ಅಧ್ಯಾಯ 38
ಯೋಹಾನನಲ್ಲಿ ನಂಬಿಕೆಯ ಕೊರತೆಯಿತ್ತೇ?
ಸುಮಾರು ಒಂದು ವರ್ಷದಿಂದ ಸೆರೆಮನೆಯಲ್ಲಿದ್ದ ಸ್ನಾನಿಕನಾದ ಯೋಹಾನನು ಈಗ ನಾಯಿನೆಂಬ ಊರಿನ ವಿಧವೆಯ ಮಗನ ಪುನರುತ್ಥಾನದ ವರದಿಯನ್ನು ಪಡೆಯುತ್ತಾನೆ. ಆದರೆ ಈ ಘಟನೆಯ ವೈಶಿಷ್ಟತೆಯ ಕುರಿತು ಯೇಸುವಿನಿಂದ ನೇರವಾಗಿ ಕೇಳಲು ಯೋಹಾನನು ಬಯಸಿದ್ದರಿಂದ, ವಿಚಾರಿಸಲು ತನ್ನ ಶಿಷ್ಯರಲ್ಲಿಬ್ಬರನ್ನು ಕಳುಹಿಸುತ್ತಾನೆ: “ಬರಬೇಕಾದವನು ನೀನೋ, ನಾವು ಬೇರೊಬ್ಬನ ದಾರಿಯನ್ನು ನೋಡಬೇಕೋ?“
ಸುಮಾರು ಎರಡು ವರ್ಷಗಳ ಹಿಂದೆ ಯೇಸುವಿನ ದೀಕ್ಷಾಸ್ನಾನ ಮಾಡಿಸುವಾಗ ಯೋಹಾನನು, ಯೇಸುವಿನ ಮೇಲೆ ಪವಿತ್ರಾತ್ಮ ಇಳಿದು ಬರುವದನ್ನು ಕಂಡಿದ್ದರಿಂದ ಮತ್ತು ದೇವರ ಒಪ್ಪಿಗೆಯ ಸ್ವರವನ್ನೂ ವಿಶೇಷವಾಗಿ ಕೇಳಿದ್ದರಿಂದ, ಈ ಪ್ರಶ್ನೆಯು ವಿಚಿತ್ರವಾಗಿ ತೋರಬಹುದು. ಯೋಹಾನನ ಪ್ರಶ್ನೆಯು, ಅವನು ನಂಬಿಕೆಯಲ್ಲಿ ನಿರ್ಬಲಗೊಂಡಿದ್ದಾನೆಂದು ಕೆಲವರು ತೀರ್ಮಾನಿಸುವಂತೆ ನಡಿಸಲೂಬಹುದು. ಆದರೆ ಸಂಗತಿಯು ಹಾಗಲ್ಲ. ಯೋಹಾನನ ಕುರಿತು ಯೇಸುವು ಸಂಶಯಿಸಿದಾದ್ದರೆ, ಆ ಸಂದರ್ಭದಲ್ಲಿ ಅವನ ಕುರಿತಾಗಿ ಅಷ್ಟೊಂದು ಒಳ್ಳೆಯ ಅಭಿಪ್ರಾಯ ಕೊಡುವಂಥ ರೀತಿಯಲ್ಲಿ ಯೇಸುವು ಮಾತಾಡುತ್ತಿರಲಿಲ್ಲ. ಹಾಗಾದರೆ, ಯೋಹಾನನು ಈ ಪ್ರಶ್ನೆಯನ್ನು ಹಾಕಿದ್ದು ಯಾಕೆ?
ಅವನು ಮೆಸ್ಸೀಯನೆಂದು ಯೇಸುವಿನಿಂದಲೇ ದೃಢಪಡಿಸಿಕೊಳ್ಳಲು ಯೋಹಾನನು ಕೇವಲ ಬಯಸಿದ್ದಿರಬಹುದು. ಸೆರೆಮನೆಯಲ್ಲಿ ಸೊರಗುತ್ತಿರುವಾಗ, ಯೋಹಾನನಿಗೆ ಇದು ಅತ್ಯಂತ ಬಲವರ್ಧಕವಾಗಲಿತ್ತು. ಆದರೆ ಯೋಹಾನನ ಪ್ರಶ್ನೆಯಲ್ಲಿ ಅದಕ್ಕಿಂತಲೂ ಹೆಚ್ಚಿನದ್ದು ಇತ್ತೆಂದು ಕಾಣುತ್ತದೆ. ಮೆಸ್ಸೀಯನಿಂದ ಪೂರೈಸಲ್ಪಡಬೇಕೆಂದು ಮುಂತಿಳಿಸಿದ ಎಲ್ಲಾ ಸಂಗತಿಗಳ ಪೂರ್ಣ ನೆರವೇರಿಕೆಯನ್ನು ಯೇಸುವಿನ ನಂತರ ಬೇರೊಬ್ಬನು, ಅವನ ಉತ್ತರಾಧಿಕಾರಿಯೋಪಾದಿ ಮಾಡಲಿರುವನೋ ಎಂದು ಅವನು ತಿಳಿಯಬಯಸಿದ್ದನೆಂದು ಕಾಣುತ್ತದೆ.
