ಅಧ್ಯಾಯ 24
ನಮ್ಮನ್ನು ಯಾವುದೂ ‘ದೇವರ ಪ್ರೀತಿಯಿಂದ ಅಗಲಿಸಲಾರದು’
1. ಯಾವ ನಿರಾಶೆಯ ಭಾವನೆಯು ಕೆಲವು ಸತ್ಯ ಕ್ರೈಸ್ತರ ಸಮೇತ ಅನೇಕ ಜನರನ್ನು ಬಾಧಿಸುತ್ತದೆ?
ಯೆಹೋವ ದೇವರು ನಿಮ್ಮನ್ನು ವ್ಯಕ್ತಿಗತವಾಗಿ ಪ್ರೀತಿಸುತ್ತಾನೋ? ಯೋಹಾನ 3:16 ಹೇಳುವ ಪ್ರಕಾರ, ದೇವರು ಇಡೀ ಮಾನವಕುಲವನ್ನು ಒಂದು ಸಮೂಹದೋಪಾದಿ ಪ್ರೀತಿಸುತ್ತಾನೆ ನಿಜ ಎಂದು ಕೆಲವರು ಒಪ್ಪುತ್ತಾರೆ. ಆದರೆ ‘ನನ್ನನ್ನು ವ್ಯಕ್ತಿಶಃ ದೇವರು ಎಂದೂ ಪ್ರೀತಿಸಲಾರನು’ ಎಂದವರು ಕಾರ್ಯತಃ ಭಾವಿಸುತ್ತಾರೆ. ಸತ್ಕ್ರೈಸ್ತರಿಗೂ ಆಗಿಂದಾಗ್ಯೆ ಈ ರೀತಿಯ ಸಂದೇಹಗಳೇಳಬಹುದು. ನಿರಾಶೆಗೊಂಡ ಒಬ್ಬ ವ್ಯಕ್ತಿಯಂದದ್ದು: “ನನ್ನ ಕುರಿತು ದೇವರು ಸ್ವಲ್ಪವಾದರೂ ಚಿಂತಿಸುತ್ತಾನೆಂದು ನಂಬುವುದು ತುಂಬ ಕಷ್ಟಕರ.” ಕೆಲವೊಮ್ಮೆ ಇಂಥ ಸಂದೇಹಗಳು ನಿಮ್ಮನ್ನೂ ಬಾಧಿಸುತ್ತವೋ?
2, 3. ಯೆಹೋವನ ದೃಷ್ಟಿಯಲ್ಲಿ ನಾವು ನಿಷ್ಪ್ರಯೋಜಕರು ಅಥವಾ ಪ್ರೀತಿಸಲ್ಪಡಲು ಯೋಗ್ಯರಲ್ಲ ಎಂದು ನಂಬುವಂತೆ ಯಾರು ಬಯಸುತ್ತಾನೆ, ಮತ್ತು ಆ ಭಾವನೆಯ ವಿರುದ್ಧ ನಾವು ಹೇಗೆ ಹೋರಾಡಬಲ್ಲೆವು?
2 ಯೆಹೋವನು ನಮ್ಮನ್ನು ಪ್ರೀತಿಸುವುದೂ ಇಲ್ಲ ಮತ್ತು ನಮಗೆ ಬೆಲೆಕೊಡುವುದೂ ಇಲ್ಲ ಎಂದು ನಾವು ನಂಬುವಂತೆ ಮಾಡಲು ಸೈತಾನನು ಅತಿ ಉತ್ಸುಕನಾಗಿದ್ದಾನೆ. ಅವನು ಜನರ ಒಣಹೆಮ್ಮೆ ಮತ್ತು ಅಹಂಭಾವವನ್ನು ಕೆರಳಿಸುವ ಮೂಲಕ ಅನೇಕವೇಳೆ ಅವರನ್ನು ದುರ್ಮಾರ್ಗಕ್ಕೆ ಸೆಳೆಯುತ್ತಾನೆಂಬುದು ನಿಜ. (2 ಕೊರಿಂಥ 11:3) ಆದರೆ ದುರ್ಬಲರಾಗಿರುವವರ ಸ್ವಾಭಿಮಾನವನ್ನು ಜಜ್ಜಿಹಾಕುವುದರಲ್ಲಿಯೂ ಅವನು ಸಂತೋಷಪಡುತ್ತಾನೆ. (ಯೋಹಾನ 7:47-49; 8:13, 44) ಇದು ವಿಶೇಷವಾಗಿ ಈ ಕಠಿನವಾದ “ಕಡೇ ದಿವಸಗಳಲ್ಲಿ” ಸತ್ಯವಾಗಿದೆ. ಇಂದು ಅನೇಕರು ಸಹಜವಾದ “ಮಮತೆಯಿಲ್ಲದ” ಕುಟುಂಬಗಳಲ್ಲಿ ಬೆಳೆದು ದೊಡ್ಡವರಾಗುತ್ತಾರೆ. ಇತರರಾದರೊ ಸ್ವಾರ್ಥಿಗಳೂ ಉಗ್ರರೂ ಅಹಂಕಾರಿಗಳೂ ಆದ ಜನರನ್ನು ಸದಾ ಎದುರಾಗುತ್ತಾರೆ. (2 ತಿಮೊಥೆಯ 3:1-5) ಬಹಳ ಸಮಯದಿಂದಲೂ ದುರುಪಚಾರ, ಜಾತೀಯವಾದ, ಅಥವಾ ದ್ವೇಷಕ್ಕೆ ಗುರಿಮಾಡಲ್ಪಟ್ಟಿರುವ ಇವರಲ್ಲಿ, ತಾವು ಪ್ರಯೋಜನವಿಲ್ಲದವರು ಅಥವಾ ತಮ್ಮನ್ನು ಯಾರೂ ಪ್ರೀತಿಸಲಾರರೆಂಬ ವಿಷಯವು ಮನಸ್ಸಿನಲ್ಲಿ ಬಲವಾಗಿ ಬೇರೂರಿಬಿಟ್ಟಿದೆ.
3 ನಿಮ್ಮಲ್ಲಿ ಈ ರೀತಿಯ ನಿರಾಶಾಜನಕ ಭಾವನೆಗಳಿರುವಲ್ಲಿ, ಧೈರ್ಯಗೆಡಬೇಡಿ. ಆಗಿಂದಾಗ್ಗೆ ನಮ್ಮಲ್ಲಿ ಅನೇಕರು ಅನ್ಯಾಯವಾಗಿ ನಮ್ಮನ್ನೇ ಖಂಡಿಸಿಕೊಳ್ಳುತ್ತೇವೆ. ಆದರೆ ದೇವರ ವಾಕ್ಯವು “ತಿದ್ದುಪಾಟಿಗೂ” ಮತ್ತು ಬಲವಾದ “ಕೋಟೆಗಳನ್ನು ಕೆಡವಿ”ಹಾಕಲಿಕ್ಕೂ ರಚಿಸಲ್ಪಟ್ಟಿದೆಯೆಂಬುದನ್ನು ಜ್ಞಾಪಕದಲ್ಲಿಡಿರಿ. (2 ತಿಮೊಥೆಯ 3:16; 2 ಕೊರಿಂಥ 10:4) ಬೈಬಲನ್ನುವುದು: “ನಮ್ಮ ಹೃದಯವು ಯಾವ ವಿಷಯದಲ್ಲಿಯಾದರೂ ನಮ್ಮನ್ನು ದೋಷಿಗಳೆಂದು ನಿರ್ಣಯಿಸಿದರೂ ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನೂ ಬಲ್ಲವನಾಗಿದ್ದಾನೆ.” (1 ಯೋಹಾನ 3:20) ಯೆಹೋವನ ಪ್ರೀತಿಯ ವಿಷಯದಲ್ಲಿ “ನಮ್ಮ ಹೃದಯವನ್ನು ಸಮಾಧಾನ ಪಡಿಸ”ಲಿಕ್ಕಾಗಿ ಶಾಸ್ತ್ರವು ನಮಗೆ ಸಹಾಯ ಕೊಡುವ ನಾಲ್ಕು ವಿಧಾನಗಳನ್ನು ನಾವೀಗ ಪರಿಗಣಿಸೋಣ.
ಯೆಹೋವನಿಗೆ ನೀವು ಅಮೂಲ್ಯರು
4, 5. ಗುಬ್ಬಿಗಳ ಕುರಿತ ಯೇಸುವಿನ ದೃಷ್ಟಾಂತವು ನಾವು ಯೆಹೋವನ ದೃಷ್ಟಿಯಲ್ಲಿ ಅಮೂಲ್ಯರೆಂಬುದನ್ನು ಹೇಗೆ ತೋರಿಸುತ್ತದೆ?
