ರಾಜ್ಯವನ್ನು ಪಡೆಯಲು ಯೋಗ್ಯರೆಂದು ಎಣಿಸಲ್ಪಟ್ಟವರು
“ನೀವು ಯಾವ ದೇವರ ರಾಜ್ಯಕ್ಕಾಗಿ ಕಷ್ಟವನನ್ನುಭವಿಸುತ್ತಿರುವಿರೋ ಅದಕ್ಕಾಗಿ ನೀವು ಯೋಗ್ಯರೆಂದು ಎಣಿಸಲ್ಪಡುವಂತೆ ಇದು ದೇವರ ನ್ಯಾಯವಾದ ತೀರ್ಪಿಗೆ ಸ್ಪಷ್ಟವಾದ ನಿದರ್ಶನವಾಗಿದೆ.” —2 ಥೆಸ. 1:5, NIBV.
ನಮ್ಮ ಸಾಮಾನ್ಯ ಶಕದ 50ನೇ ಇಸವಿಯಷ್ಟಕ್ಕೆ ಅಪೊಸ್ತಲ ಪೌಲನು ಅಥೇನೆಯಲ್ಲಿದ್ದನು. ಅಲ್ಲಿ ಎಲ್ಲೆಡೆಯೂ ನಡೆಯುತ್ತಿದ್ದ ವಿಗ್ರಹಾರಾಧನೆಯನ್ನು ನೋಡಿ ಅವನು ವ್ಯಾಕುಲಗೊಂಡನು. ಇದು ಅವನನ್ನು ಪರಿಣಾಮಕಾರಿ ಸಾಕ್ಷಿ ಕೊಡಲು ಪ್ರಚೋದಿಸಿತು. ಈ ಭಾಷಣದ ಕೊನೆಯಲ್ಲಿ ಅವನು ಮಾಡಿದ ಘೋಷಣೆಯು ಆ ವಿಧರ್ಮಿ ಕೇಳುಗರ ಗಮನ ಸೆಳೆದಿರಬೇಕು. ಅವನಂದದ್ದು: “ಈಗಲಾದರೋ ಆತನು [ದೇವರು] ನಾಲ್ಕು ದಿಕ್ಕಿನಲ್ಲಿರುವ ಮನುಷ್ಯರೆಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪ್ಪಣೆಕೊಡುತ್ತಾನೆ. ಯಾಕಂದರೆ ಆತನು ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ ಒಂದು ದಿವಸವನ್ನು ಗೊತ್ತುಮಾಡಿದ್ದಾನೆ. ಅವನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ ಇದನ್ನು ನಂಬುವದಕ್ಕೆ ಎಲ್ಲರಿಗೂ ಆಧಾರ ಕೊಟ್ಟಿದ್ದಾನೆ.”—ಅ. ಕೃ. 17:30, 31.
2 ದೇವರು ಮಾನವಕುಲಕ್ಕಾಗಿ ಭವಿಷ್ಯದಲ್ಲಿ ಒಂದು ನ್ಯಾಯವಿಚಾರಣೆಯ ದಿನವನ್ನು ಗೊತ್ತುಪಡಿಸಿದ್ದಾನೆಂಬ ವಾಸ್ತವಾಂಶದ ಬಗ್ಗೆ ಯೋಚಿಸುವುದು ಎಷ್ಟು ಗಂಭೀರ ವಿಷಯ! ಆ ನ್ಯಾಯವಿಚಾರಣೆ ಮಾಡುವವನ ಹೆಸರನ್ನು ಪೌಲನು ಅಥೇನೆಯಲ್ಲಿನ ತನ್ನ ಭಾಷಣದಲ್ಲಿ ಹೇಳದಿದ್ದರೂ ಪುನರುತ್ಥಿತ ಯೇಸು ಕ್ರಿಸ್ತನೇ ಅವನೆಂದು ನಮಗೆ ತಿಳಿದಿದೆ. ಯೇಸು ಕೊಡುವ ತೀರ್ಪು ಜೀವ ಇಲ್ಲವೇ ಮರಣದಲ್ಲಿ ಪರಿಣಮಿಸುವುದು.
3 ಆ ನ್ಯಾಯವಿಚಾರಣೆಯ ದಿನವು 1,000 ವರ್ಷಗಳಷ್ಟು ಉದ್ದವಾಗಿರುವುದು. ಈ ನ್ಯಾಯವಿಚಾರಣೆಯನ್ನು ಯೇಸು ದೇವರ ರಾಜ್ಯದ ರಾಜನಾಗಿ ಯೆಹೋವನ ಹೆಸರಿನಲ್ಲಿ ಮಾಡುವನು. ಆದರೆ ಇದನ್ನು ಅವನೊಬ್ಬನೇ ಮಾಡುವುದಿಲ್ಲ. ಆ ಸಹಸ್ರ ವರ್ಷ ಉದ್ದದ ದಿನದಲ್ಲಿ ಯೇಸುವಿನೊಂದಿಗೆ ಆಳುವಂತೆ ಮತ್ತು ನ್ಯಾಯತೀರಿಸುವಂತೆ ಯೆಹೋವನು ಮಾನವರೊಳಗಿಂದ ಇತರರನ್ನು ಆಯ್ಕೆಮಾಡುತ್ತಾನೆ. (ಲೂಕ 22:29, 30ನ್ನು ಹೋಲಿಸಿ.) ಬಹುಮಟ್ಟಿಗೆ 4,000 ವರ್ಷಗಳ ಹಿಂದೆಯೇ ಯೆಹೋವನು ಆ ನ್ಯಾಯವಿಚಾರಣೆಯ ದಿನಕ್ಕಾಗಿ ತಳಪಾಯ ಹಾಕುತ್ತಾ, ತನ್ನ ನಂಬಿಗಸ್ತ ಸೇವಕನಾದ ಅಬ್ರಹಾಮನೊಂದಿಗೆ ಒಂದು ಒಡಂಬಡಿಕೆ ಮಾಡಿದನು. (ಆದಿಕಾಂಡ 22:17, 18ನ್ನು ಓದಿ.) ಆ ಒಡಂಬಡಿಕೆಯು ಸಾ.ಶ.ಪೂ. 1943ರಲ್ಲಿ ಜಾರಿಗೆ ಬಂತೆಂಬುದು ವ್ಯಕ್ತ. ಆ ಒಡಂಬಡಿಕೆಯು ಮಾನವಕುಲಕ್ಕಾಗಿ ಏನನ್ನು ಸೂಚಿಸುತ್ತದೆಂಬುದನ್ನು ಅಬ್ರಹಾಮನು ಆಗ ಪೂರ್ಣ ರೀತಿಯಲ್ಲಿ ಗ್ರಹಿಸಲು ಶಕ್ತನಾಗಿರಲಿಲ್ಲ ನಿಜ. ಆದರೆ ಅಬ್ರಹಾಮನ ಸಂತತಿಯು ಮಾನವಕುಲದ ನ್ಯಾಯವಿಚಾರಣೆಯ ಕುರಿತ ದೇವರ ಉದ್ದೇಶದ ನೆರವೇರಿಕೆಯಲ್ಲಿ ವಿಶೇಷ ಪಾತ್ರ ವಹಿಸುತ್ತದೆಂದು ನಮಗೆ ಇಂದು ಪೂರ್ಣವಾಗಿ ತಿಳಿದಿದೆ.