ಬೈಬಲ್ ಪ್ರವಾದನೆಗಳಿಗನುಸಾರ ದೇವರ ಅಭಿಷಿಕ್ತನು ಒಬ್ಬ ರಾಜನೂ, ವಿಮೋಚಕನೂ ಆಗಲಿರುವನೆಂದು ಯೋಹಾನನು ತಿಳಿದಿದ್ದನು. ಆದರೂ, ಯೇಸುವಿನ ದೀಕ್ಷಾಸ್ನಾನವಾಗೀ ಹಲವಾರು ತಿಂಗಳುಗಳು ಕಳೆದರೂ, ಯೋಹಾನನು ಇನ್ನೂ ಕೈದಿಯಾಗಿ ಸೆರೆಮನೆಯಲ್ಲಿದ್ದನು. ಆದುದರಿಂದ ಯೋಹಾನನು ಯೇಸುವಿಗೆ ಕೇಳಿದ ಅರ್ಥವು ಹೀಗಿತ್ತು: ‘ಬಾಹ್ಯರೂಪದ ಶಕ್ತಿಯಲ್ಲಿ ದೇವರ ರಾಜ್ಯವನ್ನು ಸ್ಥಾಪಿಸುವವನು ನೀನೋ ಅಥವಾ ಮೆಸ್ಸೀಯನ ಮಹಿಮೆಗೆ ಸಂಬಂಧಿಸಿದ ಎಲ್ಲಾ ಪ್ರವಾದನೆಗಳನ್ನು ನೆರವೇರಿಸಲು, ಬೇರೊಬ್ಬನಿಗಾಗಿ, ಒಬ್ಬ ಉತ್ತರಾಧಿಕಾರಿಗಾಗಿ ನಾವು ಕಾಯಬೇಕೋ?’
ಯೋಹಾನನ ಶಿಷ್ಯರಿಗೆ ‘ನಿಜವಾಗಿಯೂ ಬರಬೇಕಾದವನು ನಾನೇ!’ ಎಂದು ಹೇಳುವದರ ಬದಲು, ಯೇಸುವು ಅದೇ ಗಳಿಗೆಯಲ್ಲಿ ಎಲ್ಲಾ ತರದ ರೋಗ ಅಸ್ವಸ್ಥತೆಗಳಿರುವ ಅನೇಕರನ್ನು ಗುಣಪಡಿಸುವ ತನ್ನ ವಿಶೇಷ ಸಾಮರ್ಥ್ಯವನ್ನು ಪ್ರದರ್ಶಿಸಿದನು. ಅನಂತರ ಅವನು ಶಿಷ್ಯರಿಗಂದದ್ದು: “ನೀವು ಹೋಗಿ, ಕಂಡು ಕೇಳಿದವುಗಳನ್ನು ಯೋಹಾನನಿಗೆ ತಿಳಿಸಿರಿ. ಕುರುಡರಿಗೆ ಕಣ್ಣು ಬರುತ್ತವೆ, ಕುಂಟರಿಗೆ ಕಾಲು ಬರುತ್ತವೆ, ಕುಷ್ಠರೋಗಿಗಳು ಶುದ್ಧರಾಗುತ್ತಾರೆ, ಕಿವುಡರಿಗೆ ಕಿವಿ ಬರುತ್ತವೆ. ಸತ್ತವರು ಜೀವವನ್ನು ಹೊಂದುತ್ತಾರೆ, ಬಡವರಿಗೆ ಸುವಾರ್ತೆ ಸಾರಲ್ಪಡುತ್ತದೆ.”
ಬೇರೊಂದು ಮಾತಿನಲ್ಲಿ, ಯೇಸುವು ಈಗ ಏನನ್ನು ಮಾಡುತ್ತಾನೋ, ಅದಕ್ಕಿಂತ ಹೆಚ್ಚಿನದ್ದನ್ನು ಮತ್ತು ಪ್ರಾಯಶಃ ಸ್ವತಃ ಯೋಹಾನನ ಬಿಡುಗಡೆಯ ನಿರೀಕ್ಷೆಯನ್ನು ಸಹಾ ಯೋಹಾನನ ಪ್ರಶ್ನೆ ಸೂಚಿಸಿರಬೇಕು. ಆದರೂ, ಯೇಸು ನಡಿಸುತ್ತಿದ್ದ ಅದ್ಭುತಗಳಿಗಿಂತ ಹೆಚ್ಚಿನದ್ದನ್ನು ನಿರೀಕ್ಷಿಸಕೂಡದೆಂದು ಯೋಹಾನನಿಗೆ ಯೇಸು ಹೇಳುತ್ತಾನೆ.
