ಯೆಹೋವನ ಕರುಣೆಯ ಕುರಿತಾಗಿ ಯೋನನು ಕಲಿಯುತ್ತಾನೆ
ಯೆಹೋವನು ತನ್ನ ಪ್ರವಾದಿಯಾದ ಯೋನನಿಗಾಗಿ ಒಂದು ನೇಮಕವನ್ನು ಇಟ್ಟಿದ್ದಾನೆ. ಸಾ.ಶ.ಪೂ. ಒಂಬತ್ತನೆಯ ಶತಮಾನದ ಕಾಲವಾಗಿದೆ, ಮತ್ತು IIನೆಯ ಯಾರೊಬ್ಬಾಮನು ಇಸ್ರಾಯೇಲಿನಲ್ಲಿ ಆಳುತ್ತಿದ್ದಾನೆ. ಯೋನನು, ಜೆಬುಲೂನ್ಯ ಪಟ್ಟಣವಾದ ಗತ್ಹೇಫೆರ್ನಿಂದ ಬಂದವನಾಗಿದ್ದಾನೆ. (ಯೆಹೋಶುವ 19:10, 13; 2 ಅರಸು 14:25) ದೇವರು ಯೋನನನ್ನು, ಅವನ ಸ್ವದೇಶದಿಂದ ಈಶಾನ್ಯ ದಿಕ್ಕಿಗೆ, 800ಕ್ಕಿಂತಲೂ ಹೆಚ್ಚು ಕಿಲೊಮೀಟರ್ಗಳಷ್ಟು ದೂರದಲ್ಲಿರುವ ಅಶ್ಶೂರ್ಯದ ರಾಜಧಾನಿಯಾದ ನಿನೆವೆಗೆ ಕಳುಹಿಸುತ್ತಿದ್ದಾನೆ. ನಿನೆವೆ ಪಟ್ಟಣದ ಜನರು ದೇವರಿಂದ ಬರುವ ನಾಶನವನ್ನು ಎದುರಿಸುತ್ತಾರೆಂಬುದನ್ನು ಅವನು ಅವರಿಗೆ ಎಚ್ಚರಿಕೆಯಾಗಿ ಹೇಳಬೇಕಾಗಿದೆ.
ಯೋನನು ಹೀಗೆ ಆಲೋಚಿಸಿದ್ದಿರಬಹುದು: ‘ಆ ಪಟ್ಟಣಕ್ಕೂ ಆ ಜನಾಂಗದ ಬಳಿಗೂ ನಾನು ಏಕೆ ಹೋಗಬೇಕು? ಅವರು ದೇವರ ಭಕ್ತರೂ ಆಗಿಲ್ಲ. ಇಸ್ರಾಯೇಲ್ಯರು ಮಾಡಿಕೊಂಡಂತೆ, ಆ ರಕ್ತದಾಹವುಳ್ಳ ಅಶ್ಶೂರ್ಯರು ಯೆಹೋವನೊಂದಿಗೆ ಒಂದು ಒಂಡಂಬಡಿಕೆಯೊಳಗೆ ಎಂದಿಗೂ ಪ್ರವೇಶಿಸಲಿಲ್ಲ. ಆ ದುಷ್ಟ ಜನಾಂಗದ ಜನರು ನನ್ನ ಎಚ್ಚರಿಕೆಯನ್ನು ಒಂದು ಬೆದರಿಕೆಯೋಪಾದಿ ಪರಿಗಣಿಸಬಹುದು ಮತ್ತು ಇಸ್ರಾಯೇಲನ್ನು ಜಯಿಸಬಹುದು! ನಾನು ಹೋಗಲಾರೆ! ನಾನು ಹೋಗುವುದಿಲ್ಲ. ನಾನು ಯೊಪ್ಪಕ್ಕೆ ಓಡಿಹೋಗಿ, ಮಹಾ ಸಾಗರದ ಇನ್ನೊಂದು ತುದಿಯಲ್ಲಿರುವ ತಾರ್ಷೀಷಿನ ವರೆಗೆ—ವಿರುದ್ಧ ದಿಕ್ಕಿನಲ್ಲಿ ಪ್ರಯಾಣಿಸಿ ಆಚೆ ದಡವನ್ನು ಸೇರುವೆ. ಅದನ್ನೇ ನಾನು ಮಾಡುವುದು!’—ಯೋನ 1:1-3.
ಸಮುದ್ರದಲ್ಲಿ ಗಂಡಾಂತರ!
ಬೇಗನೆ ಯೋನನು ಮೆಡಿಟರೇನಿಯನ್ ತೀರದ ಮೇಲಿನ ಯೊಪ್ಪದಲ್ಲಿದ್ದಾನೆ. ಅವನು ತನ್ನ ಪ್ರಯಾಣದ ಖರ್ಚನ್ನು ಕೊಡುತ್ತಾನೆ ಮತ್ತು ನಿನೆವೆಯ ಪಶ್ಚಿಮಕ್ಕೆ 3,500 ಕಿಲೊಮೀಟರ್ಗಳಷ್ಟು ದೂರದಲ್ಲಿರುವ, ಸಾಮಾನ್ಯವಾಗಿ ಸ್ಪೆಯ್ನ್ನೊಂದಿಗೆ ಸೇರಿಕೊಂಡಿರುವ ತಾರ್ಷೀಷಿಗೆ ಹೋಗುವ ಒಂದು ಹಡಗನ್ನು ಹತ್ತುತ್ತಾನೆ. ಕಡಲ ಪಯಣದಲ್ಲಿ ತೊಡಗಿದಾಗ, ದಣಿದ ಪ್ರವಾದಿಯು ಹಡಗದಟ್ಟವನ್ನಿಳಿದು ನಿದ್ದೆಹೋಗುತ್ತಾನೆ. ತದನಂತರ ಸ್ವಲ್ಪಸಮಯದಲ್ಲಿಯೇ, ಯೆಹೋವನು ಸಮುದ್ರದಲ್ಲಿ ಒಂದು ಭಾರೀ ತುಫಾನನ್ನು ತರುತ್ತಾನೆ, ಮತ್ತು ಭಯಗೊಂಡ ಪ್ರತಿಯೊಬ್ಬ ನಾವಿಕನೂ ತನ್ನ ಸ್ವಂತ ದೇವರ ಬಳಿ ಸಹಾಯಕ್ಕಾಗಿ ಬೇಡಿಕೊಳ್ಳುತ್ತಾನೆ. ಆ ಹಡಗು ಎಷ್ಟೊಂದು ತೂಗಾಡುತ್ತಾ ಏಳುತ್ತಾ ಬೀಳುತ್ತಾ ಇದೆಯೆಂದರೆ, ಹಡಗನ್ನು ಹಗುರಗೊಳಿಸಲಿಕ್ಕಾಗಿ ಅದರಲ್ಲಿದ್ದ ಸರಕನ್ನು ಹೊರಗೆ ಬಿಸಾಕಲಾಗುತ್ತದೆ. ಆದರೂ, ಹಡಗು ಒಡೆತವು ನಿಶ್ಚಿತವೆಂಬಂತೆ ತೋರುತ್ತದೆ, ಹಾಗೂ ಉದ್ರೇಕಗೊಂಡ ಕ್ಯಾಪ್ಟನನು ಹೀಗೆ ಉದ್ಗರಿಸುವುದನ್ನು ಯೋನನು ಕೇಳುತ್ತಾನೆ: “ಇದೇನು, ನಿದ್ದೆಮಾಡುತ್ತೀ! ಎದ್ದು ನಿನ್ನ ದೇವರಿಗೆ ಮೊರೆಯಿಡು; ಒಂದು ವೇಳೆ ನಿನ್ನ ದೇವರು ನಮ್ಮನ್ನು ರಕ್ಷಿಸಾನು, ನಾಶವಾಗದೆ ಉಳಿದೇವು.” ಯೋನನು ಎದ್ದು, ಹಡಗದಟ್ಟದ ಮೇಲೆ ಹೋಗುತ್ತಾನೆ.—ಯೋನ 1:4-6.