4 ಮೊದಲನೆಯದಾಗಿ, ದೇವರು ತನ್ನ ಸೇವಕರಲ್ಲಿ ಪ್ರತಿಯೊಬ್ಬನನ್ನು ಅಮೂಲ್ಯವಾಗಿ ಕಾಣುತ್ತಾನೆಂದು ಬೈಬಲು ನೇರವಾಗಿ ಕಲಿಸುತ್ತದೆ. ದೃಷ್ಟಾಂತಕ್ಕಾಗಿ, ಯೇಸುವಂದದ್ದು: “ದುಡ್ಡಿಗೆ ಎರಡು ಗುಬ್ಬಿಗಳನ್ನು ಮಾರುವದುಂಟಲ್ಲಾ; ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಒಂದಾದರೂ ನೆಲಕ್ಕೆ ಬೀಳದು. ನಿಮ್ಮ ತಲೇಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಆದದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.” (ಮತ್ತಾಯ 10:29-31) ಒಂದನೆಯ ಶತಮಾನದಲ್ಲಿ ಯೇಸುವಿಗೆ ಕಿವಿಗೊಡುತ್ತಿದ್ದ ಜನರಿಗೆ ಆ ಮಾತುಗಳು ಯಾವ ಅರ್ಥವನ್ನು ಹೊಂದಿದ್ದವೆಂಬುದನ್ನು ಪರಿಗಣಿಸಿರಿ.
5 ಒಂದು ಗುಬ್ಬಿಯನ್ನು ಯಾರಾದರೂ ಯಾಕೆ ಖರೀದಿಸಾರಪ್ಪಾ ಎಂದು ನಾವು ಯೋಚಿಸೇವು. ಯೇಸುವಿನ ದಿನಗಳಲ್ಲಿ ಆಹಾರಕ್ಕಾಗಿ ಮಾರಲ್ಪಡುತ್ತಿದ್ದ ಪಕ್ಷಿಗಳಲ್ಲಿ ಗುಬ್ಬಿಗಳು ತುಂಬ ಅಗ್ಗವಾಗಿದ್ದವು. ಒಂದು ನಾಣ್ಯದಷ್ಟು ಕಡಿಮೆ ಬೆಲೆಗೆ ವ್ಯಕ್ತಿಯೊಬ್ಬನು ಎರಡು ಗುಬ್ಬಿಗಳನ್ನು ಖರೀದಿಸಶಕ್ತನಿದ್ದನು. ಆದರೆ ಒಬ್ಬನು ಎರಡು ನಾಣ್ಯಗಳನ್ನು ಖರ್ಚುಮಾಡಲು ಸಿದ್ಧನಿದ್ದಲ್ಲಿ ಅವನಿಗೆ ನಾಲ್ಕಲ್ಲ, ಐದು ಗುಬ್ಬಿಗಳು ಸಿಗುತ್ತಿದ್ದವು ಎಂದು ಯೇಸು ಅನಂತರ ಹೇಳಿದನು. ಅಧಿಕವಾಗಿ ಕೊಡಲ್ಪಟ್ಟ ಆ ಪಕ್ಷಿಯು ಏನೂ ಬೆಲೆಯಿಲ್ಲದ್ದೋ ಎಂಬಂತೆ ಕೂಡಿಸಲ್ಪಡುತ್ತಿತ್ತು. ಅಂಥ ಪಕ್ಷಿಗಳು ಮನುಷ್ಯರ ದೃಷ್ಟಿಯಲ್ಲಿ ಬೆಲೆಯಿಲ್ಲದವುಗಳು ಆಗಿದ್ದಿರಬಹುದು, ಆದರೆ ಸೃಷ್ಟಿಕರ್ತನು ಅವುಗಳನ್ನು ಹೇಗೆ ವೀಕ್ಷಿಸುತ್ತಿದ್ದನು? ಯೇಸುವಂದದ್ದು: “ಅವುಗಳಲ್ಲಿ ಒಂದಾದರೂ [ಕೂಡಿಸಲ್ಪಟ್ಟ ಆ ಒಂದು ಪಕ್ಷಿ ಸಹ] ದೇವರಿಗೆ ಮರೆತುಹೋಗುವದಿಲ್ಲ.” (ಲೂಕ 12:6, 7) ಈಗ ನಮಗೆ ಯೇಸುವಿನ ತಾತ್ಪರ್ಯವು ತಿಳಿಯಲಾರಂಭಿಸುತ್ತದೆ. ಒಂದೇ ಒಂದು ಗುಬ್ಬಿಗೆ ಯೆಹೋವನು ಅಷ್ಟು ಮಹತ್ವವನ್ನು ಕೊಡುತ್ತಾನಾದರೆ, ಮಾನವರು ಆತನ ದೃಷ್ಟಿಯಲ್ಲಿ ಎಷ್ಟು ಹೆಚ್ಚು ಬೆಲೆಯುಳ್ಳವರಾಗಿರಬೇಕು! ಯೇಸು ವಿವರಿಸಿದ ಪ್ರಕಾರ, ನಮ್ಮ ಕುರಿತು ಒಂದೊಂದು ವಿವರವೂ ಯೆಹೋವನಿಗೆ ತಿಳಿದದೆ. ನಮ್ಮ ತಲೇಕೂದಲುಗಳು ಸಹ ಎಣಿಕೆಯಾಗಿವೆ!
6. ನಮ್ಮ ತಲೇಕೂದಲುಗಳೂ ಎಣಿಕೆಯಾಗಿವೆಯೆಂದು ಯೇಸು ಹೇಳಿದಾಗ ಅವನು ವಾಸ್ತವಿಕ ಸಂಗತಿಯನ್ನೇ ತಿಳಿಸುತ್ತಿದ್ದನೆಂದು ನಮಗೇಕೆ ನಿಶ್ಚಯವಿದೆ?
6 ನಮ್ಮ ತಲೇಕೂದಲುಗಳು ಎಣಿಸಲ್ಪಟ್ಟಿವೆಯೋ? ಈ ವಿಷಯದಲ್ಲಿ ಯೇಸು ವಾಸ್ತವಿಕ ಸಂಗತಿಯನ್ನು ತಿಳಿಸಲಿಲ್ಲವೆಂದು ಕೆಲವರು ಊಹಿಸಾರು. ಆದರೂ ಪುನರುತ್ಥಾನ ನಿರೀಕ್ಷೆಯ ಕುರಿತು ತುಸು ಯೋಚಿಸಿರಿ. ನಮ್ಮನ್ನು ಪುನಃ ನಿರ್ಮಿಸಲಿಕ್ಕೋಸ್ಕರ ಯೆಹೋವನಿಗೆ ನಮ್ಮ ಬಗ್ಗೆ ಎಷ್ಟು ಸೂಕ್ಷ್ಮವಾಗಿ ತಿಳಿದಿರಬೇಕಾಗಿದೆ! ಆತನು ನಮ್ಮನ್ನೆಷ್ಟು ಅಮೂಲ್ಯರಾಗಿ ಕಾಣುತ್ತಾನೆಂದರೆ ನಮ್ಮ ಕುರಿತಾದ ಪ್ರತಿಯೊಂದೂ ವಿವರ, ನಮ್ಮ ತಳಿಶಾಸ್ತ್ರ, ಹಾಗೂ ನಮ್ಮ ಜೀವಮಾನವಿಡೀ ಆದಂಥ ಅನುಭವಗಳೂ ನೆನಪುಗಳೂ ಆತನ ಸ್ಮರಣೆಯಲ್ಲಿವೆ.a ಇದಕ್ಕೆ ಹೋಲಿಸುವಾಗ ಆತನಿಗೆ ನಮ್ಮ ತಲೇಕೂದಲುಗಳನ್ನು ಎಣಿಸುವುದು—ಸರಾಸರಿ ತಲೆಯಲ್ಲಿ ಸುಮಾರು 1,00,000 ಕೂದಲುಗಳಿವೆ—ಏನೂ ಅಲ್ಲ ಎನ್ನಬೇಕು.
ಯೆಹೋವನು ನಮ್ಮಲ್ಲಿ ಏನನ್ನು ಅಮೂಲ್ಯವೆಂದೆಣಿಸುತ್ತಾನೆ?
7, 8. (ಎ) ಮಾನವ ಹೃದಯಗಳನ್ನು ವಿಚಾರಿಸುವಾಗ ಯೆಹೋವನು ಕಾಣಲು ಸಂತೋಷಪಡುವ ಕೆಲವು ಗುಣಗಳಾವುವು? (ಬಿ) ಯೆಹೋವನು ಅಮೂಲ್ಯವೆಂದೆಣಿಸುವ ಯಾವ ಕೆಲವು ಕೆಲಸಗಳನ್ನು ನಾವು ಮಾಡುತ್ತೇವೆ?
