮಗೆ ತಿಳಿಯದು” ಎಂಬ ಲೇಖನವು ದ್ವಿಧ್ರುವ ವಿಕೃತಿಯ ಕುರಿತು ಚರ್ಚಿಸಿತು.—ಕಾವಲಿನಬುರುಜು, ಡಿಸೆಂಬರ್ 1, 2000.
“ಜೀವನಪೂರ್ತಿ ಯೆಹೋವನ ಅಭಯಹಸ್ತದ ಕೆಳಗೆ” ಎಂಬ ಲೇಖನವು ಪಾರ್ಶ್ವವಾಯುವಿನ ಕುರಿತು ಚರ್ಚಿಸಿತು.—ಕಾವಲಿನಬುರುಜು, ಮಾರ್ಚ್ 1, 2001.
“ನಮ್ಮ ನಂಬಿಕೆಯು ಶೋಧಿಸಲ್ಪಟ್ಟಾಗ ನಾವು ಒಂಟಿಗರಾಗಿರಲಿಲ್ಲ” ಎಂಬ ಲೇಖನವು ದುಗ್ಧಕಣ ಊತಗೊಂಡ ಲುಕೇಮಿಯದ ವಿರುದ್ಧ ಮಾಡಲಾದ ಹೋರಾಟದ ಕುರಿತು ಮಾತಾಡಿತು.—ಕಾವಲಿನಬುರುಜು, ಏಪ್ರಿಲ್ 15, 2001.
“ನನ್ನ ಅಜಾತ ಮಗುವನ್ನು ಕಳೆದುಕೊಂಡೆ.”—ಎಚ್ಚರ!, ಜುಲೈ-ಸೆಪ್ಟೆಂಬರ್, 2002.
“ಯೆಹೋವನು ನಮಗೆ ತಾಳ್ಮೆಯನ್ನೂ ಪಟ್ಟುಹಿಡಿಯುವಿಕೆಯನ್ನೂ ಕಲಿಸಿದನು.”—ಕಾವಲಿನಬುರುಜು, ಮೇ 1, 2002.
[ಪುಟ 15ರಲ್ಲಿರುವ ಚಿತ್ರ]
ಉದ್ಯೋಗವನ್ನು ಕಳೆದುಕೊಂಡಿರುವ ಸನ್ನಿವೇಶದಲ್ಲಿರುವಾಗ, ನಾವು ನಮ್ಮ ಜೀವನ ಶೈಲಿಯನ್ನು ಮರುಪರಿಶೀಲಿಸುವುದು ವಿವೇಕಯುತವಾಗಿರುವುದು
[ಪುಟ 16ರಲ್ಲಿರುವ ಚಿತ್ರ]
ಲೊಯ್ಡಳ ಕಥೆಯು, ಯೆಹೋವನಲ್ಲಿನ ಭರವಸೆಯು ತಾಳಿಕೊಳ್ಳುವಂತೆ ಹೇಗೆ ಸಹಾಯಮಾಡುತ್ತದೆ ಎಂಬುದನ್ನು ತೋರಿಸುತ್ತದೆ (17ನೇ ಪುಟದಲ್ಲಿರುವ ಚೌಕವನ್ನು ನೋಡಿರಿ)
[ಪುಟ 18ರಲ್ಲಿರುವ ಚಿತ್ರ]
ನಮ್ಮ ಬಲಹೀನತೆಗಳನ್ನು ಜಯಿಸುವುದರಲ್ಲಿ ಸಹಾಯವನ್ನು ಕೋರಲಿಕ್ಕಾಗಿ ನಾವು ಮುಜುಗರಪಡುವ ಅಗತ್ಯವಿಲ್ಲ