4 ಅಬ್ರಹಾಮನ ಸಂತತಿಯ ಪ್ರಧಾನ ಭಾಗವು ಯೇಸು ಎಂಬುದು ಪ್ರಕಟವಾಯಿತು. ಅವನು ಸಾ.ಶ. 29ರಲ್ಲಿ ಪವಿತ್ರಾತ್ಮದಿಂದ ಅಭಿಷೇಕಿತನಾಗಿ, ವಾಗ್ದತ್ತ ಮೆಸ್ಸೀಯ ಅಂದರೆ ಕ್ರಿಸ್ತನಾದನು. (ಗಲಾ. 3:16) ಅಂದಿನಿಂದ ಮೂರುವರೆ ವರ್ಷಗಳ ವರೆಗೆ ರಾಜ್ಯದ ಸುವಾರ್ತೆಯನ್ನು ಯೇಸು ಯೆಹೂದಿ ಜನಾಂಗಕ್ಕೆ ಸಾರಿದನು. ಆ ರಾಜ್ಯದಲ್ಲಿ ಇತರರು ಪಾಲಿಗರಾಗಲು ನಿರೀಕ್ಷಿಸಬಹುದೆಂದು ಸ್ನಾನಿಕನಾದ ಯೋಹಾನನ ಬಂಧನದ ನಂತರ ಯೇಸು ತಿಳಿಯಪಡಿಸಿದನು. ಅವನಂದದ್ದು: “ಸ್ನಾನಿಕನಾದ ಯೋಹಾನನ ದಿನದಿಂದ ಈ ವರೆಗೆ ಜನರು ಪರಲೋಕರಾಜ್ಯವನ್ನು ಗುರಿಯಾಗಿಟ್ಟುಕೊಂಡು ಮುಂದೊತ್ತುತ್ತಿದ್ದಾರೆ; ಮುಂದೊತ್ತುವವರೇ ಅದನ್ನು ಸ್ವಾಧೀನಮಾಡಿಕೊಳ್ಳುತ್ತಾರೆ.”—ಮತ್ತಾ. 11:12, NW.
5 ಆಸಕ್ತಿಕರ ಸಂಗತಿಯೇನೆಂದರೆ ಪರಲೋಕ ರಾಜ್ಯವನ್ನು ‘ಸ್ವಾಧೀನಪಡಿಸಿ’ಕೊಳ್ಳುವವರ ಕುರಿತಾಗಿ ಮಾತಾಡುವ ಸ್ವಲ್ಪ ಮುಂಚೆಯೇ ಯೇಸು ಹೇಳಿದ್ದು: “ಸ್ತ್ರೀಯರಲ್ಲಿ ಹುಟ್ಟಿದವರೊಳಗೆ ಸ್ನಾನಿಕನಾದ ಯೋಹಾನನಿಗಿಂತ ದೊಡ್ಡವನು ಎದ್ದಿಲ್ಲ. ಆದರೂ ಪರಲೋಕರಾಜ್ಯದಲ್ಲಿರುವ ಚಿಕ್ಕವನು ಅವನಿಗಿಂತಲೂ ದೊಡ್ಡವನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.” (ಮತ್ತಾ. 11:11) ಆತನು ಹೀಗೆ ಹೇಳಿದ್ದೇಕೆ? ಏಕೆಂದರೆ ಸ್ನಾನಿಕನಾದ ಯೋಹಾನನ ಮರಣದ ನಂತರವೇ, ಅಂದರೆ ಸಾ.ಶ. 33ರ ಪಂಚಾಶತ್ತಮದಂದು ಪವಿತ್ರಾತ್ಮದ ಸುರಿಯುವಿಕೆಯ ನಂತರವೇ ದೇವರ ರಾಜ್ಯದ ಏರ್ಪಾಡಿನ ಭಾಗವಾಗುವ ನಿರೀಕ್ಷೆಯು ನಂಬಿಗಸ್ತರಿಗಾಗಿ ತೆರೆಯಲಾಯಿತು.—ಅ. ಕೃ. 2:1-4.
ಅಬ್ರಹಾಮನ ಸಂತತಿಯವರು ನೀತಿವಂತರೆಂದು ನಿರ್ಣಯಿಸಲ್ಪಡುತ್ತಾರೆ
6 ಅಬ್ರಹಾಮನ ಸಂತತಿಯು ಹೆಚ್ಚುತ್ತಾ ಹೋಗಿ, “ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದಲ್ಲಿರುವ ಉಸುಬಿನಂತೆಯೂ” ಆಗುವುದೆಂದು ಅವನಿಗೆ ಹೇಳಲಾಯಿತು. (ಆದಿ. 13:16; 22:17) ಬೇರೆ ಮಾತುಗಳಲ್ಲಿ ಹೇಳುವುದಾದರೆ, ಆ ಸಂತತಿಯಲ್ಲಿ ಒಟ್ಟು ಎಷ್ಟು ಮಂದಿ ಇರುವರೆಂದು ಅಬ್ರಹಾಮನ ಸಮಯದಲ್ಲಿ ಮನುಷ್ಯರಿಗೆ ತಿಳಿಯುವುದು ಅಸಾಧ್ಯವಾಗಿತ್ತು. ಆದರೆ ಅವನ ಆಧ್ಯಾತ್ಮಿಕ ಸಂತತಿಯ ಸರಿಯಾದ ಸಂಖ್ಯೆಯನ್ನು ಕಟ್ಟಕಡೆಗೆ ಪ್ರಕಟಿಸಲಾಯಿತು. ಯೇಸು ಅಲ್ಲದೆ, 1,44,000 ಮಂದಿ ಅದರಲ್ಲಿ ಇರಲಿದ್ದರು.—ಪ್ರಕ. 7:4; 14:1.
