ಒಂದೇ ಸತ್ಯ ಕ್ರೈಸ್ತ ಧರ್ಮ ಒಂದು ವಾಸ್ತವಿಕತೆ
ಯೇಸು ಕ್ರಿಸ್ತನು ಒಂದೇ ಒಂದು ಚರ್ಚನ್ನು ಅಥವಾ ಸಭೆಯನ್ನು ಸ್ಥಾಪಿಸಿದನು. ಆ ಸಭೆಯು ಒಂದು ಆತ್ಮಿಕ ದೇಹವಾಗಿತ್ತು, ಒಂದು ಆತ್ಮಿಕ ಕುಟುಂಬವಾಗಿತ್ತು. ಹೀಗೆ ಹೇಳುವ ಮೂಲಕ ನಾವು ಏನನ್ನು ಅರ್ಥೈಸುತ್ತೇವೆಂದರೆ, ಅದು ದೇವರ ಪವಿತ್ರಾತ್ಮದಿಂದ ಆಯ್ಕೆಮಾಡಲ್ಪಟ್ಟ ಜನರ ಒಂದು ಕೂಟವಾಗಿತ್ತು, ಇವರೆಲ್ಲರೂ ದೇವರಿಂದ ಆತನ ‘ಮಕ್ಕಳಾಗಿ’ ಅಂಗೀಕರಿಸಲ್ಪಟ್ಟಿದ್ದರು.—ರೋಮಾಪುರ 8:16, 17; ಗಲಾತ್ಯ 3:26.
ಜನರನ್ನು ಸತ್ಯ ಹಾಗೂ ಜೀವದ ಕಡೆಗೆ ನಿರ್ದೇಶಿಸಲಿಕ್ಕಾಗಿ ದೇವರಿಂದ ಒಂದೇ ಒಂದು ಮಾರ್ಗವು ಉಪಯೋಗಿಸಲ್ಪಟ್ಟಿತು ಎಂದು ಯೇಸು ಕಲಿಸಿದನು. ಆ ಪ್ರಮುಖ ಸತ್ಯವನ್ನು ದೃಷ್ಟಾಂತಿಸಲಿಕ್ಕಾಗಿ, ಯೇಸುವು ನಿತ್ಯಜೀವಕ್ಕೆ ನಡಿಸುವ ಮಾರ್ಗವನ್ನು ಒಂದು ದಾರಿಗೆ ಹೋಲಿಸಿದನು. ಅವನು ಹೇಳಿದ್ದು: “ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗಿರಿ. ನಾಶಕ್ಕೆ ಹೋಗುವ ಬಾಗಲು ದೊಡ್ಡದು, ದಾರಿ ಅಗಲವು; ಅದರಲ್ಲಿ ಹೋಗುವವರು ಬಹು ಜನ. ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ.”—ಮತ್ತಾಯ 7:13, 14; ಯೋಹಾನ 14:6; ಅ. ಕೃತ್ಯಗಳು 4:11, 12.
ಒಂದು ಐಕ್ಯ ಸಭೆ
ಪ್ರಥಮ ಶತಮಾನದ ಆ ಸಭೆಯನ್ನು, “ಇಂದು ನಾವು ಕ್ಯಾಥೊಲಿಕ್ ಚರ್ಚಿನ ಕುರಿತಾಗಿ ಮಾತಾಡುವಾಗ ಹೇಗೆ ಅರ್ಥೈಸುತ್ತೇವೋ ಹಾಗೆ ಒಂದು ವಿಶ್ವವ್ಯಾಪಿ, ಸಾರ್ವತ್ರಿಕ, ವ್ಯವಸ್ಥಿತ ಸಮಾಜವಾಗಿ” ನೆನಸಬಾರದು ಎಂದು ದ ನ್ಯೂ ಡಿಕ್ಷನೆರಿ ಆಫ್ ಥಿಯೊಲಜಿ ಹೇಳುತ್ತದೆ. ಏಕೆ ನೆನಸಬಾರದು? ಅದು ಹೇಳುವುದು: “ಅಂಥ ಒಂದು ವ್ಯವಸ್ಥಿತ, ಸಾರ್ವತ್ರಿಕ ಸಮಾಜವು ಖಂಡಿತವಾಗಿಯೂ ಅಸ್ತಿತ್ವದಲ್ಲೇ ಇರಲಿಲ್ಲ ಎಂಬ ಸರಳ ಕಾರಣಕ್ಕಾಗಿಯೇ.”
