ಯೇಸುವಿನ ಜೀವನ ಮತ್ತು ಶುಶ್ರೂಷೆ
ಯೇಸುವಿನ ದೃಷ್ಟಾಂತಗಳಿಂದ ಪ್ರಯೋಜನ ಪಡೆಯುವುದು
ಯೇಸುವು ಸಮುದ್ರ ತೀರದಲ್ಲಿ ಜನರ ಗುಂಪಿಗೆ ಉಪನ್ಯಾಸ ಮಾಡಿದ ಬಳಿಕ ಶಿಷ್ಯರು ಅವನ ಬಳಿ ಬಂದಾಗ ಅವರು ಅವನ ಹೊಸ ಶಿಕ್ಷಣ ವಿಧಾನದ ಕುರಿತು ಕುತೂಹಲ ಪ್ರದರ್ಶಿಸುತ್ತಾರೆ. ಅವನು ಹಿಂದೆಯೂ ದೃಷ್ಟಾಂತಗಳನ್ನು ಉಪಯೋಗಿಸುವದನ್ನು ಅವರು ಕೇಳಿದರೂ, ಇಷ್ಟು ಸವಿಸ್ತಾರ ಉಪಯೋಗಿಸುವುದನ್ನು ಕೇಳಿರುವುದಿಲ್ಲ. “ಯಾಕೆ ಸಾಮ್ಯರೂಪವಾಗಿ ಅವರ ಸಂಗಡ ನೀನು ಮಾತಾಡುತ್ತೀ? ಎಂದು ಅವರು ತಿಳಿಯಬಯಸುತ್ತಾರೆ.
ಇದಕ್ಕೆ ಒಂದು ಕಾರಣವು ಪ್ರವಾದಿಯ “ನಾನು ಬಾಯಿದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು; ಲೋಕಾದಿಯಿಂದ ಮರೆಯಾಗಿದ್ದವುಗಳನ್ನು ಹೊರಪಡಿಸುವೆನು” ಎಂಬ ಮಾತುಗಳನ್ನು ನೆರವೇರಿಸುದೇ. ಆದರೆ ಇಷ್ಟೇ ಅಲ್ಲ, ದೃಷ್ಟಾಂತಗಳ ಉಪಯೋಗವು ಜನರ ಹೃದಯದ ಮನೋಭಾವವನ್ನು ಪ್ರಕಟಿಸುವ ಉದ್ದೇಶವನ್ನು ನೆರವೇರಿಸುತ್ತದೆ.
ವಾಸ್ತವವೇನಂದರೆ, ಅನೇಕರು ಯೇಸುವಿನಲ್ಲಿ ಆಸಕ್ತಿವಹಿಸುವುದು ಅವನು ನಿಪುಣ ಕಥೆಗಾರ ಮತ್ತು ಅದ್ಭುತ ಮಾಡುವವನೆಂಬ ಸರಳ ಕಾರಣದಿಂದ, ಸೇವೆಮಾಡಲ್ಪಡಲು ಯೋಗ್ಯವಾದ ಕರ್ತನು, ನಿಸ್ವಾರ್ಥಭಾವದಿಂದ ಹಿಂಬಾಲಿಸಬೇಕಾದವನು ಎಂಬ ಕಾರಣದಿಂದಲ್ಲ. ಸಂಗತಿಗಳನ್ನು ಅವರು ನೋಡುವ ವಿಷಯದಲ್ಲಿ ಅಥವಾ ಅವರ ಜೀವಿನ ರೀತಿಯಲ್ಲಿ ಅವರಿಗೆ ಶಾಂತಿಭಂಗವಾಗಬೇಕೆಂಬ ಅಪೇಕ್ಷೆ ಅವರಿಗಿಲ್ಲ. ಸಂದೇಶ ಅಷ್ಚು ಆಳವಾಗಿ ತೂರಿಬೇಕೆಂಬ ಮನಸ್ಸು ಅವರಿಗಿಲ್ಲ. ಆದುದರಿಂದ ಯೇಸುವು ಹೇಳುವದು:
“ನಾನು ಅವರ ಸಂಗಡ ಸಾಮ್ಯರೂಪವಾಗಿ ಮಾತಾಡುವದಕ್ಕೆ ಕಾರಣವೇನಂದರೆ ಅವರಿಗೆ ಕಣ್ಣಿದ್ದರೂ ನೋಡುವದಿಲ್ಲ, ಕಿವಿಯಿದ್ದರೂ ಕೇಳುವದಿಲ್ಲ, ಮತ್ತು ತಿಳುಕೊಳ್ಳುವದಿಲ್ಲ. ಯೆಶಾಯನು ಹೇಳಿದ ಪ್ರವಾದನೆಯು ಅವರಲ್ಲಿ ನೆರವೇರುತ್ತದೆ. “ಅದೇನಂದರೆ . . . ‘ಈ ಜನರ ಹೃದಯವು ಕೊಬ್ಬಿತು.”