7 ಅಬ್ರಹಾಮನ ನಂಬಿಕೆಯ ಕುರಿತಾಗಿ ದೇವರ ವಾಕ್ಯ ಹೀಗನ್ನುತ್ತದೆ: “ಅಬ್ರಾಮನು ಯೆಹೋವನಲ್ಲಿ ನಂಬಿಕೆಯಿಟ್ಟನು. ಆತನು ಅದನ್ನು ನೀತಿ ಎಂದು ಎಣಿಸಿದನು.” (ಆದಿ. 15:5, 6, NIBV) ಯಾವ ಮಾನವನೂ ಸಂಪೂರ್ಣ ಅರ್ಥದಲ್ಲಿ ನೀತಿವಂತನಾಗಿರುವುದಿಲ್ಲ ನಿಶ್ಚಯ. (ಯಾಕೋ. 3:2) ಹಾಗಿದ್ದರೂ ಅಬ್ರಹಾಮನ ಅಸಾಧಾರಣ ನಂಬಿಕೆಯ ಕಾರಣ ಯೆಹೋವನು ಅವನೊಬ್ಬ ನೀತಿವಂತನೊ ಎಂಬಂತೆ ವ್ಯವಹರಿಸಿದನು ಮತ್ತು ಅವನನ್ನು ಸ್ನೇಹಿತನೆಂದೂ ಕರೆದನು. (ಯೆಶಾ. 41:8) ಯೇಸುವಿನ ಜೊತೆಯಲ್ಲಿ ಅಬ್ರಹಾಮನ ಆಧ್ಯಾತ್ಮಿಕ ಸಂತತಿಯವರಾಗುವ ಇತರರನ್ನು ಸಹ ನೀತಿವಂತರೆಂದು ನಿರ್ಣಯಿಸಲಾಗಿದೆ ಮತ್ತು ಇದು ಅಬ್ರಹಾಮನಿಗೆ ಸಿಕ್ಕಿದಕ್ಕಿಂತಲೂ ಹೆಚ್ಚಿನ ಆಶೀರ್ವಾದಗಳನ್ನು ಅವರಿಗೆ ತರುತ್ತದೆ.
8 ಅಭಿಷಿಕ್ತ ಕ್ರೈಸ್ತರನ್ನು ನೀತಿವಂತರೆಂದು ನಿರ್ಣಯಿಸಲಾಗುತ್ತದೆ ಏಕೆಂದರೆ ಅವರು ಯೇಸುವಿನ ವಿಮೋಚನಾ ಮೌಲ್ಯದ ಯಜ್ಞದಲ್ಲಿ ನಂಬಿಕೆಯಿಡುತ್ತಾರೆ. (ರೋಮಾ. 3:24, 28) ಯೆಹೋವನ ದೃಷ್ಟಿಯಲ್ಲಿ ಅವರು ಪಾಪದಿಂದ ಬಿಡುಗಡೆ ಹೊಂದಿದ್ದಾರೆ ಮತ್ತು ಈ ಕಾರಣ ದೇವರ ಆತ್ಮಿಕ ಪುತ್ರರೂ ಯೇಸು ಕ್ರಿಸ್ತನ ಸಹೋದರರೂ ಆಗಿರಲು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಡಬಲ್ಲರು. (ಯೋಹಾ. 1:12, 13) ಅವರು ಹೊಸ ಒಡಂಬಡಿಕೆಯೊಳಗೆ ತರಲ್ಪಟ್ಟು, ‘ದೇವರ ಇಸ್ರಾಯೇಲ್’ ಎಂಬ ಹೊಸ ಜನಾಂಗವಾಗುತ್ತಾರೆ. (ಗಲಾ. 6:16; ಲೂಕ 22:20) ಇವೆಲ್ಲವೂ ಎಂಥ ಅತ್ಯದ್ಭುತ ಸನ್ಮಾನಗಳಾಗಿವೆ! ದೇವರು ತಮಗಾಗಿ ಮಾಡಿರುವ ಈ ಎಲ್ಲ ಸಂಗತಿಗಳಿಂದಾಗಿ ಅಭಿಷಿಕ್ತ ಕ್ರೈಸ್ತರು ಈ ಭೂಮಿಯ ಮೇಲೆ ಸದಾಕಾಲ ಜೀವಿಸಲು ನಿರೀಕ್ಷಿಸುವುದಿಲ್ಲ. ನ್ಯಾಯವಿಚಾರಣೆಯ ದಿನದಲ್ಲಿ ಯೇಸುವಿನೊಂದಿಗಿದ್ದು, ಸ್ವರ್ಗದಲ್ಲಿ ಆತನೊಂದಿಗೆ ಆಳುವುದರಲ್ಲಿರುವ ವರ್ಣನಾತೀತ ಆನಂದಕ್ಕಾಗಿ ಅವರು ಭೂಮಿ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆಯನ್ನು ತ್ಯಾಗಮಾಡುತ್ತಾರೆ.—ರೋಮಾಪುರ 8:17ನ್ನು ಓದಿ.
9 ಸಾ.ಶ. 33ರ ಪಂಚಾಶತ್ತಮದಂದು ನಂಬಿಗಸ್ತ ಮಾನವರ ಒಂದು ಗುಂಪಿಗೆ ನ್ಯಾಯವಿಚಾರಣೆಯ ದಿನದಲ್ಲಿ ಯೇಸುವಿನ ಜೊತೆ ಬಾಧ್ಯಸ್ಥರಾಗುವ ಅವಕಾಶವನ್ನು ಕೊಡಲಾಯಿತು. ಯೇಸುವಿನ ಸುಮಾರು 120 ಮಂದಿ ಶಿಷ್ಯರು ಪವಿತ್ರಾತ್ಮದಿಂದ ದೀಕ್ಷಾಸ್ನಾನಪಡೆದು, ಪ್ರಪ್ರಥಮ ಅಭಿಷಿಕ್ತ ಕ್ರೈಸ್ತರಾದರು. ಆದರೆ ಇದು ಅವರು ಪರಲೋಕದಲ್ಲಿ ನಿತ್ಯಜೀವವನ್ನು ಪಡೆಯುವುದಕ್ಕೆ ಕೇವಲ ಮೊದಲ ಹೆಜ್ಜೆ ಆಗಿತ್ತು. ಅಂದಿನಿಂದ ಸೈತಾನನು ಅವರ ಮೇಲೆ ತರಲಿದ್ದ ಎಲ್ಲ ಪರೀಕ್ಷೆಗಳ ಮಧ್ಯೆಯೂ ಅವರು ಯೆಹೋವನಿಗೆ ನಿಷ್ಠೆಯನ್ನು ತೋರಿಸಬೇಕಿತ್ತು. ಸ್ವರ್ಗೀಯ ಜೀವನದ ಜಯಮಾಲೆಯನ್ನು ಪಡೆಯಲಿಕ್ಕಾಗಿ ಅವರು ಮರಣದಪರ್ಯಂತವೂ ನಂಬಿಗಸ್ತರಾಗಿರಬೇಕಿತ್ತು.—ಪ್ರಕ. 2:10.