ಆರಂಭದ ಕ್ರೈಸ್ತ ಸಭೆಗೂ ನಾವು ಇಂದು ನೋಡುವ ಸಂಸ್ಥಾವಲಂಬಿ ಚರ್ಚ್ ವ್ಯವಸ್ಥೆಗಳಿಗೂ ಯಾವುದೇ ಹೋಲಿಕೆಯಿಲ್ಲ ಎಂಬ ನಿಜತ್ವವನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ಆರಂಭದ ಕ್ರೈಸ್ತ ಸಭೆಯು ಸುಸಂಘಟಿತವಾಗಿತ್ತು. ಎಲ್ಲಾ ಸಭೆಗಳು ತಮ್ಮಷ್ಟಕ್ಕೆ ತಾವೇ ಸ್ವತಂತ್ರವಾಗಿ ಕಾರ್ಯನಡಿಸುತ್ತಿರಲಿಲ್ಲ. ಅದಕ್ಕೆ ಬದಲಾಗಿ, ಅವು ಯೆರೂಸಲೇಮಿನಲ್ಲಿದ್ದ ಒಂದು ಆಡಳಿತ ಮಂಡಳಿಯ ಅಧಿಕಾರವನ್ನು ಅಂಗೀಕರಿಸಿದ್ದವು. ಯೆರೂಸಲೇಮಿನಲ್ಲಿದ್ದ ಸಭೆಯ ಅಪೊಸ್ತಲರು ಹಾಗೂ ಹಿರೀ ಪುರುಷರಿಂದ ರಚಿತವಾಗಿದ್ದ ಆ ಮಂಡಳಿಯು, ಕ್ರಿಸ್ತನ “ಒಂದೇ ದೇಹ”ದೋಪಾದಿ ಸಭೆಯ ಐಕ್ಯವನ್ನು ಕಾಪಾಡಲು ಸಹಾಯಮಾಡಿತು.—ಎಫೆಸ 4:4, 11-16; ಅ. ಕೃತ್ಯಗಳು 15:22-31; 16:4, 5.
ಆ ಒಂದೇ ಸತ್ಯ ಸಭೆಗೆ ಏನು ಸಂಭವಿಸಿತು? ಅದೇ ಈಗಿನ ಬೃಹತ್ ಕ್ಯಾಥೊಲಿಕ್ ಚರ್ಚಾಗಿ ಪರಿಣಮಿಸಿತೋ? ಅದು, ನಾವಿಂದು ನೋಡುವಂಥ ಪಂಗಡಗಳಿಂದ ಕೂಡಿರುವ, ವಿಭಾಗಿತ ಪ್ರಾಟೆಸ್ಟಂಟ್ ಚರ್ಚ್ ವ್ಯವಸ್ಥೆಯಾಗಿ ಬೆಳೆಯಿತೋ? ಅಥವಾ ಇನ್ನೇನಾದರೂ ಸಂಭವಿಸಿತೊ?
“ಗೋದಿ” ಮತ್ತು “ಹಣಜಿ”
ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲಿಕ್ಕಾಗಿ, ಮುಂದೆ ಏನು ಸಂಭವಿಸುವುದು ಎಂಬುದರ ಕುರಿತು ಸ್ವತಃ ಯೇಸು ಕ್ರಿಸ್ತನೇ ಏನು ಹೇಳಿದ್ದನೊ ಅದನ್ನು ನಾವೀಗ ಜಾಗರೂಕತೆಯಿಂದ ಪರಿಗಣಿಸೋಣ. ತನ್ನ ಸಭೆಯು ಐತಿಹಾಸಿಕ ದೃಷ್ಟಿಕೋನದಿಂದ ಕಣ್ಮರೆಯಾಗುವುದನ್ನು ಯೇಸು ನಿರೀಕ್ಷಿಸಿದ್ದನು ಮತ್ತು ಅಂಥ ದುಃಖಕರ ಪರಿಸ್ಥಿತಿಯು ಅನೇಕ ಶತಮಾನಗಳ ವರೆಗೆ ಮುಂದುವರಿಯುವಂತೆ ಅವನು ಅನುಮತಿಸಲಿದ್ದನು ಎಂಬುದನ್ನು ತಿಳಿದು ನಿಮಗೆ ಆಶ್ಚರ್ಯವಾಗಬಹುದು.