“ಈ ಕೇಡು ನಮಗೆ ಸಂಭವಿಸಿದ್ದಕ್ಕೆ ಯಾರು ಕಾರಣವೆಂದು ನಮಗೆ ತಿಳಿಯುವ ಹಾಗೆ ಚೀಟು ಹಾಕೋಣ ಬನ್ನಿರಿ” ಎಂದು ನಾವಿಕರು ಹೇಳುತ್ತಾರೆ. ಆ ಚೀಟು ಯೋನನಿಗೆ ಬರುತ್ತದೆ. ನಾವಿಕರು ಹೀಗೆ ಹೇಳುವಾಗ ಅವನಿಗಾದ ವ್ಯಾಕುಲತೆಯನ್ನು ಊಹಿಸಿಕೊಳ್ಳಿರಿ: “ಅಯ್ಯಾ, ಈ ಕೇಡು ನಮಗೆ ಸಂಭವಿಸಿದ್ದಕ್ಕೆ ಯಾರು ಕಾರಣ ಎಂಬದನ್ನು ನೀನೇ ನಮಗೆ ತಿಳಿಸು; ನೀನು ಎಲ್ಲಿಂದ ಯಾವ ಕೆಲಸದ ಮೇಲೆ ಬಂದಿ, ನೀನು ಯಾವ ದೇಶದವನು, ಯಾವ ಜನಾಂಗದವನು”? “ಪರಲೋಕದೇವರಾದ ಯೆಹೋವ”ನನ್ನು ಆರಾಧಿಸುವ ಒಬ್ಬ ಇಬ್ರಿಯನು ತಾನಾಗಿದ್ದೇನೆಂದೂ, “ಕಡಲನ್ನೂ ಒಣನೆಲವನ್ನೂ ಸೃಷ್ಟಿಸಿದ”ವನ ಕುರಿತಾಗಿ ತನಗೆ ಭಕ್ತಿಪೂರ್ವಕವಾದ ಭಯವಿದೆಯೆಂದೂ ಯೋನನು ಹೇಳುತ್ತಾನೆ. ದೇವರ ಸಂದೇಶವನ್ನು ವಿಧೇಯತೆಯಿಂದ ನಿನೆವೆಗೆ ಕೊಂಡೊಯ್ಯುವುದಕ್ಕೆ ಬದಲಾಗಿ, ಅವನು ಯೆಹೋವನ ಸಮ್ಮುಖದಿಂದ ಪಲಾಯನಗೈಯುತ್ತಿದ್ದುದರಿಂದ, ಆ ಬಿರುಗಾಳಿಯು ಅವರ ಮೇಲೆ ಬಂದಿದೆ.—ಯೋನ 1:7-10.
ನಾವಿಕರು ಕೇಳುವುದು: “ನಮ್ಮ ಮೇಲೆ ಎದ್ದಿರುವ ಸಮುದ್ರವು ಶಾಂತವಾಗುವ ಹಾಗೆ ನಿನ್ನನ್ನು ಏನು ಮಾಡೋಣ”? ಸಮುದ್ರವು ಹೆಚ್ಚೆಚ್ಚಾಗಿ ಅಲ್ಲಕಲ್ಲೋಲವಾದಂತೆ, ಯೋನನು ಹೇಳುವುದು: “ನನ್ನನ್ನೆತ್ತಿ ಸಮುದ್ರದಲ್ಲಿ ಹಾಕಿರಿ; ನಿಮ್ಮ ಮೇಲೆ ಎದ್ದಿರುವ ಸಮುದ್ರವು ಶಾಂತವಾಗುವದು; ಈ ದೊಡ್ಡ ತುಫಾನು ನಿಮಗೆ ಸಂಭವಿಸಿದ್ದು ನನ್ನ ನಿಮಿತ್ತವೇ ಎಂಬದು ನನಗೆ ಗೊತ್ತು.” ಯೆಹೋವನ ಸೇವಕನನ್ನು ಸಮುದ್ರಕ್ಕೆ ನೂಕಲು ಮತ್ತು ನಿಶ್ಚಿತ ಮರಣಕ್ಕೆ ಒಪ್ಪಿಸಲು ಇಷ್ಟವಿಲ್ಲದವರಾಗಿದ್ದುದರಿಂದ, ಆ ಜನರು ಒಣ ನೆಲವನ್ನು ತಲಪಲು ಪ್ರಯತ್ನಿಸುತ್ತಾರೆ. ಅಸಫಲರಾಗಿ ಆ ನಾವಿಕರು ಮೊರೆಯಿಡುವುದು: “ಯೆಹೋವನೇ, ಲಾಲಿಸು, ಲಾಲಿಸು; ಈ ಮನುಷ್ಯನ ಪ್ರಾಣನಷ್ಟಕ್ಕಾಗಿ ನಾಶನವು ನಮಗೆ ಬಾರದಿರಲಿ; ನಿರಪರಾಧಿಯನ್ನು ಕೊಲ್ಲುವ ದೋಷಕ್ಕೆ ನಮ್ಮನ್ನು ಗುರಿಮಾಡಬೇಡ; ಯೆಹೋವನೇ, ನಿನ್ನ ಚಿತ್ತಾನುಸಾರ ಮಾಡಿದಿಯಲ್ಲಾ.”—ಯೋನ 1:11-14.
ಸಮುದ್ರದೊಳಗೆ!
ಆಗ ನಾವಿಕರು ಯೋನನನ್ನು ಹಡಗಿನಿಂದ ಎತ್ತಿ ಸಮುದ್ರದಲ್ಲಿ ಹಾಕುತ್ತಾರೆ. ನೊರೆಗರೆಯುತ್ತಿದ್ದ ಸಮುದ್ರದೊಳಗೆ ಅವನು ಮುಳುಗಿದಂತೆಯೇ, ಅದರ ಉಬ್ಬರವು ನಿಲ್ಲಲಾರಂಭಿಸುತ್ತದೆ. ಇದನ್ನು ನೋಡಿ, ‘ಆ ಜನರು ಯೆಹೋವನಿಗೆ ಬಹಳ ಭಯಪಡಲಾರಂಭಿಸಿದರು ಮತ್ತು ಆತನಿಗೆ ಯಜ್ಞವನ್ನರ್ಪಿಸಿ ಹರಕೆಗಳನ್ನು ಮಾಡಿಕೊಂಡರು.’—ಯೋನ 1:15, 16.