7 ಎರಡನೆಯದಾಗಿ, ಯೆಹೋವನು ತನ್ನ ಸೇವಕರಲ್ಲಿ ಯಾವುದನ್ನು ಅಮೂಲ್ಯವೆಂದೆಣಿಸುತ್ತಾನೆಂದು ಬೈಬಲು ನಮಗೆ ಕಲಿಸುತ್ತದೆ. ಸರಳವಾಗಿ ಹೇಳುವುದಾದರೆ, ನಮ್ಮ ಸದ್ಗುಣಗಳಲ್ಲಿ ಮತ್ತು ನಾವು ಮಾಡುವ ಪ್ರಯತ್ನಗಳಲ್ಲಿ ಆತನು ಸಂತೋಷಿಸುತ್ತಾನೆ. ಅರಸ ದಾವೀದನು ತನ್ನ ಮಗನಾದ ಸೊಲೊಮೋನನಿಗೆ ಹೇಳಿದ್ದು: “ಯೆಹೋವನು ಎಲ್ಲಾ ಹೃದಯಗಳನ್ನು ವಿಚಾರಿಸುವವನೂ ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವನೂ ಆಗಿರುತ್ತಾನಲ್ಲಾ.” (1 ಪೂರ್ವಕಾಲವೃತ್ತಾಂತ 28:9) ಈ ಹಿಂಸಾಚಾರದ, ದ್ವೇಷಭರಿತ ಲೋಕದಲ್ಲಿ ಕೋಟ್ಯಂತರ ಮಾನವ ಹೃದಯಗಳನ್ನು ಆತನು ವಿಚಾರಿಸುತ್ತಾ ಹೋಗುವಾಗ, ಶಾಂತಿ, ಸತ್ಯ, ಮತ್ತು ನೀತಿಯನ್ನು ಪ್ರೀತಿಸುವಂಥ ಒಂದು ಹೃದಯವು ಆತನಿಗೆ ಸಿಗುವಾಗ ಆತನೆಷ್ಟು ಹರ್ಷಿಸುತ್ತಿರಬೇಕು! ಆತನಿಗಾಗಿ ಪ್ರೀತಿಯಿಂದ ತುಂಬಿತುಳುಕುವ, ಆತನ ಕುರಿತಾಗಿ ಕಲಿಯಲು ಮತ್ತು ಅಂಥ ಜ್ಞಾನವನ್ನು ಇತರರೊಂದಿಗೆ ಹಂಚಲು ತವಕಪಡುವ ಒಂದು ಹೃದಯವನ್ನು ಆತನು ಕಂಡುಕೊಳ್ಳುವಾಗ ಏನಾಗುತ್ತದೆ? ಯೆಹೋವನು ನಮಗೆ ಹೇಳುವುದೇನಂದರೆ ಯಾರು ಆತನ ಕುರಿತಾಗಿ ಇತರರಿಗೆ ತಿಳಿಯಪಡಿಸುತ್ತಾರೋ ಅವರನ್ನು ಆತನು ಗಮನಿಸುತ್ತಾನೆ. “ತನ್ನ ನಾಮಸ್ಮರಣೆಮಾಡುವವರ ಹೆಸರುಗಳನ್ನು” ಬರೆಯಲು ಆತನಲ್ಲಿ ಒಂದು ‘ಜ್ಞಾಪಕದ ಪುಸ್ತಕವೂ’ ಇದೆ. (ಮಲಾಕಿಯ 3:16) ಅಂಥ ಗುಣಗಳು ಆತನಿಗೆ ಅಮೂಲ್ಯವಾಗಿರುತ್ತವೆ.
8 ಯೆಹೋವನು ಅಮೂಲ್ಯವೆಂದೆಣಿಸುವಂಥ ಕೆಲವು ಸತ್ಕಾರ್ಯಗಳು ಯಾವುವು? ಆತನ ಪುತ್ರನಾದ ಯೇಸು ಕ್ರಿಸ್ತನನ್ನು ಅನುಕರಿಸಲು ನಾವು ಮಾಡುವ ಪ್ರಯತ್ನಗಳೇ ಎಂಬುದಂತೂ ನಿಶ್ಚಯ. (1 ಪೇತ್ರ 2:21) ದೇವರು ಅಮೂಲ್ಯವೆಂದೆಣಿಸುವಂಥ ಒಂದು ಪ್ರಾಮುಖ್ಯ ಕಾರ್ಯವು ಆತನ ರಾಜ್ಯದ ಸುವಾರ್ತೆಯ ಹಬ್ಬಿಸುವಿಕೆ ಆಗಿರುತ್ತದೆ. ರೋಮಾಪುರ 10:15ರಲ್ಲಿ ನಾವು ಓದುವುದು: “ಶುಭದ ಸುವಾರ್ತೆಯನ್ನು ಸಾರುವವರ ಪಾದಗಳು ಎಷ್ಟೋ ಅಂದವಾಗಿವೆ.” ಸಾಮಾನ್ಯವಾಗಿ ನಾವು ನಮ್ಮ ಪಾದಗಳು “ಅಂದ” ಅಥವಾ ಸುಂದರವಾಗಿವೆ ಎಂದು ನೆನಸಲಿಕ್ಕಿಲ್ಲ. ಆದರೆ ಇಲ್ಲಿ ಅವು ಸುವಾರ್ತೆಯನ್ನು ಸಾರುವುದರಲ್ಲಿ ಯೆಹೋವನ ಸೇವಕರು ಮಾಡುವ ಪ್ರಯತ್ನಗಳನ್ನು ಪ್ರತಿನಿಧೀಕರಿಸುತ್ತವೆ. ಅಂಥ ಎಲ್ಲಾ ಪ್ರಯತ್ನಗಳು ಯೆಹೋವನ ದೃಷ್ಟಿಯಲ್ಲಿ ಸುಂದರವೂ ಅಮೂಲ್ಯವೂ ಆಗಿರುತ್ತವೆ.—ಮತ್ತಾಯ 24:14; 28:19, 20.
9, 10. (ಎ) ಹಲವಾರು ವಿಧದ ಕಷ್ಟಗಳ ಎದುರಲ್ಲಿ ನಾವು ತಾಳಿಕೊಳ್ಳುವುದನ್ನು ಯೆಹೋವನು ಅಮೂಲ್ಯವೆಂದೆಣಿಸುತ್ತಾನೆಂಬ ಆಶ್ವಾಸನೆಯು ನಮಗಿರಬಲ್ಲದೇಕೆ? (ಬಿ) ಯೆಹೋವನು ತನ್ನ ನಂಬಿಗಸ್ತ ಸೇವಕರ ಬಗ್ಗೆ ಯಾವ ನಕಾರಾತ್ಮಕ ದೃಷ್ಟಿಕೋನಗಳನ್ನು ಎಂದಿಗೂ ಇಡುವುದಿಲ್ಲ?
9 ನಮ್ಮ ತಾಳ್ಮೆಯನ್ನೂ ಯೆಹೋವನು ಅಮೂಲ್ಯವೆಂದೆಣಿಸುತ್ತಾನೆ. (ಮತ್ತಾಯ 24:13) ನೀವು ಯೆಹೋವನಿಗೆ ಬೆನ್ನುಹಾಕಬೇಕೆಂಬುದೇ ಸೈತಾನನ ಬಯಕೆಯೆಂಬ ವಿಷಯವನ್ನು ನೆನಪಿನಲ್ಲಿಡಿರಿ. ನೀವು ಯೆಹೋವನಿಗೆ ನಿಷ್ಠರಾಗಿರುವ ಪ್ರತಿಯೊಂದು ದಿನವು, ಸೈತಾನನ ದೂರುಗಳಿಗೆ ತಕ್ಕದಾದ ಉತ್ತರವನ್ನು ಕೊಡಲು ನೀವು ಸಹಾಯಮಾಡಿರುವ ದಿನವಾಗಿರುವುದು. (ಜ್ಞಾನೋಕ್ತಿ 27:11) ತಾಳಿಕೊಳ್ಳುವುದು ಕೆಲವೊಮ್ಮೆ ಅಷ್ಟೇನೂ ಸುಲಭಸಾಧ್ಯವಲ್ಲ. ಆರೋಗ್ಯದ ಸಮಸ್ಯೆಗಳು, ಆರ್ಥಿಕ ತಾಪತ್ರಯಗಳು, ಭಾವನಾತ್ಮಕ ಸಂಕಟ, ಮತ್ತು ಇತರ ಅಡ್ಡಿತಡೆಗಳು ಪ್ರತಿಯೊಂದು ದಿನವನ್ನೂ ಕ್ಲೇಶಕರವನ್ನಾಗಿ ಮಾಡಬಲ್ಲದು. ಕೋರಿದ ವಿಷಯಗಳು ಕೈಗೂಡಲು ತಡವಾದಾಗಲೂ ನಿರಾಶೆಯಾಗಬಲ್ಲದು. (ಜ್ಞಾನೋಕ್ತಿ 13:12) ಇಂಥ ಸವಾಲುಗಳ ಮಧ್ಯೆಯೂ ತೋರಿಸಲ್ಪಡುವ ತಾಳ್ಮೆಯು ಯೆಹೋವನಿಗೆ ಇನ್ನಷ್ಟು ಹೆಚ್ಚು ಅಮೂಲ್ಯವಾಗಿರುತ್ತದೆ. ಆದುದರಿಂದಲೇ ರಾಜ ದಾವೀದನು ತನ್ನ ಕಣ್ಣೀರನ್ನು ಒಂದು “ಬುದ್ದಲಿಯಲ್ಲಿ” ತುಂಬಿಸುವಂತೆ ಯೆಹೋವನನ್ನು ಕೇಳಿಕೊಂಡು, ಭರವಸೆಯಿಂದ ಕೂಡಿಸಿ ಹೇಳಿದ್ದು: “ಅದರ ವಿಷಯ ನಿನ್ನ ಪುಸ್ತಕದಲ್ಲಿ ಬರದದೆಯಲ್ಲಾ.” (ಕೀರ್ತನೆ 56:8) ಹೌದು, ಆತನ ಕಡೆಗೆ ನಮ್ಮ ನಿಷ್ಠೆಯನ್ನು ನಾವು ಕಾಪಾಡಿಕೊಳ್ಳುವಾಗ, ನಾವು ಸುರಿಸುವ ಕಣ್ಣೀರನ್ನೂ ತಾಳಿಕೊಳ್ಳುವ ಎಲ್ಲಾ ಕಷ್ಟವನ್ನೂ ಯೆಹೋವನು ಅಮೂಲ್ಯವೆಂದೆಣಿಸುತ್ತಾನೆ ಮತ್ತು ನೆನಪಿಡುತ್ತಾನೆ. ಅವೂ ಆತನ ದೃಷ್ಟಿಯಲ್ಲಿ ಬಹುಮೂಲ್ಯವಾಗಿರುತ್ತವೆ.