ತನ್ನ ಸಭೆಯನ್ನು ‘ಪರಲೋಕರಾಜ್ಯಕ್ಕೆ’ ಹೋಲಿಸುತ್ತಾ ಅವನು ಹೇಳಿದ್ದು: “ಪರಲೋಕರಾಜ್ಯವು ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ್ದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ. ಆದರೆ ಜನರು ನಿದ್ರೆಮಾಡುವ ಕಾಲದಲ್ಲಿ ಅವನ ವೈರಿಯು ಬಂದು ಗೋದಿಯ ನಡುವೆ ಹಣಜಿ ಬಿತ್ತಿ ಹೋದನು. ಗೋದಿಯು ಬೆಳೆದು ಫಲಕ್ಕೆ ಬಂದಾಗ ಹಣಜಿ ಸಹ ಕಾಣಬಂತು. ಆಗ ಯಜಮಾನನ ಆಳುಗಳು ಅವನ ಬಳಿಗೆ ಬಂದು—ಅಯ್ಯಾ, ನೀನು ನಿನ್ನ ಹೊಲದಲ್ಲಿ ಒಳ್ಳೆಯ ಬೀಜ ಬಿತ್ತಿದಿಯಲ್ಲಾ; ಹಣಜಿ ಎಲ್ಲಿಂದ ಬಂತು ಎಂದು ಕೇಳಲು ಅವನು—ಇದು ಒಬ್ಬ ವೈರಿ ಮಾಡಿದ ಕೆಲಸ ಅನ್ನಲಾಗಿ ಆಳುಗಳು ಅವನನ್ನು—ಹಾಗಾದರೆ ನಾವು ಅದನ್ನು ಆರಿಸಿ ತೆಗೆಯೋಣೋ ಎಂದು ಕೇಳಲು ಅವನು—ಬೇಡ; ಹಣಜಿಯನ್ನು ಆರಿಸಿ ತೆಗೆಯುವಾಗ ಅದರ ಸಂಗಡ ಗೋದಿಯನ್ನೆಲ್ಲಾದರೂ ಕಿತ್ತೀರಿ. ಸುಗ್ಗೀಕಾಲದ ತನಕ ಎರಡೂ ಕೂಡ ಬೆಳೆಯಲಿ; ಸುಗ್ಗೀಕಾಲದಲ್ಲಿ ನಾನು ಕೊಯ್ಯುವವರಿಗೆ—ಮೊದಲು ಹಣಜಿಯನ್ನು ಆರಿಸಿತೆಗೆದು ಅದನ್ನು ಸುಡುವದಕ್ಕೆ ಹೊರೆಕಟ್ಟಿಹಾಕಿ ಗೋದಿಯನ್ನು ನನ್ನ ಕಣಜಕ್ಕೆ ತುಂಬಿರಿ ಎಂದು ಹೇಳುವೆನು ಅಂದನು.”—ಮತ್ತಾಯ 13:24-30.
‘ಬಿತ್ತುವವನು’ ತಾನೇ ಆಗಿದ್ದೇನೆಂದು ಯೇಸು ವಿವರಿಸಿದನು. “ಒಳ್ಳೆಯ ಬೀಜ”ವು ಅವನ ನಿಜ ಶಿಷ್ಯರನ್ನು ಚಿತ್ರಿಸಿತು. ಅವನ “ವೈರಿ”ಯು ಪಿಶಾಚನಾದ ಸೈತಾನನಾಗಿದ್ದನು. “ಹಣಜಿ” ಅಂದರೆ ಕಾಲಕ್ರಮೇಣ ಆರಂಭದ ಕ್ರೈಸ್ತ ಸಭೆಯ ಭಾಗವಾಗಿ ಪರಿಣಮಿಸಿದ ನಕಲಿ ಕ್ರೈಸ್ತರು. “ಗೋದಿ” ಹಾಗೂ “ಹಣಜಿ”ಯು, “ಯುಗದ ಸಮಾಪ್ತಿಯಲ್ಲಿ” ಬರಲಿರುವ “ಸುಗ್ಗೀಕಾಲ”ದ ವರೆಗೆ ಒಟ್ಟಿಗೆ ಬೆಳೆಯುವಂತೆ ತಾನು ಅನುಮತಿಸುವೆನೆಂದು ಅವನು ಹೇಳಿದನು. (ಮತ್ತಾಯ 13:37-43) ಇದೆಲ್ಲದ್ದರ ಅರ್ಥವೇನಾಗಿತ್ತು?