ನೀರು ಯೋನನ ಮೇಲೆ ಆವರಿಸಿಕೊಂಡಂತೆ, ನಿಸ್ಸಂಶಯವಾಗಿ ಅವನು ಪ್ರಾರ್ಥಿಸುತ್ತಿದ್ದಾನೆ. ಆಗ ಸ್ವಲ್ಪ ದೊಡ್ಡದಾದ ಒಂದು ಕುಹರದೊಳಗೆ ಸರಿದಂತೆ, ಸ್ವತಃ ತಾನು ಒಂದು ಮೃದುವಾದ ನಾಳಾಕಾರದ ಮಾರ್ಗದುದ್ದಕ್ಕೂ ಜಾರುತ್ತಿರುವಂತಹ ಅನಿಸಿಕೆ ಅವನಿಗಾಗುತ್ತದೆ. ಆಶ್ಚರ್ಯಕರವಾಗಿ ಅವನು ಇನ್ನೂ ಉಸಿರಾಡಬಲ್ಲನು! ತನ್ನ ತಲೆಯ ಸುತ್ತಲೂ ಇದ್ದ ಸಮುದ್ರದ ಕಳೆಯನ್ನು ಬಿಡಿಸಿಕೊಳ್ಳುತ್ತಾ, ನಿಜವಾಗಿಯೂ ಅಪೂರ್ವವಾಗಿದ್ದ ಒಂದು ಸ್ಥಳದಲ್ಲಿ ಯೋನನು ತನ್ನನ್ನು ಕಂಡುಕೊಳ್ಳುತ್ತಾನೆ. ಇದು ಏಕೆಂದರೆ, “ಯೋನನನ್ನು ನುಂಗಲು ಯೆಹೋವನು ಒಂದು ದೊಡ್ಡ ಮೀನಿಗೆ ಅಪ್ಪಣೆಮಾಡಿದನು; ಯೋನನು ಮೂರು ದಿನ ಹಗಲಿರುಳು ಆ ಮೀನಿನ ಹೊಟ್ಟೆಯೊಳಗೆ ಇದ್ದನು.”—ಯೋನ 1:17.
ಯೋನನ ಕಟ್ಟಾಸಕ್ತಿಯ ಪ್ರಾರ್ಥನೆ
ಬೃಹದಾಕಾರದ ಮೀನಿನ ಹೊಟ್ಟೆಯಲ್ಲಿ, ಯೋನನಿಗೆ ಪ್ರಾರ್ಥಿಸಲು ಸಮಯವಿದೆ. ಆತನ ಮಾತುಗಳಲ್ಲಿ ಕೆಲವು, ನಿರ್ದಿಷ್ಟ ಕೀರ್ತನೆಗಳ ಸಾದೃಶ್ಯವನ್ನು ಪಡೆದಿವೆ. ನಿರಾಶೆ ಮತ್ತು ಪರಿತಾಪ, ಎರಡನ್ನೂ ವ್ಯಕ್ತಪಡಿಸುತ್ತಾ, ಯೋನನು ತದನಂತರ ತನ್ನ ಪ್ರಾರ್ಥನೆಗಳನ್ನು ದಾಖಲಿಸಿದನು. ಉದಾಹರಣೆಗಾಗಿ, ಅವನಿಗೆ, ಮೀನಿನ ಹೊಟ್ಟೆಯು ಷೀಓಲ್ ಆಗಿ, ತನ್ನ ಸಮಾಧಿಯಾಗಿ ಪರಿಣಮಿಸುವಂತೆ ಭಾಸವಾಯಿತು. ಆದುದರಿಂದ ಅವನು ಪ್ರಾರ್ಥಿಸಿದ್ದು: “ಇಕ್ಕಟ್ಟಿನಲ್ಲಿ ನಾನು ಯೆಹೋವನಿಗೆ ಮೊರೆಯಿಟ್ಟೆನು; ಆತನು ನನಗೆ ಸದುತ್ತರವನ್ನು ದಯಪಾಲಿಸಿದನು; ಪಾತಾಳದ [“ಷೀಓಲ್ನ,” NW] ಗರ್ಭದೊಳಗಿಂದ ಕೂಗಿಕೊಂಡೆನು, ಆಹಾ, ನನ್ನ ಧ್ವನಿಯನ್ನು ಲಾಲಿಸಿದಿ.” (ಯೋನ 2:1, 2) ಆರೋಹಣದ—ವಾರ್ಷಿಕ ಹಬ್ಬಗಳಿಗಾಗಿ ಯೆರೂಸಲೇಮಿನ ವರೆಗೆ ಹೋಗುತ್ತಿದ್ದ ಇಸ್ರಾಯೇಲ್ಯರಿಂದ ಹಾಡಲ್ಪಟ್ಟಿರುವುದು ಸಂಭವನೀಯ—ಎರಡು ಗೀತೆಗಳು ತದ್ರೀತಿಯ ಪರ್ಯಾಲೋಚನೆಗಳನ್ನು ವ್ಯಕ್ತಪಡಿಸುತ್ತವೆ.—ಕೀರ್ತನೆ 120:1; 130:1, 2.
ಸಮುದ್ರದೊಳಗಿನ ತನ್ನ ಇಳಿತವನ್ನು ಕುರಿತು ಚಿಂತನೆ ಮಾಡುತ್ತಾ, ಯೋನನು ಪ್ರಾರ್ಥಿಸುವುದು: “[ಯೆಹೋವನೇ] ನನ್ನನ್ನು ಸಮುದ್ರದ ಉದರ [ಮಧ್ಯ]ದಲ್ಲಿ, ಅಗಾಧಸ್ಥಳದಲ್ಲಿ ಎಸೆದುಬಿಟ್ಟಿಯಲ್ಲಾ; ಪ್ರವಾಹವು ನನ್ನನ್ನು ಸುತ್ತಿಕೊಂಡಿತು; ಲೆಕ್ಕವಿಲ್ಲದ ನಿನ್ನ ಅಲೆಗಳೂ ತೆರೆಗಳೂ ನನ್ನ ಮೇಲ್ಗಡೆ ಹಾದುಹೋಗುತ್ತಿದ್ದವು.”—ಯೋನ 2:3; ಹೋಲಿಸಿರಿ ಕೀರ್ತನೆ 42:7; 69:2.