10 ಸ್ವಖಂಡನೆಯನ್ನು ಮಾಡಿಕೊಳ್ಳುವ ಹೃದಯವಾದರೋ, ದೇವರ ದೃಷ್ಟಿಯಲ್ಲಿ ನಮಗಿರುವ ಮೌಲ್ಯದ ಅಂಥ ಪುರಾವೆಯನ್ನು ಒಂದುವೇಳೆ ತಿರಸ್ಕರಿಸೀತು. ಅದು ಪುನಃ ಪುನಃ ಹೀಗೆ ಪಿಸುಗುಟ್ಟೀತು: ‘ನನಗಿಂತಲೂ ಹೆಚ್ಚು ಆದರ್ಶಪ್ರಾಯರಾಗಿರುವ ಎಷ್ಟೋ ಮಂದಿ ಇತರರು ಇದ್ದಾರಲ್ಲಾ. ಅವರೊಂದಿಗೆ ನನ್ನನ್ನು ಹೋಲಿಸುವಾಗ ಯೆಹೋವನಿಗೆಷ್ಟು ನಿರಾಶೆಯಾಗುತ್ತಿರಬೇಕು!’ ಆದರೆ ಯೆಹೋವನು ಒಬ್ಬರನ್ನು ಇನ್ನೊಬ್ಬರೊಂದಿಗೆ ಹೋಲಿಸುವುದಿಲ್ಲ; ಇಲ್ಲವೆ ಆತನು ತನ್ನ ಆಲೋಚನೆಯಲ್ಲಿ ನಿಷ್ಠುರನೂ ನಿರ್ದಯನೂ ಅಲ್ಲ. (ಗಲಾತ್ಯ 6:4) ಅತಿ ಸೂಕ್ಷ್ಮವಾಗಿ ಆತನು ನಮ್ಮ ಹೃದಯಗಳನ್ನು ಓದುತ್ತಾನೆ, ಮತ್ತು ಅದರಲ್ಲಿರುವ ಒಳಿತನ್ನು—ಅದು ಅತ್ಯಲ್ಪ ಪ್ರಮಾಣದಲ್ಲಿರುವಾಗಲೂ—ಅಮೂಲ್ಯವೆಂದೆಣಿಸುತ್ತಾನೆ.
ಯೆಹೋವನು ಕೆಟ್ಟದ್ದರಿಂದ ಒಳ್ಳೇದನ್ನು ಶೋಧಿಸಿತೆಗೆಯುತ್ತಾನೆ
11. ಯೆಹೋವನು ಅಬೀಯನ ವಿಷಯವನ್ನು ನಿರ್ವಹಿಸಿದ ರೀತಿಯಿಂದ ನಾವು ಆತನ ಕುರಿತು ಏನನ್ನು ಕಲಿಯಬಹುದು?
11 ಮೂರನೆಯದಾಗಿ, ಯೆಹೋವನು ನಮ್ಮನ್ನು ಸಮಗ್ರವಾಗಿ ಪರೀಕ್ಷೆಮಾಡುವಾಗ, ಆತನು ಒಳ್ಳೇದನ್ನು ಜಾಗರೂಕತೆಯಿಂದ ಹುಡುಕಿ ಶೋಧಿಸಿತೆಗೆಯುತ್ತಾನೆ. ಉದಾಹರಣೆಗೆ, ಅರಸ ಯಾರೊಬ್ಬಾಮನ ಇಡೀ ಧರ್ಮಭ್ರಷ್ಟ ರಾಜವಂಶವು ಸಂಹರಿಸಲ್ಪಡಲೆಂದು ಯೆಹೋವನು ದಂಡನೆ ವಿಧಿಸಿದಾಗ, ಅರಸನ ಮಕ್ಕಳಲ್ಲಿ ಒಬ್ಬನಾದ ಅಬೀಯನಿಗೆ ಮಾತ್ರ ಯೋಗ್ಯ ರೀತಿಯಲ್ಲಿ ಸಮಾಧಿಮಾಡಬೇಕೆಂದು ಅಪ್ಪಣೆ ಕೊಟ್ಟನು. ಯಾಕೆ? ಅವನು “ಇಸ್ರಾಯೇಲ್ ದೇವರಾದ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿ” ಇದ್ದುದರಿಂದಲೇ. (1 ಅರಸುಗಳು 14:1, 10-13) ಯೆಹೋವನು ಕಾರ್ಯತಃ ಆ ಯುವಕನ ಹೃದಯವನ್ನು ಶೋಧಿಸಿ, ಅಲ್ಲಿ ಯಾವುದೋ “ಒಳ್ಳೆಯ” ವಿಷಯವನ್ನು ಕಂಡುಕೊಂಡಿದ್ದನು. ಆ ಒಳ್ಳೆಯತನವು ಎಷ್ಟೇ ಅಲ್ಪವೂ ಕ್ಷುಲ್ಲಕವೂ ಆಗಿದ್ದಿರಬಹುದಾಗಿದ್ದರೂ, ಯೆಹೋವನು ಅದನ್ನು ತನ್ನ ವಾಕ್ಯದಲ್ಲಿ ಬರೆದಿಡಲು ಅರ್ಹವುಳ್ಳದ್ದಾಗಿ ಕಂಡನು. ಆ ಇಡೀ ಧರ್ಮಭ್ರಷ್ಟ ಮನೆವಾರ್ತೆಯ ಆ ಒಬ್ಬ ಸದಸ್ಯನಿಗೆ ತಕ್ಕಮಟ್ಟಿಗಿನ ಕರುಣೆಯನ್ನು ತೋರಿಸುತ್ತಾ ಆತನು ಅದಕ್ಕಾಗಿ ಪ್ರತಿಫಲವನ್ನೂ ಕೊಟ್ಟನು.
12, 13. (ಎ) ನಾವು ಪಾಪಮಾಡುವಾಗಲೂ ಯೆಹೋವನು ನಮ್ಮಲ್ಲಿ ಒಳ್ಳೇದಕ್ಕಾಗಿ ನೋಡುತ್ತಿರುತ್ತಾನೆಂದು ರಾಜ ಯೆಹೋಷಾಫಾಟನ ವಿದ್ಯಮಾನವು ಹೇಗೆ ತೋರಿಸುತ್ತದೆ? (ಬಿ) ನಮ್ಮ ಸದ್ಗುಣಗಳು ಮತ್ತು ಸತ್ಕಾರ್ಯಗಳ ವಿಷಯದಲ್ಲಿ ಯೆಹೋವನು ಹೇಗೆ ಒಬ್ಬ ಅಕ್ಕರೆಯ ಹೆತ್ತವನಂತೆ ಕ್ರಿಯೆಗೈಯುತ್ತಾನೆ?