ಕ್ರೈಸ್ತ ಸಭೆಯು ಭ್ರಷ್ಟಗೊಂಡದ್ದು
ಅಪೊಸ್ತಲರ ಮರಣಾನಂತರ ಸ್ವಲ್ಪ ಸಮಯದೊಳಗೆ, ಸಭೆಯೊಳಗೇ ಇದ್ದ ಧರ್ಮಭ್ರಷ್ಟ ಬೋಧಕರು ಸಭೆಯ ಮೇಲೆ ನಿಯಂತ್ರಣವನ್ನು ಪಡೆಯತೊಡಗಿದರು. ‘ಯೇಸುವಿನ ಶಿಷ್ಯರನ್ನು ತಮ್ಮ ಹಿಂದೆ ಎಳಕೊಳ್ಳಲಿಕ್ಕಾಗಿ’ ಅವರು ‘ವ್ಯತ್ಯಾಸ ಬೋಧನೆಗಳನ್ನು ಮಾಡಿದರು.’ (ಅ. ಕೃತ್ಯಗಳು 20:29, 30) ಇದರ ಫಲಿತಾಂಶವಾಗಿ, ಅನೇಕ ಕ್ರೈಸ್ತರು ‘ಕ್ರಿಸ್ತನಂಬಿಕೆಯಿಂದ ಭ್ರಷ್ಟರಾದರು.’ ಅವರು “ಕಲ್ಪನಾಕಥೆಗಳನ್ನು ಕೇಳುವದಕ್ಕೆ” ಹೋದರು.—1 ತಿಮೊಥೆಯ 4:1-3; 2 ತಿಮೊಥೆಯ 4:3, 4.
ಸಾ.ಶ. ನಾಲ್ಕನೆಯ ಶತಮಾನದಷ್ಟಕ್ಕೆ, “ಕ್ಯಾಥೊಲಿಕ್ ಕ್ರೈಸ್ತತ್ವವು . . . ರೋಮನ್ ಸಾಮ್ರಾಜ್ಯದ ಅಧಿಕೃತ ಧರ್ಮವಾಗಿಬಿಟ್ಟಿತ್ತು” ಎಂದು ದ ನ್ಯೂ ಡಿಕ್ಷನೆರಿ ಆಫ್ ಥಿಯೊಲಜಿ ಹೇಳುತ್ತದೆ. ಆಗ “ಚರ್ಚಿನ ಹಾಗೂ ಪ್ರಜಾ ಸಮಾಜದ ಸಮ್ಮಿಳನವು” ಇತ್ತು—ಅಂದರೆ ಚರ್ಚು ಹಾಗೂ ಸರಕಾರದ ಲೀನವಾಗುವಿಕೆಯು ನಡೆಸಲ್ಪಟ್ಟಿದ್ದು, ಇದು ಆರಂಭದ ಕ್ರೈಸ್ತರ ನಂಬಿಕೆಗಳಿಗೆ ಸಂಪೂರ್ಣವಾಗಿ ವಿರುದ್ಧವಾದದ್ದಾಗಿತ್ತು. (ಯೋಹಾನ 17:16; ಯಾಕೋಬ 4:4) ಅದೇ ಮೂಲವು ತಿಳಿಸುವುದೇನೆಂದರೆ, “ಕುತೂಹಲಭರಿತವಾದ ಹಾಗೂ ಪೂರ್ಣವಾಗಿ ಅಪಾಯಕಾರಿಯಾಗಿದ್ದ [ಹಳೆಯಒಡಂಬಡಿಕೆ] ಹಾಗೂ ನವಪ್ಲೇಟೋ ವಾದಕ್ಕೆ ಸಂಬಂಧಿಸಿದ ಆದರ್ಶಗಳ ಸಂಯೋಜನೆಯ ಪ್ರಭಾವದ ಕೆಳಗೆ” ಚರ್ಚಿನ ಇಡೀ ರಚನೆ ಮತ್ತು ಸ್ವರೂಪ, ಹಾಗೂ ಅದರ ಮೂಲಭೂತ ನಂಬಿಕೆಗಳಲ್ಲಿ ಹೆಚ್ಚಿನವು ಸಂಪೂರ್ಣವಾಗಿ ಬದಲಾಗಿಬಿಟ್ಟವು. ಯೇಸು ಕ್ರಿಸ್ತನಿಂದ ಮುಂತಿಳಿಸಲ್ಪಟ್ಟಂತೆ, ನಕಲಿ ಕ್ರೈಸ್ತರು ಅಧಿಕಗೊಂಡಂತೆ ಅವನ ನಿಜ ಶಿಷ್ಯರು ದೃಷ್ಟಿಯಿಂದ ಮರೆಮಾಡಲ್ಪಟ್ಟರು.