ಯೇಸು ಮುಂದುವರಿಸುವುದು: “ಆದರೆ ನಿಮ್ಮ ಕಣ್ಣು ಕಾಣುತ್ತವೆ, ನಿಮ್ಮ ಕಿವಿ ಕೇಳುತ್ತವೆ. ಆದುದರಿಂದ ನೀವು ಧನ್ಯರು. ನಿಮಗೆ ಸತ್ಯವಾಗಿ ಹೇಳುತ್ತೇನೆ, ನೀವು ನೋಡುತ್ತಿರುವ ಕಾರ್ಯಗಳನ್ನು ಬಹುಮಂದಿ ಪ್ರವಾದಿಗಳೂ ಸತ್ಪುರುಷರೂ ನೋಡಬೇಕೆಂದು ಅಪೇಕ್ಷಿಸಿದರೂ ನೋಡಲಿಲ್ಲ. ನೀವು ಕೇಳುತ್ತಿರುವ ಸಂಗತಿಗಳನ್ನು ಅವರು ಕೇಳಬೇಕೆಂದು ಅಪೇಕ್ಷಿಸಿದರೂ ಕೇಳಲಿಲ್ಲ.”
ಹೌದು, 12 ಮಂದಿ ಅಪೊಸ್ತಲರು ಮತ್ತು ಅವರ ಜೊತೆಯಲ್ಲಿದ್ದವರಲ್ಲಿ ಗ್ರಹಣಶಕ್ತಿಯ ಹೃದಯಗಳಿವೆ. ಆದುದರಿಂದ ಯೇಸು ಹೇಳುವದು: “ಪರಲೋಕ ರಾಜ್ಯದ ಗುಟ್ಟುಗಳನ್ನು ತಿಳಿಯುವ ವರ ನಿಮಗೇ ಕೊಟ್ಟಿದೆ. ಅವರಿಗೆ ಕೊಟ್ಟಿಲ್ಲ.” ಅವರಿಗೆ ತಿಳುವಳಿಕೆ ಪಡೆಯುವ ಅಪೇಕ್ಷೆಯಿರುವ ಕಾರಣ ಯೇಸು ಅವರಿಗೆ ಬಿತ್ತುವವನ ದೃಷ್ಟಾಂತದ ವಿವರಣೆಯನ್ನು ಕೊಡುತ್ತಾನೆ.
“ಬೀಜವೆಂದರೆ ದೇವರ ವಾಕ್ಯ” ಎನ್ನುತ್ತಾನೆ ಯೇಸು, ಮತ್ತು ಮಣ್ಣು ಹೃದಯವಾಗಿದೆ. ದಾರಿಯ ಮಗ್ಗುಲಿನ ಗಟ್ಟಿ ನೆಲದಲ್ಲಿ ಬಿತ್ತಿದ ಬೀಜದ ಕುರಿತು ಅವನು ವಿವರಿಸುವದು: “ಕೆಲವರು ವಾಕ್ಯವನ್ನು ಕೇಳಿದ ಕೂಡಲೇ ಸೈತಾನನು ಬಂದು ಅವರು ನಂಬಿ ರಕ್ಷಣೆ ಹೊಂದಬಾರದೆಂದು ವಾಕ್ಯವನ್ನು ಅವರ ಹೃದಯದಿಂದ ತೆಗೆದು ಬಿಡುತ್ತಾನೆ.”
ಕೆಳಗಡೆ ಬಂಡೆಯಿದ್ದ ನೆಲದ ಮೇಲೆ ಬಿತ್ತಿದ ಬೀಜವು ವಾಕ್ಯವನ್ನು ಸಂತೋಷದಿಂದ ಅಂಗೀಕರಿಸುವ ಜನರ ಹೃದಯಗಳನ್ನು ಸೂಚಿಸುತ್ತದೆ. ಆದರೆ ವಾಕ್ಯವು ಇಂಥ ಹೃದಯಗಳಲ್ಲಿ ಆಳವಾಗಿ ಬೇರೂರದ ಕಾರಣ ಪರೀಕ್ಷೆ ಅಥವಾ ಹಿಂಸೆ ಬರುವ ಸಮಯದಲ್ಲಿ ಇಂಥ ಜನರು ಬಿದ್ದು ಹೋಗುತ್ತಾರೆ.