12 ಇನ್ನೂ ಹೆಚ್ಚು ಎದ್ದುಕಾಣುವ ಇನ್ನೊಂದು ಉದಾಹರಣೆಯು ಒಳ್ಳೆಯ ಅರಸನಾದ ಯೆಹೋಷಾಫಾಟನಲ್ಲಿ ಕಂಡುಬರಬಹುದು. ಈ ರಾಜನು ಒಂದು ಮೂಢ ಕಾರ್ಯವನ್ನು ಗೈದಾಗ ಯೆಹೋವನ ಪ್ರವಾದಿಯು ಅವನಿಗಂದದ್ದು: “ಆ ಕಾರಣಕ್ಕಾಗಿ ಯೆಹೋವನು ನಿನ್ನ ಮೇಲೆ ಕೋಪಗೊಂಡಿದ್ದಾನೆ.” ಎಷ್ಟು ಗಂಭೀರವಾದ ವಿಚಾರ! ಆದರೆ ಯೆಹೋವನ ಸಂದೇಶವು ಅಲ್ಲಿಗೇ ಕೊನೆಗೊಳ್ಳಲಿಲ್ಲ. ಅದು ಹೀಗೆ ಮುಂದುವರಿಯಿತು: “ಆದರೆ ನಿನ್ನಲ್ಲಿ ಕೆಲವಾರು ಒಳ್ಳೆಯ ವಿಷಯಗಳಿವೆ.” (2 ಪೂರ್ವಕಾಲವೃತ್ತಾಂತ 19:1-3, ಪರಿಶುದ್ಧ ಬೈಬಲ್) ಹೀಗೆ ಯೆಹೋವನ ಧರ್ಮಕ್ರೋಧವು ಯೆಹೋಷಾಫಾಟನಲ್ಲಿದ್ದ ಒಳ್ಳೇತನಕ್ಕೆ ಆತನನ್ನು ಕುರುಡಾಗಿಸಲಿಲ್ಲ. ಆತನಿಗೂ ಅಪರಿಪೂರ್ಣ ಮಾನವರಿಗೂ ಎಂಥ ವ್ಯತ್ಯಾಸ! ನಮಗೆ ಬೇರೆಯವರ ಮೇಲೆ ಸಿಟ್ಟುಬಂದಾಗ, ಅವರಲ್ಲಿರುವ ಒಳ್ಳೇತನಕ್ಕೆ ನಾವು ಕುರುಡರಾಗುವ ಪ್ರವೃತ್ತಿಯುಳ್ಳವರಾಗಬಹುದು. ಮತ್ತು ನಾವು ಪಾಪಗೈದಾಗ, ನಮ್ಮಲ್ಲುಂಟಾಗುವ ನಿರಾಶೆ, ನಾಚಿಕೆ, ಮತ್ತು ಅಪರಾಧಿಭಾವನೆಯು ನಮ್ಮಲ್ಲಿರುವ ಒಳ್ಳೇತನಕ್ಕೆ ನಮ್ಮನ್ನು ಕುರುಡರನ್ನಾಗಿ ಮಾಡೀತು. ಆದರೂ ನೆನಪಿಡಿ, ನಾವು ಪಶ್ಚಾತ್ತಾಪಪಟ್ಟು ಅಂಥ ಪಾಪಗಳನ್ನು ಪುನಃ ಮಾಡದಿರಲು ಕಠಿನ ಪ್ರಯತ್ನಮಾಡುವಲ್ಲಿ ಯೆಹೋವನು ನಮ್ಮನ್ನು ಕ್ಷಮಿಸೇ ಕ್ಷಮಿಸುವನು.
13 ಯೆಹೋವನು ನಿಮ್ಮನ್ನು ಶೋಧಿಸಿ ನೋಡುತ್ತಿರುವಾಗ, ಅಂಥ ಪಾಪಗಳನ್ನು ಎಸೆದುಬಿಡುತ್ತಾನೆ. ಚಿನ್ನಕ್ಕಾಗಿ ಶೋಧಿಸುವವನು ಹೇಗೆ ಬಾಣಲೆಯಲ್ಲಿನ ನಿಷ್ಪ್ರಯೋಜಕ ಮಣ್ಣನ್ನು ಎಸೆದುಬಿಡುತ್ತಾನೋ ಹಾಗೆ. ನಿಮ್ಮ ಸದ್ಗುಣಗಳು ಹಾಗೂ ಸತ್ಕಾರ್ಯಗಳ ಕುರಿತೇನು? ಹೌದು, ಈ ಚಿನ್ನದ “ಗಟ್ಟಿಗಳನ್ನು” ಆತನು ಉಳಿಸಿಕೊಳ್ಳುತ್ತಾನೆ! ಅಕ್ಕರೆಯುಳ್ಳ ಕೆಲವು ಹೆತ್ತವರು ತಮ್ಮ ಮಕ್ಕಳು ಬಿಡಿಸಿರುವ ಚಿತ್ರಗಳನ್ನು ಇಲ್ಲವೆ ಮಾಡಿರುವ ಶಾಲಾ ಪ್ರಾಜೆಕ್ಟ್ಗಳನ್ನು, ಮಕ್ಕಳು ಅದನ್ನು ಮರೆತು ಎಷ್ಟೋ ದಶಕಗಳು ದಾಟಿದ ಬಳಿಕವೂ, ಮುದ್ದಿನಿಂದ ಉಳಿಸಿಕೊಂಡಿರುವುದನ್ನು ನೀವೆಂದಾದರೂ ಗಮನಿಸಿದ್ದೀರೋ? ಯೆಹೋವನಾದರೋ ಅತ್ಯಂತ ಹೆಚ್ಚಿನ ಅಕ್ಕರೆಯುಳ್ಳ ಹೆತ್ತವನಾಗಿದ್ದಾನೆ! ಎಷ್ಟರ ತನಕ ನಾವಾತನಿಗೆ ನಂಬಿಗಸ್ತರಾಗಿ ಉಳಿಯುತ್ತೇವೊ ಅಷ್ಟರ ತನಕ ಆತನು ನಮ್ಮ ಸತ್ಕಾರ್ಯಗಳನ್ನೂ ಸದ್ಗುಣಗಳನ್ನೂ ಎಂದಿಗೂ ಮರೆತುಬಿಡನು. ಅದನ್ನು ಮರೆತುಬಿಡುವುದು ವಾಸ್ತವದಲ್ಲಿ ಆತನ ದೃಷ್ಟಿಯಲ್ಲಿ ಅನ್ಯಾಯವಾಗಿದೆ, ಮತ್ತು ಆತನೆಂದೂ ಅನ್ಯಾಯಸ್ಥನಲ್ಲ. (ಇಬ್ರಿಯ 6:10) ಆತನು ಇನ್ನೊಂದು ರೀತಿಯಲ್ಲೂ ನಮ್ಮನ್ನು ಶೋಧಿಸಿತೆಗೆಯುತ್ತಾನೆ.
14, 15. (ಎ) ನಮ್ಮ ಅಪರಿಪೂರ್ಣತೆಗಳು ನಮ್ಮಲ್ಲಿರುವ ಒಳ್ಳೇತನಕ್ಕೆ ಯೆಹೋವನನ್ನು ಎಂದೂ ಕುರುಡುಗೊಳಿಸುವುದಿಲ್ಲ ಏಕೆ? ದೃಷ್ಟಾಂತಿಸಿರಿ. (ಬಿ) ಯೆಹೋವನು ನಮ್ಮಲ್ಲಿ ಕಂಡುಕೊಳ್ಳುವ ಒಳ್ಳೆಯ ವಿಷಯಗಳೊಂದಿಗೆ ಏನು ಮಾಡುವನು, ಮತ್ತು ತನ್ನ ನಂಬಿಗಸ್ತ ಜನರನ್ನು ಆತನು ಹೇಗೆ ದೃಷ್ಟಿಸುತ್ತಾನೆ?
14 ಯೆಹೋವನು ನಮ್ಮ ಅಪರಿಪೂರ್ಣತೆಗಳ ಆಚೆಯೂ ದೃಷ್ಟಿಹಾಯಿಸುತ್ತಾ, ನಮ್ಮಲ್ಲಿರುವ ಸಂಭಾವ್ಯ ಸಾಮರ್ಥ್ಯಗಳ ಕಡೆಗೆ ಲಕ್ಷ್ಯಕೊಡುತ್ತಾನೆ. ದೃಷ್ಟಾಂತಕ್ಕಾಗಿ, ಕಲಾಕೃತಿಗಳನ್ನು ಬಹಳವಾಗಿ ಮೆಚ್ಚುವಂಥ ಜನರು ಹಾಳಾಗಿಹೋಗಿರುವ ಕಲಾಚಿತ್ರಗಳನ್ನೂ ಇತರ ಕೃತಿಗಳನ್ನೂ ಪುನಃ ಸರಿಪಡಿಸಲಿಕ್ಕೋಸ್ಕರ ಏನು ಮಾಡಲೂ ಸಿದ್ಧರಾಗಿರುತ್ತಾರೆ. ಉದಾಹರಣೆಗೆ, ಲಂಡನಿನ ನ್ಯಾಷನಲ್ ಗ್ಯಾಲರಿಯಲ್ಲಿ 3 ಕೋಟಿ ಡಾಲರ್ ಬೆಲೆಬಾಳುವ ಲಿಯೊನಾರ್ಡೊ ಡ ವಿಂಚಿ ಬಿಡಿಸಿದಂಥ ಕಲಾಚಿತ್ರಕ್ಕೆ ಯಾರೋ ಒಬ್ಬನು ಗುಂಡುಹಾರಿಸಿದನು. ಆದರೆ ಯಾರೂ, ‘ಅದೀಗ ಕೆಡಿಸಲ್ಪಟ್ಟಿದೆ, ಆದ್ದರಿಂದ ಅದನ್ನು ಹೊರಗೆಸೆದುಬಿಡಬೇಕು’ ಎಂದು ಹೇಳಲಿಲ್ಲ. ಆ 500 ವರ್ಷಗಳಷ್ಟು ಹಳೆಯದಾದ ಕಲಾಕೃತಿಯನ್ನು ಪುನಸ್ಸ್ಥಾಪಿಸಲು ಆ ಕೂಡಲೆ ಕೆಲಸ ಆರಂಭವಾಯಿತು. ಯಾಕೆ? ಯಾಕಂದರೆ ಕಲಾಪ್ರೇಮಿಗಳ ದೃಷ್ಟಿಯಲ್ಲಿ ಅದು ಅತ್ಯಮೂಲ್ಯವಾಗಿತ್ತು. ಸುಣ್ಣ ಮತ್ತು ಇದ್ದಲಿನಿಂದ ಬಿಡಿಸಲ್ಪಟ್ಟಿರುವ ಒಂದು ಕಲಾಚಿತ್ರಕ್ಕಿಂತ ನೀವು ಎಷ್ಟೋ ಹೆಚ್ಚು ಬೆಲೆಯುಳ್ಳವರಲ್ಲವೇ? ದೇವರ ದೃಷ್ಟಿಯಲ್ಲಿ ನೀವು ನಿಶ್ಚಯವಾಗಿಯೂ ಹೆಚ್ಚು ಬೆಲೆಯುಳ್ಳವರಾಗಿದ್ದೀರಿ—ಬಾಧ್ಯತೆಯಾಗಿ ಪಡೆದಿರುವ ಅಪರಿಪೂರ್ಣತೆಯಿಂದಾಗಿ ನಿಮ್ಮ ಸ್ಥಿತಿ ಎಷ್ಟೇ ಕೆಡಿಸಲ್ಪಟ್ಟಿರಲಿ ಈ ಮಾತು ಸತ್ಯ. (ಕೀರ್ತನೆ 72:12-14) ಮಾನವಕುಲದ ಕುಶಲ ಸೃಷ್ಟಿಕರ್ತನಾದ ಯೆಹೋವ ದೇವರು, ಆತನ ಪ್ರೀತಿಯುಳ್ಳ ಪರಾಮರಿಕೆಗೆ ಸ್ಪಂದಿಸುವ ಎಲ್ಲರನ್ನೂ ಪರಿಪೂರ್ಣತೆಗೆ ಪುನಸ್ಸ್ಥಾಪಿಸಲು ಆವಶ್ಯಕವಾದುದೆಲ್ಲವನ್ನು ಮಾಡುವನು.—ಅ. ಕೃತ್ಯಗಳು 3:21; ರೋಮಾಪುರ 8:20-22.