ಹಣಜಿಯಿಂದ ನಿಜವಾದ ಗೋದಿಯನ್ನು ಗುರುತಿಸುವುದು ಎಷ್ಟು ಕಷ್ಟಕರವಾಗಿತ್ತು ಎಂಬುದು ಯೇಸುವಿನ ಕೇಳುಗರಿಗೆ ಗೊತ್ತಿತ್ತು. ಉದಾಹರಣೆಗೆ, ಬೆಳೆಯುತ್ತಿರುವ ಹಂತದಲ್ಲಿ ವಿಷಪೂರಿತ ಕಳೆಹುಲ್ಲಿನಂಥ ಹಣಜಿಯು ಗೋದಿಯಂತೆಯೇ ತೋರುತ್ತದೆ. ಆದುದರಿಂದಲೇ, ಸ್ವಲ್ಪ ಸಮಯದ ವರೆಗೆ ನಕಲಿ ಕ್ರೈಸ್ತರಿಂದ ಸತ್ಯ ಕ್ರೈಸ್ತರನ್ನು ಗುರುತಿಸುವುದು ಕಷ್ಟಕರವಾಗಿರುವುದು ಎಂದು ಯೇಸು ದೃಷ್ಟಾಂತಿಸಿದನು. ಆದರೆ ಕ್ರೈಸ್ತ ಸಭೆಯು ಅಸ್ತಿತ್ವದಲ್ಲಿಲ್ಲದೇ ಹೋಯಿತು ಎಂಬುದನ್ನು ಇದು ಅರ್ಥೈಸಲಿಲ್ಲ, ಏಕೆಂದರೆ “ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ” ತನ್ನ ಆತ್ಮಿಕ ಸಹೋದರರನ್ನು ಮಾರ್ಗದರ್ಶಿಸುತ್ತಾ ಇರುವೆನೆಂದು ಯೇಸು ವಾಗ್ದಾನಿಸಿದ್ದನು. (ಮತ್ತಾಯ 28:20) ಗೋದಿಯು ಬೆಳೆಯುತ್ತಾ ಹೋಗುವುದೆಂದು ಯೇಸು ಹೇಳಿದನು. ಹಾಗಿದ್ದರೂ, ಯುಗಗಳಾದ್ಯಂತ ನಿಜ ಕ್ರೈಸ್ತರು ವೈಯಕ್ತಿಕವಾಗಿ ಅಥವಾ ಗುಂಪುಗುಂಪಾಗಿ, ಕ್ರಿಸ್ತನ ಬೋಧನೆಗಳಿಗೆ ಅಂಟಿಕೊಳ್ಳಲು ಶತಪ್ರಯತ್ನವನ್ನು ಮಾಡಿದರು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಆಗ ಅವರು ಸ್ಪಷ್ಟವಾಗಿ ಗುರುತಿಸಸಾಧ್ಯವಿರುವ, ದೃಶ್ಯ ಮಂಡಳಿ ಅಥವಾ ಸಂಸ್ಥೆ ಆಗಿರಲಿಲ್ಲ. ಇಷ್ಟಾದರೂ, ಇತಿಹಾಸದಾದ್ಯಂತ ಯೇಸು ಕ್ರಿಸ್ತನ ಹೆಸರಿಗೆ ಅಪಕೀರ್ತಿಯನ್ನೂ ಅಗೌರವವನ್ನೂ ತಂದಂಥ ದೃಶ್ಯ ಧರ್ಮಭ್ರಷ್ಟ ಧಾರ್ಮಿಕ ವ್ಯವಸ್ಥೆಯಂತೆ ಅವರು ಇರಲಿಲ್ಲ ಎಂಬುದಂತೂ ನಿಶ್ಚಯ.—2 ಪೇತ್ರ 2:1, 2.