ತನ್ನ ಅವಿಧೇಯತೆಯು, ದೈವಿಕ ಅನುಗ್ರಹದ ನಷ್ಟವನ್ನು ಅರ್ಥೈಸುವುದೆಂದೂ, ತಾನು ಇನ್ನೆಂದಿಗೂ ದೇವರ ಆಲಯವನ್ನು ಪುನಃ ನೋಡೆನೆಂದೂ ಯೋನನು ಭಯಪಡುತ್ತಾನೆ. ಅವನು ಪ್ರಾರ್ಥಿಸುವುದು: “ಮತ್ತು ನನ್ನ ಕುರಿತಾಗಿಯಾದರೋ, ನಾನು ಹೇಳಿಕೊಂಡದ್ದು, ‘ನಿನ್ನ ಕಣ್ಣುಗಳ ಸಮ್ಮುಖದಿಂದ ನಾನು ಬಿಸಾಡಲ್ಪಟ್ಟಿದ್ದೇನೆ! ನಿನ್ನ ಪವಿತ್ರಾಲಯವನ್ನು ನಾನು ಪುನಃ ಹೇಗೆ ದಿಟ್ಟಿಸಬಲ್ಲೆ?’” (ಯೋನ 2:4, NW; ಹೋಲಿಸಿರಿ ಕೀರ್ತನೆ 31:22.) ಯೋನನ ಪರಿಸ್ಥಿತಿಯು ಎಷ್ಟು ಕೆಟ್ಟದ್ದಾಗಿ ಕಂಡುಬರುತ್ತದೆಂದರೆ, ಅವನು ಹೇಳುವುದು: “ಜಲರಾಶಿಯು ನನ್ನನ್ನು ಮುತ್ತಿ ನನ್ನ ಪ್ರಾಣಕ್ಕೆ [ಅವನ ಜೀವವನ್ನು ಅಪಾಯಕ್ಕೊಡ್ಡುತ್ತಾ] ಬಂದಿತ್ತು, ಮಹಾಸಾಗರವು ನನ್ನನ್ನು ಆವರಿಸಿತು, [ಸಮುದ್ರದಲ್ಲಿ] ಪಾಚಿಯು [“ಕಳೆಯು,” NW] ನನ್ನ ತಲೆಯನ್ನು ಸುತ್ತಿಕೊಂಡಿತು. (ಯೋನ 2:5; ಹೋಲಿಸಿರಿ ಕೀರ್ತನೆ 69:1.) ಯೋನನ ಅವಸ್ಥೆಯನ್ನು ಊಹಿಸಿಕೊಳ್ಳಿರಿ, ಏಕೆಂದರೆ ಅವನು ಕೂಡಿಸುವುದು: “ಪರ್ವತಗಳ ಬುಡದ ತನಕ ಇಳಿದೆನು, ಭೂಲೋಕದ ಅಗುಳಿಗಳು [ಸಮಾಧಿಯ ಅಗುಳಿಗಳಂತೆ] ಎಂದಿಗೂ ತೆಗೆಯದ ಹಾಗೆ ನನ್ನ ಹಿಂದೆ ಹಾಕಲ್ಪಟ್ಟವು; ನನ್ನ ದೇವರಾದ ಯೆಹೋವನೇ, ನೀನು ನನ್ನ ಪ್ರಾಣವನ್ನು [ಮೂರನೆಯ ದಿನದಂದು] ಅಧೋಲೋಕದೊಳಗಿಂದ ಉದ್ಧರಿಸಿದಿ.”—ಯೋನ 2:6; ಹೋಲಿಸಿರಿ ಕೀರ್ತನೆ 30:3.
ತಾನು ಮೀನಿನ ಹೊಟ್ಟೆಯಲ್ಲಿರುವುದಾದರೂ, ‘ನಾನು ತೀರ ಮನಗುಂದಿದವನಾಗಿರುವುದರಿಂದ ನನಗೆ ಪ್ರಾರ್ಥಿಸಲು ಸಾಧ್ಯವಿಲ್ಲ’ ಎಂಬುದಾಗಿ ಯೋನನು ಆಲೋಚಿಸುವುದಿಲ್ಲ. ಬದಲಾಗಿ ಅವನು ಪ್ರಾರ್ಥಿಸುವುದು: “ನನ್ನ ಆತ್ಮವು [“ಪ್ರಾಣವು,” NW] ನನ್ನಲ್ಲಿ [ಮರಣ ಸಾಮೀಪ್ಯದಲ್ಲಿ] ಕುಂದಿದಾಗ ಯೆಹೋವನಾದ ನಿನ್ನನ್ನು [ನಂಬಿಕೆಯಲ್ಲಿ, ಅನುಪಮ ಶಕ್ತಿ ಮತ್ತು ಕರುಣೆಯುಳ್ಳವನೊಬ್ಬನೋಪಾದಿ] ಸ್ಮರಿಸಿದೆನು; ನನ್ನ ಬಿನ್ನಹವು ನಿನಗೆ ಮುಟ್ಟಿತು, ನಿನ್ನ ಪರಿಶುದ್ಧಾಲಯಕ್ಕೆ ಸೇರಿತು.” (ಯೋನ 2:7) ಸ್ವರ್ಗೀಯ ಆಲಯದಿಂದ, ದೇವರು ಯೋನನ ಪ್ರಾರ್ಥನೆಯನ್ನು ಕೇಳಿದನು ಮತ್ತು ಅವನನ್ನು ಕಾಪಾಡಿದನು.
ಸಮಾಪ್ತಿಯಲ್ಲಿ ಯೋನನು ಪ್ರಾರ್ಥಿಸುವುದು: “ಸುಳ್ಳು ವಿಗ್ರಹಗಳನ್ನು [ಸುಳ್ಳು ದೇವರುಗಳ ನಿರ್ಜೀವ ಮೂರ್ತಿಗಳಲ್ಲಿ ಭರವಸೆಯಿಡುವ ಮೂಲಕ] ಅವಲಂಬಿಸಿದವರು ತಮ್ಮ ಕರುಣಾನಿಧಿಯನ್ನು [ಈ ಗುಣವನ್ನು ಪ್ರದರ್ಶಿಸುವಾತನನ್ನು ಪರಿತ್ಯಜಿಸುವುದರಲ್ಲಿ] ತೊರೆದುಬಿಡುವರು. ನಾನಾದರೋ ಸ್ತೋತ್ರಧ್ವನಿಯಿಂದ ನಿನಗೆ [ಯೆಹೋವ ದೇವರಿಗೆ] ಯಜ್ಞವನ್ನರ್ಪಿಸುವೆನು, ಮಾಡಿಕೊಂಡ [ಈ ಅನುಭವದ ಸಮಯದಲ್ಲಿ ಅಥವಾ ಬೇರೆ ಸಂದರ್ಭಗಳಲ್ಲಿ] ಹರಕೆಯನ್ನು ಸಲ್ಲಿಸುವೆನು. ರಕ್ಷಣೆಯು ಯೆಹೋವನಿಂದಲೇ ಉಂಟಾಗುವದು.” (ಯೋನ 2:8, 9; ಹೋಲಿಸಿರಿ ಕೀರ್ತನೆ 31:6; 50:14.) ದೇವರು ಮಾತ್ರವೇ ತನ್ನನ್ನು ಮರಣದಿಂದ ಬಿಡಿಸಬಲ್ಲನೆಂಬುದನ್ನು ಅರಿತವನಾಗಿದ್ದು, ಪಶ್ಚಾತ್ತಾಪಪಟ್ಟ (ಅವನ ಮುಂಚಿನ ಅರಸರಾದ ದಾವೀದ ಮತ್ತು ಸೊಲೊಮೋನರಂತೆ) ಆ ಪ್ರವಾದಿಯು ರಕ್ಷಣೆಯನ್ನು ಯೆಹೋವನಿಗೆ ಸಲ್ಲಿಸುತ್ತಾನೆ.—ಕೀರ್ತನೆ 3:8; ಜ್ಞಾನೋಕ್ತಿ 21:31.