ಯೋಹಾನನ ಶಿಷ್ಯರು ಹಿಂತಿರುಗಿದ ಮೇಲೆ, ಯೇಸುವು ಜನಸಮೂಹದೆಡೆಗೆ ಗಮನ ಹರಿಸಿ, ಮಲಾಕಿಯ 3:1 ರಲ್ಲಿ ಮುಂತಿಳಿಸಲ್ಪಟ್ಟ ಯೆಹೋವನ “ದೂತನು” ಯೋಹಾನನು ಎಂದೂ, ಮತ್ತು ಮಲಾಕಿಯ 4:5, 6 ರಲ್ಲಿ ಮುಂತಿಳಿಸಲ್ಪಟ್ಟ ಪ್ರವಾದಿ ಎಲೀಯನೂ ಅವನೇ ಎಂದೂ ಹೇಳುತ್ತಾನೆ. ಅವನ ಮೊದಲು ಜೀವಿಸಿದ್ದ ಯಾವುದೇ ಪ್ರವಾದಿಗೆ ಯೋಹಾನನು ಸರಿಸಮಾನನು ಎಂದು ಹೇಳಿ, ಅವನ ಗುಣಗಾನ ಮಾಡುತ್ತಾ ಹೀಗನ್ನುತ್ತಾನೆ: “ಸ್ತ್ರೀಯರಲ್ಲಿ ಹುಟ್ಟಿದವರೊಳಗೆ ಸ್ನಾನಿಕನಾದ ಯೋಹಾನನಿಗಿಂತ ದೊಡ್ಡವನು ಎದ್ದಿಲ್ಲ. ಆದರೂ ಪರಲೋಕ ರಾಜ್ಯದಲ್ಲಿರುವ ಚಿಕ್ಕವನು ಅವನಿಗಿಂತಲೂ ದೊಡ್ಡವನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಇದಲ್ಲದೆ ಸ್ನಾನಿಕನಾದ ಯೋಹಾನನ ಕಾಲದಿಂದ ಈ ವರೆಗೂ ಪರಲೋಕ ರಾಜ್ಯವು ಮುಂದೊತ್ತುವ ಜನರ ಗುರಿಯಾಗುತ್ತದೆ.”(NW)
ಪರಲೋಕ ರಾಜ್ಯದಲ್ಲಿ ಚಿಕ್ಕವನು ಯೋಹಾನನಿಗಿಂತಲೂ ದೊಡ್ಡವನಾಗಿರುವದರಿಂದ, ಯೋಹಾನನು ಪರಲೋಕ ರಾಜ್ಯದಲ್ಲಿರುವದಿಲ್ಲವೆಂದು ಯೇಸುವು ಇಲ್ಲಿ ತೋರಿಸುತ್ತಾನೆ. ಯೋಹಾನನು ಯೇಸುವಿಗಾಗಿ ದಾರಿಯನ್ನು ಸಿದ್ಧಗೊಳಿಸಿದ್ದನಾದರೂ, ಕ್ರಿಸ್ತನು ತನ್ನ ಶಿಷ್ಯರೊಂದಿಗೆ ತನ್ನ ರಾಜ್ಯದ ಸಹ-ರಾಜರಾಗಲು ಒಡಂಬಡಿಕೆ ಯಾ ಕರಾರನ್ನು ಮಾಡುವ ಮೊದಲೇ, ಯೋಹಾನನ ಮರಣವು ಸಂಭವಿಸುತ್ತದೆ. ಆದುದರಿಂದಲೇ, ಸ್ವರ್ಗ ರಾಜ್ಯದಲ್ಲಿ ಯೋಹಾನನು ಇರುವದಿಲ್ಲವೆಂದು ಯೇಸುವು ಹೇಳಲು ಕಾರಣವಾಗಿತ್ತು. ಬದಲಾಗಿ ಯೋಹಾನನು ದೇವರ ರಾಜ್ಯದ ಐಹಿಕ ಪ್ರಜೆಯಾಗಲಿರುವನು. ಲೂಕ 7:18-30; ಮತ್ತಾಯ 11:2-15.
▪ ಬರಲಿರುವವನು ಯೇಸುವೂ ಯಾ ಬೇರೊಬ್ಬನನ್ನು ನಿರೀಕ್ಷಿಸಬೇಕೋ ಎಂದು ಯೋಹಾನನು ಯಾಕೆ ಪ್ರಶ್ನಿಸುತ್ತಾನೆ?
▪ ಯಾವ ಪ್ರವಾದನೆಗಳನ್ನು ಯೋಹಾನನು ನೆರವೇರಿಸಿದನೆಂದು ಯೇಸುವು ಹೇಳುತ್ತಾನೆ?
▪ ಯೇಸುವಿನೊಂದಿಗೆ ಪರಲೋಕದಲ್ಲಿ ಯೋಹಾನನು ಯಾಕೆ ಇರುವದಿಲ್ಲ?