‘ಅಧರ್ಮಸ್ವರೂಪನು ಬೈಲಿಗೆ ಬಂದದ್ದು’
ಇನ್ನೊಂದು ಸಂಗತಿಯೂ ಈ ನಕಲಿ ಧಾರ್ಮಿಕ ವ್ಯವಸ್ಥೆಯನ್ನು ಗುರುತಿಸುವುದು ಎಂದು ಅಪೊಸ್ತಲ ಪೌಲನು ಮುಂತಿಳಿಸಿದನು. ಅವನು ಬರೆದುದು: “ಯಾರೂ ಯಾವ ವಿಧದಲ್ಲಿಯೂ ನಿಮ್ಮನ್ನು ಮೋಸಗೊಳಿಸದಂತೆ ನೋಡಿಕೊಳ್ಳಿರಿ; ಯಾಕಂದರೆ ಮೊದಲು ಮತಭ್ರಷ್ಟತೆಯು ಉಂಟಾಗಿ ಅಧರ್ಮಸ್ವರೂಪನು ಬೈಲಿಗೆ ಬಂದ ಹೊರತು ಆ [ಯೆಹೋವನ] ದಿನವು ಬರುವದಿಲ್ಲ.” (2 ಥೆಸಲೊನೀಕ 2:2-4) ವಾಸ್ತವದಲ್ಲಿ ಈ “ಅಧರ್ಮಸ್ವರೂಪನು,” ತನ್ನನ್ನೇ “ಕ್ರೈಸ್ತ” ಸಭೆಯ ಮೇಲೆ ಆಳ್ವಿಕೆ ನಡೆಸುವ ಸ್ಥಾನಕ್ಕೆ ಏರಿಸಿಕೊಂಡಿರುವ ಪಾದ್ರಿವರ್ಗವೇ ಆಗಿದೆ.a
ಅಪೊಸ್ತಲ ಪೌಲನ ದಿನದಲ್ಲಿ ಈ ಧರ್ಮಭ್ರಷ್ಟತೆಯು ಆರಂಭಗೊಂಡಿತು. ಅಪೊಸ್ತಲರು ಮೃತಪಟ್ಟು, ಅವರ ಪ್ರತಿರೋಧಕ ಪ್ರಭಾವವು ಕಣ್ಮರೆಯಾದ ಬಳಿಕ, ಧರ್ಮಭ್ರಷ್ಟತೆಯು ತ್ವರಿತಗತಿಯಲ್ಲಿ ಬೆಳೆಯಿತು. ಅದು “ಸೈತಾನನ ಮಾಟಕ್ಕನುಗುಣವಾಗಿರುವದು. ಅದು ಮೋಸಗೊಳಿಸುವ ಸಕಲವಿಧವಾದ ಮಹತ್ಕಾರ್ಯ ಸೂಚಕಕಾರ್ಯ ಅದ್ಭುತಕಾರ್ಯ ಇವುಗಳಿಂದಲೂ ದುರ್ನೀತಿಯ ಎಲ್ಲಾ ವಂಚನೆಯಿಂದಲೂ” ಸ್ಪಷ್ಟವಾಗಿ ಗುರುತಿಸಲ್ಪಡುವುದು ಎಂದು ಪೌಲನು ಹೇಳಿದನು. (2 ಥೆಸಲೊನೀಕ 2:6-12) ಇತಿಹಾಸದಾದ್ಯಂತ ಅನೇಕ ಧಾರ್ಮಿಕ ಮುಖಂಡರ ಚಟುವಟಿಕೆಗಳನ್ನು ಇದು ಎಷ್ಟು ನಿಷ್ಕೃಷ್ಟವಾಗಿ ವರ್ಣಿಸುತ್ತದೆ!