ಯೋನನು ವಿಧೇಯನಾಗುತ್ತಾನೆ
ಹೆಚ್ಚಿನ ಆಲೋಚನೆ ಮತ್ತು ಶೃದ್ಧಾಪೂರ್ವಕವಾದ ಪ್ರಾರ್ಥನೆಯ ಬಳಿಕ, ಅವನು ಯಾವ ನಾಳಾಕಾರದ ಮಾರ್ಗದ ಮೂಲಕ ಒಳಗೆ ಬಂದನೋ ಅದೇ ಮಾರ್ಗದ ಮೂಲಕ ಹೊರಗೆ ದಬ್ಬಲ್ಪಟ್ಟ ಅನಿಸಿಕೆ ಸ್ವತಃ ಯೋನನಿಗಾಗುತ್ತದೆ. ಕೊನೆಯದಾಗಿ, ಅವನು ಒಣ ನೆಲದ ಮೇಲೆ ಬಿಸಾಡಲ್ಪಟ್ಟನು. (ಯೋನ 2:10) ವಿಮೋಚಿಸಲ್ಪಟ್ಟದ್ದಕ್ಕಾಗಿ ಕೃತಜ್ಞನಾಗಿ ಯೋನನು ದೇವರ ಮಾತಿಗೆ ವಿಧೇಯನಾಗುತ್ತಾನೆ: “ನೀನೆದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ನಾನು ನಿನಗೆ ಪ್ರಕಟಿಸುವದನ್ನು ಅಲ್ಲಿ ಸಾರು ಎಂದು ಎರಡನೆಯ ಸಲ ಅಪ್ಪಣೆಮಾಡಿದನು.” (ಯೋನ 3:1, 2) ಯೋನನು ಅಶ್ಶೂರ್ಯದ ರಾಜಧಾನಿಗೆ ಪ್ರಯಾಣಬೆಳೆಸುತ್ತಾನೆ. ಅದು ಯಾವ ದಿನವಾಗಿದೆಯೆಂದು ಅವನು ತಿಳಿದುಕೊಳ್ಳುವಾಗ, ತಾನು ಮೂರು ದಿನಗಳ ವರೆಗೆ ಮೀನಿನ ಹೊಟ್ಟೆಯಲ್ಲಿದ್ದೆನೆಂದು ಅವನು ಗ್ರಹಿಸುತ್ತಾನೆ. ಯೂಫ್ರೆಟೀಸ್ ನದಿಯ ದೊಡ್ಡದಾದ ಪಶ್ಚಿಮ ತಿರುವಿನಲ್ಲಿ ಪ್ರವಾದಿಯು ನದಿಯನ್ನು ದಾಟುತ್ತಾನೆ, ಉತ್ತರ ಮೆಸೊಪೊಟಾಮಿಯದಿಂದ ಪೂರ್ವಕ್ಕೆ ಪ್ರಯಾಣಿಸುತ್ತಾನೆ, ಟೈಗ್ರಿಸ್ ನದಿಯ ಬಳಿಗೆ ಬರುತ್ತಾನೆ, ಮತ್ತು ಕೊನೆಯದಾಗಿ ಮಹಾ ಪಟ್ಟಣವನ್ನು ತಲಪುತ್ತಾನೆ.—ಯೋನ 3:3.
ಯೋನನು, ಒಂದು ದೊಡ್ಡ ಪಟ್ಟಣವಾದ ನಿನೆವೆಯನ್ನು ಪ್ರವೇಶಿಸುತ್ತಾನೆ. ಒಂದು ದಿನದ ವರೆಗೆ ಅವನು ಪಟ್ಟಣದಾದ್ಯಂತ ನಡೆದು, ತದನಂತರ “ನಾಲ್ವತ್ತು ದಿನಗಳಾದ ಮೇಲೆ ನಿನೆವೆಯು ಕೆಡವಲ್ಪಡುವದು” ಎಂದು ಸಾರುತ್ತಾನೆ. ಯೋನನಿಗೆ ಅಶ್ಶೂರ್ಯ ಭಾಷಾಜ್ಞಾನವು ಅದ್ಭುತಕರವಾಗಿ ದೈವದತ್ತವಾಗಿತ್ತೊ? ನಮಗೆ ಗೊತ್ತಿಲ್ಲ. ಆದರೆ ಅವನು ಹೀಬ್ರು ಭಾಷೆಯಲ್ಲಿ ಮಾತಾಡುತ್ತಿದ್ದು, ಯಾರಾದರೊಬ್ಬರು ಅದರ ಅರ್ಥವಿವರಣೆ ಮಾಡುತ್ತಿರುವುದಾದರೂ, ಅವನ ಘೋಷಣೆಯು ಫಲಿತಾಂಶಗಳನ್ನು ಉತ್ಪಾದಿಸುತ್ತದೆ. ನಿನೆವೆಯ ಜನರು ದೇವರಲ್ಲಿ ನಂಬಿಕೆಯನ್ನಿಡಲಾರಂಭಿಸುತ್ತಾರೆ. ಅವರು ಒಂದು ಉಪವಾಸವನ್ನು ಗೊತ್ತುಮಾಡುತ್ತಾರೆ ಹಾಗೂ ದೊಡ್ಡವರು ಮೊದಲುಗೊಂಡು ಚಿಕ್ಕವರ ತನಕ ಗೋಣಿತಟ್ಟನ್ನು ಧರಿಸಿಕೊಳ್ಳುತ್ತಾರೆ. ಆ ಮಾತು ನಿನೆವೆಯ ಅರಸನಿಗೆ ತಲಪುವಾಗ, ಅವನು ತನ್ನ ಸಿಂಹಾಸನದಿಂದ ಎದ್ದು, ತನ್ನ ಅಧಿಕೃತ ವಸ್ತ್ರಗಳನ್ನು ತೆಗೆದುಬಿಟ್ಟು, ಸ್ವತಃ ತನ್ನನ್ನು ಗೋಣಿತಟ್ಟಿನಿಂದ ಮುಚ್ಚಿಕೊಂಡು, ಬೂದಿಯಲ್ಲಿ ಕುಳಿತುಕೊಳ್ಳುತ್ತಾನೆ.—ಯೋನ 3:4-6.
ಯೋನನು ಎಷ್ಟು ಆಶ್ಚರ್ಯಗೊಂಡವನಾಗಿದ್ದಾನೆ! ಅಶ್ಶೂರ್ಯದ ಅರಸನು ಈ ಕೂಗಿನೊಂದಿಗೆ ರಾಜದೂತರನ್ನು ಕಳುಹಿಸುತ್ತಾನೆ: “ಜನ ಪಶು ಮಂದೆ ಹಿಂಡು ಇವುಗಳು ಏನೂ ರುಚಿನೋಡದಿರಲಿ; ತಿನ್ನದಿರಲಿ, ಕುಡಿಯದಿರಲಿ; ಜನರಿಗೂ ಪಶುಗಳಿಗೂ ಗೋಣಿತಟ್ಟು ಹೊದಿಕೆಯಾಗಲಿ; ಎಲ್ಲರು ದೇವರಿಗೆ ಬಲವಾಗಿ ಮೊರೆಯಿಡಲಿ; ಒಬ್ಬೊಬ್ಬನು ತನ್ನ ತನ್ನ ದುರ್ಮಾರ್ಗವನ್ನೂ ತಾನು ನಡಿಸುತ್ತಿದ್ದ ಹಿಂಸೆಯನ್ನೂ ತೊರೆದುಬಿಡಲಿ. ದೇವರು ಒಂದು ವೇಳೆ ಮನಮರುಗಿ ಹಿಂದಿರುಗಿ ತನ್ನ ಉಗ್ರಕೋಪವನ್ನು ತೊಲಗಿಸಾನು, ನಾವು ನಾಶವಾಗದೆ ಉಳಿದೇವು.”—ಯೋನ 3:7-9.