10 ಅವರು ನಂಬಿಗಸ್ತರಾಗಿರುವಂತೆ, ಯೆಹೋವನು ತನ್ನ ವಾಕ್ಯ ಹಾಗೂ ಕ್ರೈಸ್ತ ಸಭೆಯ ಮುಖಾಂತರ ಅಭಿಷಿಕ್ತ ಕ್ರೈಸ್ತರಿಗೆ ಬೇಕಾದಂಥ ಬುದ್ಧಿವಾದ ಮತ್ತು ಉತ್ತೇಜನವನ್ನು ಕೊಟ್ಟನು. ಉದಾಹರಣೆಗೆ, ಅಪೊಸ್ತಲ ಪೌಲನು ಥೆಸಲೊನೀಕದಲ್ಲಿದ್ದ ಅಭಿಷಿಕ್ತ ಕ್ರೈಸ್ತರಿಗೆ ಬರೆದದ್ದು: ‘ತಂದೆಯು ತನ್ನ ಮಕ್ಕಳಿಗೆ ಹೇಗೋ ಹಾಗೆಯೇ ನಾವು ನಿಮ್ಮಲ್ಲಿ ಪ್ರತಿಯೊಬ್ಬನಿಗೆ ಬುದ್ಧಿಹೇಳುತ್ತಾ ಧೈರ್ಯಪಡಿಸುತ್ತಾ ತನ್ನ ರಾಜ್ಯಪ್ರಭಾವಗಳಲ್ಲಿ ಪಾಲುಗಾರರಾಗುವದಕ್ಕೆ ಕರೆಯುವ ದೇವರಿಗೆ ಯೋಗ್ಯರಾಗಿ ನೀವು ನಡೆಯಬೇಕೆಂದು ಖಂಡಿತವಾಗಿ ಹೇಳುತ್ತಾ ಇದ್ದೆವು.’—1 ಥೆಸ. 2:11, 12.
11 ಯೇಸುವಿನ ಭೂಶುಶ್ರೂಷೆಯ ಕುರಿತು ಮತ್ತು ಪ್ರಥಮ ಶತಮಾನದ ಅಭಿಷಿಕ್ತರೊಂದಿಗಿನ ತನ್ನ ವ್ಯವಹಾರಗಳು ಹಾಗೂ ಸಲಹೆಯ ಕುರಿತು ಒಂದು ಕಾಯಂ ದಾಖಲೆಯನ್ನು ಮಾಡುವುದು ಸೂಕ್ತವೆಂದು ಯೆಹೋವನು ಎಣಿಸಿದನು. ಈ ದಾಖಲೆಯನ್ನು ಆತನು ಮಾಡಿದ್ದು, ಅಭಿಷಿಕ್ತ ಕ್ರೈಸ್ತ ಸಭೆಯ ಪ್ರಥಮ ಸದಸ್ಯರು ಆಯ್ಕೆಮಾಡಲ್ಪಟ್ಟ ನಂತರದ ದಶಕಗಳಲ್ಲಿಯೇ. ಹೀಗೆ ಯೆಹೋವನು, ಈ ಮೊದಲೇ ಇದ್ದಂಥ ಪ್ರೇರಿತ ಹೀಬ್ರು ಶಾಸ್ತ್ರಗಳಿಗೆ ಪ್ರೇರಿತ ಕ್ರೈಸ್ತ ಗ್ರೀಕ್ ಶಾಸ್ತ್ರಗಳನ್ನು ಕೂಡಿಸಿದನು. ಹೀಬ್ರು ಶಾಸ್ತ್ರಗಳನ್ನು ಆರಂಭದಲ್ಲಿ ಮಾಂಸಿಕ ಇಸ್ರಾಯೇಲ್ ಜನಾಂಗಕ್ಕಾಗಿ ಬರೆಯಲಾಯಿತು. ಆಗ ಅವರಿಗೆ ದೇವರೊಂದಿಗೆ ಒಂದು ವಿಶೇಷ ಸಂಬಂಧವಿತ್ತು. ಕ್ರೈಸ್ತ ಗ್ರೀಕ್ ಶಾಸ್ತ್ರಗಳನ್ನಾದರೊ ಪ್ರಧಾನವಾಗಿ ‘ದೇವರ ಇಸ್ರಾಯೇಲ್’ಗಾಗಿ, ಅಂದರೆ ಕ್ರಿಸ್ತನ ಸಹೋದರರೂ ದೇವರ ಆತ್ಮಿಕ ಪುತ್ರರೂ ಆಗಿದ್ದ ಅಭಿಷಿಕ್ತರಿಗಾಗಿ ಬರೆಯಲಾಯಿತು. ಇಸ್ರಾಯೇಲ್ಯರಲ್ಲದವರು ಸಹ ಹೀಬ್ರು ಶಾಸ್ತ್ರಗಳ ಅಧ್ಯಯನದಿಂದ ಬಹಳಷ್ಟು ಪ್ರಯೋಜನ ಪಡೆಯಸಾಧ್ಯವಿತ್ತು ಖಂಡಿತ. ಹಾಗೆಯೇ ಅಭಿಷಿಕ್ತರಲ್ಲದ ಕ್ರೈಸ್ತರು ಕೂಡ, ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿರುವ ಸಲಹೆಯನ್ನು ಅಧ್ಯಯನಮಾಡಿ ಅದಕ್ಕನುಸಾರ ಜೀವಿಸುವ ಮೂಲಕ ಅಳೆಯಲಾಗದಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ.—2 ತಿಮೊಥೆಯ 3:15-17ನ್ನು ಓದಿ.