ರೋಮನ್ ಕ್ಯಾಥೊಲಿಕ್ ಧರ್ಮವೇ ಏಕಮಾತ್ರ ಸತ್ಯ ಚರ್ಚಾಗಿದೆ ಎಂಬ ತಮ್ಮ ಪ್ರತಿಪಾದನೆಯನ್ನು ಬೆಂಬಲಿಸುತ್ತಾ ಕ್ಯಾಥೊಲಿಕ್ ಮುಖಂಡರು ಹೇಳುವುದೇನೆಂದರೆ, ತಮ್ಮ ಬಿಷಪರು “ಕ್ರೈಸ್ತತ್ವದ ಮೂಲಕ್ಕೆ ಕೊಂಡೊಯ್ಯುವ ಪರಂಪರೆಯಿಂದಾಗಿ ಆರಂಭದ ಅಪೊಸ್ತಲರಿಂದ ತಮ್ಮ ಧರ್ಮಾಧಿಕಾರವನ್ನು ಬಾಧ್ಯತೆಯಾಗಿ ಪಡೆದಿದ್ದಾರೆ.” ವಾಸ್ತವದಲ್ಲಿ, ಧರ್ಮಾಧಿಕಾರ ಪರಂಪರೆಯ ಈ ಪ್ರತಿಪಾದನೆಗೆ ಯಾವುದೇ ಐತಿಹಾಸಿಕ ಅಥವಾ ಶಾಸ್ತ್ರೀಯ ಆಧಾರವಿಲ್ಲ. ಯೇಸುವಿನ ಅಪೊಸ್ತಲರ ಮರಣಾನಂತರ ಅಸ್ತಿತ್ವಕ್ಕೆ ಬಂದ ಚರ್ಚ್ ವ್ಯವಸ್ಥೆಯು ದೇವರ ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟಿತ್ತು ಎಂಬುದಕ್ಕೆ ಯಾವುದೇ ವಿಶ್ವಾಸಾರ್ಹ ಪುರಾವೆಯಿಲ್ಲ.—ರೋಮಾಪುರ 8:9; ಗಲಾತ್ಯ 5:19-21.
ಆದರೆ ಮತಸುಧಾರಣೆ ಎಂದು ಕರೆಯಲ್ಪಟ್ಟ ಕ್ರಾಂತಿಯ ಬಳಿಕ ಉದಯಿಸಿದ ಇತರ ಚರ್ಚುಗಳ ಕುರಿತಾಗಿ ಏನು? ಅವು ಆರಂಭದ ಕ್ರೈಸ್ತ ಸಭೆಯ ನಮೂನೆಯನ್ನೇ ಅನುಸರಿಸಲು ಆರಂಭಿಸಿದವೊ? ಮೂಲ ಕ್ರೈಸ್ತ ಸಭೆಯ ಶುದ್ಧತೆಯನ್ನು ಅವು ಪುನಸ್ಸ್ಥಾಪಿಸಿದವೋ? ಮತಸುಧಾರಣೆಯ ನಂತರ, ಅನೇಕ ಜನಸಾಮಾನ್ಯರಿಗೆ ತಮ್ಮ ಸ್ವಂತ ಭಾಷೆಯಲ್ಲಿ ಬೈಬಲು ಲಭ್ಯಗೊಳಿಸಲ್ಪಟ್ಟಿತು ಎಂಬುದು ನಿಜ. ಆದರೂ, ಈ ಚರ್ಚುಗಳು ದೋಷಭರಿತ ಸಿದ್ಧಾಂತಗಳನ್ನೇ ಕಲಿಸುವುದನ್ನು ಮುಂದುವರಿಸಿದವು ಎಂದು ಇತಿಹಾಸವು ತೋರಿಸುತ್ತದೆ.—ಮತ್ತಾಯ 15:7-9.
ಆದರೂ ಇದನ್ನು ಗಮನಿಸಿರಿ. ತನ್ನ ಏಕಮಾತ್ರ ಸತ್ಯ ಸಭೆಯು, ವಿಷಯಗಳ ವ್ಯವಸ್ಥೆಯ ಸಮಾಪ್ತಿಯೆಂದು ಕರೆಯಲ್ಪಡುವ ಸಮಯದಲ್ಲಿ ಪುನಸ್ಸ್ಥಾಪಿಸಲ್ಪಡುವುದು ಎಂದು ಯೇಸು ಕ್ರಿಸ್ತನು ಖಂಡಾಖಂಡಿತವಾಗಿ ಮುಂತಿಳಿಸಿದನು. (ಮತ್ತಾಯ 13:30, 39) ಬೈಬಲ್ ಪ್ರವಾದನೆಗಳ ನೆರವೇರಿಕೆಯು, ನಾವೀಗ ಆ ಸಮಯದಲ್ಲಿ ಜೀವಿಸುತ್ತಿದ್ದೇವೆ ಎಂಬುದನ್ನು ತೋರಿಸುತ್ತದೆ. (ಮತ್ತಾಯ 24:3-35) ಹೀಗಿರುವಾಗ, ‘ಆ ಏಕಮಾತ್ರ ಸತ್ಯ ಚರ್ಚು ಎಲ್ಲಿದೆ?’ ಎಂದು ನಮ್ಮಲ್ಲಿ ಪ್ರತಿಯೊಬ್ಬರೂ ಪ್ರಶ್ನಿಸಿಕೊಳ್ಳುವ ಅಗತ್ಯವಿದೆ. ಅದು ಹೆಚ್ಚೆಚ್ಚು ಸ್ಪಷ್ಟವಾಗಿ ಗುರುತಿಸುವಂಥದ್ದಾಗಿ ಪರಿಣಮಿಸಬೇಕು.