ನಿನೆವೆಯ ಜನರು ತಮ್ಮ ಅರಸನ ಕಟ್ಟಳೆಯೊಂದಿಗೆ ಅನುವರ್ತಿಸುತ್ತಾರೆ. ಅವರು ತಮ್ಮ ದುರ್ಮಾರ್ಗದಿಂದ ಹಿಂದಿರುಗಿದ್ದಾರೆಂಬುದನ್ನು ದೇವರು ನೋಡುವಾಗ, ತಾನು ಅವರಿಗೆ ಬರಮಾಡುವೆನೆಂದು ನುಡಿದಿದ್ದ ವಿಪತ್ತಿನ ಕುರಿತಾಗಿ ಆತನು ವಿಷಾದಪಡುತ್ತಾನೆ, ಆದುದರಿಂದ ಆತನು ಅದನ್ನು ಬರಮಾಡುವುದಿಲ್ಲ. (ಯೋನ 3:10) ಅವರ ಪಶ್ಚಾತ್ತಾಪ, ದೈನ್ಯ, ಮತ್ತು ನಂಬಿಕೆಯ ಕಾರಣದಿಂದ, ಅವರ ಮೇಲೆ ಉದ್ದೇಶಿತ ನ್ಯಾಯತೀರ್ಪನ್ನು ಹೊರಿಸಬಾರದೆಂದು ಯೆಹೋವನು ತೀರ್ಮಾನಿಸುತ್ತಾನೆ.
ಸಿಡಿಮಿಡಿಗೊಂಡ ಪ್ರವಾದಿ
ನಾಲ್ವತ್ತು ದಿನಗಳು ಕಳೆದವು, ನಿನೆವೆಗೆ ಏನೂ ಸಂಭವಿಸುವುದಿಲ್ಲ. (ಯೋನ 3:4) ನಿನೆವೆಯ ಜನರು ನಾಶಮಾಡಲ್ಪಡುವುದಿಲ್ಲವೆಂಬುದನ್ನು ಗ್ರಹಿಸಿದವನಾದಾಗ, ಯೋನನು ಬಹಳ ಅಸಮಾಧಾನಗೊಳ್ಳುತ್ತಾನೆ ಮತ್ತು ಕೋಪದಿಂದ ಕುದಿಯುತ್ತಾ ಹೀಗೆ ಪ್ರಾರ್ಥಿಸುತ್ತಾನೆ: “ಯೆಹೋವಾ, ಲಾಲಿಸು, ನಾನು ಸ್ವದೇಶದಲ್ಲಿರುವಾಗಲೇ ಹೀಗಾಗುವದೆಂದು ಹೇಳಿದೆನಷ್ಟೆ; ನೀನು ದಯೆಯೂ ಕನಿಕರವೂ ದೀರ್ಘಶಾಂತಿಯೂ ಮಹಾಕೃಪೆಯೂ ಉಳ್ಳ ದೇವರು, ಮಾಡಬೇಕೆಂದಿದ್ದ ಕೇಡಿಗೆ ಮನಮರುಗುವವನು ಎಂದು ನಾನು ತಿಳಿದೇ ತಾರ್ಷೀಷಿಗೆ ಓಡಿಹೋಗಲು ತ್ವರೆಪಟ್ಟೆನು. ಈಗ, ಯೆಹೋವನೇ, ನನ್ನ ಪ್ರಾಣವನ್ನು ತೆಗೆ; ನಾನು ಬದುಕುವದಕ್ಕಿಂತ ಸಾಯುವದೇ ಲೇಸು.” ದೇವರು ಈ ಪ್ರಶ್ನೆಯಿಂದ ಪ್ರತಿಕ್ರಿಯಿಸುತ್ತಾನೆ: “ನೀನು ಸಿಟ್ಟುಗೊಳ್ಳುವದು ಸರಿಯೋ”?—ಯೋನ 4:1-4.
ತದನಂತರ ಯೋನನು ಪಟ್ಟಣವನ್ನು ಬಿಟ್ಟುಹೋಗುತ್ತಾನೆ. ಪೂರ್ವ ದಿಕ್ಕಿಗೆ ಹೋಗಿ, ಆ ಪಟ್ಟಣಕ್ಕೆ ಏನು ಸಂಭವಿಸುವುದೋ ಅದನ್ನು ತಾನು ನೋಡುವ ವರೆಗೆ, ಅದರ ನೆರಳಿನಲ್ಲಿ ತಾನು ಕುಳಿತುಕೊಳ್ಳಬಹುದೆಂದು ಒಂದು ಗುಡಿಸಲನ್ನು ಕಟ್ಟಿಕೊಳ್ಳುತ್ತಾನೆ. ಸಕಾಲದಲ್ಲಿ, ಯೆಹೋವನು ಸಹಾನುಭೂತಿಯಿಂದ, ‘ಯೋನನ ಮೇಲ್ಗಡೆ ಒಂದು ಸೋರೆಗಿಡವು ಹಬ್ಬಿ ಅವನ ತಲೆಗೆ ನೆರಳಾಗುವಂತೆ ಹಾಗೂ ಅವನ ಕರಕರೆಯನ್ನು ತಪ್ಪಿಸುವಂತೆ ಏರ್ಪಡಿಸುತ್ತಾನೆ.’ ಆ ಸೋರೆಗಿಡದಿಂದಾಗಿ ಯೋನನು ಎಷ್ಟು ಸಂತೋಷಗೊಳ್ಳುತ್ತಾನೆ! ಆದರೆ ಅರುಣೋದಯದಲ್ಲಿ ಆ ಗಿಡವನ್ನು ಹೊಡೆಯಲು ದೇವರು ಒಂದು ಹುಳವನ್ನು ಏರ್ಪಡಿಸುತ್ತಾನೆ, ಮತ್ತು ಅದು ಬಾಡಿಹೋಗಲಾರಂಭಿಸುತ್ತದೆ. ಬೇಗನೆ ಅದು ಸಂಪೂರ್ಣವಾಗಿ ಒಣಗಿಹೋಗುತ್ತದೆ. ಬಿಸಿಯಿಂದ ಬತ್ತಿಸುವ ಪೂರ್ವದಿಕ್ಕಿನ ಗಾಳಿಯನ್ನು ಸಹ ದೇವರು ಕಳುಹಿಸುತ್ತಾನೆ. ಪ್ರವಾದಿಯು ಮೂರ್ಛೆಹೋಗುವವನಾಗುವಂತೆ, ಈಗ ಸೂರ್ಯನ ಬಿಸಿಲು ನೇರವಾಗಿ ಅವನ ತಲೆಗೆ ಬಡಿಯುತ್ತದೆ. ಅವನು ಸಾಯಲು ಕೇಳಿಕೊಳ್ಳುತ್ತಿರುತ್ತಾನೆ. ಹೌದು, ಯೋನನು ಪುನರಾವರ್ತಿಸುತ್ತಾ ಹೇಳುವುದು: “ನಾನು ಬದುಕುವದಕ್ಕಿಂತ ಸಾಯುವದೇ ಲೇಸು.”—ಯೋನ 4:5-8.