15 ಹೌದು, ನಾವು ಸ್ವತಃ ನಮ್ಮಲ್ಲಿ ನೋಡದಿರಬಹುದಾದ ಒಳ್ಳೇತನವನ್ನು ಯೆಹೋವನು ನಮ್ಮಲ್ಲಿ ನೋಡುತ್ತಾನೆ. ನಾವಾತನನ್ನು ಸೇವಿಸುತ್ತಾ ಹೋಗುವಾಗ, ನಾವು ಕಟ್ಟಕಡೆಗೆ ಪರಿಪೂರ್ಣತೆಯನ್ನು ಮುಟ್ಟುವ ತನಕ ಆ ಒಳ್ಳೇತನವು ಬೆಳೆಯುತ್ತಾ ಹೋಗುವಂತೆ ಆತನು ಮಾಡುವನು. ಸೈತಾನನ ಲೋಕವು ನಮ್ಮನ್ನು ಹೇಗೆಯೇ ಉಪಚರಿಸಿರಲಿ, ಯೆಹೋವನು ತನ್ನ ನಂಬಿಗಸ್ತ ಸೇವಕರನ್ನು ಅಪೇಕ್ಷಣೀಯರೂ ಅಮೂಲ್ಯರೂ ಎಂದು ಪರಿಗಣಿಸುತ್ತಾನೆ.—ಹಗ್ಗಾಯ 2:7.
ಯೆಹೋವನು ತನ್ನ ಪ್ರೀತಿಯನ್ನು ಸಕ್ರಿಯವಾಗಿ ಪ್ರದರ್ಶಿಸುತ್ತಾನೆ
16. ನಮಗಾಗಿರುವ ಯೆಹೋವನ ಪ್ರೀತಿಯ ಅತ್ಯಂತ ಮಹಾನ್ ಪುರಾವೆಯು ಯಾವುದು, ಮತ್ತು ಈ ಕೊಡುಗೆಯು ನಮ್ಮಲ್ಲಿ ಒಬ್ಬೊಬ್ಬರಿಗಾಗಿಯೂ ನೀಡಲ್ಪಟ್ಟಿದೆಯೆಂದು ನಮಗೆ ತಿಳಿದಿರುವುದು ಹೇಗೆ?
16 ನಾಲ್ಕನೆಯದಾಗಿ, ನಮಗಾಗಿ ತನ್ನ ಪ್ರೀತಿಯನ್ನು ರುಜುಪಡಿಸಲಿಕ್ಕಾಗಿ ಯೆಹೋವನು ಬಹಳಷ್ಟನ್ನು ಮಾಡುತ್ತಾನೆ. ನಾವು ನಿಷ್ಪ್ರಯೋಜಕರೂ ಪ್ರೀತಿಸಲ್ಪಡಲು ಅನರ್ಹರೂ ಆಗಿದ್ದೇವೆಂಬ ಸೈತಾನನ ಸುಳ್ಳಿಗೆ, ಕ್ರಿಸ್ತನ ಈಡು ಯಜ್ಞವು ಅತ್ಯಂತ ಶಕ್ತಿಯುತವಾದ ಉತ್ತರವಾಗಿರುತ್ತದೆ. ಯಾತನಾ ಕಂಬದ ಮೇಲೆ ಯೇಸು ಅನುಭವಿಸಿದ ಆ ಸಂಕಟಮಯ ಮರಣವು ಮತ್ತು ತನ್ನ ಪ್ರಿಯ ಕುಮಾರನು ಸಾಯುವುದನ್ನು ನೋಡುತ್ತಿರುವಾಗ ಯೆಹೋವನು ಸಹಿಸಿಕೊಂಡ ಇನ್ನೂ ಅಧಿಕವಾದ ಸಂಕಟವು ನಮಗಾಗಿ ಅವರ ಪ್ರೀತಿಯ ಪುರಾವೆಯಾಗಿದೆ ಎಂಬದನ್ನು ನಾವೆಂದಿಗೂ ಮರೆಯಬಾರದು. ಈ ಕೊಡುಗೆಯು ವ್ಯಕ್ತಿಗತವಾಗಿ ತಮಗಾಗಿ ಕೊಡಲ್ಪಟ್ಟಿದೆಯೆಂದು ಅನೇಕ ಜನರಿಗೆ ನಂಬಲು ಕಷ್ಟವಾಗುವುದು ವಿಷಾದಕರವೇ ಸರಿ. ತಾವದಕ್ಕೆ ಅನರ್ಹರು ಎಂದವರ ಭಾವನೆ. ಆದರೆ ಅಪೊಸ್ತಲ ಪೌಲನು ಒಮ್ಮೆ ಕ್ರೈಸ್ತ ಸಭೆಯ ಹಿಂಸಕನಾಗಿದ್ದನೆಂಬುದನ್ನು ನೆನಪಿಸಿಕೊಳ್ಳಿರಿ. ಹೀಗಿದ್ದರೂ ಅವನು ಬರೆದದ್ದು: ‘ದೇವಕುಮಾರನು ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನು ಒಪ್ಪಿಸಿಬಿಟ್ಟನು.’—ಗಲಾತ್ಯ 1:13; 2:20.
17. ಯಾವುದರ ಮೂಲಕ ಯೆಹೋವನು ನಮ್ಮನ್ನು ತನ್ನ ಕಡೆಗೆ ಮತ್ತು ತನ್ನ ಮಗನ ಕಡೆಗೆ ಸೆಳೆಯುತ್ತಾನೆ?
17 ಕ್ರಿಸ್ತನ ಯಜ್ಞಾರ್ಪಣೆಯ ಪ್ರಯೋಜನಗಳನ್ನು ನಾವು ಸದುಪಯೋಗಿಸುವಂತೆ ನಮಗೆ ವ್ಯಕ್ತಿಗತವಾಗಿ ಸಹಾಯಮಾಡುವ ಮೂಲಕ ಯೆಹೋವನು ನಮಗಾಗಿ ತನ್ನ ಪ್ರೀತಿಯನ್ನು ಸಿದ್ಧಪಡಿಸಿ ತೋರಿಸುತ್ತಾನೆ. ಯೇಸುವಂದದ್ದು: “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು.” (ಯೋಹಾನ 6:44) ಹೌದು, ಸ್ವತಃ ಯೆಹೋವನು ನಮ್ಮನ್ನು ತನ್ನ ಮಗನ ಕಡೆಗೆ ಮತ್ತು ನಿತ್ಯಜೀವದ ನಿರೀಕ್ಷೆಯ ಕಡೆಗೆ ಸೆಳೆಯುತ್ತಾನೆ. ಹೇಗೆ? ವ್ಯಕ್ತಿಪರವಾಗಿ ನಮ್ಮನ್ನು ತಲಪುವ ಸಾರುವ ಕಾರ್ಯದ ಮೂಲಕ, ಮತ್ತು ನಮ್ಮ ಇತಿಮಿತಿಗಳು ಹಾಗೂ ಅಪರಿಪೂರ್ಣತೆಗಳ ಮಧ್ಯೆಯೂ ಆಧ್ಯಾತ್ಮಿಕ ಸತ್ಯತೆಗಳನ್ನು ನಾವು ಗ್ರಹಿಸಿಕೊಂಡು ಅವುಗಳನ್ನು ಅನ್ವಯಿಸುವಂತೆ ಸಹಾಯಮಾಡಲು ಯೆಹೋವನು ಉಪಯೋಗಿಸುವ ಆತನ ಪವಿತ್ರಾತ್ಮದ ಮೂಲಕ. ಆದುದರಿಂದ ಇಸ್ರಾಯೇಲಿನ ಕುರಿತು ಯೆಹೋವನು ಏನಂದನೋ ಅದನ್ನು ನಮ್ಮ ಕುರಿತೂ ಹೇಳಬಲ್ಲನು: “ನಾನು ನಿನ್ನನ್ನು ಪ್ರೀತಿಸಿರುವದು ಶಾಶ್ವತ ಪ್ರೇಮದಿಂದಲೇ; ಆದಕಾರಣ ನಿನ್ನನ್ನು ಮಮತೆಯಿಂದ ಸೆಳೆದುಕೊಂಡಿದ್ದೇನೆ.”—ಯೆರೆಮೀಯ 31:3.