12 ಪ್ರಥಮ ಶತಮಾನದ ಕ್ರೈಸ್ತರನ್ನು ನೀತಿವಂತರೆಂದು ನಿರ್ಣಯಿಸಿ, ಪವಿತ್ರಾತ್ಮದಿಂದ ಅಭಿಷೇಕಿಸಲಾಯಿತು. ಅವರು ತಮ್ಮ ಸ್ವರ್ಗೀಯ ಸ್ವಾಸ್ಥ್ಯವನ್ನು ಪಡೆದುಕೊಳ್ಳುವಂತಾಗಲು ಇದನ್ನು ಮಾಡಲಾಯಿತು. ಅವರು ಅಭಿಷಿಕ್ತರಾಗಿದ್ದಾರೆಂಬ ಸಂಗತಿಯು, ಭೂಮಿಯಲ್ಲಿರುವಾಗಲೇ ಇತರ ಜೊತೆ ಅಭಿಷಿಕ್ತರ ಮೇಲೆ ರಾಜರಾಗುವ ಉನ್ನತಸ್ಥಾನವನ್ನು ಅವರಿಗೆ ಕೊಡಲಿಲ್ಲ. ಆರಂಭದ ಕ್ರೈಸ್ತರಲ್ಲಿ ಕೆಲವರು ಈ ವಾಸ್ತವಾಂಶವನ್ನು ಮರೆತುಬಿಟ್ಟರೆಂಬುದು ವ್ಯಕ್ತ. ಅವರು ಸಭೆಯಲ್ಲಿ ಸಹೋದರರ ಮಧ್ಯೆ ಅನುಚಿತ ಪ್ರಮುಖತೆಯನ್ನು ಗಳಿಸಲು ಪ್ರಯತ್ನಿಸಿದರು. ಆದುದರಿಂದ ಪೌಲನು ಅವರಿಗೆ ಹೀಗೆ ಕೇಳುವಂತಾಯಿತು: “ಈಗಾಗಲೇ ನೀವು ತೃಪ್ತರಾದಿರಿ, ಈಗಾಗಲೇ ಐಶ್ವರ್ಯವಂತರಾದಿರಿ, ನಮ್ಮ ಸಹಾಯವಿಲ್ಲದೆ ಅರಸರಾದಿರಿ. ನೀವು ನಿಜವಾಗಿ ಅರಸರಾಗಿದ್ದರೆ ನನಗೆ ಎಷ್ಟೋ ಆನಂದವಾಗುತ್ತಿತ್ತು; ಆಗ ನಾವು ಸಹ ನಿಮ್ಮೊಂದಿಗೆ ಅರಸರಾಗಿರುತ್ತಿದ್ದೆವು.” (1 ಕೊರಿಂ. 4:8) ಅದಕ್ಕಾಗಿಯೇ ಪೌಲನು ತನ್ನ ದಿನದಲ್ಲಿದ್ದ ಅಭಿಷಿಕ್ತರಿಗೆ ನೆನಪುಹುಟ್ಟಿಸಿದ್ದು: “ನಾವು ನಂಬಿಕೆಯ ವಿಷಯದಲ್ಲಿಯೂ ನಿಮ್ಮ ಮೇಲೆ ದೊರೆತನಮಾಡುವವರೆಂದು ನನ್ನ ತಾತ್ಪರ್ಯವಲ್ಲ; ನಿಮ್ಮ ಸಂತೋಷಕ್ಕೆ ನಾವು ಸಹಾಯಕರಾಗಿದ್ದೇವೆ.”—2 ಕೊರಿಂ. 1:24.
ಮುಂತಿಳಿಸಲ್ಪಟ್ಟ ಸಂಖ್ಯೆಯನ್ನು ಪೂರ್ಣಗೊಳಿಸುವುದು
13 ಎಲ್ಲಾ 1,44,000 ಮಂದಿ ಅಭಿಷಿಕ್ತ ಕ್ರೈಸ್ತರನ್ನು ಪ್ರಥಮ ಶತಮಾನದಲ್ಲೇ ಆಯ್ಕೆಮಾಡಲಾಗಲಿಲ್ಲ. ಅವರ ಆಯ್ಕೆಯು ಅಪೊಸ್ತಲರು ಜೀವಿಸಿದ ಅವಧಿಯಾದ್ಯಂತ ಮುಂದುವರಿಯಿತು ಮತ್ತು ನಂತರ ನಿಧಾನಗೊಂಡಿತೆಂದು ತೋರುತ್ತದೆ. ಆದರೆ ಅದು ಮುಂದಿನ ಶತಮಾನಗಳಲ್ಲಿ ಮುಂದುವರಿದು ಆಧುನಿಕ ಸಮಯಗಳನ್ನು ತಲಪಿದೆ. (ಮತ್ತಾ. 28:20) ಯೇಸು 1914ರಲ್ಲಿ ರಾಜನಾಗಿ ಆಳಲಾರಂಭಿಸಿದಂದಿನಿಂದ ಈ ಆಯ್ಕೆಮಾಡುವಿಕೆಯು ತ್ವರಿತಗತಿಯಲ್ಲಿ ಮುಂದೆಸಾಗಿತು.
14 ಮೊದಲನೆಯದಾಗಿ, ಸ್ವರ್ಗದಲ್ಲಿ ದೈವಿಕ ಆಳ್ವಿಕೆಯ ಕಡೆಗಿನ ವಿರೋಧದ ಎಲ್ಲ ಜಾಡುಗಳನ್ನು ಯೇಸು ತೆಗೆದು ಶುದ್ಧಮಾಡಿದನು. (ಪ್ರಕಟನೆ 12:10, 12ನ್ನು ಓದಿ.) ತದನಂತರ ಅವನು 1,44,000 ಸಂಖ್ಯೆಯನ್ನು ಪೂರ್ಣಗೊಳಿಸಲಿಕ್ಕಾಗಿ ತನ್ನ ರಾಜ್ಯ ಸರಕಾರದ ಉಳಿದಿರುವ ಭಾವೀ ಸದಸ್ಯರನ್ನು ಒಟ್ಟುಗೂಡಿಸುವ ಕೆಲಸಕ್ಕೆ ಗಮನ ಕೊಟ್ಟನು. 1930ನೇ ದಶಕದ ಮಧ್ಯಭಾಗದಲ್ಲಿ ಈ ಕೆಲಸವು ಮುಗಿಯುತ್ತಾ ಬರುತ್ತಿರುವಂತೆ ತೋರಿತು. ಏಕೆಂದರೆ ಸಾರುವ ಕೆಲಸಕ್ಕೆ ಪ್ರತಿಕ್ರಿಯೆ ತೋರಿಸುತ್ತಿರುವ ಹೆಚ್ಚಿನವರಿಗೆ ಸ್ವರ್ಗಕ್ಕೆ ಹೋಗುವ ಅಪೇಕ್ಷೆ ಇರಲಿಲ್ಲ. ಅವರು ದೇವರ ಪುತ್ರರಾಗಿದ್ದಾರೆಂದು ಪವಿತ್ರಾತ್ಮವು ಅವರಿಗೆ ಸಾಕ್ಷಿಹೇಳಲಿಲ್ಲ. (ರೋಮಾಪುರ 8:16ನ್ನು ಹೋಲಿಸಿ.) ಇದಕ್ಕೆ ಬದಲಾಗಿ, ಅವರು “ಬೇರೆ ಕುರಿಗಳ” ಗುಂಪಿಗೆ ಸೇರಿದವರೆಂದು ಗ್ರಹಿಸಿಕೊಂಡರು. ಆ ಗುಂಪಿನವರಿಗೆ ಪರದೈಸ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುವ ನಿರೀಕ್ಷೆ ಇದೆ. (ಯೋಹಾ. 10:16) ಆದುದರಿಂದ 1935ರ ಬಳಿಕ ಸಾರುವ ಕೆಲಸದಲ್ಲಿ ಹೆಚ್ಚಿನ ಗಮನವನ್ನು ‘ಮಹಾ ಸಮೂಹದ’ ಒಟ್ಟುಗೂಡಿಸುವಿಕೆಗೆ ಕೊಡಲಾಯಿತು. ಈ ಮಹಾ ಸಮೂಹವನ್ನು ಅಪೊಸ್ತಲ ಯೋಹಾನನು ದರ್ಶನದಲ್ಲಿ ನೋಡಿದನು ಮತ್ತು ಇವರು “ಮಹಾ ಸಂಕಟವನ್ನು” (NIBV) ಪಾರಾಗಲಿದ್ದಾರೆ.—ಪ್ರಕ. 7:9, 10, 14.