ಈಗ ಯೆಹೋವನು ಮಾತಾಡುತ್ತಾನೆ. ಆತನು ಯೋನನಿಗೆ ಕೇಳುವುದು: “ನೀನು ಸೋರೆಗಿಡಕ್ಕಾಗಿ ಸಿಟ್ಟುಗೊಳ್ಳುವದು ಸರಿಯೋ?” ‘ಮರಣದ ಬಿಂದುವಿನ ತನಕ, ನಾನು ಸಿಟ್ಟುಗೊಂಡಿರುವುದು ಸರಿಯೇ’ ಎಂದು ಯೋನನು ಉತ್ತರಿಸುತ್ತಾನೆ. ಮೂಲತಃ, ಯೆಹೋವನು ಈಗ ಪ್ರವಾದಿಗೆ ಹೇಳುವುದು: ‘ನೀನು ಆ ಸೋರೆಗಿಡಕ್ಕಾಗಿ ಕನಿಕರಪಟ್ಟಿ. ಆದರೆ ನೀನು ಅದಕ್ಕಾಗಿ ಕಷ್ಟಪಡಲಿಲ್ಲ ಅಥವಾ ಅದನ್ನು ಬೆಳೆಯುವಂತೆ ಮಾಡಲಿಲ್ಲ. ಅದು ಒಂದು ರಾತ್ರಿಯಲ್ಲಿ ಹುಟ್ಟಿ ಒಂದು ರಾತ್ರಿಯಲ್ಲಿ ನಾಶವಾಗಿಹೋಯಿತು.’ ದೇವರು ಇನ್ನೂ ತರ್ಕಿಸಿದ್ದು: ‘ನನ್ನ ವಿಷಯದಲ್ಲಿಯಾದರೋ, ಅನೇಕ ಸಾಕುಪ್ರಾಣಿಗಳೂ, ತಮ್ಮ ಎಡಗೈ ಹಾಗೂ ಬಲಗೈಯ ನಡುವಣ ವ್ಯತ್ಯಾಸವನ್ನು ತಿಳಿದಿರದ 1,20,000 ನರಪ್ರಾಣಿಗಳೂ ನಿವಾಸಿಸುವ, ಮಹಾ ಪಟ್ಟಣವಾದ ನಿನೆವೆಗಾಗಿ ನಾನು ಕನಿಕರಪಡಬಾರದೋ?’ (ಯೋನ 4:9-11, NW) ಸರಿಯಾದ ಉತ್ತರವು ಸುವ್ಯಕ್ತ.
ಯೋನನು ಪಶ್ಚಾತ್ತಾಪಪಡುತ್ತಾ, ತನ್ನ ಹೆಸರನ್ನು ಹೊಂದಿರುವ ಬೈಬಲ್ ಪುಸ್ತಕವನ್ನು ಬರೆಯಲು ಜೀವಿಸುತ್ತಾನೆ. ನಾವಿಕರು ಯೆಹೋವನಿಗೆ ಭಯಪಟ್ಟರು, ಆತನಿಗೆ ಒಂದು ಯಜ್ಞವನ್ನರ್ಪಿಸಿ, ಹರಕೆಗಳನ್ನು ಮಾಡಿಕೊಂಡರು ಎಂಬುದನ್ನು ಅವನು ಹೇಗೆ ತಿಳಿದುಕೊಂಡನು? ಅವನು ಅದನ್ನು ದೈವಿಕ ಪ್ರೇರಣೆಯಿಂದ ಅಥವಾ ಬಹುಶಃ ದೇವಾಲಯದಲ್ಲಿ, ನಾವಿಕರಲ್ಲಿ ಅಥವಾ ಪ್ರಯಾಣಿಕರಲ್ಲಿ ಒಬ್ಬನಿಂದ ತಿಳಿದುಕೊಂಡಿದ್ದಿರಬಹುದು.—ಯೋನ 1:16; 2:4.
‘ಯೋನನ ಸೂಚಕಕಾರ್ಯ’
ಶಾಸ್ತ್ರಿಗಳು ಮತ್ತು ಫರಿಸಾಯರು ಯೇಸು ಕ್ರಿಸ್ತನನ್ನು ಒಂದು ಸೂಚಕಕಾರ್ಯಕ್ಕಾಗಿ ಕೇಳಿಕೊಂಡಾಗ, ಅವನು ಹೇಳಿದ್ದು: “ವ್ಯಭಿಚಾರಿಣಿಯಂತಿರುವ ಈ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ನೋಡಬೇಕೆಂದು ಅಪೇಕ್ಷಿಸುತ್ತದೆ. ಆದರೆ ಯೋನನೆಂಬ ಪ್ರವಾದಿಯಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವದೂ ಇದಕ್ಕೆ ಸಿಕ್ಕುವದಿಲ್ಲ.” ಯೇಸು ಕೂಡಿಸಿದ್ದು: “ಅಂದರೆ ಯೋನನು ಹೇಗೆ ಮೂರು ದಿನ ರಾತ್ರಿ ಹಗಲು ದೊಡ್ಡ ಮೀನಿನ ಹೊಟ್ಟೆಯೊಳಗೆ ಇದ್ದನೋ, ಹಾಗೆಯೇ ಮನುಷ್ಯಕುಮಾರನು ಮೂರು ದಿನ ರಾತ್ರಿ ಹಗಲು ಭೂಗರ್ಭದೊಳಗೆ ಇರುವನು.” (ಮತ್ತಾಯ 12:38-40) ಯೆಹೂದಿ ದಿನಗಳು ಸೂರ್ಯಾಸ್ತದಲ್ಲಿ ಆರಂಭವಾದವು. ಕ್ರಿಸ್ತನು ಸಾ.ಶ. 33ರ ನೈಸಾನ್ 14ರಂದು, ಶುಕ್ರವಾರ ಮಧ್ಯಾಹ್ನ ಮರಣಪಟ್ಟನು. ಆ ದಿನದ ಸೂರ್ಯಾಸ್ತಮಾನಕ್ಕೆ ಮೊದಲು ಅವನ ದೇಹವು ಸಮಾಧಿಯೊಂದರಲ್ಲಿ ಇಡಲ್ಪಟ್ಟಿತು. ಆ ಸಾಯಂಕಾಲದಲ್ಲಿ ನೈಸಾನ್ 15 ಆರಂಭವಾಯಿತು ಮತ್ತು ಏಳನೆಯ ದಿನವೂ ವಾರದ ಕೊನೆಯ ದಿನವೂ ಆದ ಶನಿವಾರದ ಸೂರ್ಯಾಸ್ತದ ವರೆಗೆ ಮುಂದುವರಿಯಿತು. ಆ ಸಮಯದಲ್ಲಿ ನೈಸಾನ್ 16 ಆರಂಭವಾಯಿತು ಮತ್ತು ನಾವು ಆದಿತ್ಯವಾರವೆಂದು ಕರೆಯುವ ದಿನದ ಸೂರ್ಯಾಸ್ತಮಾನದ ವರೆಗೆ ವಿಸ್ತರಿಸಿತು. ಪರಿಣಾಮವಾಗಿ, ಯೇಸು ಮರಣಪಟ್ಟು, ನೈಸಾನ್ 14ರಂದು ಕಡಿಮೆಪಕ್ಷ ಒಂದು ಕಾಲಾವಧಿಯ ವರೆಗೆ ಸಮಾಧಿಯೊಳಗಿದ್ದನು, ನೈಸಾನ್ 15ರ ಇಡೀ ದಿನ ಅವನು ಸಮಾಧಿಯಲ್ಲಿಡಲ್ಪಟ್ಟಿದ್ದನು, ಹಾಗೂ ನೈಸಾನ್ 16ರ ರಾತ್ರಿಸಮಯದ ತಾಸುಗಳನ್ನು ಸಮಾಧಿಯಲ್ಲಿ ಕಳೆದಿದ್ದನು. ಆದಿತ್ಯವಾರ ಬೆಳಗ್ಗೆ ಕೆಲವು ಸ್ತ್ರೀಯರು ಸಮಾಧಿಯ ಬಳಿಗೆ ಬಂದಾಗ, ಅವನು ಆ ಮೊದಲೇ ಪುನರುತ್ಥಾನಗೊಳಿಸಲ್ಪಟ್ಟಿದ್ದನು.—ಮತ್ತಾಯ 27:57-61; 28:1-7.