18, 19. (ಎ) ಯೆಹೋವನು ನಮಗಾಗಿ ತನ್ನ ಪ್ರೀತಿಯನ್ನು ಪ್ರದರ್ಶಿಸುವ ಅತ್ಯಂತ ಆಪ್ತವಾದ ರೀತಿಯು ಯಾವುದು, ಮತ್ತು ಆತನು ವೈಯಕ್ತಿಕವಾಗಿ ಇದರ ಮೇಲ್ವಿಚಾರಣೆ ಮಾಡುತ್ತಾನೆಂದು ಯಾವುದು ತೋರಿಸುತ್ತದೆ? (ಬಿ) ಯೆಹೋವನು ಪರಾನುಭೂತಿಯಿಂದ ಆಲಿಸುವವನೆಂದು ದೇವರ ವಾಕ್ಯವು ನಮಗೆ ಹೇಗೆ ಆಶ್ವಾಸನೆ ಕೊಡುತ್ತದೆ?
18 ಪ್ರಾಯಶಃ ಪ್ರಾರ್ಥನೆಯೆಂಬ ಸದವಕಾಶದ ಮೂಲಕವೇ ನಾವು ಯೆಹೋವನ ಪ್ರೀತಿಯನ್ನು ಅತ್ಯಂತ ಆಪ್ತ ರೀತಿಯಲ್ಲಿ ಅನುಭವಿಸುತ್ತೇವೆ. ನಾವು ದೇವರಿಗೆ “ಎಡೆಬಿಡದೆ ಪ್ರಾರ್ಥನೆ” ಮಾಡುವಂತೆ ಬೈಬಲು ನಮ್ಮಲ್ಲಿ ಪ್ರತಿಯೊಬ್ಬರನ್ನು ಆಮಂತ್ರಿಸುತ್ತದೆ. (1 ಥೆಸಲೊನೀಕ 5:17) ಆತನು ಪ್ರಾರ್ಥನೆಗಳನ್ನು ಆಲಿಸುತ್ತಾನೆ. ಆತನನ್ನು “ಪ್ರಾರ್ಥನೆಯನ್ನು ಕೇಳುವವನೇ” ಎಂಬುದಾಗಿಯೂ ಕರೆಯಲಾಗಿದೆ. (ಕೀರ್ತನೆ 65:2) ಈ ಅಧಿಕಾರವನ್ನು ಆತನು ಬೇರೆ ಯಾರಿಗೂ, ತನ್ನ ಸ್ವಂತ ಕುಮಾರನಿಗೂ ವಹಿಸಿಕೊಟ್ಟಿರುವುದಿಲ್ಲ. ತುಸು ಯೋಚಿಸಿರಿ: ಇಡೀ ವಿಶ್ವದ ಸೃಷ್ಟಿಕರ್ತನು, ನಾವು ಪ್ರಾರ್ಥನೆಯಲ್ಲಿ, ವಾಕ್ಸರಳತೆಯೊಂದಿಗೆ ಆತನ ಬಳಿಸಾರುವಂತೆ ಉತ್ತೇಜಿಸುತ್ತಾನೆ. ಮತ್ತು ಆತನು ಯಾವ ರೀತಿಯಲ್ಲಿ ಕಿವಿಗೊಡುತ್ತಾನೆ? ನಿರಾಸಕ್ತಿ, ಭಾವಶೂನ್ಯತೆ, ಹಾಗೂ ನಿರ್ಲಕ್ಷ್ಯದಿಂದಲೋ? ಅಲ್ಲವೇ ಅಲ್ಲ.
19 ಯೆಹೋವನು ಪರಾನುಭೂತಿಯುಳ್ಳ ದೇವರು. ಪರಾನುಭೂತಿ ಎಂದರೇನು? “ನಿಮ್ಮ ನೋವನ್ನು ನನ್ನ ಹೃದಯದಲ್ಲಿ ಅನುಭವಿಸುವುದೇ ಪರಾನುಭೂತಿ” ಎಂಬುದಾಗಿ ಒಬ್ಬ ನಂಬಿಗಸ್ತ ವೃದ್ಧ ಹಿರಿಯನು ಹೇಳಿದನು. ನಮ್ಮ ನೋವು ನಿಜವಾಗಿಯೂ ಯೆಹೋವನಿಗೆ ತಟ್ಟುತ್ತದೊ? ಆತನ ಜನರಾದ ಇಸ್ರಾಯೇಲ್ಯರ ಕಷ್ಟಾನುಭವದ ಕುರಿತು ನಾವು ಓದುವುದು: “ಅವರ ಎಲ್ಲಾ ಸಂಕಷ್ಟದ ಸಮಯದಲ್ಲಿ ಆತನು ಸಂಕಟಪಟ್ಟನು.” (ಯೆಶಾಯ 63:9, NW) ಅವರ ಸಂಕಷ್ಟಗಳನ್ನು ಯೆಹೋವನು ನೋಡಿದನು ಮಾತ್ರವೇ ಅಲ್ಲ, ಜನರಿಗಾಗಿ ಅವನ ಹೃದಯ ನೊಂದಿತ್ತು. ಆತನ ಅನುಕಂಪವು ಎಷ್ಟು ತೀವ್ರವಾಗಿದೆಯೆಂಬುದನ್ನು ಯೆಹೋವನೇ ತನ್ನ ಸೇವಕರಿಗೆ ಹೇಳಿದ ಆತನ ಸ್ವಂತ ಮಾತುಗಳು ಚಿತ್ರಿಸುತ್ತವೆ: “ನಿಮ್ಮನ್ನು ತಾಕುವವನು [ನನ್ನ] ಕಣ್ಣುಗುಡ್ಡನ್ನು ತಾಕುವವನಾಗಿದ್ದಾನೆ.”b (ಜೆಕರ್ಯ 2:8) ಅದೆಷ್ಟು ವೇದನೆಯದ್ದಾಗಿರಬೇಕು! ಹೌದು, ಯೆಹೋವನಿಗೆ ನಮ್ಮ ವಿಷಯದಲ್ಲಿ ಅನುಕಂಪವಿದೆ. ನಮಗೆ ನೋವಾಗುವಾಗ ಆತನಿಗೂ ನೋವಾಗುತ್ತದೆ.
20. ರೋಮಾಪುರ 12:3 ರಲ್ಲಿ ಕಂಡುಬರುವ ಬುದ್ಧಿವಾದಕ್ಕೆ ನಾವು ವಿಧೇಯರಾಗಬೇಕಾದರೆ ಯಾವ ಸಮತೆಯಿಲ್ಲದ ವಿಚಾರದಿಂದ ನಾವು ದೂರವಿರಬೇಕು?