ಮುಳ್ಳುಗಳ ಮಧ್ಯೆ ಬಿದ್ದ ಬೀಜದ ಕುರಿತು ಅದು ವಾಕ್ಯವನ್ನು ಕೇಳಿದವರನ್ನು ಸೂಚಿಸುತ್ತದೆಂದು ಯೇಸು ಹೇಳುತ್ತಾನೆ. ಆದರೂ ಇವರು ಈ ಜೀವನದ ಚಿಂತೆ, ಐಶ್ವರ್ಯ ಮತ್ತು ಸುಖದಿಂದ ಮೈಮರಸಲ್ಪಡುವದರಿಂದ, ಪೂರ್ತಿ ಅದುಮಲ್ಪಟ್ಟು ಯಾವುದನ್ನೂ ಪೂರ್ಣತೆಗೆ ತರುವುದಿಲ್ಲ.
ಅಂತಿಮವಾಗಿ, ಒಳ್ಳೆಯ ಮಣ್ಣಿನ ಮೇಲೆ ಬಿದ್ದ ಬೀಜದ ಕುರಿತು ಇವರು ದೇವರ ವಾಕ್ಯವನ್ನು ಉತ್ತಮ ಹಾಗೂ ಸಮರ್ಪವಾಗಿ ಕೇಳಿ, ಜ್ಞಾಪಕದಲ್ಲಿಟ್ಟುಕೊಂಡು, ಸಹನೆಯಿಂದ ಫಲ ಬಿಡುವವರು ಎಂದು ಯೇಸು ಹೇಳುತ್ತಾನೆ.
ಬೋಧನೆಗಳ ವಿವರಣೆವನ್ನು ಪಡೆಯಲಿಕ್ಕಾಗಿ ಯೇಸುವನ್ನು ಹುಡುಕಿ, ವಿಚಾರಿಸಿದ ಈ ಶಿಷ್ಯರು ಎಷ್ಟು ಧನ್ಯರು! ಸತ್ಯವನ್ನು ಇತರರಿಗೆ ನೀಡಲಿಕ್ಕಾಗಿ, ತನ್ನ ದೃಷ್ಟಾಂತಗಳು ಗ್ರಹಿಸಲ್ಪಡಬೇಕೆಂದು ಯೇಸು ಉದ್ದೇಶಿಸುತ್ತಾನೆ. “ದೀಪವನ್ನು ತಂದು ಕೊಳಗದೊಳಗಾಗಲಿ, ಮಂಚದ ಕೆಳಗಾಗಲಿ ಇಡುವದುಂಟೇ?” ಎಂದು ಅವನು ಕೇಳುತ್ತಾನೆ. ಇಲ್ಲ, “ದೀಪಸ್ತಂಭದ ಮೇಲೆ ಇಡುತ್ತಾರೆ.” ಹೀಗೆ ಯೇಸು ಮುಂದರಿಸಿ ಹೇಳುವುದು: “ನೀವು ಕಿವಿಗೊಡುವ ವಿಷಯದಲ್ಲಿ ಎಚ್ಚರಿಕೆ.” ಮತ್ತಾಯ 13:10-23, 34-36; ಮಾರ್ಕ 4:10-25, 33, 34; ಲೂಕ 8:9-18; ಕೀರ್ತನೆ 78:2; ಯೆಶಾಯ 6:9,10
▪ ಯೇಸು ದೃಷ್ಟಾಂತಗಳಲ್ಲಿ ಮಾತಾಡಿದ್ದೇಕೆ?
▪ ತಾವು ಜನರ ಗುಂಪಿಗಿಂತ ಭಿನ್ನರೆಂದು ಯೇಸುವಿನ ಶಿಷ್ಯರು ಹೇಗೆ ತೋರಿಸುತ್ತಾರೆ?
▪ ಬಿತ್ತುವವನ ಸಾಮ್ಯಕ್ಕೆ ಯೇಸು ಯಾವ ವಿವರಣೆಯನ್ನೊದಗಿಸುತ್ತಾನೆ?