ಯೇಸುವು ಮೂರು ದಿನಗಳ ಕೆಲವು ಭಾಗಗಳ ತನಕ ಸಮಾಧಿಯಲ್ಲಿದ್ದನು. ಹೀಗೆ ಅವನ ವಿರೋಧಿಗಳು ‘ಯೋನನ ಸೂಚಕಕಾರ್ಯ’ವನ್ನು ಪಡೆದುಕೊಂಡರಾದರೂ, ಕ್ರಿಸ್ತನು ಹೇಳಿದ್ದು: “ನ್ಯಾಯವಿಚಾರಣೆಯಲ್ಲಿ ನಿನೆವೆ ಪಟ್ಟಣದವರು ಈ ಸಂತತಿಯವರೊಂದಿಗೆ ನಿಂತು ಇವರನ್ನು ಅಪರಾಧಿಗಳೆಂದು ಹೇಳುವರು; ಅವರು ಯೋನನು ಸಾರಿದ ವಾಕ್ಯವನ್ನು ಕೇಳಿ ದೇವರಕಡೆಗೆ ತಿರುಗಿಕೊಂಡರು; ಆದರೆ ಇಲ್ಲಿ ಯೋನನಿಗಿಂತಲೂ ಹೆಚ್ಚಿನವನಿದ್ದಾನೆ.” (ಮತ್ತಾಯ 12:41) ಎಷ್ಟು ಸತ್ಯ! ಯೆಹೂದ್ಯರ ನಡುವೆ, ಯೋನನಿಗಿಂತಲೂ ಹೆಚ್ಚು ಮಹಾನ್ ಪ್ರವಾದಿಯಾಗಿದ್ದ ಯೇಸು ಕ್ರಿಸ್ತನು ಇದ್ದನು. ಯೋನನು ನಿನೆವೆಯವರಿಗೆ ಒಂದು ತಕ್ಕದ್ದಾದ ಸೂಚಕಕಾರ್ಯವಾಗಿದ್ದನಾದರೂ, ಆ ಪ್ರವಾದಿಯು ಮಾಡಿದುದಕ್ಕಿಂತಲೂ ಅತ್ಯಧಿಕವಾದ ಅಧಿಕಾರ ಹಾಗೂ ಆಧಾರಿತ ಪುರಾವೆಯೊಂದಿಗೆ ಯೇಸು ಸಾರಿದನು. ಆದರೂ, ಸರ್ವಸಾಮಾನ್ಯ ಯೆಹೂದ್ಯರು ನಂಬಿಕೆಯಿಡಲಿಲ್ಲ.—ಯೋಹಾನ 4:48.
ಒಂದು ಜನಾಂಗದೋಪಾದಿ ಯೆಹೂದ್ಯರು, ಯೋನನಿಗಿಂತಲೂ ಹೆಚ್ಚು ಮಹಾನ್ ಆಗಿದ್ದ ಪ್ರವಾದಿಯನ್ನು ದೈನ್ಯರಾಗಿ ಅಂಗೀಕರಿಸಲಿಲ್ಲ, ಮತ್ತು ಅವರು ಅವನಲ್ಲಿ ನಂಬಿಕೆಯನ್ನು ಇಡಲಿಲ್ಲ. ಆದರೆ ಅವರ ಪೂರ್ವಜರ ಕುರಿತಾಗಿ ಏನು? ಅವರಲ್ಲಿಯೂ ನಂಬಿಕೆಯ ಹಾಗೂ ದೀನಭಾವದ ಕೊರತೆಯಿತ್ತು. ವಾಸ್ತವವಾಗಿ, ನಿನೆವೆಯ ಪಶ್ಚಾತ್ತಾಪಪಟ್ಟ ಜನರು, ಹಾಗೂ ನಂಬಿಕೆ ಮತ್ತು ದೀನಭಾವದಲ್ಲಿ ಸಂಪೂರ್ಣ ಕೊರತೆಯನ್ನು ಹೊಂದಿದ್ದ, ಅಹಂಕಾರಿಗಳಾದ ಇಸ್ರಾಯೇಲ್ಯರ ನಡುವೆ ಇರುವ ವ್ಯತಿರಿಕ್ತತೆಯನ್ನು ತೋರಿಸಲಿಕ್ಕಾಗಿ, ಯೆಹೋವನು ಯೋನನನ್ನು ನಿನೆವೆಗೆ ಕಳುಹಿಸಿದ್ದು ಸುವ್ಯಕ್ತ.—ಹೋಲಿಸಿರಿ ಧರ್ಮೋಪದೇಶಕಾಂಡ 9:6, 13.
ಸ್ವತಃ ಯೋನನ ಕುರಿತಾಗಿ ಏನು? ದೇವರ ಕರುಣೆಯು ಎಷ್ಟು ಮಹತ್ತರವಾಗಿದೆ ಎಂಬುದನ್ನು ಅವನು ಕಲಿತುಕೊಂಡನು. ಇದಲ್ಲದೆ, ಪಶ್ಚಾತ್ತಾಪಪಟ್ಟ ನಿನೆವೆಯ ಜನರ ಕಡೆಗೆ ತೋರಿಸಲ್ಪಟ್ಟ ದಯೆಯ ಕುರಿತ ಯೋನನ ಗೊಣಗಾಟಕ್ಕೆ ಯೆಹೋವನು ತೋರಿಸಿದ ಪ್ರತಿಕ್ರಿಯೆಯು, ನಮ್ಮ ದಿನದಲ್ಲಿ ನಮ್ಮ ಸ್ವರ್ಗೀಯ ಪಿತನು ಜನರಿಗೆ ಕರುಣೆಯನ್ನು ತೋರಿಸುವಾಗ, ದೋಷಾರೋಪಣೆಮಾಡುವುದರಿಂದ ನಮ್ಮನ್ನು ತಡೆಯಬೇಕು. ವಾಸ್ತವವಾಗಿ, ಪ್ರತಿ ವರ್ಷ ಸಾವಿರಗಟ್ಟಲೆ ಜನರು ನಂಬಿಕೆಯಲ್ಲಿ ಹಾಗೂ ದೀನ ಹೃದಯಗಳಿಂದ ಯೆಹೋವನ ಕಡೆಗೆ ತಿರುಗಿಕೊಳ್ಳುತ್ತಾರೆಂಬುದಕ್ಕಾಗಿ ನಾವು ಹರ್ಷಿಸೋಣ.