20 ದೇವರಿಗೆ ತನ್ನ ಸೇವಕರ ಕಡೆಗಿರುವ ಈ ಪ್ರೀತಿಯ ಮತ್ತು ಮಾನ್ಯತೆಯ ಅಂಥ ಪುರಾವೆಯನ್ನು, ಸಮತೆಯುಳ್ಳ ಯಾವನೇ ಕ್ರೈಸ್ತನು ಹೆಮ್ಮೆ ಅಥವಾ ಅಹಂಭಾವಕ್ಕೆ ಒಂದು ನೆಪವಾಗಿ ಉಪಯೋಗಿಸಲಾರನು. ಅಪೊಸ್ತಲ ಪೌಲನು ಬರೆದದ್ದು: “ದೇವರು ನನಗೆ ಕೃಪೆಮಾಡಿದ ಸೇವೆಯನ್ನು ನಡಿಸಿ ನಿಮ್ಮಲ್ಲಿ ಒಬ್ಬೊಬ್ಬನಿಗೂ ಹೇಳುವದೇನಂದರೆ ಯಾರೂ ತನ್ನ ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳದೆ ದೇವರು ಒಬ್ಬೊಬ್ಬನಿಗೆ ಎಂಥೆಂಥ ವಿಶ್ವಾಸ ಬಲವನ್ನು ಕೊಟ್ಟನೋ ಅದಕ್ಕೆ ತಕ್ಕ ಹಾಗೆ ನ್ಯಾಯವಾದ ಅಭಿಪ್ರಾಯದಿಂದ ತನ್ನನ್ನು ಭಾವಿಸಿಕೊಳ್ಳಬೇಕು.” (ರೋಮಾಪುರ 12:3) ಇನ್ನೊಂದು ಭಾಷಾಂತರವು ಇಲ್ಲಿ ಹೇಳುವುದು: “ಯಾರೂ ತನ್ನ ಬಗ್ಗೆ ತನ್ನ ನಿಜ ಮೌಲ್ಯಕ್ಕಿಂತ ಹೆಚ್ಚು ಎಣಿಸದೆ, ತನ್ನ ಬಗ್ಗೆ ಮಿತವಾದ ಗುಣವಿಮರ್ಶೆ ಮಾಡಬೇಕೆಂದು ನಾನು ನಿಮ್ಮಲ್ಲಿ ಪ್ರತಿಯೊಬ್ಬನಿಗೆ ಹೇಳುತ್ತೇನೆ.” (ಎ ಟ್ರಾನ್ಸ್ಲೇಶನ್ ಇನ್ ದ ಲ್ಯಾಂಗ್ವೆಜ್ ಆಫ್ ದ ಪೀಪಲ್, ಚಾರ್ಲ್ಸ್ ಬಿ. ವಿಲ್ಯಮ್ಸ್ರಿಂದ) ಹೀಗೆ ನಾವು ನಮ್ಮ ಸ್ವರ್ಗೀಯ ತಂದೆಯ ಪ್ರೀತಿಯಲ್ಲಿ ಆನಂದಿಸುತ್ತಿರುವಾಗ, ಅದೇ ಸಮಯದಲ್ಲಿ ಸ್ವಸ್ಥಮನಸ್ಸುಳ್ಳವರೂ ಆಗಿದ್ದು ದೇವರ ಪ್ರೀತಿಯನ್ನು ನಾವು ಸಂಪಾದಿಸಶಕ್ತರಲ್ಲ ಅಥವಾ ಅದಕ್ಕೆ ಅರ್ಹರೂ ಅಲ್ಲ ಎಂಬುದನ್ನು ನೆನಪಿನಲ್ಲಿಡೋಣ.—ಲೂಕ 17:10.
21. ಯಾವ ಸೈತಾನ ಪ್ರೇರಿತ ಸುಳ್ಳುಗಳನ್ನು ನಾವು ಸದಾ ಪ್ರತಿರೋಧಿಸುತ್ತಿರಬೇಕು, ಮತ್ತು ಯಾವ ದೈವಿಕ ಸತ್ಯದಿಂದ ನಾವು ನಮ್ಮ ಹೃದಯಕ್ಕೆ ಆಶ್ವಾಸನೆ ಕೊಡುತ್ತಾ ಇರಬಹುದು?
21 ನಮ್ಮಲ್ಲಿ ಪ್ರತಿಯೊಬ್ಬರೂ ಸೈತಾನನ ಎಲ್ಲಾ ಸುಳ್ಳುಗಳನ್ನು, ನಾವು ನಿಷ್ಪ್ರಯೋಜಕರು ಅಥವಾ ಪ್ರೀತಿಸಲ್ಪಡಲು ಯೋಗ್ಯರಲ್ಲ ಎಂಬ ಸುಳ್ಳನ್ನು ಸಹ, ತಿರಸ್ಕರಿಸಿಬಿಡಲು ನಮ್ಮ ಕೈಲಾದುದೆಲ್ಲವನ್ನು ಮಾಡೋಣ. ನಿಮ್ಮ ಜೀವಿತಾನುಭವಗಳು ನಿಮಗೆ, ದೇವರ ಅಪಾರವಾದ ಪ್ರೀತಿಯು ಸಹ ನಿಮ್ಮನ್ನು ತಲಪಲಸಾಧ್ಯವಾದಷ್ಟು ದೊಡ್ಡ ಅಡ್ಡಿ ಸ್ವತಃ ನೀವೇ ಆಗಿದ್ದೀರೆಂದು ಪರಿಗಣಿಸುವಂತೆ, ಅಥವಾ ನಿಮ್ಮ ಸತ್ಕಾರ್ಯಗಳು, ಸಕಲವನ್ನೂ ಕಾಣುವ ಆತನ ಗಮನಕ್ಕೂ ಬರಲಾಗದಷ್ಟು ತೀರ ಕ್ಷುಲ್ಲಕವಾಗಿವೆಯೆಂದು, ಇಲ್ಲವೆ ನಿಮ್ಮ ಪಾಪಗಳು ಆತನ ಅಮೂಲ್ಯ ಪುತ್ರನ ಮರಣವೂ ತೆಗೆದುಹಾಕಲಾಗದಷ್ಟು ಹೆಚ್ಚಾಗಿವೆಯೆಂದೂ ನಿಮಗೆ ಕಲಿಸಿರುವಲ್ಲಿ, ಅದು ಸುಳ್ಳು. ಅಂಥ ಸುಳ್ಳುಗಳನ್ನು ಮನಸಾರೆ ತಿರಸ್ಕರಿಸಿರಿ! ಪೌಲನ ಪ್ರೇರಿತ ಮಾತುಗಳಲ್ಲಿ ವ್ಯಕ್ತಪಡಿಸಲ್ಪಟ್ಟ ಸತ್ಯದಿಂದ ನಾವು ನಮ್ಮ ಹೃದಯಗಳಿಗೆ ಆಶ್ವಾಸನೆ ಕೊಡುವುದನ್ನು ಮುಂದುವರಿಸೋಣ: “ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ದುರಾತ್ಮಗಳಾಗಲಿ ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ ಮಹತ್ವಗಳಾಗಲಿ ಮೇಲಣ ಲೋಕವಾಗಲಿ ಕೆಳಗಣ ಲೋಕವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು.”—ರೋಮಾಪುರ 8:38, 39.
a ಪುನರುತ್ಥಾನದ ನಿರೀಕ್ಷೆಯನ್ನು ಬೈಬಲು ಪದೇಪದೇ ಯೆಹೋವನ ಸ್ಮರಣೆಯೊಂದಿಗೆ ಜೋಡಿಸುತ್ತದೆ. ನಂಬಿಗಸ್ತ ಪುರುಷನಾದ ಯೋಬನು ಯೆಹೋವನಿಗಂದದ್ದು: “ನೀನು . . . ನನಗೆ ಅವಧಿಯನ್ನು ಗೊತ್ತುಮಾಡಿ [ಕಡೆಯಲ್ಲಿ] ನನ್ನನ್ನು ಜ್ಞಾಪಿಸಿಕೊಂಡರೆ ಎಷ್ಟೋ ಒಳ್ಳೇದು!” (ಓರೆ ಅಕ್ಷರಗಳು ನಮ್ಮವು.) (ಯೋಬ 14:13) ಯೋಹಾನ 5:28, 29 ರಲ್ಲಿ ಯೇಸು, ‘ಸಮಾಧಿಗಳಲ್ಲಿರುವವರೆಲ್ಲರ’ ಪುನರುತ್ಥಾನಕ್ಕೆ ಸೂಚಿಸಿಮಾತಾಡಿದನು. ಮೂಲ ಭಾಷೆಯು, ಮೃತಪಟ್ಟವರ ಸ್ಮರಣಾರ್ಥವಾಗಿ ನಿರ್ಮಿಸಲ್ಪಟ್ಟಿರುವ ಸಮಾಧಿಗಳಿಗೆ ಸೂಚಿಸುತ್ತದೆ. ಇದು ತಕ್ಕದಾದುದಾಗಿತ್ತು, ಯಾಕಂದರೆ ತಾನು ಯಾರನ್ನು ಪುನರುತ್ಥಾನಗೊಳಿಸಲು ಯೋಚಿಸಿದ್ದಾನೋ ಆ ಮೃತರನ್ನು ಯೆಹೋವನು ನಿಖರವಾಗಿ ಜ್ಞಾಪಕದಲ್ಲಿಡುತ್ತಾನೆ.
b ಕೆಲವು ಭಾಷಾಂತರಗಳು ಇಲ್ಲಿ, ದೇವರ ಜನರನ್ನು ತಾಕುವವನು ತನ್ನ ಸ್ವಂತ ಕಣ್ಣನ್ನು ಅಥವಾ ಇಸ್ರಾಯೇಲಿನ ಕಣ್ಣನ್ನು ತಾಕುತ್ತಾನೆ, ದೇವರ ಕಣ್ಣನ್ನಲ್ಲ ಎಂಬರ್ಥವನ್ನು ಕೊಡುತ್ತವೆ. ಈ ವಚನಭಾಗವು ಅಗೌರವಸೂಚಕವಾಗಿದೆಯೆಂದು ನೆನಸಿದ ಕೆಲವು ಲಿಪಿಕಾರರು ಅದನ್ನು ತಿದ್ದುಪಡಿಮಾಡಿ ಈ ತಪ್ಪನ್ನು ಒಳತಂದರು. ಅವರ ದೋಷಪೂರ್ಣ ಕ್ರಿಯೆಯು ಯೆಹೋವನ ವೈಯಕ್ತಿಕ ಪರಾನುಭೂತಿಯ ತೀವ್ರತೆಯನ್ನು ಮರೆಮಾಡಿರುತ್ತದೆ.