15 ಆದರೆ 1930ರ ದಶಕದ ವರ್ಷಗಳಂದಿನಿಂದ ಕೆಲವರನ್ನು ಸ್ವರ್ಗೀಯ ನಿರೀಕ್ಷೆಗಾಗಿ ಆಯ್ಕೆಮಾಡಲಾಗಿದೆ. ಏಕೆ? ಕೆಲವೊಂದು ವಿದ್ಯಮಾನಗಳಲ್ಲಿ, ಹಿಂದೆ ಆಯ್ಕೆಮಾಡಲ್ಪಟ್ಟವರಲ್ಲಿ ಅಪನಂಬಿಗಸ್ತರಾದವರ ಸ್ಥಾನಭರ್ತಿಮಾಡಲಿಕ್ಕಾಗಿ ಇದ್ದಿರಬಹುದು. (ಪ್ರಕಟನೆ 3:16ನ್ನು ಹೋಲಿಸಿ.) ಸತ್ಯವನ್ನು ಬಿಟ್ಟುಹೋಗಿದ್ದ ತನ್ನ ಕೆಲವು ಪರಿಚಯಸ್ಥರ ಕುರಿತಾಗಿ ಪೌಲನು ಸಹ ಹೇಳಿದನು. (ಫಿಲಿ. 3:17-19) ಅಪನಂಬಿಗಸ್ತರ ಸ್ಥಾನಭರ್ತಿಗಾಗಿ ಯೆಹೋವನು ಯಾರನ್ನು ಆಯ್ಕೆಮಾಡುವನು? ಖಂಡಿತವಾಗಿಯೂ ಅದು ಆತನು ಮಾಡುವ ನಿರ್ಣಯವಾಗಿದೆ. ಆದರೆ ಆತನು ಹೊಸದಾಗಿ ಕ್ರೈಸ್ತರಾದವರನ್ನಲ್ಲ ಬದಲಾಗಿ, ನಿರ್ದಿಷ್ಟ ಮಟ್ಟದ ವರೆಗೆ ತಮ್ಮ ನಿಷ್ಠೆಯನ್ನು ಈ ಮೊದಲೇ ರುಜುಪಡಿಸಿದವರನ್ನು ಆಯ್ಕೆಮಾಡುವನೆಂಬುದು ನ್ಯಾಯಸಮ್ಮತ. ಉದಾಹರಣೆಗೆ, ಯೇಸು ಜ್ಞಾಪಕದಾಚರಣೆಯನ್ನು ಆರಂಭಿಸಿದಾಗ ಯಾರೊಂದಿಗೆ ಮಾತಾಡಿದ್ದನೊ ಆ ಶಿಷ್ಯರಂತಿರುವ ವ್ಯಕ್ತಿಗಳನ್ನು ಯೆಹೋವನು ಆಯ್ಕೆಮಾಡುವನು.a—ಲೂಕ 22:28.
16 ಹಾಗಿದ್ದರೂ, 1930ರ ದಶಕದಂದಿನಿಂದ ಸ್ವರ್ಗೀಯ ನಿರೀಕ್ಷೆಗೆ ಆಯ್ಕೆಯಾದವರೆಲ್ಲರೂ ಅಪನಂಬಿಗಸ್ತರಾದವರ ಸ್ಥಾನಭರ್ತಿಮಾಡಲಿಕ್ಕಾಗಿ ಆಯ್ಕೆಯಾದವರಲ್ಲ ಎಂದು ತೋರುತ್ತದೆ.b ಈ ವ್ಯವಸ್ಥೆಯ ಕೊನೆ ದಿನಗಳಾದ್ಯಂತ ‘ಮಹಾ ಬಾಬೆಲಿನ’ ನಾಶನದವರೆಗೆ ಅಭಿಷಿಕ್ತ ಕ್ರೈಸ್ತರು ನಮ್ಮ ಮಧ್ಯೆ ಇರುವಂತೆ ಯೆಹೋವನು ಖಚಿತಪಡಿಸಿದ್ದಾನೆಂಬುದು ಸುಸ್ಪಷ್ಟ. (ಪ್ರಕ. 17:5) 1,44,000 ಮಂದಿಯ ಪೂರ್ಣ ಸಂಖ್ಯೆಯು ಯೆಹೋವನ ನೇಮಿತ ಸಮಯದಲ್ಲಿ ಪೂರ್ಣಗೊಂಡು, ಕೊನೆಗೆ ಎಲ್ಲರೂ ರಾಜ್ಯ ಸರಕಾರದಲ್ಲಿ ತಮ್ಮತಮ್ಮ ಸ್ಥಾನ ವಹಿಸುವರೆಂದು ನಮಗೆ ದೃಢಭರವಸೆ ಇರಸಾಧ್ಯವಿದೆ. ಸಂಖ್ಯೆಯಲ್ಲಿ ಹೆಚ್ಚುತ್ತಿರುವ ಮಹಾ ಸಮೂಹದವರು ಒಂದು ಗುಂಪಿನೋಪಾದಿ ನಂಬಿಗಸ್ತರಾಗಿ ಮುಂದುವರಿಯುವರೆಂದು ಹೇಳುವ ಪ್ರವಾದನ ವಾಕ್ಯವನ್ನೂ ನಾವು ನಂಬಸಾಧ್ಯವಿದೆ. ಬಲುಬೇಗನೆ ಅವರು ಸೈತಾನನ ಲೋಕದ ಮೇಲೆ ತರಲಾಗುವ ‘ಮಹಾ ಸಂಕಟದಿಂದ ಹೊರಬಂದು’ (NIBV) ದೇವರ ಹೊಸ ಲೋಕವನ್ನು ಸಂತೋಷದಿಂದ ಪ್ರವೇಶಿಸುವರು.
ದೇವರ ಸ್ವರ್ಗೀಯ ಸರಕಾರವು ಪೂರ್ಣವಾಗುವುದರಲ್ಲಿದೆ!