ನೀವು ಈಗಾಗಲೇ ಆ ಚರ್ಚು ಅಥವಾ ಸಭೆಯನ್ನು ಕಂಡುಕೊಂಡಿದ್ದೀರಿ ಎಂದು ನಿಮಗನಿಸುತ್ತಿರಬಹುದು. ಆದರೆ ಅದೇ ಸತ್ಯ ಸಭೆಯಾಗಿದೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳುವುದು ಪ್ರಾಮುಖ್ಯವಾಗಿದೆ. ಏಕೆ? ಏಕೆಂದರೆ ಪ್ರಥಮ ಶತಮಾನದಲ್ಲಿದ್ದಂತೆಯೇ ಈಗಲೂ ಒಂದೇ ಒಂದು ಸತ್ಯ ಚರ್ಚು ಇರಸಾಧ್ಯವಿದೆ. ನಿಮ್ಮ ಚರ್ಚು ಪ್ರಥಮ ಶತಮಾನದ ಕ್ರೈಸ್ತ ಸಭೆಯಿಂದ ಇಡಲ್ಪಟ್ಟ ಮಾದರಿಗೆ ನಿಕಟವಾಗಿ ಅಂಟಿಕೊಂಡು ನಡೆಯಲು ಮತ್ತು ಯೇಸು ಕ್ರಿಸ್ತನಿಂದ ಕಲಿಸಲ್ಪಟ್ಟ ಬೋಧನೆಗಳಿಗೆ ನಿಷ್ಠೆಯಿಂದ ಅಂಟಿಕೊಳ್ಳಲು ಪ್ರಯತ್ನಿಸುತ್ತಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ನೀವು ಸಮಯವನ್ನು ತೆಗೆದುಕೊಂಡಿದ್ದೀರೋ? ಈಗಲೇ ಏಕೆ ಪರೀಕ್ಷಿಸಿ ನೋಡಬಾರದು? ಇದನ್ನು ಮಾಡುವಂತೆ ನಿಮಗೆ ಸಹಾಯಮಾಡಲು ಯೆಹೋವನ ಸಾಕ್ಷಿಗಳು ಸಂತೋಷಿಸುತ್ತಾರೆ.—ಅ. ಕೃತ್ಯಗಳು 17:11.
[ಪಾದಟಿಪ್ಪಣಿ]
a “ಅಧರ್ಮ ಸ್ವರೂಪನ” ಗುರುತಿನ ಕುರಿತಾದ ಹೆಚ್ಚಿನ ಮಾಹಿತಿಯು, ಸೆಪ್ಟೆಂಬರ್ 1, 1990ರ ಕಾವಲಿನಬುರುಜು ಪತ್ರಿಕೆಯ ಪುಟ 12-16ರಲ್ಲಿ ಕಂಡುಬರುತ್ತದೆ.
[ಪುಟ 5ರಲ್ಲಿರುವ ಚಿತ್ರಗಳು]
ಗೋದಿ ಮತ್ತು ಹಣಜಿಯ ಕುರಿತಾದ ಯೇಸುವಿನ ದೃಷ್ಟಾಂತವು ಸತ್ಯ ಸಭೆಯ ಕುರಿತು ನಮಗೆ ಏನನ್ನು ಕಲಿಸುತ್ತದೆ?
[ಪುಟ 7ರಲ್ಲಿರುವ ಚಿತ್ರಗಳು]
ಸಾರುವುದರಲ್ಲಿ ಮತ್ತು ಅಧ್ಯಯನಮಾಡುವುದರಲ್ಲಿ ಪ್ರಥಮ ಶತಮಾನದ ಕ್ರೈಸ್ತರಿಂದ ಇಡಲ್ಪಟ್ಟ ಮಾದರಿಯನ್ನೇ ನಿಮ್ಮ ಚರ್ಚು ಅನುಸರಿಸುತ್ತದೋ?