17 ಸಾ.ಶ. 33ರಂದಿನಿಂದ ಸಾವಿರಾರು ಮಂದಿ ಅಭಿಷಿಕ್ತ ಕ್ರೈಸ್ತರು ಬಲವಾದ ನಂಬಿಕೆಯನ್ನು ಪ್ರದರ್ಶಿಸಿದ್ದಾರೆ ಮತ್ತು ಮರಣದ ವರೆಗೂ ನಂಬಿಗಸ್ತಿಕೆಯಿಂದ ತಾಳಿದ್ದಾರೆ. ರಾಜ್ಯವನ್ನು ಪಡೆಯಲು ಇವರನ್ನು ಈಗಾಗಲೇ ಯೋಗ್ಯರೆಂದು ಎಣಿಸಲಾಗಿದೆ ಮತ್ತು ಕ್ರಿಸ್ತನ ಸಾನ್ನಿಧ್ಯದ ಆದಿ ಭಾಗದಲ್ಲಿ ಆರಂಭಿಸುತ್ತಾ ತಮ್ಮ ಸ್ವರ್ಗೀಯ ಪ್ರತಿಫಲವನ್ನು ಪಡೆಯಲಾರಂಭಿಸಿದ್ದಾರೆ.—1 ಥೆಸಲೊನೀಕ 4:15-17; ಪ್ರಕಟನೆ 6:9-11ನ್ನು ಓದಿ.
18 ಇನ್ನೂ ಭೂಮಿಯ ಮೇಲಿರುವ ಅಭಿಷಿಕ್ತರಿಗೆ, ತಾವು ನಂಬಿಗಸ್ತರಾಗಿ ಉಳಿದರೆ ಅದಕ್ಕಾಗಿ ತಮ್ಮ ಪ್ರತಿಫಲವನ್ನು ಬೇಗನೆ ಪಡೆಯುವೆವೆಂಬುದರ ಬಗ್ಗೆ ಪೂರ್ಣ ಭರವಸೆಯಿದೆ. ಲಕ್ಷಾಂತರ ಮಂದಿ ಬೇರೆ ಕುರಿಗಳು ತಮ್ಮ ಅಭಿಷಿಕ್ತ ಸಹೋದರರ ನಂಬಿಕೆಯನ್ನು ನೋಡುತ್ತಾ ಅಪೊಸ್ತಲ ಪೌಲನ ಮಾತುಗಳೊಂದಿಗೆ ಸಮ್ಮತಿಸುತ್ತಾರೆ. ಪೌಲನು ಥೆಸಲೊನೀಕದಲ್ಲಿದ್ದ ತನ್ನ ಅಭಿಷಿಕ್ತ ಸಹೋದರರ ಕುರಿತು ಅಂದದ್ದು: “ನಿಮಗೆ ಬಂದಿರುವ ಎಲ್ಲಾ ಹಿಂಸೆಗಳಲ್ಲಿಯೂ ನೀವು ಅನುಭವಿಸುತ್ತಿರುವ ಸಂಕಟಗಳಲ್ಲಿಯೂ ತೋರಿಬಂದ ನಿಮ್ಮ ತಾಳ್ಮೆ ನಂಬಿಕೆಗಳನ್ನು ನೆನಸಿ ನಿಮ್ಮ ವಿಷಯವಾಗಿ ಹೆಚ್ಚಳಪಟ್ಟು ದೇವರ ಸಭೆಗಳೊಳಗೆ ನಾವೇ ಮಾತಾಡುತ್ತೇವೆ. ದೇವರು ನ್ಯಾಯವಾದ ತೀರ್ಪು ಮಾಡುತ್ತಾನೆಂಬದಕ್ಕೆ ನಿಮ್ಮ ತಾಳ್ಮೆಯು ಸ್ಪಷ್ಟವಾದ ನಿದರ್ಶನವಾಗಿದೆ. ಯಾವ ದೇವರಾಜ್ಯಕ್ಕೋಸ್ಕರ ನೀವು ಕಷ್ಟವನ್ನನುಭವಿಸುತ್ತೀರೋ ಅದಕ್ಕೆ ನೀವು ಯೋಗ್ಯರಾಗಬೇಕೆಂಬದೇ [‘ಯೋಗ್ಯರೆಂದು ಎಣಿಸಲ್ಪಡುವುದು,’ NIBV] ದೇವರ ಅಭಿಪ್ರಾಯ.” (2 ಥೆಸ. 1:3-5) ಭೂಮಿ ಮೇಲಿರುವ ಅಭಿಷಿಕ್ತರಲ್ಲಿ ಕೊನೆಯ ಸದಸ್ಯನು ಮರಣಪಟ್ಟು ಪರಲೋಕಕ್ಕೆ ಹೋದಾಗ—ಇದು ಯಾವಾಗ ಆಗುತ್ತದೊ ಆಗ—ದೇವರ ಸ್ವರ್ಗೀಯ ಸರಕಾರವು ಸಂಪೂರ್ಣವಾಗುವುದು. ಅದು ಸ್ವರ್ಗದಲ್ಲೂ ಭೂಮಿಯಲ್ಲೂ ಎಷ್ಟೊಂದು ಆನಂದಕ್ಕೆ ಕಾರಣವಾಗಿರುವುದು!
[ಪಾದಟಿಪ್ಪಣಿಗಳು]
a ಇಸವಿ 1992, ಜೂನ್ 1ರ ಕಾವಲಿನಬುರುಜು ಪತ್ರಿಕೆಯ 20ನೇ ಪುಟ, 17ನೇ ಪ್ಯಾರ ನೋಡಿ.
b ಇಸವಿ 2007, ಮೇ 1ರ ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯಲ್ಲಿ “ವಾಚಕರಿಂದ ಪ್ರಶ್ನೆಗಳು” ಲೇಖನ ನೋಡಿ.
ನೀವು ವಿವರಿಸಬಲ್ಲಿರೋ?
• ನ್ಯಾಯವಿಚಾರಣೆಯ ದಿನಕ್ಕೆ ಸಂಬಂಧಪಟ್ಟ ಯಾವ ವಿಷಯವನ್ನು ದೇವರು ಅಬ್ರಹಾಮನಿಗೆ ಪ್ರಕಟಿಸಿದನು?
• ಅಬ್ರಹಾಮನನ್ನು ನೀತಿವಂತನೆಂದು ನಿರ್ಣಯಿಸಲಾಯಿತು ಏಕೆ?
• ನೀತಿವಂತರೆಂದು ಎಣಿಸಲ್ಪಡುವುದು ಅಬ್ರಹಾಮನ ಸಂತತಿಯನ್ನು ಎಲ್ಲಿಗೆ ನಡೆಸುತ್ತದೆ?
• ಎಲ್ಲ ಕ್ರೈಸ್ತರಿಗೆ ಯಾವ ದೃಢಭರವಸೆಯಿದೆ?
[ಅಧ್ಯಯನ ಪ್ರಶ್ನೆಗಳು]
1, 2. ನ್ಯಾಯವಿಚಾರಣೆಯ ವಿಷಯದಲ್ಲಿ ದೇವರ ಉದ್ದೇಶವೇನು, ಮತ್ತು ನ್ಯಾಯವಿಚಾರಣೆಯನ್ನು ಯಾರು ಮಾಡುವರು?
3. ಯೆಹೋವನು ಅಬ್ರಹಾಮನೊಂದಿಗೆ ಒಡಂಬಡಿಕೆ ಮಾಡಿದ್ದೇಕೆ, ಮತ್ತು ಅದರ ನೆರವೇರಿಕೆಯಲ್ಲಿ ಯಾರಿಗೆ ವಿಶೇಷ ಪಾತ್ರವಿದೆ?
4, 5. (ಎ) ಅಬ್ರಹಾಮನ ಸಂತತಿಯ ಪ್ರಧಾನ ಭಾಗ ಯಾರು, ಮತ್ತು ಆತನು ರಾಜ್ಯದ ಕುರಿತಾಗಿ ಏನು ಹೇಳಿದನು? (ಬಿ) ರಾಜ್ಯದ ಏರ್ಪಾಡಿನ ಭಾಗವಾಗುವ ನಿರೀಕ್ಷೆಯು ಯಾವಾಗ ಲಭ್ಯವಾಯಿತು?
6, 7. (ಎ) ಅಬ್ರಹಾಮನ ಸಂತತಿಯು ಯಾವ ವಿಧದಲ್ಲಿ “ಆಕಾಶದ ನಕ್ಷತ್ರಗಳಂತೆ” ಆಗಲಿತ್ತು? (ಬಿ) ಅಬ್ರಹಾಮನು ಯಾವ ಆಶೀರ್ವಾದ ಪಡೆದನು ಮತ್ತು ಅಂಥದ್ದೇ ಆಶೀರ್ವಾದವನ್ನು ಅವನ ಸಂತತಿ ಪಡೆಯುವುದು ಹೇಗೆ?
8. ಅಬ್ರಹಾಮನ ಸಂತತಿಗೆ ಯಾವ ಆಶೀರ್ವಾದಗಳು ಲಭ್ಯವಾಗುತ್ತವೆ?
9, 10. (ಎ) ಕ್ರೈಸ್ತರು ಪ್ರಥಮವಾಗಿ ಪವಿತ್ರಾತ್ಮದಿಂದ ಅಭಿಷಿಕ್ತರಾದಾಗ ಅವರಿಗಾಗಿ ಏನು ಕಾದಿತ್ತು? (ಬಿ) ಅಭಿಷಿಕ್ತ ಕ್ರೈಸ್ತರಿಗೆ ಯಾವ ಸಹಾಯಸಿಕ್ಕಿತು?
11. ‘ದೇವರ ಇಸ್ರಾಯೇಲಿನ’ ಸದಸ್ಯರಿಗಾಗಿ ಯೆಹೋವನು ಯಾವ ಲಿಖಿತ ದಾಖಲೆಯನ್ನು ಮಾಡಿದನು?
12. ಪೌಲನು ಅಭಿಷಿಕ್ತ ಕ್ರೈಸ್ತರಿಗೆ ಯಾವ ಮರುಜ್ಞಾಪನವನ್ನು ಕೊಟ್ಟನು?
13. ಸಾ.ಶ. 33ರ ನಂತರ ಅಭಿಷಿಕ್ತರ ಆಯ್ಕೆಮಾಡುವಿಕೆಯು ಹೇಗೆ ಮುಂದೆಸಾಗಿತು?
14, 15. ಅಭಿಷಿಕ್ತರ ಆಯ್ಕೆಯ ವಿಷಯದಲ್ಲಿ ನಮ್ಮ ಸಮಯದಲ್ಲಿ ಏನು ಸಂಭವಿಸಿದೆ?
16. ಅಭಿಷಿಕ್ತರ ವಿಷಯದಲ್ಲಿ ನಾವು ಯಾವುದಕ್ಕಾಗಿ ಕೃತಜ್ಞರು, ಮತ್ತು ನಾವು ದೃಢಭರವಸೆಯಿಂದ ಏನನ್ನು ನಂಬಬಲ್ಲೆವು?
17. ಒಂದು ಥೆಸಲೊನೀಕ 4:15-17 ಮತ್ತು ಪ್ರಕಟನೆ 6:9-11ಕ್ಕನುಸಾರ ನಂಬಿಗಸ್ತರಾಗಿ ಮರಣಪಟ್ಟ ಅಭಿಷಿಕ್ತ ಕ್ರೈಸ್ತರಿಗೆ ಏನಾಯಿತು?
18. (ಎ) ಇನ್ನೂ ಭೂಮಿಯ ಮೇಲಿರುವ ಅಭಿಷಿಕ್ತರಿಗೆ ಯಾವ ಭರವಸೆಯಿದೆ? (ಬಿ) ಬೇರೆ ಕುರಿಗಳಿಗೆ ತಮ್ಮ ಅಭಿಷಿಕ್ತ ಕ್ರೈಸ್ತ ಸಹೋದರರ ಬಗ್ಗೆ ಯಾವ ನೋಟವಿದೆ?
[ಪುಟ 20ರಲ್ಲಿರುವ ಚಿತ್ರ]
ಯೇಸು ತನ್ನ ಹಿಂಬಾಲಕರಿಗೆ ರಾಜ್ಯಕ್ಕಾಗಿ ಎಟಕಿಸಿಕೊಳ್ಳುವಂತೆ ಉತ್ತೇಜಿಸಿದನು
[ಪುಟ 21ರಲ್ಲಿರುವ ಚಿತ್ರ]
ಸಾ.ಶ. 33ರ ಪಂಚಾಶತ್ತಮದಲ್ಲಿ ಯೆಹೋವನು ಅಬ್ರಹಾಮನ ಸಂತತಿಯ ದ್ವಿತೀಯ ಭಾಗವನ್ನು ಆಯ್ಕೆಮಾಡಲು ಆರಂಭಿಸಿದನು
[ಪುಟ 23ರಲ್ಲಿರುವ ಚಿತ್ರಗಳು]
ಈ ಕಡೇ ದಿವಸಗಳಲ್ಲಿ ಅಭಿಷಿಕ್ತ ಕ್ರೈಸ್ತರು ತಮ್ಮೊಂದಿಗೆ ಇರುವುದಕ್ಕಾಗಿ ಬೇರೆ ಕುರಿಗಳು ಕೃತಜ್ಞರಾಗಿದ್ದಾರೆ